ಅದೇಕೋ ಆ ಮಾತು ನಾಲಗೆಯಿಂದ ಜಾರಿಬಿಟ್ಟಿತ್ತು. ಒಂದು ಕ್ಷಣ ಅವರು ತಬ್ಬಿಬ್ಬಾಗಿರಬೇಕು. ನಾನೇನು ಅವರ ಮುಖವನ್ನು ಹಿಂದಿರುಗಿ ನೋಡಲಿಲ್ಲ. ಆದರೆ ಅದರಲ್ಲಾಗಿರಬಹುದಾದ ಬದಲಾವಣೆಯನ್ನು ಹಾಗೆಯೇ ಚಿತ್ರಿಸಿಕೊಂಡೆ. ಅವರು ಏನೂ ಮಾತಾಡಲಿಲ್ಲ; ಮೌನವಾಗಿದ್ದರು…
ಗೇಟು ತೆರೆದ ಸದ್ದಾಯಿತು, ಹಿಂದೆಯೇ ಸೈಕಲ್ಲಿನ ಚಕ್ರ ಉರುಳುವಾಗಿನ ಟಕ-ಟಕ ಸದ್ದು. ಮುಂಬಾಗಿಲು ತೆರೆದ ಸಪ್ಪಳ; ಅವರೇ ಇರಬೇಕು. ಇದು ಅವರು ಮನೆಗೆ ಬರುವ ಸಮಯ.
“ಅಣ್ಣ ಬಂದ್ರು…. ಅಣ್ಣ ಬಂದ್ರು….!” – ಕಿರಣ ಚಪ್ಪಾಳೆ ತಟ್ಟಿ ಕೂಗುತ್ತಿದ್ದಾಳೆ.
“ಕಿರಣಾ…. ಅಮ್ಮಾ ಇಲ್ಲಾ?” – ’ಇವರ’ದೇ ದನಿ.
“ಅಮ್ಮಾ …. ಒಳಗೆ ಮಲಗಿದಾಳೆ”
ಸ್ವಲ್ಪ ಕಾಲ ಮೌನ; ಇವರು ಬೂಟು ಬಿಚ್ಚುತ್ತಿರಬೇಕು. ಬೆಳಗ್ಗೆ ಬೂಟ್ಸನ್ನೇ ತಾನೆ ಅವರು ಹಾಕಿಕೊಂಡು ಹೋಗಿದ್ದುದು? ಹೌದು ಕರಿಯ ಜೊತೆ.
ನಡುಮನೆಯಲ್ಲಿ ಹ್ಯಾಂಗರಿಗೆ ಪ್ಯಾಂಟು ಹಾಕುತ್ತಿದ್ದಾರೆ. ಸಂಜೆಯಾಗಿ ಆಗಲೇ ಒಳಗೆಲ್ಲಾ ಕತ್ತಲೆ ಮುಸುಕತೊಡಗಿದೆ; ದೀಪ ಹಾಕಿಕೊಳ್ಳಬಾರದೆ?
ದೀಪ ಹಾಕಿದರು. ಪಂಚೆಗಾಗಿ ಹುಡುಕುತ್ತಿದ್ದಾರೆ. ಪ್ರತಿನಿತ್ಯ ಅವರಿಗೆ ಪಂಚೆಯನ್ನು ಹುಡುಕಿಕೊಡಬೇಕು. ಎದುರಿನಲ್ಲಿದ್ದರೂ ಕಾಣುವುದಿಲ್ಲವೆ? ಅಲ್ಲಿಯೆ ಹಗ್ಗದ ಮೇಲಿದೆಯಲ್ಲ? ಅಯ್ಯೋ ಬಿಳಿಯ ಸೀರೆಗೆ ಕೈ ಹಾಕಿದರು! ಅಂಚು ನೋಡಿ ಮೊದಲಿದ್ದ ಸ್ಥಳದಲ್ಲಿಯೇ ಅದನ್ನಿಟ್ಟರು. ಅವರ ಮುಖದಲ್ಲಿ ನಗೆಯೆಸಳೊಂದು ಸುಳಿಯಿತೀಗ. ಅಂತೂ ಪಂಚೆ ಸಿಕ್ಕಿತು; ಬೇಗ ಉಟ್ಟುಕೊಂಡು ತುಂಬುತೊಡೆಯನ್ನು ಮುಚ್ಚಿಕೊಳ್ಳಬಾರದೆ? ನನ್ನ ಕಣ್ಣೇ ತಾಕಿ ದೃಷ್ಟಿಯಾದೀತು!
ಕಿರಣ ಅವರ ಪಂಚೆ ಎಳೆಯುತ್ತಿದ್ದಾಳೆ.
“ಓಯ್….! ಪುಟ್ಟಿ, ಕೈಬಿಡಮ್ಮ….!” – ಬೆಳಗಿನಿಂದ ಸಂಜೆವರೆಗೆ ಹೊರಗಡೆ ದುಡಿದು ಸೋತು ಮನೆಗೆ ಬಂದಾಗಲೂ ಅವರಲ್ಲಿ ನಗೆಯ ಕೊರತೆಯಿಲ್ಲ; ನಡತೆಯಲ್ಲಿ ಸಿಡುಕಿಲ್ಲ.
ಕಿರಣ ಇತ್ತಲೇ ಬರುತ್ತಾ ಕೂಗುತ್ತಿದ್ದಾಳೆ “ಅಮ್ಮಾ…., ಅಣ್ಣ!”
ಅವರೂ ಈ ಕಡೆಗೇ ಬಂದರು. ಒಳಗೆ ಬಂದು ದೀಪ ಹಾಕುವುದರಲ್ಲಿ ಕಣ್ಣುಮುಚ್ಚಿಕೊಳ್ಳೋಣ. ಎಷ್ಟು ಮೆಲ್ಲನೆ ಒಳಗೆ ಬಂದಿದ್ದಾರೆ! ಆ ತುಂಟಿಯದೇ ಗಲಾಟೆ. “ಅಮ್ಮಾ….” ಎಂದು ಕೂಗುತ್ತಾ ಹೊದಿಕೆ ಸೆಳೆಯುತ್ತಿದ್ದಾಳೆ. ’ಥೂ…. ಪೋರಿ! ಸೀರೆ ಸರಿಪಡಿಸಿಕೊಳ್ಳಬೇಕು. ಹೊದಿಕೆ ಎಳೆಯಬೇಡ; ಸ್ವಿಚ್ಚು ಸದ್ದು ಮಾಡಿತು. ಕೋಣೆಯಲ್ಲಿ ಬೆಳಕು ಹರಡಿರಬೇಕು; ಒಳನೋಟಕ್ಕೆ ಕಣ್ಣು ರೆಪ್ಪೆಗಳು ಕೆಂಪಗೆ ಕಾಣುತ್ತಿವೆ.
ಮಂಚ ಕಿರುಗುಟ್ಟಿತು. ಹಣೆ ಶೀತಲವಾಯಿತು. ಹಣೆಯ ಮೇಲೆ ಕೈ ಇಟ್ಟಿದ್ದಾರೆ. ಎ? ಹಾಯೆನಿಸಿತು.
“ಅಣ್ಣಾ, ಅಮ್ಮಂಗೆ ನಿದ್ದೆ ಬಂದಿದೆಯಾ?”
“ಸರೂ…., ಸರೂ,” – ಎಷ್ಟು ಮೃದುವಾಗಿ ಕರೆಯುತ್ತಿದ್ದಾರೆ! ಇನ್ನೊಮ್ಮೆ ಕರೆದಾಗ ಕಣ್ಣು ತೆರೆದರಾಯಿತು.
ಕೆನ್ನೆಯ ಮೇಲೆ ಕೈ ಆಡಿಸುತ್ತಿದ್ದಾರೆ. ಅಯ್ಯೋ…. ಬುಳುಬುಳು ಅನ್ನುತ್ತೆ!
“ಸರೂ….”
ಈಗ ಕಣ್ಣು ತೆರೆದೆ. ಮೇಲುಗಡೆಯ ದೀಪ ಕಣ್ಣು ಕುಕ್ಕಿತು. ’ಹಾಲು ಬಣ್ಣದ ದೀಪ’ ತರಲು ಇವರಿಗೆ ಎಷ್ಟು ಬಾರಿ ಹೇಳಿಯಾಗಿದೆ. ಹೇಳಿದಾಗ? ಅವರಿಗೆ ಅದರ ಸ್ಮೃತಿ; ಆಮೇಲೆ ಮರೆತು ಬಿಡುತ್ತಾರೆ.
ಹತ್ತಿರದಲ್ಲಿಯೇ ಕುಳಿತಿದ್ದಾರೆ. ಅವರ ತಲೆಯ ಕೂದಲಿನ ಗುಂಗುರು ಜೊಂಪೆಯೊಂದು ಹಣೆಯ ಮೇಲೆ ಇಳಿದಿದೆ.
“ತಲೆನೋವಾ….?”
ಏನೆಂದು ನನಗೇ ತಿಳಿಯದು; ಇವರ ಪ್ರಶ್ನೆಗಿನ್ನೇನು ಉತ್ತರಿಸಲಿ?
“ಹ್ಞೂಂ” – ಎಂದೇನೋ ಅಂದೆ; ಆದರೆ ಗಂಟಲಿನಿಂದ ಆ ದನಿ ನಾನೆಣಿಸಿದುದಕ್ಕಿಂತ ಕ್ಷೀಣವಾಗಿ ಬಂದಿತದೇಕೋ?
“ಜ್ವರವೇನೂ ಇದ್ದಹಾಗಿಲ್ಲ ಅಲ್ಲವೇ?”- ಹಣೆಯ ಮೇಲೆ ಕೈಇಟ್ಟೇ ಕೇಳುತ್ತಿದ್ದಾರೆ; ಅಷ್ಟೂ ತಿಳಿಯದೆ?
“ಈಗ ಇಲ್ಲ.”
ಯಾವಾಗಿನಿಂದ ತಲೆನೋವು? ಮಾತ್ರೆ ತಗೊಳ್ಳಬೇಕಿತ್ತು? ಮೇಜಿನಲ್ಲಿ ಮಾತ್ರೆಗಳಿದ್ದವಲ್ಲ. ನುಂಗಿಲ್ಲವೆ?”
“ಮಧ್ಯಾಹ್ನದಿಂದ ಒಂದೇ ಸಮನೆ ತಲೆ ನೋಯುತ್ತಿದೆ. ಈಗ ಸ್ವಲ್ಪ ಕಡಮೆ ಅಷ್ಟೆ.”
“ಹಾಗಿದ್ರೆ ಮಾತ್ರೆ ನುಂಗಿಲ್ಲ, ನೀನು?”
“ಊಹ್ಞೂಂ.”
“ಫ್ಲಾಸ್ಕಿನಲ್ಲಿ ಕಾಫಿ ಹಾಕಿಸಿಕೊಂಡು ಬರ್ತೀನಿ; ಒಂದು ಮಾತ್ರೆ ತಗೊಳ್ಳುವೆಯಂತೆ.”
“ಬೇಡ ಬಿಡಿ, ಮತ್ತೆ ಹೋಟೆಲಿಗೆ ಹೋಗಬೇಕು?” – ಎಂದೆ.
“ಅಣ್ಣಾ, ನಂಗೆ ಬೋಂಡ…. ಹೋಟ್ಲಲ್ಲಿ!” – ಎಂದಳು ಕಿರಣ.
ನನ್ನತ್ತ ನೋಡಿ ನಗೆಬೀರುತ್ತಿದ್ದಾರೆ. “ನೀವೇ ಅವಳಿಗೆ ಕಲಿಸಿರೋದು!” – ಈ ಮಾತಿಗೂ ಅವರ ಉತ್ತರ ನಗೆಯೇ! ಎಷ್ಟು ಆಪ್ಯಾಯಮಾನವಾಗಿ ನಗುತ್ತಾರೆ!
“ಹೊಟೆಲ ಕಾಫಿ ನಿನಗೆ ರುಚಿಸೊಲ್ಲವೇನೋ…. ಹಾಗಿದ್ದರೆ ನಾನೇ ಮಾಡ್ತೀನಿ.”
ನಗು ನನ್ನ ಮೊಗದಲ್ಲಿ ತುಂಬಿ ತುಳುಕುತ್ತಿದೆ.
“ಏಕೆ ನಗುತ್ತಿ? ನನಗೆ ಮಾಡಲು ಬರುವುದಿಲ್ಲವೆಂದೆ? ಈಗ ಮಾಡಿಕೊಡುತ್ತೇನೆ ನೋಡುತ್ತಿರು” – ಎಂದು ಒಳಗೆ ಹೋದರು.
ಕಿರಣ ನನ್ನ ಎದೆಯಮೇಲೆ ತಲೆಯಿಡುತಾ – “ಅಮ್ಮಾ ಅಣ್ಣಂಗೆ ಕಾಫಿ ಮಾಡೋಕೆ ಬರುತ್ತಾ?” – ಎಂದಳು. ನಗುತ್ತಾ “ಹ್ಞೂಂ” ಎಂದೆ.
“ಮತ್ತೆ ಯಾವತ್ತೂ ಮಾಡೇ ಇಲ್ಲ?”
“ಅಡಿಗೆ ಮನೆಯಲ್ಲಿ ಏನು ಮಾಡ್ತಿದಾರೋ ನೋಡು ಹೋಗು, ಪುಟ್ಟಿ.”
ಮಂಚದಿಂದ ಕೆಳಗೆ ಜಿಗಿದು ಓಡಿಹೋದಳು ಕಿರಣ. ನಾನೇ ಹೋಗೋಣವೆಂದರೆ ಏಕೋ ಮೈಕೈ ಎಲ್ಲಾ ನೋವು. ತಲೆ ಎತ್ತಲಾಗುವುದಿಲ್ಲ; ಭಾರ.
ಅಗೋ! ಅವರೇ ಬಂದರು.
“ಸ್ಟೌವ್ ಹತ್ತಿಸುವ ಬರ್ನರ್ ಎಲ್ಲಿದೆ ಸರು?”
ನೀವೇನೂ ಮಾಡಬೇಡೀಂದ್ರೆ; ನಾನೇ ಬರ್ತೇನೆ.”
“ನೀನು ಆರಾಮವಾಗಿ ಮಲಗಿಕೊಂಡಿರು. ಆ ಬರ್ನರ್ ಎಲ್ಲಿದೆ, ಹೇಳು?”
“ಸೀಮೇಎಣ್ಣೆಯ ಡಬ್ಬದ ಹತ್ತಿರವಿದೆ, ನೋಡಿ.”
“ಆ ಡಬ್ಬ ಎಲ್ಲಿದೆ?”
“ಅಟ್ಟದ ಕೆಳಗಿಲ್ಲವೆ ಬಿಳೀ ಡಬ್ಬ? – ಅದೇ ಸೀಮೆ ಎಣ್ಣೆಯದು.”
ತಲೆ ಕೆರೆದುಕೊಳ್ಳುತ್ತಾ ಒಳಗೆ ಹೋದರು. ಅವರನ್ನು ನೋಡಿದರೆ ನಗು ಬರುತ್ತದೆ. ಒಳಗೆ ಏನೇನು ಮಾಡುತ್ತಿದ್ದಾರೊ? ಇನ್ನು ಸ್ಟೌವ್ ಹೊತ್ತಿಸಲು ಅವರಿಗೆಲ್ಲಿ ಬರುತ್ತದೆ?
“ಸರೂ….! ಬರ್ನರ್ ಎಣ್ಣೆ ಡಬ್ಬದೊಳಗೇ ಬಿದ್ದು ಬಿಡ್ತಲ್ಲ – ಏನು ಮಾಡೋದು?” ಅವರ ಮುಖದ ಮೇಲಿನ ಸಮಸ್ಯಾತ್ಮಕ ಚಿಹ್ನೆ ನೋಡಿದರೇ ಸಾಕು, ನಗು ಉಕ್ಕಿ ಬಂದೀತು.
“ನಾನೇ ಬರುವೆ ತಡೆಯಿರಿ” – ಎಂದು ಮಂಚದ ಮೇಲೆ ಎದ್ದು ಕುಳಿತೆ.
ಮೈ ಕೈ ಎಲ್ಲಾ ಹಿಂಡಿ ಹಿಪ್ಪೆಯಂತಾಗಿದೆ. ಏಕೆ ಇಷ್ಟೊಂದು ನೋವು? ಮಂಚ ಬಿಟ್ಟು ಕೆಳಗಿಳಿದು ನಡೆಯತೊಡಗಿದಾಗ ಆಧಾರಕ್ಕೆ ಕೈ ಹಿಡಿದುಕೊಂಡರು. ಅಡಿಗೆಮನೆಗೆ ಹೋಗಿ, ಕುಳಿತುಕೊಂಡು ಸ್ಟೌವ್ ಹೊತ್ತಿಸಿ, ಅವರ ಕೈಯಲ್ಲೇ ನೀರಿಡಲು ಬಟ್ಟಲು, ಸಕ್ಕರೆ ಕಾಫೀಪುಡಿಗಳ ಡಬ್ಬಗಳ ಮತ್ತು ಹಾಲಿನ ಕೊಳದಪ್ಪಲೆಗಳನ್ನಿಸಿದುಕೊಂಡು ಹೇಗೋ ಕಾಫಿ ಮಾಡಿ ಮುಗಿಸಿದೆ. ಅ?ರಲ್ಲವರು ಮಾತ್ರೆ ತಂದುಕೊಟ್ಟರು. ಅವರಿಗೆ ಕಾಫಿ ಕೊಟ್ಟು, ಗಂಟಲಿಗೆ ಕಾಫಿ ಹುಯ್ದುಕೊಂಡು, ಮಾತ್ರೆ ಹಾಕಿಕೊಂಡು ಗುಟುಕರಿಸಿದೆ. ಕಾಫಿಗೆ ಸಕ್ಕರೆ ಹೆಚ್ಚಾಗಿದೆ; ಆದರೆ ಇವರು ಮಾತ್ರ ಏನೂ ಹೇಳದೆ ಕುಡಿಯುತ್ತಿದ್ದಾರೆ!
“ಹೇಗಿದೆ ಕಾಫಿ?” – ಎಂದೆ.
“ಚೆನ್ನಾಗಿದೆ.”
“ಸಕ್ಕರೆ ಸ್ವಲ್ಪ ಜಾಸ್ತಿಯಲ್ಲವೆ?”
“ಏನಿಲ್ಲ….! ಸರಿಯಾಗಿದೆ” – ಎಂದು ಖಾಲಿ ಕಪ್ಪನ್ನು ಕೆಳಗಿಟ್ಟರು. ನಾನು ಮಾತ್ರ ಕಾಫಿಗೆ ಇನ್ನ? ಡಿಕಾಕ್ಷನ್ ಬೆರಸಿಕೊಂಡು ಕುಡಿದು, ಅನಂತರ – “ನೀವಿಬ್ಬರೂ ಊಟಕ್ಕೆ ಕುಳಿತುಕೊಳ್ಳಿ – ಬೆಳಗಿನ ಅನ್ನ ಸಾಕಾಗುವಷ್ಟಿದೆ.” – ಎಂದೆ.
“ನಿನಗೆ?” – ಅವರಿಗೆ ಯಾವಾಗಲೂ ನನ್ನ ಚಿಂತೆ ಮೊದಲು!
“ನನಗೆ ಬಾಯಿ ಕೆಟ್ಟಿದೆ; ಅನ್ನ ಸೇರೊಲ್ಲ – ಸ್ವಲ್ಪ ಗಂಜಿ ಮಾಡಿಕೊಳ್ತೀನಿ.”
“ಅಮ್ಮಾ ನಂಗೂ ಗಂಜಿಬೇಕು” – ಕಿರಣ ಲಲ್ಲೆಗರೆದಳು.
ಗಂಜಿ-ಪಾಯಸ ಅಂದರೆ ಅವಳಿಗೆ ಪ್ರಾಣ.
“ನಿನಗೂ ಮಾಡಿಕೊಡ್ತೀನಮ್ಮ. ಆದರೆ ನೀನು ಊಟ ಮಾಡಿದರೆ ಮಾತ್ರ ಕೊಡೋದು” – ಎಂದು ?ರತ್ತು ಹಾಕಿದೆ. ಅವಳು ಮೌನ ಸಮ್ಮತಿ ಸೂಚಿಸಿದಳು. ಆ ವೇಳೆಗೆ ಇವರು ತಟ್ಟೆ ಹಾಕಿದರು. ಬಡಿಸುತ್ತಲೇ ಗಂಜಿ ಮಾಡಿ ಮುಗಿಸಿದೆ. ಕಿರಣಳಿಗೆ ಅದರ ಮೇಲೆಯೇ ಕಣ್ಣು. ಏಲಕ್ಕಿಪುಡಿ ಕುಟ್ಟಿ ಹಾಕಿದ ಮೇಲೆ ಅವಳಿಗೆ ಒಂದು ಲೋಟ ಕೊಟ್ಟು, ಉಳಿದುದನ್ನು ಕುಡಿದೆ.
ಮಲಗುವ ಮುನ್ನ ಮಾಡುವ ಕೆಲಸಗಳಿನ್ನೂ ಇದ್ದವು. ತಟ್ಟೆ ತೊಳೆದು ಗೋಮಯ ಮಾಡಬೇಕಿತ್ತು. ಪಾತ್ರೆಗಳನ್ನು ತೆರಪು ಮಾಡಿಡಬೇಕು. ಹಾಲಿಗೆ ಹೆಪ್ಪು ಹಾಕಬೇಕು. ಆದರೆ ಏನು ಮಾಡಲೂ ಹಾಳು ಬೇಸರ. ಮಿಗಿಲಾಗಿ ಮೈ ಕೈನೋವು; ತಲೆ ಭಾರ.
ಆದರೆ ಕೆಲಸ ಮಾಡದೆ ಬಿಟ್ಟರೆ ಬೇರೆ ಯಾರು ಮಾಡುತ್ತಾರೆ? ಅವುಗಳನ್ನೆಲ್ಲಾ ಮುಗಿಸಿ ಅಡುಗೆಮನೆಯ
ದೀಪ ಆರಿಸಿ ಕೋಣೆಗೆ ಬಂದೆ. ಆ ವೇಳೆಗೆ ಕಿರಣ ಮಂಚದ ಮೇಲೆ ಮಲಗಿಬಿಟ್ಟಿದ್ದಳು. ಇವರು ಪತ್ರಿಕೆ ಓದುತ್ತಿದ್ದಾರೆ. ಮೇಜಿನ ಮೇಲಿನ ಗಡಿಯಾರದಲ್ಲಾಗಲೇ ಒಂಬತ್ತೂವರೆಯಾಗಿದೆ. ಪಾಪ ಅದಕ್ಕೇ ಕಿರಣ ಮಲಗಿದ್ದಾಳೆ. ಸಣ್ಣ ಮಗು -ಎಷ್ಟುಹೊತ್ತು ನಿದ್ದೆ ತಡೆದಾಳು?
“ಗಡಿಯಾರಕ್ಕೆ ಕೀ ಕೊಟ್ಟಿರಾ?”
“ಇನ್ನೂ ಇಲ್ಲ. ಅದನ್ನಿಲ್ಲಿ ಕೊಡು ಕೊಡ್ತೀನಿ” ಅವರ ಕೈಗೆ ಗಡಿಯಾರ ಕೊಟ್ಟು ಮುಂಬಾಗಿಲು ಮುಚ್ಚಿ ಬರಲು ಹೊರಗೆ ನಡೆದೆ. ಆದರೆ ಬಾಗಿಲು ಮುಚ್ಚಿತ್ತು; ಬೋಲ್ಟ್ ಕೂಡ ಹಾಕಿತ್ತು – ಇವರೇ ಹಾಕಿರಬೇಕು.
ಕೋಣೆಗೆ ಮರಳಿದಾಗ ನೋಡಿದರೆ ಇವರು ಮಲಗಿದ್ದಾರೆ ಎದೆಯ ಮೇಲೆ ಪತ್ರಿಕೆ ಹಾಗೆಯೇ ಹರಡಿತ್ತು. ಇನ್ನೂ ನಿದ್ದೆ ಬಂದಿರಲಾರದು; ಕಣ್ಣಂತೂ ಮುಚ್ಚಿಕೊಂಡಿದ್ದಾರೆ. ಏನಾದರೂ ಯೋಚಿಸುತ್ತಿರುವರೇನೋ….?
ಕಣ್ಣುಗಳಾಗಲೇ ತುಯ್ಯುತ್ತಿವೆ.
“ಏನೂಂದ್ರೆ….ದೀಪ ಆರಿಸಲೋ – ನೀವಿನ್ನು ಓದ್ತೀರೋ?”
“ಆಂ….” ಆಳವಾದ ದನಿಯಲ್ಲವರೆಂದರು – “ಆರಿಸಿಬಿಡು?”
ದೊಡ್ಡ ದೀಪ ಆರಿಸಿ ಸಣ್ಣ ದೀಪ ಹಾಕಿದೆ. ಅದರ ಮಂದ ಪ್ರಕಾಶ ಕೋಣೆಯಲ್ಲಿ ತೆವಳಿತು.
ಹಾಸಿಗೆಯಲ್ಲಿ ಮಲಗಿದ ಮೇಲೆ ಇವರು ನನ್ನ ಮೇಲೆ ಕೈ ಹಾಕಿ, -“ಇವತ್ತು ಆಫೀಸಿನಿಂದ ನಡೆದುಕೊಂಡು ಬರುವ?ರಲ್ಲಿ ಸಾಕು ಸಾಕಾಯಿತು” – ಎಂದರು.
“ಅದೇಕೆ? ಸೈಕಲ್ಲಿದ್ದರೂ ನಡೆದು ಬಂದಿರಾ?”
“ಪಂಕ್ಚರ್ ಆಗಿತ್ತು” – ಮೆಲ್ಲನೆ ನುಡಿದರು.
ಸರ-ಪರ ಸದ್ದು ಮಾಡುತ್ತಿದ್ದ ಪತ್ರಿಕೆಯನ್ನು ಅತ್ತ ತೆಗೆದುಹಾಕಿ ಅವರಿಗೆ ಹೊದಿಕೆ ಹೊದಿಸಿದೆ. ಸ್ವಲ್ಪ ಸಮಯದಲ್ಲೇ ಗಾಢನಿದ್ರೆಗೊಳಗಾದರವರು.
ನನಗೇಕೋ ಬಂದ ನಿದ್ರೆಯೂ ದೂರ ಓಡಿ ಹೋಯಿತು. ಸ್ವಲ್ಪ ಸಮಯದ ಹಿಂದೆ ನಿದ್ರೆ ತುಯ್ಯುತ್ತಿದ್ದ ಕಂಗಳನ್ನು ಈಗ ಮುಚ್ಚಿಕೊಂಡರೆ, ತಟ್ಟನೆ ತೆರೆದುಕೊಳ್ಳುತ್ತವೆ!
ಪಾಪ – ಇವರು ಆಫೀಸಿನಿಂದ ಮನೆಗೆ ಸಂಜೆ ನಡೆದುಕೊಂಡೇ ಬಂದರಂತೆ. ಅದೇನೂ ಇಲ್ಲಿಗೆ ಕಡಮೆ ದೂರದಲ್ಲಿಲ್ಲ; ಕನಿ? ಮೂರು ಮೈಲಿಯಾದರೂ ಆದೀತು. ಆದರೂ ಮನೆಗೆ ಬಳಲಿ ಬಂದಿದ್ದರೂ ಶಾಂತವಾಗಿಯೇ ಇದ್ದರು. ಅವರು ಬಂದಾಗ ಮಲಗಬಾರದಿತ್ತು ನಾನು. ಆದರೇನು ಮಾಡುವುದು? ತಲೆನೋವು ಬೇರೆ ಬಂದಿತ್ತಲ್ಲ….? ಇದೀಗ ಸ್ವಲ್ಪ ಹಗುರವೆನಿಸುತ್ತಿದೆ.
ಬೆಳಗ್ಗೆ ಆಫೀಸಿಗೆ ಹೋಗುವಾಗ ಏನೂ ಮಾತನಾಡದೆ ಹೋಗಿದ್ದರು. ಮೌನ ಮಾತಿಗಿಂತ ಪರಿಣಾಮಕಾರಿ. ಅವರು ಬೈದು, ಬುದ್ಧಿಮಾತು ಹೇಳಿ ಹೋಗಿದ್ದರೂ ನನಗೆ ಎಷ್ಟು ಸಮಾಧಾನವಾಗುತ್ತಿತ್ತು. ಆದರವರು ಹಾಗೆ ಮಾಡಲಿಲ್ಲ. ಕೊನೆಗೆ ಹೋಗಿ ಬರುತ್ತೇನೆಂದೂ ನನ್ನ ಬಳಿ ಹೇಳಲಿ. ಆದರೆ ಕಿರಣಳಿಗೆ ಮಾತ್ರ ’ಟಾ-ಟಾ’ ಮಾಡಿದರಲ್ಲ? ಆಗ ಹೇಗಾಗಿರಬೇಕು ನನಗೆ?
ನನ್ನದೇ ತಪ್ಪು. ಹಿಂದಿನ ರಾತ್ರಿ ಹಾಗನ್ನಬಾರದಿತ್ತೇನೊ ನಾನು? ಅವರೂ ಎ? ತಾಳ್ಮೆಯಿಂದ ಉತ್ತರಿಸಿದ್ದರು! ನಾನೇ ತಾಳ್ಮೆಗೆಟ್ಟವಳು. ಆಗ ನಾನು ಆಡಿದ ಮಾತುಗಳೇ ಸರಿ ಎನಿಸಿತ್ತು. ಈಗ ನೋಡಿದರೆ ಎಂಥಾ ಆಭಾಸ!
ಅದೇನೋ ವಿಷ ಗಳಿಗೆಯೇ ಇರಬೇಕು. ಇಲ್ಲದಿದ್ದರೆ ಹಾಗೇಕಾಗುತ್ತಿತ್ತು? ಆದರೆ ಆ ಮಾತು ಆರಂಭವಾಗಲು ಕಿರಣಳೇ ಕಾರಣ. ಅದೇಕೋ ನಿನ್ನೆ ಸಂಜೆ ಅವಳು ರಚ್ಚೆ ಹಿಡಿದು ಅಳುತ್ತಿದ್ದಳು. ಎಷ್ಟು ಸಮಾಧಾನ ಪಡಿಸಿದರೂ ಸುಮ್ಮನಾಗದಿದ್ದರೆ ಬೇಸರ ಬರುವುದಿಲ್ಲವೇ?
ಆ ವೇಳೆಗೆ ಇವರೂ ಮನೆಗೆ ಬಂದಿದ್ದರು. ತಿಂಡಿ ಕೊಟ್ಟು ಕಾಫಿಗೆ ಸಿದ್ಧಪಡಿಸುತ್ತಿದ್ದೆ. ಕಿರಣಳ ಅಳುವಿನ್ನೂ ನಿಂತಿರಲಿಲ್ಲ. ಅದೇಕೋ ಸೀರೆ ಎಳೆಯುತ್ತಿದಳು. ಅದಕ್ಕೆ – “ಸುಮ್ಮನಿರೆ ಸೀರೆ ಎಳೆಯಬೇಡ – ಹರಿದುಹೋದೀತು….” ಎಂದು ಗದರಿಸಿದವಳು ಮಾತು ಮುಂದುವರಿಸಿದೆ -“ಮೊದಲೇ ನಿಮ್ಮಣ್ಣ ಸೀರೆ ತಂದುಕೊಡುವುದು ಗೋಳು.”
ಅದೇಕೋ ಆ ಮಾತು ನಾಲಗೆಯಿಂದ ಜಾರಿಬಿಟ್ಟಿತ್ತು. ಒಂದು ಕ್ಷಣ ಅವರು ತಬ್ಬಿಬ್ಬಾಗಿರಬೇಕು. ನಾನೇನು ಅವರ ಮುಖವನ್ನು ಹಿಂದಿರುಗಿ ನೋಡಲಿಲ್ಲ. ಆದರೆ ಅದರಲ್ಲಾಗಿರಬಹುದಾದ ಬದಲಾವಣೆಯನ್ನು ಹಾಗೆಯೇ ಚಿತ್ರಿಸಿಕೊಂಡೆ. ಅವರು ಏನೂ ಮಾತಾಡಲಿಲ್ಲ; ಮೌನವಾಗಿದ್ದರು.
ಆ ಮೌನ ನನ್ನನ್ನು ತಿವಿಯಿತು. ’ಈ ಬಾರಿ ಸಂಬಳ ಬಂದಾಗ ತಂದುಕೊಡ್ತೇನೆ’ – ಎಂದೋ, ಇಲ್ಲವೇ ’ಮುಂದಿನ ತಿಂಗಳು ತರ್ತೀನಿ’ – ಎಂದೋ ಮಾತನಾಡಿದ್ದರೆ, ನನಗೆ ಎ? ಸಮಾಧಾನವಾಗುತ್ತಿತ್ತು. ಆದರವರು ಏನೂ ಅನ್ನಲಿಲ್ಲ.
“ಈ ವರ್ಷ ಗೌರೀಹಬ್ಬದಲ್ಲೂ ಹೊಸ ಸೀರೆ ತರಲಿಲ್ಲ….” – ನನ್ನ ಮನದಲ್ಲಿದ್ದ ಅತೃಪ್ತಿಯೆಲ್ಲಾ ಮಾತಿನ ರೂಪದಲ್ಲಿ ಹೊರಬರುತಿತ್ತು.
ಆದರೆ ಇವರಿಗೆ ನನ್ನ ಮಾತುಗಳೊಂದೂ ಕೇಳಿಸಿರಲಿಲ್ಲವೇ? ಅಥವಾ ಕೇಳಿಸಿದ್ದರೂ ಅಲಕ್ಷ್ಯವೋ? ಮತ್ತೆ ಹಾಗೇಕೆ ಮಾತನಾಡದೆ ಕಾಫಿ ಕುಡಿಯುತ್ತ ಕುಳಿತಿದ್ದರು?
“ಪದೇ ಪದೇ ಹೇಳಿದ್ದಕ್ಕೆ ಹೋದ ತಿಂಗಳು ಎರಡು ಕೈಮಗ್ಗದ ಸೀರೆ ತಂದುಕೊಟ್ಟಿರಲ್ಲಾ. ಅವಾಗಲೇ ನೆಲಸಾರಿಸುವ ಬಟ್ಟೆಯ ಹಾಗಾಗಿವೆ.”
ಆ ಸೀರೆಗಳು ಹಾಗೇನೂ ಆಗಿರಲಿಲ್ಲ; ಆದರವನ್ನೇಕೋ ಉಡಲು ಮನಸ್ಸೇ ಬಾರದು ನನಗೆ. ಬರಿಯ ಹದಿನೈದು ರೂಪಾಯಿಗಳ ಸೀರೆಗಳೆಂದು ಅವುಗಳ ಬಗ್ಗೆ ಮನಸ್ಸಿಲ್ಲವೇನೋ? ಆ ಸೀರೆಯುಡುವುದು ಗೌರವಕ್ಕೇನೂ ಕುಂದಲ್ಲ, ಎದುರು ಮನೆಯ ಕಾಲೇಜಿನ ಹುಡುಗಿ ಕೂಡ ಅಂತಹ ಸೀರೆಗಳನ್ನುಡುತ್ತಾಳೆ.”ಪಾಪ, ಪುಟ್ಟಿ ಟ್ವಿಂಕಲ್ ನೈಲಾನ್ ಲಂಗ ಬೇಕೂಂತ ಎ? ಸಲ ಕೇಳಿದಳು? – ಅವಳಿಗಾದರೂ ಹೊಲಿಸಿದಿರಾ….?”
“ನಿನಗೇನೂ ತಿಳಿಯದು ಸರು? ಬರುವ ಸಂಬಳದಲ್ಲಿ ದಿನ ದೂಡುವುದು ಎ? ಕ?ವಾಗುತ್ತಿದೇಂತ? ಆ ಲಂಗಕ್ಕೆ ಮೂವತ್ತು ರೂಪಾಯಿಗಿಂತ ಜಾಸ್ತಿ ದುಡ್ಡಾಗುತ್ತೆ, ಗೊತ್ತಾ….?
“ಹಾಗಿದ್ದರೆ ಮೂವತ್ತೆರಡು ರೂಪಾಯಿ ಕೊಟ್ಟು ಬೂಟ್ಸು ಏಕೆ ತೆಗೆದುಕೊಂಡಿರಿ?”
ಈ ಮಾತನ್ನು ನಾನು ಆಡಬಾರದಿತ್ತು; ಅದು ತುಟಿ ಜಾರಿತ್ತು.
ಅವರ ಮುಖದಲ್ಲಿ ವಿಚಿತ್ರ ರೇಖೆಗಳು ಮೂಡಿದವು. ಕಿವಿಗಳು ಕೆಂಪೇರಿದವು. ಮುಷ್ಟಿ ಒಮ್ಮೆಲೇ ಬಿಗಿಯಿತು. ಕುತ್ತಿಗೆಯ ನರಗಳುಬ್ಬಿದವು. ಅವರನ್ನು ನೋಡುತ್ತ ನೋಡುತ್ತ ನನ್ನ ದೇಹಾದ್ಯಂತ ನಡುಕವುಂಟಾಯಿತು. ಎಂಥಾ ಮಾತು ಆಡಿದೆನಲ್ಲಾ ಎಂದು ಮರುಗಿದೆ. ಅವರು ಏನೆನ್ನುವರೋ ಎಂದು ತಲ್ಲಣಸಿದೆ. ಆದರೆ ಅವರಂದುದೇನು?
“ನನ್ನ ಚಪ್ಪಲಿ ಸವೆದು ಹೋಗಿರಲಿಲ್ಲವೆ? ಅದಕ್ಕೆ ಬೂಟ್ಸು ತಂದೆ. ಇಲ್ಲದಿದ್ದರೆ ಬರಿಗಾಲಿನಲ್ಲಿಯೇ ಆಫೀಸಿಗೆ ಹೋಗಬೇಕ?. ಅದನ್ನು ನಾನು ತಂದುದು ನಿನ್ನ ಮನಸ್ಸಿಗೆ ಸಮಾಧಾನವಿಲ್ಲದಿದ್ದರೆ ನಾಳೆಯೇ ವಾಪಸ್ಸು ಬಿಟ್ಟುಬರುತ್ತೇನೆ. ಸರಿತಾನೇ.”
ಅದೆಷ್ಟು ಸೌಮ್ಯವಾಗಿ ಹೇಳಿದರವರು – ಆ ಮಾತನ್ನು!
“ಆ ಹಣದಲ್ಲೇ ಕಿರಣಗಳಿಗೆ ಲಂಗದ ಬಟ್ಟೆ ತಂದರಾಯಿತು; ಇಲ್ಲವೇ ನಿನಗೊಂದು ಸೀರೆ ಕೊಳ್ಳೋಣ….” – ಈ ಮಾತುಗಳನ್ನಾಡುವಾಗ ಅವರ ದನಿ ಗದ್ಗದಿತವಾಗಿತ್ತು. ಎ? ವಿಕೋಪಕ್ಕೆ ಹೋಯಿತಲ್ಲ ಪರಿಸರಣ? ಆ ಸುಳಿಯ ಸೆಳೆತದಲ್ಲಿ ಹೇಗೆ ಪಕ್ಕಾಗಿದ್ದೆವು ನಾವು!
“ನಂಗೇನೂ ಆ ಬಟ್ಟೆ ಲಂಗ ಬೇಡ. ಥೂ….! ಅದು ಚೆನ್ನಾಗಿರೋಲ್ಲ, ಮೈ ಎಲ್ಲಾ ಕಾಣುತ್ತೆ!” – ಎಂದಳು ಅಳು ನಿಲ್ಲಿಸಿದ್ದ ಕಿರಣ.
ಅವಳ ಮಾತು ಕೇಳಿ ನಗು ಬಂದಿತು; ಆದರೆ ನಗುವ? ಲಘುವಿರಲಿಲ್ಲ ಆಗಿನ ಸಮಯ.
“ಪುಟ್ಟಿ….ಬಾಮ್ಮ ಇಲ್ಲಿ” – ಎಂದು ಕಿರಣಳನ್ನು ಕರೆದರು. ಬಳಿಗೆ ಹೋದ ಅವಳನ್ನು ತೊಡೆಯ ಮೇಲೆ ಕೂರಿಸಿಕೊಂಡು
“ನಿಂಗೆ ಎಂಥಾ ಲಂಗ ಬೇಕು ಪುಟ್ಟಾ….?” – ಎಂದು ಲಲ್ಲೆಗರೆಯುತ್ತಾ ಕೇಳಿದರು.
ನನಗೆ ಲಂಗಾನೂ ಬೇಡ-ಪಂಗಾನೂ ಬೇಡ” – ಎಂದಳು ಕಿರಣ.
“ಮತ್ತೇ…. ನೈಲಾನ್ ಲಂಗ ಹೊಲಿಸೂಂತಿದ್ದೆ?”
“ಊಹೂಂ…. ನಂಗ್ಬೇಡ.”
“ಅದನ್ನ ಹಾಕ್ಕೊಂಡ್ರೆ ಮೈಯೆಲ್ಲಾ ಕಾಣುತ್ತಾ….?”
ಕಣ್ಣು ಮಿಟಿಕಿಸಿ, ತಲೆ ಹಾಕಿ ಹೌದೆಂದು ಸೂಚಿಸಿದಳು ಕಿರಣ.
“ಒಳಗಿನ್ನೊಂದು ಲಂಗ ಹಾಕ್ಕೊಂಡರಾಯಿತು ಅಲ್ವಾ?”
“ನಂಗ್ಬೇಡಣ್ಣ. ಅದಕ್ಕೆ ತುಂಬಾ ಕೊಡ್ಬೇಕು. ಮೂವತ್ತು ರೂಪಾಯಿ ಆಗುತ್ತೆ!”
ಸಣ್ಣವಳಾದರೂ ಅವಳ ಬಾಯಿಂದ ಎಂಥಾ ಮಾತು ಬಂದಿತ್ತು! ಆಗ ನೋಡಬೇಕಾಗಿತ್ತು ಇವರ ಮುಖವನ್ನು ಎ? ಯಾತನೆ ಅಸಹಾಯಕತೆಗಳಿಂದ ತುಂಬಿತ್ತೋ?
“ಇಲ್ಲಮ್ಮ…. ನಿನಗೆ ಲಂಗ ಹೊಲಿಸ್ತೀನಿ” – ಎಂದಿದ್ದರು.
ಕಿರಣಳ ಮುಖದಲ್ಲಿ ಆಗ ಮೃದುವಾಗಿ ನಗೆಯ ತರಂಗವೊಂದು ಸುಳಿದಿತ್ತು.
“ಪುಟ್ಟೀ ಮತ್ತೇ…. ಅಮ್ಮಂಗೆ ಸೀರೆ ತಂದು ಕೊಡಲಾ?”
“ಬೇಡಣ್ಣಾ! ಅಮ್ಮನ ಪೆಟ್ಟಿಗೇಲಿ, ದೊಡ್ಡ ದೊಡ್ಡೋವು, ಬಣ್ಣ ಬಣ್ಣದೋವು ಜರತಾರೀವು – ಇನ್ನೂ ಎಂತೆಂಥೆವೋ ಸೀರೆಗಳಿವೆ. ನೀನು ಸೀರೆ ತಂದುಕೊಟ್ರೆ ಅದನ್ನೂ ಪೆಟ್ಟಿಗೇಲಿಟ್ಟು ಪೂಜೆ ಮಾಡ್ತಾಳ?!” ಎಂದಳಲ್ಲಾ ಪೋರಿ!
ಇವರು ನಗುತ್ತಾ ನನ್ನ ಮುಖ ನೋಡಿದರು; ನನ್ನ ಮುಖವಾಗ ಗಂಟಿನಿಂದ ಕೂಡಿತ್ತು. ಎಂತಲೇ ಅವರ ನಗೆ ತಕ್ಷಣ ಅಳಿಸಿಹೋಯಿತು.
“ನನಗೆ ಸೀರೇನೂ ಬೇಡ, ಕುಬುಸಾನೂ ಬೇಡ” – ಎಂದೆ.
“ಥೂ….! ಇ? ದೊಡ್ಡೋಳಾಗಿ ಸೀರೆ-ಕುಬಸ ಇಲ್ಲದೆ ಹಾಗೆ ಓಡಾಡ್ತೀಯಾ….!” – ಎಂದು ನಕ್ಕಳು ಕಿರಣ. ಇವರೂ ಜೊತೆಯಲ್ಲಿಯೇ ನಗುತ್ತಿದ್ದರು.
“ನಿನಗಂತೂ ನಾಚಿಕೆಯಿಲ್ಲ…. ಸಾಕು ಬಾಯಿ ಮುಚ್ಚು” ಎಂದು ಕಾಫಿಯ ಲೋಟಗಳನ್ನು ಒಂದರೊಳಗೊಂದು ಕುಕ್ಕಿ ತಿಂಡಿಯ ಪ್ಲೇಟುಗಳನ್ನು ಸಶಬ್ದವಾಗಿ ತೆಗೆದುಕೊಂಡು ಹೊರಗೆಹೋಗಿದ್ದೆ.
ಕಿರಣಳ ಮಾತು ಕೇಳಿದರೆ ಒಮ್ಮೊಮ್ಮೆ ನಗು ಬರುತ್ತದೆ; ಕೆಲವು ಸಾರಿ ಮೈ ಪರಚಿಕೊಳ್ಳುವಂತಾಗುತ್ತದೆ. ಈಚೆಗೆ ತುಂಬಾ ಹೆಚ್ಚಿಕೊಂಡಿದ್ದಾಳೆ ಪೋರಿ!
ಪಕ್ಕಕ್ಕೆ ಹೊರಳಿದೆ. ಕಿರಣ ಓರೆಯಾಗಿ ಮಲಗಿದ್ದು ಕೂದಲು ಹಣೆಯ ಮೇಲೆ ಬಂದಿತ್ತು. ಅದನ್ನು ಹಿಂದಕ್ಕೆ ತಳ್ಳಿ ಮೆಲ್ಲನೊಂದು ಮುತ್ತು ಕೊಟ್ಟು ಹೊದಿಕೆ ಹೊದಿಸಿದೆ. ಆಗ ಅವಳು ಉರುಳುತ್ತಾ –
’ನಂಗ್ಬೇಡಣ್ಣ! ಅದಕ್ಕೆ ತುಂಬಾ ದುಡ್ಡು ಕೊಡಬೇಕು. ಮೂವತ್ತು ರೂಪಾಯಿ ಆಗುತ್ತೆ. ಮೈಯೆಲ್ಲಾ ಕಾಣುತ್ತೆ -ಥೂ!’ – ಎಂದು ಕನವರಿಸುತ್ತಿದ್ದಳು. ಪಾಪ! ಅವಳಿಗದೇ ಕನಸು.
ಏಕೋ ನಿದ್ದೆಯೇ ಬಾರದು; ಮಧ್ಯಾಹ್ನ ಮಲಗಿದುದರಿಂದಲೋ ಏನೋ?
ಪಕ್ಕಕ್ಕೆ ಹೊರಳಿದೆ. ಇವರು ಸುಖವಾಗಿ ನಿದ್ರಿಸುತ್ತಿದ್ದಾರೆ. ಸಣ್ಣ ದೀಪದ ಬೆಳಕು ಅವರ ಮುಖಾರ್ಧದ ಮೇಲೆ ಮಾತ್ರ ಪಸರಿಸಿದೆ. ಎದೆವರೆಗ? ಹೊದಿಕೆ ಮೈ ಮುಚ್ಚಿದೆ.
ಅಸ್ಪಷ್ಟವಾಗಿ ಕನವರಿಸುತ್ತಿದ್ದಾರೆ –
“….ಸರೂ….ಕೈಲಿ ದುಡ್ಡಿದ್ರೆ…. ನಿನಗೆ ಸೀರೆ….ತರ್ದೆ ಇರ್ತೇನಾ? ನಂಗೇಂತ ಬೂಟ್ಸು….ಬೇಡ. ನೀನು ನೆಮ್ಮದಿಯಿಂದ…. ಇದ್ರೆ…. ನಂಗೆ ಸಂತೋ?….ಹ್ಞಾಂ…. ಊಂ….”
ಅವರನ್ನು ಅಲುಗಿಸುತ್ತಾ, –
“ಏನೂಂದ್ರೆ…. ಬೂಟ್ಸೇನೂ ವಾಪಸ್ಸು ಕೊಡಬೇಡಿ; ನನ್ನಾಣೆ. ನಂಗೆ ಮುಂದಿನ ತಿಂಗ್ಳು ತಂದ್ರಾಯ್ತು ಸೀರೇನ -ಏನೂ….? ಆ…., ಹೂಂ ಅನ್ನಿ!” – ಎಂದು ಉದ್ವೇಗದಿಂದ ನುಡಿದೆ.
ಅವರಿಗೆಚ್ಚರವಾಯಿತೋ ಇಲ್ಲವೋ ಅಂತೂ ’ಆಂ….ಹ್ಞೂಂ’ – ಎಂದು ನನ್ನ ಮೇಲೆ ಕೈಹಾಕಿ ಬಳಿಗೆ ಸೆಳೆದುಕೊಂಡರು. ಅವರೆದೆಯಲ್ಲಿ ನನ್ನ ಮುಖವಿಟ್ಟೆ. ಅವರ ಬಾಹುಗಳ ಬಂಧನದಲ್ಲಿ ಬೇರೇನನ್ನೂ ನಾನು ಬಯಸದಾದೆ; ಅವರ ಪ್ರೀತಿ ಸದಾ ನನ್ನ ಮೇಲಿದ್ದರೆ ಸಾಕು. ಅದರ ಆಸರೆಯಲ್ಲಿ ಬೇರೇನು ಬೇಕು ನನಗೆ?