ಈಶ್ವರನ ವಾಕ್ಯವು ನಮ್ಮ ಕಿವಿಗೆ ಬೀಳಬೇಕಾದರೆ ನಾವು ವ್ಯವಹಾರದ ಗದ್ದಲವನ್ನು ಕಡಮೆ ಮಾಡಿಕೊಳ್ಳಬೇಕು. ನಮಗೆ ದಿನದಿನವೂ ಒದಗುತ್ತಿರುವ ಸುಖದುಃಖಗಳ ಯೋಚನೆಯನ್ನು ಒಂದಿ? ಬದಿಗಿಟ್ಟು ಚಿತ್ತವಿಟ್ಟು ನಮ್ಮೊಳಗೇ ಕೇಳುವ ಅಭ್ಯಾಸವನ್ನು ಮಾಡಿಕೊಳ್ಳಬೇಕು.
ಈಶ್ವರನ ವಾಕ್ಯವೆಂದರೆ ಒಂದು ಬಗೆಂii ಧ್ವನಿಯಲ್ಲ. ಯಾವುದೋ ತಪಸ್ಸನ್ನು ಮಾಡಿದರೆ ಆ ಬಗೆಯ ಆಕಾಶವಾಣಿಯು ಕೇಳಬರುತ್ತದೆಯೆಂದೇನೂ ಅಭಿಪ್ರಾಯವಲ್ಲ. ಬಹುದೂರದಲ್ಲಿ ಮಾತನಾಡಿದವರ ಧ್ವನಿಯನ್ನು ಭೌತಿಕಶಾಸ್ತ್ರಜ್ಞರು ತಂತಿಯಿಲ್ಲದ ಯಂತ್ರವಿಶೇ?ದಿಂದ ಗ್ರಹಿಸುವ ಹಾಗೆ, ನಮ್ಮಲ್ಲಿರುವ “ಮನಸ್ಸಾಕ್ಷಿ” ಎಂಬ ಯಂತ್ರವನ್ನು ಉಪಯೋಗಿಸಿಕೊಂಡು ಕೇಳಿದರೆ ನಮಗೆ ಆಗುವ ಪ್ರೇರಣೆಯೇ ಈಶ್ವರವಾಕ್ಯ.
ಸಾಮಾನ್ಯವಾಗಿ ನಮಗೆ “ಇದು ಬೇಕು, ಇದು ಬೇಡ; ಬೇಕಾದ್ದನ್ನು ಮಾಡು, ಬೇಡವಾದದ್ದನ್ನು ಮಾಡದಿರು” ಎಂಬ ರೀತಿಯಲ್ಲಿ ಪುನಃಪುನಃ ಪ್ರೇರಣೆಯಾಗುತ್ತಿರುತ್ತದೆ. ಈ ಪ್ರೇರಣೆಯನ್ನು ಬೆಳೆಯಿಸಿಕೊಂಡೇ ನಾವು ರಾಗದ್ವೇಷಗಳ ಬಲೆಯಲ್ಲಿ ಸಿಕ್ಕಿ ನರಳುತ್ತಿರುವೆವು. ಇದಕ್ಕೆ ’ಆಸುರಸಂಪತ್ತಿನ ವಾಣಿ’ ಎಂದು ಹೆಸರಿಡಬಹುದು.
ಯಾವನು ಆಸುರವಾಣಿಯನ್ನು ಹಿಮ್ಮೆಟಿಸಿ ದೈವವಾಣಿಯನ್ನು ಆಲೈಸುತ್ತಾ ಅದರ ಹಿತೋಪದೇಶವನ್ನು ಆಚರಣೆಗೆ ತರುವುದಕ್ಕೆ ಪ್ರಯತ್ನಿಸುವನೋ ಅವನು ಈಶ್ವರನ ಪ್ರೇಮರಾಜ್ಯಕ್ಕೆ ಸೇರಿಕೊಂಡವನಾಗುವನು. ಅವನನ್ನು ಸರಿಯಾದ ಹಾದಿಯಲ್ಲಿ ನಡೆಯಿಸುವುದಕ್ಕೂ ಆ ಹಾದಿಯಲ್ಲಿ ಅವನ ಯೋಗಕ್ಷೇಮವನ್ನು ನೋಡಿಕೊಳ್ಳುವುದಕ್ಕೂ ಕೊನೆಗೆ ಆನಂದದ ದಿವ್ಯಭವನವನ್ನು ಮುಟ್ಟಿಸುವುದಕ್ಕೂ ಈಶ್ವರನು ಸಿದ್ಧನಾಗಿರುತ್ತಾನೆ. ಅದಕ್ಕಾಗಿಯೇ ಆತನು ನಮ್ಮೆಲ್ಲರ ಹೃದಯದಲ್ಲಿಯೂ ನೆಲೆಸಿರುತ್ತಾನೆ.
“ಪರಮೇಶ್ವರನೆ, ನಿನ್ನ ವಾಣಿಯು ನನ್ನ ಕಿವಿಗೆ ಬೀಳಲಿ, ನಿನ್ನ ಮಾರ್ಗದಲ್ಲಿ ನಾನು ನಡೆಯುವಂತಾಗಲಿ; ನಾನು ನಿಮಿತ್ತಮಾತ್ರನಾಗಿದ್ದುಕೊಂಡು ನಿನ್ನ ಸಂಕಲ್ಪವು ನನ್ನ ಮೂಲಕ ನೆರವೇರುವಂಥ ಸುಯೋಗವನ್ನು ಅನುಗ್ರಹಿಸು. ನನ್ನ ಕರ್ಮೇಂದ್ರಿಯ-ಜ್ಞಾನೇಂದ್ರಿಯಗಳನ್ನೆಲ್ಲ ನಿನಗೆ ಅರ್ಪಿಸಿದ್ದೇನೆ. ಅವುಗಳನ್ನು ನಿನ್ನ ಸೇವೆಗೆ ಪ್ರಚೋದಿಸುವವನಾಗು. ನೀನು ಎಲ್ಲರಲ್ಲಿಯೂ ಇರುವೆಯಾದ್ದರಿಂದ ಯಾವ ಕೆಲಸವನ್ನು ಮಾಡುತ್ತಿದ್ದರೂ ನಿನ್ನ ಆರಾಧನೆಯೇ ಅದು ಎಂಬ ಬುದ್ಧಿನಿಶ್ಚಯವನ್ನು ನನಗೆ ದಯಪಾಲಿಸು” ಎಂದು ಪ್ರತಿದಿನವೂ ಭಗವಂತನನ್ನು ಪ್ರಾರ್ಥಿಸಿಕೊಳ್ಳಿರಿ.
ಕೃಪೆ: ’ಅಧ್ಯಾತ್ಮ ಪ್ರಕಾಶ’ ಮಾಸಪತ್ರಿಕೆ