ಮನುಷ್ಯನು ಒಂಟಿಯಾಗಿ ಈ ಭೂಮಿಗೆ ಬರುತ್ತಾನೆ; ಒಂಟಿಯಾಗಿಯೇ ಈ ಭೂಮಿಯನ್ನು ಬಿಟ್ಟು ಹೋಗುತ್ತಾನೆ. ಜನನ-ಮರಣವೆಂಬುದು ಒಂಟಿಯಾದರೂ ಅದರ ನಡುವಿನ ಜೀವನ ಮಾತ್ರ ಒಂಟಿಯಾಗಿರುವುದಿಲ್ಲ. ಬದುಕಿಗೆ ಸಮಾಜದ ಆಧಾರ, ನೆರವು ಬೇಕೇ ಬೇಕು; ಏಕೆಂದರೆ ಮನು?ನು ಸಂಘಜೀವಿ. ಈ ಸೃಷ್ಟಿಯಲ್ಲಿ ಮನುಷ್ಯ ಮಾತ್ರವಲ್ಲ, ಎಲ್ಲ ಜೀವಿಗಳೂ ಸಂಘಜೀವಿಗಳೇ.
ಸಮಾಜವಿಲ್ಲದೆ ನಾವು ಬದುಕುವುದು ಅಸಾಧ್ಯ; ಆದರೆ ಸಮಾಜ ನಾವಿಲ್ಲದೆಯೂ ಬದುಕುತ್ತದೆ. ಅಂದರೆ ನಮ್ಮ ಬದುಕಿಗೆ ಸಮಾಜ ಅನಿವಾರ್ಯವೇ ವಿನಾ ಸಮಾಜದ ಜೀವಂತಿಕೆಗೆ ನಮ್ಮ ಆವಶ್ಯಕತೆ ಇಲ್ಲ. ಆದ್ದರಿಂದ ನಮ್ಮ ಜೀವನಕ್ಕೆ ಮೂಲಾಧಾರವಾದ ಸಮಾಜವನ್ನು ಮರೆತು ಬದುಕುವುದು ಸಾಧುವೇ, ಸಾಧ್ಯವೇ?
ಹುಟ್ಟಿದ ಕೆಲವೇ ಕ್ಷಣಗಳಲ್ಲಿ ಮಗುವಿಗೆ ತಾಯಿ ಎದೆಹಾಲು ಕೊಟ್ಟು ಪೋಷಿಸುತ್ತಾಳೆ. ಆ ತಾಯಿಯೇ ಮುಂದೆ ಮಗುವಿಗೆ ನಡಿಗೆಯನ್ನೂ ಮಾತನ್ನೂ ಕಲಿಸುತ್ತಾಳೆ. ಸ್ವಲ್ಪ ದೊಡ್ಡವನಾದ ಮೇಲೆ ಶಾಲೆಗೆ ಹೋದಾಗ ಗುರು ಆತನಿಗೆ ವಿದ್ಯೆಯನ್ನು ಹೇಳಿಕೊಡುತ್ತಾನೆ. ವಿದ್ಯೆ ಕಲಿತ ಮೇಲೆ ಈ
ಸಮಾಜ ಆತನ ನೌಕರಿಗೆ, ಉದ್ಯಮಕ್ಕೆ ಸಹಕಾರ ನೀಡುತ್ತದೆ. ಅಂದರೆ ಆತನ ಉದರಪೋಷಣೆಯಾಗುವುದು, ಆತನಲ್ಲಿ ಸಂಪತ್ತು ಶೇಖರಣೆಯಾಗುವುದು ಈ ಸಮಾಜದಿಂದಲೇ. ನಾವು ಉಡುವ ಬಟ್ಟೆಯಾಗಲಿ, ತಿನ್ನುವ ಆಹಾರವಾಗಲಿ, ವಾಸಿಸುವ ಮನೆಯಾಗಲಿ ಎಲ್ಲವನ್ನೂ ಸಮಾಜ ನೀಡುತ್ತದೆ. ಅಂದರೆ ನಮ್ಮ ಜೀವನದಲ್ಲಿ ಸಮಾಜದಿಂದ ಪಡೆದದ್ದೇ ಹೆಚ್ಚು ವಿನಾ ಸಮಾಜಕ್ಕೆ ನಮ್ಮ ಕೊಡುಗೆ ನಗಣ್ಯ.
ವೈಜ್ಞಾನಿಕ ಸತ್ಯ
ಮನುಷ್ಯನು ಮೂರುದಿನ ಆಹಾರವಿಲ್ಲದೆ ಬದುಕಬಹುದು; ಆದರೆ ಮೂರುದಿನ ಸಮಾಜದ ಯಾರೊಂದಿಗೂ ಬೆರೆಯದೆ ಬದುಕುವುದಕ್ಕಾಗುವುದಿಲ್ಲ. ಏಕೆಂದರೆ ವ್ಯಕ್ತಿ ಹಾಗೂ ವ್ಯಷ್ಟಿ ಅಷ್ಟೊಂದು ಅವಿನಾಭಾವ ಸಂಬಂಧದಿಂದ ಬೆಸೆದುಕೊಂಡಿದೆ. ವ್ಯಕ್ತಿ ಮತ್ತು ಸಮಾಜ ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಇದನ್ನೇನಾದರೂ ಬೇರ್ಪಡಿಸಲು ಪ್ರಯತ್ನಿಸಿದರೆ ಮನುಷ್ಯನು ಜೀವಂತ ಶವವಾಗುತ್ತಾನೆ, ಖಿನ್ನತೆಗೆ ಒಳಗಾಗುತ್ತಾನೆ. ಸಮಾಜಮುಖಿ ಜೀವನದಿಂದ ಖಿನ್ನತೆಯನ್ನು ಪರಿಹರಿಸಬಹುದು ಎನ್ನುತ್ತಾರೆ ಬಲ್ಲವರು.
’ಒಬ್ಬ ಶ್ರೀಮಂತ ಯುವಕನಿದ್ದಾನೆ. ಆತನಿಗೆ ಬದುಕಿನಲ್ಲಿ ಸಾಕ? ಸಿರಿ-ಸಂಪತ್ತುಗಳು ಸೌಲಭ್ಯಗಳು ಎಲ್ಲವೂ ಇದೆ. ಆದರೂ ಆತ ಏಕೋ ಖಿನ್ನತೆಗೆ ಒಳಗಾಗಿದ್ದಾನೆ. ಈಗ ಆತ ಏನು ಮಾಡಬೇಕು?’ ಈ ಪ್ರಶ್ನೆಯನ್ನು ಸ್ವಾಮಿ ವಿವೇಕಾನಂದರಿಗೆ ಕೇಳಿದಾಗ ಅವರು ’ಬಹುಶಃ ಆತನಿಗೆ ಸಾಕ? ದೈಹಿಕ ವ್ಯಾಯಾಮ ಇಲ್ಲವೆಂದು ಕಾಣುತ್ತದೆ. ಆತನಿಗೆ ಯಾವುದಾದರೊಂದು ಫುಟ್ಬಾಲ್ ತಂಡಕ್ಕೆ ಸೇರಿಕೊಂಡು ಆಡಲು ಹೇಳಿ. ಆತನ ಮನಸ್ಸು ಮತ್ತು ದೇಹವು ಸೇರಿ ಚಟುವಟಿಕೆಯಿಂದ ಇದ್ದರೆ ಖಿನ್ನತೆ ದೂರವಾಗುತ್ತದೆ. ಆಗಲೂ ಖಿನ್ನತೆ ದೂರವಾಗದಿದ್ದರೆ, ಇದೀಗ ಬಂಗಾಲದಲ್ಲಿ ಬರಗಾಲ ತಾಂಡವವಾಡುತ್ತಿದೆ. ಸಾವಿರಾರು ಜನ ಹಸಿವಿಗೆ ಬಲಿಯಾಗುತ್ತಿದ್ದಾರೆ. ಆ ದರಿದ್ರನಾರಾಯಣರ ಸೇವೆಯಲ್ಲಿ ಆತ ತನ್ನ ದೈಹಿಕ ಮತ್ತು ಆರ್ಥಿಕ ಸಾಮರ್ಥ್ಯವನ್ನು ಸದುಪಯೋಗಪಡಿಸಿಕೊಳ್ಳಲಿ. ಆಗ ಆತನಿಗೆ ಖಿನ್ನತೆಯಿಂದ ಇರಲು ಸಮಯವೇ ಇರುವುದಿಲ್ಲ’ ಎಂದರಂತೆ.
ಇದೇ ಪ್ರಶ್ನೆಯನ್ನು ಡಾ|| ಕಾರ್ಲ್ ಮೆನಿನ್ಜರ್ ಎಂಬ ಸುಪ್ರಸಿದ್ಧ ಮನಃಶಾಸ್ತ್ರಜ್ಞರಿಗೆ ಕೇಳಿದಾಗ, ಅವರು ’ಯಾರಾದರೂ ಮನೋವೈದ್ಯರಿಂದ ಚಿಕಿತ್ಸೆ ಪಡೆಯಿರಿ’ ಎಂದು ಹೇಳುತ್ತಾರೆಂದು ನಿರೀಕ್ಷಿಸಲಾಯಿತು. ಆದರೆ ಡಾ|| ಕಾರ್ಲ್ರು “ಅಂತಹವರು ತಮ್ಮ ಬಂಗ್ಲೆಯನ್ನು ಬಿಟ್ಟು ಹೊರಕ್ಕೆ ಬರಲಿ. ಮುಖ್ಯರಸ್ತೆಯಲ್ಲಿ ನಿಂತುಕೊಳ್ಳಲಿ. ಕೊಂಚ ಹೊತ್ತಿನಲ್ಲಿ ಅಲ್ಲಿಗೆ ಯಾರಾದರೂ ಬಂದೇ ಬರುತ್ತಾರೆ. ಅವರ ಮುಖವನ್ನು ನೋಡಿದರೆ, ಅವರು ಕ?ದಲ್ಲಿದ್ದಾರೆಂದು ಗೊತ್ತಾಗುತ್ತದೆ. ಅವರ ಬಳಿ ಮೃದುವಚನಗಳಲ್ಲಿ ಮಾತನಾಡಲಿ. ಅವರ ಕ?ವೇನೆಂದು ತಿಳಿದುಕೊಳ್ಳಲಿ. ಅವರಿಗೆ ಸಾಧ್ಯವಾದ ಸಹಾಯ ಮಾಡಿದರೆ ಎಂತಹ ಮನಸ್ಸಿನ ಖಿನ್ನತೆಯಿದ್ದರೂ ಅದು ಖಂಡಿತವಾಗಿಯೂ ದೂರವಾಗುತ್ತದೆ” ಎಂದರಂತೆ.
ಹೀಗೆ ಸಮಾಜದೊಂದಿಗೆ ಬೆರೆತರೆ, ಬೇರೆಯವರಿಗೆ ಸಹಾಯ ಮಾಡಿದರೆ ನಮ್ಮ ಮನಸ್ಸು ಸ್ವಸ್ಥವಾಗಿರುತ್ತದೆ ಎಂಬುದು ಸಾಮಾಜಿಕ ಹಾಗೂ ವೈಜ್ಞಾನಿಕ ಸತ್ಯ.
ಈವತ್ತು ಮನುಷ್ಯ-ಮನುಷ್ಯರ ನಡುವೆ ಸಂವಹನ ಕಡಮೆಯಾಗುತ್ತಿದೆ, ಸಂಬಂಧಗಳು ದೂರವಾಗುತ್ತಿವೆ. ಯಾರೂ ಇನ್ನೊಬ್ಬರ ಮನೆಗೆ ಹೋಗುವುದಿಲ್ಲ. ಯಾರೂ ಇನ್ನೊಬ್ಬರನ್ನು ಅತಿಥಿಯಾಗಿ ತಮ್ಮ ಮನೆಗೆ ಕರೆಯುವುದಿಲ್ಲ. ಮನೆಯ ಸದಸ್ಯರೊಳಗೂ ಪರಸ್ಪರ ಮಾತುಕತೆ ಕಡಮೆಯಾಗುತ್ತಿದೆ. ಪ್ರತಿಯೊಬ್ಬರೂ ಟಿವಿ ಮುಂದೆಯೇ ಕುಳಿತುಕೊಳ್ಳಲು ಇಚ್ಛೆ ವ್ಯಕ್ತಪಡಿಸುತ್ತಾರೆಯೇ ವಿನಾ ಮನೆಯ ಸದಸ್ಯರೊಡನೆ ಕುಳಿತು ಪರಸ್ಪರ ಹರಟೆಹೊಡೆಯುವುದನ್ನು ಇಷ್ಟಪಡುವುದಿಲ್ಲ.
ಆಧುನಿಕ ವಿಪರ್ಯಾಸ
ನಾವು ಈವತ್ತು ಫೇಸ್ಬುಕ್ನಲ್ಲಿ, ವಾಟ್ಸಾಪ್ನಲ್ಲಿ ಪರಸ್ಪರ ಮಾತನಾಡುತ್ತೇವೆಯೇ ವಿನಾ ಪರಸ್ಪರ ಮುಖಾಮುಖಿಯಾದಾಗ ಬಾಯಿಯನ್ನು ತೆರೆಯುವುದೇ ಇಲ್ಲ. ಇಂದು ಹೆಚ್ಚಿನವರಿಗೆ ಮನು?ರ ಸಹವಾಸಕ್ಕಿಂತ ಯಂತ್ರದ ಸಹವಾಸವೇ ಸಹ್ಯವಾಗಿದೆ. ಆದರೆ ನಮ್ಮ ಹಿರಿಯರು ಇದಕ್ಕೆ ಅಪವಾದವಾಗಿದ್ದರು. ಅವರಿಗೆ ಗಂಡ-ಹೆಂಡತಿ, ಮಕ್ಕಳು, ಮೊಮ್ಮಕ್ಕಳು ಹೀಗೆ ಎಲ್ಲರ ಸಹವಾಸವೂ ಬೇಕು. ಅವರು ಯಂತ್ರದ ಸಹವಾಸವನ್ನು ಬಯಸದೆ ಮಾನವರ ಸಹವಾಸವನ್ನು ಬಯಸುತ್ತಿದ್ದರು.
ವೃದ್ಧೆಯೊಬ್ಬರು ಅಂಚೆಕಛೇರಿಯಲ್ಲಿ ಸರತಿಸಾಲು ಹಿಡಿದು ನಿಂತಿದ್ದಳು. ಅವಳ ಕೈಯಲ್ಲಿ ಅಂಚೆರವಾನೆಗೆ ತಯಾರಾದ ಯಾವುದೇ ಲಕೋಟೆ-ಕಟ್ಟುಗಳೂ ಇರಲಿಲ್ಲ. ಇದನ್ನು ಗಮನಿಸಿದ ಮುದುಕಿಯ ಹಿಂದೆಯೇ ಇದ್ದ ಯುವಕ ಆಕೆ ಏತಕ್ಕಾಗಿ ಕ್ಯೂನಲ್ಲಿ ನಿಂತಿದ್ದಾಳೆಂದು ವಿಚಾರಿಸಿದ. ಕೆಲವು ಅಂಚೆಚೀಟಿಗಳನ್ನು ಕೊಳ್ಳಲು ತಾನು ಅಲ್ಲಿ ನಿಂತಿರುವುದಾಗಿ ಅವಳು ತಿಳಿಸಿದಳು.
ಕೂಡಲೇ ಯುವಕ, ’ಮೇಡಂ, ನೀವು ಅಂಚೆಚೀಟಿ ಖರೀದಿಸಲು ಸರದಿಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ. ನೋಡಿ, ಆಚೆಯ ಮೂಲೆಯಲ್ಲಿ ಚೀಟಿ ಕೊಡುವ ಸ್ವಯಂಚಾಲಿತ ಯಂತ್ರವಿದೆ. ಸಮಯವೂ ಉಳಿಯುತ್ತದೆ, ಶ್ರಮವೂ ತಪ್ಪುತ್ತದೆ’ ಎಂದ.
ಆಗ ಮುದುಕಿ ಆತನ ಬೆನ್ನುತಟ್ಟಿ ’ಹೌದಪ್ಪಾ, ನನಗೆ ಗೊತ್ತು. ಆದರೆ ಹಣ ಹಾಕಿದೊಡನೆ ಚೀಟಿ ಹೊರದೂಡುವ ಯಂತ್ರವು ಅಜ್ಜಿ ಹೇಗಿದ್ದಿ, ನಿನ್ನ ಮೊಮ್ಮಕ್ಕಳು ಏನು ಮಾಡುತ್ತಾರೆ, ನಿನ್ನ ಮಂಡಿನೋವು ಹೇಗಿದೆ? ಇತ್ಯಾದಿ ಸುಖ-ದುಃಖಗಳನ್ನು ವಿಚಾರಿಸುವುದಿಲ್ಲವಲ!’ ಎಂದು ಮುಗುಳ್ನಕ್ಕಳು.
ಮನುಷ್ಯನಿಗೆ ಸಾಮಾಜಿಕ ಬದುಕು ಇರುವುದರಿಂದಲೇ ಆತನ ಬದುಕು ಸಹ್ಯವಾಗಿದೆ. ಮನುಷ್ಯನು ತನ್ನ ಭಾವನೆಗೆ ಬೇರೆಯವರಿಂದ ಸದಾ ಸ್ಪಂದನೆಯನ್ನು ಬಯಸುತ್ತಾನೆ. ಈ ಸ್ಪಂದನೆ ಎಂಬುದು ಜಡವಸ್ತುವಿನಿಂದ ಸಿಗುವುದಿಲ್ಲ. ಮನು?ನಿಗೆ ಅತಿ ದುಃಖವಾದಾಗ ಅಥವಾ ಅತಿ ಸಂತೋಷವಾದಾಗ ಅದನ್ನು ಹಂಚಿಕೊಳ್ಳಲು ಆತನಿಗೆ ಬಂಧು-ಬಳಗದವರು ಬೇಕಾಗುತ್ತಾರೆ. ಆಶ್ಚರ್ಯವೆಂದರೆ ನಮ್ಮ ದುಃಖವನ್ನು ಸಮಾಜದ ಬಾಂಧವರಲ್ಲಿ ತೋಡಿಕೊಂಡಾಗ ಕಡಮೆಯಾಗುತ್ತದೆ. ಸಂತೋಷವನ್ನು ಹಂಚಿಕೊಂಡರೆ ಅದು ವೃದ್ಧಿಯಾಗುತ್ತದೆ. ಆದ್ದರಿಂದ ಒಬ್ಬಂಟಿಗನಾಗಿರದೆ ಸಮಾಜದೊಂದಿಗೆ ಬೆರೆತರೆ ಜೀವಂತಿಕೆಯೊಂದಿಗೆ ಬದುಕಬಹುದು. ಒಂಟಿತನ ನಿರಾಶಾವಾದಕ್ಕೆ ಹೇತುವಾದರೆ, ಸಂಘಜೀವನ ಆಶಾವಾದಕ್ಕೆ ನಾಂದಿಹಾಡುತ್ತದೆ. ಸಂಸ್ಕೃತದ ಸುಭಾಷಿತವೊಂದು ಈ ರೀತಿ ಹೇಳುತ್ತದೆ –
ಏಕಃ ಸ್ವಾದು ನ ಭುಂಜೀತ ನೈಕಃ ಕಾರ್ಯಂ ವಿಚಿಂತಯೇತ್|
ಏಕೋ ನ ಗಚ್ಛೇದಧ್ವಾನಂ ನೈಕಃ ಸುಪ್ತೇಷು ಜಾಗೃಯಾತ್||
– ಸುಭಾಷಿತಸುಧಾನಿಧಿ
’ಮಧುರವಾದದ್ದನ್ನು ಒಬ್ಬಂಟಿಯಾಗಿ ಕುಳಿತು ತಿನ್ನಬಾರದು. ಯಾವುದೇ ಕಾರ್ಯದ ಕುರಿತು ಒಬ್ಬನೇ ಚಿಂತಿಸಬಾರದು. ಒಬ್ಬನೇ ದಾರಿ ನಡೆಯಬಾರದು. ಎಲ್ಲರೂ ನಿದ್ರಿಸುವಾಗ ತಾನು ಏಕಾಂಗಿಯಾಗಿ ಕುಳಿತು ಸಂಧಾನ ಮಾಡಬಾರದು’ ಎಂಬುದೇ ಇದರ ಅರ್ಥ.
ಪ್ರತ್ಯಕ್ಷ ಆದರ್ಶಗಳು
ಸಮಾಜದ ಜೊತೆಗೆ ನಾವು ಹೆಜ್ಜೆಯನ್ನಿಟ್ಟು ನಡೆಯುವುದರಲ್ಲಿ ಮತ್ತು ಅದರ ಹಿತ ಕಾಪಾಡುವಲ್ಲಿ ನಮ್ಮ ಹಿತ ಅಡಗಿದೆ. ನೊಂದ ಸಮಾಜಬಾಂಧವರಲ್ಲಿ ಕರುಣೆ ತೋರಿಸದವನು ದೇವರ ಕರುಣೆಗೂ ಪಾತ್ರನಾಗುವುದಿಲ್ಲ. ನಾವು ಸಮಾಜದ ನೋವಿಗೆ ಸ್ಪಂದಿಸಿದರೆ ನಮ್ಮ ರಕ್ಷಣೆಯನ್ನು
ಆ ಭಗವಂತನೇ ನೋಡಿಕೊಳ್ಳುತ್ತಾನೆ. ಸಮಾಜ ನಮ್ಮ ಉಪಕಾರವನ್ನು ಎಂದೂ ಇಟ್ಟುಕೊಳ್ಳುವುದಿಲ್ಲ. ನಾವು ಮಾಡಿದ ಒಂದು ಸಣ್ಣ ಉಪಕಾರಕ್ಕೆ ಹಲವುಪಟ್ಟು ಅಧಿಕ ಪ್ರತ್ಯುಪಕಾರವನ್ನು ಈ ಸಮಾಜ ಮಾಡುತ್ತದೆ.
ಬಿಹಾರದ ರಾಂಚಿಯಲ್ಲಿ ವೈದ್ಯನೊಬ್ಬನಿದ್ದಾನೆ. ಆತ ತುಂಬ ಬಡತನದಿಂದ ಬಂದವನು. ಅವನ ಸಾಮಾಜಿಕ ಕಾಳಜಿ ಮೆಚ್ಚುವಂತಹದ್ದು. ಸುತ್ತಮುತ್ತಲಿನ ಜನಕ್ಕೆ ಇವನ ಕೈಗುಣದ ಮೇಲೆ ಬಹಳ ನಂಬಿಕೆ. ಜನರಿಗೆ ಅನುಕೂಲವಾಗಲೆಂದು ಆತ ಬೇರೊಂದು ಮೊಬೈಲನ್ನು ಇಟ್ಟು ಯಾರಿಗಾದರೂ ತುರ್ತುಚಿಕಿತ್ಸೆ ಬೇಕಾದರೆ ಈ ಸಂಖ್ಯೆಯನ್ನು ಸಂಪರ್ಕಿಸಿ ಎಂದು ಎಲ್ಲೆಡೆಗೆ ಪ್ರಚಾರ ಮಾಡಿದ್ದಾನೆ. ಅವನು ರೋಗಿಗಳಿಂದ ಇಷ್ಟು ಹಣ ಬೇಕೆಂದು ಒತ್ತಾಯ ಮಾಡುವುದಿಲ್ಲ. ಅವರ ಶಕ್ತ್ಯಾನುಸಾರ, ಅವರಿಗೆ ಭಾರವಾಗದಂತೆ ಶುಲ್ಕ ಪಡೆಯುತ್ತಾನೆ. ಕೆಲವರಿಗೆ ಇವನೇ ದುಡ್ಡುಕೊಟ್ಟು ನೆರವಾಗುತ್ತಾನೆ.
ಒಂದು ದಿನ ಆತ ಹತ್ತಿರದ ಹಳ್ಳಿಯೊಂದಕ್ಕೆ ರೋಗಿಯನ್ನು ನೋಡಲು ಹೋದಾಗ ಆತನ ತುರ್ತುಚಿಕಿತ್ಸೆಯ ಮೊಬೈಲ್ಗೆ ಒಂದು ಕರೆ ಬಂತು. ಆ ಕಡೆಯಿಂದ ಓರ್ವ ತಾಯಿ ಜೋರಾಗಿ ಅಳುತ್ತಾ, “ಡಾಕ್ಟ್ರೆ, ಬೇಗ ಬನ್ನಿ. ನನ್ನ ಮಗನಿಗೆ ಉಸಿರಾಡುವುದೇ ಕ?ವಾಗಿದೆ. ಏನಾಗಿದೆಯೋ ಗೊತ್ತಿಲ್ಲ. ಅವನು ಒಂದೂವರೆ ವರ್ಷದ ಹುಡುಗ” ಎಂದು ಬೇಡಿಕೊಂಡಳು. “ಆಯ್ತಮ್ಮ ತಕ್ಷಣ ಬಂದೆ. ನಿಮ್ಮ ಅಡ್ರೆಸ್ ಕೊಡಿ” ಎಂದು ವಿಳಾಸ ಬರೆದುಕೊಂಡ. ಹೇಗೆ ಹೋದರೆ ಆ ಸ್ಥಳವನ್ನು ಬೇಗ ತಲಪಬಹುದು ಎಂದು ಹಳ್ಳಿಯ ಹಿರಿಯರನ್ನು ಕೇಳಿದ. ಅವರು ’ಒಂದು ಕಚ್ಚಾರಸ್ತೆಯಲ್ಲಿ ಐದು ನಿಮಿಷ ಸಾಗಿದರೆ ಮುಂದೆ ಮುಖ್ಯರಸ್ತೆ ಸಿಗುತ್ತದೆ. ಅದರ ಪಕ್ಕದಲ್ಲೇ ಈ ಮನೆ ಸಿಗುತ್ತದೆ’ ಎಂದು ಹೇಳಿದರು. ಇವನು ಕಚ್ಚಾರಸ್ತೆಯಲ್ಲಿ ಭರ್ರೆಂದು ಕಾರು ಓಡಿಸಿ ಹೊರಟ. ಐದೇ ನಿಮಿ?ದಲ್ಲಿ ಮುಖ್ಯರಸ್ತೆಯ ಹತ್ತಿರ ಬಂದ. ಆದರೆ ತುಂಬ ಹತ್ತಿರ ಬಂದಾಗ ಅವನಿಗೆ ಗಾಬರಿಯಾಯಿತು. ಈ ಕಚ್ಚಾರಸ್ತೆಯಿಂದ ಮುಖ್ಯರಸ್ತೆ ನಡುವೆ ಒಂದು ಆರು ಅಡಿಯ ಕೊರಕಲಿದೆ. ಅದನ್ನು ದಾಟದೆ ಮುಖ್ಯರಸ್ತೆ ತಲಪುವುದು ಸಾಧ್ಯವಿಲ್ಲ, ಏನು ಮಾಡುವುದು? ಮಗುವಿನ ಪ್ರಾಣ ಅಪಾಯದಲ್ಲಿದೆ. ಸುತ್ತುಬಳಸಿ ಹೋದರೆ ಎರಡು ಗಂಟೆ ಬೇಕಾಗಬಹುದು. ಆಗ ವೈದ್ಯನ ಕಣ್ಣಿಗೆ ಪಕ್ಕದಲ್ಲೇ ಕೆಲಸ ಮಾಡುತ್ತಿದ್ದ ಮಣ್ಣು ಎತ್ತಿಹಾಕುವ ದೈತ್ಯಯಂತ್ರ ಕಾಣಿಸಿತು. ಅದನ್ನು ನಡೆಸುತ್ತಿದ್ದ ಯುವಕನಿಗೆ ತನ್ನ ಪರಿಸ್ಥಿತಿಯನ್ನು ಹೇಳಿ, ಸ್ವಲ್ಪ ಈ ಕೊರಕಲನ್ನು ಮುಚ್ಚಿದರೆ ಉಪಕಾರವಾಗುತ್ತದೆ ಎಂದ. ಮೊದಲು ಹಿಂದುಮುಂದು ನೋಡಿದ ಆ ಯುವಕ ’ಒಂದು ನಿಮಿ? ಇರಿ’ ಎಂದು ತನ್ನ ದೈತ್ಯಯಂತ್ರವನ್ನು ತಂದು ಮೊಗೆಮೊಗೆದು ಮಣ್ಣಿನರಾಶಿಯನ್ನು ಕೊರಕಲಿನಲ್ಲಿ ತುಂಬಿದ. ಅದನ್ನು ಕುಟ್ಟಿ ಸ್ವಲ್ಪ ಗಟ್ಟಿ ಮಾಡಿದ. ಅದರ ಮೇಲೆಯೇ ನಿಧಾನವಾಗಿ ಕಾರು ನಡೆಸಿ ವೈದ್ಯ ಮುಖ್ಯ ರಸ್ತೆ ಸೇರಿ ಆ ಮಹಿಳೆಯ ಮನೆ ಸೇರಿದ. ಮಗುವಿನ ದೇಹ ಆಗಲೇ ನೀಲಿಯಾಗುತ್ತಿತ್ತು. ವೈದ್ಯನು ಮಗುವನ್ನು ತಲೆಕೆಳಗಾಗಿಸಿ ಬೆನ್ನ ಮೇಲೆ ಗುದ್ದಿದಾಗ ಬಾಲಕ ಜೋರಾಗಿ ಕೆಮ್ಮಿದ. ಅವನ ಬಾಯಿಂದ ಒಂದು ಅಂಗಿಯ ಗುಂಡಿ ಜಾರಿಬಿತ್ತು. ಮಗು ಅಳಲಾರಂಭಿಸಿತು, ಆದರೆ ಪ್ರಾಣ ಉಳಿದಿತ್ತು. ಅವನಿಗೆ ಕೃತಜ್ಞತೆಯಿಂದ ಬಾಗಿದ ತಾಯಿಯ ಕಣ್ಣಲ್ಲಿ ನೀರು ತುಂಬಿತ್ತು. ವೈದ್ಯ ಸಂತೋಷದಿಂದ ಮನೆಗೆ ನಡೆದ.
ಎರಡು ದಿನಗಳ ನಂತರ ಅದೇ ದಾರಿಗೆ ಹೋದ ವೈದ್ಯನಿಗೆ ಆ ದೈತ್ಯಯಂತ್ರದ ಚಾಲಕ ಕಾಣಿಸಿದ. ಅವನಿಗೆ ಧನ್ಯವಾದ ಹೇಳಲು ಬಳಿಗೆ ಹೋದಾಗ ಆ ತರುಣ ಓಡಿ ಬಂದು ಇವನ ಕಾಲಿಗೆ ಬಿದ್ದ. “ನಿನ್ನಿಂದ ಉಪಕಾರವಾಯಿತಪ್ಪ. ನಿನ್ನಿಂದ ಮಗುವಿನ ಪ್ರಾಣ ಉಳಿಯಿತು” ಎಂದ, ವೈದ್ಯ. ಆಗ ಆ ತರುಣ “ಸರ್, ಅಂದು ನೀವು ಉಳಿಸಿದ್ದು ನನ್ನ ಮಗನನ್ನೇ. ಆಗ ನೀವು ನನ್ನ ಮನೆಗೆ ಹೊರಟಿದ್ದೆಂದು ಗೊತ್ತಿರಲಿಲ್ಲ” ಎಂದು ಹರ್ಷಾಶ್ರು ಸುರಿಸಿದ.
ನಾವು ಸಮಾಜಸೇವೆ ಮಾಡಿದರೆ ಸಮಾಜ ನಮ್ಮನ್ನು ಉದ್ಧಾರ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗೆಂದು ಸಮಾಜದ ದೀನದಲಿತರಿಗೆ, ಅನಾಥರಿಗೆ ಸಹಾಯ ಮಾಡಲು ನಾವೇನು ಶ್ರೀಮಂತರಾಗಿರಬೇಕಾಗಿಲ್ಲ. ಈಗ ಏನಾಗಿದ್ದೇವೆಯೋ ಆ ಸ್ಥಿತಿಯಲ್ಲಿಯೇ ಸಮಾಜಕ್ಕೆ ಅಳಿಲುಸೇವೆ ಮಾಡಲು ಸಾಧ್ಯವಿದೆ.
ಸಾಲುಮರದ ತಿಮ್ಮಕ್ಕ ಬಡತನದಲ್ಲೂ ಸಾವಿರಾರು ಗಿಡಗಳನ್ನು ನೆಟ್ಟು ಅವಕ್ಕೆ ನಿರಂತರ ನೀರುಣಿಸಿ ಮರಗಳನ್ನಾಗಿ ಬೆಳೆಸಿದಳು. ಬಿಹಾರದ ದಶರಥ ಮಾಂಝಿ ಜನರ ದಾರಿಗೆ ಅಡ್ಡವಾಗಿದ್ದ ಗುಡ್ಡವನ್ನು ತನ್ನ ಬಡತನದಲ್ಲೇ ಹಲವಾರು ವ? ಕೊರೆದು ಜನರಿಗೆ ದಾರಿ ಮಾಡಿಕೊಟ್ಟ. ಡಾ| ಎಚ್. ಸುದರ್ಶನರು ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿ ಸೋಲಿಗರಿಗಾಗಿ ಉಚಿತ ಆಸ್ಪತ್ರೆ, ಶಾಲೆಗಳನ್ನು ಪ್ರಾರಂಭಿಸಿ ಆರೋಗ್ಯದಾನ, ವಿದ್ಯಾದಾನ ಮಾಡಿದರು. ಇವರೆಲ್ಲರ ಕೆಲಸವೂ ಸಮಾಜಸೇವೆಯೆ. ಆದರೆ ಇವರಾರೂ ಶ್ರೀಮಂತರಾಗಿರಲಿಲ್ಲ. ಈಗಲೂ ಇವರೆಲ್ಲರೂ ಸರಳ ಬದುಕನ್ನೇ ಸಾಗಿಸುತ್ತಿದ್ದಾರೆ. ಸಮಾಜದ ನೋವಿಗೆ ಸ್ಪಂದಿಸಬೇಕೆಂಬ ಮನೋಬಲವೇ ಇವರ ಆಸ್ತಿ.
ಸಮಾಜಮುಖಿ ಜೀವನ
ನಾವು ಸಮಾಜದಿಂದ ಸದಾ ಸಹಾಯ ಪಡೆದು ಅದನ್ನು ಸಮಾಜಕ್ಕೆ ವಾಪಸ್ಸು ಕೊಡದಿದ್ದರೆ ನಮ್ಮ ಜೀವನ ’ಡೆಡ್ ಸೀ’ಯಂತೆ ಆಗುತ್ತದೆ. ಜೋರ್ಡಾನ್-ಇಸ್ರೇಲ್ ದೇಶಗಳ ಬಳಿ ಒಂದು ಬೃಹತ್ ಸರೋವರವಿದೆ. ಅದರ ಹೆಸರೇ ಡೆಡ್ ಸೀ; ಅಂದರೆ ಸತ್ತ ಸಮುದ್ರ. ಜೋರ್ಡಾನ್ ನದಿ ಹುಟ್ಟುವುದು ಗೆಲಿಲೀ ಸರೋವರದಿಂದ. ಸಿಹಿನೀರಿನ ಈ ನದಿ ಸುಮಾರು ೩೨೦ ಕಿ.ಮೀ.ಗಳ ದೂರ ಹರಿಯುತ್ತದೆ. ಉದ್ದಕ್ಕೂ ಪುಷ್ಪೋದ್ಯಮಕ್ಕೆ ಹೆಸರಾದ ಇಸ್ರೇಲಿನ ತೋಟಗಳಿಗೆ ನೀರುಣಿಸುತ್ತದೆ; ಜನರ ಬಾಯಾರಿಕೆಯನ್ನು ತಣಿಸುತ್ತದೆ; ಕೊನೆಯಲ್ಲಿ ಈ ಸತ್ತಸಮುದ್ರವನ್ನು ಸೇರುತ್ತದೆ. ಇದು ಸತ್ತ ಸಮುದ್ರ ಯಾಕೆಂದರೆ, ಅದು ಪ್ರಪಂಚದ ಅತ್ಯಂತ ಕೆಳಮಟ್ಟದ ಸರೋವರ. ಸಮುದ್ರಮಟ್ಟಕ್ಕಿಂತ
೧೩೦೦ ಅಡಿಗಳ? ಕೆಳಗಿದೆ ಮತ್ತು ೧೦೦೦ ಚದರ ಕಿ.ಮೀ. ಗಳಷ್ಟು ವಿಶಾಲವಾಗಿದೆ. ಈ ಸಮುದ್ರದ ವಿಶೇಷವೆಂದರೆ ಇದರ ನೀರು ಬೇರೆ ಸಮುದ್ರದ ಉಪ್ಪುನೀರಿಗಿಂತ ಏಳುಪಟ್ಟು ಹೆಚ್ಚು ಉಪ್ಪುಪ್ಪಾಗಿರುತ್ತದೆ. ಇಷ್ಟೊಂದು ಉಪ್ಪು ಇರುವ ಕಾರಣಗಳಿಂದಾಗಿ ಸಮುದ್ರದಲ್ಲಿ ಯಾವ ಜಲಚರಗಳೂ ಬದುಕುವುದಿಲ್ಲ. ಆ ನೀರನ್ನು ಗಿಡಮರಗಳಿಗೆ ಹಾಕಿದರೆ ಅವು ಬದುಕಲಾರವು. ಈ ನೀರು ಇ? ಉಪ್ಪಾಗಿರಲು ಕಾರಣವೆಂದರೆ ಈ ಸಮುದ್ರ ತನ್ನೆಲ್ಲ ನೀರನ್ನು ಜೋರ್ಡಾನ್ ನದಿಯಿಂದ ಪಡೆಯುತ್ತದೆ. ನೀರು ಸೇರುತ್ತಲೇ ಹೋಗುತ್ತದೆ. ಆದರೆ ಒಂದು ಹನಿ ನೀರನ್ನೂ ಹೊರಗೆ ಬಿಡುವುದಿಲ್ಲ. ಹಾಗಾಗಿ ಉಪ್ಪಿನ ಅಂಶ ಹೆಚ್ಚುತ್ತಲೇ ಹೋಗುತ್ತದೆ; ಸಮುದ್ರ ಸತ್ತಸಮುದ್ರವಾಗುತ್ತದೆ.
ಸತ್ತಸಮುದ್ರದ ಸೂತ್ರ ನಮಗೂ ಅನ್ವಯವಾಗುತ್ತದೆ. ನಾವು ಕೇವಲ ಸಮಾಜದಿಂದ ಪಡೆಯುತ್ತಹೋಗಿ ಏನನ್ನೂ ಹಿಂತಿರುಗಿ ಕೊಡದೆಹೋದರೆ ನಾವೂ ಸತ್ತಸಮುದ್ರದಂತಾಗುತ್ತೇವೆ. ’ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆದವರಂತೆ ಕಾಣಿರೋ’ ಎಂಬ ಮಾತಿನಂತೆ ನಾವು ಬಾಳಿದರೆ ನಮ್ಮ ಬದುಕು ಸತ್ತಸಮುದ್ರದಂತಾಗದೆ ಜೀವಂತ ನದಿಯಂತಾಗುತ್ತದೆ.
ನಮ್ಮ ಹಿರಿಯರು ಹಿಂದಿನಿಂದಲೂ ಸಮಾಜದ ಋಣ ತೀರಿಸುವ ಕೆಲಸದಲ್ಲಿ ನಿರತರಾಗಿರುತ್ತಿದ್ದರು. ಮನೆಯಲ್ಲಿ ಊಟ ಮಾಡುವ ಮೊದಲು ಯಾರಿಗಾದರೂ ಅತಿಥಿಗಳಿಗೆ ಊಟ ಬಡಿಸುವ ಪದ್ಧತಿ ಈ ದೇಶದಲ್ಲಿತ್ತು. ಬಡ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ವಸತಿ ಕಲ್ಪಸಿ ವಿದ್ಯೆಯನ್ನು ಉಚಿತವಾಗಿ ಧಾರೆಯೆರೆಯುತ್ತಿದ್ದರು. ಪ್ರಾಣಿ- ಪಕ್ಷಿಗಳಿಗಾಗಿ ಮನೆಯ ಹೊರಗೆ ತೊಟ್ಟಿಯಲ್ಲಿ ನೀರನ್ನಿಡುತ್ತಿದ್ದರು. ಅನಾಥರ, ಬಡವರ ಮದುವೆಯನ್ನು ಊರಿನವರೆಲ್ಲ ಸೇರಿ ಮಾಡುತ್ತಿದ್ದರು. ಹೀಗೆ ನಮ್ಮ ಪೂರ್ವಜರಿಗೆ ಸಮಾಜಮುಖಿ ಜೀವನವೆಂಬುದು ಉಸಿರಿನ? ಸಹಜವಾಗಿತ್ತು.
ಸಮಾಜದ ಚಿಂತೆ ನಡೆಸುವವನೇ ಜ್ಞಾನಿ. ಸುಭಾಷಿತವೊಂದು ಹೀಗೆ ಹೇಳುತ್ತದೆ –
ಜನಸ್ಯಾಶಯಮಾಲಕ್ಷ್ಯ ಯೋ ಯಥಾ ಪರಿಶುಷ್ಯತಿ|
ತಾಂ ತಥೈವಾನುವರ್ತೇತ ಪರಾರಾಧನಪಂಡಿತಃ||
ಜನರ ಭಾವನೆಗಳನ್ನು ತಿಳಿದು ಅವರಿಗೆ ಸಂತೋಷವಾಗುವಂತೆ ಅವರನ್ನು ಅನುಸರಿಸುವುದು ಮತ್ತು ಅವರನ್ನು ಆರಾಧಿಸುವುದು – ಹೀಗೆ ಮಾಡುವವನೇ ಪಂಡಿತನೆನಿಸಿಕೊಳ್ಳುತ್ತಾನೆ ಎಂಬುದೇ ಇದರ ಭಾವಾರ್ಥ.
ಜಗತ್ತಿನ ದುಃಖವೇ ನನ್ನ ದುಃಖ
ಮೋಕ್ಷಪ್ರಾಪ್ತಿಗಾಗಿ ಸಾಧನೆ ಮಾಡುತ್ತಿರುವವರಿಗೂ ಸಮಾಜದ ಜವಾಬ್ದಾರಿ ಇದೆ ಎಂಬುದಾಗಿ ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಒಂದು ದಿನ ಸ್ವಾಮಿ ವಿವೇಕಾನಂದರ ಶಿಷ್ಯನೊಬ್ಬನು ತಾನು ಏಕಾಂತಕ್ಕೆ ಹೋಗಿ ತಪಸ್ಸು ಮಾಡಬೇಕೆಂದಿರುವೆನು ಎಂದು ನಿವೇದಿಸಿಕೊಂಡನು. ಆಗ ಸ್ವಾಮಿಜೀ ಅವನನ್ನು ತರಾಟೆಗೆ ತೆಗೆದುಕೊಂಡರು: ’ನೀನು ಕೇವಲ ನಿನ್ನ ಸ್ವಂತದ ಮುಕ್ತಿಯನ್ನು ಬಯಸುವುದಾದರೆ ನರಕಕ್ಕೆ ಹೋಗುತ್ತಿ! ಅತ್ಯುನ್ನತ ಮಟ್ಟವನ್ನು ತಲಪಬೇಕೆಂಬ ಅಪೇಕ್ಷೆಯಿದ್ದರೆ ಇತರರ ಮುಕ್ತಿಗಾಗಿ ಶ್ರಮಿಸು. ಸ್ವಂತದ ಮುಕ್ತಿಯ ಆಸೆಯನ್ನು ತ್ಯಜಿಸು. ಇದೇ ಮಹೋನ್ನತ ಆಧ್ಯಾತ್ಮಿಕ ತಪಸ್ಸು.’
ವೈಯಕ್ತಿಕ ಮುಕ್ತಿಗಾಗಿ ಗುರುಗಳು ಉಪದೇಶಿಸಿದ ಮಂತ್ರವನ್ನು ರಾಮಾನುಜರು ಇಡೀ ಸಮಾಜಕ್ಕೆ ಉಪದೇಶಿಸಿ ನರಕಕ್ಕೂ ಹೋಗಲು ತಯಾರಾದರು. ದೇಶಕ್ಕೆ ಗಂಡಾಂತರ ಬಂದಾಗ ಚಾಣಕ್ಯ ಕಾಡಿನಲ್ಲಿ ಮಾಡುತ್ತಿದ್ದ ತಪಸ್ಸನ್ನು ಬಿಟ್ಟು ನಾಡಿಗೆ ಬಂದು ದೇಶವನ್ನು ರಕ್ಷಿಸಿದ.
ಮಹಾರಾಜನಾಗಿದ್ದ ಗೌತಮನಿಗೆ ಈ ಜೀವನ ದುಃಖಮಯ ಎನಿಸಿತು. ಈ ದುಃಖದ ಮೂಲ ತಿಳಿಯುವ ಹಂಬಲ ತೀವ್ರವಾಯಿತು. ಅರಮನೆ, ಅರಸೊತ್ತಿಗೆ ಎಲ್ಲ ತೊರೆದು ಅರಣ್ಯ ಪ್ರವೇಶಿಸಿದ. ಒಂದು ಮರದಡಿ ಧ್ಯಾನಸ್ಥನಾದ. ವರುಷಗಳೇ ಉರುಳಿದವು. ಒಂದು ದಿನ ಸಹಸಂನ್ಯಾಸಿ ಕೇಳಿದ, ’ರಾಜನಾದ ನಿನಗೆ ಸಿಂಹಾಸನ, ಸಿರಿ-ಸಂಪದ, ಸುಂದರ ಸತಿ-ಸುತರು ಎಲ್ಲ ಇರುವಾಗ ಎಲ್ಲಿ ದುಃಖ?’
ಬುದ್ಧ ಹೇಳಿದ, ’ನನಗಿರದಿದ್ದರೆ ಏನಂತೆ? ಈ ಜಗತ್ತಿನಲ್ಲಿ ದುಃಖವಿದೆಯಲ್ಲ!’
ಆತ ಕೇಳಿದ, ’ಜಗತ್ತಿನ ದುಃಖ ತೆಗೆದುಕೊಂಡು ನಿನಗೇನಾಗಬೇಕಾಗಿದೆ?’
ಬುದ್ಧ ಹೇಳಿದ, ’ನನಗೇನೂ ಆಗಬೇಕಾಗಿಲ್ಲ. ಈ ಜಗತ್ತಿನ ಜನರು ಅಪಾರ ದುಃಖವನ್ನು ಕಳೆದುಕೊಂಡು ಸುಖಿಗಳಾದರೆ ಸಾಕು.’
ಜಗತ್ತಿನ ಜನರ ಸುಖಕ್ಕಾಗಿ ತನ್ನ ಭೌತಿಕಸುಖವನ್ನು ತ್ಯಾಗಮಾಡಿದ ಬುದ್ಧ ಯುಗಪುರುಷ. ಇಂಥ ಜ್ಞಾನಿಗಳು, ವಿಜ್ಞಾನಿಗಳು, ಆತ್ಮಜ್ಞಾನಿಗಳು ಅಮರಪುರುಷರು.
ಯುಗಪುರುಷರು, ಮಹಾತ್ಮರು, ತಪಸ್ವಿಗಳು. ಸಂನ್ಯಾಸಿಗಳು ಎಲ್ಲರೂ ಸಮಾಜಕ್ಕಾಗಿ ಬದುಕುವವರು. ಸಾಮಾನ್ಯರಾದ ನಾವೂ ನಮ್ಮ ವೈಯಕ್ತಿಕ ಸಾಧನೆಯೊಂದಿಗೆ ಸಮಾಜದ ಹಿತಕ್ಕಾಗಿ ಬದುಕೋಣ. ’ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬ ಮಾತಿನಂತೆ ಸಮಾಜಮುಖಿ ಜೀವನದಲ್ಲೆ ನಮ್ಮ ಉತ್ಕರ್ಷದ ರಹಸ್ಯವಡಗಿದೆ.