`ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲ್ಲು’ ಎನ್ನುವುದು ನಮ್ಮ ಒಂದು ಗಾದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಬರುವ ನವ್ಯಪಂಥದ ಬಗ್ಗೆ ಯೋಚಿಸುವಾಗ ಈ ಮಾತಿನಲ್ಲಿ ಬಹಳಷ್ಟು ಸತ್ಯವಿರುವುದು ಕಂಡುಬರುತ್ತದೆ. ಕನ್ನಡದಲ್ಲಿ ನವ್ಯಪ್ರಜ್ಞೆಯ ಮೂಲಪುರು?ರು ಕವಿ ಪ್ರೊ| ಎಂ. ಗೋಪಾಲಕೃಷ್ಣ ಅಡಿಗರು. ೧೯೫೪ರಲ್ಲಿ ಪ್ರಕಟಗೊಂಡ ಅವರ ’ಚಂಡೆಮದ್ದಳೆ’ ಕವನಸಂಗ್ರಹದಿಂದ ನವ್ಯಪಂಥವು ಅಧಿಕೃತವಾಗಿ ಅನಾವರಣಗೊಂಡಿತು ಎನ್ನಬಹುದು. ಅವರ ’ಭೂಮಿಗೀತ’ ಕವನಸಂಗ್ರಹ (ಪ್ರಕಟಣೆ-೧೯೫೯) ಕನ್ನಡದಲ್ಲಿ ನವ್ಯತೆಯನ್ನು ದೃಢಪಡಿಸಿತು. ಮಾತ್ರವಲ್ಲ, ಅಡಿಗರಿಂದ ಪ್ರೇರಿತರಾಗಿ ಇದೇ ಪಂಥದಲ್ಲಿ ಹಲವರು ಕಾವ್ಯವಲ್ಲದೇ, ಕಥೆ, ಕಾದಂಬರಿ, ನಾಟಕ, ವಿಮರ್ಶೆಗಳನ್ನೆಲ್ಲ ಬರೆದರು. ಅಡಿಗರ ’ವರ್ಧಮಾನ’ ಕವನಸಂಗ್ರಹ ಪ್ರಕಟವಾಗುವಾಗಲೂ (೧೯೭೨) ನವ್ಯವು ಉತ್ತುಂಗದಲ್ಲೇ ಇತ್ತು. ಮತ್ತೆರಡು ವರ್ಷಗಳಾಗುವಾಗ ಭಿನ್ನಧ್ವನಿಗಳು ಕೇಳತೊಡಗಿದವು.
೧೯೭೧ರಲ್ಲಿ ಅಡಿಗರು ಭಾರತೀಯ ಜನಸಂಘದ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ ಕಾರಣ ಅದುತನಕ ಅವರ ಹಿಂಬಾಲಕರಾಗಿದ್ದ ಕೆಲವರು ಅವರನ್ನು ಭಿನ್ನದೃಷ್ಟಿಯಿಂದ ನೋಡತೊಡಗಿದರು. ಅಂದರೆ ಅದರಲ್ಲಿ ಸಾಹಿತ್ಯಕ್ಕೆ ಹೊರತಾದ ದೃಷ್ಟಿಯ ಪ್ರವೇಶವಾಯಿತು. ಇದರಲ್ಲಿ ಗುಟ್ಟೇನೂ ಉಳಿಯಲಿಲ್ಲ. ಮುಂದಿನ ಕಾಲ ಎಡಪಂಥೀಯ ಚಿಂತನೆಯೇ ಮುಖ್ಯವಾದ ಬಂಡಾಯ ಸಾಹಿತ್ಯ ಚಳವಳಿಯದ್ದು. “ನವ್ಯವು ವ್ಯಕ್ತಿಕೇಂದ್ರಿತವಾದದ್ದು, ಅದು ಸರಿಯಲ್ಲ. ಸಾಹಿತ್ಯವು ಸಮಾಜಕೇಂದ್ರಿತವಾಗಿರಬೇಕು. ನವ್ಯದವರು ಓದುಗರಿಗೆ (ತಮಗೆ?) ಅರ್ಥವಾಗದಂತೆ ಬರೆದರು; ಅದು ತಪ್ಪು. ಎಲ್ಲರಿಗೂ ಅರ್ಥವಾಗುವಂತೆ ಬರೆಯಬೇಕು. ಸಾಹಿತಿಯಾದವನು ಬರೆದರೆ ಸಾಕು. ಸಾಮಾಜಿಕ ಚಟುವಟಿಕೆ, ಚಳವಳಿಗಳಲ್ಲಿ ಭಾಗಿಯಾಗಬೇಕಿಲ್ಲ ಎಂದು ನವ್ಯದವರು ಹೇಳಿದರು. ಅದು ಸರಿಯಲ್ಲ; ಕವಿ-ಸಾಹಿತಿಗಳು ಒಂದೆಡೆ ಬರೆಯುತ್ತಲೇ ಇನ್ನೊಂದೆಡೆ ಚಳವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು” ಎಂದು ಬಂಡಾಯಸಾಹಿತಿಗಳು ವಾದಿಸಿದ್ದು ಮಾತ್ರವಲ್ಲ. ತಮ್ಮದೇ ಸರಿ ಎಂಬಂತಹ ಏಕಪಕ್ಷೀಯ ಧೋರಣೆ ತಳೆದು ನವ್ಯವನ್ನು ಮೂಲೆಗುಂಪು ಮಾಡತೊಡಗಿದರು. ಎಡಪಂಥದ ಜೊತೆಗೆ ಸಾಹಿತ್ಯ ಕ್ಷೇತ್ರಕ್ಕೆ ಜಾತಿಯನ್ನು ಕೂಡ ತಂದರು; ಪೂರ್ವಗ್ರಹ ಮತ್ತು ಪಕ್ಷಪಾತಗಳೊಂದಿಗೆ ಕವಿ-ಸಾಹಿತಿಗಳನ್ನು ಬ್ರಾಂಡ್ ಮಾಡತೊಡಗಿದರು. ಅವರ ಸ್ವರವೇ ಬಲವಾಗುತ್ತಾ ಹೋದ ಕಾರಣ ಸುಮಾರು ಕಾಲುಶತಮಾನದ ಕಾಲ ಉಚ್ಛ್ರಾಯಸ್ಥಿತಿಯಲ್ಲಿದ್ದು ಗದ್ಯ- ಪದ್ಯ ಎರಡರಲ್ಲೂ ಅದೆಷ್ಟು ಅಮೂಲ್ಯಕೃತಿಗಳನ್ನು ನೀಡಿದ ನವ್ಯವು ಅನಾಥವಾಗುವಂತಾಯಿತು. ಇನ್ನು ಓದದೆಯೇ ದೂಷಿಸುವುದರಲ್ಲಿ, ಅದರಲ್ಲೇನೂ ಇಲ್ಲ ಎನ್ನುವುದರಲ್ಲಿ ನಾವು ಪರಿಣಿತರಲ್ಲವೇ! ಆ ರೀತಿಯಲ್ಲಿ ನವ್ಯಕ್ಕೆ ಅನ್ಯಾಯವಾಯಿತು; ಆಗುತ್ತಲೂ ಇದೆ. ನವ್ಯಪಂಥದ ಮೂಲಕ ಬಂದ ಗಟ್ಟಿಕಾಳುಗಳೆನಿಸಿದ ಆ ನೆನಪಿನಿಂದ ಇನ್ನೂ ವಿಮುಖರಾದವರಿಗೆ, ಅಯ್ಯೋ, ಇದೇಕೆ ಹೀಗಾಯಿತು?’ ಅನ್ನಿಸುತ್ತಲೇ ಇತ್ತು.
ವಿಮರ್ಶೆ – ಎರಡು ವಿಧ
ಆ ಹೊತ್ತಿಗೆ ಈಗ ಕವಿ ಅಡಿಗರ ೩ ಜನ್ಮ ಶತಮಾನೋತ್ಸವ (ಜನನ-೧೮-೨-೧೯೧೮) ಬಂದಿದೆ. ವರ್ಷ ಆರಂಭವಾಗುವ ಹೊತ್ತಿಗೆ ಅತ್ಯಂತ ಸಕಾಲಿಕವಾದ ಒಂದು ಪುಸ್ತಕವನ್ನು ಪ್ರಕಾಶನ ಸಂಸ್ಥೆ ಅಂಕಿತ ಪುಸ್ತಕದವರು ಹೊರತಂದಿದ್ದಾರೆ. ಪುಸ್ತಕ ’ಅಡಿಗ – ನೆನಪು – ಅಡಿಗಡಿಗೆ’; ಲೇಖಕರು ಅಡಿಗರ ಕಾವ್ಯದ ವಿಮರ್ಶಕರಾಗಿ ಪರಿಚಿತರಾದ ಬಿ.ವಿ. ಕೆದಿಲಾಯ ಅವರು. ಕವಿ ಅಡಿಗರ ವಿಮರ್ಶಕರ ನಡುವೆ ಬಿ.ವಿ. ಕೆದಿಲಾಯ ಅವರಿಗೆ ಒಂದು ವಿಶಿಷ್ಟ ಸ್ಥಾನವಿದೆ. ಕೀರ್ತಿನಾಥ ಕುರ್ತಕೋಟಿ, ಪ್ರೊ| ಎಲ್.ಎಸ್. ಶೇ?ಗಿರಿರಾಯರಿಂದ ಆರಂಭಿಸಿ, ಕೆ. ನರಸಿಂಹಮೂರ್ತಿ, ಯು.ಆರ್. ಅನಂತಮೂರ್ತಿ, ಸುಮತೀಂದ್ರ ನಾಡಿಗ್, ಜಿ.ಎಚ್. ನಾಯಕ್, ನರಹಳ್ಳಿ ಬಾಲಸುಬ್ರಹ್ಮಣ್ಯ, ಮಾಧವ ಕುಲಕರ್ಣಿ ಅವರೆಲ್ಲ ಅಡಿಗರ ಕಾವ್ಯದ ಬಗ್ಗೆ ಬರೆದವರೇ. ಅಡಿಗರ ಕಾವ್ಯ ಕೇಂದ್ರ ಏನು? ಎಲ್ಲಿದೆ? ಕನ್ನಡ ಕಾವ್ಯದ ಸಂದರ್ಭದಲ್ಲಿ ಅಡಿಗರು ಎಲ್ಲಿ ನಿಲ್ಲುತ್ತಾರೆ ಇದನ್ನೆಲ್ಲ ಅವರು ಸವಿವರವಾಗಿ ಪರಿಶೀಲಿಸಿದ್ದಾರೆ. ಇವರ ನಡುವೆ ಕೆದಿಲಾಯರು ಏನು ಮಾಡಿದರೆಂದರೆ ಒಬ್ಬ ಒಳ್ಳೆಯ ಓದುಗನಾಗಿ ಅಡಿಗರ ಸಮಗ್ರ ಕಾವ್ಯವನ್ನು ಒಂದು ಸಾಲು ಕೂಡ ಬಿಡದಂತೆ ಅರ್ಥೈಸಿಕೊಳ್ಳುತ್ತಾ ಬಂದರು; ಮತ್ತು ಅದನ್ನು ಯಾವುದೇ ವಾಗಾಡಂಬರವಿಲ್ಲದೆ ಹೇಳುತ್ತಾ ಬಂದರು. ಪರಿಣಾಮವೆಂದರೆ, ದ.ರಾ. ಬೇಂದ್ರೆ ಅವರಿಗೆ, ಅವರ ಕಾವ್ಯಕ್ಕೆ ಕೀರ್ತಿನಾಥ ಕುರ್ತಕೋಟಿ ಹೇಗೋ ಅಡಿಗರ ಕಾವ್ಯಕ್ಕೆ ಬಿ.ವಿ. ಕೆದಿಲಾಯರು ಅದೇ ರೀತಿ ಎಂಬಂತಾಯಿತು. ಇದಕ್ಕಾಗಿ ಸಾಹಿತ್ಯ ಪ್ರಪಂಚ ಕೆದಿಲಾಯರಿಗೆ ಕೃತಜ್ಞವಾಗಿರಬೇಕು; ಏಕೆಂದರೆ ಭಾಷೆಯಲ್ಲಿ ಅಪೂರ್ವ ಪ್ರಯೋಗಗಳನ್ನು ಮಾಡಿದ ಅಡಿಗರು ಕುಂದಾಪುರ ಕನ್ನಡದ ಮತ್ತು ಆ ಭಾಗದಲ್ಲಿ ಪ್ರಾದೇಶಿಕವಾಗಿ ಪರಿಚಿತವಾದ ಅದೆಷ್ಟು ಪದಗಳನ್ನು ತಮ್ಮ ಕಾವ್ಯದೊಳಗೆ ತಂದುಬಿಟ್ಟಿದ್ದಾರೆ. ಅದು ಅರ್ಥವಾಗದಿದ್ದರೆ ಕಾವ್ಯದ ಸ್ವಾರಸ್ಯವೇ ತಿಳಿಯುವುದಿಲ್ಲ; ಅಪಾರ್ಥ ಆಗಲೂಬಹುದು.
ಒಂದು ಉದಾಹರಣೆ ಕೊಡುವುದಾದರೆ, ’ಕೂಪಮಂಡೂಕ’ ಕವನದಲ್ಲಿ ಬರುವ ’ಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ’ ಎನ್ನುವಲ್ಲಿ ’ಹಿಳ್ಳು’ ಎಂಬುದಕ್ಕೆ ಹುಳ, ಕ್ರಿಮಿ ಎಂಬುದಾಗಿ ಒಬ್ಬ ವಿಮರ್ಶಕರು ಅರ್ಥಮಾಡಿದ್ದಿದೆ. ನಿಜವಾಗಿ ಬಾಳೆಯ ಹಿಳ್ಳು ಅಂದರೆ ಬಾಳೆಯ ಕುಡಿಯ ಬುಡದಲ್ಲಿ ಹುಟ್ಟಿಬಂದ ಅದರ ಕುಡಿ(ಸಸಿ)ಗಳು. ಹೀಗೆ ಅಡಿಗರ ಕಾವ್ಯವನ್ನು ಸವಿವರವಾಗಿ ಮತ್ತು ಸಮಗ್ರವಾಗಿ ಅರ್ಥೈಸಿಕೊಂಡಿರುವ ಕೆದಿಲಾಯರಿಗೆ ಆ ಕಾವ್ಯದ ಸಾಲುಗಳೆಲ್ಲ ಆ ಕಂಠಸ್ಥ ಇದೆ ಎಂದರೆ ತಪ್ಪಲ್ಲ. ಅದನ್ನು ಅವರು ಬೇಕಾದಂತೆ ಉದ್ದರಿಸಬಲ್ಲರು. ಆ ಮೂಲಕ ಕೆದಿಲಾಯರು ಅಡಿಗರ ಕಾವ್ಯದ ಕೇಂದ್ರ, ಒಳಗು ಹೊರಗುಗಳನ್ನೆಲ್ಲ ಆ ಕಾವ್ಯದ ಮೂಲಕವೇ ತೆರೆದಿಡಬಲ್ಲರು. ಇದು ದೊಡ್ಡ ಸಾಧನೆ. ಅವರ ಬಗೆಗಿರುವ ನಿರೀಕ್ಷೆಯನ್ನು ಪ್ರಸ್ತುತ ಪುಸ್ತಕ ಹುಸಿಗೊಳಿಸುವುದಿಲ್ಲ. ಜೊತೆಗೆ ಪುಸ್ತಕದ ’ಕಾವ್ಯದಲ್ಲಿ ನವ್ಯತೆಯ ನೆಲೆಗಳು’ ಎನ್ನುವ ಅಧ್ಯಾಯ ನವ್ಯಪಂಥದ ಆಕ್ಷೇಪಕರಿಗೆ ಉತ್ತರಿಸುವಂತೆಯೇ ಅದನ್ನು ತಿಳಿದುಕೊಳ್ಳಲು ತುಂಬ ಸಹಕರಿಸುತ್ತದೆ. ಇನ್ನು ಮೊಗೇರಿ ಗೋಪಾಲಕೃಷ್ಣ ಅಡಿಗರು ಕವಿಯಾಗಿ ರೂಪುಗೊಂಡ ಬಗೆ, ಅವರು ಮತ್ತು ಅವರ ಕಾವ್ಯ ನಡೆದುಬಂದ ದಾರಿ, ಅದರ ಸಾಫಲ್ಯಗಳನ್ನು ಪುಸ್ತಕದಿಂದಲೇ ಪರಿಚಯಿಸಿಕೊಳ್ಳಬಹುದು.
“೨೦ನೇ ಶತಮಾನದ ಉತ್ತರಾರ್ಧದಲ್ಲಿ ಸುಮಾರು ಮೂರು ದಶಕಗಳ ಕಾಲ ನವ್ಯಪಂಥದ ನೇತಾರರಾಗಿ, ಹೊಸತನದ ಹರಿಕಾರರಾಗಿ, ಕಿರಿಯ ತಲೆಮಾರಿನ ಕವಿ- ಸಾಹಿತಿ-ವಿಮರ್ಶಕರಿಗೆ ಸ್ಫೂರ್ತಿಕೇಂದ್ರವಾಗಿ ಅಡಿಗರು ಮಾಡಿದ ಸಾರಸ್ವತ ಸಾಧನೆ ಅದ್ವಿತೀಯ” ಎಂದು ಕೆದಿಲಾಯರು ಹೇಳಿದರೆ, ಸಾಹಿತಿ ಡಾ| ಯು.ಆರ್. ಅನಂತಮೂರ್ತಿ ಅವರು, “ಅಡಿಗರು ನನ್ನ ಸಾಹಿತ್ಯ ಗುರು. ೨೦ನೇ ಶತಮಾನದ ಉತ್ತರಾರ್ಧದ ಶ್ರೇಷ್ಠ ಕವಿ” ಎಂದಿದ್ದಾರೆ. ಸಾಹಿತಿ ಪಿ. ಲಂಕೇಶ್ “ಅಡಿಗರು ಒಂದು ಜನಾಂಗದ ಕಣ್ಣು ತೆರೆಸಿದ ಕವಿ” ಎಂದರೆ ಹಿರಿಯ ವಿಮರ್ಶಕ ಕುರ್ತಕೋಟಿ ಅವರು “ಬೇಂದ್ರೆಯವರ ತರುವಾಯ ಅಷ್ಟು ಸಾಮರ್ಥ್ಯವುಳ್ಳ ಪ್ರತಿಭೆಯೆಂದರೆ ಅಡಿಗರದೇ” ಎಂದು ಗುರುತಿಸಿದ್ದಾರೆ. ಲಂಕೇಶರ ಮಾತಿಗೆ ಸಮರ್ಥನೆಯಾಗಿ “ಅಡಿಗರು ಪ್ರವರ್ತಿಸಿದ ನವ್ಯಪಂಥವು ದೇಶದ ಸ್ವಾತಂತ್ರ್ಯೋತ್ತರ ಯುಗದ ಪ್ರಜ್ಞೆಯನ್ನು ಸಮರ್ಥವಾಗಿ ಅಭಿವ್ಯಕ್ತಿಸಿ ಕಾವ್ಯ, ಸಣ್ಣಕತೆ, ಕಾದಂಬರಿ, ವಿಮರ್ಶೆ ಮುಂತಾದ ನಾನಾ ಸಾಹಿತ್ಯ ಪ್ರಕಾರಗಳಲ್ಲಿ ವಿವಿಧ ಲೇಖಕರಿಂದ ಅನೇಕ ಶ್ರೇಷ್ಠ ಕೃತಿಗಳ ಸೃಷ್ಟಿಗೆ ಪ್ರೇರಕವಾಯಿತು. ತನ್ಮೂಲಕ ಕನ್ನಡ ಭಾ?ಗೆ ಹೊಸ ಸೂಕ್ಷ್ಮತೆಯನ್ನೂ ಶಕ್ತಿಯನ್ನೂ ನೀಡಿತು. ಸಾಹಿತ್ಯ ವಿಮರ್ಶೆಗೆ ಹೊಸ ರೂಪ, ದೃಷ್ಟಿ, ಪ್ರಬುದ್ಧತೆಗಳನ್ನು ನೀಡಿತು” ಎಂಬುದನ್ನು ಉಲ್ಲೇಖಿಸಬಹುದು. ಅಡಿಗರು ಭೂಮಿ-ಆಕಾಶಗಳೆಂಬ ದ್ವಂದ್ವ ಶಕ್ತಿಗಳ ನಡುವೆ ಸಿಲುಕಿರುವ ಮನು?ನ ಪಾಡನ್ನು ಅದ್ಭುತವಾಗಿ ಚಿತ್ರಿಸಿರುವ ಕವಿ ಎನಿಸಿದ್ದಾರೆ.
ಪಂಡಿತರ ಮನೆತನ
ಮೊಗೇರಿ ಅಡಿಗರದ್ದು ಪಂಚಾಂಗ ಮಾಡುವ ಮನೆತನ. ಪಂಚಾಂಗ ಮಾಡುವವರೆಂದರೆ ಸ್ವತಃ ವಿದ್ವಾಂಸರು, ಸಂಸ್ಕೃತ ಶ್ಲೋಕಗಳನ್ನು ಲೀಲಾಜಾಲವಾಗಿ ಉದ್ಧರಿಸಬಲ್ಲವರೆಂಬುದು ಪ್ರತೀತಿ. ಅಡಿಗರ ತಂದೆ ರಾಮಪ್ಪ ಅಡಿಗರು ಸಾತ್ತ್ವಿಕ ಸ್ವಭಾವದ ವಿದ್ವಾಂಸರು. ತಾಯಿ ಗೌರಮ್ಮ ಸೌಮ್ಯಸ್ವಭಾವದ ಗೃಹಿಣಿ. ಮನೆಯಲ್ಲಿ ಸಾಹಿತ್ಯಕ್ಕೆ ಪ್ರೇರಕವಾದ ವಾತಾವರಣವಿತ್ತು. ಅವರ ತಂದೆ, ಅಜ್ಜ, ಅಜ್ಜಿ, ಸೋದರತ್ತೆಯರು, ಚಿಕ್ಕಪ್ಪ ಎಲ್ಲರಿಗೂ ಪದ್ಯ ರಚನೆಯ ಕೌಶಲವಿತ್ತು. ತಂದೆ ಸಂಸ್ಕೃತದಲ್ಲಿ ಶ್ಲೋಕ, ಕನ್ನಡದಲ್ಲಿ ದೇಶಭಕ್ತಿಗೀತೆಗಳನ್ನು ರಚಿಸುತ್ತಿದ್ದರು. ಸೋದರತ್ತೆ ಪ್ರತಿರಾತ್ರಿ ಕಾವ್ಯಗಾಯನ ಮಾಡುತ್ತಿದ್ದರು. ಬಾಲ್ಯದಲ್ಲಿ ಯಕ್ಷಗಾನವು ಅಡಿಗರ ಮೇಲೆ ಗಾಢಪ್ರಭಾವವನ್ನು ಬೀರಿತ್ತು. ಒಟ್ಟಿನಲ್ಲಿ ಇದರಿಂದ ಅವರ ಸಾಹಿತ್ಯಾಸಕ್ತಿ ಉದ್ದೀಪ್ತವಾಗಿತ್ತು. ಯಕ್ಷಗಾನದ ಪ್ರಭಾವ ಅವರ ಕಾವ್ಯ ಮತ್ತು ಗದ್ಯಗಳ ಮೇಲಿದೆ. ಯಕ್ಷಗಾನದ ಮಾತಿನ ಗತ್ತು, ಶೈಲಿ, ರೆಟೋರಿಕ್, ಪ್ರತಿಮೆಗಳು, ನುಡಿಕಟ್ಟುಗಳು ಅಡಿಗರ ಕಾವ್ಯದಲ್ಲಿ ಧಾರಾಳ ಇವೆ. ಉದಾಹರಣೆಗೆ ’ಗೊಂದಲಪುರ’ದ ಗೊಂದಲಾಸುರನ ರಂಗಪ್ರವೇಶ ಎನ್ನುವ ಬಿ.ವಿ. ಕೆದಿಲಾಯರು “ಆದರೆ ಯಕ್ಷಗಾನದಲ್ಲಿ ಸಹಜವಾದ ವಾಚಾಳಿತನ ಅವರಲ್ಲಿಲ್ಲ. ಪರಂಪರೆಯ ಸತ್ತ್ವ ಮಾತ್ರ ಬಳಸಿಕೊಳ್ಳಬೇಕೆಂಬ ಅವರ ಬಗೆಯನ್ನು ಇಲ್ಲೂ ಕಾಣಬಹುದು” ಎಂದು ವಿಶ್ಲೇಷಿಸುತ್ತಾರೆ. ಯಕ್ಷಗಾನಕ್ಕೆ ವಾಚಾಳಿತನ ಅನಿವಾರ್ಯ; ಏಕೆಂದರೆ ಅದು ರಾತ್ರಿ ಬೆಳಗು ಮಾಡುವ ಕಲೆ.
ಹದಿಮೂರನೇ ವರ್ಷದಲ್ಲೇ ಅಡಿಗರು ಪದ್ಯ ಬರೆಯಲು ಪ್ರಾರಂಭಿಸಿದರು. ಓದುವ ಹುಚ್ಚು ಜೋರಾಗಿತ್ತು. ಗಾಂಧಿ ನೇತೃತ್ವದ ಸ್ವಾತಂತ್ರ್ಯ ಹೋರಾಟದಿಂದ ಪ್ರಭಾವಿತರಾದ ಅವರು ಹೆಂಡದಂಗಡಿಯ ಮುಂದಿನ ಪಿಕೆಟಿಂಗ್ನಲ್ಲಿ ಭಾಗಿಯಾಗಿದ್ದರು. ದೇಶಭಕ್ತಿಯ ಉತ್ಸಾಹದಿಂದ ಕಾವ್ಯರಚನೆಗೆ ತೊಡಗಿದರು. ಕುಂದಾಪುರದಲ್ಲಿ ಹೈಸ್ಕೂಲು ಮುಗಿಸಿ, ಇಂಟರ್ಮೀಡಿಯೇಟ್ ಓದಲು ಮೈಸೂರಿಗೆ ಹೋದರು. ಅಲ್ಲಿನ ಆಗಿನ ಐದಾರು ವರ್ಷ ಅವರ ಜೀವನದ ಮಹತ್ತ್ವದ ಅವಧಿ ಎನಿಸಿದೆ. ಅಡಿಗರು ಆ ಬಗ್ಗೆ “ಅದು ಹೊಸಹುಟ್ಟನ್ನು ಪಡೆದ ಕಾಲ. ದಾಕ್ಷಿಣ್ಯ, ಸಂಕೋಚ, ದಾರಿದ್ರ್ಯ, ವಾರಾನ್ನದ ದೈನ್ಯ – ಈ ಎಲ್ಲವನ್ನೂ ಸಹಿಸಿಕೊಂಡು ಕಳೆದ ಆ ಕಾಲ ಹೊಸ ಅನ್ವೇ?ಣೆಗಳ, ಹೊಸ ಭಾವನೆಗಳ, ಹೊಸ ಉದ್ವೇಗಗಳ, ಹೊಸ ಅವಮಾನಗಳ, ಹೊಸ ಅನುಮಾನಗಳ ಪರ್ವಕಾಲವೇ ಆಗಿತ್ತು” ಎಂದಿದ್ದಾರೆ.
ಮೈಸೂರಿನಲ್ಲಿ
ಆಗ ಅಲ್ಲಿ ಅವರಿಗೆ ಬಿ.ಎಚ್. ಶ್ರೀಧರ, ಎಚ್.ವೈ. ಶಾರದಾಪ್ರಸಾದ್, ಚದುರಂಗ, ಕೆ. ನರಸಿಂಹಮೂರ್ತಿ, ಟಿ.ಎಸ್. ಸಂಜೀವ ರಾವ್, ಎಂ. ಶಂಕರ ಮುಂತಾದವರ ಒಡನಾಟ, ಸ್ನೇಹಗಳು ಲಭ್ಯವಾದವು. ಇವರೆಲ್ಲ ಬಹುತೇಕ ಅಸಾಮಾನ್ಯರೇ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲ. ಹೀಗೆ ಹುಟ್ಟೂರಿನಿಂದ ದೂರದ ಮೈಸೂರಿನಲ್ಲಿ ಗೋಪಾಲಕೃಷ್ಣ ಅಡಿಗ ಎಂಬ ಕವಿ ರೂಪುಗೊಳ್ಳತೊಡಗಿದರು. ಅವರ ಕಾವ್ಯಪ್ರತಿಭೆ ಗರಿಗೆದರಿ ಹಾರತೊಡಗಿತು. ಅವರ ಮೊದಲ ಕವನಸಂಗ್ರಹ ’ಭಾವತರಂಗ’ದ (ಪ್ರಕಟಣೆ-೧೯೪೬) ಹೆಚ್ಚಿನ ಕವನಗಳು ಆಗ ರಚಿತವಾದವು. ಅದರಲ್ಲಿನ ’ಒಳತೋಟಿ’ ಕವನಕ್ಕೆ ಬಿಎಂಶ್ರೀ ರಜತಮಹೋತ್ಸವ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂತು.
ವೃತ್ತಿ ಜೀವನದ ಬಗೆಗೆ ಹೇಳುವುದಾದರೆ ಅಡಿಗರು ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆದವರೇ. ೧೯೪೨ರಲ್ಲಿ ಬಿಎ (ಆನರ್ಸ್) ಮುಗಿಸಿದವರು ದಾವಣಗೆರೆ, ಚಿತ್ರದುರ್ಗಗಳಲ್ಲಿ ಅಠಾರಾ ಕಛೇರಿಯಲ್ಲಿ ಗುಮಾಸ್ತರಾಗಿ ದುಡಿದರು. ಎಂಎ ಮುಗಿಸಿ ಮತ್ತೆ ಮೈಸೂರಿನ ಶಾರದಾವಿಲಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು. ಅಲ್ಲಿ ನಾಲ್ಕು ವರ್ಷ (೧೯೪೮-೫೨) ಪೂರೈಸಿ ಆನಂತರ ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಹತ್ತು ವರ್ಷ (೧೯೫೪-೬೪) ದುಡಿದರು. ಸ್ವಲ್ಪ ಕಾಲ ಕುಮಟಾದಲ್ಲಿದ್ದರು. ಕೋರಿಕೆಯ ಮೇರೆಗೆ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರಿ ಕಾಲೇಜಿನ ಪ್ರಿನ್ಸಿಪಾಲರಾಗಿ ಹೋಗಿ ನಾಲ್ಕುವರ್ಷ (೧೯೬೪- ೬೮) ಅಲ್ಲಿದ್ದರು. ಮತ್ತೆ ಹೋದದ್ದು ಉಡುಪಿಗೆ; ಅಲ್ಲಿನ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಮೂರುವರ್ಷ ಪ್ರಿನ್ಸಿಪಾಲರಾಗಿ ಕಾಲೇಜಿಗೆ ಹೊಸಕಳೆ ನೀಡುವ?ರಲ್ಲಿ ೧೯೭೧ರ ಲೋಕಸಭಾ ಚುನಾವಣೆ ಬಂತು. ಪ್ರತಿಪಕ್ಷಗಳ ಮೈತ್ರಿಕೂಟದ ಪರವಾಗಿ ಜನಸಂಘದಿಂದ ಕಾಂಗ್ರೆಸಿನ ಕೆಂಗಲ್ ಹನುಮಂತಯ್ಯನವರ ವಿರುದ್ಧ ಸ್ಪರ್ಧಿಸಿ ಅವರು ಸೋತರು. ಉದ್ಯೋಗ ಮಾಡದೆ ನಿರ್ವಾಹವಿಲ್ಲ. ಆರು ತಿಂಗಳು ನವದೆಹಲಿಯ ನ್ಯಾಶನಲ್ ಬುಕ್ ಟ್ರಸ್ಟ್ನಲ್ಲಿ, ಅನಂತರ ಮೂರು ತಿಂಗಳು ಸಿಮ್ಲಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ನಲ್ಲಿ (ಫೆಲೋಶಿಪ್) ಮೂರು ವ? ಕೆಲಸ ಮಾಡಿ, ನಿವೃತ್ತಿ ಜೀವನಕ್ಕೆ ಬೆಂಗಳೂರಿಗೆ ೧೯೭೫ರಲ್ಲಿ ಬಂದರು. ೧೯೪೪ರಲ್ಲಿ ಲಲಿತಾ ಅವರನ್ನು ಮದುವೆಯಾಗಿದ್ದರು.
ಅಡಿಗರ ಕಾವ್ಯರಚನೆಯ ಮೇಲೆ ಮೊದಲು ಪ್ರಭಾವ ಬೀರಿದವರು ಕವಿ ಕಡೆಂಗೋಡ್ಲು ಶಂಕರಭಟ್ಟರು. ಕ್ರಮೇಣ ಬೇಂದ್ರೆ ಕಾವ್ಯ ಅವರ ಮೇಲೆ ಅಪಾರ ಪ್ರಭಾವ ಬೀರಿತು. ಈ ಪ್ರಭಾವ ಎಷ್ಟು ಗಾಢವಾಗಿತ್ತೆಂದರೆ ಅದರಿಂದ ಬಿಡಿಸಿಕೊಳ್ಳದೆ ತನ್ನತನವನ್ನು ಉಳಿಸಿಕೊಳ್ಳುವುದು ಅಸಾಧ್ಯವಾದೀತೆಂದು ಅವರಿಗೆ ತೋರಿತು. ಆಗಲೇ ರೊಮ್ಯಾಂಟಿಕ್ (ರಮ್ಯ) ಮಾರ್ಗದಲ್ಲಿ ಅನೇಕ ಒಳ್ಳೆಯ ಕವನಗಳನ್ನು ಅವರು ಬರೆದಿದ್ದರೂ ಆ ಮಾರ್ಗ ತಮ್ಮ ಸ್ವಂತಿಕೆಯ ಅಭಿವ್ಯಕ್ತಿಗೆ ತಕ್ಕುದಲ್ಲ ಎಂಬ ಭಾವನೆ ಅವರ ಮನಸ್ಸಿನಲ್ಲಿ ಬೆಳೆಯತೊಡಗಿತ್ತು. ಆದ್ದರಿಂದ ಕೆಲವು ತಿಂಗಳ ಕಾಲ ಅವರು ಕವಿತೆ ಬರೆಯುವುದನ್ನೇ ನಿಲ್ಲಿಸಿಬಿಟ್ಟರು! ’ತನ್ನತನದ ರನ್ನವನ್ನು ಎಂತಾದರೂ ಪಡೆಯಲೇಬೇಕು’ ಎಂಬುದೇ ಅವರ ಅಂದಿನ ಅದಮ್ಯ ಹಂಬಲವಾಗಿತ್ತು. ಅಂತೂ ಬೇಂದ್ರೆಯವರ ಪ್ರಭಾವದಿಂದ ಕಳಚಿಕೊಂಡು ಕಾವ್ಯಸೃಷ್ಟಿಯಲ್ಲಿ ಸ್ಪೋಪಜ್ಞತೆಯನ್ನು ಸಾಧಿಸುವಲ್ಲಿ ಅಡಿಗರು ಯಶಸ್ವಿಯಾದರು. ಅದು ಅವರ ಅಸಾಧಾರಣ ಪ್ರತಿಭೆಗೆ ನಿದರ್ಶನವಾಗಿದೆ. ’ಭಾವತರಂಗ’ಕ್ಕೆ ಮುನ್ನುಡಿ ಬರೆದ ಬೇಂದ್ರೆ ಅಡಿಗರ ಕವನಗಳಲ್ಲಿ ಸ್ವವಿಮರ್ಶಕ ಕಾವ್ಯನಿರ್ಮಾಣೋತ್ಸಾಹ ಇರುವುದನ್ನು ಗುರುತಿಸಿದರು. “ಅಡಿಗರ ನುಡಿಯಲ್ಲಿ ಕೆಚ್ಚಿದೆ, ಲಾಲಿತ್ಯವಿದೆ. ವಿಧಿಗೆ ಇದಿರಾಗುವ ಅನಿರ್ವಿಣ್ಣ ಉತ್ಸಾಹವಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂಕಲನದ ಕವನ ’ಒಳತೋಟಿ’ಯಲ್ಲಿ ’ಅಡಿಗತ್ವದ ಮುಖ್ಯಾಂಶವಾದ ದ್ವಂದ್ವಗಳ ನಡುವೆ ನರಳುವ ಮನು?ನ ಅತಂತ್ರ ಸ್ಥಿತಿಯ ಬೀಜರೂಪವನ್ನು ಕಾಣುತ್ತೇವೆ. ಇದು ಮುಂದೆ ’ಭೂಮಿಗೀತ’ದಲ್ಲಿ ಭೂಮರೂಪ ತಳೆದು ವಿಜೃಂಭಿಸಿತು’.
ಪ್ರಗತಿಶೀಲ ಚಳವಳಿ
ಎರಡನೇ ಕವನಸಂಕಲನ ’ಕಟ್ಟುವೆವು ನಾವು’ (೧೯೪೮) ಮೇಲೆ ಪ್ರಗತಿಶೀಲ ಚಳವಳಿಯ ಪ್ರಭಾವವನ್ನು ಕಾಣುತ್ತೇವೆ. ಆ ಚಳವಳಿಯ ಅನಕೃ, ತರಾಸು, ಬಸವರಾಜ ಕಟ್ಟೀಮನಿ ಅವರೆಲ್ಲ ಅಡಿಗರ ಮಿತ್ರರೇ. ಈ ಚಳವಳಿಯ ಜೀವಾಳವೆನಿಸಿದ ಸಾಮ್ಯವಾದ, ಸಮಾಜವಾದದ ಮೂಲತತ್ತ್ವಗಳು, ಸಾಮಾನ್ಯಜನರ, ಅದರಲ್ಲೂ ದೀನದಲಿತರ, ಕಾರ್ಮಿಕ ರೈತರ ಉದ್ಧಾರದ ಹಂಬಲ, ಜಾತಿಮತ ತೊಡೆದುಹಾಕಿ ಸಮಾನತೆಯ ಸಾಮರಸ್ಯದ ಸಮಾಜ ಕಟ್ಟುವ ಛಲ, ಅದರ ವಿರೋಧಿಗಳ ಬಗ್ಗೆ ರೊಚ್ಚು, ಹೊಸ ಸಮಾಜದ ಕನಸು – ಇವು ಇಲ್ಲಿನ ಹೆಚ್ಚಿನ ಕವನಗಳಲ್ಲಿವೆ. ಹಲವು ಪದ್ಯಗಳು ಜನಸಾಮಾನ್ಯರಲ್ಲಿ ಸ್ಫೂರ್ತಿ ಉಂಟುಮಾಡುವ ಶಕ್ತಿಯನ್ನು ಪಡೆದಿವೆ. ಪ್ರಗತಿಶೀಲ ಚಳವಳಿಯ ಸತ್ತ್ವ, ಆವೇಶ, ಪರಿಮಿತಿಗಳನ್ನು ಇವುಗಳಲ್ಲಿ ಕಾಣಬಹುದು.
“ಇದು ಅಡಿಗರ ಬೆಳವಣಿಗೆಯ ಹಂತ. ’ಭಾವತರಂಗ’ದಲ್ಲಿ ನಾನು, ನನ್ನ ಎಂಬುದಕ್ಕೆ ಪ್ರಾಮುಖ್ಯವಿದ್ದರೆ ಇಲ್ಲಿ ’ನಾವು’ ಎಂಬುದರ ಕಡೆಗಿದೆ. ವ್ಯಕ್ತಿಕೇಂದ್ರಿತದಿಂದ ಸಮಾಜಕೇಂದ್ರಿತದತ್ತ ಚಲಿಸಿದೆ. ಇಂದಿಗೂ ಅವುಗಳ ಪ್ರಸ್ತುತೆ, ಜನಪ್ರಿಯತೆ ಕುಂದಿಲ್ಲ. ಅಡಿಗರು ಕವಿಯಾಗಿ ಅತಿ ಹೆಚ್ಚುಜನರನ್ನು ತಲಪಿದ್ದು ಈ ಸಂಕಲನದಿಂದಲೇ ಎನ್ನಬಹುದು. ಇಂಥ (ಕಟ್ಟುವೆವು ನಾವು, ನಾವೆಲ್ಲರು ಒಂದೆ ಜಾತಿ, ಇತ್ಯಾದಿ) ಆವೇಶಭರಿತ ಕವನಗಳ ನಡುವೆ ’ಮೋಹನ ಮುರಳಿ’ಯಂಥ ಅಬ್ಬರವಿಲ್ಲದೆ ಶ್ರೇಷ್ಠ ಕವನವೂ ಇದೆ”.
ಇರುವುದೆಲ್ಲವ ಬಿಟ್ಟು
’ಮೋಹನ ಮುರಳಿ’ಯಲ್ಲಿ ಬರುವ ’ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ?’ ಎನ್ನುವ ಸಾಲು ಅಡಿಗರ ಕಾವ್ಯ ಜೀವನಕ್ಕೆ ಅನ್ವಯಿಸುತ್ತದೆ. ಕಟ್ಟುವೆವು ನಾವು ಸಂಕಲನ ಅವರಿಗೆ ಪ್ರಸಿದ್ಧಿ, ಪ್ರತಿಷ್ಠೆಗಳನ್ನು ಸಾಕಷ್ಟು ನೀಡಿದರೂ ಸಂತೃಪ್ತಿ ನೀಡಲಿಲ್ಲ. ಅಂಥದೇ ಕವನಗಳನ್ನು ಹೊಸೆಯುತ್ತ ಹೋಗುವುದು ಸುಲಭವಾಗಿದ್ದರೂ ಅದರಲ್ಲಿ ಸಾರ್ಥಕತೆ ಕಾಣಿಸಲಿಲ್ಲ. ತನ್ನ ಮನೋಧರ್ಮಕ್ಕೆ, ಸಂವೇದನೆಗೆ ತಕ್ಕ ಕಾವ್ಯಮಾರ್ಗದ ಅನ್ವೇಷಣೆ ಅವರಿಗೆ ಅನಿವಾರ್ಯವೆನಿಸಿತು. ಈ ಅಂತರಿಕ ಪಂಥಾಹ್ವಾನ ಅವರನ್ನು ಗಾಢವಾಗಿ ಕಾಡಿತು. ಆಳವಾದ ಅಧ್ಯಯನ, ಚಿಂತನ, ಮಂಥನಗಳಿಗೆ ಪ್ರೇರಣೆಯಾಯಿತು. ಅವರ ಬದುಕಿನಲ್ಲಿ ಅದೊಂದು ಸಂಕ್ರಮಣದ ಕಾಲ. ಈ ಚಿಂತನ- ಮಂಥನದಲ್ಲಿ ಅವರ ಕೆಲವು ಸಾಹಿತಿಗೆಳೆಯರ ಸಾಹಚರ್ಯ, ಸಂವಾದಗಳು ಗಣನೀಯ ಪಾತ್ರ ವಹಿಸಿದವು. ಆಗಿನ ಅವರ ಗೆಳೆಯರ ಬಳಗದಲ್ಲಿ ಯು.ಆರ್. ಅನಂತಮೂರ್ತಿ, ಕೆ. ನರಸಿಂಹಮೂರ್ತಿ, ರಾಜೀವ್ ತಾರಾನಾಥ, ಪಿ. ಲಂಕೇಶ್, ಎಚ್.ಎಸ್. ಶ್ರೀನಿವಾಸ, ಕೆ. ಸದಾಶಿವ ಮುಂತಾದವರಿದ್ದು, ಆ ಮೇಧಾವಿಗಳ ಕೂಟದ ಬೌದ್ಧಿಕ ಚಟುವಟಿಕೆ ಅಡಿಗರ ಸೃಷ್ಟಿಶೀಲತೆಗೆ ವಿಶೇಷವಾದ ಒತ್ತಾಸೆ ನೀಡಿತು. ಹೊಸಮಾರ್ಗದ ಅನ್ವೇಷಣೆಗೆ ವೇಗವರ್ಧಕವಾಯಿತು. ಅಡಿಗರು ತಾವು ನಡೆದುಬಂದಿದ್ದ ದಾರಿಯನ್ನು ಬಿಟ್ಟು ಮುಂದೆ ನಡೆಯಲು ಬೇಕಾದ ಹೊಸ ಕಾವ್ಯಮಾರ್ಗವನ್ನು ರೂಪಿಸಿದರು. ಇದೊಂದು ’ಮಾನಸಿಕ ಕ್ರಾಂತಿ’ ಎಂದು ಅಡಿಗರು ಹೇಳಿದ್ದಾರೆ. ಈ ಕ್ರಾಂತಿಯ ಫಲವಾಗಿ ಕನ್ನಡದಲ್ಲಿ ನವ್ಯಮಾರ್ಗ ಉದಯವಾಯಿತು ಎಂದು ಕೆದಿಲಾಯರು ವಿವರಿಸುತ್ತಾರೆ. ಅಡಿಗರೊಂದಿಗೆ ಮೇಲೆ ಹೇಳಿದ ಗೆಳೆಯರು ಕೂಡ ಬೆಳೆದರು. ಅಡಿಗರಿಂದ ಆ ಗುಂಪಿನ ಯುವಕರಿಗೆ ಅಗತ್ಯ ಮಾರ್ಗದರ್ಶನವೂ ಲಭಿಸಿತು. ಕಾವ್ಯ, ಕಥೆ, ಕಾದಂಬರಿ, ನಾಟಕ ವಿಮರ್ಶೆ ಮುಂತಾಗಿ ತಮ್ಮತಮ್ಮ ಮಾಧ್ಯಮಗಳಲ್ಲಿ ಅವರು ಬೆಳೆದರು.
ಪ್ರಸ್ತುತ ’ಮಾನಸಿಕ ಕ್ರಾಂತಿ’ಯ ಹಿಂದೆ ಮೂರು ಮುಖ್ಯ ಪ್ರೇರಣೆಗಳಿದ್ದವು. ಅವುಗಳೆಂದರೆ ೧. ಕಾವ್ಯವೇ ತನ್ನ ಜನ್ಮಸಾಫಲ್ಯದ ಮಾರ್ಗವೆಂದು ಅಡಿಗರು ಕೈಗೊಂಡ ದೃಢನಿರ್ಧಾರ. ೨. ಸ್ವಾತಂತ್ರ್ಯ ಬಂದ ಅನಂತರದ ’ದೇಶದ ವಾತಾವರಣದಲ್ಲಾದ ಮೂಲಭೂತ ಬದಲಾವಣೆಗಳು. ೩. ಎಲಿಯಟ್, ಎಜ್ರಾಪೌಂಡ್, ಯೇಟ್ಸ್, ಆಡೆನ್ ಮುಂತಾದ ಇಂಗ್ಲಿ? ನವ್ಯಕವಿಗಳ ಕಾವ್ಯದ ಪ್ರಭಾವ.
ಕಾವ್ಯದಿಂದ ಜನ್ಮ ಸಾಫಲ್ಯ
ಅಡಿಗರು ಒಂದೆಡೆ “ನನ್ನ ನಿಜವಾದ ಧರ್ಮ ಯಾವುದು, ಯಾವುದನ್ನು ಕೈಗೊಂಡು ನನ್ನ ಸರ್ವಸ್ವವನ್ನೂ ಅದರಲ್ಲಿ ಪ್ರಯೋಗಿಸಿದರೆ ಕೃತಾರ್ಥನಾಗಬಹುದು ಎಂಬ ಯೋಚನೆ ಹುಟ್ಟಿ ಕ್ರಮೇಣ ಅದು ಕಾವ್ಯದ ಮೂಲಕವೇ ಎಂಬ ನಿರ್ಧಾರಕ್ಕೆ ಬಂದೆ, ಕಾವ್ಯರಚನೆಯೇ ನನ್ನ ಜನ್ಮಸಾಫಲ್ಯದ ಮಾರ್ಗ…. ಕಾವ್ಯವನ್ನು ಜೀವನದುದ್ದಕ್ಕೂ ಅತ್ಯಂತ ಗಂಭೀರವಾಗಿ, ಶ್ರದ್ಧೆಯಿಂದ, ಸದುದ್ದೇಶದಿಂದ ರಚಿಸುತ್ತ ಹೋಗಬೇಕು” ಎಂದು ನಿರ್ಧರಿಸಿರುವುದಾಗಿ ಹೇಳಿದ್ದರು. ಇಂತಹ ವ್ರತನಿಷ್ಠೆಯಿಂದ ಕಾವ್ಯಸೃಷ್ಟಿಯಲ್ಲಿ ತೊಡಗಿದವರು ಅವರು. ಈ ಹಿನ್ನೆಲೆಯಲ್ಲಿ ತಾನು ಎಂತಹ ಕಾವ್ಯವನ್ನು ರಚಿಸಬೇಕು ಎನ್ನುವ ಕುರಿತು ಅವರು ಆಳವಾಗಿ ಚಿಂತಿಸಿ ಕೆಲವು ಸೂತ್ರಗಳನ್ನು ಸ್ವೀಕರಿಸಿದರು. ಅವು ಹೀಗಿವೆ :
- ಮನಸ್ಸಿನ ಮೇಲ್ಪದರುಗಳನ್ನಷ್ಟೇ ಒಳಗೊಳ್ಳುವ ಹಾಗೆ ಕಾವ್ಯರಚನೆಯಾದರೆ ಉತ್ತಮ ಕಾವ್ಯ ಸಿದ್ಧಿಸುವುದಿಲ್ಲ. ಪ್ರಜ್ಞೆಯ ಜತೆಗೆ ಅದರ ತಳದಲ್ಲಿ ಅಥವಾ ಅದರ ಮಾಲಕ್ಕಿರುವ ಎಲ್ಲ ಒಳಂಶಗಳು ಹಠಾತ್ತಾಗಿ ಸೇರಿದರೆ ಮಾತ್ರ ಉತ್ತಮ ಕಾವ್ಯ ಆಗುತ್ತದೆ. ಇದಕ್ಕೆ ನಿರಂತರ ಪರಿಶ್ರಮ ಹೇಗೋ ಅಸಾಧಾರಣ ತಾಳ್ಮೆಯಿಂದ ತಕ್ಕ ಮುಹೂರ್ತಕ್ಕಾಗಿ ಕಾಯುವುದೂ ಅಗತ್ಯ.
- ಸಾಧಿಸಬೇಕಾದ್ದು ಇತರರಿಗೆ ಮನೋರಂಜಕವಾಗುವ ಅಭಿವ್ಯಕ್ತಿಯನ್ನಲ್ಲ; ತನಗೆ ಅತ್ಯಂತ ಸಹಜವಾದದ್ದನ್ನು. ಆಡುವ ಮಾತು ಒಳ ಅನುಭವದ ತದ್ರೂಪು ಆಗಬೇಕು, ಕವಿಯ ವ್ಯಕ್ತಿವಿಶೇಷವನ್ನು ಮೆರೆಯಬೇಕು.
- ರೂಢಿಯಾಗಿರುವುದನ್ನು ಒಳಹೊಕ್ಕು ಸಿಡಿಮದ್ದಿನಂತೆ ಸ್ಫೋಟಿಸಿ ಅಸ್ತವ್ಯಸ್ತಗೊಳಿಸದೆ ಹೊಸಕಾಲದ ಬದುಕಿಗೆ ಅಗತ್ಯವಾದ ಮೌಲ್ಯಗಳನ್ನು ಬೆಳೆಯುವುದು ಸಾಧ್ಯವಾಗುವುದಿಲ್ಲ. ಆದಕಾರಣ ಆಂತರಿಕ ವ್ಯವಸ್ಥೆಯಲ್ಲಿ ಸೇರಿದ ನಮ್ಮ ಸಂಸ್ಕೃತಿಯ ತಿರುಳನ್ನು ಭೇದಿಸಿ ಹೊರತೆಗೆದು ಅದಕ್ಕೆ ಇಂದಿಗೆ ತಕ್ಕ ರೂಪಕಗಳನ್ನು ಸಿದ್ಧಪಡಿಸಬೇಕು.
- ಸಂಖ್ಯೆಗಳನ್ನು ಬಿತ್ತರಿಸುವುದನ್ನು ಬಿಟ್ಟು ಸಾರ್ಥಕವಾಗುವ ಕವನಗಳನ್ನು ಬರೆಯಬೇಕು. ಬರೆಯದೆ ಇದ್ದರೂ ನಷ್ಟವಿಲ್ಲ; ಬರೆದದ್ದು ಉತ್ತಮವಾಗುವ ನಷ್ಟವಿಲ್ಲ; ಬರೆದದ್ದು ಉತ್ತಮವಾಗುವ ಹಾಗೆ ಪರಿಶ್ರಮ ವಹಿಸಬೇಕು.
- ಅತ್ಯಂತ ಸೂಕ್ಷ್ಮವೇದಿಯಾದ ಮನಸ್ಸುಳ್ಳ ಕವಿ ಮಾಡುವ ಕೆಲಸ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತನಗೆ ತಾನೇ ತುಂಬ ಬೆಲೆಯುಳ್ಳದ್ದು. ಮಾತಿನ ಅತ್ಯಂತ ಸರಿಯಾದ ಬಳಕೆಯಿಂದಲೇ ಕವಿ ಸಮಾಜಕ್ಕೆ ಅತ್ಯುತ್ತಮ ಸೇವೆ ಸಲ್ಲಿಸುತ್ತಾನೆ. ಜನ ತಮ್ಮ ಮನಸ್ಸಿನ ಒಳತಳದಲ್ಲಿ ಯಾವುದನ್ನು ಅಸ್ಪಷ್ಟವಾಗಿ ಕಾಣುತ್ತಾರೋ, ಅನುಭವಿಸುತ್ತಾರೋ ಅದನ್ನೇ ಕವಿ ಸ್ಪ?ವಾಗಿ ಅನುಭವಿಸಿ, ತಕ್ಕ ಶಬ್ದಗಳಲ್ಲಿ ಮೂರ್ತಗೊಳಿಸಿ ಅದರಲ್ಲಿ ಆದರ್ಶರೂಪ ಹೊಳೆಯುವಂತೆ ಮಾಡುತ್ತಾನೆ. ಹೀಗೆ ಅವನು ಸಮಕಾಲೀನನಾಗುತ್ತಾನೆ. ಸಮಕಾಲೀನತೆ ಅಂದರೆ ತಾತ್ಕಾಲಿಕತೆ ಅಲ್ಲ; ಎಲ್ಲ ಕಾಲದಲ್ಲೂ ಸಲ್ಲುವಂಥದ್ದು.
- ತನಗೆ ನಿಜವಾಗಿ ಅನಿಸಿದ್ದು, ತಾನು ಹೇಳುವುದು – ಎರಡರ ನಡುವಿನ ಕಂದಕವನ್ನು ಆದ? ಹೃಸ್ವಗೊಳಿಸುತ್ತ ಹೋಗಿ (ಏಕೆಂದರೆ ಇದೇ ನಾವು ಸಾಹಿತ್ಯದಲ್ಲಿ ಬಯಸುವ ಪ್ರಾಮಾಣಿಕತೆ ಆ ಎರಡೂ ಒಂದೇ ಆಗುವ ಹಾಗೆ ಮಾಡುವುದು ಅಥವಾಮಾಡಲು ಯತ್ನಿಸುವುದು ಉತ್ತಮ ಕಾವ್ಯ ಲಕ್ಷಣ.
ಈ ಸೂತ್ರಗಳು ಅಡಿಗರ ಮುಂದಿನ ಕಾವ್ಯಸೃಷ್ಟಿಗೆ ಪ್ರೇರಣೆಗಳಾದವು ಎಂದು ಲೇಖಕ ಬಿ.ವಿ. ಕೆದಿಲಾಯರು ಗುರುತಿಸುತ್ತಾರೆ. ಕಾವ್ಯಸೃಷ್ಟಿಯ ಬಗ್ಗೆ ಅಡಿಗರು ಎಷ್ಟು ಉನ್ನತಮಟ್ಟದಲ್ಲಿ ಚಿಂತಿಸಿ ಕಾರ್ಯಪ್ರವೃತರಾಗಿದ್ದರು; ಭಾವನಾತ್ಮಕವಾಗಿ ಅದನ್ನು ಹೇಗೆ ವ್ರತವೆಂಬಂತೆ ಸ್ವೀಕರಿಸಿದ್ದರು ಎಂಬುದಕ್ಕೆ ಅವರ ಕಾವ್ಯವೇ ಸಾಕ್ಷಿಯಾಗಿದೆ. ಆದರೆ ನವ್ಯಪಂಥದ ಎಲ್ಲ ಕವಿ-ಸಾಹಿತಿಗಳೂ ಅದೇ ಬಗೆಯ ನಿಷ್ಠೆಯನ್ನು ಹೊಂದಿದ್ದರೇ ಎಂಬುದು ಸಹಜವಾಗಿಯೇ ಪ್ರಶ್ನಾರ್ಹ. ಯಾವುದೇ ಪಂಥದಲ್ಲಿ ಶೈಥಿಲ್ಯಬರುವುದಕ್ಕೂ ಅದೇ ಕಾರಣವಾಗಿರುತ್ತದೆ. ಅಡಿಗರು ಅದಕ್ಕೆ ನಿಷ್ಠರು, ಬದ್ಧರಾಗಿದ್ದರು ಎಂಬ ಕಾರಣಕ್ಕಾಗಿಯೇ ಅವರ ಕಾವ್ಯದ ಒಂದೊಂದು ಸಾಲು ಕೂಡ ಜಿಜ್ಞಾಸೆಗೆ ಅರ್ಹವೆನಿಸುತ್ತದೆ.
ಬದಲಾದ ಯುಗಪ್ರಜ್ಞೆ
ಕಾಲ ಬದಲಾದಾಗ ಕಾವ್ಯವೂ ಬದಲಾಗುವುದು ಸಹಜ. ನಮ್ಮ ದೇಶದಲ್ಲಿ ಸ್ವಾತಂತ್ರ್ಯಪೂರ್ವದಲ್ಲಿದ್ದ ವಾತಾವರಣವು ಅನಂತರ ಬದಲಾಯಿತು. ದೇಶಭಕ್ತಿಯ ಉಬ್ಬರದ, ಸ್ವಾತಂತ್ರ್ಯ ಹೋರಾಟದ ಉತ್ಸಾಹ, ಕನಸುಗಾರಿಕೆಗಳ ಯುಗ ಹೋಯಿತು. ಗಾಂಧಿ ಜೊತೆ ಅವರು ಪ್ರತಿಪಾದಿಸಿದ್ದ, ಬದುಕಿದ್ದ ಆದರ್ಶಗಳೂ ಮಾಯವಾದವು. ಆದರ್ಶದ ಕನಸುಗಳು ಭಗ್ನವಾಗಿ ಕಠೋರವಾಸ್ತವ ತನ್ನೆಲ್ಲ ವಿಕೃತಿಗಳೊಂದಿಗೆ ಪ್ರತ್ಯಕ್ಷವಾಗತೊಡಗಿತು. ಭ್ರಮನಿರಸನದ ಅಧ್ಯಾಯ ಆರಂಭವಾಯಿತು. ಭ್ರಷ್ಟಾಚಾರ, ಶೋಷಣೆ, ಅಧಿಕಾರ ದಾಹ, ಜಾತೀಯತೆ, ಅನೈತಿಕ ರಾಜಕೀಯ ಇತ್ಯಾದಿ ಅನಿಷ್ಟಗಳು ಹೆಡೆಎತ್ತಿದವು. ರಾಜಕೀಯ ಮುಖಂಡರು ಅಧಿಕಾರಕ್ಕಾಗಿ ಎಲ್ಲ ತತ್ತ್ವಗಳನ್ನು ಗಾಳಿಗೆ ತೂರಿದರು. ಆ ಸಂಬಂಧವಾಗಿ ಅಡಿಗರು ’ನಡೆದುಬಂದ ದಾರಿ’ ಸಂಕಲನದ ಮುನ್ನುಡಿಯಲ್ಲಿ ಹೀಗೆ ಬರೆದಿದ್ದಾರೆ : “ದೇಶದ ಸ್ವಾತಂತ್ರ್ಯ ಸಂಗ್ರಾಮದ ಉತ್ಸಾಹ, ಉದ್ವೇಗ, ಆದರ್ಶಪರತೆಯ ಹಾರಾಟ ಮುಗಿದು ಮನಸ್ಸು ಮತ್ತೆ ನೆಲಕ್ಕಿಳಿದಿದೆ. ಮೋಡವಾಗಿ ಮೇಲೆರಿದ್ದು ಮಳೆಯಾಗಿ ಹಳ್ಳಕೊಳ್ಳಗಳಲ್ಲಿ ತುಂಬಿಕೊಂಡಿದೆ. ತಳದಲ್ಲಿ ಕೂತಿದ್ದ ಕೊಳೆಕೆಸರು ರಾಡಿಯೆಲ್ಲ ಮೇಲೆದ್ದು ಬಂದು ಕನ್ನಡಿಯಂಥ ನೀರು ಕಲಕಿದೆ. ಇಂಥ ವಾತಾವರಣ ಸುತ್ತಮುತ್ತಲೂ ಇರುವಾಗ ಜೀವನಾವಲಂಬಿಯಾದ ಕಾವ್ಯವೂ ಪರಿವರ್ತನೆಗೊಳ್ಳುವುದು ಸಹಜ. ಆದಕಾರಣ ಈಗ ಕಾಣುತ್ತಿರುವ ಹೊಸಮನೋಧರ್ಮವನ್ನು ವ್ಯಕ್ತಪಡಿಸಲು ಹೊಸನಾಲಗೆ, ಹೊಸನುಡಿಗಟ್ಟುಗಳು ರೂಪುಗೊಳ್ಳಬೇಕಾಗಿದೆ.” ಯುಗಧರ್ಮದ ಸೂಕ್ಷ್ಮ, ಸಮರ್ಥ, ಸಮಗ್ರ ಅಭಿವ್ಯಕ್ತಿಯೇ ಶ್ರೇಷ್ಠಸಾಹಿತ್ಯದ ಮುಖ್ಯಲಕ್ಷಣ. ವೈಯಕ್ತಿಕ ಅನುಭವವು ಸಾರ್ವತ್ರಿಕವಾದಾಗ ಅದು ಯುಗಧರ್ಮದ ಒಂದು ಅಂಶವಾಗುತ್ತದೆ. ಯಾವುದೇ ಬದಲಾವಣೆಯನ್ನು ಅದು ಸಾರ್ವತ್ರಿಕವಾಗುವ ಮೊದಲೇ ಸೂಕ್ಷ್ಮದರ್ಶಿಯಾದ ಕವಿಯ ಪ್ರಜ್ಞೆ ಗ್ರಹಿಸುತ್ತದೆ. ಸಾಮಾನ್ಯರಿಗೆ ಕಾಣುವ ಮೊದಲೇ ಕವಿ ಅದನ್ನು ಕಾಣುತ್ತಾನೆ. ಅಂಥ ಕವಿಯ ದರ್ಶನ ಆರಂಭದಲ್ಲಿ ವಿವಾದಾಸ್ಪದ ಆಗುವುದು ಸಹಜ. ಅಡಿಗರ ದರ್ಶನ ಕೂಡ ಅಂತಹ ವಿವಾದ, ವಿರೋಧಗಳನ್ನು ಎದುರಿಸಬೇಕಾಯಿತು. ಆದರೆ ಕಾಲಕ್ರಮೇಣ ಅದು ತಣ್ಣಗಾಯಿತು. ಏಕೆಂದರೆ ಅದು ಕೇವಲ ಅಡಿಗರ ವೈಯಕ್ತಿಕ ಆವಶ್ಯಕತೆ ಆಗಿರದೆ ಬದಲಾದ ಯುಗದ ಸಂವೇದನೆಯ ಆವಶ್ಯಕತೆಯೂ ಆಗಿತ್ತು.
ಇಂಗ್ಲಿಷ್ ಕಾವ್ಯದ ಪ್ರಭಾವ
ಆಧುನಿಕ ಇಂಗ್ಲಿಷ್ ಕವಿಗಳ ಕಾವ್ಯದ ಪ್ರಭಾವ ಅಡಿಗರ ಮೇಲೆ ಆದದ್ದು ಅಸಹಜವೇನಲ್ಲ. ನವೋದಯ ಸಾಹಿತ್ಯ ಕೂಡ ಬಿಎಂಶ್ರೀ ಅವರ ’ಇಂಗ್ಲಿಷ್ ಗೀತಗಳು’ ಕೃತಿಯಿಂದ ಸಾಕಷ್ಟು ಪ್ರಭಾವ ಪಡೆದಿತ್ತು. ’ಸಮಗ್ರ ಕಾವ್ಯ’ (೧೯೭೯)ದ ಮೊದಲಮಾತಿನಲ್ಲಿ ಅಡಿಗರು ಹೀಗೆ ಹೇಳಿದ್ದಾರೆ : “ನನಗೂ ಆಂಗ್ಲಕವಿಗಳಿಗೂ ಸಮಾನವಾದದ್ದು ಏನಾದರೂ ಇದ್ದರೆ ಅದು ಬಹುಶಃ ವ್ಯವಸ್ಥೆ ಒಡೆಯುತ್ತಿರುವುದರ ಪ್ರಜ್ಞೆ, ಮೂಲ ಸ್ವಾತಂತ್ರ್ಯದ, ವ್ಯಕ್ತಿ ವಿಶೇ?ದ ಬಗ್ಗೆ ಆಳವಾದ ಕಾಳಜಿ, ಬದುಕಿನ ನಿರಂತರತೆಯ ಅರಿವು, ಕಾವ್ಯ ವಾಚಾಳಿತನವಾಗಬಾರದು, ಕೃತಿಯಾಗಬೇಕು ಎಂಬ ಹಂಬಲ, ಪ್ರಯತ್ನ ಇಷ್ಟೆ”.
’ನಡೆದುಬಂದ ದಾರಿ’ ಸಂಕಲನದಲ್ಲೇ ನವ್ಯಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ವ್ಯಕ್ತಪಡಿಸಿದ ಅಡಿಗರು ’ಚಂಡೆಮದ್ದಳೆ’ (೧೯೫೪)ಯಲ್ಲಿ ಸಂಪೂರ್ಣ ನವ್ಯ ಕವನಗಳನ್ನು ನೀಡಿದರು. ಇದು ಕನ್ನಡ ಸಾಹಿತ್ಯದಲ್ಲಿ ನವ್ಯಯುಗವನ್ನು ಪ್ರತಿಷ್ಠಾಪಿಸಿದ ಐತಿಹಾಸಿಕ ಮಹತ್ತ್ವದ ಸಂಕಲನ. “ಯಕ್ಷಗಾನದಲ್ಲಿ ’ಚಂಡೆಮದ್ದಳೆ’ ಬಾರಿಸಿದಾಗ ಇಡೀ ಪ್ರೇಕ್ಷಕಸಮೂಹ ನಿದ್ದೆ ಕೊಡವಿ ಎದ್ದೇಳುವಂತೆ ಈ ಸಂಕಲನ ಕನ್ನಡ ಸಾಹಿತ್ಯದಲ್ಲಿ ಹೊಸ ಜಾಗೃತಿಯನ್ನು ಉಂಟುಮಾಡಿತು. ಅನೇಕರಿಗೆ ಶಾಕ್ ನೀಡಿತು. ಕೆಲವು ಪ್ರತಿಷ್ಠಿತ ಕವಿಗಳೂ, ಅವರ ಅನುಯಾಯಿಗಳೂ ದಿಗ್ಭ್ರಮೆಗೊಂಡಂತಾದರು. ಉಗ್ರಟೀಕೆಗಳು ಬಂದವು. ಇದು ಕಾವ್ಯವೇ? ಕಾವ್ಯ ಹೀಗಿರಬಹುದೇ? – ಎಂಬಂತಹ ಪ್ರಶ್ನೆಗಳೂ ಉದ್ಭವಿಸಿದವು. ಇಲ್ಲಿಯ ಕವನಗಳು ಸ್ವಚ್ಛಂದ ಛಂದ, ವಿ?ಮಲಯ, ಪ್ರತಿಮಾನಿ?ತೆ, ವಸ್ತುನಾವಿನ್ಯ, ಅಸಂಪ್ರದಾಯಿಕ ಭಾ?ಪ್ರಯೋಗ, ಅತಾರ್ಕಿಕತೆ ಮುಂತಾದ ವೈಶಿಷ್ಟ್ಯಗಳಿಂದ ಕೂಡಿದ ಓದುಗರಲ್ಲಿ ಕುತೂಹಲ, ದಿಗ್ಭಮೆ ಹುಟ್ಟಿಸಿದವು. ಹಲವು ರೀತಿಯ ವಾದ-ವಿವಾದ ಹುಟ್ಟಿದವು. ಉಗ್ರ ಪ್ರತಿಕ್ರಿಯೆಗಳು ಬಂದರೂ ಅಡಿಗರ ಚೇತನ ಅದರಿಂದ ತತ್ತರಿಸಲಿಲ್ಲ. ವಾದ-ವಿವಾದಗಳಿಗೆ ಅಷ್ಟಿಷ್ಟು ಪ್ರತಿಕ್ರಿಯಿಸಿದರೂ (ಕೆಲವು ಸಲ ಕವನದ ಮೂಲಕ) ಅದಕ್ಕಿಂತ ಹೆಚ್ಚಾಗಿ ತಾನು ನಂಬಿದ ಮಾರ್ಗದಲ್ಲಿ ಉತ್ಕೃಷ್ಟ ಕೃತಿಗಳನ್ನು ರಚಿಸುತ್ತ ಹೋಗುವ ಮುಖಾಂತರವೇ ವಿವಾದಗಳಿಗೆ ಪರೋಕ್ಷವಾಗಿ ಉತ್ತರಿಸಿದರು” ಎನ್ನುವ ವಿಮರ್ಶಕ ಕೆದಿಲಾಯರು ಮುಂದುವರಿದು, ಭೂಮಿಗೀತ (೧೯೫೯), ವರ್ಧಮಾನ (೧೯೭೨), ಇದನ್ನು ಬಯಸಿರಲಿಲ್ಲ (೧೯೭೫) ಸಂಕಲನಗಳಲ್ಲಿ ಅಡಿಗರ ನವ್ಯಪ್ರತಿಭೆ ಮುಗಿಲುಮುಟ್ಟಿತು. ಸಾಹಿತ್ಯಲೋಕದಲ್ಲಿ ನವ್ಯಯುಗ ದೃಢವಾಗಿ ಪ್ರತಿಷ್ಠಿತವಾಯಿತು. ನವ್ಯಚಳವಳಿ ಇಡೀ ತಲೆಮಾರನ್ನು ತಬ್ಬಿಕೊಂಡಿತು. ಸಣ್ಣಕತೆ, ಕಾದಂಬರಿ, ನಾಟಕ, ವಿಮರ್ಶೆಗಳಲ್ಲೂ ನವ್ಯಪ್ರಜ್ಞೆ ವಿಜೃಂಭಿಸಿತು. ಕೆ.ಎಸ್. ನರಸಿಂಹಸ್ವಾಮಿ ಅವರಂಥ ಹಿರಿಯ ಕವಿಗಳ ಮೇಲೂ ಪ್ರಭಾವ ಬೀರಿತು ಎಂದು ವಿವರಿಸಿದ್ದಾರೆ
ತಮ್ಮ ವಿಫುಲವೂ ಸತ್ತ್ವಪೂರ್ಣವೂ ಆದ ಕೃತಿಗಳಿಂದ ಅಡಿಗರು ನವ್ಯದ ನಾಯಕರೆನಿಸಿದ್ದರು. ಆದರೆ ಅವರು ಅಷ್ಟಕ್ಕೆ ವಿರಮಿಸಲಿಲ್ಲ. ನವ್ಯದ ರೂಪರೇಖೆಗಳನ್ನು ಸೃಷ್ಟಿಸುವುದರಲ್ಲೂ ಸ್ಥಾಪಿಸುವುದರಲ್ಲೂ ಮಹತ್ತ್ವದ ಪಾತ್ರ ವಹಿಸಿದರು. ನವ್ಯಸಾಹಿತ್ಯದ ವಸ್ತು ತಂತ್ರ, ಧೋರಣೆ, ಭಾ? ಹೇಗಿರಬೇಕು ಎಂಬ ಮೂಲಭೂತ ಸಂಗತಿಗಳ ಆಳವಾದ ಅಧ್ಯಯನ, ಚಿಂತನೆ ನಡೆಸಿ ಮಾರ್ಗದರ್ಶಕ ಪರಿಕಲ್ಪನೆಗಳ ಹೊಳಹನ್ನು ನೀಡಿದರು. ನವ್ಯತೆಯ ತಾತ್ತ್ವಿಕ ನೆಲೆಗಟ್ಟನ್ನು ರೂಪಿಸಿಕೊಟ್ಟರು. ಅದನ್ನು ಅರ್ಥೈಸಲು ಆಸ್ವಾದಿಸಲು ಬೆಲೆಕಟ್ಟಲು ತಕ್ಕ ವಿಮರ್ಶೆಯ ಮಾನದಂಡಗಳನ್ನು ಸೂಚಿಸಿದರು. ೧೯೫೫ರಿಂದ ಎರಡು ದಶಕಗಳ ಕಾಲ ಅಡಿಗರು ಕನ್ನಡ ಸಾಹಿತ್ಯಲೋಕದ ಶಿಖರಸ್ಥಾನದಲ್ಲಿ ವಿಜೃಂಭಿಸಿದರು. ಅವರು ಪ್ರವರ್ತಿಸಿದ ನವ್ಯತೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಪ್ರವಹಿಸಿತು. ಆ ಕಾಲದಲ್ಲಿ ಅವರೊಬ್ಬ ಕಲ್ಟ ಫಿಗರ್ನಂತೆ ಕಾಣುತ್ತಿದ್ದರು. ಹೊಸ ಪೀಳಿಗೆಯ ಸಾಹಿತಿಗಳಿಗೆ ಸ್ಫೂರ್ತಿಯ ಕೇಂದ್ರವಾಗಿದ್ದರು ಎನ್ನುವ ’ಅಡಿಗ- ನೆನಪು ಅಡಿಗಡಿಗೆ’ ಲೇಖಕರು, ಅನಂತಮೂರ್ತಿ, ಲಂಕೇಶ್, ರಾಮಚಂದ್ರ ಶರ್ಮ, ಸುಮತೀಂದ್ರ ನಾಡಿಗ್, ಪೂರ್ಣಚಂದ್ರ ತೇಜಸ್ವಿ, ಕೆ.ವಿ. ತಿರುಮಲೇಶ್, ಸುಬ್ರಾಯ ಚೊಕ್ಕಾಡಿ, ಬಿಳಿ, ಶಾಂತಿನಾಥ ದೇಸಾಯಿ, ಜಿ.ಎಸ್. ಸದಾಶಿವ, ಎಚ್. ಎಂ. ಚನ್ನಯ್ಯ, ಎನ್.ಎಸ್, ಲಕ್ಷ್ಮೀನಾರಾಯಣ ಭಟ್ಟ, ಚಂದ್ರಶೇಖರ ಪಾಟೀಲ, ಗಿರಡ್ಡಿ ಗೋವಿಂದರಾಜ, ಸಿದ್ಧಲಿಂಗ ಪಟ್ಟಣಶೆಟ್ಟಿ, ವೇಣುಗೋಪಾಲ ಸೊರಬ, ಜಯಸುದರ್ಶನ, ರಾಮದಾಸ್, ಎಂ. ಗಂಗಾಧರ ಭಟ್, ಕ.ವೆಂ ರಾಜಗೋಪಾಲ, ದೇಶಕುಲಕರ್ಣಿ, ಜಿ.ಎಚ್. ನಾಯಕ್, ಮಾಧವ ಕುಲಕರ್ಣಿ, ಶ್ರೀಕೃ? ಆಲನಹಳ್ಳಿ, ಯಶವಂತ ಚಿತ್ತಾಲ, ರಾಘವೇಂದ್ರ ಖಾಸನೀಸ ಮುಂತಾದವರು ಅಡಿಗರಿಂದ ಪ್ರಭಾವಿತರಾಗಿ ತಮ್ಮದೇ ರೀತಿಯಲ್ಲಿ ನವ್ಯಪ್ರಜ್ಞೆಯ ಸಾಹಿತ್ಯ ರಚಿಸಿದರು ಎಂದು ದಾಖಲಿಸಿದ್ದಾರೆ; ಕೆಲವರು ಕೆಲಕಾಲದ ಬಳಿಕ ನವ್ಯಮಾರ್ಗವನ್ನು ತ್ಯಜಿಸಿ ಬೇರೆ ಮಾರ್ಗವನ್ನು ಹಿಡಿದರೂ ಆರಂಭದ ಹಂತದಲ್ಲಿ ನವ್ಯದ ಪ್ರಭಾವದಲ್ಲೇ ತಮ್ಮ ಸೃಷ್ಟಿಶೀಲ ವ್ಯಕ್ತಿತ್ವವನ್ನು ರೂಪಿಸಿಕೊಂಡದ್ದು ಮರೆಯುವಂತಿಲ್ಲ. (ಇದರಲ್ಲಿ ಚಂದ್ರಶೇಖರ ಕಂಬಾರರು ಕೂಡ ಸೇರುತ್ತಾರೆ.)
ಕವಿ ಸುಬ್ರಾಯ ಚೊಕ್ಕಾಡಿ ಅವರು ಒಂದು ಕಡೆ “ಅಡಿಗರಿಗೆ ನಾವು ಯಾಕೆ ಕೃತಜ್ಞರಾಗಿರಬೇಕೆಂದರೆ ನಮ್ಮೆಲ್ಲರ ಮನಸ್ಸಿನಲ್ಲಿ ಭುಸುಗುಡುತ್ತಿದ್ದ ಸತ್ತ್ವಹೀನ ಪರಂಪರೆ ಹಾಗೂ ಪರಿಸರದ ವಿರುದ್ಧವಾದ ಇರುಸುಮುರುಸು ಹಾಗೂ ಪ್ರತಿಭಟನೆಯ ಸ್ವರಕ್ಕೆ ಮೊದಲು ಬಾಯಿಕೊಟ್ಟವರು ಅವರು; ನಮ್ಮ ಸಂಕೋಚಗಳನ್ನು ಕಿತ್ತು ಯೋಚಿಸುವುದಕ್ಕೆ ಮತ್ತು ವಿಚಾರ ಮಾಡುವುದಕ್ಕೆ ಅವರು ಹೊಸಮಾರ್ಗವನ್ನು ತೊರಿಸಿಕೊಟ್ಟರು. ಕವಿಸಮಯಗಳಿಂದ ಮುಕ್ತವಾದ, ಜನರ ಯೋಚನೆಗೆ ಹಾಗೂ ಬಳಕೆಗೆ ಸಮೀಪದ ಭಾಷೆಯನ್ನು ಹೇಗೆ ಸಮರ್ಥವಾಗಿ ಬಳಸಬಹುದು ಎಂಬುದನ್ನು ಪ್ರಯೋಗದ ಮೂಲಕ ಅವರು ತೋರಿಸಿಕೊಟ್ಟರು” ಎಂದಿದ್ದಾರೆ.
ಗಿರೀಶ್ ಕಾರ್ನಾಡ್, ಚಂದ್ರಶೇಖರ ಪಾಟೀಲ, ಚಂದ್ರಕಾಂತ ಕುಸನೂರ, ಪಿ. ಲಂಕೇಶ್ ಮುಂತಾದವರು ನವ್ಯನಾಟಕಗಳನ್ನು ಬರೆದರು. ನರಸಿಂಹಸ್ವಾಮಿ ಅವರಂತೆಯೇ ಜಿ.ಎಸ್. ಶಿವರುದ್ರಪ್ಪ ಮತ್ತು ಚೆನ್ನವೀರ ಕಣವಿ ಅವರು ಕೂಡ ನವ್ಯದ ಪ್ರಭಾವಕ್ಕೆ ಒಳಗಾದರು; (ಅವರನ್ನು ಸಮನ್ವಯ ಕವಿಗಳೆಂದು ಕರೆಯಲಾಗುತ್ತದೆ.) ಕತೆ, ಕಾದಂಬರಿಗಳು ನವ್ಯದಲ್ಲಿ ಸಾಧಿಸಿದ ಸೂಕ್ಷ್ಮತೆ, ಸಿದ್ಧಿಗಳು ಅನನ್ಯ. ಅನುಭವದ ಅತ್ಯಂತ ಸೂಕ್ಷ್ಮ ಒಳಪದರಗಳನ್ನು, ಚಿಂತನೆಯ ಅತ್ಯಂತ ನಿಗೂಢ ನೆಲೆಗಳನ್ನು ಪರಿಣಾಮಕಾರಿಯಾಗಿಯೂ ವ್ಯಕ್ತಪಡಿಸುವಂತಹ ಅಪೂರ್ವ ಗದ್ಯವನ್ನು ನವ್ಯವು ಸೃಷ್ಟಿಸಿತು.
ನವ್ಯ ವಿಮರ್ಶೆ
ಕನ್ನಡ ವಿಮರ್ಶೆಗೆ ನವ್ಯಪಂಥವು ನೀಡಿದ ಕೊಡುಗೆ ಅಭೂತಪೂರ್ವ. ವಿಮರ್ಶೆಯು ಹಿಂದೆಂದೂ ಇಲ್ಲದ ಪ್ರಾಧಾನ್ಯವನ್ನು ಪಡೆಯಿತು. ನವೋದಯದ ಕಾಲದಲ್ಲಿ ಬಹುತೇಕ ವಿವರಣಾತ್ಮಕ, ಪ್ರಶಂಸಾತ್ಮಕ, ವ್ಯಾಖ್ಯಾನರೂಪದ ರಸವಿಮರ್ಶೆಯ? ಬರುತ್ತಿತ್ತು. ಹಿರಿಯ ಕವಿ, ಸಾಹಿತಿಗಳ ಮಟ್ಟಿಗಂತೂ ಅವರ ದೋಷಗಳ ಬಗ್ಗೆ ಮಾತನಾಡುವುದು ಅಸಾಧ್ಯವೆನಿಸಿತ್ತು.
ನವ್ಯದಿಂದ ಕನ್ನಡ ವಿಮರ್ಶಾಕ್ಷೇತ್ರದಲ್ಲಿ ಮೂಲಭೂತ ಪರಿವರ್ತನೆ ಉಂಟಾಯಿತು. ವಿಮರ್ಶೆಯ ಸ್ವರೂಪ, ವಿಧಾನ, ಉದ್ದೇಶ ಮುಂತಾದವುಗಳ ಕುರಿತು ಹಳೆಯ ಪರಿಕಲ್ಪನೆಗಳ ಬದಲು ಪಾಶ್ಚಾತ್ಯ ವಿಮರ್ಶಾ ಸಿದ್ಧಾಂತಗಳು, ಪರಿಕಲ್ಪನೆಗಳು, ಸಾಹಿತ್ಯದ ವಾಗ್ವಾದಗಳು ನವ್ಯವಿಮರ್ಶೆಯನ್ನು ಪ್ರಭಾವಿಸಿದವು. ವಿಮರ್ಶೆ ಕೃತಿನಿಷ್ಠ(ವಸ್ತುನಿಷ್ಠ)ವಾಗಿರಬೇಕೆಂಬ ಉದ್ದೇಶ ಬಲವಾಯಿತು. ನವ್ಯ ವಿಮರ್ಶೆ ಸ್ವಂತದ್ದಾದ ಪಾರಿಭಾಷಿಕ ನುಡಿಗಟ್ಟನ್ನು ರೂಪಿಸಿಕೊಂಡಿತು. ಇದರಲ್ಲಿ ಅಡಿಗರ ಕೊಡುಗೆ ಗಣನೀಯ.
ವಿಮರ್ಶೆಯ ಬೆಳವಣಿಗೆಗೆ ಅಡಿಗರು ನೀಡಿದ ಮಹತ್ತ್ವದ ಕೊಡುಗೆ ’ಸಾಕ್ಷಿ’ ಪತ್ರಿಕೆ. ೧೯೬೨ರಲ್ಲಿ ನಾಡಿಗ್ ಮುಂತಾದ ಗೆಳೆಯರ ಸಹಕಾರದಿಂzಟ್ಟಾರಂಭಗೊಂಡ ’ಸಾಕ್ಷಿ’ ತ್ರೈಮಾಸಿಕವು ನೂರಾರು ವಿಮರ್ಶಾ ಲೇಖನಗಳನ್ನು ಪ್ರಕಟಿಸಿತು. ಅನೇಕ ಹೊಸ ವಿಮರ್ಶಕರನ್ನು ಬೆಳಕಿಗೆ ತಂದಿತು; ಪ್ರೌಢ ಓದುಗ ವರ್ಗವನ್ನು ಸೃಷ್ಟಿಸಿತು. ಪಂಪ, ರನ್ನ, ಜನ್ನ, ಕುಮಾರವ್ಯಾಸ, ವಚನಕಾರರಿಂದ ಆರಂಭಿಸಿ, ನವೋದಯದ ಬೇಂದ್ರೆ, ಮಾಸ್ತಿ, ಕುವೆಂಪು, ಕಾರಂತರ ಕೃತಿಗಳನ್ನೆಲ್ಲ ಹೊಸ ದೃಷ್ಟಿಯಿಂದ ವಿಶ್ಲೇಷಿಸಿ, ಪುನರ್ ಮೌಲ್ಯೀಕರಣ ಮಾಡಿತು. ಇದರಿಂದಾಗಿ ಹಿಂದೆ ಗುರುತಿಸದಿದ್ದ ಅನೇಕ ಅಂಶಗಳು ಬೆಳಕಿಗೆ ಬಂದವು. ಅನಂತಮೂರ್ತಿ, ಎಂ.ಜಿ. ಕೃಷ್ಣಮೂರ್ತಿ, ಜಿ.ಎಚ್. ನಾಯಕ್, ಗಿರಡ್ಡಿ, ಕಿ.ರಂ. ನಾಗರಾಜ, ಜಿ. ರಾಜಶೇಖರ್, ನರಹಳ್ಳಿ ಬಾಲಸುಬ್ರಹ್ಮಣ್ಯ, ಲಕ್ಷ್ಮೀನಾರಾಯಣ ಭಟ್ಟ, ಎಚ್.ಎಸ್. ರಾಘವೇಂದ್ರ ರಾವ್ ಮುಂತಾದವರ ಪ್ರೌಢಲೇಖನಗಳಿಗೆ ’ಸಾಕ್ಷಿ’ ವೇದಿಕೆಯಾಯಿತು. ಮುಂದೆ ಅದರ ಪ್ರಕಟಣೆಗೆ ’ಅಕ್ಷರ’ ಪ್ರಕಾಶನದ ಕೆ.ವಿ. ಸುಬ್ಬಣ್ಣ ಸಹಕರಿಸಿದರು. ೧೯೮೧ರವರೆಗೆ ’ಸಾಕ್ಷಿ’ ನಿರಂತರವಾಗಿ ನಡೆಯಿತು.
’ಅಡಿಗರು ಭಾರತೀಯ ಜನಸಂಘದಿಂದ ಚುನಾವಣೆಗೆ ಸ್ಪರ್ಧಿಸಿದ್ದು, ಅವರ ಸಾಹಿತ್ಯ ಕ್ಷೇತ್ರದ ವಿರೋಧಿಗಳಿಗೆ ಅವರನ್ನು ಟೀಕಿಸಲು ಒಳ್ಳೆಯ ಅಸ್ತ್ರವಾಯಿತು. ಇಂದಿಗೂ ಅದನ್ನು ಝಳಪಿಸುವವರಿದ್ದಾರೆ. ಅವರನ್ನು ಜನಸಂಘ ಅಥವಾ ಆರೆಸ್ಸೆಸ್ ರಾಜಕಾರಣಿ ಎಂದು ಸರಳೀಕರಿಸಿ ಬಣ್ಣಿಸುವುದು ಅತಿರೇಕ, ಅರ್ಥಹೀನ. ವಾಸ್ತವವಾಗಿ ಅವರು ಯಾವ ರಾಜಕೀಯ ಪಕ್ಷಕ್ಕೂ ಸೇರಿರಲಿಲ್ಲ” ಎನ್ನುವ ಬಿ.ವಿ. ಕೆದಿಲಾಯರು ೧೯೭೧ರ ಆ ಚುನಾವಣೆಯಲ್ಲಿ ಭಾಗವಹಿಸಿದ ’ಮಹಾಮೈತ್ರಿ’ಯಲ್ಲಿ ಸಂಸ್ಥಾ ಕಾಂಗ್ರೆಸ್ ಸಹಿತ ಎಂಟು ಪಕ್ಷಗಳಿದ್ದವು. ಅದರಲ್ಲಿ ಸಮಾಜವಾದಿ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಕೂಡ ಇದ್ದವು. ಬೆಂಗಳೂರು ಕ್ಷೇತ್ರವು ಮಹಾಮೈತ್ರಿಯಲ್ಲಿದ್ದ ಜನಸಂಘದ ಪಾಲಿಗೆ ಬಂದದ್ದರಿಂದ ಅಡಿಗರು ಆ ಪಕ್ಷದಿಂದ ಸ್ಪರ್ಧಿಸಬೇಕಾಯಿತು. ಇದು ಅಡಿಗರು ಜನಸಂಘಕ್ಕೆ ಸೇರಿದರೆಂಬ ತಪ್ಪು ತಿಳಿವಳಿಕೆಗೆ, ಟೀಕೆಗೆ ಕಾರಣವಾಯಿತು. ಅವರು ಸ್ಪರ್ಧಿಸಿದ್ದು ಮಹಾಮೈತ್ರಿಕೂಟದ ಪರವಾಗಿ ಎಂಬ ಸೂಕ್ಷವು ಮರೆಯಾಯಿತು ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನು ಅವರ ಹಿನ್ನೆಲೆಯನ್ನು ನೋಡಿದರೆ ಬಾಲ್ಯದಲ್ಲಿ ಗಾಂಧಿಯವರ ಪ್ರಭಾವಕ್ಕೆ ಒಳಗಾಗಿದ್ದ ಅವರು ತಾರುಣ್ಯದಲ್ಲಿ ಸಮಾಜವಾದದ ಸಿದ್ಧಾಂತಗಳಿಗೆ ತೆರೆದುಕೊಂಡದ್ದು ತಿಳಿಯುತ್ತದೆ. ಲೋಹಿಯಾರನ್ನು ಒಂದೆರಡು ಬಾರಿ ಭೇಟಿ ಮಾಡಿದ್ದರು; ಅವರ ವಿಚಾರಗಳಿಂದ ಆಕರ್ಷಿತರಾಗಿದ್ದರು; ಅದಲ್ಲದೇ ತೀವ್ರ ವ್ಯಕ್ತಿವಾದಿಯಾಗಿದ್ದ ಅವರು ಯಾವುದೇ ರಾಜಕೀಯ ಪಕ್ಷಕ್ಕೂ ಪೂರ್ಣ ನಿಷ್ಠರಾಗಿರುವುದು ಸಾಧ್ಯವಿರಲಿಲ್ಲ. ಗಾಂಧಿಯವರ ಕುರಿತು ಮೂರು ಕವನ ಬರೆದ ಅಡಿಗರು, ಅಂಬೇಡ್ಕರ್, ಗೋಪಾಲಗೌಡರ ಬಗೆಗೂ ಪದ್ಯ ಬರೆದಿದ್ದಾರೆ.
ಪರಾಕು ಪಂಪಿಲ್ಲ
ತಮ್ಮ ಕಾವ್ಯದಂತೆಯೇ ಅಡಿಗರದ್ದು ನೇರ ನಡೆನುಡಿ. ಅವರು ಯಾರಿಗೂ ಪರಾಕು ಪಂಪನ್ನೊತ್ತದ ಸ್ವಾಭಿಮಾನಿ. ಎಂಥ ದೊಡ್ಡವರ ಮುಂದೆಯೂ ದಾಸನಂತೆ ಬಗ್ಗುವವರಲ್ಲ. ಎಂಥ ಸಣ್ಣ ಮನು?ನನ್ನೂ ಗುಲಾಮನಂತೆ ನಡೆಸಿಕೊಳ್ಳುವವರೂ ಅಲ್ಲ. ಎಲ್ಲರೊಡನೆಯೂ ಸಮಾನತೆಯ ನೆಲೆಯಲ್ಲಿ ವ್ಯವಹಾರ. ಯು.ಆರ್. ಅನಂತಮೂರ್ತಿಯವರು ಈ ಬಗ್ಗೆ ಹೇಳಿದ್ದಿ?: “ನನ್ನಂಥವನಿಗೆ ವಯಸ್ಸಿನಲ್ಲಿ ಹಿರಿಯರಾದ ಅಡಿಗರ ಬಗ್ಗೆ ಆಕ?ಣೆಗೆ ಕಾರಣ ನಮ್ಮ ವ್ಯಕ್ತಿತ್ವದ ಪ್ರತ್ಯೇಕತೆಯನ್ನು ಅವರು ಗುರುತಿಸುತ್ತಾರೆ ಎಂಬುದು. ತಮ್ಮ ಕಾವ್ಯದ ಬಗ್ಗೆಯೇ ಬೋರು ಹೊಡೆಸುತ್ತಿರದೆ ನಮ್ಮೆಲ್ಲರಿಗೂ ಮುಖ್ಯವಾದ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ವಿಷಯಗಳಲ್ಲೆಲ್ಲ ಅವರು ಆಸಕ್ತಿ ತೋರಿ ಮಾತನಾಡುತ್ತಾರೆ ಎಂಬುದು. ಇವರ ಜತೆ ಕೊಡಕೊಳ್ಳುವಿಕೆಯಂತೆ ಸಮಾನರ ನಡುವಿನ ಕೊಡಕೊಳ್ಳುವಿಕೆಯಂತೆ ಪ್ರಬುದ್ಧವಾಗಿರುತ್ತದೆಯೇ ಹೊರತು ಗುರು-ಶಿಷ್ಯ ವೃತ್ತಿಯ ಅಪ್ರಬುದ್ಧ ಪೂಜೆಯಾಗಿ ಪರಿಣಮಿಸುವುದಿಲ್ಲ”. ಅಡಿಗರ ಕುರಿತು ಅದೆಷ್ಟು ಮಂದಿ ಇಂತಹ ಮಾತುಗಳನ್ನು ಹೇಳಿದ್ದಾರೆ. ಸ್ನೇಹ, ವಿಶ್ವಾಸಗಳಿಗೆ ಅಗಾಧ ಬೆಲೆಕೊಡುವವರು ಅವರು.
೧೯೮೯ರಲ್ಲಿ ಅಡಿಗರು ಪಾರ್ಶ್ವವಾಯು ಪೀಡಿತರಾದರು. ಆದರೂ ಅವರ ಕಾವ್ಯಪ್ರತಿಭೆ ಆಗಾಗ ಮಿಂಚುತ್ತಲೇ ಇತ್ತು. ಆಗ ಅವರು ಕೆಲವು ಸರಳಶೈಲಿಯ ವಿಭಿನ್ನ ಕವನಗಳನ್ನು ಬರೆದರು. ಆಗ ಕೌಟುಂಬಿಕ ಪ್ರಪಂಚದೊಳಗಿನ ಆಪ್ತವ್ಯಕ್ತಿಗಳೂ, ಸಾಕುಪ್ರಾಣಿಗಳೂ ಕಾವ್ಯವಸ್ತುಗಳಾದವು. ಸುಮತೀಂದ್ರ ನಾಡಿಗರು ಅವುಗಳನ್ನು ’ನವ್ಯ ಭಾವಗೀತೆ’ಗಳೆಂದು ಕರೆದಿದ್ದಾರೆ. ನವೆಂಬರ್ ೪, ೧೯೯೨ರಂದು ಕವಿ ಅಡಿಗರು ನಮ್ಮನ್ನಗಲಿದರು.
ನವ್ಯತೆಯ ನೆಲೆ
ಕನ್ನಡದಲ್ಲಿ ನವ್ಯತೆಯನ್ನು ವಿ.ಕೃ. ಗೋಕಾಕರು ಆರಂಭಿಸಿದರೆಂದು ಕೆಲವರು ಹೇಳುತ್ತಾರೆ. ಆದರೆ ಅವರು ಅದನ್ನು ಕೇವಲ ತಾಂತ್ರಿಕ ಪರಿವರ್ತನೆಯಾಗಿ ಕಂಡರು. ಅದೇ ವೇಳೆ ಅಡಿಗರು ನವ್ಯತೆಯನ್ನು ಸಂವೇದನೆಯ, ಜೀವನದೃಷ್ಟಿಯ ಬದಲಾವಣೆಯಾಗಿ, ಸಮಗ್ರಪ್ರಜ್ಞೆಯ ಪರಿವರ್ತನೆಯಾಗಿ ಗ್ರಹಿಸಿದರು. ಕನ್ನಡ ಸಾಹಿತ್ಯ ಅಡಿಗರ ನಿಲುಮೆಯನ್ನು ಸ್ವೀಕರಿಸಿದ್ದು ಇತಿಹಾಸ ಎನ್ನುವ ಬಿ.ವಿ. ಕೆದಿಲಾಯರು ಅದಕ್ಕೆ ಸಮರ್ಥನೆಯಾಗಿ “ಅಡಿಗರ ಹೊಸ ಸಂವೇದನೆ, ಹೊಸ ಲಯ, ನವ್ಯ ಸಾಹಿತ್ಯದ ಸಂದರ್ಭವನ್ನೇ ಬದಲಾಯಿಸಿತು” ಎನ್ನುವ ಅನಂತಮೂರ್ತಿಯವರ ಮಾತನ್ನು ಉಲ್ಲೇಖಿಸಿದ್ದಾರೆ. ಇದು ಮೇಜರ್ ಲೇಖಕನ ಲಕ್ಷಣಗಳು.
ಒಂದು ದೃಷ್ಟಿಯಲ್ಲಿ ಹೇಳುವುದಾದರೆ, ಹಳೆಯ ಕಾವ್ಯದ ಕೇಂದ್ರದಲ್ಲಿ ದೇವರು ಇದ್ದರೆ ಅಡಿಗರು ಪ್ರತಿಷ್ಟಾಪಿಸಿದ ನವ್ಯದಲ್ಲಿ ಮನುಷ್ಯನೇ ಕೇಂದ್ರಸ್ಥಾನದಲ್ಲಿದ್ದಾನೆ. ಅಂದರೆ ಆಧುನಿಕ ಮನು?ನ ಪಾಡು ಅವರ ಕಾವ್ಯದ ಕೇಂದ್ರ ಕಾಳಜಿ. ನವ್ಯದ ಪಾಲಿಗೆ ಬದುಕಿನ ಸಮಸ್ಯೆಗಳಿಗೆ ಅಧ್ಯಾತ್ಮದ ಸುಲಭ ಸಿದ್ಧ ಪರಿಹಾರಗಳಿಲ್ಲ. ಸಂದೇಹವಾದಿ, ಆಜ್ಞೇಯವಾದಿ ಮತ್ತು ಸತ್ಯಶೋಧನೆಗಾಗಿ ಹೆಣಗಾಡುತ್ತಿರುವ ಆಧುನಿಕ ಮನುಷ್ಯನೇ ನವ್ಯದ ಕೇಂದ್ರ. ಅವನ ಪಾಡು, ದುಃಖ, ದ್ವಂದ್ವ, ಸಂಕಟ, ಮುಜುಗರ, ನಿರಾಶೆ, ದುರಂತ, ಅನಾಥಪ್ರಜ್ಞೆ, ಅಸಹಾಯಕತೆಗಳು, ಅಡಿಗರ ಕವನಗಳ ಒಳತಳದಲ್ಲಿ ಮಿಡಿಯುತ್ತಿರುತ್ತವೆ. ವೈಯಕ್ತಿಕ ಸ್ತರದಲ್ಲಿ ಮನು? ಪ್ರಾಣಿಗಳಂತೆ ನಿಸರ್ಗದ ಸಹಜ ಸಂತಾನವಲ್ಲ. ಏಕೆಂದರೆ ಪ್ರಾಣಿಗಳಂತೆ ಮಿತಿಯೊಳಗೆ ನಿಶ್ಚಿಂತೆಯಿಂದ ಆತ ಬದುಕಲಾರ. (’ಭೂಮಿಗೀತ’ ಕವನದ ವಸ್ತು) ಅವನ ಆಸೆಗಳು ಅನಂತ; ಆದರೆ ಸಾಮರ್ಥ್ಯ ಅತ್ಯಂತ ಪರಿಮಿತ. ಈ ದಾರುಣ ಸ್ಥಿತಿಯೇ ಮನು?ನ ಮೂಲಭೂತ ದುರಂತ. ಈ ಕಾರಣದಿಂದ ಕೆಲ ವಿಮರ್ಶಕರು ಅಡಿಗರನ್ನು ’ದುರಂತ ಪ್ರಜ್ಞೆಯ ಕವಿ’ ಎಂದು ಕರೆದಿದ್ದಾರೆ.
“ಅವರ ಕವನಗಳ ಕೆಲವು ಸಾಲುಗಳ ಆಧಾರದಿಂದ ಅವರನ್ನು ತಪ್ಪು ತಿಳಿದು, ಅವರು ವೈದಿಕ ಪರಂಪರೆಯನ್ನು ಪ್ರತಿಪಾದಿಸಿದವರು ಎಂದು ಟೀಕಿಸಿದವರಿದ್ದಾರೆ. ಆದರೆ ಕೇವಲ ವೈದಿಕ ಪ್ರತಿಮೆಗಳನ್ನು ಉಪಯೋಗಿಸಿದ ಮಾತ್ರಕ್ಕೆ ಕವಿ ವೈದಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಾನೆಂದು ಹೇಳಲಾಗದು” ಎನ್ನುವ ಲೇಖಕರು ವಿಮರ್ಶಕ ಜಿ.ಎಸ್. ಆಮೂರರ ಈ ಮಾತನ್ನು ಉಲ್ಲೇಖಿಸುತ್ತಾರೆ: “ಅಡಿಗರು ಸನಾತನಿಗಳಲ್ಲ. ಅವರ ಕಾವ್ಯದಲ್ಲಿ ವೈದಿಕ ಸಂಕೇತ, ಪ್ರತಿಮೆಗಳನ್ನು ಕೂಡ ಅವರು ವ್ಯಂಗ್ಯದ ಪರಿಣಾಮಕ್ಕೋಸ್ಕರವಾಗಿಯೇ ಬಳಸಿಕೊಳ್ಳುತ್ತಾರೆ. ಅವರು ಸಾರ್ವಕಾಲಿಕ ಮೌಲ್ಯಗಳ ಬಗ್ಗೆ ಹೇಳುತ್ತಿದ್ದಾರೆಯೇ ಹೊರತು ರಿವೈವಲಿಸ್ಟ(ಪುನರುತ್ಥಾನವಾದಿ)ರಂತೆ ಅಲ್ಲ”.
ಹೊಸ ಕಾವ್ಯಭಾಷೆ
ಅಡಿಗರಿಗೆ ತಮ್ಮ ನವ್ಯಪ್ರಜ್ಞೆಯ ಸಮರ್ಥ ಅಭಿವ್ಯಕ್ತಿಗೆ ಅಗತ್ಯವಾದ ಭಾಷೆ, ತಂತ್ರಗಳನ್ನು ಸೃಷ್ಟಿಸಿಕೊಳ್ಳುವುದು ಅನಿವಾರ್ಯವಾಯಿತು. ಈ ಪ್ರಯತ್ನದಲ್ಲಿ ಅವರು ಸಾಧಿಸಿದ ಯಶಸ್ಸು ಇಡೀ ತಲೆಮಾರಿಗೆ ದಾರಿದೀಪವಾಯಿತು. ಕಾವ್ಯವನ್ನು ಗೇಯತೆಯ ಬಂಧನದಿಂದ ಬಿಡಿಸಿ ಮುಕ್ತಛಂದಸ್ಸನ್ನು ಪ್ರಚುರಪಡಿಸಿದ್ದು, ಪ್ರತಿಮಾನಿ?ತೆ, ಅರ್ಥಾನುಸಾರಿ ಆಡುಮಾತಿನ ಲಯ, ನಾಟಕೀಯ ಸ್ವಗತ, ಅನ್ಯಕೃತಿಗಳ ಉದ್ಧರಣ (ಕೊಟೇಶನ್), ಮಾಂಟಾಜ್ ತಂತ್ರ, ಪ್ರಜ್ಞಾಪ್ರವಾಹ, ಆಧುನಿಕ ಪಾರಿಭಾಷಿಕ ಪದಗಳ ಬಳಕೆ ಮುಂತಾದ ನವೀನ ತಂತ್ರಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದು ಈ ದಿಶೆಯಲ್ಲಿನ ಮಹತ್ತ್ವದ ಸಾಧನೆಗಳು.
ಕವನಕ್ಕೆ ತನ್ನದೇ ಆದ ಲಯವಿರಬೇಕಾದ್ದು ಅಗತ್ಯವಾದರೂ ಪ್ರಾಸಕ್ಕಾಗಿ, ಗೇಯತೆಗಾಗಿ ಕಾವ್ಯಗುಣವೇ ನ?ವಾಗುವ ಸ್ಥಿತಿ ಉಂಟಾಗಬಾರದು. ಈ ದೃಷ್ಟಿಯಿಂದ ಕಾವ್ಯವನ್ನು ಪ್ರಾಸದಿಂದ, ಛಂದಸ್ಸಿನ ಬಿಗಿಮುಷ್ಟಿಯಿಂದ ಬಿಡುಗಡೆಗೊಳಿಸುವ ಅಗತ್ಯವನ್ನು ಕ್ರಮೇಣ ಕವಿಗಳು ಕಂಡುಕೊಂಡಿದ್ದರು. ಮಂಜೇಶ್ವರ ಗೋವಿಂದ ಪೈಗಳು ಅದರಲ್ಲಿ ಮೊದಲಿಗರಾದರೆ ನವೋದಯದ ಕವಿಗಳು ಅದರಲ್ಲಿ ಮುನ್ನಡೆದರು. “ಗೇಯತೆ ಕಾವ್ಯಕ್ಕೆ ಅನಿವಾರ್ಯವಲ್ಲ. ಕಾವ್ಯದ ಜೀವಾಳ ಕಾವ್ಯದ ಗುಣವೇ ಹೊರತು, ಗೇಯತೆಯಲ್ಲ” ಎನ್ನುವ ನಿಲುಮೆಯಿಂದ ಹೊರಟ ಅಡಿಗರು, ಸಂಗೀತದ ಸಹಾಯವಿಲ್ಲದೆಯೂ ಕಾವ್ಯವು ಪರಿಣಾಮಕಾರಿ ಆಗಬಲ್ಲದೆಂದು ಒತ್ತಿಹೇಳಿ ಕಾವ್ಯವನ್ನು ಗೇಯತೆಯ ಬಂಧನದಿಂದ ಮುಕ್ತಗೊಳಿಸಿದರು. ಇದರಿಂದ ಕಾವ್ಯವು ಕಾವ್ಯವಾಗಿಯೇ ತನ್ನ ಸಾಮರ್ಥ್ಯವನ್ನು ಪ್ರಕಟಿಸಲು ಸಾಧ್ಯವಾಯಿತು. ವೈವಿಧ್ಯಮಯ ಪ್ರಯೋಗಗಳು ನಡೆದು ಕಾವ್ಯದ ಕ್ಷಿತಿಜವು ವಿಸ್ತಾರವಾಯಿತು.
ಇನ್ನು ಹೊಸಕಾವ್ಯಕ್ಕೆ ತಕ್ಕಂತೆ ಭಾ?ಯನ್ನು ಸೃಷ್ಟಿಸುವ, ಪಳಗಿಸುವ, ಹದಗೊಳಿಸುವ, ದುಡಿಸಿಕೊಳ್ಳುವ ಪ್ರಯತ್ನದಲ್ಲಿ ಅಡಿಗರು ಮಾಡಿದ ಸಾಧನೆ ಗಣನೀಯವಾದ್ದು. ಮುಖ್ಯವಾಗಿ ಆಡುಮಾತಿನ ಸತ್ತ್ವವನ್ನು, ಲಯವನ್ನು ಕಾವ್ಯದ ಭಾ?ಯಲ್ಲಿ ಅಳವಡಿಸಿದ್ದು, ಆಧುನಿಕ ಜೀವನದಲ್ಲಿ ಬಳಕೆಯಾಗುತ್ತಿರುವ ವಿವಿಧ ಭಾಷೆಗಳನ್ನು, ಪದಗಳನ್ನು, ನುಡಿಗಟ್ಟುಗಳನ್ನು ಕಾವ್ಯಭಾಷೆಯ ಅಂಗವಾಗಿ ಮಾಡಿದ್ದು, ಅನುಭವದ ಎಲ್ಲ ಸ್ತರಗಳನ್ನು, ವಿಚಾರದ ಎಲ್ಲ ಎತ್ತರಗಳನ್ನು, ಭಾವಗಳ ಎಲ್ಲ ಸೂಕ್ಷ್ಮಗಳನ್ನು ವ್ಯಕ್ತಪಡಿಸುವಂತೆ ಭಾ?ಯ ಅಭಿವ್ಯಕ್ತಿಶಕ್ತಿಯನ್ನು ವಿಶೇ?ವಾಗಿ ಬೆಳೆಸಿದ್ದು ಅಡಿಗರ ಅಮೂಲ್ಯ ಕೊಡುಗೆ. “ಅಡಿಗರ ಕಾವ್ಯದಲ್ಲಿ ವಿಮರ್ಶಕನಿಗೆ ಥಟ್ಟನೆ ಹೊಳೆಯುವ ಗುಣ ಈ ಕವಿ ಕನ್ನಡ ಭಾಷೆಯನ್ನು ಬಳಸಿಕೊಳ್ಳುವ ರೀತಿ”.
ಅವರ ಶಬ್ದಸಂಪತ್ತು ವಿಪುಲ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಅಲ್ಲದೆ ವಿವಿಧ ಪ್ರಾದೇಶಿಕ ಶಬ್ದಗಳನ್ನು ತಂದು ಭಾಷೆಯನ್ನು ಮುರಿದು ಕಟ್ಟಿದರು. ಯಕ್ಷಗಾನದ ವಾಕ್ ಶೈಲಿಯನ್ನು ಉಪಯೋಗಿಸಿಕೊಂಡರು. ಭಾಷೆಯು ಅನುಭವವನ್ನು ಅಭಿನಯಿಸಿ ತೋರುವಂತೆ ಮಾಡಿದರು. ಅರ್ಥಪೂರ್ಣ ನುಡಿಗಟ್ಟುಗಳನ್ನು ಸೃಷ್ಟಿಸಿದರು. ಇದನ್ನು ಸುಬ್ರಾಯ ಚೊಕ್ಕಾಡಿ ಅವರು ಹೀಗೆ ಚೆನ್ನಾಗಿ ವಿಶ್ಲೇಷಿಸಿದ್ದಾರೆನ್ನಬಹುದು: “ಆ ಕಾಲದ ಪ್ರಭಾವಶಾಲಿ ಕವಿಗಳಾದ ಕುವೆಂಪು ಅವರ ಸಂಸ್ಕೃತಭೂಯಿ? ಶೈಲಿಯನ್ನು, ಬೇಂದ್ರೆಯವರ ಸರಳೀಕೃತ ಜಾನಪದ ಭಾಷೆಯನ್ನು ತಿರಸ್ಕರಿಸಿ, ತನ್ನ ಅನುಭವಗಳಿಗೂ ಧೋರಣೆಗಳಿಗೂ ಒಗ್ಗುವ ಹೊಸಭಾಷೆಯನ್ನು ಅವರು ಸೃಷ್ಟಿಸಿಕೊಳ್ಳಬೇಕಾಯಿತು. ಆಡುನುಡಿ ಎಂದರೆ ಜನರು ಆಡುವ ಮಾತೇ ಅಲ್ಲ. ಗದ್ಯದಂತೆ ಕಂಡು ಗದ್ಯ ಅಲ್ಲದ, ನಾದಮಯತೆಯೇ ಉಬ್ಬಿ ಸಂಗೀತವಾಗಲೊಲ್ಲದ, ಜನರ ಮಾತಿನ ಶಕ್ತಿಯನ್ನೊಳಗೊಂಡೂ, ಅದಕ್ಕೆ ಸಮೀಪವಾಗಿಯೂ ಅದರೊಳಗೆ ಕರಗಿ ಹೋಗದ ಅಂತರವನ್ನು ಸಾಧಿಸಬಲ್ಲ ಭಾಷೆ ಅಡಿಗರದ್ದು”.
ಪುಸ್ತಕದ ಸುಮಾರು ಅರ್ಧಭಾಗದಲ್ಲಿ ಲೇಖಕ ಬಿ.ವಿ. ಕೆದಿಲಾಯರು ಅಡಿಗರ ಇಪ್ಪತ್ತೈದು ಉತ್ತಮ ಕವನಗಳನ್ನು ಪರಿಚಯಿಸಿದ್ದಾರೆ; ವಿಶ್ಲೇಷಿಸಿದ್ದಾರೆ. ಆ ಮೂಲಕ ಪುಸ್ತಕವು ಕವಿ ಅಡಿಗರ ಬಗೆಗೆ ಒಂದು ಒಳ್ಳೆಯ ನೋಟವನ್ನೂ ಒಳನೋಟಗಳನ್ನು ನೀಡುವ ಕೆಲಸವನ್ನು ಸಮರ್ಥವಾಗಿ ಮಾಡಿದೆ. ತುಂಬ ಶ್ರದ್ಧೆಯಿಂದ ಮಾಡಿದ ಈ ಸಾರಸ್ವತ ಕಾರ್ಯ ಸಾರ್ಥಕವೂ ಆಗಿದೆ. ಕವಿ ಅಡಿಗರನ್ನು ಇ? ಚೆನ್ನಾಗಿ ಮತ್ತು ಸಂಕ್ಷಿಪ್ತವಾಗಿ ಹಿಡಿದಿಡುವುದು ಸಣ್ಣ ಸಾಧನೆಯಲ್ಲ; ಅಡಿಗರ ಬಗೆಗಿರುವ ಸಂದೇಹ, ಆಕ್ಷೇಪಗಳಿಗೂ ಇಲ್ಲಿ ಉತ್ತರಿಸಿದ್ದಾರೆ. ಜನ್ಮಶತಮಾನೋತ್ಸವ ವರ್ಷಕ್ಕೆ ಈ ಪುಸ್ತಕ ಒಂದು ಯೋಗ್ಯ ಮುನ್ನುಡಿಯಾಗಿದೆ.