ಥತ್! ನಾನೇಕೆ ಹೀಗಾಗಿಹೋದೆ? ಒಂದು ಕಥೆ ಗೀಚುವುದಕ್ಕೆ ಹದಿನೈದು ದಿನಗಳಿಂದ ತಿಪ್ಪರಲಾಗ ಹಾಕುತ್ತಾ ಇದ್ದರೂ ಆಗುತ್ತಾ ಇಲ್ಲವಲ್ಲ. ಇಪ್ಪತ್ತೆಂಟು ಕುಂಟುನೆಪಗಳು. ತುಂಬಾ ಸೆಕೆ, ಮೂಡ್ ಇಲ್ಲ, ಮದುವೆಯ ರಿಸೆಪ್ಷನ್ಗೆ ಹೋಗಬೇಕು, ಸಣ್ಣಗೆ ತಲೆನೋವು ಇತ್ಯಾದಿ ಇತ್ಯಾದಿ. ಮುಖ್ಯವಾದ ಕಾರಣ ಸೋಂಬೇರಿತನವಾದರೂ ಅದನ್ನು ಒಪ್ಪಿಕೊಳ್ಳದೆ ನನ್ನ ಮನಸ್ಸಿಗೆ ನಾನೇ ವಂಚಿಸಿಕೊಳ್ಳುತ್ತಾ ಇದ್ದೇನೆ ಎಂದುಕೊಂಡರೂ ಕಥೆಗೆ ಒಂದು ಒಳ್ಳೆ ಪ್ಲಾಟ್ ಸಿಕ್ಕದಿರುವುದೇ ನ್ಯಾಯವಾದ ಕಾರಣ. ಪ್ರತಿಷ್ಠಿತ ಪತ್ರಿಕೆಯೊಂದರ ದೀಪಾವಳಿ ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿದ ಕಥೆಗಳನ್ನು ನಾನು ಬಹಳ ವರ್ಷಗಳಿಂದ ಸ್ಟಡಿ ಮಾಡುತ್ತಲೇ ಬರುತ್ತಿದ್ದೇನೆ. ಆದರೆ, ಎಂಥ ಕಥೆಗೆ ಬಹುಮಾನ ಸಿಗುತ್ತದೆ ಎನ್ನುವುದು ದೇವರಾಣೆಗೂ ಹೇಳುತ್ತೇನೆ, ನನಗಿನ್ನೂ ಅರ್ಥವಾಗಿಲ್ಲ. ಆದರೂ ಅಂತಹ ಕಥೆಗಳನ್ನು ರಚಿಸುವ ಪ್ರಯತ್ನಗಳನ್ನು ಮಾಡುತ್ತಿದ್ದೇನೆ. ಎಲ್ಲರೆದುರಿಗೆ ಹೇಳಲೂ ಕೆಲವು ಪದಗಳನ್ನು ಎಗ್ಗಿಲ್ಲದೆ ಉಪಯೋಗಿಸಿ ನೋಡಿದೆ, ಪ್ರಯೋಜನವಾಗಲಿಲ್ಲ. ಎಲ್ಲೋ ಶುರು ಮಾಡಿ ಎಲ್ಲೋ ಮುಗಿವ ತಲೆಬುಡವಿಲ್ಲದ ಬಹುಮಾನಿತ ಕಥೆಗಳಂತೆ ನಾನೂ ಕಥೆಗಳನ್ನು ಬರೆದೆ. ಉಹುಂ. ನೋ ಯೂಸ್. ಡೌನ್ ಟು ಅರ್ತ್, ರಿಯಾಲಿಟಿ, ಗ್ರಾಮೀಣ ಸೊಗಡು, ಮಣ್ಣಿನ ವಾಸನೆ, ಪ್ರಾದೇಶಿಕತೆಗಳಿರಬೇಕು ಎನ್ನುವ ಸಲಹೆಗಳ ತೀರ್ಪುಗಾರರ ಮಾತುಗಳನ್ನು ಓದಿ ಅರ್ಥೈಸಿಕೊಂಡೆ. ಯಾಕೆ, ನಗರದಲ್ಲಿ ಸೊಗಡು ಇರುವುದಿಲ್ಲವೇನು? ಸೊಗಡು ಎನ್ನುವುದು ಕೇವಲ ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರ ದೊರಕುವಂತಹ ಐಟಮ್ಮೇ? ನಗರಗಳಿಗೆ ತಮ್ಮದೇ ಆದ ಸೊಗಡು ಇರುವುದಿಲ್ಲವೆ? ಕೆಂಗೇರಿ ಮೋರಿವಾಸನೆ ಬೇರೆ ಯಾವ ಗ್ರಾಮದಲ್ಲಿ ಸಿಗುತ್ತದೆ? ಅದೂ ಒಂದು ತರಹದ ಸೊಗಡೇ ಅಲ್ಲವೇ? ಇನ್ನು ಮಣ್ಣಿನವಾಸನೆ. ಅದರ ವಾಸನೆ ಅದಕ್ಕೆ ಇದ್ದೇ ಇರುತ್ತದಪ್ಪ. ಮೂಗು ಸರಿಯಾಗಿದ್ದರೆ ಸರಿ, ವಾಸನೆ ಬಂದೇ ಬರುತ್ತದೆ. ನಮ್ಮದೂ ಒಂದು ಪ್ರದೇಶವಲ್ಲವೇ? ನಮಗೆ ನಮ್ಮದೇ ಆದ ಬದುಕಿದೆ ಅಲ್ಲವೆ? ನಮಗೆ ಭಾವನೆಗಳಿಲ್ಲವೆ? ಕಷ್ಟಗಳು, ತಳಮಳಗಳು, ಆಸೆ ಆಕಾಂಕ್ಷೆಗಳು, ಕಾಡುತ್ತಿರುವ ಜ್ವಲಂತ ಸಮಸ್ಯೆಗಳು, ಅವುಗಳಿಗೆ ತುಡಿಯುವ ಮನಸ್ಸುಗಳಿಲ್ಲವೆ? ಅವುಗಳನ್ನೆಲ್ಲ ನಾವು ಹೊರಗೆಹಾಕಲು ’ನಮ್ಮ ಭಾಷೆ’ಯನ್ನಲ್ಲದೆ ಬೇರೆ ಯಾವ ಭಾ?ಯನ್ನು ತಾನೇ ಉಪಯೋಗಿಸಬೇಕು? ಇರಲಿ, ಯಾವುದೋ ಒಂದು ಭಾ?ಯಲ್ಲಿ ಬರೆಯುವುದಾಗುತ್ತದೆ ಬಿಡಿ; ದ ಕ್ವೆಶ್ಚನ್ ಈಸ್, ದ ಪ್ಲಾಟ್.
ಹದಿನೈದು ವರ್ಷ ಹಿರಿಯಳ ಸೆಳೆತಕ್ಕೆ ಬಲಿಯಾಗಿ ಅವಳೊಂದಿಗೆ ಕೂಡಿ, ಸ್ವಲ್ಪ ದಿನಗಳಲ್ಲೇ ಅವಳಲ್ಲಿನ ಆಸಕ್ತಿಯನ್ನು ಕಳೆದುಕೊಂಡು, ಆದರೆ ಅವಳ ಒತ್ತಾಯಕ್ಕೆ ಮಣಿಯದಿರಲು ಸಾಧ್ಯವಾಗದೆ ಅವಳನ್ನೂ, ಅವಳ ಮೂರು ಮಕ್ಕಳನ್ನೂ ಕೊಂದು ಜೈಲು ಸೇರಿದವನ ಕಥೆಯನ್ನು ಬರೆಯಲೆ? ಇಲ್ಲ, ಅಚಾನಕ್ಕಾಗಿ ಮಾನ ಹರಾಜಾಗುವ ಸಂದರ್ಭದಲ್ಲಿ ಸುಳ್ಳು ಹೇಗೆ ’ಸೃಷ್ಟಿ’ಯಾಗುತ್ತದೆ ಎನ್ನುವುದರ ಕುರಿತು ಕಥೆ ಬರೆಯಲೆ? ನನ್ನ ಹುಟ್ಟುಹಬ್ಬದ ಪ್ರಯುಕ್ತ ಅನಾಥಾಶ್ರಮದ ಮಕ್ಕಳಿಗೆ ಊಟ ತಿಂಡಿ ಚಾಕಲೇಟುಗಳನ್ನು ಹಂಚಲು ಹೋದಾಗ ಅಲ್ಲಿ ನಾನು ಕಂಡ ಮಕ್ಕಳ ದಾರುಣಸ್ಥಿತಿಯ ಚಿತ್ರಣವನ್ನು ಕಥೆಯನ್ನಾಗಿ ಹೆಣೆಯಲೆ? ಮಕ್ಕಳ ಮೇಲೆ ಅತ್ಯಾಚಾರವೆಸಗುತ್ತಿರುವವರ ಕುರಿತು ವಿಶ್ಲೇ?ಣಾತ್ಮಕ, ವಿವಾದಾತ್ಮಕ ಕಥೆಯನ್ನು ಸೃಷ್ಟಿಸಲೆ? ಗಂಡನನ್ನು ಕಳೆದುಕೊಂಡು, ಪಡಬಾರದ ಕ?ಗಳನ್ನು ಪಟ್ಟು ಮಗನನ್ನು ಓದಿಸಿ, ಮದುವೆ ಮಾಡಿಸಿ, ಮೊಮ್ಮಕ್ಕಳನ್ನು ಎತ್ತಿ ಆಡಿಸಬೇಕೆಂದಿದ್ದ ತಾಯಿಯನ್ನು ಬೀದಿಗಟ್ಟಿದವನ ಕಥೆಯನ್ನು ರಚಿಸಲೆ? ಅಥವಾ ’ನಾವಿಬ್ಬರು, ನಮಗೊಂದೇ ಮಗು’ ಪಾಲಿಸಿಯನ್ನು ಪಾಲಿಸುವುದರ ಮೂಲಕ ಇನ್ನೊಂದು ಐವತ್ತು/ನೂರು ವ?ಗಳಲ್ಲಿ ಉಳಿಯುವ ಗಂಡ-ಹೆಂಡತಿ, ತಾಯಿ-ತಂದೆ, ಮಗ-ಮಗಳು ಮತ್ತು ತಾತ-ಅಜ್ಜಿ ಸಂಬಂಧಗಳಿಗೆ ಮಾತ್ರ ಸೀಮಿತಗೊಳ್ಳುವ ಕುಟುಂಬಗಳ ಜೀವನ ಹೇಗಿರಬಹುದೆಂಬುದನ್ನು ಚಿತ್ರಿಸಲೆ? ಯಾವುದೂ ನಿರ್ಧಾರ ಮಾಡಲಾಗಲಿಲ್ಲ. ಆದರೂ ಕಥೆಯನ್ನು ಶುರು ಮಾಡಲೇಬೇಕೆಂದು ಹಟತೊಟ್ಟು, ಪೆನ್ ತೆಗೆದು ಪೇಪರ್ ಮೇಲಿಟ್ಟೆ. ಅಲ್ಲಿ ಚುಕ್ಕಿಯೊಂದು ಮೂಡಿತು, ಅಷ್ಟೆ. ಪೆನ್ನು ಮುಂದಕ್ಕೆ ಹೋಗಲಿಲ್ಲ. ಆ ಚುಕ್ಕಿಯನ್ನು ನೋಡಿದೆ. ಅದು ನನ್ನನ್ನು ನೋಡಿ ನಕ್ಕಂತಾಯಿತು. ಆದರೂ ಬಿಡದೆ ಅದನ್ನೇ ನೋಡುತ್ತಿದ್ದಂತೆ ಅದು ಸಾಸಿವೆಕಾಳಾಗಿ ಜೋಳದ ಗಾತ್ರಕ್ಕೆ ಹಿಗ್ಗಿ, ನಿಂಬೆಯಾಗಿ, ಚಕ್ಕೋತವಾಗಿ, ಕುಂಬಳವಾಗಿ…..
ಇಷ್ಟಕ್ಕೇ ನಿಲ್ಲಿಸಿದರೆ ಇದೇ ಒಂದು ಮಿನಿ ಕಥೆಯಾದೀತು ಎನ್ನಿಸಿತು. ಒಳಗೊಳಗೇ ನಕ್ಕೆ.
ದಬದಬನೆ ಬಾಗಿಲು ಬಡಿದ ಶಬ್ದ. ಪ್ಯಾಡು ಪೆನ್ನುಗಳನ್ನು ಟೇಬಲ್ ಮೇಲೆ ಇಟ್ಟು, ಮೇಲೆದ್ದು ರೂಮಿನ ಬಾಗಿಲನ್ನು ತೆಗೆದೆ. ರತ್ನ! ತುಂಬ ಗಾಬರಿಗೊಂಡಂತಿತ್ತು. “ಏನಾಯ್ತು ರತ್ನಾ, ಯಾಕೆ ಒಂದು ಥರಾ ಇದ್ದೀಯಾ?”
“ಇಬ್ಬರೂ ಜೋರುಜೋರಾಗಿ ಮಾತನಾಡುತ್ತಾ ಇದ್ದಾರೇ ರೀ, ನೋಡಿರಿ ಸ್ವಲ್ಪ….” ಅ? ಹೇಳುವ?ರಲ್ಲಿ ಅವಳ ಕಣ್ಣುಗಳಲ್ಲಿ ನೀರು ತುಂಬಿಕೊಂಡಿತ್ತು. ಅವರ ರೂಮಿನ ಬಾಗಿಲಿನತ್ತ ಒಂದೆರಡು ನಿಮಿಷ ಕಿವಿಗೊಟ್ಟೆ. ಮಾತುಗಳೇನೋ ಜೋರುಜೋರಾಗಿದ್ದರೂ, ಇಬ್ಬರೂ ಒಟ್ಟಿಗೆ ಮಾತನಾಡುತ್ತ ಇದ್ದದ್ದರಿಂದ ಯಾವ ಮಾತೂ ಸ್ಪ?ವಾಗಿ ಕೇಳಿಸಲಿಲ್ಲ. ರತ್ನಳ ಬೆನ್ನ ಮೇಲೆ ಕೈ ಹಾಕಿ “ಇದೆಲ್ಲ ಮಾಮೂಲಿ ಅಲ್ಲವೆ ರತ್ನಾ. ಅದಕ್ಕೆ ಯಾಕೆ ಇ?ಂದು ಗಾಬರಿಯಾಗಿದ್ದೀಯ? ಈ ಕ್ಷಣ ಕಿತ್ತಾಡುತ್ತಾರೆ, ಇನ್ನೊಂದು ಕ್ಷಣದಲ್ಲಿ ಲಲ್ಲೆಹೊಡೆಯುತ್ತ ಇರುತ್ತಾರೆ. ಅವರೇನಾದರೂ ಮಾಡಿಕೊಳ್ಳಲಿ ಬಿಡು. ನೀನು ತಲೆಕೆಡಿಸಿಕೊಳ್ಳಬೇಡ. ಒಂದೇ ಮನಸ್ಸಿನಿಂದ ನಿನ್ನ ಕೆಲಸ ನೋಡಿಕೋ” ಎಂದು ಸಾಂತ್ವನಗೊಳಿಸುವ ಹುಸಿಪ್ರಯತ್ನ ಮಾಡಿದೆ. “ಇಲ್ಲಾ, ಇದು ಯಾಕೋ ವಿಪರೀತಕ್ಕೆ ಹೋಗುವ ಹಾಗೆ ಕಾಣುತ್ತದೆ” ಎಂದು ತಲೆತಗ್ಗಿಸಿ ನಿಂತಳು. ಅ?ರಲ್ಲಿ ಅವರ ರೂಮಿನ ಬಾಗಿಲು ತೆರೆದುಕೊಂಡಿತು.
ಭೂಮಿ ನಡುಗುವಂತೆ ಹೆಜ್ಜೆಹಾಕುತ್ತಾ ಸೊಸೆ ಹೊರಗೆ ಬಂದಳು. ಬಲಗೈಯ್ಯಲ್ಲಿ ಮೊಬೈಲು, ಎಡಗೈಯ್ಯಲ್ಲಿ ಪುಟ್ಟ ವ್ಯಾನಿಟಿ ಬ್ಯಾಗು. ಹಿಂದೆಯೇ ಮಗನೂ ಈಚೆಗೆ ಬಂದ. ನಾವಿಬ್ಬರೂ ದಂಗಾದೆವು. ವಿಧಿಯಿಲ್ಲದೆ ಕೇಳಿದೆ – “ಎಲ್ಲಿಗೋ ಹೊರಟ ಹಾಗಿದೆ?” ಅವಳಿಂದ ಉತ್ತರವಿಲ್ಲ. ಮಗನೇ, “ಎಲ್ಲಾದರೂ ಹಾಳಾಗಿ ಹೋಗುತ್ತೇನೆ ಎಂದಳು, ಹೋಗಲಿ” ಎಂದ. “ಬದುಕಿ ಬಾಳುವುದಕ್ಕೆ ಎಂದು ನೀವು ಮದುವೆ ಆದದ್ದು, ಹಾಳಾಗಿ ಹೋಗುವುದಕ್ಕೆ ಅಲ್ಲಪ್ಪಾ” ಎಂದೆ. “ಅವಳಿಗಿರಬೇಕು ಅದು” ಕಿರುಚಿದ. ಸೊಸೆ ಸೂಟ್ಕೇಸನ್ನು ಕುಕ್ಕಿ ರವಿಯತ್ತ ತೀಕ್ಷ್ಣವಾಗಿ ನೋಡುತ್ತಾ, “ಅದು ನಿನಗೂ ಇರಬೇಕು. ಮೈಂಡ್ ಇಟ್” ಎಂದು ಅರಚಿದಳು. “ಏನಪ್ಪ, ನೀವು ವಿದ್ಯಾವಂತರು. ನಿಮಗೆ ಬುದ್ಧಿ ಹೇಳುವ? ಬುದ್ಧಿ ನನಗಿಲ್ಲ. ಸಣ್ಣ ಪುಟ್ಟ ವಿಷಯಗಳಿಗೆಲ್ಲ ಹೀಗೆ ಜಗಳ ಆಡಿದರೆ…. ಅದೂ….” ಎಂದು ತಡೆದು ತಡೆದು ಹೇಳುತ್ತಾ ಇದ್ದೆ. ಅಷ್ಟರಲ್ಲಿ ಮಗ “ಡ್ಯಾಡೀ” ಎಂದ. ನೋಡಿದೆ. ಅವನೂ ನನ್ನ ಕಡೆ ನೋಡಿ, “ಡ್ಯಾಡಿ ಪ್ಲೀಸ್” ಎಂದ. ತೋರುಬೆರಳನ್ನು ಮೇಲೆತ್ತಿ ಎಡಕ್ಕೆ ಬಲಕ್ಕೆ ನಾಲ್ಕಾರು ಸಲ ಆಡಿಸುತ್ತ “ನೀವು ಇಂಟರ್ಫಿಯರ್ ಆಗಬೇಡಿ. ಪ್ಲೀಸ್” ಎಂದು ಎಚ್ಚರಿಕೆ ಕೊಟ್ಟ. ಬಾಯಿಗೆ ಬೀಗ ಜಡಿದುಕೊಂಡು ಕೈಗೆ ಸಿಕ್ಕಿದ ಪುಸ್ತಕವೊಂದನ್ನು ಎತ್ತಿಕೊಂಡು ಕುರ್ಚಿಯಲ್ಲಿ ಕುಳಿತೆ. ಸೊಸೆ ಚಪ್ಪಲಿ ಮೆಟ್ಟಿ ಕಾಲನ್ನು ಹೊರಗೆ ಹಾಕುವ?ರಲ್ಲಿ ರತ್ನ ಓಡಿ ಬಂದು “ರೀ, ಕಿವುಡನಾಗಿ ಹೋದೆ. “ರವೀ, ಒಳಗೆ ಕರೆಯೋ ಅವಳನ್ನು” ಎಂದು ರವಿಯತ್ತ ನೋಡಿ ಬೇಡಿಕೊಂಡಳು. “ಅಮ್ಮ, ನೀನು ಒಳಗೆ ಹೋಗು” ಎಂದನೇ ಹೊರತು ಕರೆಯುವ ಗೋಜಿಗೆ ಹೋಗಲಿಲ್ಲ. ಅ?ರಲ್ಲಿ ಸೊಸೆ ಗೇಟನ್ನು ದಾಟಿಯಾಗಿತ್ತು. ರತ್ನ ಹತಾಶಳಾಗಿ ಇನ್ನೊಂದು ಕುರ್ಚಿಯಲ್ಲಿ ಕುಸಿದು ಕುಳಿತಳು. ರೂಮು ಸೇರಿದ ರವಿ ಕಾರಿನ ಕೀ ತೆಗೆದುಕೊಂಡು ಆಚೆಗೆ ಹೋಗಿ ಕಾರ್ ಸ್ಟಾರ್ಟ್ ಮಾಡಿದ. ರತ್ನ ಕಣ್ಣೀರು ಹಾಕುತ್ತಾ “ನಾವು ಬದುಕಿರಬಾರದೂರೀ” ಎಂದಳು.
ಕೈಯಲ್ಲಿದ್ದ ಪುಸ್ತಕವನ್ನು ಕೆಳಗೆ ಹಾಕಿ, ಮೊಬೈಲ್ ತೆಗೆದುಕೊಂಡು ಕ್ಯಾಂಡಿ ಕ್ರಷ್ ತೆರೆದೆ. ನನಗೆ ಏನು ಮಾಡಲೂ ತೋಚದಿದ್ದಾಗ ದಾರಿತೋರಿಸುವುದು ಆ ಕ್ಯಾಂಡಿ ಕ್ರಷ್. ಒಂದೆರಡು ನಿಮಿಷಗಳಲ್ಲಿ ಅದರಲ್ಲಿ ಮುಳುಗಿಹೋದೆ. ೨೭೩ನೇ ಲೆವೆಲ್ಲು. ಐವತ್ತು ಮೂವ್ಗಳಲ್ಲಿ ಎಲ್ಲ ಜೆಲ್ಲಿಗಳನ್ನೂ ಕ್ಲಿಯರ್ ಮಾಡಬೇಕು. ಚಾಕೊಲೇಟ್, ಬಾಂಬ್ಗಳನ್ನು ಸೃಷ್ಟಿ ಮಾಡುವ ಕಡೆಗೆ ಗಮನಕೊಟ್ಟು ಇನ್ನೇನು ಎರಡೇ ಎರಡು ಜೆಲ್ಲಿ ಕ್ಲಿಯರ್ ಮಾಡಬೇಕು ಎನ್ನುವಷ್ಟರಲ್ಲಿ ’ಔಟ್ ಆಫ್ ಮೂವ್ಸ್. ಯು ಓನ್ಲಿ ನೀಡ್ ಟೂ ಮೋರ್ ಜೆಲ್ಲೀಸ್. ಗಿವ್ ಅಪ್’ ಎಂದು ಮುಖಕ್ಕೆ ಹೊಡೆಯುವ ಹಾಗೆ ಹೇಳಿತು. ಇಲ್ಲ, ಇನ್ನೊಂದು ಆಟ ಶುರು ಮಾಡಿದೆ. ಇನ್ನೂ ಹತ್ತು ಮೂವ್ಗಳು ಬಾಕಿ ಇದ್ದು, ಒಂದೇ ಒಂದು ಜೆಲ್ಲಿಯನ್ನು ಮಾತ್ರ ಕ್ಲಿಯರ್ ಮಾಡಬೇಕಾಗಿತ್ತು. ಈ ಸಲ ಎಲ್ಲಾ ಕ್ಲಿಯರ್ ಮಾಡಿಬಿಡುತ್ತೇನೆ ಎಂದು ಖುಷಿ ಅನುಭವಿಸುತ್ತಿದ್ದಾಗ ಧುತ್ತನೆ ಒಂದು ಕೆಂಪು ’ಕ್ಯಾಂಡಿ’ ಮೇಲಿನಿಂದ ಬಿತ್ತು. ಅದನ್ನು ಮೂರು ಮೂವ್ಗಳಲ್ಲಿ ಕ್ಲಿಯರ್ ಮಾಡಬೇಕು. ಹತ್ತಿರದಲ್ಲೆಲ್ಲೂ ಒಂದು ಕೆಂಪು ’ಕ್ಯಾಂಡಿ’ ಕಾಣಿಸಲೇ ಇಲ್ಲ. ಇದು ಆಗದ ಕೆಲಸ ಎನ್ನುವುದು ಖಾತರಿಯಾದಾಗ ಕೆಲವೇ ಸೆಕೆಂಡುಗಳ ಹಿಂದೆ ಅನುಭವಿಸುತ್ತಿದ್ದ ಖುಷಿ ಜರ್ರ್ ಎಂದು ಇಳಿದುಹೋಯಿತು. ’ಗಿವ್ ಅಪ್’ ಎಂದು ಹೇಳಿತು. ಎಷ್ಟು ಬುದ್ಧಿ ಖರ್ಚು ಮಾಡಿದರೂ ನಮ್ಮ ಕೈಯಲ್ಲಿ ಒಂದೊಂದು ಸಲ, ಒಂದೊಂದು ಸಲ ಏನು, ಅನೇಕ ಸಲ ಗೆಲ್ಲುವುದಕ್ಕಾಗುವುದಿಲ್ಲ. ಆಟ ಎನ್ನುವುದು ನಾನೊಬ್ಬನೇ ಆಡುವುದಲ್ಲವಲ್ಲ. ಪ್ರತಿಯೊಂದು ಮೂವ್ನ ನಂತರವೂ ಮೇಲಿನಿಂದ ’ಕ್ಯಾಂಡಿ’ಗಳು ಕೆಳಗೆ ಬೀಳುತ್ತ ಇರುತ್ತವೆ. ಅದು ನಮ್ಮ ಊಹೆಗೂ ನಿಲುಕದ್ದು. ಸೋಲುವುದು ಗೆಲ್ಲುವುದು ಅದು ’ಸುರಿಸುವ ಕ್ಯಾಂಡಿ’ಗಳ ಮೇಲೆ ನಿರ್ಧಾರವಾಗುತ್ತದೆ ಎನ್ನುವುದು ಅರಿವಿಗೆ ಬಂದಾಗ ಬುದ್ಧನಾಗುತ್ತೇನೆ. ’ರೀ ಟ್ರೈ’ ಮೇಲೆ ಬೆರಳನ್ನಿಟ್ಟೆ. ಇನ್ನೊಂದು ಆಟ ಶುರು ಮಾಡಿದೆ. ಒಂದಾದ ಮೇಲೆ ಒಂದರಂತೆ ಐದು ಬಾರಿ ಸೋತರೆ ’ಸ್ವಲ್ಪ ವಿಶ್ರಾಂತಿ ತಗೋ’ ಎನ್ನುತ್ತದೆ ಮೊಬೈಲು. ’ಆಯ್ತಪ್ಪ’ ಎಂದುಕೊಂಡು ಮೊಬೈಲನ್ನು ಕೆಳಗಿಟ್ಟು ರತ್ನಳ ಹತ್ತಿರ ಹೋದೆ. ಅವಳ ಪಕ್ಕ ಕುಳಿತು, ಅವಳ ಬೆನ್ನ ಮೇಲೆ ಕೈ ಹಾಕಿ ಮೆಲ್ಲಗೆ ನೇವರಿಸಿದೆ. ಮತ್ತೆ ಕಣ್ಣೀರಕೋಡಿ. ತಹಬಂದಿಗೆ ಬರಲೆಂದು ಸುಮ್ಮನೆ ಕುಳಿತೆ.
“ಏನ್ರೀ ಇದೂ? ಇಂಜಿನಿಯರೇ ಬೇಕು ಎಂದು ರವಿ ಆಸೆ ಪಟ್ಟಿದ್ದಕ್ಕೆ ಇಂಜಿನಿಯರ್ ಹುಡುಗಿಯನ್ನೇ ಹುಡುಕಿ ಮದುವೆ ಮಾಡಿದೆವಲ್ಲ; ಆದರೂ ಹೀಗಾಯ್ತಲ್ಲ.”
“ಏನಾಗಿಹೋಯ್ತು ಎಂದು ನೀನು ಇಷ್ಟೊಂದು ದುಃಖ ಪಡುತ್ತಿದ್ದೀಯ ರತ್ನಾ?”
“ಇನ್ನೇನ್ರೀ ಆಗಬೇಕು? ಮದುವೆ ಆಗಿ ಒಂದು ವರ್ಷ ಕೂಡ ಆಗಿಲ್ಲ. ಆಗಲೇ ಗಂಡ ಹೆಂಡತಿ ಬೇರೆ ಆದರೆ ನಾವು ಹೇಗೆ ಮುಖಎತ್ತಿಕೊಂಡು ತಿರುಗಾಡುವುದು? ನಮ್ಮ ನೆಂಟರಿಷ್ಟರಿಗೆ ಏನು ಹೇಳುವುದು? ಅವರೆಲ್ಲ ನಮ್ಮನ್ನು ನೋಡಿ ನಗೋದಿಲ್ಲವೇ? ಅದೂ ಅಲ್ಲದೆ ಅವಳು ಬಸುರಿ ಬೇರೆ. ಈಗ ಗಂಡನನ್ನು ಬಿಟ್ಟು ಹೋದರೆ, ಜನ ಆಡಿಕೊಳ್ಳುವುದಿಲ್ಲವೆ?”
“ಈಗಿನ ಹುಡುಗಿಯರು ಅದಕ್ಕೆಲ್ಲಾ ಕೇರ್ ಮಾಡುವುದಿಲ್ಲ ರತ್ನ. ಅವರೂ ಸಂಪಾದಿಸುತ್ತಾರಲ್ಲಾ. ಯಾವಾಗ ದುಡ್ಡಿಗಾಗಿ ಇನ್ನೊಬ್ಬರನ್ನು ಆಶ್ರಯಿಸಬೇಕಾಗುವುದಿಲ್ಲವೋ ಆಗ ಅವರಿಗೆ ತಮ್ಮ ಕಾಲ ಮೇಲೆ ನಿಲ್ಲುವ ಧೈರ್ಯ ಬರುತ್ತದೆ. ಅದರ ಜೊತೆಗೆ ಅಹಂಕಾರ, ಧಿಮಾಕು, ಪೊಗರುಗಳೂ ಸೇರಿಕೊಳ್ಳುತ್ತವೆ. ಆಗ ಅವರು ಯಾರಿಗೂ ಕೇರ್ ಮಾಡುವುದಿಲ್ಲ. ಆ ದುಡ್ಡಿನ ಪ್ರಭಾವ ಅವರನ್ನು ಹಾಗೆ ಆಡಿಸುತ್ತದೆ.”
“ಹಾಗೆಂದು ಹೆಣ್ಣು ಒಂಟಿಯಾಗಿ ಜೀವನ ಮಾಡುವುದಕ್ಕಾಗುತ್ತದೆಯೆ?”
“ರತ್ನಾ, ಕಾಲ ಈಗ ತುಂಬಾ ಬದಲಾಗಿ ಹೋಗಿದೆ. ಈಗೆಲ್ಲ ಸಿಂಗಲ್ ಪೇರೆಂಟ್ಗಳು ಹುಟ್ಟಿಕೊಳ್ಳುತ್ತ ಇದ್ದಾರೆ. ಕೆಲವರು ಅದನ್ನೊಂದು ಫ್ಯಾ?ನ್ ಎಂದೂ ತಿಳಿದುಕೊಂಡಿದ್ದಾರೆ.”
“ಈಗೇನೋ ವಯಸ್ಸಿದೆ, ಸಂಪಾದಿಸುವ ಶಕ್ತಿ ಇದೆ. ಆದರೆ, ಆಮೇಲೆ ಮಕ್ಕಳು ದೊಡ್ಡವರಾದ ಮೇಲೆ?”
“ಮಕ್ಕಳು ದೊಡ್ಡವರಾದ ಮೇಲೆ ಅವರು ನಮ್ಮನ್ನು ಯಾವ ದೃಷ್ಟಿಯಲ್ಲಿ ನೋಡುತ್ತಾರೆ, ನಮಗೆ ಎಷ್ಟು ಗೌರವ ಕೊಡುತ್ತಾರೆ ಎಂದೆಲ್ಲ ಯೋಚನೆ ಮಾಡುವಷ್ಟು ತಾಳ್ಮೆ ವಿವೇಚನೆ ಇದ್ದಿದ್ದರೆ ಹೀಗೆಲ್ಲ ಆಗುತ್ತ ಇರಲಿಲ್ಲ ರತ್ನಾ.”
“ಗಂಡ ಹೆಂಡತಿ ಸುಖವಾಗಿ ಇರುತ್ತಾರೆ, ಇಬ್ಬರೂ ಕೈ ತುಂಬ ಸಂಪಾದಿಸುತ್ತಾರೆ. ನಾವು ಪಟ್ಟ ಕಷ್ಟಗಳನ್ನು ಈ ಮಕ್ಕಳು ಪಡದೆ ಸುಖವಾಗಿ ಜೀವನ ಮಾಡುತ್ತಾರೆ, ಜೊತೆಗೆ ನಮ್ಮನ್ನೂ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದೆಲ್ಲ ಆಸೆ ಇಟ್ಟುಕೊಂಡಿದ್ದೆವು. ಈಗ ಏನು ಮಾಡುವುದು, ಹೀಗಾಗಿ ಹೋಯಿತಲ್ಲ” ಎಂದು ರತ್ನ ಹಲುಬಿದಳು.
“ಈ ತರಹದ ಆಸೆಗಳನ್ನು ಇಟ್ಟುಕೊಂಡೆವಲ್ಲ ನಾವು, ಅದೇ ನಾವು ಮಾಡಿದ ತಪ್ಪು. ಮಕ್ಕಳನ್ನು ಹೆತ್ತೆವು. ಹೆತ್ತ ತಪ್ಪಿಗೆ ಅವರನ್ನು ಸಾಕಿ ಬೆಳೆಸಿದೆವು. ಹಾಗೆಂದು ಅವರೂ ನಮ್ಮನ್ನ ಸಾಕಿ ಬೆಳೆಸಬೇಕು ಎನ್ನುವ ಕಾನೂನೇನೂ ಇಲ್ಲವಲ್ಲ. ನೋಡು, ನಿರೀಕ್ಷೆಗಳು ಜಾಸ್ತಿ ಆದಷ್ಟೂ ನಿರಾಸೆಗಳೂ ಜಾಸ್ತಿ ಆಗುತ್ತವೆ. ಅದಕ್ಕೇ ಜಾಸ್ತಿ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡ” ಎಂದು ಒಂದೆರಡು ನಿಮಿಷ ತಡೆದು, ಮತ್ತೆ ಅವಳ ಭುಜದ ಮೇಲೆ ಕೈ ಹಾಕಿ, “ಏನೇನು ಆಗಬೇಕು ಎಂದಿದೆಯೋ ಅವೆಲ್ಲ ಆಗಿಯೇ ಆಗುತ್ತವೆ. ಅದನ್ನು ಯಾರಿಂದಲೂ ತಪ್ಪಿಸುವುದಕ್ಕಾಗುವುದಿಲ್ಲ. ಬಂದದ್ದನ್ನೆಲ್ಲ ಅನುಭವಿಸಬೇಕು.”
“ಅಲ್ಲ, ನಾವೂ ಮದುವೆಯಾದ ಹೊಸದರಲ್ಲಿ ಜಗಳ ಆಡಿದ್ದೇವೆ. ಒಬ್ಬರ ಮೇಲೊಬ್ಬರು ಕೋಪ ಮಾಡಿಕೊಂಡದ್ದೂ ಇದೆ, ಮಾತು ಬಿಟ್ಟದ್ದೂ ಇದೆ. ಆದರೆ, ಒಂದೆರಡು ದಿವಸ ಅಷ್ಟೆ. ಆ ಒಂದೆರಡು ದಿನಗಳು ನಮಗೆ ಯುಗಗಳಾಗಿ ಕಾಣುತ್ತಿದ್ದವಲ್ಲ. ’ಯಾವಾಗ ಇವಳು ಮಾತನಾಡಿಸುತ್ತಾಳೋ’ ಎಂದು ನೀವು, ’ಯಾವಾಗ ನೀವು ಮಾತನಾಡಿಸುತ್ತೀರೋ’ ಎಂದು ನಾನು ಕಾಯುತ್ತಾ ಇದ್ದೆವು. ನೆನಪಿದೆಯಾ? ಒಬ್ಬರನೊಬ್ಬರು ಬಿಟ್ಟಿರುವುದು ಎಷ್ಟು ಕಷ್ಟ ಎಂದು ನಮಗೆ ಆ ಎರಡು ದಿನಗಳಲ್ಲಿ ಗೊತ್ತಾಗಿಬಿಡುತ್ತಿತ್ತು. ಮೂರನೇ ದಿವಸ ಯಾರಾದರೊಬ್ಬರು ಸೋತು ರಾಜಿ ಆಗಿಯೇ ಬಿಡುತ್ತಿದ್ದೆವಲ್ಲ? ಆದರೆ ಇವರು ಅದು ಹೇಗೆ ಇ? ಬೇಗ ಡೈವರ್ಸ್ ಬಗ್ಗೆ ಯೋಚನೆ ಮಾಡಿಬಿಟ್ಟರು?”
“ಆ ಕಾಲ ಹೋಯಿತು ಬಿಡು. ಅದನ್ನೆಲ್ಲ ಈಗ ಯಾಕೆ ಜ್ಞಾಪಿಸುತ್ತೀಯ? ಇವರನ್ನು ನಾವು ಸರಿಯಾಗಿ ಬೆಳೆಸಲಿಲ್ಲ ಎಂದುಕೊಳ್ಳುತ್ತೇನೆ. ಇದರಲ್ಲಿ ನಮ್ಮದೇ ತಪ್ಪಿರಬೇಕು? ನಮಗಿಂತಲೂ ಹೆಚ್ಚಿಗೆ ಓದಿದವರು, ನಮಗಿಂತ ಹೆಚ್ಚಿನ ತಿಳಿವಳಿಕೆ ಇರುವವರು ಎಂದುಕೊಂಡು ನಾವು ಬುದ್ಧಿಹೇಳುವುದಕ್ಕೆ ಹಿಂಜರಿಯುತ್ತ ಇದ್ದದ್ದೇ ನಮ್ಮ ತಪ್ಪು ಎಂದು ಕಾಣುತ್ತದೆ.”
“ಹಾಗೆಂದುಕೊಂಡು ನಾವು ಬುದ್ಧಿಹೇಳುವುದಕ್ಕೆ ಹೋದರೆ ಅವರೆಲ್ಲಿ ಕೇಳುತ್ತಿದ್ದರು? ’ನಿಮಗೆ ಗೊತ್ತಾಗುವುದಿಲ್ಲ ಸುಮ್ಮನಿರಿ’ ಎಂದು ಬಾಯಿ ಮುಚ್ಚಿಸಿಬಿಡುತ್ತಿದ್ದರಲ್ಲ.”
“ಒಟ್ಟಿನಲ್ಲಿ ಎಲ್ಲ ನಮ್ಮ ಹಣೆಬರಹ. ಕೊನೆಗಾಲದಲ್ಲಿ ನೆಮ್ಮದಿಯಿಂದ ಜೀವಿಸುವುದಕ್ಕೆ ಆಗುತ್ತಾ ಇಲ್ಲ ಅಷ್ಟೆ” ಎಂದು ದೊಡ್ಡದಾಗಿ ನಿಟ್ಟುಸಿರು ಬಿಟ್ಟೆ.
“ಒಂದು ಚೂರು ಕಾಫಿ ಮಾಡಿಕೊಂಡು ಬರುತ್ತೇನೆ, ಇರಿ” ಎಂದು ರತ್ನಾ ಅಡುಗೆಮನೆ ಸೇರಿದಳು.
ನಾನು ಸುಮ್ಮನೆ ಕುಳಿತೆ. ಕಾಫಿಯ ಲೋಟಗಳೊಡನೆ ಬಂದ ರತ್ನ ನನಗೊಂದು ಲೋಟ ಕೊಟ್ಟು ತಾನು ಇನ್ನೊಂದನ್ನು ಹಿಡಿದು ಕುಡಿಯುತ್ತ ಕುಳಿತಳು. ಅವಳನ್ನೇ ನೋಡುತ್ತ ಕಾಫಿ ಗುಟುಕರಿಸುತ್ತಿದ್ದೆ. ಹತಾಶೆ, ನೋವುಗಳಿಂದ ಸೊರಗಿಹೋಗಿದ್ದ ಅವಳನ್ನು ಸಂತೋ?ಪಡಿಸುವ ಪರಿ ನನಗೆ ಗೊತ್ತಾಗಲಿಲ್ಲ. “ರೀ, ಅವಳನ್ನು ಬಿಟ್ಟು ಇವನು ಅದು ಹೇಗಿರುತ್ತಾನೆ? ಇವನ ಜೊತೆ ಆರು ತಿಂಗಳು ಜೀವನ ನಡೆಸಿ ಈಗ ಬೇರೆ ಆಗುವುದು ಅ? ಸುಲಭವೇ? ಅವಳು ತಾನೇ ನೆಮ್ಮದಿಯಾಗಿ ಇರುತ್ತಾಳಾ?
“ಈಗಿನ ಹುಡುಗರ ಮನಸ್ಸನ್ನು ಅರ್ಥಮಾಡಿಕೊಳ್ಳುವುದಕ್ಕೇ ಆಗುವುದಿಲ್ಲ. ಬಹುಶಃ, ಇವುಗಳಿಗೆಲ್ಲ ಇವರು ಮೊದಲೇ ಸಿದ್ಧರಾಗಿರುತ್ತಾರೆ ಎಂದು ಕಾಣುತ್ತದೆ.”
“ರವಿಯನ್ನು ನೋಡಿದರೆ ಅಯ್ಯೋ ಎನಿಸುತ್ತದೆ.”
“ರವಿ ಮಾತ್ರ ಏನು, ಅವಳನ್ನು ನೋಡಿದರೂ ಅಯ್ಯೋ ಅನ್ನಿಸುತ್ತದೆ.”
ಮತ್ತೆ ಮಾತು ಮುಂದುವರಿಯಲಿಲ್ಲ. ರತ್ನಾ ಗಡಿಯಾರ ನೋಡಿ ಬೆಚ್ಚಿಬಿದ್ದವಳಂತೆ “ಹತ್ತು ಗಂಟೆ ಆಯ್ತಲ್ರೀ. ಇನ್ನೂ ಬರಲಿಲ್ಲವಲ್ಲ ಇವರು” ಎಂದಳು.
“ಬರುತ್ತಾರೆ ಬಿಡು. ಇನ್ನೂ ಹತ್ತು ಗಂಟೆ” ಎಂದೆ.
“ಹೋಗುವಾಗ ಅವನು ಏನು ಹೇಳಲೂ ಇಲ್ಲ. ನನಗೆ ಯಾಕೋ ಭಯ ಆಗುತ್ತಿದೆ. ಹುಡುಗರು ಏನಾದರೂ ಮಾಡಿಕೊಂಡರೆ?”
ಜೋರಾಗಿ ನಗುತ್ತಾ, “ಹಾಗೆಲ್ಲ ಏನೂ ಆಗುವುದಿಲ್ಲ ಬಿಡು. ಖಂಡಿತ ಆಗುವುದಿಲ್ಲ. ನೀನೇನೂ ಯೋಚನೆ ಮಾಡಬೇಡ. ಹೋಗು ಏನಾದರೂ ಒಂದ? ಉಳಿದಿದ್ದರೆ ಕಲಸಿಕೊಂಡು ಬಂದುಬಿಡು. ತಿಂದು ತೆಪ್ಪಗೆ ಮಲಗಿಕೊಳ್ಳೋಣ” ಎಂದೆ. ಆದರೆ, ರತ್ನ ಗಡಿಯಾರದತ್ತ ಪದೇಪದೇ ನೋಡುವುದನ್ನು ಮಾತ್ರ ಬಿಡಲಿಲ್ಲ.
ನಾನು, ಅಂಗಾತ ಮಲಗಿ ವಿವಿಧಭಾರತಿಗೆ ಕಿವಿಕೊಟ್ಟೆ. ಧಡಕ್ಕನೆದ್ದ ರತ್ನ “ಬಂದ ಎಂದು ಕಾಣುತ್ತದೆ” ಎನ್ನುತ್ತ ಎದ್ದುಹೋಗಿ ಬಾಗಿಲು ತೆಗೆದಳು. ನನಗೆ ಕೇಳಿಸದ ಕಾರಿನ ಶಬ್ದ ಅವಳಿಗೆ ಕೇಳಿಸಿತ್ತು. ಮಗ ಸೊಸೆ ಇಬ್ಬರೂ ಒಳಗೆ ಬಂದರು. ಓಹ್! ಇಬ್ಬರೂ ಬಂದರಲ್ಲ ಎಂದು ಖುಷಿಯಾಗಿಹೋಯಿತು. “ಬನ್ನಿ ಬನ್ನಿ” ಎಂದೆ. ರತ್ನ “ಊಟಕ್ಕೆ ಬಡಿಸಲಾ?” ಎಂದು ಕೇಳಿದಳು. ಯಾವುದಕ್ಕೂ ಉತ್ತರ ಕೊಡದೆ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡರು. “ನೋಡಿರೀ, ನಮ್ಮನ್ನು ನೋಡಲೂ ಇಲ್ಲ” ಎಂದು ಕಣ್ಣಿನಲ್ಲಿ ನೀರು ತಂದುಕೊಂಡಳು ರತ್ನ. “ಅದಕ್ಕೆ ಯಾಕೆ ಬೇಜಾರು ಮಾಡಿಕೊಳ್ಳುತ್ತೀಯಾ? ಮಾತನಾಡಿಸದೇ ಇದ್ದರೆ ಏನಂತೆ, ಇಬ್ಬರೂ ವಾಪಸ್ ಬಂದರಲ್ಲ, ಅದಕ್ಕೆ ಸಂತೋಷಪಡು” ಎಂದೆ. ಅವರ ರೂಮಿನೊಳಗಿನಿಂದ ದಡಬಡ ಎನ್ನುವ ಶಬ್ದಗಳು ಕೇಳಿಸುತ್ತಿದ್ದವೇ ಹೊರತು ಬೇರೆ ಒಂದು ಮಾತೂ ಕೇಳಿಸಲಿಲ್ಲ. ಒಂದರ್ಧ ಗಂಟೆ ಕಳೆಯಿತು. ಬಾಗಿಲು ತೆಗೆದರು. ಅವಳ ಎರಡೂ ಕೈಗಳಲ್ಲಿ ಒಂದೊಂದು ಸೂಟ್ಕೇಸ್. ಇಬ್ಬರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡೆವು. ಅಷ್ಟರಲ್ಲಿ ಸೂಟ್ಕೇಸ್ಗಳನ್ನು ಕೆಳಗಿಟ್ಟ ಸೊಸೆ ಮೊಬೈಲನ್ನು ಕಿವಿಗೆ ಇಟ್ಟುಕೊಂಡು “ಹಾಂ. ಅಲ್ಲಿಂದ ಹಾಗೇ ಮುಂದೆ ಬನ್ನಿ. ಅಲ್ಲೊಂದು ಬೇಕರಿ ಸಿಗುತ್ತದೆ, ಜನಾರ್ದನ ಬೇಕರಿ ಎಂದು. ಅಲ್ಲಿಂದ ಮುಂದಕ್ಕೆ ಎರಡನೇ ಕ್ರಾಸ್ನಲ್ಲಿ ಬಲಕ್ಕೆ ತಿರುಗಿಕೊಳ್ಳಿ. ಎಡಕ್ಕೆ ಐದನೇ ಮನೆ. ಮನೆ ಮುಂದೆ ಒಂದು ಚೇಪೆ ಮರ ಇದೆ. ಇನ್ನು ಮೂರು ನಿಮಿಷ ಆಗುತ್ತಾ? ಓಕೆ, ಓಕೆ” ಎಂದಳು. ಮೂರೇ ನಿಮಿಷಗಳಲ್ಲಿ ಮನೆಯ ಮುಂದೆ ಊಬರ್ ಬಂದು ನಿಂತಿತು. ನನ್ನ ಎದೆ ಢವಗುಟ್ಟಿತು. ರತ್ನಳ ಎದೆ? ತಕ್ಷಣ ಅವಳ ಪಕ್ಕ ನಿಂತು ಬೆನ್ನಿನ ಹಿಂದೆ ಕೈ ಹಾಕಿ ಬಲತೋಳನ್ನು ಹಿಡಿದು ಆಸರೆಯಾಗಿ ನಿಂತೆ. ಸೊಸೆ ಎರಡೂ ಸೂಟ್ಕೇಸ್ಗಳನ್ನು ಎತ್ತಿಕೊಂಡು ಗೇಟು ದಾಟಿದಳು. ರವಿಯ ಮುಖವನ್ನೂ ನೋಡದೆ ’ಬೈ’ ಎಂದಳು. ಅವನೂ ’ಬೈ’ ಎಂದ. ತೆರೆದಿದ್ದ ಡಿಕ್ಕಿಯಲ್ಲಿ ಎರಡೂ ಸೂಟ್ಕೇಸ್ಗಳನ್ನಿಟ್ಟು, ಕಾರ್ ಹತ್ತಿ ಕುಳಿತು, ಕಿಟಕಿಯ ಗಾಜನ್ನು ಕೆಳಗಿಳಿಸಿ, ನೋಡಿಯೂ ನೋಡದಂತೆ ಒಂದು ಕ್ಷಣ ನಮ್ಮ ಕಡೆ ನೋಡಿ ’ಬೈ’ ಎಂದಳು. ರತ್ನಾ ನನ್ನ ಮುಖ ನೋಡಿದಳು, ’ಏನಾದರೂ ಮಾಡಿ’ ಎನ್ನುವಂತೆ. ಡ್ರೈವರ್ ಡಿಕ್ಕಿಯ ಬಾಗಿಲನ್ನು ಹಾಕಿ ತಾನೂ ಕುಳಿತು ಕಾರ್ ಸ್ಟಾರ್ಟ್ ಮಾಡುತ್ತಿದ್ದಂತೆ ಹಿಂದೆ ತಿರುಗಿ ನೋಡಿದೆ. ರವಿ ಆಗಲೇ ಮನೆಯೊಳಗೆ ಹೊರಟುಹೋಗಿದ್ದ. ನಾವಿಬ್ಬರೂ ನಿಶ್ಚೇಷ್ಟಿತರಾಗಿ ಟ್ಯಾಕ್ಸಿ ಹೋದತ್ತ ನೋಡುತ್ತ ನಿಂತೆವು. ಎ? ಹೊತ್ತಿನ ಮೇಲೆ ಭಾರವಾದ ಹೆಜ್ಜೆಗಳನ್ನು ಹಾಕುತ್ತಾ ಮನೆಯೊಳಗೆ ಕಾಲಿಟ್ಟೆವು. ರತ್ನಳಿಗೆ ದುಃಖ ಉಮ್ಮಳಿಸಿ ಬಂತು. ಮಗ ರೂಮು ಸೇರಿದ್ದ. “ರವಿಯನ್ನು ಹೇಗೆ ಸಮಾಧಾನ ಮಾಡುವುದು, ಪಾಪ” ಎಂದು ಸುಮ್ಮನಾದಳು. ಒಂದೆರಡು ಕ್ಷಣಗಳಲ್ಲಿ ಹೊಸ ಹುರುಪಿನಿಂದೆಂಬಂತೆ “ಇವೆಲ್ಲ ಒಂದೆರಡು ದಿನ ಅ? ಅಲ್ಲವೇನ್ರೀ. ಒಬ್ಬರನ್ನೊಬ್ಬರು ಬಿಟ್ಟಿರುವುದಕ್ಕೆ ಇಬ್ಬರಿಗೂ ಆಗುವುದಿಲ್ಲ. ಅವಳು ವಾಪಸ್ ಬಂದೇ ಬರುತ್ತಾಳೆ” ಎಂದಳು. ಹಾಗೆ ಹೇಳುತ್ತಿದ್ದ ಅವಳ ಕಣ್ಣುಗಳಲ್ಲಿ ಹೊಳಪನ್ನು ಕಂಡೆ. ’ಹುಚ್ಚಿ’ ಎಂದುಕೊಂಡು ಹುಚ್ಚನಂತೆ ನಕ್ಕೆ.
ರೂಮಿನ ಬಾಗಿಲ ಚಿಲಕ ತೆಗೆದ ಶಬ್ದವಾಯಿತು. ಇಬ್ಬರೂ ಆ ಕಡೆಗೆ ನೋಡಿದೆವು. ರವಿ ಆಚೆಗೆ ಬಂದವನೇ “ಅಮ್ಮಾ, ಹೊಟ್ಟೆ ಹಸಿಯುತ್ತಿದೆ. ಏನಾದರೂ ಮಾಡಮ್ಮ ಬೇಗ” ಎಂದ. ನಾವು ಅಂದುಕೊಂಡಿದ್ದಂತೆ ಅವನ ಮುಖದಲ್ಲಿ ಯಾವ ಬೇಸರ, ದುಃಖ, ವ್ಯಸನ, ನೋವು, ಲೊಟ್ಟೆ ಲೊಸಕುಗಳೊಂದೂ ಕಾಣಿಸಲಿಲ್ಲ. ಮತ್ತೆ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡೆವು. ರತ್ನಳಂತೂ ಆಶ್ಚರ್ಯದಿಂದ ಮಗನ ಮುಖವನ್ನೇ ನೋಡುತ್ತಿದ್ದಳು. “ಏನಮ್ಮ ಹಾಗೆ ನೋಡುತ್ತಿದ್ದೀಯಾ. ಹೋಗು ಹೋಗು, ಬೇಗ ಏನಾದರೂ ಮಾಡು” ಎಂದ, ಚಿಕ್ಕಮಗುವಿನಂತೆ. ರತ್ನ ಅಡುಗೆ ಮನೆಗೆ ಹೋಗುತ್ತಿದ್ದಂತೆ ರವಿ ಟಿವಿ ಆನ್ ಮಾಡಿ ಐಪಿಎಲ್ ಮ್ಯಾಚ್ ನೋಡುವುದರಲ್ಲಿ ತಲ್ಲೀನನಾದ.
ಅಗಲಿಕೆ ಇಷ್ಟೊಂದು ಸಲೀಸೇ?
ಮನಸ್ಸನ್ನು ಒಂದು ಹದಕ್ಕೆ ತಂದುಕೊಳ್ಳುವುದಕ್ಕೆ ನನಗೆ ಸುಮಾರು ಹೊತ್ತೇ ಹಿಡಿಯಿತು.
ಟೇಬಲ್ ಮುಂದೆ ಕುಳಿತೆ.
ಕಾಗದದ ಮೇಲಿನ ಚುಕ್ಕಿ ನನ್ನನ್ನೇ ಕರೆಯುತ್ತಿತ್ತು.