ಶ್ರವಣಬೆಳಗೊಳದ ಗೊಮ್ಮಟೇಶ್ವರಸ್ವಾಮಿಗೆ ನಡೆಸುವ ಮಹಾಮಸ್ತಕಾಭಿಷೇಕವು 2018 ಫೆಬ್ರುವರಿ ೧೭ರಿಂದ ೨೫ನೇ ತಾರೀಖಿನವರೆಗೆ ನಡೆಯಲಿದೆ. ೨೧ನೇ ಶತಮಾನದಲ್ಲಿ ನಡೆಯುತ್ತಿರುವ ಎರಡನೇ ಮಹಾಮಸ್ತಕಾಭಿಷೇಕಕ್ಕೆ ಶ್ರವಣಬೆಳಗೊಳವು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀಯವರ ನೇತೃತ್ವದಲ್ಲಿ ಸಕಲಸಿದ್ಧತೆಗಳು ನಡೆಯುತ್ತಿವೆ. ಆ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ನಡೆದ ಮಹಾಮಸ್ತಕಾಭಿಷೇಕಗಳ ಒಂದು ಅವಲೋಕನ.
`ಆಕಾಶಕ್ಕಿಂತ ಎತ್ತರವಿಲ್ಲ, ಭೂಮಿಗಿಂತ ಅಗಲವಿಲ್ಲ’ ಎನ್ನುತ್ತದೆ ಗಾದೆಮಾತೊಂದು. ಎತ್ತರದ ಮಾತು ಬಂದಾಗ ತಟ್ಟನೆ ಮನಸ್ಸಿಗೆ ಬರುವ ’ನಾನೇರುವೆತ್ತರಕ್ಕೆ ನೀನೇರುವಿಯಾ’ ಎಂದು ಸವಾಲೆಸೆಯುತ್ತ ಶ್ರವಣಬೆಳಗೊಳದಲ್ಲಿ ನಿಂತ ಗೊಮ್ಮಟವಿಗ್ರಹ ಮತ್ತೊಂದು ಮಹಾಮಸ್ತಕಾಭಿಷೇಕಕ್ಕೆ ಸಜ್ಜಾಗುತ್ತಿದೆ. ದೇವಭೂಮಿ ಭಾರತದ ಜೀವಸತ್ತ್ವವಿರುವುದೇ ಹಬ್ಬ-ಹರಿದಿನ, ಉತ್ಸವಾದಿಗಳಲ್ಲಿ. ನಮ್ಮಲ್ಲಿ ನಡೆಯುವ ಕುಂಭಮೇಳ ಹೇಗೆ ಜಾತಿ-ಪಂಥ, ಮತ-ಧರ್ಮಗಳನ್ನೆಲ್ಲ ಮೀರಿ ಭಾರತವಲ್ಲದೆ ವಿಶ್ವವನ್ನೇ ತನ್ನೆಡೆಗೆ ಸೆಳೆದುಕೊಳ್ಳುವುದೋ, ಹಾಗೆ ಶ್ರವಣಬೆಳಗೊಳದ ಮಹಾಮಸ್ತಕಾಭಿ?ಕವೂ ಜನಸಮೂಹದ ಉತ್ಸವವಾಗಿ ಆಚರಿಸಲ್ಪಡುತ್ತದೆ; ಅದೇ ಈ ಉತ್ಸವದ ಸತ್ತ್ವ.
ದಿಗಂಬರನಾಗಿ ಏಕಶಿಲೆಯಲ್ಲಿ ಅರಳಿದ ಗೊಮ್ಮಟವಿಗ್ರಹಕ್ಕೆ ಗೊಮ್ಮಟವಿಗ್ರಹವೇ ಸಾಟಿ. ಹಾಗೆ ನೋಡಿದರೆ ಆಫಘನಿಸ್ತಾನದ ಬಾಮಿಯಾನ್ ಬುದ್ಧ ವಿಗ್ರಹಗಳು ಗೊಮ್ಮಟ ವಿಗ್ರಹಕ್ಕಿಂತ ಎರಡು ಪಟ್ಟು ಎತ್ತರವಿವೆ, ಆದರೆ ಏಕಶಿಲೆಯವಲ್ಲ. ಈಜಿಪ್ತಿನ ಇಮ್ಮಡಿ ರಾಮೆಸೆಸ್ ವಿಗ್ರಹಗಳು ಎತ್ತರದಲ್ಲಿ ಗೊಮ್ಮಟ ವಿಗ್ರಹಕ್ಕೆ ಸಮೀಪವಿದ್ದರೂ ಅದು ಸ್ವತಂತ್ರವಾಗಿ ನಿಂತಿಲ್ಲ, ಏಕಶಿಲೆಯದೂ ಅಲ್ಲ; ಈಜಿಪ್ತಿನ ಮೆಮ್ನಾನ್ ಅದ್ಭುತಗಳು ಗೊಮ್ಮಟನಿಗಿಂತ ೧೦ ಅಡಿ ಹೆಚ್ಚು ಎತ್ತರವಿದ್ದು, ಸಾವಿರಾರು ವರ್ಷ ಪುರಾತನವಾಗಿದೆ, ಆದರೆ ಏಕಶಿಲೆಯದಲ್ಲ. ?ಪ್ರಾನ್ನ ಪಶುವಿನ ಶಿಲ್ಪ ಸ್ಫಿಂಕ್ಸ್ ೬೬ ಅಡಿ ಎತ್ತರವಿದ್ದರೂ ಏಕಶಿಲೆಯಲ್ಲಿ ಕೆತ್ತಲ್ಪಟ್ಟಿಲ್ಲ. ಆದರೆ ಕಗ್ಗಲ್ಲಿನ ೫೭ ಅಡಿ ಎತ್ತರದ ಏಕಶಿಲಾ ಗೊಮ್ಮಟವಿಗ್ರಹ ಎತ್ತರದಲ್ಲೂ, ಸೌಂದರ್ಯದಲ್ಲೂ, ಅದಕ್ಕಿಂತ ಮಿಗಿಲಾಗಿ ದೈವೀಸ್ವರೂಪವನ್ನೂ ಹೊಂದಿ, ತನ್ನ ಭವ್ಯತೆಯ ಎದುರು ಎಲ್ಲವನ್ನೂ ಮೀರಿಸುತ್ತದೆ.
ರಾಜಭೋಗದಿಂದ ಕೈವಲ್ಯದೆಡೆಗೆ
ಉತ್ತರದ ಅಯೋಧ್ಯೆಯ ರಾಜ ವೃ?ಭನಾಥನಿಗೆ ಭರತ ಮತ್ತು ಬಾಹುಬಲಿ ಆದಿಯಾಗಿ ನೂರುಜನ ಪುತ್ರರಿದ್ದು, ಬಾಹುಬಲಿಯು ಎರಡನೇ ಪತ್ನಿ ಸುನಂದೆಯ ಮಗ. ತಂದೆ ವೃಷಭನಾಥ ಸಂಸಾರವನ್ನು ತ್ಯಜಿಸಿ ಮಕ್ಕಳಿಗೆ ರಾಜ್ಯ ಒಪ್ಪಿಸಿ ಮೊದಲ ಜೈನ ತೀರ್ಥಂಕರ ಆದಿನಾಥನಾದ. ಬಾಹುಬಲಿ ದಕ್ಷಿಣದ ಪಾದನಪುರದಲ್ಲಿ ರಾಜನಾಗಿ ಅಜೇಯನೆನಿಸಿದ; ಸಹೋದರ ಭರತ ತನ್ನ ಆಯುಧಾಗಾರದಲ್ಲಿ ಹುಟ್ಟಿದ ಚಕ್ರರತ್ನವನ್ನು ಮುಂದಿಟ್ಟುಕೊಂಡು ದಿಗ್ವಿಜಯ ನಡೆಸುವ ಸಂದರ್ಭದಲ್ಲಿ ಬಾಹುಬಲಿ ಭ್ರಾತೃಪ್ರೇಮಕ್ಕಿಂತ ಕ್ಷಾತ್ರಪ್ರೇಮವೇ ಮೇಲೆಂದು ಒಪ್ಪಿ ಚಕ್ರರತ್ನವನ್ನು ತಡೆಹಿಡಿದು ನಿಲ್ಲಿಸಿದ. ಇಬ್ಬರ ನಡುವೆ ನಡೆದ ಯುದ್ಧದಲ್ಲಿ ಬಾಹುಬಲಿ ಅಜೇಯನಾದಾಗ ಭರತ ಚಕ್ರರತ್ನಕ್ಕೆ ಬಾಹುಬಲಿಯನ್ನು ಕೊಲ್ಲಲು ಆಜ್ಞಾಪಿಸಿದ. ಆದರೆ ಚಕ್ರರತ್ನವು ಕೊಲ್ಲಲು ಒಪ್ಪಲಿಲ್ಲ. ಆ ಸಂದರ್ಭದಲ್ಲಿ ಹಿರಿಯನಾದ ಭರತನ ಅಧಿಕಾರ, ಭೂಮಿಯ ಮೇಲಿನ ಆಸೆ ಬಾಹುಬಲಿಯನ್ನು ಸಂಸಾರದ ಎಲ್ಲ ಮೋಹವನ್ನೂ ತೊರೆಯುವಂತೆ ಮಾಡಿತು, ಕೈವಲ್ಯನನ್ನಾಗಿಸಿತು. ಆತನ ಈ ಬದಲಾವಣೆ ಭರತನನ್ನೂ ಬದಲಾಯಿಸಿದ್ದು ಅನಾಸಕ್ತಿಗೆ ಇರುವ ಶಕ್ತಿಗೆ ಒಂದು ಸಾಕ್ಷಿ. ಮುಂದೆ ಅಧ್ಯಾತ್ಮಸಾಧನೆಗೈದ ಬಾಹುಬಲಿ ತೀರ್ಥಂಕರನಾಗದಿದ್ದರೂ ತೀರ್ಥಂಕರಸಮನಾಗಿ ಪೂಜಿಸಲ್ಪಟ್ಟ. ಶ್ರವಣಬೆಳಗೊಳದಲ್ಲಿ ಸೇನಾಪತಿ, ಮಹಾಮಾತ್ಯ ಚಾವುಂಡರಾಯನಿಂದ ಕ್ರಿ.ಶ. ೯೮೧ನೇ ಇಸವಿಯಲ್ಲಿ ವಿಗ್ರಹವಾಗಿ ಕಡೆಯಲ್ಪಟ್ಟು ಗೊಮ್ಮಟನಾದ. ಚೈತ್ರ ಶುಕ್ಲ ಪಂಚಮಿಯ ರವಿವಾರ ಮೃಗಶಿರಾ ನಕ್ಷತ್ರ, ಕುಂಭಲಗ್ನ, ಸೌಭಾಗ್ಯಯೋಗ, ವಿಭವ ಸಂವತ್ಸರ(ಕ್ರಿ.ಶ. ೯೮೧, ಮಾರ್ಚ್ ೧೩)ದಂದು ವಿಗ್ರಹದ ಪ್ರತಿ?ಪನಾ ಪೂಜೆ ನೆರವೇರಿತು. ದಿನದಿಂದ ದಿನಕ್ಕೆ ತನ್ನ ಮಾನ್ಯತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಇರುವ ಈ ಮೂರ್ತಿಗೆ ದಿನನಿತ್ಯ ಪಾದಾಭಿಷೇಕದ ಹೊರತಾಗಿ, ಕ್ಷೀರಾಭಿಷೇಕಕ್ಕೆ ಹೆಚ್ಚಿನ ಮಹತ್ತ್ವವಿರುವ ಮಹಾಮಸ್ತಕಾಭಿಷೇಕವು ಸಹ ಕುಂಭಮೇಳ, ಪಂಚಲಿಂಗ ಯಾತ್ರೆಯಂತೆ ೧೨ ವರ್ಷಕೊಮ್ಮೆ ಗೊತ್ತಾದ ಪರ್ವದಂದೇ ನಡೆಯುತ್ತದೆ. ಕೆಲವೊಮ್ಮೆ ಕಾರಣಾಂತರಗಳಿಂದ ೧೨ ವ?ದ ಬದಲಾಗಿ ೧೩-೧೪ ವರುಷಕ್ಕೂ ಬದಲಾಗಿದ್ದೂ ಇದೆ. ಜೈನಮತದ ದಿಗಂಬರಪಂಥದವರು ಆಚರಿಸುವ ಈ ಉತ್ಸವಕ್ಕೆ ದೇಶದಾದ್ಯಂತ ಎಲ್ಲ ಕಡೆಯಿಂದಲೂ ಜೈನ ಮತದವರೂ, ಜೈನರಲ್ಲದವರೂ ಸಹಸ್ರಸಂಖ್ಯೆಯಲ್ಲಿ ಬಂದು ಸೇರುತ್ತಾರೆ. ಭಕ್ತಿ-ಭಾವ ತುಂಬಿದ ಮನರಂಜನಾ ಕಾರ್ಯಕ್ರಮಗಳ ಏರ್ಪಾಟು ಸಹ ಇರುತ್ತದೆ.
ಉತ್ಸವ, ಹಬ್ಬ ಹರಿದಿನಗಳು ಹಲವರ ಭಾಗಿತ್ವದಿಂದ ಮಾತ್ರ ಯಶಸ್ವಿಯಾಗುತ್ತವೆ. ಮಹಾಮಸ್ತಕಾಭಿ?ಕವೂ ಹಲವರ ಭಾಗಿತ್ವದಿಂದಲೇ ನಡೆಯುವ ಉತ್ಸವ. ಶಾಸನಗಳಲ್ಲೂ ಆ ಬಗ್ಗೆ ಉಲ್ಲೇಖವಿದೆ. ೨೩೧ನೇ ಶಾಸನದಲ್ಲಿ ಮಸ್ತಕಾಭಿ?ಕದ ಕಾಲದಲ್ಲಿ ನೀಡಬೇಕಾದ ಕೆಲಸಗಾರರ ಮಿರಾಸಿನ ಭಾಗಗಳ ಬಗ್ಗೆ ಈ ರೀತಿ ವರ್ಣಿಸಲಾಗಿದೆ:
ಪಂಡಿತದೇವರು ಮಾಡಿತ್ತು ಮಹಾಭಿಷೇಕದೊಳಗೆ
ಹಾಲುಮೊಸರಿಗೆ ೨, ಪೂಜಾರಿಗೆ ೧ ಭಾಗಿ, ಕೆಲಸಗಳಿಗೆ
ಕಲುಕುಟಿಗರಿಗೆ ಭಾಗಿ ೨, ಭಂಡಿಕಾರಂಗೆ ೧, ತಪ್ಪಿದವಕ್ಕೆ ಸಾಸ್ತಿ….
ನಡೆದು ಬಂದ ಹಾದಿ
ಮಹಾಮಸ್ತಕಾಭಿಷೇಕದ ಕುರಿತಾಗಿ ಪ್ರಾಚೀನತಮ ಶಾಸನವಿರುವುದು ೨೫೪(೧೦೫) – ಕ್ರಿ.ಶ. ೧೩೯೮ರದ್ದು. ಪಂಡಿತಾಚಾರ್ಯರೆಂಬವರು ಏಳು ಸಲ ಮಸ್ತಕಾಭಿಷೇಕ ನಡೆಯಿಸಿದರೆಂದು ಆ ಶಾಸನ ಹೇಳುತ್ತದೆ. ಹಾಗೆಯೇ ಕ್ರಿ.ಶ. ೧೩೨೭ರಲ್ಲಿಯೂ [೨೨೩(೯೮)] ನಡೆದಿದೆ ಎಂದು ತಿಳಿದುಬರುತ್ತದೆ. ಕವಿ ಪಂಚಬಾಣನು ಕ್ರಿ.ಶ. ೧೬೧೨ರಲ್ಲಿ ಶಾಂತವರ್ಣಿ ಎಂಬಾತ ಮಹಾಮಸ್ತಕಾಭಿ?ಕ ನಡೆಸಿದನೆಂದೂ ಒಂದೆಡೆ ಉಲ್ಲೇಖಿಸಿದ್ದಾನೆ. ಹಾಗೂ ಕ್ರಿ.ಶ. ೧೬೭೭ರಲ್ಲಿ ಚಿಕ್ಕದೇವರಾಜ ಒಡೆಯರ ಮಂತ್ರಿ ವಿಶಾಲಾಕ್ಷ ಪಂಡಿತನು ಸ್ವತಃ ಜೈನಮತದವನಾಗಿದ್ದು ಆತ ಸ್ವಂತ ವೆಚ್ಚದಲ್ಲಿ ಮಹಾಮಸ್ತಕಾಭಿಷೇಕವನ್ನು ನಡೆಸಿದನು ಎಂದು ಹೇಳಿದ್ದಾನೆ. ಕ್ರಿ.ಶ. ೧೮೨೫ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ ಆಡಳಿತಕಾಲದಲ್ಲಿ ಮಸ್ತಕಾಭಿಷೇಕ ನಡೆದ ಉಲ್ಲೇಖವಿದೆ. ಕಳೆದ ನೂರಿಪ್ಪತ್ತೈದು ವರ್ಷಗಳಲ್ಲಿ ಒಂಬತ್ತು ಮಸ್ತಕಾಭಿಷೇಕ ಮಹೋತ್ಸವ ಕೈಗೊಳ್ಳಲಾಗಿದೆ. ಪ್ರತಿ ಮಸ್ತಕಾಭಿಷೇಕದಲ್ಲೂ ಶ್ರವಣಬೆಳಗೊಳ ಹಾಗೂ ಗೊಮ್ಮಟೇಶ್ವರ ವಿಗ್ರಹದ ಪ್ರಗತಿಗೆ ಸಂಬಂಧಪಟ್ಟಂತೆ ಒಂದಲ್ಲ ಒಂದು ಬಗೆಯ ವಿಶೇಷ ಕಾರ್ಯಯೋಜನೆಯನ್ನು ಕೈಗೆತ್ತಿಕೊಂಡಿದ್ದುದು ಮಸ್ತಕಾಭಿಷೇಕ ಉತ್ಸವದ ಫಲ.
೧೯ನೇ ಶತಮಾನದಲ್ಲಿ ನಡೆದದ್ದು
ಕ್ರಿ.ಶ. ೧೮೭೧ರ ಜೂನ್ನಲ್ಲಿ ನಡೆದ ಮಹೋತ್ಸವದಲ್ಲಿ ಮೈಸೂರಿನ ಕಮೀಶನರ್ ಕ್ಯಾಪ್ಟನ್ ಎಸ್.ಎಫ್. ಮೆಕೆಂಜೀಯವರು ಮಸ್ತಕಾಭಿಷೇಕದ ವರ್ಣನೆ ಮಾಡಿದ ಉಲ್ಲೇಖವಿದ್ದು, ಮೂರ್ತಿಯ ಅಳತೆಯನ್ನು ಅವರೇ ಮಾಡಿಸಿದ ಬಗ್ಗೆ ವಿವರವಿದೆ.
ಮುಂದೆ ಕ್ರಿ.ಶ. ೧೮೮೭ರಲ್ಲಿ ನಡೆದ ಉತ್ಸವವನ್ನು ಶ್ರೀ ಆರ್. ನರಸಿಂಹಾಚಾರ್ ಅವರು ವಿವರಿಸಿದ್ದಾರೆ. ಈ ಉತ್ಸವಕ್ಕೆ ಸುಮಾರು ೫೦ ಸಾವಿರ ರೂಪಾಯಿಗಳನ್ನು ಕೊಲ್ಲಾಪುರದ ಭಟ್ಟಾರಕ ಶ್ರೀ ಲಕ್ಷ್ಮಿಸೇನ ಸ್ವಾಮಿಯವರೇ ಸ್ವಂತವೆಚ್ಚದಿಂದ ಭರಿಸಿದ್ದನ್ನು ವಿವರಿಸಿದ್ದಾರೆ. ಆಗ ಸುಮಾರು ೨೦,೦೦೦ ಯಾತ್ರಿಕರು ಸೇರಿದ್ದು ಅವರಲ್ಲಿ ಬಂಗಾಳಿಗಳು, ಗುಜರಾತಿಗಳು, ತಮಿಳರು ಎಲ್ಲರೂ ಗುಂಪಾಗಿ ತಿಂಗಳ ಮೊದಲೇ ಸೇರಲಾರಂಭಿಸಿದ್ದರಂತೆ. ಉತ್ಸವದ ಮಧ್ಯಾಹ್ನದವರೆಗೂ ಜನ ಸೇರುತ್ತಲೇ ಇದ್ದು ತಿಂಗಳ ಮುಂಚಿನಿಂದಲೇ ಎಲ್ಲ ದೇವಾಲಯಗಳಲ್ಲೂ ಪೂಜೆ, ವಿಶೇಷ ಆರಾಧನೆ, ಪಾದಪೂಜೆ ನಡೆಯುತ್ತಿತ್ತಂತೆ. ಮಾರ್ಚ್ ೧೪ರಂದು ಸೂರ್ಯೋದಯಕ್ಕೆ ಮುಂಚೆ ಜನ ವಿಂದ್ಯಗಿರಿಯನ್ನು ಹತ್ತಿದ್ದರು. ೧೦ ಗಂಟೆ ಹೊತ್ತಿಗೆ ಅಲ್ಲಿ ತೀರಾ ಸಂದಣಿಯಿದ್ದು, ಸ್ವಾಮಿಯ ಎದುರು ೪೦ ಚದರ ಅಡಿಗಳಷ್ಟು ಪ್ರದೇಶದಲ್ಲಿ ಭತ್ತವನ್ನು ಹರಡಿ ಅದರ ಮೇಲೆ ಸಹಸ್ರ ಶುದ್ಧೋದಕ ಕಲಶವನ್ನು ಇಡಲಾಗಿತ್ತು. ಅಟ್ಟಣಿಗೆಯ ಮೇಲೆ ಅರ್ಚಕರು ಹಾಲು, ತುಪ್ಪ, ಮೊಸರಿನ ಕುಡಿಕೆಗಳನ್ನು ಹಿಡಿದು ನಿಂತಿದ್ದು, ಕೊಲ್ಲಾಪುರದ ಸ್ವಾಮಿಗಳ ಅನುಮತಿ ದೊರಕಿದೊಡನೆ ಅಭಿಷೇಕ ಮಾಡಿ ವೈದಿಕರು ಮಂತ್ರಘೋಷ ಮಾಡುವಾಗ ನೆರೆದ ಭಕ್ತರು ’ಜೈ ಮಹಾರಾಜ್’ ಘೋಷ ಕೂಗುತ್ತಿದ್ದರು ಎಂದು ವರ್ಣಿಸಿದ್ದಾರೆ.
ಇಪ್ಪತ್ತನೇ ಶತಮಾನದಲ್ಲಿ ನಡೆದದ್ದು
೩೦ ಮಾರ್ಚ್ ೧೯೧೦ರಂದು ನಡೆದ ಉತ್ಸವದ ಹೊಣೆಯನ್ನು ’ಭಾರತವರ್ಷೀಯ ದಿಗಂಬರ ಜೈನ್ ತೀರ್ಥಕ್ಷೇತ್ರ ಕಮಿಟಿ’ಯು ಹೊತ್ತಿದ್ದು, ಆ ವರ್ಷ ವಿಂದ್ಯಗಿರಿಗೆ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು.
೧೫ ಮಾರ್ಚ್ ೧೯೨೫ರಲ್ಲಿ ಪುನಃ ಕಮಿಟಿ ವತಿಯಿಂದಲೇ ಉತ್ಸವ ಏರ್ಪಾಟಾಗಿದ್ದು, ಭಟ್ಟಾರಕ ನೇಮಿಸಾಗರ ವರ್ಣಿಯವರ ಕೋರಿಕೆಯ ಮೇರೆಗೆ ಆಚಾರ್ಯ ಶ್ರೀ ಶಾಂತಿಸಾಗರರು (ದಕ್ಷಿಣ) ತೀರ್ಥವಂದನೆ ಮಾಡಿ ಅಭಿಷೇಕ ಮಹೋತ್ಸವವನ್ನು ನೆರವೇರಿಸಿದರು. ಆಗ ಸುಮಾರು ೩೦-೩೫ ಸಾವಿರ ಭಕ್ತರು ಸೇರಿದ್ದು ಅಂಗಡಿಮುಂಗಟ್ಟುಗಳು, ಸರ್ಕಸ್, ನಾಟಕ ಕಂಪೆನಿಗಳೂ ಸೇರಿದ್ದು ಹೇರಳ ಧನಸಂಪಾದನೆಯೂ ಆಗಿತ್ತು. ಮಹಾರಾಜರೂ ಆಗಮಿಸಿ ಉತ್ಸವಕ್ಕೆ ಇನ್ನಷ್ಟು ಕಳೆತುಂಬಿದರು. ಪ್ರಭುಗಳು ಅಲಂಕೃತ ಪಲ್ಲಕ್ಕಿಯಲ್ಲಿ ಮೆರವಣಿಗೆ ಮಾಡಿಸಿಕೊಂಡು ಮಠಕ್ಕೆ ಹೋಗಿದ್ದನ್ನು ದೇಶ-ವಿದೇಶದ ಜನರು ಕಣ್ತುಂಬಿಕೊಂಡರಂತೆ.
೨೬ ಫೆಬ್ರುವರಿ ೧೯೪೦ರಂದು ನೇಮಿಸಾಗರರು ವಿರಕ್ತರಾಗಿದ್ದ ಕಾರಣ ಮೈಸೂರು ಸರ್ಕಾರವು ಉತ್ಸವವನ್ನು ನಡೆಸಿತು. ಆಗಿನ ಅಂದಾಜು ವೆಚ್ಚ ಸುಮಾರು ೫೦ ಸಾವಿರ ರೂಪಾಯಿಗಳು. ೫೦ ಸಾವಿರ ಯಾತ್ರಿಕರ ನಿರೀಕ್ಷೆ ಇತ್ತೆಂದು ವಿವರಿಸಲಾಗಿದೆ. ಜಿಲ್ಲಾಧಿಕಾರಿಗಳೂ, ಸಬ್ ಡಿವಿಜನ್ ಅಧಿಕಾರಿಗಳೂ ಅಲ್ಲದೆ ಮಠಾಧಿಪತಿ ಚಾರುಕೀರ್ತಿ ಪಂಡಿತಾಚಾರ್ಯವರ್ಯರೂ ಆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಹೋತ್ಸವದ ಯಶಸ್ಸಿಗೆ ಕಾರಣರಾದರು. ಆಗ ಬೆಟ್ಟದವರೆಗೆ ವಿದ್ಯುತ್ ಸರಬರಾಜು ವ್ಯವಸ್ಥೆ ಮಾಡಲಾಯಿತು. ಸೇಠ್ ಹುಕುಂಚಂದರ ಅಧ್ಯಕ್ಷತೆಯಲ್ಲಿ ಮಹಾಸಭೆಯ ಅಧಿವೇಶನ ನಡೆಸಲಾಯಿತು.
೫ ಮಾರ್ಚ್ ೧೯೫೩ರಂದು ಮೈಸೂರು ಅರಸರಿಂದ ಕಮಿಟಿ ರಚಿಸಿ, ಆ ಮೂಲಕ ಉತ್ಸವ ನೆರವೇರಿಸಲ್ಪಟ್ಟಿತು. ಅಭಿಷೇಕಕ್ಕೆಂದು ಕಬ್ಬಿಣದ ಪೈಪ್ಗಳ ಅಟ್ಟಣಿಗೆಯನ್ನು ನಿರ್ಮಿಸಿದ್ದು ಆಗಿನ ವಿಶೇಷವಾಗಿತ್ತು. ಆಗಲೇ ನಡೆದ ಒಂದು ಘಟನೆಯೆಂದರೆ ಹಾಸನದ ಡೆಪ್ಯುಟಿ ಕಮೀಶನರ್ ಅವರು ದಿಗಂಬರ ಜೈನರಲ್ಲದವರಿಗೂ ಕಲಶಗಳನ್ನು ಮಾರಿದ್ದು. ಬಳಿಕ ಮುನಿಗಳು ಹಾಗೂ ಇತರ ಪ್ರಮುಖರ ವಿರೋಧ ಹಾಗೂ ಚಳವಳಿಯಿಂದಾಗಿ ಅದನ್ನು ಹಿಂದಕ್ಕೆ ಪಡೆಯಲಾಯಿತು.
೩೦ ಮಾರ್ಚ್ ೧೯೬೭ರಲ್ಲಿ ’ಶ್ರವಣಬೆಳಗೊಳ ದಿಗಂಬರ ಜೈನ್ ಮುಜರಾಯಿ ಕಮಿಟಿ’ಯು ಮೈಸೂರು ಸರ್ಕಾರ ಹಾಗೂ ತೀರ್ಥಕ್ಷೇತ್ರ ಕಮಿಟಿಯ ನೆರವಿನಿಂದ ಉತ್ಸವ ನೆರವೇರಿಸಿತು. ಸಾಹು ಶಾಂತಿಪ್ರಸಾದರ ವಿಶೇಷ ಸಹಕಾರ, ಭಟ್ಟಾರಕ ಚಾರುಕೀರ್ತಿಯವರ ಮಾರ್ಗದರ್ಶನ, ಹಾಗೂ ಆಗಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಮತ್ತು ಉಪಕುಲಪತಿ ಶ್ರೀ ಕಾಲೂಲಾಲ್ ಶ್ರೀಮಾಲಿ ಇವರೆಲ್ಲರ ನೆರವು ಹಾಗೂ ಆಚಾರ್ಯರ ಮತ್ತು ಮುನಿಗಣಗಳ ಉಪಸ್ಥಿತಿಯಿಂದ ಉತ್ಸವ ಕಳೆಗಟ್ಟಿತ್ತು.
೧೯೮೧ಕ್ಕೆ ವಿಗ್ರಹದ ಪ್ರತಿಷ್ಠಾಪನೆಯಾಗಿ ಸಹಸ್ರವರ್ಷ ಆಗುತ್ತಲಿದ್ದು, ೧೯೭೬ ಡಿಸೆಂಬರ್ನಲ್ಲಿ ಬೆಂಗಳೂರಿನಲ್ಲಿ ನಡೆದ ಮೀಟಿಂಗ್ನಲ್ಲಿ ೧೯೭೯ರ ಬದಲಾಗಿ, ೧೯೮೧ಕ್ಕೆ ಮಹಾಮಸ್ತಕಾಭಿಷೇಕ ನಡೆಸುವ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು. ಆಗಿನ ಪ್ರಧಾನಿ ಇಂದಿರಾಗಾಂಧಿಯವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸಮಿತಿಯ ರಚನೆಯಾಯ್ತು. ಆನಂತರ ೨೯.೯.೧೯೮೧ರಂದು ದಿಲ್ಲಿಯಿಂದ ’ಗೊಮ್ಮಟೇಶ್ವರ ಜಿನಮಂಗಳ ಮಹಾಕಲಶ’ವನ್ನು ಶ್ರೀಮತಿ ಇಂದಿರಾಗಾಂಧಿಯವರು ಪ್ರವರ್ತಿಸಿ, ಫೆಬ್ರುವರಿ ೨೧ರಂದು ಗೊಮ್ಮಟೇಶ್ವರ ವಿಗ್ರಹದ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ಉದ್ಘಾಟಿಸಿದರು. ಈ ಉತ್ಸವದ ಯಶಸ್ಸಿನ ಹಿಂದೆ ಎಲ್ಲ ದಿಗಂಬರಾಚಾರ್ಯರು ಹಾಗೂ ಪೂಜ್ಯ ಏಲಾಚಾರ್ಯ ಮುನಿಶ್ರೀ ವಿದ್ಯಾನಂದರ ಮಾರ್ಗದರ್ಶನವಿತ್ತು ಮತ್ತು ತರುಣ ಭಟ್ಟಾರಕರಾಗಿದ್ದ ಚಾರುಕೀರ್ತಿ ಸ್ವಾಮಿಜೀಯವರ ನಿರಂತರ ಪರಿಶ್ರಮವಿತ್ತು; ಹಾಗಾಗಿ ಇದು ಭಾರತದ ಜೈನಸಮಾಜದ ಮಹತ್ತ್ವದ ಉತ್ಸವವಾಗಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ಸವವನ್ನು ಆಚರಿಸಲಾಯಿತು. ಸಾಹು ಶ್ರೇಯಾಂಸ ಪ್ರಸಾದರ ಅಧ್ಯಕ್ಷತೆಯಡಿ ಜೈನ ಸಮಾಜದ ರಾಷ್ಟ್ರೀಯ ಸಮಿತಿಯ ರಚನೆಯಾಯ್ತು. ಚಾರುಕೀರ್ತಿಯವರಿಗೆ ’ಕರ್ಮಯೋಗಿ’ ಬಿರುದು ನೀಡಿ ಗೌರವಿಸಲಾಯಿತು. ಹಲವಾರು ಜನೋಪಯೋಗಿ ಕಾರ್ಯಗಳನ್ನೂ ಕೈಗೆತ್ತಿಕೊಂಡು ಪೂರ್ಣಗೊಳಿಸಲಾಯಿತು.
ಇಪ್ಪತ್ತನೇ ಶತಮಾನದ ಕೊನೆಯ ಮಹಾಮಸ್ತಕಾಭಿಷೇಕವು ನಡೆದದ್ದು ೧೯ ಡಿಸೆಂಬರ್ ೧೯೯೩ರಲ್ಲಿ. ಆ ದಿನಗಳಲ್ಲಿ ಶ್ರವಣಬೆಳಗೊಳದಲ್ಲಿ ಪ್ರಗತಿಯ ಕಾರ್ಯ ಸಾಗಿತ್ತು. ಯಾತ್ರಿಕರಿಗಾಗಿ ಸುಸಜ್ಜಿತ ಅತಿಥಿಗೃಹ ನಿರ್ಮಾಣ, ಯಾತ್ರಿನಿವಾಸಗಳು, ಧರ್ಮಛತ್ರಗಳು, ಆಸ್ಪತ್ರೆ, ಬಸ್ನಿಲ್ದಾಣದ ವಿಸ್ತರಣಾ ಕಾರ್ಯ, ನಗರದ ಶಾಶ್ವತ ನೀರುಸರಬರಾಜು ಯೋಜನೆ, ನಗರದ ಸೌಂದರ್ಯ ಕಾಪಾಡಲು ಉದ್ಯಾನವನಗಳ ನಿರ್ಮಾಣ ಇವೆಲ್ಲ ಕಾರ್ಯಗಳೂ ಕೈಗೊಳ್ಳಲ್ಪಟ್ಟಿತು. ಆಗಿನ ರಾಷ್ಟ್ರಪತಿ ಶ್ರೀ ಶಂಕರ ದಯಾಳ್ ಶರ್ಮ ಅವರು ಬಾಹುಬಲಿಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ವಿಶೇಷವೆಂದರೆ ಚಾರಿತ್ರ್ಯ ಚಕ್ರವರ್ತಿಗಳಾದ ಆಚಾರ್ಯ ಶಾಂತಿಸಾಗರರ ಪರಂಪರೆಯ ಆಗಿನ ಆಚಾರ್ಯರಾದ ಶ್ರೀ ವರ್ಧಮಾನಸಾಗರರು ತಮ್ಮ ಸಂಘದ ಜೊತೆ ಉತ್ಸವದಲ್ಲಿ ಪಾಲ್ಗೊಂಡರು. ಆಚಾರ್ಯ ವಿದ್ಯಾಸಾಗರ ಸಂಘದಿಂದಲೂ ಅನೇಕ ಶಿ?ರು ಪಾಲ್ಗೊಂಡರು. ಸಾಧುಸಂತರು ಹಾಗೂ ಧರ್ಮಸ್ಥಳದ ಶ್ರೀ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಿಂದ ಉತ್ಸವ ಕಳೆಗಟ್ಟಿತ್ತಲ್ಲದೆ, ಪಂಚಕಲ್ಯಾಣವು ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕರ ಜನಸಂಪರ್ಕ ಹಾಗೂ ವಿಸ್ತೃತ ಅನುಭವದ ಫಲವಾಗಿ ಉತ್ಸವ ಯಶಸ್ವಿಯಾಗಿ ನೆರವೇರಿತು. ದೂರದರ್ಶನದಲ್ಲೂ ನಾಲ್ಕು ಗಂಟೆಗಳ ನೇರ ಪ್ರಸಾರ, ಆಕಾಶವಾಣಿಯ ಪ್ರತ್ಯಕ್ಷ ವಿವರಣೆ, ದೇಶಾದ್ಯಂತ ಪತ್ರಿಕೆಗಳು ಪ್ರಸಾರಮಾಡಿದ್ದು ಆ ಬಾರಿಯ ವಿಶೇಷವಾಗಿತ್ತು. ’ಪ್ರಾಕೃತ ಸಂಸ್ಥೆ’ಯೂ ಆರಂಭವಾಯ್ತು.
ಇಪ್ಪತೊಂದನೇ ಶತಮಾನದಲ್ಲಿ ನಡೆದದ್ದು
೨೧ನೇ ಶತಮಾನದ ಮೊದಲ ಮಹಾಮಸ್ತಕಾಭಿಷೇಕ ನಡೆದದ್ದು ೨೦೦೬ರಲ್ಲಿ. ೨೦೦೫ರಲ್ಲಿ ನಡೆಯಬೇಕಾಗಿದ್ದ ಅಭಿಷೇಕ ಉತ್ಸವವನ್ನು ಜಿಲ್ಲೆಯಲ್ಲಿ ಆಗ ಇದ್ದ ಬರಗಾಲದ ಪ್ರಯುಕ್ತ ಮುಂದೂಡಲಾಗಿತ್ತು. ೨೦೦೬ ಫೆಬ್ರುವರಿ ೮ರಂದು ಮುಂಜಾನೆ ೧೦ ಗಂಟೆ ೪೧ ನಿಮಿಷಕ್ಕೆ ಅಭಿಷೇಕ ಆರಂಭವಾಗಿ ಆರು ತಾಸು ನಡೆಯಿತು. ಅಂದಿನ ರಾಷ್ಟ್ರಪತಿ ಶ್ರೀ ಅಬ್ದುಲ್ ಕಲಾಂ ಅವರು ಉದ್ಘಾಟನೆ ಮಾಡಿದರು. ಶ್ರವಣಬೆಳಗೊಳದ ಜನರ ಒಂದು ಮನದಿಂಗಿತ ಪೂರ್ಣಗೊಂಡಿತ್ತು. ಬಹುದಿನದ ಬೇಡಿಕೆಯಾದ ರೈಲುಯೋಜನೆಯು ಆಗಿನ ಪ್ರಧಾನಿಗಳಾಗಿದ್ದ ಮಾನ್ಯ ಎಚ್.ಡಿ. ದೇವೇಗೌಡ ಅವರಿಂದ ಜಾರಿಗೊಳ್ಳಲ್ಪಟ್ಟಿತು.
ಮುಂಜಾನೆ ಪ್ರಾರ್ಥನೆಯಿಂದ ಆರಂಭವಾದ ಅಭಿ?ಕ ಮಹೋತ್ಸವಕ್ಕೆ ಜೈನ ಯತಿಗಳು ದಿಗಂಬರ ಮಠದಿಂದ ಪವಿತ್ರಜಲವನ್ನು ತಂದರು. ಮಂತ್ರಘೋ?ದೊಂದಿಗೆ ಚಾರುಕೀರ್ತಿ ಭಟ್ಟಾರಕ ಸ್ವಾಮಿ ಅವರಿಂದ ದೊಡ್ಡ ಬಿಂದಿಗೆಯಲ್ಲಿ ಅಕ್ಕಿ ತುಂಬಿ ಬೆಳ್ಳಿಯ ತೆಂಗಿನಕಾಯಿಯಿಂದ ಮುಚ್ಚಲ್ಪಟ್ಟು ಮಹೋತ್ಸವದ ಉದ್ಘಾಟನೆಯ ಸಂಕೇತ ತೋರಿದರು. ಪವಿತ್ರ ಗಳಿಗೆಯಲ್ಲಿ ಇಬ್ಬರು ಯತಿಗಳು ರಾಜಸ್ಥಾನದ ಅಶೋಕ್ ಕುಮಾರ್ ಪಟ್ಣಿ ಅವರ ಹೆಗಲ ಮೇಲೆ ಇಟ್ಟರು. ಇನ್ನೊಂದು ಬಿಂದಿಗೆಯ ನೀರನ್ನು ೧,೦೨೪ ವರ್ಷದ ಮೂರ್ತಿಯ ಮೇಲೆ ಅಭಿಷೇಕ ಮಾಡಲಾಯಿತು. ಆರು ತಾಸಿನ ಈ ಕಾರ್ಯಕ್ರಮದಲ್ಲಿ ಜಲ, ಎಳನೀರು, ಕಬ್ಬಿನಹಾಲು, ಅಕ್ಕಿಹಿಟ್ಟು, ಮೂಲಿಕೆ, ಹಾಲು, ಗಂಧದ ಪೇಸ್ಟ್, ಅರಿಶಿನ, ಅಮೂಲ್ಯ ಹರಳು ಹಾಗೂ ವಿಶ್ವದ ಎಲ್ಲೆಡೆಯಿಂದ ಸಂಗ್ರಹಿಸಲ್ಪಟ್ಟ ೫೨ ಬಗೆಯ ಹೂವುಗಳಿಂದ ಅಭಿಷೇಕ ಮಾಡಿದರು. ೧೦೮ ಜಲಕಲಶ, ೧,೦೦೦ ಲೀಟರ್ ಹಾಲು, ೩,೦೦೦ ಲೀಟರ್ ನೀರು, ೨೫೦ ಕಿ. ಗ್ರಾಂ. ಅರಿಶಿನ, ಹಾಗೂ ಶ್ರೀಗಂಧದ ಅಭಿಷೇಕದಿಂದ ಮೂರ್ತಿಯ ಬಣ್ಣವೇ ಬದಲಾಗಿತ್ತು. ಹೆಲಿಕಾಪ್ಟರ್ ಮೂಲಕವೂ ಹೂವಿನ ಅಭಿಷೇಕ ಮಾಡಲಾಯಿತು. ವಿಶ್ವಮಟ್ಟದ ಮಾಧ್ಯಮಗಳು ಡಾಕ್ಯುಮೆಂಟರಿಯನ್ನು ಮಾಡಿದ್ದುದು ವಿಶೇಷ.
ಈ ಶತಮಾನದ ಮತ್ತೊಂದು ಮಹಾಮಜ್ಜನಕ್ಕೆ ಶ್ರವಣಬೆಳಗೊಳ ಸಿದ್ಧವಾಗುತ್ತಿದೆ. ದಿವ್ಯ ಭವ್ಯ ಕಗ್ಗಲ್ಲ ವಿಗ್ರಹವು ಅಭಿ?ಕದಲ್ಲಿ ಮಿಂದು ತೃಪ್ತನಾಗಿ ಹರಸುವುದನ್ನು ಕಣ್ತುಂಬಿಕೊಳ್ಳಲು ಜನ ಕಾತರರಾಗಿದ್ದಾರೆ. ಉತ್ಸವ ಸಂಪೂರ್ಣ ಯಶ ಕಾಣಲೆಂದು ಹಾರೈಸೋಣ.