ಸಮರ್ಥ ಸದ್ಗುರು ಶ್ರೀ ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು
ನಾಮವು ರೂಪಕ್ಕಿಂತ ನಿಶ್ಚಿತವಾಗಿಯೂ ಶ್ರೇಷ್ಠವಾಗಿರುತ್ತದೆ. ಆದ್ದರಿಂದ ರೂಪದ ಧ್ಯಾನವು ಮನಸ್ಸಿನಲ್ಲಿ ಬರದೇ ಇದ್ದರೂ ನಾಮವನ್ನು ಬಿಡಬಾರದು. ಮುಂದೆ ರೂಪವು ತಾನಾಗಿಯೇ ಬರತೊಡಗುತ್ತದೆ. ರೂಪವು ಜಡ ಹಾಗೂ ದೃಶ್ಯವಾಗಿರುವುದರಿಂದ ಅದಕ್ಕೆ ಉತ್ಪತ್ತಿ, ಸ್ಥಿತಿ, ವಿನಾಶ, ಬೆಳೆಯುವುದು, ಕ್ಷೀಣವಾಗುವುದು, ವ್ಯಾಪಿಸುವುದು, ತನ್ನ ಸ್ಥಾನ ಬದಲಾಯಿಸುವುದು ಹಾಗೂ ಕಾಲಮಾನಕ್ಕನುಸಾರವಾಗಿ ಬದಲಾಗುವುದು ಮುಂತಾದ ಬಂಧನಗಳು ಬರುತ್ತವೆ. ಆದರೆ ನಾಮವು ದೃಶ್ಯದ ಆಚೆಗೆ ಹಾಗೂ ಸೂಕ್ಷ್ಮವಾಗಿರುವುದರಿಂದ ಅದಕ್ಕೆ ಉತ್ಪತ್ತಿ, ಸ್ಥಿತಿ, ವಿನಾಶ, ವೃದ್ಧಿ, ಕ್ಷಯ, ದೇಶಕಾಲ ನಿಮಿತ್ತದ ಮರ್ಯಾದೆ, ಮುಂತಾದ ಯಾವುದೇ ವಿಕಾರಗಳಿರುವುದಿಲ್ಲ. ನಾಮವು ಸತ್ ಸ್ವರೂಪವಾಗಿರುತ್ತದೆ.
ಈ ಜಗತ್ತಿನಲ್ಲಿ ಎಷ್ಟು ವೈಚಿತ್ರ್ಯಗಳು ನೋಡಲು ಸಿಗುತ್ತವೆ. ನಾನಾ ಪ್ರಕಾರದ ಕಲ್ಲುಗಳು, ನಾನಾ ಪ್ರಕಾರದ ಕೀಟಗಳು, ನಾನಾ ಪ್ರಕಾರದ ಪಕ್ಷಿಗಳು, ಪ್ರಾಣಿಗಳು ಇವೆಲ್ಲವುಗಳ ಹೆಸರು ಬೇರೆಯಾಗಿದ್ದರೂ ಅವೆಲ್ಲವುಗಳಲ್ಲಿ ಇರುವಿಕೆ (ಅಸ್ತಿತ್ವ) ಎಂಬ ಗುಣವು ಸಾಮಾನ್ಯವಾಗಿರುತ್ತದೆ. ಅಂದರೆ ಸಜೀವ ಪ್ರಾಣಿಯಾದರೂ ಅದು “ಇರುತ್ತದೆ” ಹಾಗೂ ನಿರ್ಜೀವ ಪ್ರಾಣಿಯಾದರೂ ಅದು “ಇರುತ್ತದೆ”. ಇ? ಅಲ್ಲದೆ ಆನಂದವೂ ಕೂಡ ಇರುವಿಕೆಯ ಗುಣವಾಗಿರುತ್ತದೆ. ಈ ಇರುವಿಕೆಯ ಗುಣಕ್ಕೆ ನಾಮವೆನ್ನುತ್ತಾರೆ. ಇದಕ್ಕೆ “ಓಂ”ಕಾರವೆನ್ನುತ್ತಾರೆ. ಓಂಕಾರದಿಂದಲೇ ಸೃಷ್ಟಿಯ ಉಗಮವಾಗಿರುತ್ತದೆ. ಓಂಕಾರವು ಪರಮಾತ್ಮನದೇ ಸ್ವರೂಪವಾಗಿರುತ್ತದೆ. ಆದ್ದರಿಂದ ನಾಮವೆಂದರೆ ಸತ್‌ಸ್ವರೂಪವಾಗಿರುತ್ತದೆ. ನಾಮವು ಸೃಷ್ಟಿಯ ಆರಂಭದಲ್ಲಿಯೂ ಇತ್ತು. ಅದು ಈಗಲೂ ಇರುತ್ತದೆ ಹಾಗೂ ಸೃಷ್ಟಿಯ ಲಯವಾದರೂ ಕೂಡ ಅದು ಇದ್ದೇ ಇರುತ್ತದೆ. ನಾಮವೆಂದರೆ ಈಶ್ವರ. ನಾಮದಲ್ಲಿ ಅನಂತ ರೂಪಗಳು ಉತ್ಪನ್ನವಾಗುತ್ತವೆ ಹಾಗೂ ಕೊನೆಗೆ ಅವುಗಳಲ್ಲಿಯೇ ಲೀನವಾಗುತ್ತವೆ. ರೂಪವು ನಾಮಕ್ಕಿಂತ ಬೇರೆಯಾಗಲು ಶಕ್ಯವೇ ಇಲ್ಲ. ನಾಮವು ರೂಪವನ್ನು ವ್ಯಾಪಿಸಿ ಮತ್ತೂ ಶೇಷ ಉಳಿಯುತ್ತದೆ.
[ಮಹಾರಾಜರ ಪ್ರವಚನಗಳಿಂದ. ಕೃಪೆ: ಚೈತನ್ಯಾಶ್ರಮ, ಹೆಬ್ಬಳ್ಳಿ.]