ಮಾರನೆಯ ಸಂಜೆ ಕತ್ತಲೇರುತ್ತಿದ್ದಂತೆ ರಾಚನನ್ನು ಹುಡುಕಿಕೊಂಡು ಅವನು ಕುಳಿತುಕೊಳ್ಳುವ ಸ್ಥಳಕ್ಕೆ ಹೋದೆ. ಅಲ್ಲಿ ಅವನಿರಲಿಲ್ಲ. ಹಾಗೇ ಅವನ ಗುಡಿಸಿಲ ಕಡೆ ತಿರುಗಿದೆ. ಒಬ್ಬನೇ ನಡೆದೆ. ದಾರಿ ಗೊತ್ತಿತ್ತು. ಗುಡಿಸಿಲೂ ಕಾಣಿಸಿತು. ಆದರೆ ಒಳಗಣಿಂದ ಬೆಳಕು ಬರುತ್ತಿರಲಿಲ.
“ಬನ್ನಿ, ಮಾಸಾಮಿ.”
“ಏನೋ, ಸರಿಯಾಗಿ….?”
“ವ್ಙೂ…. ಬುಡಿ ನನ್ನೊಡ್ಯ, ಕಳ್ಚಿ”
“ಎಷ್ಟು ಕೊಡ್ಬೇಕೋ?”
“ಐ…. ಕೆಲ್ಸ ನೋಡ್ಬಾರ್ದಾ ಶಿವ?”
“ಅದಿರ್ಲಿ, ನೀ ಹೇಳೋ.”
“ತಮ್ಸಂತೋಸ ಬುದ್ದೀ.”
“ಲೇ ಲೇ,…. ಆ ಕೊನೆ ಸ್ವಲ್ಪ ಚೆನ್ನಾಗಿ….”
“ವೊಸಿ ಸುಮ್ಕಿರಿ ದ್ಯಾವ್ರೇ.”
’ಅಲ್ಲಿ ಅದ್ನೋಡು…. ಎಡಗಡೆ.”
“ವ್ಙೂ, ಸರಿಯಾಯ್ತು, ನನ್ನೊಡ್ಯಾ.”
“ಎ? ಕೊಡಲೋ?”
“ನಾ ಯೋಳ್ಳಿಲ್ವಾ ಬುದ್ದೀ?”
“ಏನೂ?”
“ತಮ್ಮ ಖುಸಿ ಅಂತ.”
“ಹ್ಙ…. ತೊಗೋ.”
“ಸರಿ ಶಿವ, ನಾ ಕೇಳ್ಬ್ಯಾಕಾ ಇದ್ಕೆ?”
“ನಿನ್ನ ಹೆಸರೇನೋ?”
“ಯಾಕ್ಬುದ್ದೀ?”
“ಅಲ್ಲ, ಕೇಳಿದೆ – ಸುಮ್ನೆ.”
“ರಾಚಾ ಬುದ್ದೀ, ರಾಚಾಂತ.”
* * *
ಇದ್ದಕ್ಕಿದ್ದ ಹಾಗೆ ಎಚ್ಚರವಾಯಿತು.
ಗಾಬರಿಯಾಗಿ ಕಣ್ಣುಬಿಟ್ಟು ನೋಡಿದೆ. ಪಕ್ಕದಲ್ಲಿ ಕಮಲು! ಮುಸಿಮುಸಿ ನಗುತ್ತ –
“ಅದೇನೂಂದ್ರೇ?”
“ಏನು?”
“ಅಲ್ಲಾ, ನೀವಂತಾ ಇದ್ದದ್ದು?”
“ಏನೇ ಹಾಗಂದ್ರೇ?”
“ಅಲ್ಲಾ, ಅದೇನೋ ರಾಜ. ದೊರೆ ಅಂತ….”
“ನಿಂಗೆ ಬುದ್ಧಿ ಇಲ್ಲ ಅಂತ – ಮಲ್ಲಕೊ ಸುಮ್ಮನೆ.”
“ಇಲ್ಲಾಂದ್ರೆ ನಿಜವಾಗಲೂ.”
“ನೋಡಿದಿಯಾ, ಅವಳ್ನ….”
“ಸರಿ, ಕನವರಿಸಿಕೊಳ್ಳುತ್ತಾ ಇದ್ದೀರಿ ಅಂದ್ರೇ….”
“ಹೋಗೇ. ಹುಚ್ಚುಚ್ಚಾಗಿ ಮಾತಾಡಬೇಡ.”
ಕಮಲು ಸುಮ್ಮನೆ ಮಲಗಿಕೊಂಡಳು. ನನಗೆ ಪುನಃ ನಿದ್ದೆ ಹತ್ತಲಿಲ್ಲ. ಹಾಗೇ ಕಣ್ಣು ಮುಚ್ಚಿಕೊಂಡೆ…. ಹಿಂದಿನ ಸಂಜೆ ನಾನು ಜೋಡು ಹೊಲಿಸುವುದಕ್ಕೆ ಹೋದದ್ದು ಥಟ್ಟನೆ ಜ್ಞಾಪಕಕ್ಕೆ ಬಂದಿತು. ನಾನು ಹೋಗುತ್ತಿದ್ದಾಗ ದಾರಿಯಲ್ಲಿ ಮೋಚಿಯೊಬ್ಬನು ಕೆಲಸವಿಲ್ಲದೆ ಕುಳಿತು ತನ್ನ ಸಣ್ಣ ಹಾರೆಗಳನ್ನು ಒಂದಕ್ಕೊಂದು ಬಡಿದು ತಾಳದಂತೆ ಕುಟ್ಟುತ್ತ ಅದೇನೋ ಕುರುಕಲು ಪದ ಹೇಳಿಕೊಳ್ಳುತ್ತಿದ್ದದ್ದು; ನನ್ನನ್ನು ಕಂಡು ನಗುತ್ತ ಹಾರೆಗಳನ್ನು ಕೆಳಗಿಟ್ಟು – “ಬನ್ನಿ ಮಾಸಾಮಿ” ಎಂದದ್ದು; ಕಡೆಗೆ ನಾ ಕೊಟ್ಟ ಅರ್ಧಾಣೆಯಲ್ಲೇ ತೃಪ್ತನಾದದ್ದು…. ಎಲ್ಲಾ ಜ್ಞಾಪಕಕ್ಕೆ ಬಂದಿತು. ಒಂದು ಸಲ ಪಕ್ಕಕ್ಕೆ ಹೊರಳಿ ನೋಡಿದೆ. ನನ್ನವಳು ಗಾಢನಿದ್ರೆಯಲ್ಲಿದ್ದಂತೆ ತೋರಿದಳು. ಅದೆಂಥ ಚೆಲುವು! ತಲೆಯೆತ್ತಿ ಅವಳ ಮುಖವನ್ನೇ ದಿಟ್ಟಸಿ ನೋಡಿದೆ. ನನ್ನನ್ನು ಮಾತಾಡಿಸಿದಾಗ ಅರಳಿದ್ದ ನಗೆಮುಗುಳು ಇನ್ನೂ ಅವಳ ತುಟಿಯ ಮೇಲೆ ಲಾಸ್ಯವಾಡುವಂತಿತ್ತು. ದೂರ ಸರಿದು ಒಂದು ಪಕ್ಕಕ್ಕೆ ತಿರುಗಿ ಕಣ್ಣು ಮುಚ್ಚಿಕೊಂಡೆ. ಅದೇ ಚಿತ್ರ; ತಾಳ ಕುಟ್ಟುತ್ತಿದ್ದ, ಕೆದರಿದ ತಲೆಯ, ಬಿಸಿಲಿನಿಂದ ಬೆಂದ ಮುಖದ ರಾಚ! ಅವನದೇ ನಗುಮೊಗ. ಪುನಃ ನನ್ನನ್ನೇ ನೋಡುತ್ತಾ “ಬನ್ನಿ ಮಾಸಾಮಿ” ಎಂದ ಹಾಗಾಯಿತು.
ರಾಚ ತನ್ನ ಮನೆಯಲ್ಲಿ – ಮುರುಕು ಗುಡಿಸಿಲಿನಲ್ಲಿ – ಮಲಗಿರಬಹುದಲ್ಲವೆ? ಅವನು, ಅವನ ಹೆಂಡತಿ, ಅವನ ಮಕ್ಕಳು?…. ನನ್ನ ಹಾಗೆ? ಛೇ, ಎಲ್ಲಿಯ ಸಾಮ್ಯ! ನಾನೆಲ್ಲಿ-ಅವನೆಲ್ಲಿ? ಜೋಡು ಹೊಲಿಯುವ ರಾಚ ಅವನು…. ಇಲ್ಲಿ ನಾನು-ನನ್ನವಳು ಸೊಗಸಾದ ಮನೆ; ಮೆತ್ತನೆಯ ಹಾಸುಗೆ; ಬೇಕು ಬೇಕಾದ ಪದಾರ್ಥಗಳು. ಇದು ಅವನಿಗಿಲ್ಲ -ಇಲ್ಲ; ಹೌದು – ಅವನ ಕರ್ಮ. ನಾನೆಂಥ ಹುಚ್ಚ! ಅವನು ಯಾರು? ನಾನು ಯಾರು?…. ಬಡತನ…. ಬಡತನ…. ಅವನು ಕೇಳಿಕೊಂಡು ಬಂದದ್ದು…. ಅವನ ಜೀವನ ಅದು…. ಕೇವಲ ವಿಧಿಲಿಖಿತ. ಆದರೂ…. ಆದರೂ…. ಇದೇನೂ? ನನ್ನ ಕಣ್ಣಿಂದ ನೀರು!…. ಕಂಬನಿಯನ್ನು ಚಿಮ್ಮಿದೆ; ಬಗೆ ಹರಿಯಲಿಲ್ಲ.
2
ಬೆಳಗ್ಗೆ ಬಹಳ ಹೊತ್ತಾಗಿ ಎದ್ದೆ. ಆವೊತ್ತೆಲ್ಲಾ ಅದೇಕೋ ಮನಸ್ಸೇ ಸಮಾಧಾನ ಸ್ಥಿತಿಯಲ್ಲಿರಲಿಲ್ಲ. ಏನು ಮಾಡುವುದಕ್ಕೂ ಬೇಸರ. ಹೊತ್ತು ಹೇಗೆ ನೂಕಿದೆನೋ ಅರಿಯೆ. ಸಾಯಂಕಾಲ ದೀಪ ಹೊತ್ತಿಸುವ ಹೊತ್ತಿಗೆ ಅದೇ ಸ್ಥಳಕ್ಕೆ ಹೋದೆ, ರಾಚನನ್ನು ಹುಡುಕಿಕೊಂಡು ದೂರದಲ್ಲಿ ಅವನು ಕುಳಿತಿದ್ದುದನ್ನು ಕಂಡು ಬೇಕಂತಲೇ ಜೋಡಿನ ಒಂದು ಕೊನೆಯನ್ನು ಕಿತ್ತುಬಿಟ್ಟೆ. ರಾಚ ಹರಡಿದ ಚರ್ಮದ ಚೂರುಗಳ ನಡುವೆ ಒಂದು ಹರಕಲು ಗೋಣಿಚೀಲದ ಮೇಲೆ ಕುಳಿತಿದ್ದ.
ಮಾರನೆಯ ಸಂಜೆ ಕತ್ತಲೇರುತ್ತಿದ್ದಂತೆ ರಾಚನನ್ನು ಹುಡುಕಿಕೊಂಡು ಅವನು ಕುಳಿತುಕೊಳ್ಳುವ ಸ್ಥಳಕ್ಕೆ ಹೋದೆ. ಅಲ್ಲಿ ಅವನಿರಲಿಲ್ಲ. ಹಾಗೇ ಅವನ ಗುಡಿಸಿಲ ಕಡೆ ತಿರುಗಿದೆ. ಒಬ್ಬನೇ ನಡೆದೆ. ದಾರಿ ಗೊತ್ತಿತ್ತು. ಗುಡಿಸಿಲೂ ಕಾಣಿಸಿತು. ಆದರೆ ಒಳಗಣಿಂದ ಬೆಳಕು ಬರುತ್ತಿರಲಿಲ್ಲ – “ರಾಚ” ಎಂದೆ ಗಟ್ಟಿಯಾಗಿ. ಉತ್ತರವಿಲ್ಲ. ಇನ್ನೂ ಮುಂದೆ ಹೋಗಿ ಬಾಗಿಲ ಹತ್ತಿರ ನಿಂತುಕೊಂಡೆ. ಪುನಃ ಕೂಗಿದೆ…. ನೀರವ, ನೀರವ. ಗುಡಿಸಿಲ ಬಾಗಿಲು ತೆರೆದಿತ್ತು. ಕೂಗುತ್ತ ಒಳಗೆ ಕಾಲಿಟ್ಟೆ. ತಣ್ಣನೆಯ ಗಾಳಿ ಒಳಗಿಣಿಂದ ಸುತ್ತಿಕೊಂಡು ಸುತ್ತಿಕೊಂಡು ಹೊರಗೆ ಬಂದಿತು. ಗುಡಿಸಿಲ ಒಳಗೆ-ಹೊರಗೆ ಎತ್ತಲೂ ಕತ್ತಲು ತಾನೇತಾನಾಗಿತ್ತು. ಸುತ್ತ ಹುಡುಕಿದೆ; ಕೂಗಿದೆ; ನಿಶ್ಯಬ್ದ! “ರಾ…. ಚ ಇ….ಲ್ಲ….” ಎಂದುಕೊಂಡೆ. ಹೊರಗೆ ಬಂದೆ. ಬಾಗಿಲಲ್ಲಿ ನಿಂತು ತಲೆಯೆತ್ತಿ ಮೇಲೆ ನೋಡಿದೆ. ಮನದೊಳಗೇ “ರಾಚ ಇಲ್ಲ” ಎಂದು ನುಡಿದೆ. ಬಹು ದೂರದ ಅನಂತ ಅತೀತ ಕಾಲಿಮಾಮಯ ಶೂನ್ಯದಿಂದ – “ರಾ….ಚ…. ಇ….ಲ್ಲ” ಎಂದು ಮಾರ್ದನಿ ಬಂದಂತಾಯಿತು. ಒಂದು ಗಳಿಗೆಯವರೆಗೆ ನೀರವವಾಗಿ, ನಿಷ್ಪಂದನಯನಗಳಿಂದ ಆ ಶೂನ್ಯವನ್ನೇ ನೋಡುತ್ತ ಶಿಲಾಮೂರ್ತಿಯಂತೆ ನಿಂತೆ.
ರಾತ್ರಿ ಹಾಸುಗೆಯ ಮೇಲೆ ಮಲಗಿಕೊಂಡಾಗ ಕಮಲು ಬಂದು ಹತ್ತಿರ ನಿಂತುಕೊಂಡಳು. ಬಾಹ್ಯಶೂನ್ಯನಾದಂತಿದ್ದೆ. ಹೃದಯದಾಳದಲ್ಲಿ ಅಂದು ಸಂಜೆ ನಡೆದುದೆಲ್ಲಾ ಗಾಢತರವಾಗಿ ಚಿತ್ರಿತವಾಗಿತ್ತು. ಸಹಿಸಲಾರದೆ ಅಳಿಸುವುದಕ್ಕೆ ಪ್ರಯತ್ನಿಸಿದೆ. ಸಾಧ್ಯವಾಗಲಿಲ್ಲ. ನಾನೆಂಥ ಹುಚ್ಚ! ಅವನ ಕೈ ಹಿಡಿದೆತ್ತಬೇಕೆಂದು ಬಗೆದೆ. ಅವನ ದಾರಿದ್ರ್ಯದ ಅಳಲನ್ನು ತಣಿಸುವುದಕ್ಕೆ ತವಕಗೊಂಡೆ. ನಾನು ಯಾರು ಅದನ್ನು ಮಾಡುವುದಕ್ಕೆ? ನನ್ನಿಂದ ತನಗೆ ತೊಂದರೆಯಾಗಬಹುದೆಂದು ಅವನು ಭಾವಿಸಿದನೆ? ನಾನು ಅದನ್ನು ಮನಸ್ಸಿನಲ್ಲಿಯೂ ಎಣಿಸಿರಲಿಲ್ಲವಲ್ಲ. ಇದು ಅವನಿಗೆ ತಿಳಿಯದೆ ಹೋಯಿತೆ? ತಿಳಿದರೂ ಬೇಡವಾಯಿತೊ? ಹೌದು; ಬೇಡವಾಯಿತು. ನನ್ನ ಉಪಕಾರದ ಹೊರೆ ಅವನಿಗೆ ಬೇಡವಾಯಿತು. ಅವನದು ನಿಃಸ್ವಾರ್ಥಜೀವನ; ದುಡಿದು ಹೊಟ್ಟೆಹೊರೆಯುವ ಬಗೆ; ನೊಂದು ನೋವನ್ನು ನುಂಗಿಕೊಳ್ಳುವ ಸ್ವಭಾವ. ಅವನ ಬಗೆಗೆ ನಾನು ತುಂಬ ವ್ಯತಿರಿಕ್ತವಾಗಿ ನಡೆದೆ. ನನ್ನಿಂದ ಅವನು ಈ ಸ್ಥಳವನ್ನು ಬಿಟ್ಟು ಹೊರಟುಹೋದ…. ಎಲ್ಲಿಗೆ?
ಈ ನೆನಹು ಹೃದಯವನ್ನು ಹಿಂಡಿಬಿಟ್ಟಿತು. ಬಹುದೂರದಲ್ಲೆಲ್ಲೋ ತುಮುಲ ವಿಪ್ಲವಾಗುತ್ತಿರುವಂತೆ ಬೋಧೆಯಾಗುತ್ತಿತ್ತು. ಮನಸ್ಸು ಕ್ಷತವಿಕ್ಷತವಾಗಿತ್ತು. ಮೆಲ್ಲನೆ ಕಣ್ದೆರೆದೆ. ಕಮಲು ಮಂಚವನ್ನು ಒರಗಿನಿಂತು ಬಾ?ಪೂರಿತಲೋಚನಳಾಗಿದ್ದಳು. ಅಂತಃಕರಣ ಕರಗಿತು. ಒಳಗೊಂದು ಚಿತ್ರ; ಹೊರಗೊಂದು ಚಿತ್ರ. ಒಂದಕ್ಕೊಂದು ವಿರುದ್ಧ. ಅವಳನ್ನು ನೋಡುತ್ತ ಮೆಲ್ಲನೆ ನುಡಿದೆ:
“ಅವನ ಲೀಲೆ!”
[ಈ ಕಥೆಯನ್ನು ಟಿ.ಪಿ. ಅಶೋಕ ಅವರು ಸಂಪಾದಿಸಿದ ’ಮರೆಯಲಾಗದ ಕಥೆಗಳು – ಹಿರಿಯ ಕಥೆಗಾರರ ಕಥೆಗಳು’ ಸಂಪುಟ – 1ರಿಂದ ಕೃತಜ್ಞತಾಪೂರ್ವಕವಾಗಿ ಆಯ್ದುಕೊಳ್ಳಲಾಗಿದೆ.]