ಎಲ್ಲ ಅಡಿಗೆಗೂ ಒಂದು ಮುಖ್ಯ ಅವಲಂಬವಾದ ಉಪ್ಪೇ ತನ್ನ ವಿಶಿಷ್ಟರುಚಿಲಕ್ಷಣವನ್ನು ಕಳೆದುಕೊಂಡುಬಿಟ್ಟರೆ ಬದುಕು ಮುಂದುವರಿಯುವುದು ಹೇಗೆ? – ಎಂಬುದು ಆಂಗ್ಲಭಾಷೆಯ ಸಾಮತಿ. ನಮ್ಮ ಸ್ಮೃತಿಗಳ ಒಂದು ಮಾರ್ಮಿಕ ಸೂತ್ರೀಕರಣ “ಧರ್ಮೋ ರಕ್ಷತಿ ರಕ್ಷಿತಃ” ಎಂದು. ನಾವು ಧರ್ಮವನ್ನು ರಕ್ಷಿಸಿದರೆ ಧರ್ಮವು ನಮ್ಮನ್ನು ರಕ್ಷಿಸುತ್ತದೆ – ಎಂಬುದು ತುಂಬ ಅರ್ಥಪೂರ್ಣ ನಿರ್ದೇಶನ. ಇದರ ಅರ್ಥ ಧರ್ಮಕ್ಕೆ ರಕ್ಷಣೆಯ ಆವಶ್ಯಕತೆ ಇದೆ ಎಂದಲ್ಲ. ಧರ್ಮವು ರಕ್ಷಿತವಾಗಿದ್ದಲ್ಲಿ ಅದರ ಫಲಾನುಭವಿಗಳು ನಾವೇ. ನಮ್ಮ ಭದ್ರತೆ ಬೇಕಾದಲ್ಲಿ ನಾವು ಧರ್ಮವನ್ನು ರಕ್ಷಿಸಿರಿಸಬೇಕು. ನಾಗರಿಕ ಜೀವನದ ತಳಹದಿ ಇದು. ಯಾವುದನ್ನು ಬೇಕಾದರೂ ಭಂಜಿಸುವ ಹಕ್ಕು ನಮ್ಮದು ಎಂಬ ನಿಲವು ಅರಾಜಕತೆಯಲ್ಲಷ್ಟೇ ಪರ್ಯವಸಾನಗೊಂಡೀತು. ಯಾವುದೇ ವ್ಯವಸ್ಥೆಯಲ್ಲಿ ಒಂದು ಪ್ರಶ್ನಾತೀತ ನಿರ್ಣಾಯಕ ಅಧಿಕಾರಸ್ಥಾನ ಇರಲೇಬೇಕಾಗುತ್ತದೆ. ಆ ಅಂತಿಮ ಸ್ಥಾನವನ್ನೂ ದುರ್ಬಲಗೊಳಿಸಿದರೆ ಅನವಸ್ಥೆ ಏರ್ಪಡುತ್ತದೆ. ಈ ಕಾರಣದಿಂದ ಇತ್ತೀಚಿನ ಸರ್ವೋಚ್ಚ ನ್ಯಾಯಾಲಯ ವಿದ್ಯಮಾನಗಳು ವಿಚಾರವಂತರನ್ನೆಲ್ಲ ತಲ್ಲಣಗೊಳಿಸಿವೆ.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರ ಕಾರ್ಯರೀತಿ ಅಸಮರ್ಪಕವಾಗಿದೆ ಎಂದು ಅವರ ಸಹ- ನ್ಯಾಯಾಧೀಶರಾದ ಜೆ. ಚಲಮೇಶ್ವರ್, ರಂಜನ್ ಗೋಗೊಯ್, ಎಂ.ಬಿ. ಲೋಕೂರ್, ಕುರಿಯನ್ ಜೋಸೆಫ್ – ಈ ನಾಲ್ವರು ಕಳೆದ (೨೦೧೮) ಜನವರಿ ೧೨ರಂದು ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಸುದ್ದಿಗೋಷ್ಠಿಯಲ್ಲಿ ಹೊರಹಾಕಿದುದು ಸಾರ್ವಜನಿಕರಿಗೆ ಇನ್ನಷ್ಟು ದಿಗ್ಭ್ರಮೆ ತಂದಿದೆ.
ಅಸಮಾಧಾನ ಕಾರಣಗಳು
ಮಹತ್ತ್ವದ ಪ್ರಕರಣಗಳನ್ನು ಆವರ್ತನಕ್ರಮದಲ್ಲಿ ನಾಲ್ಕು ಪೀಠಗಳಿಗೆ ವಹಿಸದೆ ಮುಖ್ಯ ನ್ಯಾಯಾಧೀಶಪೀಠದಲ್ಲೇ ಉಳಿಸಿಕೊಳ್ಳಲಾಗುತ್ತಿದೆ, ಪ್ರಕರಣಗಳನ್ನು ಪೀಠಗಳಿಗೆ ವಹಿಸುವುದರಲ್ಲಿ ಹಾಗೂ ಸರ್ವೋಚ್ಚ ಮತ್ತು ರಾಜ್ಯ ಉಚ್ಚನ್ಯಾಯಾಲಯಗಳ ನ್ಯಾಯಾಧೀಶರ ನೇಮಕಾತಿಯಲ್ಲಿಯೂ ವರ್ಗಾವಣೆಗಳಲ್ಲಿಯೂ ಪಾರದರ್ಶಕತೆ ಇಲ್ಲ, ಕೆಲವು ಮಹತ್ತ್ವದ ಪ್ರಕರಣಗಳನ್ನು ನಾಲ್ಕು ಮುಖ್ಯ ಪೀಠಗಳಲ್ಲೊಂದಕ್ಕೆ ವಹಿಸದೆ ಸಣ್ಣ ಪೀಠಗಳಿಗೆ ನೀಡಲಾಗುತ್ತಿದೆಯಲ್ಲದೆ ಇಂತಹ ಕೆಲವು ಪ್ರಕರಣಗಳಲ್ಲಿ ಮುಖ್ಯನ್ಯಾಯಾಧೀಶರೇ ನೇತೃತ್ವ ವಹಿಸುತ್ತಿದ್ದಾರೆ; – ಇವು ಚಲಮೇಶ್ವರ್ ಮತ್ತು ಮೂವರು ನ್ಯಾಯಾಧೀಶರು ಪ್ರಕಟಿಸಿರುವ ಕೆಲವು ಅಸಮಾಧಾನ ಕಾರಣಗಳು.
ಇವು ಉಪೇಕ್ಷಣೀಯ ಸಂಗತಿಗಳೆಂದಾಗಲಿ ರಹಸ್ಯವಾಗಿಡಬೇಕಾದವೆಂದಾಗಲಿ ಯಾರೂ ಹೇಳರು. ವಿಷಾದವನ್ನು ಉಂಟುಮಾಡಿರುವುದು ಇವನ್ನು ಸ್ಫೋಟಗೊಳಿಸಲು ಹಿರಿಯ ನ್ಯಾಯಾಧೀಶರುಗಳು ಅನುಸರಿಸಿದ ವಿಧಾನ. ಈ ನಡೆಯ ದೂರಗಾಮಿ ಪರಿಣಾಮಗಳ ಬಗೆಗೆ ಹೆಚ್ಚು ಸೂಕ್ಷ್ಮಗ್ರಹಿಕೆಯ ಆವಶ್ಯಕತೆ ಇದ್ದಿತೆನಿಸುತ್ತದೆ.
ಸರ್ವೋಚ್ಚ ನ್ಯಾಯಾಲಯದ ಸ್ತರದಲ್ಲಿ ವಿವಾದಗಳು ಹಿಂದೆ ನಡೆದಿಲ್ಲವೆಂದೇನಲ್ಲ. ಭ್ರ?ಚಾರ ಸಾಬೀತಾಗಿ ವಿ. ರಾಮಸ್ವಾಮಿ ವಾಗ್ದಂಡನೆಗೆ ಗುರಿಯಾಗಿದ್ದರು. ಸರ್ವೋಚ್ಚ ನ್ಯಾಯಾಲಯದ ತೀರ್ಪೊಂದನ್ನು ಟೀಕಿಸಿದ ಮಾರ್ಕಂಡೇಯ ಕಾಟ್ಜು ಕ್ಷಮಾಪಣೆ ಕೋರಿದ್ದರು. ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ತೀರ್ಪನ್ನು ಟೀಕಿಸಿದುದಕ್ಕಾಗಿ ನ್ಯಾಯಮೂರ್ತಿ ಸಿ.ಎಸ್. ಕರ್ಣನ್ ಕಾರಾಗೃಹವಾಸಕ್ಕೇ ಒಳಗಾದರು. ಈ ಮತ್ತು ಇತರ ಪ್ರಕರಣಗಳು ವೈಯಕ್ತಿಕ ವಿಕ್ಷಿಪ್ತ ನಡೆಗಳೆಂಬಂತೆ ಮುಕ್ತಾಯಗೊಂಡಿದ್ದವು. ಆದರೆ ಜನವರಿ ೧೨ರ ಘಟನೆ ನ್ಯಾಯಾಂಗದಲ್ಲಿ ಜನತೆ ಇರಿಸಿರುವ ಶ್ರದ್ಧೆಯನ್ನೇ ಅಲುಗಾಡಿಸುವಂತಿದೆ. ಎಲ್ಲಕ್ಕೂ ಮಿಗಿಲಾದ ಅಂಶವೆಂದರೆ ರಾಷ್ಟ್ರದ ಅತ್ಯಂತ ಗೌರವಾಸ್ಪದ ಸಂಸ್ಥೆಯ ವ್ಯವಹಾರಗಳು ಬೀದಿ ಮಟ್ಟದ ಚರ್ಚೆಗೆ ಗ್ರಾಸವಾಗಲು ಅವಕಾಶವಾದದ್ದು. ಇದು ಯಾವುದೇ ಸಂಸ್ಥೆಯ ವರ್ಚಸ್ಸಿಗೆ ಮಾರಕವಾಗಬಲ್ಲದು.
ಬಿಕ್ಕಟ್ಟುಗಳು
ನಾಲ್ವರು ನ್ಯಾಯಾಧೀಶರ ತಂಡ ಪ್ರಸ್ತಾವಿಸಿರುವ ಅಂಶಗಳು ಹುರುಳಿಲ್ಲದವಲ್ಲ: ’ಆಧಾರ್’ ಕುರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ವಿಚಾರಣೆಯ ಪೀಠದಲ್ಲಿ ಹಿರಿಯ ನ್ಯಾಯಾಧೀಶರನ್ನು ತೊಡಗಿಸದಿರುವುದು, ಸರ್ಕಾರ ಮತ್ತು ನ್ಯಾಯಾಂಗಗಳ ನಡುವಣ ಅಭಿಪ್ರಾಯಭೇದ ಸಾಧ್ಯತೆಗಳಿರುವ ಸನ್ನಿವೇಶಗಳ ನಿರ್ವಹಣೆಯಂತಹ ಮುಖ್ಯ ವಿ?ಯಗಳಿಗೆ ಸಂಬಂಧಿಸಿದಂತೆ ಸೂಚನಾವಳಿಯನ್ನೊಳಗೊಂಡ (’ಮೆಮೊರಾಂಡಮ್ ಆಫ್ ಪ್ರೊಸೀಜರ್’) ನೀತಿಸಂಹಿತೆಯ ಪರಿ?ರಣ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿರುವುದು – ಇವೆಲ್ಲ ಮಹತ್ತ್ವದ ವಿಷಯಗಳೇ. ಆದರೆ ಇಂತಹ ಸೂಕ್ಷ್ಮ ಸಂಗತಿಗಳನ್ನು ಮಾಮೂಲು ವ್ಯವಹಾರಗಳಂತೆ ಹರಿಯಬಿಡುವುದು ಇನ್ನಷ್ಟು ಜಟಿಲತೆಯನ್ನೇ ಸೃಷ್ಟಿಸೀತು. ಇವು ಆಂತರಿಕ ಪರಾಮರ್ಶನೆಯ ಮೂಲಕ ಇತ್ಯರ್ಥಗೊಳ್ಳುವುದೇ ಅಪೇಕ್ಷಣೀಯ.
ಇಂತಹ ಬಿಕ್ಕಟ್ಟುಗಳು ಹಿಂದೆಯೂ ಎಷ್ಟು ಬಾರಿ ಒದಗಿದ್ದವು. ಆದರೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳೇ ಹೀಗೆ ಬಹಿರಂಗವಾಗಿ ಬಂಡೆದ್ದಿರುವುದು ಇದೇ ಮೊದಲು. ಹಲವಾರು ಕ್ಷೇತ್ರಗಳು ಹೆಚ್ಚುಹೆಚ್ಚು ಅಸಭ್ಯಗೊಳ್ಳುತ್ತ ಸಾಗಿರುವ ಪರಿಸ್ಥಿತಿಯಲ್ಲಿ ಇದುವರೆಗೆ ಜನತೆ ಆತ್ಯಂತಿಕ ಭರವಸೆಯನ್ನಿರಿಸಿದ್ದ ನ್ಯಾಯಾಂಗದ ಚರ್ಯೆಗಳೂ ಈಗ ವಿವಾದವಿ?ಯಗಳಾಗಿರುವುದು ದೊಡ್ಡ ದುರಂತ. ಈಗಿನ ವ್ಯವಸ್ಥೆಯಲ್ಲಿ ಎಲ್ಲ ವಿವಾದಗಳಿಗೂ ಅಂತಿಮ ಪರಿಹಾರಸ್ಥಾನವಾಗಿರುವ ಸರ್ವೋಚ್ಚ ನ್ಯಾಯಲಯವೇ ಈಗ ವಿವಾದದ ತಾಣವಾಗಿರುವುದು ಹಿತಕಾರಿಯಲ್ಲ.
ಕೆಲವು ವಿರೋಧಾಭಾಸಗಳು
ನ್ಯಾಯಮೂರ್ತಿಗಳನ್ನೋ ಅವರ ಯಾವುದೋ ನಿರ್ಣಯಗಳನ್ನೋ ಪ್ರಜೆಗಳು ಟೀಕಿಸುವುದು ನ್ಯಾಯನಿಂದನೆಯೆನಿಸಿ ದಂಡನಾರ್ಹವಾಗುವ ಕ್ರಮ ಅಮಲಿನಲ್ಲಿರುವಾಗ ನ್ಯಾಯಾಧೀಶರುಗಳೇ ಮುಖ್ಯನ್ಯಾಯಾಧೀಶರನ್ನು ಟೀಕಿಸಹೊರಟಾಗ ಪರಿಸ್ಥಿತಿ ಏನಾದೀತು? – ಎಂಬುದು ಚಿಂತೆಗೆ ಕಾರಣವಾಗಿದೆ.
ಒಂದೆರಡು ವೈಚಿತ್ರ್ಯಗಳೂ ಇವೆ. ಕರ್ಣನ್ ಪ್ರಕರಣದ ವಿಚಾರಣೆ ನಡೆಸಿದ ಪೀಠದ ಭಾಗವಾಗಿದ್ದ ಚಲಮೇಶ್ವರ್ ಅವರೇ ಈಗ ಮುಖ್ಯನ್ಯಾಯಾಧೀಶರ ಬಗೆಗೆ ಆಕ್ಷೇಪವೆತ್ತಿರುವ ನ್ಯಾಯಾಧೀಶ ತಂಡದ ನೇತೃತ್ವ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಹಿಂದೆ ನಿರ್ಣೀತವಾಗಿದ್ದ ಹಲವು ಮೊಕದ್ದಮೆಗಳು ಮತ್ತೆ ಗರಿಗೆದರಿಕೊಳ್ಳುತ್ತ ಹೋದರೆ ಗತಿಯೇನು?
ನ್ಯಾಯಮೂರ್ತಿಗಳು ನಿರ್ಭೀತಿಯಿಂದಲೂ ನಿಷ್ಫಾಕ್ಷಿಕವಾಗಿಯೂ ತೀರ್ಪುಗಳನ್ನು ನೀಡಲಿ ಎಂಬ ಕಾರಣಕ್ಕಾಗಿಯೆ ಅವರಿಗೆ ಯಾವುದೇ ಟೀಕೆಗೆ ಆಸ್ಪದವಿಲ್ಲದಂತಹ ಶೇಷ್ಠ ಸ್ಥಾನವನ್ನು ಸಂವಿಧಾನದಲ್ಲಿ ನೀಡಲಾಗಿರುವುದು. ಈ ಅಧಿಕಾರದ ದುರ್ವಿನಿಯೋಗ ಆಗಬಾರದು.
ಜನವರಿ ೧೨ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ (ಹಿರಿತನದ ಅನುಸರಣೆಯ ಪದ್ಧತಿಯಂತೆ) ಇನ್ನು ಹತ್ತೇ ತಿಂಗಳಲ್ಲಿ ಮುಖ್ಯನ್ಯಾಯಾಧೀಶರಾಗಲಿರುವ ರಂಜನ್ ಗೋಗೊಯ್ ಕೂಡಾ ಪಾಲ್ಗೊಂಡಿರುವುದು ಅಚ್ಚರಿ ತರುತ್ತದೆ.
ಈಗಿನ ದ್ವೈಧ
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ನೇಮಕಗೊಳಿಸುವವರು ರಾಷ್ಟ್ರಪತಿಗಳು. ನ್ಯಾಯಾಲಯದ ಕಾರ್ಯವೈಖರಿಗೆ ಸಂಬಂಧಿಸಿದಂತೆ ಯಾವುದೇ ಅಂಶಗಳನ್ನು ರಾಷ್ಟ್ರಪತಿಗಳ ಗಮನಕ್ಕೆ ತರುವುದು ಈಗಿನ ಪದ್ಧತಿಯಂತೆ ಅಂತಿಮ ಮಾರ್ಗೋಪಾಯ. ಇದು ಯಾವುದೇ ಕಾರಣಕ್ಕೆ ಫಲಕಾರಿಯಾಗದಿದ್ದಲ್ಲಿ ಮುಂದೇನು – ಎಂದು ಚಿಂತಿಸಬೇಕಾದ ಸನ್ನಿವೇಶ ಈಗ ಒದಗಿದೆ.
ಎಷ್ಟು ತೀರ್ಪುಗಳ ಕಾನೂನು ಸೂಕ್ಷ್ಮಾಂಶಗಳ ಬಗೆಗೆ ಅಭಿಪ್ರಾಯಭೇದಗಳ ಸಾಧ್ಯತೆ ಇರುವ ಹಾಗೆ ಈಗ ನಾಲ್ವರು ನ್ಯಾಯಾಧೀಶರು ಹಿಡಿದಿರುವ ಮಾರ್ಗದ ಸಮರ್ಥನೀಯತೆ ಕುರಿತೂ ಬೇರೆಬೇರೆ ಪ್ರತಿಕ್ರಿಯೆಗಳು ಹೊಮ್ಮಿವೆ. ಆದರೂ ಹೆಚ್ಚಿನವರ ದೃಷ್ಟಿಯು ನ್ಯಾಯಾಧೀಶ ತಂಡ ಪತ್ರಿಕಾಗೋಷ್ಠಿ ಕರೆಯುವ ಮಟ್ಟಕ್ಕೆ ಹೋಗಬಾರದಿತ್ತು ಎಂದಿರುವಂತೆ ತೋರುತ್ತಿದೆ.
ದೀರ್ಘಕಾಲಿಕ ದೃಷ್ಟಿಯಿಂದ ನೋಡುವಾಗ, ನಿಯಮಗಳನ್ನು ರೂಪಿಸಿಕೊಳ್ಳುವ ಅಧಿಕಾರವಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಈ ಹಿಂದೆಯೆ ಇಂತಹ ವಿವಾದಾಂಶಗಳಿಗೆ ಸಂಬಂಧಿಸಿದಂತೆ ಕಾರ್ಯನಿಯಮಗಳನ್ನು ಏಕೆ ಮಾಡಿಕೊಳ್ಳಲಿಲ್ಲ ಎಂದೂ ಸಾರ್ವಜನಿಕರು ಕೇಳಿಯಾರು. ಎ? ಪ್ರಕರಣಗಳಲ್ಲಿ ತಮಗೆ ನ್ಯಾಯ ದೊರೆತಿಲ್ಲವೆಂದು ಕಕ್ಷಿದಾರರು ಸರ್ವೋಚ್ಚ ನ್ಯಾಯಾಲಯದ ಮೊರೆಹೊಕ್ಕಾಗ ಅದು “ಇದನ್ನು ರಾಜ್ಯ ಉಚ್ಚನ್ಯಾಯಾಲಯದಲ್ಲೇ ಪರಿಹರಿಸಿಕೊಳ್ಳಿ” ಎಂದೋ “ಈಗ ಪರ್ಯಾಪ್ತ ವ್ಯವಸ್ಥೆ ಇಲ್ಲದಿದ್ದರೆ ಅವಶ್ಯವಾದ ನಿಯಮಗಳನ್ನು ರೂಪಿಸಿಕೊಳ್ಳಿ” ಎಂದೋ ನಿರ್ದೇಶನ ನೀಡುವುದು ವಿರಳವಲ್ಲ. ಹೀಗಿರುವಾಗ ಸ್ವಯಂ ಸರ್ವೋಚ್ಚ ನ್ಯಾಯಾಲಯವೇ ಇಂತಹ ಪದ್ಧತಿಯನ್ನು ಅನುಸರಿಸಬೇಡವೆ?
ಘನತೆ ಉಳಿಯಲಿ
ಈ ವಿಷಯಗಳಲ್ಲಿ ಮೇಲ್ಪಂಕ್ತಿ ಹಾಕಬೇಕಾದ ಸ್ಥಾನದಲ್ಲಿರುವುದು ಸರ್ವೋಚ್ಚ ನ್ಯಾಯಾಲಯ. ಅದು ವರ್ಚಸ್ಸನ್ನು ಉಳಿಸಿಕೊಳ್ಳದೆಹೋದಲ್ಲಿ ಅದರ ತೀರ್ಪುಗಳೂ ಬೆಲೆಯನ್ನು ಕಳೆದುಕೊಂಡಾವು. ಕಕ್ಷಿದಾರರು ನ್ಯಾಯಾಲಯಕ್ಕೆ ಜೀನ್ಸ್ಪ್ಯಾಂಟ್, ಟೀಷರ್ಟ್ಗಳಂಥವನ್ನು ಧರಿಸಿ ಬರಬಾರದೆಂದೂ ವಸ್ತ್ರಮರ್ಯಾದೆ ಪಾಲಿಸಬೇಕೆಂದೂ ಹಲವರು ನ್ಯಾಯಾಧೀಶರು ಸೂಚಿಸಿದುದನ್ನು ಕೇಳಿದೆವು. ಅಂತಹ ಸಭ್ಯತೆ-ಗೌರವಗಳನ್ನು ಸ್ವಯಂ ನ್ಯಾಯಾಲಯಗಳೂ ಕಾಪಾಡಿಕೊಳ್ಳಬೇಕಲ್ಲವೆ?
ಈಗಿನ ಆಗಂತುಕ ಪರಿಸ್ಥಿತಿ ಅನಿರೀಕ್ಷಿತವೇನಲ್ಲ ಎಂಬ ಅಭಿಪ್ರಾಯವೂ ಇದೆ. ’ಮೆಮೊರಾಂಡಮ್ ಆಫ್ ಪ್ರೊಸೀಜರ್’ ಮೊದಲಾದ ವಿ?ಯಗಳಲ್ಲಿ ಮುಖ್ಯನ್ಯಾಯಾಧೀಶರ ನಿಲವು ನಿರಾಕ್ಷೇಪಣೀಯವೆಂಬ ಅಭಿಪ್ರಾಯವೂ ಹಲವು ನ್ಯಾಯವಾದಿ ವಲಯಗಳಲ್ಲಿದೆ. ಇನ್ನು ಯಾವ ಮೊಕದ್ದಮೆಗಳನ್ನು ಯಾವ ಪೀಠಗಳಿಗೆ ವಹಿಸಬೇಕೆಂಬ ಬಗೆಗೆ ನಿಶ್ಚಿತ ಪದ್ಧತಿಗಳೇ ನಿರ್ದಿಷ್ಟವಿಲ್ಲದಿರುವಾಗ ನಿಯಮೋಲ್ಲಂಘನೆಯಾಗಿದೆ ಎನ್ನಲು ಆಧಾರವೇನು? – ಎಂದೂ ಹಲವರು ಪ್ರಶ್ನಿಸಿದ್ದಾರೆ.
ಅದೆಲ್ಲ ಹೇಗೇ ಇದ್ದರೂ ಆತ್ಮಾವಲೋಕನ ಈಗ ಆಗಲೇಬೇಕಾಗಿದೆ. ಜನತೆಯು ನ್ಯಾಯದಾನವನ್ನು ಕೋರುವ ಅಧಿಕಾರಸ್ಥಾನ ಶ್ರೇಣಿಯಲ್ಲಿ ಕಟ್ಟಕಡೆಯದಾದ ಸರ್ವೋಚ್ಚ ನ್ಯಾಯಾಲಯದ ಘನತೆಯನ್ನು ಸರ್ವಥಾ ರಕ್ಷಿಸುವುದು ಎಲ್ಲರ ಹೊಣೆಗಾರಿಕೆಯಾಗಿದೆ. ಇದಕ್ಕೆ ಪರ್ಯಾಯವಿಲ್ಲ. ಈಗ ತಲೆದೋರಿರುವ ವಿವಾದಗಳು ಕ್ಷಿಪ್ರವಾಗಿಯೂ ಸಮಾಧಾನಕರವಾಗಿಯೂ ಇತ್ಯರ್ಥಗೊಳ್ಳಲೆಂದು ಆಶಿಸೋಣ.