ಜಪಾನಿನಲ್ಲಿ ಭೂಕಂಪ ಸಂಭವಿಸಿದ್ದ ಸಂದರ್ಭದ ಒಂದು ನಿಜ ಘಟನೆ. ಭೂಕಂಪ ನಿಂತ ಬಳಿಕ ಸಂರಕ್ಷಣಾ ದಳದವರು ಅವಶೇಷಗಳ ನಡುವೆ ಯಾರಾದರೂ ಬದುಕಿರುವವರು ಇದ್ದಾರೆಯೇ ಎಂದು ನೋಡುತ್ತಾ ಗಮನಿಸುತ್ತಾ ಬರುತಿದ್ದರು. ಅದೊಂದು ಸಣ್ಣ ವಯಸ್ಸಿನ ಹೆಣ್ಣಿನ ಮನೆ. ಮನೆಯ ಮಾಡು ಅವಳ ಬೆನ್ನು ಹಾಗೂ ತಲೆಯನ್ನು ಘಾಸಿಗೊಳಿಸಿದ್ದ ಪರಿಣಾಮ ಆಕೆ ಸತ್ತಿದ್ದಳು. ಆದರೆ ಅವಳ ಭಂಗಿ ಮಾತ್ರ ಅಲ್ಲಿದ್ದವರಿಗೆ ಅಚ್ಚರಿ ತರಿಸಿತ್ತು. ಮಂಡಿಯೂರಿ ಕುಳಿತು ಬಾಗಿದಂತಿದ್ದ ಅವಳು ದೇವರಿಗೆ ನಮಸ್ಕಾರ ಮಾಡುತ್ತಿರುವಂತೆ ಇದ್ದಳು. ಅವಳು ಹೇಗೂ ಸತ್ತಿರುವುದರಿಂದ ಅವಳನ್ನು ಅಲ್ಲಿಯೇ ಬಿಟ್ಟು ಮುಂದುವರಿದರು. ಆದರೂ ಅವರಲ್ಲೊಬ್ಬನಿಗೆ ಅವಳ ಮನೆಯೊಳಗೆ ಬೇರೆ ಯಾರಾದರೂ ಇದ್ದಿರಬಹುದೇ ಎಂಬ ಅನುಮಾನ ಕಾಡಿ ಮತ್ತೆ ಹಿಂದಿರುಗಿ ಬಂದ. ನೋಡಿದರೆ ಬಾಗಿದ ಸ್ಥಿತಿಯಲ್ಲಿದ್ದ ಅವಳ ಕೆಳಗೆ ಮೂರು ತಿಂಗಳ ಮಗುವೊಂದಿತ್ತು. ಮಗುವನ್ನು ಬದುಕಿಸಿಕೊಳ್ಳುವ ಕಟ್ಟಕಡೆಯ ಸಾಧ್ಯತೆಯಾಗಿ ಆಕೆ ಮಗುವಿನ ಮೇಲೆ ಬಾಗಿದ್ದಳು. ಅವಳ ತ್ಯಾಗಕ್ಕೆ ಪ್ರತಿಯಾಗಿ ಆ ಮಗು ಜೀವಂತವಿತ್ತು. ಆ ಮಗುವನ್ನು ಆಕೆ ಬ್ಲಾಂಕೆಟ್ಟಿನಲ್ಲಿ ಸುತ್ತಿದ್ದಳು. ಅಲ್ಲೊಂದು ಮೊಬೈಲ್ ಇತ್ತು. ’ನೀನು ಬದುಕುಳಿದೆಯಾದರೆ ಮಗೂ ನೆನಪಿಟ್ಟುಕೋ ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ’ ಎಂದ ಸಂದೇಶವನ್ನೂ ಅಲ್ಲಿ ಟೈಪ್ ಮಾಡಿದ್ದಳು ಆ ತಾಯಿ.
ಅಮ್ಮನೆಂದರೆ ಮಕ್ಕಳಿಗೆ ಸರ್ವಸ್ವ. ಅಳುವ ಮಗು ಅಮ್ಮನ ಸ್ಪರ್ಶ ಮಾತ್ರದಿಂದ ಸುಮ್ಮನಾಗುತ್ತದೆ. ಅದರ ಕನಸು ಕನವರಿಕೆಗಳೆಲ್ಲವೂ ಅಮ್ಮನೇ ಆಗಿರುತ್ತಾಳೆ. ಅಮ್ಮನೆಂದರೆ ಮಗುವಿನ ವಿಸ್ಮಯ. ಅದರ ಬೇಕು ಬೇಡಗಳನ್ನು ಅರಿತುಕೊಂಡು ಮಗುವಿನ ಬೆಳವಣಿಗೆಗೆ ತನ್ನನ್ನೇ ಮೀಸಲಿಡುವವಳು ತಾಯಿ. ಅಮ್ಮನ ಕುರಿತಾಗಿ ಭಾರತೀಯರ ಭಾವನೆಗಳು ಕಮ್ಮಿಯಲ್ಲ. ಹೆತ್ತವರಿಗೆ ಹೆಗ್ಗಣ ಮುದ್ದು ಎಂಬ ಗಾದೆಯೇ ಇದೆಯಲ್ಲ. ಪ್ರತಿ ಮಗುವಿಗೂ ಬೇಕಾಗುವ ಭದ್ರತೆಯ ಭಾವ ಮೊದಲು ದೊರೆಯುವುದೇ ಅಮ್ಮನಲ್ಲಿ. ಆ ಸ್ಥಾನ ಬಹಳ ದೊಡ್ಡದು. ಅದಕ್ಕಾಗಿ ಹಂಬಲಿಸಿ ಲಕ್ಷ ಲಕ್ಷ ಖರ್ಚು ಮಾಡುವುದಕ್ಕೂ ಹೆಣ್ಣು ಸಿದ್ಧಳಿರುತ್ತಾಳಲ್ಲ! ತಾಯಿಯಾಗುವುದರಿಂದ ಮಾತ್ರ ಹೆಣ್ತನ ಪೂರ್ಣಗೊಳ್ಳುತ್ತದೆ ಎಂಬ ಅಲಿಖಿತ ನಿಯಮವನ್ನೂ ನಮಗೆ ನಾವೇ ಹಾಕಿಕೊಂಡಿದ್ದೇವಲ್ಲ?
ಇಷ್ಟನ್ನು ಯಾಕೆ ಹೇಳಬೇಕಾಯಿತು ಎಂದರೆ ಎರಡು ತಿಂಗಳ ಹಿಂದೆ ಪತ್ರಿಕೆಯಲ್ಲಿ ಒಂದು ಸುದ್ದಿ ಓದಿದೆ. ಓರ್ವ ತಾಯಿಗೆ ಎರಡನೆಯ ಮಗುವೂ ಹೆಣ್ಣಾಗಿತ್ತು. ಮನೆಯವರಿಂದ ಮೂದಲಿಕೆಗೆ ನಿರ್ಲಕ್ಷಕ್ಕೆ ಆ ತಾಯಿ ಒಳಗಾಗಬೇಕಾಯಿತು. ಬೇಸತ್ತಿದ್ದಳು. ಎರಡು ತಿಂಗಳ ಶಿಶುವಿಗೆ ಜ್ವರ ಬಂದಿತ್ತು. ವೈದ್ಯರಲ್ಲಿಗೆ ಕರೆದೊಯ್ಯುವ ನೆಪದಲ್ಲಿ ಮನೆಯಿಂದಾಚೆ ಬಂದ ಆ ತಾಯಿ ಆ ಮಗುವನ್ನು ನದಿಗೆಸೆದು ಸುಮ್ಮನಾಗಿದ್ದಳು! ಯಾವ ತಾಯಿ ಗರ್ಭದಲ್ಲಿ ಪೋಷಿಸಿ ಜನ್ಮ ನೀಡಿದ್ದಳೋ ಅದೇ ತಾಯಿಗೆ ಬೇಡವಾಗಿ ಆ ಪುಟ್ಟ ಕಂದ ನದಿಯ ಪಾಲಾಗಬೇಕಾಯಿತು. ಆದರೆ ಬದುಕುಳಿಯುವುದಕ್ಕೆ ತೊರೆದವಳು ಕುಂತಿಯೂ ಅಲ್ಲ, ಆ ಮಗು ಕರ್ಣನೂ ಅಲ್ಲ. ಅವಳ ವರ್ತನೆಯಿಂದ ಅನುಮಾನಗೊಂಡ ಪತಿ ಪೊಲೀಸ್ ಕಂಪ್ಲೇಂಟು ಕೊಟ್ಟ. ವಿಚಾರಣೆ ನಡೆಯಿತು. ತಪ್ಪೊಪ್ಪಿಕೊಂಡಳು. ಶಿಕ್ಷೆಯಾಗಿ ಜೈಲು ಸೇರಿದಳು. ಮೊದಲ ಮಗುವಿಗೂ ಅಮ್ಮನಿಲ್ಲದಂಥ ಸ್ಥಿತಿ ತಂದುಕೊಂಡಳು. ಅವಳೆಂತಹ ತಾಯಿ? ಅಷ್ಟಕ್ಕೂ ದೂಷಿಸಬೇಕಾದ್ದು ಅವಳನ್ನು ಮಾತ್ರವೇ?
ಇತ್ತೀಚೆಗೆ ಚಾನೆಲ್ಗಳು ಸುದ್ದಿಯೊಂದನ್ನು ಪ್ರಸಾರ ಮಾಡಿದವು. ಒಂಭತ್ತು ವ?ದ ಬುದ್ಧಿಮಾಂದ್ಯ ಮಗುವನ್ನು ತಾಯಿ ಮೂರನೇ ಮಹಡಿಯಿಂದ ಎಸೆದು ಕೊಂದಳಂತೆ. ಒಮ್ಮೆ ಎಸೆದು ಸಾಯಲಿಲ್ಲವೆಂದು ಮತ್ತೆ ಎತ್ತಿ ಎಸೆದಳಂತೆ. ಆ ಮಗು ಅದೆಂಥ ಪಾಪ ಮಾಡಿತ್ತೋ; ತಾಯಿಯಿಂದಲೇ ಅಷ್ಟು ಬರ್ಬರವಾಗಿ ಹತ್ಯೆಗೊಳಗಾಗುವುದಕ್ಕೆ!
ಮಹಾತ್ಮರ ಸಂದೇಶಗಳನ್ನು ಓದುತ್ತೇವೆ, ತಾಯಿಯಾದವಳು ಮಗುವಿನ ಸಾಧನೆಗೆ ಹೇಗೆ ಪ್ರೇರಕಿಯೋ ಮಾರ್ಗದರ್ಶಕಿಯೋ ಆಗಿರುತ್ತಾಳೆ ಎಂದು ನೋಡುತ್ತೇವೆ. ’ಮಗೂ ನೀನು ಆ ಪರ್ವತ ಏರಬೇಕು’ ಎಂದು ಬಾಲಕ ತೇನಸಿಂಗನಿಗೆ ಹೇಳುತ್ತಾ ಹೇಳುತ್ತಾ ಅವನು ಮೌಂಟ್ ಎವರೆಸ್ಟ್ ಏರುವಂತೆ ಮಾಡಿದ ತಾಯಿಯ ಉದಾಹರಣೆ ಕೇಳುತ್ತೇವೆ. ಅಪಘಾತದಲ್ಲಿ ಒಂದು ಕಣ್ಣು ಕಳೆದುಕೊಂಡ ಮಗನಿಗೆ ಮುಂದೆ ತೊಂದರೆಯಾಗಬಾರದು ಎಂದು ತನ್ನ ಕಣ್ಣನ್ನು ಕೊಟ್ಟು ಕಡೆಗೆ ಅದೇ ಮಗನಿಂದ ನಿರ್ಲಕ್ಷಕ್ಕೊಳಗಾದ ತಾಯಿಯ ಕಥೆ ಕೇಳಿ ಕಣ್ಣೀರು ಸುರಿಸುತ್ತೇವೆ. ತನ್ನ ಪ್ರೇಯಸಿಗಾಗಿ ಹೆತ್ತಮ್ಮನ ಹೃದಯ ಕೊಂಡೊಯ್ಯುತ್ತಿರುವಾಗ ಮಗ ಎಡವಿ ಬಿದ್ದನೆಂದು ಆ ತಾಯಿಹೃದಯ ’ಮಗೂ ಏಟಾಯಿತೇ’ ಎಂದು ಕೇಳುವ ಕಾಲ್ಪನಿಕ ಕಥೆಯನ್ನು ನೇಯುವ?ರ ಮಟ್ಟಿಗೂ ಮಾತೃತ್ವವನ್ನು ಮೆರೆಯುತ್ತೇವೆ. ’ಅಮ್ಮಾ ಎಂದರೆ ಏನೋ ಹರು?ವು/ನಮ್ಮ ಬಾಳಿಗೆ ಅವಳೇ ದೈವವು’ ಮೊದಲಾದ ಪದ್ಯಗಳನ್ನು ಭಾವುಕವಾಗಿ ಹಾಡಿಕೊಳ್ಳುತ್ತೇವೆ. ಹೀಗಿರುವಾಗ ಪತ್ರಿಕೆಗಳಲ್ಲಿ ಈ ರೀತಿಯ ಸುದ್ದಿಗಳನ್ನು ಓದಿದರೆ ಭಯವಾಗುತ್ತದೆ. ಹಲವು ಸಂದರ್ಭಗಳಲ್ಲಿ ತಾಯಿ ಮಕ್ಕಳಿಗೆ ವಿ?ವುಣಿಸಿ ತಾನೂ ಸಾಯುವ ಆತ್ಮಹತ್ಯೆ ಸರಣಿಗಳ ಬಗ್ಗೆ ಓದಿದಾಗ ಮನಸ್ಸು ತಲ್ಲಣಗೊಳ್ಳುತ್ತಿತ್ತು. ಆದರೆ ಈ ಘಟನೆಗಳು ಹೇಯವಾದ್ದು, ಭೀಕರವಾದ್ದು.
ಭಾರತದಲ್ಲಿ ಆದರ್ಶಸ್ತ್ರೀ ಎಂದರೆ ತಾಯಿ ಎಂದಿದ್ದರು ಸ್ವಾಮಿ ವಿವೇಕಾನಂದರು. ತಾಯಿ ಭುವನೇಶ್ವರಿಯ ಆದರ್ಶ ಅವರಿಗೆ ಬೆಳಕಾಗಿತ್ತು. ದಿಟ್ಟ ತಾಯಿ ಆಕೆ. ಅಂಥವರ ಆದರ್ಶ ಇಂದಿನವರಿಗೆ ಇಲ್ಲದೇ ಹೋದದ್ದೇಕೆ? ನೈತಿಕ ಮೌಲ್ಯಗಳು ನಮ್ಮ ಬದುಕಿನಿಂದ ಕಾಣೆಯಾಗುತ್ತಿರುವುದರ ಸಂಕೇತವಲ್ಲವೇ ಇದು? ಮಕ್ಕಳನ್ನು ಸರಿದಾರಿಯಲ್ಲಿ ಮುನ್ನಡೆಸಿ ತಿದ್ದಿ ಬೆಳೆಸಬೇಕಾದವಳು ತಾಯಿ ಎಂಬುದು ಸಮಾಜ ನಮ್ಮ ಮೇಲೆ ಹೊರಿಸಿರುವ ಜವಾಬ್ದಾರಿ. ಅಮ್ಮನೆಂದರೆ ಸತ್ಯ, ಅಪ್ಪನೆಂದರೆ ನಂಬಿಕೆ ಎಂಬ ಮಾತೇ ಇದೆಯಲ್ಲ? ಪೊರೆವವಳು ತಾಯಿ, ತಿದ್ದುವವಳು ತಾಯಿ. ಮಗು ದಾರಿ ತಪ್ಪಿದರೆ ದೂಷಣೆಗೊಳಗಾಗುವವಳೂ ತಾಯಿ. ಅದರ ಅರಿವನ್ನೇ ಕಳೆದುಕೊಳ್ಳುತ್ತ ಮುಂದೆ ಸಾಗುತ್ತಿದ್ದೇವೆಯೇ? ಆ ತಾಯಿಯೇ ಕೊಲೆಗಡುಕಿಯಾಗಿ ಮಾರ್ಪಟ್ಟರೆ ಅದಕ್ಕಿಂತ ಪಾಪ ಬೇರಿಲ್ಲ.
ನಾವು ಮಂಗಳೂರಿನಲ್ಲಿದ್ದಾಗ ಪರಿಚಿತರೊಬ್ಬರು ಮಕ್ಕಳಿಲ್ಲ ಎಂಬ ಕಾರಣಕ್ಕೆ ದತ್ತು ಪಡೆದುಕೊಂಡಿದ್ದರು. ಅದೊಂದು ಮೂರು ತಿಂಗಳ ಹೆಣ್ಣು ಮಗು. ಎಳೆಯ ಮಗುವಿನ ಬಗ್ಗೆ ಏನು ಗೊತ್ತಾಗುತ್ತದೆ? ಅವರ ವಿಧಿ ಹೇಗಿತ್ತೆಂದರೆ ಆ ಮಗು ಬುದ್ಧಿಮಾಂದ್ಯ ಮಗುವಾಗಿತ್ತು. ನಡೆಯಲೂ ಅಸಮರ್ಥವಾಗಿದ್ದ ಅವಳನ್ನು ಹತ್ತು ಹನ್ನೊಂದು ವ?ವಾದರೂ ಆ ತಾಯಿ ಎತ್ತಿಕೊಂಡೇ ಓಡಾಡಬೇಕಿತ್ತು. ಅವರ ಸ್ಥಿತಿ ಹೇಗಿದ್ದಿರಬಹುದೆಂದು ಊಹಿಸಿ. ಆದರೆ ಆಕೆ ನಿರ್ಲಕ್ಷಿಸಲಿಲ್ಲ. ಕಾಪಾಡಿಕೊಂಡರು ಆ ಮಗುವನ್ನು. ಈಗ ಹೇಗಿದೆಯೋ ಗೊತ್ತಿಲ್ಲ. ಆದರೆ ಮೊದಲೇ ಹೇಳಿದ ಘಟನೆಯಲ್ಲಿ ತಾನೇ ಹೆತ್ತ ಮಗುವನ್ನು ಬುದ್ಧಿಮಾಂದ್ಯವೆಂದು ಬರ್ಬರವಾಗಿ ಕೊಂದಳು ಆ ತಾಯಿ.
ನಮ್ಮ ಕನ್ನಡ ಮೇಷ್ಟ್ರು ನಮಗೆ ಮಹಾಭಾರತದ ಕಥೆಯೊಂದನ್ನು ಸೊಗಸಾಗಿ ಹೇಳುತ್ತಿದ್ದರು. ದುರ್ಯೋಧನ ವಜ್ರಕಾಯನಾದುದು ಅವನ ತಾಯಿ ಗಾಂಧಾರಿಯ ಅನುಗ್ರಹದಿಂದ. ಅವನನ್ನು ಕೊಲ್ಲಬೇಕಾದರೆ ಭೀಮ ಶ್ರೀಕೃ?ನ ಸೂಚನೆಯಂತೆ ತೊಡೆ ಮುರಿಯಬೇಕಾಯಿತು. ಹಾಗಿದ್ದರೆ ಅವಳು ಸೊಂಟದ ಮೇಲ? ಅವನನ್ನು ವಜ್ರದೇಹಿಯನ್ನಾಗಿಸಿದಳೇ? ತಾಯಿ ಅನುಗ್ರಹಿಸಲು ಕರೆದಾಗ ದೊಡ್ಡವನಾಗಿದ್ದ ಹುಡುಗ ಅವಳ ಮುಂದೆ ಬೆತ್ತಲಾಗಿ ನಿಲ್ಲಲು ನಾಚಿ ಹೂವಿನ ಚಡ್ಡಿ ಧರಿಸಿ ನಿಂತಿದ್ದನಂತೆ. ತಲೆಯಿಂದ ಸ್ಪರ್ಶಿಸುತ್ತಾ ಬಂದ ತಾಯಿ ಹೂವಿನ ಚಡ್ಡಿಯ ಸ್ಪರ್ಶದಿಂದ ಚಕಿತಳಾದಳು. ಮುನಿದಳು. ಅಲ್ಲಿಂದ ಕೆಳಗೆ ವಜ್ರದೇಹಿಯಾಗಿಸಲಿಲ್ಲ. ಆ ಕಾರಣಕ್ಕೇ ದುರ್ಯೋಧನನ ಸಾವು ತೊಡೆಯಲ್ಲಿ ಬರೆದಿತ್ತು. ದುರ್ಯೋಧನ ಕೆಟ್ಟವನೆಂದು ಅವನನ್ನು ತೊರೆಯದಿದ್ದರೂ ಈ ಸಂದರ್ಭದಲ್ಲಿ ಕಠಿಣವಾಗಿ ವರ್ತಿಸಿದಳು ಆ ಗಾಂಧಾರಿ.
ನಮ್ಮೆದುರು ನೂರು ಸಾವಿರ ಕಥೆಗಳಿವೆ. ಆದರೆ ಮಾತೃತ್ವದ ಮರ್ಯಾದೆ ಕಾಪಾಡುವ ಹೊಣೆಗಾರಿಕೆಯನ್ನು ಅಮ್ಮಂದಿರಿಗೂ ಕಲಿಸಬೇಕಾದ ಸ್ಥಿತಿ ಬಂದಿದೆ. ಇಂದಿನ ಮಕ್ಕಳಿಗೋ ಮನೆಯಲ್ಲಿ ಕಳೆಯುವ ಸಮಯವೇ ಕಡಮೆ. ಪಾಠ ಟ್ಯೂಷನ್ನುಗಳ ಮಧ್ಯೆ, ಹೆತ್ತವರ ಕೆಲಸ ಕಾರ್ಯಗಳ ಮಧ್ಯೆ ಬದುಕು ಕಳೆದುಹೋಗುತ್ತಿದೆ. ಮುಂದೆ ನಮ್ಮ ಜೀವನ ಹೇಗೆ?