ಸ್ತ್ರೀವಾದದ ಅಹಂ ಅಸ್ಮಿತೆಗಳನ್ನೆಲ್ಲ ಒಂದು ಕ್ಷಣ ಬದಿಗಿಟ್ಟು ಯೋಚಿಸೋಣ. ಹುಟ್ಟಿದ ಹಬ್ಬಕ್ಕೆಂದು ಸಂಗಾತಿ ಕೊಡಿಸುವ ತಿಳಿನೀಲಿ ಬಣ್ಣದ ಸೀರೆ, ಮದುವೆಯ ವಾರ್ಷಿಕೋತ್ಸವದ ನೆನಪಲ್ಲಿ ಅನಿರೀಕ್ಷಿತವಾಗಿ ಕೊಡಿಸಿದ ಮುದ್ದಾದ ಉಂಗುರ, ಮತ್ತೆಂದೋ ಹಾಗೇ ಸುಮ್ಮನೆ ತಂದ ಇಷ್ಟದ ಉಡುಪು… ಇವೆಲ್ಲವುಗಳ ಮೇಲೆ ಮೋಹವಿಲ್ಲದ ಹೆಣ್ಣಿದ್ದಾಳೆಯೇ? ಅವಳು ಎಷ್ಟು ಸಂಪಾದಿಸುವವಳಾಗಿರಲಿ, ಆರ್ಥಿಕ ಸ್ವಾತಂತ್ರ್ಯವಿರಲಿ, ಅವಳು ಕೊಂಡುಕೊಳ್ಳುವ ಯಾವುದೇ ವಸ್ತುವಿಗಿಂತಲೂ ಗಂಡ ಕೊಡಿಸಿದ್ದರ ಮೇಲೆ ಮೋಹ ಜಾಸ್ತಿ. ಅದೇ ಸೀರೆಯನ್ನು ಮತ್ತೆ ಮತ್ತೆ ಬೀರುವಿನಿಂದ ತೆಗೆದು ಅದರ ಮೇಲೆ ಆಪ್ಯಾಯತೆಯಿಂದ ಕೈಯಾಡಿಸುವುದರಲ್ಲೂ ಏನು ಸಂಭ್ರಮ. ಪ್ರೀತಿಗೆ ಬೆಲೆಕಟ್ಟಲು ಸಾಧ್ಯವೇ ಎಂದಲ್ಲ, ಆದರೆ ಅಂತಹ ಖುಷಿಗೆ ಯಾವ ಮೂಲ್ಯವೂ ಎಟಕುವುದಿಲ್ಲ. ಅಮೂಲ್ಯವಾದ ಅಂತಹ ಪುಟ್ಟ ಪುಟ್ಟ ಉಡುಗೊರೆಗಳು ನಮ್ಮ ಬದುಕಿನಲ್ಲಿ ವಹಿಸುವ ಪಾತ್ರ ಬಹಳ ದೊಡ್ಡದಲ್ಲವೇ?
ಮತ್ತೆ ಮತ್ತೆ ಗುನುಗಿಕೊಳ್ಳುವ ಕೆ.ಎಸ್. ನರಸಿಂಹಸ್ವಾಮಿಯವರ ಮೈಸೂರು ಮಲ್ಲಿಗೆಯ ಸಾಲುಗಳು ಸಿ. ಅಶ್ವಥ್ ಅವರ ದನಿಯಲ್ಲಿ ನಮ್ಮ ಕಿವಿಗೆ ತಾಕುತ್ತಲೇ ಇರುತ್ತವೆ. ’ಅಕ್ಕಿ ಆರಿಸುವಾಗ ಚಿಕ್ಕ ನುಚ್ಚಿನ ನಡುವೆ ಬಂಗಾರವಿಲ್ಲದ ಬೆರಳು| ತಗ್ಗಿರುವ ಕೊರಳಿನ ಸುತ್ತ ಕರಿಮಣಿಯೊಂದೆ ಸಿಂಗಾರ ಕಾಣದ ಹೆರಳು||’ ಆ ಗಂಡನಿಗೆ ಕಾಣಿಸಿದ್ದು ಮತ್ತದೇ ಬಂಗಾರವಿಲ್ಲದ ಬೆರಳು, ಸಿಂಗಾರ ಕಾಣದ ಹೆರಳು. ಅವಳ ಮುಡಿಗೆ ಮುಡಿಸುವ ಮಲ್ಲಿಗೆ, ಬೆರಳಿಗೆ ತೊಡಿಸುವ ಉಂಗುರ ಅಪ್ಪಟ ರೊಮಾಂಟಿಕ್ ಕಲ್ಪನೆಗಳಲ್ಲವೇ? ’ಬಡವನಾದರೆ ಏನು ಪ್ರಿಯೆ ಕೈತುತ್ತು ಉಣಿಸುವೆ’ ಎಂದು ಹಾಡುವ ಒಲವಲ್ಲಿ ದಣಿದ ಜೀವಕ್ಕೆ ಅಮೃತವಾಗುವ ಶಕ್ತಿಯಿದೆಯಲ್ಲವೇ? ಇಂದಿನ ಒತ್ತಡದ ಬದುಕಲ್ಲಿ ಕೈತುತ್ತು ಹಾಗಿರಲಿ, ಸದ್ಯ ವಾರಕ್ಕೊಮ್ಮೆಯಾದರೂ ಜೊತೆಯಾಗಿ ಕುಳಿತು ಊಟ ಮಾಡುವ ಅವಕಾಶ ಸಿಕ್ಕಿದರೆ ಅದೇ ಪರಮ ಭಾಗ್ಯ!
ವಾಟ್ಸ್ಆಪಿನಲ್ಲಿ ಹತ್ತಾರು ಸಂದೇಶಗಳು ಬರುತ್ತವೆ, ಗಂಡನ ಮರೆಗುಳಿತನದ ಬಗ್ಗೆ! ಹೆಂಡತಿ ಗಂಡನಲ್ಲಿ ಬೇರೆ ಬೇರೆ ಪ್ರಶ್ನೆಗಳನ್ನು ಕೇಳುತ್ತಾಳೆ. ಯಾವುದೋ ಸಿನೆಮಾದಲ್ಲಿ ಹೀರೋಯಿನ್ ಉಟ್ಟ ಸೀರೆಯ ಬಣ್ಣದವರೆಗೂ! ಅದೆಲ್ಲದಕ್ಕೂ ಸರಿಯಾಗಿಯೇ ಉತ್ತರಿಸುವ ಗಂಡ ಇವತ್ತಿನ ವಿಶೇಷವೇನು ಎಂದರೆ ತಲೆಕೆರೆದುಕೊಳ್ಳುತ್ತಾನೆ. ಗಂಡನಾದವನು ಬಹುಶಃ ಅರಿತೋ ಅರಿಯದೆಯೋ ಮರೆತು ಹೋಗುವ ಎರಡು ದಿನಗಳೆಂದರೆ ಮದುವೆಯಾದ ದಿನ ಮತ್ತು ಹೆಂಡತಿಯ ಹುಟ್ಟುಹಬ್ಬ. ಅದಕ್ಕೂ ಆಡಿಕೊಳ್ಳುವವರಿದ್ದಾರೆ, ತಮ್ಮ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಕಳೆದುಕೊಂಡ ದಿನವನ್ನು ಮರೆಯುವ ಬದಲು ಯಾರಾದರೂ ನೆನಪಿಟ್ಟುಕೊಳ್ಳುತ್ತಾರಾ ಎಂದು!! ಕಳೆದುಕೊಳ್ಳುವುದೇ ಆದರೆ ಅದು ಇಬ್ಬರಿಗೂ ಅನ್ವಯಿಸುತ್ತದೆ ತಾನೆ? ಅಷ್ಟಕ್ಕೂ ಗಂಡಿಗಿಂತ ಹೆಚ್ಚು ಕಳೆದುಕೊಳ್ಳುವುದು ಹೆಣ್ಣೇ ತಾನೆ? ತವರು, ತನ್ನವರು, ತನ್ನತನ.. ಎಲ್ಲವೂ.
ಈಗಂತೂ ಬಿಡಿ ಫೇಸುಬುಕ್ಕೆಂಬ ಪುಸ್ತಕ ಬೇಕಾದವರ ಬೇಡದವರೆಲ್ಲರ ಹುಟ್ಟುಹಬ್ಬಗಳನ್ನೂ ನೆನಪಿಸುತ್ತದೆ. ಮರೆತವರ, ಮರೆಯಬೇಕೆಂದು ಅಂದುಕೊಂಡವರ ಎಲ್ಲ ಆಚರಣೆಗಳನ್ನೂ ಸಂಭ್ರಮಗಳನ್ನೂ ಮತ್ತೆ ಮತ್ತೆ ತೋರಿಸುತ್ತಲೇ ಇರುತ್ತದೆ. ಹಾಗಿದ್ದ ಮೇಲೆ ಪತಿ ಪತ್ನಿಯರೂ ಫೇಸುಬುಕ್ಕಿನಲ್ಲಿ ಸ್ನೇಹಿತರೇ ಆಗಿರುವುದರಿಂದ ಈಗ ಮರೆತು ಹೋಗುವ ಭಯವಿಲ್ಲ. ಎಂದರೂ ಎಲ್ಲರಿಗಿಂತ ಮೊದಲು ಸಂಗಾತಿಯೇ ಶುಭಾಶಯ ಹೇಳಿದರೆ ಸಿಗುವ ಖುಷಿಯೇ ಬೇರೆ.
ಬದುಕಿನ ನವೀಕರಣ
ಬರಬರುತ್ತಾ ಬದುಕು ಹಳತಾಗುತ್ತದೆ. ಇಂದಿನ ಬದುಕಿನ ವೇಗದಲ್ಲಂತೂ ಸಾಕ್ಷಾತ್ ನಳಮಹಾರಾಜ ಬಾಹುಕನಾಗಿ ರಥ ಓಡಿಸಿದಂತೆ ಬದುಕು ಲಂಗು ಲಗಾಮಿಲ್ಲದೇ ಓಡುತ್ತಿದೆ. ಓಟವೆತ್ತಲೋ ಗೊತ್ತಿಲ್ಲ, ಸಮಯವನ್ನು ನೇಯುವ ಮಗ್ಗ ಯಾರಿಗೂ ಸಿಕ್ಕಿಲ್ಲ. ಯಾರಿಗೂ ಯಾವುದಕ್ಕೂ ಬಿಡುವಿಲ್ಲ. ನಿಜವಾಗಿಯೂ ಬಿಡುವಿಲ್ಲವೇ ಎಂದರೆ ನಮಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೊಡಗಿಸಿಕೊಳ್ಳುವುದಕ್ಕೆ ಬೇಕಾದ? ಸಮಯವಿದೆ. ಆದರೆ ಆಪ್ತರಿಗಾಗಿ ಅಲ್ಲ. ಮನೆಯಂಗಳದಲ್ಲಿ ಮಲ್ಲಿಗೆಯರಳಿದರೂ ಅದರ ಚಿತ್ರ ನಮ್ಮ ಗೆಳೆಯರೆಲ್ಲರೂ ನೋಡಬೇಕೆಂದು ಆಶಿಸುವ ನಮಗೆ ಮನೆಯೊಳಗಿನ ಮನ ಬಾಡುತ್ತಿರುವುದರ, ಕಮರುತ್ತಿರುವುದರ ಅರಿವಾಗುವುದೇ ಇಲ್ಲ. ಒಂದು ನಗುವಿನ ಹಿಂದೆ ನೂರು ವ್ಯಥೆಗಳು ಅಡಗಿ ನಗುವುದು ಹೊರನೋಟಕ್ಕೆ ಯಾರಿಗೂ ಗೊತ್ತಾಗುವುದಿಲ್ಲ. ಇಂಥದ್ದೊಂದು ಬದುಕು ನಾವು ಬೇಡವೆಂದುಕೊಂಡರೂ ನಮ್ಮದಾದ ಮೇಲೆ ನಮ್ಮ ಬದುಕನ್ನು ಆಗೀಗ ನವೀಕರಿಸುವ ಅಗತ್ಯವೂ ತಲೆದೋರುತ್ತದೆಯಲ್ಲವೇ? ಸಿಕ್ಕಸಿಕ್ಕದ್ದಕ್ಕೆಲ್ಲ ಏನು ಉಡುಗೊರೆ? ನಮ್ಮ ಹಿರಿಯರೇನು ಪದೇ ಪದೇ ಹೀಗೆ ಖರ್ಚು ಮಾಡುತ್ತಿದ್ದರೇ ಎಂದು ಥಟ್ಟನೆ ಕೇಳಬಹುದು. ಆದರೆ ಹಿಂದಿನಂತೆ ಯುಗಾದಿ ದೀಪಾವಳಿಗೆ ಮಾತ್ರ ಹಬ್ಬ ಗಮ್ಮತ್ತಾಗಿ ಆಚರಿಸುವ ಪರಿಪಾಠ ಉಳಿದಿಲ್ಲವಲ್ಲ?
ಮುನಿದು ಮುಖವೂದಿಸಿಕೊಂಡು ಕುಳಿತಿದ್ದ ಪತ್ನಿಯ ಮುಡಿಯಲ್ಲಿ ಪತಿ ತಂದಿರಿಸುವ ದುಂಡುಮಲ್ಲಿಗೆಯ ಘಮ ಅವಳ ಮನಸ್ಸಿನಲ್ಲಿ ಅರಳದಿದ್ದೀತೆ? ಉಡುಗೊರೆಗಳೆಂದ ಮಾತ್ರಕ್ಕೆ ಜೇಬಿಗೆ ಕತ್ತರಿ ಹಾಕುವ ಒಡವೆಗಳಲ್ಲ, ಅವಳಿ? ಪಡುವ ಉಡುಪು, ಅವಳಿ?ದ ಬಣ್ಣದ ನೇಲ್ ಪಾಲಿಶ್… ನಗು ಎಂದಿಗೂ ದುಬಾರಿಯಲ್ಲ.
ಮದುವೆ ನಿಶ್ಚಯವಾದ ದಿನದಿಂದ ಮದುವೆಯವರೆಗೆ ಒಂದ? ತಿಂಗಳ ಅಂತರವಿದ್ದರೆ ಪರಸ್ಪರ ಉಡುಗೊರೆಗಳ ಮಳೆ ಸುರಿದಿರುತ್ತದೆ. ಮೊದಲು ಜೊತೆಯಾಗಿ ಪಯಣಿಸಿದ ದಿನಕ್ಕೆ, ಮೊದಲ ಬಾರಿಗೆ ಬೈಕ್ ಏರಿದ ಖುಷಿಗೆ.. ಹೀಗೆ ನೆನಪುಗಳ ಸಂತೆಯಲ್ಲಿ ಕಚಗುಳಿ ತರುವ ಅನುಭವಗಳಾಗಿ ಏನೆಲ್ಲ ಇರುತ್ತವೆಯೋ ಅವೆಲ್ಲವುಗಳ ಜೊತೆಗೂ ಚಿಕ್ಕಪುಟ್ಟ ಉಡುಗೊರೆಗಳೂ ಇರುತ್ತವೆ. ಕೈಯಲ್ಲಿ ದುಡ್ಡಿರಲಿ ಇಲ್ಲದಿರಲಿ, ತಮ್ಮ ಮಿತಿಗೆ ಎಟಕುವ ಯಾವುದೋ ಒಂದು ವಸ್ತು ಮುದ್ದಾಗಿ ಗಿಫ್ಟ್ ಕವರಿನ ಒಳಗೆ ಕುಳಿತಿರುತ್ತದೆ. ಅವನು/ಅವಳು ಅದನ್ನು ತೆಗೆದು ನೋಡುವುದೇ ಒಂದು ಚೆಂದ. ಹಾಗೇ ಮುಖದಲ್ಲಿ ಅರಳುವ ನಗೆಗೆ ಇನ್ನೇನು ಕೊಡಬಹುದೋ ಎಂಬ ಕಾತರ. ಮದುವೆಯಾಗಿ ವರು?ಗಳು ಉರುಳಿದಂತೆ ಈ ನವಿರಾದ ಭಾವಗಳು ನಮ್ಮಿಂದ ದೂರವಾಗುವುದಕ್ಕೇ ಹೊಂಚುತ್ತಿರುತ್ತವೇನೋ ಎಂಬಂತೆ ಎಲ್ಲವೂ ಹಳತಾಗುತ್ತವೆ, ಇಲ್ಲವೇ ನಾವೇ ಹಳತಾಗಿಸಿಕೊಳ್ಳುತ್ತೇವೆ. ಅವುಗಳನ್ನೆಲ್ಲ ಎದೆಬಟ್ಟಲಲ್ಲಿ ಕಾಪಿಟ್ಟುಕೊಳ್ಳುವುದು ಅಗತ್ಯ, ಗಿಡವೊಂದು ಹಸಿರಾಗಿರಲು ನೀರು ಗೊಬ್ಬರ ಹಾಕಿ ಪೋಷಿಸುವುದಿಲ್ಲವೇ, ಹಾಗೆ. ಅಂತಿದ್ದಾಗ ಚಿಕ್ಕಪುಟ್ಟ ದುಃಖಗಳು, ಇನ್ನೆಂದೋ ಆಗಿದ್ದ, ಮಾಸಲಾರದು ಎಂದುಕೊಂಡಿದ್ದ ಗಾಯಗಳೆಲ್ಲ ಮಾಗುತ್ತವೆ, ಮರೆಯಾಗುತ್ತವೆ.
ಯಾರೋ ತಮ್ಮ ಬ್ಲಾಗಿನಲ್ಲಿ ಬರೆದುಕೊಂಡಿದ್ದರು, ಹಬ್ಬ ಆಚರಣೆಗಳೇನೂ ಇಲ್ಲದೇ ಹೆಂಡತಿ ಸಿಡಿಮಿಡಿಗುಟ್ಟುತ್ತಿರುವ ’ಆ ದಿನಗಳ’ಲ್ಲಿ ಅವಳಿಗೆ ಪುಟ್ಟ ಉಡುಗೊರೆ ನೀಡಬೇಕಂತೆ. ಭಾವನಾತ್ಮಕವಾಗಿ, ದೈಹಿಕವಾಗಿ ಅತ್ಯಂತ ಸಂಕೀರ್ಣ ಸಮಯ ಅದಾಗಿರುವುದರಿಂದ ಆ ಸಮಯದಲ್ಲಿ ಗಂಡ ನೀಡಬಲ್ಲ ಚಿಕ್ಕ ಪುಟ್ಟ ವಸ್ತುಗಳು ಆಕೆಗೆ ತನ್ನನ್ನು ಕಾಡುವ ಹತಾಶೆಗಳಿಂದ ಹೊರಬರಲು ನೆರವಾಗುತ್ತವಂತೆ. ಇವು ಸಂಶೋಧನೆಯಿಂದ ಖಚಿತವಾದ ವಿಷಯಗಳೋ ಅಥವಾ ಕೇವಲ ಬರಹಗಾರರ ಅನಿಸಿಕೆಯೋ ಗೊತ್ತಿಲ್ಲ. ಆದರೆ ದುಗುಡದಲ್ಲಿದ್ದಾಗ ವಿಂಡೋ ಶಾಪಿಂಗ್ ಹೋಗುವುದು ಮನಸ್ಸು ಸರಿ ಹೋಗಲು ನೆರವಾಗುತ್ತದೆ ಎಂಬುದನ್ನು ಅಧ್ಯಯನಗಳು ಖಾತ್ರಿಪಡಿಸಿವೆ.
ಇನ್ನೂ ಹಲವು ಸಂದರ್ಭಗಳಲ್ಲಿ ಮಾತಿನಲ್ಲಿ, ಪದಗಳಲ್ಲಿ ಹೇಳಲಾಗದ ಭಾವವನ್ನು ದಾಟಿಸಲು ಉಡುಗೊರೆಗಳೇ ನೆರವಾಗುವುದಿದೆಯಲ್ಲ, ಪುಟ್ಟ ಗುಲಾಬಿಯೂ ಸಾಕು, ಹೃದಯದ ಸಂಕೇತವಿರುವ ಕೀಬಂಚ್ ಕೂಡಾ ಸಾಕಾದೀತು. ಇವು ಯಾವುವೂ ದುಬಾರಿಯಲ್ಲ ತಾನೆ? ಹೆಣ್ಣು ಅತ್ಯಂತ ಮುಚ್ಚಟೆಯಿಂದ ಜೋಪಾನ ಮಾಡಿಕೊಳ್ಳುವ ನೆನಪುಗಳಾಗಿ ಉಳಿದಾವು ಅವು. ನಮ್ಮ ಬಾಲ್ಯದ ನೆನಪು, ಅಮ್ಮನ ಟ್ರಂಕಿನಲ್ಲಿ ಹಳೆಯ ಒಂದೆರಡು ಸೀರೆಗಳಿದ್ದವು. ’ಉಡುವುದೂ ಇಲ್ಲ, ಹಳೆಯದಾಗಿದೆ ಅಂದ ಮೇಲೆ ಯಾಕಮ್ಮ ಇಟ್ಟುಕೊಂಡಿದ್ದೀ’ ಅಂದರೆ ಅಮ್ಮ ಸುಮ್ಮನೇ ನಗುತ್ತಿದ್ದರು. ನಮಗೆಲ್ಲ ಆಗ ಅರ್ಥವಾಗುತ್ತಿರಲಿಲ್ಲ, ಆ ಸೀರೆಗಳು ಹಳತಾದರೂ ಅವು ದಶಕಗಳ ಹಿಂದೆ ಅಪ್ಪನ ಹೊಸ ಪ್ರೀತಿಯ ಮಧುರ ಭಾವಗಳ ನೆನಪಾಗಿ ಅಮ್ಮನ ಪೆಟ್ಟಿಗೆಯೊಳಗೆ ಇದ್ದವು ಎಂಬುದು.
ಅಂದ ಹಾಗೆ ಈ ಉಡುಗೊರೆಗಳು ಕೇವಲ ಪತಿ ಪತ್ನಿಯರೊಳಗೆ ಎಂದಲ್ಲ, ಮನೆಯ ಸರ್ವ ಸದಸ್ಯರಿಗೂ ಸರಿಹೊಂದುವಂಥದ್ದು. ಯೋಚಿಸಿ ನೋಡಿ ಯಾರಿಗಾದರೂ ಪುಟ್ಟ ಉಡುಗೊರೆ ನೀಡುವುದಿತ್ತೇ?