ನಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ, ನಿರ್ಲಿಪ್ತತೆಯಿಂದ, ಸ್ಥಿತಪ್ರಜ್ಞೆಯಿಂದ ಮಾಡಿದಾಗಲೇ ನಮಗೆ ಶಾಂತಿ ದೊರಕುತ್ತದೆ. ಬಾಹ್ಯದಲ್ಲಾಗಲಿ, ಆಂತರ್ಯದಲ್ಲಾಗಲಿ ಸಂಘರ್ಷ ನಡೆಯುತ್ತಿರುವಾಗ ಮನಸ್ಸನ್ನು ಸಮಸ್ಥಿತಿಯಲ್ಲಿಡಬೇಕು…
ಜಗತ್ತಿನಲ್ಲಿ ಪ್ರತಿಯೊಬ್ಬರೂ ಶಾಂತಿಯನ್ನು ಬಯಸುತ್ತಾರೆ. ನಮ್ಮ ಬಯಕೆಯೇನೋ ಶಾಂತಿಯನ್ನು ಪಡೆಯುವುದು; ಆದರೆ ಜೀವಮಾನವೆಲ್ಲ ನಡೆಸುವುದು ಮಾತ್ರ ಅಶಾಂತಿಯನ್ನುಂಟುಮಾಡುವ ಕಾರ್ಯಗಳನ್ನೇ!
ಯುದ್ಧದ ನಂತರ ಶಾಂತಿ ಎಂದರೆ ಅದೊಂದು ಸ್ಮಶಾನ ಶಾಂತಿ. ಇದು ಹೇಗೆಂದರೆ ಸತ್ತ ಮೇಲೆ ಶಾಂತಿ ಸಿಗುತ್ತದೆ ಎಂದು ಆತ್ಮಹತ್ಯೆ ಮಾಡಿಕೊಂಡಂತೆ.
ಮೊದಲನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷರಾಗಿದ್ದ ವುಡ್ರೋ ವಿಲ್ಸನ್ ಜನವರಿ ೮, ೧೯೧೮ರಂದು ಅಮೆರಿಕದ ಕಾಂಗ್ರೆಸ್ ಸದಸ್ಯರೆದುರಿಗೆ ತಮ್ಮ ಸೊಗಸಾದ ಹದಿನಾಲ್ಕು ಶಾಂತಿ ಸೂತ್ರಗಳನ್ನು ಮಂಡಿಸಿದರು. ಆನಂತರ ಕೊನೆಯಲ್ಲಿ “ಇಷ್ಟೆಲ್ಲ ಮಾಡಿಯೂ ಶಾಂತಿ ಸ್ಥಾಪಿಸುವ ಈ ಪ್ರಯತ್ನ ಫಲಕಾರಿಯಾಗದಿದ್ದರೆ ಮದ್ದುಗುಂಡುಗಳು ಹೇಗೂ ಇದ್ದೇ ಇವೆ” ಎಂದು ವಿಲ್ಸನ್ ಮಂಗಳ ಹೇಳಿದರು. ಹೀಗೆ ಅವರು ಬಲಪ್ರಯೋಗದಿಂದ ಅಥವಾ ಭಯಹುಟ್ಟಿಸಿ ಶಾಂತಿಯನ್ನು ಸ್ಥಾಪಿಸಲು ಪ್ರಯತ್ನಿಸಿದರು.
ಮೊದಲ ಮಹಾಯುದ್ಧವೇನೋ ನಿಂತಿತು. ಆದರೆ ಶಾಂತಿ ಸ್ಥಾಪನೆಯಾಯಿತೇ? ಅದು ಶಾಂತಿಗೆ ಹೇತುವಾಗುವ ಬದಲು ಎರಡನೆಯ ಮಹಾಯದ್ಧಕ್ಕೆ ನಾಂದಿಯಾಯಿತು. ಜರ್ಮನರಲ್ಲಿ ಬೂದಿಮುಚ್ಚಿದ ಕೆಂಡದಂತಿದ್ದ ಅತೃಪ್ತಿ ಅಸಮಾಧಾನಕ್ಕೆ ಹಿಟ್ಲರ್ ಗಾಳಿಯೂದಿ, ಜ್ವಾಲೆಯನ್ನು ಉಜ್ಜ್ವಲಗೊಳಿಸಿ ತಾನು ಜರ್ಮನಿಯ ಸರ್ವಾಧಿಕಾರಿಯಾದ. ಪರಿಣಾಮವಾಗಿ ೧೯೩೯ರಲ್ಲಿ ಎರಡನೆಯ ಮಹಾಯುದ್ಧ ಪ್ರಾರಂಭವಾಗಿ ಸುಮಾರು ಆರು ವ?ಗಳವರೆಗೆ ನಡೆಯಿತು. ಲಕ್ಷಾಂತರ ಅಮಾಯಕರ ಮಾರಣಹೋಮವಾಯಿತು. ಆ ಸಂದರ್ಭದಲ್ಲಿ “ಮೊದಲ ಮಹಾಯುದ್ಧದಲ್ಲಿ ಶಕ್ತಿಪ್ರದರ್ಶನಕ್ಕಿಳಿದದ್ದರಿಂದ ಶಾಂತಿಸ್ಥಾಪನೆ ಆಗಲಿಲ್ಲ, ಜಯಾಪಜಯ ಎರಡೂ ನಿಷ್ಪ್ರಯೋಜಕವಾದವೇ, ಆ ಪಾಠವನ್ನು ಪ್ರಪಂಚ ಕಲಿಯಬೇಕಿತ್ತು” ಎಂದು ಅಮೆರಿಕದ ಆಗಿನ ಅಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್ ನುಡಿದಿದ್ದರು.
ಮಿಥ್ಯಾ ನಂಬಿಕೆ
ಅಣುಬಾಂಬಿನ ಸರ್ವನಾಶಕ ಶಕ್ತಿಯ ಭೀತಿಯೇ ಇನ್ನು ಮುಂದಿನ ಯುದ್ಧವನ್ನು ತಡೆದೀತೆಂದು ೮೫ ನಂಬುವುದು ಪಿಶಾಚಿಯಲ್ಲಿ ಪೈಶಾಚಿಕಗುಣ ಹೆಚ್ಚಿದ? ಅದು ದೈವೀಗುಣ ಹೊಂದೀತೆಂಬ ಭ್ರಮೆಯಂತೆ ಮಿಥ್ಯೆ. ಭಯಹುಟ್ಟಿಸಿ ಶಾಂತಿ ಸ್ಥಾಪಿಸುತ್ತೇನೆ ಎನ್ನುವುದೇ ಒಂದು ವಿರೋಧಾಭಾಸದ ಸಂಗತಿ. ಭಯ ಇರುವಲ್ಲಿ ಶಾಂತಿ ಇರುವುದಿಲ್ಲ; ಶಾಂತಿ ಇದ್ದಲ್ಲಿ ಭಯವಿರಲು ಸಾಧ್ಯವಿಲ್ಲ. ಶಾಂತಿ ಸ್ಥಾಪಿಸಬೇಕಾದದ್ದು ಸಕಾರಾತ್ಮಕ ಭಾವನೆಯಿಂದಲೇ ವಿನಾ ನಕಾರಾತ್ಮಕ ಮನೋಭಾವದಿಂದಲ್ಲ.
ಇತಿಹಾಸ ನಮಗೆ ಬಹಳ ಬೇಗ ಮರೆತುಹೋಗುತ್ತದೆ. ನೆನಪಿಸಿದರೆ ಅದನ್ನು ಗತೇತಿಹಾಸ ಎಂದು ನಿರ್ಲಕ್ಷಿಸುತ್ತೇವೆ. ಯುದ್ಧದಿಂದ ಶಾಂತಿ ಸ್ಥಾಪಿಸುತ್ತೇನೆ ಎಂದು ಹೊರಟವರು ಚರಿತ್ರೆಯಿಂದ ಪಾಠ ಕಲಿತಿಲ್ಲ ಎಂದೇ ಭಾವಿಸಬೇಕು.
ಪ್ರಾಚೀನ ಎಪಿರಸ್ ರಾಜ್ಯದ ದೊರೆ ಪೈರಸ್ ರೋಮನ್ನರ ಮೇಲೆ ಯುದ್ಧಸಾರಲು ಬಯಸಿದಾಗ ಸಿನಿಯಸ್ ಅವನಿಗೆ ಬುದ್ಧಿವಾದ ಹೇಳಿದ. ಅವರ ನಡುವಣ ಮಾತುಕತೆ ಹೀಗಿತ್ತು –
“ರೋಮನ್ನರನ್ನು ಸೋಲಿಸಿದರೆ ಏನು ಲಾಭ?”
“ಸಿಸಿಲಿಯನ್ನು ಸುಲಭದಲ್ಲಿ ವಶಪಡಿಸಿಕೊಳ್ಳಬಹುದು.”
“ಸಿಸಿಲಿ ಸಿಕ್ಕಿದ ಮೇಲೆ ಏನು ಮಾಡುತ್ತೀ?”
“ಆಫ್ರಿಕಾ ದಾಟಿ ಕಾರ್ಥೇಜನ್ನು ಆಕ್ರಮಿಸುತ್ತೇನೆ.”
“ಅದರ ನಂತರ ನಿನ್ನ ಯೋಜನೆ ಏನು?”
“ಗ್ರೀಸಿನ ಮೇಲೆ ಯುದ್ಧ ಹೂಡುವುದು ಮತ್ತು ಮ್ಯಾಸಿಡೋನಿಯಾವನ್ನು ಗೆಲ್ಲುವುದು ನನ್ನ ಉದ್ದೇಶ.”
“ಇಷ್ಟೆಲ್ಲ ರಾಜ್ಯಗಳನ್ನು ಗೆದ್ದಮೇಲೆ ನಿನಗೆ ದೊರಕುವ ಫಲವಾದರೂ ಏನು?”
“ಇಷ್ಟೆಲ್ಲ ರಾಜ್ಯವಿಸ್ತಾರ ಮಾಡಿದ ಮೇಲೆ ಕುಳಿತುಕೊಂಡು ಸುಖಾನುಭವ ಹೊಂದುವುದು ಅಂತಿಮ ಗುರಿ.”
“ಸುಖಾನುಭವದ ಗುರಿಯಿದ್ದರೆ ಅದನ್ನು ಈಗಲೇ ಹೊಂದಬಹುದಲ್ಲ? ರಾಜ್ಯವೊಂದರ ದೊರೆಯಾಗಿ ಸುಖವನ್ನು ಅನುಭವಿಸಲು ಅಸಾಧ್ಯವಾದರೆ ಇಡೀ ಜಗತ್ತನ್ನೇ ಗೆದ್ದರೂ ಅದು ಶಕ್ಯವಾಗದು.”
ಬುದ್ಧ ತೋರಿದ ದಾರಿ
ಬುದ್ಧನ ಬದುಕಿನಲ್ಲಿ ಇಬ್ಬರು ರಾಜರೊಳಗೆ ನಡುವೆ ನಡೆಯಲಿದ್ದ ಯುದ್ಧವನ್ನು ನಿಲ್ಲಿಸುವ ಪ್ರಸಂಗವೊಂದು ಬಂದಿತ್ತು. ಇಬ್ಬರು ದೊರೆಗಳೂ ರೋಹಿಣೀನದಿಯ ತೀರದಲ್ಲಿ ತಮ್ಮ ಸೈನ್ಯಗಳೊಡನೆ ಯುದ್ಧಮಾಡಲು ಸಿದ್ಧವಾಗಿರುವುದನ್ನು ತಿಳಿದು ಬುದ್ಧ ಅಲ್ಲಿಗೆ ಬಂದು ಎರಡೂ ಸೈನ್ಯಗಳ ಮಧ್ಯೆ ನಿಂತುಕೊಂಡ. ಈ ಯುದ್ಧದ ಕಾರಣ ಒಂದು ಸಾಮಾನ್ಯ ವಿಚಾರವಾಗಿತ್ತು: ಪ್ರತಿಯೊಬ್ಬ ದೊರೆಯೂ ರೋಹಿಣೀನದಿಯ ನೀರು ತನಗೇ ಸೇರಿದ್ದೆಂದು ವಾದಿಸುತ್ತಿದ್ದುದು.
ದೊರೆಗಳನ್ನು ಸಂಧಿಸಿ ಬುದ್ಧ ಪ್ರಶ್ನಿಸಿದನು: ’ಈ ನದಿಯ ನೀರಿನ ಬೆಲೆ ಎ಼ಷ್ಟು ಇಬ್ಬರೂ ಹೇಳಿದರು; ’ಪೂಜ್ಯರೆ, ಈ ನೀರಿನ ಬೆಲೆ ಅಲ್ಪವಾದದ್ದು.’
ಬುದ್ಧ ಮತ್ತೆ ಪ್ರಶ್ನಿಸಿದ: `ಹಾಗಾದರೆ ಪ್ರಭುಗಳ ಬೆಲೆ
’ಬಹಳ ಮಹತ್ತ್ವದ್ದು’ – ಪ್ರತಿಯೊಬ್ಬ ದೊರೆಯೂ ಉತ್ತರಿಸಿದ.
`ಮತ್ತೆ ರಾಣಿಯವರ ಬೆಲೆ ಎಷ್ಟು?’ – ಪೂಜ್ಯನು ಪ್ರಶ್ನಿಸಿದ.
`ರಾಣಿಯರೇ! ಅವರ ಬೆಲೆ ಬಹಳ ಹೆಚ್ಚು. ನಾನು ನನ್ನ ರಾಣಿಯನ್ನು ಮಹತ್ತರವಾಗಿ ಪ್ರೀತಿಸುತ್ತೇನೆ’ – ಪ್ರತಿಯೊಬ್ಬ ಅರಸನೂ ಉತ್ತರಿಸಿದ.
`ಮತ್ತೆ ನಿಮ್ಮ ಸೈನಿಕರ ಬೆಲೆ ಎಷ್ಟು?’ – ಬುದ್ಧ ಪ್ರಶ್ನಿಸಿದ.
`ಬಹಳ ಅಮೂಲ್ಯ’ ಪ್ರತಿಯೊಬ್ಬ ದೊರೆಯೂ ಉತ್ತರಿಸಿದ; ’ನನ್ನ ಒಬ್ಬೊಬ್ಬ ಸೈನಿಕನ ಪ್ರಾಣವೂ, ರಕ್ತವೂ ಬಹಳ ಅಮೂಲ್ಯ.’
ಆಗ ಬುದ್ಧ ಹೇಳಿದ: ’ಅವಿವೇಕಿಗಳಾದ ಅರಸರೇ, ನಿಮ್ಮನ್ನು ನೀವೇ ನಾಶಮಾಡಿಕೊಳ್ಳಲು ಏಕೆ ಸಿದ್ಧರಾಗಿರುವಿರಿ? ನಿಮಗೆ ಪ್ರಾಣಪ್ರಿಯರಾದ ರಾಣಿಯರನ್ನು ಮತ್ತು ಸೈನಿಕರನ್ನು ನಾಶಮಾಡಿಕೊಳ್ಳಲು ಏಕೆ ಸಿದ್ಧವಾಗಿ ನಿಂತಿರುವಿರಿ? ಸಮುದ್ರದೊಳಗೆ ಸೇರಿಹೋಗಲಿರುವ ಈ ಅಲ್ಪ ನೀರಿಗಾಗಿ ರಕ್ತದ ನದಿಯನ್ನೇ ಹರಿಸುವುದಕ್ಕಿಂತ ಶಾಂತಿಯು ಉತ್ತಮವಲ್ಲವೇನು?’
ಪೂಜ್ಯರ ಮಾತುಗಳನ್ನು ಆಲಿಸುತ್ತಿದ್ದಂತೆ ಅರಸರ ಕೈಯಲ್ಲಿದ್ದ ಆಯುಧಗಳು ನೆಲಕ್ಕೆ ಬಿದ್ದವು. ಅವರು ಪರಸ್ಪರರನ್ನು ಸಂಧಿಸಿ ತಮ್ಮ ವ್ಯಾಜ್ಯಗಳನ್ನು ಸ್ನೇಹದಿಂದ ಪರಿಹರಿಸಿಕೊಂಡು ಶಾಂತಿಯನ್ನು ಸ್ಥಾಪಿಸಿದರು.
ಈ ದೃಷ್ಟಿಯಿಂದಲೇ “ಹೋರಾಟವಲ್ಲ ಸೌಹಾರ್ದ, ವಿನಾಶವಲ್ಲ ಸ್ವೀಕಾರ, ವೈಮನಸ್ಸಲ್ಲ ಸಾಮರಸ್ಯ ಮತ್ತು ಶಾಂತಿ” ಎಂಬುದಾಗಿ ಸ್ವಾಮಿ ವಿವೇಕಾನಂದರು ಹೇಳಿದ್ದುದು.
ಇದರರ್ಥ ನಾವು ಜೀವನದಲ್ಲಿ ಸಂಘರ್ಷ ನಡೆಸಲೇಬಾರದು, ಯುದ್ಧವನ್ನು ಮಾಡಲೇಬಾರದೆಂದಲ್ಲ. ಅನ್ಯಾಯವಾದಾಗ, ಜನರಿಗೆ ತೊಂದರೆಯಾದಾಗ ನಾವು ಹೋರಾಟವನ್ನು ನಡೆಸಲೇಬೇಕು. ’ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ’ – ಎಂಬ ಮನೋಭಾವನೆ ನಮ್ಮದಾಗಬೇಕು. ಮಿಸೈಲ್ಮ್ಯಾನ್ ಡಾ|| ಅಬ್ದುಲ್ ಕಲಾಂ ಹೇಳಿದ್ದರು – “ಯುದ್ಧಕ್ಕೆ ಸಿದ್ಧವಿರಿ; ಆದರೆ ಶಾಂತಿಗಾಗಿ ದುಡಿಯಿರಿ.”
ನಾವು ಹೋರಾಟವನ್ನು ಸಮಚಿತ್ತದಿಂದ ಮಾಡಬೇಕು. ಅಹಂಕಾರವನ್ನು ಮೆರೆಸಲು, ಅಧಿಕಾರವನ್ನು ಪಡೆಯಲು, ಯಾವುದೋ ದ್ವೇ?ಸಾಧಿಸಲು, ವೈಯಕ್ತಿಕ ಸ್ವಾರ್ಥಕ್ಕಾಗಿ ಸಂಘರ್ಷ ನಡೆಸಬಾರದು. ’ಬಹುಜನಹಿತಾಯ, ಬಹುಜನ ಸುಖಾಯ ಚ’ ಎಂಬ ದೃಷ್ಟಿಕೋನದಲ್ಲಿ ಹೋರಾಟ ಮಾಡಬೇಕು.
ದಾರ್ಶನಿಕರ ಬೋಧೆಗಳು
ಬಾಹ್ಯಯುದ್ಧದಂತೆ ನಮ್ಮ ಮನಸ್ಸಿನೊಳಗೂ ನಿರಂತರವಾಗಿ ಯುದ್ಧ ನಡೆಯುತ್ತಿರುತ್ತದೆ. ಮನಸ್ಸೆಂಬುದು ಸದಾ ಗೊಂದಲದ ಗೂಡು.
ಡಿ.ವಿ.ಜಿ. ಹೇಳುತ್ತಾರೆ:
ದೇವದಾನವರ ರಣರಂಗ ಮಾನವಹೃದಯ |
ಭಾವ ರಾಗ ಹಠಂಗಳವರ ಸೇನೆಗಳು ||
ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು |
ಜೀವಾಮೃತವನವರು – ಮಂಕುತಿಮ್ಮ ||
(ಕಗ್ಗ, ೧೯೨)
ಮನುಷ್ಯನ ಹೃದಯದಲ್ಲಿ ದೇವತೆಗಳಿಗೂ ರಾಕ್ಷಸರಿಗೂ ಯುದ್ಧ ನಡೆಯುತ್ತಿರುತ್ತವೆ. ಅರ್ಥಾತ್ ಒಳ್ಳೆಯದಕ್ಕೂ ಮತ್ತು ಕೆಟ್ಟದ್ದಕ್ಕೂ ಜಗಳ ಅವನ ಹೃದಯದಲ್ಲಿ ನಡೆಯುತ್ತಿರುತ್ತದೆ. ಭಾವ, ರಾಗ ಮತ್ತು ಹಠಗಳೇ ಅವನ ಸೈನ್ಯಗಳು. ಈ ಭೂಮಿಯ ವೈಭವದ ಮತ್ತು ವಿಜಯಗಳ ಭ್ರಾಂತಿಯಲ್ಲಿ, ಜೀವನದ ಅಮೃತವನ್ನು (ಆನಂದವನ್ನು) ಅವನು ಮರೆಯುತ್ತಾನೆ.
ರಣರಂಗಕ್ಕೆ ಬಂದಾಗ ಅರ್ಜುನನ ಮನಸ್ಸು ಗೊಂದಲದ ಗೂಡಾಗಿತ್ತು. ಇಂತಹ ಸಂದರ್ಭದಲ್ಲಿಯೇ ಶ್ರೀಕೃಷ್ಣ ಅರ್ಜುನನಿಗೆ ಭಗವದ್ಗೀತೆ ಉಪದೇಶಿಸಿದ್ದು. ಗೀತೆಯ ಉಪದೇಶವಾಗಿರುವುದು ಅರಣ್ಯದಲ್ಲಿ ಅಲ್ಲ, ಬದಲಿಗೆ ಯುದ್ಧಭೂಮಿಯಲ್ಲಿ. ರಣಕ್ಷೇತ್ರದಲ್ಲಿರುವ ಒಬ್ಬ ಮಹಾಯೋಧನನ್ನು ಕುರಿತು ಸಂಪೂರ್ಣ ಗೀತೋಪದೇಶ ನಡೆಯುತ್ತದೆ. ಯುದ್ಧವನ್ನು ಮಾಡುವಾಗಲೂ ದ್ವೇಷಸೂಯೆಗಳಿಂದಲ್ಲ, ಬದಲಿಗೆ ಕರ್ತವ್ಯದ ದೃಷ್ಟಿಯಿಂದ ಮಾಡಬೇಕು. ನಮ್ಮ ಪಾಲಿಗೆ ಬಂದ ಕರ್ತವ್ಯವನ್ನು ಪ್ರಾಮಾಣಿಕತೆಯಿಂದ, ನಿರ್ಲಿಪ್ತತೆಯಿಂದ, ಸ್ಥಿತಪ್ರಜ್ಞೆಯಿಂದ ಮಾಡಿದಾಗಲೇ ನಮಗೆ ಶಾಂತಿ ದೊರಕುತ್ತದೆ. ಹೀಗೆ ಬಾಹ್ಯದಲ್ಲಾಗಲಿ, ಆಂತರ್ಯದಲ್ಲಾಗಲಿ ಸಂಘರ್ಷ ನಡೆಯುತ್ತಿರುವಾಗ ಮನಸ್ಸನ್ನು ಸಮಸ್ಥಿತಿಯಲ್ಲಿಡಬೇಕು – ಎಂದು ಇಡೀ ಮನುಕುಲಕ್ಕೆ ಶ್ರೀಕೃಷ್ಣ ಬೋಧಿಸಿದ.
ಚೀನಾದ ಶ್ರೇಷ್ಠ ಚಿಂತಕ ಚು ಅಂಗ್ ತ್ಸು ಹೇಳುವಂತೆ ’ಪರಿಪೂರ್ಣ ವ್ಯಕ್ತಿಯು ತನ್ನ ಮನಸ್ಸನ್ನು ಕನ್ನಡಿಯಂತೆ ಬಳಸಿಕೊಳ್ಳುತ್ತಾನೆ. ಕನ್ನಡಿ ಯಾವುದನ್ನೂ ತನಗಾಗಿ ಇಟ್ಟುಕೊಳ್ಳುವುದಿಲ್ಲ. ಅದು ಎಲ್ಲವನ್ನೂ ಸ್ವೀಕರಿಸಿ ಪ್ರತಿಫಲಿಸುತ್ತದೆ. ಅದೇ ರೀತಿ ಲೌಕಿಕಜೀವನ ಸಾಗಿಸುವಾಗ ಸೋಲು-ಗೆಲವು, ಸುಖ-ದುಃಖ, ಮಾನ-ಅಪಮಾನ ಎಲ್ಲವನ್ನೂ ಸ್ವೀಕರಿಸಬೇಕು. ಆದರೆ ಯಾವುದನ್ನೂ ನಾವು ಇಟ್ಟುಕೊಳ್ಳಬಾರದು. ಆಗಲೇ ಮನಸ್ಸು ಸ್ವಚ್ಛವಾಗಿರುತ್ತದೆ.’ ಕೊಳಕಾಗಿರುವ ಕನ್ನಡಿಯಲ್ಲಿ ಮುಖ ನೋಡಿಕೊಳ್ಳಲಾಗುವುದಿಲ್ಲ. ನಮ್ಮ ಮುಖ ಕಾಣಬೇಕಾದರೆ ಕನ್ನಡಿಯನ್ನು ಸ್ವಚ್ಛಗೊಳಿಸಬೇಕು. ಅದೇ ರೀತಿ ಚಿತ್ತಶುದ್ಧಿಯಿಲ್ಲದಿದ್ದರೆ ನಮ್ಮ ಅಂತರಂಗವನ್ನು ನಾವು ನೋಡಲಾಗುವುದಿಲ್ಲ. ಮನಸ್ಸಿನಲ್ಲಿ ವಿ?ಯಾಸಕ್ತಿಗಳ ಕೊಳೆ ತುಂಬಿದಾಗ ನಾವು ಅದರ ಬಗೆಗೇ ಚಿಂತಿಸುತ್ತೇವೆ.
ಯೂರೋಪ್ ದೇಶದ ಅಥೆನ್ಸ್ ಪಟ್ಟಣದಲ್ಲಿ ಡೈಯೋಜಿನೀಸ್ ಎಂಬ ಹೆಸರಿನ ಶ್ರೇಷ್ಠ ತತ್ತ್ವಜ್ಞಾನಿ ಇದ್ದ. ಮರ್ಯಾದೆಗಾಗಿ ಮೈಮೇಲೆ ಒಂದು ತುಂಡು ಬಟ್ಟೆ, ಒಂದು ಕೈಯಲ್ಲಿ ಕೋಲು, ಇನ್ನೊಂದು ಕೈಯಲ್ಲಿ ಕಂದೀಲು, ಜೊತೆಯಲ್ಲಿ ಒಂದು ನಾಯಿ – ಇಷ್ಟೆ ಅವನ ಆಸ್ತಿ. ಮರದಡಿಯಲ್ಲಿ ವಾಸ. ನೆಲವೇ ಹಾಸಿಗೆ, ಮುಗಿಲೇ ಹೊದಿಕೆ. ಸ್ವಾತ್ಮಾನಂದರಿಗೆ ಇನ್ನೇನು ಬೇಕು? ಕೋಲು ನಂಬುಗೆಯ ಸಂಕೇತವಾದರೆ, ಕಂದೀಲು ಜ್ಞಾನದ ಸಂಕೇತವಾಗಿತ್ತು. ನಾಯಿ ಸ್ನೇಹದ ಸಂಕೇತವಾಗಿತ್ತು.
ಒಂದು ದಿನ ಡೈಯೋಜಿನೀಸನು ಹಗಲುಹೊತ್ತಿನಲ್ಲಿಯೇ ಕೈಯಲ್ಲಿ ಕಂದೀಲು ಹಿಡಿದು ಊರಲ್ಲಿ ನಡೆದಿದ್ದ. ನಾಯಿಯು ಅವನನ್ನು ಹಿಂಬಾಲಿಸುತ್ತಿತ್ತು. ಯಾರೋ ಕೇಳಿದರು, “ಮಹಾನುಭಾವರೇ, ಇಂಥ ಹಗಲುಹೊತ್ತಿನಲ್ಲಿಯೂ ಕೈಯಲ್ಲಿ ಕಂದೀಲು ಹಿಡಿದು ಏನನ್ನು ಹುಡುಕುತ್ತ ಹೊರಟಿದ್ದೀರಿ?”
ಅದಕ್ಕೆ ಡೈಯೋಜಿನೀಸ್ ಹೇಳಿದ: “ಆಶೆ ಆಮಿಷ ದ್ವೇಷಾಸೂಯೆಗಳಿಲ್ಲದೆ ಶಾಂತಿ ಸಮಾಧಾನದಿಂದಿರುವ ಒಬ್ಬನೇ ಒಬ್ಬ ವ್ಯಕ್ತಿ ಎಲ್ಲಿಯಾದರೂ ಇರುವನೋ ಹೇಗೆ ಎಂದು ಹುಡುಕುತ್ತಿದ್ದೇನೆ.”
ಜನರು ಕೇಳಿದರು, “ಅಂಥ ಪುಣ್ಯಪುರುಷರು, ಶಾಂತಿಪ್ರಿಯರು ಯಾರಾದರೂ ದೊರೆತರೆ?”
ಡಯೋಜಿನೀಸ್ ಹೇಳಿದ: “ಈ ನಾಯಿ ಒಂದನ್ನು ಬಿಟ್ಟರೆ ಯಾರೂ ದೊರೆಯಲಿಲ್ಲ. ಈ ನಾಯಿ ನನ್ನೊಂದಿಗೆ ಹತ್ತಾರು ವರ್ಷಗಳಿಂದಲೂ ಇದೆ. ನನ್ನ ಜೊತೆ ಒಂದೆರಡು ತುಣುಕು ರೊಟ್ಟಿ ತಿನ್ನುತ್ತದೆ. ಒಂದೇ ಒಂದು ದಿನ ನನ್ನೊಂದಿಗೆ ಏನಾದರೂ ಬೇಕೆಂದು ತಕರಾರು ಮಾಡಿಲ್ಲ, ಜಗಳ ಮಾಡಿಲ್ಲ.”
ಶಾಂತಿಮೂಲ
ಮನುಷ್ಯ ವಿಷಯಾಸಕ್ತಿಯ ಹಿಂದೆಬಿದ್ದು ತನ್ನ ಶಾಂತಿಯನ್ನು ಹೇಗೆ ಕಳೆದುಕೊಳ್ಳುತ್ತಾನೆ ಎನ್ನುವುದಕ್ಕೆ ಶ್ರೀರಾಮಕೃಷ್ಣ ಪರಮಹಂಸರು ಒಂದು ಒಳ್ಳೆಯ ಉದಾಹರಣೆ ಕೊಡುತ್ತಾರೆ.
ಒಂದು ಊರಿನಲ್ಲಿ ಬೆಸ್ತನೊಬ್ಬ ಮೀನನ್ನು ಹಿಡಿಯುತ್ತಿದ್ದ. ಹದ್ದೊಂದು ಹಾರಿ ಬಂದು ಒಂದು ಮೀನನ್ನು ಕಚ್ಚಿಕೊಂಡಿತು. ಮೀನನ್ನು ಕಂಡ ಕೂಡಲೇ ನೂರಾರು ಕಾಗೆಗಳು ಅದನ್ನು ಕಸಿದುಕೊಳ್ಳುವುದಕ್ಕಾಗಿ ಕೂಗಾಟವೆಬ್ಬಿಸಿದವು. ಹದ್ದು ಯಾವ ಕಡೆಗೆ ಹೋದರೂ ಕಾಗೆಗಳು ಅದನ್ನು ಹಿಂಬಾಲಿಸಿದವು. ಹದ್ದು ದಕ್ಷಿಣಕ್ಕೆ ಹಾರಿತು. ಕಾಗೆಗಳು ಅಲ್ಲಿಗೂ ಹೋದವು. ಹದ್ದು ಉತ್ತರಕ್ಕೆ ಹಾರಿದರೂ ಕಾಗೆಗಳು ಅದನ್ನು ಹಿಂಬಾಲಿಸಿದವು. ಹದ್ದು ಪೂರ್ವಕ್ಕೆ ಮತ್ತೆ ಪಶ್ಚಿಮಕ್ಕೆ ಹಾರಿತು. ಅಲ್ಲಿಯೂ ಅದನ್ನು ಬಿಡಲಿಲ್ಲ. ಗಾಬರಿಯಿಂದ ಹದ್ದು ಹಾರಾಡುತ್ತಿರುವಾಗ ಅದು ಕಚ್ಚಿಕೊಂಡಿದ್ದ ಮೀನು ಕೆಳಗೆ ಬಿತ್ತು. ಈಗ ಕಾಗೆಗಳು ಹದ್ದನ್ನು ಹಾಗೆಯೇ ಬಿಟ್ಟು ಮೀನನ್ನು ಹಿಂಬಾಲಿಸಿದವು. ಈ ಗೊಂದಲದಿಂದ ಪಾರಾದ ಮೇಲೆ ಹದ್ದು ಒಂದು ಮರದ ಮೇಲೆ ಕುಳಿತುಕೊಂಡು, ’ಅನಿಷ್ಟ ಮೀನೇ ಇದಕ್ಕೆಲ್ಲ ಕಾರಣ. ಅದನ್ನು ಈಗ ಎಸೆದಿರುವೆ. ಈಗ ನನಗೆ ಶಾಂತಿ’ ಎಂದು ಯೋಚಿಸಿತು.
ಎಲ್ಲಿಯವರೆಗೆ ಒಬ್ಬನಲ್ಲಿ ಪ್ರಾಪಂಚಿಕ ಆಸೆ ಆಕಾಂಕ್ಷೆಗಳು ಇರುತ್ತವೆಯೋ ಅಲ್ಲಿಯವರೆಗೆ ಅವನಿಗೆ ತೊಂದರೆ ತಾಪತ್ರಯಗಳು ತಪ್ಪಿದ್ದಲ್ಲ. ಯಾವಾಗ ಅವನು ಅದನ್ನು ತ್ಯಜಿಸುವನೋ ಆಗ ಗಲಿಬಿಲಿಯೆಲ್ಲ ಹೋಗಿ ಪ್ರಶಾಂತಿಯನ್ನು ಅನುಭವಿಸುವನು.
ಇಂದು ಮನುಷ್ಯ ವಿಮಾನವನ್ನು ಕಂಡುಹಿಡಿದು ಆಕಾಶದಲ್ಲಿ ಪಯಣಿಸಲು ಕಲಿತಿದ್ದಾನೆ. ಸಮುದ್ರದೊಳಗೆ ಸಬ್ಮೆರಿನ್ನಲ್ಲಿ ಹೋಗಲು ಕಲಿತಿದ್ದಾನೆ. ನಾವು ಚಂದ್ರನನ್ನು, ಮಂಗಳಗ್ರಹವನ್ನು ತಲಪಿದ್ದೇವೆ. ಮಾರಕ ರೋಗಗಳನ್ನು ನಿವಾರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಬೆರಗುಗೊಳಿಸುವಂತಹ ಸಂಶೋಧನೆಗಳನ್ನು ಮಾಡಿ ಹಲವಾರು ಭೋಗವಸ್ತುಗಳನ್ನು ಕಂಡುಹಿಡಿದಿದ್ದೇವೆ. ಎಲ್ಲವನ್ನೂ ಕಂಡುಕೊಂಡ ಮನುಷ್ಯ ಶಾಂತಿಯ ಸಂಶೋಧನೆಯಲ್ಲಿ ವಿಫಲನಾದ. ಭೋಗವಸ್ತುಗಳ ಕ್ಷಣಿಕಸುಖದ ಹಿಂದೆಬಿದ್ದು ಶಾಶ್ವತಶಾಂತಿಯನ್ನು ಪಡೆಯುವುದರಲ್ಲಿ ಎಡವಿದ.
ಸ್ವಪ್ರಯತ್ನ ಅವಶ್ಯ
ವಿಜ್ಞಾನವು ಬಾಹ್ಯಸಂಶೋಧನೆಯಲ್ಲಿ ನಿರತವಾದರೆ, ಅಧ್ಯಾತ್ಮವೆಂಬುದು ಆಂತರ್ಯದ ಶೋಧನೆಯಲ್ಲಿ ನಿರತವಾಗಿದೆ. ಶಾಂತಿ ಸಿಗಬೇಕಾದರೆ ಬಾಹ್ಯ ಹುಡುಕಾಟದಿಂದ ಸಾಧ್ಯವಿಲ್ಲ. ಅದನ್ನು ಗಳಿಸಬೇಕಾದರೆ ನಮ್ಮ ಅಂತರಂಗದೊಳಗೆ ಇಳಿಯಬೇಕು. ಇಂಗ್ಲಿಷಿನಲ್ಲಿ ಒಂದು ಮಾತಿದೆ – ‘Nothing can bring peace but yourself’ ಎಂದು. ನಮಗೆ ಶಾಂತಿ ಬೇಕಿದ್ದರೆ ನಾವೇ ತಂದುಕೊಳ್ಳಬೇಕು, ಬೇರಾವುದೂ ಅದನ್ನು ತಂದುಕೊಡಲಾರದು.
ಮಹಾತ್ಮರಾಗಲಿ, ಗುರುಗಳಾಗಲಿ ನಮಗೆ ಶಾಂತಿ ಪಡೆಯಲು ಮಾರ್ಗದರ್ಶಕರಾಗಬಹುದು. ಗುರು ಗುರಿಯನ್ನೂ ದಾರಿಯನ್ನೂ ತೋರಿಸುತ್ತಾನೆ. ಆದರೆ ಆ ದಾರಿಯಲ್ಲಿ ನಮ್ಮ ಪ್ರಯತ್ನದಿಂದ ಕ್ರಮಿಸಿ ಶಾಂತಿಯ ಗುರಿಯನ್ನು ನಾವೇ ತಲಪಬೇಕು. ಉದ್ಧವನು ಶ್ರೀಕೃ?ನ ಪ್ರೀತಿಪಾತ್ರನಾದ ಗೆಳೆಯನಾದರೂ ಕೃಷ್ಣನು ಅವನಿಗೆ “ಯಾವ ಆಧ್ಯಾತ್ಮಿಕ ಸತ್ಯವನ್ನಾದರೂ ಸರಿಯಾಗಿ ಸಾಕ್ಷಾತ್ಕರಿಸಿಕೊಳ್ಳಬೇಕಾದರೆ, ನೀನು ಹಿಮಾಲಯದ ಯಾವುದಾದರೂ ಏಕಾಂತ ಸ್ಥಳಕ್ಕೆ ಹೋಗಿ ತಪಸ್ಸು ಮಾಡಬೇಕು. ನಿನಗೆ ಬೇಕಾದರೆ ನಾನು ಕೆಲವು ಅದ್ಭುತ ದರ್ಶನಗಳನ್ನು ಕೊಡಬಲ್ಲೆ. ಆದರೆ ಅದು ಸಾಕಾಗದು. ಅದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನಮಾಡುವುದು ಅದಕ್ಕಿಂತಲೂ ಉನ್ನತವಾದುದು” ಎಂದು ಹೇಳಿದನು. ಗುರಿ ಗೊತ್ತಿದ್ದರೂ, ದಾರಿ ತಿಳಿದಿದ್ದರೂ ಸತ್ಯದ ಸಾಕ್ಷಾತ್ಕಾರವಾಗಬೇಕಾದರೆ, ಶಾಂತಿಯ ಸಾಕಾರವಾಗಬೇಕಾದರೆ ನಾವೇ ಪ್ರಯತ್ನಿಸಬೇಕು.
ಕೆಲವು ವರ್ಷಗಳ ಹಿಂದೆ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಬುದ್ಧನ ಜೀವನವನ್ನು, ತತ್ತ್ವಗಳನ್ನು ಆಳವಾಗಿ ಅಧ್ಯಯನ ಮಾಡಿದರು. ಬುದ್ಧನ ಸಂದೇಶವನ್ನು ಬಹಳ ಸರಳವಾಗಿ ಹಾಗೂ ಸುಂದರವಾಗಿ ಜನಸಾಮಾನ್ಯರಿಗೆ ತಿಳಿಸುವುದರಲ್ಲಿ ಅವರು ಎತ್ತಿದ ಕೈ. ಸಂತರೊಬ್ಬರು ಅವರನ್ನು ಕೇಳಿದರು: “ನೀವು ಬುದ್ಧನ ಬಗ್ಗೆ ಅಧಿಕೃತವಾಗಿ ಮಾತನಾಡುವಷ್ಟು ಬುದ್ಧನನ್ನು ತಿಳಿದುಕೊಂಡಿದ್ದೀರಿ. ಆದರೆ ಬುದ್ಧ ಪಡೆದ ಶಾಂತಿಯನ್ನು ನೀವು ನಿಮ್ಮ ಜೀವನದಲ್ಲಿ ಪಡೆದಿದ್ದೀರಾ?” ಅದಕ್ಕೆ ಆ ಪ್ರೊಫೆsಸರ್ ಹೇಳಿದರು: “ಇಲ್ಲ, ಬುದ್ಧನ ವಿಚಾರವನ್ನು ತಿಳಿದುಕೊಂಡೆ. ಆದರೆ ಆತ ಪಡೆದ ಶಾಂತಿಯನ್ನು ನಾನಿನ್ನೂ ಪಡೆದಿಲ್ಲ.”
ಅನುಭಾವ ಶ್ರೇಷ್ಠತೆ
ಬೆಲ್ಲವನ್ನು ನೋಡುವುದು ಮಾತ್ರವಲ್ಲ, ತಿಳಿದುಕೊಳ್ಳುವುದು ಮಾತ್ರವಲ್ಲ, ಅದರ ಸವಿಯನ್ನು ಆಸ್ವಾದಿಸಿದಾಗ ಮಾತ್ರ ಬೆಲ್ಲವನ್ನು ಸಮಗ್ರವಾಗಿ ತಿಳಿದುಕೊಂಡ ಹಾಗಾಗುತ್ತದೆ. ಆದ್ದರಿಂದಲೇ ಈ ದೇಶದಲ್ಲಿ ಜ್ಞಾನಿಗಿಂತ ಅನುಭಾವಿಗೆ ಹೆಚ್ಚು ಪ್ರಾಮುಖ್ಯ ಕೊಟ್ಟಿದ್ದಾರೆ.
ಚೀನಾದೇಶದಲ್ಲಿ ಓರ್ವ ಪಂಡಿತನಿದ್ದ. ಆತ ಸಕಲ ಶಾಸ್ತ್ರಗಳನ್ನು ಓದಿ ಮುಖೋದ್ಗತ ಮಾಡಿಕೊಂಡಿದ್ದ. ದೇಶದಲ್ಲಿಯೇ ಶ್ರೇಷ್ಠ ಪಂಡಿತನೆಂಬ ಖ್ಯಾತಿ ಗಳಿಸಿದ್ದ. ಆದರೆ ಆತನಿಗೆ ಆಂತರಿಕ ಶಾಂತಿ ಸಮಾಧಾನ ಲಭಿಸಿರಲಿಲ್ಲ. ಒಮ್ಮೆ ಕುದುರೆಯ ಮೇಲೆ ತನ್ನ ಎಲ್ಲ ಗ್ರಂಥಗಳನ್ನು ಹೇರಿಕೊಂಡು ಶಾಂತಿಯನ್ನು ಹುಡುಕಲು ಹೊರಟ. ಆದರೆ ಎಲ್ಲಿಗೆ ಹೋಗುವುದೆಂದು ತಿಳಿದಿರಲಿಲ್ಲ. ಒಂದು ಕ್ಷಣ ಕುದುರೆಯ ಮುಂದೆ ಮೌನವಾಗಿ ನಿಂತ. ಕುದುರೆಯೇ ಹೇಳಿತು – “ನೀನೇಕೆ ಚಿಂತಿಸುತ್ತಿರುವೆ, ಹತ್ತು ನನ್ನ ಮೇಲೆ. ನಿನ್ನನ್ನು ನೆಮ್ಮದಿಯ ನೆಲೆಗೆ ಕೊಂಡೊಯ್ಯುತ್ತೇನೆ!” ಚಕಿತನಾದ ಪಂಡಿತ ಮರುಮಾತಾಡದೆ ಕುದುರೆಯನ್ನೇರಿದ. ಕುದುರೆಯು ನೇರವಾಗಿ ಸಂತ ಮಾವೋ-ತ್ಸೆಯ ಬಳಿ ಬಂದು ನಿಂತಿತು. ಪಂಡಿತನು ಸಂತನಿಗೆ ತನ್ನ ಅಳಲನ್ನು ತೋಡಿಕೊಂಡ. “ಸಂತರೇ, ನಾನು ಓದದೇ ಇರುವ ಒಂದೂ ಗ್ರಂಥವಿಲ್ಲ. ಕೇಳದೇ ಇರುವ ಒಂದೂ ಶಾಸ್ತ್ರವಿಲ್ಲ. ಆದರೂ ನನಗೆ ಆಂತರಿಕ ಶಾಂತಿ ಇಲ್ಲ. ನಿಜವಾಗಿಯೂ ನಾನಾರು ಎಂಬುದೇ ತಿಳಿಯದಾಗಿದೆ.”
ಸಂತ ಹೇಳಿದ – “ನೀನಾರು ಎಂಬುದನ್ನು ನೀನು ಕುದುರೆಗೆ ಹೇರಿದ ಪುಸ್ತಕದ ಗಂಟೇ ಹೇಳುತ್ತದೆ. ನೀನೊಬ್ಬ ಮಹಾಪಂಡಿತ!”
“ಆದರೂ ನನಗೆ ಶಾಂತಿ, ಸಮಾಧಾನ ದೊರೆಯಲಿಲ್ಲ. ಅದಕ್ಕೇನು ಮಾಡಲಿ?”
“ಏನೂ ಮಾಡಬೇಡ. ಮೊದಲು ಆ ಪುಸ್ತಕದ ಗಂಟು ಹೊಳೆಗೆ ಚೆಲ್ಲಿ ಬಾ.”
ಪಂಡಿತನಿಗೆ ಒಂದುಕ್ಷಣ ಏನೂ ತೋಚಲಿಲ್ಲ. ಮರುಕ್ಷಣವೇ ಸಾವರಿಸಿಕೊಂಡ ಪಂಡಿತ ತನ್ನ ವಿದ್ಯಾಮದವನ್ನು ತೊರೆದು ಆ ಮಹಾಗುರುವಿಗೆ ಶರಣಾಗತನಾಗಿ ಪರಮಶಾಂತಿಯನ್ನು ಅನುಭವಿಸಿದ. ಅಂತಹ ಸದ್ಗುರುಗಳ, ಅನುಭಾವಿಗಳ ಅಮೃತವಾಣಿಯನ್ನು ಕೇಳುವುದರಿಂದ ಶಾಂತಿ ದೊರಕುತ್ತದೆ.
ವಾಸ್ತವವಾಗಿ ವಿದ್ಯಾಮದದಂತೆ ಉಳಿದೆಲ್ಲ ಮದವೂ ಅಶಾಂತಿಯನ್ನೇ ಉಂಟುಮಾಡುತ್ತವೆ. ಅಹಂಕಾರ, ಅಶಾಂತಿ ಇವು ಒಂದೇ ನಾಣ್ಯದ ಎರಡು ಮುಖಗಳು. ಆದ್ದರಿಂದ ಶಾಂತಿ ಪಡೆಯಬೇಕಾದರೆ ನಿರಹಂಕಾರವಿರಬೇಕೆನ್ನುವುದು ಮೊದಲನೆಯ ?ರತ್ತು. ಸಂಸಾರ ಮತ್ತು ಸಮಾಜ, ಲೌಕಿಕತೆ ಮತ್ತು ಪಾರಲೌಕಿಕತೆ ಎರಡನ್ನೂ ಸಮದೂಗಿಸಿಕೊಂಡು ಹೋಗುವುದರಲ್ಲೇ ಶಾಂತಿಯ ರಹಸ್ಯ ಅಡಗಿದೆ.
ನಾಲ್ಕುಜನ ರಾಜಪುತ್ರರು ಮಹಾತ್ಮರನ್ನು ಹುಡುಕಿಕೊಂಡು ಹೊರಟರು. ಬಹುದೂರ ಸಾಗಿ ಹಿಮದ ಬೆಟ್ಟ ಸಮೀಪಿಸಿದರು. ಆ ಬೆಟ್ಟದಡಿ ಓರ್ವ ಮಹಾತ್ಮರು ಇರುವರೆಂದು ಅವರು ಕೇಳಿದ್ದರು. ದಾರಿಮಧ್ಯೆ ಒಂದು ಹೊಳೆ ಹರಿಯುತ್ತಿತ್ತು. ಅಲ್ಲೊಬ್ಬ ನಾವಿಕ ಮುದುಕ ಸಂತಸದಿಂದ ಇವರನ್ನು ಸ್ವಾಗತಿಸಿದ. “ತಾವು ಯಾರು? ಎಲ್ಲಿಗೆ ಹೊರಟಿರುವಿರಿ?” ಎಂದು ನಾವಿಕ ಕೇಳಿದ. “ನಾವು ರಾಜಪುತ್ರರು. ಇಲ್ಲಿ ಒಬ್ಬ iಹಾತ್ಮರಿರುವರಂತೆ. ಅವರಿಂದ ’ಶಾಂತಿಪಥ’ ತಿಳಿಯಲು ಬಂದೆವು” ಎಂದರು ಯುವಕರು. ಮುದುಕ ಮುಗುಳ್ನಕ್ಕ. ಅವರನ್ನು ನಾವೆಯಲ್ಲಿ ಕೂಡಿಸಿಕೊಂಡು ಆಚೆಯ ದಡದಲ್ಲಿ ಇಳಿಸಿ ಹೇಳಿದ, “ಇಲ್ಲೇ ಸಮೀಪದಲ್ಲಿ ಆ ಮಹಾತ್ಮರಿದ್ದಾರೆ; ದರ್ಶನ ಪಡೆಯಿರಿ.”
ಆಗಲೇ ಸಂಜೆಯಾಗಿತ್ತು. ಯುವಕರು ಮಹಾತ್ಮರ ಬಳಿಗೆ ಧಾವಿಸಿದರು. ಅವರನ್ನು ಕಂಡು ವಂದಿಸಿದರು. ಮಹಾತ್ಮರು ಕೇಳಿದರು – “ಇಷ್ಟು ದೂರ ಬಂದ ಕಾರಣ?”
“ತಾವು ಮಹಾತ್ಮರು. ತಮ್ಮಿಂದ ಶಾಂತಿಪಥವನ್ನು ತಿಳಿಯಲು ಬಂದೆವು” ಎಂದರು ಯುವಕರು.
“ಸರಿ, ನಿಮಗೆ ಶಾಂತಿಪಥವನ್ನು ತಿಳಿಯಬೇಕಾದರೆ ಆ ನಾವಿಕಮುದುಕನ ಬಳಿಗೆ ಹೋಗಿರಿ” ಎಂದು ಮಹಾತ್ಮರು ಆದೇಶಿಸಿದರು.
ಯುವಕರಿಗೆ ಪರಮಾಶ್ಚರ್ಯ! ತಪಸ್ಸು, ಧ್ಯಾನ, ಚಿಂತನೆ ಏನೊಂದೂ ಇಲ್ಲದ ಮುದುಕ ಆ ನಾವಿಕ. ಅವನಿಂದ ಮಾರ್ಗದರ್ಶನ ಪಡೆಯಲು, ಅವನನ್ನು ಗುರುವೆಂದು ಸ್ವೀಕರಿಸಲು ಅವರ ಮನಸ್ಸು ಒಪ್ಪಲಿಲ್ಲ. ಆದರೆ ಮಹಾತ್ಮರ ಮಾತು ಮೀರುವುದೆಂತು?
ನಾವಿಕನು ಬೆಳದಿಂಗಳ ಬೆಳಕಿನಲ್ಲಿ ಆಚೆಯ ದಡದಲ್ಲಿ ಚಳಿ ಕಾಯಿಸುತ್ತಾ ಹಾಡಿಕೊಂಡಿದ್ದ. ಯುವಕರು ಅವನ ಬಳಿ ಸಾಗಿದರು.
“ಮತ್ತೇಕೆ ಇಲ್ಲಿಗೆ ಬಂದಿರಿ?” ಎಂದ ನಾವಿಕ.
“ಕ್ಷಮಿಸಿ, ನಾವು ಅರಿಯದೇ ಹೋದೆವು. ತಾವು ನಮಗೆ ದಯವಿಟ್ಟು ದಿವ್ಯ ಶಾಂತಿಪಥವನ್ನು ತೋರಬೇಕು” ಎಂದು ಯುವಕರು ವಿನಂತಿಸಿದರು. ಅವರ ಹಂಬಲ ಕಂಡು ಹರ್ಷಗೊಂಡು ಮುದುಕ ಮನದೆರೆದು ಮಾತನಾಡಿದ:
“ಜೀವನದ ಹೊಳೆಗೆ ಎರಡು ದಂಡೆ. ಒಂದು ಪ್ರಪಂಚ, ಇನ್ನೊಂದು ಪರಮಾರ್ಥ. ಎಲ್ಲಿದ್ದರೂ ನಾವು ನೆಮ್ಮದಿಯಿಂದ ಇರಬೇಕು. ಒಂದರಲ್ಲಿ ಇದ್ದು ಇನ್ನೊಂದನ್ನು ಚಿಂತಿಸಿದರೆ ಯಾವುದೂ ರುಚಿಸದು. ಎರಡನ್ನೂ ಸಮದೂಗಿಸಿಕೊಂಡು ಹೋಗುವುದರಲ್ಲಿಯೇ ಶಾಂತಿ ಸಮಾಧಾನವಿದೆ.”
ನಾವಿಕನು ನಿಜ ನುಡಿದನು. ಯುವಕರು ಚಂದಿರನ ಶೀತಲ ಕಿರಣಗಳಲ್ಲಿ ಶಾಂತಿಯ ಬೆಳಕನ್ನು ಕಂಡರು.
ಆದ್ದರಿಂದ ಶಾಂತಿಯನ್ನು ಪಡೆಯಲು ಜೀವನದಿಂದ ಪಲಾಯನ ಮಾಡಬೇಕಾಗಿಲ್ಲ. ನಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದಾಗ ಶಾಂತಿ ತಾನಾಗಿಯೇ ಲಭಿಸುತ್ತದೆ. ಕೆಸರಿನಲ್ಲಿದ್ದ ಕಮಲದಂತೆ ನಾವು ಜೀವನ ಸಾಗಿಸಿದರೆ, ಜಗತ್ತಿನ ಕೊಳಕು ನಮಗೆ ಅಂಟಿಕೊಳ್ಳುವುದಿಲ್ಲ. ಅಷ್ಟು ಮಾತ್ರವಲ್ಲ, ವಿಷಯಾಸಕ್ತಿಗಳ ನಡುವೆ ಕಮಲದಂತೆ ಇದ್ದರೆ ನಾವು ಶಾಂತಿ ಪಡೆಯುತ್ತೇವೆ. ಇತರರಿಗೂ ಶಾಂತಿ ನೀಡುತ್ತೇವೆ.
ತಮಗಾಗಿ ಬದುಕದೆ, ನೋಡುವ ಜನರಿಗಾಗಿ ಬದುಕುವ ಬದುಕಿನಲ್ಲಡಗಿದೆ ಅಶಾಂತಿ, ಅತೃಪ್ತಿ. ಆದರೆ ನಮಗಾಗಿ ಬದುಕದೆ ಸಮಾಜಕ್ಕಾಗಿ ಬದುಕುವುದರಲ್ಲೇ ಶಾಂತಿಯ ರಹಸ್ಯ ಅಡಗಿದೆ.