ಇದೀಗ ನಾವು ನಮ್ಮ ಕೆರೆಗಳನ್ನು ಉಳಿಸಲು ಏನನ್ನು ಮಾಡಬೇಕು ಎಂಬುದನ್ನು ಪುನರ್ವಿಮರ್ಶಿಸುವುದು ಅನಿವಾರ್ಯ. ಒಂದೊಮ್ಮೆ ನಮ್ಮ ಸಂಪ್ರದಾಯದ ಆಚರಣೆಗಳನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದರೆ ಕೆರೆಗಳ ಜೊತೆಗೆ ಇನ್ನೂ ಏನನ್ನು ಕಳೆದುಕೊಳ್ಳಲು ಹೊರಟಿದ್ದೇವೆ ಎನ್ನುವುದು ಕಾಣಿಸುತ್ತದೆ…
ಇಂದು ನಾವು ಆಧುನಿಕತೆ ಹೆಸರಿನಲ್ಲಿ ನಮ್ಮ ಸಾಂಪ್ರದಾಯಿಕ ಬದುಕಿನ ವ್ಯವಸ್ಥೆಗಳನ್ನು ನಿರಂತರವಾಗಿ ಅವನತಿಗೆ ದೂಡುತ್ತಿದ್ದೇವೆ. ಆಧುನಿಕತೆಯ ಹೆಸರಿನಲ್ಲಿ ಈ ಹೊಸ ವಿಚಾರಗಳು ಭಾರತೀಯರ ಜೀವನದ ಪ್ರಮುಖ ಅಂಗವಾಗಿರುವ ಆಚರಣೆಗಳ ಮೇಲೆ ಪ್ರಹಾರ ಮಾಡುತ್ತಿವೆ. ಈ ಆಚರಣೆಗಳ ಮೂಲಕವೇ ನಾವು ಕಟ್ಟಿಕೊಂಡಿದ್ದ ಬದುಕು ಮತ್ತು ಸಾಮುದಾಯಿಕ ಜೀವನವನ್ನು ಮೊದಲು ನಾಶಮಾಡಿ ತದನಂತರ ನಾವು ಬಹುತ್ವ, ಸಮುದಾಯದ ಬದುಕು ಇತ್ಯಾದಿಗಳ ಕುರಿತು ಮಾತನಾಡತೊಡಗಿದ್ದೇವೆ. ಈ ಹಿನ್ನೆಲೆಯಲ್ಲಿ, ಹೇಗೆ ಕೆರೆಗಳ ಅವನತಿಯು ನಮ್ಮ ಜೀವನದ ಅತ್ಯಂತ ಪ್ರಮುಖ ಅಂಗವಾದ ಆಚರಣೆಗಳ ಅವನತಿ ಮತ್ತು ಈ ಆಚರಣೆಗಳೆ ನಮ್ಮ ಸಂಸ್ಕೃತಿಯ ವಾಹಕಗಳಾದ್ದರಿಂದ, ಹೇಗೆ ನಮ್ಮ ಕೆರೆಗಳ ವಿನಾಶ ನಮ್ಮ ಸಂಸ್ಕೃತಿಯ ವಿನಾಶದ ಜೊತೆ ತಳುಕು ಹಾಕಿಕೊಂಡಿದೆ ಎಂಬುದನ್ನು ತೋರಿಸುವುದೇ ಈ ಲೇಖನದ ಉದ್ದೇಶವಾಗಿದೆ.
ಪರಿಸರ ಮತ್ತು ನೀರು
ಜಗತ್ತಿನ ಎಲ್ಲ ಕಡೆಯಲ್ಲೂ ಇಂದು ಪರಿಸರ ನಾಶದ್ದೇ ಮಾತು. ಅದರಲ್ಲೂ ಒಂದು ಕಡೆ ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ಆಧುನಿಕ ಜಗತ್ತಿನಲ್ಲಿ, ಇನ್ನೊಂದು ಕಡೆ ಪರಿಸರ ವಿನಾಶದ ಪ್ರತಿಕೂಲ ಪರಿಣಾಮಗಳಿಂದ ಮನುಕುಲದ ಮೇಲೆ ಆಗಬಹುದಾದ ದುಷ್ಪರಿಣಾಮಗಳ ಭಯ. ದಶಕಗಳ ಹಿಂದೆ ವಾಯುಮಾಲಿನ್ಯ, ಜಲಮಾಲಿನ್ಯ ಇತ್ಯಾದಿಗಳು ಪಠ್ಯಪುಸ್ತಕದ ಕಥೆಗಳಾಗಿದ್ದರೆ, ಇಂದು ನಮಗೆ ಬೇಕೋ ಬೇಡವೋ ಇವೆಲ್ಲ ನಮ್ಮ ಕಣ್ಮುಂದಿರುವ ಕಟು ವಾಸ್ತವಗಳಾಗಿವೆ. ಜಾಗತಿಕ ತಾಪಮಾನ ಹೆಚ್ಚಳ, ಹರಡುತ್ತಿರುವ ಸೋಂಕುರೋಗಗಳು, ಕಲುಷಿತ ಗಾಳಿ, ತ್ಯಾಜ್ಯ ಇತ್ಯಾದಿಗಳು ಪೆಡಂಭೂತಗಳಾಗಿ ನಮ್ಮ ಮುಂದೆ ನಿಂತಿವೆ. ಕೇವಲ ಇಪ್ಪತ್ತು ವ?ಗಳ ಹಿಂದೆ ವಿದೇಶಿಯರು, ಹಣವಂತರು, ಪ್ರವಾಸಿತಾಣಗಳಲ್ಲಿ ಬಾಟಲು ನೀರನ್ನು ಕುಡಿಯುವುದು ನಮಗೆಲ್ಲ ಸೋಜಿಗವಾಗಿ ಕಾಣುತ್ತಿತ್ತು. ಆದರೆ ಇಂದು ನಮ್ಮೆಲ್ಲರ ಮನೆಗಳಲ್ಲಿ ವಾಟರ್ ಪ್ಯೂರಿಫೈಯರ್ಗಳು ಮತ್ತು ಮಿನರಲ್ವಾಟರ್ ಬಾಟಲ್ಗಳು ಅನಿವಾರ್ಯವಾಗಿ ಬಂದಿವೆ.
ಈ ದೊಡ್ಡ ಕಥೆಯೊಳಗೆ ಅನೇಕ ವಿಷಯಗಳಿದ್ದು, ಅವುಗಳಲ್ಲಿ ನೀರನ್ನು ಕುರಿತು ಯೋಚಿಸುವುದು ನಮ್ಮ ಇಂದಿನ ಸಾಂದರ್ಭಿಕ ತುರ್ತು. ನೀರು ಜೀವಜಲ, ಸಕಲ ಜೀವಿಗಳಿಗೂ ನೀರು ಅತ್ಯವಶ್ಯ. ಅದರಲ್ಲೂ ಕುಡಿಯುವ ನೀರು ನಮ್ಮ ಬದುಕಿಗಂತೂ ಅನಿವಾರ್ಯ. ಒಂದು ಕಡೆ ಭೂಮಿಯ ಮೇಲ್ಭಾಗದಲ್ಲಿ ಶೇ. ೭೦ರಷ್ಟು ನೀರಿದ್ದರೂ, ನಮ್ಮೂರಿನಲ್ಲಿ ಇಂದು ’ವಾಟರ್ ಸ್ಟ್ರೆಸ್’ ಇದೆ, ಅಂದರೆ ಬಳಸಲು ನೀರಿಲ್ಲ. ನೀರಿಗಾಗಿ ಹೊಡೆದಾಟ, ರಾಜ್ಯ, ದೇಶಗಳ ನಡುವೆ ತಕರಾರು, ವಿವಾದಗಳು ಇತ್ಯಾದಿ, ಕಳೆದ ೨-೩ ದಶಕಗಳಲ್ಲಿ ನಾವು ಸೃಷ್ಟಿ ಮಾಡಿಕೊಂಡಿರುವ ಹೊಸ ಸಮಸ್ಯೆಗಳು. ಆಧುನಿಕ ಭಾರತವನ್ನು ಕಟ್ಟಿಕೊಳ್ಳುವಾಗ ಒಂದೊಂದು ರಾಜ್ಯದಲ್ಲೂ ಪ್ರತಿಯೊಂದು ರಾಜಧಾನಿಗೆ ಕನಿ? ಒಂದಾದರೂ ನದಿಯನ್ನು ಆಪೋಶನ ತೆಗೆದುಕೊಳ್ಳದೆ ಮುಂದುವರೆದಿದ್ದೇ ಇಲ್ಲ. ಇನ್ನು ನಗರಾಭಿವೃದ್ಧಿಗೂ ನದಿಗಳ ವಿನಾಶಕ್ಕೂ ಹೊಸ ಸಂಬಂಧವನ್ನೇ ಇಂದು ನಾವು ರಚಿಸಿದ್ದೇವೆ. ಇದು ನಮ್ಮ ನೀರಿನ ಕಥೆ.
ಕೆರೆಗಳ ಇಂದಿನ ಸ್ಥಿತಿ
ಈ ಕಥೆಯನ್ನು ಇನ್ನೂ ಸ್ವಲ್ಪ ಚಿಕ್ಕದಾಗಿಸಿದರೆ ನಮ್ಮೆಲ್ಲರ ಜೀವನದ ಸುಂದರ ಭಾಗವಾಗಿದ್ದ ಕೆರೆಗಳ ಕಥೆ ಇನ್ನೂ ಶೋಚನೀಯ. ಕರ್ನಾಟಕದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಮಿಕ್ಕಿ ಕೆರೆಗಳಿದ್ದವು. ಅವುಗಳ ಅಚ್ಚುಕಟ್ಟು ಪ್ರದೇಶ ಸರಿಸುಮಾರು ನಾಲ್ಕೂವರೆ ಲಕ್ಷ ಹೆಕ್ಟೇರ್ಗಳ?. ಈ ಕೆರೆಗಳು ನಿನ್ನೆ ಮೊನ್ನೆ ನಿರ್ಮಿತವಾದವೇನೂ ಅಲ್ಲ. ಈ ಎಲ್ಲ ಕೆರೆಗಳ ಹಿಂದೆ ಅನೇಕ ಶತಮಾನಗಳ ಗತಕಥನವಿದೆ. ಅನೇಕ ಕೆರೆಗಳು ನಾಲ್ಕೈದು ಶತಮಾನಗಳ ಚರಿತ್ರೆಯ ಸ್ಮಾರಕವಾಗಿ ನಮ್ಮ ಮುಂದಿವೆ. ಇಷ್ಟು ಕೆರೆಗಳನ್ನು ಕಟ್ಟಿಕೊಂಡಿದ್ದ ನಮ್ಮ ಹಿರಿಯರ ದೂರದೃಷ್ಟಿ ನಮಗಿದ್ದಂತಿಲ್ಲ.
ಶೇ. ೭೦ರ? ಕೆರೆಗಳು ಇಂದು ಒಣಗಿ ನಿಂತಿದ್ದರೆ, ಇನ್ನುಳಿದ ಬಹುತೇಕ ಕೆರೆಗಳು ಬಳಕೆಗೆ ಅನುಪಯುಕ್ತವಾಗಿವೆ. ಕೆಲವು ಕೆರೆಗಳಲ್ಲಿ ತ್ಯಾಜ್ಯ ತುಂಬಿದ್ದರೆ, ಕೆಲವೆಡೆ ಕೆರೆಗಳೇ ಮಾಯವಾಗಿವೆ. ಇನ್ನೂ ಅನೇಕ ಬಾರಿ ಕೆರೆಗಳಿದ್ದರೂ ಹೂಳಿನಿಂದಾಗಿ ಅವು ಯಾವುದೇ ಬಳಕೆಗೆ ಉಪಯುಕ್ತವಾಗದ ಸ್ಥಿತಿ ತಲಪಿವೆ. ಹಲವೆಡೆ ಮಳೆ ನೀರು ಕೆರೆಯನ್ನು ತಲಪುವುದೇ ಇಲ್ಲ. ಆಗೊಮ್ಮೆ ಈಗೊಮ್ಮೆ ಕೆರೆಗೆ ನೀರು ಬಂದರೂ ರಾಜಕಾಲುವೆಯೇ ಕಾಣೆಯಾಗಿ ತೂಬುಗಳೆಲ್ಲ ಮುಚ್ಚಿಹೋಗಿ, ನೀರು ಯಾರಿಗೂ ಬಳಸಲು ಸಾಧ್ಯವಾಗದ ಸ್ಥಿತಿಯಿದೆ.
ಉದಾಹರಣೆಗೆ ಇಂದಿನ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೆಲವೇ ದಶಕಗಳ ಹಿಂದಿನವರೆಗೂ ೨೦೦ಕ್ಕೂ ಹೆಚ್ಚು ಕೆರೆಗಳಿದ್ದವಂತೆ. ಒಂದು ಕಡೆ ಕೆರೆಗಳನ್ನು ಕಟ್ಟಡಗಳು ಮತ್ತು ರಿಯಲ್ ಎಸ್ಟೇಟ್ನವರು ಒತ್ತುವರಿ ಮಾಡಿದರೆ, ಕೆಲವೊಮ್ಮೆ ಕಾರ್ಖಾನೆಗಳ ಕಟ್ಟಡಗಳ ತ್ಯಾಜ್ಯ, ರಾಸಾಯನಿಕ, ಪ್ಲಾಸ್ಟಿಕ್ ಸೇರಿದಂತೆ ಎಲ್ಲ ಕಸಗಳನ್ನು ಸುರಿಯಲು ಈ ಕೆರೆಗಳೇ ಪ್ರಶಸ್ತ ಜಾಗವಾಗಿವೆ. ಈ ರೀತಿಯಾಗಿ ನೂರಕ್ಕೂ ಹೆಚ್ಚು ಕೆರೆಗಳು ಹಾಳಾಗಿ ಹೋಗಿದ್ದರೆ, ಇನ್ನೊಂದಿ? ಕೆರೆಗಳು ಕಣ್ಮರೆಯಾಗಿವೆ. ಅಳಿದುಳಿದ ಕೆರೆಗಳನ್ನು ಉಳಿಸಿಕೊಳ್ಳಲು ಸರ್ಕಾರ ಮತ್ತು ಮಾಫಿಯಾಗಳನ್ನು ಎದುರಿಸಿ ಅನೇಕರು ಹೋರಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಮೈಸೂರಿನ ಕುಕ್ಕರಹಳ್ಳಿ ಕೆರೆ, ಲಿಂಗಾಂಬುಧಿ ಕೆರೆ, ದಳವಾಯಿ ಕೆರೆ, ಇತ್ಯಾದಿಗಳು ಹೇಗಿವೆ, ಹಾಸನದ ಹಳೆಯ-ಹೊಸ ಬಸ್ ನಿಲ್ದಾಣಗಳು, ಬೆಂಗಳೂರಿನ ಮೆಜೆಸ್ಟಿಕ್…ಒಂದೊಂದು ಕೆರೆಯ ಸಮಾಧಿಯ ಮೇಲೆ ನಿಂತಿವೆ ಎಂಬುದನ್ನು ಗಮನಿಸಬಹುದು. ಹಾಗೆ ಪಟ್ಟಿ ಮಾಡ ಹೊರಟರೆ ಅಳಿವಿನ ಅಂಚಿನಲ್ಲಿರುವ ಅನೇಕ ಕೆರೆಗಳ ಬಹಳ ಉದ್ದ ಪಟ್ಟಿಯನ್ನೇ ಮಾಡಬಹುದು.ಇ?ಲ್ಲ ಅರ್ಥವಾದ ಬಳಿಕ ನಾವು ಕೆರೆಗಳ ಕುರಿತು ಹೇಗೆ ಮತ್ತು ಏಕೆ ಆಲೋಚಿಸಬೇಕು ಹಾಗೂ ಕೆರೆಗಳನ್ನು ಕಳೆದುಕೊಳ್ಳುವುದರಿಂದ ಏನನ್ನು ಕಳೆದುಕೊಳ್ಳುತ್ತಿದ್ದೇವೆ ಎಂದು ಯೋಚಿಸುವುದು ಅನಿವಾರ್ಯವಾಗಿದೆ.
ಕೆರೆಗಳು ಮತ್ತು ಒಂದು ಸಮಗ್ರ ತಾಂತ್ರಿಕ ವ್ಯವಸ್ಥೆ
ನಾವು ಇಂದು ನಿರಂತರವಾಗಿ ಕಳೆದುಕೊಳ್ಳುತ್ತಿರುವ ಕೆರೆಗಳನ್ನು, ಕೇವಲ ಮಳೆನೀರು ಸಂಗ್ರಹದ ಆಧುನಿಕ ಪೂರ್ವ ಸಮಾಜಗಳ ಕೆಲವು ಪಳೆಯುಳಿಕೆಯಂತೆ ನೋಡಲಾಗುವುದಿಲ್ಲ. ದಕ್ಷಿಣ ಭಾರತಾದ್ಯಂತ ಹಬ್ಬಿರುವ ಈ ಕೆರೆಗಳನ್ನು ಒಂದು ಸಮಗ್ರ ವ್ಯವಸ್ಥೆಯಾಗಿ ಅರ್ಥೈಸಿಕೊಳ್ಳುವುದು ಅಗತ್ಯ. ಈ ಕೆರೆಗಳನ್ನು ಕಟ್ಟಿಸುವ ಕಾರ್ಯಕ್ಕೆ ದಕ್ಷಿಣ ಭಾರತದಲ್ಲಿ ಮಹತ್ತರವಾದ ಸಾಂಸ್ಕೃತಿಕ ಮತ್ತು ಸಾಮಾಜಿಕ ಹಿನ್ನೆಲೆಯಿದೆ. ಸುಮಾರು ಒಂದು ಸಹಸ್ರಮಾನದ? ಹಿಂದಿನಿಂದ ಈ ಕೆರೆಗಳನ್ನು ಕಟ್ಟಿಸಲು ಅನೇಕ ಧನಿಕರು, ಶ್ರೇಷ್ಠಿಗಳು, ಪಾಳೆಗಾರರು, ರಾಜರು, ಅ? ಏಕೆ ವೇಶ್ಯೆಯರೂ ಶ್ರಮಿಸಿದ್ದಾರೆಂಬ ಚಾರಿತ್ರಿಕ ದಾಖಲೆಗಳು ಸಿಗುತ್ತವೆ. ಚಾಲುಕ್ಯ, ರಾ?ಕೂಟ, ಹೊಯ್ಸಳರಿಂದ ವಿಜಯನಗರ ಸಾಮ್ರಾಜ್ಯದವರೆಗೆ ಸಿಗುವ ಶಾಸನಗಳಲ್ಲಿ ಕೆರೆಗಳನ್ನು ಕಟ್ಟಿಸುವುದು ಹಾಗೂ ಅವುಗಳ ಸಂರಕ್ಷಣೆ ಕುರಿತಿರುವ ಶಾಸನಗಳೇ ಅಸಂಖ್ಯ. ವಿಜಯನಗರ ಅರಸರ ಕಾಲದ ಹೊತ್ತಿಗೆ, ಈ ಕೆರೆಗಳ ನಿರ್ವಹಣೆ ಒಂದು ರೀತಿಯ ಸ್ವಯಂಪೂರ್ಣ ಹಾಗೂ ಸುಸ್ಥಿರವಾದ ವ್ಯವಸ್ಥೆಯಾಗಿ ಬೆಳೆದಂತೆ ಕಾಣುತ್ತದೆ. ಈ ರೀತಿಯ ವ್ಯವಸ್ಥೆಯು ಸರಳವಾದದ್ದೇನೂ ಅಲ್ಲ. ಏಕೆಂದರೆ ಅತ್ಯಂತ ಸೂಕ್ಷ್ಮವಾಗಿ ಯಾವುದೇ ಊರನ್ನು, ಜಮೀನನ್ನು ಮುಳುಗಡೆ ಮಾಡದ ರೀತಿಯಲ್ಲಿ ಅತ್ಯಂತ ಸಮರ್ಪಕವಾಗಿ ನೀರನ್ನು ಸಂಗ್ರಹಿಸುವ ಜಾಗವನ್ನು ಗುರುತಿಸುವುದು ಮೊದಲ ಕೆಲಸ, ನಂತರ ಅದಕ್ಕೆ ಏರಿಯನ್ನು, ಕೋಡಿಯನ್ನು ಕಟ್ಟಿ, ಮಳೆಯಿಂದ ಶೇಖರಗೊಂಡ ನೀರು ಹರಿದು ಹೋಗಲು ಸೂಕ್ತವಾದ ಕೋಡಿ, ಕಾಲುವೆಯ ವ್ಯವಸ್ಥೆಯ ನಿರ್ಮಾಣ ಇದರ ಇನ್ನೊಂದು ಮುಖ. ಈ ರೀತಿ ಕೋಡಿಯಿಂದ ಹರಿದ ನೀರು ಮತ್ತೊಂದು ಕೆರೆಗೆ ಸೇರುವುದು, ಆ ಕೆರೆಯ ಮೂಲಕ ಮತ್ತೊಂದು ಕೆರೆಗೆ ಸೇರುವುದು, ಇಂತಹ ಅನೇಕ ಕೆರೆಗಳ ನೀರು ಒಂದು ಬೃಹತ್ತಾದ ಕೆರೆಯನ್ನು ಸೇರಿ, ಆ ಕೆರೆಯಿಂದ ಹೆಚ್ಚಾದ ನೀರನ್ನು ಯಾವುದಾದರೂ ನದಿಗೆ ಸೇರಿಸುವವರೆಗಿನ ವ್ಯವಸ್ಥೆ ಅತ್ಯಂತ ನಾಜೂಕಿನಿಂದ ಸಿದ್ಧಪಡಿಸಲಾಗಿತ್ತು. ಅಂದರೆ ಈ ವ್ಯವಸ್ಥೆಯಲ್ಲಿ ಎಲ್ಲ ಕೆರೆಗಳು ಒಂದಕ್ಕೊಂದು ಸಂಪರ್ಕಕ್ಕೆ ಒಳಪಟ್ಟಿವೆ. ಅ? ಅಲ್ಲ, ಪ್ರತಿಯೊಂದು ಕೆರೆಗೆ ರಾಯಕಾಲುವೆ ಅಥವಾ ರಾಜಕಾಲುವೆ ಎಂಬ ಪ್ರಮುಖ ಕಾಲುವೆ, ಆ ಕೆರೆಯ ತೂಬಿನಿಂದ ಹೊರಟು, ಕೆರೆಯ ಹಿಂದಿನ ಒಂದು ದೊಡ್ಡ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆಗೆ ವ?ವಿಡೀ ಪೂರಕವಾದ ನೀರಿನ ವ್ಯವಸ್ಥೆಯನ್ನು ಈ ವ್ಯವಸ್ಥೆ ಕಲ್ಪಿಸುತ್ತಿತ್ತು. ಇದಲ್ಲದೆ ಕೆರೆಯ ಪಕ್ಕ ಗೋಮಾಳ, ಕೆರೆಗೊಂದು ದೇವಸ್ಥಾನ ಇತ್ಯಾದಿಗಳು ಕೆರೆಗೆ ಪೂರಕವಾಗಿ ನಿರ್ಮಿತವಾಗುತ್ತಿದ್ದವು. ಅಂದರೆ ಮಳೆಯ ನೀರನ್ನು ಸೂಕ್ತವಾಗಿ ಸಂಗ್ರಹಿಸಿ, ಯಾವುದೇ ಬೃಹತ್ ಅಣೆಕಟ್ಟುಗಳಿಲ್ಲದೆ, ನೀರಿನ ನಿರ್ವಹಣೆಯನ್ನು ರೂಪಿಸಿದ ವ್ಯವಸ್ಥೆಯಿದು. ಈ ವ್ಯವಸ್ಥೆ ಒಂದು ಸ್ಪ? ರೂಪ ಪಡೆಯಲು ಲಕ್ಷಾಂತರ ಜನರ ಶ್ರಮ ಮತ್ತು ಶತಮಾನಗಳ ಸಮಯ ವ್ಯಯವಾಗಿದೆ.
ಕೆರೆಗಳು, ಆಚರಣೆ ಮತ್ತು ಸಮುದಾಯಗಳ ಜೀವನ
ಇದು ಕೆರೆಗಳು ಹೇಗೆ ಭೌತಿಕವಾಗಿ ಹಾಗೂ ತಾಂತ್ರಿಕವಾಗಿ ಕೆಲಸಮಾಡುತ್ತವೆ ಎಂಬ ವಿವರವಾದರೆ, ಕೆರೆಗಳು ಯಾವ ರೀತಿ ಸಮುದಾಯದ ಜೀವನದ ಭಾಗವಾಗಿದ್ದವು ಎನ್ನುವುದು ಇನ್ನೊಂದು ಕಥೆ. ಪ್ರತಿಯೊಂದು ಕೆರೆಯ ಸುತ್ತಮುತ್ತ ಕೆಲವು ಹಳ್ಳಿಗಳಿರುತ್ತಿದ್ದವು. ಈ ಕೆರೆ ಆಧರಿಸಿ ಬದುಕುವ ಪ್ರತಿ ಹಳ್ಳಿಗಳಲ್ಲೂ ಬೇರೆಬೇರೆ ಜಾತಿಯ ಜನ ಒಟ್ಟಾಗಿ ಬದುಕಲು ಕೆರೆ ಕೇಂದ್ರವಾಗಿರುತ್ತಿತ್ತು. ಅಗಸ ಮಡಿವಾಳರಿಂದ ಹಿಡಿದು, ಅರ್ಚಕ ಪುರೋಹಿತ, ನೀರುಗಂಟಿ, ಮಣಿಗಾರ, ಒಕ್ಕಲಿಗ, ಲಿಂಗಾಯತ ಇತ್ಯಾದಿ ಜಾತಿಯವರಿಗೆ ತಮ್ಮ ಜೀವನಕ್ಕೆ ಕೆರೆ ಕೇಂದ್ರವಾಗಿರುತ್ತಿತ್ತು. ಕೆರೆ ತುಂಬಿದಾಗ ಗಂಗಮ್ಮನಿಗೆ ಬಾಗಿನ ಕೊಡುವುದರಿಂದ ಹಿಡಿದು ತೆಪ್ಪೋತ್ಸವ, ಜಾತ್ರೆ, ಅ? ಏಕೆ ದಿನನಿತ್ಯದ ಪೂಜೆಗೆ ಬರುವ ಗಂಗೆಯು ಈ ಕೆರೆಯ ಕೇಂದ್ರಿತವಾಗಿಯೇ ಇರುತ್ತಿದ್ದಳು. ಅನೇಕ ಪೂಜೆ-ಪುನಸ್ಕಾರ ಕಟ್ಲೆಗಳು ಈ ಕೆರೆಯ ಸುತ್ತಮುತ್ತಲೇ ನಡೆಯಬೇಕಾಗಿತ್ತು. ಅದು ಬಸವನ ಹಬ್ಬವಿರಲಿ, ಮಹಾನವಮಿಯಿರಲಿ, ಸಂಕ್ರಾಂತಿ – ದೀಪಾವಳಿಯಿರಲಿ, ಕೆರೆಯನ್ನು ಒಂದು ಬದಿಗಿಟ್ಟು ಈ ಜನರ ಜೀವನವನ್ನು ಕಲ್ಪಿಸುವುದು ಕ?ಸಾಧ್ಯವಾಗಿತ್ತು. ಈ ಕೆರೆಗಳು ನಿರಂತರವಾಗಿ ಜೀವಂತವಾಗಿದ್ದರ ಪರಿಣಾಮವಾಗಿ ಕಲ್ಯಾಣಿಗಳು, ಬಾವಿಗಳು ತುಂಬಿರುತ್ತಿದ್ದವು. ಸುತ್ತಮುತ್ತಲಿನ ಅಂತರ್ಜಲ ಸಮೃದ್ಧಿಯಾಗಿ ಅಲ್ಲಿನ ಜನಜೀವನವನ್ನು ಮತ್ತಷ್ಟು ಸಮೃದ್ಧವಾಗಿತ್ತು. ಇನ್ನೂ ಸರಿಯಾಗಿ ಹೇಳಬೇಕೆಂದರೆ ಈ ಆಚರಣೆಗಳ ಜಗತ್ತು ಸಮುದಾಯಗಳನ್ನು ಒಂದು ಗೂಡಿಸುವುದಲ್ಲದೆ ಕೆರೆಗಳನ್ನು ನಿರಂತರವಾಗಿ ಸಂರಕ್ಷಿಸಿ ಪೋಷಿಸುತ್ತಾ ಬಂದಿತ್ತು. ಸರಕಾರದ ಕಾನೂನುಗಳಿಲ್ಲದೆ ಈ ವ್ಯವಸ್ಥೆ ಬದುಕಿತ್ತು. ಅಂದರೆ ಈ ಕೆರೆಗಳ ನಿರ್ವಹಣೆಯನ್ನು ತಮ್ಮ ಆಚರಣೆಗಳ ಕೇಂದ್ರವಾಗಿ ಜನರೇ ನಿರ್ವಹಿಸುತ್ತಿದ್ದರು. ಅದಕ್ಕಾಗಿ ಯಾವುದೇ ನಿರ್ವಹಣಾ ದಾಖಲೆಗಳಾಗಲಿ, ಯೋಜನೆಗಳಾಗಲಿ ಇಲ್ಲದೇ ಈ ವ್ಯವಸ್ಥೆ ಶತಮಾನಗಳ ಕಾಲ ಬದುಕಿಯೇ ಇತ್ತು. ಈ ಆಚರಣೆಗಳು ಸಮುದಾಯಗಳನ್ನು ಹಿಡಿದಿಟ್ಟಿರಲಿಲ್ಲವೆಂದರೆ ಇ? ದೀರ್ಘ ಕಾಲ ಈ ರೀತಿಯ ಒಂದು ವ್ಯವಸ್ಥೆಯನ್ನು ನಿರ್ವಹಿಸಲು ಸಾಧ್ಯವೇ ಇರುತ್ತಿರಲಿಲ್ಲ. ಕೆರೆಗಳ ಸುತ್ತಮುತ್ತಲಿನ ಆಚರಣೆಗಳು ಕೇವಲ ಕೆರೆಗಳ ನಿರ್ಮಾಣಕ್ಕೆಂದು ರಚಿತವಾದವುಗಳಲ್ಲ. ಈ ಆಚರಣೆಗಳು ಒಂದು ಸಾಮಾಜಿಕ, ಸಾಮುದಾಯಿಕ ಜೀವನವನ್ನು ಮುಂದಿನ ತಲೆಮಾರಿಗೆ ದಾಟಿಸುವ ಸಾಧನಗಳಾಗಿದ್ದವು. ಸರಿಯಾಗಿ ಹೇಳಬೇಕೆಂದರೆ ನಮ್ಮ ಸಂಸ್ಕೃತಿಯ ಕಲಿಕೆಯನ್ನು ಈ ಆಚರಣೆಗಳ ಮೂಲಕ ನಾವು ಕಲಿಯುತ್ತಿದ್ದೆವು. ಅಂದರೆ ಇಂದು ಕೆರೆಯೊಂದನ್ನು ಕಳೆದುಕೊಳ್ಳುವುದರ ಜೊತೆಗೆ, ಅದರೊಡನೆ ನಮ್ಮ ಸಂಸ್ಕೃತಿಯ ಬೆನ್ನೆಲುಬಾದ ಆಚರಣೆಗಳನ್ನೂ ಕಳೆದುಕೊಳ್ಳುತ್ತಿದ್ದೇವೆಂದೇ ಅರ್ಥ.
ಕೆರೆಗಳ ವಿನಾಶದ ಚರಿತ್ರೆ
ಹೀಗೆ ಸಾಗುತ್ತಿದ್ದ ಸ್ವಯಂಪೂರ್ಣ ವ್ಯವಸ್ಥೆಯೊಂದರ ಮೇಲೆ ವಸಾಹತು ಆಕ್ರಮಣಗಳು ಮೊದಲ ಆಘಾತವನ್ನು ನೀಡಿದರೆ, ಬ್ರಿಟಿಷರ ಆಡಳಿತ ಅದನ್ನು ಇನ್ನಷ್ಟು ಬಲಹೀನಗೊಳಿಸಿತು. ಉದಾಹರಣೆಗೆ ಕಳೆದ ಇನ್ನೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ನಾವು ಕಟ್ಟಿರುವ ಕೆರೆಗಳೆಷ್ಟು ಎಂಬ ಪ್ರಶ್ನೆಯನ್ನು ಕೇಳಿಕೊಂಡರೆ, ಈ ವ್ಯವಸ್ಥೆ ಎ?ರ ಮಟ್ಟಿಗೆ ಅವಗಣನೆಗೆ ಒಳಗಾಗಿದೆ ಎಂಬುದು ಅರ್ಥವಾಗುತ್ತದೆ. ಹಾಗೆಯೇ ಕಳೆದ ಒಂದು ಶತಮಾನದಲ್ಲಿ ಎಷ್ಟು ಕೆರೆಯ ಏರಿ, ತೂಬುಗಳನ್ನು ಸರಿಪಡಿಸಿದ್ದೆ? ಎನ್ನುವ ಮಾಹಿತಿ ನಮ್ಮ ಆಡಳಿತ ಈ ಕೆರೆಗಳ ಮೇಲೆ ಕೊಟ್ಟ ಗಮನವನ್ನು ತೋರಿಸುತ್ತವೆ. ಸ್ವಾತಂತ್ರ್ಯಾನಂತರ ೭೦ ವರ್ಷಗಳಲ್ಲಿ ನಮ್ಮ ಕೆರೆಗಳಲ್ಲಿ ತುಂಬಿರುವ ಹೂಳಿನ ಪ್ರಮಾಣದ ಅಂಕಿ-ಅಂಶಗಳನ್ನು ನೋಡಿದ ಮೇಲೆ, ಇಂತಹ ಒಂದು ಸುಂದರ ವ್ಯವಸ್ಥೆಯನ್ನು ಎಷ್ಟು ತಾತ್ಸಾರದಿಂದ ನಿರ್ವಹಿಸಿದ್ದೇವೆಂದು ತಿಳಿಯುತ್ತದೆ.
ಇಂಥ ವ್ಯವಸ್ಥೆಯನ್ನು ನಾವು ನಿರಂತರವಾಗಿ ಕಡೆಗಣಿಸಲು ಕಾರಣವೇನು? ಹಾಗಾದರೆ ಇಂದು ಕೆರೆಗಳು ನಿಷ್ಪ್ರಯೋಜಕವೇ ಅಥವಾ ಬೇರೆನಾದರೂ ಸಮಸ್ಯೆ ಇದೆಯೇ? ಎನ್ನುವುದು ನಮ್ಮ ಮುಂದಿರುವ ಸವಾಲು. ಈ ಸವಾಲಿಗೆ ಉತ್ತರ ಕೊಡುವುದೇನೂ ಕಠಿಣವಲ್ಲ; ಯಾಕೆಂದರೆ ಕೆರೆಗಳಂತಹ ಜಲಸಂರಕ್ಷಣೆಯ ಸಾಧನಗಳು ನಿಷ್ಪ್ರಯೋಜಕವಾದವೆಂದಲ್ಲಿ ಇಂದು ದೇಶದ ತುಂಬ ಮಳೆಕೊಯ್ಲು ನೀರಿನ ಸಂರಕ್ಷಣೆಯ ತುತ್ತೂರಿ ಊದುವ ಸಂದರ್ಭವೇ ಇರುತ್ತಿರಲಿಲ್ಲ. ಹಾಗಾದರೆ ನಮ್ಮ ಕೆರೆಗಳು ಅವಸಾನದ ಅಂಚನ್ನು ತಲಪಲು ಕಾರಣವೇನು ಎಂಬ ಜಿಜ್ಞಾಸೆ ಹಾಗೆಯೆ ಉಳಿದುಬಿಡುತ್ತದೆ. ಈ ಜಿಜ್ಞಾಸೆಯನ್ನು ಕಳೆದೆರಡು ಶತಮಾನಗಳ ಕಾಲ ವಸಾಹತುಶಾಹಿ ಪ್ರಭಾವಕ್ಕೊಳಪಟ್ಟ ಭಾರತೀಯರ ಮೇಲಾದ ಪರಿಣಾಮಗಳ ಹಿನ್ನೆಲೆಯಲ್ಲಿ ವಿಶ್ಲೇ?ಣೆ ಮಾಡುವುದೇ ಅತ್ಯಂತ ಸೂಕ್ತವಾದ ಕೆಲಸವಾಗಿ ತೋರುತ್ತದೆ. ಏಕೆಂದರೆ ನಮಗೆ ತಿಳಿದಿರುವಂತೆ ವಸಾಹತುಶಾಹಿ ಎಂಬುದು ಕೇವಲ ಯಾರೋ ನಮ್ಮನ್ನು ಆಳಿದ ಕಥೆಯಲ್ಲ, ಬದಲಿಗೆ ವಸಾಹತುಶಾಹಿ ನಮ್ಮ ಪ್ರಜ್ಞೆಯ ಸ್ತರದಲ್ಲಿ,
ನಮ್ಮ ಅನುಭವವನ್ನು ದಕ್ಕಿಸಿಕೊಳ್ಳಲು ಏನೇನು ತಡೆಯೊಡ್ಡುತ್ತದೆ ಎಂಬುದನ್ನು ಗ್ರಹಿಸಿದಾಗ ಸಮಸ್ಯೆಯ ಮೂಲ ಸ್ವಲ್ಪ ಸ್ಪ?ವಾಗುತ್ತದೆ. ಈ ಹಿನ್ನೆಲೆಯಲ್ಲಿ ಕಳೆದೊಂದು ಶತಮಾನದಲ್ಲಿ ನಮ್ಮ ಜೀವನದಲ್ಲಿ ಆದ ಬದಲಾವಣೆಗಳ ನೇತ್ಯಾತ್ಮಕ ಪರಿಣಾಮಗಳನ್ನು ಕೆಳಕಂಡಂತೆ ವಿವರಿಸಿಕೊಳ್ಳಬಹುದು.
ಮೊದಲನೆಯದಾಗಿ ಭಾರತದ ವಸಾಹತುಶಾಹಿ ಪ್ರಭುತ್ವದ ಪ್ರಭಾವ ಶಿಕ್ಷಣದ ಮೂಲಕ ನಮ್ಮನ್ನು ತಲಪಲು ಪ್ರಾರಂಭಿಸಿತು. ಆ ಸಂದರ್ಭದಲ್ಲಿ ನಮ್ಮ ದೇಶದಲ್ಲಿ ಎಲ್ಲೆಡೆ, ಒಂದು ಕಡೆ ಆಧುನಿಕರಾಗುವ ಗೀಳಿದ್ದರೆ, ಇನ್ನೊಂದು ಕಡೆ ಸಮಾಜಸುಧಾರಣೆಯೆಂಬುದು ನಿರಂತರ ಮಂತ್ರವಾಗಿ ನಮ್ಮನ್ನು ಆವರಿಸತೊಡಗಿತು. ಈ ಸಮಾಜಸುಧಾರಣೆಯ ಭಾಗವಾಗಿ ನಮ್ಮೂರಿನ ಆಚರಣೆಗಳ ಪ್ರಪಂಚ, ಮೌಢ್ಯ ಅಂಧಕಾರ, ಪುರೋಹಿತಶಾಹಿ, ಜಾತಿವ್ಯವಸ್ಥೆ ಇತ್ಯಾದಿಗಳಾಗಿ ಕಾಣಿಸತೊಡಗಿದವು. ಈ ಸಮಾಜಸುಧಾರಣೆಗಳು ಹೆಚ್ಚು ಹೆಚ್ಚಾಗಿ ನಮ್ಮ ಹಳ್ಳಿಗಳನ್ನು ವ್ಯಾಪಿಸತೊಡಗಿದಾಗ ಊರಿನ ಆಚರಣೆಯ ಜಗತ್ತು ಛಿದ್ರವಾಗತೊಡಗಿತು. ಈ ಸಡಿಲವಾದ ಆಚರಣೆಯ ಜಗತ್ತಿನಲ್ಲಿ ಸಮುದಾಯದ ಆಸ್ತಿಯೆಲ್ಲವೂ ವ್ಯಕ್ತಿಗಳ ಆಸ್ತಿಯಾದರೆ, ಕೆರೆಗಳಂತಹ ಸ್ಥಳಗಳು ಸರ್ಕಾರೀ ಸ್ವಾಮ್ಯಕ್ಕೆ ಒಳಪಟ್ಟವು. ಮೊಟ್ಟ ಮೊದಲ ಬಾರಿಗೆ ಊರುಗಳೊಳಗೆ, ಒಂದು ಜಾತಿಯವರು ಇನ್ನೊಂದು ಜಾತಿಯವರೊಡನೆ ಮಾತನಾಡುವಾಗ ಸಾಮಾಜಿಕನ್ಯಾಯ, ಶೋ?ಣೆ, ಕಾನೂನು, ಜಾತಿವ್ಯವಸ್ಥೆ ಇವುಗಳೆಲ್ಲವೂ ಹಳೆಯ ವ್ಯವಹಾರಗಳನ್ನು ಒಂದು ಕಡೆ ಹಾಳುಗೆಡವಿದರೆ ಇನ್ನೊಂದೆಡೆ, ಊರಿನ ಕೆರೆಯಲ್ಲಿ ಸಣ್ಣ ಪುಟ್ಟದ್ದೇನಾದರೂ ಆಚರಣೆ ಮಾಡಬೇಕೆಂದರೆ ಪರವಾನಿಗೆ ಪಡೆಯಲು ಗ್ರಾಮ ಪಂಚಾಯತ್, ತಹಶೀಲ್ದಾರರ ಕಚೇರಿಯಿಂದ ಹಿಡಿದು ಅನೇಕ ಕಚೇರಿಗಳಿಗೆ ಅಲೆಯಬೇಕಾಗಿ ಬಂತು. ಊರಿನ ನೀರುಗಂಟಿ, ಮಣಿಗಾರರು ತಮಗೆ ಕೆರೆಯ ನಿರ್ವಹಣೆಗಾಗಿ ಕೊಟ್ಟ ಉಂಬಳಿ ಜಮೀನನ್ನು ಮಾರಿದರು. ಅರ್ಚಕರು-ಪೂಜಾರಿಗಳು ’ಉಳುವವನೇ ಹೊಲದ ಒಡೆಯ’ ಎಂಬ ಕಾನೂನಿನ ಕಾರಣ ತಮ್ಮ ಜಮೀನನ್ನು ಕಳೆದುಕೊಂಡು ದೈನಂದಿನ ಬದುಕಿಗಾಗಿ ಬದಲಿ ಯೋಚನೆ ಮಾಡಬೇಕಾದ ಸ್ಥಿತಿಗೆ ತಲಪಿದರು. ಇನ್ನು ಕೆರೆಯನ್ನೇ ಒತ್ತುವರಿ ಮಾಡಲಾಯಿತು. ಹಳ್ಳಗಳಿಂದ ಮರಳನ್ನು ತೆಗೆಯಲಾಯಿತು. ರಾಜಕಾಲುವೆಯ ತೂಬಿನಿಂದ ನೀರನ್ನು ನಿರ್ವಹಣೆ ಮಾಡುವವರಾರು ಎಂಬುದು ಯಾರಿಗೂ ಅರ್ಥವಾಗದ ಸ್ಥಿತಿ ಬಂತು. ಇವೆಲ್ಲದರ ನಡುವೆ ತುಂಬಿದ ಕೆರೆಯಲ್ಲಿ ಮೀನಿನ ನಿರ್ದಿಷ್ಟ ಕೃಷಿಯನ್ನು ನಡೆಸಲು ಇಲಾಖೆಗೆ ಸಮಸ್ಯೆ ಇದ್ದುದರಿಂದ ಮೀನುಗಾರಿಕೆ ಇಲಾಖೆಯವರ ಮೀನುಸಾಕಣೆ ವ್ಯವಸ್ಥೆಗೆ ಕೆರೆಯ ನೀರನ್ನು ನಿರಂತರವಾಗಿ ಖಾಲಿ ಮಾಡಲಾಯಿತು.
ಇಷ್ಟು ಸಾಲದೆಂಬಂತೆ ಅಧಿಕಾರ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಊರಿಗೆ ಗ್ರಾಮ ಪಂಚಾಯತಿ ಬಂದಿತು. ಈ ಗ್ರಾಮ ಪಂಚಾಯತಿಯಲ್ಲಿ ಚುನಾವಣೆಗೆ ರಾಜಕೀಯ ಪಕ್ಷಗಳು ಊರುಗಳನ್ನು ಜಾತಿಯ ಹೆಸರಿನಲ್ಲಿ ಹಂಚಿಕೊಂಡರು. ಈಗ ಊರುಗಳಲ್ಲಿ ಜಾತಿಯಾಧಾರಿತವಾಗಿ ಆ ಊರು ಯಾವ ಪಕ್ಷದ್ದೆಂದು ತೀರ್ಮಾನ ಮಾಡುವ ಸ್ಥಿತಿ ಬಂದಿತು. ಸರ್ಕಾರಗಳು ಧುತ್ತೆಂದು ನೀರಿನ ಸಮಸ್ಯೆಗಳನ್ನು ಗುರುತಿಸತೊಡಗಿದವು. ಮೊದಲಿಗೆ ಸಾಮಾಜಿಕ ಸುಧಾರಣೆ ಮತ್ತು ವಿಕೇಂದ್ರೀಕರಣದ ವಿ?ಯದಲ್ಲಿ ಒಡೆದ ಊರಿನ ಸಮುದಾಯ ಪ್ರಜ್ಞೆಯನ್ನು ಜಾಗೃತಗೊಳಿಸಲು, ’ಸಮುದಾಯ ಅಭಿವೃದ್ಧಿ ಯೋಜನೆ’ ಹೆಸರಿನಲ್ಲಿ ಕೋಟಿಗಟ್ಟಲೇ ಹಣ ಸುರಿಯತೊಡಗಿದರು. ಜೊತೆಗೆ ಈಗಾಗಲೇ ಕಳೆದುಹೋಗಿರುವ, ಜೀವಂತ ಶವವಾಗಿರುವ ಕೆರೆಗೆ ನೀರು ಹರಿಸಲು ನದಿಗಳಿಗೆ ಅಣೆಕಟ್ಟು, ಕಾಲುವೆಗಳನ್ನು ಕಟ್ಟಿ ಬೃಹತ್ತಾದ ಯೋಜನೆಗಳನ್ನು ಪ್ರಾರಂಭಿಸಲಾಯಿತು. ಇನ್ನೂ ಸರಿಯಾಗಿ ಹೇಳಬೇಕೆಂದರೆ ತಾವಾಗಿಯೇ ಕೊಂದ ಶಿಶುವನ್ನು ಈಗ ಕುಸ್ತಿಪಟುವನ್ನಾಗಿ ಮಾಡಲು ಹೊರಟಂತಿದೆ ಈ ಆಲೋಚನೆ. ಇ? ಸಾಲದೆಂಬಂತೆ ಕಳೆದೆರಡು ದಶಕಗಳಲ್ಲಿ ಕೊಳವೆಬಾವಿಯನ್ನು ಕೊಟ್ಟು, ಈಗ ಅಂತರ್ಜಲ ಪುನರುಜ್ಜೀವನಕ್ಕೆ ಬೃಹತ್ ಪ್ರಮಾಣದ ಯೋಜನೆಗಳನ್ನು ಸರ್ಕಾರಗಳು ಮಾಡುತ್ತಿವೆ! ಇದೂ ಸಾಲದೆಂಬಂತೆ ಈ ಯೋಜನೆಗಳಿಗೆ ವರ್ಲ್ಡ್ ಬ್ಯಾಂಕ್, ಐಎಂಎಫ್ಗಳಿಂದ ಸಾಲ ಪಡೆಯಲಾಗುತ್ತದೆ!
ವಸಾಹತು ಪ್ರಜ್ಞೆ, ಆಚರಣೆಗಳು ಹಾಗು ಕೆರೆಗಳು
ಒಟ್ಟಾರೆಯಾಗಿ ನಾವು ಇಂದು ಅರ್ಥವಾಗದ ಆಧುನಿಕತೆಯ ಹೆಸರಿನಲ್ಲಿ ನಮ್ಮಲ್ಲಿರುವ ಅನುಭವಜನ್ಯ ಜ್ಞಾನವನ್ನು ತಿರಸ್ಕರಿಸುತ್ತಲೇ ಇದ್ದೇವೆ. ಇನ್ನೊಂದೆಡೆ ಯಾವುದೇ ಸ್ಪ? ಗುರಿ ಇಲ್ಲದ ಪರ್ಯಾಯವೊಂದರ ಹಿಂದೆ ವಿಕಾಸದ ಹೆಸರಿನಲ್ಲಿ ಓಡುತ್ತಿದ್ದೇವೆ. ನಮ್ಮ ಹಿಂದಿನವರು ಪೋಷಿಸಿ ಬೆಳೆಸಿದ ಜ್ಞಾನವನ್ನು ಮರೆತರೆ ಏನಾಗಬಹುದೆಂಬ ಆಲೋಚನೆಯನ್ನೂ ಮಾಡದೆ ತಂತ್ರಜ್ಞಾನ, ಪ್ರಜಾತಂತ್ರ ಇತ್ಯಾದಿಗಳನ್ನು ಪಶ್ಚಿಮದಿಂದ ಯಥಾವತ್ ಅನುಕರಿಸುವ ಭರದಲ್ಲಿದ್ದೇವೆ. ಹೊಸ ಸಂಗತಿಗಳನ್ನು ಹೇಗೆ ನಮ್ಮದಾಗಿಸಿಕೊಳ್ಳಬೇಕು ಹಾಗೂ ಹೇಗೆ ನಮ್ಮತನವನ್ನು ನಾವು ಉಳಿಸಿಕೊಳ್ಳಬೇಕೆಂದು ಯೋಚಿಸದೇ ಇದ್ದ ಕಾರಣ, ನಮಗೆ ಆಗುವ ನ?ಗಳು ಕಣ್ಣಿಗೆ ಕಂಡರೂ ಅವು ನಮ್ಮ ಅನುಭವಕ್ಕೆ ಬರದಂತಾಗಿವೆ. ಇಂತಹ ಸ್ಥಿತಿಯನ್ನೇ ವಸಾಹತು ಪ್ರಜ್ಞೆ ಎನ್ನಲಾಗುತ್ತದೆ. ಈ ಪ್ರಜ್ಞೆಯು ನಮ್ಮನ್ನೇ ನಮ್ಮ ಅನುಭವಗಳಿಂದ ಬೇರ್ಪಡಿಸಿ ಯೂರೋಪಿನ ಅನುಭವದ ಜಗತ್ತನ್ನು
ನಮ್ಮದೆಂದು ಅನುಕರಿಸುವಂತೆ ಮಾಡುತ್ತದೆ. ಎಸ್.ಎನ್. ಬಾಲಗಂಗಾಧರ ಅವರು ಹೇಳುವಂತೆ, ಕಳೆದು ಎರಡು ಶತಮಾನಗಳಿಂದ ನಾವು ಭಾರತದ ಕುರಿತಾಗಿ ಯೂರೋಪಿನ ಕಥೆಗಳನ್ನು ನಿಜವಾದ ಭಾರತೀಯರ ವಿವರಣೆಯೆಂದೇ ನಂಬಿಕೊಂಡು ಬಿಟ್ಟಿದ್ದೇವೆ. ಹಾಗಾಗಿ ಪುರೋಹಿತಶಾಹಿ ಕಲ್ಪನೆ; ಬ್ರಾಹ್ಮಣರು ಇತರರನ್ನು ತುಳಿಯುವುದು; ಜಾತಿವ್ಯವಸ್ಥೆ ಇತ್ಯಾದಿಗಳಿಂದ ತುಂಬಿದ ಅತ್ಯಂತ ಅನೈತಿಕ ಸಮಾಜವೊಂದು ಭಾರತದಲ್ಲಿದೆ ಎಂಬ ಚಿತ್ರಣ ನಮಗರಿವಿಲ್ಲದೇ ನಮ್ಮ ಆಲೋಚನಾ ಜಗತ್ತಿನ ಕೇಂದ್ರವಾಗಿದೆ. ಇದು ಯೂರೋಪಿನವರಿಗೆ ದಕ್ಕಿದ ಭಾರತ. ಈ ಚಿತ್ರಣಗಳು ಭಾರತದ ಕುರಿತು ಯೂರೋಪಿನ ಅನುಭವವೇ ಹೊರತು, ಭಾರತವನ್ನು ಕುರಿತು ಯಾವುದೇ ಜ್ಞಾನವನ್ನು ನೀಡುವುದಿಲ್ಲ. ಹೆಚ್ಚೆಂದರೆ ಅದು ಯೂರೋಪಿನವರು ಭಾರತವನ್ನು ಏಕೆ ಹೀಗೆ ಅರ್ಥೈಸಿದರು ಎಂದು ಬೆಳಕು ಚೆಲ್ಲಬಹುದು. ಈ ಕಥೆಗಳಿಂದ ಪ್ರಭಾವಿತರಾದ ನಾವು ಆಧುನಿಕರಾಗಲು ನಮ್ಮ ಸಂಪ್ರದಾಯದ ಜ್ಞಾನವನ್ನು ದಾಟಿಸುತ್ತಿದ್ದ ಆಚರಣೆಗಳ ಜಗತ್ತನ್ನು ಕೊಲ್ಲುತ್ತಿದ್ದೇವೆ. ಅಂದರೆ ಕೆರೆಗಳ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ್ದ ಆಚರಣೆಗಳೇ ನಮ್ಮ ಸಾಮುದಾಯಿಕ ಜೀವನ, ಬಹುತ್ವ, ಕೆರೆಗಳ ಸಂರಕ್ಷಣೆಯ ತಂತ್ರಜ್ಞಾನ ಇತ್ಯಾದಿಗಳನ್ನು ನಮಗೆ ದೊರಕಿಸುತ್ತಿತ್ತು ಎನ್ನುವ ಅನುಭವ ಇಂದು ನಮ್ಮನ್ನಾವರಿಸಿದ ವಸಾಹತುಪ್ರಜ್ಞೆಯಿಂದ ನಮಗೆ ಕಾಣದಾಗಿದೆ. ನಮ್ಮ ಹಿರಿಯರು ಆಚರಣೆಗಳ ಮೂಲಕ ಕೆರೆಗಳನ್ನು ಉಳಿಸಿಕೊಂಡಿದ್ದರು. ಕೆರೆಗಳಿಗಾಗಿ ಆಚರಣೆಗಳನ್ನು ನಿರ್ಮಾಣ ಮಾಡಿರಲಿಲ್ಲ; ಬದಲಿಗೆ ಆಚರಣೆಗಳ ಭಾಗವಾಗಿ ಕೆರೆಗಳನ್ನು ಸಂರಕ್ಷಿಸಲಾಗುತ್ತಿತ್ತು. ಈ ಆಚರಣೆಗಳ ಜಗತ್ತು ಒಂದು ಕಡೆ ವಿಚಾರವಾದಗಳಿಂದ ಮತ್ತೊಂದು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ಛಿದ್ರಗೊಂಡಿತು. ತತ್ಪರಿಣಾಮವಾಗಿ ಕೆರೆಗಳು ಅನಾಥವಾದವು. ಇಂದು ಕೆರೆಗಳನ್ನು ಉಳಿಸಬೇಕೆಂದರೆ ಕಾನೂನು, ನಿಯಮಗಳಾಚೆಗೆ ಸಮುದಾಯದ ಪಾಲ್ಗೊಳ್ಳುವಿಕೆ ಅನಿವಾರ್ಯ. ಭಾರತದಲ್ಲಿ ಈ ಸಮುದಾಯಗಳನ್ನು ಕೇವಲ ಆಚರಣೆಗಳು ಮಾತ್ರ ಹಿಡಿದಿಡಬಲ್ಲವು.
ಮೊದಲಿಗೆ ಕಳೆದ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಚಾಲ್ತಿಯಲ್ಲಿರುವ ಸಮಾಜಸುಧಾರಣೆಯಂಥ ಕಥೆಗಳು ಮತ್ತು ನಮ್ಮ ಸಮಾಜವಿಜ್ಞಾನಗಳು ಯುರೋಪಿನ ಕಥೆಯನ್ನು ನಮಗೆ ಬಿತ್ತರಿಸಿ ಅವುಗಳನ್ನೇ ಈ ಸಮಾಜದ ನೈಜಚಿತ್ರಣವೆಂದು ವಾದಿಸಿ ನಮ್ಮ ಆಚರಣೆಯ ಜಗತ್ತನ್ನು ಘಾಸಿಗೊಳಿಸಿದಾಗ ಮೊದಲ ಬಲಿಪಶು ನಮ್ಮೂರಿನ ಕೆರೆಗಳು. ಎರಡನೆಯದಾಗಿ ಈಗಾಗಲೇ ನಾಶವಾಗುತ್ತಿದ್ದ ಕೆರೆಗಳು ಆಧುನಿಕ ಪ್ರಭುತ್ವ ಮತ್ತದರ ಕಾನೂನಿನ ಹೊಡೆತಕ್ಕೆ ಸಿಕ್ಕಿ ನಮ್ಮ ಸಮುದಾಯಗಳ ಹಿಡಿತದಿಂದ ದೂರವಾದರೆ, ಈಗ ಆಧುನಿಕ ಅಭಿವೃದ್ದಿಯ ಆಘಾತ ಈ ಕೆರೆಗಳನ್ನು ಇನ್ನಷ್ಟು ಸಮಸ್ಯೆಗೆ ದೂಡಿವೆ. ಒಟ್ಟಾರೆಯಾಗಿ ಹೇಳಬೇಕೆಂದರೆ, ಕೆರೆಗಳ ಸಂರಕ್ಷಣೆಯ ಭಾಷಣ, ಕಾನೂನುಗಳು ನಮ್ಮ ಸಮುದಾಯಗಳನ್ನು ಒಟ್ಟಿಗೆ ತರಲು ಸಾಧ್ಯವಿಲ್ಲ ಎನ್ನುವುದು ನಮ್ಮ ಅನುಭವಕ್ಕೆ ಅರ್ಥವಾಗಿದೆ. ಕೆರೆಗಳನ್ನು ಕಳೆದುಕೊಂಡರೆ, ನಾವು ಏನನ್ನು ಕಳೆದುಕೊಳ್ಳುತ್ತೇವೆ ಎನ್ನುವುದು ಒಂದು ಮುಖ್ಯ ಪ್ರಶ್ನೆ. ಈಗಾಗಲೇ ಗುರುತಿಸಿದಂತೆ, ಕೆರೆ ಸುತ್ತ ಸುತ್ತಿಕೊಂಡ ನಮ್ಮ ಜೀವನವನ್ನು ಗಮನಿಸಿದರೆ, ಕೆರೆಗಳನ್ನು ಕಳೆದುಕೊಂಡರೆ ನಮ್ಮ ಆಚರಣೆಗಳು ನಾಶವಾಗುತ್ತವೆ. ಆಚರಣೆಗಳು ನಾಶವಾದರೆ ಸಂಸ್ಕೃತಿಯ ಕಲಿಕೆ ನಾಶವಾಗುತ್ತದೆ.
ಒಂದು ಪ್ರಶ್ನೆ
ಈ ಹಿನ್ನೆಲೆಯಲ್ಲಿ ನನ್ನ ಸ್ನೇಹಿತರೊಬ್ಬರು ಹೇಳಿದ ಘಟನೆಯನ್ನು ಉಲ್ಲೇಖಿಸುವುದು ಇಲ್ಲಿ ಹೆಚ್ಚು ಸಮಂಜಸವಾಗಿದೆ. ಇತ್ತೀಚೆಗೆ ನನ್ನ ಸ್ನೇಹಿತರೊಬ್ಬರು ಖ್ಯಾತ ಚಿಂತಕ ಜಿ.ಎನ್. ದೇವಿಯವರೊಡನೆ ಭಾಷೆಗಳ ಕುರಿತು ಮಾತನಾಡುವಾಗ ಕಳೆದ ಎರಡುನೂರು ವ?ಗಳಲ್ಲಿ ನಾವು ಯಾವುದಾದರೂ ಹೊಸ ಭಾಷೆಯೊಂದನ್ನು ಸೃಷ್ಟಿ ಮಾಡಲು ಸಾಧ್ಯವಾಗಿದೆಯೆ ಎಂದು ಕೇಳಿದರಂತೆ. ಅದಕ್ಕೆ ಉತ್ತರಿಸುವಾಗ ಜಿ.ಎನ್. ದೇವಿಯವರು ನಾವು ಹೊಸ ಭಾಷೆಗಳನ್ನು ಸೃಷ್ಟಿಸುವುದಿರಲಿ, ಇರುವ ಭಾಷೆಗಳನ್ನು, ಸಂಸ್ಕೃತಿಯನ್ನು ಕೊಲ್ಲುವುದರಲ್ಲೇ ಇದ್ದೇವೆ ಎಂದರಂತೆ. ಅವರ ಮಾತನ್ನು ಒಮ್ಮೆ ಗಂಭೀರವಾಗಿ ನಾವು ಪರಿಗಣಿಸಿದರೆ ನಾವು ಏನನ್ನೂ ಸೃಷ್ಟಿಸದೇ ಕಳೆದುಕೊಂಡದ್ದೇ ಹೆಚ್ಚು ಎಂದು ಅರ್ಥವಾಗುತ್ತದೆ. ಆ ಕಾರಣಕ್ಕಾಗಿಯೆ ನಮ್ಮ ಕೆರೆಗಳ ಕಥೆಯೇನು ಭಿನ್ನವಾಗಿಲ್ಲ ಎಂದು ಅರ್ಥಮಾಡಿಕೊಳ್ಳಬಹುದು. ಈ ಹಿನ್ನೆಲೆಯಲ್ಲಿ ನಾವು ನಮ್ಮ ಕೆರೆಗಳನ್ನು ಉಳಿಸಲು ಏನನ್ನು ಮಾಡಬೇಕು ಎಂಬುದನ್ನು ಪುನರ್ವಿಮರ್ಶಿಸುವುದು ಅನಿವಾರ್ಯ. ಒಂದೊಮ್ಮೆ ನಮ್ಮ ಸಂಪ್ರದಾಯ ಆಚರಣೆಗಳನ್ನು ನಾವು ಗಂಭೀರವಾಗಿ ಪರಿಗಣಿಸದಿದ್ದರೆ ಕೆರೆಗಳ ಜೊತೆಗೆ ಇನ್ನೂ ಏನನ್ನು ಕಳೆದುಕೊಳ್ಳಲು ಹೊರಟಿದ್ದೇವೆ ಎನ್ನುವುದು ಕಾಣಿಸುತ್ತದೆ ಎಂದೆನಿಸುತ್ತದೆ. ಆ ಕಾರಣಕ್ಕಾಗಿಯೇ ನಾವು ಇಂದು ಕೇಳಿಕೊಳ್ಳಬೇಕಾಗಿರುವ ಪ್ರಶ್ನೆಯೆಂದರೆ ಕಳೆದುಕೊಳ್ಳುತ್ತಿರುವುದು ಏನನ್ನು? ಕೆರೆಗಳನ್ನೋ, ಸಂಸ್ಕೃತಿಯನ್ನೋ? ಎಂಬುದಾಗಿದೆ.
ಲೇಖಕರು ಬೆಂಗಳೂರಿನ ಜಯನಗರದಲ್ಲಿರುವ ‘ಆರೋಹಿ ಸಂಶೋಧನ ಸಂಸ್ಥೆ’ಯ ನಿರ್ದೇಶಕರು