ಯಸ್ಯ ಕೃತ್ಯಂ ನ ವಿಘ್ನಂತಿ ಶೀತಮುಷ್ಣಂ ಭಯಂ ರತಿಃ |
ಸಮೃದ್ಧಿರಸಮೃದ್ಧಿರ್ವಾ ಸ ವೈ ಪಂಡಿತ ಉಚ್ಯತೇ ||
– ಮಹಾಭಾರತ, ಉದ್ಯೋಗಪರ್ವ, ೩೩-೨೦
ಯಾರಿಗೆ ತಾನು ಉದ್ದೇಶಿಸಿದ ಕೆಲಸಕ್ಕೆ ಚಳಿ, ಸೆಕೆ, ಭಯ, ಪ್ರೀತಿ, ಸಂಪತ್ತು, ಬಡತನ ಇವು ಯಾವುವೂ ಅಡ್ಡಿಯಾಗವೋ ಅವನನ್ನು ಪಂಡಿತನೆನ್ನುತ್ತಾರೆ.
ಬದುಕಿನಲ್ಲಿ ಯಶಸ್ಸನ್ನು ಗಳಿಸಬೇಕಾದರೆ ತೀವ್ರವಾದ ಪ್ರಯತ್ನಶೀಲತೆ ಅತ್ಯಂತ ಅವಶ್ಯ. ಅತ್ಯಂತ ನಿಷ್ಠೆಯಿಂದ ಕಾರ್ಯಪ್ರವೃತ್ತರಾಗದೆ ನಮಗೆ ಏನನ್ನೂ ಸಾಧಿಸಲಾಗುವುದಿಲ್ಲ. ಕಷ್ಟಪಟ್ಟು ದುಡಿಯುವುದರ ನಿಜವಾದ ಬೆಲೆಯ ಅರಿವಾಗುವುದು ನಾವು ಕಷ್ಟಪಟ್ಟು ದುಡಿದಾಗಲೇ. ಯಾರ ದುಡಿಮೆಯಲ್ಲಿ ಪರಿಶ್ರಮವಿರದೋ ಅಂಥವನಲ್ಲಿ ಎಷ್ಟು ಪಾಂಡಿತ್ಯ ಇದ್ದರೂ ಅದು ವ್ಯರ್ಥ.
ಬಹಳಷ್ಟು ಸಂದರ್ಭಗಳಲ್ಲಿ ನಮಗೆ ಅದೃ?ವೇ ಬಹಳ ಮುಖ್ಯವೆಂದು ಅನಿಸಿಬಿಡುತ್ತದೆ. ಆದರೆ ಪರಿಶ್ರಮದಿಂದ ಕಾರ್ಯಶೀಲರಾಗಿದ್ದು, ಸಿಕ್ಕ ಅವಕಾಶಗಳನ್ನು ಕಳೆದುಕೊಳ್ಳದೆ, ತಮ್ಮ ಅದೃಷ್ಟವನ್ನು ತಾವೇ ನಿರ್ಮಿಸಿಕೊಳ್ಳುವುದು ಬುದ್ಧಿವಂತರ ಲಕ್ಷಣ.
“ದೇವರು ಬೆವರು ಸುರಿಸುತ್ತ ಹೊಲದಲ್ಲಿ ಉಳುವ ರೈತನ ಜೊತೆಗೆ ಮತ್ತು ಕಲ್ಲುಗಳನ್ನು ಒಡೆದು ರಸ್ತೆಯನ್ನು ನಿರ್ಮಿಸುವ ಕೂಲಿಕಾರನ ಜೊತೆಗೆ ಸದಾ ಇರುತ್ತಾನೆ; ಅವರೊಂದಿಗೆ ಬೆಳಕು ನೀಡುವ ಸೂರ್ಯನಾಗಿ ಮತ್ತು ತಂಪೆರೆವ ಮಳೆಯಾಗಿ” – ಎಂದು ಗುರುದೇವ ರವೀಂದ್ರನಾಥ ಠಾಗೋರರು ಒಂದೆಡೆ ಹೇಳಿದ್ದಿದೆ.
ಸಕಾರಾತ್ಮಕ ಚಿಂತನೆಗಳ ಕುರಿತ ಪ್ರಸಿದ್ಧ ಬರಹಗಾರ ನಾರ್ಮನ್ ವಿನ್ಸೆಂಟ್ ಪೀಲೆ ಒಮ್ಮೆ ಪ್ರಸಿದ್ಧ ಇಂಜಿನಿಯರ್, ಉದ್ಯಮಿ ಮತ್ತು ಅಮೆರಿಕದ ೩೧ನೇ ಅಧ್ಯಕ್ಷರಾಗಿದ್ದ ಹರ್ಬರ್ಟ್ ಹೂವರನನ್ನು ಭೇಟಿಯಾಗಲು ಹೋಗಿದ್ದ. ಹಾಗೆಂದು ತಾನು ಬಂದ ಉದ್ದೇಶವನ್ನು ಹೂವರನ ಕಾರ್ಯದರ್ಶಿಗೆ ಅರುಹಿದ.
ಅದಕ್ಕೆ ಅವಳು – “ಸರಿ, ಆದರೆ ಅವರು ಅಲ್ಲಿ ತಮ್ಮ ಕೆಲಸ ಕಾರ್ಯಗಳಲ್ಲಿ ತಲ್ಲೀನರಾಗಿದ್ದಾರೆ. ಅವರು ಹೀಗೆ ದಿನಕ್ಕೆ ಎಂಟು-ಹತ್ತು ಗಂಟೆ ಶ್ರಮವಹಿಸಿ ದುಡಿಯುತ್ತಾರೆ” ಎಂದು ಉತ್ತರಿಸಿದಳು.
“ಅದು ಹೇಗೆ ಸಾಧ್ಯ, ಅವರಿಗೀಗ ವಯಸ್ಸು ೮೫ ಅಲ್ಲವೇ?” ಎಂದು ಪೀಲೆ ಪ್ರತಿಭಟಿಸಿದ.
“ಹೌದು, ಹಾಗೆಂದು ನನಗೆ ನಿಮಗೆ ತಿಳಿದಿದೆ; ಆದರೆ ಅದು ಅವರಿಗೆ ತಿಳಿದಿಲ್ಲವೇ!” – ಉತ್ತರಿಸಿದಳು ಕಾರ್ಯದರ್ಶಿ.
’ಪ್ರಾರ್ಥನೆ ಮಾಡುವಾಗ ಎಲ್ಲವೂ ಪರಮಾತ್ಮನ ಅಧೀನವಾಗಿದೆ ಎಂದು ತಿಳಿದು ಪ್ರಾರ್ಥಿಸಬೇಕು; ಕೆಲಸ ಕಾರ್ಯಗಳನ್ನು ಮಾಡುವಾಗ ಎಲ್ಲವೂ ನಮ್ಮ ಅಧೀನದಲ್ಲಿದೆ ಎಂದು ತಿಳಿದು ಪ್ರಯತ್ನಶೀಲರಾಗಬೇಕು’ – ಎಂಬುದು ಲೋಕೋತ್ತರ ಮತ.