ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಪರಾವರ್ತನ

ಎಷ್ಟು ಹೊತ್ತಿನ ಬಳಿಕ ತಟ್ಟನೆ ಎಚ್ಚರವಾಯಿತು. ಬೆಂಕಿಯತ್ತ ನೋಡಿದ. ಉರಿದ ಕೊಳ್ಳಿಗಳು ತೆಳುವಾಗಿ ಬೂದಿಯನ್ನು ತಮ್ಮ ಮೇಲೆ ಹೊದೆದುಕೊಂಡು ಮೃದು ಶಾಖ ಬೀರುತ್ತಿದ್ದವು. ಕೊಳ್ಳಿಗಳನ್ನು ನಿಧಾನವಾಗಿ ಕೊಡಹಿ ನುರಿದ. ಬೂದಿ ಮುಚ್ಚಿದ ಕೆಂಡ ಎಂದರೆ ಇದೇ ಎಂದುಕೊಳ್ಳುತ್ತ ಅರ್ಧ ಸುಟ್ಟ ಕಟ್ಟಿಗೆಗಳನ್ನು ಬೆಂಕಿಯತ್ತ ಸರಿಸಿ ಉರಿಸಿ ತಣ್ಣಗಾಗುತ್ತಿದ್ದ ಕೈಯನ್ನು ಕಾಯಿಸಿಕೊಂಡ. ಕಾಯಿಸಿಕೊಳ್ಳುತ್ತಲೆ ಸುತ್ತ ನೋಡಿದರೆ ಶ್ಯಾಮಭಟ್ಟನಿಲ್ಲ.

`ಯಾರದು?’

ಪ್ರಶ್ನೆ ಎಲ್ಲಿಂದ ಬಂತೆಂದು ಭಾಸ್ಕರ ಸುತ್ತ ತಿರುಗಿ ನೋಡಿದ. ರೊಂಯ್ಯನೆ ಬೀಸುವ ಗಾಳಿಯಿಂದ ಅಲುಗುವ ಟೊಂಗೆ, ಎಲೆಗಳಿಂದಾಗಿ ಬರುವ ಶಬ್ದದ ಹೊರತು ಮತ್ತೇನು ಕೇಳಲಿಲ್ಲ. ಹಾಗಾದರೆ ತನಗೆ ’ಯಾರು’ ಎನ್ನುವ ಪ್ರಶ್ನೆ ಕೇಳಲ್ಪಟ್ಟಿದ್ದು ಬರಿದೆ ತನ್ನ ಭ್ರಮೆಯೆ? ಇರಬಹುದು. ಇಲ್ಲವಾದಲ್ಲಿ ಈ ಕತ್ತಲಬಿತ್ತರದ ಸಮುದ್ರದಲ್ಲಿ ಒಂಟಿನಾವಿಕನಂತಿರುವ ತನ್ನನ್ನು ಕರೆಯುವವರಾದರೂ ಯಾರು? ಪ್ರಾಯಶಃ ಹತ್ತಿರದಲ್ಲೆಲ್ಲೋ ಬಿದಿರುಮಟ್ಟಿ ಇರಬೇಕು, ಅದರ ಸದ್ದೇ ಮನು?ರ ಧ್ವನಿಯಂತೆ ಕೇಳಿರಬೇಕು ಎಂದುಕೊಳ್ಳುತ್ತ ಯಾವುದಕ್ಕು ಇರಲಿ ಎಂದುಕೊಂಡು ಕಾರಿನ ಡ್ಯಾಶ್‌ಬೋರ್ಡಿನಿಂದ ಬ್ಯಾಟರಿ ತೆಗೆದು ಸುತ್ತಲೂ ಬೆಳಕು ಚೆಲ್ಲಿದ. ಆ ಕತ್ತಲಗಹ್ವರದಲ್ಲಿ ಬ್ಯಾಟರಿ ಬೆಳಕೊಂದು ಮಿಣುಕು ಹುಳುವಾಯಿತು. ತಟ್ಟನೆ ಬ್ಯಾಟರಿ ಆರಿಸಿದ್ದೆ ಗಾಡಾಂಧಕಾರವೆನ್ನಿಸಿದರೂ, ಮತ್ತೆ ಹಾಗೆಯೇ ಸ್ವಲ್ಪ ಹೊತ್ತು ಕಣ್ಣರಳಿಸಿ ನಿಂತ. ನಿದನಿಧಾನ, ಕಪ್ಪು ಕಪ್ಪು ಮರಗಳು, ಕಾರೆದುರಿಗಿನ ರಸ್ತೆ ಮಸುಕುಮಸುಕಾಗಿ ಗೋಚರಿಸತೊಡಗಿತು. ಎಲ್ಲದಕ್ಕೂ ಸಿದ್ಧವಾಗಿ ಹೊರಟವನಿಗೆ ಬೇಕಾದ ಈ ಅನುಭವ ಮೊದಲ ಬಾರಿಗೆ ಸಿಗುತ್ತಿದೆ ಎನ್ನಿಸಿದ್ದೆ ಹೆದರಿಕೆಯನ್ನು ಮೀರಿ ಮನಸ್ಸು ಪುಳಕಗೊಂಡಿತು. ನಿಂತಲ್ಲೆ ಬಲಗಾಲನ್ನೊಮ್ಮೆ ಎಡಗಾಲನ್ನೊಮ್ಮೆ ಎತ್ತಿಎತ್ತಿ ಹಾಕಿ ಕುಣಿದ. ಹೋಯ್ ಹೋಯ್ ಎಂದು ಕೂಗಿದ. ಯಾರಾದರು ಕಂಡರೆ ತನ್ನನ್ನೇ ದೆವ್ವ ಎಂದುಕೊಳ್ಳಬಹುದಲ್ಲವೆ ಎನ್ನಿಸಿ ನಗು ಬಂತು. ಕುಣಿದು ಕುಣಿದು ದಣಿವೆನ್ನಿಸಿ ಮರಳಿ ಹೋಗಿ ಕಾರಿನ ಈಚೆ ಬಾಗಿಲು ತೆರೆದು ಕುಳಿತ. ಸಣ್ಣದಾಗಿ ಚಳಿ ಶುರು ಆದಂತೆನ್ನಿಸಿತು. ಜೊತೆಗೇ ನೆನಪು ನುಗ್ಗಿಬಂತು. ಅಲ್ಲಿ ಗುರು ತನಗಾಗಿ ಕಾಯುತ್ತಿರಬಹುದು. ’ಇದೆ, ಶಿರ್ಸಿಯಿಂದ ಹೊರಟಿದ್ದೇನೆ, ಇನ್ನೊಂದು ಗಂಟೆಯಲ್ಲಿ ನಿಮ್ಮನೆ ಅಂಗಳದಲ್ಲಿರುತ್ತೇನೆ – ನಾಯಿ ಇದ್ದರೆ ಕಟ್ಟಿಹಾಕಿಡು’ ಎಂದು ಫೋನಾಯಿಸಿಯಾಗಿತ್ತು. ಹಾಳಾದ್ದು ಸಾಗರ-ಸಿದ್ದಾಪುರ ರಸ್ತೆಯಲ್ಲಿ ಭಾರೀ ಆಕ್ಸಿಡೆಂಟಾಗಿ ರಸ್ತೆ ಬ್ಲಾಕಾಗಿ ಎರಡು ಮೂರುಗಂಟೆ ಬೇಕಾಯ್ತು, ರಸ್ತೆ ಕ್ಲಿಯರಾಗಲು. ಆದರೆ ಹಿಂದೊಮ್ಮೆ ನೋಡಿದ ದಾರಿ ಎನ್ನುವ ಧೈರ್ಯದಲ್ಲಿ ಮುಂದುವರಿದಾಗಿತ್ತು. ಕಾನಸೂರು ದಾಟಿ ಒಂದಿ? ದೂರ ಹೋದ ಮೇಲೆ ಬಲಕ್ಕೆ ತಿರುಗಿ ಮಣ್ಣಿನರಸ್ತೆಯಲ್ಲಿಯೆ ಹದಿನೈದು ಕಿಲೋಮೀಟರ್ ಸಾಗಿದೊಡನೆ ಹೊಳೆಯ ಮುರುಕಿನಲ್ಲಿ ಗುರು ಮನೆ. ಅ? ನೆನಪಿತ್ತು. (ಮೂವತ್ತು ವ?ದ ಹಿಂದೆ ಬಂದದ್ದು; ಅ? ನೆನಪಿದ್ದುದೆ ದೊಡ್ಡದು.) ಕಾನಸೂರು ದಾಟುವ?ರಲ್ಲಿ ಪೂರಾ ಕತ್ತಲೆ ಆವರಿಸಿಕೊಂಡಿತ್ತು. ಆದರೂ ಗೊತ್ತಿದ್ದ ದಾರಿಯೆಂದು ನುಗ್ಗಿದ್ದೇ. ಇಲ್ಲಿ ಒಂದು ಹೊಂಡ ಬಿದ್ದಿದೆ, ಅದಕ್ಕೆ ಅಡ್ಡಲಾಗಿ ಒಂದು ಕುಂಟೆ ಹಾಕಿಟ್ಟಿದ್ದಾರೆ, ಸಾಲು ಕಲ್ಲು ಇಟ್ಟಿದ್ದಾರೆ ಎನ್ನುವ ಕನಸೇನು ತನಗೆ ಬಿದ್ದಿತ್ತೆ? ಎ?? ವ? ಚಾಲನೆಯ ಅನುಭವ ಇದ್ದವನು ಹೀಗೆ ಹಳ್ಳಕ್ಕೆ ಬೀಳಬಾರದಿತ್ತು. ಒಂದರೆಕ್ಷಣ ಮನಸ್ಸೆಲ್ಲಿ ಓಡಿತ್ತೋ ಅಥವಾ ಹೊಂಡದ ಈಚೆ ಇರಬೇಕಾದ ಅಡ್ಡಕುಂಟೆಯನ್ನು ಯಾರೋ ದನ ಕಾಯುವವರು ಆಚೆ ಎಳೆದಿಟ್ಟಿದ್ದರೋ, ತಟ್ಟನೆ ಹೊಂಡಕ್ಕೆ ಬಿದ್ದ ಕಾರಿನ ಬಾನೆಟ್ಟಿಗೆ ಸೈಜುಗಲ್ಲೊಂದು ಠಣ್ಣನೆ ಹೊಡೆದಿತ್ತು; ಆಗ ಅಡ್ಡವಿಟ್ಟ ಕುಂಟೆ ಸಿಡಿದು ಕಾರಿನ ಹೆಡ್‌ಲೈಟು ಫಳಾರೆಂದದ್ದೆ ಕಣ್ಣು ಮುಚ್ಚಿದ ಕಾರು, ಇದೆ, ನೀ ಬೇಡುವ ಕತ್ತಲು ಎಂದು ಕಾಡಕತ್ತಲೆಯನ್ನು ತೆರೆದಿಟ್ಟಿತ್ತು. ಕಾರನ್ನು ರಿವರ್ಸ್ ತೆಗೆದುಕೊಂಡು ಕೆಳಗಿಳಿದು ನೋಡಿದರೆ ಕಾರಿಗೆ ಕಣ್ಣು ಹೋಗಿದೆ ಎನ್ನುವುದನ್ನು ಬಿಟ್ಟರೆ ಮತ್ತೇನು ಆದಂತೆ ಕಾಣಲಿಲ್ಲ. ಸರಿ, ಆದರೆ ಈ ಕತ್ತಲಲ್ಲಿ ಕುರುಡು ಕಾರು ಮುಂದೆ ಹೋಗುವುದಾದರು ಹೇಗೆ? ನಡೆದುಕೊಂಡು ಹೋಗುವ ಎನ್ನುವುದಾದರೆ ಇನ್ನೂ ಎಂಟು ಹತ್ತು ಕಿಲೋಮೀಟರ್ ಆದರೂ ಇರಬಹುದು. ಆ ಯೋಚನೆಯನ್ನೆಲ್ಲ ಬಿಟ್ಟುಕೊಟ್ಟು ಕೆಳಗಿಳಿದು, ಈ ಅನುಭವಕ್ಕೆ ತೆರೆದುಕೊಳ್ಳುವ ಖುಷಿಗೆ ಆತ ಮನಸ್ಸು ಮಾಡಿದ್ದ.

ಕಾರಿನಿಂದ ಇಳಿದು ರಸ್ತೆಯುದ್ದಕ್ಕೂ ಅಡ್ಡಾಡಿದ. ಮರದ ಎಲೆಗಳು ವಿರಳವಾಗಿರುವಲ್ಲಿ ತಲೆಯೆತ್ತಿ ನೋಡಿದ. ನಿರಭ್ರ ಆಕಾಶದಲ್ಲಿ ಮಿನುಗುವ ನಕ್ಷತ್ರಗಳನ್ನು ಕಂಡು ’ವಾಹ್!’ ಎಂದ. ಭಾಸ್ಕರನಿಗೆ ಹಾಗೇ. ನಕ್ಷತ್ರಗಳೆಂದರೆ ಎಲ್ಲಿಲ್ಲದ ಖುಷಿ ಹಾಗೆಯೇ ಕುತೂಹಲ; ಈಗ ಅಂತ ಅಲ್ಲ. ಚಿಕ್ಕವನಾಗಿದ್ದಾಗಿನಿಂದಲೂ. ಸೂರ‍್ಯ ಒಂದು ನಕ್ಷತ್ರ, ಆತ ಹತ್ತಿರ ಇರುವುದರಿಂದ ಅ? ಪ್ರಖರ, ಉಳಿದವು ದೂರ ಇರುವುದರಿಂದ ಅ? ಪ್ರಖರ ಕಾಣುವುದಿಲ್ಲ ಎಂದು ಮಾಸ್ತರು ಹೇಳುವಾಗ ಅವನಲ್ಲಿ ಸಂಶಯ ಏಳುತ್ತಿತ್ತು. ಅ? ಚಂದ ಮಿನುಗುವ ನಕ್ಷತ್ರಗಳು ಪ್ರಖರ ಆಗುವುದಾದರು ಹೇಗೆ? ಆಕಾಶದಿಂದ ಉಂಡೆ ಬೆಂಕಿ ಬಿದ್ದಾಗ ನಕ್ಷತ್ರ ಬೀಳುತ್ತಿದೆ ಎಂದು ಅಜ್ಜಿ ಹೇಳುತ್ತಿದ್ದಳಲ್ಲ, ಅ? ಪ್ರಖರ ಇದ್ದಿದ್ದರೆ ಭೂಮಿಯೆಲ್ಲ ಸುಟ್ಟು ಹೋಗಬೇಕಿತ್ತಲ್ಲ… ಮುಂತಾಗಿ. ಅದೇ ಕುತೂಹಲ ಈ ಎಪ್ಪತ್ತರ ಇಳಿವಯಸ್ಸಿನಲ್ಲಿಯು ಅವನಲ್ಲಿ ಉಳಿದುಕೊಂಡದ್ದು ಮಾತ್ರವಲ್ಲ, ಸೂರ‍್ಯನ ಬಗೆಗಿಲ್ಲದ ಪ್ರೀತಿ ನಕ್ಷತ್ರಗಳ ಬಗ್ಗೆ ಉಳಿದುಕೊಂಡು ಬಂದಿತ್ತು. ನಕ್ಷತ್ರಗಳ ಬಗೆಗಿನ ವೈಜ್ಞಾನಿಕ ವಿವರಣೆಗಿಂತ ಅವನಿಗೆ ಈ ಭಾವನಾತ್ಮಕ ಸಂಬಂಧವೇ ಖುಷಿ ಕೊಡುತ್ತಿತ್ತು. ಹಾಗೆಂದು ಅಜ್ಜಿ ಹೇಳುತ್ತಿದ್ದ ಅದು ಅರುಂಧತಿ, ಇದು ಧ್ರುವ ನಕ್ಷತ್ರ ಎನ್ನುವ ಬಗೆಗೂ ಅವನಲ್ಲಿ ವಿಶ್ವಾಸವಿರಲಿಲ್ಲ. ಅದೆಲ್ಲ ಪ್ರಕೃತಿಯ ವಿಸ್ಮಯ ಅ?, ನೋಡಬೇಕು, ಖುಷಿ ಪಡಬೇಕು ಎನ್ನುವ ಧೋರಣೆ.

’ನಕ್ಷತ್ರಗಳು ದೂರವಿದ್ದರೆ ಚಂದ’ ಅವನು ತನ್ನ?ಕ್ಕೇ ಹೇಳಿಕೊಂಡ, ಮಕ್ಕಳ ಹಾಗೆ. ಅದಕ್ಕೇ ಅಲ್ಲವೇ ಹೀಗೆ ದೂರದೂರ ತಿರುಗುತ್ತಿರುವುದು…. ಹುಕ್ಕಿ ಬಂದವನಂತೆ ರಸ್ತೆಯಲ್ಲಿ ಅತ್ತಿಂದಿತ್ತ ಓಡಾಡಿದ. ಕತ್ತಲೆಯಲ್ಲಿ, ಧೂಳು ರಸ್ತೆಯಲ್ಲಿ ಏನಿದ್ದೀತು, ಮಣ್ಣು ಎನ್ನಿಸಿ ದಿನ್ನೆ ಹತ್ತಿ ಮರಗಳು ತುಸು ವಿರಳವಾಗಿರುವೆಡೆಯಲ್ಲಿ ನಿಂತು ತಲೆಯೆತ್ತಿ ನೋಡಿದರೆ ಅದೇ ನಕ್ಷತ್ರಗಳು. ಅಸಂಖ್ಯಾತ. ಅದರದೇ ಕ್ಯಾನ್ವಾಸು. ಬೇಕಾದ ಬಗೆಯಲ್ಲಿ ಅರ್ಥವಿಸಿಕೊಳ್ಳಬಹುದಾದಂತೆ. ಅವನಿಗೆ ಬಾಲ್ಯದಲ್ಲಿ ಹೇಳುತ್ತಿದ್ದ ಒಗಟು ನೆನಪಾಯಿತು – ಅಮ್ಮನ ಸೀರೆ ಮಡಿಸೋಕ್ಕಾಗಲ್ಲ, ಅಪ್ಪನದುಡ್ಡು ಎಣಿಸೋಕ್ಕಾಗಲ್ಲ. ಹುಂ. ಅಪ್ಪನದುಡ್ಡು, ಅಪ್ಪನದುಡ್ಡು!

ಪೂರಾ ತಕಧಿಮಿತಕಝಣು, ಅಬ್ಬರಕ್ಕೆ ಧೀಂಧಿತ್ತೋಂ, ತರಿಕಿಟಧಿತ್ತಾಂ.. ಸದ್ದ?.. ಅದರಲ್ಲೇನೂ ಸ್ವಾರಸ್ಯವಿಲ್ಲ. ಗಾಳಿಮೊಗೆದು ಚೆಲ್ಲಿದ ಹಾಗೆ ಎಂದುಕೊಳ್ಳುತ್ತಿದ್ದಂತೆ ತನ್ನಲ್ಲಿಯೆ ಹೊಸಾ ಕವಿತೆಯೊಂದು ಹುಟ್ಟುತ್ತಿದ್ದ ಹಾಗೆ ಅನ್ನಿಸಿತು. ಗುನುಗುನಿಸಿದ.

ಸೂರ‍್ಯನೆದುರಲ್ಲಿ ಬಾರಲಂಜುವ
ನನ್ನ ಪ್ರೀತಿಯ ನಕ್ಷತ್ರಗಳೆ,
ಬನ್ನಿ, ಕತ್ತಲಲ್ಲಿ ಬನ್ನಿ
ತೋರಿ ನಿಮ್ಮಸ್ತಿತ್ವಗಳ – ಓಹ್
ಸೂರ‍್ಯನೆದುರಿಗೆ ಬರುವ ಸಣ್ಣ ಅವಕಾಶವಾದರು ನಿಮಗಿದ್ದಿದ್ದರೆ
ಒಹ್
ಏನು ಮಾಡಲಿ ಒಡಲು ತುಂಬುವುದಷ್ಟೇ ಬದುಕಲ್ಲ
ಬದುಕ ತುಂಬುವ ಒಡಲಾಗಿದ್ದರೆ – ಓಹ್!
ತಥ್, ಕವಿಯಲ್ಲದಿರುವವರು ಕವಿತೆ ಬರೆಯ ಹೊರಟರೆ ಹೀಗೇ ಎನ್ನಿಸಿತು.

ತಟ್ಟನೆ ಆತನ ಕಲ್ಪನಾಲಹರಿಗೆ ಭಂಗ ಬರುವಂತೆ ಯಾರೋ ರಸ್ತೆಯಾಚೆ ಅಂಚಲ್ಲಿ ಮರದ ನೆರಳಲ್ಲಿ ಸರಿದು ಹೋದಂತಾಗಿ ಬ್ಯಾಟರಿ ಬೆಳಕು ಹಾಯಿಸಿದ. ಆಕೃತಿಯೊಂದು ಮರದ ಮರೆಯಲ್ಲಿ ಸರಿದ ಭಾವ. ದೆವ್ವ? ಭೂತ? ಹುಂ. ತನ್ನೆದುರು ಯಾವ ಭೂತ ದೆವ್ವ ಬಂದೀತು?

’ಯಾರಲ್ಲಿ? ಎದುರಿಗೆ ಬನ್ನಿ’ ಹಾಗೆನ್ನುವಾಗ ಅವನಿಗೇ ನಗು ಬಂತು. ಹಾಗೆಂದು ನಗುವಿನ ಬಳಿಕ ಮನಸ್ಸು ತುಸು ಭಯಗ್ರಸ್ಥವಾದುದು ಸುಳ್ಳಲ್ಲ – ಕಾಡುಕೋಣವೋ ಹಂದಿಯೋ ಆದರೆ ಎಂದು. ಮಲೆನಾಡಲ್ಲಿ ಅವೆಲ್ಲ ಕಾಮನ್ನಂತೆ. ಒಮ್ಮೆ ಹಾಗೇನಾದರು ಆದರೆ ತಟ್ಟನೆ ಹೋಗಿ ಕಾರಿನೊಳಗೆ ಕುಳಿತರಾಯಿತು ಎಂದು ಕಾರಿನ ಬಾಗಿಲನ್ನು ತೆರೆದು ಮತ್ತೆ ಜೋರಾಗಿ ಕೇಳಿದ, ’ಯಾರಾದರೂ ಇದ್ದೀರಾ?’

ನಿಧಾನವಾಗಿ, ಮರದ ಮರೆಯಿಂದ ನೆರಳೊಂದು ಈಚೆ ಬಂತು. ಬ್ಯಾಟರಿ ಹಾಯಿಸಿ ನೋಡಿದರೆ ಮನುಷ್ಯನೇ, ನೆರಳಲ್ಲ. ಒಂದು ಮಲೆನಾಡ ತಳಿ ಗಿಡ್ಡಮನು?. ಮೊಣಕಾಲವರೆಗೆ ಸುತ್ತಿಕೊಂಡ, ಧೂಳು ವರ್ಣಕ್ಕೆ ತಿರುಗಿದ ಬಿಳಿಯ ಕುರುಗೋಡು ಪಂಚೆ, ಕಸೆಯಂಗಿ, ತಲೆ ದುಪ್ಪಟ್ಟು ದಪ್ಪವಾಗುವಂತೆ ಸುತ್ತಿದ ಉದ್ದನೆಯ ಮಫ್ಲರು, ತುಸು ಬೂದು ಬಣ್ಣಕ್ಕೆ ತಿರುಗುತ್ತಿರುವ ಕುರುಚಲುಗಡ್ಡ, ಕೈಯಲ್ಲಿ ಒಂದು ಉದ್ದನೆಯ ಸದೆಗತ್ತಿ. ದರೋಡೆಗೆ ಬಂದವನೆ ಎಂದು ಒಂದರೆಕ್ಷಣ ಮನ ಅಳುಕಿ ಒಂದು ಹೆಜ್ಜೆ ಹಿಂದೆ ಸರಿದ. ಸುಳ್ಳೇ ಧೈರ‍್ಯಕ್ಕೆ ಕಾರಿನ ಹಿಂಬದಿಯ ಸೀಟಿನತ್ತ ಮುಖ ಮಾಡಿ, ’ಇಳಿದು ಬನ್ರೋ’ ಎಂದು ಇಲ್ಲದವರನ್ನ ಕರೆದ, ಧೈರ‍್ಯಕ್ಕೆ. ’ಛೆ, ಛೇ, ಗಾಡಿ ಹಾಳಾಗಿ ಹೋಗಿದ್ಯ ಎಂತದು, ಈ ಕತ್ಲೇಲಿ ನಿಂತ್ಕಂಡಿದ್ರಿ?’ ಎನ್ನುವ ನಯವಾದ ಧ್ವನಿ ಕೇಳಿದ್ದೆ, ಓಹ್ ಇದು ಶುದ್ಧ ಹಳ್ಳಿಗನ ಸ್ಪೆಸಿಮೆನ್ನು ಎಂದು ಧೈರ‍್ಯ ತಂದುಕೊಳ್ಳುತ್ತ, ’ಹೌದ್ರಿ’ ಎಂದ. “ನನ್ಕಂಡು ಹೆದ್ರಿಕ್ಯಂಡ್ರ, ಹೆದ್ರೋದು ಬ್ಯಾಡ ಮಾರಾಯ್ರೆ. ನಾನು ಇಲ್ಲೇ ಹತ್ತಿರದ ಊರವನು. ಶ್ಯಾಮಭಟ್ಟ ಅಂತ. ನಮ್ಮೆಮ್ಮೆ ಮಣಕ ಒಂದು ಕಳೆದು ಹೋಗಿತ್ತು. ಹುಡುಕ್ತ ಹುಡುಕ್ತ ರಾತ್ರಿ ಆಗೋಯ್ತು. ಎಮ್ಮೆ ಮಣಕ ಅಂತು ಸಿಗ್ಲಿಲ್ಲ. ವಾಪ್ಸು ಹೋಗ್ವ ಅಂದ್ರು ಕತ್ಲೇಲಿ ಕಾಡುಕೋಣ ಪಾಡುಕೋಣ ಅಂತ ಹೆದ್ರಿಕೆ. ಒಬ್ನೇ ಎ? ದೂರ ಬಂದ್ಬಿಟ್ನೋ ಏನೋ. ಹಂಗಾಗಿ ಮುಖ್ಯರಸ್ತೆಯಾದ್ರು ಸಿಗ್ತಲ್ಲ ಅಂತ ಈಚೆ ಬರುವ?ರಲ್ಲಿ ನೀವು ಕಂಡ್ರಿ” ಎನ್ನುತ್ತ ಹತ್ತಿರ ಬಂದು ಹಲ್ಲುಕಿರಿದ. ಕವಳದಿಂದ ಜಡ್ಡುಗಟ್ಟಿದ ಅವನ ಕೆಂಪು ಹಲ್ಲುಗಳನ್ನು ನಿರುಕಿಸಲಾಗದೆ ಬ್ಯಾಟರಿ ಆರಿಸಿದ ಭಾಸ್ಕರ, “ಹೌದಾ, ಸರಿ, ಸರಿ. ನಾನು ಯಾರೋ ಕಳ್ಳರಿರಬಹುದೇನೊ ಅಂತ ತುಸು ಹೆದರಿದೆ ಅನ್ನಿ. ನಿಮ್ಮ ನೋಡುತ್ತಿದ್ದಂತೆ ಅಲ್ಲ ಅಂತ ಖಾತ್ರಿಯಾಯ್ತು. ಮತ್ತೇನಿಲ್ಲ, ಇಲ್ಲಿ ರಸ್ತೇಲೊಂದು ಹೊಂಡ ಆಗಿತ್ತೇನೋ. ಭಾರೀ ಹೊಂಡಾನೆ. ಯಾರಾದ್ರು ಬಿದ್ದಾರು ಅಂತ ಯಾರೋ ಅದ್ರ ಸಮಾ ಒಂದು ಅಡ್ಡ ಕುಂಟೆ ಇಟ್ಟಿದ್ರು ಕಾಣಿಸ್ತದೆ. ಕಾಣದೆ ಬಂದೆ. ಕಾರಿನ ಬೆಳಕು ಕಿತ್ತೋಯ್ತು. ಕಾರಿಗೆ ಬೆಳಕಿಲ್ಲ. ಬೆಳಕಿಲ್ಲದೆ ನನಗೆ ಕಣ್ಣಿಲ್ಲ. ಇನ್ನು ಇಲ್ಲಿ ಬೆಳಗು ಮಾಡುವುದೇಯ ಅಂತ ಯೋಚ್ನೆ ಮಾಡ್ತ ನಿಂತಿದ್ದೆ.”

“ಹೌದು ಹೌದು, ಈ ಕತ್ಲೇಲಿ ಹೇಗೆ ಹೋಗ್ತೀರ. ಅದು ಸರಿ, ನೋಡಿದರೆ ನೀವು ಒಬ್ರೆ ಇದ್ದಾಂಗಿದೀರ. ಮತ್ಯಾರನ್ನಾದ್ರು ಜೊತೇಲಿ ಕರ‍್ಕಂಬರಬಾರದಾ? ಅಂದಹಾಗೆ ತಮ್ಮದು ಯಾವ ಊರೊ?”
“ಮೂಲ ಚಿಕ್ಕಮಂಗಳೂರ ಹತ್ರ ಒಂದು ಹಳ್ಳಿ. ಈಗಿರೋದು ಬೆಂಗಳೂರಿನಲ್ಲಿ.”

“ಅಬ್ಬ, ಬೆಂಗಳೂರಿನಲ್ಲಿ! ಅ?ಂದು ದೂರ, ಅದೂ ಒಬ್ಬರೇ, ಈ ವಯಸ್ಸಲ್ಲಿ!” ಆತ ಉದ್ಗರಿಸಿದ.

“ಯಾಕೆ? ನನಗೇನು ಹೆದರಿಕೆ ಅನ್ನೋದು ಇಲ್ಲ. ಇನ್ನೂ ಹತ್ತಿಪ್ಪತ್ತು ವ? ಬದುಕಿರೋ ಭರವಸೆ ಇದೆ. ಜೊತೆಗೆ ಒಬ್ಬನೇ ಹೀಗೆ ಸುತ್ತಾಡೋ ಖಯಾಲಿ ನನಗೆ…”

“ಹುಂ ಹುಂ. ನಿಮ್ಮಂಥವರನ್ನು ನೋಡಿದೇನಪ್ಪ. ಪ್ರಕೃತಿಗಿಕೃತಿ, ಗುಡ್ಡ, ಚಾರಣ ಅಂತ ಸುತ್ತಾಡೋರು. ಅದರಲ್ಲೂ ಬೆಂಗಳೂರಿನಲ್ಲಿದ್ದವರಿಗೆ ನಮ್ಮೂರ ಮಲೆನಾಡ ಮಳೆಗಾಲದ ಝರೀನು ಜಲಪಾತಾನೇ ಅಂತೆ….”

“ಅಯ್ಯೋ ಪ್ರಕೃತಿ ಚಾರಣ ಅಂತೆಲ್ಲ ಅಲ್ಲವಪ್ಪ. ಅ?ಕ್ಕು ಈಗ ಪ್ರಕೃತಿ ಅಂತ ಏನಿದೆ ಹೇಳಿ. ಅದರಲ್ಲೂ ಮಲೆನಾಡಿನಲ್ಲೆ ಹುಟ್ಟಿ ಬೆಳೆದ ನನ್ನಂಥವನಿಗೆ? ನಮ್ಮ ಹಳ್ಳೀಲಿ ನಾನು ಬಾಲ್ಯದಲ್ಲಿದ್ದಾಗ ಎಂತೆಂಥ ಕಾಡು ನೋಡಿದ್ದೇನೆ ಗೊತ್ತಾ? ಈಗೆಲ್ಲಿದೆ ಪ್ರಕೃತಿ? ಅಳುವ ಹೊಳೆ, ಕೊರಗುವ ಮರಗಳು, ಧೂಳು ಸೇರಿದ ಜಿಂಕೆ ನವಿಲುಗಳು – ಒಂದೂ ಇಲ್ಲ. ಅದಕ್ಕೆ ನಾನು ಕೆಳಗಿನ ಪ್ರಕೃತಿ ನೋಡುವುದು ಬಿಟ್ಟು ಬಹಳ ಕಾಲವಾಯ್ತು. ಮೇಲೆ ನೋಡ್ತೇನೆ, ಮೇಲೆ. ಅಮ್ಮನ ಸೀರೆಯಂತಿರುವ ನೀಲಾಕಾಶ, ಕೈಮಾಡಿ ಕರೆವ ಮೋಡಗಳು, ತೂಗು ಹಾಕಿದ ನಂದಾದೀಪದಂತಿರುವ ನಕ್ಷತ್ರಗಳು.. ಮತ್ತೆ ನಿಮಗೆ ಗೊತ್ತ? ಯಾರೂ ಆಕಾಶವನ್ನೋ ಮೋಡಗಳನ್ನೊ ಕತ್ತರಿಸಿ ಹೊದೆದುಕೊಳ್ಳಲಾರರು, ನಕ್ಷತ್ರಗಳನ್ನ ಕಿತ್ತು ಕಿಸೆ ತುಂಬಿಕೊಳ್ಳಲಾರರು. ಅದಕ್ಕೆ ಅವು ಶಾಶ್ವತ.”

“ಬಲೇ ಚನ್ನಾಗಿ ಮಾತಾಡ್ತೀರಪ್ಪ ನೀವು. ವಿ?ಯಕ್ಕೆ ಬರೋಣ. ಈಗ ಏನು ಮಾಡೋದು ಹೇಳಿ, ಇಲ್ಲೇ ಒಂದು ಮೂರ‍್ನಾಲ್ಕು ಮೈಲಿ ಇದೇ ರಸ್ತೆಯಲ್ಲಿ ಹೋದ್ರೆ ಬಾಳೂರು ಅಂತ ಸಿಗ್ತದೆ. ಇಬ್ರಿರೋದ್ರಿಂದ ಹಂದಿಪಂದಿ ಬಂದ್ರೆ ಧೈರ‍್ಯಕ್ಕಾಯ್ತು. ನನ್ಹತ್ರ ಕತ್ತಿ ಇದೆ, ದೊಂದಿ ಪಂದಿ ಮಾಡ್ಕೊಂಡು ಹೋಗಬಹುದು, ಆದ್ರೆ ಸ್ವಲ್ಪ ದೂರದ ಬರ‍್ಸಮಕ್ಕಿ ತಿರುವಲ್ಲಿ ದೆವ್ವ ಇದೆ ಅಂತಾರಪ್ಪ.. ಅದೇ ಸ್ವಲ್ಪ… ನೀವು ಪೇಟೆಯವರು ಹೆದ್ರಿಕೊಳ್ತೀರೇನೋ – ನಾನಾದ್ರೆ ಗಾಯತ್ರಿ ಹೇಳ್ತಾ ಬಂದ್ಬಿಡ್ತೇನೆ.. ನೀವು ಹೆದ್ರಿಕೊಂಡು ಕೈಕಾಲ್ ಬಿಟ್ಟು ಹೆಚ್ಚು ಕಡಿಮೆ ಆದ್ರೆ ಅಂತ..”

“ನಾನು? ಹೆದ್ರಿಕೆ? ಹುಂ, ದೇವರೇ ಇಲ್ಲ ಎನ್ನುವವನಿಗೆ ದೆವ್ವ ಏನು ಮಾಡ್ತದೆ ಬಿಡಿ.”

ಆತ ತನ್ನತ್ತ ತಿರುಗಿ ನೋಡಿದ್ದನ್ನು ಮಸುಕು ಬೆಳಕಿನಲ್ಲಿ ಭಾಸ್ಕರ ಗಮನಿಸದೆ ಇರಲಿಲ್ಲ. ತನ್ನ ಈ ಮಾತು ಸಹಜವಾಗಿಯೆ ಅವನನ್ನು ದಂಗುಬಡಿಸಿರಬೇಕು ಎನಿಸಿತು. ಮಾತು ಬದಲಿಸಿದ. “ನೋಡಿ, ನಿಜ ಹೇಳ್ಬೇಕೂಂದ್ರೆ ನನ್ನೊಬ್ಬ ಸ್ನೇಹಿತನನ್ನು ಭೇಟಿಮಾಡುವುದಕ್ಕೆ ನಾನು ಹೊರಟಿದ್ದು. ಸರ್ಕುಳಿ ಹತ್ರ ಗುರುಮೂರ್ತಿ ಹೆಗಡೆ ಅಂತ. ಬರ‍್ತೇನೆ ಅಂತ ಫೋನು ಮಾಡಿದ್ದೆ. ದಾರೀಲಿ ತೊಂದ್ರೆ ಆಗಿ ಲೇಟಾಯ್ತು. ಈಗ ಹೀಗೆ ಫಜೀತಿ ಆಯ್ತು.”

“ಆಯ್ತು ಆಯ್ತು ಬಿಡಿ. ಆದ್ರೆ ಸರ್ಕುಳಿ ಅಂದ್ರೆ ಇನ್ನೂ ಆರೆಂಟು ಮೈಲೀನೆ. ಹೇಗೆ ಹೋಗ್ತೀರ? ಅದ್ರಲ್ಲು ಈ ಕಾರನ್ನು ಹೇಗೆ ಬಿಟ್ಟು ಹೋಗ್ತೀರ? ಇಲ್ಲೇನು ಕಳ್ಳ ಕಾಕರ ಭಯ ಅಷ್ಟಿಲ್ಲ ಅನ್ನಿ. ಆದ್ರು ಅದೃ? ಕೆಟ್ರೆ ಹೀಗೇ ಅಂತ ಹೇಳಕ್ಕಾಗಲ್ಲ. ನಾಲ್ಕೂ ಟೈರು ಮಂಗಮಾಯ ಆದ್ರು ಆಯ್ತೆ.. ಹೆ ಹೆ..” ಎಂದವನು ತುಸುತಡೆದು ಏನೋ ಯೋಚನೆ ಮಾಡಿ, “ನಿಮಗೆ ಆಗಬಹುದು ಅಂತಿದ್ರೆ ಒಂದು ಉಪಾಯ ಇದೆ. ಇಲ್ಲೇ ಹತ್ರದಲ್ಲಿ ಒಂದು ಪಾಳು ದೇವಸ್ಥಾನ ಇದೆ. ಈ ಜಾಗ ನನಗೆ ಚೆನ್ನಾಗಿ ಗೊತ್ತಿದ್ದಕ್ಕೆ ಹೇಳ್ತಾ ಇದ್ದೇನೆ. ಮುರುಕು ದೇವಸ್ಥಾನ ಅನ್ನಿ. ಆದ್ರೆ ರಾತ್ರಿ ಕಳೆಯೋಕೆ ತೊಂದ್ರೆ ಇಲ್ಲ. ನಿಮ್ಮ ಅಭ್ಯಂತರ ಇಲ್ದೆ ಇದ್ರೆ ಅಲ್ಲೇ ಕಳೀಬಹುದು. ಕಾರಿನ ಟೈರುಗಿಯ್ರು ಬಿಚ್ಚೋ ಕಳ್ಳರು ಬಂದ್ರೆ ಶಬ್ದಾನು ಕೇಳತ್ತೆ.. ಏನಂತೀರ?”

“ಅಭ್ಯಂತರದ ಪ್ರಶ್ನೆ ಇಲ್ಲವಪ್ಪ. ನಾನು ದೇವರನ್ನು ನಂಬುವುದು ಬಿಟ್ಬಿಟ್ಟಿದ್ದೇನೆ ಅಂದ್ನೆ ಹೊರ‍್ತು ದೇವಸ್ಥಾನಕ್ಕೆ ಬರುವುದಿಲ್ಲ ಅಂತೇನು ಹೇಳಿಲ್ಲ. ನಡೀರಿ ಹೋಗೋಣ” ಎಂದ ಭಾಸ್ಕರ ಕಾರಿಗೆ ಬೀಗ ಹಾಕಿದ.

*  *   *   *

“ಇದು ಈಶ್ವರ ದೇವಸ್ಥಾನ. ಸಾವಿರಾರು ವ? ಹಳೆಯದು ಎನ್ನುತ್ತಾರೆ. ಇಲ್ಲೊಂದು ಗುಡಿ ಇತ್ತು ಎನ್ನುವುದೆ ಬಹಳ ಕಾಲ ಗೊತ್ತಿರಲಿಲ್ಲವಂತೆ. ಯಾರೋ ದನಕಾಯೊ ಹುಡುಗರು ಕಂಡು ಹೇಳಿದರಂತೆ. ಅದೆಲ್ಲ ನನ್ನ ಅಪ್ಪಯ್ಯ ಹೇಳುತ್ತಿದ್ದ ಕತೆ. ಕಡೆಗೆ ಊರವರೆಲ್ಲ ಸೇರಿಕೊಂಡು ಸುತ್ತ ಬೆಳೆದ ಲಂಟಾನಾ ಪೊದೆ, ಮುಳ್ಳು, ಮಟ್ಟಿ ಎಲ್ಲ ಕಡಿದು ಇ? ಮಾಡಿದರಂತೆ. ಹಾಗೆ ಇದಕ್ಕೊಂದು ರೂಪ ಬಂತು. ಊರುಗಳಿಂದ ದೂರ ಇರೋ ಇದಕ್ಕೆ ನಿತ್ಯ ಬಂದು ಪೂಜೆ ಮಾಡುವವರು ಯಾರು? ಆರಂಭದಲ್ಲಿ ಪೂಜೆಗೆ ಅಂತ ಮನೆ ಹಂಚಿಕೆಯೇನೋ ಆಯ್ತಂತೆ – ಪ್ರತಿ ಸೋಮವಾರ ಪೂಜೆ ಅಂತ. ಕ್ರಮಕ್ರಮೇಣ, ಅದು ನಿಲ್ಲುತ್ತ ಈಗ ಬರೀ ಅಮವಾಸ್ಯೆಗೆ, ಹಬ್ಬ ಹುಣ್ಣಿಮೆಗೆ ಪೂಜೆ ಅಂತ ಆಗಿದೆ. ಹತ್ತಿರದ ಮಕ್ರಿಮನೆ ಗಣಪತಿ ದೇವಸ್ಥಾನದ ಭಟ್ರೆ ಬಂದು ನಾಲ್ಕು ಹೂವು ಏರಿಸಿ ಹೋಗ್ತಾರೆ ಅ?” ಆತ ದೇವಸ್ಥಾನವನ್ನು ಪರಿಚಯಿಸಿದ. ಭಾಸ್ಕರ ದೇವಸ್ಥಾನದ ಕಟ್ಟೆಯ ಮೇಲೆ ನಿಂತು ಆಕಾಶದತ್ತ ನೋಡಿದ. ಚಂದ್ರ ನಿಧಾನವಾಗಿ ಹೊರಗೆ ಇಣುಕತೊಡಗಿದ್ದರಿಂದ ಮಂದ ಬೆಳಕು ಹರಡತೊಡಗಿತ್ತು. ಅದರಿಂದಾಗಿ ಅಕ್ಷರಶಃ ಪಾಳು ಬಿದ್ದ ದೇವಸ್ಥಾನ ಒಂದು ಬಗೆಯಲ್ಲಿ ಮಂದಬೆಳಕು ಹೊಂದಿದ ಗುಹೆಯಂತೆಯೆ ಕಾಣುತ್ತಿತ್ತು. ಪ್ರಾಕಾರದ ಹಳೆಯ ಕಲ್ಲಿನ ಕಂಬಗಳು ಛಾವಣಿಯಿಲ್ಲದೆ ಬೋಳು ಬೋಳಾಗಿದ್ದರೆ ಗರ್ಭಗುಡಿಗೆ ಹೊಸದಾಗಿ ಹೆಂಚು ಹೊದಿಸಿದ್ದರಿಂದ ಒಳಗೆ ಕತ್ತಲು ತುಂಬಿ ಏನೂ ಕಾಣುವಂತಿರಲಿಲ್ಲ. ಮತ್ತೆ ಗರ್ಭಗುಡಿಯ ಸುತ್ತಣ ಅಂಗಣದಲ್ಲಿ ಗಿಡ-ಗಂಟೆಗಳು ಬೆಳೆಯದಂತೆ ಕಲ್ಲು ಹಾಸಲ್ಪಟ್ಟಿತ್ತು. ಅಂಗಳದಲ್ಲಿಯೆ ಸ್ವಲ್ಪ ತಿರುಗಾಡಿದ ಬಳಿಕ ಭಾಸ್ಕರ ಹೇಳಿದ – “ಇದು ಪುರಾತನವಾದದ್ದೇನೊ ಹೌದು. ಆದರೆ ಇಲ್ಲಿ ನಾವು ಮಲಗುವುದಾದರು ಎಲ್ಲಿ?”

“ಮಲಗುವುದಾ? ಆಯಿತು, ನೀವು ಮಲಗಿ ಬೇಕಾದರೆ. ಈ ಕಲ್ಲಿನ ಮೇಲೆಯೆ ಬೆಂಕಿ ಉರಿಸೋಣ. ಹಾವು ಮತ್ತೊಂದು ಬರೋಲ್ಲ. ನಾನು ಎಚ್ಚರವೇ ಇದ್ದೇನು.”

“ಬೇಡ ಬೇಡ ಬೆಂಕಿಹಾಕಿದ ಮೇಲೆ ಹೆದರಿಕೆ ಎಂಥಾದ್ದು ಬಿಡಿ. ಇಬ್ಬರೂ ಸುದ್ದಿ ಹೇಳುತ್ತ ಕುಳಿತುಕೊಳ್ಳೋಣ. ಮೊದಲಿಗೆ ನಿಮ್ಮ ಬಗ್ಗೆ ಹೇಳಿ. ಆಮೇಲೆ ನನ್ನ ಬಗ್ಗೆ ಹೇಳ್ತೇನೆ. ನಮ್ಮ ಬದುಕನ್ನು ನಾವೇ ಪುನರವಲೋಕಿಸುವುದಕ್ಕೆ ಒಳ್ಳೆಯ ಅವಕಾಶ. ಹೊತ್ತೂ ಕಳೆಯುತ್ತೆ, ಬೆಳಗಾಗುತ್ತೆ. ಮತ್ತೆ ನೀವೆಲ್ಲೋ ನಾನೆಲ್ಲೊ” ಎಂದವನು ಹೇಳುತ್ತಿದ್ದಂತೆ ಶ್ಯಾಮಭಟ್ಟ ’ಇರಿ ಇರಿ,’ ಎನ್ನುತ್ತ ಎದ್ದು ಸುತ್ತ ತಿರುಗಿ ಒಂದಿ? ತರಗೆಲೆ, ಸಣ್ಣ ಸಣ್ಣ ಕಟ್ಟಿಗೆಚೂರುಗಳನ್ನು ಒಟ್ಟುಗೂಡಿಸಿ ತಂದು ಪೇರಿಸಿದ. ಆನಂತರ ತನ್ನ ನಿಲುವಂಗಿಯ ಬೊಕ್ಕಣದಿಂದ ಬೆಂಕಿಪೊಟ್ಟಣವೊಂದನ್ನು ತೆಗೆದು ಕಡ್ಡಿಗೀರಿದ. ಒಣಗಿಕೊಂಡಿದ್ದ ತರಗೆಲೆಗೆ ಬೆಂಕಿ ತಾಕುವುದಕ್ಕೆ ಹೆಚ್ಚು ಹೊತ್ತು ಬೇಕಾಗಲಿಲ್ಲ. ಅವನು ಮಾಡುವುದನ್ನೇ ನೋಡುತ್ತ ಕುಳಿತಿದ್ದ ಭಾಸ್ಕರನಿಗೆ, “ಕಾಡಲ್ಲಿ ಹೋಗುವಾಗ ಒಂದು ಬೆಂಕಿಪೊಟ್ಟಣ ಇಟ್ಕೊಂಡಿರ‍್ತೇನೆ, ಬೇಕಾಗುತ್ತೆ ನೋಡಿ” ಎಂದ. ಭಾಸ್ಕರ ಬರಿದೆ ನಕ್ಕನ?. ಆತನೆ ಮತ್ತೆ “ಇರಿ, ಇರಿ, ಬೆಳಗಿನ ತನಕ ಬೆಂಕಿ ಬೇಕಲ್ಲ” ಎನ್ನುತ್ತ ಎದ್ದು ಹೋಗಿ ದಪ್ಪನೆಯ ನಾಲ್ಕಾರು ಕಟ್ಟಿಗೆಗಳನ್ನು ತಂದ. ಈ ಕತ್ತಲೆಯಲ್ಲಿ ಅವನಿಗೆಲ್ಲ ಇವು ಇಷ್ಟು ಬೇಗ ಸಿಕ್ಕವೆ ಎಂದು ಒಂದರೆಕ್ಷಣ ವಿಸ್ಮಯವಾದರೂ, ಹಳ್ಳಿಯವನಲ್ಲವೆ, ಕಾಡಿನಲ್ಲಿ ಒಣಗಿ ಮುರಿದ ಟೊಂಗೆಗಳಿಗೆ ಬರವಿರಲ್ಲ, ಕೈಯಲ್ಲಿ ಕತ್ತಿಯು ಇದೆ ಎಂದು ತನ್ನ?ಕ್ಕೆ ಸಮಾಧಾನ ಹೇಳಿಕೊಂಡ ಭಾಸ್ಕರ ಅವನ ಕೆಲಸ ನೋಡುತ್ತ ಕಾಲನ್ನು ಅರೆಚಾಚಿ ಬೆಂಕಿಗೆ ಮೈಯೊಡ್ಡಿದ. ಮನಸ್ಸಿನಲ್ಲಿ ತನ್ನ ಬದುಕನ್ನು ಎಲ್ಲಿಂದ ಪ್ರಾರಂಭಿಸಬೇಕು ಎನ್ನುವ ಚಿಂತೆಯೇ ಗಿರಕಿಹೊಡೆಯುತ್ತಿತ್ತು.

ತನ್ನ ಎಲ್ಲ ಕೆಲಸ ಮುಗಿಸಿ ಶ್ಯಾಮಭಟ್ಟ ತೊಡೆಯವರೆಗೆ ಪಂಚೆ ಎತ್ತಿ ಪರಪರ ಕೆರೆದುಕೊಳ್ಳುತ್ತ, “ಹಂ, ಎಲ್ಲೋ ಕೊಣಜು ಇತ್ತು ಅಂತ ಕಾಣುತ್ತೆ ಒಂದು ಕುಂಟೇಲಿ, ಸಾಯಿ ಎನ್ನುತ್ತ ರಪರಪ ತನ್ನ ತೊಡೆಗೆ ತಾನೇ ಹೊಡೆದುಕೊಂಡು, “ಹೇಳಿ, ಬೆಂಗಳೂರು ಸುದ್ದೀನ” ಎಂದು ಕತೆ ಕೇಳಲು ಸಿದ್ಧವಾದವನಂತೆ ಕುಳಿತ. “ಬೆಂಗಳೂರು ಸುದ್ದಿಯೇನು. ಬೆಂಗಳೂರಿನಲ್ಲಿ ಸರಕಾರವಿದೆ ಮತ್ತು ಗಲೀಜಿದೆ’ ಎಂದ ಭಾಸ್ಕರ ತನ್ನ ಮಾತಿಗೆ ತಾನೇ ನಕ್ಕ. “ಅದೂ ಸರಿ ಎನ್ನಿ. ನಾವುನಾವು ನಮ್ಮ ಬದುಕನ್ನು ನೋಡಿಕೊಂಡರ? ಸಾಕು. ಯಾವಾಗಲೂ ಹಾಗೇ. ’ಯಾರು ಅರಸ ಆದ್ರು ನಾವು ರಾಗಿ ಬೀಸೋದು ತಪ್ಪಲ್ಲ’ ಅಂತ ಏನೊ ಗಾದೆ ಉಂಟಲ್ಲ. ಈಗ ನಿಮ್ಮ ಕತೆ ಮೊದಲು ಹೇಳಿ” ಎಂದ. ಈ ನಿಗೂಢ ಕತ್ತಲು, ಜನ್ಮ ಜನ್ಮಾಂತರದ ಬಂಧುವಿನ ಹಾಗೆ ಒಬ್ಬ ತನ್ನ ಕತೆ ಕೇಳಲು ಸಿದ್ಧವಾಗಿದ್ದಾನೆ ಎನ್ನುವ ಕಲ್ಪನೆಯೇ ಅಪೂರ್ವ ಖುಷಿಕೊಟ್ಟವನಂತೆ ಹಿಗ್ಗಿದ ಭಾಸ್ಕರ ಕತೆಗಾರನೊಬ್ಬ ಹಲವು ವರು?ಗಳಿಂದ ತನ್ನ ಮನಸ್ಸಿನಲ್ಲಿ ಮೆದೆಯಲ್ಪಡುತ್ತಿದ್ದ ಕತೆಗೊಂದು ರೂಪುಕೊಡಲು ಪೆನ್ನು ಹಿಡಿದು ಸಜ್ಜಾದವನಂತೆ ಚಕ್ಕಳ ಮಕ್ಕಳ ಹಾಕಿ ಕುಳಿತು, ಆರಂಭದ ತಿಣುಕಾಟದಲ್ಲಿ ಹೇಳಿದ – “ವಿಶೇ?ವೇನಿಲ್ಲ, ಮತ್ತೆ ನನ್ನ ಕತೆ ದೊಡ್ಡದೂ ಅಲ್ಲ. ಎಲ್ಲರ ಹಾಗೇನೇ ನನ್ನದೂ ಒಂದು ಜನ್ಮ..”

 

ಉರಿವ ತರಗೆಲೆಯ ಪರಪರ ಶಬ್ದ, ಬೀಸುವ ಗಾಳಿಯ ಸದ್ದಿನ ಹೊರತಾಗಿ ಮೌನ ಮತ್ತು ಮಂದಬೆಳಕು ಒಂದನ್ನೊಂದು ತಬ್ಬಿಕೊಂಡಿದ್ದವು.

“ನಾನು ಹುಟ್ಟಿದ್ದು ಬಡವನಾಗಿ. ನನ್ನಪ್ಪ ಅಮ್ಮ ಇಬ್ಬರೂ ಕಾಫಿ ಪ್ಲಾಂಟರನೊಬ್ಬನ ಅಡಿ ಕೂಲಿ ಕೆಲಸ ಮಾಡೋರು. ಅಪ್ಪ ಅಮ್ಮನಿಗೆ ನಾನೊಬ್ಬನೇ ಮಗ. ಬಹಳ ಪ್ರೀತಿಯಿಂದಲೇ ನನ್ನನ್ನು ಸಾಕಿದ್ರು. ಅಪ್ಪ ಅಮವಾಸ್ಯೆ ಹುಣ್ಣಿಮೇಲಿ ದೇವರನ್ನು ಮೈಮೇಲೆ ಬರಿಸಿಕೊಂಡು ಪ್ರಶ್ನೆ ಹೇಳ್ತಿದ್ದರಿಂದ ಊರಲ್ಲಿ ಒಳ್ಳೇ ಹೆಸರಿತ್ತು. ಪೂಜಾರ್ರು ಅಂತ್ಲೇ ಎಲ್ಲ ಕರೀತಿದ್ರು. ಹೊಟ್ಟೆ ಬಟ್ಟೆಗೇನು ಕಡಮೆ ಇಲ್ದಿದ್ರಿಂದ ಅಪ್ಪನಿಗೆ ನನ್ನ ಚೆನ್ನಾಗಿ ಓದ್ಸಿ ಆಫೀಸರ್ ಮಾಡಬೇಕಂತ ಆಸೆ ಇತ್ತು. ಅದಕ್ಕೆ ಸರಿಯಾಗಿ ನಾನು ಓದೋದ್ರಲ್ಲಿಯು ಹಿಂದೆ ಬಿದ್ದೋನಲ್ಲ. ಫಸ್ಟ್‌ಕ್ಲಾಸಲ್ಲೆ ಏಳನೇ ಕ್ಲಾಸು ಮುಗಿಸ್ದೆ. ಆಗ್ಲೆ ಅಪ್ಪ ದಿಢೀರಂತ ಸತ್ತೋದ. ಏನಾಗಿತ್ತೊ ಗೊತ್ತಿಲ್ಲ. ನನಗೆ ಸರಿಯಾಗಿ ತಿಳಿವಳಿಕೆ ಬಾರದ ವಯಸ್ಸು. ಹಾರ್ಟ್‌ಫೇಲು ಅಂದ್ರು. ಇರಬಹುದೇನೊ. ಯಾಕೇಂದ್ರೆ ಅಪ್ಪ ಹು?ರಿಲ್ಲ ಅಂತ ಮಲಗಿದ್ದೂ ನನಗೆ ನೆನಪಿಲ್ಲ. ಆದರೆ ನಂತರದ ನನ್ನ ಆಸೆಗೆಲ್ಲ ಅಪ್ಪನ ಹೆಣಕ್ಕೆ ಇಟ್ಟ ಬೆಂಕೀನೆ ಹತ್ಕೊಂಡು ಬಿಟ್ತು. ಅಪ್ಪ ಎಲ್ಲೆಲ್ಲೋ ಸಾಲ ಮಾಡಿದ್ನಂತೆ. ಹಾಗೆಂದು ಯಾರ‍್ಯಾರೋ ಬಂದು ಅಮ್ಮನ್ನ ಹೆದ್ರಿಸೋರು. ಅಮ್ಮ ಮುಳುಮುಳು ಅಳ್ತಾ ಕೂತ್ಕೊಳ್ಳೋಳು. ನೋಡೋಕೆ ಚಂದ ಇದ್ದ ಅಮ್ಮನ ಬಳಿ ನಮ್ಮ ಪ್ಲಾಂಟರೂ ಒಂದು ದಿನ ಬಂದು, ನಿನ್ನ ಮಗನ್ನ ನಾನು ಚೆನ್ನಾಗಿ ಓದಿಸ್ತೇನೆ, ನೀನೇನೂ ಹೆದ್ರಬೇಡ ಅಂತೆಲ್ಲ ಹೇಳ್ತಿದ್ದನ್ನ ನಾನು ಬಾಗಿಲ ಮರೇಲಿ ನಿಂತು ಕೇಳ್ಕೊಂಡು ಬಹಳ ಸಂತೋ?ಪಟ್ಟಿದ್ದೆ. ಆದ್ರೆ ಏನಾಯ್ತೋ ಏನೋ, ಅವತ್ತು ರಾತ್ರೀನೇ ಅಮ್ಮ ಪೆಟ್ಗೆ ಕಟ್ಕ್ಯಂಡು ಹೊರಡು ಮಗಾ ಎಂದವಳೆ ನನ್ನ ವಿರೋಧದ ನಡುವೆಯೂ ಎಳ್ಕೊಂಡು, ಯಾವುದೋ ಲಾರಿ ಹತ್ತಿ ಚಿಕ್ಕಮಂಗಳೂರಿಗೆ ಬಂದ್‌ಬಿಟ್ಲು. ಅಲ್ಲಿ ಯಾವುದೋ ಗುಡಿಸ್ಲು ಸೇರ‍್ಕಂಡಲ್ಲಿಂದ ನಮ್ಮ ಮತ್ತೊಂದು ಜೀವನ ಶುರು ಆಯಿತು. ಅಮ್ಮ ಅವರಿವರ ಮನೆಕೆಲಸ, ಕಸಮುಸುರೆ ಮಾಡಿ ನನ್ನ ಹೊಟ್ಟೆ ತುಂಬಿಸೋಳು. ನನ್ನ ಮೇಲಿನ ಪ್ರೀತಿ ಮಾತ್ರ ಕಡಿಮೆ ಆಗಿದ್ದಿಲ್ಲ. ಆದ್ರೆ ನನ್ನ ಓದನ್ನು ತಪ್ಪಿಸಿದಳಲ್ಲ ಅಂತ ಒಂದಿ? ದಿನ ಬೇಜಾರು ಇದ್ರು, ವಿ?ಯ ಸ್ವಲ್ಪ ಸ್ವಲ್ಪ ಅರ್ಥ ಆಗ್ತಾ, ಅಮ್ಮ ಮಾಡಿದ್ದು ಸರಿ ಅಂತ ತಿಳಿಯೋಕೆ ಶುರುವಾಯ್ತು. ನನ್ನ ದೇಖರೇಖೇಲೆ ಸದಾ ಮುಳುಗಿರ‍್ತಿದ್ದ ಅಮ್ಮ ಆಗಾಗ್ಗೆ ಹೇಳ್ತಿದ್ದ ಮಾತೊಂದು ನನಗಿನ್ನೂ ನೆನಪಿದೆ. ’ನಿನ್ನಪ್ಪನಿಗೆ ದೇವರು ಮೈಮೇಲೆ ಬಂದೂ ಬಂದೂ, ಸಾಕಾಗಿ ಅವರೇ ದೇವರ ಹತ್ರ ಹೋಗೋ ಹಾಗಾಯ್ತು’ ಅಂತ. ಒಂದಿನ ನಾನು ದೇವಸ್ಥಾನದಲ್ಲಿ ಪ್ರಸಾದದ ಆಸೆಯಿಂದ ನಿಂತಿರೋದನ್ನು ನೋಡಿ ಹಾಗೆಂದ ನೆನಪು. ಎಲ್ಲ ವಿ?ಯಗಳೂ ಹಾಗೇನೆ, ನಮ್ಮ ಅನುಭವಕ್ಕೆ ಬರುವವರೆಗೂ ನಾವು ನಂಬಿಕೆ ಬೆಳೆಸಿಕೊಳ್ಳೋಲ್ಲ. ಅಮ್ಮ ಯಾವಾಗ್ಲೂ ದೇವಸ್ಥಾನ ದೇವರು ಅಂದ್ರೆ ಯಾಕೆ ದೂರ ಇರೋಳು ಅನ್ನೋದು ಈಗ ಅರ್ಥ ಆಗ್ತದೆ.

“ಓಹ್, ಕತೆ ಮಧ್ಯೆ ವಿಮರ್ಶೆ ಬೇಡ ಅಲ್ಲವಾ? ಮುಂದಿಂದು ಕೇಳಿ. ಅಂಥ ನನ್ನ ಅಮ್ಮ ಆಗಾಗ್ಗೆ ದಮ್ಮು ಜಾಸ್ತಿ ಆಗಿ ಹಾಸಿಗೆಹಿಡಿಯೋಕೆ ಶುರು ಮಾಡಿದ್ಲು. ಹೊಟ್ಟೆಗೆ ತತ್ವಾರ ಆಗ್ತಾ ಬಂತು. ಹಿಂಗೆ ದೇವಸ್ಥಾನ ಪ್ರಸಾದಕ್ಕೆ ಕಾಯ್ತಾ ಇರೋದು, ಕೊಳಗೇರಿ ಹುಡುಗ್ರ ಒಟ್ಟಿಗೆ ಗೋಲಿ ಕ್ರಿಕೆಟ್ಟು ಆಡ್ತಾ ಇರೋದ್ರ ಬದಲು ಎಲ್ಲಾದ್ರು ಕೆಲಸ ಹುಡುಕ್ಕಳೋ ಮಗ ಅಂತ ಹೇಳಿದ್ಲು. ನನಗೂ ಎಲ್ಲ ಅರ್ಥವಾಗತೊಡಗಿತ್ತು. ಒಂದಿವಸ ಅಮ್ಮನೇ ಆಕೆ ಮನೆ ಕೆಲಸ ಮಾಡ್ತಿರೋ ಯಜಮಾನರ ಗಿರಣಿಗೆ ನನ್ನ ತಂದು ಸೇರಿಸಿದ್ಲು. ಅಲ್ಲಿಯ ಧೂಳು ನನಗೆ ಒಂಥರಾ ಅಪ್ಯಾಯಮಾನವಾಗ್ತಹೋಯ್ತು. ಅಲ್ಲಿ ನನಗಿಂತ ಹತ್ತು ವ? ದೊಡ್ಡವನಾದ ರಾಧು ಅನ್ನೋವ್ನು ಸಾವುಕಾರ್ರ ಜೀಪಿನ ಡ್ರೈವರ್ ಆಗಿದ್ದ. ಸಾವುಕಾರ್ರು ಖರೀದಿ ಪರೀದಿಗೆ ಹೋಗುವಾಗೆಲ್ಲ ಅವರ ಜೀಪಿನಲ್ಲಿ ನಾನೂ ಹೋಗುತ್ತಿದ್ದೆ. ಜೀಪು ನಿಲ್ಲಿಸಿ ಅವರು ರೈತರ ಹೊಲದಲ್ಲಿ ಕುಳಿತುಕೊಳ್ಳುವಾಗ, ಜೀಪಿನಲ್ಲಿಟ್ಟ ಕುರ್ಚಿ ತಗೊಂಡು ಹೋಗಿ ಹಾಕೋದು ಮುಂತಾದ ಸಣ್ಣ ಸಣ್ಣ ಕೆಲಸ ಮಾಡೋಕೆ ಅಂತ. ಹೀಗೆ ಪರಿಚಯ, ಸ್ನೇಹ ಆದ ರಾಧು ನನಗೂ ಡ್ರೈವಿಂಗ್ ಕಲಿಸಿಕೊಟ್ಟ. ಅದು ನನ್ನ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನೆ ತಂದಿತು. ಕೆಲವು ವ?ಗಳಲ್ಲಿಯೆ ಅಮ್ಮನೂ ಇಲ್ಲವಾದ ಬಳಿಕ, ಒಳ್ಳೆಯವರಾಗಿದ್ದ ಸಾವುಕಾರ್ರು ದೇವರ ಹಾಗೆ ನನ್ನ ನೆರವಿಗೆ ಬಂದರು. ಇಂವ ಹೀಗೆ ತನ್ನ ಅಡಿಯಾಳಾಗಿ ಇರೋದು ಬೇಡ ಅಂತ, ತಮ್ಮ ವಶೀಲಿ ಉಪಯೋಗ್ಸಿ ಒಂದು ಸರ್ಕಾರಿ ಕಚೇರೀಲಿ ನನಗೆ ಡ್ರೈವರ್ ಕೆಲಸ ಕೊಡಿಸಿದ್ರು. ಅ?ತ್ತಿಗೆ ನಾನು ಡ್ರೈವಿಂಗ್‌ನಲ್ಲಿ ಎಕ್ಸಪರ್ಟ್ ಆಗಿದ್ನಲ್ಲ, ಅದೂ ಅವರಿಗೆ ಗೊತ್ತಿತ್ತು. ಸರ್ಕಾರಿ ನೌಕರ ಆದೆ. ಆದ್ರೆ ಈ ಸುಖದ ದಿನದಲ್ಲಿ ನನ್ನ ಅಮ್ಮ ನನ್ನತ್ರ ಇರಲಿಲ್ಲ. ನನಗಾಗಿ ಜೀವ ತೇಯ್ದ ಅಮ್ಮ ಇಲ್ಲವಲ್ಲ ಅಂತ ಬಹಳ ದಿನ ನೋವು ಜೀವ ಹಿಂಡ್ತಿತ್ತು.
ಹೀಗೆ ನನ್ನ ಬದುಕಿಗೊಂದು ನೆಲೆ ಆಯ್ತು.”

“ಬಹಳ ಸಾಹಸದ ಜೀವನಾನಪ್ಪ ನಿಮ್ದು. ಆಗ್ಲಿ ದೇವರು ಬಹಳ ಸಹಾಯ ಮಾಡಿದ” ಶ್ಯಾಮಭಟ್ಟನೆಂದ. ’ಒಳ್ಳೇ ಮನು?ರೇ ದೇವರು ಅನ್ನೋದಾದ್ರೆ ಸರಿ. ಆದ್ರೆ ಈ ಗುಡೀಲಿರೋ ದೇವರೊ, ಅಪ್ಪನ ಮೈಮೇಲೆ ಬರ‍್ತಿದ್ದ ದೇವರೊ, ಉಹುಂ. ನಾನೊಪ್ಪೊಲ್ಲ”

 

“ಅದ್ಸರಿ, ಈ ತಿರುಗೊ ಹುಚ್ಚು ನಿಮಗೆ ಕಡೆಗೆ ಬಂದಿದ್ದಾ?”

“ಹೇಳಿದ್ದ? ಕತೆ ಮುಗಿತಾಯ ಅಲ್ಲಪ್ಪ. ಮುಂದೆ ಕೇಳಿ.

“ನೌಕರಿ ಏನೊ ಆಯ್ತು. ಒಳ್ಳೇ ಹೆಸರು ತಗೊಂಡೆ. ನನಗೂ ಮದುವೆ ಆಗಬೇಕು ಅನ್ನೋ ಆಸೆ ಬಂದು ವರ್ಷಗಳೇ ದಾಟಿತ್ತು. ಆದ್ರೆ ಹಿಂದು ಮುಂದಿಲ್ಲದವನಿಗೆ ಹೆಣ್ಣು ಕೊಡುವವರು ಯಾರು? ಅಂತೂ ಇಂತೂ ಒಂದು ಹೆಣ್ಣು ಸಿಕ್ಕಿದ್ಲು. ನಮ್ಮ ಜಾತಿಯವಳೆ. ನಮ್ಮ ಆಫೀಸಲ್ಲೆ ಕೆಲ್ಸ ಮಾಡ್ತಿದ್ದ ಸ್ನೇಹಿತ್ರು ಮದುವೆ ಗಂಟು ಹಾಕಿದ್ರು. ಒಳ್ಳೆ ಚೆಂದವಾಗಿಯೇ ಇದ್ದವಳು. ಮನೆ ತುಂಬಿದ್ಲು, ಮನಸ್ಸು ತುಂಬಿದ್ಲು. ಅ? ಅಲ್ಲ, ಮದುವೆಯಾಗಿ ಆರು ತಿಂಗಳಿಗೇ ಅಪ್ಪ ಅಂತ್ಲೂ ಅನ್ನಿಸಿಕೊಂಡೆ’ ಎಂದವನು ತುಸು ನಿಲ್ಲಿಸಿ ಶ್ಯಾಮಭಟ್ಟನ ಮುಖ ನೋಡಿದ ಭಾಸ್ಕರ. ಆತ ಬದಿಗೆ ಬಿದ್ದ ಪುರಲೆ ಕಡ್ಡಿಗಳನ್ನು ಮತ್ತೆ ಬೆಂಕಿಗೆ ಒಗೆಯುವುದರಲ್ಲಿ ನಿರತನಾಗಿದ್ದವನು, ಮುಖವೆತ್ತಿ ಭಾಸ್ಕರನತ್ತ ನೋಡಿ, ’ಛೆ, ಛೆ,’ ಅಂದ. ಛೇಛೇ ಕೇಳಿದ್ದರ ಬಗ್ಗೆಯೆ, ಕೇಳದ್ದರ ಬಗ್ಗೆಯೆ ಸ್ಪ?ವಿರಲಿಲ್ಲ.

“ನನಗು ಒಂದು ಬಾರಿ ಥೂ ಥೂ ಅನ್ನಿಸಿತ್ತು. ಮೇಲಾಗಿ ಪರಿಚಯದವರು ಕಂಡಲ್ಲೆಲ್ಲ, ನಿನ್ನ ಅದೃ? ಜೋರಪ್ಪ, ಎ? ಬೇಗ ಅಪ್ಪ ಅನ್ನಿಸ್ಕೊಂಡೆ ಅಂತ ವ್ಯಂಗವಾಗಿ ಹೇಳೋರು. ಚಂದದ ಮಗು. ಅವಳೂ ನನ್ನನ್ನ ಪ್ರೀತಿಯಿಂದ್ಲೆ ಕಾಣೋಳು. ರುಚಿಕಟ್ಟಾಗಿ ಅಡಿಗೆ ಮಾಡಿ ಹಾಕೋಳು, ಹಾಗಾಗಿ ನಾನು ಎಲ್ಲವನ್ನು ಕೊಡವಿ ಹಾಕ್ಕೊಂಡು ಸಂಸಾರ ಮುಂದುವರಿಸಿದೆ. ನನ್ನಂಥವನ ಕೈಹಿಡಿದ್ಲಲ್ಲ ಅನ್ನೋದೆ ನನಗೆ ದೊಡ್ಡದಾಗಿ ಕಾಣಿಸ್ತು.

“ವರ್ಷ ಉರುಳ್ತು. ಎರಡನೆಯದು ಗಂಡು, ಮೂರು, ನಾಲ್ಕು ಹೆಣ್ಣು. ಮದುವೆಯಾಗಿ ಹನ್ನೆರಡು ವರ್ಷಕ್ಕೆ ಇಷ್ಟಾಯ್ತು. ಯಾಕೋ ನನಗೆ ಹೆಣ್ಣುಮಕ್ಕಳ ಮೇಲೇ ಕಕ್ಕುಲಾತಿ ಹೆಚ್ಚಾಗಿತ್ತು. ನಾವು ಹೆಚ್ಚೂಕಮ್ಮಿ ಪ್ರತಿ ವರ್ಷ ಯಾವುದಾದರು ದೇವರ ಸ್ಥಳಕ್ಕೆ ಹೋಗ್ತಿದ್ದೆವು. ಒಮ್ಮೆ ಧರ್ಮಸ್ಥಳ, ಒಮ್ಮೆ ತಿರುಪತಿ, ಒಮ್ಮೆ ಇಡಗುಂಜಿ ಹೀಗೆ. ನಾನು ರಜೆ ತೆಗೆದುಕೊಳ್ಳುತ್ತಿದ್ದದ್ದೆ ಆವಾಗ.

ಹೆಂಡ್ರು ಮಕ್ಕಳನ್ನೆಲ್ಲ ನಾಲ್ಕು ದಿನ ಹೀಗೆ ತಿರುಗಿಸ್ತಿದ್ದೆ. ಮಕ್ಕಳು ಚಿಕ್ಕವರಿದ್ದಾಗ್ಲೆ ಮತ್ತೆ ಆ ಆಘಾತ ಆಗಿಬಿಟ್ತು. ಇದ್ದಕ್ಕಿದ್ದಂತೆ ಮನೇಲಿ ಹೊಗೆ ತುಂಬಿಕೊಂಡು ಬಿಟ್ತು. ಅನೈತಿಕತೆಯ ಘಾಟಿನ ಹೊಗೆ. ನಾನು ಬೀಡಿ ಸಿಗರೇಟು ತಂಬಾಕು ಇಂಥ ಯಾವುದಕ್ಕೂ ಬಲಿಯಾದವನಲ್ಲ. ಆದ್ರು ನನ್ನ ಹೆಂಡ್ತಿಗೆ ಕ್ಯಾನ್ಸರ್ ಆಯ್ತು. ವ? ಮುಗಿಯೋದ್ರಲ್ಲೆ ಹರ ಹರಾ ಅಂದ್ಲು. ಮಕ್ಕಳಿಗಾಗಿ ಅತ್ತೆ. ಅವರಿಗೆ ನಾನೇ ಅಪ್ಪ ಅಮ್ಮ ಆಗಿ ಸಾಕ್ದೆ. ಬಿಡದೆ ವ?ಕ್ಕೊಂದು ಬಾರಿ ಯಾತ್ರೆಗೂ ಕರ‍್ಕೊಂಡು ಹೋಗ್ತಾ ಇದ್ದೆ. ಒಮ್ಮೆ ಹೋದಾಗ ನನ್ನ ದೊಡ್ಡ ಮಗಳು ವಾಪ್ಸು ಬರ‍್ಲೇ ಇಲ್ಲ. ಕಾಗದ ಬರೆದ್ಲು – ಯಾರ ಜೊತೆಗೋ ಇದ್ದೇನೆ, ಯೋಚ್ನೆ ಮಾಡಬೇಡಿ ಅಂತ. ನನಗೇನು ಜಾತಿ ಪಾತಿಯ ಬಗ್ಗೆ ಅಂಥಾ ನಂಬಿಕೆ ಇರ‍್ಲಿಲ್ಲ. ಬೇರೆ ಜಾತಿಯವ್ನ ಮದುವೆ ಆದರು ಬೇಡ ಅಂತಿರಲಿಲ್ಲ. ಆದರೆ ಅದ್ಯಾವುದಕ್ಕು ಅವಕಾಶ ಕೊಡದ ನನ್ನ ಮಗಳು ವಿಳಾಸ ಇಲ್ಲದೆ ಹೋಗಿಬಿಟ್ಲು.”

“ಈಗಿನ ಕಾಲದ ಹುಡುಗೀರೆ ಹಾಗೆ ನೋಡಿ. ನಮ್ಮೂರಲ್ಲಿಯು ಇಂಥಾದ್ದೆ ಸುಮಾರು ಘಟನೆ ಆಗಿದೆ. ಆ ಒಂದು ಕ್ಷಣದಲ್ಲಿ ಒಂದು ರೀತಿ ದೆವ್ವ ಮೆಟ್ಗ್ಯಂಡ ಹಾಂಗೆ ಈ ಹುಡುಗೀರು ಅದು ತನಕ ತಮ್ಮನ್ನ ಜೀವದಲ್ಲಿ ಜೀವವಾಗಿ ಪ್ರೀತಿಸಿದ ಅಪ್ಪ ಅಮ್ಮನ್ನ ಬಿಟ್ಟು.. ಇವರಿಗೆಲ್ಲ ಏನಾಗ್ತದೆ ಅಂತ?”

ಭಾಸ್ಕರ ಅವನ ಮಾತಿಗೆ ಉತ್ತರ ಕೊಡಲಿಲ್ಲ. ಆತ ತನ್ನ ಕತೆಯ ತೀವ್ರ ಹರಿವಿನಲ್ಲಿ ನಿಲ್ಲಲಾಗದವನಂತಿದ್ದ.

“ಉಳಿದವರು ಮೂರು ಜನ. ಒಬ್ಬಳು ಮಗಳು ಹೀಗಾದದ್ದು ನನ್ನನ್ನ ಬಹು ಕಾಲ ಕಾಡಿಸಿತ್ತು ನಿಜ. ಆದರೆ ಎರಡನೆಯವಳು ಖಂಡಿತ ಹಾಗಲ್ಲ ಅಂತ ನನಗೆ ಅನ್ನಿಸಿತ್ತು. ಒಳ್ಳೇ ಕಡೆ ಕೊಟ್ಟು ಝಾಂ ಝೂಂ ಅಂತ ಮದುವೆ ಮಾಡ್ಬೇಕು ಅಂತ ದುಡ್ಡೂ ತೆಗೆದಿರಿಸಿದ್ದೆ. ಇವಳು ಮಾತ್ರ ನನ್ನ ಮಗಳೇ ಅಂತ ಬಹಳ ವಿಶ್ವಾಸದಿಂದಿದ್ದೆ. ಅದಕ್ಕವಳೂ ಭಂಗ ತಂದಳಾ ಅಂತ ಕೇಳಬೇಡಿ, ಹೇಳಿದೆನಲ್ಲ ನನ್ನ ಮಗಳು ಅಂತ. ಆದರೆ ದೇವರು, ನೀವು ಹೇಳುವ ದೇವರು ಅವಳನ್ನು ಕರೆದುಕೊಂಡುಬಿಟ್ಟ. ಅದೂ ಹೇಗೆ ಅಂತೀರಾ? ….ಮತ್ತೆ ವರ್ಷದ ಯಾತ್ರೆಗೆ ಅಂತ ಮಧುರೈಗೆ ಹೋಗ್ತಿದ್ದೆವು. ಬಸ್ಸಿನ ಒಂದು ಭಾಗದಲ್ಲಿ ಮುಂದೆ, ಕಿರಿಯವಳು, ಹಿರಿಯವ ಕೂತಿದ್ರು. ಸ್ವಲ್ಪ ಹಿಂದಿನ ಸೀಟಲ್ಲಿ ನಾನು, ಕಿರಿಯವನು ಕೂತಿದ್ವಿ. ಬಸ್ಸು ಆಕ್ಸಿಡೆಂಟ್ ಆಗಿ ಸೇತುವೆಯೊಂದರ ಕೆಳಗೆ ಉರುಳಿಬಿತ್ತು. ನಮ್ಮ ಕುಟುಂಬದಲ್ಲಿ ಹಿಂದೆ ಕುಳಿತ ನಾವಿಬ್ರು ಮಾತ್ರ ಉಳಿದ್ವಿ.”

ಈ ಬಾರಿ ಶ್ಯಾಮಭಟ್ಟನು ಎದ್ದು ಬಂದು ಭಾಸ್ಕರನ ಭುಜದ ಮೇಲೆ ಕೈಯಿಟ್ಟ. ಮೌನದಲ್ಲಿಯೆ ಸಾಂತ್ವನ ಹೇಳಲು ಪ್ರಯತ್ನಿಸಿದ. ಭಾಸ್ಕರ ನಿರಾಕರಿಸುತ್ತ ಹೇಳಿದ – ’ದುಃಖಪಡೊ, ಸಾಂತ್ವನಕೇಳೊ ಕಾಲವೆಲ್ಲ ಕಳೆದು ಹೋಗಿದೆ ಬಿಡಿ. ನೆನಪಾದಾಗಲೆಲ್ಲ ಖಿನ್ನತೆ ಆವರಿಸಿಕೊಳ್ಳುತ್ತದೆ, ಇಲ್ಲ ಅಂತಲ್ಲ. ಅದೆಲ್ಲ ಸುಟ್ಟುಹೋದ ಪುಟಗಳು ಅಂತ ಸಮಾಧಾನ ಮಾಡಿಕೊಳ್ತೇನೆ. ಆದರೆ ಆವತ್ತಿನಿಂದ ನನ್ನ ಯಾತ್ರೆ ನಿಂತಿತು. ದೇವರನ್ನು ಪೂರಾ ದೂರ ಸರಿಸಿದೆ. ನಂಬಿಕೆ ಕಳ್ಕೊಂಡೆ. ಅಮ್ಮ ಹೇಳ್ತಿದ್ದುದ್ದರ ಅರ್ಥ ಆಗೋಕೆ ಶುರುವಾಯ್ತು. ಹಾಗೆಂದು ಆ ಬಗ್ಗೆ ವಾದಮಾಡೋಕೆ ಹೋಗೋಲ್ಲ. ನಮ್ಮ ಬದುಕಿನ ಪಾಠ ಇರುವುದು ನಮಗಾಗಿ. ಬೇರೆಯವರಿಗೆ ಹೇಳೊದ್ರಲ್ಲಿ ಅರ್ಥ ಇಲ್ಲ ಅನ್ನುವವನು ನಾನು. ಆದರೆ ಇನ್ನೊಂದು ವಿಚಿತ್ರ ಗೊತ್ತಾ ನಿಮಗೆ, ನನ್ನ ಉಳಿದ ಒಬ್ಬ ಮಗ ನನ್ನ ಅಪ್ಪನ ಹಾಗೆ ಆಗಿಬಿಟ್ಟಿದ್ದ.”
ಶ್ಯಾಮಭಟ್ಟ ಪ್ರಶ್ನಾರ್ಥಕವಾಗಿ ಇವನತ್ತ ನೋಡಿದ.

“ಕತೆ ಪೂರಾ ಮುಗಿಸಿಬಿಟ್ತೇನೆ. ಇಬ್ಬರು ಮಕ್ಕಳು ಹೋದ್ಮೇಲೆ ನೌಕರಿ ಮುಂದುವರಿಸೋಕಾಗ್ದೆ ಇನ್ನೂ ನಾಲ್ಕು ವ? ಸರ್ವೀಸಿದ್ದಾಗ್ಲೆ ಸ್ವಯಂನಿವೃತ್ತಿ ತಗೊಂಡೆ. ಬಂದ ಹಣದಲ್ಲಿ ಹತ್ತಿರದ ಹಳ್ಳೀಲಿ ಒಂದಿ? ಗದ್ದೆ ತಗೊಂಡು ಮಗನನ್ನು ರೈತಾಪಿ ದುಡಿಮೆಗೆ ಹಾಕಿದೆ. ದೇವರ ಕೋಣೆ ಇಲ್ದೆ ಇರೋ ಮನೆ ಕಟ್ಟಿಸ್ದೆ. ಮಗಂಗೆ ಮದುವೇನು ಮಾಡ್ದೆ. ಮಗ ಸೊಸೆ ನನ್ನ ಚೆನ್ನಾಗೆ ನೋಡ್ಕೊತಿದಾರೆ. ಆದ್ರೆ ಅವರಿಬ್ಬರಿಗೂ ದೇವರ ಮೇಲೆ ಇನ್ನಿಲ್ದೆ ಇರುವ? ಭಕ್ತಿ. ತಿಂಗಳಿಗೊಂದು ಪೂಜೆ ಪುನಸ್ಕಾರ ಆಗ್ಲೆ ಬೇಕು. ನನಗದೆಲ್ಲಾ ರೇಜಿಗೆ. ಹಾಗೆ ವಿಶೇ? ಇಟ್ಕೊಂಡಿರೋವಾಗ್ಲೆಲ್ಲ, ಇದೆಲ್ಲ ನನಗೆ ಒಗ್ಗಿ ಬರೋಲ್ಲಪ್ಪ ಅಂತ ತಿರುಗೋಕೆ ಶುರು ಮಾಡಿಬಿಡ್ತೇನೆ. ನಿನ್ನೆಯಿಂದ ಒಂದು ವಾರ ಕಾಲ ಮಕ್ಕಳಾಗೋಕೆ ಅಂತ ಅದೇನೊ ನಾಗಪ್ರತಿ? ಅಂತ ಮಗ ಇಟ್ಕೊಂಡಿದಾನೆ. ಅದಕ್ಕೆ ಊರು ತಿರುಗೊ ಯೋಚನೆ ಬಂತು. ಆಗ ನೆನಪಿಗೆ ಬಂದದ್ದೆ ಈ ಗುರು ಅನ್ನೋ ಸ್ನೇಹಿತ. ಮೊದ್ಲು ನಾನು ಕೆಲಸ ಮಾಡ್ತಿದ್ದ ಮಿಲ್ಲಲ್ಲೆ ಕೆಲಸ ಮಾಡ್ತಿದ್ದ. ಅವನ ಮದುವೇಗೆ ಈ ಊರಿಗೆ ಬಂದಿದ್ದೆ. ಈಗ ಅವ್ನು ಇಲ್ಲೆ ಅವನ ಅಪ್ಪ ಸತ್ತೋದ್ಮೇಲೆ ಆಸ್ತಿ ನೋಡ್ಕಂಡಿದ್ದಾನಂತೆ. ಮುದ್ದಾಂ ಬಾ ಅಂತ ಹೇಳಿದ್ದ. ಅದಕ್ಕೆ ಹೊರಟು ಬಂದ್ಬಿಟ್ಟೆ. ಹೇಗೂ ನೌಕರಿ ಬಿಟ್ಮೇಲೆ ಒಂದು ಸೆಕೆಂಡ್‌ಹ್ಯಾಂಡ್ ಕಾರು ತಗೊಂಡಿದ್ದೆನಲ್ಲ, ಅದೇ ಈಗ ನನ್ನ ಜೀವನ ಸಂಗಾತಿ. ಯಾವತ್ತೂ ಕೈಕೊಡದೆ ಇದ್ದದ್ದು ಇವತ್ತು ನೋಡಿ..”

ಕತೆ ದೊಡ್ಡದಾಗಿಬಿಡ್ತು ಅನ್ನೋ ಅವಸರದಲ್ಲಿ ಥಟ್ಟನೆ ಮುಕ್ತಾಯ ಕೊಡೋ ಕತೆಗಾರನ ಥರದಲ್ಲಿ ಧಡ ಧಡ ಅಂತ ಮುಕ್ತಾಯ ಕೊಟ್ಟು ಸುಮ್ಮನೆ ಕುಳಿತುಬಿಟ್ಟ ಭಾಸ್ಕರ. ಅಥವಾ ಹಳೆಯ ಕಹಿ ನೆನಪುಗಳ? ಸರಾಗವಾಗಿ ಇತ್ತೀಚೆಗಿನ ಕಹಿ ನೆನಪುಗಳನ್ನು ಹೇಳುವುದು ಕ?ವಾಗಿದ್ದಕ್ಕೊ ಏನೊ ಎಂದೂ ಅನ್ನಿಸಿತು. ಅಲ್ಲಿಯವರೆಗಿನ ನಿರಾಳಭಾವ ತಟ್ಟನೆ ಮರೆಯಾಗಿ ಮನಸ್ಸು ಮತ್ತೆ ಭಾರವಾಯಿತೆ ಎಂದು ತನ್ನನ್ನೆ ಪ್ರಶ್ನಿಸಿಕೊಂಡ. ಇಲ್ಲ. ಏನೋ ಸಮಾಧಾನವಾದಂತಾಗಿದೆ. ವಯಸ್ಸು ಕಳೆದ ಮೇಲೆ ಉಂಟಾಗುವ ಆಘಾತಗಳನ್ನು ಆ ಕ್ಷಣದಲ್ಲಿಯೆ ಪ್ರೌಢಮನಸ್ಸು ಸಾಂತ್ವನಗೊಳಿಸುವುದರಿಂದ ಅವ? ಕಾಡಲಿಕ್ಕಿಲ್ಲ ಎನ್ನಿಸಿತು. ಶ್ಯಾಮಭಟ್ಟನತ್ತ ನೋಡಿದ. ಆತ ಒಮ್ಮೆ ಮೇಲೆ ಚಂದ್ರನತ್ತ ಒಮ್ಮೆ ಕೆಳಗೆ ನೋಡುತ್ತಿದ್ದವ, “ರಾತ್ರಿ ಬಹಳ ಆಯಿತೇನೊ, ಮಲಗಿ” ಎಂದ. “ಛೆ, ಛೆ, ಮಲಗುವುದಾ? ನಿಮ್ಮ ಕತೆ ಆಗಲೇ ಇಲ್ಲ” ಎಂದ ಭಾಸ್ಕರ. ಶ್ಯಾಮಭಟ್ಟನ ಮುಖದಲ್ಲಿ ಕಹಿ ಗೆರೆಯೊಂದು ಮಿನುಗಿ ಹೋದಂತೆ ಕಂಡು, “ಯಾಕೆ ನಿಮಗೆ ಇ?ವಿಲ್ಲವೇನೋ. ಇಲ್ಲವಾದರೆ ಬಿಡಿ” ಎಂದ. ಆತ “ಹಾಗೇನಿಲ್ಲ, ನನ್ನ ಬದುಕಲ್ಲಿ ಇಂಥ ಏರಿಳಿತಗಳಿಲ್ಲವಪ್ಪ. ಸಾದಾ ಕತೆ. ಆದರೆ ನಾವು ಮಾಡಿಕೊಂಡ ಒಪ್ಪಂದದ ಪ್ರಕಾರ ಹೇಳೊದು ನನ್ನ ಕರ್ತವ್ಯ. ಜೊತೆಗೆ ನನ್ನ ಕತೆಗೂ ನಿಮ್ಮ ಕತೆಗೂ ವೈರುಧ್ಯ ಇರೋದ್ರಿಂದ ಹೇಳೋದು ಒಳ್ಳೇದೆ. ನಿಮ್ಮ ಹಾಗೆ ನನಗೆ ದೇವರು ಕ? ಕೊಡ್ಲಿಲ್ಲಪ್ಪ. ಜೊತೆಗೆ ದೇವರೇ ನಮ್ಮ ಮನೆಯ ಅನ್ನ ಇದ್ದ ಹಾಗೆ. ಅಂದ್ರೆ ಅನ್ನ ಕೊಡೋನು ಅಂತ. ಹಾಗಂದ್ರೆ ಅರ್ಥ ಆಗಿರ‍್ಬೇಕಲ್ಲ. ನಮ್ದು ಪೌರೋಹಿತ್ಯ ವಂಶ. ಶ್ರಾದ್ಧ, ಸಂಸ್ಕಾರ, ಪೂಜೆ-ಪುನಸ್ಕಾರ, ಪೌರೋಹಿತ್ಕೆ ಅಂತ ಮಾಡ್ಕೊಂಡು ಜೀವನ ಸಾಗಿಸೋದು. ಒಂದರ್ಧ ಎಕರೆ ಅಡಿಕೆ ತೋಟಾನು ಇದೆ. ನಾವು ಇಬ್ಬರು ಮಕ್ಕಳು. ನಾನು ಎರಡನೆಯವನು. ನಾನು ಹುಟ್ಟಿದ್ದು ಸಿದ್ಧಾರ್ಥಿ ಸಂವತ್ಸರದ ಶ್ರಾವಣ ಶುಕ್ಲ ಭರಣಿ ಮಿತಿಯಂದು. ಅಂದರೆ ನನಗೀಗ ೩೮ ವ? ವಯಸ್ಸು. ನಾವೂ ಬಡವರೆ. ಇದ್ದುದು ಸ್ವಲ್ಪ ಜಮೀನ?. ಜೊತೆಗೆ ಭಟ್ಟತನ. ಹೊಟ್ಟೆ ಬಟ್ಟೆಗೆ ಸಾಕಾಗುವ? ಉತ್ಪನ್ನ ಬರುತ್ತಿರಲಿಲ್ಲ. ಈ ಜಮೀನಿನಲ್ಲಿ ಇಬ್ಬರು ಮಕ್ಕಳ ಜೀವನ ಸಾಗೊಲ್ಲ ಅಂತ ಅಪ್ಪ ಆಲೋಚನೆ ಮಾಡಿ ನನ್ನ ಹೊರಗಡೆ ಪೌರೋಹಿತ್ಯಕ್ಕೆ ಕಳಿಸಬೇಕು ಅಂತ ಪಾಠಶಾಲೆಗೆ ಹಾಕಿದ. ಮೂರು ವ? ಉಮಚಗಿ ಪಾಠಶಾಲೆಗೆ ಹೋಗಿ ಒಂದಿ? ಕಾಲೋಚಿತ ಮಂತ್ರ, ಕೈಕರಣ ಕಲ್ತುಕೊಂಡೆ. ಯಾವುದಾದರೂ ದೇವಸ್ಥಾನದಲ್ಲಿಯೋ, ಇಲ್ಲ ಬೆಂಗಳೂರಿಗೆ ಹೋಗಿಯೋ ಜೀವನ ಮಾಡ್ಲಿ ಅನ್ನೋದು ಅಪ್ಪನ ಆಸೆ ಆಗಿತ್ತು. ಆದ್ರೆ ನನಗೆ ಇದ್ದಕ್ಕಿದ್ದಂತೆ ಏನಾದ್ರು ಸಾಧನೆ ಮಾಡ್ಬೇಕು ಅನ್ನಿಸಿಬಿಟ್ತು. ಆ ಸಮಯಕ್ಕೆ ಸರಿಯಾಗಿ ಒಬ್ಬ ಮಂತ್ರವಾದಿಯ ಪರಿಚಯಾನು ಆಯ್ತು. ಹೊರಟುಬಿಟ್ಟೆ ಕೇರಳಕ್ಕೆ. ಭರಣಿ ನಕ್ಷತ್ರದಲ್ಲಿ ಹುಟ್ಟಿದೋನು ಧರಣಿ ಆಳ್ತಾನೆ ಅಂತಿದ್ಲು ನನ್ನಮ್ಮ. ಧರಣಿ ಆಳೋಕಂತು ಆಗೊಲ್ಲ, ಸಾಧನೆ ಮಾಡಿ ಹೆಸರು ತಗೋಬೇಕು ಅಂತಾನು ಇತ್ತು. ಅಲ್ಲಿ ಸರಿಯಾಗಿ ನಾಲ್ಕು ವ? ಇದ್ದೆ. ಬಹಳ? ಕಲಿತೆ ಅನ್ನೋ ಹೆಮ್ಮೇನು ಇದೆ. ವಾಪಸ್ಸು ಊರಿಗೆ ಬಂದೆ – ಅಪ್ಪ ಸತ್ತ ಸುದ್ದಿ ಕೇಳಿ. ಒಂದಿ? ಮಂತ್ರ ಪೌರೋಹಿತ್ಕೆ ಕಲಿತಿದ್ನಲ್ಲ, ಜೊತೆಗೆ ಕೇರಳದಲ್ಲಿದ್ದು ಕಲಿತ ಮಂತ್ರ ತಂತ್ರದಿಂದ ಧಾಡಸಿತನಾನು ಬಂದಿತ್ತು. ಹಾಗಾಗಿ ದೊಡ್ಡಭಟ್ಟ ಅನ್ನಿಸ್ಕೊಂಡಿದ್ದೆ. ಅಪ್ಪನ ಶಿ?ವೃಂದದ ಮನೆ ಪೌರೋಹಿತ್ಕೆ ನಂದಾಯ್ತು. ಆ ಕಾಲದಲ್ಲಿ ಬೇಜಾನಾಗಿ ನಮ್ಮ ಜಾತೀಲಿ ಹೆಣ್ಣೂ ಸಿಗ್ತಿದ್ವು. ಮದುವೇನು ಆಯ್ತು. ಅದೇನೊ ಮತ್ತೊಂದು ವ?ಕ್ಕೆ ಅಣ್ಣ ಕೊನೆ ಕೊಯ್ಯೋಕೆ ಅಂತ ಅಡಿಕೆಮರ ಹತ್ತಿ ಬಿದ್ದು ಸತ್ತೋದ. ಅದೇ ಸತ್ಯ ಆಗಿದ್ರು ಆಗದ ಜನ ಇವನೇ ಮಾಟ ಮಂತ್ರ ಮಾಡಿಸ್ದ, ಆಸ್ತಿ ಆಸೆಗೆ ಅಂತ ಆಡ್ಕೊಂಡ್ರು. ನಾನದಕ್ಕೆಲ್ಲ ತಲೆ ಕೆಡಿಸಿಕೊಳ್ಲಿಲ್ಲ. ಅಣ್ಣಂಗೆ
ಮಕ್ಕಳಿರಲಿಲ್ಲ. ಅತ್ತಿಗೇನು ನಮ್ಮ ಜೊತೇಗೆ ಚಲೋದಾಗೆ ಇದಾಳೆ. ದೇವರು ಸತ್ಯ ನೋಡ್ಕೋತಾನೆ ಅಂದ್ಕೊಂಡೆ. ಆದ್ರೆ ಅದೇನಾಯ್ತೊ ಏನೊ, ಶಿ?ರು ಒಬ್ಬಬ್ಬರೇ ನನ್ನ ಬಿಡೋಕೆ ಶುರು ಮಾಡಿದ್ರು. ಈಗ ಉಳಿದಿರೋದು ಆ ಜಮೀನು ಉತ್ಪನ್ನ ಮಾತ್ರ. ದೇವರು ಅ?ದ್ರು ನಡೆಸ್ತಿದಾನಲ್ಲ ಅಂತ ನನಗಂತು ತೃಪ್ತಿ ಇದೆ. ಒಂದು ಗಂಡು ಒಂದು ಹೆಣ್ಣು ಹೀಗೆ ಎರಡು ಮಕ್ಕಳ ತಂದೆ ಆಗಿದೀನಿ. ಮಂತ್ರ ತಂತ್ರದಲ್ಲಿ ಒಂದಿ? ಸಾಧನೇನು ಮಾಡಿದೀನಿ..” ಆತ ಇದ್ದಕ್ಕಿದ್ದಂತೆ ಮಾತು ನಿಲ್ಲಿಸಿ, ಮತ್ತೆ “ಹುಂ, ಎರಡನೆ ಝಾಮ ಶುರುವಾಯ್ತೇನೊ. ನನಗೆ ಕಣ್ಣು ಎಳೀತಿದೆ, ನಾನಂತು ತುಸು ಮಲಗ್ತೇನೆ” ಎಂದವನೆ ಹೊದೆದ ಶಾಲನ್ನೆ ಹಾಸಿಕೊಂಡು ಕಟ್ಟಿಗೆ ತುಂಡೊಂದಕ್ಕೆ ತಲೆಗೆ ಕಟ್ಟಿದ ಮಫ್ಲರನ್ನ ಮಡಿಚಿ ಒತ್ತಿ ದಿಂಬಾಗಿಸಿ ಅಡ್ಡಾದ. ತಾನೂ ತುಸು ಹೊತ್ತು ನಿದ್ದೆ ಮಾಡುವುದು ಒಳ್ಳೆಯದು ಎಂದು ಭಾಸ್ಕರನಿಗೆ ಅನ್ನಿಸಿತು.

*  *  *  *

ಎಷ್ಟು ಹೊತ್ತಿನ ಬಳಿಕ ತಟ್ಟನೆ ಎಚ್ಚರವಾಯಿತು. ಬೆಂಕಿಯತ್ತ ನೋಡಿದ. ಉರಿದ ಕೊಳ್ಳಿಗಳು ತೆಳುವಾಗಿ ಬೂದಿಯನ್ನು ತಮ್ಮ ಮೇಲೆ ಹೊದೆದುಕೊಂಡು ಮೃದು ಶಾಖ ಬೀರುತ್ತಿದ್ದವು. ಕೊಳ್ಳಿಗಳನ್ನು ನಿಧಾನವಾಗಿ ಕೊಡಹಿ ನುರಿದ. ಬೂದಿ ಮುಚ್ಚಿದ ಕೆಂಡ ಎಂದರೆ ಇದೇ ಎಂದುಕೊಳ್ಳುತ್ತ ಅರ್ಧ ಸುಟ್ಟ ಕಟ್ಟಿಗೆಗಳನ್ನು ಬೆಂಕಿಯತ್ತ ಸರಿಸಿ ಉರಿಸಿ ತಣ್ಣಗಾಗುತ್ತಿದ್ದ ಕೈಯನ್ನು ಕಾಯಿಸಿಕೊಂಡ. ಕಾಯಿಸಿಕೊಳ್ಳುತ್ತಲೆ ಸುತ್ತ ನೋಡಿದರೆ ಶ್ಯಾಮಭಟ್ಟನಿಲ್ಲ. ಓಹ್, ಒಂದಾ ಮಾಡಲು ಹೋಗಿರಬೇಕು ಎನ್ನಿಸುತ್ತಿದ್ದಂತೆ ತನಗೂ ಆ ದರ್ದು ಬಂದ ಹಾಗೆ ಅನ್ನಿಸಿ ಎದ್ದು ಹೊರಟ. ಕೈಯಲ್ಲಿದ್ದ ಬ್ಯಾಟರಿಯನ್ನು ಬಿಡುವ ಅಗತ್ಯವು ಇಲ್ಲದ? ತಿಂಗಳ ಬೆಳಕು ಢಾಳಾಗಿ ಹರಡಿತ್ತು. ಒಂದಾ ಮಾಡುತ್ತಲೆ ಮೇಲೆ ನೋಡಿದರೆ ಚಂದಿರನೊಟ್ಟಿಗೆ ನಕ್ಷತ್ರಗಳೂ ಪರಸ್ಪರ ಕಣ್ಣುಹೊಡೆಯುತ್ತ ಬೆಳಕು ಚೆಲ್ಲುತ್ತಿದ್ದವು. ಖುಷಿಯಾಯಿತು. ನಿಂತಲ್ಲೆ ಸುತ್ತ ತಿರುಗಿ ನೋಡಿದ. ಕೆಲ ಹೊತ್ತಿನ ಮುಂಚೆ ರಸ್ತೆಯಲ್ಲಿ ನಿಂತು ನೋಡಿದಾಗ ಬಿಡಿಸಿಟ್ಟ ಕೊಡೆಯಂತೆ ಕಾಣುತ್ತಿದ್ದ ಮರಗಳು ಇದೀಗ ಚಂದವಾದ ಚಪ್ಪರದಂತೆ ಕಾಣುತ್ತಿದ್ದವು. ನೆನಪಿಗೆ ಬಂದ ಹಾಡೊಂದನ್ನು ಗುನುಗುತ್ತ ಮತ್ತೆ ಬೆಂಕಿಯ ಹತ್ತಿರ ಬಂದರೆ ಠಣ್ ಠಣ್ ಎನ್ನುವ ಶಬ್ದ ಜೊತೆಗೇ ಧಡಾರ್ ಎನ್ನುವ ಶಬ್ದ ಕೇಳತೊಡಗಿತು. ಪ್ರಾಯಶಃ ಇದೇ ಸದ್ದಿಗೇ ತನಗೆ ಎಚ್ಚರವಾಗಿದ್ದೆ ಹೊರತಾಗಿ ಉಚ್ಚೆ ಬಂದದ್ದಕ್ಕಲ್ಲ ಎಂದು ಇದ್ದಕ್ಕಿದ್ದಂತೆ ಅನ್ನಿಸಿ ಸದ್ದು ಬರುವ ದಿಕ್ಕಿನತ್ತ ನೋಡಿದ. ಹೌದು. ಗರ್ಭಗುಡಿಯೊಳಗೇ ಈ ಶಬ್ದ. ಶ್ಯಾಮಭಟ್ಟನೂ ಇಲ್ಲ ಎಂದಾದ ಮೇಲೆ ಅವನು ಒಳಗೆ ಹೋಗಿ ಹಾವನ್ನೋ ಚೇಳನ್ನೊ ಹೊಡೆಯುತ್ತಿರಬೇಕು ಎನ್ನಿಸಿ ಗಡಿಬಿಡಿಯಿಂದ ಓಡಿ, ’ಓಯ್ ಭಟ್ರೆ ಏನಾಯ್ತು’ ಎನ್ನುತ್ತ ಗರ್ಭಗುಡಿಯ ಬಾಗಿಲ ಬಳಿ ಬಂದು ನಿಂತ. ಬಾಗಿಲ ಮೂಲಕ ನುಗ್ಗಿದ ಚಂದ್ರನ ಬೆಳಕಲ್ಲಿ ಚಡ್ಡಿಯೊಂದನ್ನು ಬಿಟ್ಟು ಉಳಿದಂತೆ ನಗ್ನವಾಗಿಯೆ ಇದ್ದ ಶ್ಯಾಮಭಟ್ಟ ಕಾಣಿಸಿದ. ದೊಡ್ಡದಾದ ಹಾರೆಯೊಂದನ್ನು ಹಿಡಿದು ಶಿವಲಿಂಗದ ಬಳಿ ನಿಂತಿದ್ದ ಅವನ ಮೈಯಲ್ಲಿ ಬೆವರು ಸುರಿಯುತ್ತಿತ್ತು. “ಓಹ್ ಎಚ್ಚರವಾಯಿತಾ, ನಿಮಗೆ ಎಚ್ಚರ ಆಗಬಾರದು, ಪಾಪ, ನಿದ್ದೆ ಮಾಡಿಕೊಳ್ಳಲಿ ಎಂದು ಇಷ್ಟು ಹೊತ್ತೂ ನಿಧಾನಕ್ಕೆ ಅಗೆಯುತ್ತಿದ್ದೆ, ಎಲ್ಲೋ ದೊಡ್ಡ ಕಲ್ಲು ಸಿಕ್ಕಿರಬೇಕು ನೋಡಿ ಹಾರೆಗೆ, ಶಬ್ದ ಜೋರಾಯಿತು” ಎಂದ. ಅವನ ಅಮಾಯಕ ಸಂಬಂಧವಿಲ್ಲದ ವಿವರಣೆಗೆ ಮುಖ ತಿರುಗಿಸಿದ ಭಾಸ್ಕರ. ಎಲ್ಲವೂ ತನಗೆ ಅರ್ಥವಾಗಿದೆ ಎಂದು ಕೂಡ ಈತ ಯೋಚಿಸಬಾರದೆ ಎನ್ನಿಸಿತು ಅರೆಕ್ಷಣ. ಶ್ಯಾಮಭಟ್ಟ ಥಟ್ಟನೆ, “ಹಾಂ, ಹಾಂ, ಬಾಗಿಲಲ್ಲಿ ನಿಂತಿದ್ದೀರಿ ನೀವು; ಚಪ್ಪಲಿ ಅಲ್ಲಿಯೆ ಬಿಟ್ಟು ಒಳಗೆ ಬನ್ನಿ, ಚಂದ್ರನ ಬೆಳಕು ಗುಡಿಯ ಹೊಸ್ತಿಲ ಮೇಲೆ ಎ? ಸಮವಾಗಿ ಬೀಳ್ತಿದೆ ನೋಡಿ, ನನ್ನ ಕೆಲಸ ಮುಗಿಯುವ ತನಕ ಹೀಗೇ ಇರಬೇಕು” ಎಂದ. ಭಾಸ್ಕರ ತನ್ನ?ಕ್ಕೆ ನಗುತ್ತ ಚಪ್ಪಲಿ ಕಳಚಿಟ್ಟು ಒಳಗೆ ಹೋದ. ಗರ್ಭಗುಡಿಯ ಒಳಾಂಗಣ ಹೊರಗಿನಿಂದ ಕಾಣುವುದಕ್ಕಿಂತ ವಿಶಾಲವಾಗಿತ್ತು. ಶ್ಯಾಮಭಟ್ಟ ಅದಾಗಲೆ ಲಿಂಗದ ಸುತ್ತ ಅಗೆದು ಲಿಂಗವನ್ನ ಸರಿಸುವ? ಜಾಗ ಮಾಡಿಟ್ಟಿದ್ದ. ಭಾಸ್ಕರ ತಣ್ಣಗೆ ಹೇಳಿದ – “ನಿಮ್ಮಂಥವರಿಂದ ಈ ಬಗೆಯ ಕೆಲಸವನ್ನು ನಾನು ನಿರೀಕ್ಷಿಸಿರಲಿಲ್ಲ.” ತಲೆಯೆತ್ತಿ ಇವನತ್ತ ನೋಡಿದ ಶ್ಯಾಮಭಟ್ಟ, ಅವನ ಪ್ರಶ್ನೆಗೆ ಉತ್ತರಿಸದೆ ಹೇಳಿದ, “ನೀವು ಇದ್ದುದು ಚೊಲೋ ಆಯಿತು. ನಿಮಗಂತು ಪಾಪ ಪುಣ್ಯದ ಭಯವಿಲ್ಲವಲ್ಲ, ನನ್ನದನ್ನು ನಾನು ನೋಡಿಕೊಳ್ತೇನೆ, ಈಗ ಇಕಾ ನನಗೆ ಸ್ವಲ್ಪ ಸಹಾಯ ಮಾಡಿ.’ ಭಾಸ್ಕರ ನಿಂತಲ್ಲೆ ನಿಂತು ಒಮ್ಮೆ ಲಿಂಗದತ್ತ ಒಮ್ಮೆ ಶ್ಯಾಮಭಟ್ಟನತ್ತ ನೋಡಿದ. ಈಶ್ವರಲಿಂಗ ಪುರಾತನ ಕಪ್ಪು ಕಲ್ಲಿನಿಂದ ಮಾಡಿದ್ದಾಗಿದ್ದು ಮೊಣಕಾಲು ಎತ್ತರದಷ್ಟಿತ್ತು. ನಯವಾದ ಲಿಂಗದ ಮೇಲೆ ಅಲ್ಲಲ್ಲಿ ಎಣ್ಣೆಯ ಜಿಡ್ಡು ಬಿದ್ದು ಮಿಂಚುತ್ತಿತ್ತು. ಅದಕ್ಕೆ ಸರಿಯಾಗಿ ಶ್ಯಾಮಭಟ್ಟನ ಮೈಯ ಬೆವರು ಅದರ ಮೇಲೆ ಹನಿಕಿಕ್ಕಿದ್ದಕ್ಕಿರಬೇಕು, ತಿಂಗಳ ಬೆಳಕು ಅದಕ್ಕೊಂದು ಹೊಳಪನ್ನು ಕೊಡುವಂತಿತ್ತು. “ಹುಂ ಹುಂ. ಬೇಗ, ಚಂದ್ರನ ಬೆಳಕು ಸರಿಯುವುದರ ಒಳಗೆ ಕೆಲಸ ಮುಗಿಯಬೇಕು” – ಆತ ಅವಸರಿಸಿದ. ಮನಸ್ಸಿಲ್ಲದಿದ್ದರೂ ಅವನ ಹುಂ ಹುಂನ ಗಟ್ಟಿತನಕ್ಕೆ ಬೆದರಿದವನಂತೆ ಭಾಸ್ಕರ ಅವನ ಬಳಿ ಹೋಗಿದ್ದೆ, “ಸ್ವಲ್ಪ ಈ ಲಿಂಗವನ್ನು ಸರಿಸಲು ಸಹಾಯ ಮಾಡಿ” ಎನ್ನುತ್ತ ಒಂದು ಮಗ್ಗಲು ತಾನು ಹಿಡಿದ ಲಿಂಗವನ್ನು ಸರಿಸಲು ಯತ್ನಿಸುತ್ತಿದ್ದ ಶ್ಯಾಮಭಟ್ಟನಿಗೆ ತಾನೂ ಸಹಾಯಕನಾಗಿ ಮತ್ತೊಂದು ಬದಿ ಹಿಡಿದ. ಆತ ನಲವತ್ತರವನು, ತಾನು ಎಪ್ಪತ್ತರವನು ಎನ್ನಿಸಿದರು, ತನ್ನೆಲ್ಲ ತಾಕತ್ತನ್ನು ಹಾಕಿ ಕೆಲಸದಲ್ಲಿ ಮಗ್ನನಾದ ಭಾಸ್ಕರನಿಗೆ ಬೇರಾವ ಯೋಚನೆಯು ಕಾಡಲಿಲ್ಲ. ಒಂದು ತಮಾ?ಯ ಕೆಲಸ ಅನ್ನಿಸಿತ?. ಇಬ್ಬರ ಪ್ರಯತ್ನದಿಂದ ಲಿಂಗ ಬದಿಗೆ ಜರುಗಿದಾಗಲೆ ಭಾಸ್ಕರ ಅಂದುಕೊಂಡ, ಇದು ಬಹಳ ಪುರಾತನದ್ದಾಗಿರಲಿಕ್ಕಿಲ್ಲ, ಆಗಿದ್ದರೆ ಇ? ಸುಲಭವಾಗಿ ಬರಲಿಕ್ಕಿಲ್ಲ. “ಇನ್ನೂ ಸ್ವಲ್ಪ, ಇನ್ನೂ ಸ್ವಲ್ಪ, ಹಾಂ, ಹೀಗೆ ಸ್ವಲ್ಪ ಅತ್ತತ್ತ, ನಿಮಗೆ ನಿರಾಶೆ ಮಾಡೋಲ್ಲ, ದೇವರು ಇರುವುದೇ ನಮಗಾಗಿ, ಸ್ವಲ್ಪ ಎತ್ತಿ, ಆಕಡೆ ಎಳೆದುಕೊಳ್ಳಿ, ತ್ರಾಸಾದರೆ ನಮಃ ಶಿವಾಯ ಎಂದು ಹೇಳುತ್ತಿರಿ, ಹಾಂ, ಬಂತು ಬಂತು” ಎಂದು ಹೇಳುತ್ತ ಹೇಳುತ್ತ ಆತ ನಿರ್ದೇಶನ ಕೊಡುತ್ತಿದ್ದಂತೆ ಭಾಸ್ಕರನಿಗು ಆವೇಶ ಬಂದಂತಾಗಿ ಜೋರಾಗಿ ಎಳೆದ. ಅ?ಕ್ಕೆ ಉಸಿರು ಸಿಕ್ಕಿ ಹಾಕಿಕೊಂಡಂತಾಯಿತು. ’ಸಾಕು ಬಿಡಿ’ ಎಂದು ಆತ ಹೇಳಿದ್ದೆ ದೊಡ್ಡ ನಿರಾಳತೆ ತಂದುಕೊಟ್ಟು ದೇಹ ಅತಿಯಾದ ಶ್ರಮದಿಂದ ಸೋತು ಹೋದಂತೆನ್ನಿಸಿ ಮತ್ತ? ಬದಿಗೆ ಸರಿದು ಕುಕ್ಕರಿಸಿದ. ಭಟ್ಟ ಮತ್ತೆ ಹಾರೇಕೋಲು ಹಿಡಿದು ಲಿಂಗದ ಪಾಯದಲ್ಲಿದ್ದ ಕಪ್ಪು ಕಲ್ಲುಗಳನ್ನು ಒಂದೊಂದೆ ಸರಿಸಿ ಮೇಲೆತ್ತಿ ಬದಿಗಿರಿಸುತ್ತ ಅಲ್ಲಿ ಚೆಲ್ಲಾಡಿದ ಚಿಲ್ಲರೆನಾಣ್ಯಗಳನ್ನು ಖುಷಿಯಿಂದ, ಬಂತು, ಬಂತು.. ಬರ‍್ತಾ ಇದೆ ಎನ್ನುತ್ತ ಎತ್ತಿ ಎತ್ತಿ ಬದಿಗೊಗೆಯುತ್ತ ಹುಚ್ಚನ ಹಾಗೆ ವ್ಯವಹರಿಸುತ್ತಿರುವುದನ್ನು ನೋಡಿದ ಭಾಸ್ಕರನಿಗೆ ರೇಜಿಗೆಯಾಗಿ ಜೊತೆಗೇ ಗರ್ಭಗುಡಿಯಲ್ಲಿ ಎದ್ದ ಧೂಳಿಗೆ ಉಸಿರು ಕಟ್ಟುತ್ತಿದೆ ಎನ್ನಿಸಿ ’ನಾನು ಹೊರಗೆ ಇರ್ತೇನೆ’ ಎಂದು ಹೇಳುತ್ತ ಹೊರಬಂದು ಪ್ರಾಂಗಣದ ಚಾವಡಿಯ ಮೇಲೆ ಕುಳಿತು ಆಕಾಶದತ್ತ ದೃಷ್ಟಿ ನೆಟ್ಟ. ಏಕೋ ಕುಳಿತುಕೊಳ್ಳುವುದೂ ಅಸಾಧ್ಯವೆನ್ನಿಸಿ ಕಾಲು ಚಾಚಿ ಮಲಗಿಬಿಟ್ಟ.

*****

ದಣಿವಿಗೆ ಝೊಂಪು ಹತ್ತಿದ ಸ್ವಲ್ಪ ಹೊತ್ತಿನಲ್ಲಿಯೆ ಠಣ್ ಠಣಾರ್ ಎಂದು ಹಾರೇಕೋಲನ್ನ ಬದಿಗೆ ಒಗೆದ ಸದ್ದಿಗೆ ಎದ್ದು ಕುಳಿತ. ಓಲಾಡುತ್ತ ಬಂದು ಈತನ ಪಕ್ಕವೇ ಮೊಣಕಾಲು ಮಡಿಚಿ ತಲೆಯನ್ನು ಮೊಣಕಾಲಿಗೆ ಆನಿಸಿ ಹೆತ್ತವರು ಸತ್ತಾಗ ಕುಳ್ಳಿರುವಂತೆ ಕುಳಿತು ಬಿಕ್ಕತೊಡಗಿದ ಶ್ಯಾಮಭಟ್ಟನ ಬೆನ್ನನ್ನು ನಿಧಾನಕ್ಕೆ ಸವರಿದ ಭಾಸ್ಕರ. ಅ?ಕ್ಕೆ ಶ್ಯಾಮಭಟ್ಟ ಭೋ ಎಂದು ಅತ್ತುಬಿಟ್ಟ. ಅವನೇ ಸಮಾಧಾನ ಮಾಡಿಕೊಳ್ಳಲಿ ಎಂದು ಸ್ವಲ್ಪ ಹೊತ್ತು ಸುಮ್ಮನಿದ್ದ ಭಾಸ್ಕರ, ಎದ್ದು ಹೋಗಿ ಬಾಟಲಿಯಲ್ಲಿದ್ದ ನೀರನ್ನು ತಂದು ಅವನಿಗೆ ಕುಡಿಯಲು ಕೊಟ್ಟ. ಈಗ ಸ್ವಲ್ಪ ಸುಧಾರಿಸಿಕೊಂಡ ಶ್ಯಾಮಭಟ್ಟನ ದನಿ ಇದ್ದಕ್ಕಿದ್ದಂತೆ ಕ್ರೂರವಾಗಿ, ಮೋಸ, ಧಗಾ, ಅನ್ಯಾಯ ಎನ್ನುವ ಮೂರು ಶಬ್ದಗಳು ಫೂತ್ಕರಿಸಲ್ಪಟ್ಟವು. ಭಾಸ್ಕರ ಏನೂ ಹೇಳಲಿಲ್ಲ. ಮತ್ತೆ ಕೆಲ ಹೊತ್ತು ಮೌನ ಆವರಿಸಿತು.

ಭಟ್ಟ ಎದ್ದು ಶತಪಥ ತಿರುಗಿದ. ನಿಲ್ಲಲಾಗಲಿಲ್ಲ. ಅ? ಹೊತ್ತಿನ ಕೆಲಸದಿಂದ ಉಂಟಾದ ದೈಹಿಕವಾದ ದಣಿವಿನೊಟ್ಟಿಗೆ ತನ್ನಾಸೆ ಈಡೇರದ ಕುರಿತಾದ ವಿ?ಣ್ಣತೆಯಿಂದಾತ ಮತ್ತೆ ಕುಕ್ಕರಿಸಿ ಗೊಣಗಿದ.

`ಕಡೆಗೂ ದೇವರು ನನಗೆ ಕೈಕೊಟ್ಟ. ಯಾತಕ್ಕೆ ನಂಬಬೇಕು ಅವನನ್ನು? ಒಂದು ಆಯನ, ಸರಿಯಾಗಿ ಒಂದು ಆಯನ, ಗುರುಗಳು ಹೇಳಿದ ಹಾಗೆ ವ್ರತನಿಯಮಾದಿಗಳಲ್ಲಿ ಇದ್ದೆ. ಭರಣಿ ನಕ್ಷತ್ರದಲ್ಲಿ ಹುಟ್ಟಿದವನು. ಧರಣಿ ಬೇಡ, ಒಳ್ಳೇ ಜೀವನ ನಡೆಸಲು ಒಂದಿ? ಚಿನ್ನ.. ಗುರುಗಳು ಸರಿಯಾಗಿ ಹೇಳಿದ್ದರು. ನಿಮ್ಮ ಮನೆಯ ಇಂಥಾ ದಿಕ್ಕಿನಲ್ಲಿ, ಇ? ದೂರದಲ್ಲಿ ಇರುವ ಲಿಂಗದ ಕೆಳಗೆ ನಿನಗೆ ಬೇಕಾದ್ದು ಇದೆ ಅಂತ. ಹೇಳಿದ್ದರು – ದೇವರು ಕೊಡುತ್ತಾನೆ ಅಂತ. ಏನು ಕೊಟ್ಟ? ಪುಡಿಗಾಸು. ಗುರುಗಳು ಹೇಳಿದ ಹಾಗೇ ಎಲ್ಲ ಮಾಡಿದೆ. ಅದೇ ಮಿತಿ, ಮಾಸ, ಮುಹೂರ್ತ. ಏನಾಯಿತು? ಯಾಕೆ ನಂಬಬೇಕು ದೇವರನ್ನು? ನೀವಂದದ್ದೆ ಸರಿ ಇರಬೇಕು. ಇಲ್ಲ, ದೇವರಿಲ್ಲ.”

ಅವನ ಹೆಗಲ ಮೇಲೆ ಮೆತ್ತಗೆ ಕೈಯಿರಿಸಿದ ಭಾಸ್ಕರ ಸಮಾಧಾನಿಸಿದ. “ಬೇಸರ ಮಾಡ್ಕೋಬೇಡಿ. ಏಳಿ. ನೋಡಿ, ಬೆಳಗಾಗುತ್ತ ಬಂತು. ನಿಜ ಹೇಳಲೊ? ನನಗೆ ಈ ರಾತ್ರಿ ದೇವರಿದ್ದಾನೆ ಅನ್ನಿಸಿಬಿಡ್ತು. ನಿಮ್ಮನ್ನು ನನ್ನ ಜೊತೆಗಿರೋಕೆ ಕಳಿಸಿದ. ಅದಿಲ್ಲವಾದರೆ ನಾನು ಇಡೀರಾತ್ರಿ ಈ ಕಾಡಲ್ಲಿ ಒಂಟಿಯಾಗಿ ಕಳೆಯೋಕೆ ಆಗ್ತಿತ್ತೋ ಇಲ್ಲವೋ.. ಅಲ್ಲವೇ?’

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ