ಮುಂಜಾನೆ ಮಡಿಯುಟ್ಟು ಜಿನಸ್ಮರಣೆ ಮಾಡಿ ಚಿಕ್ಕಬೆಟ್ಟದ ಬಂಡೆಯೊಂದರ ಮೇಲೆ ನಿಂತು ಪಕ್ಕದ ದೊಡ್ಡ ಬೆಟ್ಟದ ಕೋಡುಗಲ್ಲಿಗೆ ಬಂಗಾರದ ಬಾಣವನ್ನು ಬಿಡಬೇಕೆಂದು ಕನಸಿನ ಸೂಚನೆ. ಚಾಮುಂಡರಾಯ ಹಾಗೆಯೇ ಮಾಡಿದ. ಬಾಣ ಆ ಬಂಡೆಗೆ ತಾಕಿದೊಡನೆ ಬಾಹುಬಲಿಯ ಶ್ರೀಮುಖ ತೋರಿಕೊಂಡಿತು. ಆಮೇಲೆ ಅವರೆಲ್ಲ ಆ ದೊಡ್ಡಬೆಟ್ಟವನ್ನೇರಿ ಶಿಲ್ಪಿಗಳಿಂದ ಇಡೀ ಮೈಮಾಟವನ್ನು ಬಿಡಿಸಿದರು. ವಿಂಧ್ಯಗಿರಿಯ ಮೇಲೆ ಗೊಮ್ಮಟೇಶ್ವರನ ’ಸುಮನೋಹರ ಭಯಂಕರ’ ಮೂರ್ತಿ ಮೈದಳೆದುದು ಹೀಗೆ.
ಜಿನನಾದ ಬಾಹುಬಲಿ
ಬಾಹುಬಲಿ ಲೌಕಿಕ ಜೀವನವನ್ನು ತೊರೆದು ತನ್ನ ತಂದೆಯ ಬಳಿ ಹೋಗಿ ಯತಿದೀಕ್ಷೆಯನ್ನು ಕೈಗೊಂಡು, ಪಾಪಗಳನ್ನು ಕಳೆದುಕೊಳ್ಳಲು ಕಾಯೋತ್ಸರ್ಗಭಂಗಿಯಲ್ಲಿ ನಿಲ್ಲುತ್ತಾನೆ. ಕಡೆಗೆ ಮಾನಕ?ಯವೂ ತೊಲಗಿ ಅವನು ನಿಂತಲ್ಲೇ ಜಿನನಾಗುತ್ತಾನೆ. ತಮ್ಮನ ಸಾಧನೆಯನ್ನು ಮೆಚ್ಚಿಕೊಂಡ ಅಣ್ಣ ಭರತ, ಪೌದನಪುರದಲ್ಲಿ ಅವನ ಪ್ರತಿಮೆಯೊಂದನ್ನು ೫೨೫ ಬಿಲ್ಲುಗಳ ಎತ್ತರವಿರುವಂತೆ ಬಂಗಾರದಲ್ಲಿ ಮಾಡಿ ನಿಲ್ಲಿಸುತ್ತಾನೆ.
ಕಾಲ ಸಾಗಿದಂತೆ ಪೌದನಪುರ ಕಾಡಾಗುತ್ತದೆ, ಬಾಹುಬಲಿಯ ಪ್ರತಿಮೆ ಕಾಡುಗಿಡಗಳ ನಡುವೆ ಮರೆಯಾಗುತ್ತದೆ. ಆದರೆ ಪ್ರತಿಮೆಯ ಪ್ರಸಿದ್ಧಿ ಮಟ್ಟಿಗೆ ಮರೆಯಾಗುವುದಿಲ್ಲ; ಶ್ರಾವಕರ ನಡುವೆ ಪ್ರತೀತಿ ಉಳಿದುಕೊಳ್ಳುತ್ತದೆ. ಇಲ್ಲಿಗೆ ಮೊದಲ ಕಥೆ ಮುಗಿಯಿತು; ಇನ್ನು ಮುಂದೆ ಎರಡನೆಯ ಕಥೆ.
ಪುರಾಣವನ್ನು ಕೇಳಿದ ಚಾಮುಂಡರಾಯನ ತಾಯಿ ಕಾಳಲಾದೇವಿ ಬಾಹುಬಲಿಯ ಆ ಪ್ರತಿಮೆಯನ್ನು ನೋಡಬೇಕೆಂದು ಬಯಸಿದಳು ಎನ್ನುವಲ್ಲಿ ಈ ಕಥೆ ಮೊದಲಾಗುತ್ತದೆ. ಎರಡಕ್ಕೂ ಕಾಲದ ಅಂತರ ಊಹೆಗೂ ನಿಲುಕುವುದಿಲ್ಲ. ಆದರೆ ಎರಡಕ್ಕೂ ಒಂದೇ ನೆಲೆಗಟ್ಟನ್ನು ಕೂಡಿಸುವುದು ಗೊಮ್ಮಟೇಶ್ವರನ ’ಶ್ರೀರೂಪ’
ಚಾಮುಂಡರಾಯ
ಮಹಾಬಲಯ್ಯನ ಮಗ ’ವೀರಮಾರ್ತಾಂಡ’, ’ರಣರಂಗಸಿಂಗ’, ’ಸಮರ ಪರಶುರಾಮ’ನೆನಿಸಿಕೊಂಡ ಚಾಮುಂಡರಾಯ ಪರಾಕ್ರಮಿ. ಗಂಗ ರಾಚಮಲ್ಲನಿಗೆ ಮಂತ್ರಿಯಾಗಿ, ದಂಡನಾಯಕನಾಗಿ ನಿಂತು ರಾಜ್ಯವನ್ನು ದಕ್ಕಿಸಿಕೊಟ್ಟವನೇ ಅವನು; ರಾಜ್ಯವನ್ನು ಬಲಪಡಿಸಿದವನೂ ಅವನೇ. ಕಾಳಗದಲ್ಲಿ ಹೇಗೆ ಕಲಿಯೋ, ರಾಜಕಾರಣದಲ್ಲಿ ಹೇಗೆ ಚತುರನೋ, ಕಾವ್ಯಶಾಸ್ತ್ರಗಳಲ್ಲೂ ಹಾಗೆಯೇ ಎತ್ತಿದಕೈ. ಅವನ ಧೈರ್ಯ, ಶೌರ್ಯ, ಸಾಹಸಗಳು ಅವನ ಒಂದು ಮುಖವಾದರೆ ವಿನಯ, ಶೀಲ, ಸಂಯಮಗಳು ಅವನ ಇನ್ನೊಂದು ಮುಖ. ಜೈನಧರ್ಮದ ಸ್ವಾರಸ್ಯವನ್ನು ಮನಸಾರೆ ಕಂಡುಕೊಂಡು ತನ್ನ ಬದುಕಿನಲ್ಲಿ ಅದನ್ನು ಆಳವಾಗಿ ಬೇರೂರಿಸಿಕೊಂಡಿದ್ದವನು ಅವನು.
ಅವನ ತಾಯಿ ಕಾಳಲಾದೇವಿ ದಿನವೂ ಜೈನಧರ್ಮದ ಕಥೆಗಳನ್ನು ಕೇಳುತ್ತಿದ್ದವಳು; ಧರ್ಮದ ದಿಟವಾದ ತಾತ್ಪರ್ಯವನ್ನು ಮನಗಂಡಿದ್ದವಳು. ಜಿನಸೇನರ ’ಪೂರ್ವಪುರಾಣ’ವನ್ನು ಕೇಳುತ್ತಿದ್ದಾಗ, ಅಲ್ಲಿ ಬರುವ ಬಾಹುಬಲಿಯ ಮೂರ್ತಿಯ ಪ್ರಸ್ತಾಪ ಆಕೆಯ ಕುತೂಹಲವನ್ನು ಕೆರಳಿಸಿತು. ಪೌದನಪುರದಲ್ಲಿ ೫೨೫ ಬಿಲ್ಲೆತ್ತರದ ಈ ಬಂಗಾರದ ಪ್ರತಿಮೆಯನ್ನು ನೋಡಿ ಬರಬೇಕೆಂಬ ಹಂಬಲ ಆಕೆಯಲ್ಲಿ ಮೂಡಿತು. ತಾಯಿಯ ಮುದ್ದಿನ ಮಗ ಚಾಮುಂಡರಾಯ ಆಕೆಯ ಬಯಕೆಯನ್ನು ಈಡೇರಿಸಬೇಕೆಂದು ಅಕೆಯನ್ನು ಕರೆದುಕೊಂಡು ಯಾತ್ರೆ ಹೊರಟ.
ಚಂದ್ರಗಿರಿಯಲ್ಲಿ
ಶ್ರವಣಬೆಳಗೊಳದ ಚಂದ್ರಗಿರಿಯ ಮೇಲೆ ಯಾತ್ರಿಕರ ತಂಡ ತಂಗಿದ್ದಾಗ, ಚಾಮುಂಡರಾಯನಿಗೊಂದು ಕನಸು ಬಿದ್ದಿತು. ಪಕ್ಕದ ವಿಂಧ್ಯಗಿರಿಯ ಮೇಲೆ ಮುಗಿಲೆತ್ತರ ಮೈಚಾಚಿ ನಿಂತ ಬೋರುಬಂಡೆಯಲ್ಲಿ ಬಾಹುಬಲಿಯ ಮೂರ್ತಿ ಅಡಗಿದೆಯೆಂದು ಕನಸಿನ ತಾತ್ಪರ್ಯ; ತಾಯಿ ಕಾಳಲಾದೇವಿಗೂ ಅದೇ ಕನಸು. ಮರುದಿನ ಮುಂಜಾನೆ ಮಡಿಯುಟ್ಟು ಜಿನಸ್ಮರಣೆ ಮಾಡಿ ಚಿಕ್ಕಬೆಟ್ಟದ ಬಂಡೆಯೊಂದರ ಮೇಲೆ ನಿಂತು ಪಕ್ಕದ ದೊಡ್ಡ ಬೆಟ್ಟದ ಕೋಡುಗಲ್ಲಿಗೆ ಬಂಗಾರದ ಬಾಣವನ್ನು ಬಿಡಬೇಕೆಂದು ಕನಸಿನ ಸೂಚನೆ. ಚಾಮುಂಡರಾಯ ಹಾಗೆಯೇ ಮಾಡಿದ. ಬಾಣ ಆ ಬಂಡೆಗೆ ತಾಕಿದೊಡನೆ ಬಾಹುಬಲಿಯ ಶ್ರೀಮುಖ ತೋರಿಕೊಂಡಿತು. ಆಮೇಲೆ ಅವರೆಲ್ಲ ಆ ದೊಡ್ಡಬೆಟ್ಟವನ್ನೇರಿ ಶಿಲ್ಪಿಗಳಿಂದ ಇಡೀ ಮೈಮಾಟವನ್ನು ಬಿಡಿಸಿದರು. ವಿಂಧ್ಯಗಿರಿಯ ಮೇಲೆ ಗೊಮ್ಮಟೇಶ್ವರನ ’ಸುಮನೋಹರ ಭಯಂಕರ’ ಮೂರ್ತಿ ಮೈದಳೆದುದು ಹೀಗೆ.
ಕಥೆ ಇಷ್ಟಕ್ಕೆ ನಿಲ್ಲುವುದಿಲ್ಲ. ಪಂಚಬಾಣ ಕವಿಯ ’ಭುಜಬಲಿಚರಿತೆ’ಯಲ್ಲಿ ಮುಂದುವರಿಯುತ್ತದೆ. ಮೂರ್ತಿ ಮೈದಳೆದ ಮೇಲೆ ಅದನ್ನು ವಿಧಿಯಂತೆ ಪ್ರತಿಷ್ಠೆ ಮಾಡಬೇಕಲ್ಲವೆ? ಪ್ರತಿಷ್ಠಯ ಅಂಗವಾಗಿ ಅಭಿಷೇಕ ನಡೆಯಬೇಕು. ಅರವತ್ತು ಅಡಿ ಎತ್ತರಕ್ಕೆ ನಿಂತ ಮೂರ್ತಿಗೆ ಅಭಿಷೇಕ ಮಾಡುವುದು ಸುಲಭವೆ? ಆದರೆ ಚಾಮುಡರಾಯನಂಥ ಪ್ರಭಾವಶಾಲಿಯಾದವನಿಗೆ ಅಡ್ಡಿಯೇನು? ಅಭೀಷೇಕಕ್ಕೆ ಎಲ್ಲವೂ ಅಣಿಯಾಯಿತು; ಸಾವಿರಾರು ಕೊಡಗಳ ಹಾಲೂ ಬಂದಿತು. ಚಾಮುಂಡರಾಯನ ಆಣತಿಯಂತೆ ಅವನ ಸೇವೆಯ ಹಾಲನ್ನು ಪುರೋಹಿತರು ಮೂರ್ತಿಯ ತಲೆಯ ಮೇಲೆ ಸುರಿದರು. ಅನಂತರ ನೂರಾರು ಕೊಡಗಳ ಹಾಲನ್ನು ತಲೆಯ ಮೇಲೆ ಸುರಿದರು. ಆದರೆ ಇಷ್ಟೆಲ್ಲ ಹಾಲು ಮೈಮೇಲೆ ಹರಿದು ಕೆಳಗಿಳಿದರೂ ಒಂದು ತೊಟ್ಟೂ ಹಾಲು ಮೂರ್ತಿಯ ಪಾದಗಳನ್ನು ಮುಟ್ಟಲಿಲ್ಲ. ಪಾದಾಭಿಷೇಕವಾಗದೆ ಅಭಿಷೇಕದ ಕೆಲಸ ಮುಗಿಯವಂತಿಲ್ಲ!
ಗುಳ್ಳಕಾಯಜ್ಜಿ
ಎಷ್ಟು ಕೊಡಗಳ ಹಾಲನ್ನು ಸುರಿಸಿದಾಗಲೂ ಇದೇ ಕಥೆಯಾಯಿತು. ನೆರೆದವರು ಅವಾಕ್ಕಾದರು; ಚಾಮುಂಡರಾಯನಿಗೆ ಚಿಂತೆಯಾಯಿತು. ಬೆಟ್ಟದ ಮೇಲೆ ಒಂದಿಷ್ಟು ಎಡೆಬಿಡದಂತೆ ನೆರೆದಿದ್ದ ಜನಜಂಗುಳಿಯಲ್ಲಿ ಹಣ್ಣು ಹಣ್ಣುಮುದುಕಿಯೊಬ್ಬಳು; ದೇವರ ಅಭಿಷೇಕಕ್ಕೆ ತನ್ನ ಸೇವೆಯೂ ಇರಲೆಂದು ಗುಳ್ಳಕಾಯೊಂದರಲ್ಲಿ ಸ್ವಲ್ಪ ಹಾಲನ್ನು ತಂದು ತನ್ನ ಕೈಯಲ್ಲಿ ಹಿಡಿದು ನಿಂತಿದ್ದಳು. ಅವಳನ್ನು ಕೇಳುವವರು ಯಾರು? ’ಈ ಹಾಲನ್ನು ದೇವರ ಮೇಲೆ ಸುರಿಯಿರಿ’ ಎಂದು ಆಕೆ ಎಷ್ಟು ಅಂಗಲಾಚಿ ಕೇಳಿಕೊಂಡರೂ ಯಾರೂ ಕಿವಿಗೊಡಲಿಲ್ಲ. ಕಡೆಗೆ ಈ ಸುದ್ದಿ ಚಾಮುಂಡರಾಯನನ್ನು ಮುಟ್ಟಿತು.
ಆಗ ಅವನು ಆ ಮುದುಕಿಯನ್ನು ಕರೆಸಿ ಅವಳ ಕೈಯಲ್ಲಿದ್ದ ಹಾಲು ತುಂಬಿದ ಗುಳ್ಳ ಕಾಯಿಯನ್ನು ಪುರೋಹಿತರ ಮೂಲಕ ಅಟ್ಟಣಿಗೆಯ ಮೇಲೆ ಕಳುಹಿಸಿ ಅಷ್ಟೂ ಹಾಲನ್ನೂ ಮೂರ್ತಿಯ ತಲೆಯ ಮೇಲೆ ಸುರಿಸಿದ. ಒಡನೆಯೇ ಆ ಹಾಲುಹನಿ ’ಅತಿತುಂಗಾಕೃತಿಯ’ ಗೊಮ್ಮಟನಜಿನನ ಮೈಮೇಲೆಲ್ಲ ಹರಿದು ಅವನ ಪಾದಗಳನ್ನೆಲ್ಲ ತೊಳೆದುಬಿಟ್ಟಿತು.
ಈ ಗುಳ್ಳಕಾಯಜ್ಜಿ ಯಾರು?
ಚಾಮುಂಡರಾಯನ ತಾಯಿ ಕಾಳಲಾದೇವಿಯ ಇ?ದೈವ ನೇಮಿನಾಥ ತೀರ್ಥಂಕರ; ದಿನವೂ ಆಕೆ ಪೂಜಿಸುತ್ತಿದ್ದುದು ಈ ದೈವವನ್ನೇ. ಈ ಜಿನನ ಯಕ್ಷಿಣಿ ಕೂ?ಂಡಿನೀದೇವಿ. ಆಕೆಯೇ ಗುಳ್ಳಕಾಯಜ್ಜಿಯಂತೆ ಬಂದುದು ಎಂದು ಕಥೆ. ಚಾಮುಂಡರಾಯನು ಅರವತ್ತು ಅಡಿ ಎತ್ತರದ ಅದ್ಭುತ ಶಿಲ್ಪವನ್ನು ಕಡೆಯಿಸಿದನೆಂದು ಮಾನೋನ್ನತನಾಗಿದ್ದನಂತೆ; ತನ್ನ ಸಾಹಸಕ್ಕೆ ತಾನೇ ಬೆರಗಾಗಿ ಹೆಮ್ಮೆಯನ್ನು ತಂದುಕೊಂಡಿದ್ದನಂತೆ; ಈ ಗರ್ವವನ್ನು ತೊಲಗಿಸಲು ಗುಳ್ಳಕಾಯಜ್ಜಿ ಕಾರಣಳಾದಳು, ಎಂದು ಕಥೆಯ ತಾತ್ಪರ್ಯ.
ಚಾಮುಂಡರಾಯನ ಗರ್ವ ಕರಗಿ ನೀರಾಗಿ ಅವನು ಆ ಮುದುಕಿಯ ಪಾದಗಳಿಗೆರಗಿ, ಮಸ್ತಕಾಭೀ?ಕದ ಕೆಲಸ ಮುಗಿಯಲು ನೆರವಾದಳೆಂದು ಕೃತಜ್ಞತೆ ತಾಳಿ ಆಕೆಯ ಪ್ರತಿಮೆಯನ್ನು ಗೊಮ್ಮಟಜಿನನ ಮೂರ್ತಿಯ ಬಳಿಯೇ ನಿಲ್ಲಿಸಿದನು. ಅಲ್ಲಿ ಎಲ್ಲಿಯೂ ಚಾಮುಂಡರಾಯನ ಪ್ರತಿಮೆಯನ್ನು ಕಾಣಲಾರೆವು. ಆ ಗುಳ್ಳಕಾಯಜ್ಜಿಯನ್ನು ಕಾಣದೆ ’ಕ್ಷಿತಿಸಂಪೂಜ್ಯ’ನಾದ ಗೊಮ್ಮಟೇಶ್ವರನನ್ನು ಕಾಣುವಂತಿಲ್ಲ
ಕೇವಲ ₹ 1000 /- (5 ವರ್ಷಕ್ಕೆ) & 1 ವರ್ಷಕ್ಕೆ – ₹ 220 /-
ಬ್ಯಾಂಕ್ ಖಾತೆ ಮೂಲಕಚಂದಾದಾರರಾಗಿ
ಕೆಳಗೆ ಸೂಚಿಸಲಾದ ಬ್ಯಾಂಕ್ ಖಾತೆಗೆ ಚಂದಾಹಣವನ್ನು (ವಾರ್ಷಿಕ ಚಂದಾ ಕೇವಲ ರೂ. 220/- ಮಾತ್ರ) NEFT/RTGS ಮೂಲಕ ಪಾವತಿಸಿ.
ಬ್ಯಾಂಕ್ ಹೆಸರು: HDFC Bank Ltd, ಕಾವೇರಿ ಭವನ ಶಾಖೆ, ಬೆಂಗಳೂರು
ಖಾತೆದಾರರ ಹೆಸರು : UTTHANA TRUST
IFSC CODE: HDFC0000509
A/C No: 50100283886338
ನಿಮ್ಮಿಂದ ಚಂದಾ ಹಣವನ್ನು ಸಂಗ್ರಹಿಸಿದ ನಂತರ ನಿಮ್ಮ ಉತ್ಥಾನವನ್ನು ನಿಮ್ಮ ವಿಳಾಸಕ್ಕೆ POST ಮೂಲಕ ಕಳಿಸುವ ವ್ಯವಸ್ಥೆಯನ್ನು ಮಾಡುತ್ತೇವೆ.
ರಾಷ್ಟ್ರೋತ್ಥಾನ ಸಾಹಿತ್ಯ ಪ್ರಕಟಿಸಿರುವ ನಿಮ್ಮಆಯ್ಕೆಯ ಯಾವುದೇ ಪುಸ್ತಕದ ಕುರಿತು ಪುಸ್ತಕವಿಮರ್ಶೆ ಬರೆದು ಕಳುಹಿಸಿ. ಆಯ್ಕೆಯಾದ ವಿಮರ್ಶೆಗೆ ಸೂಕ್ತ ಸಂಭಾವನೆ ಇದೆ ಇಮೇಲ್: [email protected]