ಪ್ರಜ್ಞಯಾ ಮಾನಸಂ ದುಃಖಂ ಹನ್ಯಾಚ್ಛಾರೀರಮೌಷಧೈಃ |
ಏತದ್ವಿಜ್ಞಾನಸಾಮರ್ಥ್ಯಂ ನ ಬಾಲೈಃ ಸಮತಾಮಿಯಾತ್ ||
– ಮಹಾಭಾರತ
“ಪ್ರಜ್ಞಾಶಕ್ತಿಯಿಂದ ಮಾನಸಿಕ ದುಃಖವನ್ನೂ ಚಿಕಿತ್ಸೆಗಳಿಂದ ದೈಹಿಕ ವ್ಯಾಧಿಗಳನ್ನೂ ನಿವಾರಿಸಿಕೊಳ್ಳಬೇಕು. ಇದನ್ನು ಸಾಧ್ಯವಾಗಿಸುವ ಜ್ಞಾನದ ಶಕ್ತಿಯು ಅಪೂರ್ವವಾದುದು. ಅದನ್ನು ಮರೆತು ತನಗೆ ಕಷ್ಟ ಬಂದಿದೆಯೆಂದು ಶೋಕಿಸುವುದು ಬಾಲಿಶನಡೆಯಾಗುತ್ತದೆ.”
ಜಗತ್ತಿನಲ್ಲಿ ಜೀವಿಸಿರುವವರೆಗೆ ಮನಸ್ಸಿಗೂ ದೇಹಕ್ಕೂ ಕ್ಲೇಶಗಳು ತಪ್ಪಿದ್ದಲ್ಲ. ಕ್ಲೇಶಗಳು ಬಾರದಿರಲಿ ಎಂಬ ಆಕಾಂಕ್ಷೆ ತ್ರಿಗುಣಚಾಲಿತ ಲೋಕದಲ್ಲಿ ಈಡೇರುವಂಥದಲ್ಲ. ಕ್ಲೇಶಗಳನ್ನು ಎಷ್ಟು ವಿವೇಕದಿಂದ ನಿರ್ವಾಹ ಮಾಡುತ್ತೇವೆಯೋ ಅಷ್ಟುಮಟ್ಟಿಗೆ ಸಮಾಧಾನವನ್ನು ಪಡೆಯಬಹುದು. ಕ್ಲೇಶಗಳಿಂದ ಖಿನ್ನರಾಗದೆ ಕರ್ತವ್ಯಮಗ್ನತೆಯನ್ನು ಬೆಳೆಸಿಕೊಳ್ಳುವುದೂ ಸಮುನ್ನತಿಯ ಸಾಧನೆಯ ಕಡೆಗೆ ಲಕ್ಷ್ಯವಿರಿಸುವುದರ ಮೂಲಕ ಪ್ರಶಾಂತಿಯನ್ನು ಪಡೆಯಲೆಳಸುವುದೂ ಪ್ರಬುದ್ಧರ ಮಾರ್ಗ. ಫ್ರಾನ್ಸ್ ದೇಶದಲ್ಲಿದ್ದ ಜಗತ್ಪ್ರಸಿದ್ಧ ಚಿತ್ರಕಲಾವಿದ ಅಗಸ್ಟ್ ರೆನ್ವಾ (Renoir) ಜೀವಿತವೃತ್ತ ಪ್ರಸಿದ್ಧವಾದದ್ದು. ಎಪ್ಪತ್ತೆಂಟು ವರ್ಷ ಜೀವಿಸಿದ್ದ ಆತ ತನ್ನ ಕಡೆಯ ಹತ್ತು ವರ್ಷಗಳಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾದ. ಮನೆಬಿಟ್ಟು ಹೊರಕ್ಕೆ ಹೋಗುವ ಸ್ಥಿತಿ ಇರಲಿಲ್ಲ. ನಿರಂತರ ಕಾಲುನೋವು. ಕೈಕಾಲು ಅವಯವಗಳಾವುವೂ ಸ್ವಾಧೀನದಲ್ಲಿರಲಿಲ್ಲ. ಆದರೂ ಕೈಯಲ್ಲಿ ಕುಂಚ ಹಿಡಿದು ಚಿತ್ರ ಬಿಡಿಸುವುದನ್ನು ನಿಲ್ಲಿಸಲಿಲ್ಲ. ಕಡೆಕಡೆಗೆ ಕೈಗೆ ಕುಂಚವನ್ನು ದಾರದಿಂದ ಕಟ್ಟಿಕೊಳ್ಳಬೇಕಾಗುತ್ತಿತ್ತು. ಅಸಹನೀಯ ನೋವು ಇದ್ದರೂ ನಿಧಾನವಾಗಿ ಚಿತ್ರಗಳನ್ನು ಬರೆಯುತ್ತಲೇ ಇದ್ದ. ಅವನ ಗಾಢ ಸ್ನೇಹಿತನೂ ಸ್ವಯಂ ಪ್ರತಿಷ್ಠಿತ ಚಿತ್ರಕಾರನೂ ಆಗಿದ್ದ ಮ್ಯಾಟಿಸ್ ರೆನ್ವಾನ ಬಾಧೆ ನೋಡಲಾಗದೆ ಕೇಳಿದ – “ಇಷ್ಟು ನೋವಿನ ನಡುವೆಯೂ ಅದೇಕೆ ಈಗಲೂ ಚಿತ್ರ ಬರೆಯಲು ಶ್ರಮಿಸುತ್ತಿದ್ದೀರಿ?” – ಎಂದು. ಅದಕ್ಕೆ ರೆನ್ವಾ ಉತ್ತರಿಸಿದ – “ದೇಹ ಸಾಯುತ್ತದೆ, ಅದರೊಡನೆ ನೋವೂ ಸಾಯುತ್ತದೆ. ಆದರೆ ಸೌಂದರ್ಯ ಶಾಶ್ವತವಾಗಿ ಉಳಿಯುತ್ತದೆ!”
ಮೃತನಾಗುವುದಕ್ಕೆ ಎರಡೇ ವರ್ಷ ಹಿಂದೆ ರೆನ್ವಾ ರಚಿಸಿದ ಚಿತ್ರಗಳೂ ಶ್ರೇ? ಕಲಾಕೃತಿಗಳಾಗಿ ಉಳಿದಿವೆ.