–೧- ಸಾಮ್ರಾಜ್ಯಾಧಿಕಾರಕ್ಕೆ ಪ್ರತಿರೋಧ
ಇಪ್ಪತ್ತನೇ ಶತಮಾನದ ಮೊದಲೆರಡು ದಶಕಗಳ ರಾಜಕೀಯ ನೆಲೆಯ ಸ್ವದೇಶೀ ಅಭಿಯಾನವು ಭಾರತದ ಈಚಿನ ಇತಿಹಾಸಕ್ಕೆ ನಿರ್ಣಾಯಕ ತಿರುವನ್ನು ಕೊಟ್ಟಿತೆಂಬುದು ನಿರ್ವಿವಾದ. ಆದರೆ ಅದೇ ಸಮಯದಲ್ಲಿ ಶುದ್ಧವಿಜ್ಞಾನ, ವಿವಿಧ ಕಲೆಗಳು ಮೊದಲಾದ ಕ್ಷೇತ್ರಗಳಲ್ಲಿಯೂ ಭಾರತ ದಾಪುಗಾಲಿಡಲು ಸ್ವದೇಶೀ ಅಭಿಯಾನವು ಪ್ರೇರಕವಾಯಿತೆಂಬುದನ್ನೂ ಗ್ರಹಿಸಬೇಕಾದುದರ ಆವಶ್ಯಕತೆ ಇದೆ. ಇದನ್ನು ಸ್ವದೇಶೀ ಆಂದೋಲನದ ವೈಚಾರಿಕ ಮುಖವೆಂದೇ ಪರಿಗಣಿಸಬಹುದು. ಬ್ರಿಟಿಷ್ ಜನಾಂಗದ ಸ್ವಯಮಾರೋಪಿತ ಬೌದ್ಧಿಕ ಮೇಲ್ಮೆಗೆ ಪ್ರಬಲವಾದ ಪ್ರಹಾರ ನೀಡಿದವು ಶುದ್ಧವಿಜ್ಞಾನಾದಿ ಕ್ಷೇತ್ರಗಳಲ್ಲಿನ ಭಾರತೀಯ ಸಾಧನೆಗಳು.
ಹತ್ತೊಂಬತ್ತನೇ ಶತಮಾನದಲ್ಲಿ ಅತ್ಯಧಿಕ ನೌಕಾಬಲ, ಔದ್ಯಮಿಕ ಮುನ್ನಡೆ, ವಸಾಹತುಗಳಿಂದ ಕೊಳ್ಳೆಹೊಡೆದ ಹೇರಳ ಸಂಪತ್ತು – ಈ ಎಲ್ಲ ‘ಅನುಕೂಲತೆ’ಗಳಿದ್ದ ಇಂಗ್ಲೆಂಡಿನೊಡನೆ ಸ್ಪರ್ಧಿಸುವುದು ಅನ್ಯದೇಶಗಳಿಗೆ ದುಃಸಾಧ್ಯವಾಗಿತ್ತು. ಮೇಲಿನವಲ್ಲದೆ ಆಂಗ್ಲ ಪ್ರಾಬಲ್ಯಕ್ಕೆ ಅನ್ಯ ಆಯಾಮಗಳೂ ಇದ್ದವು: ಜಾಗತಿಕ ಭಾ಼ಷೆಯಾಗಿ ಇಂಗ್ಲಿಷಿನ ಪ್ರಾಚುರ್ಯ, ಜಾಗತಿಕ ವಾಣಿಜ್ಯದ ಆಧಾರ ಕರೆನ್ಸಿಯಾಗಿ ಸ್ಟರ್ಲಿಂಗ್ ಪೌಂಡ್, ಇತ್ಯಾದಿ. ಅಷ್ಟಕೆ, ಇಂಗ್ಲೆಂಡಿನ ಗ್ರೀನ್ವಿಚ್ ಸಮಯವೇ ಇಡೀ ಜಗತ್ತಿನ ಕಾಲಗಣನೆಗೆ ಆಧಾರವಾಗಿ ಇಂದಿಗೂ ಉಳಿದಿದೆಯಲ್ಲ!
ಇಂಗ್ಲೆಂಡಿನ ವಿಸ್ತರಣೋದ್ಯಮ
ಹತ್ತೊಂಬತ್ತನೇ ಶತಮಾನದ ನಡುಭಾಗದ ವೇಳೆಗೇ ಇಂಗ್ಲೆಂಡ್ ಹೆಚ್ಚುಕಡಮೆ ಇಡೀ ವಿಶ್ವದಲ್ಲಿಯೆ ಅತ್ಯಂತ ಪ್ರಬಲ ದೇಶವೆನಿಸಿತ್ತು. ಆಗಿನ ಗಣನೆಯಂತೆ ಇಂಗ್ಲೆಂಡಿನ? ರಾಜಕೀಯ-ಭೌಗೋಳಿಕ-ಸಾಂಪತ್ತಿಕ ಶಕ್ತಿಯಾಗಿದ್ದ ದೇಶ ಬೇರೆ ಇರಲಿಲ್ಲ. ಇಡೀ ಜಗತ್ತಿನ ಆರ್ಥಿಕ ವಹಿವಾಟು ಇಂಗ್ಲೆಂಡ್-ಕೇಂದ್ರಿತವೇ ಆಗಿತ್ತು.
ಯೂರೋಪಿನೊಳಗಡೆ ಇಂಗ್ಲಿಷ್-ಭಾಷಿಕರಿಗಿಂತ ಜರ್ಮನ್-ಭಾಷಿಕರ ಪ್ರಮಾಣ ಅಧಿಕವಾಗಿದ್ದಿತು. ಈ ಹಿನ್ನೆಲೆಯಿದ್ದೂ ವಸಾಹತು ವಿಸ್ತರಣದಲ್ಲಿ ಇಂಗ್ಲೆಂಡಿನ ವ್ಯಾಪ್ತಿಯನ್ನು ಇತರರು ಸರಿಗಟ್ಟಲಾಗಲಿಲ್ಲ. ವಿಸ್ತರಣೋದ್ಯಮದಮಟ್ಟಿಗೆ ಇಂಗ್ಲೆಂಡಿಗೆ ಹೋಲಿಸಬಹುದಾಗಿದ್ದುದು ಇಡೀ ದಕ್ಷಿಣ ಅಮೆರಿಕದಲ್ಲಿ ಪ್ರಭಾವ ಸ್ಥಾಪಿಸಿದ್ದ ಸ್ಪೇಯ್ನ್ ಮಾತ್ರವೇನೊ. ಔದ್ಯಮೀಕರಣದ ದಿಶೆಯಲ್ಲಿ ಜರ್ಮನಿಯು ಹೆಜ್ಜೆಯಿಡತೊಡಗಿದ್ದುದು ವಿಳಂಬವಾಗಿ.
ಜಗತ್ತಿನ ಅದುವರೆಗಿನ ಎಲ್ಲ ಜ್ಞಾನದ ವಾರಸಿಕೆ ತನ್ನಲ್ಲಿ ಪ್ರತಿನಿಧಿತವಾಗಿದೆ ಎಂಬ ಅಹಮಿಕೆ ಇಂಗ್ಲೆಂಡಿಗಿತ್ತು. ಅದು ಪೂರ್ತಿ ನಿರಾಧಾರವೇನಾಗಿರಲಿಲ್ಲ. ತನಗೆ ಅವಶ್ಯವಿದ್ದ ವೈಜ್ಞಾನಿಕ-ತಾಂತ್ರಿಕ ಪ್ರೋದ್ಬಲವನ್ನು ಜರ್ಮನಿ ಮೊದಲಾದೆಡೆಗಳಿಂದ ಸಂಗ್ರಹಿಸಿಕೊಳ್ಳುವ ಕೌಶಲವನ್ನೂ ಇಂಗ್ಲೆಂಡ್ ಬೆಳೆಸಿಕೊಂಡಿತ್ತು. ಇಂಗ್ಲೆಂಡಿನ ಈ ಕ್ರೋಡೀಕರಣವು ತತ್ತ್ವಶಾಸ್ತ್ರಾದಿ ಕ್ಷೇತ್ರಗಳನ್ನೂ ಒಳಗೊಂಡಿತ್ತು. ಹೀಗೆ ಇಂಗ್ಲೆಂಡ್-ಕೇಂದ್ರಿತ ಜಗದ್ದೃಷ್ಟಿಯು ದೃಢಗೊಳ್ಳುತ್ತ ಸಾಗಿತ್ತು. ಜರ್ಮನಿ-ಮೂಲದ ಪ್ರಾಕ್ತನ ವಿದ್ವತ್ಕಾರ್ಯವನ್ನೂ ಇಂಗ್ಲೆಂಡ್ ತನ್ನ ಸಾಮ್ರಾಜ್ಯಾನುಕೂಲ ಲಕ್ಷ್ಯಕ್ಕೆ ಪೋಷಕವಾಗಿ ಬಳಸಿಕೊಳ್ಳುವುದರಲ್ಲಿ ಮ್ಯಾಕ್ಸ್ಮುಲ್ಲರ್ ಮೊದಲಾದವರ ಕೊಡುಗೆ ಗಣನೀಯವಾಗಿತ್ತು. ಜರ್ಮನಿ-ಮೂಲದ ಸಂಸ್ಕೃತ ವಿದ್ವಾಂಸರಲ್ಲಿ ಪ್ರಮುಖರಿಗೆ ಭಾರತದೊಳಗಿನ ಸಾಂಪ್ರದಾಯಿಕ ವಿದ್ವತ್ಕೇಂದ್ರಗಳ ಘನಿಷ್ಟ ಸಂಬಂಧ ಇದ್ದಿತು. ಈ ಸನ್ನಿವೇಶವೂ ಕಂಪೆನಿ ಆಡಳಿತದ ಮತ್ತು ಅನಂತರ ಬ್ರಿಟಿಷ್ ಸರ್ಕಾರದ ಬೆಂಬಲ ಈ ಯೂರೋಪಿಯನ್ ವಿದ್ವಾಂಸರಿಗೆ ಇದ್ದುದೂ ಕ್ರಮೇಣ ಭಾರತದ ಶಿಕ್ಷಣಕ್ಷೇತ್ರದ ಮೇಲೆ ವಿದೇಶೀ ಪ್ರಭಾವ ದೃಢಗೊಳ್ಳುವುದಕ್ಕೆ ಕಾರಣವಾಯಿತು.
ಜರ್ಮನಿಯ ಮೇಲುಗೈ
ಸಂಸ್ಕೃತ-ಸಾಹಿತ್ಯಾದಿ ಶೋಧಕಾರ್ಯಗಳಲ್ಲಿ ಹಿಂದಿನಿಂದ ಜರ್ಮನ್ ವಿದ್ವಾಂಸರದು ಮೇಲುಗೈಯಾಗಿದ್ದುದು ಆಕಸ್ಮಿಕವೇನಲ್ಲ. ಇದಕ್ಕೆ ಐತಿಹಾಸಿಕ-ವ್ಯೂಹಾತ್ಮಕ ಕಾರಣಗಳು ಇದ್ದವು.
ಇಂಗ್ಲೆಂಡ್ ಪ್ರಾಬಲ್ಯವನ್ನು ಸ್ಥಾಪಿಸಿದ್ದ ರಾಜಕೀಯ- ಆರ್ಥಿಕ ಕ್ಷೇತ್ರಗಳಿಂದ ಬದಿಗೆ ಸರಿದು ಜರ್ಮನಿಯ ಮೇಧಾವಿಗಳು ೧೯ನೇ ಶತಮಾನದಲ್ಲಿ ಸಾಂಸ್ಕೃತಿಕ ಕ್ಷೇತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಿದರು. ಇದು ಆಗಂತುಕವಲ್ಲ, ಸ್ವಲ್ಪ ಒರಟು ಮಾತಿನಲ್ಲಿ ಹೇಳಬೇಕೆಂದರೆ: ಯೂರೋಪಿನ ನೆಲದ ಬಹುಭಾಗವನ್ನು ಒಂದುಕಡೆ ಫ್ರೆಂಚರೂ ಇನ್ನೊಂದುಕಡೆ ರಷ್ಯನರೂ ಹಂಚಿಕೊಂಡುಬಿಟ್ಟಿದ್ದರು; ಎಲ್ಲ ಸಾಗರಗಳ ಮೇಲೆ ಇಂಗ್ಲೆಂಡಿನ ಕೈಗಳು ಚಾಚಿದ್ದವು. ಹೀಗೆ ಜರ್ಮನರ ಪಾಲಿಗೆ ಉಳಿದಿದ್ದುದು ಭಾವನೆಗಳ ಲೋಕ ಮಾತ್ರ. ಈ ಪರಿಶ್ರಮದ ಮೂಲಕ ಈ ವ್ಯವಹಾರಾತೀತ ಕ್ಷೇತ್ರದಲ್ಲಂತೂ ಜರ್ಮನರು ತಾವು ಬ್ರಿಟಿಷರಿಗೂ ಮತ್ತು ಫ್ರೆಂಚರಿಗೂ ಕಡಮೆಯಿಲ್ಲವೆಂಬುದನ್ನು ಸ್ಥಾಪಿಸುವುದರಲ್ಲಿ ಸಫಲರಾದರು. ಇದು ಜರ್ಮನಿಯ ರಾಷ್ಟ್ರೀಯತೆಯ ಭಾವನೆಯ ದೃಢೀಕರಣಕ್ಕೂ ಪೋಷಕವಾಯಿತು. ಭಗವದ್ಗೀತೆಯ ಭಾಗಗಳೂ ಕಾಳಿದಾಸನ ಶಾಕುಂತಲ ನಾಟಕವೂ ೧೮ನೇ ಶತಮಾನದ ಅಂತ್ಯದ ವೇಳೆಗೇ ಜಾರ್ಗ್ ಫಾರ್ಸ್ಟರ್ನ ಅನುವಾದಗಳ ಮೂಲಕ ಜರ್ಮನ್ ಭಾಷೆಯನ್ನು ಪ್ರವೇಶಿಸಿದ್ದವು. ಅಲ್ಪಕಾಲದಲ್ಲಿ ಪ್ರಾಚ್ಯದೇಶಗಳ ಸಂಸ್ಕೃತಿಯನ್ನು ಇತರ ಯೂರೋಪಿಯನರಿಗಿಂತ ಹೆಚ್ಚಾಗಿ ಅರ್ಥೈಸಿಕೊಂಡಿದ್ದವರು ಜರ್ಮನರು – ಎಂಬ ಪ್ರಶಸ್ತಿ ಬೆಳೆಯಿತು.
ತನ್ನ ಜೀವನದ ಆರಂಭಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಸಮರ್ಥಕನಾಗಿದ್ದ ಮ್ಯಾಕ್ಸ್ ಮುಲ್ಲರನೂ ೧೮೯೦ರ ದಶಕದ ವೇಳೆಗೆ ವಿದ್ವತ್ತಿನ ಕ್ಷೇತ್ರದಲ್ಲಿ ಬ್ರಿಟಿಷರಿಗಿಂತ ಜರ್ಮನರದು ಮೇಲುಗೈಯೆಂಬ ಮತ್ತು ಭಾರತದ ಸ್ವಾತಂತ್ರ್ಯಾರ್ಹತೆ ನಿರಾಧಾರವಲ್ಲವೆಂಬ ಅಭಿಪ್ರಾಯ ತಳೆಯತೊಡಗಿದ್ದ. ಸಂಸ್ಕೃತ ವಾಙ್ಮಯ ಸಂಶೋಧನ ಕ್ಷೇತ್ರದಲ್ಲಂತೂ ಜರ್ಮನರ ಸಾಧನೆಗೆ ಬ್ರಿಟಿಷರದನ್ನು ಹೋಲಿಸುವಂತೆಯೇ ಇರಲಿಲ್ಲ. ಇದೆಲ್ಲದರ ಪರಿಣಾಮವಾಗಿ ಮಧ್ಯಯುಗದ ಅವಶೇಷದಂತಿದ್ದ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಮತ್ತು ಮೇಲ್ಮೆಯ ಭಾವನೆಯ ಅಸ್ತಿಭಾರವೇ ಕಂಪಿಸತೊಡಗಿತ್ತು. ಅಲ್ಲಿಂದಾಚೆಗೆ ಐವತ್ತರವತ್ತು ವರ್ಷಗಳಲ್ಲಿಯೇ ಜಗತ್ತಿನ ಎಲ್ಲ ಸಾಮ್ರಾಜ್ಯಾಧಿಕಾರಿಗಳೂ ಅವಸಾನಗೊಳ್ಳತೊಡಗಿದುದು ಇತಿಹಾಸ.
ಇಂಗ್ಲೆಂಡಿನ ಪ್ರತಿಷ್ಠೆಗೆ ಸವಾಲು
ವಿದ್ವತ್ತಿನ ಕ್ಷೇತ್ರದಲ್ಲಾದರೂ ಅಲೆಕ್ಸಾಂಡರ್ ಕನಿಂಗ್ಹಮ್ ಮೊದಲಾದ ಬ್ರಿಟಿಷ್ ಶೋಧಕರಿಂದ ಮಂಡಿತವಾಗಿದ್ದ ವಾದಗಳನ್ನು ಭಾರತೀಯ ವಿದ್ವಾಂಸರೇ (ಬಂಗಾಳದ ಪುರಾತತ್ತ್ವಜ್ಞ ರಾಜೇಂದ್ರಲಾಲ್ ಮಿತ್ರ ಮೊದಲಾದವರು) ಸಶಕ್ತವಾಗಿ ಪ್ರಶ್ನಿಸತೊಡಗಿದ್ದರು. ರಸಾಯಶಾಸ್ತ್ರದಂತಹ ಶುದ್ಧವಿಜ್ಞಾನ ಕ್ಷೇತ್ರಗಳಲ್ಲಿಯೂ ಭಾರತೀಯರ ಸಾಧನೆಗಳು ಬ್ರಿಟಿಷರು ಹೇಳಿದ್ದುದಕ್ಕಿಂತ ಹಿಂದಿನವೆಂದೂ ಹೆಚ್ಚು ವ್ಯಾಪಕವಾದವೆಂದೂ ಪ್ರಫುಲ್ಲಚಂದ್ರರಾಯ್ ಸಂಶಯಾತೀತವಾಗಿ ಎತ್ತಿತೋರಿಸಿದರು. ಪಾಣಿನೀಯ ವ್ಯಾಕರಣವು ಬೌದ್ಧೋತ್ತರ ಯುಗದ್ದೆಂದಿದ್ದ ವೇಬರ್ ಮೊದಲಾದವರ ಮಂಡನೆಗಳನ್ನು ಬೌದ್ಧಧಾರೆಯ ಹಲವರು ವಿದ್ವಾಂಸರೇ ವಿಮರ್ಶನೆಗೊಳಪಡಿಸಿದರು. ಹೀಗೆ ಸಂಶೋಧನೆಯೆಂದರೆ ಬ್ರಿಟಿಷರದೇ ಎಂಬ ಪ್ರಥೆಯು ಇಪ್ಪತ್ತನೇ ಶತಮಾನದ ಆರಂಭದ ವೇಳೆಗೆ ಊರ್ಜಿತವಾಗುಳಿದಿರಲಿಲ್ಲ.
ನೆನಪಿಡಬೇಕಾದ ಒಂದು ಸನ್ನಿವೇಶವೆಂದರೆ – ಆ ದಿನಗಳಲ್ಲಿ ಜರ್ಮನಿಯು ಸ್ವಾಯತ್ತದೇಶವಾಗಿತ್ತು; ಭಾರತವು ಅಧೀನದೇಶವಾಗಿತ್ತು. ಆದರೂ ಒಂದು ಆಂಶದಲ್ಲಿ ಸಾಮ್ಯವಿಲ್ಲದಿರಲಿಲ್ಲ. ಜರ್ಮನಿಯು ಯೂರೋಪಿನಲ್ಲಿ ಇಂಗ್ಲೆಂಡಿನ ಪ್ರಭಾವವ್ಯಾಪ್ತಿಯಿಂದ ಹೊರಗುಳಿಯಲು ಬಯಸುತ್ತಿದ್ದಂತೆಯೇ ಭಾರತ ಆಂಗ್ಲಪ್ರಭುತ್ವದ ಶೃಂಖಲೆಯಿಂದ ಹೊರಕ್ಕೆ ಜಿಗಿಯಲು ತವಕಿಸುತ್ತಿತ್ತು.
ಸಾಹಿತ್ಯಕ ಹಾಗೂ ವೈಜ್ಞಾನಿಕಾದಿ ಅನುಸಂಧಾನಗಳು ರಾಜಕೀಯ-ಭೌಗೋಳಿಕ ಗಡಿಗಳಿಂದ ಅತೀತವಾಗಿರುವ ಹಿನ್ನೆಲೆಯು ಭಾರತ-ಜರ್ಮನಿ ಸಂಬಂಧವರ್ಧನೆಗೆ ಪೋಷಕವಾಗಿತ್ತು.
ನಾಗರಿಕತೆಯ ಉಚ್ಛ್ರಾಯದಶೆಯನ್ನು ಯೂರೋಪ್ ಪ್ರತಿಬಿಂಬಿಸುತ್ತದೆ ಎಂಬ ಅದುವರೆಗಿನ ಧೋರಣೆ ದಿಟಕ್ಕೂ ನಿರಾಧಾರ ಎನ್ನಿಸತೊಡಗಿತ್ತು. ದೂರದ ದೇಶಗಳ ಮಾತಿರಲಿ; ಯೂರೋಪಿನೊಳಗೇ ’ನಾವು ಇಂಗ್ಲೆಂಡಿಗಿಂತ ಕಡಮೆಯೇನಲ್ಲ’ ಎಂಬ ಅವಧಾರಣೆ ಫ್ರಾನ್ಸ್, ಗ್ರೀಸ್ ಮೊದಲಾದ ಭಾಗಗಳಲ್ಲಿ ಬಲಿಯತೊಡಗಿತ್ತು.
ಭಾರತೀಯರು ಜರ್ಮನಿಯ ಸಂಗಡಿಕೆಯನ್ನು ಹೆಚ್ಚಾಗಿ ಬಯಸುತ್ತಿದ್ದುದಕ್ಕೆ ಹೀಗೆ ಹಲವು ಕಾರಣಗಳು ಇದ್ದವು. ತಾವೂ ’ಆರ್ಯ’ರೆಂಬ ಜರ್ಮನರ ಘೋ?ಣೆ ಒತ್ತಟ್ಟಿಗಿರಲಿ. ಇದಕ್ಕಿಂತ ಮಹತ್ತ್ವದ ಸಂಗತಿಯೆಂದರೆ ಇಂಗ್ಲೆಂಡಿನ ಪ್ರಾಬಲ್ಯಕ್ಕೆ ಇಡೀ ಯೂರೋಪಿನಲ್ಲಿಯೆ ಬಲವಾದ ಸವಾಲನ್ನು ಒಡ್ಡಿದ್ದುದು ಜರ್ಮನಿ. ’ಅಖಂಡ ಯೂರೋಪ್’ ಕಲ್ಪನೆಗೆ ಹೆದ್ದನವಾಗಿ (’ಬ್ರೇಕ್’) ಬೆಳೆದಿದ್ದುದು ಜರ್ಮನಿ. ಈ ಸನ್ನಿವೇಶದಿಂದಾಗಿ ಭಾರತವೂ ಸೇರಿದಂತೆ ಜಗತ್ತಿನೆಲ್ಲೆಡೆಯ ರಾಷ್ಟ್ರವಾದಿಗಳು ಜರ್ಮನಿಯ ಕಡೆಗೆ ಮುಖ ಮಾಡಿದರು.
ಭಾರತ-ಜರ್ಮನಿ ನಂಟು
೧೯ನೇ ಶತಮಾನದ ನಡುಭಾಗದಲ್ಲಿ ಭಾರತದಲ್ಲಿ ಪುರಾತತ್ತ್ವಶೋಧನೆ (ಆರ್ಕಿಯಾಲಜಿ) ಮೊದಲಾದ ಶೋಧಪ್ರಕ್ರಿಯೆಗಳ ಉದ್ಗಮಕ್ಕೆ ಅಸ್ತಿಭಾರ ಹಾಕಿದ್ದವರು ಜರ್ಮನ್ ವಿದ್ವಾಂಸ ಆರೆಲ್ ಸ್ಟೈನ್ ಮೊದಲಾದವರೇ. ಭಾರತೀಯ ಭಾಷೆಗಳ ಮತ್ತು ಸಾಹಿತ್ಯಗಳ ವ್ಯವಸ್ಥಿತ ಅಧ್ಯಯನವನ್ನು ಉಪಕ್ರಮಗೊಳಿಸಿದವರೂ ಗ್ರಿಯರ್ಸನ್ ಮೊದಲಾದವರು. ಹಾಗೆ ನೋಡಿದರೆ ಭಾರತದಲ್ಲಿ ಆಧುನಿಕರೀತಿಯ ಭೂಗರ್ಭಶಾಸ್ತ್ರ, ಸಸ್ಯಶಾಸ್ತ್ರ ಮೊದಲಾದವನ್ನು ನೆಲೆಗೊಳಿಸಿದವರೂ ಪ್ರಮುಖವಾಗಿ ಜರ್ಮನರೇ.
ಹೀಗೆ ವಿವಿಧಮುಖ ಜ್ಞಾನವಿಸ್ತರಣೆ ಉಚ್ಚಮಟ್ಟದಲ್ಲಿ ನಡೆಯಿತಾದರೂ ಅದೇ ಸಮಯದಲ್ಲಿ ಪಾಶ್ಚಾತ್ಯ ಜೀವನದೃಷ್ಟಿಯ ಪರಿಣಾಮವಾಗಿ ಮತ್ತು ಯೂರೋಪಿನ ಪರಿಸ್ಥಿತಿಯ ಹಿನ್ನೆಲೆಯಿಂದಾಗಿ ಹಲವು ಅಡ್ಡಪರಿಣಾಮಗಳೂ ಆಗದಿರಲಿಲ್ಲ. ಉದಾಹರಣೆಗೆ – ಯೂರೋಪಿಯನರು ೧೯ನೇ ಶತಮಾನದ ಪೂರ್ವಾರ್ಧದಿಂದಾಚೆಗೆ ನೆಲೆಗೊಳಿಸಿದ ‘ಅರಣ್ಯವಿಜ್ಞಾನ’ ಕ್ರಮಕ್ರಮೇಣ ಭಾರತದ ಮೂಲಸ್ವರೂಪದ ಕಾಡುಗಳ ವಿನಾಶದಲ್ಲಿ ಪರ್ಯವಸಾನಗೊಂಡಿತು. ಬ್ರಿಟಿಷರಿಂದ ಭಾರತದಲ್ಲಿ ನಡೆದ ಅರಣ್ಯ ನಾಟಾ ಕೊಳ್ಳೆ ಎಷ್ಟು ದೊಡ್ಡ ಪ್ರಮಾಣದ್ದಿತ್ತೆಂದರೆ ೧೮೭೦ರ ವೇಳೆಗೇ ಭಾರತಕ್ಕೆ ನಾಟಾವನ್ನು ಬೇರೆಡೆಗಳಿಂದ ಆಮದು ಮಾಡಿಕೊಳ್ಳಬೇಕಾದ ಪರಿಸ್ಥಿತಿ ಏರ್ಪಟ್ಟಿತ್ತು. ವಿಶೇಷವಾಗಿ ರೈಲುಬೋಗಿಗಳ ನಿರ್ಮಾಣದಂತಹ ಕಾರ್ಯಗಳಿಗೆ ಅಪಾರ ನಾಟಾ ಬೇಕಾಗಿತ್ತು.
ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಭೂಗರ್ಭಶಾಸ್ತ್ರ, ಕಾನೂನುಶಾಸ್ತ್ರ ಮೊದಲಾದ ಪ್ರಮುಖ ಜ್ಞಾನಾಂಗಗಳ ಆಧಾರಸಾಹಿತ್ಯ ರಚನೆಯಾದದ್ದು ಜರ್ಮನರಿಂದ ಮತ್ತು ಅವರ ಅನುಭವಗಳ ಆಧಾರದ ಮೇಲೆ. ಹೀಗೆ ಭಾರತದಲ್ಲಿ ನೆಲೆಗೊಂಡಿದ್ದ ಬ್ರಿಟಿಷ್ ಪ್ರಭುತ್ವಕ್ಕೆ ಶಾಸ್ತ್ರವಿ?ಯಕ ಅವಲಂಬವನ್ನು ಒದಗಿಸಿದ್ದವರು ಜರ್ಮನರು. ಇಂಗ್ಲೆಂಡಿನೊಳಗಡೆಯೇ ಇಂಜಿನಿಯರಿಂಗ್ ಮೊದಲಾದ ವಿ?ಯಗಳ ಶಿಕ್ಷಣಕ್ರಮಗಳ ಅಸ್ತಿಭಾರ ಜರ್ಮನಿ-ಮೂಲದ್ದೇ ಆಗಿದ್ದಿತು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಂತೂ ಇಂದಿಗೂ ಜರ್ಮನಿ ಅಗ್ರಮಾನ್ಯವಾಗಿಯೇ ಉಳಿದಿದೆಯ?.
ಜರ್ಮನಿಯಲ್ಲಿ ವೀರೇಂದ್ರನಾಥ ಚಟ್ಟೋಪಾಧ್ಯಾಯ (ಸರೋಜಿನಿನಾಯ್ಡುರವರ ತಮ್ಮ), ಫ್ರಾನ್ಸಿನಲ್ಲಿ ಮೇಡಂ ಕಾಮಾ, ಇಂಗ್ಲೆಂಡಿನಲ್ಲಿ ಶ್ಯಾಮಜೀ ಕೃಷ್ಣವರ್ಮ ಮತ್ತು ವೀರ ಸಾವರ್ಕರ್ ಮೊದಲಾದವರ ಪ್ರಯಾಸಗಳಿಗೆ ರಾಜಕೀಯ ಸಂಧಾನಾತ್ಮಕ ಮತ್ತು ವೈಚಾರಿಕ – ಎರಡು ಮುಖಗಳೂ ಇದ್ದವು. ಇಂತಹ ಧೀಮಂತ ಪಡೆಯನ್ನು ’ಮಿಸ್ಗೈಡೆಡ್ ಪೇಟ್ರಿಯಟ್ಸ್’ ಎಂದು ಅವಹೇಳನ ಮಾಡಿದ ಕಾಂಗ್ರೆಸ್ ಬಣದ ದೃಷ್ಟಿದೋಷದ ಬಗೆಗೆ ಏನು ಹೇಳೋಣ! ರಾಷ್ಟ್ರಭಕ್ತಿಯ ಮೂರ್ತರೂಪವೇ ಆಗಿದ್ದ ಪ್ರಫುಲ್ಲಚಂದ್ರರಾಯ್ ಮೊದಲಾದವರು ಯೂರೋಪಿನೆಲ್ಲೆಡೆ ಶ್ರಮಪೂರ್ವಕ ಸಂಚರಿಸಿ ಅತ್ಯಾಧುನಿಕ ರಸಾಯನಶಾಸ್ತ್ರ ತಾಂತ್ರಿಕತೆಗಳನ್ನು ಅವಗತ ಮಾಡಿಕೊಂಡು ಅವುಗಳನ್ನು ತೊಡಗಿಸಿ ಭಾರತದಲ್ಲಿ ಉದ್ಯಮಗಳನ್ನು ಬೆಳೆಸಿದುದು ಕೇವಲ ಹಣ ಮಾಡುವ ಉದ್ದೇಶದಿಂದ ಎನ್ನಲಾದೀತೆ?
ಭಾರತದಿಂದ ಪ್ರೌಢಶಿಕ್ಷಣಕ್ಕಾಗಿ ಯೂರೋಪಿಗೆ ಬಂದ ವಿದ್ಯಾರ್ಥಿಗಳು ಜರ್ಮನ್ ಮತ್ತು ಫ್ರೆಂಚ್ ಭಾ?ಗಳನ್ನು ಅವಶ್ಯ ಕಲಿಯಬೇಕೆಂದು ಲಾಲಾ ಹರದಯಾಳ್ ಪ್ರೋತ್ಸಾಹ ನೀಡುತ್ತಿದ್ದರು. ಅಮೆರಿಕ, ಜಪಾನ್ ಮುಂತಾದೆಡೆಗಳಿಗೂ ಪ್ರೌಢಶಿಕ್ಷಣಕ್ಕಾಗಿ ಹತ್ತಾರು ಮಂದಿ ಭಾರತೀಯ ಪ್ರತಿಭಾವಂತರು ಪ್ರೇಷಿತರಾದರು. ಈ ಬುದ್ಧಿಪೂರ್ವಕ ಪ್ರಯಾಸಗಳ ಒಟ್ಟಾರೆ ಪರಿಣಾಮವೆಂದರೆ – ಹಲವು ದಶಕಗಳ ಹಿಂದೆ ಯೂರೋಪಿನಲ್ಲಿ ಕೇವಲ ಭಾಷಾಶಾಸ್ತ್ರಜ್ಞರಿಗೆ ಆಸಕ್ತಿಯ ವಿಷಯಗಳಾಗಿದ್ದ ಭಾರತೀಯ ಸಂಸ್ಕೃತಿಯ ಮತ್ತು ತತ್ತ್ವಶಾಸ್ತ್ರದ ನಿಜವಾದ ಅನನ್ಯತೆಯ ಮನವರಿಕೆ ಜಾಗತಿಕ ವಿದ್ವದ್ವಲಯಗಳಲ್ಲಿ ನೆಲೆಗೊಂಡಿತು.
ಜೆಮ್ಶೇಡ್ಜೀ ತಾತಾ ಅವರು ನೂತನ ಉಕ್ಕಿನ ಕಾರ್ಖಾನೆಯನ್ನು ಸ್ಥಾಪಿಸಿದುದು ೧೯೦೯ರಲ್ಲಿ.
ಬೆಂಗಳೂರಿನ ತಾತಾ ವಿಜ್ಞಾನಮಂದಿರ ಕಾರ್ಯಾರಂಭ ಮಾಡಿದುದು ೧೯೧೦-೧೧ರಲ್ಲಿ.
ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ಮಾಲವೀಯರು ಅಂತಿಮ ರೂಪ ಕೊಡಲು ಸಾಧ್ಯವಾದದ್ದು ೧೯೧೫ರ ಸುಮಾರಿಗೆ.
೧೯೧೫-೧೬ರ ’ಇಂಡಿಯನ್ ಇಂಡಸ್ಟ್ರಿಯಲ್ ಕಮಿ?ನ್’ ಆಯೋಗದ ನಡವಳಿಗಳ ಸಂದರ್ಭದಲ್ಲಿ ಮಾಲವೀಯರು ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಗ್ಲೆಂಡು ಜರ್ಮನಿಗಿಂತ ಹಿಂದುಳಿದಿದೆ ಎಂದು ಬ್ರಿಟಿ? ಅಧಿಕಾರಿಗಳ ಸಮ್ಮುಖದಲ್ಲಿಯೆ ಗಟ್ಟಿ ದನಿಯಲ್ಲಿ ಹೇಳಿದರು.
೧೯೨೪-೨೭ರ ವರ್ಷಗಳಲ್ಲಿ ಇಂಗ್ಲೆಂಡಿನ ವಾಣಿಜ್ಯಾಧಿಕಾರಿಗಳು “ಜರ್ಮನಿಯ ಉತ್ಪನ್ನಗಳು ಕಳಪೆ ಮಟ್ಟದವು” ಎಂದು ಮಿಥ್ಯಾಪ್ರಚಾರ ಮಾಡತೊಡಗಿದುದು ಹಾಸ್ಯಾಸ್ಪದ ಪ್ರಯಾಸವೇ ಆಯಿತು. ವೈದ್ಯಕೀಯ ಶಿಕ್ಷಣ, ಔಷಧಿಗಳ ಉತ್ಪಾದನೆ ಮೊದಲಾದ ಹಲವಾರು ಕ್ಷೇತ್ರಗಳಲ್ಲಿ ಜರ್ಮನಿ ಬೆಳೆಯುತ್ತಲೇ ಹೋಯಿತು.
೧೯೨೩ರಲ್ಲಿ ಬರ್ಲಿನಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ ಸುಮಾರು ೨೦೦ರಷ್ಟು ಇದ್ದಿತು.ಈ ಬಗೆಯ ಭಾರತ-ಯೂರೋಪ್ ಸಾಂಸ್ಕೃತಿಕ ನಂಟಸ್ತಿಕೆ ಎರಡನೆ ಮಹಾಯುದ್ಧದ ಅಂತ್ಯದವರೆಗೆ ಮುಂದುವರಿಯಿತು. ಅನಂತರದ ಕಾಲದಲ್ಲಿ ಜಾಗತಿಕ ಸಂಬಂಧಗಳ ವಿನ್ಯಾಸ ಬದಲಾಯಿತು.
-೨- ಸ್ವಾತಂತ್ರ್ಯಪೂರ್ವದ ವೈಚಾರಿಕ ಉನ್ಮೀಲನ
೧೯೦೫ರಲ್ಲಿ ಉಪಕ್ರಮಗೊಂಡ ಸ್ವದೇಶೀ ಆಂದೋಲನದ ಒಂದು ನೇರ ಪರಿಣಾಮವೆಂದರೆ – ಸಾಮ್ರಾಜ್ಯಶಾಹಿವಿರೋಧಿ ಕಾರ್ಯಸರಣಿಗೆ ಜಾಗತಿಕ ಎಂದರೆ ಅಂತರರಾಷ್ಟ್ರೀಯ ಆಯಾಮಗಳಿವೆ ಎಂಬುದರ ಸ್ಫುಟವಾದ ಗ್ರಹಿಕೆ. ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ನಾಭಿ ಎನಿಸಿದ್ದ ಮತ್ತು ’ಆಧುನಿಕ’ ಶಿಕ್ಷಣದ ಕೇಂದ್ರನೆಲೆಯಾಗಿದ್ದ ಬಂಗಾಳದಲ್ಲಿಯೆ ಸಾಮ್ರಾಜ್ಯವಿರೋಧಿ ಆಂದೋಲನಸರಣಿಯ ಬೀಜಾಂಕುರವಾಯಿತು. ಈ ಧೋರಣೆಗೆ ಸ್ಫುಟವಾದ ರೂಪವನ್ನು ಕೊಟ್ಟ ಆದ್ಯರಲ್ಲಿ ರವೀಂದ್ರನಾಥ ಠಾಕೂರರು ಗಣ್ಯರು. ಬೌದ್ಧಿಕ ಸ್ತರದಲ್ಲಿ ಭಾರತ-ಜರ್ಮನಿಗಳ ನಡುವಣ ಸಾಹಚರ್ಯಕ್ಕೆ ಪ್ರಜ್ಞಾಪೂರ್ವಕವಾಗಿ ಇಂಬುಗೊಟ್ಟವರು ಠಾಕೂರರು. ಹೀಗೆ ಆರಂಭಗೊಂಡ ಪ್ರಕ್ರಿಯೆಯೇ ಅಲ್ಪಕಾಲದಲ್ಲಿ ಐನ್ಸ್ಟೈನನಿಗೂ ಮೇಘನಾದ ಸಹಾ ಮತ್ತು ಸತ್ಯೇಂದ್ರನಾಥ ಬೋಸ್ ಅವರಿಗೂ ನಡುವಣ ಸಹಯೋಗಕ್ಕೆ ದಾರಿಮಾಡಿದುದು.
ತಮ್ಮ ನೂತನ ವಿಶ್ವವಿದ್ಯಾಲಯಕ್ಕೆ ಅತ್ಯುನ್ನತ ಮಟ್ಟದ ವಿದ್ವಾಂಸರನ್ನು ಕರೆತರುವುದಕ್ಕಾಗಿ ಠಾಕೂರರು ಮೂರು ಬಾರಿ ಜರ್ಮನಿಯ ಪ್ರವಾಸ ಮಾಡಿದರು. ಆಸ್ಟ್ರಿಯ-ಮೂಲದ ವಿಖ್ಯಾತ ಪ್ರಾಚ್ಯ ಕಲಾತಜ್ಞರಾದ ಸ್ಟೆಲ್ಲಾ ಕ್ರ್ಯಾಮ್ರಿಶ್ ಅವರು ವಿಶ್ವಭಾರತಿ ಬೋಧಕವರ್ಗದಲ್ಲಿ ಸೇರಿದುದು ಒಂದು ಮೈಲಿಗಲ್ಲು ಎನ್ನಬಹುದು.
ಸೀಮೋಲ್ಲಂಘನ
ಭಾರತ-ಜರ್ಮನಿಗಳ ನಡುವಣ ವೈಜ್ಞಾನಿಕ-ಸಾಂಸ್ಕೃತಿಕ ಸಂಬಂಧಗಳಿಗೆ ವಿಶೇಷ ಚಾಲನೆ ದೊರೆತದ್ದು ಇಪ್ಪತ್ತನೇ ಶತಮಾನದ ಎರಡನೇ ದಶಕದಲ್ಲಿ. ಇದಕ್ಕೆ ಅತಿಶಯ ಪ್ರೋತ್ಸಾಹ ನೀಡಿದವರು ಕೋಲ್ಕತಾ ವಿಶ್ವವಿದ್ಯಾಲಯದ ಆಗಿನ ಉಪಕುಲಪತಿಗಳೂ ಪ್ರಖರ ರಾಷ್ಟ್ರವಾದಿಯೂ ಆದ ಆಶುತೋಷ್ ಮುಖರ್ಜಿ. ಭಾರತದ ಮೇಲೆ ಆಂಗ್ಲ ಸಾಮ್ರಾಜ್ಯಾಧಿಪತ್ಯದ ದಟ್ಟ ಛಾಯೆ ಆವರಿಸಿದ್ದ ಆ ದಿನಗಳಲ್ಲಿ ಆಶುತೋ? ಮುಖರ್ಜಿ ಅವರು ಜರ್ಮನಿಯ ರಾಜಕುವರ ವಿಲ್ಹೆಲ್ಮ್ನಿಗೆ ಗೌರವಾರ್ಥ ಡಾಕ್ಟೊರೇಟನ್ನಿತ್ತದ್ದು (೧೯೧೧) ಒಂದು ಗಣನಾರ್ಹ ಸಂದರ್ಭ. ಅದು ಭಾರತದೇಶವು ಬೌದ್ಧಿಕ ಸೀಮೋಲ್ಲಂಘನಕ್ಕೆ ಸಜ್ಜಾಗುತ್ತಿರುವುದರ ಸಂಕೇತವೆಂದೇ ಆಶುತೋಷರು ತಮ್ಮ ಘಟಿಕೋತ್ಸವ ಭಾಷಣದಲ್ಲಿ ಕಂಠೋಕ್ತವಾಗಿ ಹೇಳಿದರು. ಇದು ಆಮೇಲಿನ ದಿನಗಳಲ್ಲಿ ದಿಟವೂ ಆಯಿತು.
ಇದಾದ ತರುಣದಲ್ಲಿಯೆ ಇಡೀ ಯೂರೋಪಿನಲ್ಲಿ ರವೀಂದ್ರನಾಥ ಠಾಕೂರರು ವಿಶ್ವಕವಿಯೆಂಬ ಮನ್ನಣೆಗೆ ಪಾತ್ರರಾದರು. ಠಾಕೂರರು ಪ್ರಖರ ರಾ?ವಾದಿಯೂ ಸಾಮ್ರಾಜ್ಯಶಾಹಿಗೆ ವಿರೋಧಿಯೂ ಆಗಿದ್ದುದು ಸುವಿದಿತ.
ಸಾಮ್ರಾಜ್ಯಶಾಹಿಯ ಪ್ರಾಕಾರದಿಂದ ಹೊರಬಂದು ಸ್ವದೇಶಮೂಲ ಚಿಂತನರೀತಿಯನ್ನು ದೃಢಗೊಳಿಸುವ ಅಭಿಯಾನವು ಪ್ರಮಖವಾಗಿ ಎರಡು ದಿಶೆಗಳಲ್ಲಿ ನಡೆಯಿತು: (೧) ಭಾರತೀಯ ಸಂಸ್ಕೃತಿಯ ವೈಶ್ವಿಕಸ್ವರೂಪದ ಪ್ರಕಟೀಕರಣ; (೨) ಶಿಕ್ಷಣದ ಸ್ವದೇಶೀಕರಣ. ಈ ಅಭಿಯಾನಕ್ಕೆ ಪೂರಕವಾಗಿ ಪ್ರತಿಭಾವಂತ ಭಾರತೀಯರನ್ನು ಆಧುನಿಕರೀತಿಯ ಪ್ರೌಢವ್ಯಾಸಂಗಕ್ಕಾಗಿ ವಿದೇಶಗಳ ಪ್ರತಿಷ್ಠಿತ ವಿದ್ಯಾಕೇಂದ್ರಗಳಿಗೆ ಕಳಿಸುವುದು, ಸಂಸ್ಕೃತಪಕ್ಷಪಾತಿಗಳಾದ ಶ್ರೇಷ್ಠ ಪಾಶ್ಚಾತ್ಯ ವಿದ್ವಾಂಸರನ್ನು ಭಾರತಕ್ಕೆ ಕರೆಯಿಸಿಕೊಳ್ಳುವುದು – ಈ ಪ್ರಕ್ರಿಯೆ ಪ್ರೋತ್ಸಾಹನಗೊಂಡಿತ್ತು. ಈ ಪ್ರಯತ್ನಗಳ ಫಲಿತವೇ ಬಂಗಾಳದಲ್ಲಿ ರಸಾಯನಶಾಸ್ತ್ರಾಧಾರಿತ ಉದ್ಯಮ, ಬೆಂಗಳೂರಿನ ತಾತಾ ವಿಜ್ಞಾನಮಂದಿರ, ಬಡೌದೆಯ ಕಲಾಭವನ ಮೊದಲಾದ ಪ್ರತಿಷ್ಠಿತ ಸಂಸ್ಥೆಗಳ ಸ್ಥಾಪನೆ.
ಉತ್ಸಾಹಪರ್ವ
ಶಿಕ್ಷಣ ಕ್ಷೇತ್ರದಲ್ಲಿ ಉನ್ನತಿಯನ್ನು ಸಾಧಿಸುವುದರ ಮೂಲಕ ಸ್ವರಾಜ್ಯೋದ್ಯಮವನ್ನು ಪರೋಕ್ಷವಾಗಿ ಪೋಷಿಸುವ ಆಶಯದಿಂದ ರವೀಂದ್ರನಾಥ ಠಾಕೂರರು ಶಾಂತಿನಿಕೇತನವನ್ನು ಸ್ಥಾಪಿಸಿದರೆ ಆಶುತೋಷ ಮುಖರ್ಜಿಯವರು ಕೋಲ್ಕತಾ ವಿಶ್ವವಿದ್ಯಾಲಯದಲ್ಲಿ ಸರ್ವತೋಮುಖ ಚೇತರಿಕೆ ತಂದರು. ಜಡ್ಡುಗಟ್ಟಿದಂತಿದ್ದ ಇಂಗ್ಲೆಂಡಿನ ವಿದ್ಯಾಲಯಗಳಿಗಿಂತ ಜರ್ಮನಿ, ಫ್ರಾನ್ಸ್ ಮೊದಲಾದೆಡೆಗಳ ವಿದ್ಯಾಲಯಗಳು ಹೆಚ್ಚು ಚೈತನ್ಯಪೂರ್ಣವಾಗಿವೆಯೆಂದೇ ಸರ್ಕಾರಘಟಿತ ಶಿಕ್ಷಣ ಆಯೋಗದೆದುರು ಸಾಕ್ಷ್ಯ ನೀಡುವ ಸಂದರ್ಭದಲ್ಲಿ ಖ್ಯಾತ ವಿದ್ವಾಂಸ ಬ್ರಜೇಂದ್ರನಾಥ ಶೀಲ್ ಹೇಳಿದರು. ಈ ಭೂಮಿಕೆಯಲ್ಲಿ ಆಶುತೋಷ ಮುಖರ್ಜಿಯವರು ಕ್ಷಿಪ್ರವಾಗಿ ಕೋಲ್ಕತಾ ವಿಶ್ವವಿದ್ಯಾಲಯದಲ್ಲಿ ಆಗಿನ ಬ್ರಿಟಿಷ್ ಪ್ರಭುತ್ವ ಕಲ್ಪಿಸಲೇ ಆಗದಿದ್ದಂತಹ ವ್ಯಾಪಕ ಸುಧಾರಣೆಗಳಿಗೆ ಚಾಲನೆ ನೀಡಿದರು. ಬ್ರಿಟಿಷರಡಿ ರೂಪತಳೆದಿದ್ದ ಭಾರತೇಯಶಾಸ್ತ್ರದ (ಇಂಡಾಲಜಿ) ಶೋಧನೆಗಳೂ ಹೆಚ್ಚು ಘನಿಷ್ಠವಾಗತೊಡಗಿದವು. ಜರ್ಮನಿ-ಮೂಲದ ವಿದ್ವಾಂಸರ ಮೌಲಿಕ ಸಂಸ್ಕೃತ ಶೋಧಕಾರ್ಯಗಳಿಗೆ ಹೆಚ್ಚಿನ ಮಾನ್ಯತೆ ಲಭಿಸತೊಡಗಿತು. ಆಶುತೋಷ್ ಮುಖರ್ಜಿಯವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಬ್ರಿಟಿಷ್ ಪ್ರಭುತ್ವದ ಭಾವನೆಗಳಿಗೆ ವಿರುದ್ಧವಾಗಿ ಜರ್ಮನ್ ವಿದ್ವಾಂಸರಿಗೆ ಕೋಲ್ಕತಾ ವಿಶ್ವವಿದ್ಯಾಲಯದ ಡಾಕ್ಟೊರೇಟ್ ಪದವಿಗಳನ್ನು ನೀಡಿದರು – ಹೆರ್ಮನ್ ಓಲ್ಡನ್ಬರ್ಗ್ ಮೊದಲಾದ ಶ್ರೇಷ್ಠರಿಗೆ. ಆಶುತೋಷರು ಕೋಲ್ಕತಾ ವಿಶ್ವವಿದ್ಯಾಲಯದಲ್ಲಿ ಜರ್ಮನ್ ವಿದ್ವಾಂಸರನ್ನು ಪ್ರಾಧ್ಯಾಪಕ ಹುದ್ದೆಗಳಿಗೇ ನೇಮಿಸತೊಡಗಿದಾಗಂತೂ ಬ್ರಿಟಿಷ್ ಪ್ರಭುತ್ವ ಮೈಪರಚಿಕೊಳ್ಳುವಂತೆಯೇ ಆಯಿತು.
ವಿಶ್ವವಿದ್ಯಾಲಯದ ವಿಜ್ಞಾನ ನಿಕಾಯದಲ್ಲಿ ಪ್ರಮುಖ ಸ್ಥಾನಗಳಿಗೆ ಆಶುತೋಷರು ನೇಮಿಸಿದ ಭಾರತೀಯರಲ್ಲಿಯೂ ಹೆಚ್ಚಿನವರು ಜರ್ಮನಿಯಲ್ಲಿ ಪ್ರೌಢಶಿಕ್ಷಣ ಪಡೆದುಬಂದವರೇ ಆಗಿದ್ದರು.
ಸ್ವದೇಶೀ ಅಭಿಯಾನವು ನಡೆದದ್ದು ಕೇವಲ ರಾಜಕೀಯ ಪ್ರಾಕಾರದಲ್ಲಲ್ಲದೆ ವೈಚಾರಿಕ ಸ್ತರದಲ್ಲಿಯೂ ಅದು ಇಪ್ಪತ್ತನೇ ಶತಾಬ್ದದ ಮೊದಲ ಪಾದದಲ್ಲಿ ಪ್ರಖರವಾಗಿ ನಡೆಯಿತೆಂದು ಸೂಚಿಸಲು ಮೇಲಣ ವಿವರಗಳನ್ನು ಪ್ರಸ್ತಾವಿಸಿದ್ದಾಯಿತು. ಬರ್ಲಿನಿಗೆ ಶಿಕ್ಷಣಕ್ಕಾಗಿ ಹೋಗುತ್ತಿದ್ದ ಭಾರತೀಯರ ಸಂಖ್ಯೆ ಎ? ದೊಡ್ಡದಿತ್ತೆಂದರೆ ಅವರಲ್ಲಿ ಇಂಗ್ಲೆಂಡ್ವಿರೋಧಿ ತರುಣರೂ ಇರಬಹುದೆ ಎಂದು ಶೋಧಿಸಲು ಬ್ರಿಟಿ? ಸರ್ಕಾರ ವಿಶೇಷ ಗೂಢಚಾರ ವ್ಯವಸ್ಥೆಗಳನ್ನು ಮಾಡಿತ್ತು. (ಬ್ರಿಟಿಷರ ಗುಮಾನಿ ನಿರಾಧಾರವಾಗಿರಲಿಲ್ಲ. ಬರ್ಲಿನಿಗೆ ಪ್ರೌಢವ್ಯಾಸಂಗಕ್ಕಾಗಿ ತೆರಳಿದ್ದವರಲ್ಲಿ ರಾಮ ಮನೋಹರ ಲೋಹಿಯಾ, ಎಂ.ಎನ್. ರಾಯ್ ಮೊದಲಾದ ಅನೇಕರು ಇದ್ದರು.)
‘ಸಾಂಸ್ಕೃತಿಕ ರಾಯಭಾರ’
ಯೂರೋಪ್ ಪ್ರವಾಸಗಳಲ್ಲಿ ರವೀಂದ್ರನಾಥ ಠಾಕೂರರು ಪಾಶ್ಚಾತ್ಯ ಭೌತವಾದಕ್ಕೆ ಬದಲಾಗಿ ಪ್ರಾಚ್ಯದೇಶಗಳ ಅಧ್ಯಾತ್ಮಪ್ರವಣತೆಯನ್ನು ಒತ್ತಿಹೇಳುತ್ತಿದ್ದುದರಲ್ಲಿ ಪರೋಕ್ಷವಾಗಿ ಇಂಗ್ಲೆಂಡನ್ನು ಟೀಕೆಗೆ ಗುರಿಮಾಡುವ ಆಶಯವೇ ಧ್ವನಿತವಾಗುತ್ತಿತ್ತು. ಠಾಕೂರರು ಆಗ ಸಾಧಿಸಿದ ಸಂಪರ್ಕಗಳು ಅನಂತರದ ದಿನಗಳಲ್ಲಿ ಅವರ ವಿಶ್ವಭಾರತಿ ವಿಶ್ವವಿದ್ಯಾಲಯ ಕಾರ್ಯದಲ್ಲಿ ಉಪಯುಕ್ತವಾಯಿತು.
ಲೋಕಮಾನ್ಯ ತಿಲಕರ ಒತ್ತಾಸೆಯ ಹಿನ್ನೆಲೆಯೂ ಇದ್ದ ಠಾಕೂರರ ಯೂರೋಪಿನ ಉಪನ್ಯಾಸಸರಣಿಗಳು ’ಸಾಂಸ್ಕೃತಿಕ ರಾಯಭಾರ’ ಎಂದೇ ಅಂಕಿತಗೊಂಡವು. ಭಾರತದೊಳಗಡೆಯೂ ಅದು ಅಭೂತಪೂರ್ವವೆಂದು ಪ್ರಶಂಸಿತವಾಯಿತು.
ಸಂಸ್ಕೃತಾಧ್ಯಯನ ಕ್ಷೇತ್ರದಲ್ಲಿ ಆ ದಿನಗಳಲ್ಲಿ ವಿಶ್ವಖ್ಯಾತರಾಗಿದ್ದ ಸಿಲ್ವೇನ್ ಲೆವಿ, ಸ್ಟೆನ್ ಕೊನೊವ್, ಮೊರಿಟ್ಸ್ ವಿಂಟರ್ನಿಟ್ಸ್ ಮೊದಲಾದ ಶ್ರೇಷ್ಠರು ಶಾಂತಿನಿಕೇತನಕ್ಕೆ ಸಂದರ್ಶಕೋಪನ್ಯಾಸಕರಾಗಿ ಬಂದದ್ದು ಶಾಂತಿನಿಕೇತನದ ಪ್ರತಿಷ್ಠಗೆ ಗರಿ ಮೂಡಿಸಿತು. ಆಸ್ಟ್ರಿಯದಿಂದ ಹಾಗೆ ಬಂಗಾಳಕ್ಕೆ ಬಂದ ಪ್ರಸಿದ್ಧ ಕಲಾಭಿಜ್ಞೆ ಸ್ಟೆಲ್ಲಾ ಕ್ರ್ಯಾಮ್ರಿಶ್ ಅನಂತರ ಮೂರು ದಶಕಗಳ ಕಾಲ ಭಾರತದಲ್ಲಿಯೆ ಉಳಿದು ಭಾರತೀಯ ಕಲಾಧ್ಯಯನ ಕ್ಷೇತ್ರಕ್ಕೆ ಅನುಪಮ ಕೂಡುಗೆ ನೀಡಿದರು.
ಶುದ್ಧವಿಜ್ಞಾನ ಕ್ಷೇತ್ರದಲ್ಲಿಯೂ ಭಾರತೀಯ ವಿಜ್ಞಾನಿಗಳಿಗೂ ಮತ್ತು ಜಗತ್ತಿನಲ್ಲಿಯೆ ಭೌತಶಾಸ್ತ್ರ ರಸಾಯನಶಾಸ್ತ್ರಗಳಲ್ಲಿ ಅಗ್ರಣಿಯೆನಿಸಿದ್ದ ಜರ್ಮನಿಯ ವಿಜ್ಞಾನಿಗಳಿಗೂ ನಡುವೆ ಘನಿಷ್ಟ ಸಂಪರ್ಕ ಏರ್ಪಟ್ಟಿತ್ತು. ಆ ದಿನಗಳಲ್ಲಿ ಸಿ.ವಿ. ರಾಮನ್, ಮೇಘನಾದ ಸಹಾ, ಸತ್ಯೇಂದ್ರನಾಥ ಬೋಸ್ ಮೊದಲಾದವರು ನಡೆಸಿದ ಪಥದರ್ಶಕ ಶೋಧಕಾರ್ಯಗಳು ಭೌತಶಾಸ್ತ್ರ ಕ್ಷೇತ್ರದಲ್ಲಿ ಭಾರತದ ಅಂತರರಾಷ್ಟ್ರೀಯ ಮಾನ್ಯತೆಗೆ ಕಾರಣವಾದವು. ಸಾಮ್ರಾಜ್ಯಶಾಹಿ ಮನೋವೃತ್ತಿಯ ಬ್ರಿಟಿಷ್ ಪ್ರಭುತ್ವದಿಂದ ಎಷ್ಟು ಮಾತ್ರದ ಬೆಂಬಲವೂ ಇರದಿದ್ದ ಸನ್ನಿವೇಶದಲ್ಲಿ ಆಗಿನ ಭಾರತೀಯ ವಿಜ್ಞಾನಿಗಳ ಇತಿಹಾಸಾರ್ಹ ಸಾಧನೆಗಳು ನಡೆದವೆಂಬುದನ್ನು ಗಮನಿಸಬೇಕು. ಅದಕ್ಕೆ ಹಿಂದಿನ ಐವತ್ತು ವರ್ಷಗಳಲ್ಲಿ ಬ್ರಿಟಿಷರಿಂದ ಪ್ರವರ್ತಿತವಾಗಿದ್ದವು ಬಹುಮಟ್ಟಿಗೆ ಸಾಮ್ರಾಜ್ಯದೃಢೀಕರಣಯೋಜನೆಗೆ ಪೂರಕಗಳಾಗಿದ್ದ ಅಧ್ಯಯನಗಳಷ್ಟು. ಅವಕ್ಕೆ ಪರ್ಯಾಯಗಳಾಗಿಯೆ ಮಹೇಂದ್ರಲಾಲ್ ಸರ್ಕಾರ್, ಪ್ರಮಥನಾಥ ಬೋಸ್ ಮೊದಲಾದವರು ವಿಜ್ಞಾನಾಧ್ಯಯನಕ್ಕಾಗಿ ದೇಶೀಯ ಸಂಸ್ಥೆಗಳನ್ನು ಸ್ಥಾಪಿಸಿದುದು. ಇಪ್ಪತ್ತನೇ ಶತಮಾನದ ಆರಂಭಕಾಲದಲ್ಲಿ ಮೋಕ್ಷಗುಂಡಂ ವಿಶ್ವೇಶ್ವರಯ್ಯನವರು ಮೊತ್ತಮೊದಲಿಗೆ ರಾಷ್ಟ್ರವ್ಯಾಪ್ತಿಯ ಅಭ್ಯುದಯ ಯೋಜನೆಗಳ ಕಲ್ಪನೆಯನ್ನು ಆವಿ?ರಿಸಿದುದು ಸುವಿದಿತ.
ವಿಜ್ಞಾನಕ್ಷೇತ್ರದಲ್ಲಿ ಭಾರತದ ದಾಪುಗಾಲು
ಮೇಘನಾದ ಸಹಾ ಅವರಂತೂ ಬಾಲ್ಯದಿಂದಲೇ ಸಾಮ್ರಾಜ್ಯಶಾಹಿಗೆ ಪ್ರಬಲ ವಿರೋಧಿಯಾಗಿದ್ದವರು; ಪ್ರೌಢಶಾಲೆಯ ವ್ಯಾಸಂಗ ನಡೆಸುತ್ತಿದ್ದ ದಿನಗಳಲ್ಲಿಯೆ ಆಗಿನ ಗವರ್ನರನ ಭೇಟಿಗೆ ಪ್ರತಿಭಟಿಸಿ ಶಾಲೆಯಿಂದ ಬಹಿಷ್ಕಾರಗೊಂಡಿದ್ದವರು; ಆ ದಿನಗಳ ಸ್ವದೇಶೀ ಹಾಗೂ ಭೂಗತ ಕಾರ್ಯಕರ್ತರ ನಿಕಟ ಒಡನಾಟದಲ್ಲಿ ಇದ್ದವರು. ಅಲ್ಪಕಾಲದಲ್ಲಿ ಜರ್ಮನ್ ಭಾಷೆಯಲ್ಲಿ ಪ್ರಭುತ್ವ ಸಾಧಿಸಿದ ಸಹಾ ಅವರು ಜiನಿಯಲ್ಲಿ ನಡೆದಿದ್ದ ಶೋಧಕಾರ್ಯಗಳ ಮಾಹಿತಿಯನ್ನೂ ವಿಜ್ಞಾನ ಪತ್ರಿಕೆಗಳನ್ನೂ ಕ್ಷಿಪ್ರವಾಗಿ ಬಂಗಾಳದಲ್ಲಿ ಲಭ್ಯವಾಗಿಸುವುದಕ್ಕೆ ಕಾರಣರಾದರು. ೧೯೧೯ರಲ್ಲಿ ಡಾಕ್ಟೊರೇಟ್ ಪಡೆಯುವುದಕ್ಕೂ ಮುಂಚೆಯೇ ಸಹಾ ಅವರು ಐನ್ಸ್ಟೈನನ ಸಾಪೇಕ್ಷತಾವಾದ ಕುರಿತ ಶೋಧಪ್ರಬಂಧವನ್ನು ಜರ್ಮನ್ ಭಾ?ಯಿಂದ ಇಂಗ್ಲಿಷಿಗೆ ಅನುವಾದ ಮಾಡಿದ್ದರು. ಐನ್ಸ್ಟೈನನ ಸಾಧನೆಯ ಮಹತ್ತ್ವವನ್ನು ಮೊದಮೊದಲೇ ಗುರುತಿಸಿದ್ದವರು ಮೇಘನಾದ ಸಹಾ.
’ವಿಶೇಷ’ ಸಾಪೇಕ್ಷತಾ ಸಿದ್ಧಾಂತವನ್ನು ಐನ್ಸ್ಟೈನ್ ಮಂಡಿಸಿದ್ದುದು ೧೯೦೫ರಲ್ಲಿ. ಆದರೆ ಅದರ ದೃಢೀಕರಣ ಸಾಧ್ಯವಾದದ್ದು ೧೯೧೯ರ ಮೇ ತಿಂಗಳಿನಲ್ಲಿ ಸಂಪೂರ್ಣ ಸೂರ್ಯಗ್ರಹಣ ನಡೆದಾಗಲ?. ಅದಕ್ಕೆ ಸಂಬಂಧಿಸಿದ ಚಿತ್ರಗಳನ್ನು ಸಿದ್ಧಪಡಿಸಲು ಸಾಧ್ಯವಾದದ್ದು ಅದಾದ ಆರು ತಿಂಗಳ ತರುವಾಯ. ಹಾಗೆ ರುಜುವಾತುಗೊಂಡ ಐನ್ಸ್ಟೈನನ ಸಾಪೇಕ್ಷತಾವಾದದ ಐತಿಹಾಸಿಕತೆಗೆ ಜಗತ್ತಿನ ಗಮನ ಸೆಳೆದವನು ಬ್ರಿಟಿಷ್ ವಿಜ್ಞಾನಿ ಆರ್ಥರ್ ಎಡಿಂಗ್ಟನ್ – ೧೯೧೯ರ ನವೆಂಬರ್ ೭-೮ರ ’ಲಂಡನ್ ಟೈಮ್ಸ್’ ದಿನಪತ್ರಿಕೆಯಲ್ಲಿ. ಅತಿಶಯವೆಂದರೆ ಅದಕ್ಕೆ ಮೂರು ದಿವಸ ಹಿಂದೆಯೇ ಮೇಘನಾದ ಸಹಾ ಅವರು ಆ ಐತಿಹಾಸಿಕ ಘಟನೆಯ ಬಗೆಗೆ ಕೋಲ್ಕತಾದ ’ಸ್ಟೇಟ್ಸ್ಮನ್’ ಪತ್ರಿಕೆಯಲ್ಲಿ ಲೇಖನ ಪ್ರಕಟಿಸಿದ್ದರು! (‘Time and Space – The New Scientific Theory’). ಸಹಾ ಅವರು ತಮ್ಮ ಲೇಖನವನ್ನು ಪ್ರಕಟಿಸಿ ಆರು ದಿನಗಳಾದ ಮೇಲೆಯೆ ಅಮೆರಿಕದ ’ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆಯಲ್ಲಿ ಆ ಶೋಧದ ಸುದ್ದಿ ಬೆಳಕು ಕಂಡದ್ದು. ಹೀಗೆ ಯೂರೋಪಿನ ಮತ್ತು ಅಮೆರಿಕದ ಜನತೆಗಿಂತ ಮುಂಚೆಯೇ ಸಾಪೇಕ್ಷತಾ ಸಿದ್ಧಾಂತ ದೃಢೀಕರಣದ ಸುದ್ದಿಯು ಬಂಗಾಳದ ಜನತೆಗೆ ತಲಪಿತ್ತು!
ಅದೇ ದಿನಗಳಲ್ಲಿ ಸಹಾ ಅವರು ಥರ್ಮೋಡೈನಮಿಕ್ಸ್ ಕ್ಷೇತ್ರದಲ್ಲಿ ನಡೆಸಿದ್ದ ಸ್ವೀಯ ಸಂಶೋಧನೆಯು ಜಾಗತಿಕ ಮಾನ್ಯತೆಯ ಭೌತವಿಜ್ಞಾನಿಗಳ ಪಂಕ್ತಿಯಲ್ಲಿ ಅವರ ಉನ್ನತ ಸ್ಥಾನವನ್ನು ಸ್ಥಿರಗೊಳಿಸಿತು. ಸಹಾ ಅವರೂ ಸೇರಿದಂತೆ ಆ ಪರ್ವದ ಭಾರತೀಯ ವಿಜ್ಞಾನಿಗಳ ವಿಸ್ಮಯಕರ ಸಾಧನೆಗಳ ಹಿಂದೆ ಇದ್ದುದು ಆಶುತೋಷ್ ಮುಖರ್ಜಿಯವರ ನಿರಂತರ ಬೆಂಬಲ ಎಂದು ಹೇಳುವ ಆವಶ್ಯಕತೆ ಇಲ್ಲ.
ಸಹಾ ಅವರ ಹಿರಿಯ ಸಹೋದ್ಯೋಗಿಯೂ ಮಾರ್ಗದರ್ಶಕರೂ ಆಗಿದ್ದ ಸತ್ಯೇಂದ್ರನಾಥ ಬೋಸ್ ಅವರಂತೂ ನೇರ ಐನ್ಸ್ಟೈನನ ಜೊತೆಯಲ್ಲಿಯೆ ಕೆಲಸ ಮಾಡಿದವರು. ಅವರ ಸಾಹಚರ್ಯದಲ್ಲಿ ಆವಿಷ್ಕೃತಗೊಂಡ Bose-Einstein Statistics ಇತಿಹಾಸಾರ್ಹವೆನಿಸಿ ಕ್ವಾಂಟಂ ಮೆಕ್ಯಾನಿಕ್ಸ್ ಕ್ಷೇತ್ರದ ಮುನ್ನಡೆಗೆ ಕಾರಣವಾಯಿತು.
ಸಿ.ವಿ. ರಾಮನ್ ಅವರು ಬೆಂಗಳೂರಿನ ತಾತಾ ವಿಜ್ಞಾನಮಂದಿರದ ನಿರ್ದೇಶಕರಾಗಿದ್ದ ಸಮಯದಲ್ಲಿ ಅವರು ಕೈಗೊಂಡ ಸಂಶೋಧನಕ್ಷೇತ್ರ ಪುನರ್ವಿನ್ಯಾಸ ಪ್ರಯತ್ನಗಳು ಮ್ಯಾಕ್ಸ್ ಪ್ಲ್ಯಾಂಕ್ ಮೊದಲಾದ ವಿಖ್ಯಾತ ವಿಜ್ಞಾನಿಗಳ ಪ್ರಶಂಸೆಯನ್ನೂ ಬೆಂಬಲವನ್ನೂ ಆಕರ್ಷಿಸಿದವು.
ಆ ಕಾಲಖಂಡದ ಇಂತಹ ಉಪಕ್ರಮಗಳು ಅದುವರೆಗೆ ಅಧೀನರಾಷ್ಟ್ರವೆಂದಷ್ಟೆ ಕರೆಯಿಸಿಕೊಳ್ಳುತ್ತಿದ್ದ ಭಾರತಕ್ಕೆ ಅಂತರರಾಷ್ಟೀಯ ಸ್ತರದಲ್ಲಿ ಸಂಮಾನ್ಯತೆಯನ್ನು ತಂದುಕೊಟ್ಟವು.
‘ನವೋತ್ಥಾನದ ಕರ್ಣಧಾರರು’
’ರಾಮನ್ ಎಫೆಕ್ಟ್’ ಎಂದೇ ಖ್ಯಾತವಾದ, ದ್ರವಗಳಲ್ಲಿ ಬೆಳಕಿನ ಪ್ರಸರಣ ವಿನ್ಯಾಸ ಕುರಿತ ಸಿ.ವಿ. ರಾಮನ್ ಶೋಧಲೇಖನಗಳು ಅಂತರರಾಷ್ಟ್ರೀಯ ಪ್ರತಿಷ್ಠೆಯ ’ನೇಚರ್’ ಪತ್ರಿಕೆಯಲ್ಲಿ ಪ್ರಕಟವಾಗತೊಡಗಿದುದು ೧೯೨೮ರಲ್ಲಿ. ಆ ಶೋಧವು ಬೆಳಕಿಗೆ ಬಂದ ಒಂದೇ ವರ್ಷದಲ್ಲಿ (೧೯೨೯) ಇಂಗ್ಲೆಂಡ್, ಜರ್ಮನಿ, ಇಟಲಿ ಮೊದಲಾದೆಡೆಗಳ ವಿಖ್ಯಾತ ವಿಜ್ಞಾನಿಗಳ ೨೫ರಷ್ಟು ಅಧಿಕ ಪರಾಮರ್ಶನ ಲೇಖನಗಳು ಪ್ರಕಟಗೊಂಡವೆಂಬುದು ಅದರ ಮಹತ್ತ್ವವನ್ನು ಸಾಕ್ಷ್ಯಪಡಿಸಿತು. ಹೀಗೆ ೧೯೩೦ರಲ್ಲಿ ರಾಮನ್ ಅವರು ನೊಬೆಲ್ ಪ್ರಶಸ್ತಿಗೆ ಭಾಜನರಾದದ್ದು ಅತ್ಯಂತ ಸಹಜವೆನಿಸಿತು. “ಭಾರತೀಯ ವಿಜ್ಞಾನಿಗಳು ಆ ದೇಶದ ನವೋತ್ಥಾನದ ಕರ್ಣಧಾರರಾಗಿದ್ದಾರೆ” ಎಂದೇ ’ನ್ಯೂಯಾರ್ಕ್ ಟೈಮ್ಸ್’ ಪತ್ರಿಕೆ ಬರೆಯಿತು.
ಬ್ರಿಟಿಷ್ ಪ್ರಭುತ್ವದ ಕಾಲಬಾಹ್ಯ ಮನಃಪ್ರವೃತ್ತಿಯ ಹಿನ್ನೆಲೆಯಲ್ಲಿ ಪ್ರಗತಿಪರ ವಿಜ್ಞಾನಶೋಧಗಳ ಮುಂದುವರಿಕೆ ಅಸಂಭವನೀಯ – ಎಂಬ ದಿಟ್ಟ ನಿಲವನ್ನು ತಳೆದವರು ಮೇಘನಾದ ಸಹಾ. ಅವರ ಚಿಂತನೆಯು ಸತರ್ಕವಾಗಿತ್ತೆಂಬುದನ್ನು ೧೯೩೦ರ ದಶಕದಿಂದಾಚೆಗೆ ಅಮೆರಿಕ-ರಷ್ಯಾಗಳು ಮೆರೆದ ವಿಜ್ಞಾನಸಾಧನೆಗಳೂ ಪುರಾವೆಗೊಳಿಸಿದವು.
ಇಪ್ಪತ್ತನೇ ಶತಮಾನದ ಮೊದಲ ಮೂರು ದಶಕಗಳಲ್ಲಿ ಪ್ರಮುಖ ಕ್ಷೇತ್ರಗಳಿಗೆ ವೈಚಾರಿಕ ಸ್ತರದಲ್ಲಿ ಸ್ವದೇಶೀ ಅಧಿಷ್ಠನವು ಲಭಿಸಿದುದರ ಫಲವಾಗಿ ಭಾರತ ಇಪ್ಪತ್ತೊಂದನೇ ಶತಮಾನದ ಮೊದಲ ಪಾದದಲ್ಲಿಯೂ ಗುರುತಿಸಲಾಗುವಂತಹ ’ಸಾಫ್ಟ್ ಪವರ್’ ಆಗಿ ರೂಪತಳೆದ ಬಗೆಗೆ ಗಮನ ಸೆಳೆಯುವ ಆಶಯದಿಂದ ಈಗ್ಗೆ ನೂರು ವರ್ಷ ಹಿಂದಿನ ಮೇಲಣ ವಿದ್ಯಮಾನಗಳನ್ನು ಇಲ್ಲಿ ಉಪಲಕ್ಷಣಾರ್ಥ ಸ್ಮರಿಸಲಾಯಿತು. ಸ್ವಾತಂತ್ರ್ಯೋದ್ಯಮವನ್ನು ಕೇವಲ ರಾಜಕೀಯ ಸಂಧಾನಗಳ ನೆಲೆಯಲ್ಲಿ ವ್ಯಾಖ್ಯಾನಿಸುವ ರೂಢಿ ಬೆಳೆದಿರುವುದರ ಹಿನ್ನೆಲೆಯಲ್ಲಿ ಸ್ವಾತಂತ್ರ್ಯಾಭಿಮುಖ ಆಂದೋಲನದ ಹೆಚ್ಚು ಜನರಿಗೆ ಸವಿವರ ಪರಿಚಯವಿಲ್ಲದ ವೈಚಾರಿಕ ಪ್ರಯಾಸಗಳನ್ನು ಗುರುತಿಸುವುದು ಸ್ವಾತಂತ್ರ್ಯಕಥನದ ಸಮಗ್ರತೆಯ ದೃಷ್ಟಿಯಿಂದ ಅವಶ್ಯವಿದೆ. ಸ್ವಾತಂತ್ರ್ಯೋದ್ದಿಷ್ಟ ಆಂದೋಲನಸರಣಿಯ ಈ ಮುಖದ ವಿಸ್ತೃತ ಅಧ್ಯಯನಕ್ಕೆ ಅವಕಾಶವಿದೆ.