ಜಿತೇಂದ್ರಿಯತ್ವಂ ವಿನಯಸ್ಯ ಕಾರಣಂ ಗುಣಪ್ರಕರ್ಷೋ ವಿನಯಾದವಾಪ್ಯತೇ|
ಗುಣಾಧಿಕೇ ಪುಂಸಿ ಜನೋನುರಜ್ಯತೇ ಜನಾನುರಾಗಪ್ರಭವಾ ಹಿ ಸಂಪದಃ||
– ಭಾರವಿ : ಕಿರಾತಾರ್ಜುನೀಯ
“ಸ್ವನಿಯಂತ್ರಣವು ಅತ್ಯಾವಶ್ಯಕವೆಂಬ ಕಾರಣದಿಂದಲೇ ವಿನಯವು ಪ್ರಶಂಸೆಯನ್ನು ಪಡೆದುಕೊಂಡಿರುವುದು. ಎಲ್ಲ ಸದ್ಗುಣಗಳ ಮೂಲವು ವಿನಯಶೀಲತೆ. ಈ ಸದ್ಗುಣಗಳಿರುವ ವ್ಯಕ್ತಿಯನ್ನೇ ಇತರರು ಆದರಿಸುವುದು. ಇತರರ ಆದರಣೆಯಿಂದಲೇ ಎಲ್ಲ ಇಷ್ಟಸಿದ್ಧಿಗಳೂ ಸಾಧ್ಯವಾಗುವುದು.”
ಒಳ್ಳೆಯ ವ್ಯಕ್ತಿಗುಣಗಳಲ್ಲಿ ಎರಡು ವರ್ಗಗಳು ಇವೆ. ಒಂದು ವರ್ಗದವು ವ್ಯವಹಾರಧರ್ಮಕಾರಣದಿಂದ ಅನಿವಾರ್ಯವೂ ಅನುಲ್ಲಂಘ್ಯವೂ ಆದವು. ಇನ್ನೊಂದು ವರ್ಗದವು ಅಪೇಕ್ಷಣೀಯ ಸ್ತರದವೇ ಆದರೂ ಪರಿಣಾಮದೃಷ್ಟಿಯಿಂದ ಮಹತ್ತ್ವದವು. ವಿನಯ ಅಥವಾ ವಿನಮ್ರತೆ ಈ ಎರಡನೇ ವರ್ಗಕ್ಕೆ ಸೇರಿರುವುದೆನ್ನಬಹುದು. ಇದರಿಂದ ಆಗುವ ಉಪಕಾರವೆಂದರೆ ಪರಸ್ಪರ ವ್ಯವಹಾರಗಳನ್ನು ಸುಗಮಗೊಳಿಸುವುದು. ಅಧಿಕಾರಪ್ರಜ್ಞೆಯಿಂದ ಸೆಟೆದು ನಿಲ್ಲುವುದಕ್ಕಿಂತ ಹೊಂದಾಣಿಕೆಯ ಎಂದರೆ ನಮ್ರತೆಯ ಮಾರ್ಗವು ಹಿತಕರವೆಂಬುದು ಲೋಕಾನುಭವ.
ದಾರ್ಶನಿಕ ಸಾಹಿತ್ಯದಲ್ಲಿ ಇದಕ್ಕೆ ಒಂದು ದೃಷ್ಟಾಂತ ಲಭ್ಯವಿದೆ. ಹೂವು- ಹಣ್ಣುಗಳನ್ನು ತಳೆಯುವ ಗಿಡ-ಮರಗಳ ವೈಭವ ಆ ನಿರ್ದಿ? ಕಾಲಾವಧಿಯದು. ಆ ಅವಧಿ ಮುಗಿದ ಮೇಲೆ ಆ ಗಿಡ-ಮರಗಳು ಖಿನ್ನವಾಗುತ್ತವೆ, ಮ್ಲಾನವಾಗುತ್ತವೆ. ಇನ್ನೊಂದು ವರ್ಗದ ಮರಗಳು ಹಸಿರಿಗಾಗಿಯೆ ಬದುಕಿರುತ್ತವ?. ಇವು ಕಳೆಗುಂದುವ ಪ್ರಮೇಯವೇ ಬರುವುದಿಲ್ಲ; ಸದಾ ಆನಂದದಿಂದ ತಲೆಯೆತ್ತಿ ಮೆರೆಯುತ್ತಿರುತ್ತವೆ, ಕಾಂತಿಯಿಂದಿರುತ್ತವೆ! ಯಾರ ಮೇಲಾದರೂ ಪ್ರಭಾವ ಬೀರಬೇಕೆಂಬ ಆಕಾಂಕ್ಷೆಯೇ ಇವಕ್ಕೆ ಇರುವುದಿಲ್ಲ.
ವಿಧಿಯು ನಮಗೆ ಕಲ್ಪಿಸಿರುವ ಸನ್ನಿವೇಶವನ್ನು ನಮ್ರತೆಯಿಂದ ಸ್ವೀಕರಿಸಿ ಅದಕ್ಕೆ ಹೊಂದಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುವುದರಲ್ಲಿ ನೆಮ್ಮದಿ ಇರುತ್ತದೆ.