ನೀವು ದೊಡ್ಡ ಮನುಷ್ಯರೇ? ’ಭಾರೀ ಆಸಾಮಿ,’ ’ವಿ.ಆಯ್.ಪಿ.’ ಎನಿಸಬೇಕೆಂದು ನಿಮ್ಮ ಇಚ್ಛೆಯೆ
ಮಾರ್ಗ ಬಲು ಸುಲಭ:
“ಓಹೋ, ನಮಸ್ಕಾರ, ಬೆಳ್ಳುಳ್ಳಿಯವರೆ, ಈಗ ಸ್ಟೋನ್ ಆಂಡ್ ಸ್ಟೋನ್ ಕಂಪನಿಯಲ್ಲಿದ್ದೀರಾ? ನಿಮ್ಮ ಮ್ಯಾನೆಜರ್ ಕೋಲ್ಡ್ವಾಟರ್ ಹೇಗಿದ್ದಾರೆ?…. ಅವರ ಗುರುತು ಹೇಗಂದಿರಾ? ಓಹೋ, ನಾವು ಕಂಟೋನ್ಮೆಂಟ್ನಲ್ಲಿ ಹಿಂದೆ ನೆರೆಹೊರೆಯಲ್ಲಿದ್ದೆವು… ನನ್ನ ಸ್ನೇಹಿತರು, ಭಾರಿ ಭಯಂಕರ (!); ಏನಂದ್ರಿ, ನಿಮಗೆ ಪ್ರಮೋಶನ್ ಬೇಕೆ? ಓ, ಅದಕ್ಕೇನಂತೆ, ನಾನು ಹೇಳುತ್ತೇನೆ. ನಮ್ಮದೂ ಅವರದೂ ಕೇವಲ (?).. ಒಂದು ಮಾತು ನಾನು ಹೇಳಿದರೆ ಸರಿ, ಯೋಚಿಸ್ಬೇಡಿ.. ಆ ವಿಚಾರ ಬಿಟ್ಟೇಬಿಡಿ ನೀವು (?)…
“ಇವರ್ಯಾರು, ನಿಮ್ಮ ಸ್ನೇಹಿತರೆ? ಹೆಸರೇನು, ತಣ್ಣೀರುಬಾವಿ ಅಂತ್ಲೆ? ಮಂಗಳೂರಿನವರೆ? ಸರಿ, ಸಂತೋ?, ಡಿ.ಪಿ.ಆಯ್. ಆಫೀಸಿನಲ್ಲಿದ್ದೀರಾ? ಡಿ.ಪಿ.ಆಯ್. ಊರಲ್ಲಿದ್ದಾರೆ? ಸ್ವಲ್ಪ ಕಾಣಬೇಕಿತ್ತು ಅವರನ್ನ… ಗುರುತೇ? ಓ, ನಾವು ಒಟ್ಟಿಗೆ ಓದ್ತಾ ಇದ್ದೀವಿ.. ಬಹಳ ಸ್ನೇಹ. ಅವರಿಗೆ ಹಲಸಿನ ಹಣ್ಣೆಂದರೆ ಪ್ರೇಮ. ಪ್ರತಿಸಲ ನಮ್ಮ ಊರಿನ ತೋಟದಿಂದ ನೂರಿನ್ನೂರು ಹಲಸಿನ ಹಣ್ಣು ತರಿಸ್ತೇವೆ. ಅಲ್ಲ್ಯಾರು ತಿನ್ನೋರಿದಾರ್ರಿ? ನೂರಾರು ಮರಗಳು. ನಾಲ್ಕಾರು ಹಣ್ಣುಗಳಾದರು ಅವ್ರ ಮನೆಗೆ ಹೋಗಲೇಬೇಕು. ಏನಂದಿರಿ? ನಿಮ್ಮ ಪತ್ನಿಯವರಿಗೆ ಟ್ರಾನ್ಸ್ಫರೆ? ಎಲ್ಲಿ ಕೊಳಚೆಹೊಂಡದಲ್ಲಿ ಟೀಚರಾಗಿದ್ದಾರೇನು? ದರಿದ್ರ ಊರುರಿ ಅದು.. ಪಾಪ.. ನಾನ್ಹೇಳ್ತೇನೆ. ಡಿ.ಪಿ.ಆಯ್. ಅವರಿಗೆ ಹೇಳ್ತೇನೆ. ಮೂರೇ ಮೂರು ದಿವ್ಸದಲ್ಲಿ, ನಿಮ್ಮ ಕೆಲ್ಸ ಖತಮ್ (?), ಚಿಂತೆ ಬಿಡಿ”
“ನಮಸ್ಕಾರ ದೊಡ್ಡಕಲ್ಲಪ್ಪನವರೆ, ಏನು ಕಾರ್ಪೋರೇಶನ್ಗೆ ಹೊರಟ್ರಾ? ಏನು ಕೆಲ್ಸ? ಲಾಯಿಸನ್ಸ್ ತಾನೆ? ಅಲ್ಲಿ ನನ್ನ ಸ್ನೇಹಿತರು, ಹೆಡ್ಕ್ಲಾರ್ಕ್ ಸಿರಿಮದ್ದಯ್ಯಾ, ತಪ್ಪಿದೆ, ಮರಿಸಿದ್ದಯ್ಯಾ ಇದಾರೆ.. ನನ್ನ ಹೆಸರು ಹೇಳಿ, ಆಗುತ್ತೆ… ಏನು ನಾನೇ ಬರ್ಲಾ? ಹಾಂ, ಬರ್ತಿದ್ದೆ, ಬರ್ಬೌಹುದಾಗಿತ್ತು. ಈಗ ನಮ್ಮ ಸೊಸೈಟಿ ಮೀಟಿಂಗ್ ಇದೆ. ಮೂರುವರೆಗೆ ಕಂಟೋನ್ಮೆಂಟಿಗೆ ಹೋಗಬೇಕು… ಬರೇ ಹದಿನೈದು ನಿಮಿ? ಉಳೀತು.. ಮೀಟಿಂಗ್ನ ಅಜೆಂಡಾದಲ್ಲಿ ಮೊದಲ್ನೇ ಠರಾವು ನನ್ದೆ. ಇಲ್ದಿದ್ರೆ ಬರ್ತಿದ್ದೆ.. ಆದ್ರೆ, ನೀವು ನನ್ನ ಹೆಸರ? ಹೇಳಿ;.. ಅವರು ನಮ್ಮ ಭಾರಿರೀ (?) ಚಿಂತೆ ಮಾಡ್ಬೇಡಿ… ಹೋಗ್ಬನ್ನಿ, ಒಂದು ವೇಳೆ ಆಗದಿದ್ರೆ, ನಾನು ಬಂದೇ ಬರ್ತೀನಿ.”
ಸರಿ, ನಾಲ್ಕುಜನರ ನಡುವೆ ಹೀಗೆ ಮಾತಾಡಿ. ದೊಡ್ಡ ಆಸ್ತಿವಂತರು, ದೊಡ್ಡ ದೊಡ್ಡ ಸಂಸ್ಥೆಗಳ ಉಸಿರು ಎಂದು ತೋರಿಸಿಕೊಳ್ಳಿ. ಎಲ್ಲ ದೊಡ್ಡ ವ್ಯಕ್ತಿಗಳದೂ ನಿಮ್ಮದೂ ’ಗಳಶ್ಚ ಕಂಠಶ್ಚ’ ಅಂತ ಹೇಳಿಕೊಳ್ಳಿ.
ಧಾರಾಳವಾಗಿ ಆಶ್ವಾಸನೆಗಳನ್ನು ಕೊಡಿ; ಅದಕ್ಕಿಂತ ಅಗ್ಗವಾಗಿ – ಪುಕ್ಕಟೆಯಾಗಿ ಕೊಡುವಂತಹದು ನಿಮ್ಮಲ್ಲಿ ಬೇರೇನಿದೆ? ಆಶ್ವಾಸನೆಕೊಡಲು ನಿಮಗೆ ಖರ್ಚೇನಿದೆ?
ಎಲ್ಲರ ಪಾಲಿನ ಕಲ್ಪವೃಕ್ಷ ನೀವೆಂಬಂತೆ ನಡೆದುಕೊಳ್ಳಿ. ಆಗ ನೀವು ನಿಶ್ಚಿತವಾಗಿ ’ಭಾರೀ ಕುಳ’ವೆನಿಸಿಕೊಳ್ಳುತ್ತೀರಿ.
ಕೊಟ್ಟ ಆಶ್ವಾಸನೆಗಳನ್ನು ನಡೆಸಿಕೊಡುವುದು ಹೇಗೆ? ಇನ್ನೂ ಸುಲಭ:
“ಅಯ್ಯೋ, ಸಮಯವೇ ಸಿಗಲಿಲ್ಲಾ ಬೆಳ್ಳುಳ್ಳಿಯವರೆ… ಕೋಲ್ಡ್ವಾಟರ್ ಕಡೆ ನನ್ದೂ ಸ್ವಲ್ಪ ಕೆಲಸವಿತ್ತು; ಬರಲಿಕ್ಕೇ ಆಗಲಿಲ್ಲ; ಇ?ರಲ್ಲಿ ಬರ್ತೇನೆ… ನೋಡೋಣ… ನಿರಾಶೆಯಾಗಬೇಡಿ… ಒಮ್ಮೆ ಬರೋದ?ರಿ…”
“ಓ, ತಣ್ಣೀರುಬಾವಿಯವರೇ? ಬನ್ನಿ… ನಿಮ್ಮ ಹೆಂಡ್ತಿ ಇನ್ನೂ ಕೊಳಚೆಹೊಂಡದಲ್ಲೇ ಇದ್ದಾರೆ? ಟ್ರಾನ್ಸ್ಫರ್ ಆಗಿಲ್ವೆ? ಡಿ.ಪಿ.ಆಯ್ಯವರಿಗೆ ಫೋನ್ಮಾಡಿ ಹೇಳಿದ್ದೆ.. ’ಹೂಂ, ಈಗ್ಲೇ ಎತ್ತಿ ಹಾಕ್ತೀನಿ’(?) ಅಂದಿದ್ರು. ಮಾಡಿಲ್ವೇ ಇನ್ನೂ? ತಾಳಿ ಈ ಹೊತ್ತೇ ಫೋನ್ ಮಾಡ್ತೀನಿ… ಅಯ್ಯೋ ಗ್ರಹಚಾರ, ನಮ್ಮ ಫೋನ್ ಕೆಟ್ಟಿದೆ….ನಾಳೆ, ನಾಳೆ ಮಾಡ್ತೀನಿ, ನೋಡೋಣ… ಹಂ?”
“ಯಾರು, ದೊಡ್ಡಕಲ್ಲಪ್ಪನವರೆ? ಹುಂ, ನಿಮ್ಮ ಕೆಲ್ಸ ಮರ್ತೆಹೋಯ್ತು ನೋಡಿ. ಮೊದಲೊಮ್ಮೆ ಹೋದಾಗ ಅವರು ಸಿರಿಮದ್ದಯ್ಯ, ತಪ್ಪಿದೆ, ಮರಿಸಿದ್ದಯ್ಯ ರಜೇಲಿದ್ರು.. ಆಮೇಲೆ ಮರ್ತೆ ಹೋಯ್ತು. ಸಾವಿರ ಕೆಲ್ಸಾರಿ.. ನಡುವೆ ನಮ್ಮ ಹಾಯ್ಸ್ಕೂಲಿನ ಗಲಾಟೆ, ಅದೇ ಆಪದ್ಧರ್ಮ ವಿದ್ಯಾಲಯ ತೆಗ್ದಿದೀವಲ್ಲಾ (?) ಅದ್ರದ್ದೆಲ್ಲಾ ಕೆಲ್ಸ ನನ್ಕಡೇನೆ ಬಂದ್ಬಿಟ್ಟಿದೆ… ಗೋಳೇಗೋಳು.. ಆದ್ರೂ ನೋಡೋಣ, ಸಮಯಾ ಮಾಡ್ಕೋತೀನಿ… ಎಲ್ಲಾ ಕೆಲ್ಸ ಆಗ್ಬೇಕು ನೋಡಿ, ಯಾವುದು ಬಿಡೋದು, ಯಾವ್ದು ಮಾಡೋದು ಅಂತಾಗಿದೆ…”
’ಎಷ್ಟು ದೊಡ್ಡ ಮನುಷ್ಯರಿಂದ ಎಷ್ಟು ಸಣ್ಣ ಕೆಲಸ ಕೇಳುತ್ತಿದ್ದೇವೆ’ ಎಂದು, ನಿಮ್ಮಲ್ಲಿ ತಮ್ಮ ’ಕ್ಷುಲ್ಲಕ’ ಕೆಲಸಗಳಿಗಾಗಿ ಬಂದ ಜನ ನಾಚಿಕೊಂಡು ಹೋಗುತ್ತಾರೆ. ಅವರ ಮನಸ್ಸಿನಲ್ಲಿ ನಿಮ್ಮ ವ್ಯಕ್ತಿತ್ವ ಎರಡಂಗುಲ ಏರುತ್ತದೆ; ಕ್ಷಮಾಯಾಚನಾಭಾವದಿಂದ ಅವರು ದೂರಾಗುತ್ತಾರೆ.
ಮತ್ತೂ ಸುತ್ತುಹಾಕಿದರೆನ್ನಿ – ಹೊಸಕಾರಣ, ನೆವನ ತಯಾರಿಸಿಡುವ? ಬೆಂದ ಬಟಾಟೆ ನಿಮ್ಮ ತಲೆಯಲ್ಲಿರಲಿ.
ಸಮಯವಿಲ್ಲ, ಆ ಕೆಲಸ, ಈ ಕೆಲಸ, ಪ್ರೊಗ್ರಾಮು, ಮೀಟಿಂಗು, ಕರಾಮತ್ತು, ಕಿತಾಪತಿ ಹೇಳಿ ಬಂದವರನ್ನು ಫಜೀತಿಮಾಡಬೇಕು.
ಒಟ್ಟು ಪರಿಣಾಮ – ಬರಿ ಮಾತುಗಳಿಂದ – ಯಾವುದೇ ಕೆಲಸಮಾಡದೆ ನೀವು ಭಾರೀ ಕುಳವಾಗುವುದು; ಮುಂದೆ ಕಾದಿದೆ ನಿಮಗೆ ರಾಜಮಾರ್ಗ; ತಪ್ಪಿದೆ, ಪ್ರಜಾಪ್ರಭುತ್ವದೊಳಗೆ ರಾಜರೆಲ್ಲಿ? – ಮಂತ್ರಿಮಾರ್ಗ; ಅಥವಾ ಮಂತ್ರಿಯಾಗುವ ಮಾರ್ಗ.
ದಪ್ಪವಾದ ಆಶ್ವಾಸನೆಕೊಟ್ಟು ತೆಪ್ಪಗೆ ಪಾರಾಗಬಲ್ಲವನೇ ಅಪ್ಪಟ ಮಂತ್ರಿಯಲ್ಲವೆ?