ಈ ಬಾರಿಯ ಉತ್ಥಾನ ಕಥಾಸ್ಪರ್ಧೆಯ ತೀರ್ಪುಗಾರನಾಗಲು ಸಂಪಾದಕರು ನನ್ನನ್ನು ಕೇಳಿ ಒಟ್ಟು ಆಯ್ದ ೨೨ ಕಥೆಗಳನ್ನು ಕಳಿಸಿದರು. ಕಥೆಗಳನ್ನು ಮೊದಲನೇ ಬಾರಿ ಓದಿದಾಗ ಯಾವುದೇ ಕಥಾ ಸ್ಪರ್ಧೆಯಲ್ಲಿ ಅಥವಾ ಕಥಾಸಂಕಲನದಲ್ಲಿರುವಂತೆ ಕಥೆಗಳ ಗುಣಮಟ್ಟ, ಶೈಲಿ ಮತ್ತು ಭಾಷೆ ಎಲ್ಲವೂ ವೈವಿಧ್ಯಮಯವಾಗಿರುವುದು ಕಾಣುತ್ತದೆ. ಒಂದು ಗಮನಿಸಬೇಕಾದ ಅಂಶವೆಂದರೆ ಈ ಕಥಾಸ್ಪರ್ಧೆಯಲ್ಲಿ ನನಗೆ ಸಿಕ್ಕ ಬಹಳಷ್ಟು ಕಥೆಗಳು ಕುಟುಂಬಕೇಂದ್ರಿತವಾಗಿದ್ದವು. ಇನ್ನು ಸಾಮಾನ್ಯ ಆಸಕ್ತಿಯಾದ ರಾಜಕೀಯ, ಪ್ರಗತಿ, ಅದರ ಹೆಸರಿನಲ್ಲಿ ನಡೆಯುತ್ತಿರುವ ಅಸಹಾಯಕರ ಶೋಷಣೆ ಇಂತಹ ವಸ್ತುವಿನ ಮೇಲೆ ಕೆಲವೇ ಕೆಲವು ಕಥೆಗಳಿದ್ದವು. ಮಹಾನಗರದ ಖುಷಿ, ವಿಭ್ರಮೆಗಳು ಕಾಣಲಿಲ್ಲ. ಮಿಥ್, ಫ್ಯಾಂಟಸಿಗಳೂ ಇಲ್ಲ. ವಸ್ತುವಿನಲ್ಲಾಗಲೀ, ತಂತ್ರದಲ್ಲಾಗಲೀ, ಭಾಷೆಯಲ್ಲಾಗಲೀ ಅದ್ಭುತ ಎನ್ನುವ ಕಥೆಗಳು ಇಲ್ಲವೇ ಇಲ್ಲ ಅನ್ನುವಷ್ಟು ವಿರಳವಾಗಿದ್ದವು. ಬಹಳಷ್ಟು ಕಥೆಗಳು ಮಹತ್ತ್ವಾಕಾಂಕ್ಷೆಯಿಂದ ಬರೆದಿದ್ದಲ್ಲವೆನಿಸುತ್ತದೆ. ಬರೆದಿದ್ದರೂ ಎಲ್ಲೋ ಅಪೂರ್ಣವೇನೋ ಎನಿಸುತ್ತದೆ.
ಒಂದು ವಿಶೇಷವಾಗಿ ಗಮನಕ್ಕೆ ಬಂದುದೆಂದರೆ ಬಹುಮಾನಿತ ಅಥವಾ ಮೆಚ್ಚುಗೆ ಪಡೆದ ಕಥೆಗಳ ಭಾಷೆ ಮತ್ತು ನಿರೂಪಣೆ. ನನಗೆ ಬಹಳ ಸಮಾಧಾನ ಕೊಟ್ಟಿದ್ದು ಭಾಷೆಯ ಭಾರದಲ್ಲಿ ಕಥೆಗಳು ನಲುಗದೇ ಇದ್ದದ್ದು. ಸರಳವಾದ ಸುಂದರ ಭಾಷೆ. ಭಾಷೆಯ ಪ್ರಾದೇಶಿಕತೆಯನ್ನು ಗಮನಿಸಿದ್ದಲ್ಲಿ ಉತ್ತರಕನ್ನಡ, ದಕ್ಷಿಣಕನ್ನಡ, ಮಲೆನಾಡಿನ ಸೊಗಡು ಕಾಣಿಸುತ್ತದೆ. ಆದರೆ, ಹಳೇ ಮೈಸೂರು, ಮಂಡ್ಯ, ಹೈದರಾಬಾದ್ ಕರ್ನಾಟಕ ಪ್ರಾಂತೀಯತೆಯನ್ನು ಭಾಷೆಯಲ್ಲಿ ನಾನು ಗಮನಿಸಲಿಲ್ಲ. ಹಾಗೆಂದು ಆ ಪ್ರಾಂತ್ಯದ ಲೇಖಕರ ಪ್ರಾತಿನಿಧ್ಯ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಇದು ಎದ್ದು ಕಾಣುವುದು ಯಾಕೆಂದರೆ ಕರ್ನಾಟಕದ ಇನ್ನಿತರ ಪತ್ರಿಕೆಗಳು ನಡೆಸುವ ಕಥಾಸ್ಪರ್ಧೆಗಳಲ್ಲಿ ಕೊಂಚ ಬೇರೆ ರೀತಿಯ ಪ್ರಾದೇಶಿಕತೆ ಕಂಡುಬರುತ್ತದೆ. ತಮ್ಮ ಕಥೆಗಳನ್ನು ಇಂಥಾ ಪತ್ರಿಕೆಗಳ ಕಥಾಸ್ಪರ್ಧೆಗೆ ಮಾತ್ರ ಕೊಡಬೇಕು ಎನ್ನುವುದು ಲೇಖಕರ ಧೋರಣೆಯೋ, ಅಥವಾ ಬಂದ ಕಥೆಗಳಲ್ಲೇ ಗುಣಮಟ್ಟವನ್ನು ನಿರ್ಧರಿಸಿ ಆಯ್ದುಕೊಳ್ಳಬೇಕಾದ ಆಯ್ಕೆಸಮಿತಿಯ ಸವಾಲೋ ಗೊತ್ತಿಲ್ಲ. ಈ ಎರಡೂ ಪೂರ್ವಗ್ರಹಗಳೂ ಒಳ್ಳೆಯದಲ್ಲ. ನನಗೆ ಬಂದ ಕಥೆಗಳಲ್ಲಿ ರಾಜ್ಯದ ಎಲ್ಲ ಪ್ರದೇಶದ ಕಥೆಗಳೂ ಇರಲಿಲ್ಲ ಎನ್ನುವುದು ಒಂದು ಕುತೂಹಲಕಾರಿಯಾದ ಅಂಶವ?. ಪ್ರಾದೇಶಿಕತೆ, ನಂಬಿಕೆ, ನಿಲವುಗಳ ನೆವದಲ್ಲಿ ದ್ವೀಪಗಳಾಗಿರುವ ಈ ಕಾಲದಲ್ಲಿ, ರಾಜ್ಯಮಟ್ಟದ ಕಥಾಸ್ಪರ್ಧೆಯಲ್ಲಿ ಮುಕ್ತ ಆಹ್ವಾನವಿದ್ದಾಗಲೂ ಕೆಲಪ್ರದೇಶಗಳ ಕಥೆಗಳೇ ಇಲ್ಲದಿರುವುದು ಕೊಂಚ ಗಾಬರಿ ತರಿಸುವ ಅಂಶ.
ಮೊದಲ ಮೂರೂ ಬಹುಮಾನಕ್ಕೆ ಆಯ್ಕೆ ಮಾಡಿದ ಕಥೆಗಳ ಗುಣಮಟ್ಟ ಬಹುತೇಕ ಒಂದೇ ಆಗಿದ್ದು, ಕೆಲವು ಸೂಕ್ಷ್ಮ ಅಂಶಗಳಿಂದ ಒಂದು ಕಥೆ ಇನ್ನೊಂದಕ್ಕಿಂತ ಚೆನ್ನಾಗಿದೆ ಎಂಬ ನಿಲವನ್ನು ನಾನು ತೆಗೆದುಕೊಳ್ಳಬೇಕಾಗಿದೆ. ಮೊದಲ ಬಹುಮಾನಕ್ಕೆ ಆಯ್ಕೆ ಮಾಡಿದ ’ಬಲಿ’ ಎಂಬ ಕಥೆಯಲ್ಲಿ ಮಧ್ಯಮವರ್ಗದ ಆಶೆ, ನಿರಾಶೆ, ಜಂಜಾಟ, ಕೂಡುಕುಟುಂಬದ ಹೊಂದಾಣಿಕೆ ಎಲ್ಲ ಅಂಶಗಳೂ ಎದ್ದು ಕಾಣುತ್ತವೆ. ಅತ್ತೆಯಂಥ ಗಟ್ಟಿ ಹೆಂಗಸು, ರಾಮಚಂದ್ರ, ಲಹರಿಯಂಥ ಕೇವಲ ಮನು?ರು ಬದುಕಿನ ಕವಲುದಾರಿಯಲ್ಲಿ ನಿಂತಾಗ ಎದುರಿಸಬೇಕಾದ ಸಂದಿಗ್ಧಗಳು, ತೀರಾ ಹುಂಬನಲ್ಲದಿದ್ದರೂ ಜವಾಬ್ದಾರಿಯ ಮನುಷ್ಯನಲ್ಲದ ರಾಮಚಂದ್ರ, ಯಾವುದೇ ತೀರ್ಮಾನದ ಹೊಣೆಗೆ ಬದ್ಧಳಾಗಲೂ ಒಲ್ಲದ ಲಹರಿ ಇಬ್ಬರಿಗೂ ತಮ್ಮ ಬದುಕಿನ ಒಂದು ಘಟ್ಟದಲ್ಲಿ ಪ್ರಮುಖ ನಿರ್ಧಾರವನ್ನು ಮಾಡಬೇಕಾದಾಗ ಅದರ ಪರಿಣಾಮದ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಇಬ್ಬರೂ ಒಪ್ಪದಿರುವುದು ಬಹಳ ಸಹಜವಾಗಿ ಮೂಡಿಬಂದಿದೆ. ಕವಲುದಾರಿಯಲ್ಲಿ ನಿಂತಾಗ ಹಿಡಿಯದ ಹಾದಿ ಸುಲಭ, ಸುಭದ್ರವೋ ಅಥವಾ ದುಸ್ಸಾಧ್ಯವಾದದ್ದೋ ಎಂಬ ಜಿಜ್ಞಾಸೆ ಸಹಜ. ಅಂಥ ಸಮಯದಲ್ಲಿ ಯಾರಾದರೂ ಕೊಂಚ ತಡೆದರೂ ಸಾಕು, ನಮ್ಮ ಕಂಫರ್ಟ್ ಜೋನ್ ಬಿಡಲಾರೆವು ಎಂಬ ಮನು?ಸ್ವಭಾವದ ಸೂಕ್ಷ್ಮಚಿತ್ರಣ ಈ ಕಥೆಯಲ್ಲಿ ಸೊಗಸಾಗಿ ಮೂಡಿಬಂದಿದೆ. ಕಥೆಯ ಅಂತ್ಯ ಸಿನಿಮೀಯವಾಗುತ್ತೇನೋ ಎನ್ನುವಾಗ ರಾಮಚಂದ್ರನ ಫೋನು ನಾಟ್ ರೀಚಬಲ್ ಆದದ್ದು ಕೊಂಚ ನಿರಾಳ ಮಾಡಿತು. ಬದುಕಿನಲ್ಲಿ ಎ?ಂದು ಅನಿರ್ಧರಿತ ಕೊನೆಗಳು ಇರಬಹುದು ಎಂಬುದನ್ನು ಕಥೆ ಮನೋಜ್ಞವಾಗಿ ಹೇಳುತ್ತದೆ. ಕಥೆಗೆ ಇನ್ನೂ ಅರ್ಥಗರ್ಭಿತವಾದ ಶೀರ್ಷಿಕೆಯನ್ನಿಡಬಹುದಾಗಿತ್ತು.
ಎರಡನೇ ಬಹುಮಾನ ಪಡೆದ ಕಥೆ ’ಪಾವನಿ’ ವಸ್ತು, ಸರಳ ನಿರೂಪಣೆ ಮತ್ತು ನವಿರಾದ ಭಾಷೆ ಎಲ್ಲದರಿಂದ ಗಮನ ಸೆಳೆಯುತ್ತದೆ. ದಾಂಪತ್ಯದ ರಹಸ್ಯಗಳು ಅನೇಕ. ಗಂಡನ ವಿಚಿತ್ರ ಕಾಮಾಸಕ್ತಿ, ಸಭ್ಯಸ್ತ ಎನ್ನಿಸಿಕೊಂಡ ಇಂದರ್ನ ನಾಲ್ಕು ಗೋಡೆಗಳ ನಡುವಿನ ಸಹಜ ಆದರೆ ವಿಕೃತಿಯ ಅಂಚಿನ ನಡವಳಿಕೆ, ಅದರಿಂದ ತನ್ನ ಪಾವಿತ್ರ್ಯ ಕಳೆದುಹೋಯಿತು ಎಂದುಕೊಳ್ಳುವ ಈ ಕಾಲದ ಹೆಣ್ಣು ಇವೆಲ್ಲಕ್ಕೆ ಕಾರಣವಾದ ’ವೈಫ್ ಸ್ವಾಪಿಂಗ್’ ಅಥವಾ ಸ್ವಿಂಗಿಂಗ್ – ಹೀಗೆ ವಸ್ತುವಿನಲ್ಲಿ ಗಮನ ಸೆಳೆದರೂ ಯಾವುದನ್ನೂ ಗಂಭೀರವಾಗಿ ಪರೀಕ್ಷಿಸದೆ ಸ್ವಗತವಾಗುತ್ತದೆ. ಅಹಲ್ಯಳ ಕಥೆಯನ್ನು ಹಾಗೇ ಹೇಳಿದ್ದಲ್ಲಿ ಸಾಮಾನ್ಯ ಹೆಣ್ಣಿಗೂ ಇರಬಹುದಾದ ಗಂಡನಲ್ಲದ ಬೇರೆಯವನ ಬಗ್ಗೆ ಕಾಮಾಸಕ್ತಿಯ ಆಖ್ಯಾಯಿಕೆಯ ಬೆಂಬಲವಾದರೂ ಕಥೆಗೆ ಸಿಕ್ಕುತ್ತಿತ್ತು. ಇಂದ್ರನಿಂದ ತನಗೆ ಯಾವುದೇ ಅನ್ಯಾಯ ಆಗಿಲ್ಲ, ಹಾಗೆ ಆಗಿದ್ದರೆ ಆತನನ್ನು ಋಗ್ವೇದದಲ್ಲಿ ಸ್ತುತಿಸುತ್ತಲೇ ಇರಲಿಲ್ಲ, ಅಹಲ್ಯೆ ಜಡಭರತೆಯಾದವಳು ಪಾವಕನಿಂದ ಪಾವನೆಯಾದಳು ಎನ್ನುವ ಅಷ್ಟನೂ ಸಮಂಜಸವಲ್ಲದ (ಬೇಕಿಲ್ಲದ) ಸಮಜಾಯಿಷಿ ಕೊಟ್ಟುಕೊಂಡು ಪಾಪಪ್ರಜ್ಞೆಯಿಂದ ಹೊರಗೆ ಬರಲು ಲೇಖಾ ತಯಾರಾಗುತ್ತಾಳೆ. ಒಟ್ಟು ಎರಡನೆ ಭಾಗದಲ್ಲಿ ಲೇಖಕರು ಏನು ಹೇಳಲು ಹೊರಟಿದ್ದಾರೆ ಎಂದು ಸರಿಯಾಗಿ ಗೊತ್ತಾಗುವುದಿಲ್ಲ. ಒಂದು ಒಳ್ಳೆಯ ಪ್ರಯತ್ನ.
ಮೂರನೆ ಬಹುಮಾನ ಪಡೆದ ’ಪರಾವರ್ತನ’ ಕಥೆ ಈ ಸ್ಪರ್ಧೆಗೆ ಬಂದ ಕಥೆಗಳಲ್ಲೆಲ್ಲಾ ಕೊಂಚ ಭಿನ್ನವಾಗಿದೆ. ಇಬ್ಬರು ಅಪರಿಚಿತರು ಒಂದು ವಿಚಿತ್ರ ಸಂದರ್ಭದಲ್ಲಿ ಭೇಟಿಯಾದಾಗ ರಾತ್ರಿ ಕಳೆಯಲು ಪರಸ್ಪರರ ಕಥೆಗಳನ್ನು ಹೇಳಿಕೊಳ್ಳುತ್ತಾರೆ. ಒಬ್ಬ ನಾಸ್ತಿಕನಾದರೆ ಇನ್ನೊಬ್ಬ ಪುರೋಹಿತ. ನಾಸ್ತಿಕನಿಗೆ ಬದುಕಿಡೀ ’ದೇವರಿಂದ’ ಬಹಳ ನಿರಾಶೆಯಾಗಿದೆ. ಲೇಖಕರು ನಾಸ್ತಿಕನ ಸ್ವಗತವನ್ನು ಆದಷ್ಟು ವಾಚ್ಯವಾಗಿರಿಸದಿರುವುದಕ್ಕೆ ಪ್ರಯತ್ನ ಮಾಡಿದ್ದಾರೆ. ಭಾಸ್ಕರನ ಅ?ದ್ದದ ಹಿನ್ನೆಲೆಯ ಅಗತ್ಯ ಇತ್ತೇ ಎಂದು ಒಮ್ಮೊಮ್ಮೆ ಅನುಮಾನವಾದರೂ ಸರಳವಾದ ನಿರೂಪಣೆಯಿರುವುದರಿಂದ ಸುಲಲಿತವಾಗಿ ಓದಿಸಿಕೊಳ್ಳುತ್ತದೆ. ಪುರೋಹಿತನ ನಂಬಿಕೆಗೂ ಒಂದು ಅಜೆಂಡಾ ಇದೆ. ಅದು ಅಂತಿಂತಹದ್ದಲ್ಲ, ಭರಣಿ ನಕ್ಷತ್ರದಲ್ಲಿ ಹುಟ್ಟಿರುವ ಆತ ಧರಣಿಯಾಳಲು ಬಯಸಿದ್ದಾನೆ. ಆದರೆ ಇದನ್ನು ಸಾಧಿಸಲು ಶಿವಲಿಂಗವನ್ನೇ ಸರಿಸಲು ಸಿದ್ಧನಾಗುತ್ತಾನೆ. ಅದೂ ನಿರಾಶೆಯನ್ನುಂಟುಮಾಡಲು ಆತ ಕೂಡ ತನ್ನ ನಂಬಿಕೆಯನ್ನು ಪ್ರಶ್ನಿಸುತ್ತಾನೆ. ಭಾಸ್ಕರನ ಅದುವರೆಗಿನ ನಂಬಿಕೆಗಳು ಏನೇ ಇರಲಿ, ನಮ್ಮ ಕಲ್ಪನೆಯ ದೇವರು, ಆತನ ಆಕಾರ ಇವುಗಳಿಗೆ ಭಂಗಬಂದಾಗ ಆತನಿಗಾಗುವ ತಳಮಳದ ವೈಚಿತ್ರ್ಯವನ್ನು ಲೇಖಕರು ಕಷ್ಟಪಡದೇ ಮನಕಲಕುವಂತೆ ಹೇಳಿದ್ದಾರೆ. ಈ ಸ್ಪರ್ಧೆಯ ಉತ್ತಮ ಕಥೆಯಾಗುವ ಅವಕಾಶವನ್ನು ತನ್ನ ಅತಿವಾಚಾಳಿತನದಿಂದ ಕಳೆದುಕೊಂಡಿದೆ.
ಈ ಸ್ಪರ್ಧೆಯಲ್ಲಿ ಗಮನ ಸೆಳೆದ ಇನ್ನಿತರ ಕಥೆಗಳಲ್ಲಿ ’ಬೇರು, ಮಣ್ಣುಗಳ ಜೀವಯಾನ’ ಮರ, ಬೇರು ಹಾಗೂ ಬದುಕಿನ ನಡುವಣ ಸಾವಯವ ಸಂಬಂಧವನ್ನು ಸೂಚಿಸಲು ನಯವಾಗಿ ಕುಸುರಿಮಾಡಿದ ಕಥೆ. ಕುಸುರಿ ಸೂಕ್ಷ್ಮವಾಗಿಯೇನೋ ನಡೆದಿದೆ. ಆದರೆ ಕೆಲವೊಮ್ಮೆ ಇದು ಕಥೆಯ ಅಜೆಂಡಾವನ್ನು ಹಿಡಿದಿಡಲು ಬೇಕಾದ ಗಂಟಿನಂತೆ ಎದ್ದು ಕಂಡರೆ, ಇನ್ನೂ ಕೆಲವು ಕಡೆ ಕುಸುರಿಯ ಎಳೆ ತೀರ ತೆಳು ಎನಿಸುತ್ತದೆ. ಆದರೂ ಈ ಕಥೆ ನಯವಾದ ನಿರೂಪಣೆ ಮತ್ತು ಭಾ?ಯಿಂದ ಗಮನ ಸೆಳೆಯುತ್ತದೆ. ಪದಮಿತಿಯ ಆವರಣವಿಲ್ಲದಿದ್ದಲ್ಲಿ ಮಧುಕೇಶನಂಥ ಸೂಕ್ಷ್ಮ ಎಳೆಗಳು ಇನ್ನೂ ಹದವಾಗುತ್ತಿತ್ತೇನೋ.
ಪ್ರಗತಿಯ ಹೆಸರಿನಲ್ಲಿ ಆಗುತ್ತಿರುವ ನಮ್ಮ ಪ್ರಕೃತಿಯ ಆಕ್ರಮಣ ಮತ್ತು ಸಾಮಾನ್ಯ ಮನುಷ್ಯರ ಮೇಲೆ ಆಗುತ್ತಿರುವ ಅನ್ಯಾಯ – ಇದು ನಮ್ಮ ಕಾಲದ ಕತೆಗಾರರಿಗೆ ಯಾವತ್ತೂ ರಸವತ್ತಾದ ವಸ್ತು. ’ಪುಟ್ಟಕ್ಕನ ಹೈವೇ’ ಸಿನೆಮಾದ ಕತೆಯ ಹಾದಿಯಲ್ಲಿಯೇ ನಡೆಯುವ ಕತೆ – ’ಹೆದ್ದಾರಿಯ ರಾಕೇಸನೂ ನಾಗಮ್ಮ ವಕ್ಕಲತಿಯ ಗುಡಿಸಲೂ’. ಇಡೀ ಕತೆಯ ವೈಶಿಷ್ಟ್ಯ ಕತೆಯ ಪ್ರಾದೇಶಿಕತೆ (ನಾನು ಮೊದಲು ಬರೆದ ಪ್ರಾದೇಶಿಕತೆಯ ಆಖ್ಯಾನಕ್ಕೆ ಹೊರನಿಲ್ಲುವ ಕಥೆಯಿದು) ಮತ್ತು ಭಾಷೆ. ಇಡೀ ಕತೆಯಲ್ಲಿ ಪ್ರೊಫೆಸರರು ಬಂದು ಈ ಪ್ರಗತಿಯ ಉದ್ದೇಶವನ್ನು ಎಲ್.ಪಿ.ಜಿ.ಯ ವಿವರಣೆಯನ್ನು ಸಂಸ್ಕಾರದ ಪುಟ್ಟನಂತೆ ಒಂದು ಗಳಿಗೆ ಬಂದು ಹೇಳಿ ಹೋಗಿ ಕತೆಗೆ ಒಂದು ಅತ್ಲಾಗೂ ಇಲ್ಲದ, ಇತ್ಲಾಗೂ ಇಲ್ಲದ ಅಲಿಪ್ತತೆಯನ್ನು ತರಲು ಪ್ರಯತ್ನಿಸಿದ್ದರೂ ಲೇಖಕರ ಒಲವಿರುವುದು ನಾಗಮ್ಮನ ಕಡೆಗೆ. ದೇವಣ್ಣನ, ಗ್ಯಾರೇಜ್ ಬೀರಣ್ಣನ ಅಸಹಾಯಕತೆಯನ್ನೂ ವಿವರಿಸಿ ಯಾರನ್ನೂ ಕೆಟ್ಟವರನ್ನಾಗಿ ಮಾಡದಿದ್ದರೂ ನಮ್ಮ ದೇಶದ ಪ್ರಗತಿಯ ಸೂತ್ರಗಳನ್ನು ಲೇಖಕರು ಯಾವ ರೀತಿಯೂ ಮಾನ್ಯ ಮಾಡುವುದಿಲ್ಲ. ಇದು ಯಾವುದೋ ಗಣಿದೊರೆಯ ಅಥವಾ ರಿಯಲ್ ಎಸ್ಟೇಟ್ ಉದ್ಯಮ ಅಲ್ಲ. ನಮ್ಮ ದೇಶದ ಅಭಿವೃದ್ಧಿ ಯೋಜನೆ. ನಾಗಮ್ಮನ ದುರಂತ ಪ್ರಶ್ನಾತೀತ. ಅದಾಗಬಾರದು. ಆದರೆ ವಿಶಾಲ ದೃಷ್ಟಿಯಲ್ಲಿ ನೋಡಿದಲ್ಲಿ ಹೆದ್ದಾರಿ ಬೇಕೇ ಬೇಡವೇ? ’ಗ್ರೇಟರ್ ಕಾಮನ್ ಗುಡ್’ ಎಂದರೇನು? ಈಗಿರುವ ಸಾಮಾನ್ಯ ರಸ್ತೆಯೂ ಹಿಂದಿದ್ದ ಯಾವುದೋ ಕಾಡು, ಯಾರದೋ ಮನೆ, ಗುಡಿಸಲು, ಗೋರಿಯ ಮೇಲೇ ಆಗಿರುವುದಲ್ಲವೇ? ಹಾಗಾಗಿ ಇಂಥ ಕಥೆಗಳಲ್ಲಿ ತಟಸ್ಥ ನಿಲವು ತೆಗೆದುಕೊಳ್ಳುವುದು ಬಹಳ ಕ?. ಆದರೂ ಲೇಖಕರ ಯೋಚನೆ ಈ ದಿಕ್ಕಿಗಿದೆ ಎನ್ನುವುದೇ ಸಮಾಧಾನಕರ. ಕಥೆಯ ಅಂತ್ಯ ಊಹಿಸಬಲ್ಲದುದಾದರೂ ಬೇರಾವ ರೀತಿಯ ಅಂತ್ಯವೂ ಇದಕ್ಕೆ ಸರಿಹೊಂದುತ್ತಿರಲಿಲ್ಲ.
’ಸಾವು-ಹುಟ್ಟು’ ಈ ಕಥೆ ತನ್ನ ನಿರೂಪಣೆಯ ಚಾತುರ್ಯದಿಂದ ಗಮನ ಸೆಳೆಯುತ್ತದೆ. ಸಾವು-ಹುಟ್ಟುಗಳ ಭಿನ್ನತೆ ಸಾಮ್ಯತೆಯನ್ನು ನಿರ್ಮಮವಾಗಿ ಚಿತ್ರಿಸುತ್ತದೆ. ಲೇಖಕರಿಗೆ ಸಾವು ಹುಟ್ಟಿನ ಭೌತಿಕತೆ(ಫಿಸಿಕಾಲಿಟಿ)ಯ ಮೇಲೆ ಮಾತ್ರ ಆಸಕ್ತಿ ಎನಿಸುತ್ತದೆ. ನಿರೂಪಣೆಯಲ್ಲಿ ಸಾವಿನಿಂದ ಹುಟ್ಟಿನ ಕ್ರಿಯೆಯ ಸಂಕ್ರಮಣ ಬಹಳ ಸೀಮ್ಲೆಸ್ ಆಗಿ ಕಂಡುಬರುತ್ತದೆ. ಆದರೆ ಅದೊಂದೇ ಕತೆಯ ಜೀವಾಳವಾಗಿರುವುದರಿಂದ ಒಂದು ರೀತಿ ಅದನ್ನು ಸಾಧಿಸಲಿಕ್ಕೇ ಕತೆಗಾರರು ತಮ್ಮ ಎಲ್ಲ ಶಕ್ತಿಯನ್ನೂ ಧಾರೆಯೆರೆದಿದ್ದಾರೆ ಎನಿಸಿತು. ಎಲ್ಲದಕ್ಕಿಂತ ನನ್ನ ಗಮನ ಸೆಳೆದದ್ದು ಮುದುಕನ ದನಿಯಲ್ಲಿ ನಿರೂಪಿತವಾಗಿರುವ ’ಸಾಮಾನ್ಯವಾಗಿ ಜೀವಿಸಿದ’ ಸಾಮಾನ್ಯನೊಬ್ಬನ ಕಥೆ. ಅಲ್ಲಿ ಹತಾಶೆ, ದುಃಖ, ಸದಾಕಾಲ ಕಾಯಿಲೆಯಿಂದ ಮಲಗಿದ್ದಾಗ ಕಾಯಿಲೆಯಿದ್ದವರು ಮತ್ತು ಜತೆಗಿದ್ದವರು ಅನುಭವಿಸಬೇಕಾದ ಬೇಗುದಿಗಳು ಅತ್ಯಂತ ಪ್ರಾಮಾಣಿಕವಾಗಿ ನಿರೂಪಿಸಲ್ಪಟ್ಟಿವೆ. ಕರ್ಮವಾದಿಗಳಿಗೆ, ಸನಾತನವಾದಿಗಳಿಗೆ ಪುನರ್ಜನ್ಮ, ಯಮದೂತರು, ಮಾಡಿದ್ದುಣ್ಣೋ ಮಹರಾಯ – ಎಲ್ಲವೂ ನೆನಪಾಗಬಹುದು.
ಮಾನಸಿಕ ಅಸ್ವಸ್ಥರ ಬಗ್ಗೆ ನಮಗಿರುವ ಪೂರ್ವಗ್ರಹ, ಸ್ಟಿಗ್ಮಾಗಳನ್ನು ಬಹಳ ಸರಳವಾಗಿ ಹೇಳುವ ಕಥೆ ’ಹೆಸರು ಹೇಳದವನು’. ನಾವು ಅಸ್ವಸ್ಥನೆಂದುಕೊಳ್ಳುವವನು ಆರಾಮಾಗಿಯೇ ತನ್ನ ಅಸ್ವಾಸ್ಥ್ಯವನ್ನು ಒಪ್ಪಿಕೊಂಡು ಚೆನ್ನಾಗಿಯೇ ಬದುಕುತ್ತಿರುವಾಗ ಆತ ತನಗೆ ಏನು ಮಾಡಿಬಿಡಬಹುದೋ ಎಂಬ ಚಿಂತೆಯಲ್ಲಿಯೇ ಒಬ್ಬ ’ನಾರ್ಮಲ್’ ಮನು? ಕೂಡ ಅಸ್ವಸ್ಥನಾಗುತ್ತಾನೆ. ಕಡೆಯ ಎರಡು ಪ್ಯಾರಾವನ್ನು ಬರೆಯದಿದ್ದಲ್ಲಿ ಕಥೆ ಎಲ್ಲವನ್ನೂ ವಾಚ್ಯವಾಗಿಸದೆ ಇನ್ನೂ ಕುತೂಹಲಕಾರಿಯಾಗಿರುತ್ತಿತ್ತು. ಆ ಅಂಶವನ್ನು ಲೇಖಕರು ಗಮನಿಸಿದ್ದರೆ ಇದು ಇನ್ನೂ ಉತ್ತಮ ಕಥೆಯಾಗುವ ಸಾಧ್ಯತೆಯಿತ್ತು.
’ಅಂಗಡಿ’ – ಕಥೆಯ ಆರಂಭ ಮತ್ತು ಅಂತ್ಯ ಇಡೀ ಕಥೆ ಹೇಳುವುದಕ್ಕಿಂತ ಹೆಚ್ಚಿನದನ್ನು ಹೇಳುತ್ತದೆ. ಕಥೆಯ ಆರಂಭದಲ್ಲಿ ಗೋವರ್ಧನಯ್ಯನಿಗಿರಬಹುದಾದ ಖಿನ್ನತೆ ಅಥವಾ ಆತನ ಸಂಸಾರದ ಜಂಜಾಟದಿಂದ ತಪ್ಪಿಸಿಕೊಳ್ಳಲು ಆತನ ಸುಪ್ತ ಮನಸ್ಸು ಆಡಿಸುವ ಆಟ, ಇಂಥವೆಲ್ಲ ಇರಬಹುದೇನೋ ಎಂಬ ನಿರೀಕ್ಷೆಯನ್ನು ಹುಟ್ಟಿಸಿ ನಂತರದ ಭಾಗ ಫಾಸ್ಟ್ ಪಾರ್ವರ್ಡ್ ಮಾಡಿದಂತೆ ನಡೆಯುತ್ತಾ ಹೋಗುತ್ತದೆ. ಕೊನೆಗೆ ಒಂದು ತಾರ್ಕಿಕ ಅಂತ್ಯವನ್ನು ಲೇಖಕರು ಕೊಟ್ಟಿದ್ದರೂ ಗೋವರ್ಧನಯ್ಯನ ಕಾಯಿಲೆಯ ಡಯಗ್ನೋಸಿಸ್ ಅ? ಸುಲಭವಾದದ್ದು, ಕಥೆಗಿರಬಹುದಾದ ಎಲ್ಲ ಸಾಧ್ಯತೆಗಳನ್ನೂ ಏಕ್ದಂ ಸರಳೀಕರಿಸಿದಂತಾಗುತ್ತದೆ. ಈ ಬಗ್ಗೆ ಲೇಖಕರು ಕೊಂಚ ಸೂಕ್ಷ್ಮವಾಗಿ ಗಮನ ಕೊಟ್ಟಿದ್ದರೆ ಕಥೆ ಇನ್ನೂ ಪಕ್ವವಾಗುತ್ತಿತ್ತು.
ಒಟ್ಟಾರೆ ಒಟ್ಟಿಗೆ ಇಷ್ಟುಕಥೆಗಳನ್ನು ಓದಿ ಖುಷಿ ಪಟ್ಟಿದ್ದೇನೆ. ಅದಕ್ಕಾಗಿ ಸಂಪಾದಕರಾದ ಕೇಶವಭಟ್ಟರಿಗೆ ಧನ್ಯವಾದಗಳು. ವಿಜೇತರಿಗೆ ಅಭಿನಂದನೆಗಳು.
ವಿಶ್ವಾಸದಿಂದ,
ಗುರುಪ್ರಸಾದ ಕಾಗಿನೆಲೆ