ಇಂದಿನ ದಿನಗಳಲ್ಲಿ ಕೆರೆಗಳು ಬಹಳಷ್ಟು ಸುದ್ದಿಯಲ್ಲಿವೆ; ಆದರೆ ಅದು ತಪ್ಪು ಕಾರಣಗಳಿಗಾಗಿ ಎಂಬುದು ಬೇಸರದ ವಿಷಯ. ಒಂದು ಕಾಲದಲ್ಲಿ ಕರ್ನಾಟಕದಾದ್ಯಂತ ಕಾಡುಗಳ ಜೊತೆ ಬೆಸೆದುಕೊಂಡ ಪವಿತ್ರತಾಣಗಳಾಗಿದ್ದ ಅವು ಇಂದು ಯಾರ ಸೊತ್ತೂ ಅಲ್ಲ ಎಂಬಂತೆ ಅನಾಥವಾಗಿವೆ; ಮತ್ತು ಬಹಳಷ್ಟು ಕಡೆ ಅವುಗಳ ನೀರಿನ ವಿಷದ ಪ್ರಮಾಣ ಅತಿಹೆಚ್ಚಿನ ಮಟ್ಟ ಮುಟ್ಟಿದೆ. ಅವುಗಳಲ್ಲಿ ಇಂದು ಕುಖ್ಯಾತಿ ಪಡೆದ ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಬಹುತೇಕ ಪ್ರತಿದಿನವೂ ಸುದ್ದಿಯಲ್ಲಿವೆ. ಇಲ್ಲಿ ನಾನು ಬೆಳ್ಳಂದೂರು ಕೆರೆಯ ಬಗ್ಗೆ ಕೆಲವು ವಿ?ಯಗಳನ್ನು ಪ್ರಸ್ತಾವಿಸಬಯಸುತ್ತೇನೆ.
ಈಗ ೭೭ ವರ್ಷ ವಯಸ್ಸಿನ ನನ್ನ ತಾಯಿ ೧೯೭೦ರ ಹೊತ್ತಿಗೆ ನಾನು ಆಕೆಯ ಹೊಟ್ಟೆಯಲ್ಲಿದ್ದಾಗ ಬೆಳ್ಳಂದೂರು ಕೆರೆ ಹೇಗಿತ್ತೆಂದು ನೆನಪಿಸಿಕೊಳ್ಳುತ್ತಾಳೆ: ಆಗ ನೀರು ಸ್ವಚ್ಛ ಮತ್ತು ಶುದ್ಧವಾಗಿದ್ದು ಜನ ಅದನ್ನು ಕುಡಿಯುತ್ತಿದ್ದರಂತೆ; ಮತ್ತು ಅದು ಎಷ್ಟು ದೊಡ್ಡದು ಮತ್ತು ವಿಶಾಲವಾಗಿತ್ತೆಂದರೆ ಅದರ ಒಂದು ಕಡೆಯಿಂದ ಇನ್ನೊಂದು ತುದಿಗೆ ಹೋಗುವುದೆಂದರೆ ಅದೇ ಒಂದು ಸಂತೋ?ಕರ ಪ್ರಯಾಣವಾಗಿತ್ತು.
ಇಂದು ಬೆಳ್ಳಂದೂರು ಕೆರೆಯ ಅವಸ್ಥೆ ಎಲ್ಲಿಗೆ ಬಂದು ಮುಟ್ಟಿದೆ ಎಂದರೆ – ನೀರಿನ ಬಣ್ಣ ಕಪ್ಪಾಗಿದ್ದು ಚರಂಡಿ ನೀರಿನಂತಿದೆ; ಸಾಲದೆಂಬಂತೆ ಕೆರೆಯ ಎರಡೂ ಕೋಡಿಗಳಲ್ಲಿ ಬೆಂಕಿಯ ಜ್ವಾಲೆಯಂತಹ ನೊರೆ ಕೆಲವೊಮ್ಮೆ ಇಪ್ಪತ್ತು ಅಡಿಗಳಷ್ಟು ಎತ್ತರಕ್ಕೆ ಉಕ್ಕುತ್ತದೆ.
ಇಂದು ಬೆಳ್ಳಂದೂರು ಕೆರೆಯ ಅವಸ್ಥೆ ಎಲ್ಲಿಗೆ ಬಂದು ಮುಟ್ಟಿದೆ? ನೀರಿನ ಬಣ್ಣ ಕಪ್ಪಾಗಿದ್ದು ಚರಂಡಿ ನೀರಿನಂತಿದೆ; ಸಾಲದೆಂಬಂತೆ ಕೆರೆಯ ಎರಡೂ ಕೋಡಿಗಳಲ್ಲಿ ಬೆಂಕಿಯ ಜ್ವಾಲೆಯಂತಹ ನೊರೆ ಕೆಲವೊಮ್ಮೆ ೨೦ ಅಡಿಗಳಷ್ಟು ಎತ್ತರಕ್ಕೆ ಉಕ್ಕುತ್ತದೆ. ಈ ನೊರೆಗೆ ಕಾರಣಗಳೋ ಹಲವಾರು. ಪರಿಸರವಾದಿಗಳ ಪ್ರಕಾರ ಅದಕ್ಕೆ ಒಂದು ಕಾರಣ ಸಾಬೂನಿನ ಫಾಸ್ಫೇಟ್ (ರಂಜಕದ ಅಂಶ);
ನಮ್ಮಲ್ಲಿ ಕೆಲವರ ಅಭಿಪ್ರಾಯವೆಂದರೆ ಚರಂಡಿ ನೀರಿನೊಂದಿಗೆ ಬಂದ ತೀವ್ರ ಸ್ವರೂಪದ ಪ್ರೋಟಿನ್ ಕಾರಣ; ಸಂಸ್ಕರಿಸದೆ ಬಿಟ್ಟ ನೀರಿನೊಂದಿಗೆ ಬಂದ ಯೂರಿಯಾ ಮತ್ತಿತರ ಘಟಕಗಳ ದ್ರಾವಣದೊಂದಿಗೆ ಅಂತಹ ಪರಿಸ್ಥಿತಿ ಉಂಟಾಗಿದೆ. ಕಾರಣ ಏನೇ ಇರಲಿ, ನೊರೆ ಉಕ್ಕಿ ಹರಿಯುವುದು ನಿರಂತರ ಸಾಗಿದೆ.
ಇದನ್ನು ತಡೆಯಬೇಕಿದ್ದರೆ ಕೆರೆಗಳ ಜಾಗದ ಅತಿಕ್ರಮಣ ನಿಲ್ಲಬೇಕು. ಅದಕ್ಕಾಗಿ ಮೊದಲಿಗೆ ಕೆರೆಗಳು ಮಾತ್ರವಲ್ಲ; ಎಲ್ಲ ಸಾರ್ವಜನಿಕ ಸೊತ್ತು(ಸ್ಥಳ)ಗಳ ಸರಿಯಾದ ಸರ್ವೆ ನಡೆಯಬೇಕು. ದುರದೃ?ವೆಂದರೆ ಇಂದು ನಾವು ಎಂತಹ ಸನ್ನಿವೇಶದಲ್ಲಿ ಇದ್ದೇವೆಂದರೆ ಜಮೀನಿನ ಬೆಲೆ ಚದರ ಅಡಿ, ಚದರ ಮೀಟರ್ ಅಥವಾ ಚದರ ಗಜಕ್ಕೆ ಬದಲಾಗಿ ಚದರ ಇಂಚಿಗೆ ನಿರ್ಧರಿಸುವ ಪರಿಸ್ಥಿತಿ ಬರಬಹುದು ಎನಿಸುತ್ತದೆ. ಹಳೆಯ ಸರ್ವೆ ನಕ್ಷೆಗಳಿಗೆ ಬದಲಾಗಿ ಡಿಜಿಟಲ್ ಮ್ಯಾಪುಗಳು ಬರುತ್ತಿವೆ. ಅದರಲ್ಲಿ ಕೆರೆಯಂತಹ ಜಲಾಶಯಗಳು, ಅವುಗಳ ನೀರು ನಿಲ್ಲುವ ಸ್ಥಳ, ಕಾಲುವೆ ಮತ್ತು ಅಚ್ಚುಕಟ್ಟು ಪ್ರದೇಶಗಳನ್ನು ಯಾವ ರೀತಿ ಗುರುತಿಸಲಾಗುತ್ತಿದೆಯೋ ಹೇಳುವುದು ಕಷ್ಟ. ಅದಲ್ಲದೆ ಮುಖ್ಯವಾಗಿ ನಗರ ಪ್ರದೇಶಗಳಲ್ಲಿ ಈಚಿನ ವರ್ಷಗಳಲ್ಲಿ ಕ್ರಮೇಣ ಜಮೀನಿನ ಬಳಕೆಯ ವಿಧಾನವೇ ಬದಲಾಗಿದೆ; ಎಲ್ಲೆಂದರಲ್ಲಿ ಕಟ್ಟಡಗಳು ಮೇಲೇಳುತ್ತಿವೆ; ಇನ್ನು ಗ್ರಾಮೀಣ ಪ್ರದೇಶದಲ್ಲಿ ಕೃಷಿವಿಧಾನದ ಬದಲಾವಣೆಯ ಕಾರಣದಿಂದ ಜಮೀನಿನ ಬಳಕೆಯಲ್ಲಿ ವ್ಯತ್ಯಾಸವಾಗುತ್ತಿದೆ.
ಈ ನಡುವೆ ಕೆರೆಗಳ ಸಂರಕ್ಷಣೆಗೆ ಸಂಬಂಧಿಸಿ ಸಮಾಧಾನ ತರುವ ಒಂದು ಅಂಶ ನಮ್ಮ ಮುಂದೆ ಬಂದಿದೆ. ಈಚಿನ ಒಂದು ಮಹತ್ತ್ವದ ತೀರ್ಪು ಕಾಲುವೆ ಮತ್ತು ಕೆರೆ (ಜಲಾಶಯ) ಎರಡಕ್ಕೂ ಸಂಬಂಧಿಸಿ ’ಕಾಪುವಲಯ’ (Buffer Zone) ವನ್ನು ಘೋಷಿಸಿ, ಕಾಲುವೆಗೆ ೩೦ ಮೀಟರ್ ಮತ್ತು ಕೆರೆಗಳಿಗೆ ೭೫ ಮೀಟರ್ ಕಾಪು ವಲಯವನ್ನು ಬಿಡಬೇಕೆಂದು ಆದೇಶಿಸಿದೆ. ಹಸಿರು ನ್ಯಾಯಾಲಯದ ದೆಹಲಿ ಪೀಠವು ’ಫಾರ್ವರ್ಡ್ ಫೌಂಡೇಶನ್ ಹಾಗೂ ಇತರರು’ ಮತ್ತು ’ಮಂತ್ರಿ ಟೆಕ್ ಝೋನ್’ ನಡುವಣ ದಾವೆಯಲ್ಲಿ ಈ ತೀರ್ಪನ್ನು ನೀಡಿದ್ದು, ಪರಿಸರ ಸಂರಕ್ಷಣೆಯ ಹೋರಾಟದಲ್ಲಿ ತೊಡಗಿರುವವರಿಗೆ ಸಮಾಧಾನದ ನಿಟ್ಟುಸಿರನ್ನು ತಂದಿದೆ. ಅದೇ ವೇಳೆ ಲೇಕ್ ವ್ಯೂ ಅಪಾರ್ಟ್ಮೆಂಟ್ ಎಂದು ಕೆರೆಗಳ ಅಂಚಿನ ತಮ್ಮ ಜಮೀನನ್ನು ಮಾರುತ್ತಿದ್ದವರಿಗೆ ಮತ್ತು ಕೆರೆಗಳನ್ನು ತಮ್ಮ ಆಸ್ತಿಯ ಭಾಗವೆಂದು ವಾದಿಸುತ್ತಾ ಬಂದವರಿಗೆ ಇದು ಶಾಕ್ ನೀಡಿದೆ.
ಬೆಳ್ಳಂದೂರು ಕೆರೆಯ ಪುನರುಜ್ಜೀವನಕ್ಕೆ ಸಂಬಂಧಿಸಿ ತಜ್ಞರ ಸಮಿತಿಯೊಂದನ್ನು ರಚಿಸಲಾಗಿದ್ದು, ಅದು ಕೆರೆಯ ಅಭಿವೃದ್ಧಿಗಾಗಿ ಹಲವು ಶಿಫಾರಸುಗಳನ್ನು ಮಾಡಿದೆ. ಜಲ ಮತ್ತು ಪರಿಸರ ವ್ಯವಸ್ಥೆಯ ಪಾರಿಸರಿಕ ಆರೋಗ್ಯ, ಪರಿಸರದ ಜಲಸಂಬಂಧಿ ಜೀವವೈವಿಧ್ಯ, ಕೆರೆಗಳ ಅಂತರ್ ಸಂಬಂಧ, ಕೆರೆಯ ಭೌತಿಕ ಸ್ವರೂಪ (ಕೆರೆಯ ಅಂಚು, ದಡ ಮತ್ತು ತಳದ ವಿನ್ಯಾಸ), ನದಿ, ಜಲ ಮತ್ತು ಆರ್ದ್ರಭೂಮಿಯ ಜೈವಿಕ ವ್ಯವಸ್ಥೆಯ ಆರೋಗ್ಯಕ್ಕೆ ಬೇಕಾದ ನೀರಿನ ಗುಣಮಟ್ಟ ಸಂರಕ್ಷಣೆ ಈ ಉದ್ದೇಶಗಳಿಗಾಗಿ ಪುನರುಜ್ಜೀವನ ಮತ್ತು ಸಂರಕ್ಷಣೆ ಕಾರ್ಯತಂತ್ರಗಳನ್ನು ಅನುಸರಿಸಬೇಕಾಗುತ್ತದೆ. ಕೆರೆಗಳ ಕ್ರಮಬದ್ಧವಾದ ಸಮೀಕ್ಷೆ ಮತ್ತು ಜನಜಾಗೃತಿಗಳ ಮೂಲಕ ಅವುಗಳ ಸೂಕ್ತ ಸಂರಕ್ಷಣೆ ಮತ್ತು ನಿರ್ವಹಣಾ ಕಾರ್ಯತಂತ್ರಗಳನ್ನು ರೂಪಿಸಲು ಸಾಧ್ಯ ಎಂದು ಶಿಫಾರಸು ಅಭಿಪ್ರಾಯ ಪಟ್ಟಿದೆ.
ಪುನರುಜ್ಜೀವನದ ಯಶಸ್ಸಿಗಾಗಿ
ಕೆರೆಯ ಪುನರುಜ್ಜೀವನದ ಯಶಸ್ಸಿಗೆ ಉತ್ತಮ ಆಡಳಿತ ಅವಶ್ಯ; ಹಲವು ಸಂಸ್ಥೆಗಳಿದ್ದು ಅವುಗಳ ನಡುವೆ ಕಾರ್ಯಕ್ರಮಗಳ ಹಂಚಿಕೆಯಾಗಿ ಹೊಂದಾಣಿಕೆ ಇಲ್ಲವಾದರೆ ಅದು ಸಾಧ್ಯವಾಗದು. ಕಾನೂನು ಮತ್ತು ಆರ್ಥಿಕ ಸ್ವಾಯತ್ತತೆ ಇರುವ ಸಮಗ್ರಸ್ವರೂಪದ ಒಂದು ಸಂಸ್ಥೆಯು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಹಿಡಿತ(ಮಾಲೀಕತ್ವ)ವನ್ನು ಹೊಂದಿರಬೇಕು. ಕ್ರಮಬದ್ಧವಲ್ಲದ ನಿರ್ವಹಣೆ ಮತ್ತು ಕೆರೆಯ ವಿನಾಶಕ್ಕೆ ಕಾರಣರಾಗುವವರ (ಕೆರೆಜಾಗವನ್ನು ಒತ್ತುವರಿ ಮಾಡುವವರು ಹಾಗೂ ಸಂಸ್ಕರಿಸದ ಕೊಳಚೆನೀರು, ಹೊರಹರಿವು ಬಿಡುವುದು ಮತ್ತು ಘನತ್ಯಾಜ್ಯ ಹಾಕುವ ಮೂಲಕ ಮಾಲಿನ್ಯ ಉಂಟುಮಾಡುವವರು) ಮೇಲೆ ಕ್ರಮ ಅವಶ್ಯ. ಅತಿಕ್ರಮಣ ಮತ್ತು ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ನ್ಯಾಯಮಂಡಳಿಯಂತಹ ಪರಿಣಾಮಕಾರಿ ನ್ಯಾಯಾಂಗ ವ್ಯವಸ್ಥೆಯ ಮೂಲಕ ಶೀಘ್ರವಾಗಿ ಇತ್ಯರ್ಥಗೊಳಿಸಬೇಕು. ಮಾಲಿನ್ಯ ನಿಯಂತ್ರಣ ಮಂಡಳಿಯು ಜಲ ಕಾಯ್ದೆ ಮತ್ತು ಪರಿಸರ ಸಂರಕ್ಷಣೆ ಕಾಯ್ದೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ಭೂದಾಖಲೆಗಳನ್ನು (ವಿಶೇಷವಾಗಿ ಕೆರೆ, ಸಾರ್ವಜನಿಕ ಸ್ಥಳ, ಉದ್ಯಾನಗಳಂತಹ ಪರಂಬೋಕು ಸ್ಥಳಗಳು) ಡಿಜಿಟಲ್ ವ್ಯವಸ್ಥೆಗೆ ಒಳಪಡಿಸಬೇಕು; ಜಮೀನಿಗೆ ಸಂಬಂಧಿಸಿದ ಇಂತಹ ಮಾಹಿತಿಗಳು ಪ್ರಶ್ನೋತ್ತರಗಳ ರೀತಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರಬೇಕು. ಕೆರೆ, ಆರ್ದ್ರಭೂಮಿ, ಅಚ್ಚುಕಟ್ಟು ಹಾಗೂ ರಾಜಾಕಾಲುವೆಗಳ ಸ್ಥಳಗಳ ಅತಿಕ್ರಮಣವಾಗಿದ್ದಲ್ಲಿ ವಿಶ್ವಾಸಾರ್ಹ ನಕ್ಷೆಯ ಮೂಲಕ ಸಮೀಕ್ಷೆ ನಡೆಸಿ ಒತ್ತುವರಿಯನ್ನು ತೆರವುಗೊಳಿಸಬೇಕು. ಕೆರೆಯ ಜಾಗಕ್ಕೆ ಸರಿಯಾದ ಬೇಲಿ ಹಾಕಬೇಕು; ಮತ್ತು ಒತ್ತುವರಿಯನ್ನು ಶಿಕ್ಷಾರ್ಹ ಹಾಗೂ ಜಾಮೀನುರಹಿತ ಅಪರಾಧವನ್ನಾಗಿ ಮಾಡಬೇಕು. ಸಂಸ್ಕರಿಸದಿರುವ ತ್ಯಾಜ್ಯನೀರು ಹಾಗೂ ಕೈಗಾರಿಕಾ ತ್ಯಾಜ್ಯಗಳು ಕೆರೆಗೆ ಬಂದು ಸೇರದಂತೆ ತಡೆಯಬೇಕು. ಒಳಚರಂಡಿ ನೀರನ್ನು ವಿಕೇಂದ್ರೀಕೃತ ನೆಲೆಯಲ್ಲಿ (ವಾರ್ಡ್ಮಟ್ಟವಾದರೆ ಉತ್ತಮ) ಸಂಸ್ಕರಿಸಬೇಕು. (ಜಕ್ಕೂರು ಕೆರೆಯ ಮಾದರಿಯಲ್ಲಿ) ಸಂಸ್ಕರಿತ ಒಳಚರಂಡಿ ನೀರು ಮಾತ್ರ ಕೆರೆಗೆ ಸೇರಬೇಕು. ಒಂದು ಪ್ರದೇಶ ವಾರ್ಡ್ನಲ್ಲಿ ಒಟ್ಟಾದ ತ್ಯಾಜ್ಯ ನೀರು ಅಲ್ಲೇ ಸಂಸ್ಕರಿತವಾಗುವಂತೆ ನೋಡಿಕೊಳ್ಳಬೇಕು ಎಂದು ಶಿಪಾರಸು ಹೇಳಿದೆ.
ಕೆರೆಯ ಸಂಗ್ರಹ ಸಾಮರ್ಥ್ಯವನ್ನು ಹೆಚ್ಚಿಸುವುದು, ಅಂತರ್ಜಲ ಮರುಪೂರಣವನ್ನು ಉತ್ತಮಗೊಳಿಸುವುದು ಮತ್ತು ಸಂಸ್ಕರಿತ ನೀರು ಮತ್ತೆ ಮಲಿನಗೊಳ್ಳುವುದನ್ನು ತಪ್ಪಿಸುವುದಕ್ಕಾಗಿ ನೀರಿಗೆ ಮಡ್ಡಿಯಂತಹ ವಸ್ತುಗಳು ಸೇರದಂತೆ ನೋಡಿಕೊಳ್ಳಬೇಕು. ಡಿಟರ್ಜೆಂಟ್(ಮಾರ್ಜಕ) ಗಳ ಉತ್ಪಾದನೆಯಲ್ಲಿ ಫಾಸ್ಫೇಟ್ಗಳ ಬಳಕೆಯಾಗುವುದನ್ನು ಸೂಕ್ತ ಉಸ್ತುವಾರಿ ಸಂಸ್ಥೆಯ ಮೂಲಕ ತಡೆಯಬೇಕು; ಅದರಿಂದ ನೊರೆ ಬರುವುದನ್ನು ತಗ್ಗಿಸಬಹುದು. ಕೆರೆಯಿಂದ (ಇಚ್ಛೋರ್ನಿಯಾ ಎಸ್ಪಿ, ಅಲ್ಟರ್ನಂಥೇರಾ ಎಸ್ಪಿಯಂತಹ) ಮೈಕ್ರೋಫೈಟ್ ಕಳೆಗಳನ್ನು ಹೊರಹಾಕಬೇಕು. ಜಲಕಾಯ್ದೆ-೧೯೭೪ರ ಪ್ರಕಾರ ’ಮಾಲಿನ್ಯ ಎಸಗುವವನು ದಂಡ ತೆರಬೇಕು’ ತತ್ತ್ವವನ್ನು ಜಾರಿಗೊಳಿಸಬೇಕು. ಕೆರೆಯ ಜಲಾನಯನ ಪ್ರದೇಶದಲ್ಲಿ ಸ್ಥಳೀಯವಾದ ಜಲಸ್ನೇಹಿ ಸಸ್ಯಗಳನ್ನು ನೆಡಬೇಕು.
ಕೆರೆ ಅಥವಾ ಕೆರೆದಂಡೆಯಲ್ಲಿ ಘನತ್ಯಾಜ್ಯ ಚೆಲ್ಲುವುದನ್ನು ನಿ?ಧಿಸಬೇಕು. ಕೆರೆ ಬದಿಯ ಖಾಲಿಜಾಗದಲ್ಲಿ ಕಟ್ಟಡ ಒಡೆದ ಘನತ್ಯಾಜ್ಯ ಎಸೆಯುವುದನ್ನು ತಡೆಯಬೇಕು. ಕೆರೆಯ ನೀರನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸಬಾರದು ಎಂದು ಜಲಕಾಯ್ದೆಯು ಹೇಳುತ್ತಿದ್ದು ಅದನ್ನು ಪಾಲಿಸಬೇಕು. ಮಳೆ, ನೆರೆಗಳ ಸಂದರ್ಭದಲ್ಲಿ ಹೆಚ್ಚುವರಿ ನೀರು ಮುಕ್ತವಾಗಿ ಹರಿದು ಹೋಗುವಂತಿರಬೇಕು; ಅದಕ್ಕಾಗಿ ಮಾನವನ ಯಾವುದೇ ಹಸ್ತಕ್ಷೇಪ ಇರಬಾರದು. ಸಂಬಂಧಪಟ್ಟ ಸ್ಥಳೀಯರನ್ನು ಒಳಗೊಂಡ ಸ್ಥಳೀಯ ಕೆರೆ ಸಮಿತಿಗಳನ್ನು ರಚಿಸಿ, ಅವುಗಳ ಮೂಲಕ ಕೆರೆಗೆ ವಿಕೇಂದ್ರೀಕೃತ ನಿರ್ವಹಣೆ ಇರಬೇಕು ಎಂದು ಮುಂತಾದ ಅಂಶಗಳನ್ನು ಶಿಪಾರಸು ಒಳಗೊಂಡಿದೆ.
ಕೆರೆಯ ಅಲ್ಪಾವಧಿ ಪರಿಹಾರ ಕ್ರಮಗಳು
ಕೆರೆಯ ಸುತ್ತಮುತ್ತ ಇರುವ ಅಪಾರ್ಟ್ಮೆಂಟ್ಗಳು ಸಂಸ್ಕರಿತ ನೀರನ್ನು ಮಾತ್ರ ಕೆರೆಗೆ ಬಿಡಬೇಕು. ಸಂಬಂಧಪಟ್ಟ ರೆಸಿಡೆಂಟ್ ಎಸೋಸಿಯೇಶನ್ ವೆಬ್ಸೈಟ್ಗಳಲ್ಲಿ ಪ್ರತ್ಯೇಕ ಇಲೆಕ್ಟ್ರಿಕ್ ಮೀಟರ್ (ನೆಟ್ ಮೀಟರಿಂಗ್) ಮತ್ತು ಹೊಸ ವಿವರ ತುಂಬುವಂತಹ ವಿಧಾನಗಳನ್ನು ಅನುಸರಿಸಬೇಕು. ಪ್ರತಿಯೊಂದು ಅಪಾರ್ಟ್ಮೆಂಟಿನಿಂದ ಹೊರಗೆ ಬಂದು ಕೆರೆಗೆ ಸೇರುವ ನೀರಿನ ಗುಣಮಟ್ಟವನ್ನು ಆಯಾ ರೆಸಿಡೆಂಟ್ ಎಸೋಸಿಯೇಶನ್ನ ವೆಬ್ಸೈಟಿನಲ್ಲಿ ತೋರಿಸಬೇಕು. ನೀರು ಸಂಸ್ಕರಣ ಮತ್ತು ಒಳಚರಂಡಿ ಮಂಡಳಿಯ ನೀರು ಸಂಸ್ಕರಣ ಘಟಕದಿಂದ ನೀರು ಹೊರಹೋಗುವಲ್ಲಿ (ಅಂದರೆ ಕೆರೆಗೆ ನೀರು ಪ್ರವೇಶಿಸುವಲ್ಲಿ) ಮೇಲ್ತನಿಖೆ (ಉಸ್ತುವಾರಿ) ಕೆಮರಾಗಳನ್ನು ಅಳವಡಿಸಬೇಕು. ವಿದ್ಯುತ್ ಬಳಕೆ ವಿವರಗಳು ಮತ್ತು ಮೇಲ್ತನಿಖೆ ಕೆಮರಾ ನೀಡುವ ವಿವರಗಳು ಸಾರ್ವಜನಿಕರಿಗೆ ಲಭ್ಯವಿರಬೇಕು.
ಮಳೆನೀರಿನ ಚರಂಡಿಗೆ (ಮತ್ತು ಕೆರೆಗೆ) ಸಂಸ್ಕರಿಸದಿರುವ ಯಾವುದೇ ತ್ಯಾಜ್ಯನೀರು ಸೇರದಿರುವುದನ್ನು ಖಾತ್ರಿಪಡಿಸುವ ಸಲುವಾಗಿ ದಿಢೀರ್ ಪರಿಸರ ತಪಾಸಣಾ ತಂತ್ರಗಳನ್ನು ರೂಪಿಸಿ ಜಾರಿಗೆ ತರಬೇಕು. ಸಂಬಂಧಪಟ್ಟ ರೆಸಿಡೆಂಟ್ ಎಸೋಸಿಯೇಶನ್ಗಳು ತಪಾಸಣಾ ವರದಿಯನ್ನು ಪರಿಶೀಲಿಸಬೇಕು.
ನೊರೆ ನಿಯಂತ್ರಣ ಹೇಗೆ?
ಕೆರೆಯ ತ್ಯಾಜ್ಯ ಅಡ್ಡಕಟ್ಟೆಯ ಬಳಿ ನೀರಿನ ಹರಿವಿನ ವೇಗವನ್ನು ತಡೆಯಬೇಕು ಮತ್ತು ಅಡ್ಡಕಟ್ಟೆಯ ಬಳಿ ರ್ಯಾಂಪ್ ನಿರ್ಮಿಸುವ ಮೂಲಕ ನೀರಿನ ಹರಿವನ್ನು ನಿಯಂತ್ರಿಸಬೇಕು. ಹಾಗೂ ಮಳೆನೀರಿನ ಚರಂಡಿ, ತ್ಯಾಜ್ಯನೀರಿನ ಅಡ್ಡಕಟ್ಟೆಗಳನ್ನು ಸರಿಪಡಿಸುವುದು ಮತ್ತು ಎಲ್ಲ ಕಸಕಡ್ಡಿಗಳನ್ನು ತೆಗೆಯುವ ಮೂಲಕ ಕೆರೆಗೆ ನೀರು ಮುಕ್ತವಾಗಿ ಹರಿಯಲು ಅವಕಾಶ ಕಲ್ಪಿಸಬೇಕು.
ಡಿಟರ್ಜೆಂಟ್ಗಳು ರಂಜಕ(ಫಾಸ್ಪರಸ್)ದ ಬಳಕೆಯನ್ನು ನಿ?ಧಿಸಬೇಕು ಅಥವಾ ಮಾರುಕಟ್ಟೆಯಲ್ಲಿ ರಂಜಕಸಹಿತವಾದ ಡಿಟರ್ಜೆಂಟ್ಗಳ ಮಾರಾಟಕ್ಕೆ ತಡೆಯೊಡ್ಡಬೇಕು; ಅದಕ್ಕಾಗಿ ಕೇಂದ್ರಸರ್ಕಾರದ ಅರಣ್ಯ ಮತ್ತು ಪರಿಸರ ಸಚಿವಾಲಯ(ಎಂಓಎಫ್ಇಸಿಸಿ)ದ ಮೇಲೆ ಒತ್ತಡ ತರಬೇಕಾಗಬಹುದು. ಆಮ್ಲಜನಕಮಟ್ಟದ ಸುಧಾರಣೆಗಾಗಿ ವಾಯುವಿನ ಗುಣಮಟ್ಟದ ಸುಧಾರಣೆಗಾಗಿ ಕಾರಂಜಿಗಳನ್ನು ಅಳವಡಿಸಬೇಕಾಗುವುದಲ್ಲದೆ ಎಲ್ಲ ಅಡೆತಡೆಗಳನ್ನು ನಿವಾರಿಸಬೇಕಾಗುತ್ತದೆ. ನೀರಿನ ಹೊರಹರಿವಿನ ಮಾರ್ಗ/ಕಾಲುವೆಗಳನ್ನು ವಿಸ್ತರಿಸಿ ಅವುಗಳ ಸಂಖ್ಯೆಯನ್ನು ಹೆಚ್ಚಿಸಬೇಕಾಗುತ್ತದೆ ಎಂದು ಶಿಪಾರಸು ಹೇಳುತ್ತದೆ.
ಕೆರೆ ಮತ್ತು ಮಳೆನೀರಿನ ಚರಂಡಿಗಳ ರಕ್ಷಣೆ
ಜಲಾಶಯ ಮತ್ತು ಕಾಪು ವಲಯದ (buffer zone) ಸರ್ವೆ ಹಾಗೂ ನಕ್ಷೆ ತಯಾರಿಸುವುದರಿಂದ ಹಸಿರುಪಟ್ಟಿ (ಗ್ರೀನ್ ಬೆಲ್ಟ್), ಕೆರೆದಂಡೆ, ರಾಜಾಕಾಲುವೆ, ಮಳೆನೀರಿನ ಚರಂಡಿಗಳ ಎಲ್ಲ ಒತ್ತುವರಿಗಳನ್ನು ತೆರವುಗೊಳಿಸುವ ಮೂಲಕ ಪ್ರವಾಹದಂತಹ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟುವುದಕ್ಕೆ ಸಾಧ್ಯವಾಗುತ್ತದೆ. ಕೆ ಆಂಡ್ ಸಿ ವ್ಯಾಲಿ ಮತ್ತು ಆದ್ಯತೆ ಆಧಾರದಲ್ಲಿ ಅಗರ, ಬೆಳ್ಳಂದೂರು ಹಾಗೂ ವರ್ತೂರು ಕೆರೆಗಳ ಸಾಮಾನ್ಯ ಜಮೀನು, ಖರಾಬು ಪ್ರದೇಶ, ಕಂದಾಯ ಇಲಾಖೆ ತೋಡು, ಹೊಳೆ, ದಾರಿ, ಕಾಲುದಾರಿ (ಭೂಮಾಪನ/ಕಂದಾಯ ಇಲಾಖೆ ನಕ್ಷೆ ಪ್ರಕಾರ)ಗಳನ್ನು ಗುರುತಿಸುವುದರಿಂದ ತ್ಯಾಜ್ಯ ನೀರು ಸಂಸ್ಕರಣ ಘಟಕ ಸ್ಥಾಪಿಸಲು ಮತ್ತು ಆರ್ದ್ರಭೂಮಿ ಗುರುತಿಸಲು ಇದರಿಂದ ಅನುಕೂಲವಾಗುತ್ತದೆ.
ದೀರ್ಘಾವಧಿ ಪರಿಹಾರ ಕ್ರಮಗಳು
ಬೆಳ್ಳಂದೂರು ಕೆರೆಯ ಹೊಸ (೧೧೦ ಗ್ರಾಮಗಳು ಮತ್ತು ನಗರ ಸಭೆಗಳು) ಪ್ರಧಾನ ಪ್ರದೇಶಗಳ (core area) ಜಲಾನಯನ ಪ್ರದೇಶದ ಎಲ್ಲ ಕಡೆ ಸಂಸ್ಕರಣ ಘಟಕಗಳು (ಎಸ್ಟಿಪಿ) ಬರಲಿದ್ದು ಇವು ೨೦೨೦ ಮಾರ್ಚ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ತ್ಯಾಜ್ಯನೀರನ್ನು ಸ್ಥಳದಲ್ಲೇ ಸಂಸ್ಕರಿಸುವ ಬಗ್ಗೆ ಮತ್ತು ಕೆ ಆಂಡ್ ಸಿ ವ್ಯಾಲಿಗೆ ೬೦ ಎಂಎಲ್ಡಿ ಹಾಗೂ ಅಮ್ಮಣ್ಣಿ ಕೆರೆ ಎಸ್ಟಿಪಿಗೆ ೯೦ ಎಂಎಲ್ಡಿ ತ್ಯಾಜ್ಯನೀರನ್ನು ಪಂಪ್ ಮಾಡಲು ವಿದ್ಯುತ್ ಅಪವ್ಯಯ ಆಗುವುದನ್ನು ತಡೆಯುವ ಸಲುವಾಗಿ ಸ್ಥಳದಲ್ಲೇ ೨೧೦ ಎಂಎಲ್ಡಿ ಸಾಮರ್ಥ್ಯದ ಎಸ್ಟಿಪಿ ಅಗತ್ಯವಾಗಿದೆ. ಅದಕ್ಕಾಗಿ ಅಗರ ಮತ್ತು ಬೆಳ್ಳಂದೂರು ಕೆರೆಗಳ ನಡುವಣ ಪ್ರದೇಶದಲ್ಲಿ ಆರ್ಎಂಪಿ ೨೦೧೫ರ ಪ್ರಕಾರ ೪೦ ಎಕ್ರೆ ಬೇಕಾಗುತ್ತದೆ. ಅಲ್ಲಿನ ಜಮೀನನ್ನು ಕೆಐಎಡಿಬಿ ಈಗಾಗಲೇ ಬೇರೆಯವರಿಗೆ ಮಂಜೂರು ಮಾಡಿದ್ದು, ಅದನ್ನು ವಜಾಗೊಳಿಸುವುದು ಅನಿವಾರ್ಯವಾಗಿದೆ. ಆ ಬಗ್ಗೆ ಕಾನೂನುಕ್ರಮ ಕೈಗೊಳ್ಳಬೇಕಾಗಿದೆ.
ಈಗ ಇರುವ ಎಸ್ಟಿಪಿಗಳು ಹೇಗೆ ಕಾರ್ಯ ನಿರ್ವಹಿಸುತ್ತಿವೆ ಎಂಬ ಬಗ್ಗೆ ಸ್ವತಂತ್ರ ತಪಾಸಣೆ ನಡೆಯಬೇಕಿದ್ದು, ಕೆರೆ ಉಸ್ತುವಾರಿಸಮಿತಿಯು ಅದನ್ನು ಕೈಗೊಳ್ಳಬೇಕು.
ಕೆರೆಗಳ ಜಲಾನಯನ ಪ್ರದೇಶ (catchment area )ದಲ್ಲಿ ನಿರ್ಮಾಣಗಳಿರುವ ಆರ್ದ್ರಭೂಮಿಯ ಉದ್ದಕ್ಕೂ ವಿಕೇಂದ್ರೀಕೃತ ಹೆಚ್ಚುವರಿ ಎಸ್ಟಿಪಿಗಳನ್ನು ಸ್ಥಾಪಿಸಬೇಕಾಗುತ್ತದೆ. ಅಗತ್ಯವೆನಿಸಿದರೆ ಈ ಸಾರ್ವಜನಿಕ ಉದ್ದೇಶಕ್ಕೆ ಬೇಕಾದ ಜಮೀನನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ.
ಒಮ್ಮೆ ಇಡೀ ಕೆರೆಯನ್ನು ಸ್ವಚ್ಛಗೊಳಿಸಿ ವಿಶೇಷವಾಗಿ ಸಂಗ್ರಹವಾಗಿರುವ ಹೂಳನ್ನು ಎತ್ತಬೇಕು.
ಬೆಳ್ಳಂದೂರು, ವರ್ತೂರು ಕೆರೆಗಳ ಜಲಾನಯನ ಪ್ರದೇಶದಲ್ಲಿರುವ ಕೊಳೆಗೇರಿಗಳನ್ನು ಕೊಳೆಗೇರಿ ಮಂಡಳಿಯು ಸ್ಥಳಾಂತರಿಸಬೇಕು.
ಬೆಳ್ಳಂದೂರು ಮತ್ತು ವರ್ತೂರು ಕೆರೆಗಳ ನೀರನ್ನು ಬೆಂಗಳೂರಿಗೆ ಪೂರೈಸುವುದು ಸಾಧ್ಯವಾಗಬೇಕು ಎಂಬ ಶಿಫಾರಸನ್ನು ಕೂಡ ತಜ್ಞರ ಸಮಿತಿ ಮಾಡಿದೆ. ಇಲ್ಲಿನ ಸಂಸ್ಕರಿತ ನೀರನ್ನು ಬೃಹತ್ ನಿರ್ಮಾಣ ಕಾಮಗಾರಿ ಯೋಜನೆಗಳಿಗೆ ಒದಗಿಸುವ ಮೂಲಕ ಹೆಚ್ಚುವರಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದೂ ಅದು ಹೇಳಿದೆ.
ಜೈವಿಕ ಪರಿಹಾರ ಸಾಮರ್ಥ್ಯ
ನೈಸರ್ಗಿಕ ಸಂಸ್ಕರಣ ಪದ್ಧತಿಯೊಂದನ್ನು (ಜಕ್ಕೂರು ಕೆರೆಯಲ್ಲಿ ಮಾಡಿದಂತೆ ಆರ್ದ್ರಭೂಮಿ ಮತ್ತು ಅಲ್ಗೈ ಕೊಳಗಳ ನಿರ್ಮಾಣ) ರೂಪಿಸಬಹುದು. ಅದರಿಂದ ಈಗ ಇರುವ ಮತ್ತು ಪ್ರಸ್ತಾವಿತ ಸಾಮರ್ಥ್ಯ ಹೆಚ್ಚಾಗಿ ಮಡ್ಡಿ-ಹೂಳಿನ ಸಮಸ್ಯೆ ಪೂರ್ತಿ ನಿವಾರಣೆಯಾಗಬಹುದು; ಆ ಮೂಲಕ ಕೋಲಾರ, ಆನೇಕಲ್ ಮುಂತಾದ ಕಡೆಗಳಿಗೆ ತುಲನಾತ್ಮಕವಾಗಿ ಹೆಚ್ಚು ಸುರಕ್ಷಿತವಾದ ನೀರನ್ನು ಪೂರೈಸಬಹುದು.
ದೀರ್ಘಾವಧಿ ನಿಗಾ ಮತ್ತು ಜಾರಿ
ಪ್ರತಿಯೊಂದು ಕೆರೆಗೆ ಒಂದರಂತೆ ನಾಗರಿಕರ ’ಕೆರೆ ಉಸ್ತುವಾರಿ ಸಮಿತಿ’ಗಳನ್ನು ರಚಿಸಬೇಕು. ಓರ್ವ ನಿವೃತ್ತ ನ್ಯಾಯಮೂರ್ತಿ ಅಥವಾ ಪರಿಸರತಜ್ಞರು ಅದರ ಅಧ್ಯಕ್ಷರಾಗಬೇಕು. ಸ್ಥಳೀಯರಾದ ಐವರು ಪ್ರಮುಖ ನಾಗರಿಕರು, ಓರ್ವ ಎನ್ಜಿಓ ಪ್ರತಿನಿಧಿ, ಇಬ್ಬರು ಪ್ರಮುಖ ವೈಜ್ಞಾನಿಕ ತಜ್ಞರು, ಕೆಎಸ್ಪಿಸಿಬಿಯ ಪ್ರಾದೇಶಿಕ ಪರಿಸರ ಅಧಿಕಾರಿ, ಆಯಾ ಎಸ್ಟಿಪಿಗೆ ಸಂಬಂಧಪಟ್ಟ ಬಿಡಬ್ಲ್ಯುಎಸ್ಎಸ್ಬಿ ಕಾರ್ಯಪಾಲಕ ಇಂಜಿನಿಯರ್, ಬಿಬಿಎಂಪಿ ಕಾರ್ಯಪಾಲಕ ಇಂಜಿನಿಯರ್ (ಎಸ್ಡಬ್ಲ್ಯುಡಿ) ಮತ್ತು ಸಂಬಂಧಪಟ್ಟ ಕೆರೆಯ ಬಿಡಿಎ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆ ಸಮಿತಿಯ ಸದಸ್ಯರಾಗುತ್ತಾರೆ; ಯುಡಿಡಿ ಹಾಗೂ ಅರಣ್ಯ, ಪರಿಸರ ಇಲಾಖೆಗಳು ಇದನ್ನು ನಿರ್ವಹಿಸಬೇಕು. ಈ ಉಸ್ತುವಾರಿ ಸಮಿತಿಗಳ ಅಧಿಸೂಚನೆಯನ್ನು ಪರಿಸರ ಸಂರಕ್ಷಣಾ ಕಾಯ್ದೆ(ಕೇಂದ್ರ ಪರಿಸರ ಇಲಾಖೆ ಅಥವಾ ಕರ್ನಾಟಕ ಸರ್ಕಾರದ್ದು) ಯ ೩(೩)ರನ್ವಯ ರಚಿಸುವ ಹೊಣೆ ಯುಡಿಡಿ ಮತ್ತು ಅರಣ್ಯ ಪರಿಸರ ಇಲಾಖೆಯದ್ದು ಎಂದು ಸಮಿತಿಯ ಶಿಫಾರಸು ಹೇಳುತ್ತದೆ.
ಟಿಓಆರ್ಗಳು (ಜವಾಬ್ದಾರಿ ಮತ್ತು ಅಧಿಕಾರ) ಈ ರೀತಿ ಇರುತ್ತದೆ:
ಕೆರೆಯ ಜಲಾನಯನ ಪ್ರದೇಶದಲ್ಲಿರುವ ಎಲ್ಲ (ಖಾಸಗಿ ಮತ್ತು ಸಾರ್ವಜನಿಕ) ತ್ಯಾಜ್ಯನೀರು ಸಂಸ್ಕರಣ ಸ್ಥಾವರ (ಎಸ್ಟಿಪಿ)ಗಳ ತಪಾಸಣೆ ನಡೆಸಬೇಕು. ಇದರ ಹೊಣೆ ಕೂಡ ಯುಡಿಡಿ ಮತ್ತು ಪರಿಸರ-ಅರಣ್ಯ ಇಲಾಖೆಯದ್ದು. ಬಿಡಿಎ ಮತ್ತು ಸಂಶೋಧನ ಸಂಸ್ಥೆಗಳು ಕೆರೆ ಉಸ್ತುವಾರಿ ಸಮಿತಿ ಸದಸ್ಯರಿಗೆ ತರಬೇತಿಯನ್ನು ಹಮ್ಮಿಕೊಳ್ಳಬೇಕು ಎಂಬುದು ಸಮಿತಿಯ ಅಭಿಪ್ರಾಯವಾಗಿದೆ.
ಸಂಬಂಧಪಟ್ಟ ನಾಗರಿಕರ ಉಪಸಮಿತಿ ಅಥವಾ ಬೆಂಬಲಗುಂಪುಗಳ ಜಾಲದ ರಚನೆ:
ಚುನಾಯಿತ ಪ್ರತಿನಿಧಿಗಳು (ನಗರಪಾಲಿಕೆ ಸದಸ್ಯರು, ವಿಧಾನಸಭಾ ಸದಸ್ಯರು) ಸೇರಿದಂತೆ ಪ್ರದೇಶಕ್ಕೆ ಒಂದರಂತೆ (ಕೆರೆಗೆ ತಲಾ ಸುಮಾರು ೫-೭ ಸದಸ್ಯರು) ರಚಿಸಬೇಕು. (ನಿರ್ವಹಣೆ – ಬಿಬಿಎಂಪಿ) ಕೆರೆ ಉಸ್ತುವಾರಿ ಸಮಿತಿಗೆ ಸಂಬಂಧಪಟ್ಟ ಇಲಾಖೆಗಳು (ಬಿಡಬ್ಲ್ಯುಎಸ್ಎಸ್ಬಿ, ಕೆಎಸ್ಪಿಸಿಬಿ) ಅಗತ್ಯವಾದ ಎಲ್ಲ ಮಾಹಿತಿಗಳನ್ನು ಒದಗಿಸುವಂತೆ ಕರ್ನಾಟಕ ಸರ್ಕಾರ ಆದೇಶ ನೀಡಬೇಕು; ಮತ್ತು ಆ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡುವ ಬಗ್ಗೆ ಅನುಮತಿ ನೀಡಬೇಕು. ಕೆರೆ ಉಸ್ತುವಾರಿ ಸಮಿತಿಗಳು ಮೂರು ತಿಂಗಳಿಗೊಮ್ಮೆ ಸಭೆ ಸೇರಬೇಕು. ಯುಡಿಡಿ ಪ್ರಧಾನ ಕಾರ್ಯದರ್ಶಿಯವರು ಅದರಲ್ಲಿ ಭಾಗವಹಿಸಬೇಕು; ಕೆಲಸದಲ್ಲಿ ಆಗಿರುವ ಪ್ರಗತಿಯನ್ನು ಚರ್ಚಿಸುವ ಆ ಸಭೆಯಲ್ಲಿ ಸಂಬಂಧಪಟ್ಟ ಎಲ್ಲ ಇಲಾಖೆಗಳು ಭಾಗವಹಿಸಿ, ತಮ್ಮ ಪ್ರಗತಿ ವರದಿಗಳನ್ನು ಮಂಡಿಸಬೇಕು ಎಂದು ಶಿಫಾರಸಿನಲ್ಲಿ ಉಲ್ಲೇಖಿಸಲಾಗಿದೆ.
ಪರಿಸರ ನಿಯಮಗಳ ಅನುಷ್ಠಾನ
ಎಲ್ಲ ಕಾನೂನುಬಾಹಿರ ಚಟುವಟಿಕೆಗಳ ತಡೆಗಾಗಿ (ಬಿಬಿಎಂಪಿ, ಬಿಡಿಎ, ಅರಣ್ಯ ಇಲಾಖೆ, ಕೆಎಲ್ಸಿಡಿಎ ಮುಂತಾದವುಗಳ) ಕಾನೂನು ವಿಭಾಗಗಳನ್ನು ಬಲಪಡಿಸಬೇಕು; ಮತ್ತು ಪ್ರಕರಣಗಳ ಶೀಘ್ರ ವಿಲೇವಾರಿ, ಅತಿಕ್ರಮಣಕಾರರನ್ನು ಎಬ್ಬಿಸುವುದು ಹಾಗೂ ಮಾಲಿನ್ಯ ಎಸಗುವವರಿಗಾಗಿ ದಂಡ ವಿಧಿಸುವ ಬಗ್ಗೆ ಚುರುಕು ಕಾರ್ಯಾಚರಣೆ ವಿಧಾನವನ್ನು ರೂಪಿಸಬೇಕು.
ಈ ಕೆರೆಗಳ ಜಲಾನಯನ ಪ್ರದೇಶದಲ್ಲಿ ಬೃಹತ್ ಯೋಜನೆಗಳು ಕಾರ್ಯಗತವಾಗುವಾಗ, ಯಾವುದೇ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ವಿಶೇಷ ಎಚ್ಚರ ವಹಿಸಬೇಕು; ಯುಡಿಡಿ ಇದರ ಹೊಣೆ ವಹಿಸಬೇಕು ಎಂಬುದು ಸಮಿತಿಯ ಶಿಫಾರಸು.
ಸಂಶೋಧನೆ – ಶಿಫಾರಸುಗಳು:
ಬೆಳ್ಳಂದೂರು ಮತ್ತು ವರ್ತೂರು ಎರಡೂ ಕೆರೆಗಳ ಒಳಹರಿವು ಮತ್ತು ಹೊರಹರಿವುಗಳನ್ನು (ಆಯಾ ಸ್ಥಳಗಳಲ್ಲಿ) ಅಂದಾಜಿಸಲು ಸಂಶೋಧನ ಯೋಜನೆಯನ್ನು ಜಾರಿಗೊಳಿಸಬೇಕು. ಮಳೆನೀರು, ಇತರ ಕಾಲದ ತ್ಯಾಜ್ಯನೀರಿನ ಹರಿವು, ಹೊರಹೋಗುವ ನೀರು, ಅತಿಕ್ರಮಣದ ವೇಗ, ಹೂಳು ಸಂಗ್ರಹ ಮುತಾದವುಗಳನ್ನು ಕೂಡ ಅದರಲ್ಲಿ ಗಮನಿಸಬೇಕು. ಇದರ ವೆಚ್ಚವನ್ನು ಬಿಡಬ್ಲ್ಯುಎಸ್ಎಸ್ಬಿ ಮತ್ತು ಸಂಶೋಧನ ಸಂಸ್ಥೆಗಳು ಭರಿಸಬೇಕು. ಕೆರೆಗಳಿಗೆ ಒಂದು ಸಮಗ್ರ ಜಲಸಂಬಂಧಿ – ಜಲರಾಸಾಯನಿಕ – ಪಾರಿಸರಿಕ ಮಾದರಿಯನ್ನು ರೂಪಿಸುವ ಬಗ್ಗೆ ಸಂಶೋಧನ ಯೋಜನೆಯನ್ನು ಹಾಕಿಕೊಳ್ಳಬೇಕು; ಜಾರಿಗೊಳಿಸಲಾದ ವಿವಿಧ ಕ್ರಮಗಳು ಬೀರಿದ ಪರಿಣಾಮಗಳನ್ನು ಅದರಿಂದ ಮುಂಚಿತವಾಗಿ ತಿಳಿಯಬಹುದು.
ಕೆರೆಯಲ್ಲಿ ಉಕ್ಕುವ ನೊರೆಯ ರಾಸಾಯನಿಕ ಮತ್ತು ಜೈವಿಕ ಸ್ವರೂಪದ ಬಗ್ಗೆ ಅಧ್ಯಯನ ಮಾಡಲು ಸಂಶೋಧನ ಯೋಜನೆಯನ್ನು ಕೈಗೆತ್ತಿಕೊಳ್ಳಬೇಕು. ಅದು ಮೇಲಕ್ಕೆ ಉಕ್ಕುವ ಕಾರಣಗಳನ್ನು ಕಂಡುಹಿಡಿಯಬೇಕು. ಮತ್ತು ಪರಿಹಾರ ಕ್ರಮಗಳನ್ನು ಸೂಚಿಸಬೇಕು. ಇದರ ಹೊಣೆ ಕೆಎಸ್ಪಿಸಿಬಿ ಮತ್ತು ಸಂಶೋಧನ ಸಂಸ್ಥೆಗಳದ್ದು.
ಗಮನಿಸಿ: ನೊರೆ, ದುರ್ವಾಸನೆ, ವಿಪರೀತವಾಗಿ ಬೆಳೆದ ಕಳೆ ಈ ಸಮಸ್ಯೆಗಳಿಗೆ ಕಡಮೆ ವೆಚ್ಚದ ಕಾರ್ಯಯೋಗ್ಯ ಪರಿಹಾರಗಳನ್ನು ತಿಳಿಯಲು ಒಂದು ಆಸಕ್ತಿಯ ಅಭಿವ್ಯಕ್ತಿ (Expression of Interest )ಗೆ ಕರೆಕೊಡಬಹುದು. ಬೆಳ್ಳಂದೂರು ಕೆರೆಗೆ ಹರಿಯವ ತ್ಯಾಜ್ಯನೀರಿನ ಗುಣಮಟ್ಟ ಹಾಗೂ ಕೆರೆನೀರಿನ ಆಮ್ಲಜನಕ ಪ್ರಮಾಣದ ಸುಧಾರಣೆ ಬಗ್ಗೆ ಕೂಡ ಜನರ ಸಲಹೆ ಪಡೆಯಬಹುದು.
(ಕನ್ನಡಕ್ಕೆ: ಎಚ್. ಮಂಜುನಾಥ್ ಭಟ್)