ಮನಸಾಪಿ ಯದಸ್ಪೃಷ್ಟಂ ದೂರಾದಪಿ ಯದುಜ್ಝಿತಮ್ |
ತದಪ್ಯುಪಾಯೈರ್ವಿವಿಧೈರ್ವಿಧಿರಿಚ್ಛನ್ ಪ್ರಯಚ್ಛತಿ ||
– ಸುಭಾಷಿತಸುಧಾನಿಧಿ
“ಯಾವುದನ್ನು ಮನಸ್ಸಿನಿಂದ ಕೂಡ ಮುಟ್ಟಲಾಗಲಾರದೋ, ಯಾವುದು ನಿರಾಶೆಯಿಂದ ತಿರಸ್ಕರಿಸಲ್ಪಟ್ಟಿದೆಯೋ, ಅಂಥದನ್ನೂ ಸಹ ಬಗೆಬಗೆಯ ಮಾರ್ಗಗಳಿಂದ ವಿಧಿಯು ನಿಶ್ಚಯಿಸಿ ನೀಡುತ್ತದೆ.”
ತನಗೆ ಯಾವುದು ಸಲ್ಲಬೇಕು, ತಾನು ಹೇಗೆ ಸಾಗಬೇಕು ಎಂದು ಮನುಷ್ಯನಿಗಿರುವ ನಿರ್ಣಯಾಧಿಕಾರವು ಪರಿಮಿತವಾದದ್ದು. ಅಂತಿಮವಾಗಿ ಎಲ್ಲವೂ ನಡೆಯುವುದು ದೈವವು ವಿಧಿಸಿರುವಂತೆಯೇ – ಎಂಬ ನಮ್ರಭಾವವನ್ನು ರೂಢಿಸಿಕೊಂಡು ದೈವಕ್ಕೆ ತಮ್ಮನ್ನು ಒಪ್ಪಿಸಿಕೊಳ್ಳುವುದು ಆಂತರಂಗಿಕ ಸ್ವಾಸ್ಥ್ಯಕ್ಕೆ ಅನುಕೂಲಕರವಾಗುತ್ತದೆ.
ಹತ್ತೊಂಬತ್ತನೇ ಶತಮಾನದಲ್ಲಿ ಫ್ರೆಂಚ್ ಭಾ?ಯಲ್ಲಿ ರಮ್ಯಕಾವ್ಯಪ್ರಸ್ಥಾನದ ಆದ್ಯನೆಂದು ಪರಿಗಣಿತನಾಗಿದ್ದ ಲ್ಯಾಮರ್ಟೀನ್ ಫ್ರಾನ್ಸಿನ ಮಹಾಕ್ರಾಂತಿಯ ಪ್ರವರ್ತಕರಲ್ಲಿಯೂ ಪ್ರಮುಖನೆನಿಸಿದ್ದವನು. ಆತ ಒಮ್ಮೆ ನಗರದ ಬೀದಿಯಲ್ಲಿ ಹೋಗುವಾಗ ರಸ್ತೆಬದಿಯಲ್ಲಿ ಕಲ್ಲುಕುಟಿಗನೊಬ್ಬ ಜಲ್ಲಿಕಲ್ಲು ಕುಟ್ಟುತ್ತ ಸುತ್ತಿಗೆಯ ಒಂದೊಂದು ಪೆಟ್ಟಿನೊಡನೆ ’ವಂದನೆ ಪ್ರಭು’ ಎನ್ನುತ್ತಿದ್ದುದನ್ನು ಕಂಡ. ಅಚ್ಚರಿಗೊಂಡು ಲ್ಯಾಮರ್ಟೀನ್ ಅವನನ್ನು ಕೇಳಿದ:
“ಯಾರಿಗೆ ನೀನು ವಂದನೆ ಸಲ್ಲಿಸುತ್ತಿದ್ದೀ?”
“ದೇವರಿಗಲ್ಲದೆ ಬೇರೆ ಯಾರಿಗೆ!” ಎಂದ, ಕಲ್ಲುಕುಟಿಗ.
“ನೀನು ಭಾಗ್ಯವಂತನಾಗಿದ್ದಿದ್ದರೆ ದೇವರನ್ನು ವಂದಿಸುವುದು ಅರ್ಥಪೂರ್ಣವಾಗುತ್ತಿತ್ತೇನೊ. ಆದರೆ ನಿನ್ನ ದೀನಸ್ಥಿತಿಯನ್ನು ನೋಡಿದರೆ ಭಗವಂತನು ನಿನ್ನನ್ನು ಸೃಷ್ಟಿಸುವಾಗ ಮಾತ್ರ ನಿನ್ನ ಬಗೆಗೆ ಯೋಚಿಸಿ ಅನಂತರ ನಿನ್ನನ್ನು ಮರೆತೇಬಿಟ್ಟನೇನೊ ಎನಿಸುತ್ತದೆ!”
ಕಲ್ಲುಕುಟಿಗ: “ಅಂದರೆ ಆ ಒಂದು ಕ್ಷಣ ಭಗವಂತನು ನನ್ನನ್ನು ಗಮನಿಸಿದ್ದ ಎಂದು ನಿಮ್ಮ ಅಭಿಪ್ರಾಯವೆ?”
ಲ್ಯಾಮರ್ಟೀನ್: “ಹಾಗೆಯೆ ತೋರುತ್ತದೆ.”
ಕಲ್ಲುಕುಟಿಗನು “ಅದೊಂದೇ ಸಾರಿಯಾದರೂ ಭಗವಂತನು ನನ್ನಂತಹ ಸಾಮಾನ್ಯನ ಬಗೆಗೆ ಯೋಚಿಸಿದನೆಂದರೆ ಅದೇನು ಕಡಮೆಯ ಮಾತೆ? ಅದಕ್ಕಾಗಿ ನಾನು ಅಡಿಗಡಿಗೆ ಅವನಿಗೆ ವಂದನೆ ಸಲ್ಲಿಸಬೇಡವೆ?” ಎಂದು ಹೇಳಿ ಕಲ್ಲು ಕುಟ್ಟುವ ಕಾಯಕವನ್ನು ದೈವಸ್ಮರಣೆಯೊಂದಿಗೆ ಮುಂದುವರಿಸಿದ.