ನಮ್ಮ ಬಾಲ್ಯದ ದಿನಗಳು. ನಾವೇನೂ ತೀರಾ ಬಡವರಾಗಿರಲಿಲ್ಲ. ವೃತ್ತಿಯಲ್ಲಿ ನಮ್ಮ ತಂದೆ ಶಾಲಾ ಶಿಕ್ಷಕರು. ಅಮ್ಮ ಬಿಡುವಿನ ವೇಳೆಯಲ್ಲಿ ಹೊಲಿಯುತ್ತಿದ್ದರು. ಅಪ್ಪ ಖಡಾಖಂಡಿತ ಶಿಸ್ತಿನ ವ್ಯಕ್ತಿ. ಉಡುಪಿನಿಂದ ತೊಡಗಿ ಊಟದವರೆಗೂ. ಎ? ಮುದ್ದು ಮಾಡುತ್ತಿದ್ದರೋ ಅದರ ಎರಡರ? ಶಿಕ್ಷೆಯನ್ನೂ ಅಗತ್ಯವಿದ್ದಲ್ಲಿ ಕೊಡುತ್ತಿದ್ದರು. ಅದರಲ್ಲಿ ಯಾವ ರಿಯಾಯಿತಿಯೂ ಇರಲಿಲ್ಲ. ಕೆಲವು ಸಲ ಈ ಅಪ್ಪ ಯಾಕಾದರೂ ಇ? ಜೋರಿರಬೇಕಿತ್ತೋ ಎಂದು ಅಂದುಕೊಂಡದ್ದೂ ಇದೆ. ಆದರೆ ಅಪ್ಪನ ವ್ಯಕ್ತಿತ್ವ ಊರಿನ ಜನರೆಲ್ಲ ಗೌರವಿಸುವಂಥದ್ದು ಎಂಬುದು ಅರ್ಥವಾದ ಮೇಲೆ ಅಪ್ಪನ ಮೇಲೆ ವರ್ಣನಾತೀತ ಅಭಿಮಾನ. ಇದನ್ನೆಲ್ಲ ಯಾಕೆ ಪ್ರಸ್ತಾಪಿಸಿದೆನೆಂದರೆ ಅಪ್ಪ ನಮ್ಮ ಬಾಲ್ಯದಲ್ಲಿ ನಮಗೆ ಗೊತ್ತೇ ಆಗದಂತೆ ಅದೆಂತಹ ಜೀವನಮೌಲ್ಯಗಳನ್ನು ತುಂಬಿದ್ದರು ಎಂಬುದಕ್ಕಾಗಿ.
ನಾವು ನಾಲ್ಕನೆಯ ತರಗತಿಯವರೆಗೂ ಪೆನ್ಸಿಲಿನಲ್ಲಿ ಮಾತ್ರ ಬರೆಯಬೇಕಿತ್ತು. ಸ್ಲೇಟು ಬಳಪವೂ ಜೊತೆಯಲ್ಲಿ ಇತ್ತು ಎನ್ನಿ! ಅಕಸ್ಮಾತ್ ನಾವೇನಾದರೂ ಕಡ್ಡಿಪೆನ್ನು ಹಿಡಿದದ್ದು ಕಂಡರೆ ಅಪ್ಪನಿಗೆ ಕೆಂಡಾಮಂಡಲ ಸಿಟ್ಟು. ಅಲ್ಲಿ ಇಲ್ಲಿ ಬೇಕೆಂದಂತೆ ಪೆನ್ನುಗಳು ಆಗ ಇರುತ್ತಲೂ ಇರಲಿಲ್ಲ. ಅಪ್ಪ ತಮಗೆ ಬೇಕಾದ ವಿಶಿ? ಬಗೆಯ ಪೆನ್ನನ್ನು ಎರಡೋ ನಾಲ್ಕೋ ವ?ಕ್ಕೊಮ್ಮೆ ಮಂಗಳೂರಿನಿಂದ ತರಿಸುತ್ತಿದ್ದುದು ನೆನಪು. ಕೊಡೆಯಾಲಜ್ಜ ಎಂದು ನಾವು ಕರೆಯುತ್ತಿದ್ದ ನಮ್ಮ ತಂದೆಯ ಸೋದರಮಾವನ ಹತ್ತಿರ ಅಪ್ಪ ಪೆನ್ನು ತರಿಸುತ್ತಿದ್ದುದು ನಮಗೆ ಸೋಜಿಗವಾಗಿತ್ತು. ಹಾಗೇ ಆ ಪೆನ್ನಿನ ಮೇಲೆ ಅತೀವ ಮೋಹ ಕೂಡಾ. ಹಾಗೆಂದು ಅಪ್ಪನ ಪೆನ್ನಿನಲ್ಲಿ ಅಪ್ಪಿತಪ್ಪಿ ನಾವು ಬರೆಯುವಂತಿರಲಿಲ್ಲ. ಅಪ್ಪನ ಉದ್ದನೆಯ ಮೂಗಿನ ತುದಿಯಲ್ಲಿ ಸಿಟ್ಟು ಸದಾ ಹಣಕಿ ನೋಡುತ್ತಿತ್ತು. (ಈಗ ಕಾಲ ಬದಲಾಗಿದೆ. ಆರು ಜನ ಮೊಮ್ಮಕ್ಕಳ ಕೀಟಲೆ ದರ್ಬಾರುಗಳ ನಡುವೆ ಅಪ್ಪ ಶಾಂತ ಮೂರ್ತಿಯಾಗಿದ್ದಾರೆ.)
ಒಮ್ಮೆ ಅಪ್ಪ ಒಂದು ಬಾಕ್ಸ್ ತುಂಬಾ ಬಳಪದ ಕಡ್ಡಿ ತಂದಿಟ್ಟಿದ್ದರು. ಅದೇಕೆ ತಂದರೋ ಗೊತ್ತಿಲ್ಲ. ಅದನ್ನು ನಮ್ಮ ಕೈಗೆ ಸಿಗದಂತೆ ಕಪಾಟಿನಲ್ಲಿ ಬೀಗ ಹಾಕಿ ಇಟ್ಟಿದ್ದರು. ಅದನ್ನು ತಂದಾಗ ನಾನಾದರೋ ಪ್ರತಿದಿನವೂ ಹೊಸಾ ಬಳಪದ ಕಡ್ಡಿ ತೆಗೆದುಕೊಂಡು ಶಾಲೆಗೆ ಹೋಗಬಹುದೆಂದು ಮಂಡಿಗೆ ಮೆದ್ದಿದ್ದೆ. ಮೊದಲ ದಿನ ಹೊಸಬಳಪ ತೆಗೆದುಕೊಂಡು ಹೋದವಳು ಅದನ್ನು ನಾಲ್ಕು ತುಂಡು ಮಾಡಿ ಕ್ಲಾಸಿನಲ್ಲಿ ಗೆಳತಿಯರಿಗೆ ಹಂಚಿಬಿಟ್ಟಿದ್ದೆ. ಮನೆಯಲ್ಲಿ ಬೇಕಾದ? ಇದೆ ಎಂಬ ಬಿಂಕ ನನ್ನದು. ’ನಾಳೆಯೂ ಹೊಸಕಡ್ಡಿ ತರುತ್ತೇನೆ’ ಎಂದು ಅವರೆಲ್ಲರ ಮುಂದೆ ಬಡಾಯಿ ಕೊಚ್ಚಿಕೊಂಡಿದ್ದೆ. ಆದರೆ ನನ್ನ ನಿರೀಕ್ಷೆಯೆಲ್ಲ ಹುಸಿಯಾಗುವಂತೆ ನಾನೆಷ್ಟು ಬೇಡಿದರೂ ಅಪ್ಪ ಹೊಸಕಡ್ಡಿ ಕೊಡಲಿಲ್ಲ. ಒಂದು ಕಡ್ಡಿ ಒಂದು ವಾರಕ್ಕಾದರೂ ಬರಬೇಕಿತ್ತು ಎಂಬುದು ಅವರ ನಿಲವು. ಅಮ್ಮನ ಮೂಲಕ ವಕಾಲತ್ತು ನಡೆಸಿದರೂ ಏನೂ ಪ್ರಯೋಜನವಾಗಲಿಲ್ಲ. ಸ್ವತಃ ನಮ್ಮ ಅಜ್ಜನೇ ’ಒಂದು ಕಡ್ಡಿಗೆ ಬೇಕಾಗಿ ಅಷ್ಟೆಲ್ಲಾ ಅಳಿಸಬೇಕಾ ಅವಳನ್ನು?’ ಎಂದು ನನ್ನ ಪರ ವಹಿಸಿದರೂ ಅಪ್ಪ ಸುತಾರಾಂ ಕೊಡಲಿಲ್ಲ. ಅಂದು ’ಇಡಿಯ ಜಗತ್ತಿನಲ್ಲಿ ಅತ್ಯಂತ ಜೋರಿನ ವ್ಯಕ್ತಿ ನಮ್ಮಪ್ಪನೇ ಇರಬೇಕು’ ಎಂದುಕೊಂಡಿದ್ದೆ. (ಸದ್ಯ! ಆಗ ಹಿಟ್ಲರ್ ಎಂಬವನ ಹೆಸರು ನನಗೆ ತಿಳಿದಿರಲಿಲ್ಲ. ಇಲ್ಲದಿದ್ದರೆ ಅದೇ ಹೋಲಿಕೆ ಕೊಡುತ್ತಿದ್ದೆನೇನೋ!) ಕಡೆಗೆ ನಮ್ಮಮ್ಮ ಯಾವುದೋ ಹಳೆಯ ಪೆನ್ನಿನ ಕಡೆಯೊಂದನ್ನು ಹುಡುಕಿ, ನನ್ನಲ್ಲಿದ್ದ ತುಂಡುಕಡ್ಡಿಗೆ ಒಂದಿ? ಪೇಪರು ಸುತ್ತಿ ಅದನ್ನು ಪೆನ್ನಿನ ಕಡೆಗೆ ಕೂರಿಸಿ ಪೆನ್ಕಡ್ಡಿ ಮಾಡಿಕೊಟ್ಟು ಶಾಲೆಗೆ ಕಳುಹಿಸಿಕೊಟ್ಟಿದ್ದರು.
ತರಗತಿಯಲ್ಲಿದ್ದವರೆಲ್ಲ ನನ್ನ ಹೊಸಕಡ್ಡಿಯ ಗಮ್ಮತ್ತು ಕಂಡು ಮುಸಿನಕ್ಕರೇ, ನನಗೆ ಗೊತ್ತಿಲ್ಲ. ಆದರೆ ಅಂದು ನಮ್ಮಪ್ಪ ಜೀವನಕ್ಕೆ ಬೇಕಾದ ಬಹುದೊಡ್ಡ ಪಾಠ ಕಲಿಸಿದ್ದರೆಂಬುದು ನನಗೆ ಅರ್ಥವಾಗಬೇಕಾದರೆ ನನ್ನ ಮಕ್ಕಳು ಶಾಲೆಗೆ ಹೋಗುವಷ್ಟು ದೊಡ್ಡವರಾಗಬೇಕಾಯಿತು. ಮಕ್ಕಳಾದರೋ.. ಇಂದು ಕೊಡಿಸಿದ ಪೆನ್ಸಿಲ್ ನಾಳೆಗಿಲ್ಲ. ನಿನ್ನೆ ಹೊಸತಾಗಿ ಕೊಡಿಸಿದ ಇರೇಸರ್ ನಾಳೆ ಮಗನ ಯೂನಿಫಾರ್ಮ್ ಒಣಗಲು ಹಾಕುತ್ತಾ ಕೊಡವಿದರೆ ಪುಡಿಪುಡಿಯಾಗಿ ಕಿಸೆಯಿಂದ ಉದುರುತ್ತದೆ. ’ಇದೇನು ಮಾಡಿದೆಯೋ ಮಗನೇ? ಎಂದರೆ ’ಅಮ್ಮಾ ಅದರ ಪರಿಮಳ ಚೆನ್ನಾಗಿತ್ತು. ಅದಕ್ಕೇ ಕಚ್ಚಿಕಚ್ಚಿ ಹಾಕಿದೆ’ ಎಂದಾನು. ಮೂರು ರೂಪಾಯಿಯೋ ಐದು ರೂಪಾಯಿಯೋ ದೊಡ್ಡ ಸಂಗತಿಯಲ್ಲ ನಿಜ. ಆದರೆ ದಿನದಿನ ಹೊಸದೇ ಕೊಡಿಸುತ್ತಾ ಅಭ್ಯಾಸವಾದರೆ ಮುಂದೆ ಹೇಗೆ? ನಮ್ಮಪ್ಪನ ಪಾಠ ನೆನಪಾಗಿ ಒಂದುದಿನ ಹೊಸ ಪೆನ್ಸಿಲ್ ಬೇಕೆಂದು ಹಟ ಮಾಡುವಾಗ ’ಇರುವ ಪೆನ್ಸಿಲಿನಲ್ಲಿ ಬರೆಯುವುದು ಕಲಿ. ಅದು ಪೂರ್ತಿ ಚಿಕ್ಕದಾದ ಮೇಲೆ ಹೊಸದು’ ಎಂದು ಗದರಿದ್ದೆ. ಸಂಜೆ ನೋಡುತ್ತೇನೆ, ಯಾರೋ ಮಕ್ಕಳು ಹುಟ್ಟಿದಹಬ್ಬಕ್ಕೆಂದು ಕೊಡಿಸಿದ ಹೊಸ ಪೆನ್ಸಿಲನ್ನು ಚೂಪು ಮಾಡಿ ತುಂಡು ಮಾಡಿ ಎಸೆಯುತ್ತಿದ್ದಾನೆ. ’ಇದು ಚಿಕ್ಕದಾದರೆ ಮಾತ್ರ ಹೊಸದು ಎಂದಿದ್ದೆ ಅಲ್ಲವೆ ಅಮ್ಮ?’ ಎಂಬುದು ಅವನ ಮುಗ್ಧ ಪ್ರಶ್ನೆ. ಕೊನೆಗೆ ಅವನ ಬಾಕ್ಸಿನಿಂದ ಮೆಂಡರನ್ನೂ ತೆಗೆದಿರಿಸಿದ್ದಾಯಿತು. ಅದರ ನಂತರ ಅವನ ಪುಟಾಣಿ ಪೌಚಿನಲ್ಲಿ ಎಲ್ಲ ವಸ್ತುಗಳೂ ಸುಸ್ಥಿತಿಯಲ್ಲಿ ಉಳಿದುಕೊಂಡಿವೆ.
ಸೋಲಲೂ ತಿಳಿದಿರಲಿ.
ಇಂದಿನ ಮಕ್ಕಳಂತೂ ತಂತ್ರಜ್ಞಾನದಲ್ಲಿ ಬಹಳ ಮುಂದೆ. ಒಂದು ಸಂಜೆ ಮಗ ಸದ್ದಿಲ್ಲದೇ ಕುಳಿತಿದ್ದ. ಸಾಮಾನ್ಯವಾಗಿ ಅವನ ಮಾತು ಕೇಳಿಸುತ್ತಿಲ್ಲ ಎಂದರೆ ಏನಾದರೂ ಕೀಟಲೆ ಕೆಲಸ ಮಾಡುತ್ತಿದ್ದಾನೆಂದೇ ಅರ್ಥ. ಮೆಲ್ಲಗೆ ಬಳಿಸಾರಿ ನೋಡಿದರೆ ಮೊಬೈಲಿನಲ್ಲಿ ಪ್ಲಿಪ್ಕಾರ್ಟ್ ಡೌನ್ಲೋಡ್ ಮಾಡಿ ’ಒಂದನೆಯ ತರಗತಿ ಮಕ್ಕಳಿಗಾಗಿ ಮೊಬೈಲ್ ವಾಚುಗಳು’ ಎಂದು ಇಂಗ್ಲಿಷಿನಲ್ಲಿ ಸರ್ಚ್ ಕೊಟ್ಟಿದ್ದಾನೆ. ಎದುರಿನ ಮನೆಯ ಶ್ರವಣನ ಕೈಯ್ಯಲ್ಲಿತ್ತು, ಹಾಗಾಗಿ ತನಗೂ ಬೇಕು ಎಂಬುದು ಅವನ ಕೋರಿಕೆ. ಅದು ಕೊನೆಗೆ ವಾದವಾಗಿ ಜಗಳವಾಗಿ ದುಃಖದವರೆಗೂ ತಲಪಿತು. ’ನೋಡು ಪುಟ್ಟಾ, ಅವನಲ್ಲಿ ಇರುವುದು ನಿನ್ನಲ್ಲಿ ಇಲ್ಲ ಎನಿಸಿದಾಗ ನಿನ್ನಲ್ಲಿ ಇರುವುದೆಲ್ಲವೂ ಅವನಲ್ಲೂ ಇಲ್ಲ ಎಂಬುದನ್ನು ನೆನಪಿಸಿಕೋ. ಸಂಗೀತ ಕಲಿಯುತ್ತಿದ್ದಿ, ಯಕ್ಷಗಾನ ಕಲಿಯುತ್ತಿದ್ದೀ, ಅದಕ್ಕಿಂತ ಮೊಬೈಲು ವಾಚ್ ದೊಡ್ಡದೂ ಅಲ್ಲ, ಮುಖ್ಯವೂ ಅಲ್ಲ’ ಎಂದೆಲ್ಲ ಸಮಾಧಾನ ಮಾಡಿದೆ. ಕಂಬನಿಗಲ್ಲದ ಮಗು ಏನು ಹೇಳಿದರೂ ಅಳು ನಿಲ್ಲಿಸಲಾರ. ಕೊನೆಗೆ ’ಮಗೂ ಅದಕ್ಕೆಲ್ಲ ತುಂಬ ಹಣ ಬೇಕು. ಅ?ಲ್ಲ ಹಣವಿಲ್ಲ ನಮ್ಮ ಬಳಿ. ನೋಡು, ನನಗಿನ್ನೂ ಈ ತಿಂಗಳ ಸಂಬಳವೇ ಬಂದಿಲ್ಲ’ ಎಂದೆ. ಕೊಂಚ ಹೊತ್ತು ದುಃಖ ನುಂಗಿಕೊಂಡು ಮೌನವಾದ ಅವನು ಮತ್ತೆ ಮೊದಲಿಗಿಂತಲೂ ಜೋರಾಗಿ ಅಳಲಾರಂಭಿಸಿದ. ’ನೀನು ಅಪ್ಪ ಎಲ್ಲ ಶ್ರೀಮಂತರಾಗಿರಬೇಕಿತ್ತು ತಾನೇ? ಅಪ್ಪ ನೋಡಿದರೆ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಅಂತಾರೆ, ನೀನು ನೋಡಿದರೆ ಕಾಲೇಜಿಗೆ ಹೋಗುತ್ತೀ, ಮತ್ತೆ ನೀವ್ಯಾಕೆ ನನಗೊಂದು ಮೊಬೈಲ್ ವಾಚೂ ಕೊಡಿಸಲಿಕ್ಕಾಗದ? ಬಡವರಾದಿರಿ?’ ಅವನು ಕೇಳಿದ ರೀತಿಗೆ ನಗು ಉಕ್ಕಿ ಬಂದರೂ ತಡೆದುಕೊಂಡು ’ಬಡವರಲ್ಲದಿದ್ದರೂ ಕಂದಾ, ಹಾಗೆಲ್ಲಾ ನಮಗೆ ಆವಶ್ಯಕತೆಯಿಲ್ಲದ ವಸ್ತುಗಳಿಗಾಗಿ ಆಸೆ ಪಡಬಾರದು. ಸಮಯ ತಿಳಿಯಲು ನಿನ್ನ ಕೈಯಲ್ಲಿ ವಾಚು ಇದೆ. ಸಮಯ ಹೇಳಲು ಬರುತ್ತದೆ ನಿನಗೆ. ಸದ್ಯಕ್ಕೆ ಅದು ಸಾಕು. ಹಟ ಮಾಡಬಾರದು’ ಎಂದು ಸುಮ್ಮನಾಗಿಸಿದೆ.
ಎರಡು ದಿನ ಕಳೆದ ಮೇಲೇ ಅವನೇ ಬಂದು ಹೇಳಿದ: ’ಥೂ! ನನಗೆ ಆ ಮೊಬೈಲ್ ವಾಚು ಬೇಡವೇ ಬೇಡ ಅಮ್ಮ. ಕೆಳಗೆ ಬಿದ್ದರೆ ಹಾಳಾಗುತ್ತಂತೆ, ಶ್ರವಣ ಹೇಳಿದ. ನನ್ನ ಈ ವಾಚೇ ಎಷ್ಟೋ ಚೆಂದ.’
ನಿಜವೇ, ದುಬಾರಿ ವಸ್ತುಗಳನ್ನು ಕೊಡಿಸಬೇಕಾದರೆ ಹತ್ತಾರು ಸಲ ಯೋಚನೆ ಮಾಡಿರುತ್ತೇವೆ. ಆದರೆ ಕಡಮೆ ಬೆಲೆಯದ್ದಾದರೆ ಬಹಳ? ಸಂದರ್ಭಗಳಲ್ಲಿ ಕೊಡಿಸಿ ಬಿಟ್ಟಿರುತ್ತೇವೆ. ಆದರೆ ಬದುಕಿನ ಮೂಲಭೂತ ಪಾಠಗಳು ಈ ಇಂದಿನ ಎಲ್ಲದರಲ್ಲೂ ಅಡಕವಾಗಿರುತ್ತವೆಯೆಂಬುದನ್ನು ಮರೆಯುತ್ತೇವೆ. ಇತ್ತೀಚೆಗೆ ಸ್ನೇಹಿತ ಶಶಾಂಕ ಹೇಳುತ್ತಿದ್ದ: ’ಒಂದಲ್ಲ ಒಂದು ರೀತಿಯಲ್ಲಿ ನಮ್ಮ ತಲೆಮಾರಿನ ಪೋಷಕರು/ಹೆತ್ತವರು ತಮ್ಮ ಮಕ್ಕಳನ್ನು ಸೋಲಿಗೆ ಹೆದರುವಂತೆ ಬೆಳೆಸುತ್ತಿದ್ದೇವೆಯೇ ವಿನಾ ಸೋಲನ್ನು ಎದುರಿಸಿ ತಲೆಯೆತ್ತಿ ನಿಲ್ಲುವಂತೆ ಅಲ್ಲ. ನಮಗೆ ಬಾಲ್ಯದಲ್ಲಿ ಒಂದು ಪೆನ್ನೋ ಪೆನ್ಸಿಲೋ ಸಿಗದೇ ಹೋದಾಗ ಅತೀವ ವೇದನೆಯಾಗುತ್ತಿತ್ತು ನಿಜ. ಆದರೆ ಅಂತಹ ಅನುಭವದ ಕಹಿಗುಳಿಗೆಗಳು ನಮಗೆ ಜೀವನವನ್ನು ಕಲಿಸಿಕೊಟ್ಟಿವೆ. ನಮಗಾದ ಸಂಕಟ ನಮ್ಮ ಮಕ್ಕಳಿಗಾಗಬಾರದೆಂದು ಅವರು ಬಯಸಿದ್ದನೆಲ್ಲಾ ಕೊಟ್ಟು ಒಳ್ಳೆ ಅಪ್ಪ-ಅಮ್ಮನಾಗುವ ಪ್ರಯತ್ನ ಮಾಡುತ್ತೇವೆ. ಪಿಯುಸಿ ಓದುವ ಮಕ್ಕಳಿಗೂ ದುಬಾರಿ ವಾಹನ, ಮೊಬೈಲು ಕೊಡಿಸಲೂ ರೆಡಿ. ಒಟ್ಟಿನಲ್ಲಿ ಮಕ್ಕಳು ಸಂತೋಷವಾಗಿರಬೇಕು ಅಷ್ಟೆ. ಆದರೆ ಆ ಕಾರಣದಿಂದ ಅವರು ಬದುಕಿನ ಯಾವ ಸವಾಲುಗಳನ್ನೂ ಎದುರಿಸಲಾಗದಷ್ಟು ದುರ್ಬಲರಾಗಿಬಿಡುತ್ತಾರೆ ಎಂಬುದನ್ನು ಮಾತ್ರ ಅರ್ಥಮಾಡಿಕೊಳ್ಳುವುದಿಲ್ಲ. ಇದರಿಂದಾಗಿಯೇ ತಾನೆ ಪುಟ್ಟಮಕ್ಕಳೂ ಇಂದು ಆತ್ಮಹತ್ಯೆಯ ದಾರಿ ಸುಲಭವೆಂದುಕೊಂಡಿರುವುದು?’
ಹೇಳಿ, ಮನೆಯ ಪಾಠವೆಂದರೆ ಬರಿಯ ಟ್ಯೂಷನ್ ಆಗಿ ಮಾರ್ಪಟ್ಟದ್ದು ಯಾವಾಗ?