ಭಾವಸಾಮರ್ಥ್ಯ
ಶ್ರೀ ಸಿದ್ಧೇಶ್ವರಸ್ವಾಮಿಗಳು, ವಿಜಾಪುರ
ಭಾವದ ಸಾಮರ್ಥ್ಯ ಅದ್ಭುತ! ಜೀವನದಲ್ಲಿ ಬರುವ ಅಸಂಖ್ಯ ಸುಖ-ದುಃಖಗಳನ್ನು ಅದು ಅನುಭವಿಸುತ್ತದೆ. ನಮ್ಮ ಬದುಕಿಗೆ ಒಂದು ಹೊಸ ರೂಪವನ್ನು, ಮೆರಗನ್ನು ತರುತ್ತದೆ. ಹಿರಿಯರಿಗಿರುವ ಅನುಭವ ಕಿರಿಯರಿಗಿಲ್ಲ? ಕಿರಿಯರಿಗೆ ಇರುವ ಅನುಭವ ಬಾಲಕರಿಗಿಲ್ಲ. ಏಕೆಂದರೆ ಹಿರಿಯರು ದಶಕಗಳವರೆಗೆ ಅನೇಕ ಕಷ್ಟ-ನಷ್ಟಗಳನ್ನು, ಸುಖ-ದುಃಖಗಳನ್ನು ಅನುಭವಿಸಿ ಪರಿಪಕ್ವರಾಗಿರುತ್ತಾರೆ. ಅಂತೆಯೇ ಹಿರಿಯರಿಗೆ ಅಷ್ಟು ಘನತೆ-ಗೌರವಗಳನ್ನು ನಾವು ಕೊಡುತ್ತೇವೆ. ಅದು, ಭಾವ-ಅನುಭಾವದ ಸಾಮರ್ಥ್ಯ. ಈ ಭಾವವು ಮಧುರವಾದರೆ ಸುಖಾನುಭವ. ಅದು ಕಹಿಯಾದರೆ ದುಃಖಾನುಭವ!
ಈ ಬದುಕೊಂದು ಅನಂತ ಆಗಸದಲ್ಲಿ ತೇಲುವ ವೈವಿಧ್ಯಮಯವಾದ ಮೇಘಮಾಲೆ. ಅರುಣೋದಯದ ಸಮಯದಲ್ಲಿ ಮುಂಜಾನೆ ಆ ಮೇಘಗಳು ಸುವರ್ಣವರ್ಣವನ್ನು ಪಡೆದು ಹೊನ್ನಿನ ರಾಶಿಯಾಗಿ ಕಂಗೊಳಿಸುತ್ತವೆ. ಮಧ್ಯಾಹ್ನ ಸೂರ್ಯನ ಪ್ರಖರ ತೇಜದಲ್ಲಿ ಅದೇ ಮೇಘ ಹಿಂಜಿದ ಅರಳೆಯಂತೆ, ಕೆನೆಮೊಸರು, ಹಾಲಿನಂತೆ ಪರಿಶುಭ್ರವಾಗಿ ಶೋಭಿಸುತ್ತವೆ. ಸಾಯಂಕಾಲ ಮತ್ತೆ ಅರುಣ ವರ್ಣವ ಪಡೆದು ಮನಮೋಹಕವಾದ ಅಸಂಖ್ಯ ಗೊಂಬೆಗಳನ್ನು ನಿರ್ಮಿಸಿ ನೋಡುವವರ ಹೃದಯ (ಮನಸ್ಸನ್ನು) ಸೂರೆಗೊಳ್ಳುತ್ತವೆ. ಆದರೆ ಅದೆಲ್ಲ ಎಷ್ಟೋತ್ತು? ಒಂದೆರಡು ಗಳಿಗೆ ಮಾತ್ರ! ಅನಂತರ ಎಲ್ಲ ಮೇಘಗಳು ಅನಂತ ಆಗಸದಲ್ಲಿ ತೇಲಿಹೋಗಿ ಮರೆಯಾಗಿ ಬಿಡುತ್ತವೆ! ಈಗ ಎಲ್ಲವೂ ಶೂನ್ಯ ಬರಿದೇ ಬರಿದು! ಹಾಗೆಯೇ ಮನುಷ್ಯನ ಜೀವನವೆಂಬ ಆಕಾಶದಲ್ಲಿ ತಾಯಿ-ತಂದೆ, ಮಡದಿ-ಮಕ್ಕಳು ಬಂಧು-ಬಾಂಧವರೆಂಬ ಅಸಂಖ್ಯ ಮೇಘಗಳು ತೇಲಿ ಬರುತ್ತವೆ. ಹರುಷ ತರುತ್ತವೆ. ಕಾಲ ಗತಿಸಿದಂತೆ ಅವರೆಲ್ಲರೂ ಎಲ್ಲಿಯೋ ಕಾಣದ ಲೋಕಕ್ಕೆ ತೆರಳುತ್ತಾರೆ. ಬದುಕು ಶೂನ್ಯವಾಗಿಬಿಡುತ್ತದೆ! ಇದನರಿಯದೆ ಮನುಷ್ಯ ನನ್ನವರು ಅನ್ಯರವರು ಎಂದು ಹಗಲಿರುಳು ಹೋರಾಡಿ ವ್ಯರ್ಥ ಪ್ರಾಣ ಕಳೆದುಕೊಳ್ಳುತ್ತಾನೆ.
ನಮ್ಮ ಬಾಳ ಬಟ್ಟೆ ನೇಯುವಾಗ ಜೀವಜಾಲ ಸಂಬಂಧದ ಎಳೆಗಳು ಹರಿಯುವುದು ಸ್ವಾಭಾವಿಕ. ಹಾಗೆಂದು ಕೈಚೆಲ್ಲಿ ಕೂಡದೇ ಹರಿದ ಎಳೆಗಳನ್ನು ಜಾಣತನದಿಂದ ಜೋಡಿಸಿ ನೇಯ್ದರೆ ಸೊಗಸಾದ ಸಂತಸದ ಬಾಳ ಬಟ್ಟೆ ನಮ್ಮದಾಗುತ್ತದೆ! ಅಂಥ ಭಾವ ಸಾಮರ್ಥ್ಯ ಪಡೆಯುವುದಕ್ಕೆ ನಾವು ಅಶಾಶ್ವತವಾದ ಈ ಜಗತ್ತಿನಲ್ಲಿರುವ ಶಾಶ್ವತ ಸತ್ಯವನ್ನು ಅರಿಯಬೇಕು. ಈ ಮೃತ್ಯುಲೋಕದಲ್ಲಿರುವ ಅಮೃತತ್ತ್ವದ ಪ್ರೇಮ ನಮ್ಮ ತನು-ಮನಗಳಲ್ಲಿ ತುಂಬಿ ಹರಿಯಬೇಕು. ನಮ್ಮ ಬದುಕು ಭವ್ಯವಾಗುತ್ತದೆ! ಅದು ದಿವ್ಯ ಪ್ರೇಮ!!
[ಪೂಜ್ಯ ಸ್ವಾಮಿಗಳ ’ಭಾವಸಂಪದ’ ಪ್ರವಚನಸಂಕಲನದಿಂದ.
ಸಂಪಾದಕರು: ಡಾ|| ಶ್ರದ್ಧಾನಂದಸ್ವಾಮಿಗಳು.
ಕೃಪೆ: ಜ್ಞಾನಯೋಗ ಫೌಂಡೇಶನ್, ವಿಜಾಪುರ.]