ಕಳೆದ ಸಂಚಿಕೆಯಲ್ಲಿ………
…ಬೆಂಗಳೂರಿನಲ್ಲಿ ಹೊಸ ಬದುಕು ಆರಂಭಿಸಿದ ವೈದೇಹಿಯ ಜೀವನ ನಿಧಾನವಾಗಿ ಅಭಿವೃದ್ಧಿಯತ್ತ ಸಾಗುತ್ತದೆ. ಕಷ್ಟಪಟ್ಟು ದುಡಿದು ಗಂಡ-ಹೆಂಡತಿ ಮಗಳನ್ನು ಓದಿಸುತ್ತಾರೆ; ಗೆಳತಿಯ ಸಾಲವನ್ನು ತೀರಿಸುತ್ತಾರೆ….
ಚಿನ್ಮಯಿ ಬಿ.ಇ. ಓದಬೇಕೆಂಬ ಹೆತ್ತವರ ಆಸೆಯನ್ನು ನಯವಾಗಿ ತಳ್ಳಿಹಾಕಿ, ಪದವಿ ಪಡೆದು, ತಾಯಿಯ ಉದ್ಯೋಗವನ್ನೇ ಮುಂದುವರಿಸಿಕೊಂಡು ಹೋಗಲು ನಿರ್ಧರಿಸುತ್ತಾಳೆ… ಅತ್ತೆ ಅಚ್ಚಮ್ಮ ಮಗ-ಸೊಸೆಯನ್ನು ದೂರಮಾಡಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಾ ಅವರನ್ನು ನೋಡಲು ಹಂಬಲಿಸುತ್ತಾರೆ…
ವೈದೇಹಿ, ಶೇಖರರ `ಬಿಸಿನೆಸ್’ ಚೆನ್ನಾಗಿ ಅಭಿವೃದ್ಧಿಯಾಗತೊಡಗಿತು. ಸಹಾಯಕ್ಕೆ ಒಬ್ಬರಿಂದ ಶುರುವಾಗಿ ಈಗ ನಾಲ್ಕು ಜನರನ್ನು ಇಟ್ಟುಕೊಂಡಿದ್ದರು. ಶೇಖರ ಏನಿದ್ದರೂ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿದ್ದ. ಚಿನ್ಮಯಿ ಬಿ.ಕಾಂ. ಕೊನೆಯ ವರ್ಷದಲ್ಲಿದ್ದಳು. ಬಡತನದಲ್ಲಿರುವಾಗ ಯಾರು ಸಂತೋಷದಿಂದ ಇರುತ್ತಾರೆಯೋ ಸಿರಿತನ ದೊರೆತಾಗಲೂ ಅವರು ನೆಮ್ಮದಿಯಿಂದ ಇರುತ್ತಾರೆ ಎಂಬಂತೆ ವೈದೇಹಿ ಮೊದಲ ಸಲ ಬೆಂಗಳೂರಿಗೆ ಬಂದಾಗ ಅವಳು ಯಾವ ಮನೋಭಾವದಿಂದ ಇದ್ದಳೋ ಈಗಲೂ ಅದೇ ಮನೋಭಾವವೇ ಇತ್ತು. ಗ್ರಾಹಕರ ಬೇಡಿಕೆಗಳು ಹೆಚ್ಚಾದಂತೆ ಮನೆಯಲ್ಲಿ ಸ್ಥಳ ಸಾಕಾಗದೆ, ತುಂಬಾ ದಿನಗಳಿಂದ ಖಾಲಿಯಿದ್ದ ಪಕ್ಕದ ಮನೆಯನ್ನು ಬಾಡಿಗೆಗೆ ತೆಗೆದುಕೊಂಡರು.
ಒಂದು ದಿನ ಪ್ರೇಮ ವೈದೇಹಿಗೆ ಫೋನು ಮಾಡಿ, ವೈದೇಹಿ, ಚಕ್ಕುಲಿಯ ಬಾಗಿನಗಳು ಬೇಕು, ಬಿಡುವಿದೆಯಾ? ಮಾಡಲು ಆಗುವುದೇ? ಎಂದು ಕೇಳಿದಳು.
ಹಿಟ್ಟು ಸಿದ್ಧವಾಗಿಯೇ ಇದೆ. ಎಷ್ಟು ಜೊತೆ ಬೇಕು? ವೈದೇಹಿ ಕೇಳಿದಳು.
ಜೊತೆಗೆ ಎಷ್ಟು?
ತೆಪ್ಪಗೆ ನಿನಗೆಷ್ಟು ಬೇಕೆಂದು ಹೇಳು, ಅಷ್ಟೆ ಎಂದಳು ವೈದೇಹಿ ಕೃತಕ ಸಿಟ್ಟಿನಿಂದ.
ಮನೆಯಲ್ಲಿಯೇ ಇರು. ನಾವು ಬರುತ್ತಿದ್ದೇವೆ. ಚಕ್ಕುಲಿ ಇನ್ನೊಂದು ವಾರಕ್ಕೆ ಬೇಕು ಎಂದಳು.
ಇಲ್ಲಿಯೇ ಊಟ, ನೆನಪಿರಲಿ. ನಿನ್ನ ಯಜಮಾನರೂ ಬರಲಿ ಎಂದು ಹೇಳಿದಳು ವೈದೇಹಿ.
ಆಪ್ತಗೆಳತಿಗಾಗಿ ಅವಳಿಗಿಷ್ಟವಾದ ಬಿಸಿಬೇಳೆ ಭಾತ್, ಗಸಗಸೆ ಪಾಯಸ ಮಾಡಿದಳು. ಜೊತೆಗೆ ಬೋಂಡ, ಹಪ್ಪಳ ಎಲ್ಲವೂ ಸಿದ್ಧವಾಯಿತು. ಶೇಖರ ಮನೆಯಲ್ಲಿರಲಿಲ್ಲ. ಅವನು ವಿಜಯನಗರಕ್ಕೆ ಎರಡು ಕಡೆ ಚಕ್ಕುಲಿ, ಉಂಡೆ ಬಾಗಿನಗಳನ್ನು ಕೊಡಲು ಹೋಗಿದ್ದ.
ಗಂಡನ ಕಾರ್ಯತತ್ಪರತೆಗೆ ವೈದೇಹಿ ತೃಪ್ತಿಗೊಂಡಿದ್ದಳು. ಹಳ್ಳಿಯ ಶೇಖರ ಮರೆಯಾಗಿ ಪಟ್ಟಣದ ಶೇಖರನಾಗಿ ಬದಲಾಯಿಸಿದ್ದ. ವಜ್ರವು ಮಣ್ಣಿನಲ್ಲಿ ಬಿದ್ದಿದ್ದರೂ ಸಹ ಮೌಲ್ಯವು ಕಡಮೆಯಾಗದು ಎಂಬಂತೆ ಪೊರೆ ಕಳಚಿದ ಹಾವಿನಂತೆ ಶೇಖರ ವ್ಯವಹಾರಕ್ಕೆ ಹೊಂದಿಕೊಂಡಿದ್ದ. ಬುದ್ಧಿವಂತಿಕೆಯಿಂದ ಮೆಲುವಾಗಿ, ಮೃದುವಾಗಿ ಮಾತನಾಡುತ್ತಿದ್ದ. ಪತ್ನಿ, ಮಗಳೊಡನೆ ಸಂತೋಷದಿಂದ ಇರುತ್ತಿದ್ದ. ಅಂತಹ ಗಂಡನನ್ನು ವೈದೇಹಿ ಅಭಿಮಾನದಿಂದಲೇ ಕಾಣುತ್ತಿದ್ದಳು. ಪ್ರೀತಿಯ ಮರ ಸೊಂಪಾಗಿ ಬೆಳೆಯಲು ಪ್ರೀತಿಯ ಗೊಬ್ಬರವೇ ಬೇಕು.
ಪ್ರೇಮ ಮಗನೊಡನೆ ಬಂದಾಗ ಆರು ಗಂಟೆಯಾಗಿತ್ತು.
ಯಾಕೆ ಇಷ್ಟು ತಡ? ನಿನ್ನ ಯಜಮಾನರೆಲ್ಲಿ? ಆದರದಿಂದ ಸ್ವಾಗತಿಸಿ ವಿಚಾರಿಸಿದಳು.
ಅವರು ಆಫೀಸಿನಿಂದ ಬರುವುದನ್ನೇ ಕಾಯುತ್ತಿದ್ದೆ. ಆದರೆ ಈ ದೀಪು ಅವಸರಪಡಿಸಿದ ಅದಕ್ಕೇ….. ಎಂದು ಪಕ್ಕಕ್ಕೆ ತಿರುಗಿದಳು.
ಅಲ್ಲಿ ಪ್ರದೀಪನಿರಲಿಲ್ಲ. ಅವನಾಗಲೇ ಚಿನ್ಮಯಿಯೊಡನೆ ಮಾತನಾಡುತ್ತಿದ್ದ. ಅವನಿಗೆ ಕೆಲಸ ಸಿಕ್ಕಿತ್ತು. ಉದ್ದಕ್ಕೆ, ಸೊಂಪಾಗಿ ಬೆಳೆದಿದ್ದ.
ವೈದೇಹಿ ಕಾಫಿಯನ್ನು ತಂದು ಎಲ್ಲರಿಗೂ ಕೊಟ್ಟಳು.
ನಿನ್ನ ಯಜಮಾನರೆಲ್ಲಿ? ಕಾಫಿ ಕುಡಿಯುತ್ತ ಕೇಳಿದಳು ಪ್ರೇಮ.
ಅವರು ವಿಜಯನಗರಕ್ಕೆ ಹೋಗಿದ್ದಾರೆ. ಇನ್ನೇನು ಬರ್ತಾರೆ ಎಂದಳು ವೈದೇಹಿ.
ಆದರೂ ವೈದೇಹಿ, ಇಷ್ಟು ವರುಷಗಳಲ್ಲಿ ನೀವು ಸಾಧಿಸಿರುವುದು ತುಂಬಾನೆ ಹೆಚ್ಚು. ಇದು ಹೇಗೆ ಸಾಧ್ಯವಾಯಿತೆಂದು ನನಗೇ ಆಶ್ಚರ್ಯವಾಗುತ್ತಿದೆ ಎಂದಳು ಪ್ರೇಮ ನಿರ್ಮಲ ಮನಸ್ಸಿನಿಂದ.
ನಂಬಿದ ದೇವರು ನಿನ್ನ ಮೂಲಕ ನಮ್ಮನ್ನು ಎತ್ತಿ ನಿಲ್ಲಿಸಿದ. ನಿನ್ನಿಂದಲೇ ನಾವಿಂದು ಈ ಸ್ಥಿತಿಗೆ ಬಂದಿದ್ದೇವೆ ಎಂದು ಗೆಳತಿಯ ಕೈಯನ್ನು ವಿಶ್ವಾಸದಿಂದ ಹಿಡಿದುಕೊಂಡಳು.
ಸಾಕು, ನಿಲ್ಲಿಸು, ನನ್ನನ್ನು ಹೊಗಳಲು ಪ್ರಾರಂಭಿಸಿದರೆ ಹೊತ್ತಿನ ಪರಿವೆಯೇ ಇರುವುದಿಲ್ಲ ಎಂದಳು ಪ್ರೇಮ.
ಇದು ಮುಖಸ್ತುತಿ ಅಲ್ಲವೇ, ಕೃತಜ್ಞತೆ. ನಮಗೆ ಸಹಾಯ ಮಾಡಿದವರನ್ನು ನಾವು ಯಾವಾಗಲೂ ನೆನೆಸುತ್ತಿರಬೇಕು ಎಂದಳು ವೈದೇಹಿ.
ಶೇಖರ ಬಂದ. ಚೆನ್ನಾಗಿರುವಿರಾ? ಎಂದು ವಿಧೇಯತೆಯಿಂದ ಮಾತಾಡಿ ಹಣವನ್ನು ಪತ್ನಿಯ ಕೈಗಿತ್ತ.
ಕಾಫಿ ಕೊಡಲೇ?
ಬೇಡ ಎಂದು ಹೇಳಿ ನೀವು ಒಬ್ಬರೇ ಬಂದಿರಲ್ಲಾ! ಈ ಸಲವಾದರೂ ನಿಮ್ಮ ಮನೆಯವರು ಬರಬಹುದಾಗಿತ್ತು ಎಂದ ಮೆಲುವಾಗಿ.
ದೀಪು?
ಅವನೂ ಬಂದಿದ್ದಾನೆ. ಚಿನ್ಮಯಿಯೊಡನೆ ಮಾತನಾಡುತ್ತಿದ್ದಾನೆ ಎಂದಳು ಪ್ರೇಮ.
ಶೇಖರ ಬಟ್ಟೆ ಬದಲಾಯಿಸಲು ರೂಮಿಗೆ ಹೋದ. ಅವನನ್ನೇ ನೋಡುತ್ತಿದ್ದ ಪ್ರೇಮ ತೃಪ್ತಿಯಿಂದ ಗೆಳತಿಯನ್ನಪ್ಪಿ ಹಿಡಿದಳು.
ಪ್ರಸನ್ನ ಬಂದ ಮೇಲೆ ಎಲ್ಲರೂ ಒಟ್ಟಿಗೆ ಊಟ ಮಾಡಿದರು. ನಗು ಮಾತಿನಲ್ಲಿ ಸಮಯ ಕಳೆದದ್ದೇ ಯಾರಿಗೂ ತಿಳಿಯಲಿಲ್ಲ.
ಬರ್ತೀವಿ ವೈದೇಹಿ, ತುಂಬಾ ಹೊತ್ತಾಯಿತು ಪ್ರೇಮ ಎದ್ದಳು.
ಪ್ರಸನ್ನ ಶೇಖರನ ಕೈಕುಲುಕಿ ಬಿಡುವು ಮಾಡಿಕೊಂಡು ಬನ್ನಿ ಎಂದ ಪ್ರೀತಿಯಿಂದ. ದೀಪುವಿನ ಮಾತು ಇನ್ನೂ ಮುಗಿದಿರಲಿಲ್ಲ.
ಬಾರೋ, ತುಂಬಾ ಹೊತ್ತಾಯಿತು ಎಂದು ಪ್ರೇಮ ಮಗನನ್ನು ಕೂಗಿ ವೈದೇಹಿ ಬರುವ ಶುಕ್ರವಾರ ಚಕ್ಕುಲಿಯನ್ನು ಕಳಿಸು ಎಂದು ಹೇಳಿ ಗಂಡನ ಮುಖವನ್ನೊಮ್ಮೆ ನೋಡಿದಳು. ಅಲ್ಲಿ ಸಮ್ಮತಿಯ ಛಾಯೆ ಇರುವುದನ್ನು ಕಂಡು ಒಂದು ಮಾತು ಎಂದಳು ಮೆಲ್ಲನೆ.
ಏನು ಹೇಳು ಪ್ರೇಮಾ…
ಅದೂ… ಅದೂ… ಈಗ ಬೇಡ, ಇನ್ನೂ ಕೆಲವು ದಿನಗಳು ಕಳೆಯಲಿ ಹೇಳುತ್ತೇನೆ ಎಂದಳು.
ಗೆಳತಿಯಾಡಿದ ಮಾತಿನ ಅರ್ಥ ತಿಳಿಯದೇ ಅವರು ಹೋದ ಕಡೆಗೇ ನೋಡುತ್ತಾ ತುಂಬಾ ಹೊತ್ತು ನಿಂತಿದ್ದಳು ವೈದೇಹಿ.
* * *
ಜಗ್ಗು, ಕಿಟ್ಟು, ಸಂಸಾರ ಸಮೇತರಾಗಿ ಹಳ್ಳಿಗೆ ಹೋಗಿದ್ದರು. ಜಗದೀಶನ ಮಗಳಿಗೆ ಮದುವೆ ಗೊತ್ತಾಗಿತ್ತು. ಹಿರಿಯರಿಗೆ ಹೇಳಲು ಬಂದಿದ್ದರು. ಅದಕ್ಕೂ ಮುಖ್ಯವಾಗಿ ತಂದೆಯನ್ನು ಹಣ ಕೇಳಲು ಬಂದಿದ್ದರು.
ಅಚ್ಚಮ್ಮನವರ ಸಂಭ್ರಮ ಹೇಳತೀರದು. ಮೊಮ್ಮಗಳ ಮದುವೆಗೆ ಹೋಗಲು ಉತ್ಸಾಹದಿಂದ ಇದ್ದರು.
ಮಧ್ಯಾಹ್ನ ಊಟದ ನಂತರ ಜಗ್ಗು ಅಪ್ಪ, ಸ್ವಲ್ಪ ಮಾತಾಡಬೇಕು ಎಂದ. ಎಲ್ಲರೂ ಕುಳಿತರು.
ಅಪ್ಪಾ, ಮದುವೆಯನ್ನು ತುಂಬಾ ಗ್ರ್ಯಾಂಡಾಗಿ ಮಾಡಬೇಕಂತೆ. ಅವರ ಬಳಗ ದೊಡ್ಡದಂತೆ, ದೊಡ್ಡ ಛತ್ರವನ್ನು ಮಾಡಲು ಬೀಗರು ಹೇಳಿದ್ದಾರೆ. ದಿನಕ್ಕೆ ಎಪ್ಪತ್ತೈದು ಸಾವಿರ ಬಾಡಿಗೆಯ ಛತ್ರವನ್ನು ಮೂರುದಿನಕ್ಕೆ ಮಾಡಿದ್ದೇನೆ. ಅಪ್ಪಾ, ನನಗೆ ಹಣ ಬೇಕು ಎಂದ.
ಇದೆಯೇ ಎಂದಾಗಲೀ, ಸಾಧ್ಯವೇ ಎಂದಾಗಲೀ ಕೇಳಲಿಲ್ಲ.
ರಂಗಣ್ಣನವರು ಎಷ್ಟು ಬೇಕು? ಎಂದು ಕೇಳಿದರು ಸಹಜವಾಗಿ.
ಕಮ್ಮಿ ಎಂದರೂ ಐದು ಲಕ್ಷವಾದರೂ ಬೇಕೇ ಬೇಕು ಎಂದ ಕಡ್ಡಿಮುರಿದಂತೆ.
ಅಷ್ಟು ಹಣವನ್ನು ಕೊಡಲು ನನಗೆ ಸಾಧ್ಯವಿಲ್ಲ. ಮೊಮ್ಮಗಳ ಮದುವೆಗೆ ನಾನೂ ಅಷ್ಟು ಕೊಡಬೇಕೆಂದು ನನಗೂ ಆಸೆಯಿದೆ. ಕಾಯಿ, ಕೊಬ್ಬರಿಯನ್ನು ಎಷ್ಟು ಬೇಕೋ ಅಷ್ಟು ತೆಗೆದುಕೊಂಡು ಹೋಗು. ಅಡಿಕೆಯನ್ನು ಪುಡಿ ಮಾಡಿಸುತ್ತೇನೆ. ಇನ್ನು ಬಾಳೆಎಲೆ, ಬಾಳೆಹಣ್ಣು ಮುಂತಾದುವುಗಳನ್ನು ನಾನು ಬರುವಾಗ ತರುತ್ತೇನೆ ಎಂದರ ಸಮಾಧಾನದಿಂದ.
ಅಪ್ಪ ಅಡುಗೆಗೆ ಪೂರ್ತಿಯಾಗಿ ಕಾಂಟ್ರ್ಯಾಕ್ಟ್ ಕೊಟ್ಟಾಗಿದೆ. ಮೂರುದಿನವೂ ತಿಂಡಿ, ಊಟ, ಎಲ್ಲವೂ ಅದರಲ್ಲಿಯೇ ಸೇರಿದೆ. ಇಲ್ಲಿಂದ ಹೊತ್ತುಕೊಂಡು ಹೋಗುವುದೇನೂ ಬೇಡ. ನನಗೀಗ ಬೇಕಾಗಿರುವುದು ಹಣ ಅಷ್ಟೆ. ಹೆಸರಿಗೆ ನಾನು ದೊಡ್ಡ ಆಫೀಸರ್. ತಿಂಗಳ ಕೊನೆಗೆ ಕೈಯಲ್ಲಿ ಹತ್ತುರೂಪಾಯಿ ಇರುವುದಿಲ್ಲ. ನಿನಗೆ ಐದು ಲಕ್ಷ ಕೊಡಲು ಮನಸ್ಸಿಲ್ಲದಿದ್ದರೆ ಮೂರು ಲಕ್ಷವನ್ನಾದರೂ ಕೊಡಲೇಬೇಕು. ಇಲ್ಲದಿದ್ದರೇ…..
ಇಲ್ಲದಿದ್ದರೆ…? ತೀಕ್ಷ್ಣವಾಗಿ ಕೇಳಿದರು ರಂಗಣ್ಣ.
ಆಸ್ತಿ ಭಾಗ ಮಾಡು. ನನ್ನ ಪಾಲಿಗೆ ಬರುವುದನ್ನು ಕೊಡು, ಅದನ್ನು ಮಾರಿಯೋ ಏನಾದರೂ ಮಾಡಿಕೊಂಡು ಹಣವನ್ನು ಹೊಂದಿಸಿಕೊಂಡು ನನ್ನ ಮಗಳ ಮದುವೆಯನ್ನು ಮಾಡುತ್ತೇನೆ ಎಂದು ದರ್ಪದಿಂದ ಹೇಳಿದ ಮಗನನ್ನೇ ಆಶ್ಚರ್ಯದಿಂದ ನೋಡಿದರು.
ಸೆಟೆದುನಿಂತಿದ್ದ ಅವನಲ್ಲಿ ಸ್ವಾರ್ಥವೇ ತುಂಬಿತ್ತು. ಅಲ್ಲವೋ ಜಗ್ಗು, ಇಲ್ಲಿ ಬರುತ್ತಿರುವ ಆದಾಯ ನಿನಗೇ ಗೊತ್ತು. ಪ್ರತಿವರ್ಷವೂ ಬರುವ ಆದಾಯದಲ್ಲಿ ನಿಮ್ಮಿಬ್ಬರಿಗೂ ಹಣವನ್ನು ಅಷ್ಟು ವರುಷಗಳಿಂದ ಕೊಡುತ್ತಿದ್ದೇನೆ. ಹಾಗಿದ್ದರೂ ಸಹ ಲಕ್ಷಗಟ್ಟಲೆ ಹಣವನ್ನು ಕೇಳಿದರೆ ಎಲ್ಲಿಂದ ತರಲಿ? ಜೊತೆಗೆ ಈಗ ಐದಾರು ವರುಷಗಳಿಂದ ಅಡಿಕೆ ಧಾರಣೆಯೂ ಕುಸಿದಿದೆ ಎಂದರು ಬೇಸರದಿಂದ.
ಅಪ್ಪಾ, ಆ ಪುರಾಣ ನನಗೆ ಬೇಕಾಗಿಲ್ಲ. ನಾವು ನಾಳೆ ಹೊರಡಬೇಕು. ಅಷ್ಟರಲ್ಲಿ ಎರಡರಲ್ಲಿ ಒಂದು ತೀರ್ಮಾನವಾಗಲೇಬೇಕು ಎಂದ. ಅವನಿಗೆ ಧೈರ್ಯ ತುಂಬಲು ಹೆಂಡತಿ ಪಕ್ಕದಲ್ಲಿ ನಿಂತಿದ್ದಳು.
ಅಲ್ಲಿಯೇ ಇದ್ದ ಅಚ್ಚಮ್ಮನವರಿಗೂ ತುಂಬ ಬೇಸರವಾಯಿತು. ಮಗ ಈ ರೀತಿ ನಡೆದುಕೊಳ್ಳುತ್ತಾನೆಂದು ಅವರು ನಿರೀಕ್ಷಿಸಿರಲಿಲ್ಲ. ರಂಗಣ್ಣನವರು ಒಮ್ಮೆ ಹೆಂಡತಿಯ ಕಡೆಗೆ ತಿರುಗಿ ನೋಡಿದರು. ಇದಕ್ಕೆಲ್ಲಾ ನಿನ್ನದೇ ಕುಮ್ಮಕ್ಕು ಎಂದು ಅವರ ಕಂಗಳು ಹೇಳಿದವು.
ಕಿಟ್ಟು ಮುಂದೆ ಬಂದು ಅಪ್ಪಾ, ನಾನೂ ಸದ್ಯದಲ್ಲಿಯೇ ಮದುವೆ ಮಾಡುವವನಿದ್ದೇನೆ. ಆಸ್ತಿಯಾದರೆ ನನಗೂ ನನ್ನ ಪಾಲಿನದನ್ನು ಕೊಟ್ಟುಬಿಡು. ಇಲ್ಲಾ ಜಗ್ಗನಿಗೆ ಹಣವನ್ನು ಕೊಟ್ಟರೆ ನನಗೂ ಅದೇ ಆಗುತ್ತದೆ ಎಂದ ಮೆಲ್ಲಗೆ.
ರಂಗಣ್ಣನವರು ಮತ್ತೆ ಮರುಮಾತಾಡದೇ ಹೊರಗೆ ಹೋದರು. ಮನಸ್ಸು ಶೇಖರನ ಸನಿಹಕ್ಕೆ ಹಾರಿತು. ಅವರು ಹಿಂದೆ ಬೆಂಗಳೂರಿಗೆ ಹೋಗಿದ್ದಾಗ ಅಲ್ಲಿಯ ಕಷ್ಟವನ್ನು ಕಂಡು ಅವರ ಕಂಗಳಲ್ಲಿ ನೀರು ತುಂಬಿಬಂದಿತ್ತು. ಕೈಯಲ್ಲಿ ಇನ್ನೂರು ರೂಪಾಯಿ ಇತ್ತು ಅಷ್ಟೆ. ಅದನ್ನೇ ಮಗನಿಗೆ ಕೊಡಲು ಹೋದಾಗ ಶೇಖರ ನಯವಾಗಿಯೇ ನಿರಾಕರಿಸಿದ್ದ.
ಅಪ್ಪಾ, ಬೇಡ, ಹಣ ನಿನ್ನಲ್ಲಿಯೇ ಇರಲಿ, ಊರಲ್ಲಿ ನೀನು ಒಂಟಿ, ಸಮಯಕ್ಕಿರಲಿ… ಎಂದಿದ್ದ. ರಂಗಣ್ಣನವರಿಗೆ ದುಃಖದಿಂದ ಗಂಟಲು ಕಟ್ಟಿದಂತೆ ಆಗಿ ಹಣವನ್ನು ಚಿನ್ಮಯಿಗೆ ಬಲವಂತದಿಂದಲೇ ಕೊಟ್ಟಿದ್ದರು.
ಹಣಕ್ಕೆ ಮಾತ್ರ ಬೆಲೆ ಕೊಡುತ್ತಿರುವ ಓದಿದ ಈ ಮಕ್ಕಳೆಲ್ಲಿ? ಬಾಂಧವ್ಯಕ್ಕೆ ಮರ್ಯಾದೆ ಕೊಡುವ ಶೇಖರನೆಲ್ಲಿ? ಶೇಖರನ ನೆನಪಾದೊಡನೆಯೇ ಅವರ ಕಂಗಳಲ್ಲಿ ನೀರು ತುಂಬಿ ಬಂತು.
ತಂದೆಗಾಗಿ ಕಾಯದೇ ಮಕ್ಕಳು ಊಟಮಾಡಿದರು. ಅಚ್ಚಮ್ಮ ಕಾಯುತ್ತಿದ್ದರು. ತಲೆಯ ಮೇಲೆ ಇಟ್ಟುಕೊಂಡಿದ್ದ ಮಕ್ಕಳ ಬುದ್ಧಿಯನ್ನು ಕಂಡು ಅವರಿಗೆ ಆಘಾತವಾಗಿತ್ತು. ಕಣ್ಣಿನ ಪೊರೆ ಸರಿದಿತ್ತು. ನಮ್ಮ ಮನಸ್ಸಿನ ಕತ್ತಲೆ ತೆಗೆದರೆ ಆಗ ಜಗತ್ತೇ ಹೊಳೆಯುತ್ತಿರುತ್ತದೆ ಎಂಬಂತೆ ಅವರಿಗೆ ಈಗ ಶೇಖರ ಹಾಗೂ ವೈದೇಹಿಯ ಹೆಚ್ಚುಗಾರಿಕೆ ಅರ್ಥವಾಯಿತು. ಕಣ್ಣಿಂದ ನೀರು ಇಳಿಯುತ್ತಿತ್ತು. ಹಾಗೆಯೇ ಕುಳಿತಿದ್ದರು. ಮೊದಲ ಬಾರಿಗೆ ಗಂಡನ ಮೇಲೆ ಅನುಕಂಪ ಮೂಡಿಬಂದಿತು. ಗಂಡನ ಸದ್ಗುಣಗಳ ಅರಿವಾಯಿತು.
ರಂಗಣ್ಣನವರು ಬಂದಾಗ ತುಂಬಾ ಹೊತ್ತಾಗಿತ್ತು. ಇಬ್ಬರು ಮಕ್ಕಳನ್ನೂ ಕರೆದು ನೋಡಿ ಸದ್ಯಕ್ಕೆ ಇಬ್ಬರಿಗೂ ಒಂದೊಂದು ಲಕ್ಷವನ್ನು ಸಾಲ ಮಾಡಿ ತಂದಿದ್ದೇನೆ. ತೆಗೆದುಕೊಳ್ಳಿ. ಆಸ್ತಿ ವಿಭಾಗವನ್ನು ಇಷ್ಟು ಅವಸರದಲ್ಲಿ ಮಾಡಲು ಸಾಧ್ಯವಿಲ್ಲವೆಂದು ಗ್ರಾಮದ ಹಿರಿಯರು ಹೇಳಿದರು. ಅಲ್ಲದೇ ಶೇಖರನೂ ಬರಬೇಕಂತೆ. ಮದುವೆಯ ಕಲಾಪಗಳೆಲ್ಲವೂ ಮುಗಿದ ನಂತರ ಇಬ್ಬರೂ ಬನ್ನಿ. ಆಗ ಶೇಖರನಿಗೂ ಬರಲು ಹೇಳುತ್ತೇನೆ. ಆಗ ನಿಮ್ಮ ನಿಮ್ಮ ಪಾಲನ್ನು ನಿಮಗೆ ಕೊಡುತ್ತೇನೆ; ಏನು ಬೇಕಾದರೂ ಮಾಡಿಕೊಳ್ಳಿ. ನನಗೂ ನೋಡಿಕೊಳ್ಳುವ ಕಷ್ಟ ತಪ್ಪುತ್ತದೆ ಎಂದು ಹೇಳಿ ಊಟವನ್ನು ಮಾಡದೇ ಮಲಗಲು ಹೋದರು.
ಬೆಳಗ್ಗೆ ಅಷ್ಟು ಹೊತ್ತಿಗೇ ಜಗ್ಗು, ಕಿಟ್ಟು ಹೊರಟುಬಿಟ್ಟರು.
ಇಷ್ಟು ಬೇಗ! ತಿಂಡಿ ತಿಂದು ಹೊರಟಿದ್ದರೆ ಆಗುತ್ತಿರಲಿಲ್ಲವೇ? ಅಚ್ಚಮ್ಮ ಸ್ವಲ್ಪ ಆಶ್ಚರ್ಯ, ಸ್ವಲ್ಪ ನೋವಿನಿಂದ ಕೇಳಿದರು.
ಮಧ್ಯೆ ಬೇಕಾದಷ್ಟು ಹೋಟೆಲುಗಳಿವೆ. ತಿನ್ನುತ್ತೇವೆ ಎಂದು ಹೇಳಿದ ವಿನುತ ಅತ್ತೇ, ಪ್ರತಿಯೊಂದನ್ನೂ ಕಾಂಟ್ರ್ಯಾಕ್ಟ್ ಕೊಟ್ಟಿರುವುದರಿಂದ ಯಾರಿಗೂ ಏನೂ ಕೆಲಸವಿರುವುದಿಲ್ಲ. ನಾಂದಿಯ ದಿನ ಬೆಳಗ್ಗೆ ನಾವು ಛತ್ರಕ್ಕೆ ಹೋಗುತ್ತೇವೆ. ನೀವೆಲ್ಲರೂ ಸೀದಾ ಛತ್ರಕ್ಕೇ ಬಂದುಬಿಡಿ ಎಂದು ಕಾರು ಹತ್ತಿದಳು.
ಅಚ್ಚಮ್ಮ ಮಾತನಾಡುವುದಕ್ಕೆ ಮೊದಲೇ ಕಾರು ಮುಂದಕ್ಕೆ ಸಾಗಿತ್ತು. ಶೇಖರನನ್ನು ಮದುವೆಗೆ ಕರೆಯಿರಿ… ಎಂದು ಹೇಳಲು ಹೊರಟಿದ್ದ ಮಾತುಗಳು ಅವರ ಗಂಟಲಿನಲ್ಲಿಯೇ ಉಳಿಯಿತು.
ಅವರು ಬಂದಿದ್ದು ಮದುವೆಗೆ ಕರೆಯಲು ಅಲ್ಲ, ಪಾಲು ಕೇಳಲು ಬಂದಿದ್ದರು. ಎಲ್ಲ ನಿನ್ನದೇ ಚಿತಾವಣೆ. ನೀನೇ ಮಕ್ಕಳಿಗೆ ಫೋನುಮಾಡಿ ಕರೆಸಿಕೊಂಡಿರುವೆ. ಈಗ ನಿನಗೆ ತೃಪ್ತಿಯಾಯಿತು, ಅಲ್ಲವೇ? ಎಂದು ನುಡಿದ ಗಂಡನ ಬಿರುನುಡಿಗಳು ಅವರ ಬದಲಾಗುತ್ತಿದ್ದ ಹೃದಯದಲ್ಲಿ ಆಳವಾದ ಗಾಯವನ್ನೇ ಮಾಡಿದವು.
* * *
ಶೇಖರನ ವ್ಯವಹಾರ ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿತ್ತು. ಅವನ ‘ಎಸ್.ವಿ. ಹೋಂ ಪ್ರಾಡಕ್ಟ್ಸ್’ ಉತ್ತಮ ಗುಣಮಟ್ಟದ, ರುಚಿಯಾದ ತಿನಿಸುಗಳಿಗೆ ಪ್ರಸಿದ್ಧಿಯಾಗಿತ್ತು. ಈಗೀಗ ಗ್ರಾಹಕರಿಂದ ಅಪಾರವಾದ ಬೇಡಿಕೆ ಬರುತ್ತಿತ್ತು. ಮನೆಮನೆಗೆ ಊಟ ಕಳಿಸುವುದಂತೂ ಪ್ರತಿನಿತ್ಯವೂ ಇರುತ್ತಿತ್ತು. ಶೇಖರ ಓಡಿಯಾಡಲು ಉತ್ತಮವಾದ ಗಾಡಿಯನ್ನು ತೆಗೆದುಕೊಂಡಿದ್ದ. ಚಿನ್ಮಯಿಯ ಓದು ಮುಗಿದು ಅವಳೂ ಸಹ ವ್ಯವಹಾರದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಳು. ಮಗಳ ಬುದ್ಧಿವಂತಿಕೆ, ಕಾರ್ಯನೈಪುಣ್ಯವನ್ನು ಕಂಡು ವೈದೇಹಿಗೇ ಆಶ್ಚರ್ಯವಾಗಿತ್ತು.
ಈ ನಡುವೆ ಮನೆಯ ಮಾಲೀಕರು ಶೇಖರನನ್ನು ಕಾಣಲು ಬಂದರು. ಮಗ ಅಮೆರಿಕದಲ್ಲಿದ್ದಾನೆ. ಅಷ್ಟು ವರುಷಗಳಿಂದ ಕರೆಯುತ್ತಿದ್ದರೂ ಹೋಗಲು ಮನಸ್ಸು ಮಾಡಿರಲಿಲ್ಲ. ಆದರೆ ಈಗ ನನ್ನನ್ನು ಕರೆದುಕೊಂಡು ಹೋಗಲೆಂದೇ ಬಂದಿದ್ದಾನೆ. ಅದಕ್ಕೆ ಹೋಗುವಾಗ ಇಲ್ಲಿಯ ವ್ಯವಹಾರಗಳನ್ನು ಮುಗಿಸಬೇಕು. ಮನೆ ಮಾರಲು ನಿರ್ಧರಿಸಿದ್ದೇನೆ ಎಂದರು.
ವೈದೇಹಿ ಗಾಬರಿಯಿಂದ, ಏನೂ! ಈ ಮನೆಯನ್ನು ಮಾರುತ್ತಿರುವಿರಾ? ಎಂದು ಕೇಳಿದಳು.
ಇನ್ನೂ ಯಾರಿಗೂ ಹೇಳಿಲ್ಲ. ನಿಮಗೇ ಮೊದಲು ತಿಳಿಸುತ್ತಿದ್ದೇನೆ ಎಂದರು ಮೃದುವಾಗಿ.
ವೈದೇಹಿಗೆ ಆ ಮನೆಯನ್ನು ಬಿಡಲು ಮನಸ್ಸಿಲ್ಲ. ಅದು ತನ್ನದೇ ಮನೆ ಎಂಬ ಭಾವನೆ, ವ್ಯಾಮೋಹ ಬಂದಿತ್ತು. ಶೇಖರ ಹೆಂಡತಿಯ ಮುಖವನ್ನೊಮ್ಮೆ ನೋಡಿದ. ಅವನಿಗೆ ಅವಳ ಮನಸ್ಸು ಅರ್ಥವಾಯಿತು.
ಎಷ್ಟಕ್ಕೆ ಮಾರಬೇಕೆಂದುಕೊಂಡಿರುವಿರಿ? ಎಂದು ಕೇಳಿದ.
ನೋಡಿ, ಹಳೆಯ ಕಾಲದ ಮನೆ, ಹದಿನೈದು ಲಕ್ಷ ಎಂದು ತೀರ್ಮಾನಿಸಿದ್ದೇನ. ಆದರೆ ನೀವು ಅಷ್ಟು ವರುಷಗಳಿಂದ ಇರುತ್ತಿರುವಿರಿ. ಹಾಗಾಗಿ ನಿಮಗಾದರೆ ಹನ್ನೆರಡು ಲಕ್ಷಕ್ಕೆ ಕೊಟ್ಟುಬಿಡುತ್ತೇನೆ ಎಂದರು ಸ್ನೇಹದಿಂದ.
ದಯವಿಟ್ಟು ನಮಗೆ ಒಂದುವಾರದ ಗಡುವು ಕೊಡಿ ಎಂದಳು ವೈದೇಹಿ.
ಸರಿ, ನಿಧಾನಿಸಬೇಡಿ, ನನಗೆ ಮುಂದಿನ ವ್ಯವಸ್ಥೆಗೆ ತೊಂದರೆಯಾಗುತ್ತದೆ ಎಂದರು ಮಾಲೀಕರು.
* * *
ಅದೇ ಸಂಜೆ ಚಿನ್ಮಯಿಯನ್ನು ಮನೆಯಲ್ಲಿ ಬಿಟ್ಟು ಇಬ್ಬರೂ ಪ್ರೇಮಳ ಮನೆಗೆ ಹೋದರು. ಪ್ರಸನ್ನನೂ ಮನೆಯಲ್ಲಿಯೇ ಇದ್ದ. ವೈದೇಹಿ ಮನೆಯ ಬಗ್ಗೆ ವಿವರವಾಗಿ ತಿಳಿಸಿದಳು.
ಶೇಖರ, ನಿಮಗೆ ಆ ಮನೆಯನ್ನು ಕೊಂಡುಕೊಳ್ಳುವ ಆಸೆಯಿದೆಯೇ? ಪ್ರಸನ್ನ ಸ್ನೇಹದಿಂದಲೇ ಕೇಳಿದ.
ನನಗಿಂತಲೂ ವೈದೇಹಿಗೆ ತುಂಬಾ ವ್ಯಾಮೋಹವಿದೆ, ಆ ಮನೆಯ ಮೇಲೆ. ಹಾಗಾಗಿ… ಎಂದ ಶೇಖರ.
ಪ್ರೇಮ, ಆ ಮನೆಯನ್ನು ಬಿಡಲು ಇಷ್ಟವಿಲ್ಲ. ಮನೆಯಿಂದ ನಮಗೆ ಒಳ್ಳೆಯದಾಗಿದೆ ಎಂದಳು ವೈದೇಹಿ.
ಮತ್ತೆ ಯಾಕೆ ಅನುಮಾನ? ಪ್ರಸನ್ನ ಆಶ್ಚರ್ಯದಿಂದ ಕೇಳಿದ.
ಅಷ್ಟು ಹಣವನ್ನು ಹೇಗೆ ಹೊಂದಿಸುವುದು? ಶೇಖರ ಕೇಳಿದ.
ಪ್ರೇಮ ಗೆಳತಿಯ ಹೆಗಲಮೇಲೆ ಕೈಯಿಟ್ಟು ವೈದೇಹಿ, ವಿವರವಾಗಿ ಹೇಳು. ಈಗ ನೀವು ಎಷ್ಟು ಹಣವನ್ನು ಕೊಡಬಹುದು? ಎಂದು ಕೇಳಿದಳು.
ಹೆಚ್ಚುಕಡಮೆ ಎಂಟುಲಕ್ಷದವರೆಗೆ ಎಂದಳು ಮೆಲ್ಲಗೆ. ಪ್ರೇಮ ಗೆಳತಿಯನ್ನು ಸ್ನೇಹದಿಂದ ತಬ್ಬಿಕೊಂಡುಬಿಟ್ಟಳು. ಆನಂದದಿಂದ ಕಂಗಳಲ್ಲಿ ಅಶ್ರು ತುಂಬಿತಂದಿತು.
ವೈದೇಹಿ, ಇಂದು ನನಗೆ ಎಷ್ಟು ಸಂತೋಷವಾಗಿದೆಯೆಂದರೆ ಹೇಳಲು ಸಾಧ್ಯವಿಲ್ಲ ಎಂದಳು. ವೈದೇಹಿಗೂ ಕಂಗಳಲ್ಲಿ ನೀರು ತುಂಬಿತು.
ಪ್ರಸನ್ನ ಶೇಖರನ ಕೈಹಿಡಿದುಕೊಂಡು ಶೇಖರಾ, ಆ ಮನೆಯನ್ನು ತೆಗೆದುಕೊಳ್ಳಿ. ಉಳಿದ ಹಣವನ್ನು ನಾವು ಕೊಟ್ಟಿರುತ್ತೇವೆ ಎಂದ.
ಆದರೆ ಪ್ರೇಮ, ಅಷ್ಟು ಹಣವನ್ನು ನಾವು ತೀರಿಸುವ ಬಗೆ? ವೈದೇಹಿ ಆತಂಕದಿಂದಲೇ ಕೇಳಿದಳು.
ನೀವು ಬೆಂಗಳೂರಿಗೆ ಬಂದ ದಿನ ಹೀಗೆಯೇ ಅನುಮಾನ, ಭಯದಿಂದಲೇ ಇದ್ದಿರಿ ಅಲ್ಲವೇ? ಅಂದಿನ ದಿನಕ್ಕೂ ಇಂದಿನ ದಿನಕ್ಕೂ ಎಷ್ಟೊಂದು ವ್ಯತ್ಯಾಸವಾಗಿದೆ ಗೊತ್ತೇ ವೈದೇಹಿ. ಅವಕಾಶ ಸಮೀಪಕ್ಕೆ ಬಂದಿರುವಾಗ ಅದನ್ನು ಕಳೆದುಕೊಳ್ಳಬಾರದು. ಪಕ್ಕದ ಮನೆಗೆ ಬಾಡಿಗೆ ಕೊಡುತ್ತಿರುವಿರಿ ಅಲ್ಲವೇ? ಮುಂದೆ ಸಾಧ್ಯವಾದರೆ ಅದನ್ನೂ ತೆಗೆದುಕೊಳ್ಳಬಹುದು. ಕಷ್ಟದ ಕುಲುಮೆಯಲ್ಲಿ ಬೆಂದವರಿಗೆ ಬದುಕುವ ಪರಿ ಚೆನ್ನಾಗಿಯೇ ತಿಳಿದಿರುತ್ತದೆ ಎಂದಳು ಪ್ರೇಮ ಹಾರ್ದಿಕವಾಗಿ. ಗೆಳತಿಯ ಒಳ್ಳೆಯ ಗುಣಕ್ಕೆ ವೈದೇಹಿ ಸೋತುಹೋದಳು.
ಪ್ರೇಮ, ನಿನ್ನ ಈ ಸಹಾಯಕ್ಕೆ ನಾವು…
ಸಾಕು, ಸಾಕು. ನಾನೇನೂ ಸುಮ್ಮನಿರುವುದಿಲ್ಲ. ಬಡ್ಡಿ ಸಮೇತ ತೆಗೆದುಕೊಳ್ಳುತ್ತೇನೆ. ಆ ದಿನ ದೂರವಿಲ್ಲ ಎಂದಳು ಪ್ರೇಮ ನಗುತ್ತ.
ವೈದೇಹಿಗೆ ಅರ್ಥವಾಗದೆ, ಅಂದರೆ? ಎಂದಳು ಅನುಮಾನದಿಂದ.
ಪ್ರಸನ್ನ ಒಳಗಿನಿಂದ ಸಿಹಿಯನ್ನು ತಂದು ಇಬ್ಬರ ಕೈಗೂ ಕೊಟ್ಟು ಶೇಖರನ ಪಕ್ಕದಲ್ಲಿ ಕುಳಿತುಕೊಂಡ. ಮುಖದಲ್ಲಿ ನಸುನಗು ಹರಡಿತ್ತು.
ತಿನ್ನೇ… ಎಂದಳು ಪ್ರೇಮ.
ಕಾರಣ ತಿಳಿಯಲಿಲ್ಲ ಎಂದಳು ವೈದೇಹಿ.
ಮೊದಲು ಇಬ್ಬರೂ ಬಾಯಿಗೆ ಹಾಕಿಕೊಳ್ಳಿ, ಹೇಳುತ್ತೇನೆ ಎಂದ ಪ್ರಸನ್ನ.
ವೈದೇಹಿ, ಶೇಖರ ತಿಂದಾದ ನಂತರ ಪ್ರಸನ್ನ ಶೇಖರನ ಕೈ ಹಿಡಿದುಕೊಂಡು ನಮ್ಮ ದೀಪು ಚಿನ್ಮಯಿಯನ್ನು ಮದುವೆಯಾಗಲು ತುಂಬಾ ಆಸೆಯಿಂದ ಇದ್ದಾನೆ. ಅದು ನಮ್ಮ ಆಸೆ ಸಹ. ನೀವು ದೊಡ್ಡಮನಸ್ಸು ಮಾಡಬೇಕು ಎಂದ.
ಶೇಖರನ ಬಾಯಿಂದ ಮಾತು ಹೊರಡಲಿಲ್ಲ. ವೈದೇಹಿಯ ಕಂಗಳಿಂದ ನೀರು ಚಿಮ್ಮಿತು.
ಪ್ರೇಮಾ….. ಎಂದಳು. ಮುಂದೆ ಮಾತು ಹೊರಡಲಿಲ್ಲ. ಪ್ರೇಮಾ ಗೆಳತಿಯ ಕಣ್ಣೀರನ್ನು ಒರೆಸಿ ಅವಳನ್ನು ತಬ್ಬಿಹಿಡಿದು, ಚಿನ್ನು ನಮ್ಮ ಮನೆಯ ಬೆಳಕಾಗಿ ಬರಲಿ ಎಂದು ನಮ್ಮ ಆಸೆ. ಇದಕ್ಕೆ ನಿನಗೆ ಒಪ್ಪಿಗೆ ಇದೆಯಾ? ಶೇಖರಾ ನಿಮಗೆ ಸಮ್ಮತವೇ? ಎಂದು ಸ್ನೇಹದಿಂದ ಕೇಳಿದಳು.
ನಿಮ್ಮನ್ನು ನನ್ನ ತಂಗಿ ಎಂದು ಯಾವಾಗಲೋ ಅಂದುಕೊಂಡಿದ್ದೇನೆ. ನಿಮ್ಮದು ದೊಡ್ಡಗುಣ. ನೀವೆಲ್ಲಿ? ನಾವೆಲ್ಲಿ?… ಎಂದು ಸಂಕೋಚದಿಂದ ಹೇಳಿದ.
ನಮ್ಮಗಳ ನಡುವೆ ಸಂಕೋಚ, ದಾಕ್ಷಿಣ್ಯ ಇರಬಾರದು. ಮನಃಪೂರ್ವಕವಾಗಿ ನಿಮ್ಮ ಅಭಿಪ್ರಾಯ ಗಳನ್ನು ತಿಳಿಸಿ ಎಂದ ಪ್ರಸನ್ನ.
ವೈದೇಹಿ ಗಂಡನ ಮುಖವನ್ನೊಮ್ಮೆ ನೋಡಿದಳು. ಅಲ್ಲಿ ಸಮ್ಮತಿಯ ಛಾಯೆ ಇತ್ತು.
ಪ್ರೇಮಾ, ನಮ್ಮಿಬ್ಬರಿಗೆ ಈ ಸಂಬಂಧ ಇಷ್ಟವಾಗಿದೆ. ಆದರೆ ಚಿನ್ಮಯಿಯನ್ನು ಒಂದು ಮಾತು ಕೇಳಬೇಕಲ್ಲಾ….. ಎಂದು ವೈದೇಹಿ ಹೇಳುವಷ್ಟರಲ್ಲಿಯೇ ಪ್ರೇಮಾ ಗಟ್ಟಿಯಾಗಿ ನಕ್ಕು, ವೈದೇಹಿ, ನೀನೂ ನನ್ನಂತೆಯೇ ದಡ್ಡಿ! ಮನೆಯಲ್ಲಿ ಮಗಳನ್ನು ಕೇಳು ನಿನಗೇ ತಿಳಿಯುತ್ತದೆ ಎಂದಳು.
ಎಲ್ಲರ ಹೃದಯದಲ್ಲಿಯೂ ಹೊಸರಾಗ ಮಧುರವಾಗಿ ಮೂಡಿಬಂದಿತು.
* * *
ಬದುಕೆಂಬ ಬಾನಿನಲ್ಲಿ ಕವಿದಿದ್ದ ಕಾರ್ಮೋಡಗಳು ಒಂದೊಂದಾಗಿ ಕರಗುತ್ತಿದ್ದಂತೆಯೇ ಶೇಖರನಿಗೆ ಊರಿನ ಕಡೆ ಮನಸ್ಸು ಹರಿಯಿತು.
ಒಂದು ರಾತ್ರಿ, ವೈದೇಹಿ, ಊರಿಗೆ ಹೋಗೋಣ, ಅಪ್ಪ-ಅಮ್ಮನನ್ನು ನೋಡಿಕೊಂಡು ಬರೋಣ. ನನಗೆ ತಡೆದುಕೊಳ್ಳಲೇ ಆಗುತ್ತಿಲ್ಲ. ವಯಸ್ಸಾದವರನ್ನು ಬಿಟ್ಟುಬಂದು ನಾನು ಸ್ವಾರ್ಥಿಯಾದೆ ಎಂದು ನನ್ನ ಬಗ್ಗೆ ನನಗೇ ನಾಚಿಕೆಯಾಗುತ್ತದೆ. ಅಮ್ಮನನ್ನು ನೋಡದೇ ಆಗಲೇ ಎಷ್ಟು ವರುಷಗಳಾಯಿತು? ಅವರಿಗೆ ನಮ್ಮ ಮೇಲೆ ಸಿಟ್ಟು ಇದ್ದರೂ ಚಿಂತೆಯಿಲ್ಲ. ಮಾತನಾಡಿಸದಿದ್ದರೂ ಬೇಸರವಿಲ್ಲ. ಒಮ್ಮೆ ಮೂವರೂ ಹೋಗೋಣ ಎಂದ. ದುಃಖದಿಂದ ಕಂಗಳು ತುಂಬಿಬಂದಿತ್ತು.
ವೈದೇಹಿ ಗಂಡನನ್ನೇ ಅಭಿಮಾನದಿಂದ ನೋಡಿದಳು. `ಎಷ್ಟು ಒಳ್ಳೆಯ ಮನಸ್ಸು!’ ಎಂದುಕೊಂಡಳು. ಗಂಡನ ಮಾತಿಗೆ ಅವಳು ಈಸಲ ಬೇಡವೆನ್ನಲಿಲ್ಲ.
ಹೇಗೂ ಮನೆಯ ಬಗ್ಗೆ ಹಾಗೂ ಮದುವೆಯ ಬಗ್ಗೆ ಹಿರಿಯರಿಗೆ ತಿಳಿಸಬೇಕು. ಇಲ್ಲಿ ಕೆಲಸದ ಬಗ್ಗೆ ಒಂದು ವ್ಯವಸ್ಥೆ ಮಾಡಿ ಹೋಗೋಣ ಎಂದಳು ಮೃದುವಾಗಿ.
ಮಾರನೆಯ ದಿನ ಅಂಗಡಿಗೆ ಹೋಗಿ ಅಚ್ಚಮ್ಮನವರಿಗೆ ಚೆನ್ನಾಗಿರುವ ಎರಡು ಸೀರೆ ಹಾಗೂ ದಿನಬಳಕೆಗೆ ನಾಲ್ಕು ಸೀರೆಗಳನ್ನು ತೆಗೆದುಕೊಂಡಳು. ರಂಗಣ್ಣನವರಿಗೆ ಪಂಚೆ, ಶಾಲು ಹಾಗೂ ಕೈಗೆ ಗಡಿಯಾರವನ್ನು ಖರೀದಿಸಿದಳು. ಹಣ್ಣು, ತಿಂಡಿ ಸಿದ್ಧವಾಯಿತು. ಕೆಲಸದವರಿಗೆ ಸಲಹೆ ಸೂಚನೆಗಳನ್ನು ಕೊಟ್ಟು ನಿಗಾವಹಿಸಲು ಒತ್ತಿ ಹೇಳಿದರು. ಚಿನ್ಮಯಿ ಉತ್ಸಾಹದಿಂದಲೇ ಹೊರಟಳು. ನಾಳೆಯೇ ಬೆಳಗಿನ ರೈಲಿನಲ್ಲಿ ಹೊರಡಬೇಕೆಂದು ನಿರ್ಧರಿಸಿದರು.
* * *
ರಾತ್ರಿ ಹತ್ತು ಗಂಟೆಗೆ ರಂಗಣ್ಣನವರು ಫೋನು ಮಾಡಿದಾಗ ಶೇಖರನಿಗೆ ಗಾಬರಿಯೆ ಆಯಿತು.
ಅಪ್ಪಾ… ಎಂದ ಧ್ವನಿ ಆತಂಕದಿಂದ ನಡುಗಿತು.
ಶೇಖರಾ, ನಿಮ್ಮನ್ನು ನೋಡಬೇಕೆಂದು, ಅಲ್ಲಿಗೆ ಬರಲು ನಿಮ್ಮಮ್ಮ ಒಂದೇ ಸಮನೆ ಅಳುತ್ತಿದ್ದಾಳೆ. ಬೆಳಗ್ಗೆಯಿಂದ ನೀರೂ ಕುಡಿಯದೆ ಉಪವಾಸ ಇದ್ದಾಳೆ. ನಾಳೆ ಬೆಳಗ್ಗೆ ಶಿವಮೊಗ್ಗದಿಂದ ಹೊರಡುವ ನಾಲ್ಕು ಗಂಟೆಯ ರೈಲಿನಲ್ಲಿ ಬರುತ್ತಿದ್ದೇವೆ. ನಿನಗೆ ಸ್ಟೇಷನ್ನಿಗೆ ಬರಲು ಪುರುಸೊತ್ತು ಇದೆಯೇ? ಮಮತೆಯಿಂದ ಕೇಳಿದರು.
ಶೇಖರನ ಕಂಗಳಿಂದ ನೀರು ಸುರಿಯಿತು.
ಅಪ್ಪಾ ಈ ಸುದಿನಕ್ಕಾಗಿಯೇ ನಾನೂ ಕಾಯುತ್ತಿದ್ದೆ. ಒಂದು ವಿಷಯವನ್ನು ಹೇಳಲೇ? ನಾಳೆ ಬೆಳಗ್ಗೆ ರೈಲಿಗೆ ನಾವು ಮೂವರೂ ಅಲ್ಲಿಗೆ ಬರಲು ಹೊರಟಿದ್ದೆವು ಎಂದ ಗೆಲವಿನಿಂದ.
ಅಚ್ಚಮ್ಮನವರು ಪತಿಯ ಕೈಯಿಂದ ಫೋನು ತೆಗೆದುಕೊಂಡು ಶೇಖರಾ, ನನ್ನನ್ನು ಕ್ಷಮಿಸು ಮಗು. ನನಗೆ ನೀನು ಬೇಕು, ವೈದೇಹಿ ಬೇಕು, ಚಿನ್ನು ಬೇಕು….. ದುಃಖದಿಂದ ಗಂಟಲು ಕಟ್ಟಿದಂತಾಗಿ ಮಾತು ನಿಂತಿತು.
ಅಮ್ಮಾ, ನಾಳೆ ಬೆಳಗ್ಗೆ ಇಲ್ಲಿಂದ ಹೊರಟು ನಾವೇ ಬರುತ್ತಿದ್ದೇವೆ. ನಿಮಗೆ ತಿಳಿಸುವ ವಿಷಯ ತುಂಬಾ ಇದೆ ಎಂದ. ಸ್ವರದಲ್ಲಿ ಗೆಲವು ತುಂಬಿ ಬಂದಿತ್ತು.
ವೈದೇಹಿಗೆ ಕೊಡ್ತೀಯಾ? ಸ್ವರದಲ್ಲಿ ಸಂಕಟವೇ ಅಧಿಕವಾಗಿತ್ತು.
ವೈದೇಹಿ ಫೋನು ತೆಗೆದುಕೊಂಡು, ಅತ್ತೇ….. ಎಂದಳು ವಿನಯದಿಂದ ಮೃದುವಾಗಿ.
ಸೊಸೆಯ ಧ್ವನಿಯನ್ನು ಕೇಳಿ ಅವರ ಕಂಗಳು ತುಂಬಿ ಬಂದು ವೈದೇಹಿ ನಾನು, ನಾನು….. ಎಂದು ನಿಲ್ಲಿಸಿಬಿಟ್ಟರು.
ಅತ್ತೇ, ನೀವೇನೂ ಚಿಂತಿಸಬೇಡಿ. ನಾಳೆ ಬರುತ್ತಿದ್ದೇವೆ. ಮಾತನಾಡುವುದು ತುಂಬಾ ಇದೆ. ನೆಮ್ಮದಿಯಿಂದ ನಿದ್ರೆ ಮಾಡಿ ಎಂದಳು ಮಮತೆಯಿಂದ.
ಎರಡು ಮನೆಗಳ ತುಂಬ ನಗುವಿನ ಬೆಳದಿಂಗಳು
ಹರಡಿತ್ತು. ?
(ಮುಗಿಯಿತು.)