ಹಲವೊಮ್ಮೆ ಅಪರಾಧ ಪ್ರಕರಣಗಳಲ್ಲಿ ತಾಂತ್ರಿಕ ಕಾರಣಗಳಿಂದ ಆಪಾದಿತರು ನಿರಪರಾಧಿಗಳೆಂದು ಘೋಷಿತರಾಗುವುದು ವಿರಳವಲ್ಲವಾದರೂ ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸದಲ್ಲಿಯೆ ಅತಿದೊಡ್ಡದೆಂಬ ಕುಖ್ಯಾತಿಗೆ ಪಾತ್ರವಾಗಿದ್ದ ಮತ್ತು ಯುಪಿಎ ಅಧಿಕಾರಾವಧಿಯ ಇದೇ ನಮೂನೆಯ ಅನ್ಯ ’ಸಾಧನೆ’ಗಳನ್ನೆಲ್ಲ ಹಿಂದಿಕ್ಕಿದ್ದ ೨-ಜಿ ಸ್ಪೆಕ್ಟ್ರಂ ಹಗರಣ ನಡೆಯಿತೆನ್ನಲು ಆಧಾರಗಳಿಲ್ಲವೆಂದು ಹೇಳಿ ಆಗಿನ ದೂರಸಂಪರ್ಕ ಸಚಿವ ಎ. ರಾಜಾ ಮತ್ತು ಎಂ. ಕರುಣಾನಿಧಿಯವರ ಪುತ್ರಿ ಕನಿಮೋಳಿ ಸೇರಿದಂತೆ ಎಲ್ಲ ಆಪಾದಿತರೂ ನಿರ್ದೋಷಿಗಳೆಂದು ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಕಳೆದ (೨೦೧೭) ಡಿಸೆಂಬರ್ ೨೧ರಂದು ತೀರ್ಪನ್ನಿತ್ತಿರುವುದು ಇಡೀ ದೇಶಕ್ಕೇ ಅಚ್ಚರಿಯನ್ನೂ ಆಘಾತವನ್ನೂ ತಂದಿದೆ. ಸ್ಪೆಕ್ಟ್ರಂ ಹಂಚಿಕೆ ಸಕ್ರಮವಾಗಿರಲಿಲ್ಲವೆಂದು ಸರ್ವಶ್ರೇಷ್ಠ ನ್ಯಾಯಾಲಯ ೨೦೧೨ರಷ್ಟು ಹಿಂದೆಯೇ ಹೇಳಿರುವುದು, ಈಗಲೂ ಜಾರಿ ನಿರ್ದೇಶನಾಲಯವು ದೆಹಲಿ ಉಚ್ಚನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುವುದು ಮೊದಲಾದ ಹಿನ್ನೆಲೆಗಳಿದ್ದರೂ ಸಿಬಿಐ ನ್ಯಾಯಾಲಯದ ತೀರ್ಪು ಈಗಿನ ನ್ಯಾಯಾಂಗವ್ಯವಸ್ಥೆಯ ಕೆಲವು ಅಪರ್ಯಾಪ್ತತೆಗಳೂ ಹಿಂದೆಯೂ ಹಲವು ಬಾರಿ ಪ್ರಕಾಶಗೊಂಡಿರುವ ಸಿಬಿಐ ತನಿಖಾ ವ್ಯವಸ್ಥೆಯ ನಿರ್ವೀರ್ಯತೆಯೂ ಮತ್ತೊಮ್ಮೆ ಸಾಬೀತುಗೊಂಡಂತಾಗಿದೆ. ಅನರ್ಹ ಕಂಪೆನಿಗಳಿಗೆ ಪರವಾನಿಗೆ ನೀಡಿಕೆ, ಮೊದಲು ಬಂದವರಿಗೆ ಆದ್ಯತೆ ನೀಡುತ್ತಿದ್ದ ರೂಢಿಯ ಉಲ್ಲಂಘನೆ ಮೊದಲಾದ ಭ್ರಷ್ಟಾಚರಣ ಸರಣಿಗಳೇ ಹಿಂದೆ ಬಯಲಾಗಿವೆ. ರೂ. ೧.೭೬ ಲಕ್ಷ ಕೋಟಿ ಅಂದಾಜು ಪ್ರಮಾಣದ ಈ ಪರ್ವತೋಪಮ ಅವ್ಯವಹಾರವನ್ನು ಶೋಧಿಸಲು ಏಳು ವ?ಗಳಾದರೂ ಸಿಬಿಐ ಶಕ್ತವಾಗಲಿಲ್ಲವೆಂದರೆ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಗ್ರಂಥಾಕ್ಷರಾನುಸರಣೆಯ? ಸತ್ಯಶೋಧನೆಯ ಹೊಣೆಗಾರಿಕೆಯೂ ನ್ಯಾಯಾಂಗಕ್ಕೆ ಇದೆಯೆಂಬ ಮೂಲತಥ್ಯವನ್ನು ಅಲಕ್ಷಿಸಿದಲ್ಲಿ ತೀವ್ರ ಅರಾಜಕತೆಯುಂಟಾಗುವ ಸಂಭವ ಉಂಟಾದೀತು. ಹಾಗೆ ಆಗದಿರಲೆಂದು ಆಶಿಸೋಣ.
ನ್ಯಾಯ ವಿಡಂಬನೆ
Month : February-2018 Episode : Author :