ಅಂದು ರಾತ್ರಿ ಹಳ್ಳಿಗೆ ಹಳ್ಳಿಯೇ ಜೆಂಜೆಲೆಯ ಮನೆಮುಂದೆ ನೆರೆಯಿತು. ಅವರೆಲ್ಲ ಚಳಿ ಕಾಯಿಸಲು ಶಿಬಿರಾಗ್ನಿ ಮಾಡಿದರು. ಆ ಬೆಂಕಿಯ ಸುತ್ತ ನೆರೆದು ಮಂಜಾಂದಬ ಕತೆ ಹೇಳುವ ಅಮೃತಘಳಿಗೆಗಾಗಿ ಕಾಯುತ್ತ ಕೂತರು…
ಒಂದಾನೊಂದು ಕಾಲದಲ್ಲಿ – ಅಂತ? ಹೇಳಿದರೆ ನಾನು ಹೇಳ್ತಾ ಇರುವ ಕತೆ ಎಷ್ಟು ಹಿಂದಿನದ್ದು ಅಂತ ನಿಮಗೆ ಕಲ್ಪನೆ ಬರುತ್ತೋ ಇಲ್ಲವೋ! ಈಗ ನಾನು ಹೇಳಲು ಹೊರಟಿರುವ ಕತೆ ಬಹಳ ಬಹಳ ಪುರಾತನವಾದದ್ದು. ಎಷ್ಟು ಪುರಾತನ ಎಂದರೆ, ಈ ಜಗತ್ತು ಅದಾಗಷ್ಟೇ ಹುಟ್ಟಿ ಇದರ ಮೇಲೆ ಮೊದಲ ಮನುಷ್ಯರು ನಡೆದಾಡಿದ ಸಮಯದಲ್ಲಿ ನಡೆದ ಸಂಗತಿ ಇದು. ಆಗ ಈ ಭೂಮಿಯ ಮೇಲೆ ಮಂಜಾಂದಬ ಎಂಬ ಹೆಂಗಸೂ ಜೆಂಜೆಲೆ ಎಂಬ ಅವಳ ಗಂಡನೂ ವಾಸಿಸುತ್ತಿದ್ದರು.
ಅವರಿಬ್ಬರೂ ಬಹಳ ಸಾಂಪ್ರದಾಯಿಕವಾದ ಹಳ್ಳಿಯ ಸಾಂಪ್ರದಾಯಿಕವಾದ ಮನೆಯಲ್ಲಿ ಅಚ್ಚುಕಟ್ಟಾದ ಜೀವನ ನಡೆಸುತ್ತಿದ್ದರು. ಮನೆ ತುಂಬ ಮಕ್ಕಳು ಓಡಾಡಿಕೊಂಡಿದ್ದ ಕಾಲ ಅದು. ಜೆಂಜೆಲೆ ಕಾಡಿಗೆ ಹೋಗಿ ಬೇಟೆಯಾಡುವನು, ಹಿತ್ತಲಲ್ಲಿ ತರಕಾರಿ ಬೆಳೆಯುವನು. ಮಂಜಾಂದಬ ಬಿದಿರಿನ ಬುಟ್ಟಿ ಹೆಣೆಯುವಳು, ಚಪ್ಪರದವರೆಯ ಬಳ್ಳಿಗೆ ನೀರು ಹಾಕುವಳು, ಬಟ್ಟೆಯಲ್ಲಿ ಬಣ್ಣ ಬಣ್ಣದ ಕಸೂತಿ ಬಿಡಿಸಿ ಚಿಕ್ಕ ಅಂಗಿಗಳನ್ನು ಹೊಲಿದು ತನ್ನ ಮಕ್ಕಳಿಗೆ ಉಡಿಸಿ ಚಂದ ನೋಡುವಳು. ಬಿಡುವಿದ್ದಾಗ ಮನೆಯವರೆಲ್ಲ ಕೂಡಿಕೊಂಡು ತುಸು ದೂರದಲ್ಲಿ ಮೊರೆಯುತ್ತಿದ್ದ ಸಮುದ್ರದ ದಂಡೆಗೆ ಹೋಗಿ ಮನಸೋ ಇಚ್ಛೆ ನೀರಲ್ಲಿ ಆಡುವರು, ಮರಳಲ್ಲಿ ಮಂಟಪ ಕಟ್ಟಿ ಅದರ ಮೇಲೆ ಹಾರಿ ಪುಡಿಗುಟ್ಟಿ ಕೇಕೆಹಾಕಿ ನಗುವರು.
ಜೆಂಜೆಲೆ ಕೇವಲ ಬೇಟಗಾರನಷ್ಟೆ ಆಗಿರದೆ ಒಳ್ಳೆಯ ಕಲಾವಿದನೂ ಆಗಿದ್ದ. ಹಳೆಯ ಮರದ ಬೊಡ್ಡೆಗಳನ್ನು ಕಿತ್ತು ತಂದು ಅದರಲ್ಲಿ ಅನೇಕ ಮರಗಿಡಗಳನ್ನು ಬೆಟ್ಟಗುಡ್ಡಗಳನ್ನು ಕೆತ್ತುತ್ತಿದ್ದ. ಬೆಟ್ಟದ ಹಿಂದೆ ಅಡಗಿ ನಿಂತಂತಹ ಸೂರ್ಯನ ಉದಯದ ಚಿತ್ರವನ್ನೂ, ಕೊಂಬೆಯ ಮೇಲೆ ಕೂತ ಗಿಳಿ ತನ್ನ ಪ್ರಿಯತಮೆಗೆ ಕೊಕ್ಕಿನಿಂದ ಮುತ್ತಿಡುವಂತಹ ಪ್ರಣಯಚಿತ್ರವನ್ನೂ ಬಹಳ ತನ್ಮಯತೆಯಿಂದ ಬಿಡಿಸುತ್ತಿದ್ದ. ಅಷ್ಟೇ ಅಲ್ಲ, ಆಗಾಗ ಸಮುದ್ರದ ಚಿಪ್ಪುಗಳನ್ನು ಹೆಕ್ಕಿತಂದು ಆಕ?ಕ ಕಲಾಕೃತಿಗಳನ್ನು ಕೂಡ ಮಾಡುತ್ತಿದ್ದ.
ಇಷ್ಟೇಲ್ಲ ಸಂತೋಷ ತುಂಬಿ ತುಳುಕುತ್ತಿದ್ದರೂ, ಹಳ್ಳಿಯ ಈ ಜನರಿಗೆ ಸಂಜೆ ಕಳೆದ ಮೇಲೆ ಮಾತ್ರ ಬಹಳ ಬೇಸರವಾಗುತ್ತಿತ್ತು. ಸೂರ್ಯ ಕಂತಿದ ಮೇಲೆ, ಮಲಗುವುದು ಬಿಟ್ಟರೆ ಬೇರೇನು ಮಾಡಬೇಕು, ಸಮಯ ಹೇಗೆ ಕಳೆಯಬೇಕು ಎಂದೇ ಗೊತ್ತಾಗುತ್ತಿರಲಿಲ್ಲ ಅವರಿಗೆ. ಮನೆಯವರೆಲ್ಲ ಆಗ ಚಿಮಣಿ ದೀಪದ ಸುತ್ತ ಮಂಕಾಗಿ ಕೂತು ಕಾಲಹರಣ ಮಾಡುತ್ತಿದ್ದರು. ಬೇಸರವಾದರೆ, ಅಂಗಾತ ಮಲಗಿ ಆಕಾಶ ನೋಡುತ್ತ ನಕ್ಷತ್ರ ಎಣಿಸುತ್ತಿದ್ದರು. ಆದರೆ, ಪ್ರತಿದಿನವೂ ಅದೇ ಅದೇ ನಕ್ಷತ್ರಗಳನ್ನು ಎಷ್ಟೂಂತ ಎಣಿಸುವುದು! ಮಂಜಾಂದಬಳ ಮಕ್ಕಳು ಅವಳ ಸುತ್ತ ನೆರೆದು, “ಅಮ್ಮಾ, ತುಂಬಾ ಬೇಜಾರು. ಹೊತ್ತು ಕಳೆಯಲು ಏನಾದರೂ ಕತೆ ಹೇಳಮ್ಮ!” ಎಂದು ಪೀಡಿಸುತ್ತಿದ್ದವು. ಆದರೆ, ಅವಳಿಗೆ ಕತೆ ಒಂದಾದರೂ ಗೊತ್ತಿದ್ದರೆ ತಾನೇ! ಅವಳಿಗ? ಅಲ್ಲ, ಆ ಊರಿನ ಯಾರಿಗೂ ಇದುವರೆಗೂ ಯಾರೂ ಒಂದು ಕತೆಯನ್ನೂ ಹೇಳಿರಲಿಲ್ಲ. ಕತೆ ಹೇಗಿರುತ್ತದೆ ಎಂದಾಗಲೀ, ಎಷ್ಟುದ್ದ ಎಷ್ಟು ಎತ್ತರ ಇರುತ್ತದೆ ಎಂದಾಗಲೀ ಅವರಿಗೆ ಗೊತ್ತೇ ಇರಲಿಲ್ಲ! “ಸಂಜೆ ಕಳೆಯಲು ಕತೆ ಒಳ್ಳೆಯ ಸಾಧನ ಎಂದೇನೋ ಗೊತ್ತು, ಆದರೆ ಅದರ ಸ್ವರೂಪವೇ ತಿಳಿಯದು!” ಎಂದು ಹಿರಿಯರು ಹತಾಶರಾಗಿ ಗೋಣಾಡಿಸುತ್ತಿದ್ದರು. ಒಟ್ಟಿನಲ್ಲಿ ಅವರಿಗೆ, ಯಾಕಾದರೂ ಈ ಸಂಜೆ ಆಗುತ್ತದೋ ಅನ್ನಿಸಿಬಿಟ್ಟಿತ್ತು!
ಆಗ ಜೆಂಜೆಲೆಗೆ ಒಂದು ಯೋಚನೆ ಬಂತು. ಅವನು ತನ್ನ ಪತ್ನಿಯ ಬಳಿ ಬಂದು, “ಮಂಜಾಂದಬ, ದಿನವೂ ನಮ್ಮ ಮಕ್ಕಳು ಕತೆ ಕತೆ ಎಂದು ಪೀಡಿಸುತ್ತವೆ. ನಾವೇ ಮುಂದಾಗಿ ಯಾಕೆ ಕತೆಗಳನ್ನು ಹುಡುಕಿ ತರಬಾರದು? ನೀನು ಹೋಗಿ ಕತೆ ಎಲ್ಲಿದ್ದರೂ ಹುಡುಕಿ ತಗೊಂಡು ಬಾ. ನೀನಿಲ್ಲಿ ಇರದಿದ್ದಾಗ ಮನೆವಾರ್ತೆ ನಾನು ನೋಡಿಕೊಳ್ಳುತ್ತೇನೆ. ಮಕ್ಕಳ ಜವಾಬ್ದಾರಿ ನನಗೆ ಬಿಟ್ಟುಬಿಡು” ಎಂದ. ಕತೆಗಳನ್ನು ಹಿಡಿಯುವುದರಲ್ಲಿ ಹೆಂಗಸರು ಗಟ್ಟಿಗರು ಎಂದಾರೋ ಅವನಿಗೆ ಹೇಳಿದ್ದರಂತೆ! ಗಂಡನ ಯೋಚನೆಗೆ ಸಹಮತ ತೋರಿಸಿದ ಮಂಜಾಂದಬ, ಅವನಿಗೆ ಮುತ್ತಿಟ್ಟು, ಮಕ್ಕಳಿಗೆ ವಿದಾಯ ಹೇಳಿ ಕತೆಯನ್ನು ಹುಡುಕುತ್ತ ಹೊರಟಳು.
ಮಂಜಾಂದಬ ತನ್ನ ದಾರಿಯಲ್ಲಿ ಸಿಗುವ ಪ್ರತಿಯೊಬ್ಬರನ್ನೂ ಕತೆಗಳ ಬಗ್ಗೆ ವಿಚಾರಿಸಬೇಕು ಅಂದುಕೊಂಡಳು. ಈ ಯಾತ್ರೆಯಲ್ಲಿ ಅವಳಿಗೆ ಮೊಟ್ಟಮೊದಲು ಸಿಕ್ಕಿದ್ದು ನೋಗ್ವಾಜ ಎಂಬ ಮೊಲ. ಮೂಗಿಗೆ ಬೆಣ್ಣೆ ಸವರಿ ಓಡಿಹೋಗುವ ಬುದ್ಧಿ ನೋಗ್ವಾಜನದು ಎಂಬುದು ಇಡೀ ಕಾಡಿಗೇ ಗೊತ್ತಿದ್ದ ವಿಷಯವಾದರೂ, ಮಂಜಾಂದಬ, ಒಂದು ಕೈ ನೋಡಿಯೇ ಬಿಡುವಾ ಎಂದುಕೊಳ್ಳುತ್ತ ಅದರ ಬಳಿ, “ಮೊಲವೇ, ನಿನಗೆ ಯಾವುದಾದರೂ ಕತೆ ಗೊತ್ತಿದ್ದರೆ ದಯವಿಟ್ಟು ಹೇಳು. ನಮ್ಮ ಹಳ್ಳಿಯ ಜನ ಕತೆಗಾಗಿ ಬಾಯಿ ಬಾಯಿ ಬಿಡುತ್ತಾ ಕೂತಿದ್ದಾರೆ” ಎಂದಳು. “ಒಂದು ಕತೆ? ಒಂದು? ನನಗೆ ಅವಮಾನ ಮಾಡಬೇಡ! ನನಗಂತಹ ಕತೆ ಹತ್ತಲ್ಲ ನೂರಲ್ಲ ಸಾವಿರ ಗೊತ್ತಿವೆ!” ಎಂದಿತು ಮೊಲ. ಕುತೂಹಲದಿಂದ ಅರಳಿದ ಮಂಜಾಂದಬ, “ಹೇಳು! ಹೇಳು!” ಎಂದು ಅವಸರಪಡಿಸಿದಳು. ಆಗ ಮೊಲ, “ಆದರೇನು ಮಾಡಲಿ? ಈಗ ಕತೆ ಹೇಳುತ್ತ ಕೂರುವಷ್ಟು ಸಮಯ ನನ್ನ ಬಳಿ ಇಲ್ಲವಲ್ಲ! ಎರಡೆರಡು ಕೈಯಲ್ಲಿ ಮಾಡಿದರೂ ಮುಗಿಯದ? ಕೆಲಸ ನನಗೆ. ಅದರ ನಡುವಲ್ಲಿ ನಿನಗೆ ಕತೆ ಹೇಳುತ್ತ ಕೂರಲೆ?” ಎಂದು ಅಣಕಿಸಿ ವ್ಯಂಗ್ಯವಾಡಿ ಲಗುಬಗೆಯಿಂದ ತೊಪ್ತೊಪ್ಪೆಂದು ಕುಪ್ಪಳಿಸುತ್ತ ಕಣ್ಮರೆಯಾಯಿತು. ಅಸಲಿಗೆ ಅದಕ್ಕೆ ಒಂದು ಕತೆಯೂ ಗೊತ್ತಿರಲಿಲ್ಲ!
ಮಂಜಾಂದಬಳಿಗೆ ನಿರಾಸೆಯಾಯಿತು. ಆದರೇನಂತೆ? ಇಡೀ ಕಾಡಲ್ಲಿ ಕತೆ ಗೊತ್ತಿರುವವನು ಮೊಲ ಮಾತ್ರ ಅಲ್ಲವಲ್ಲ! ಎನ್ನುತ್ತ ಅವಳು ಮೊದಲಿನ ಉತ್ಸಾಹದಿಂದಲೇ ಮತ್ತೆ ಮುಂದುವರಿದಳು. ಅವಳಿಗೆ, ಮೊಲೆ ಚೀಪುವ ಎರಡು ಮರಿಗಳನ್ನು ಎದೆಗವಚಿಕೊಂಡು ಕೂತ ಫೆನೆ ಕೋತಿಯೊಂದು ಕಣ್ಣಿಗೆ ಬಿತ್ತು. “ಫೆನೆಯೇ! ಹೇಗಿದ್ದೀಯ? ನೀನು ತಾಯಿಯಾಗಿರುವುದು ಸಂತೋಷದ ವಿಚಾರ. ನನಗೂ ಮನೇಲಿ ಮಕ್ಕಳಿವೆ, ಕತೆ ಹೇಳು ಎನ್ನುತ್ತ ಇಡೀ ದಿನ ನನ್ನ ಹಿಂದೆ ಸುಳಿಯುತ್ತವೆ. ನಿನಗೇನಾದರೂ ಒಂದೆರಡು ಕತೆ ಗೊತ್ತಿದ್ದರೆ ಹೇಳು ಮಾರಾಯ್ತೀ!” ಎಂದಳು. ಫೆನೆಗೆ ಕೋಪ ಉಕ್ಕೇರಿತು. “ಏನಮ್ಮ, ನಾನು ಕತೆ ಹೇಳಲು ಕೂತ ಅಜ್ಜಿಯ ಹಾಗೆ ಕಾಣಿಸ್ತೇನಾ ನಿನಗೆ? ಮಕ್ಕಳುಮರಿ ಆದಮೇಲೆ ಸರಿಯಾಗಿ ಕೂತು ಅಂಡು ತುರಿಸುವ? ಪುರುಸೊತ್ತಿಲ್ಲ ನನಗೆ! ಅದರ ಮಧ್ಯೆ ಕತೆ ಬೇರೆ ಕೇಡು! ಹೋಗು ಹೋಗು!” ಎಂದು ಅವಳನ್ನು ದಯದಾಕ್ಷಿಣ್ಯವಿಲ್ಲದೆ ಅಟ್ಟಿತು.
ಮಂಜಾಂದಬ ಮುಂದುವರಿದು ದಾರಿಬದಿಯಲ್ಲಿ ನಿಂತಿದ್ದ ಒಂದು ದೊಡ್ಡ ಗಾತ್ರದ ಮುತ್ತುಗದ ಮರದ ಬಳಿ ಬಂದಳು. “ಎಲೆ ಮುತ್ತುಗವೇ! ನೀನಾದರೂ ನನಗೆ ಸಹಾಯ ಮಾಡಬಾರದೆ? ನೂರಾರು ಪಶುಪಕ್ಷಿಗಳು ನಿನ್ನ ರೆಂಬೆ ಕೊಂಬೆ ಕಾಂಡಗಳಲ್ಲಿ ಕೂತು ಕತೆಗಳನ್ನು ಹಂಚಿಕೊಂಡಿರಬಹುದು. ಅಂಥದ್ದೇನಾದರೂ ಕೇಳಿಸಿಕೊಂಡ ನೆನಪು ನಿನಗಿದ್ದರೆ ನನ್ನೊಡನೆ ಹಂಚಿಕೊಳ್ಳುವಿಯಾ?” ಅಂತ ದೀನಳಾಗಿ ಕೇಳಿಕೊಂಡಳು. ಅಲ್ಲೇ ಒಂದು ಕೊಂಬೆಯ ಕವೆಯಲ್ಲಿ ಕೂತು ನಿದ್ದೆಗೆ ಜಾರಿದ್ದ ಗೂಬೆಗೆ ಇವಳ ಮಾತಿಂದ ಎಚ್ಚರವಾಯಿತು. “ಏನದು ಗಲಾಟೆ? ಸವಿನಿದ್ದೆ ಮಾಡುತ್ತಿದ್ದ ನನ್ನನ್ನು ಎಬ್ಬಿಸಿ ಕತೆ ಹೇಳು ಅಂತ ಪೀಡಿಸುತ್ತಿರುವವರು ಯಾರು? ಮಾಡೋದಕ್ಕೆ ಬೇರೆ ಕೆಲಸ ಇಲ್ಲವಾ ನಿಮಗೆಲ್ಲ? ಸಕ್ಕರೆ ನಿದ್ದೆ ಹಾಳು ಮಾಡಿ ನಿಮಗೇತರ ಖುಷಿ ಸಿಗುತ್ತದೆ?” ಎಂದು ಅರ್ಧನಿದ್ರೆಯಲ್ಲಿ ಎದ್ದ ಗೂಬೆ ಕಿರುಚಿ ಇನ್ನೂ ಮೇಲಿನ ಕೊಂಬೆಗೆ ಹೋಗಿ ಕೂತಿತು. ತುಸು ಹೊತ್ತಲ್ಲೇ ಅದರ ಗೊರಕೆಯ ಸದ್ದು ಮತ್ತೆ ಪ್ರಾರಂಭವಾಯಿತು! ಮಂಜಾಂದಬ, ಇಲ್ಲೂ ತನಗೇನೂ ಗಿಟ್ಟಲಿಲ್ಲವೆಂದು ಬೇಸರದಿಂದ ಮುಂದೆ ಹೋದಳು.
ಮುಂದೆ ಅವಳಿಗೆ ಸಿಕ್ಕಿದ್ದು ಎಂಡ್ಲೊವು ಎಂಬ ಒಂದು ಆನೆ. “ಪ್ರೀತಿಯ ಎಂಡ್ಲೊವು ಮಹಾಶಯನೇ, ಸದಾ ಹಿಂಡು ಹಿಂಡಾಗಿ ಹೋಗುವ ಸಂಸಾರದಲ್ಲಿ ಇರುವವನು ನೀನು. ನಿನ್ನ ಕ? ಬೇರೆಯಲ್ಲ ನನ್ನದು ಬೇರೆಯಲ್ಲ. ಕತೆಗಳ ಬಗ್ಗೆ ನಿನಗೆ ಏನೇನು ಗೊತ್ತಿದೆಯೋ ದಯವಿಟ್ಟು ನನಗೂ ಹೇಳಯ್ಯ!” ಅಂದಳು. ಆನೆಗೆ ಅವಳನ್ನು ನೋಡಿ ಕನಿಕರ ತೋರಿತು. ಪಾಪ! ಹೆಂಗಸು, ನೀರಿಗಾಗಿ ಮರುಭೂಮಿಯಲ್ಲಿ ಅಲೆದ ಹಾಗೆ ಕತೆಗಳಿಗಾಗಿ ಈ ಕಾಡಲ್ಲಿ ಪ್ರದಕ್ಷಿಣೆ ಬರುತ್ತಿದ್ದಾಳೆ. ಇವಳಿಗೆ ಸಹಾಯ ಮಾಡಬೇಕು ಎಂದುಕೊಂಡ ಎಂಡ್ಲೊವು, “ತಾಯಿ, ಕತೆಗಳ ಬಗೆಗಿನ ನನ್ನ ತಿಳಿವು ಏನೇನೂ ಸಾಲದು. ನನಗೆ ಗೊತ್ತಿರುವುದನ್ನು ನಿನಗೆ ಹೇಳಿದರೆ ನಕ್ಕುಬಿಡುತ್ತೀ! ಆದರೆ ಈ ಕಾಡಲ್ಲಿ ಎಂಕ್ವಾಜಿ ಎಂಬ ಹದ್ದೊಂದುಂಟು. ಸದಾ ಆಕಾಶದಲ್ಲಿ ಗರಿ ಬಿಚ್ಚಿ ಹಾರುತ್ತ ಇಡೀ ಕಾಡಿನ ಪರಿಧಿಯನ್ನು ಸುತ್ತುತ್ತ ಎಲ್ಲೆಲ್ಲಿ ಏನೇನುಂಟು ಅನ್ನುವುದರ ಪರೀಕ್ಷೆ ಮಾಡುವುದೇ ಅದರ ಕೆಲಸ. ಅದರ ಕಣ್ಣು ತಪ್ಪಿಸಿ ಇಲ್ಲೇನೂ ನಡೆಯಲಾರದು. ಅದರ ಬಳಿ ನಿನಗೆ ಬೇಕಾದ ಕತೆ ಸಿಗಬಹುದು. ಒಮ್ಮೆ ಪ್ರಯತ್ನಿಸು” ಅಂದಿತು.
ಮಂಜಾಂದಬ, ಆನೆಗೆ ಕೃತಜ್ಞತೆಗಳನ್ನರ್ಪಿಸಿ ಹದ್ದಿನ ಬೇಟೆಗೆ ಹೊರಟಳು. ಸುತ್ತೀ ಸುತ್ತೀ ಸುಸ್ತಾಗಿ ಇನ್ನೇನು ತುಸು ಕೂತು ದಣಿವಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಅವಳಿಗೆ ಹದ್ದಿನ ದೇಹ ಕಾಣಿಸಿತು. ತೆರೆದ ಬೀಸಣಿಗೆಯಂತೆ ರೆಕ್ಕೆ ಬಿಚ್ಚಿ ಬೇಟೆಯಾಡುತ್ತಿದ್ದ ಹದ್ದು ಆಗಷ್ಟೇ ರೊಯ್ಯನೆ ಕೆಳಕ್ಕಿಳಿದು ನೀರ ಮೇಲೆ ಎಗರಿ ದೊಡ್ಡ ಮೀನೊಂದನ್ನು ತನ್ನ ಕೊಕ್ಕಲ್ಲಿ ಎತ್ತಿ ಹಿಡಿದಿತ್ತು. ಮಂಜಾಂದಬ, “ಎಂಕ್ವಾಜಿ!” ಎಂದು ಖುಷಿಯಿಂದ ಹಾರಿ ಕೂಗಿದಳು. ಭಯಬಿದ್ದ ಹದ್ದು ಕೊಕ್ಕು ಅಗಲಿಸಿದ್ದರಿಂದ ಇದೇ ಸುಸಮಯವೆಂದರಿತ ಮೀನು ಜಾರಿ ಪುಳಕ್ಕನೆ ನೀರಿಗೆ ಚಿಮ್ಮಿತು. “ನೀವು ಮನು?ರೇ ಹೀಗೆ! ನಿಮ್ಮಿಂದ ಒಂದಾದರೂ ಉಪಕಾರ ನಿರೀಕ್ಷಿಸುವಂತಿಲ್ಲ. ಮೀನು ಹಿಡಿವ ಸಮಯದಲ್ಲಿ ನಿನ್ನ ಗೊಗ್ಗರು ಗಂಟಲು ತೆರೆಯಬೇಕಿತ್ತೆ?” ಎಂದು ಕಣ್ಣು ಕೆಂಪಗಾಗಿಸಿಕೊಂಡು ಕೇಳಿತು ಹದ್ದು.
“ಕ್ಷಮಿಸು ಎಂಕ್ವಾಜಿ. ದಿನವಿಡೀ ನಿನಗಾಗಿ ಹುಡುಕಿ ಅಲೆದು ಬಸವಳಿದಿದ್ದರಿಂದ, ನಿನ್ನ ಮುಖ ಕಂಡಾಗ ಖುಷಿಯಾಗಿ ಕಿರುಚಿದೆ! ತಪ್ಪಿದ ಮೀನನ್ನು ಹಿಡಿದುಕೊಡುವ ಜವಾಬ್ದಾರಿ ನನಗೆ ಬಿಡು. ಆದರೆ ನನಗೆ ನೀನೊಂದು ಸಹಾಯ ಮಾಡಬೇಕು” ಅಂದಳು ಮಂಜಾಂದಬ.
“ಏನದು?”
“ಇಡೀ ಕಾಡನ್ನು ನೋಡಬಹುದಾದಷ್ಟು ಎತ್ತರದಲ್ಲಿ ಹಾರುವ ನಿನಗೆ ನೂರೆಂಟು ಕತೆಗಳು ಗೊತ್ತುಂಟು ಅನ್ನುವ ವಿಷಯ ಕೇಳಿತಿಳಿದೆ. ನನಗಾಗಿ ಒಂದಾದರೂ ಕತೆಯನ್ನು ಹೇಳಿ ಸಹಾಯ ಮಾಡು. ಇಷ್ಟು ದಿನ ಅಲೆದು ಇಷ್ಟೊಂದು ದೂರ ಬಂದ ಮೇಲೆ ಹುಡುಕಿದ ಕತೆಯೊಂದೂ ಸಿಗಲಿಲ್ಲ ಅನ್ನಿಸಿಕೊಳ್ಳಲು ನನಗೆ ನಾಚಿಕೆಯಾಗುತ್ತದೆ” ಅಂದಳು ಮಂಜಾಂದಬ. ಅವಳ ಮಾತು ಕೇಳಿ ಹದ್ದಿಗೆ ನಗು ಬಂತು. “ಇದೊಳ್ಳೆ ಕತೆಯೇ! ಕಾಡು ಕಾಣುವಂತೆ ಹಾರುತ್ತೇನೆ ಅಂದ ಮಾತ್ರಕ್ಕೆ ನನಗೆ ಕತೆಗಳು ಗೊತ್ತುಂಟು ಅಂತ ಯಾರು ಹೇಳಿದರು! ನನ್ನ ದೃಷ್ಟಿ ಏನಿದ್ದರೂ ನೀರಿನ ಮೀನುಗಳ ಮೇಲೆ, ನೆಲದಲ್ಲಿ ಓಡಾಡುವ ಕೋಳಿಮರಿಗಳ ಮೇಲೆ, ಅಷ್ಟೇ! ಕತೆಗಳು ಆದವೋ ಹೋದವೋ ನೋಡಿ ನನಗೇನಾಗಬೇಕಿದೆ! ಆದರೆ, ಕತೆಗಳನ್ನು ಜತನದಿಂದ ಕಾಪಾಡಿಕೊಂಡು ಬಂದಿರುವ ಒಬ್ಬರ ಪರಿಚಯ ನನಗುಂಟು. ನಿನ್ನನ್ನು ಅವರ ಬಳಿ ಕರೆದುಕೊಂಡು ಹೋಗುತ್ತೇನೆ” ಎಂದಿತು.
ಅದು ಅವಳನ್ನು ಕಡಲ ತಡಿಗೆ ಕರೆದುಕೊಂಡು ಬಂತು. ದಡದಲ್ಲಿ ನಿಂತು “ಉಫುಡೂ!” ಎಂದು ಕೂಗಿಕರೆಯಿತು. ಹಾಗೆ ಕೂಗಿದ್ದೇ ತಡ, ತಳ ಒಡೆದು ಕವುಚಿಬಿದ್ದ ದೋಣಿಯ ಹಾಗೆ ಒಂದು ವಸ್ತು ಸಮುದ್ರದ ಬೆಳ್ನೊರೆಯ ಮೇಲೆ ತೇಲುತ್ತಾ ಬಂತು. ಹತ್ತಿರ ಹತ್ತಿರ ಬಂದ ಮೇಲೆ ಅದರೊಳಗಿಂದ ಒಂದು ಕತ್ತು ಹೊರಗಿಣುಕಿತು. ಅಷ್ಟು ದೊಡ್ಡ ಕಡಲಾಮೆಯನ್ನು ಅವಳು ಅದುವರೆಗೆ ನೋಡಿಯೇ ಇರಲಿಲ್ಲ! ಆಮೆ ದಡಕ್ಕೆ ಬಂದು, “ಏನಯ್ಯಾ ಎಂಕ್ವಾಜಿ, ಏನು ವಿಶೇಷ! ಯಾಕೆ ಕರೆದೆ?” ಅಂತ ಕೇಳಿತು. ಹದ್ದು ಎಲ್ಲ ವಿಷಯವನ್ನೂ ಹೇಳಿ, “ಉಫುಡು, ಈ ಹೆಂಗಸನ್ನು ಜಾಗ್ರತೆಯಾಗಿ ನಿನ್ನ ಬೆನ್ನ ಮೇಲೆ ಕುಳ್ಳಿರಿಸಿಕೊಂಡು ಕತೆಗಳು ಸಿಗುವ ಜಾಗಕ್ಕೆ ಕರೆದುಕೊಂಡು ಹೋಗು. ನೂರಾರು ವ?ಗಳಿಂದ ಕಡಲಲ್ಲಿ ಬದುಕಿರುವ ನಿನಗೆ ಗೊತ್ತಿಲ್ಲದ ಸಂಗತಿಯೇನಿದೆ!” ಎಂದು ಹೇಳಿ ಮಂಜಾಂದಬಳನ್ನು ಬೀಳ್ಕೊಟ್ಟಿತು.
ಅವಳು ಆಮೆಯ ಬೆನ್ನ ಮೇಲೆ ಕೂತಳು. ಆಮೆ ಆಕೆಯನ್ನು ನಿಧಾನವಾಗಿ ನೀರೊಳಗೆ ಕರೆದುಕೊಂಡು ಹೋಗಿ, ಕೊನೆಗೆ ಮುಳುಗುಹಾಕಿ ಸಮುದ್ರದ ಆಳದಲ್ಲಿರುವ ಸಮುದ್ರರಾಜನ ಅರಮನೆಗೆ ಕರೆದುಕೊಂಡು ಹೋಯಿತು. ಅಲ್ಲಿಯ ವೈಭವವನ್ನು ವರ್ಣಿಸುವುದಾದರೂ ಹೇಗೆ! ಮಂಜಾಂದಬ ಇಂತಹ ವೈಭೋಗವನ್ನು ಕಣ್ಣಾರೆ ನೋಡುತ್ತಿದ್ದುದೇ ಮೊದಲ ಸಲ. ಅಲ್ಲಿ ಹರಡಿನಿಂತ ಹತ್ತಾರು ಬಗೆಯ ವಿಸ್ಮಯ ಹುಟ್ಟಿಸುವ ತರಕಾರಿಗಳು, ಪ್ರಾಣಿಗಳು, ಅರಮನೆಯ ಭವ್ಯಕಟ್ಟಡಗಳು, ಗೋಪುರಗಳು – ಒಂದೇ ಎರಡೇ! ಆಮೆಯ ಕತ್ತನ್ನು ಅವುಚಿ ಹಿಡಿದುಕೊಂಡು ಅದರ ಬೆನ್ನ ಮೇಲೆ ಕೂತು ವಿಹರಿಸುತ್ತ ಮಂಜಾಂದಬ ಇವೆಲ್ಲ ಕಣ್ಣುಕೋರೈಸುವ ಅದ್ಭುತಗಳನ್ನು ನೋಡಿದಳು. ಕೊನೆಗೂ ಅವರಿಬ್ಬರೂ ಸಮುದ್ರರಾಜನ ಸಿಂಹಾಸನದ ಬಳಿ ಬಂದರು. ಸಮುದ್ರದ ರಾಜರಾಣಿಯರನ್ನು ಕತ್ತೆತ್ತಿ ನೋಡಲು ಮಂಜಾಂದಬಳಿಗೆ ತುಸು ಹೆದರಿಕೆಯೇ ಆಯಿತು. ಅವರ ಮೈಗಳು ಚಿನ್ನದ ಮೀನಿನ ಹೊಂಬಣ್ಣದಂತೆ ಫಳಫಳನೆ ಹೊಳೆಯುತ್ತಿದ್ದವು. ಆಸ್ಥಾನವನ್ನು ನೂರಾರು ಬಣ್ಣದ ಹವಳಗಳಿಂದ, ಚಿಪ್ಪು- ಶಂಖಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. “ಭೂಮಿಯ ಮೇಲೆ ವಾಸಿಸುವ ಹೆಣ್ಣೇ, ನಿನಗೆ ಸ್ವಾಗತ!” ಎಂದು ಸಮುದ್ರರಾಣಿ ಮಂಜಾಂದಬಳನ್ನು ಪ್ರೀತಿಯಿಂದ ಬರಮಾಡಿಕೊಂಡಳು.
ಆಮೆಯು ಸಮುದ್ರರಾಣಿಗೆ ಮಂಜಾಂದಬಳ ವಿ?ಯವನ್ನು ಸಂಕ್ಷಿಪ್ತವಾಗಿ ಹೇಳಿತು. ಆಮೇಲೆ ಮಾತಾಡಿದ ಮಂಜಾಂದಬ, “ರಾಜರಾಣಿಯರೇ, ಕಾಡುಮೇಡುಗಳಲ್ಲಿ ಅಲೆದು ಕತೆಗಳಿಗಾಗಿ ಹುಡುಕುತ್ತಿದ್ದಾಗ ಅಲ್ಲಿ ಸಿಕ್ಕವರು ನಿಮ್ಮತ್ತ ಬೆಟ್ಟು ಮಾಡಿದರು. ನನ್ನ ಜನ ಕತೆಗಳಿಗಾಗಿ ಹಸಿದು ಕೂತಿದ್ದಾರೆ. ದಯವಿಟ್ಟು ನಮಗೆ ಸಹಾಯ ಮಾಡಬೇಕು. ನಿಮ್ಮಲ್ಲಿರುವ ಕಥಾಸಂಪತ್ತನ್ನು ನನ್ನ ಜೊತೆ ದಯವಿಟ್ಟು ಹಂಚಿಕೊಳ್ಳಿ” ಎಂದು ಬೇಡಿದಳು.
“ಅದೇನೋ ಆಗಬಹುದು! ಆದರೆ ನೀನು ಭೂಮಿಯ ಮೇಲೆ ಜೀವಿಸುವಾಕೆ. ಅಲ್ಲಿಯ ಜನಜೀವನ ಹೇಗಿರುತ್ತದೆಂದು ನಮಗೆ ಗೊತ್ತಿಲ್ಲ. ಮುಂದೆಂದೂ ಅತ್ತ ಹೋಗುವವರೂ ನಾವಲ್ಲ. ನಮ್ಮ ಬದುಕೇನಿದ್ದರೂ ಈ ನೀರಿನೊಳಗೆಯೇ. ಹಾಗಾಗಿ, ನೀನು ನಮಗೊಂದು ಅಮೂಲ್ಯವಾದ ಉಡುಗೊರೆ ಕೊಟ್ಟರೆ ಅದಕ್ಕೆ ಪ್ರತಿಯಾಗಿ ಕತೆಗಳನ್ನು ಹಂಚಿಕೊಳ್ಳಲು ನಮ್ಮ ಅಭ್ಯಂತರವಿಲ್ಲ!” ಅಂದಳು ಸಮುದ್ರರಾಣಿ.
“ಹೌದು, ನೀನು ನಮಗೆ ನಿನ್ನ ಜನ, ಊರು, ಮನೆ- ಮಕ್ಕಳು ಎಲ್ಲ ಇರುವ ಒಂದು ಒಳ್ಳೆಯ ಕಲಾಕೃತಿಯನ್ನು ಕೊಡಬೇಕು!” ಎಂದು ?ರತ್ತು ಹಾಕಿದ ರಾಜ. ಅದನ್ನು ಶೀಘ್ರವೇ ತರುವುದಾಗಿ ಹೇಳಿದ ಮಂಜಾಂದಬ, ಅವರಿಗೆ ನಮಸ್ಕರಿಸಿ ಆಮೆಯ ಬೆನ್ನು ಹತ್ತಿ ಮತ್ತೆ ನೀರ ಮೇಲೆ ಬಂದಳು. ತೀರ ತಲುಪಿದ ಮೇಲೆ, ಆಮೆಗೆ ಹಲವಾರು ಬಾರಿ ಕೃತಜ್ಞತೆಗಳನ್ನು ಹೇಳಿ, ಮುಂದಿನ ಹುಣ್ಣಿಮೆಯ ದಿನ ತನಗಾಗಿ ಅದೇ ಜಾಗದಲ್ಲಿ ಕಾಯಬೇಕೆಂದೂ ತನ್ನನ್ನು ಮತ್ತೆ ಆ ಸಮುದ್ರರಾಜನ ಬಳಿ ಕರೆದುಕೊಂಡು ಹೋಗಬೇಕೆಂದೂ ಕೇಳಿಕೊಂಡಳು. ಆಮೆ ಒಪ್ಪಿತು.
ಲಘುಬಗೆಯಿಂದ ಮನೆಕಡೆ ಹೆಜ್ಜೆಹಾಕಿದ ಮಂಜಾಂದಬಳಿಗೆ ಈಗ ತನ್ನವರೊಡನೆ ಹಂಚಿಕೊಳ್ಳಲು ನೂರಾರು ಸಂಗತಿಗಳಿದ್ದವು. ಕತೆಗಳ ದೊಡ್ಡ ಮೂಟೆಯನ್ನೇ ಹೊತ್ತುತರುವ ಪತ್ನಿಗಾಗಿ ಎದುರುನೋಡುತ್ತ ಕೂತಿದ್ದ ಜೆಂಜೆಲೆಗೆ ಅವಳು ಬರಿಗೈಯಲ್ಲಿ ಬಂದಾಗ ನಿರಾಶೆಯಾಯಿತು. ಆದರೆ ಆಕೆ ಮಾತ್ರ ಖುಷಿಯಿಂದ ಪುಟಿಯುತಿದ್ದಳು. ತಾನು ಮನೆಯಿಂದ ಹೊರಟ ಮೇಲೆ ನಡೆದ ಘಟನೆಗಳೆಲ್ಲವನ್ನೂ ಪಟಪಟನೆ ಹೇಳಿ ರಾಜನ ?ರತ್ತನ್ನು ಹೇಗೆ ಪೂರೈಸುವುದು ಎಂದು ಕೇಳಿ ಜೆಂಜೆಲೆಯ ಮುಖ ನೋಡಿದಳು. ಅವನೋ – ಕಲಾವಿದ! ತನ್ನದೇ ಹಳ್ಳಿಯ ಗುಡ್ಡ ಬೆಟ್ಟ ಕಾಡು ಮನೆ ಜನರನ್ನು ಚಿತ್ರದಲ್ಲಿ ಬಿಡಿಸಲು ಸಂತಸ ಪಡದ ಝುಲು ಯಾರಿದ್ದಾನೆ? ಜೆಂಜೆಲೆ ಖುಷಿಯಿಂದ ಕುಪ್ಪಳಿಸಿ “ಅಂತಹ ಕಲಾಕೃತಿ ನಾನು ಬಿಡಿಸಿಕೊಡ್ತೇನೆ!” ಎಂದ. ತುಂಬ ಪರಿಶ್ರಮಪಟ್ಟು ಒಂದು ದೊಡ್ಡ ಮರದ ಹಲಗೆಯ ಮೇಲೆ ತನ್ನ ಇಡೀ ಹಳ್ಳಿಯ ಚಿತ್ರಣವನ್ನು ಬಿಡಿಸಿದ. ತನ್ನ ಮನೆ, ಮಕ್ಕಳು, ಹೆಂಡತಿ ಮತ್ತು ತಾನು – ಎಲ್ಲವನ್ನೂ ಸೂಕ್ಷ್ಮವಾಗಿ ಆ ಕಲಾಕೃತಿಯಲ್ಲಿ ಚಿತ್ರಿಸಿದ. ಕೊನೆಗೂ ಒಂದು ದಿನ ಅವನ ಕೆಲಸ ಮುಗಿಯಿತು. ಆ ಹಲಗೆಯನ್ನು ತನ್ನ ಹೆಂಡತಿಯ ಕೈಗೆ ಕೊಟ್ಟ. ಜಗತ್ತಿನ ಯಾವ ರಾಜನಾದರೂ ಕೈತುಂಬ ಚಿನ್ನದ ಉಡುಗೊರೆ ಕೊಟ್ಟು ತನ್ನದಾಗಿಸಿಕೊಳ್ಳಲು ಬಯಸುವ? ಸುಂದರವಾಗಿತ್ತದು.
ಆ ತಿಂಗಳ ಹುಣ್ಣಿಮೆಗೆ ಸರಿಯಾಗಿ ಕಡಲು ಸೇರುವ ಹಾಗೆ ಹೊರಟಳು ಮಂಜಾಂದಬ. ಕಡಲತಡಿಯಲ್ಲಿ ಆಮೆ, ಕೊಟ್ಟ ಮಾತನ್ನು ಮರೆಯದೆ, ಅವಳಿಗಾಗಿ ಕಾಯುತ್ತಿತ್ತು. ಆಮೆಯ ಉಪಕಾರಕ್ಕೆ ಕೃತಜ್ಞತೆಗಳನ್ನು ಹೇಳಿ ಮಂಜಾಂದಬ ಅದರ ಬೆನ್ನ ಮೇಲೆ ಕೂತಳು. ಇಬ್ಬರೂ ಮತ್ತೆ ನೀರಿನಲ್ಲಿ ಮುಳುಗು ಹಾಕಿ ಸಮುದ್ರರಾಜನ ಅರಮನೆ ತಲಪಿದರು. ಮಂಜಾಂದಬ ತಾನು ತಂದ ಅಮೂಲ್ಯ ಕಾಣಿಕೆಯನ್ನು ರಾಜನಿಗೆ ಪ್ರೀತಿಯಿಂದ ಉಡುಗೊರೆಯಾಗಿ ಕೊಟ್ಟಳು. ಭೂಮಿಯ ಮೇಲಿನ ಜನರ ಆ ಸುಂದರವಾದ ಚಿತ್ರಣವನ್ನು ಕಂಡು ಸಮುದ್ರದ ಜನರಿಗೆ ಆಶ್ಚರ್ಯ, ಸಂತೋಷಗಳ ಜೊತೆ ಅಸೂಯೆಯೂ ಆಯಿತು. ರಾಜ, “ಮಂಜಾಂದಬ, ಕೊಟ್ಟ ಮಾತಿಗೆ ತಪ್ಪದೆ ನೀನು ನಿನ್ನ ಕೆಲಸ ಮಾಡಿದ್ದೀಯೆ. ನಿನ್ನ ಉಡುಗೊರೆಯಿಂದ ನಾವೆಲ್ಲ ಸಂಪ್ರೀತರಾಗಿದ್ದೇವೆ. ಈಗ ನೀನು ಕೇಳಿದ ಹಾಗೆ ನಿನಗೆ ಬೇಕಾದ ವಸ್ತುವನ್ನು ಕೊಡುತ್ತೇನೆ” ಎಂದು ಹೇಳಿ ಒಂದು ಅತ್ಯಂತ ಕಲಾತ್ಮಕವಾದ ಶಂಖವನ್ನು ಅವಳ ಕೈಯಲ್ಲಿಟ್ಟ. “ನೀನು ಮತ್ತು ನಿನ್ನ ಜನರಿಗೆ ಕತೆಗಳು ಬೇಕೆಂದಾಗೆಲ್ಲ ಈ ಶಂಖವನ್ನು ನಿನ್ನ ಕಿವಿಗೆ ಆತು ಹಿಡಿದುಕೋ. ಅದು ಜಗತ್ತಿನ ಅತ್ಯಂತ ಅದ್ಭುತವಾದ ಕತೆಗಳನ್ನು ಹೇಳುತ್ತಾ ಹೋಗುತ್ತದೆ!” ಎಂದ.
ಇಷ್ಟು ದಿನ ಕಷ್ಟಪಟ್ಟು ಹುಡುಕಿದ ಕತೆ ಈಗ ತನ್ನ ಕೈಗೆ ಅನಾಯಾಸವಾಗಿ ಬಂದುಬೀಳುತ್ತಿದೆ ಎನ್ನುವ ಸಂತಸದಲ್ಲೇ ಪ್ರಜ್ಞೆ ತಪ್ಪುವುದರಲ್ಲಿದ್ದಳು ಅವಳು. ಆದರೂ ಹೇಗೋ ಸಾವರಿಸಿಕೊಂಡು, ರಾಜನಿಂದ ಶಂಖವನ್ನು ಪಡೆದು, ಇಡೀ ಜಗತ್ತೇ ತನ್ನ ಮುಷ್ಟಿಯೊಳಗೆ ಬಂದ ಹಾಗೆ ಸಂತಸಪಟ್ಟಳು. ರಾಜರಾಣಿಯರಿಗೆ ನಮಸ್ಕರಿಸಿ ಬೀಳ್ಕೊಟ್ಟು ಆಮೆಯ ಜೊತೆ ಮತ್ತೆ ಕಡಲತಡಿಗೆ ಬಂದಳು. ಆಮೆಗೆ ವಿದಾಯ ಹೇಳಿ ಆನಂದದಿಂದ ಕುಣಿಯುತ್ತ ಕುಪ್ಪಳಿಸುತ್ತ ಇಡೀ ಪ್ರಪಂಚವನ್ನೇ ಗೆದ್ದ ಸಂಭ್ರಮದಲ್ಲಿ ತನ್ನ ಹಳ್ಳಿಗೆ ಬಂದಳು. ಅವಳ ವಿಜಯವನ್ನು ಇಡೀ ಹಳ್ಳಿ ಮನದಣಿಯೆ ನಲಿದು ಆಚರಿಸಿತು.
ಅಂದು ರಾತ್ರಿ ಹಳ್ಳಿಗೆ ಹಳ್ಳಿಯೇ ಜೆಂಜೆಲೆಯ ಮನೆ ಮುಂದೆ ನೆರೆಯಿತು. ಅವರೆಲ್ಲ ಚಳಿ ಕಾಯಿಸಲು ಶಿಬಿರಾಗ್ನಿ ಮಾಡಿದರು. ಆ ಬೆಂಕಿಯ ಸುತ್ತ ನೆರೆದು ಮಂಜಾಂದಬ ಕತೆ ಹೇಳುವ ಅಮೃತಘಳಿಗೆಗಾಗಿ ಕಾಯುತ್ತ ಕೂತರು. ಮಂಜಾಂದಬ, ಸಮುದ್ರರಾಜ ಕೊಟ್ಟ ಅಮೂಲ್ಯವಾದ ಶಂಖವನ್ನು ತನ್ನ ಕಿವಿಗೆ ಆನಿಸಿ ಹಿಡಿದಳು. ಆಗ ಶಂಖವು ತನ್ನ ಅವರ್ಣನೀಯವಾದ ಅಶರೀರವಾಣಿಯಲ್ಲಿ, ಈ ಜಗತ್ತಿನ ಮೊಟ್ಟಮೊದಲ ಕತೆಯನ್ನು “ಒಂದಾನೊಂದು ಕಾಲದಲ್ಲಿ….” ಎಂದು ಹೇಳುತ್ತ ಶುರುಮಾಡಿತು.
ಕತೆಗಳು ಹುಟ್ಟಿದ್ದು ಹೇಗೆ ಅನ್ನುತ್ತೀರೋ? ಕತೆಗಳು ಹುಟ್ಟಿದ್ದೇ ಹಾಗೆ!