ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಫೆಬ್ರವರಿ 2018 > ’ಅಹಿಂಸೆಯಿಂದ ಸುಖ’ ಎಂಬುದೇ ಬಾಹುಬಲಿಯ ಸಂದೇಶ : ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ

’ಅಹಿಂಸೆಯಿಂದ ಸುಖ’ ಎಂಬುದೇ ಬಾಹುಬಲಿಯ ಸಂದೇಶ : ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ

ಸುಪ್ರಸಿದ್ಧ ಜೈನ ತೀರ್ಥಕ್ಷೇತ್ರ ಶ್ರವಣಬೆಳಗೊಳವು ಒಂದು ಐತಿಹಾಸಿಕ ಕ್ಷೇತ್ರವಾಗಿಯೂ ಪ್ರಸಿದ್ಧಿಯನ್ನು ಹೊಂದಿದೆ. ಪ್ರಸ್ತುತ ಶ್ರೀಕ್ಷೇತ್ರ ಶ್ರವಣಬೆಳಗೊಳದ ಜೈನಮಠದ ಮಠಾಧ್ಯಕ್ಷರು ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮಿಜೀ. ಜೈನಧರ್ಮದ ಸಾಂಸ್ಕೃತಿಕ ಮಹೋತ್ಸವ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕವನ್ನು ಹನ್ನೆರಡು ವರ್ಷಗಳಿಗೆ ಒಮ್ಮೆ ನಡೆಸುವುದು ಸಂಪ್ರದಾಯ. ೨೦೧೮ರ ಫೆಬ್ರುವರಿ ೧೭ರಿಂದ ೨೫ರವರೆಗೆ ನಡೆಯಲಿರುವ ಮಹಾಮಸ್ತಕಾಭಿಷೇಕವು ಸ್ವಾಮಿಜೀಯವರ ಅವಧಿಯಲ್ಲಿ ನಡೆಯಲಿರುವ ನಾಲ್ಕನೆಯ ಮಹಾಮಸ್ತಕಾಭಿಷೇಕವಾಗಿದೆ. ಈ ಸಂದರ್ಭದಲ್ಲಿ ಶ್ರವಣಬೆಳಗೊಳದ ಬಗೆಗೆ , ಜೈನಧರ್ಮದ ತತ್ತ್ವಗಳ ಬಗೆಗೆ, ಬಾಹುಬಲಿಯ ಮಹಿಮೆಯ ಕುರಿತಾಗಿ ಸ್ವಾಮಿಜೀ ಅವರು ’ಉತ್ಥಾನ’ ಮಾಸಪತ್ರಿಕೆಗೆ ನೀಡಿದ ವಿಶೇಷಸಂದರ್ಶನದಲ್ಲಿ ವಿವರಿಸಿದರು. ಅದರ ಬರಹರೂಪ ಇಲ್ಲಿದೆ.

ಪ್ರಶ್ನೆ: ಈ ಹಿಂದೆ ನಡೆದ ಮಹಾಮಸ್ತಕಾಭಿಷೇಕಗಳನ್ನು ತಾವು ನೋಡಿದ್ದೀರಿ, ವ್ಯವಸ್ಥೆ ಮಾಡಿದ್ದೀರಿ. ಅವುಗಳ ಆಡಳಿತ ವ್ಯವಸ್ಥೆ, ಜನಸ್ಪಂದನೆ ಹೇಗಿತ್ತು?

ಉತ್ತರ: ನಮ್ಮ ಪಟ್ಟಾಭಿಷೇಕ ಆಗಿದ್ದು, ಈ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿದ್ದು ೧೯೭೦ರ ’ಮಹಾವೀರಜಯಂತಿ’, ಏಪ್ರಿಲ್ ೧೯ರಂದು. ನಮ್ಮ ಅವಧಿಯ ಮೊದಲನೇ ಮಹಾಮಸ್ತಕಾಭಿಷೇಕ ನಡೆದಿದ್ದು ೧೯೮೧ರಲ್ಲಿ, ಅದು ಸಾವಿರ ವರ್ಷದ ಉತ್ಸವವಾಗಿತ್ತು. ಸಹಸ್ರಮಾನೋತ್ಸವ ಮಹಾಮಸ್ತಕಾಭಿ?ಕವಾಗಿ ಆಚರಿಸಲ್ಪಟ್ಟ ಆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆಯಿತು. ಆ ವರ್ಷ ನಮ್ಮ ಪರಮಪೂಜ್ಯ ಆಚಾರ್ಯ ವಿದ್ಯಾನಂದ ಭೀಮರಾಜ್ ಅವರು ದೆಹಲಿಯಿಂದ ಕಾಲ್ನಡಿಗೆಯಲ್ಲೇ ಶ್ರವಣಬೆಳಗೊಳಕ್ಕೆ ಆಗಮಿಸಿದ್ದರು. ’ಟೈಮ್ಸ್ ಆಫ್ ಇಂಡಿಯಾ’ದ ಶ್ರೇಯಾಂಸ್‌ಪ್ರಸಾದ್ ಜೈನ್ ಮಹೋತ್ಸವದ ಎಲ್ಲ ಜವಾಬ್ದಾರಿಯನ್ನು ನಿರ್ವಹಿಸಿದ್ದರು. ಆಗಿನ ಪ್ರಧಾನಮಂತ್ರಿ ಶ್ರೀಮತಿ ಇಂದಿರಾಗಾಂಧಿ ಅವರು ಮಹೋತ್ಸವದ ಉದ್ಘಾಟನೆ ಮಾಡಿದ್ದರು. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಶ್ರೀ ಆರ್. ಗುಂಡೂರಾವ್ ಉತ್ತಮ ಸಹಕಾರ ನೀಡಿದ್ದರು.
೧೯೯೩ನೇ ಇಸವಿಯ ಮಹಾಮಸ್ತಕಾಭಿಷೇಕದ ಸಂದರ್ಭವೂ ವಿಶೇಷವಾಗಿತ್ತು. ಆಗ ರಾಷ್ಟ್ರಪತಿಯಾಗಿದ್ದ ಶ್ರೀ ಶಂಕರ್‌ದಯಾಳ್ ಶರ್ಮಾ ಅವರು ಉದ್ಘಾಟನೆ ಮಾಡಿದರು; ಅದೇ ಸಂದರ್ಭದಲ್ಲಿ ’ಪ್ರಾಕೃತ ಸಂಸ್ಥೆ’ಯ ಉದ್ಘಾಟನೆಯೂ ಆಗಿತ್ತು. ಪ್ರಾಕೃತದ ಬಗ್ಗೆ ಶ್ರೀ ಶಂಕರ್‌ದಯಾಳ್ ಶರ್ಮಾ ಅವರು ಒಂದು ಗಂಟೆಯ ಕಾಲ ವಿಶದವಾದ ವಿದ್ವತ್‌ಪೂರ್ಣ ಭಾಷಣವನ್ನು ಮಾಡಿದ್ದರು. ’ಜನಕಲ್ಯಾಣ ಯೋಜನೆ’ಯೂ ಇದೇ ಮಹಾಮಸ್ತಕಾಭಿ?ಕದ ಸಮಯದಲ್ಲಿ ಆರಂಭವಾಯಿತು.
೨೦೦೬ನೇ ಇಸವಿಯದ್ದು ನಮ್ಮ ಸಮಯದ ಮೂರನೆಯ ಮಹಾಮಸ್ತಕಾಭಿಷೇಕ. ಅಂದಿನ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಅವರಿಂದ ಉದ್ಘಾಟನೆಯಾಯಿತು. ಅಲ್ಲದೆ, ಶ್ರೀ ಹೆಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ, ಶ್ರವಣಬೆಳಗೊಳಕ್ಕೆ ರೈಲ್ವೇ ಯೋಜನೆಯನ್ನು ಜಾರಿಗೊಳಿಸಿದ್ದರು.
ಹೀಗೆ ಎಲ್ಲರ ಸಹಕಾರದೊಂದಿಗೆ ಹಿಂದಿನ ಮೂರು ಮಹಾಮಸ್ತಕಾಭಿ?ಕಗಳು ಅತ್ಯಂತ ಯಶಸ್ವಿಯಾಗಿ ನಡೆದವು. ಇನ್ನು ೨೦೧೮ರ ಫೆಬ್ರುವರಿಯಲ್ಲಿ ನಡೆಯಲಿರುವ ಮಹಾಮಸ್ತಕಾಭಿ?ಕ, ಇದಕ್ಕೂ ಸಾಕ? ಸಿದ್ಧತೆ- ಯೋಜನೆ ನಡೆದಿದೆ, ನಡೆಯುತ್ತಿದೆ.

ಪ್ರಶ್ನೆ: ತೀರ್ಥಕ್ಷೇತ್ರವಾಗಿ ಶ್ರವಣಬೆಳಗೊಳದ ಹಿನ್ನೆಲೆ, ಆಚಾರ್ಯಪರಂಪರೆ, ಸಾಧನೆಗಳ ಕುರಿತಾಗಿ ತಿಳಿಸುವಿರಾ?

ಉತ್ತರ: ೨೩೦೦ ವರ್ಷಗಳಿಂದ ಶ್ರವಣಬೆಳಗೊಳ ತೀರ್ಥಕ್ಷೇತ್ರವಾಗಿದೆ. ಇಲ್ಲಿನ ಪ್ರಾಚೀನತೆಯ ಅಧ್ಯಯನ ನಡೆಸಿದಾಗ ಹರಪ್ಪಾ-ಮೊಹೆಂಜೊದಾರೋ ಕಾಲದ ಕುರುಹುಗಳು ಸಿಕ್ಕಿವೆ. ಆದ್ದರಿಂದ ಐದುಸಾವಿರ ವರ್ಷದ ಇತಿಹಾಸ ಈ ಕ್ಷೇತ್ರಕ್ಕೆ ಇದೆ. ಹರಪ್ಪಾ- ಮೊಹೆಂಜೊದಾರೋದಲ್ಲಿ ಸಿಕ್ಕಿರುವ ಮಣ್ಣಿನ ಸೀಲ್‌ನಲ್ಲಿ ಬಾಹುಬಲಿಯ ಪ್ರತಿಮೆಯನ್ನು ಗುರುತಿಸಿದ್ದಾರೆ.

ದ್ವಾದಶಾಂಗಶ್ರುತ ಶ್ರುತಕೇವಲಿ ಭದ್ರಬಾಹು ಬಂದಿದ್ದು ಶ್ರೀಕ್ಷೇತ್ರಕ್ಕೆ. ಶ್ರುತಕೇವಲಿ ಭದ್ರಬಾಹು ಸ್ವಾಮಿಗಳು ಮಹಾವೀರ ತೀರ್ಥಂಕರರ ಎಂಟನೆಯ ಜ್ಞಾನಸಂಪತ್ತಿನ ಉತ್ತರಾಧಿಕಾರಿ. ಅವರು ಸಂಪೂರ್ಣ ತೀರ್ಥಂಕರರ ದ್ವಾದಶಾಂಗ ಶಾಸ್ತ್ರವನ್ನು ಕರಗತಮಾಡಿಕೊಂಡಿದ್ದರು. ಏಕಪಾಠಿಯಾಗಿದ್ದ ಅವರಿಗೆ ಶಾಸ್ತ್ರವು ಕಂಠಸ್ಥವಾಗಿತ್ತು. ಜೊತೆಗೆ ಭಾವನಿಷ್ಟವಾದಂತಹ ಅರ್ಥವೂ ತಿಳಿದಿತ್ತು. ಚಿಕ್ಕಬೆಟ್ಟ (ಚಂದ್ರಗಿರಿ) ಶ್ರುತಕೇವಲಿ ಭದ್ರಬಾಹು ಮುನಿಗಳ ತಪೋಭೂಮಿಯಾಗಿ, ಹನ್ನೆರಡು ಸಾವಿರ ಮುನಿಗಳ ಜೊತೆ ನೆಲೆನಿಂತದ್ದರಿಂದ ಅದು ತೀರ್ಥಕ್ಷೇತ್ರವಾಯಿತು. ವಯೋವೃದ್ಧನಾದ ಮೌರ್ಯ ಚಂದ್ರಗುಪ್ತನು ದೀಕ್ಷೆಯನ್ನು ತೆಗೆದುಕೊಂಡು ಮುನಿಯಾಗಿ ಇಲ್ಲಿಯೇ ತಪಸ್ಸು ಮಾಡಿದ್ದ ಎನ್ನುವ ಇತಿಹಾಸವಿದೆ. ಪ್ರಾಕೃತ ಗ್ರಂಥಗಳು ಈ ಮಾಹಿತಿಯನ್ನು ಕೊಡುತ್ತವೆ. ಕ್ರಿ.ಪೂ. ೩ನೇ ಶತಮಾನದಿಂದ ಈ ಕ್ಷೇತ್ರದ ಇತಿಹಾಸ ಆರಂಭವಾಗುತ್ತದೆ.

ಹೀಗೆ ನಡೆದುಕೊಂಡು ಬಂದಂತಹ ಆಚಾರ್ಯಪರಂಪರೆ ಮುಂದುವರಿಯಿತು. ಗಂಗ ಸಾಮ್ರಾಜ್ಯದ ರಾಜಮಲ್ಲ ರಾಜನಾಗಿದ್ದ ಸಂದರ್ಭದಲ್ಲಿ ಸೇನಾಪತಿಯಾಗಿ, ಪ್ರಧಾನಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದವನು ಚಾವುಂಡರಾಯ. ಆತನು ತನ್ನ ತಾಯಿಯ ಅಪೇಕ್ಷೆಯಂತೆ ಇಲ್ಲಿ ಬಾಹುಬಲಿ ಮೂರ್ತಿಯ ಪ್ರತಿಷ್ಠೆ ಮಾಡಿದನು. ಚಾವುಂಡರಾಯನ ಗುರುಗಳಾದ ನೇಮಿಚಂದ್ರ ಸಿದ್ಧಾಂತಚಕ್ರವರ್ತಿಗಳ ನೇತೃತ್ವದಲ್ಲಿ ಮಠದ ಸ್ಥಾಪನೆಯಾಯಿತು. ಷಟ್ಕಂಡಾಗಮದ ಬಗ್ಗೆ ತಿಳಿದ ಇವರು ಗೊಮ್ಮಟಸಾರಾದಿ ಗ್ರಂಥಗಳನ್ನು ಬರೆದವರು; ಇಲ್ಲಿಯ ಮಠದ ಮೊದಲ ಮಠಾಧಿಪತಿಗಳು. ನಿರ್ಗ್ರಂಥರಾಗಿದ್ದರೂ ಕೂಡ ಮಠಾಧಿಪತಿತ್ವ ಮತ್ತು ಧಾರ್ಮಿಕ ಅಧಿಕಾರ ಇವರ ಮಾರ್ಗದರ್ಶನದಲ್ಲೇ ನಡೆಯಬೇಕೆಂದು ನಿರ್ಧಾರ ಮಾಡಲಾಯಿತು. ಹನ್ನೆರಡು ವರ್ಷಕ್ಕೆ ಒಮ್ಮೆ ಮಹಾಮಸ್ತಕಾಭಿಷೇಕ ನಡೆಯಬೇಕೆಂಬ ನಿರ್ದೇಶನವನ್ನು ಕೊಟ್ಟಿದ್ದು ಇವರೇ.

ಹನ್ನೆರಡನೆ ಶತಮಾನದಲ್ಲಿ ದಿಗಂಬರ ಮುನಿಗಳ ಮಠಾಧಿಪತಿತ್ವವೇ ಇದ್ದರೂ, ಮಠಾಧಿಪತಿಯು ವಸ್ತ್ರಧಾರಿಗಳಾಗಿ ಮಠಾಧಿಪತ್ಯವನ್ನು ಮುಂದುವರಿಸಿಕೊಂಡು ಹೋಗುವಂತಹದ್ದು ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ.

ಸಾತ್ತ್ವಿಕತೆ ಮತ್ತು ಶಿಕ್ಷಣ
ಪ್ರಶ್ನೆ: ಪ್ರಪಂಚದಲ್ಲಿ ಹಿಂಸೆ, ತಾಮಸಿಕ ಗುಣ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸಾಮಾನ್ಯ ಮನು?ನಲ್ಲಿ ಸಾತ್ತ್ವಿಕತೆಯನ್ನು ಹೇಗೆ ಬೆಳೆಸಬಹುದು?
ಉತ್ತರ: ಒಂದು, ಸರಳ-ಶುದ್ಧವಾದ ಸಾತ್ತ್ವಿಕ ಆಹಾರದ ಮೂಲಕ. ಎರಡನೆಯದಾಗಿ ಮಾನಸಿಕ ಪರಿವರ್ತನೆಗಾಗಿ ಶಿಕ್ಷಣಪದ್ಧತಿಯಲ್ಲಿ ಬದಲಾವಣೆ. ನೈತಿಕಶಿಕ್ಷಣವು ಅಗತ್ಯವಾಗಿದೆ. ಶರೀರದ ಬೆಳವಣಿಗೆಗಾಗಿ ಪೌಷ್ಟಿಕ ಆಹಾರ, ಸುಸ್ಥಿತಿಗೆ ಔ?ಧ ಹೇಗೆ ಅಗತ್ಯವೋ ಹಾಗೆ ಮನಸ್ಸಿನ ಪರಿವರ್ತನೆಗೆ ನೈತಿಕಮೌಲ್ಯಗಳನ್ನು ಬೋಧಿಸುವಂತಹ ಶಿಕ್ಷಣ ಇಂದಿನ ಅಗತ್ಯ. ಇಂದಿನ ದಿನಗಳಲ್ಲಿ ತಂದೆ-ತಾಯಿಗೂ ಸಮಯವಿಲ್ಲ. ಮಕ್ಕಳನ್ನು ಶಾಲೆಗೆ ಕಳುಹಿಸುವ ತರಾತುರಿ, ಸಂಜೆ ಮಕ್ಕಳು ಬಂದಮೇಲೆ ತಮ್ಮ ಕೆಲಸದಲ್ಲಿ ಮಗ್ನರಾಗುತ್ತಾರೆ. ತಂದೆ-ತಾಯಿಯರೂ ಮಕ್ಕಳ ಕಡೆಗೆ ಗಮನಹರಿಸಬೇಕು. ಮಠಮಾನ್ಯದವರೂ ಸಂಸ್ಕಾರ ಶಿಬಿರಗಳನ್ನು ನಡೆಸಬೇಕು. ಸರಳಸಾಹಿತ್ಯವನ್ನು ಮಕ್ಕಳಿಗೆ ತಲಪಿಸಬೇಕು.
ಟಿ.ವಿ.ಯಂತಹ ದೃಶ್ಯಮಾಧ್ಯಮಗಳಲ್ಲಿ ನೈತಿಕಮೌಲ್ಯವನ್ನು ನೀಡುವಂತಹ ಕಾರ್ಯಕ್ರಮಗಳ ಮೂಲಕ ಜನರ ಮನಸ್ಸಿನಲ್ಲಿ ಜಾಗೃತಮನೋಭಾವ ಬೆಳೆಸಬೇಕು. ಅಂತಹ ಪ್ರಯತ್ನವೂ ನಡೆಯುತ್ತಿದೆ ಎನ್ನುವುದು ಸಂತಸದ ವಿಷಯ. ಮೊದಲೆಲ್ಲ, ಟಿ.ವಿ. ಎಂದರೆ ಒಂದೇ ಚಾನೆಲ್, ಅದೇ ಕಾರ್ಯಕ್ರಮಗಳು. ಈಗ ಭಕ್ತಿ, ಸಾಂಸ್ಕೃತಿಕ, ಪೌರಾಣಿಕ ವಿಚಾರಗಳನ್ನು ತಲಪಿಸುವ ಕಾರ್ಯವನ್ನು ಹಲವು ಚಾನೆಲ್‌ಗಳು ಮಾಡುತ್ತಿವೆ. ಆದ್ದರಿಂದ ಟಿ.ವಿ. ನೋಡಬೇಡಿ ಎನ್ನುವುದಲ್ಲ. ಬದಲಾಗಿ ನಾವೂ, ನಮ್ಮ ಮಕ್ಕಳೂ ಯಾವ ಕಾರ್ಯಕ್ರಮ ನೋಡುತ್ತಿದ್ದೇವೆ, ನೋಡಬೇಕು ಎನ್ನುವುದು ಮುಖ್ಯ. ಅಂತಹ ಪರಿವರ್ತನೆಯಾಗಿದೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕು.

ತೀರ್ಥಂಕರರ ಉಪದೇಶವೇ ತೀರ್ಥ. ಸಂಸಾರದಿಂದ ಪಾರುಮಾಡುವಂತಹ, ಜನನ-ಮರಣಗಳಿಂದ ಈ ಜೀವ ಚತುರ್ಗತಿಯಲ್ಲಿ ಭ್ರಮಣ ಮಾಡುವುದನ್ನು ತಪ್ಪಿಸಿ ಮೋಕ್ಷವನ್ನು ಕೊಡುವಂತಹದ್ದೇ ತೀರ್ಥಂಕರರ ಉಪದೇಶ. ಆಗ ಪ್ರಾಕೃತವೇ ಮುಖ್ಯಭಾಷೆಯಾಗಿತ್ತು; ಆಗಮ ಭಾಷೆಯಾಗಿ, ಸಾಹಿತ್ಯಿಕ ಭಾಷೇಯಾಗಿ ಇತ್ತು. ದೊಡ್ಡಬೆಟ್ಟ (ವಿಂಧ್ಯಗಿರಿ) ಭಗವಾನ್ ಬಾಹುಬಲಿಸ್ವಾಮಿಯ ಮೂರ್ತಿಯು ಸ್ಥಾಪನೆಯಾದ ಮೇಲೆ ಅದು ತೀರ್ಥಕ್ಷೇತ್ರವಾಯಿತು. ಇಲ್ಲಿ ಮಹಾಮಸ್ತಕಾಭಿಷೇಕ ಕೆಳಭಾಗದಲ್ಲಿ ೨೪ ತೀರ್ಥಂಕರರ ಬಸದಿಯನ್ನು ಹೊಯ್ಸಳ ರಾಜನ ಭಂಡಾರಿಯಾಗಿದ್ದ ಹುಳ್ಳ ಚಮೋಪತಿ ನಿರ್ಮಾಣ ಮಾಡಿಸಿದನು. ಹೀಗೆ ಚಿಕ್ಕಬೆಟ್ಟ, ದೊಡ್ಡಬೆಟ್ಟ, ಭಂಡಾರಬಸದಿ ಈ ಮೂರೂ ಕೂಡ ಶ್ರವಣಬೆಳಗೊಳವನ್ನು ತೀರ್ಥಕ್ಷೇತ್ರವಾಗಿಸಿವೆ. ಕ್ಷೇತ್ರದ ಬಗೆಗೆ ಓಲೆಗರಿಗಳ ಸಂಗ್ರಹವೂ ತೀರ್ಥಸ್ವರೂಪವೇ ಆಗಿದೆ.

ಪ್ರಶ್ನೆ: ತೀರ್ಥಕ್ಷೇತ್ರವಾಗಿ ಶ್ರವಣಬೆಳಗೊಳದ ಇತಿಹಾಸದ ರಚನೆಗಳೇನಾದರೂ ಆಗಿವೆಯೆ? ಆಗಿಲ್ಲದಿದ್ದರೆ ಮಾಡಿಸುವ ಯೋಜನೆಗಳೇನಾದರೂ ಇವೆಯೇ?

ಉತ್ತರ: ಹೌದು. ಅನೇಕ ಕವಿಗಳು ಈ ತೀರ್ಥಕ್ಷೇತ್ರದ ಇತಿಹಾಸ ಬರೆದಿದ್ದಾರೆ. ಶಾಸನಗಳು ಕೂಡ ಇತಿಹಾಸವನ್ನು ಸಾರಿ ಹೇಳುತ್ತಿವೆ.

ಪ್ರಶ್ನೆ: ಇದುವರೆಗೆ ಭಗವಾನ್ ಬಾಹುಬಲಿ ಕುರಿತಾಗಿ ಬಹಳ? ಗ್ರಂಥಗಳೂ, ಲೇಖನಗಳೂ ಪ್ರಕಟಗೊಂಡಿವೆ. ಅಂತಹ ಸಾಹಿತ್ಯಕೃತಿಗಳ ಸಂಕಲನದ ಕಾರ್ಯಗಳೇನಾದರೂ ಆಗಿವೆಯೆ, ಅಥವಾ ಮಾಡಿಸುವ ಯೋಜನೆಯೇನಾದರೂ ಇದೆಯೆ?

ಉತ್ತರ: ಇದೆ. ಈಗಾಗಲೇ ಸಾಕ? ಗ್ರಂಥಗಳು ಪ್ರಕಾಶಗೊಂಡಿವೆ. ಅವುಗಳ ಸಮಗ್ರ ಸಾಹಿತ್ಯ ಈ ಮಹಾಮಸ್ತಕಾಭಿ?ಕ ಸಮಯದಲ್ಲಿ ಪ್ರಕಟಿಸಬೇಕೆಂಬ ಯೋಜನೆಯಿದೆ.

ಪ್ರಶ್ನೆ: ಶ್ರವಣಬೆಳಗೊಳದ ಬಗ್ಗೆ Light and Shadow presentation ರೀತಿಯ ವ್ಯವಸ್ಥೆಯೇನಾದರೂ ಆಗಿದೆಯೆ? ಅಥವಾ ಅಂತಹ ಯೋಜನೆಯೇನಾದರೂ ಇದೆಯೆ?

ಉತ್ತರ: ಬೆಟ್ಟದ ಪ್ರದೇಶವಾಗಿರುವುದರಿಂದ ಅಂತಹ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ. ರಾತ್ರಿಯ ಸಮಯದಲ್ಲಿ ಬೆಟ್ಟವನ್ನು ಹತ್ತಿ ಅದನ್ನು ವೀಕ್ಷಿಸುವುದು, ವ್ಯವಸ್ಥೆ ಎಲ್ಲವೂ ಕ?ಸಾಧ್ಯವಾಗುತ್ತದೆ. ಈ ದೃಷ್ಟಿಯಿಂದ ಅನೇಕ ಬಾರಿ ಪ್ರಯತ್ನಿಸಿದರೂ ಕೂಡ ಕಾರ್ಯರೂಪಕ್ಕೆ ತರುವುದು ಕ?ವಾಗಿದೆ.

ಪ್ರಶ್ನೆ: ಬಾಹುಬಲಿ, ಶ್ರವಣಬೆಳಗೊಳದ ಬಗ್ಗೆ ಇದುವರೆಗೆ ಪ್ರಕಟಗೊಂಡಿರುವ ಲೇಖನಗಳ, ಸಾಹಿತ್ಯಗಳ ಕುರಿತಾದ ಆಕರಕೋಶ (Bibliography) ಏನಾದರೂ ಸಿದ್ಧವಾಗಿದೆಯೆ? ಅಥವಾ ಆ ಕುರಿತು ಏನಾದರೂ ಯೋಜನೆ ಇದೆಯೆ?

ಉತ್ತರ: ಹೌದು. ಈಗಾಗಲೇ ಪ್ರಕಟಗೊಂಡಿವೆ. ಕೆಲವು ಮಾಹಿತಿಯುಕ್ತ ಪುಸ್ತಕಗಳನ್ನು ನಿಮ್ಮ ಸಂಗ್ರಹಕ್ಕೆ ನೀಡುತ್ತೇವೆ.

ಪ್ರಶ್ನೆ: ಶ್ರವಣಬೆಳಗೊಳವೂ ಸೇರಿದಂತೆ ಹಲವಾರು ಕಡೆ ಭಗವಾನ್ ಬಾಹುಬಲಿಯ ಮೂರ್ತಿಗಳ ಪ್ರತಿಷ್ಠಾಪನೆ ಆಗಿದೆ. ಶ್ರವಣಬೆಳಗೊಳದ ರೀತಿಯಲ್ಲೆ ಮಹಾಮಸ್ತಕಾಭಿಷೇಕ ಬೇರೆಡೆ ಎಲ್ಲಿಯಾದರೂ ನಡೆಯುತ್ತಿದೆಯೆ?

ಉತ್ತರ: ದೇಶದಾದ್ಯಂತ ಬಾಹುಬಲಿಯ ಮೂರ್ತಿ ಸಾಕಷ್ಟು ಕಡೆಗಳಲ್ಲಿ ಪ್ರತಿಷ್ಠಾಪಿತವಾಗಿದೆ. ದೊಡ್ಡ, ಮಧ್ಯಮ, ಸಣ್ಣ – ಹೀಗೆ ಹಲವು ಪ್ರಮಾಣಗಳಲ್ಲಿ, ದೇವಸ್ಥಾನಗಳಲ್ಲಿ ಬಾಹುಬಲಿಯ ಮೂರ್ತಿಗಳನ್ನು ನೋಡುತ್ತೇವೆ. ವಿಶೇಷವಾಗಿ ಹೇಳುವುದಾದರೆ, ಮನೆಮನೆಗಳಲ್ಲಿ ಬಾಹುಬಲಿಯ ಮೂರ್ತಿಯಿದೆ. ಇದಕ್ಕೆ ಕಾರಣವೇನೆಂದರೆ ಎಲ್ಲರ ಮನಸ್ಸಿನಲ್ಲಿ ಬಾಹುಬಲಿ ಮೂಡಿನಿಂತಿರುವುದು.

ಕಾರ್ಕಳ, ವೇಣೂರು, ಧರ್ಮಸ್ಥಳ, ಉತ್ತರಪ್ರದೇಶದ ಫಿರೋಜಾಬಾದ್ ಎಂಬಲ್ಲಿ ಕೂಡಾ ಅಭಿಷೇಕ ನಡೆಯುತ್ತದೆ. ದೆಹಲಿ, ಮುಂಬೈಯಲ್ಲಿ ನ್ಯಾಷನಲ್ ಪಾರ್ಕ್ ಸಮೀಪ ಆದಿನಾಥ-ಭರತ-ಬಾಹುಬಲಿ ಎಂದು ಸುಮಾರು ೨೧ ಅಡಿಯ ಮೂರು ಮೂರ್ತಿಗಳನ್ನು ಪ್ರತಿ?ಪಿಸಲಾಗಿದೆ. ಅಲ್ಲಿಯೂ ಅಭಿಷೇಕ ನಡೆಯುತ್ತದೆ. ಉತ್ತರಕರ್ನಾಟಕದಲ್ಲಿ ಬೆಳಗಾವಿಯ ಶೇಡಬಾಳ, ಕೋತ್ತಳಿಯಲ್ಲಿಯೂ ಬಾಹುಬಲಿ ಮೂರ್ತಿಗೆ ಅಭಿಷೇಕ ಸಲ್ಲುತ್ತಿದೆ.

ಪ್ರಶ್ನೆ: ಇತರೆಡೆ ನಡೆಯುವ, ಹಾಗೂ ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿಷೇಕಕ್ಕೆ ಇರುವ ವಿಶೇಷತೆಯೇನು?
ಉತ್ತರ: ಮಹಾಮಸ್ತಕಾಭಿಷೇಕ ಎನ್ನುವುದು ಭಾರತದ ಸಾಂಸ್ಕೃತಿಕ ಮಹೋತ್ಸವಗಳಲ್ಲಿ ಮಹತ್ತ್ವವಾದದ್ದು. ಮಹಾಕುಂಭ, ಮಹಾಸ್ನಾನಗಳಿಗೆ ತನ್ನದೇ ಆದ ಮಹತ್ತ್ವ ಇರುವಂತೆ ಮಹಾಮಸ್ತಕಾಭಿಷೇಕಕ್ಕೂ ಇದೆ. ಹಿಂದೂಧರ್ಮದ ಅತ್ಯಂತ ದೊಡ್ಡ ಸಾಂಸ್ಕೃತಿಕ ಮಹೋತ್ಸವ ಕುಂಭಮೇಳವೂ ೧೨ ವರ್ಷಕ್ಕೆ ಒಮ್ಮೆ ನಡೆಯುವಂತಹದ್ದು. ಹೀಗೆ ಭಾರತದಲ್ಲಿ ಹಿಂದೂಧರ್ಮ, ಜೈನ ಧರ್ಮ ಜೊತೆಜೊತೆಯಾಗಿ ಬೆಳೆದುಕೊಂಡು ಬಂದಿವೆ.

ಹನ್ನೆರಡು ತಿಂಗಳ ತಪಸ್ಸು ಮುಗಿದ ನಂತರ ಬಾಹುಬಲಿಗೆ ಸಿದ್ಧಿಯಾಗುತ್ತದೆ, ಸರ್ವಜ್ಞತ್ವ ಪ್ರಾಪ್ತಿಯಾಗುತ್ತದೆ. ಅವರ ಶರೀರ ಭೂಮಿಯನ್ನು ಬಿಟ್ಟು ಆಕಾಶದಲ್ಲಿ ಗಮನ ಮಾಡುವಂತಹ ಸ್ಥಿತಿಯನ್ನು ತಲಪುತ್ತದೆ. ಅವರ ಶರೀರದಲ್ಲಿ ದಿವ್ಯಪ್ರಭೆ ಏರ್ಪಡುತ್ತದೆ. ಆ ಸಂದರ್ಭದಲ್ಲಿ ದೇವಾನುದೇವತೆಗಳು ಬಂದು ಗಂಗಾ, ಸಿಂಧು ಮೊದಲಾದ ಪವಿತ್ರನದಿಗಳಿಂದ ಜಲವನ್ನು ತಂದು ಬಾಹುಬಲಿಯ ಮೇಲೆ ಅಭಿಷೇಕ ಮಾಡಿದ್ದರು. ಪುಷ್ಪವೃಷ್ಟಿಯನ್ನು ಮಾಡುವ ಮೂಲಕ ಬಹಳ ವೈಭವದ ಪೂಜೆ ಮಾಡಿದ್ದರು.

ಗುರುಕುಲ ಪದ್ಧತಿ – ಮಠ – ಶೈಕ್ಷಣಿಕ ಧ್ಯೇಯ
ಪ್ರಶ್ನೆ: ಇಂದಿನ ಪರಿಸ್ಥಿತಿಯಲ್ಲಿ ಮಠಗಳು ರಾಜಕೀಯದಿಂದ ಹೊರನಿಂತು ನಮ್ಮ ಸಂಸ್ಕೃತಿಯನ್ನು, ಪರಂಪರೆಯನ್ನು ಉಳಿಸಲು ಯಾವ ದಾರಿಯಲ್ಲಿ ನಡೆಯುತ್ತಿವೆ?
ಉತ್ತರ: ಮಠ ಎಂದರೆ “ಮಠಛ್ಛಾತ್ರಾದಿನಿಲಯಃ”; ಮಠ ಎಂದರೆ ವಿದ್ಯಾರ್ಥಿನಿಲಯ, ಸಂಸ್ಕಾರಶಾಲೆ. ಇಂದು ಮಠಗಳು ಆಧುನಿಕ ಶಿಕ್ಷಣದ ಶಾಲೆಗಳನ್ನು ನಡೆಸುತ್ತಿದ್ದರೂ ತಮ್ಮ ಪದ್ಧತಿಯನ್ನು ಬಿಟ್ಟಿಲ್ಲ. ಎಲ್ಲ ಮಠಗಳಲ್ಲಿ, ಆಶ್ರಮಗಳಲ್ಲಿ, ಧಾರ್ಮಿಕ ಶಿಕ್ಷಣಗಳನ್ನು ನೀಡುತ್ತಿದ್ದಾರೆ. ಸಂಸ್ಕಾರ ನೀಡುವ ಮೂಲಕ ಶಾಸ್ತ್ರಿಗಳನ್ನು ತಯಾರುಮಾಡುತ್ತಿದ್ದಾರೆ. ಆದರೆ ಇಂದಿನ ಯುವಕರಲ್ಲಿ ಇಂಜಿನಿಯರಿಂಗ್, ಮೆಡಿಕಲ್, ಎಂ.ಬಿ.ಎ. ಎನ್ನುವ ಮೋಹವೇ ಹೆಚ್ಚು. ಉದ್ಯೋಗದ ಆಕರ್ಷಣೆಯಿಂದಾಗಿ ಗುರುಕುಲ ಪದ್ಧತಿಗೆ ವಿದ್ಯಾರ್ಥಿಗಳು ಸಿಗುತ್ತಿಲ್ಲ. ಇಂತಹ ವಸ್ತುಸ್ಥಿತಿಯಲ್ಲಿ ನಮ್ಮ ಧರ್ಮವನ್ನೂ, ಗುರುಕುಲ ಪದ್ಧತಿ, ಪರಂಪರೆ, ಸಂಸ್ಕೃತಿಯನ್ನೂ ಹೇಗೆ ಉಳಿಸಬಹುದು ಎನ್ನುವ ಚಿಂತನೆಯನ್ನು ನಾವು ಮಠಾಧಿಪತಿಗಳು ನಡೆಸುತ್ತಿದ್ದೇವೆ. ಎಲ್ಲರೂ ಡಾಕ್ಟರ್, ಇಂಜಿನಿಯರುಗಳು ಆಗಬೇಕೆಂದು ತುದಿಗಾಲಲ್ಲಿ ನಿಂತಿರುವಾಗಲೂ ನಾವು ನಮ್ಮ ಪ್ರಯತ್ನವನ್ನು ನಿಲ್ಲಿಸಿಲ್ಲ. ನಮ್ಮಲ್ಲಿಯೂ ವಿದ್ಯಾಪೀಠಗಳಿವೆ, ಸಂಸ್ಕೃತಪಾಠಶಾಲೆಗಳಿವೆ, ಗುರುಕುಲ ಪದ್ಧತಿ ಇದೆ. ಇಂತಹ ಕಾರ್ಯಗಳನ್ನು ಮಾಡುವುದರೊಂದಿಗೆ ಮಠಗಳು ಧರ್ಮಕಾರ್ಯವನ್ನು ಮಾಡುತ್ತಾ ರಾಜಕೀಯದಿಂದ ದೂರನಿಂತಿದ್ದಾರೆ. ಶೈಕ್ಷಣಿಕ ಧ್ಯೇಯವನ್ನು ಇಟ್ಟುಕೊಂಡೇ ಮಠವನ್ನು ನಡೆಸುತ್ತಿದ್ದೇವೆ.

ಶ್ರವಣಬೆಳಗೊಳದಲ್ಲಿ ನಡೆಯುವ ಮಹಾಮಸ್ತಕಾಭಿ?ಕ ರಾ?ವ್ಯಾಪಿ. ಇದಕ್ಕೆ ರಾ?ವ್ಯಾಪಿ ಮಹತ್ತ್ವ ಬಂದಿರುವುದು ಶ್ರೀಕ್ಷೇತ್ರದಲ್ಲಿ ಶ್ರುತಕೇವಲಿ ಭದ್ರಬಾಹು ಸ್ವಾಮಿಗಳು ಮತ್ತು ಚಂದ್ರಗುಪ್ತ ಮೌರ್ಯರ ಇತಿಹಾಸದಿಂದ. ಕರ್ನಾಟಕವನ್ನು ಎರಡನೇ ಶತಮಾನದಿಂದ ಹಿಡಿದು ಹನ್ನೆರಡನೇ ಶತಮಾನದವರೆಗೆ ರಾಜ್ಯವನ್ನು ಆಳಿದ ಗಂಗ ಸಾಮ್ರಾಜ್ಯದ ರಾಜರು ಮತ್ತು ಸೇನಾಧಿಪತಿಗಳು ಉತ್ತಮ ಕಾರ್ಯವನ್ನು ಮಾಡಿರುವುದರಿಂದ ರಾಜಪರಂಪರೆಯ ಹಿನ್ನೆಲೆ ಸಿಕ್ಕಿತು. ಅದನ್ನು ಹೊಯ್ಸಳರ ಕಾಲದಲ್ಲಿ, ವಿಜಯನಗರ ಕಾಲದಲ್ಲಿ, ಮೈಸೂರು ಮಹಾರಾಜರ ಕಾಲದಲ್ಲಿ ಮುಂದುವರಿಸಿಕೊಂಡು ಹೋದರು, ಬ್ರಿಟಿಷರ ಕಾಲದಲ್ಲೂ ತಡೆಯಾಗಿಲ್ಲ. ನಿರಂತರವಾಗಿ ಸಾಗಿದೆ. ೧೯೨೫ನೇ ಇಸವಿಯಲ್ಲಿ ಸ್ವತಃ ಮೈಸೂರು ಮಹಾರಾಜರೇ ಮಹಾಮಸ್ತಕಾಭಿ?ಕದ ಉಸ್ತುವಾರಿಯನ್ನು ನೋಡಿಕೊಂಡರು.
೧೯೮೧ರಲ್ಲಿ ಮಾಡಿದ ಮಹಾಮಸ್ತಕಾಭಿ?ಕ ಅಂತಾರಾಷ್ಟ್ರೀಯವಾಯಿತು. ಜರ್ಮನಿ, ಫ್ರಾನ್ಸ್, ಆಸ್ಟ್ರಿಯಾ, ಜಪಾನ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ಅಲ್ಲಿನ ಪ್ರಾದೇಶಿಕ ಭಾಷೆಗಳಲ್ಲಿ ಬಾಹುಬಲಿಯ ಮಹಾಮಸ್ತಕಾಭಿಷೇಕವನ್ನು ಕುರಿತ ಲೇಖನಗಳು ಬಂದವು, ಟಿ.ವಿ. ಚಾನೆಲ್‌ಗಳಲ್ಲಿಯೂ ಮಹಾಮಸ್ತಕಾಭಿಷೇಕ ಪ್ರಸಾರವಾಯಿತು.

೨೦೦೬ರಲ್ಲಿ ನಡೆದ ಮಹಾಮಸ್ತಕಾಭಿಷೇಕದ ಸಮಯದಲ್ಲಿ ನಾವು ಒಂದು ಪ್ರಯತ್ನ ಮಾಡಿದ್ದೆವು. ಆರೂ ಖಂಡಗಳಿಂದ ಪುಷ್ಪವನ್ನು ತರಿಸಿ, ಕೇಸರಿಯನ್ನು ತರಿಸಿ ಅಭಿ?ಕವನ್ನು ಮಾಡಿದೆವು. ಆಯಾ ರಾಷ್ಟ್ರಗಳಲ್ಲಿ ಬೆಳೆಯುವ ವಿಶೇಷ ಪುಷ್ಟಪಗಳನ್ನು ತಂದು ಪುಷ್ಟಪವೃಷ್ಟಿ ಮಾಡಿದ್ದೆವು. ಜೊತೆಗೆ ಅಭಿಷೇಕಕ್ಕೂ ವಿಶೇಷ ಪು?ಗಳನ್ನು ಹಲವು ದೇಶಗಳಿಂದ ತರಿಸಲಾಗಿತ್ತು.

ಪ್ರಶ್ನೆ: ಜನಸಾಮಾನ್ಯನಿಂದ ಆಚಾರ್ಯರವರೆಗೆ ಭಗವಾನ್ ಬಾಹುಬಲಿಯ ಆದರ್ಶವೇನು?

ಉತ್ತರ: ಬಾಹುಬಲಿ ಎಲ್ಲರಿಗೂ ಹೀರೋ. ಪರಾಕ್ರಮಿಗಳಿಗೆ, ಸೇನಾಧಿಪತಿಗಳಿಗೆ, ವೀರಪುರು?ರಿಗೆ ಬಾಹುಬಲಿ ಆದರ್ಶ. ತ್ಯಾಗಿಗಳಿಗೂ ಆದರ್ಶ. ಮಂತ್ರಿಗಳಿಗೂ ಈತ ಆದರ್ಶ. ಏಕೆಂದರೆ, ಆತನ ವ್ಯಕ್ತಿತ್ವ ಎಂತಹದ್ದು ಎಂದರೆ ಮಂತ್ರಿಗಳ ಉತ್ತಮ ಸಲಹೆಯಾದ ’ರಕ್ತಹರಿಸುವ ಯುದ್ಧ ಬೇಡ’ ಎನ್ನುವುದನ್ನು ಆತ ಒಪ್ಪಿಕೊಳ್ಳುತ್ತಾನೆ. ಅಲ್ಲಿ ಅಹಿಂಸೆಗೆ ಒತ್ತುಕೊಡುತ್ತಾನೆ. ಅದರೊಂದಿಗೆ ಒಳ್ಳೆಯ ವಿಚಾರವನ್ನು ಗ್ರಹಿಸುವ ವ್ಯಕ್ತಿತ್ವ ಆತನಲ್ಲಿತ್ತು. ಸೌಂದರ್ಯದಲ್ಲಿ ಸುಂದರ, ಎತ್ತರದಲ್ಲಿ ಎತ್ತರ, ಪರಾಕ್ರಮದಲ್ಲಿ ಮಹಾಪರಾಕ್ರಮಿ, ತ್ಯಾಗದಲ್ಲಿ ಅಪ್ರತಿಮ, ತಪಸ್ಸಿನಲ್ಲಿ ಮಹಾತಪಸ್ವಿ, ಬಾಹುಬಲದಲ್ಲಿ ಮೀರಿಸುವವರಿಲ್ಲ. ಬಾಹುಬಲಿ ಮಾತ್ರವಲ್ಲ ಪಾದಬಲಿ. ಏಕೆಂದರೆ, ೩೬೫ ದಿನವೂ ೨೪ ಗಂಟೆ ಕಾಲ ನಿಂತೇ ಇದ್ದಂತಹ ಶಕ್ತಿ ಆ ಪಾದದ ಬಲ. ಅದಕ್ಕೇ ಪಾದಬಲಿ ಎಂದೂ ವರ್ಣಿಸುತ್ತಾರೆ. ಮತ್ತು ಮನೋಬಲಿಯೂ ಹೌದು. ಯಾರಿಗೆ ಅಂತಹ ಮನೋಬಲ ಇಲ್ಲವೋ ಆತ ಬಾಹುಬಲಿಯಾಗಲು, ಪಾದಬಲಿಯಾಗಲು, ಭುಜಬಲಿಯಾಗಲೂ ಸಾಧ್ಯವಿಲ್ಲ. ಇವೆಲ್ಲದರ ಉದ್ದೇಶ ಮೋಕ್ಷ. ತೀರ್ಥಂಕರ ಆದಿನಾಥರಿಗಿಂತಲೂ ಮೊದಲೇ ಮೋಕ್ಷವನ್ನು ಪಡೆಯುವ ಸೌಭಾಗ್ಯ ಬಾಹುಬಲಿಯದ್ದು.

ಬಾಹುಬಲಿಯ ಆದರ್ಶವೇ ದೊಡ್ಡದು. ಅಹಿಂಸೆಯಿಂದ ಸುಖ, ತ್ಯಾಗದಿಂದ ಶಾಂತಿ, ಮೈತ್ರಿಯಿಂದ ಪ್ರಗತಿ, ಧ್ಯಾನದಿಂದ ಸಿದ್ಧಿ ಎನ್ನುವಂತಹ ಸಾರ್ವಕಾಲಿಕ ಸಂದೇಶವನ್ನು ನೀಡಿರುವ ಬಾಹುಬಲಿ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆನಿಂತಿದ್ದಾನೆ. ಹೀಗೆ ಭಾರತದ ಇತಿಹಾಸದಲ್ಲಿ ಹಾಸುಹೊಕ್ಕಾಗಿ ಬೆರೆತಿರುವ ಐತಿಹಾಸಿಕ, ಪೌರಾಣಿಕ ಪುರು? ಬಾಹುಬಲಿ. ಪಂಪನ ’ಆದಿಪುರಾಣ’ದಲ್ಲಿ, ರತ್ನಾಕರವರ್ಣಿಯ ’ಭರತೇಶವೈಭವ’ದಲ್ಲಿ ಬಾಹುಬಲಿಯ ವೈಶಿ?ವನ್ನು ನೋಡಬಹುದು. ಹೀಗೆ ಬಾಹುಬಲಿ ಸಾಹಿತ್ಯಿಕವಾಗಿಯೂ ಬಹಳ ಎತ್ತರ. ತಪಸ್ಸಿನ ದೃಷ್ಟಿಯಲ್ಲಿ ತ್ಯಾಗಿಗಳಿಗೆ ಆದರ್ಶ. ಪ್ರಪಂಚದಲ್ಲಿ ಯಾವುದೇ ಧರ್ಮ, ರಾಷ್ಟ್ರ, ವರ್ಗವನ್ನು ಗಮನಿಸಿದರೂ ಬಾಹುಬಲಿಯ ತಪಸ್ಸಿಗೆ ಸರಿಸಮನಾದ ಇನ್ನೊಬ್ಬರು ಸಿಗುವುದು ಕಷ್ಟ. ಬಾಹುಬಲಿ ತೀರ್ಥಂಕರನಲ್ಲ. ಆದರೆ ಜೈನಧರ್ಮದಲ್ಲೂ ತೀರ್ಥಂಕರರನ್ನೇ ಮೀರಿಸುವಂತಹ ತಪಸ್ಸು ಬಾಹುಬಲಿಯದ್ದು.

ನಿಃಶಸ್ತ್ರೀಕರಣ ಬಾಹುಬಲಿಯ ಸಂದೇಶವೇ ಆಗಿದೆ. ಈಗಿನ ಕಾಲಕ್ಕಂತೂ ಇದು ಬಹಳ ಪ್ರಸ್ತುತವಾಗಿದೆ.
ಎಲ್ಲರಲ್ಲೂ, ಎಲ್ಲ ದೇಶಗಳಲ್ಲೂ ಇಂದು ಸಣ್ಣಸಣ್ಣ ಶಸ್ತ್ರಗಳಿಂದ ಹಿಡಿದು ಅಣುಬಾಂಬ್‌ಗಳ ತನಕ ಶಸ್ತ್ರಗಳಿವೆ. ಆದರೆ ಉಪಯೋಗಿಸಲು ಎಲ್ಲರೂ ಭಯಪಡುತ್ತಾರೆ. ಸ್ವತಃ ಉಪಯೋಗಿಸಿದ ದೇಶವೇ ನಾಶವಾಗುವಂತಹ ಶಸ್ತ್ರಗಳಿರುವಾಗ ಶಸ್ತ್ರಗಳನ್ನು ಉಪಯೋಗಿಸುವುದು ತಮಾಷೆಯ ಮಾತಲ್ಲ. ಐನ್‌ಸ್ಟೈನ್ ಬಳಿ ಎರಡನೇ ಮಹಾಯುದ್ಧ ಆದ ಬಳಿಕ ಒಬ್ಬರು ಕೇಳುತ್ತಾರೆ “ಮೂರನೆಯ ಮಹಾಯುದ್ಧ ಯಾವ ರೀತಿ ಆಗಬಹುದು?” ಎಂದು. ಅದಕ್ಕೆ ಅವರು ನೀಡಿದ ಉತ್ತರ “ಮೂರನೆಯ ಮಹಾಯುದ್ಧ ಹೇಗೆ ನಡೆಯುತ್ತದೆಯೋ ಹೇಳಲಾಗದು. ಆದರೆ ನಾಲ್ಕನೇ ಮಹಾಯುದ್ಧದ ಸಮಯಕ್ಕೆ ಮಾನವನ ಅಸ್ತಿತ್ವವೇ ಇರುವುದಿಲ್ಲ. ಶಸ್ತ್ರ-ಶಸ್ತ್ರಗಳೇ ಹೋರಾಡುವಂತಹ ಸ್ಥಿತಿ ಸೃಷ್ಟಿಯಾಗುತ್ತದೆ” ಎಂದು. ಇಂದಿನ ಪರಿಸ್ಥಿತಿಯೂ ಇದೇ ಆಗಿದೆ. ಆದ್ದರಿಂದಲೇ ನಿಃಶಸ್ತ್ರೀಕರಣ ಎನ್ನುವುದು ಬಹುಮುಖ್ಯ. ಯುದ್ಧ ಎನ್ನುವುದು ದೇಶರಕ್ಷಣೆಗೆ ಅತ್ಯಂತ ಅವಶ್ಯ ಎನಿಸಿದಾಗ ನಡೆಯಬೇಕ? ಹೊರತು ಅದು ಒಳಿತಿನ ಹಾದಿಯಲ್ಲ.

ಪ್ರಶ್ನೆ: ಇಂದಿನ ಕಾಲಕ್ಕೆ ’ಅಪರಿಗ್ರಹ’ ಎಷ್ಟು ಪ್ರಸ್ತುತ?
ಅಪರಿಗ್ರಹವೆಂದರೆ ದಾನ; ತನಗೆ ಎಷ್ಟು ಬೇಕೋ ಅಷ್ಟು ಇಟ್ಟುಕೊಂಡು ಉಳಿದದ್ದೆಲ್ಲವನ್ನೂ ದಾನ ಮಾಡುವ ಶಕ್ತಿ. ಪ್ರಪಂಚದ ೭೦೦ ಕೋಟಿ ಜನಸಂಖ್ಯೆಯಲ್ಲಿ ೭೦೦ ಜನರಷ್ಟು ದಿಗಂಬರ ಮುನಿಗಳು. ಹಾಗಾಗಿ ಎಲ್ಲರೂ ಅಂತಹ ಸ್ಥಿತಿ ತಲಪಲು ಸಾಧ್ಯವಿಲ್ಲ. ಕನಿಷ್ಠ ದೀನದಲಿತರ ಉದ್ಧಾರಕ್ಕಾಗಿ, ರಾ?ದ ಒಳಿತೆಂಬ ಸದುದ್ದೇಶಕ್ಕಾಗಿ ತನ್ನಿಂದಾದ ಸಹಾಯ ಮಾಡುವುದೂ ಇಂದಿನ ಕಾಲಕ್ಕೆ ಅಪರಿಗ್ರಹವೇ ಆಗಿದೆ. ಜೈನಧರ್ಮದಲ್ಲಿ ಪರಿಮಿತ ಪರಿಗ್ರಹ ಎನ್ನುವ ಅಣುವ್ರತ ಇದೆ. ತನಗೆ ಬೇಕಿದ್ದುದ?ನ್ನೇ ಉಪಯೋಗಿಸಿ ಉಳಿದದ್ದನ್ನು ದಾನಮಾಡುವುದೇ ಈ ವ್ರತ.

ಪ್ರಶ್ನೆ: ತೀರ್ಥಂಕರನಾಗುವುದು ಅಥವಾ ಮೋಕ್ಷವನ್ನು ಪಡೆಯುವುದು ಇವುಗಳ ಬಗ್ಗೆ ತಿಳಿಸುವಿರಾ?ಉತ್ತರ: ಮೋಕ್ಷಕ್ಕೆ ಹೋಗಲು ಕೇವಲ ತೀರ್ಥಂಕರರಾಗಿಯೇ ಹೋಗಬೇಕೆಂದಿಲ್ಲ. ಸಾಮಾನ್ಯ ಕೇವಲಿ ಜಿನನಾಗಿ, ಗಣಧರಿ ಕೇವಲಿಯಾಗಿ, ತೀರ್ಥಂಕರನಾಗಿ ಮೋಕ್ಷಕ್ಕೆ ಹೋಗಬಹುದು. ಆದರೆ ತೀರ್ಥಂಕರರ ವೈಶಿಷ್ಟ್ಯ ಎಂದರೆ ಪಂಚಕಲ್ಯಾಣಗಳ ವೈಭವ. ಸಮೋಶರಣದ ದಿವ್ಯಸಭೆ. ಇವೆಲ್ಲ ಹಿಂದಿನ ಜನ್ಮದ ಪುಣ್ಯಸಂಪಾದನೆ.

ಕನಿಷ್ಠ ಹಿಂದಿನ ಮೂರು ಅಥವಾ ನಾಲ್ಕು ಭವಗಳ ಹಿಂದೆ ಷೋಡಶ ಭಾವನೆಗಳನ್ನು ಭಾವಿಸಿ, ಅನುಷ್ಠಾನಕ್ಕೆ ತಂದಂತಹ ವ್ಯಕ್ತಿಯು ತೀರ್ಥಂಕರನಾಗುತ್ತಾನೆ. ಕೇವಲ ಒಂದು ಜನ್ಮದ ಸಾಧನೆಯಿಂದ ತೀರ್ಥಂಕರನಾಗಲು ಸಾಧ್ಯವಿಲ್ಲ. ಈಗ ಪ್ರಾರಂಭ ಮಾಡಿದರೆ, ಇನ್ನು ನಾಲ್ಕನೇ ಅಥವಾ ಐದನೇ ಭವದಲ್ಲಿ ಅವನು ತೀರ್ಥಂಕರನಾಗಬಲ್ಲ. ಯಾಕೆಂದರೆ ಅದಕ್ಕೆ ಹದಿನಾರು ರೀತಿಯ ನಿಯಮಗಳಿವೆ. ಅದಕ್ಕೆ ?ಡಶ ಕಾರಣ ಭಾವನೆಗಳು ಎಂದು ಹೇಳಿದ್ದಾರೆ. ಅದನ್ನು ನೋಂಪಿ ಆಚರಿಸುವ ಮೂಲಕ – ವ್ರತಾಚರಣೆ, ಉಪವಾಸ ಆಚರಿಸುವ ಮೂಲಕ ಕಾರ್ಯಾನುಷ್ಠಾನಕ್ಕೆ ತರಬೇಕು. ಅದರಿಂದ ಪುಣ್ಯಬಂಧವಾಗುತ್ತದೆ. ಆ ಪುಣ್ಯದ ಫಲದಿಂದ ತೀರ್ಥಂಕರನಾಗುತ್ತಾನೆ. ಆಗ ಗರ್ಭಾವತರಣಕಲ್ಯಾಣ, ಜನ್ಮಕಲ್ಯಾಣ, ದೀಕ್ಷಾಕಲ್ಯಾಣ, ಕೇವಲಜ್ಞಾನಕಲ್ಯಾಣ, ಮೋಕ್ಷಕಲ್ಯಾಣವೆಂಬ ಪಂಚಕಲ್ಯಾಣದ ವೈಭವ ಉಂಟಾಗುತ್ತದೆ.

ತೀರ್ಥಂಕರನ ಶರೀರದಲ್ಲಿ ಬಿಳಿರಕ್ತ, ವಜ್ರದಷ್ಟು ಶಕ್ತಿ ಇರುತ್ತದೆ. ಅವನನ್ನು ರೋಗರುಜಿನಗಳು ಎಂದೂ ಬಾಧಿಸುವುದಿಲ್ಲ. ಕರುಣೆ ಉತ್ತುಂಗದಲ್ಲಿರುತ್ತದೆ, ಲೋಕದ ಬಗೆಗೆ ಹಿತಭಾವನೆಯಿರುತ್ತದೆ. ಅಂತಹ ವಿಶಿಷ್ಟ ವ್ಯಕ್ತಿತ್ವ, ೧೩೨ ಅತಿಶಯಗಳಿಂದ ಕೂಡಿರತಕ್ಕಂತಹ ದಿವ್ಯಶರೀರ.

’ತೀರ್ಥಕರ’ ಎಂದರೆ ದಿವ್ಯಶರೀರ. ’ತೀರ್ಥಂಕರ’ ಎಂದರೆ ಕರ್ಮನಾಶ ಮಾಡಿ ಅರಿಹಂತನಾದ ಮೇಲಿನ ಸ್ಥಿತಿ. ಅದಕ್ಕೆ ತೀರ್ಥಕರ ಮತ್ತು ತೀರ್ಥಂಕರ ಎಂದು ಹೇಳುವುದು. ಜಿ.ಪಿ. ರಾಜರತ್ನಂ ಮತ್ತು ಶಾಂತಿರಾಜ ಶಾಸ್ತ್ರಿಗಳಿಗೂ ಆಗಿನ ಕಾಲದಲ್ಲಿ ತೀರ್ಥಕರ ಮತ್ತು ತೀರ್ಥಂಕರ ಶಬ್ದದ ನಡುವೆ ಲೇಖನಗಳಲ್ಲಿ ಸಾಕಷ್ಟು ವಾದವಿವಾದ ನಡೆದಿತ್ತು. ತೀರ್ಥಕರ ಎಂದರೆ ದಿವ್ಯಶರೀರವನ್ನು ಪ್ರಾಪ್ತಿ ಮಾಡಿಕೊಳ್ಳುವುದು. ಅಂತಹ ಶರೀರಧಾರಿಗಳು ತಪಸ್ಸು ಮಾಡಿ, ಧಾತ್ರಿಕರ್ಮವನ್ನು ನಾಶಮಾಡಿ, ಅನಂತಚತುಷ್ಟ ಗುಣಗಳನ್ನು ಪ್ರಾಪ್ತಿಮಾಡಿಕೊಂಡ ಮೇಲೆ ತೀರ್ಥಂಕರನಾಗುವುದು. ಹೀಗೆ ತೀರ್ಥಕರರೇ ಮುಂದೆ ತೀರ್ಥಂಕರರಾಗುತ್ತಾರೆ.

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ


vulkan vegas, vulkan casino, vulkan vegas casino, vulkan vegas login, vulkan vegas deutschland, vulkan vegas bonus code, vulkan vegas promo code, vulkan vegas österreich, vulkan vegas erfahrung, vulkan vegas bonus code 50 freispiele, 1win, 1 win, 1win az, 1win giriş, 1win aviator, 1 win az, 1win azerbaycan, 1win yukle, pin up, pinup, pin up casino, pin-up, pinup az, pin-up casino giriş, pin-up casino, pin-up kazino, pin up azerbaycan, pin up az, mostbet, mostbet uz, mostbet skachat, mostbet apk, mostbet uz kirish, mostbet online, mostbet casino, mostbet o'ynash, mostbet uz online, most bet, mostbet, mostbet az, mostbet giriş, mostbet yukle, mostbet indir, mostbet aviator, mostbet casino, mostbet azerbaycan, mostbet yükle, mostbet qeydiyyat