ಹುಟ್ಟುವ ಎಲ್ಲ ಜೀವಿಗೂ ಸಾವೆಂಬುದು ಬೆನ್ನಹಿಂದೆ ಕಟ್ಟಿಕೊಂಡು ಬಂದ ಆಸ್ತಿಯೇ ಹೌದಾದರೂ ತೀರಾ ಆಪ್ತರ ಅನಿರೀಕ್ಷಿತ, ಅಕಾಲಿಕ ಮರಣಕ್ಕೆ ಮನೆಯ ಮನಸ್ಸುಗಳು ಹೀಗೇ ಸ್ಪಂದಿಸಿಯಾವು ಎನ್ನಲಾಗುವುದಿಲ್ಲ. ಅಥವಾ ಯಾರು ಯಾರ ಸಾವಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಮೊದಲೇ ತಾಲೀಮು ನಡೆಯುವುದಕ್ಕೆ ಅದು ರಂಗಭೂಮಿಯಲ್ಲ…
ಅಮಿತಾವ್ ಘೋಷ್ ಬರೆದಿರುವ ’ದ ಟೌನ್ ಬೈ ದ ಸೀ’ ಎಂಬ ಪ್ರಬಂಧವನ್ನು ಇತ್ತೀಚೆಗೆ ಓದಿದೆ. ೨೦೦೪ರ ಡಿಸೆಂಬರ್ ೨೬ರಂದು ಕರಾವಳಿಯನ್ನು ಕಾಡಿದ, ಕರಾಳ ನೆನಪು ಸುನಾಮಿಯನ್ನು ಸುತ್ತುವರಿದಿರುವ ಅನುಭವ ಕಥನ ಅದು. ಆ ಸಂದರ್ಭದಲ್ಲಿ ನಿಕೋಬಾರ್ ದ್ವೀಪಗಳಲ್ಲಿ ಮಲೇರಿಯಾ ವ್ಯಾಪಕವಾಗಿದ್ದುದರಿಂದ ಆ ಕುರಿತ ಅಧ್ಯಯನ ನಡೆಸಲು ನಿಯೋಜಿಸಲಾಗಿದ್ದ ಡೈರೆಕ್ಟರರನ್ನು ಪ್ರಧಾನ ಪಾತ್ರವಾಗಿರಿಸಿಕೊಂಡು ಆ ಕಥನ ಬೆಳೆಯುತ್ತದೆ. ಡಿಸೆಂಬರ್ ೨೬ರಂದು ಡೈರೆಕ್ಟರ್ ದೆಹಲಿಗೆ ಪ್ರಯಾಣಿಸಬೇಕಿತ್ತು. ಹಾಗಾಗಿ ಅವರು ಮುನ್ನಾದಿನವೇ ಅಂಡಮಾನ್ಗೆ ಬಂದಿರುತ್ತಾರೆ. ಕಾರ್ಯನಿಮಿತ್ತ ಪ್ರಯಾಣಿಸುವುದಾಗಿರುವುದರಿಂದ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ನಿಕೋಬಾರಿನಲ್ಲಿಯೇ ಬಿಟ್ಟು ಬಂದಿರುತ್ತಾರೆ. ಬೆಳಗಿನ ಜಾವ ಅವರಿಗೆ ಮಲಗಿದ ನೆಲ ಅದುರುತ್ತಿರುವುದರ ಅರಿವಾಗಿ ಹೊರಗೆ ಓಡುತ್ತಾರೆ. ಅದೇ ಸಮಯಕ್ಕೆ ಸರಿಯಾಗಿ ಕೈಯ್ಯಲ್ಲಿದ್ದ ಫೋನ್ ರಿಂಗಣಿಸುತ್ತದೆ. ನೋಡಿದರೆ ಅವರ ಪತ್ನಿಯದ್ದು. ಆ ತುರ್ತುಸಮಯದಲ್ಲಿ ಜೀವ ಉಳಿಸಿಕೊಳ್ಳುವ ಸಲುವಾಗಿ ಕರೆ ಸ್ವೀಕರಿಸದೇ ಕಟ್ಟಡದಿಂದ ಹೊರಗೆ ಧಾವಿಸುತ್ತಾರೆ. ಭೂಮಿ ಕಂಪಿಸುವುದು ನಿಂತ ಬಳಿಕ ಪತ್ನಿಗೆ ಕರೆ ಮಾಡಿದರೆ ನೆಟ್ವರ್ಕ್ ಡೌನ್ ಆಗಿರುತ್ತದೆ.
ಯೋಚಿಸಲು ಅವಕಾಶ ಕೊಡದಂತೆ ಎದುರಿಗಿರುವ ಸಮುದ್ರದ ನೀರು ರಾಕ್ಷಸಗಾತ್ರವಾಗಿ ಬರುತ್ತಿರುವಂತೆನಿಸಿ ಸಾಧ್ಯವಾದ? ಎತ್ತರದ ಸ್ಥಳಕ್ಕೆ ತಮ್ಮ ಜೊತೆಯಲ್ಲಿದ್ದವರೊಡನೆ ಓಡುತ್ತಾರೆ. ಅಲ್ಲಿ ನಿಂತಿರುವಂತೆ ಅಂಡಮಾನಿಗಿಂತ ನಿಕೋಬಾರ್ ತೀರಾ ತಗ್ಗಿನಲ್ಲಿದೆ ಎಂಬುದು ನೆನಪಾಗಿ ಜೀವ ತಲ್ಲಣಿಸುತ್ತದೆ. ಎಲ್ಲವೂ ಶಾಂತವಾದ ಮೇಲೆ ಕರೆಮಾಡಿದರೆ ಪತ್ನಿಯ ಫೋನ್ನಿಂದ ಯಾವುದೇ ಪ್ರತಿಕ್ರಿಯೆ ಇಲ್ಲ. ನಿಕೋಬಾರಿನಲ್ಲಿ ಉಪಗ್ರಹ ಸಂಪರ್ಕವಿದ್ದ ಸರಕಾರಿ ಕಚೇರಿಯ ದೂರವಾಣಿಗೆ ಕರೆಮಾಡಿದರೆ ಒಂದೋ ನಂಬರ್ ಬ್ಯುಸಿ, ಇಲ್ಲವೇ ಕರೆ ಸ್ವೀಕರಿಸುವವರಿಲ್ಲ. ಅಂತೂ ಒಂದಷ್ಟು ಸಮಯದ ಬಳಿಕ ಕರೆ ಸ್ವೀಕರಿಸಿದ ಧ್ವನಿ ಒಲ್ಲದ ದನಿಯಲ್ಲಿ ಮಲಾಕಾ ಪ್ರದೇಶ ಸಂಪೂರ್ಣವಾಗಿ ಸುನಾಮಿ ಅಲೆಗಳಿಗೆ ತುತ್ತಾಗಿದೆ ಎಂಬ ಕಹಿ ವಿಷಯವನ್ನು ನುಡಿಯುತ್ತದೆ. ಆದರೆ ತನ್ನ ಪತ್ನಿ ಮಕ್ಕಳಿಗೇನಾಯಿತು ಎಂದರೆ ಅಲ್ಲಿಂದ ಯಾವುದೇ ಉತ್ತರ ದೊರೆಯುವುದಿಲ್ಲ.
ಮಧ್ಯಾಹ್ನದ ವೇಳೆಯಾಗುವಾಗ ಅವರ ಮಗ ಅವರ ಮನೆಯಿಂದ ಇನ್ನೂರು ಮೀಟರು ದೂರವಿದ್ದ ಚರ್ಚಿನ ಸೂರಿನ ಮೇಲೆ ದೊರೆತ ಸುದ್ದಿ ಬರುತ್ತದೆ. ರಾತ್ರಿಯಾಗುವಷ್ಟರಲ್ಲಿ ಅವನನ್ನು ಕಚೇರಿಗೆ ಬರಮಾಡಿಕೊಂಡು ತಂದೆಯ ಬಳಿ ಮಾತಾಡಲು ಅನುಕೂಲ ಮಾಡಿಕೊಡುತ್ತಾರೆ. ನಡೆದ ಘಟನೆಗಳನ್ನು ವಿವರವಾಗಿ ತಂದೆಗೆ ಅರುಹಿದ ಮಗನಲ್ಲಿ ’ಅಮ್ಮ, ತಂಗಿ ಏನಾದರೋ?’ ಎಂದು ಕೇಳಿದರೆ ಮಗ ಬಿಕ್ಕಳಿಕೆಯಿಂದ ಉತ್ತರಿಸುವುದಿಷ್ಟೇ – ’ಅಪ್ಪಾ, ಅವರು ಹಾಗೇ ಕಣ್ಮರೆಯಾದರು…’
ಮರುದಿನ ಅಂಡಮಾನ್ನಿಂದ ನಿಕೋಬಾರಿಗೆ ಪ್ರಯಾಣಿಸಿದ ಡೈರೆಕ್ಟರ್ ಮಗನನ್ನು ತನ್ನೊಂದಿಗೆ ಕರೆತರುತ್ತಾರೆ. ಆದರೆ ಪತ್ನಿಯ, ಮಗಳ ಸುಳಿವು ದೊರೆಯುವುದಿಲ್ಲ. ಕೆಲವು ದಿನಗಳವರೆಗೂ ಅವರಿಗೆ ಮತ್ತೆ ನಿಕೋಬಾರಿಗೆ ಪ್ರಯಾಣಿಸಲಾಗುವುದಿಲ್ಲ. ಮತ್ತೆ ಅವರು ತನ್ನ ಪ್ರಯಾಣ ಬೆಳೆಸುವಾಗ ಅಮಿತಾವ್ ಘೋ? ಅವರಿಗೆ ಜೊತೆಗೂಡುತ್ತಾರೆ. ಡೈರೆಕ್ಟರ್ ಮೊದಲಬಾರಿಗೆ ತಮ್ಮ ಪತ್ನಿಯ ಬಗ್ಗೆ ಮಾತಾಡುತ್ತಾರೆ. ನಿಕೋಬಾರಿನಿಂದ ಬೇರೆಡೆಗೆ ಹೋಗಲು ಆಕೆಗಿದ್ದ ಹಂಬಲ, ಆ ದ್ವೀಪದೊಳಗೆ ಆಕೆಯ ಪ್ರತಿಭೆಗಳೆಲ್ಲ ನಿಸ್ತೇಜವಾಗಿರುತ್ತವೆ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತಾರೆ. ಆದರೆ ಒಂದು ಹನಿ ಕಣ್ಣೀರು ಜಿನುಗುವುದಿಲ್ಲ. ಮುಂದೆ ಉಳಿದಿರುವುದು ಅಂತ್ಯ ಕಾಣದ ಹುಡುಕಾಟ ಮಾತ್ರ.
ಪತ್ನಿ ಮಗಳು ಏನಾದರೆಂಬ ಕಿಂಚಿತ್ ಸುಳಿವೂ ದೊರೆಯುವುದಿಲ್ಲ. ಆದರೆ ಡೈರೆಕ್ಟರನ ಹದಿಮೂರು ವರ್ಷಗಳ ಸಂಶೋಧನೆಯ ದಾಖಲೆಗಳಲ್ಲಿ ಕೆಲವು ಅಗತ್ಯವಾಗಿರುವವು ದೊರೆಯುತ್ತವೆ. ಅವೆಲ್ಲವನ್ನೂ ಅವರು ಅತ್ಯಂತ ಜತನದಿಂದ ಕೈಗೆತ್ತಿಕೊಂಡು ತನ್ನೊಂದಿಗೆ ಇರಿಸಿಕೊಳ್ಳುತ್ತಾರೆ. ಹುಡುಕಾಟ ಮುಂದುವರಿದಂತೆ ಅವರಿಗೆ ತಮ್ಮ ಮಗಳ ಬಣ್ಣದಪೆಟ್ಟಿಗೆ ಕಾಣಿಸುತ್ತದೆ. ಅವರು ಅದನ್ನು ಕೈಗೆತ್ತಿಕೊಳ್ಳಬಹುದೆಂಬ ಅಮಿತಾವ್ ಘೋ? ನಿರೀಕ್ಷೆಗೆ ತದ್ವಿರುದ್ಧವಾಗಿ ಅವರದನ್ನು ಹಾಗೇ ಬಿಟ್ಟು ಮುನ್ನಡೆಯುತ್ತಾರೆ. ತಡೆದುಕೊಳ್ಳದೇ ’ಅದನ್ನು ತೆಗೆದುಕೊಳ್ಳುವುದಿಲ್ಲವೇ ನೀವು?’ ಎಂದು ಕೇಳಿದರೆ ತನ್ನ ಕನ್ನಡಕದ ನಡುವಿನಿಂದ ಘೋಷರನ್ನು ದಿಟ್ಟಿಸುವ ಡೈರೆಕ್ಟರ್ ’ಅದರಿಂದ ನನಗೇನು ದೊರೆಯುತ್ತದೆ? ಅದು ನನಗೇನು ಕೊಡಬಲ್ಲದು?’ ಎಂದು ನಿರ್ಭಾವುಕರಾಗಿ ಕೇಳುತ್ತಾರೆ. ಅವರ ಭುಜ ತಟ್ಟಲೆತ್ನಿಸಿದ ಘೋಷರ ಕೈಯ್ಯನ್ನು ಹೆಗಲಿಂದ ದೂರ ಸರಿಸುತ್ತಾರೆ. ಯಾವ ಕರುಣೆ, ಅನುಕಂಪ, ಸಹಾನುಭೂತಿಗಳನ್ನು ಒಲ್ಲೆನೆಂಬಂತೆ ಕೈಯ್ಯಲ್ಲಿದ್ದ ಸಂಶೋಧನಾ ದಾಖಲೆಗಳನ್ನು ಅವುಚಿಕೊಂಡು ನಡೆದುಬಿಡುತ್ತಾರೆ.
ಒಬ್ಬ ಗಂಡನಾಗಿ, ತಂದೆಯಾಗಿ, ಎಲ್ಲಕ್ಕಿಂತ ಹೆಚ್ಚು ಒಬ್ಬ ಸಾಮಾನ್ಯ ಮನು?ನಾಗಿ ಅವರ ಈ ನಡೆ ಲೇಖಕರಿಗೆ ವಿಚಿತ್ರವೆನ್ನಿಸುತ್ತದೆ. ಒಂದು ಕ್ಷಣದಲ್ಲಿ ತನ್ನ ಅನುಪಸ್ಥಿತಿಯಲ್ಲಿ ತನ್ನ ಬದುಕಿನಿಂದ ಅಮೂಲ್ಯವಾದವರನ್ನು ವಿಧಿ ಕಿತ್ತುಕೊಂಡುಬಿಡಬಹುದು ಎಂಬ ಯಾವ ಯೋಚನೆಯೂ ಇಲ್ಲದ ಸಮಯದಲ್ಲಿ ಘಟಿಸಿದ ಈ ಅವಘಡ ಅವರನ್ನು ಕಲ್ಲಾಗಿಸಿದೆಯೇ ಎಂಬ ಪ್ರಶ್ನೆ ಲೇಖಕರನ್ನು ಕಾಡುತ್ತದೆ. ಆದರೆ ಒಂದು ದಿನದ ಬಳಿಕ ಅವರ ಈ ನಿರ್ಧಾರ ಒಬ್ಬ ಕಲ್ಲು ಹೃದಯಿಯದ್ದಲ್ಲ, ಬದುಕನ್ನು ಬಂದಂತೆ ಸ್ವೀಕರಿಸಿದ ಎದೆಗಾರನದ್ದು ಎನಿಸುತ್ತದೆ.
ಸಾವು ಬೆನ್ನ ಹಿಂದಿನ ಆಸ್ತಿ
ಮನೆಯೆಂಬ ಪುಟ್ಟಗೂಡಿನಿಂದ ಯಾವ ಜೀವ ಯಾವ ಕ್ಷಣದಲ್ಲಿ ಧರೆಗೊರಗೀತೋ ಹೇಳಬಲ್ಲವರು ಯಾರೂ ಇಲ್ಲ. ಆದರೆ ಅನಿರೀಕ್ಷಿತವಾದ ಸಾವು ಮಾತ್ರ ಬದುಕಿರುವವರನ್ನು ದಿನದಿನ ಹಿಂಡಿ ಹಿಪ್ಪೆ ಮಾಡುವುದರಲ್ಲಿ ಅನುಮಾನವಿಲ್ಲ.
ಇತ್ತೀಚೆಗೆ ನಮ್ಮ ಪರಿಚಯದ ಮೂವತ್ತೈದರ ಹರೆಯದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. ಎಂಟು ವರ್ಷದ ಪುಟ್ಟಮಗಳು ಅವರಿಗೆ. ಆ ವಿಷಯ ತಿಳಿದಾಗಿನಿಂದ ಮನಸ್ಸು ಹಗುರಾಗಿಸಿಕೊಳ್ಳುವುದಕ್ಕೆ ಒಂದು ವಾರ ಬೇಕಾಯಿತು ನಮಗೆ. ಇನ್ನೊಂದು ಹೀಗೇ ಮನಸ್ಸು ತಟ್ಟಿದ ಘಟನೆಯಲ್ಲಿ ಶಾಲಾಮಕ್ಕಳನ್ನು ಪ್ರವಾಸ ಕರೆದೊಯ್ದ ವೇಳೆ ಚಿಕ್ಕವಯಸ್ಸಿನ ಶಿಕ್ಷಕಿಯೊಬ್ಬರು ಕೆರೆಗೆ ಜಾರಿ ಬಿದ್ದು ಸಾವನ್ನಪ್ಪಿದ್ದರು. ಅವರ ಮಕ್ಕಳು ಇನ್ನೂ ಎಂಟು-ಐದರ ಹರೆಯದವು. ಆ ಮನೆಗಳು ಈ ಸಾವನ್ನು ಅದು ಹೇಗೆ ತಡೆದುಕೊಂಡಾವೋ ಅರ್ಥವೇ ಆಗುವುದಿಲ್ಲ. ನೆನಪಿದೆ ನನಗೆ, ದೂರದ ಸಂಬಂಧಿಯೊಬ್ಬರು ತೀರಿಕೊಂಡಾಗ ಅವರ ಪತ್ನಿ ಆಘಾತದಿಂದ ತತ್ತರಿಸಿ, ಏನಾಯಿತು ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದೇ, ಅಪರಕಾರ್ಯಕ್ಕಾಗಿ ಬಂದವರನ್ನು ಎಂದಿನಂತೆ ನಗುನಗುತ್ತ ಉಪಚರಿಸಿದರಂತೆ. ಮನೆಯವರು ಹೊರಗೆ ಹೋಗಿದ್ದಾರೆ, ಇನ್ನೇನು ಬಂದುಬಿಡುತ್ತಾರೆ ಎಂಬುದು ಅವರ ನಂಬಿಕೆ! ಕೊನೆಗೆ ಅವರಿಗೆ ನಿದ್ದೆ ಬರುವಂಥ ಚುಚ್ಚುಮದ್ದು ಕೊಡಿಸಿ ಸ್ವಲ್ಪ ಸಮಯದ ಬಳಿಕ ಅವರಿಗೆ ಎಚ್ಚರವಾದಾಗ ವಾಸ್ತವದ ಅರಿವು ಮೂಡುವಂತೆ ಮಾಡಿದರಂತೆ.
ಹುಟ್ಟುವ ಎಲ್ಲ ಜೀವಿಗೂ ಸಾವೆಂಬುದು ಬೆನ್ನಹಿಂದೆ ಕಟ್ಟಿಕೊಂಡು ಬಂದ ಆಸ್ತಿಯೇ ಹೌದಾದರೂ ತೀರಾ ಆಪ್ತರ ಅನಿರೀಕ್ಷಿತ, ಅಕಾಲಿಕ ಮರಣಕ್ಕೆ ಮನೆಯ ಮನಸ್ಸುಗಳು ಹೀಗೇ ಸ್ಪಂದಿಸಿಯಾವು ಎನ್ನಲಾಗುವುದಿಲ್ಲ. ಅಥವಾ ಯಾರು ಯಾರ ಸಾವಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂದು ಮೊದಲೇ ತಾಲೀಮು ನಡೆಯುವುದಕ್ಕೆ ಅದು ರಂಗಭೂಮಿಯಲ್ಲ. ಅಂಥ ಕಹಿಕ್ಷಣಗಳು ಬಂದಾಗ ಆ ಕ್ಷಣಕ್ಕೆ ಭಾವವಿಸ್ಫೋಟ ಘಟಿಸುತ್ತದೆ ಅಷ್ಟೆ. ಅಳಬಹುದು, ಎದೆಬಡಿದುಕೊಳ್ಳಬಹುದು, ಒಂಟಿಯಾಗಿ ಮೌನವಾಗಿ ಕಂಬನಿ ಮಿಡಿಯಬಹುದು. ಆದರೆ ಅಳಬೇಕಾದ ಮನಸ್ಸು ಸಂದರ್ಭ ಅರಿಯದೆ ಅಳದೇ ಹೋದರೆ ಮಾತ್ರ ಅವರ ಜೀವಕ್ಕೂ ಅದು ತೊಂದರೆಯನ್ನು ಉಂಟುಮಾಡುತ್ತದೆ. ಅಂಥವರನ್ನು ’ಹೇಗಾದರೂ ಅಳಿಸಿ’ ಎಂಬುದು ವೈದ್ಯರ ಸಲಹೆ. ’ಲೇಡಿ ಆಫ್ ಶಾಲೋಟ್’ ಎಂಬ ಕವನವೊಂದರಲ್ಲಿ ಹೀಗೇ ಯುದ್ಧಕ್ಕೆ ಹೋದ ಪತಿ ಶವವಾಗಿ ಬಂದಾಗ ಪತ್ನಿ ಅಳುವುದಿಲ್ಲ. ’ಶಿ ಮಸ್ಟ್ ವೀಪ್ ಆರ್ ಶಿ ವಿಲ್ ಡೈ’ (ಅವಳು ಅಳಲೇ ಬೇಕು, ಇಲ್ಲದಿದ್ದರೆ ಸಾಯುತ್ತಾಳೆ) ಎಂದು ಅಲ್ಲಿಗೆ ಬಂದವರೆಲ್ಲ ನುಡಿಯುತ್ತಾರೆ. ಕೊನೆಗೆ ಅವಳ ಮುದ್ದಾದ ಮಗುವನ್ನು ತಂದು ಮಡಿಲಲ್ಲಿ ಇರಿಸುತ್ತಾರೆ. ಆಕೆಗೆ ವಾಸ್ತವದ ಅರಿವಾಗಿ ಮಗುವನ್ನು ತಬ್ಬಿಕೊಂಡು ಭೋರಿಟ್ಟು ಅಳುತ್ತಾಳೆ.
’ಜವರಾಯ ಬಂದರೆ ಬರಿಕೈಲಿ ಬರಲಿಲ್ಲ|
ಕುಡುಗೋಲು ಕೊಡಲಿ ಒಂದ್ಹೆಗಲೇರಿ|
ಒಳ್ಳೊಳ್ಳೆ ಮರನ ಕಡಿಬಂದ|
ಫಲಬಿಟ್ಟ ಮರನ ಕಡಿಬಂದ…’
– ಎಂಬ ಜನಪದ ಗೀತೆಯ ಸಾಲುಗಳು ಹುಟ್ಟಿಕೊಂಡದ್ದು ಇಂತಹ ಸಂದರ್ಭಗಳಲ್ಲೇ ಇರಬೇಕು, ಅಲ್ಲವೇ?