ಪಕ್ಕದ ಮನೆಯವರೊಡನೆ ಹರಟುತ್ತಾ ನಂದಿನಿ ಗೇಟಿನ ಬಳಿ ಮಗನಿಗಾಗಿ ಕಾಯುತ್ತಾ ನಿಂತಿದ್ದಳು. ನೋಡುನೋಡುತ್ತಲೇ ಹಳದಿಬಣ್ಣದ ಸ್ಕೂಲ್ಬಸ್ ಧೂಳೆಬ್ಬಿಸುತ್ತಾ ಬಂದೇಬಿಟ್ಟಿತು. ಪರೀಕ್ಷೆ ಮುಗಿದ ಸಂಭ್ರಮ ಎಳೆಯಮಕ್ಕಳ ಗದ್ದಲವೂ ಜೋರಾಗಿತ್ತು. ಬಿಳಿ-ನೀಲಿ ಚೌಕಡಿ ಶರ್ಟ್, ನೀಲಿ ಚಡ್ಡಿ, ಟೈ, ಬೂಟು, ಬೆನ್ನಿಗೆ ಬ್ಯಾಗು ಕೈಯಲ್ಲಿ ನೀರಿನ ಬಾಟಲ್ ಹಿಡಿದು ಇಳಿದ ಪುಟ್ಟ ಚಿನ್ನು. ಗುಂಗುರು ಕೂದಲು ಕೆದರಿದ್ದರಿಂದ ಬಲು ಮುದ್ದಾಗಿ ಕಾಣುತ್ತಿದ್ದ. ಬಸ್ಸಿನ ಕಡೆಯ ಮೆಟ್ಟಿಲಿನಿಂದ ಧೊಪ್ಪೆಂದು ಧುಮುಕಿ ಎಲ್ಲರಿಗೂ ಬಾಯ್ ಹೇಳುತ್ತಾ ಕೈ ಬೀಸಿದ.
“ಬಾಯ್ ಪ್ರಥಮ್!” ಎಲ್ಲರೂ ಒಕ್ಕೊರಲಿನಿಂದ ಅರಚುತ್ತಿರುವಾಗಲೇ ಬಸ್ ಹೊರಟಿತು. ಅಮ್ಮ ಮಗ ಇಬ್ಬರೂ ಗೇಟ್ ಹಾಕಿ ಒಳಗೆ ನಡೆದರು.
“ಅಮ್ಮ, ಏ ಅಮ್ಮ! ಎಕ್ಸಾಮ್ ಮುಗೀತು ಹೌದಿಲ್ಲೋ, ಅಜ್ಜಾನ ಊರೀಗೆ ಎಂದ್ ಹೋಗೂಣು? ರಾಕಿ ಮೂರ್ ಮರಿ ಹಾಕ್ಯದಂತಲ್ಲ. ನಾ ಅದರ್ ಜೋಡಿ ಆಡ್ಬೇಕು. ಅಮ್ಮ, ಅಮ್ಮ. ಪ್ಲೀಸ್ ನಾಳೇನೇ ಹೋಗೂಣೇನು?”
ಕೇಳುತ್ತಲೇ ಬೂಟು ಸಾಕ್ಸು ಬಿಚ್ಚಿ ಅದರ ಜಾಗದಲ್ಲಿಟ್ಟು ಅಮ್ಮನ ಉತ್ತರಕ್ಕೂ ಕಾಯದೆ ತನ್ನ ರೂಮಿಗೆ ಹೋಗಿ ಸ್ಕೂಲ್ಬ್ಯಾಗನ್ನು ಸರಿಯಾಗಿಟ್ಟು ಬಟ್ಟೆ ಬದಲಿಸಿ ಕೈ ಕಾಲು ಮುಖ ತೊಳೆದು ತನ್ನದೇ ಟವಲ್ನಿಂದ ಒರೆಸಿಕೊಂಡು ಶಿಸ್ತಾಗಿ ಡೈನಿಂಗ್ ಟೇಬಲ್ಗೆ ಬಂದು ಕುಳಿತ ಐದೂವರೆ ವ?ದ ಚಿನ್ನು ಹೆತ್ತವರ ಕಣ್ಮಣಿ. ಎಲ್ಲರೂ ಅವನನ್ನು ಮುದ್ದಿನಿಂದ ’ಚಿನ್ನು’ ಎಂದೇ ಕರೆಯುತ್ತಿದ್ದರು. ಗೂಗಲ್, ನೆಟ್ ಜಾಲಾಡಿ ಎಲ್ಲ ಹುಡುಕಿ ಹುಡುಕಿ ಆಸ್ಥೆಯಿಂದ ಹೆಕ್ಕಿ ತೆಗೆದು ಇಟ್ಟ ಹೆಸರು ’ಪ್ರಥಮ್’. ಒಂದುಸಲ ಹೇಳಿದರೆ ಅಥವಾ ಹೇಳಿಕೊಟ್ಟರೆ ಸಾಕು ನೆನಪಿನಲ್ಲಿಟ್ಟುಕೊಂಡು ಪ್ರತೀಸಲವೂ ಚಾಚೂತಪ್ಪದೇ ಪಾಲಿಸುತ್ತಿದ್ದ ವಿಧೇಯ ಬಾಲಕನಾದ್ದರಿಂದ ಎಲ್ಲರ ಅಚ್ಚುಮೆಚ್ಚಿನ ಕೂಸಾಗಿದ್ದ.
ಮಗನೆಡೆಗೆ ಹೆಮ್ಮೆಯಿಂದ ನೋಡುತ್ತಲೇ ಅವನಿಗಿ?ವಾದ ಹಕ್ಕಾ ನೂಡಲ್ಸ್ ತಿನ್ನಲು ಕೊಟ್ಟು ಪಕ್ಕದಲ್ಲೇ ಕುಳಿತಳು ನಂದಿನಿ. ವಾತ್ಸಲ್ಯದಿಂದ ಕೆದರಿದ ಗುಂಗುರುಕೂದಲನ್ನು ಸರಿಪಡಿಸುತ್ತಾ “ಚಿನ್ನು ಪುಟ್ಟಾ, ಎಗ್ಸಾಮ್ಸ್ ಹ್ಯಾಂಗ್ ಮಾಡೀಯೋ? ಎಲ್ಲಾ ಬರ್ದಾದ್ ಮ್ಯಾಲ ಸ್ಪೆಲ್ಲಿಂಗ್ಸ್ ಬರೋಬ್ಬರಿ ಚೆಕ್ ಮಾಡೀಯೇನ? ಛೊಲೋತ್ನಾಗಿ ಬರ್ದಿ ಹೌದಿಲ್ಲೊ?”
ಹೌದೆಂಬಂತೆ ತಲೆಯಾಡಿಸುತ್ತಲೇ ಪುಟ್ಟ ಬಾಯನ್ನು ಇಂಗ್ಲಿ? ’ಓ’ನಂತೆ ಗುಂಡಗೆ ಮಾಡಿ ನೂಡಲ್ಸ್ ಎಳೆಯನ್ನು ಸೊರ್ರೆಂದು ಎಳೆಯುತ್ತಾ ತಿನ್ನುವುದರಲ್ಲೇ ಮಗ್ನನಾಗಿದ್ದ ಮಗನ ಮುಖಭಾವ ಮಮತೆಯುಕ್ಕಿಸಿತು. ಮುದ್ದಿನಿಂದ “ನಮ್ ಚಿನ್ನು ಪುಟ್ಟ ಶಾಣ್ಯಾ ಅದಾನು. ಆತು, ನೀ ಹೇಳಿದ್ಹಾಂಗ ನಾಳೇನೇ ಅಜ್ಜಾನ್ ಊರೀಗ್ ಹೋಗೂಣು ಆತಿಲ್ಲೋ?”
ಸಂತಸದಿಂದ ಚಿನ್ನೂನ ಮುಖ ಊರಗಲವಾಯಿತು. ಮಗನಿಗೆ ಪರೀಕ್ಷೆಯಿತ್ತೆಂದು ನಂದಿನಿ ರಜೆಪಡೆದು ವಾರದ ಮೇಲಾಗಿತ್ತು. ಅತ್ತೆ ಶಾಂತವ್ವ ಸ್ವಲ್ಪ ದಿನ ಮಗಳ ಮನೆಯಲ್ಲಿ ಇದ್ದು ಬರುತ್ತೇನೆಂದು ಹೋಗಿದ್ದರು.
* * *
ನರೇಶ್ ಮತ್ತು ನಂದಿನಿ ಒಂದೇ ಬ್ಯಾಂಕಿನ ಸಹೋದ್ಯೋಗಿಗಳು. ಇಬ್ಬರದ್ದೂ ಒಂದೇ ಜಾತಿಯಾದ್ದರಿಂದ ಪ್ರೀತಿಸಿ ಮದುವೆಯಾಗುವಾಗ ಯಾವ ಅಡ್ಡಿ ಆತಂಕಗಳೂ ಎದುರಾಗಿರಲಿಲ್ಲ. ಒಂದೇ ಬ್ಯಾಂಕ್ ಆಗಿದ್ದರಿಂದ ವರ್ಗಾವಣೆಗೂ ತೊಂದರೆಯಿರದು ಎಂಬುದೂ ಪ್ರೀತಿಸಲು ಕಾರಣವಾಗಿತ್ತು. ಇನ್ನು ಸ್ವಂತ ಸೂರೊಂದನ್ನು ಹೊಂದುವ ತನಕ ಮಗು ಬೇಡವೆಂದೇ ತೀರ್ಮಾನಿಸಿದ್ದರು. ಅಂದುಕೊಂಡಂತೆ ಮದುವೆಯಾಗಿ ನಾಲ್ಕೇ ವ?ಗಳಲ್ಲಿ ಸ್ವಂತ ಫ್ಲ್ಯಾಟ್ ಹಾಗೂ ಕಾರಿನ ಮಾಲೀಕರೆನ್ನಿಸಿದ್ದರು. ಆನಂತರದಲ್ಲಿ ಪ್ಲಾನಿನಂತೆ ಹಡೆದ ಮಗುವೇ ’ಚಿನ್ನು’. ಎಲ್ಲವೂ ಅವರ ಆಶಯದಂತೇ ನಡೆದಿತ್ತು. ಒಂದೇ ಮಗು ಸಾಕೆಂದು ಮೊದಲೇ ತೀರ್ಮಾನಿಸಿದ್ದರಿಂದ ಚಿನ್ನು ಹುಟ್ಟಿದಾಗ ಮಕ್ಕಳಾಗದಂತೆ ಆಪರೇಷನ್ ಮಾಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದಾಗ ಸಹಜವಾಗಿಯೇ ಹಿರಿಯರಿಂದ ವಿರೋಧ ಎದುರಾಗಿತ್ತು.
“ಇನ್ನೊಂದ್ ಹಡೆದ್ ಮ್ಯಾಲ. ಆಪರೇ?ನ್ ವಿಚಾರ ಮಾಡೀರಂತ. ಅವಸರದ ನಿರ್ಧಾರ ಬ್ಯಾಡ ನಮ್ಮವ್ವ. ಅನುಭವಸ್ಥರಿದ್ದೇವಿ ಸ್ವಲ್ಪು ನಮ್ ಮಾತೂ ಕೇಳ್ರಲ್ಲ. ನೀವಿಬ್ರೂ ಕೆಲ್ಸ, ಅದೂ ಇದೂ ಅಂತ್ಹೇಳಿ ಹ್ವಾಗ್ವಲ್ರ್ಯಾಕ. ನಾವದೇವಲ್ಲ. ಬೆಳಸೂದು, ಜ್ವಾಪಾನ ಮಾಡೂದು ಕ? ಅನ್ಸುದಿಲ್ಲ. ಅ?ಕ್ಕೂ ಮೊಮ್ಮಕ್ಳನ್ನ ನೋಡ್ಕೋಳ್ಳೂದಕ್ಕ ಅದೆಂಥಾ ತ್ರಾಸ್ ಅಂತೇನಿ.”
ಪರಿಪರಿಯಾಗಿ ನರೇಶನ ತಾಯಿ ಶಾಂತವ್ವ ಹಾಗೂ ನಂದಿನಿಯ ತಾಯಿ ಗೌರಮ್ಮ ಎ? ತಿಳಿ ಹೇಳಿದರೂ ಗಂಡ ಹೆಂಡತಿ ಸೊಪ್ಪುಹಾಕಿರಲಿಲ್ಲ. ಐದುವ?ಗಳವರೆಗೂ ಮಕ್ಕಳದ್ದು ಅತೀ ಸೂಕ್ಷ್ಮ ಹಂತ. ಅನಂತರ ಆಪರೇ?ನ್ ಮಾಡಿಸಿಕೊಳ್ಳಿರೆಂದು ಹಿತೈಷಿಗಳು, ಫ್ಯಾಮಿಲಿ ಡಾಕ್ಟರ್ ಮಾಲಿನಿ ಹೇಳಿದಾಗಲೂ “ಈ ತುಟ್ಟಿ ಕಾಲ್ದಾಗ ಪ್ಲ್ಯಾನಿಂಗ್ ಮಾಡೀನ. ಹೆಜ್ಜಿ ಇಡ್ಬೇಕು. ಅಂಥಾದ್ದೇನೂ ಆಗೂದುಲ್ಲ. ನಮ್ಮೆಚ್ಚರಿಕಿದಾಗ ನಾವಿರ್ಬೇಕ?. ಒಂದ್ ವ್ಯಾಳ್ಯ ಹಂಗೇನಾದ್ರೂ ಆತಂದ್ರ ನೋಡ್ಕೊಳ್ಳೂಣಂತ.” ಉಡಾಫೆಯ ಉತ್ತರಕ್ಕೆ ಎಲ್ಲರೂ ಸುಮ್ಮನಾಗಿದ್ದರು. ಹೇಗಿದ್ದರೂ ಒಂದೇ ಸಾಕೆಂದು ತೀರ್ಮಾನಿಸಿರುವಾಗ ಐದು ವ?ದ ನಂತರ ಆಪರೇ?ನ್ ಮಾಡಿಸಿಕೊಳ್ಳುವುದರಲ್ಲಿ ಹುರುಳಿಲ್ಲ. ಅದೂ ಅಲ್ಲದೆ ಹಡೆದಾಗಲೇ ಮಾಡಿಸಿಕೊಂಡಲ್ಲಿ ಒಟ್ಟಿಗೇ ರೆಸ್ಟ್ ಆಗುತ್ತದೆ; ರಜೆ ವೇಸ್ಟ್ ಮಾಡುವ ಗೋಜೂ ಇರುವುದಿಲ್ಲ. ಗಂಡನ ಬೆಂಬಲದೊಂದಿಗೆ ಆಪರೇ?ನ್ ಮಾಡಿಸಿಕೊಂಡಿದ್ದಳು.
ಒಟ್ಟಿನಲ್ಲಿ ಎಲ್ಲವೂ ಅವರಿಬ್ಬರ ಲೆಕ್ಕಾಚಾರದಂತೇ ನಡೆದಿತ್ತು. ಚೆಂದದ ಚಿನ್ನುವೂ ಹಠಮಾರಿಯಾಗದೇ ಸೌಮ್ಯ ಸ್ವಭಾವದ ವಿಧೇಯ ಮಗುವೆನ್ನಿಸಿಕೊಂಡಿದ್ದ. ಪ್ರತಿಭಾವಂತನೂ ಆದ್ದರಿಂದ ಆಟ-ಪಾಠ; ಏಕಪಾತ್ರಾಭಿನಯ; ಹಾಡು-ನೃತ್ಯ; ಚಿತ್ರಕಲೆ ಮುಂತಾದ್ದರಲ್ಲಿ ಮೊದಲಿಗನಾಗಿ ಬಹುಮಾನಗಳನ್ನು ಹೊತ್ತು ತರುತ್ತಿದ್ದ ಅವ ಹೆಸರಿಗೆ ತಕ್ಕಂತೆ ಎಲ್ಲದರಲ್ಲೂ ಪ್ರಥಮನೇ! ಹೆತ್ತ ಕುಡಿಯ ಬಗ್ಗೆ ಹೆತ್ತವರಿಗೆ ಇನ್ನಿಲ್ಲದ ಹೆಮ್ಮೆ.
* * *
ಅಂದು ಸಂಜೆ ನರೇಶ್ ಬ್ಯಾಂಕಿನಿಂದ ಬೇಗನೆ ಮರಳಿದ. ಎಲ್ಲರೂ ಸೇರಿ ಪ್ರತಿಷ್ಠಿತ ಅನುರಾಗ್ ಮಾಲ್ಗೆ ಹೋಗಿ ಸಂಬಂಧಿಕರಿಗೆ ಹಂಚಲೆಂದು ಹೊಸವಸ್ತ್ರಗಳು, ಸ್ವೀಟ್ಸ್, ಚಾಕಲೇಟು, ಬಿಸ್ಕತ್ತು ಖರೀದಿಸಿದರು. ಚಿನ್ನು ಕೇಳಿದ್ದನ್ನೆಲ್ಲಾ ಕೊಡಿಸಿ ಪ್ರೆಸಿಡೆಂಟ್ ಹೋಟೆಲ್ನಲ್ಲಿ ಊಟ ಮಾಡಿ ಐಸ್ಕ್ರೀಮ್ ತಿಂದು ಮರಳಿದಾಗ ರಾತ್ರಿ ಹತ್ತುಗಂಟೆ. ಮೊದಲೇ ಬಟ್ಟೆಗಳನ್ನು ಪ್ಯಾಕ್ ಮಾಡಿಟ್ಟಿದ್ದರಿಂದ ಬೇಗನೆ ನಿದ್ರೆಗೆ ಜಾರಿದರು. ಬೆಳಗ್ಗೆ ಉಪಹಾರ ಮುಗಿಸಿ ಎಂಟು ಗಂಟೆಯ ಗದಗ್ ಬಸ್ಸಿಗೆ ಹೆಂಡತಿ ಮಗನನ್ನು ಹತ್ತಿಸಿ ಬಂದ ನರೇಶ. ಚಿನ್ನುವಿನ ರಿಸಲ್ಟ್ ಪಡೆದು ಊರಿಗೆ ಹೋಗುವ ವಿಚಾರ ಅವನದ್ದಾಗಿತ್ತು. ನಂದಿನಿ, ಚಿನ್ನು ಗದಗ್ ತಲಪಿದಾಗ ಬೆಳಗ್ಗಿನ ಹತ್ತು ಗಂಟೆ. ನಂದಿನಿಯ ಅಣ್ಣ ಬಾಲಚಂದ್ರ ಕಾರಿನಲ್ಲಿ ಕಾಯುತ್ತಿದ್ದ.
“ಅಲ್ನೋಡು ಅಮ್ಮ ಮಾಮಾ! ಮಾಮಾ ಆರಾಮಿದ್ದೀ? ರಘೂ ಅಣ್ಣ ಎದಕ್ ಬರಲಿಲ್ಲ? ರಾಕಿ ಮತ್ತ ಮರಿಗಳು ಹ್ಯಾಂಗ್ ಅದಾವು? ಅಜ್ಜಾ ಮತ್ ಎಲ್ಲಾರೂ ಆರಾಮದಾರೇನು? ಮಾವಿನ್ಕಾಯಿ ಆಗ್ಯಾವ?” ಒಂದೇ ಉಸಿರಿಗೆ ಪ್ರಶ್ನಿಸಿದ ಚಿನ್ನುವನ್ನೆತ್ತಿ ಮುದ್ದುಮಾಡುತ್ತಲೇ ನಗುತ್ತಾ ಉತ್ತರಿಸಿದವ “ಪ್ರಯಾಣ ಹ್ಯಾಂಗಿತ್ತು ನಂದೂ? ಭಾವ ಎಂದ್ ಬರ್ತಾನಂತ? ಎಲ್ಯೂ ತ್ರಾಸ್ ಆಗ್ಲಿಲ್ಲ ಹೌದಿಲ್ಲೊ?” ಕಳಕಳಿಯಿಂದ ವಿಚಾರಿಸುತ್ತಾ ಬ್ಯಾಗ್ ಹಿಡಿದು ಮುನ್ನಡೆದ. ಆರಾಮವಾಗಿ ಹರಟುತ್ತಲೇ ಮನೆ ತಲಪಿದ್ದರು. ಚಿನ್ನುವಿನ ಉತ್ಸಾಹವಂತೂ ಮುಗಿಲು ಮುಟ್ಟಿತ್ತು.
ಅದು ನಂದಿನಿಯ ಅಜ್ಜನ ಕಾಲದ ಹಂಚಿನ ಮನೆ. ಸುಮಾರು ಹತ್ತು ಹದಿನೈದು ಗುಂಟೆಯ ಜಾಗವದು. ಮನೆಯ ಸುತ್ತಲೂ ಮಾವು, ತೆಂಗು, ಪೇರಲ, ಹಲಸಿನ ದೊಡ್ಡ ದೊಡ್ಡ ಮರಗಳಿದ್ದವು. ಮುಂದಿನ ಅಂಗಳ ನಳನಳಿಸುವ ಹೂ ಗಿಡಗಳಿಂದ ತುಂಬಿತ್ತು. ಸುತ್ತಲೂ ಎತ್ತರದ ಪಗಾರ ಇದ್ದಿದ್ದರಿಂದ ಯಾವ ಹೆದರಿಕೆಗೂ ಆಸ್ಪದವಿರಲಿಲ್ಲ. ವಿಶಾಲವಾದ ಅಂಗಳದ ಎಡಭಾಗದ ಮೂಲೆಯಲ್ಲಿ ಮೂರಡಿ ಆಳದ ಕೊಳವೊಂದಿತ್ತು. ಅದರಲ್ಲಿ ಅರ್ಧ ಫೂಟು ನೀರೂ ಇರಲಿಲ್ಲ. ಅಲ್ಲಲ್ಲಿ ಪಾಚಿ ಕಟ್ಟಿತ್ತು. ಆ ಪಾಳುಕೊಳವನ್ನು ನೋಡಿ ನಂದಿನಿಗೆ ಬಾಲ್ಯದ ನೆನಪಾಯಿತು. ಆಗ ಆ ಕೊಳ ಕೆಂಪು ಕಮಲಗಳಿಂದ ತುಂಬಿ ಕಣ್ಣಿಗೆ ತಂಪೀಯುತ್ತಿತ್ತು. ಗೆಳತಿಯರೊಟ್ಟಿಗೆ ನಂದಿನಿ ಸದಾಕಾಲ ಅಲ್ಲೇ ಇರುತ್ತಿದ್ದಳು.
ಬೇಸಿಗೆಯ ರಜೆಯಾದ್ದರಿಂದ ನಂದಿನಿಯ ಅಕ್ಕತಂಗಿಯರು ಮಕ್ಕಳೊಂದಿಗೆ ಅದಾಗಲೇ ತವರಿನಲ್ಲಿ ಬೀಡು ಬಿಟ್ಟಿದ್ದರು. ಸಂಭ್ರಮ ಹಾಗೂ ಗದ್ದಲದ ವಾತಾವರಣ. ಮುಂದೆ ಓಡಿದ ಚಿನ್ನುವನ್ನು ನೋಡುತ್ತಿದ್ದಂತೆ ಬಾಲ ಅಲುಗಿಸುತ್ತಾ ಓಡಿಬಂದ ರಾಕಿ ಚಿನ್ನುವಿನ ಮುಖ, ಮೈ ಕೈಗಳನ್ನು ನೆಕ್ಕುತ್ತಾ ಕುಂಯ್ಗುಡತೊಡಗಿತು. ಹಿಂದಿನಿಂದಲೇ ಓಡಿಬಂದ ಆ ಗುಂಡಗಿನ ಮೂರು ನಾಯಿಮರಿಗಳಿಗೆ ಇವರು ಹೊಸಬರಾದ್ದರಿಂದ ದೂರದಲ್ಲೇ ನಿಂತು ಪುಟ್ಟ ಬಾಯಿ ತೆರೆದು ’ಬಕ್, ಬಕ್’ ಸ್ವರ ಹೊರಡಿಸುತ್ತಾ ಬೊಗಳಿ ಹೆದರಿಸುವ ಯತ್ನದಲ್ಲಿದ್ದವು! ಪ್ರಾಣಿಪ್ರಿಯ ಚಿನ್ನು ಅವುಗಳ ಸ್ನೇಹ ಸಂಪಾದಿಸಿಬಿಟ್ಟ. ಅಲ್ಲಿ ಮತ್ತೊಂದು ಹೊಸ ಸೇರ್ಪಡೆಯೆಂದರೆ ’ಮಿಂಚು’ ಎಂಬ ಬೆಕ್ಕಿನ ಮರಿ. ಎಲ್ಲಿಂದಲೋ ಬಂದು ಸೇರಿಕೊಂಡಿತ್ತು. ಬಲು ಮುದ್ದಾದ ಮರಿಯದು. ಆದರೆ ಹಿಡಿಯಲು ಸುಲಭಕ್ಕೆ ಸಿಗುತ್ತಿರಲಿಲ್ಲ. ಅಂಗಳದ ತುಂಬಾ ಪುಟಪುಟನೆ ಓಡುವ ನಾಯಿಮರಿಗಳು, ಬೆಕ್ಕಿನ ಮರಿಯ ಆಟವನ್ನು ಬೆರಗುಗಣ್ಣುಗಳಿಂದ ನೋಡುತ್ತಾ ಚಿನ್ನು ಅಲ್ಲೇ ಜಗುಲಿಯ ಮೇಲೆ ಕುಳಿತುಬಿಟ್ಟ. ಬಳಿಕ ನಿಧಾನವಾಗಿ ಅವುಗಳೊಂದಿಗೆ ಆಡತೊಡಗಿದ. ಅವನ ಉತ್ಸಾಹ ಎಲ್ಲೆಮೀರಿತ್ತು. ಊಟ ತಿಂಡಿಗ? ಒಳಗೆ ಬರುತ್ತಿದ್ದವ ಕೈಕಾಲು ತೊಳೆಯದೇ ಏನನ್ನೂ ಮುಟ್ಟುತ್ತಿರಲಿಲ್ಲ.
* * *
ಅಂದು ಸಂತಸದ ದಿನ. ಕಾರಣ ಚಿನ್ನು ಕ್ಲಾಸಿಗೇ ಪ್ರಥಮನೆಂಬ ಸಿಹಿಸುದ್ದಿಯೊಂದಿಗೆ ಬಂದ ನರೇಶ ಧಾರವಾಡದ ಫೇಡ ಎಲ್ಲರಿಗೂ ಹಂಚಿದ್ದ. ಚಿನ್ನುವಿಗೂ ವಾರದ ನಂತರ ಅಪ್ಪನನ್ನು ನೋಡಿದ ಸಡಗರ. ಹೊಸ ಗೆಳತಿ ಮಿಂಚುವನ್ನು ಅಪ್ಪನಿಗೆ ತೋರಿಸುವ ತವಕ. ಆದರದು ಮೊಂಡುತನ ಮಾಡುತ್ತಾ ಕೈಗೆ ಸಿಗದೇ ಓಡುತ್ತಿತ್ತು.
ಅದು ಸಂಜೆಯ ಐದರ ಸಮಯ. ಎಲ್ಲರೂ ಹಜಾರದಲ್ಲಿ ಆರಾಮವಾಗಿ ಕುಳಿತು ನಂದಿನಿಯ ತಂಗಿಯ ಮದುವೆ ವೀಡಿಯೋ ವೀಕ್ಷಿಸುತ್ತಿದ್ದರು. ಚೂಡಾ, ಉಂಡೆ, ಚಕ್ಕುಲಿ ಮೆಲ್ಲುತ್ತಾ ಬಿಸಿಬಿಸಿ ಚಹಾ ಹೀರುತ್ತಾ ಒಬ್ಬರನ್ನೊಬ್ಬರು ಕಾಲೆಳೆಯುತ್ತಾ ಕಿಚಾಯಿಸಿಕೊಳ್ಳುವುದು ನಡೆದಿತ್ತು. ಚಿನ್ನು ನಾಯಿಮರಿ, ಬೆಕ್ಕಿನಮರಿಯೊಂದಿಗೆ ಅಂಗಳದಲ್ಲಿ ಆಡಿಕೊಳ್ಳುತ್ತಿದ್ದ. ಸಮಯ ಸರಿದದ್ದೇ ತಿಳಿಯದ? ತಲ್ಲೀನತೆ ಎಲ್ಲರಲ್ಲೂ. ವೀಕ್ಷಣೆ ಮುಗಿದು ಎಲ್ಲರೂ ಮೈಮುರಿಯುತ್ತಾ ಒಬ್ಬೊಬ್ಬರಾಗಿ ಎದ್ದು ಹೊರಬಂದಾಗ ಇನ್ನೂ ಬೆಳಕಿತ್ತು. ಸೂರ್ಯಾಸ್ತಮಾನದ ಸೂಚನೆಯಾಗಿ ಪಡುವಣ ದಿಕ್ಕೆಲ್ಲಾ ಕೆಂಪಾಗಿತ್ತು. ಎಲ್ಲರೂ ಜಗಲಿ ಕಟ್ಟೆಯ ಮೇಲೆ ಲೋಕಾಭಿರಾಮವಾಗಿ ಹರಟುತ್ತಾ ಕುಳಿತಿದ್ದಾಗ ನಂದಿನಿ ಚಿನ್ನುವನ್ನು ಕರೆಯುತ್ತಾ ಹೊರಬಂದಳು.
“ಚಿನ್ನೂ, ಏ ಚಿನ್ನೂ! ಬಾ ಪುಟ್ಟಾ, ಆಡಿದ್ದು ಸಾಕಿನ್ನ. ಎಲ್ಲಿದ್ದೀ ಬಾ ಲಗೂನ. ಆ ಮಿಂಚು ಹಿಡಿಯಾಕ ಸಿಗೂದಿಲ್ಲ. ಬಿಟ್ ಬಾ ಅದನ್ನ…”
ಕರೆದ ಕೂಡಲೇ ಪ್ರತಿಕ್ರಯಿಸುತ್ತಿದ್ದ ಚಿನ್ನುವಿನಿಂದ ಯಾವುದೇ ಉತ್ತರ ಬರದಿದ್ದಾಗ ಮತ್ತೊಮ್ಮೆ ಕೂಗಿದಳು. ಆಗಲೂ ನಿರುತ್ತರವೇ ಉತ್ತರವಾದಾಗ ಆತಂಕದಿಂದಲೇ “ಏ ಚಿನ್ನೂ, ಐಸ್ಪೈಸ್ ಆಡಿದ್ದು ಸಾಕಿನ್ನ. ಬಾ ಕೈಕಾಲು ತೊಳಕ್ಕೊಂಡು ದೇವರೀಗ ಕೈ ಮುಗ್ದು ಹಾಲು ಕುಡೀ ಬಾ. ಊಟ ಮಾಡಿ ಲಗೂನ ಮಕ್ಕೊಳ್ಳೋವಂತಿ; ಆಯಾಸ ಆಗಿರಬೇಕಲ್ಲ ಬಾ ಪುಟ್ಟಾ.” ಅಂಗಳದಲ್ಲಿ ಅಲ್ಲಿ ಇಲ್ಲಿ ಹುಡುಕುತ್ತಲೇ, “ರೀ, ಏನ್ರೀ, ಎಲ್ಲದೀರಿ? ಚಿನ್ನು ಏನಾರ ಒಳಗ್ ಬಂದಾನೇನು? ಕಂಪ್ಯೂಟರ್ನ್ಯಾಗ ಗೇಮ್ ಆಡ್ಲಿಕ್ ಹತ್ತಿರ್ಬೇಕು. ಸ್ವಲ್ಪು ಮಾಳಗಿ ಹತ್ತಿ ನೋಡ್ರಲ” ನರೇಶನನ್ನು ಅವಸರಿಸಿದಳು.
“ಅದ್ಯಾಕ್ ಹಾಂಗ ಘಾಬರೀ ಆಗ್ಲಿಕ್ ಹತ್ತೀಯೇ. ಅಲ್ಲೇ ಎಲ್ಲಾರ ಇದ್ದಾನು. ನಮ್ ಪುಟ್ಟಾ ಶಾಣ್ಯಾ ಅದಾನು, ಹೇಳ್ದೇ ಕೇಳ್ದೆ ಎಂದಾರ ಹೋಗ್ಯಾನೇನು. ಉಡಾಳ್ ತನ ಅನ್ಕ್ರೂ ಮಾಡಾಂವ ಅಲ್ಲ. ತಡೀ, ಮಾಳಗಿ ಮ್ಯಾಲ ನೋಡ್ ಬರ್ತೇನಿ.”
ಹಜಾರಕ್ಕೆ ತಾಗಿಕೊಂಡಂತಿದ್ದ ಮಾಳಗಿ ಹತ್ತಿ ನೋಡಿದ. ಚಿನ್ನು ಅಲ್ಲೂ ಇರಲಿಲ್ಲ. ನಂದಿನಿಯ ತಮ್ಮ ಓದಿಕೊಳ್ಳುತ್ತಿದ್ದವ ಭಾವನೊಡನೆ ಕೆಳಗೆ ಬಂದ. “ಲೇ, ಇಕೀನ. ಆವಾ ಮಾಳಗೀ ಮ್ಯಾಲೆಲ್ಲೂ ಇಲ್ಲ. ಬಾಜೂ ಮನೀಗ್ ಏನಾರ ಹೋಗ್ಯಾನೇನ್ ನೋಡ್ ಮತ್ತ.”
ಗೇಟು ತೆರೆದು ಪಕ್ಕದ ಮನೆಗೆ ಹೋಗಿ ವಿಚಾರಿಸಿ ಬಂದಳು ನಂದಿನಿ. ಚಿನ್ನು ಅಲ್ಲಿರಲಿಲ್ಲ. ಇದೀಗ ಅವ್ಯಕ್ತ ಭಯದ ನೆರಳು ಎಲ್ಲರನ್ನೂ ಆವರಿಸಿ ಹಿಂಬಾಲಿಸತೊಡಗಿತು. ಎಲ್ಲಿ ಹೋದ ಪುಟ್ಟ ಚಿನ್ನು? ಮಶ್ಕರಿ ಮಾಡುತ್ತಿರಬಹುದೇ. ಅದು ಅವನ ಸ್ವಭಾವವೇ ಅಲ್ಲ.
ಮನೆಯ ಹಿತ್ತಲು, ಸುತ್ತಮುತ್ತಲೂ ಎಲ್ಲರೂ ಸೇರಿ ಚಿನ್ನುವನ್ನು ಹುಡುಕತೊಡಗಿದರು. ಆಗ ಮಬ್ಬುಗತ್ತಲೆಯಲ್ಲಿ ಅಂಗಳದ ಮೂಲೆಯಲ್ಲಿರುವ ಕೊಳದಲ್ಲಿ ಇಣುಕಿ ನೋಡುತ್ತಾ ಬಾಲ ಅಲುಗಿಸುತ್ತಾ ನಿಂತ ನಾಯಿಮರಿಗಳು ಕಂಡವು. ರಾಕಿಯ ಸುಳಿವಿರಲಿಲ್ಲ. ಎಲ್ಲರಲ್ಲೂ ತಳಮಳ. ಆ ಹೊಂಡವೇನೂ ಆಳವಿಲ್ಲ. ಅದರಲ್ಲಿ ನೀರೂ ಇಲ್ಲವೆಂದೇ ಲೆಕ್ಕ. ಹಾಗೇನೂ ಆಗಲು ಸಾಧ್ಯವಿಲ್ಲ. ಎಲ್ಲರೂ ಉದ್ವೇಗ, ಭಯ ಆತಂಕದಿಂದ ಕೊಳವನ್ನು ಸಮೀಪಿಸಿದಾಗ ಕಂಡದ್ದು ದಾರುಣ ದೃಶ್ಯ! ಅರ್ಧ ಫೂಟೂ ನೀರಿಲ್ಲದ ಆ ಹೊಂಡದಲ್ಲಿ ತಲೆಕೆಳಗಾಗಿ ಬಿದ್ದ ಸ್ಥಿತಿಯಲ್ಲಿದ್ದ ಚಿನ್ನುವನ್ನು ಕಂಡಾಗ ಎಲ್ಲರೂ ದಿಗ್ಭ್ರಾಂತರಾಗಿದ್ದರು. ಅವನ ದೇಹದ ಭಾಗವೆಲ್ಲಾ ಕೊಳಕ್ಕೆ ಇಳಿಯಲೆಂದು ಮಾಡಿದ್ದ ಮೂರು ಮೆಟ್ಟಿಲ ಮೇಲಿತ್ತು. ತಲೆಯ ಕೂದಲು ಮಾತ್ರ ಸ್ವಲ್ಪ ಒದ್ದೆಯಾಗಿತ್ತು. ಅವನಿಗೆ ಎಚ್ಚರವಿರಲಿಲ್ಲ. ಹೊಂಡದ ಆ ಬದಿಯಲ್ಲಿ ನೀರಿನಲ್ಲಿ ಬಿದ್ದು ಒದ್ದೆಯಾಗಿ ನಡುಗುತ್ತಿರುವ ಮಿಂಚು ಕಂಡಿತ್ತು. ಬೆಕ್ಕಿನ ಜೊತೆ ಆಟವಾಡುತ್ತಾ ಅದನ್ನು ಹಿಡಿಯಲು ಹೋದವ ಅದು ನೀರಲ್ಲಿ ಬಿತ್ತೆಂದು ತೆಗೆಯಲೆಂದು ಹೋದವ ಕಾಲು ಜಾರಿ ಬಿದ್ದಿರಬಹುದೇ? ತಕ್ಷಣ ಅವನನ್ನೆತ್ತಿಕೊಂಡು ಮನೆಯೊಳಗೆ ಧಾವಿಸಿದರು. ನಂದಿನಿ ಮಗನನ್ನು ಮಡಿಲಲ್ಲಿ ಹಾಕಿಕೊಂಡು ಟವಲಿನಿಂದ ಮೈಗೆ ಹತ್ತಿದ್ದ ಮಣ್ಣನ್ನು ಒರೆಸುತ್ತಾ ನಡುಗುವ ಕೈಗಳಿಂದ ಅಲುಗಿಸತೊಡಗಿದಳು.
“ಏಳು ಕಂದಾ! ಪುಟ್ಟಾ, ಇಲ್ನೋಡಿಲ್ಲಿ. ಕಣ್ಬಿಡೋ. ಯಾಕೋ ಏನಾತ್ ನಿನಗ.” ಗಾಬರಿಯಿಂದಲೇ ಮೈಯೆಲ್ಲಾ ಪರಿಶೀಲಿಸಿದಳು. ಎಲ್ಲೂ ಗಾಯದ ಕುರುಹಿರಲಿಲ್ಲ. ಮುಖಕ್ಕೆ ನೀರು ಚಿಮುಕಿಸಿ ಅವನನ್ನೆಚ್ಚರಿಸುವ ಪ್ರಯತ್ನ ನಡೆದಿತ್ತು. ಅ?ರಲ್ಲಾಗಲೇ ನಂದಿನಿಯ ತಮ್ಮ ಡಾಕ್ಟರ್ ಪಾಟೀಲ್ರನ್ನು ಕರೆತಂದಿದ್ದ. ಚಿನ್ನುವನ್ನು ಮಂಚದ ಮೇಲೆ ಮಲಗಿಸಲಾಯಿತು. ನಾಡಿಮಿಡಿತ, ಹೃದಯದ ಬಡಿತ ಎಲ್ಲವನ್ನೂ ಎಚ್ಚರಿಕೆಯಿಂದ ಪರಿಶೀಲಿಸಿದ ಅವರು “ಧೈರ್ಯ ತಂದುಕೊಳ್ಳಿ. ಮಗುವಿನ ಉಸಿರು ನಿಂತು ಸ್ವಲ್ಪ ಹೊತ್ತಾಗಿರಬಹುದು.” ಎಂದು ಚಿನ್ನು ಇನ್ನಿಲ್ಲವೆಂಬ ಘೋರ ಸತ್ಯವನ್ನರುಹಿದ್ದರು.
“ಹಂಗ್ಯಾಕ ಅಸಂಬದ್ಧ ಹಲುಬಕ್ಹತ್ತೀರಿ? ಅವಂಗೇನೂ ಆಗಿಲ್ಲ. ಮೈ ಬಿಸಿ ಅದ. ಸರಿಯಾಗಿ ಚೆಕ್ ಮಾಡ್ರಲ್ಲ. ಏ ಚಿದು, ಬ್ಯಾರೆ ಚೊಲೊ ಡಾಕ್ಟರ್ ಕಡೀ ಒಯ್ಯೂಣು ನಡಿಯೋ. ನಮ್ ಚಿನ್ನುಗೇನೂ ಆಗಿಲ್ಲ” ಚೀರಿದಂತೆ ಹೇಳುತ್ತಲೇ ಆಘಾತಕ್ಕೊಳಗಾದ ನಂದಿನಿ ಕುಸಿದುಬಿದ್ದಳು. ಇಬ್ಬರನ್ನೂ ದೊಡ್ಡ ಆಸ್ಪತ್ರೆಗೆ ಒಯ್ಯಲಾಯಿತು. ಚಿನ್ನು ಅದಾಗಲೇ ಮರಳಿಬಾರದ ಲೋಕಕ್ಕೆ ಹೋಗಿಯಾಗಿತ್ತು. ಪೋಸ್ಟ್ಮಾರ್ಟಂ ರಿಪೋರ್ಟ್ನಲ್ಲಿ ಚಿನ್ನು ಉಸಿರುಗಟ್ಟಿ ಸತ್ತಿದ್ದಲ್ಲವೆಂದೂ, ಯಾವ ವಿ?ಜಂತುವಿನ ಕಡಿತವೂ ಇಲ್ಲವೆಂದೂ, ತಲೆಗೆ ಯಾವ ಪ್ರಾಣಾಂತಿಕ ಪೆಟ್ಟೂ ಬಿದ್ದಿಲ್ಲವೆಂದೂ, ಸಾವಿಗೆ ನಿಖರ ಕಾರಣ ತಿಳಿಯದೇ ಪ್ರಶ್ನಾರ್ಥಕ ಚಿಹ್ನೆ ಹಾಕಲಾಗಿತ್ತು. ಹಾಗಾದರೆ ಏನಾಗಿರಬಹುದು?
ಪೋಸ್ಟ್ಮಾರ್ಟಂ ರಿಪೋರ್ಟೆ ಸರಿಯಿಲ್ಲವೇ? ಅಥವಾ ಬಿದ್ದ ರಭಸಕ್ಕೆ ಶಾಕ್ನಿಂದಲೇ ಹೃದಯಬಡಿತ ಸ್ತಬ್ಧವಾಗಿರಬಹುದೇ? ಊಹಾಪೋಹಗಳ ನಡುವೆ ಯಾವ ಜಡ್ಡು ಜಾಪತ್ರೆಗಳಿಲ್ಲದ ಆರೋಗ್ಯವಂತ ಮುದ್ದು ಹಸುಳೆ ಎಲ್ಲರನ್ನೂ ದುಃಖದ ಮಡುವಿನಲ್ಲಿ ಬಿಟ್ಟು ಮಣ್ಣಲ್ಲಿ ಮಣ್ಣಾಗಿ ಹೋಗಿದ್ದ. ಮಗನ ಮೈಗೆ ಮಣ್ಣು ಬಡಿದದ್ದನ್ನು ಸಹಿಸದೇ ಒರೆಸುತ್ತಿದ್ದ ನಂದಿನಿಗೆ ಮಗನೇ ಮಣ್ಣಾದಾಗ ಹೇಗಾಗಿರಬಹುದು?
ನರೇಶ್, ನಂದಿನಿ ಎಲ್ಲವನ್ನೂ ಲೆಕ್ಕಾಚಾರ ಮಾಡೀ ಮಾಡೀ ಹೀಗೆಯೇ ಆಗಬೇಕೆಂದು ಬಯಸಿ ತಮಗೆ ಬೇಕಾದ ರೀತಿಯಲ್ಲಿ ತಮ್ಮ ಭವಿ?ವನ್ನು ರೂಪಿಸಿಕೊಂಡು ಸುಖದಿಂದ ಅಚ್ಚುಕಟ್ಟಾದ ಜೀವನ ನಡೆಸುತ್ತಿದ್ದದ್ದಕ್ಕೆ ಕರುಬುವ ಕಣ್ಣು ಬಿತ್ತೇ? ಅಥವಾ ವಿಧಿಯೇ ಸಹಿಸಲಿಲ್ಲವೇ? ಅದ್ಯಾವ ವಿ?ಘಳಿಗೆಯಲ್ಲಿ ’ಹಾಗಾದಾಗ ನೋಡಿಕೊಳ್ಳೋಣ’ ಎಂದು ಉಡಾಫೆ ತೋರಿದ್ದರೋ. ಭೂಮಿ ಸದಾ ’ಅಸ್ತು ಅಸ್ತು’ ಎನ್ನುತ್ತಿರುತ್ತದಂತೆ. ಹಾಗಾಗಿ ಹೋಯಿತೇ? ಎ? ಪ್ಲ್ಯಾನ್ ಮಾಡಿ ಗುಣಿಸಿ ಭಾಗಿಸಿ ಲೆಕ್ಕಹಾಕಿ ಎ? ಮುನ್ನೆಚ್ಚರಿಕೆ ವಹಿಸಿದರೂ, ವಿಧಿಲಿಖಿತವನ್ನು ಅಳಿಸಲು ಆಗಲಿಲ್ಲವೇ? ಒಟ್ಟಿನಲ್ಲಿ ನಿಯತಿಯ ಈ ಲೆಕ್ಕಾಚಾರ ಮಾತ್ರ ಕಲ್ಪನೆಗೂ ನಿಲುಕದ್ದಾಗಿತ್ತು.