ಲೋಭೇನ ಬುದ್ಧಿಶ್ಚಲತಿ ಲೋಭೋ ಜನಯತೇ ತೃಷಾಮ್|
ತೃಷಾರ್ತೋ ದುಃಖಮಾಪ್ನೋತಿ ಪರತ್ರೇಹ ಚ ಮಾನವಃ||
– ಹಿತೋಪದೇಶ, ಮಿತ್ರಲಾಭ
“ಲೋಭಕ್ಕೆ ಒಳಗಾಗುವುದರಿಂದ ಬುದ್ಧಿಯು ವಿಕಲಗೊಳ್ಳುತ್ತದೆ. ಲೋಭವು ಅತ್ಯಾಶೆಯನ್ನು ಉಂಟುಮಾಡುತ್ತದೆ. ಹೀಗೆ ತೃಷೆಯಿಂದ ಗ್ರಸ್ತನಾದವನು ಈ ಲೋಕದಲ್ಲಿಯೂ ಲೋಕಾಂತರದಲ್ಲಿಯೂ ದುಃಖವನ್ನನುಭವಿಸುತ್ತಾನೆ.”
ತನ್ನ ಅರ್ಹತೆಯೇನು, ಮಿತಿಯೇನು ಎಂಬ ಪರಿವೆಯಿಲ್ಲದೆ ಅಹಂಕಾರದಿಂದ ಚೋದಿತರಾದವರು ತಮಗೆಟಕದವುಗಳಿಗಾಗಿ ಹಾತೊರೆಯುತ್ತಾರೆ. ಹಾಗೆ ಜನಿಸುವ ಅತ್ಯಾಶೆಗೆ ಮಿತಿಯೇ ಇರದು. ಈ ಜಾಡಿಗೆ ಬಿದ್ದವರು ಇಹದಲ್ಲಿ, ಪರದಲ್ಲಿ – ಎರಡೆಡೆಯೂ ದುಃಖಕ್ಕೊಳಗಾಗುತ್ತಾರೆ. ಅಹಂತಾಜನಿತ ಲೋಭ-ಮೋಹಗಳಿಂದ ಯಾರು ಆಕೃಷ್ಟರಾಗುವುದಿಲ್ಲವೋ ಅವರು ವಿವೇಕಿಗಳೆನಿಸುತ್ತಾರೆ. ವಾಸ್ತವವೆಂದರೆ ಲೋಭ-ಮೋಹಾದಿಗಳೆಲ್ಲ ಅಹಂಕಾರದ ಅಭಿವ್ಯಕ್ತಿಗಳೇ. ಪ್ರತಿಯೊಬ್ಬ ವ್ಯಕ್ತಿಯಲ್ಲಿ ಮೂವರು ಪ್ರತ್ಯೇಕ ವ್ಯಕ್ತಿಗಳು ಅಡಗಿರುತ್ತಾರೆಂದು ಗಾದೆಮಾತು ಇದೆಯಷ್ಟೆ: ತನ್ನ ಬಗೆಗೆ ತಾನು ಅಂದುಕೊಂಡಿರುವುದು, ಇತರರು ತನ್ನ ಬಗೆಗೆ ತಳೆದಿರುವ ಭಾವನೆ, ಮತ್ತು ಮೂರನೆಯದಾಗಿ ತಾನು ನಿಜರೂಪದಲ್ಲಿ ಹೇಗಿರುತ್ತಾನೋ ಅದು. ತನ್ನ ಬಗೆಗೆ ಉತ್ಪ್ರೇಕ್ಷಿತ ಕಲ್ಪನೆಗಳನ್ನು ಮಾಡಿಕೊಳ್ಳುವುದರಿಂದ ಆಭಾಸಗಳಿಗೆಡೆಯಾಗುತ್ತದೆ. ಇದನ್ನು ದೃಷ್ಟಾಂತಪಡಿಸುವ ದಾರ್ಶನಿಕ ಕಥೆಯೊಂದಿದೆ.
ಅದೊಂದು ದಿನ ನರಿಯೊಂದು ಬೆಳಗ್ಗೆ ಎದ್ದ ಸ್ವಲ್ಪ ಸಮಯವಾದ ಮೇಲೆ ಹಸಿವೆಯೆನಿಸಿ ಆಹಾರದ ಅನ್ವೇಷಣೆಗೆ ಹೊರಟಿತು. ಆಗಷ್ಟೇ ಉದಿಸಿದ್ದ ಸೂರ್ಯನ ಬೆಳಕಿನಿಂದಾಗಿ ನರಿಯ ಹಿಂದೆ ಉದ್ದನೆಯ ನೆರಳು ಬಿದ್ದಿತ್ತು. ನೆರಳಿನ ಗಾತ್ರ ನೋಡಿ ನರಿ ತನ್ನದು ಬಹುದೊಡ್ಡ ದೇಹವೆಂದೂ ತನ್ನ ಹಸಿವನ್ನು ತಣಿಸಲು ಒಂಟೆಯೇ ಬೇಕಾದೀತೆಂದೂ ಅಂದುಕೊಂಡು ಹುಡುಕುತ್ತ ಹೊರಟಿತು. ಆದರೆ ಕಾಡಿನಲ್ಲಿ ಒಂಟೆ ಎಲ್ಲಿಂದ ಬರಬೇಕು! ಈ ವಾಸ್ತವ ಮರೆತು ನರಿ ಹುಡುಕುತ್ತಲೇ ಹೋಯಿತು. ಮಾರ್ಗದಲ್ಲಿ ತನಗೆ ಆಹಾರವಾಗಬಹುದಾಗಿದ್ದ ಸಣ್ಣ ಪ್ರಾಣಿಗಳು ಕಂಡರೂ ಅವನ್ನೆಲ್ಲ ಅಲಕ್ಷಿಸಿತು; ನನ್ನ ಅರ್ಹತೆಗೆ ಆನೆಯೋ ಒಂಟೆಯೋ ಬೇಕಾದೀತು – ಎಂದುಕೊಂಡಿತು. ಮಧ್ಯಾಹ್ನದ ವೇಳೆಗೆ ಹಸಿವು ಚುರುಕಾಗಿತ್ತು ನೆರಳು ಸಣ್ಣಗಾಗಿತ್ತು, ಎಂದರೆ ದೇಹವೂ ಸಣ್ಣದಾಗಿಹೋಗಿರಬೇಕಲ್ಲ – ಎಂದುಕೊಂಡಿತು. ಇಂಗದ ಹಸಿವಿನಿಂದಾಗಿಯೇ ತಾನು ಸಣ್ಣದಾಗಿಹೋಗಿರುವೆ – ಎಂದು ತೀರ್ಮಾನಿಸಿತು. ತಮ್ಮ ನಿಜಯೋಗ್ಯತೆಯನ್ನು ಅರಿಯದವರ ಪಾಡು ಇಂತಹದು.