’ಕೃಪಾಮಯಿ ಮಕ್ಕಳಬಳಗ’ದ ವತಿಯಿಂದ ಇಬ್ಬರು ಯುವಸಾಧಕರಿಗೆ ಸನ್ಮಾನ ಮತ್ತು ಮಕ್ಕಳಿಗೆ ಅವರಿಂದ ಸ್ಫೂರ್ತಿಯ ಮಾತುಗಳನ್ನು ಕೇಳಿಸುವುದಕ್ಕಾಗಿ ಇತ್ತೀಚೆಗೆ ’ಪ್ರೇರಣಾ’ ಎಂಬ ಕಾರ್ಯಕ್ರಮ ಆಯೋಜಿಸಿದ್ದರು. ಅದರಲ್ಲಿ ಒಬ್ಬ ವಿದ್ಯಾರ್ಥಿ ತನ್ನ ಸಾಧನೆಯಲ್ಲಿ ತನ್ನ ಅಪ್ಪ-ಅಮ್ಮನ ಪಾತ್ರದ ಬಗ್ಗೆ ಹೇಳುತ್ತಾ ’ನೀನೇನೇ ಮಾಡು ಮಗೂ, ನೀನು ನಮ್ಮ ಮಗ ಎನ್ನುವ ಒಂದು ಮಾತು ಅವರಿಂದ ಬಂದರೂ ಸಾಕು, ಅದು ಆನೆಯ ಬಲ ತುಂಬುತ್ತದೆ’ ಎಂದು ಭಾವುಕನಾದ.
ಖಂಡಿತ, ಇದನ್ನು ನಾವು ಎಷ್ಟು ಸಲ ಮರೆತು ಬಿಡುತ್ತೇವೆ. ತಂದೆ ತಾಯಿಯಾಗಿ ನಮ್ಮ ಮಕ್ಕಳನ್ನು ನಾವು ಪ್ರಭಾವಿಸಿದಂತೆ ಮೂರನೆಯವರು ಪ್ರಭಾವಿಸಲು ಸಾಧ್ಯವೆ? ಗುರುಗಳೊಬ್ಬರನ್ನು ಹೊರತು ಪಡಿಸಿ? ನಮ್ಮ ಮಕ್ಕಳಲ್ಲಿರುವ ಎಲ್ಲ ಭಾವನೆಗಳೂ ನಮ್ಮದೇ ಬಳುವಳಿ. ಅವರ ಮಾತು, ವರ್ತನೆ, ಸಮಯ ಸಂದರ್ಭಗಳಿಗೆ ಅವರು ಪ್ರತಿಕ್ರಿಯಿಸುವ ರೀತಿ ಎಲ್ಲವೂ ನಮ್ಮ ನಡವಳಿಕೆಯ ಪ್ರತಿಬಿಂಬವೇ ಆಗಿರುತ್ತದೆ. ಅಂದರೂ ’ನನ್ನ ಮಗನಾಗಿ/ಮಗಳಾಗಿ ನೀನು ಹೀಗೆ ನಡೆದುಕೊಳ್ಳುವುದೆ?’ ಎಂದು ರೇಗಿರುತ್ತೇವೆ. ’ನಿನ್ನನ್ನು ನಮ್ಮ ಮಗ ಅಂದುಕೊಳ್ಳುವುದಕ್ಕೆ ನಾಚಿಕೆಯಾಗುತ್ತದೆ’ ಎಂಬಿತ್ಯಾದಿ ಪದಪುಂಜಗಳನ್ನು ಬಾಣಗಳಂತೆ ಎಸೆದಿರುತ್ತೇವೆ. ಆ ಮೂಲಕ ಮಕ್ಕಳ ಮಾನಸಿಕಸ್ಥೈರ್ಯಕ್ಕೆ ಧಕ್ಕೆ ತರುವ ಎಲ್ಲ ಪ್ರಯತ್ನಗಳನ್ನೂ ಮಾಡಿರುತ್ತೇವೆ. ನಮಗೆ ಗೊತ್ತೇ ಆಗಿರುವುದಿಲ್ಲ, ನಮ್ಮ ಮಕ್ಕಳ ಆತ್ಮವಿಶ್ವಾಸವನ್ನು ಹಂತಹಂತವಾಗಿ ನಾವು ಕುಗ್ಗಿಸಿರುತ್ತೇವೆ.
ಕೆಲವು ದಿನಗಳ ಹಿಂದೆ ವಿದ್ಯಾರ್ಥಿನಿಯೋರ್ವಳು ಬಳಿ ಬಂದಿದ್ದಳು. “ಮೇಡಂ, ಎಷ್ಟು ಬರೆದರೂ ಭಾಷೆ ವಿಷಯಗಳಲ್ಲಿ ನೂರಕ್ಕೆ ನೂರು ಬರುವುದೇ ಇಲ್ಲವಲ್ಲ? ಮನೆಯಲ್ಲಿ ಅಪ್ಪ ಅಮ್ಮ ಬೈಯ್ಯುತ್ತಾರೆ. ನಿನ್ನ ಯೋಗ್ಯತೆ ಇಷ್ಟೆ ಅಂತಾರೆ. ನಾನು ೯೫% ಅಂಕಗಳನ್ನು ಪಡೆದಿದ್ದೇನೆ, ಮತ್ತೇನು ಕೊರತೆ ಅಂದರೂ ಕಮ್ಮಿ ಬಂದಿರುವುದನ್ನು ಹೇಳಿಹೇಳಿ ಹಂಗಿಸುತ್ತಾರೆ. ಯಾಕೋ ಪರೀಕ್ಷೆ ಎಂದರೇ ಬೇಸರವಾಗುತ್ತದೆ.”
ಖೇದವೆನಿಸಿತು. ನಿಜ, ಬಹಳ ಮಂದಿ ಹೆತ್ತವರು ತಮ್ಮ ವಿದ್ಯಾರ್ಥಿದೆಸೆಯಲ್ಲಿ ಜಸ್ಟ್ ಪಾಸಾಗುತ್ತ ಬಂದವರಾದರೂ ಮಕ್ಕಳನ್ನು ಮಾತ್ರ ನೂರಕ್ಕೆ ನೂರು ತೆಗೆಯುವ ಯಂತ್ರಗಳೆಂಬಂತೆ ಕಾಣುತ್ತಾರೆ. ನಾಳೆಯ ದಿನ ಬದುಕಿಗೆ ನಮ್ಮ ಅಂಕಪಟ್ಟಿಗಿಂತಲೂ ಒಂದು ಅಂಕ ಹೆಚ್ಚಿಗೆ ಇರುವುದು ನಮ್ಮ ನಡವಳಿಕೆಗೆ ಎಂಬ ಕುರಿತು ಕನಿ? ಅರಿವನ್ನೂ ನೀಡುವುದಿಲ್ಲ. ತಪ್ಪುತ್ತಿರುವುದು ಕೇವಲ ಶಿಕ್ಷಣವ್ಯವಸ್ಥೆಯೋ ಅಥವಾ ಮನೆಯಲ್ಲಿ ಹೆತ್ತವರು ಮಕ್ಕಳೊಂದಿಗೆ ವರ್ತಿಸುತ್ತಿರುವ ರೀತಿಯೊ? ಗೊಂದಲ ಮೂಡುತ್ತದೆ.
ನನಗಾಗ ಏಳೋ ಎಂಟೋ ವಯಸ್ಸು. ಮನೆಯಲ್ಲಿ ಕೊನೆಯ ಮಗಳಾದ್ದರಿಂದ ಸ್ವಲ್ಪ ಜಾಸ್ತಿಯೇ ಮುದ್ದು. ಅಜ್ಜನಂತೂ ನನ್ನನ್ನು ಶಾಲೆಗೆ ಕರೆದೊಯ್ಯಬೇಕಾದರೆ ಹೆಗಲ ಮೇಲೆಯೆ ಕೂರಿಸಿಕೊಂಡು
ಹೋಗುತ್ತಿದ್ದರು, ವಿನಾ ನಡೆಸಿದ್ದಿಲ್ಲ. ಮೂವತ್ತು ವ?ಗಳ ಹಿಂದೆ ಈಗಿನಂತೆ ವಾಹನ ಸೌಕರ್ಯಗಳಿರಲಿಲ್ಲವಲ್ಲ! ಎಲ್ಲರ ಮುದ್ದಿನ ನಡುವೆ ನಾನು ಕೊಂಚ ಹಠಮಾರಿಯೇ ಆಗಿದ್ದೆ. ಹೆದರುತ್ತಿದ್ದದ್ದು ಅಜ್ಜಿಗೆ ಮಾತ್ರ. ಬಿಟ್ಟರೆ ಅಪ್ಪನ ದೊಡ್ಡ ಕಣ್ಣುಗಳಿಗೆ. ಆದರೂ ನನಗೆ ಬೆಳಗ್ಗೆ ಎದ್ದ ತಕ್ಷಣ ಹಲ್ಲುಜ್ಜುವುದೆಂದರೆ ಬೇಸರ. ಆ ಅಭ್ಯಾಸವನ್ನು ರೂಢಿಸಲು ಅಪ್ಪ ಬಿಟ್ಟ ಕೊನೆಯ ಬಾಣವೆಂದರೆ ’ಮುಂದಿನ ವರ್ಷ ನಿನ್ನನ್ನು ಅಳಕೆ ಶಾಲೆಗೆ ಹಾಕುತ್ತೇನೆ’ ಎಂಬುದು. ಅಳಕೆ ಶಾಲೆ ಇಂದಿಗೂ ಶಿಸ್ತುಬದ್ಧ ಶಿಕ್ಷಣಕ್ಕೆ ಹೆಸರುವಾಸಿ. ನನ್ನ ಅಭ್ಯಾಸ ತಿದ್ದಿಕೊಂಡೆ.
ಇಂದು ಉಪನ್ಯಾಸಕಿಯಾಗಿ ಕೆಲವು ಮಂದಿ ಹೆತ್ತವರನ್ನು ನೋಡಿದ್ದೇನೆ. ಅವರೂ ಮಕ್ಕಳನ್ನು ಹಾಸ್ಟೆಲಿಗೆ ಹಾಕುತ್ತೇವೆ ಎಂಬುದು ಮನೆಯಲ್ಲಿ ತಮ್ಮ ಮಾತನ್ನು ಅವರು ಕೇಳುವುದಿಲ್ಲ ಎಂಬ ಕಾರಣಕ್ಕೆ. ಮಕ್ಕಳೂ ಅದನ್ನೊಂದು ಶಿಕ್ಷೆಯೆಂಬಂತೆ ಕಾಣುತ್ತಾರೆ ವಿನಾ ತಮಗೆ ಉತ್ತಮ ಅವಕಾಶ ಒದಗಿಸಿಕೊಡುತ್ತಿದ್ದಾರೆ ಎಂಬ ನಿಟ್ಟಿನಲ್ಲಿ ಅದನ್ನು ಪರಿಗಣಿಸುವುದಿಲ್ಲ. ಇದರಿಂದ ಅನೇಕ ವಿದ್ಯಾರ್ಥಿಗಳು ಅಧ್ಯಯನದಲ್ಲಿ ಹಿಂದುಳಿಯುವುದೂ ಇದೆ. ಹಾಗಿದ್ದರೆ ಹೆತ್ತವರ ನಿರೀಕ್ಷೆಗಳು ತಪ್ಪೇ?
ಖಾಲಿಲ್ ಗಿಬ್ರಾನ್ ಎಂಬ ಕವಿಯೊಬ್ಬ ಬರೆಯುತ್ತಾನೆ – ’ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಜೀವನ ಪ್ರೀತಿಯ ಸಂಕೇತಗಳು ಅವು. ನೀವು ಅವರಿಗೆ ಕೇವಲ ಪ್ರೀತಿಯನ್ನ? ಕೊಡಬಹುದು, ನಿಮ್ಮ ಯೋಚನೆಗಳನ್ನಲ್ಲ. ನಿಮ್ಮ ಮನೆಯಲ್ಲಿ ಅವರ ಶರೀರವಷ್ಟೇ ನೆಲೆಸುತ್ತದೆ, ಆದರೆ ಅವರ ಆತ್ಮವಿರುವುದು ಭವಿಷ್ಯದಲ್ಲಿ’ ಎಂಬಿತ್ಯಾದಿ. ಪ್ರಸ್ತುತ ಹೆತ್ತವರು ಮತ್ತು ಮಕ್ಕಳ ನಡುವಿನ ಸಂಘರ್ಷಗಳನ್ನೋ ತಪ್ಪು ತಿಳಿವಳಿಕೆಗಳನ್ನೋ ಕಾಣುವಾಗಲೆಲ್ಲ ಗಿಬ್ರಾನ್ ನೆನಪಾಗುತ್ತಾನೆ. ಹೆತ್ತವರು ಇಂದು ತಮ್ಮ ಮಕ್ಕಳಿಗೆ ಕೇಳಿದ್ದೆಲ್ಲವನ್ನೂ ಕೊಡಿಸಿಬಿಟ್ಟಾರು. ದುಬಾರಿ ಉಡುಪು, ಬೈಕು, ಮೊಬೈಲು ಇತ್ಯಾದಿ. ಅದಕ್ಕೆ ಪ್ರತಿಯಾಗಿ ಮಕ್ಕಳು ಪ್ರತೀ ಪರೀಕ್ಷೆಯಲ್ಲಿಯೂ ಉತ್ತಮ ಅಂಕಗಳನ್ನು ಗಳಿಸಿಕೊಂಡು ಹೆತ್ತವರ ಕೀರ್ತಿಯನ್ನು ಹೆಚ್ಚಿಸಬೇಕು. ಇಲ್ಲಿ ಅರ್ಥ ಮಾಡಿಕೊಳ್ಳದೇ ಇರುವ ವಿಷಯವೊಂದಿದೆ. ಅವರಿಗೆ ನಾವೇನೇ ಕೊಡಿಸಿದರೂ ನಾವು ಅವರೊಂದಿಗೆ ಇದ್ದಂತಾಗುವುದಿಲ್ಲ. ಮೌಲ್ಯಕಟ್ಟಲಾಗದ ಉಡುಗೊರೆಯೊಂದನ್ನು ಕೊಡುವಲ್ಲಿ ಮಾತ್ರ ಸೋತು ಸುಣ್ಣವಾಗುತ್ತೇವೆ, ಅದೆಂದರೆ ನಮ್ಮ ಸಮಯ. ನಾವು ಅವರಿಗಾಗಿ ಸಮಯ ವ್ಯಯಿಸುವುದಕ್ಕೂ ಅವರೊಂದಿಗೆ ಸಮಯ ಕಳೆಯುವುದಕ್ಕೂ ವ್ಯತ್ಯಾಸವಿದೆಯಲ್ಲ?
ಇಪ್ಪತ್ತೊಂದನೆಯ ಶತಮಾನದಲ್ಲಿ ನಿಂತುಕೊಂಡು ಹಲವು ಅದ್ದೂರಿಗಳ ನಡುವೆ ಮತ್ತದೆಷ್ಟೊ ಕೊರತೆಗಳ, ಸವಾಲುಗಳ ನಡುವೆ ನಮ್ಮ ಬದುಕಿನ ಗುರಿಯೇನು ಎಂಬುದನ್ನೇ ಅರ್ಥ ಮಾಡಿಕೊಳ್ಳಲಾಗದೆ ತೊಳಲಾಡುತ್ತಿದ್ದೇವೆ. ಕಡೆಯ ಪಕ್ಷ ನಮ್ಮ ಮಕ್ಕಳಾದರೂ ನಮ್ಮ ಆದರ್ಶಗಳನ್ನು ಪಾಲಿಸಬೇಕೆಂಬ ಕನಸುಗಳನ್ನು ಕಾಣುತ್ತೇವೆ. ಆದರೆ ವಾಸ್ತವದಲ್ಲಿ ನಮ್ಮ ಮಕ್ಕಳ ಕನಸುಗಳೇನು, ಅದರ ಈಡೇರಿಕೆಗೆ ನಾವು ಮಾಡಬೇಕಾದುದೇನು ಎಂಬುದರ ಬಗ್ಗೆ ಒಂದೋ ಅತಿಯಾಗಿ ಯೋಚಿಸಿರುತ್ತೇವೆ, ಇಲ್ಲವೇ ಗಮನಿಸುವುದರ ಬದಲಾಗಿ ನಮ್ಮ ಇಷ್ಟದಂತೆಯೇ ಮಕ್ಕಳು ನಡೆದುಕೊಳ್ಳಬೇಕು ಎಂಬ ಹಂಬಲ ಬೆಳೆಸಿಕೊಳ್ಳುತ್ತೇವೆ. ಸಾಲದ್ದಕ್ಕೆ ನಮ್ಮ ಬಾಲ್ಯದ, ಯೌವನದ ಕಾಲದಲ್ಲಿ ಪೂರೈಸಲಾಗದೇ ಉಳಿದ ಕನಸುಗಳನ್ನು ನಮ್ಮ ಮಕ್ಕಳು ನೆರವೇರಿಸಬೇಕು ಎಂದುಕೊಳ್ಳುತ್ತೇವೆ. ವಿಜ್ಞಾನವನ್ನೇ ಇಷ್ಟಪಡದ ಹುಡುಗ ವೈದ್ಯನೇ ಆಗಬೇಕು ಎಂದು ಪೋಷಕರು ಬಲವಂತ ಮಾಡಿದರೆ ಅದು ಸಾಧ್ಯವಾಗುವಂಥದ್ದೇ?
ಕೆಲವು ಸಮಯದ ಹಿಂದೆ ನನಗೋರ್ವ ವಿದ್ಯಾರ್ಥಿಯಿದ್ದ. ಅವನು ಇಂಜಿನಿಯರೇ ಆಗಬೇಕು ಎಂಬುದು ಅವನ ಹೆತ್ತವರ ಆಸೆ. ಅದಕ್ಕಾಗಿ ಕಲಾ ವಿಷಯಗಳನ್ನು ಓದುತ್ತೇನೆ ಎಂದವನನ್ನು ಎಳೆದುಕೊಂಡು ವಿಜ್ಞಾನ ವಿಭಾಗಕ್ಕೆ ಸೇರಿಸಿದ್ದರು. ಬಡಪಾಯಿ ಅದು ಹೇಗೋ ಪ್ರವೇಶ ಪರೀಕ್ಷೆ ಬರೆದು ಇಂಜಿನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದದ್ದೂ ಆಗಿತ್ತು. ಆದರೆ ಅಲ್ಲಿ ಒಂದು ವರುಷ ಕಳೆಯುತ್ತಿದ್ದಂತೆ ಅವನಿಗೆ ಅತೀವವಾದ ಹತಾಶೆ ಕಾಡಲಾರಂಭಿಸಿತು. ಹೆತ್ತವರನ್ನು ಅದು ಹೇಗೋ ಒಪ್ಪಿಸಿ ಮತ್ತೆ ಬಿಬಿಎಂಗೆ ಸೇರಿದ್ದ. ಕಲಾ ವಿಭಾಗಕ್ಕೆ ಸೇರಿಸಲು ಅವರು ಸುತಾರಾಂ ಒಪ್ಪಿರಲಿಲ್ಲ. ತರಗತಿಯಲ್ಲಿ ಬೋಧಿಸುತ್ತಿರಬೇಕಾದರೆ ಅವನು ಇತರರಿಗಿಂತ ಸುಲಭವಾಗಿ ಗ್ರಹಿಸುತ್ತಿದ್ದ ಮಾತ್ರವಲ್ಲ ಅದಕ್ಕೆ ಸಾಮ್ಯತೆ ಹೊಂದಿರುವ ಇತರ ಪಠ್ಯಗಳನ್ನೋ ಕಥೆಗಳನ್ನೋ ನೆನಪಿಸಿ ಚರ್ಚಿಸುತ್ತಿದ್ದ. ಕಾಮರ್ಸ್ ವಿದ್ಯಾರ್ಥಿ ಇ?ರಮಟ್ಟಿಗೆ ಸಾಹಿತ್ಯ ಓದಿರುವುದನ್ನು ಕಂಡು ನನಗೆ ಅಚ್ಚರಿ. ಕೇಳಿದರೆ ಅವನು ತನ್ನ ಕಥೆ ಬಿಚ್ಚಿಟ್ಟ. ಅದರಲ್ಲೂ ಮುಂದೆ ತಾನು ಓದುವುದು ಸಾಹಿತ್ಯವನ್ನೇ, ಹೆತ್ತವರು ಒಪ್ಪಲಿ, ಬಿಡಲಿ ಎಂದೂ ಸೇರಿಸಿದ!
’ಮಕ್ಕಳ ಕನಸುಗಳು ಬೇರೆಯೇ ಇರುತ್ತವೆ, ಅವರ ಬದುಕು ಬೇರೆಯದೇ ಇರುತ್ತದೆ, ನಾವದನ್ನು ನಿಯಂತ್ರಿಸುವುದು ಹೋಗಲಿ, ಕಲ್ಪಿಸಿಕೊಳ್ಳಲೂ ಆರೆವು’ – ಎಂಬ ಗಿಬ್ರಾನ್ ಮಾತು ನಿಜವೇ ಅಲ್ಲವೆ? ಹಾಗಿದ್ದ ಮೇಲೆ ಮಕ್ಕಳಿಗೆ ಕೊಡಬೇಕಾದದ್ದು, ’ನೀನೇನೇ ಮಾಡು, ನೀನು ನನ್ನ ಮಗ’ ಎಂಬ ಬೆಂಬಲವ? ತಾನೆ? ಈ ಬೆಂಬಲದೊಂದಿಗೆ ಬೆಳೆಯುವ ಮಕ್ಕಳು ಖಂಡಿತ ಮುಂದೆ ಸಮಾಜದಲ್ಲಿ ಬೆಳಕಾಗಿ ಬದುಕಬಲ್ಲರು ಅಲ್ಲವೆ?
@ಲೇಖಕಿ ಆಂಗ್ಲಭಾಷೆ ಉಪನ್ಯಾಸಕರು ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದೆ.