`ಜಯತಿ ಜಯತಿ ಭಾರತಮಾತಾ ಬುಧಗೀತಾ’ ಎಂಬ ಭಾರತಮಾತೆಯ ಕುರಿತಾದ ಪ್ರಸಿದ್ಧವಾದ ಗೀತೆಯ ರಚನಾಕಾರರು ಮಯೂರಂ ವಿಶ್ವನಾಥ ಶಾಸ್ತ್ರೀ. ೨೦೧೮ಕ್ಕೆ ಇವರು ಜನಿಸಿ ೧೨೫ ವರ್ಷಗಳು ಹಾಗೂ ಅವರು ನಮ್ಮನ್ನಗಲಿ ೬೦ ವರ್ಷಗಳು ಸಂದಿವೆ. ಅವರ ಸ್ಮರಣಾರ್ಥ ಈ ಪರಿಚಯಾತ್ಮಕ ಲೇಖನ. ಬೆಂಗಳೂರಿನಲ್ಲಿ ವಾಸವಾಗಿದ್ದ ಶಾಸ್ತ್ರಿಯವರ ಸಹೋದರಿ ಹಾಗೂ ಪ್ರಸಿದ್ಧ ಗುರುಗಳಾದ ವಿದುಷಿ ವಲ್ಲಭಂ ಕಲ್ಯಾಣಸುಂದರಂ ಅವರ ಶಿಷ್ಯ ವಿದ್ವಾನ್ ಎಸ್. ಶಂಕರ್ ವಿಶ್ವನಾಥಶಾಸ್ತ್ರಿಗಳ ಜೀವನ-ಸಾಧನೆಗಳನ್ನು ಇಲ್ಲಿ ಪರಿಚಯಿಸಿದ್ದಾರೆ.
ನಮ್ಮ ಭಾರತೀಯ ಶಾಸ್ತ್ರೀಯ ಸಂಗೀತಪದ್ಧತಿಗಳಲ್ಲೊಂದಾದ ದಕ್ಷಿಣಾದಿ ಅಥವಾ ಕರ್ನಾಟಕ ಸಂಗೀತವು ಸಾಹಿತ್ಯಪ್ರಧಾನವಾದುದು ಎಂಬುದು ಸರ್ವವಿದಿತ. ನಮ್ಮಲ್ಲಿರುವ ರಾಗಗಳ ಸ್ವರೂಪವು ಜೀವಂತವಾಗಿರುವುದು ಮಹಾನ್ ವಾಗ್ಗೇಯಕಾರರ ರಚನೆಗಳ ಮೂಲಕವೇ ಎಂಬುದೂ ಸತ್ಯ. ಕಳೆದ ಶತಮಾನವು ಕಂಡ ವಾಗ್ಗೇಯಕಾರರಲ್ಲಿ ಪೂಚಿ ಶ್ರೀನಿವಾಸ ಅಯ್ಯಂಗಾರ್, ಮುತ್ತಯ್ಯಭಾಗವತರ್, ಮೈಸೂರು ವಾಸುದೇವಾಚಾರ್ಯರು, ಪಾಪನಾಶಂ ಶಿವನ್ ಮುಂತಾದವರು ಅಗ್ರಗಣ್ಯರು. ಆ ಶ್ರೇಣಿಯಲ್ಲಿಯೇ ತಮ್ಮ ಅಮೂಲ್ಯ ರಚನೆಗಳಿಂದ ನಮ್ಮ ಕೃತಿಭಂಡಾರವನ್ನು ಶ್ರೀಮಂತಗೊಳಿಸಿದವರಲ್ಲಿ ಮಯೂರಂ ವಿಶ್ವನಾಥಶಾಸ್ತ್ರೀ ಒಬ್ಬರು.
ಬಾಲ್ಯ
ಮಯೂರಂ ವಿಶ್ವನಾಥಶಾಸ್ತ್ರಿಗಳು ತಮಿಳು ಕವಿ ಕಂಬನ್ ಅವರ ಹುಟ್ಟೂರಾದ ಮಾಯಾವರಂ ಹತ್ತಿರದ ತೇರೆಯಂದೂರ್ನಲ್ಲಿ, ೨೭ ನವೆಂಬರ್ ೧೮೯೩ರಲ್ಲಿ, ತಂದೆ ವೇದಬ್ರಹ್ಮ ಶ್ರೀ ರಾಮಸ್ವಾಮಿ ಘನಪಾಠಿ ಹಾಗೂ ಶ್ರೀಮತಿ ವಾಲಾಂಬಾಲಾಕ್ಷಿ ಅವರ ದ್ವಿತೀಯ ಪುತ್ರನಾಗಿ ಜನಿಸಿದರು. ತಂದೆಯವರ ಕಾಶೀಯಾತ್ರೆಯ ಫಲವಾಗಿ ಹುಟ್ಟಿದ ಇವರಿಗೆ ವಿಶ್ವನಾಥ ಎಂದು ನಾಮಕರಣ ಮಾಡಿದರು.
ಬಾಲ್ಯದಲ್ಲಿ ’ಮುತ್ತಣ್ಣ’ ಎಂದೇ ಕರೆಯಲ್ಪಡುತ್ತಿದ್ದ ಇವರ ಒಡಹುಟ್ಟಿದವರು ಒಬ್ಬ ಅಣ್ಣ ಹಾಗೂ ನಾಲ್ವರು ತಮ್ಮಂದಿರು ಹಾಗೂ ಏಕೈಕ ಕಿರಿಯ ಸಹೋದರಿ ಶ್ರೀಮತಿ ವಲ್ಲಭಂ ಕಲ್ಯಾಣಸುಂದರಂ. ವಿದುಷಿ ವಲ್ಲಭಂರವರು ಬೆಂಗಳೂರಿನಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಪ್ರಸಿದ್ಧ ಗಾಯಕಿಯಾಗಿ ಹಾಗೂ ಉತ್ತಮ ಬೋಧಕಿಯಾಗಿ ಹೆಸರು ಮಾಡಿದವರು. ಶಾಸ್ತ್ರಿಯವರ ಕೊನೆಯ ತಮ್ಮ ಶತಾಯುಷಿ ಶ್ರೀ ವೈದೀಶ್ವರನ್ ಸಹ ಉತ್ತಮ ವಾಗ್ಗೇಯಕಾರರಾಗಿದ್ದು, ವೃತ್ತಿಯಲ್ಲಿ ಲೆಕ್ಕಪರಿಶೋಧಕರಾಗಿದ್ದರು.
ಬಾಲ್ಯದಲ್ಲಿ ಇವರನ್ನು ಹಾಡು ಎಂದು ಕೇಳಿದರೆ, ಇವರು ಹಾಡಲೊಲ್ಲೆ ಎಂದು ಹಠಹಿಡಿದಾಗ, ತಾಯಿ ಮಗನಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ತಯಾರಿಸಿ ಕೊಟ್ಟ ನಂತರವೇ ಹಾಡುತ್ತಿದ್ದರಂತೆ. ಚಿಕ್ಕವಯಸ್ಸಿನಿಂದ ಕುಶಾಗ್ರಮತಿಯಾದ ಶಾಸ್ತ್ರಿಗಳು ತಾವು ಕೇಳಿದ ಯಾವುದೇ ಹೊಸ ಹಾಡನ್ನು ತಕ್ಷಣವೇ ಹಾಡುವ ಸಾಮರ್ಥ್ಯವನ್ನು ಗಳಿಸಿದ್ದರಂತೆ. ನಿದ್ರೆಯಲ್ಲೂ ಹಾಡುತ್ತಿದ್ದುದನ್ನು ಕೇಳಿ ತಾಯಿ ಆನಂದ ಪಡುತ್ತಿದ್ದರಂತೆ.
ಶಾಸ್ತ್ರಿಗಳು ಚಿಕ್ಕಂದಿನಲ್ಲೇ ತಿರುವಯ್ಯಾರಿಗೆ ತೆರಳಿ ಕಲ್ಯಾಣಮಹಲ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ, ವೇದಾಧ್ಯಯನ ಮಾಡಿದರು. ಆಂಗ್ಲಭಾ?ಯನ್ನು ಕಲಿಯಬೇಕೆಂಬ ಹಂಬಲದಿಂದ ಮಾಯಾವರದ ಮುನಿಸಿಪಲ್ ಹೈಸ್ಕೂಲ್ ಸೇರಿದರು. ಅಲ್ಲಿಯೂ, ಸಂಗೀತ-ನಾಟಕದ ಗೀಳಿದ್ದರೂ ಉತ್ತಮ ಅಂಕ ಪಡೆದು ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಿಕ್ಷಕರ ಮೆಚ್ಚುಗೆ ಪಡೆದರು. ಕೆಲಕಾಲ ಶಿಕ್ಷಕರಾಗಿಯೂ ಕಾರ್ಯ ನಿರ್ವಹಿಸಿದರು.
ಮಾಯಾವರಂ (ಮಯೂರಂ) ನಗರದಲ್ಲಿ ವಾಸವಾಗಿದ್ದ ಸಂಗೀತ ದಿಗ್ಗಜರಾದ ಸೊಂಪನ್ನಾರ್ ಕೋಯಿಲ್ ರಾಮಸ್ವಾಮಿ ಪಿಳ್ಳೈ, ವೀಣಾ ವೈದ್ಯನಾಥ ಅಯ್ಯರ್, ಫ್ಲೂಟ್ ನಾಗರಾಜರಾವ್, ಫಿಡ್ಲ್ ಸುಬ್ಬಯ್ಯರ್, ಗಾಯಕ ಕೊನೇರಿರಾಜಪುರಂ ವೈದ್ಯನಾಥ ಅಯ್ಯರ್ ಮುಂತಾದವರ ಸಂಗೀತವನ್ನು ಕೇಳಿ ಬೆಳೆದ ಶಾಸ್ತ್ರಿ ನಾಲ್ಕೂವರೆ ಮನೆಯ ಶ್ರುತಿಯ ಕಂಚಿನಕಂಠದಲ್ಲಿ ಲೀಲಾಜಾಲವಾಗಿ ಹಾಡಿ ಎಲ್ಲರ ಮೆಚ್ಚುಗೆಯನ್ನು ಪಡೆದರು. ಫಿಡ್ಲ್ ಸುಬ್ಬಯ್ಯರ್ ಅವರೇ ಇವರಿಗೆ ಪಕ್ಕವಾದ್ಯ ನುಡಿಸಿ ಉತ್ತೇಜನ ನೀಡಿದರು.
೧೯೧೩ರಲ್ಲಿ ವಿವಾಹವಾಯಿತು. ೧೯೧೫ರಲ್ಲಿ ತಂದೆತಾಯಿಯರು ಕಾಲವಶರಾದ ಬಳಿಕ ತಿರುಚ್ಚಿಗೆ ಬಂದು ನೆಲೆಸಿದರು. ಅಲ್ಲಿ ಮುತ್ತಯ್ಯ ಭಾಗವತರು ಮತ್ತು ಪಂಚಾಪಕೇಶ ಭಾಗವತರ ಸ್ನೇಹ ಹಾಗೂ ಸಲಹೆಯಂತೆ ಕೆಲವು ಕಾಲ ಹರಿಕಥಾ ಕಾಲಕ್ಷೇಪವನ್ನೂ ಮಾಡಿದರು. ಹಾರ್ಮೋನಿಯಂ ಹಾಗೂ ಗೋಟುವಾದ್ಯ ವಾದನದಲ್ಲೂ ಪರಿಣತಿ ಹೊಂದಿದ್ದುದು ವಿಶೇ?. ಆನಂತರ ಕಾರೈಕ್ಕುಡಿಗೆ ಬಂದು ಅಧ್ಯಾಪನ ವೃತ್ತಿಯನ್ನು ಮಾಡುತ್ತಾ, ತಾವೇ ರಚಿಸಿದ ’ಚಿತ್ರ ಕಾಮಿನಿ’ ಎಂಬ ನಾಟಕವನ್ನು ನಿರ್ದೇಶಿಸಿ, ಅಭಿನಯಿಸಿ ಖ್ಯಾತರಾದರು.
ಶಿಕ್ಷಣೋನ್ನತಿ
ದೈವದತ್ತವಾದ ಸಂಗೀತಜ್ಞಾನ ಹಾಗೂ ಕೇಳ್ಮೆಯಿಂದ ಬಂದದ್ದು ಸಾಲದೆಂದೆನಿಸಿ ಉನ್ನತಶಿಕ್ಷಣವನ್ನು ಶ್ರೇಷ್ಠ ಸಂಗೀತ ವಿದ್ವಾಂಸರುಗಳಾದ ದೇವಕೋಟ್ಟೈ ದಶವಾದ್ಯಂ ವೆಂಕಟರಾಮ ಐಯ್ಯಂಗಾರ್, ನಾಮಕಲ್ ನರಸಿಂಹ ಐಯ್ಯಂಗಾರ್ ಹಾಗೂ ಸಿಮಿಳಿ ಸುಂದರಂ ಐಯ್ಯರ್ ಅವರುಗಳ ಶಿಷ್ಯರಾಗಿ, ಒಬ್ಬ ಶ್ರೇಷ್ಠ ಗಾಯಕರಾಗಿ ರೂಪುಗೊಂಡರು. ಮನೋಧರ್ಮ ಸಂಗೀತ ಭಾಗಗಳಾದ ಆಲಾಪನೆ, ನೆರವಲ್ ಹಾಗೂ ಸ್ವರಕಲ್ಪನೆಗಳಲ್ಲಿ ಅಸಾಧಾರಣ ಪ್ರೌಢಿಮೆ ಪಡೆದು ೧೯೨೧ರಲ್ಲಿ ಮದ್ರಾಸಿಗೆ ಬಂದು ನೆಲೆಸಿದರು. ಅಲ್ಲಿ ಅನೇಕ ಹಾರ್ಮೋನಿಯಂ ಕಛೇರಿಗಳಲ್ಲದೆ, ಸಂಗೀತಪ್ರಧಾನವಾದ ನಾಟಕಗಳಿಗೆ ಈ ವಾದ್ಯವನ್ನು ನುಡಿಸಿ ಹೆಸರು ಮಾಡಿದರು. ಆಕಾಶವಾಣಿಯು ಈ ವಾದ್ಯ ನುಡಿಸಾಣಿಕೆಗೆ ಅವಕಾಶ ಹಿಂಪಡೆದಾಗ ಇವರೂ ಈ ವಾದ್ಯ ನುಡಿಸುವುದನ್ನು ನಿಲ್ಲಿಸಿದರಂತೆ.
ಇವರಿಗೆ ನಾಟಕದಲ್ಲೂ ಒಲುಮೆ ಇದ್ದು, ಅನೇಕ ಪೌರಾಣಿಕ ಹಾಗೂ ಸಾಮಾಜಿಕ ನಾಟಕಗಳನ್ನು ರಚಿಸಿದ್ದಾರೆ. ’ಭಕ್ತ ಜಯದೇವ’ ಎಂಬ ಗೇಯನಾಟಕವನ್ನು ಬರೆದು, ನಿರ್ದೇಶಿಸಿ, ನಟಿಸಿ, ವೇದಿಕೆಯ ಮೇಲೆ ಹಾಗೂ ಆಕಾಶವಾಣಿಯಲ್ಲೂ ಪ್ರಸ್ತುತಪಡಿಸಿದರು. ಇವರ ಇತರ ನಾಟಕಗಳೆಂದರೆ ’ಕಾರೈಕ್ಕಾಲ್ ಅಮ್ಮಯಾರ್’, ’ವಿರಾಟಪರ್ವ’, ’ಶಾಂತಕುಮಾರಿ’, ’ಮಿತ್ರವಿಜಯ’, ’ಮದನಮೊಹನ’, ’ಪಾದುಕ’, ’ತುಳಸೀದಳಂ’ ಇತ್ಯಾದಿ. ಇವಲ್ಲದೆ ’ರವಿಶೇಖರನ್’, ’ಜಯಕುಮಾರಿ’, ’ಪ್ರೇಮಬಲನ್’ ಎಂಬ ಕಾದಂಬರಿಗಳನ್ನೂ, ಹಲವು ಸಣ್ಣ ಕಥೆಗಳನ್ನೂ ಬರೆದರು. ೧೯೩೧ರಲ್ಲಿ ಮದ್ರಾಸ್ ಮ್ಯೂಸಿಕಲ್ ಅಕಾಡೆಮಿಯವರು ಏರ್ಪಡಿಸಿದ್ದ ಕೃತಿರಚನಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದರು.
೧೯೩೫ರಲ್ಲಿ ಧರ್ಮಪತ್ನಿ ವಿಯೋಗ ಹಾಗೂ ಏಕೈಕ ಸಂತಾನವನ್ನು ಕಳೆದುಕೊಂಡ ನಂತರ ಪೂರ್ಣಪ್ರಮಾಣದಲ್ಲಿ ಕೃತಿರಚನೆಯಲ್ಲಿ ನಿರತರಾದರು. ಮಲಗುವಾಗ ದಿಂಬಿನ ಅಡಿಯಲ್ಲಿ ಹಾಳೆ ಲೇಖನಿ ಇರಿಸಿಕೊಂಡು ಮನಸ್ಸಿನಲ್ಲಿ ರಚನೆ ಮೂಡಿದಾಗ ತಮ್ಮ ದುಂಡಗಿನ ಬರವಣಿಗೆಯಲ್ಲಿ ಬರೆದಿಡುತ್ತಿದರು. ಸುಬ್ರಹ್ಮಣ್ಯಸ್ವಾಮಿಯ ಪರಮ ಭಕ್ತರಾದ ಇವರು ’ವಿಶ್ವ’ ಹಾಗೂ ’ವೇದಪುರಿ’ಯೆಂಬ ತಮ್ಮ ಹುಟ್ಟೂರಿನ ದೇವರು ವೇದಪುರೇಶ್ವರನ ಹೆಸರಿನಲ್ಲಿ, ತಮ್ಮ ರಚನಾ ಮುದ್ರೆಗಳನ್ನಾಗಿಸಿಕೊಂಡು, ೮೦೦ಕ್ಕೂ ಮಿಗಿಲಾಗಿ ರಚನೆಗಳನ್ನು ಮಾಡಿದ್ದಾರೆ. ಶಾಸ್ತ್ರಿಯವರ ರಚನೆಗಳು ತಮಿಳು, ತೆಲುಗು, ಸಂಸ್ಕೃತ ಭಾ?ಗಳೊಡನೆ ಆಂಗ್ಲಮಿಶ್ರಿತ ಭಾ?ಯಾದ ಮಣಿಪ್ರವಾಳದಲ್ಲೂ ಮೂಡಿಬಂದಿವೆ. ಇವರ ರಚನಾವಸ್ತುಗಳು ಹಲವಾರು – ಗಣಪತಿ, ಗುಹ, ಪಾರ್ವತಿ, ಲಕ್ಷ್ಮಿ, ಸರಸ್ವತಿ, ಈಶ್ವರ, ಹರಿ, ಶಿರಡಿ ಸಾಯಿಬಾಬಾ, ಭಾರತಮಾತೆ, ಭಾರತ ಧ್ವಜ, ಗಾಂಧಿ, ಲೋಕನೀತಿ, ಸೂರ್ಯ-ಚಂದ್ರ, ಮಾತಾ-ಪಿತಾ, ಗುರುಗಳು ಹಾಗೂ ವೇದಾಂತ ವಿಚಾರಗಳನ್ನೊಳಗೊಂಡಿರುವುದು ಅವರ ಪ್ರತಿಭೆಗೆ ಕೈಗನ್ನಡಿಯಾಗಿದೆ.
ಶಾಸ್ತ್ರೀಯ ಸಂಗೀತಪ್ರಕಾರಗಳಾದ ಸ್ವರಜತಿ, ವರ್ಣ, ಕೀರ್ತನೆ, ಕೃತಿ-ಪದ ತಿಲ್ಲಾನ, ಜಾನಪದ ಶೈಲಿಯಲ್ಲಿ ಇವರ ರಚನೆಗಳಿವೆ. ಪ್ರಸಿದ್ಧ ರಾಗಗಳಾದ ತೋಡಿ, ಶಂಕರಾಭರಣ, ಕಲ್ಯಾಣಿ, ಬಿಲಹರಿ ಅಲ್ಲದೆ ದೇಶ್, ಭೀಮ್ಪಲಾಸ್, ಹಮೀರ್ ಕಲ್ಯಾಣಿ, ಮಾಂಡ್ ಮುಂತಾದ ಹಿಂದೂಸ್ತಾನಿ ರಾಗಗಳಲ್ಲಿ ಹಾಗೂ ಸರಸಾನನ, ನಾಯಕಿ, ಕುಂತಲ, ದಯಾರಂಜನಿ ಮೊದಲಾದ ಅಪರೂಪದ ರಾಗಗಳಲ್ಲಿಯೂ ರಚನೆಗಳಿವೆ. ಆದಿ, ರೂಪಕ, ಮಠ್ಯ, ಅಟ್ಟ, ಮಧ್ಯಾದಿ, ದೇಶಾದಿ ತಾಳಗಳಲ್ಲಿ ವಿವಿಧ ನಡೆಗಳಲ್ಲೂ ರಚನೆಗಳಿರುವುದು ವಿಶೇಷ.
’ದಶಾವತಾರಂ’ ಎಂಬ ಚಲನಚಿತ್ರಕ್ಕೆ ಶಾಸ್ತ್ರಿಯವರು ಸಂಗೀತ ನಿರ್ದೇಶನ ಮಾಡಿರುವುದು ಗಮನಾರ್ಹ. ೧೯೩೩ರಲ್ಲಿ ’ಭಕ್ತ ಸಂಗೀತ ಮಂಡಳಿ’ ಎಂಬ ಸಂಗೀತಸಂಸ್ಥೆ ಸ್ಥಾಪಿಸಿ, ಅಲ್ಲಿ ತಮ್ಮ ಹಾಗೂ ಇತರ ವಾಗ್ಗೇಯಕಾರರ ರಚನೆಗಳನ್ನು ಕಲಿಸಿದರು. ಭಾರತ ಸರ್ಕಾರವು ’ರಾ?ಗೀತೆ’ಯ ಆಯ್ಕೆಗಾಗಿ ರಚನೆಗಳನ್ನು ಆಹ್ವಾನಿಸಿದಾಗ ನಾಲ್ಕು ಸುಂದರ ರಚನೆಗಳನ್ನು ಕಳುಹಿಸಿದರು. ಕಾರಣಾಂತರದಿಂದ ಅವು ಆಯ್ಕೆಯಾಗಲಿಲ್ಲ. ತಮಿಳು ವೇದವೆಂದೇ ಪ್ರಸಿದ್ಧಿ ಪಡೆದ ’ತಿರುಕ್ಕುರಲ್’ಗೆ ಸ್ವರಮಟ್ಟನ್ನು ವಿವಿಧ ರಾಗಗಳಲ್ಲಿ ಅಳವಡಿಸಿ ಅರ್ಥಸಹಿತ ಬರೆದು ಪ್ರಕಟಿಸಿದ ಮೊದಲಿಗರಿವರು. ಅದಕ್ಕಾಗಿ ಸರ್ಕಾರವು ಸಾವಿರ ರೂಪಾಯಿಗಳ ಸಂಭಾವನೆ ಮಂಜೂರು ಮಾಡಿದ್ದರೂ ಅದು ಸಂದಾಯವಾದದ್ದು ಅವರು ಕಾಲವಾದ ನಂತರ ಎಂಬ ಸಂಗತಿ ವಿಪರ್ಯಾಸವೇ ಸರಿ. ಆದರೆ ೧೯೫೪ರಿಂದ ಜೀವನಪರ್ಯಂತ ನೂರು ರೂಪಾಯಿಗಳ ಮಾಸಾಶನ ದೊರಕಿದ್ದು ಸಂತಸದ ಸಂಗತಿ.
ಅಣ್ಣಾಮಲೈ ವಿಶ್ವವಿದ್ಯಾಲಯ ಹಾಗೂ ದಕ್ಷಿಣಆಫ್ರಿಕಾದಲ್ಲಿನ ’ಡರ್ಬನ್ ಮ್ಯೂಸಿಕ್ ಅಸೋಸಿಯೇಶನ್’ಗೆ ಸಲಹಾಗಾರರಾಗಿ ನೇಮಿಸಲ್ಪಟ್ಟಿದ್ದು ಇವರಿಗೆ ಸಂದ ಗೌರವಗಳು. ನಾಡಿನುದ್ದಗಲಕ್ಕೂ ಅನೇಕ ಸಂಗೀತ ಸಮ್ಮೇಳನಗಳಲ್ಲಿ ತಮ್ಮ ಆಂಗ್ಲ ಭಾ?ಯ ಪ್ರೌಢಿಮೆಯಿಂದಾಗಿ ಅನೇಕ ಪ್ರಾತ್ಯಕ್ಷಿಕೆಗಳನ್ನಿತ್ತು ನಮ್ಮ ಸಂಗೀತದ ಹಿರಿಮೆಯನ್ನು ಅಲ್ಲಿಯ ವಿದ್ವಾಂಸರಿಗೆ ಗೊತ್ತುಪಡಿಸಿದ್ದು ಇವರ ಅಮೂಲ್ಯವಾದ ಕೊಡುಗೆಯೇ ಸರಿ. ೧೯೫೦ರಲ್ಲಿ ಪುಣೆ ವಿಶ್ವವಿದ್ಯಾಲಯದ ಉಪಕುಲಪತಿ ಎಮ್.ಆರ್. ಜಯಕರ್ ಹಾಗೂ ಅಂದಿನ ಮುಂಬಯಿಪ್ರಾಂತದ ಮುಖ್ಯಮಂತ್ರಿ ಬಿ.ಜಿ. ಖೇರ್ ಅವರಿಂದ ಸನ್ಮಾನಿಸಲ್ಪಟ್ಟಿದ್ದು ಶಾಸ್ತ್ರಿಯವರ ವಿದ್ವತ್ತಿಗೆ ಸಂದ ಪುರಸ್ಕಾರ.
ಸಾಧಾರಣ ಎತ್ತರ, ಸದೃಢವಾದ ಮೈಕಟ್ಟು, ಎಣ್ಣೆಗೆಂಪು ವರ್ಣ ಹಾಗೂ ಅಸಾಧಾರಣ ಪ್ರತಿಭೆಗಳನ್ನು ಸೂಚಿಸುವ ತೇಜಃಪುಂಜವಾದ ಕಣ್ಣುಗಳಿಂದ ಶೋಭಿತರಾಗಿದ್ದ ಶಾಸ್ತ್ರಿಗಳು ತಮ್ಮ ಹಿತ-ಮಿತ ನುಡಿ ಹಾಗೂ ಸ್ನೇಹಮಯ ನಡವಳಿಕೆಯಿಂದ ಸಂಪರ್ಕಕ್ಕೆ ಬಂದವರೆಲ್ಲರ ವಿಶ್ವಾಸ-ಸ್ನೇಹಗಳನ್ನು ಗಳಿಸಿದ್ದರು. ಅವರಿಗೆ ಬೆಂಗಳೂರಿನಲ್ಲಿ ಅನೇಕ ವಿದ್ವನ್ಮಿತ್ರರಿದ್ದರು. ಅವರಲ್ಲಿ ವಿದ್ವಾಂಸರಾದ ಚೌಡಯ್ಯ, ದೊರೆಸ್ವಾಮಿ ಅಯ್ಯಂಗಾರ್, ಶ್ರೀಕಂಠನ್, ಸುಬ್ಬರಾಮಯ್ಯ, ಟಿ.ಬಿ. ನರಸಿಂಹಾಚಾರ್ಯರು ಪ್ರಮುಖರು.
ಈಗಿರುವ ಶಾಸ್ತ್ರಿಯವರ ಕುಟುಂಬವರ್ಗದವರು ಹೇಳುವ ಪ್ರಕಾರ, ಮದ್ರಾಸಿನಲ್ಲಿದ್ದಾಗ ವೇಣುವಾದನ ಮಾಂತ್ರಿಕ ಟಿ.ಆರ್. ಮಹಾಲಿಂಗಂ ಶಾಸ್ತ್ರಿಯವರ ಮಾರ್ಗದರ್ಶನ ಪಡೆಯುವಂತೆ ಮಹಾಲಿಂಗಂರವರ ತಂದೆ ರಾಮಸ್ವಾಮಿ ಅಯ್ಯರ್ ಕರೆತಂದಿದ್ದರಂತೆ. ಶಾಸ್ತ್ರಿಯವರು ಮಾರ್ಗದರ್ಶನ ಮಾಡಿ, ಈ ಬಾಲಕನಿಗೆ ದೈವದತ್ತವಾದ ಅಪಾರ ಜ್ಞಾನ – ರಾಗ – ತಾಳಗಳ ಮೇಲೆ ಹಿಡಿತವಿದೆ, ಯಾರಿಂದಲೂ ಮಾರ್ಗದರ್ಶನದ ಆವಶ್ಯಕತೆ ಇಲ್ಲವೆಂದರಂತೆ.
ಪ್ರಸಿದ್ಧ ವಿದುಷಿ ಎನ್.ಸಿ. ವಸಂತಕೋಕಿಲಂ, ಡಿ.ಕೆ. ಪಟ್ಟಮ್ಮಾಳ್, ಜಿ.ಎನ್.ಬಿ. ಅವರು ಶಾಸ್ತ್ರಿಯವರ ಕೆಲ ರಚನೆಗಳನ್ನು ನೇರವಾಗಿ ಕಲಿತು ಅವುಗಳನ್ನು ಪ್ರಸಿದ್ಧಿಗೆ ತಂದರು. ಶಾಸ್ತ್ರಿಯವರು ಸ್ವರಪಡಿಸಿದ ’ತಿರುಕ್ಕುರಲ್’ಅನ್ನು ಗಾಯಕ ಮಹನೀಯರಾದ ಎಸ್. ರಾಜಂ, ದಂಡಪಾಣಿ ದೇಶಿಕರರು ಹಾಡಿ ಅವುಗಳ ಪ್ರಚಾರಕ್ಕೆ ಕಾರಣರಾದರು.
ಶಾಸ್ತ್ರಿಯವರ ಶಿಷ್ಯವರ್ಗದ ಪ್ರಮಾಣ ಚಿಕ್ಕದು. ಸಹೋದರ – ಶ್ರೀ ವೈದೀಶ್ವರನ್ ಹಾಗೂ ಸಹೋದರಿ ವಲ್ಲಭಂ ಅವರಲ್ಲಿ ಪ್ರಮುಖರು. ಶಾಸ್ತ್ರಿಯವರು ತಮ್ಮ ಕೆಲವು ರಚನೆಗಳನ್ನು ವಲ್ಲಭಂರ ಪುತ್ರಿ ರುಕ್ಮಿಣಿ ಪು?ವನಂ, ಸೋದರ ಪುತ್ರಿ ವೀಣಾ ವಿದುಷಿ ಪರ್ವತವರ್ಧಿನಿ ಅವರುಗಳಿಗೆ ಕಲಿಸಿದರು. ಇವರ ಕೀರ್ತನಗಳು ಲಲಿತಪದಗಳಿಂದ ಕೂಡಿದ್ದು ಶಾಸ್ತ್ರಿಯವರ ಅಪಾರ ಲಕ್ಷ್ಯ-ಲಕ್ಷಣ ಜ್ಞಾನದಿಂದ ಹೊರಹೊಮ್ಮಿದವುಗಳಾಗಿವೆ.
ಪ್ರಸಿದ್ಧಿ ಪರಾಙ್ಮುಖತೆ
ಶಾಸ್ತ್ರಿಯವರು ಸಾಕಷ್ಟು ಪ್ರಚಾರದಲ್ಲಿ ಇರದಿರುವುದಕ್ಕೆ ಕಾರಣಗಳು ಹಲವಾರು – ಸಂಕೋಚ ಸ್ವಭಾವ, ಸ್ವಪ್ರಶಂಸೆಯಿಂದ ವಿಮುಖರಾಗಿದ್ದ ಇವರದು ಯಾರನ್ನೂ ಯಾವ ರೀತಿಯಲ್ಲೂ ಯಾಚಿಸದ ಮನೋಭಾವ. ಶಿಷ್ಯಪರಂಪರೆಯ ಅಭಾವ, ಅಂದಿನ ವಿದ್ವಾಂಸರ ಸಂಕುಚಿತ ಹಾಗೂ ವ್ಯಾಪಾರೀ ಮನೋಭಾವ, ಗುಂಪುಗಾರಿಕೆ ಹಾಗೂ ಶಾಸ್ತ್ರಿಯವರಿಗೆ ಹೇಳಿಕೊಳ್ಳುವ ಆರ್ಥಿಕ ಸ್ಥಿತಿ ಇಲ್ಲದಿದ್ದದ್ದೂ ಕಾರಣಗಳೆನ್ನಬಹುದು.
ಏನೇ ಕಾರಣವಿದ್ದರೂ, ಅವರು ಬಿಟ್ಟುಹೋಗಿರುವ ಕೃತಿರಚನೆಗಳನ್ನು ಪರಾಂಬರಿಸಿದಾಗ ಅವರ ಪ್ರತಿಭೆ ಪ್ರಕಟಗೊಳ್ಳುವುದು ಖಚಿತ.
ರಚನಕಾರರಾಗಿ, ಹಾರ್ಮೋನಿಯಂ ಹಾಗೂ ಗೋಟುವಾದ್ಯವಾದಕರಾಗಿ, ನಾಟಕಕಾರರಾಗಿ, ಕಾದಂಬರಿಕಾರರಾಗಿ, ದೇಶಭಕ್ತರಾಗಿ, ಆತ್ಮತೃಪ್ತಿಯ ಸಾರ್ಥಕ ಜೀವನ ನಡೆಸಿದ ಶಾಸ್ತ್ರಿಯವರು ೩೦ ಡಿಸೆಂಬರ್ ೧೯೫೮ರಂದು ಜೆಮ್?ಡ್ಪುರದಲ್ಲಿ ಹಠಾತ್ತಾಗಿ ನಿಧನರಾಗಿ ತಮ್ಮ ಆರಾಧ್ಯದೈವ ಸುಬ್ರಹ್ಮಣ್ಯಸ್ವಾಮಿಯ ಪಾದಾರವಿಂದವನ್ನು ಸೇರಿದರು.
ಇವರ ರಚನೆಗಳಲ್ಲಿ ಸಾಮೂಹಿಕವಾಗಿ ಹಾಡಲು ಸುಲಭವಾಗಿರುವ ಭಾರತಮಾತಾ, ಭಾರತ ಧ್ವಜ, ಗಾಂಧಿಯವರ ಕುರಿತಾದ ಸಂಸ್ಕೃತ ರಚನೆಗಳು ೧೯೪೮ರಲ್ಲಿ ಶಾಸ್ತ್ರಿ ಅವರಿಂದಲೇ ಸಂಸ್ಕೃತದಲ್ಲಿ ಸಾಹಿತ್ಯ ಮತ್ತು ಸ್ವರಮಟ್ಟು(ಟಿoಣಚಿಣioಟಿ)ಗಳನ್ನು ಹೊಂದಿ ಪ್ರಕಟವಾಗಿತ್ತು. ಅದೇ ರಚನೆಗಳಿಗೆ ಈಗ ಸಂಸ್ಕೃತ, ಕನ್ನಡ ಮತ್ತು ಆಂಗ್ಲ ಭಾ?ಗಳಲ್ಲಿ ಅರ್ಥಸಹಿತವಾಗಿ ಸಾಹಿತ್ಯ ಮತ್ತು ವರ್ಣಮಟ್ಟನ್ನು (ಆಂಗ್ಲಭಾ?ಯಲ್ಲಿ) ಪ್ರಪಂಚಾದ್ಯಂತ ಇರುವ ವಿದ್ವಾಂಸರು ಹಾಗೂ ವಿದ್ಯಾರ್ಥಿಗಳು ಹಾಡಲು ಅನುಕೂಲವಾಗುವಂತೆ ಪುಸ್ತಕರೂಪದಲ್ಲಿ ಪ್ರಕಟಿಸುವ ಯೋಜನೆ ಈಗಾಗಲೇ ಪ್ರಾರಂಭವಾಗಿದೆ. ಅದರೊಂದಿಗೆ ಈ ರಚನೆಗಳನ್ನೊಳಗೊಂಡ ಸಿಡಿಯನ್ನೂ ಹೊರತರಬೇಕೆಂಬ ಆಶಯ ಸಂಯೋಜಕರದ್ದು.