ವಿಂಧ್ಯದ ತಪ್ಪಲಲ್ಲಿ ಇರುವಂತಹ ನಿರ್ಜನ ಪ್ರದೇಶ. ಕಣ್ಣುಮುಚ್ಚಿಕೊಂಡು ಮೊದಲಮಳೆಗೆ ತೋಯ್ದ ಇಳೆಯ ಮಣ್ಣಿನ ಸುಗಂಧವನ್ನು ಆಸ್ವಾದಿಸುತ್ತಿದ್ದಾಳೆ ಲೇಖಾ. ಮೊತ್ತಮೊದಲ ಬಾರಿಗೆ ಈ ರೀತಿಯಾಗಿ ಒಬ್ಬಳೇ ಎಲ್ಲೋ ಬಂದಿರುವುದು. ಮನಸ್ಸಿನಲ್ಲಿ ತುಸು ದುಗುಡವಿದ್ದರೂ, ಏನೋ ಒಂದು ಥರಾ ನಿರುಮ್ಮಳ. ಎಲ್ಲವನ್ನೂ, ಎಲ್ಲರನ್ನೂ ಬಿಟ್ಟು ನದಿಯಾಗಿ ಹರಿದುಹೋಗುವ ಅದಮ್ಯ ಬಯಕೆ. ಆದರೆ ಆಗುತ್ತಿಲ್ಲ. ಏನೋ ಕಳವಳ. ಏನೋ ಗೊಂದಲ. ತನ್ನದಲ್ಲದ ತಪ್ಪಿಗೆ ತಾನು ಬಲಿಯಾಗುತ್ತಿರುವುದರ ಬಗ್ಗೆ ಅತೀವ ವಿಷಾದ. ಎಲ್ಲೋ ಮೆದುಳಿನಲ್ಲಿ ಏಳುವ ಅಲೆಗಳು ಮೈತುಂಬಾ ಹರಿದಾಡಿ, ಕೊನೆಗೆ ಫಕ್ಕೆಂದು ಹೃದಯವನ್ನು ಹೊಕ್ಕು, ತಮ್ಮಿ?ದಂತೆ ಮೀಟುವಾಗ ಅಸಾಧ್ಯವಾದ ನೋವು. ಅಯ್ಯೋ ಪ್ರಾಣವೇ ಹೋಗುತ್ತಿದೆಯೇನೋ ಎಂಬ ಭಾವ. ಪ್ರಾಣ ಇ? ಸರಳ ರೀತಿಯಲ್ಲಿ ಹೋಗುವುದಿಲ್ಲವಂತೆ. ಸಾವಿರಾರು ಚೇಳುಗಳು ಒಮ್ಮೆಲೇ ಕುಟುಕಿದಂತಹ ನೋವಾದಾಗ ಸಾವು ಸಮೀಪಿಸಿದಂತೆ ಎಂದು ಪುರಾಣದ ಆಚಾರ್ಯರು ಹೇಳುತ್ತಿದ್ದ ನೆನಪು. ಊಹ್ಞೂಂ ಇಲ್ಲ, ಇದು ಸಾವಿನ ನೋವಲ್ಲ. ಥೂ ಮತ್ತೂ ಬದುಕಬೇಕೆಂಬ ದುರಾಸೆ. ತಲೆ ಧಿಂ ಎಂದಿತು. ಎದ್ದು ನಿಧಾನವಾಗಿ ಅಲ್ಲಿಯೇ ಅನತಿದೂರದಲ್ಲಿ ಹರಿಯುತ್ತಿದ್ದ ಗೋದಾವರಿ ನದಿಯ ತಟಕ್ಕೆ ಬಂದಳು. ಗೋದಾವರಿಯ ತಣ್ಣನೆಯ ನೀರಿನಲ್ಲಿ ಕಾಲು ಇಳಿಬಿಟ್ಟು ಕುಳಿತವಳಿಗೆ ಏನೋ ಒಂದು ಥರಾ ಸಮಾಧಾನ. ಬರಿಯ ಕಾಲುಗಳಷ್ಟೇ ಅಲ್ಲ ಮನಸ್ಸು, ಹೃದಯ, ಆತ್ಮ ಎಲ್ಲದರ ಕಾವು ಇಳಿದಂತಹ ಅನುಭವ. ಯಾರೋ ಮೃದುವಾಗಿ ತಲೆ ನೇವರಿಸಿದಂತಹ ಭಾವ. ಮನಸ್ಸಿನಲ್ಲಿದ್ದ ಎಲ್ಲಾ ಗೊಂದಲಗಳನ್ನು ಮರೆತು ಹಿಂದೆಯಿದ್ದ ಮರವೊಂದಕ್ಕೆ ಒರಗಿದಳು. ಆಹಾ.. ಇದುವೇ ಸ್ವರ್ಗ.. ಕಣ್ಣುಮುಚ್ಚಿಕೊಂಡಳು.
ಲೇಖಾ ಒಬ್ಬ ಮನಃಶಾಸ್ತ್ರಜ್ಞೆ. ಶಿವಮೊಗ್ಗೆಯಲ್ಲಿ ಹುಟ್ಟಿ ಬೆಳೆದು ದೂರದ ಜರ್ಮನಿಯಲ್ಲಿ ಗಂಡ ರವಿಯೊಂದಿಗೆ ಜೀವನ ಸಾಗಿಸುತ್ತಿರುವ ಹುಡುಗಿ. ಮದುವೆಯಾದ ಏಳು ವ?ಗಳು ಏಳು ತಿಂಗಳುಗಳಂತೆ ಕಳೆದುಹೋಗಿದ್ದವು. ಮ್ಯೂನಿಚ್ನ ದೊಡ್ಡ ಗಲ್ಲಿಯೊಂದರ ಪುಟ್ಟ ಮನೆಯೊಂದರಲ್ಲಿ ಹಾಲು-ಜೇನು ಬೆರೆತಂತೆ ರವಿ-ಲೇಖೆಯರ ಸಂಸಾರ ಸಾಗುತ್ತಿತ್ತು. ಪ್ರತಿಷ್ಠಿತ ಖಾಸಗಿ ಕಂಪೆನಿಯೊಂದರಲ್ಲಿ ರವಿಯ ನೌಕರಿ. ಮದುವೆಗೆ ಮೊದಲು ಶಿವಮೊಗ್ಗೆಯ ಮಾನಸಿಕ ಚಿಕಿತ್ಸಾಲಯವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಳು. ಎ? ಜನ ಮನಶ್ಶಾಂತಿಯನ್ನು ಅರಸಿ ಬಂದವರನ್ನು ನೋಡಿದ್ದಳು. ಚಿಕಿತ್ಸೆಯನ್ನೂ ಮಾಡಿದ್ದಳು. ಯಾಕೆ ಈ ಜನ ಇ?ಂದು ಸೂಕ್ಷ್ಮವಾಗಿದ್ದಾರೆ. ಇಂತಹ ನಮ್ಮನ್ನು ಅಧಃಪತನಕ್ಕೆ ದೂಡುವ ಭಾವುಕತೆ ಬೇಕೇ? ವಾಸ್ತವವಾದಿಯಾಗಿ ಜೀವಿಸುವುದು ತುಂಬಾ ಒಳ್ಳೆಯದು. ಇವರೆಲ್ಲ ಯಾಕೆ ವಾಸ್ತವವಾದಿಗಳಾಗಿಲ್ಲ ಅನ್ನಿಸುತ್ತಿತ್ತು. ಹಿರಿಯ ವೈದ್ಯರೊಂದಿಗೆ ಹಾಗೆ ಹೇಳಿಕೊಂಡಾಗ ಅರವತ್ತರ ಆ ವೃದ್ಧ ಇಪ್ಪತ್ತೆರಡರ ಹುಡುಗಿಯ ಕೆನ್ನೆಯನ್ನು ಹಿಂಡಿ ನಕ್ಕಿದ್ದರು. ಆ ನಗುವಿನ ನೂರೆಂಟು ಅರ್ಥಗಳು, ಅದನ್ನು ಮೌನವಾಗಿ ಹಿಂಬಾಲಿಸಿದವು. ಏನೊಂದೂ ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಟ್ಟಿದ್ದಳು ಲೇಖಾ.
ಮುಂದೆ ಎರಡು ವರ್ಷಗಳ ನಂತರ ರವಿಯೊಡನೆ ಮದುವೆಯಾಗಿ ಮ್ಯೂನಿಚ್ಗೆ ಬಂದು ನೆಲೆಸಿ ಏಳು ವರ್ಷಗಳಾದವು. ನಾಲ್ಕು ವರ್ಷಗಳ ಕೆಳಗೆ ಪುಟ್ಟ ಊಷ್ಮಾ ಅವಳ ಮಡಿಲು ತುಂಬಿದ್ದಳು. ಇತ್ತೀಚೆಗೆ ಯಾಕೋ ರವಿಯ ನಡವಳಿಕೆ ಬದಲಾಗಿತ್ತು. ಮನಃಶಾಸ್ತ್ರವನ್ನು ಬಲ್ಲ ತನ್ನ ಸೂಕ್ಷ್ಮಮನಸ್ಸಿಗೆ ಏನೋ ಸೂಚನೆ ಸಿಗುತ್ತಿದ್ದರೂ, ಸ್ಥೂಲ ಮನಸ್ಸು ಅದನ್ನು ಒಪ್ಪಿಕೊಳ್ಳಲು ತಯಾರಿರಲಿಲ್ಲ. ತನ್ನ ವಸ್ತುವಿನಲ್ಲಿ ದೋ?ವನ್ನು ಯಾರು ತಾನೇ ಎಣಿಸಬಲ್ಲರು? ಊಷ್ಮಾಳಿಗೆ ನಾಲ್ಕು ವ? ತುಂಬುತ್ತಿದ್ದಂತೆ ಅಜ್ಜ ಅಜ್ಜಿಯ ಬಳಿಗೆ ಕಳುಹಿಸುವ ನಿರ್ಧಾರ ಮಾಡಿಬಿಟ್ಟ ರವಿ. “ತಾನು ಆದ? ಬೇಗ ಭಾರತಕ್ಕೆ ಮರಳುವ ವಿಚಾರವಿದೆ. ಹಾಗಾದಲ್ಲಿ ಮಗಳ ವಿದ್ಯಾಭ್ಯಾಸಕ್ಕೆ ತೊಂದರೆಯುಂಟಾಗಬಾರದು. ಈಗಲೇ ಒಳ್ಳೆಯ ಶಾಲೆಯಲ್ಲಿ ದಾಖಲಾತಿ ಸಿಕ್ಕರೆ ಅನುಕೂಲ” ಎಂದು ಅವನ ವಾದವಾಗಿತ್ತು. ಅವನೊಂದಿಗೆ ವಾದಿಸಲಾಗದೇ ಸೋತು ಕೊನೆಗೆ ಒಪ್ಪಿದ್ದಳು. ಮಗುವನ್ನು ನಾಸಿಕ್ನಲ್ಲಿದ್ದ ಅತ್ತೆ, ಮಾವನ ಕಡೆಗೆ ಕಳುಹಿಸುವುದು, ಅನಂತರ ಪಂಚಗನಿಯಲ್ಲಿರುವ ಬೋರ್ಡಿಂಗ್ ಸ್ಕೂಲಿಗೆ ಸೇರಿಸುವುದೆಂಬ ತೀರ್ಮಾನವಾಯಿತು.
ಭಾರತಕ್ಕೆ ಬಂದು ಮಗುವನ್ನು ಬಿಟ್ಟು ಜರ್ಮನಿಗೆ ಮರಳಿದ ನಂತರ ಎಲ್ಲಿಲ್ಲದ ಒಂಟಿತನ ಕಾಡಲಾರಂಭಿಸಿತ್ತು. ಇತ್ತೀಚೆಗೆ ರವಿ ಯಾಕೋ ಸಮಯಕ್ಕೆ ಸರಿಯಾಗಿ ಮನೆಗೆ ಬರುತ್ತಿರಲಿಲ್ಲ. ಏನೇನೋ ಊಹಾಪೋಹಗಳು. ಹಾರಾಡುತ್ತಿದ್ದ ಮನಸ್ಸಿಗೆ ಕಡಿವಾಣಹಾಕಿ ನಿಲ್ಲಿಸುವಷ್ಟರಲ್ಲಿ ಸಾಕು ಸಾಕಾಗುತ್ತಿತ್ತು. ಆಗಾಗ ಮನೆಗೆ ಭೇಟಿ ನೀಡುತ್ತಿದ್ದ ಬೇರೆ ಭಾರತೀಯ ದಂಪತಿಗಳೊಡನೆ ಕಾಲ ಕಳೆದ ದಿನ ಮಾತ್ರ ತುಸು ಹಾಯೆನಿಸುತ್ತಿತ್ತು. ಹಾಗೆ ಬರುತ್ತಿದ್ದ ದಂಪತಿಗಳಲ್ಲಿ ಇಂದರ್-ಶಚಿ ದಂಪತಿ ತುಂಬಾ ಆತ್ಮೀಯರಾದರು. ಶಚಿ ಬೆಂಗಳೂರಿನ ಹುಡುಗಿಯಾದರೆ, ಇಂದರ್ ದೆಹಲಿ ಮೂಲದವನು. ಇಬ್ಬರೂ ಪ್ರೀತಿಸಿ ಮದುವೆಯಾದವರು. “ನಿಜವಾಗಿಯೂ ಇಂದ್ರ- ಶಚಿಯರು ನೀವು. ಸ್ವರ್ಗದಲ್ಲಿಯೇ ನಿಮ್ಮ ಮದುವೆ ನಿರ್ಧಾರ ಆಗಿತ್ತು” ಎಂದು ಅವರಿಬ್ಬರಿಗೆ ಅದೆ? ಸರಿ ಹೇಳಿದ್ದಾಳೋ ಲೇಖಾ. ಅವರಿಬ್ಬರೂ ಆಗಾಗ ಮನೆಗೆ ಬಂದು ಹೋಗುತ್ತಿದ್ದರು. ಶಚಿ ರವಿಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ, ಇಂದರ್ ಇನ್ನೂ ಕೆಲಸವನ್ನು ಹುಡುಕುತ್ತಿದ್ದ. ಇತ್ತೀಚೆಗೆ ಯಾಕೋ ರವಿ ಅವರನ್ನು ಪದೇಪದೇ ಮನೆಗೆ ಆಹ್ವಾನಿಸುತ್ತಿದ್ದ. ಸ್ವಲ್ಪ ಅಸಹಜ ಎನಿಸಿದರೂ, ತನಗೂ ಅವರ ಆಗಮನ ಸಂತಸ ತರುತ್ತಿದ್ದದ್ದರಿಂದ ಸುಮ್ಮನಿದ್ದಳು.
ಒಂದು ದಿನ ರಾತ್ರಿ ಊಟದ ನಂತರ ಮಾತನಾಡುತ್ತಾ ಕುಳಿತರು. ತಡರಾತ್ರಿಯಾದರೂ ಮನೆಗೆ ತೆರಳುವ ಸೂಚನೆ ತೋರಲಿಲ್ಲ ಅತಿಥಿಗಳು. “ಒಂದು ಲಾಂಗ್ ಡ್ರೈವ್ಗೆ ಹೋಗಿಬರೋಣ್ವಾ” ಎಂದು ಎದ್ದು ನಿಂತ ಗಂಡನನ್ನು ಮೌನವಾಗಿ ಹಿಂಬಾಲಿಸಿದಳು. ಗಂಡ ಕಾರಿನ ಬಾಗಿಲು ತೆಗೆಯುತ್ತಿದ್ದಂತೆ ಮುಂದೆ ಹೋಗಿ ಕುಳಿತ ಶಚಿಯನ್ನು ಪ್ರಶ್ನಾರ್ಥಕವಾಗಿ ನೋಡಿದಳು. ಆದರೂ ವಿಷಯವನ್ನು ಬೆಳೆಸಲು ಇಷ್ಟವಿಲ್ಲದೇ ಸುಮ್ಮನಾದಳು. ಹಿಂದೆ ಕುಳಿತ ಇಂದರ್ನೊಂದಿಗೆ ಸಹಜವೆಂಬಂತೆ ಮಾತಿಗಿಳಿದಳು. ತುಸು ಹೊತ್ತಿನಲ್ಲಿಯೇ ಐ?ರಾಮಿ ಹೊಟೇಲ್ ಒಂದರ ಮುಂಭಾಗದಲ್ಲಿ ಕಾರು ನಿಂತಿತ್ತು. ಮೊದಲು ಕೆಳಗಿಳಿದ ಶಚಿ, ರವಿಯನ್ನು ತಬ್ಬಿಕೊಂಡು ನಿಂತಿದ್ದನ್ನು ನೋಡಿ ಕಸಿವಿಸಿ ಲೇಖಾಳ ಮನಸ್ಸಿನಲ್ಲಿ. ಎಲ್ಲರೂ ಹೊಟೇಲ್ನಲ್ಲಿ ಪ್ರವೇಶಿಸುತ್ತಿದ್ದಂತೆ, ರಿಸಪ್ಷನ್ನಲ್ಲಿ ರೂಮ್ಗಳ ಬೀಗ ಪಡೆದ ರವಿ, ಒಂದು ಬೀಗದ ಕೈಯನ್ನು ಇಂದರ್ನ ಕೈಯಲ್ಲಿಟ್ಟು “ಎಂಜಾಯ್” ಎನ್ನುತ್ತಾ ಲೇಖಾಳ ಕಣ್ಣು ತಪ್ಪಿಸಿ ಅಲ್ಲಿಂದ ಹೊರಟ. ಅವನನ್ನು ತಬ್ಬಿಕೊಂಡು ಶಚಿ. ಒಂದು ಕ್ಷಣ ಕಣ್ಣು ಕತ್ತಲಿಟ್ಟಿತು. ಬವಳಿ ಬಂದಂತಾಗಿ ಅಲ್ಲಿಯೇ ಕುಸಿದು ಕುಳಿತಳು. ರವೀ.. ಎಂಬ ಕೂಗು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿತು. ಇಂದರ್ ಕೈ ಹಿಡಿದು ರೂಮಿಗೆ ಕರೆದುಕೊಂಡು ಬರುವವರೆಗೆ ಅದು ಹೇಗೋ ಸಂಭಾಳಿಸಿಕೊಂಡವಳು ರೂಮಿನೊಳಗೆ ಬಂದ ಕೂಡಲೇ ಮಂಚದ ಮೇಲೆ ಬಿದ್ದು ಜೋರಾಗಿ ಅಳತೊಡಗಿದಳು. ಬೆನ್ನ ಮೇಲೆ ಮೃದುವಾದ ಕೈಯ ಸ್ಪರ್ಶ. ಹಾವು ಹರಿದಂತಾಯಿತು. ಗಕ್ಕೆಂದು ಎದ್ದು ಕುಳಿತಳು.
“ಇಂದರ್ ದಯವಿಟ್ಟು ಬೇಡ” ಕೈಮುಗಿದವಳ ಕಣ್ಣಲ್ಲಿ ನೀರು ಹರಿಯುತ್ತಿತ್ತು.
“ರಿಲ್ಯಾಕ್ಸ್ ಪ್ಲೀಸ್” ಅವನ ಕೈಯಲ್ಲಿ ನೀರು ತುಂಬಿದ ಗ್ಲಾಸ್. ಗಟಗಟನೇ ನೀರು ಕುಡಿದಳು. “ಆರಾಮ್ ಆಗಿ ಮಲಗಿ. ಹೆದರಬೇಡಿ. ನಾನು ಇಲ್ಲೇ ಮಲಗುತ್ತೇನೆ” ಎಂದು ಸೋಫಾದ ಮೇಲೆ ಉರುಳಿದವನನ್ನು ನೋಡಿ “ಪ್ಲೀಸ್ ನಾನು ಮನೆಗೆ ಹೋಗಬೇಕು. ಕಾಂಟ್ ಸ್ಟೇ ಹಿಯರ್” ಎಂದಳು. ಅವಳ ಹತ್ತಿರ ಬಂದು ಭುಜದ ಮೇಲೆ ಕೈಯಿಟ್ಟು ಮೃದುವಾಗಿ ಒತ್ತಿದ. ಆ ಸ್ಪರ್ಶದಲ್ಲಿ ಆಸೆಯಿರಲಿಲ್ಲ. ಬದಲಾಗಿ ಅದೇನೋ ಒತ್ತಾಸೆ, ಅಭಯವನ್ನು ಕೊಟ್ಟಂತಿತ್ತು.
“ನಡೆಯಿರಿ” ಎಂದು ಅವಳಿಗೆ ಹೇಳಿ ರೂಮಿನ ಬಾಗಿಲು ತೆರೆದ. ಮನೆ ತಲಪುವವರೆಗೂ ಇಬ್ಬರೂ ಮಾತನಾಡಲಿಲ್ಲ. ಅವಳನ್ನು ಬಿಟ್ಟು ಬಾಗಿಲು ಭದ್ರಪಡಿಸಿಕೊಳ್ಳಲು ಹೇಳಿ ಹೊರಟುಬಿಟ್ಟ.
ಗರಬಡಿದವಳಂತೆ ಕುಳಿತಿದ್ದಳು ಅದೆ? ಹೊತ್ತು. ದೇವರ ಕಟ್ಟೆಯ ಮೇಲೆ ಕುಳಿತು ಮಂತ್ರಪಠಣ ಮಾಡುತ್ತಿದ್ದ ತಾತ ಕಣ್ಣ ಮುಂದೆ ಬಂದುಹೋದರು. ಊರಿನ ಜನಕ್ಕೆಲ್ಲ ಬುದ್ಧಿಹೇಳುತ್ತಿದ್ದ ಹಿರಿಯ ಜೀವ. ತನ್ನೊಡಲಿನಲ್ಲಿಯೂ ಸಂಸ್ಕಾರವನ್ನು ತುಂಬಿದವರು ಅವರೇ. ಚಿಕ್ಕ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡ ತನ್ನ ತಾಯಿ ಯೋಗಿನಿಯಂತೆ ಮಕ್ಕಳಿಗಾಗಿ ಜೀವನ ತೇಯ್ದ ದೃಶ್ಯ ಕಣ್ಣಿಗೆ ಕಟ್ಟಿತ್ತು. ತಮ್ಮ ಮದುವೆಯಾಗಿ ಮನೆಯಳಿಯನಾಗಿ ದೂರದ ಮುಂಬಯಿ ಸೇರಿಕೊಂಡಾಗಲೂ ತಾಯಿ ಸಂತೋ?ದಿಂದಲೇ ಆಶೀರ್ವಾದ ಮಾಡಿ ಕಳುಹಿಸಿದ್ದರು. ಅಳಿಯನೆಂದರೆ ಅತ್ಯಂತ ಪ್ರೀತಿ, ಅಭಿಮಾನ ಆಕೆಗೆ. ಮತ್ತೆ ತಲೆತಿರುಗಿದಂತಾಯಿತು. ಎಲ್ಲೋ ಕೇಳಿದ್ದ, ’ವೈಫ್ ಸ್ವಾಪಿಂಗ್’ ಅನ್ನೋ ಭೂತ ತನ್ನ ಮನೆ ಬಾಗಿಲಿಗೇ ವಕ್ಕರಿಸಿದ ರೀತಿ ಮೈಯಲ್ಲಿ ನಡುಕ ಹುಟ್ಟಿಸಿತು. ಛೀ ಥೂ ಎನ್ನಿಸಿತು. ಜೋರಾಗಿ ಅಳಬೇಕೆನಿಸಿತು. ಬಿಕ್ಕಿಬಿಕ್ಕಿ ಅಳಲಾರಂಭಿಸಿದಳು. ಯಾವಾಗಲೋ ನಿದ್ರೆ ಆವರಿಸಿಕೊಂಡಿತ್ತು.
ಬೆಳಗ್ಗೆ ಇನ್ನೊಂದು ಬೀಗದ ಕೈ ಬಳಸಿ ರವಿ ಮನೆಯೊಳಗೆ ಬಂದಾಗಲೇ ಎಚ್ಚರ. ರವಿಯ ಮುಖದಲ್ಲಿ ಯಾವುದೇ ಭಾವನೆಗಳಿಲ್ಲ. ಹೋಗಿ ಅವನ ಕೆನ್ನೆಗೆ ರಪರಪನೆ ಬಾರಿಸಬೇಕೆಂದುಕೊಂಡಳು. ’ಊಹ್ಞೂಂ.. ಸಾಧ್ಯವಿಲ್ಲ.. ಅವನನ್ನು ಸ್ಪರ್ಶಿಸುವುದೂ ನನ್ನಿಂದ ಸಾಧ್ಯವಿಲ್ಲ’ ಎಂದುಕೊಂಡಳು. ಹಾಡನ್ನು ಗುನುಗುತ್ತಾ ಕಿರುನಗೆ ಬೀರುತ್ತಿದ್ದವನನ್ನು ನೋಡಿ ಮೈಯೆಲ್ಲಾ ಹೊತ್ತಿ ಉರಿಯಿತು.
ಆ ದಿನ ರಾತ್ರಿ ಮತ್ತದೇ ಪುನರಾವರ್ತನೆ. ಮನೆಯಲ್ಲಿಯೇ ಶಚಿಯನ್ನು ಬೆಡ್ರೂಂಗೆ ಕರೆದುಕೊಂಡು ಹೋಗುತ್ತಿದ್ದವನನ್ನು ಅಡ್ಡಗಟ್ಟಿದಳು. ಮೊದಲೇ ಮತ್ತಿನಲ್ಲಿದ್ದ ರವಿ ತಳ್ಳಿದ ರಭಸಕ್ಕೆ ಕೆಳಗೆ ಬಿದ್ದಳು. ಸುಧಾರಿಸಿಕೊಳ್ಳುವ?ರಲ್ಲಿ ರೂಮಿನ ಬಾಗಿಲು ಹಾಕಿ ಆಗಿತ್ತು. ಆ ನೆಟ್ಟಿರುಳಿನಲ್ಲಿ ಮನೆ ಬಿಟ್ಟು ಹೊರಟಳು. ಗಮ್ಯವಿಲ್ಲದ ನಡುಗೆ. ಅರ್ಧ ಗಂಟೆ ನಡೆದ ಮೇಲೆ ಕಾಲುಗಳಲ್ಲಿ ಬಲ ಉಡುಗಿದಂತಾಯಿತು. ಅಲ್ಲಿಯೇ ಕುಸಿದು ಕುಳಿತಳು.
ಸುಯ್ಯನೇ ಬೀಸಿದ ಶೀತಗಾಳಿಗೆ ಹೊಟ್ಟೆಯಲ್ಲಿ ನಡುಕ. ಅ?ರಲ್ಲಿ ಕಣ್ಣ ಮುಂದೆ ಹಬೆಯಾಡುತ್ತಿದ್ದ ಕಾಫಿ.. ಮುಖ ಮೇಲಕ್ಕೆತ್ತಿದಳು. ಬೆಚ್ಚನೆಯ ಉಲ್ಲನ್ ಕೋಟನ್ನು ಅವಳಿಗೆ ಹೊದಿಸಿದ ಇಂದರ್. ಮೃದುವಾಗಿ ಹಸ್ತವನ್ನು ಒತ್ತಿದ. ಏನೋ ಆಶ್ವಾಸನೆ. ಮರು ಮಾತನಾಡದೆ ಕಾಫಿ ಕುಡಿದಳು. ಒತ್ತಾಯಪೂರ್ವಕವಾಗಿ ಅವಳನ್ನು ತನ್ನ ಮನೆಗೆ ಕರೆದೊಯ್ದ. ರವಿ ಹಾಗೂ ಶಚಿಯ ಸಂಬಂಧ ತುಂಬಾ ದಿನದಿಂದ ಇದೆಯೆಂದು ಹೇಳಿದ. ಆಕ್ಷೇಪಿಸಿದ್ದಕ್ಕೆ ತನಗೆ ಈ ಉಡುಗೊರೆಯೆಂದ. ಕೆಲಸವಿಲ್ಲದೆ ಈ ಪರದೇಶದಲ್ಲಿ ಎಲ್ಲದಕ್ಕೂ ಅವಳ ಹಣವನ್ನೇ ಅವಲಂಬಿಸುವ ಅನಿವಾರ್ಯತೆ ತನ್ನನ್ನು ಕಟ್ಟಿಹಾಕಿದೆ ಎಂದೂ ಹೇಳಿಕೊಂಡ.
ಈಗವಳು ಮೌನಿ. ತಾನಾದರೂ ಏನು ಮಾಡುವ ಹಾಗಿದ್ದಾಳೆ? ಮಗುವಿನ ನೆನಪು ಕಾಡಿತು. ಊರಿಗೆ ಹೋಗಲೂ ಹಣವಿಲ್ಲ ತನ್ನ ಬಳಿ. ಎಲ್ಲಾದರೂ ಕೆಲಸ ಮಾಡಿ ಊರಿಗೆ ಹೋಗಲು ಹಣ ಕೂಡಿಸಿಕೊಳ್ಳುವಂತೆ ಹೇಳಿದ ಇಂದರ್. ಮೌನಿಯವಳು. ಬೆಳಗು ಹರಿಯುವವರೆಗೆ ಒಳಗೆ ಹೋಗಿ ಮಲಗಿಕೊಳ್ಳುವಂತೆ ಹೇಳಿದ ಅವನು ತಾನು ಹಾಲಿನಲ್ಲಿಯೇ ಉರುಳಿಕೊಂಡ. ಆ ರಾತ್ರಿ ಕಳೆಯಿತು.
ಅಂತಹ ಅನೇಕ ರಾತ್ರಿಗಳೂ…
ಗಂಡನಿಗೆ ತಿಳಿಯದಂತೆ ಕೆಫೆಯೊಂದರಲ್ಲಿ ಕೆಲಸಮಾಡುತ್ತಿದ್ದಾಳೆ. ಮಗಳನ್ನು ಕೂಡಿಕೊಳ್ಳಲು ಪುಟ್ಟ ಗಂಟು ಕಟ್ಟಿಕೊಳ್ಳುತ್ತಿದ್ದಾಳೆ. ರವಿ ಶಚಿ ಜೊತೆಯಾದಾಗಲೆಲ್ಲ ಇಂದರ್ ಲೇಖಾಳ ಜೊತೆ.
ಮುಕ್ತ ಮನಸ್ಸಿನಿಂದ ಹರಟುತ್ತಿದ್ದರು. ಬಾಲ್ಯಸಖನೊಬ್ಬ ಸಿಕ್ಕಂತಾಗಿತ್ತು. ಅವಳ ಮೌನಕ್ಕೆ ಅವನು ಧ್ವನಿಯಾಗಿದ್ದ. ಅವಳ ಮಾತಿಗೆ ಶಬ್ದವಾಗಿದ್ದ.
ಕೊನೆಗೊ ಆ ದಿನ ಬಂದೇಬಿಟ್ಟಿತು. ಅವಳು ಊರಿಗೆ ಹೋಗಲು ಎಲ್ಲಾ ಸಿದ್ಧತೆಗಳೂ ಆಗಿದ್ದವು. ರವಿಗೆ ಒಂದಿನಿತೂ ಸುಳಿವು ಸಿಗದಂತೆ ಇಂದರ್ ಎಲ್ಲ ವ್ಯವಸ್ಥೆಗಳನ್ನೂ ಮಾಡಿದ್ದ. ಅವತ್ತೂ ಮತ್ತದೇ ಕಾಳರಾತ್ರಿ. ಸಂಪೂರ್ಣವಾಗಿ ಮದಿರೆಯ ಮತ್ತಿನಲ್ಲಿದ್ದ ಗಂಡ ಶಚಿಯೊಂದಿಗೆ ಕೋಣೆ ಸೇರಿಕೊಂಡಿದ್ದ. ಇಂದರ್ನ ಸಹಾಯದೊಂದಿಗೆ ತನ್ನೆಲ್ಲ ಸಾಮಾನುಗಳನ್ನು ಪ್ಯಾಕ್ ಮಾಡಿಕೊಂಡಳು. ಇಬ್ಬರೂ ಇಂದರ್ನ ಮನೆಗೆ ಬಂದರು. ಬೆಳಗಿನ ಜಾವ ಫ್ಲೈಟ್. ಲಗುಬಗೆಯಿಂದ ಸ್ವಲ್ಪ ಅಡುಗೆಯನ್ನು ಸಿದ್ಧಪಡಿಸಿದಳು. ಸ್ನಾನ ಮಾಡಿ ಬೇಗಬೇಗ ರೆಡಿಯಾಗುತ್ತೇನೆಂದು ಇಂದರ್ಗೆ ಹೇಳಿ ಹೊರಟಳು. ಶವರ್ ಕೆಳಗೆ ನಿಂತವಳಿಗೆ ಏನೋ ಸದ್ದಾದಂತಾಗಿ ತಿರುಗಿ ನೋಡಿದರೆ ಇಂದರ್.. ಬಚ್ಚಲಿನ ಬಾಗಿಲು ತೆಗೆದು ಒಳಗೆ ಬಂದಿದ್ದಾನೆ. ಒಮ್ಮೆ ಅವಳನ್ನು ಹಾಗೆ ನೋಡುವ ಬಯಕೆಯಂತೆ. ಮೈಮೇಲೆ ನೀರಿನ ಬದಲು ಕುದಿಯುವ ಎಣ್ಣೆ ಬಿದ್ದಂತಾಯಿತು. ಸಾವರಿಸಿಕೊಂಡು ಬಟ್ಟೆ ಸುತ್ತಿಕೊಂಡು ಹೊರಗೆ ಓಡಿ ಬಂದಳು.
ಎದೆಯಲ್ಲಿ ಮಡುಗಟ್ಟಿದ್ದ ನೋವು ಹನಿಹನಿಯಾಗಿ ಕಣ್ಣಿನಿಂದ ಹರಿದು ಬಂತು. ಆದರೆ ವಿಧಿಯಿಲ್ಲ ಸಾವರಿಸಿಕೊಂಡು ತಯಾರಾಗಿ ತನ್ನ ಬ್ಯಾಗ್ ಎತ್ತಿಕೊಂಡಳು. ಅಲ್ಲಿಯೇ ನಿಂತಿದ್ದ ಇಂದರ್ನನ್ನು ತಿರುಗಿಯೂ ನೋಡಲಿಲ್ಲ. ಟ್ಯಾಕ್ಸಿ ಏರಿ ಏರ್ಪೋರ್ಟ್ಗೆ ಬಂದಳು. ನಿಧಾನವಾಗಿ ಸಾಲುಗಳಲ್ಲಿ ಸರಿದು ಹೋದಳು. ತಲೆಯಲ್ಲಿ ಅದೇ ಮೊರೆತ. ತಾನು ಮನು?ರನ್ನು ಗುರುತಿಸುವಲ್ಲಿ ತಪ್ಪುಮಾಡಿಬಿಟ್ಟೆ. ಹೊದೆದುಕೊಂಡ ಶಾಲನ್ನು ಮತ್ತ? ಗಟ್ಟಿಯಾಗಿ ಸುತ್ತಿಕೊಂಡಳು, ಒಂದು ಚೂರೂ ಮೈ ಕಾಣದಂತೆ. ಅಕ್ಕಪಕ್ಕದವರನ್ನು ನೋಡಿದಳು.
ಊಹ್ಞೂಂ.. ಯಾರೂ ನೋಡುತ್ತಿಲ್ಲ. ಕಣ್ಣು ಮುಚ್ಚಿಕೊಂಡವು. ಆಕಾಶದಲ್ಲಿ ತೇಲಿದ್ದೊಂದೇ ಗೊತ್ತು. ದಣಿದ ಆತ್ಮ ಪವಡಿಸಿತ್ತು. ತಾಯ್ನೆಲದ ಮಣ್ಣಿನ ಸುವಾಸನೆ ಮೂಗಿಗೆ ಬಡಿದಾಗಲೇ ಕಣ್ಣು ತೆರೆದದ್ದು. ಅಳು ಬಂತು. ಮಗಳನ್ನು ನೋಡುವ ತವಕ. ಅವಳೀಗ ವಾಸ್ತವವಾದಿ. ಅಳಕೂಡದು. ಲಗುಬಗೆಯಿಂದ ಹೆಜ್ಜೆಹಾಕಿದಳು. ಮುಂಬಯಿಯಿಂದ ನಾಸಿಕ್ ತುಂಬಾ ದೂರ ಅನ್ನಿಸತೊಡಗಿತು. ಮನೆಯ ಮುಂದೆ ಬಂದಿಳಿದಾಗ ಅಬ್ಬಾ ಗೆದ್ದೆ ಅನ್ನಿಸದಿರಲಿಲ್ಲ. ಬಾಗಿಲು ತೆರೆದೇ ಇತ್ತು. ಒಳಗಡೆ ಹೆಜ್ಜೆ ಇಡುವಾಗ ಎದೆಯಲ್ಲಿ ಏನೋ ಅಳುಕು. ಅತ್ತೆ ಮಾವ ಕೇಳುವ ಪ್ರಶ್ನೆಗಳಿಗೆ ಏನೆಂದು ಉತ್ತರಿಸುವುದು ಎಂಬ ಆತಂಕ. ಅ?ರಲ್ಲಿ ಪುಟ್ಟ ಊ?ಳ ಮುಖ ಕಂಡು ಚಿಂತೆಯೆಲ್ಲ ಬಿಸಿಲಿಗೆ ಕರಗಿದ ಮಂಜಿನಂತಾಯಿತು. ಓಡಿಬಂದ ಮಗಳನ್ನು ತಬ್ಬಿಕೊಂಡು ಮುದ್ದಿಸಿದಳು. ಅತ್ತೆ, ಮಾವನಿಗೆ ನಮಸ್ಕರಿಸಿದಳು. ಅಷ್ಟರಲ್ಲಿಯಾಗಲೇ ಇಂದರ್ನಿಂದ ವಿ?ಯವನ್ನು ತಿಳಿದುಕೊಂಡಿದ್ದ ರವಿ, ಅವರಿಗೆ ಮಗುವನ್ನು ನೋಡಲು ಲೇಖಾ ಬರುತ್ತಿರುವುದಾಗಿಯೂ, ತಾನು ರಜೆಯಿಲ್ಲದ ಕಾರಣ ಬರಲಾಗಲಿಲ್ಲವೆಂದೂ ಫೋನ್ ಮಾಡಿ ತಿಳಿಸಿದ್ದ. ಅಂತಹ ಪ್ರಸಂಗದಲ್ಲಿಯೂ ಅವನಿಗೆ ಮನದಲ್ಲಿಯೇ ಧನ್ಯವಾದಗಳನ್ನು ತಿಳಿಸಿದಳು.
ಮಗುವನ್ನು ಪಂಚಗನಿಯಲ್ಲಿ ಬೋರ್ಡಿಂಗ್ ಸ್ಕೂಲ್ನಲ್ಲಿ ಎಡ್ಮಿ?ನ್ ಮಾಡಿಸಲಾಗಿತ್ತು. ತಾನೇ ಮಗುವನ್ನು ಅಲ್ಲಿ ಬಿಟ್ಟು, ಒಂದೆರಡು ದಿನ ಅಕ್ಕಪಕ್ಕದ ತೀರ್ಥಕ್ಷೇತ್ರಗಳನ್ನು ನೋಡಿಕೊಂಡು ಬರುವುದಾಗಿ ಹೊರಟಳು.
ಮಗುವನ್ನು ಬಿಟ್ಟು ಮೊದಲಿಗೆ ಬಂದಿದ್ದು ತ್ರ್ಯಂಬಕೇಶ್ವರಕ್ಕೆ. ಬ್ರಹ್ಮಗಿರಿಯ ತಪ್ಪಲಲ್ಲಿ ಮುಕ್ಕಣ್ಣನಾಗಿ ನೆಲೆಸಿದ ಶಿವನಿಂದಾಗಿ ಕ್ಷೇತ್ರಕ್ಕೆ ತ್ರ್ಯಂಬಕೇಶ್ವರ ಎಂಬ ಹೆಸರು. ಅತ್ಯಂತ ಸುಂದರ ಸ್ಥಾನ. ದಕ್ಷಿಣಗಂಗೆಯೆಂದು ಕರೆಸಿಕೊಳ್ಳುವ ಗೋದಾವರಿ ನದಿ ಹುಟ್ಟಿದ್ದು ಇಲ್ಲಿಯೇ. ಆವತ್ತು ಸೋಮವಾರ. ತ್ರ್ಯಂಬಕೇಶ್ವರನಿಗೆ ವಿಶೇ? ಅಲಂಕಾರ. ಚಿನ್ನದ ಕಿರೀಟದಿಂದ ದೇವರನ್ನು ಅಲಂಕರಿಸಲಾಗುತ್ತದೆ. ಪಂಚಮುಖದಿಂದ ಅಲಂಕರಿಸಿ ಮೆರವಣಿಗೆ ಮಾಡಲಾಗುತ್ತದೆ. ಸ್ವತಃ ಶಿವನೇ ಬಂದು ಸ್ನಾನ ಮಾಡುವನು ಎಂಬ ಪ್ರತೀತಿ ಇರುವ ಪುಷ್ಕರಣಿಯಲ್ಲಿ ಮಿಂದು, ಭಕ್ತಾದಿಗಳು ಶಿವನ ದರ್ಶನ ಪಡೆಯುತ್ತಾರೆ. ಕೊಳದಲ್ಲಿ ಇಳಿಯುತ್ತಿದ್ದಂತೆಯೇ ಧನ್ಯತಾಭಾವ ಲೇಖಾಳ ಮನಸ್ಸನ್ನು ಆವರಿಸಿತು. ಮನಸ್ಸಿನ ಗೊಂದಲಗಳು ದೂರವಾದಂತೆ ಅನ್ನಿಸಿತು. ದೂರದಲ್ಲಿ ಕಾಣುತ್ತಿದ್ದ ಪರ್ವತಗಳ ಸಾಲುಗಳನ್ನು ನೋಡುತ್ತಾ ಕುಳಿತಳು. ದೇವಸ್ಥಾನದ ಪೌರಾಣಿಕ ಹಿನ್ನೆಲೆಯನ್ನು ಹೇಳುತ್ತಿದ್ದ ಗೈಡಿನ ಮಾತುಗಳನ್ನು ಗಮನಕೊಟ್ಟು ಆಲಿಸಿದಳು.
ಗೌತಮನ ಆಶ್ರಮ ಪಾರಿಯಾತ್ರ ಪರ್ವತದ ಹತ್ತಿರ ಇತ್ತೆಂದು ಹೇಳಲಾಗಿದೆ. ಅಲ್ಲಿ ಈತ ಅರುವತ್ತು ಸಾವಿರ ವ?ಗಳವರೆಗೆ ತಪಸ್ಸು ಮಾಡಿದನೆಂದು ಪ್ರತೀತಿ. ಆಗ ಅಲ್ಲಿ ಪ್ರತ್ಯಕ್ಷನಾದ ಯಮನನ್ನು ಪಿತೃಋಣದಿಂದ ಮುಕ್ತನಾಗುವ ಬಗೆಯನ್ನು ವಿವರಿಸುವಂತೆ ಈತ ಕೇಳಿಕೊಂಡ. ಸತ್ಯ, ಧರ್ಮ, ತಪಸ್ಸು ಮತ್ತು ಶುಚಿತ್ವಗಳನ್ನವಲಂಬಿಸಿ ತಂದೆತಾಯಿಗಳ ಸೇವೆ ಮಾಡಿದರೆ ಪವಿತ್ರಲೋಕ ಪ್ರಾಪ್ತಿಯಾಗುತ್ತದೆಂದು ಯಮ ಈತನಿಗೆ ಉತ್ತರವಿತ್ತ. ಆಕಸ್ಮಿಕವಾಗಿ ತನ್ನ ಕಾರಣದಿಂದ ಹಸುವೊಂದು ಮರಣಹೊಂದಿದ್ದರಿಂದ ಅತ್ಯಂತ ದುಃಖಿತರಾದ ಗೌತಮರು ಈ ಕ್ಷೇತ್ರದಲ್ಲಿಯೇ ಗೋಹತ್ಯಾದೋ?ವನ್ನು ನಿವಾರಿಸಿಕೊಳ್ಳುತ್ತಾರಂತೆ. ಹಂ.. ತಾನೂ ಇಲ್ಲಿ ಬಂದಿರುವುದು ಯಾವುದೋ ದೋ?ದ ನಿವಾರಣೆಗಾಗಿ. ಲೇಖಾಳ ಮನಸ್ಸಿನಲ್ಲಿ ಏನೋ ಕೋಲಾಹಲ. ಪೂಜೆ, ಊಟಗಳ ನಂತರ ಸಮೀಪದ ಉಳಿದ ಪ್ರೇಕ್ಷಣೀಯ ಸ್ಥಳಗಳ ಬಗ್ಗೆ ವಿಚಾರಿಸಿದಳು.
ಗೈಡಿನ ಸಲಹೆಯಂತೆ ಅಲ್ಲಿಯೇ ಒಂದೆರಡು ಗಂಟೆಗಳ ದೂರದಲ್ಲಿದ್ದ ಒಂದು ಹೋಂಸ್ಟೇಯಲ್ಲಿ ಕೆಲದಿನಗಳ ಕಾಲ ಉಳಿದುಕೊಳ್ಳುವ ವಿಚಾರ ಮಾಡಿದಳು.
ಅದೊಂದು ಸುಂದರವಾದ ಹಳೆಯ ಕಾಲದ ಮನೆ. ಮಕ್ಕಳು ಪರದೇಶಕ್ಕೆ ಹೋದ ಕಾರಣದಿಂದ ಒಂಟಿತನವನ್ನು ಕಳೆಯುವುದಕ್ಕೋಸ್ಕರ ಆ ವೃದ್ಧ ದಂಪತಿ ತಮ್ಮ ಮನೆಯನ್ನು ಹೋಂಸ್ಟೇಯಾಗಿ ಪರಿವರ್ತಿಸಿದ್ದರು. ಆದಾಯದ ಮೂಲವೂ ಅದು. ಲೇಖಾಳನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿದರು. ಮನೆ, ಸುತ್ತಲಿನ ಜಾಗವನ್ನೆಲ್ಲ ತೋರಿಸಿದರು. ಶಾಂತವಾದ ಪರಿಸರದಲ್ಲಿ, ಪರ್ವತದ ತಪ್ಪಲಿನಲ್ಲಿ, ಮನೆಯಿಂದ ತುಸು ದೂರದಲ್ಲಿದ್ದ ಪುಟ್ಟ ಔಟ್ಹೌಸಿನಲ್ಲಿ ಇರುವ ಆಸೆ ವ್ಯಕ್ತಪಡಿಸಿದಳು. ಅದಕ್ಕೆ ತಕ್ಕಂತೆ ಅವಳಿಗೆ ಎಲ್ಲಾ ಅನುಕೂಲಗಳನ್ನು ಮಾಡಿಕೊಟ್ಟರು. ಆ ಸುಂದರವಾದ ವಾತಾವರಣದಲ್ಲಿ, ಪುಟ್ಟ ಕೊಠಡಿಯಲ್ಲಿ ತನ್ನ ಮನದ ತಾಪವನ್ನು ತೊಳೆದುಕೊಳ್ಳುವ ಆಸೆ ಲೇಖಾಳ ಮನದಲ್ಲಿ.
ಗೌತಮರ ಆಶ್ರಮ ಇದ್ದಿರಬಹುದಾದ, ಅಹಲ್ಯೆಯ ಹೆಜ್ಜೆಗುರುತುಗಳು ಮೂಡಿರಬಹುದಾದ ಆ ನೆಲದ ಮೇಲೆ ನಿಧಾನವಾಗಿ ಹೆಜ್ಜೆ ಊರಿದಳು ಲೇಖಾ. ಮೈ ಜುಂ ಎಂದಿತು. ಅಹಲ್ಯೆಯ ನೆನಪಾಗುತ್ತಿದ್ದಂತೆ ಮನಸ್ಸು ಅವ್ಯಕ್ತ ನೋವಿನಿಂದ ತುಂಬಿ ಹೋಯಿತು. ಪಾಪ, ಆ ಹೆಣ್ಣುಮಗಳು ತನ್ನದಲ್ಲದ ತಪ್ಪಿಗೆ ತಾನು ಬಲಿಯಾಗುತ್ತಿರುವುದರ ಅರಿವಿಲ್ಲದೇ ತಪ್ಪು ಹೆಜ್ಜೆ ಇಟ್ಟುಬಿಟ್ಟಳು. ಅದೆ? ಕಾಲ ಶಿಲೆಯಾಗಿದ್ದರೂ ಅವಳ ಪಾಪ ಕರಗಲಿಲ್ಲ. ಯುಗಯುಗಾಂತರಗಳು ಕಳೆದರೂ ಅವಳ ಕಥೆ ಜನರ ನಾಲಿಗೆಯ ಮೇಲೆ…
ಅಯ್ಯೋ ಎನ್ನಿಸಿತು ಲೇಖಾಳಿಗೆ. ಸ್ನಾನಕ್ಕೆ ಹೊರಟವಳಿಗೆ ಯಾರೋ ತನ್ನನ್ನು ನೋಡುತ್ತಿದ್ದಾರೆ ಎಂಬ ಭಾವನೆ. ಬಾಗಿಲು ಭದ್ರಪಡಿಸಿ ಬಂದಳು. ಅಪವಿತ್ರ ದೃಷ್ಟಿಗೆ ಆಹುತಿಯಾದ ತನ್ನ ಶರೀರವನ್ನು ಮತ್ತೆಮತ್ತೆ ತೊಳೆದುಕೊಂಡಳು. ಜೀವನದ ತುಂಬಾ ಘಾತಗಳು. ತನ್ನ ಪತಿಯ ಜೀವನಶೈಲಿ ತನಗೆ ಸಹ್ಯವಲ್ಲ. ತನ್ನ ಜೀವನಕ್ಕೆ ಅರ್ಥವೇ ಇಲ್ಲ. ಆ ಇಂದರ್ನ ಕಣ್ಣು ಬಿದ್ದು ನನ್ನ ಪಾವಿತ್ರ್ಯವೂ ಹೋಗಿದೆ. ಅವನನ್ನು ನಂಬಬಾರದಿತ್ತು. ಎಲ್ಲರೂ ಅವರೇ. ಛೇ.. ಪತಿಯನ್ನೇ ಹೋಲುವ ಪುಟ್ಟ ಊ?ಳ ಮುಖ ಪತಿಯ ಮೋಸವನ್ನು ಎತ್ತಿತೋರುತ್ತದೆ. ಏನು ಮಾಡಲೀ? ಯಾರು ಸರಿ ಯಾರದು ತಪ್ಪು. ಲೋಕಕ್ಕೆ ವಿಷಯ ತಿಳಿದಾಗ ಏನಾದೀತು… ಪಾಪದ ತಾತ, ಅಮ್ಮ, ಅತ್ತೆ, ಮಾವ ಎಲ್ಲರ ಪ್ರಶ್ನೆಗಳೂ ಪೆಡಂಭೂತವಾಗಿ ಎದ್ದುನಿಂತವು. ಪುಟ್ಟ ಊ? ಸಹ ಪ್ರಶ್ನೆ ಹಾಕಿದಂತಿತ್ತು. ಉತ್ತರಿಸಲಾಗದೇ ತೊಳಲಾಡಿದಳು. ಕೋಗಿಲೆಯೊಂದು ಮಾಮರದಲ್ಲಿ ಕೂಗುತ್ತಿದೆ. ಊಹ್ಞೂಂ.. ರಾಗ ತಪ್ಪುತ್ತಿದೆ.. ಅಪಶ್ರುತಿ… ಅಡುಗೆಯವನು ತಂದಿಟ್ಟ ಊಟ ಮಾಡಿ ನಿದ್ದೆಗೆ ಜಾರಿದಳು.
ಮರುದಿನ ಬೆಳಗ್ಗೆಯೇ ಎದ್ದು ಪ್ರಕೃತಿಯ ಆಸ್ವಾದನೆಗೆ ಹೊರಟಳು. ಸುತ್ತಾಡುತ್ತ ಗೋದಾವರಿಯ ತಟಕ್ಕೆ ಬಂದಳು. ಮೌನವಾಗಿ ಹರಿಯುತ್ತಿದ್ದ ನೀರನ್ನೇ ನೋಡುತ್ತಾ ಕುಳಿತಳು. ಅವಳ ಮನದಲ್ಲಿ ಮತ್ತವೇ ವಿಚಾರಗಳು… ಕಾಲುಗಳನ್ನು ನದಿಯ ನೀರಿನಲ್ಲಿ ಇಳಿಬಿಟ್ಟು ಮನಸ್ಸು, ಹೃದಯಗಳ ತಾಪವನ್ನು ಇಂಗಿಸಿಕೊಳ್ಳುತ್ತಿದ್ದಾಳೆ ಆಕೆ. ಆಗಲೇ.. ಅರೇ… ನದಿಯ ಆ ತೀರದಲ್ಲಿ ಏನೋ ಆಕೃತಿ.. ಬಿಳಿ ಸೀರೆಯನ್ನುಟ್ಟು ತನ್ನತ್ತ ಕೈಬೀಸುತ್ತಿದೆ. ದಿಗ್ಭ್ರಮೆಗೊಂಡು ಕಣ್ಣುಜ್ಜಿಕೊಂಡಳು. ಅಲ್ಲಿಯೇ ದಿಟ್ಟಿಸಿ ನೋಡಿದಳು. ಏನೂ ಇಲ್ಲ. ಓಹ್.. ತನ್ನ ಭ್ರಮೆಯೆಂದುಕೊಂಡಳು. ಆ ದಿನ ಮಧ್ಯಾಹ್ನ ಊಟ, ನಿದ್ದೆ, ಸುತ್ತಾಟಗಳೊಂದಿಗೆ ಕಳೆಯಿತು. ಮರುದಿನ ಅದೇ ದಿನಚರಿ. ನದೀತೀರದಲ್ಲಿ ಅದೇ ಹೆಣ್ಣುಮಗಳ ಆಕೃತಿ. ಈವತ್ತು ಆ ಆಕೃತಿ ತುಸು ಹತ್ತಿರ ಬಂದಿತು. ಲೇಖಾ ಬೆಚ್ಚಿ ಬೀಳಲಿಲ್ಲ ಈವತ್ತು. ತೀರಾ ಹತ್ತಿರ ಬಂತು. “ಅರೇ, ಇದೇನು? ಥೇಟ್ ರವಿವರ್ಮನ ಚಿತ್ರಗಳಲ್ಲಿದ್ದಂತಹ ಸುಂದರಿ. ಅದೇ ನಿಲವು, ಅವೇ ಭಾವಪೂರ್ಣ ಕಣ್ಣುಗಳು.. ಅಹಲ್ಯೆ.. ಅಹಲ್ಯೆಯೇ ಇವಳು” ಆ ಆಕೃತಿ ಇವಳ ಮುಂದೆಯೇ.
ಅಪ್ರಯತ್ನವಾಗಿ ಲೇಖಾ ನತಮಸ್ತಕಳಾದಳು. ’ಅಹಲ್ಯಾ, ಸೀತಾ, ತಾರಾ, ದ್ರೌಪದಿ ಮಂಡೋದರಿಸ್ತದಾ.. ಪಂಚಕನ್ಯಾಸ್ಮರೇ ನಿತ್ಯಂ ಮಹಾ ಪಾತಕ ನಾಶನಂ…’ ದಿನನಿತ್ಯ ಹೇಳಿಕೊಳ್ಳುವ ಸ್ತೋತ್ರದ ಪಾತ್ರ ತನ್ನೆದುರಿಗೆ… ಮನಸ್ಸಿನಲ್ಲಿ ಆನಂದ ಅಲೆಅಲೆಯಾಗಿ ಎದ್ದಿತು. “ನೀವು ಅಹಲ್ಯೆಯೇ?” ಲೇಖಾಳ ಪ್ರಶ್ನೆ. “ಹೌದು.. ನಾನೇ ಆಕೆ” ಆ ಆಕೃತಿ ಉತ್ತರಿಸಿತು. “ನೀವು ಅನುಭವಿಸಿದ ನೋವು, ಅಪಮಾನ ಎಲ್ಲವನ್ನೂ ನಾನು ಬಲ್ಲೆ” ಲೇಖಾ. ಈಗ ತಬ್ಬಿಬ್ಬುಗೊಂಡಿದ್ದು ಅಹಲ್ಯೆ. “ಯಾವ ನೋವು, ಯಾವ ಅಪಮಾನ?” ಇಂದ್ರ ಗೌತಮನ ರೂಪದಲ್ಲಿ ಮಾಡಿದ ಮೋಸ, ಶಿಲೆಯಾಗಿ ಎ? ವ?ಗಳವರೆಗೆ ಅನುಭವಿಸಿದ ನೋವು, ಕೊನೆಗೆ ಶ್ರೀರಾಮನ ಪಾದದ ಸ್ಪರ್ಶದಿಂದ ಪುನಃ ಮನು? ದೇಹ ಸಿಕ್ಕಿದ್ದು.. ಎಲ್ಲವನ್ನೂ ಎಳೆಯಳೆಯಾಗಿ ವಿವರಿಸಿದಳು. ಜೋರಾಗಿ ನಕ್ಕುಬಿಟ್ಟಳು ಅಹಲ್ಯೆ. “ಬಾ ಇಲ್ಲಿ” ಎಂದು ಲೇಖಾಳ ಕೈಹಿಡಿದಳು. ಮುಂದೆ ಏನೋ ಹೊಗೆ ಎಲ್ಲವೂ ಅಸ್ಪ?. “ಹೆಜ್ಜೆ ಎತ್ತಿಡು..” ಅಹಲ್ಯೆಯ ಆಜ್ಞೆಯಂತೆ ಹೆಜ್ಜೆ ಎತ್ತಿ ಮುಂದಿಟ್ಟಳು. ಮುಂದೆ ಕಂಡಿದ್ದು ಮತ್ತೊಂದು ಲೋಕವೇ. ಆಹ್! ಏನಿದು ಆಶ್ಚರ್ಯ.. ಯಾವುದೋ ಬೇರೆಯೇ ಕಾಲದಲ್ಲಿದ್ದಳು. ಎದುರಿಗೆ ಒಂದು ಆಶ್ರಮ. ಅದೋ ಗೌತಮರು. ಅಲ್ಲಿ ಅಹಲ್ಯೆ.. ಅಹಲ್ಯೆ ತನ್ನ ಪಾತ್ರ ಪರಿಚಯ ಮಾಡಿಸಿದಳು.
ಅಹಲ್ಯೆ ಬ್ರಹ್ಮನ ಮಾನಸಪುತ್ರಿ. ಜಡಭರಿತೆಯಾಗಿದ್ದ ಅವಳನ್ನು ನೋಡಿಕೊಳ್ಳಲು ಯಾರಿಂದಲೂ ಸಾಧ್ಯವಿರಲಿಲ್ಲ. ಅದಕ್ಕೆಂದೇ ಅವಳನ್ನು ಸಪ್ತರ್ಷಿಗಳಲ್ಲಿ ಒಬ್ಬರಾದ ಗೌತಮರಿಗೆ ಮದುವೆ ಮಾಡಿಕೊಡಲಾಗಿತ್ತು. ಇಂದ್ರ ಅರ್ಥಾತ್ ಬಲದ ಪ್ರವರ್ತನೆ ಇಲ್ಲದಿರುವ ಜೀವವದು. ಒಂದು ವೇಳೆ ಇಂದ್ರ ಬಲಾತ್ಕಾರಪೂರ್ವಕವಾಗಿ ಅವಳನ್ನು ಭೋಗಿಸಿದ್ದೇ ಆದರೆ ಋಗ್ವೇದದ ತುಂಬಾ ಅವನ ಸ್ತುತಿಯಿರುತ್ತಿರಲಿಲ್ಲ. ದೇವತೆಗಳು ಹಾಗೆಲ್ಲ ಮನು?ರೂಪ ತಳೆದು ಬರುವುದೂ ಸಾಧ್ಯವಿಲ್ಲ. ಭೌತಶರೀರಕ್ಕೆ ಅದರದೇ ಆದ ಕರ್ಮಾಧೀನತೆಯ ಬದ್ಧತೆ ಇದೆ. ಅದನ್ನು ಮೀರಲು ಇಂದ್ರನಿಗೂ ಸಾಧ್ಯವಿಲ್ಲ. ಪದಚ್ಯುತನಾದಾನು. ಇನ್ನು ಜಡಭರಿತೆಗೆಲ್ಲಿಯ ಸಂಸಾರಸುಖದ ಬಯಕೆ? ರಾಮ ಎಂಬ ವಿಶಿ?ವಾದ ಚೈತನ್ಯದ ಪಾದ ಸೋಕಿದಾಗಲೇ ಜಾಡ್ಯತೆ ದೂರವಾಗಿ ಚೈತನ್ಯ ತುಂಬಿದ್ದು. ಉಳಿದೆಲ್ಲವೂ ಆಖ್ಯಾಯಿಕೆಗಳ?.
“ನೀವೆಲ್ಲ ಅಂದುಕೊಂಡಂತೆ ನನ್ನ ಬಾಳಿನಲ್ಲಿ ಏನೂ ನಡೆದಿಲ್ಲ. ಸುಮ್ಮನೆ ಕವಿ ಕಲ್ಪನೆಗಳಲ್ಲಿ ನನ್ನತನವನ್ನು ಸುಟ್ಟು ಬೂದಿ ಮಾಡಿದ್ದೀರಾ” ದುಃಖಿಸಿದಳು ಅಹಲ್ಯೆ. ಸತ್ಯವೊಂದಿದ್ದರೆ ಅರ್ಥಗಳು ನೂರಾರು. ಅವರವರ ಅರ್ಥ ಅವರಿಗಲ್ಲವೇ. ಆದರೆ ನನ್ನ ವಿ?ಯದಲ್ಲಿ ಸತ್ಯವೇ ಅದಲ್ಲ.. ಇನ್ನು ಅದಕ್ಕೆ ಆರೋಪಣೆ ಅರ್ಥಹೀನವಲ್ಲವೇ? “ನ್ಯಾಲೀಭಿ?ಸ್ಯ ಸ್ವಯಂ ವಿಕ್ಷು ಸಂದೃಗ್ ರುಕ್ಮೇ ತ್ವೇ?ಃ ಇತಿ ಕನ್ಯಾ” ಸ್ವಯಂಸಿದ್ಧ ಅಗ್ನಿಸ್ವರೂಪರು ನಾವೈವರು.. ಪಾವಕನಿಂದ ಪಾವನತ್ವವನ್ನು ಹೊಂದಿದವರು. ಸೀತೆ, ತಾರೆ, ದ್ರೌಪದಿ, ಮಂಡೋದರೀ ಎಲ್ಲರನ್ನೂ ಸೇರಿಸಿಯೇ ಹೇಳುತ್ತಿದ್ದಾಳೆ ಅಹಲ್ಯೆ. ಯಾಕೆ ನಮ್ಮದಲ್ಲದ ಸತ್ಯಕ್ಕೆ ನಮ್ಮನ್ನು ಹಿಂಸಿಸುತ್ತೀರೀ? ಯುಗಯುಗಾಂತರಗಳು ಸಂದರೂ ಅದೇ ಸ್ಥಿತಿ… ಶಿಲೆಯಿಂದ ಮುಕ್ತಿ ದೊರಕಿ ನದಿಯಾಗಿ ಹರಿದಳು ಅಹಲ್ಯೆ. ಜಡಭರಿತೆಯಾಗಿದ್ದವಳು ಈಗ ಅದಮ್ಯ ಚೇತನ. ಗೌತಮಿಯಾಗಿ ಜನರ ಕ್ಷುಧೆಯನ್ನು ತೀರಿಸುತ್ತಿದ್ದಾಳೆ ಆಕೆ. ಬರಿಯ ಶತಾನಂದನ ತಾಯಿಯಾಗಿದ್ದವಳು ಈಗ ವಿಶ್ವಮಾತೆ.
ಲೇಖಾಳಿಗೆ ರೋಮಾಂಚನ. ಗುರಿಯಿಲ್ಲದ ನಡಿಗೆಗೆ ಗಮ್ಯ ಗೋಚರಿಸಿತ್ತು. ಸಮಾಧಾನದ ನಿಟ್ಟುಸಿರು ಬಿಟ್ಟಳು. ಕೆಲವೇ ಕ್ಷಣಗಳಲ್ಲಿ ಎಲ್ಲೆಡೆ ಹೊಗೆಯಾವರಿಸಿಕೊಂಡಿತು. ಕಣ್ಣು ಬಿಟ್ಟಾಗ ಮತ್ತದೇ ಮರದ ಕೆಳಗೆ ನದೀ ತೀರದಲ್ಲಿ ಕುಳಿತಿದ್ದಳು. ಯಾವ ಅಹಲ್ಯೆಯೂ ಅಲ್ಲಿರಲಿಲ್ಲ.
ಆದರೆ ಅವಳು ಬಿತ್ತಿಹೋದ ಸಮಾಧಾನದ ಎಳೆ ಎದೆಯಲ್ಲಿ ನಗುತ್ತಿತ್ತು.
ಹೌದು.. ಸತ್ಯವಲ್ಲದ ಸತ್ಯಕ್ಕೆ ಅರ್ಥ ಹುಡುಕುವವರು ನಾವು ಎಂದು ಮನಸ್ಸು ಮಾರ್ನುಡಿಯಿತು.
ಕಣ್ಣಿನಿಂದ ಉದುರಿದ ಅಮೃತಬಿಂದು ಮನದ ಕೊಳೆ ತೊಳೆದಿತ್ತು. ಪ್ರತಿ ಕಾಲಘಟ್ಟವೂ, ಪ್ರತಿಯೊಂದು ಜೀವವೂ ಒಂದೊಂದು ಪಾಠವನ್ನು ಕಲಿಸುತ್ತದೆ. ತನ್ನೊಡಲ ಏಕಾಂತವನ್ನು ಸಮೃದ್ಧ ಲೋಕಾಂತದಲ್ಲಿ ಕಾಣುವ ನಿರ್ಧಾರದೊಂದಿಗೆ ಮುಂದಡಿಯಿಟ್ಟಳು ಲೇಖಾ. ಒಡಲಿನ ಪಾವಕ ಅವಳನ್ನು ಪಾವನಿಯನ್ನಾಗಿಸಿತ್ತು.