ದೊಡ್ಡದಾದ ಬಾಳೆಲೆ ಹರಡಿದ್ದರು. ಮಿಂದು ಬಂದು ಮಡಿಯಾದ ವಸ್ತ್ರದಲ್ಲಿದ್ದ ಅಪ್ಪಣ್ಣನೆದುರು ಊಟದೆಲೆ ಹಾಕಿದಾಗ ಘಂಟೆ ಇನ್ನೂ ಹನ್ನೊಂದು. ದೂರದಲ್ಲಿ ಕಂಬದ ಅಡ್ಡದಿಂದ, ಗೋಡೆಯ ಮಗ್ಗುಲಿಂದ, ಬಾಗಿಲ ಬುಡದಲ್ಲಿ, ಚಪ್ಪರದ ಮರೆಯಿಂದ, ಅಪ್ಪಣ್ಣನ ಊಟದ ವೈಖರಿಯನ್ನು ಕಾಣಲು ಹತ್ತಿಪ್ಪತ್ತು ಜೊತೆ ಕಣ್ಣುಗಳು ಇಣುಕುತ್ತಿದ್ದವು.
ಮನೆಯ ಹಿರಿಯ ಯಜಮಾಂತಿ ಎಲೆಗೆ ಬೆಳ್ತಿಗೆ ಅನ್ನದ ರಾಶಿಯನ್ನೇ ಹಾಕಿದಳು. ಹಿಂದೆಯೇ ಆಕೆಯ ಮಗಳು ವ್ಯಂಜನದ ಪಾತ್ರೆಗಳನ್ನು ಒಂದೊಂದಾಗಿ ಅಮ್ಮನ ಕೈಗೆ ನಿಲುಕುವ ಹಾಗೆ ಇರಿಸುತ್ತ ದೃಷ್ಟಿಯನ್ನು ಆತನ ಎಲೆಯತ್ತಲೇ ತಿರುಗಿಸಿದಳು. ಅವಳ? ಅಲ್ಲ; ಚಪ್ಪರದ ತುಂಬ ಸೇರಿದವರ ವಾರೆಗಣ್ಣೆಲ್ಲ ಅತ್ತಲೇ.
ಪುರೋಹಿತರು ನಿರ್ವಿಕಾರವಾಗಿ ದರ್ಭೆಯ ಕುಡಿಗಳನ್ನು ಜೋಡಿಸುವ ಕೆಲಸ ಮಾಡುತ್ತಲಿದ್ದರು. ಅವರಿಗೆ ಇದೆಲ್ಲ ನಾಲ್ಕು ತಿಂಗಳಿಗೊಮ್ಮೆಯಾದರೂ ಕಾಣುವ ದೃಶ್ಯ.
ಆದರೆ ಜನ್ನಪ್ಪಣ್ಣನ ಪೈಕಿಯವರಿಗೆಲ್ಲ ಹಾಗಾ? ಅವರಿಗೆಲ್ಲ ಅಪ್ಪಣ್ಣ ಸಸಾರದ ಜೀವ. ಅವನ ಮನೆಗೆ ಕಾಲಿಟ್ಟವರಿಲ್ಲ ಎಂದರೆ ಅದು ತಪ್ಪಾದೀತು. ಮನೆಯಲ್ಲಿ ಮರಣವಾದಾಗ ಅಪ್ಪಣ್ಣನ ನೆನಪು ಬಾರದೆ ಇರಲಿಕ್ಕಿಲ್ಲ. ಮರಣದ ಮನೆಯ ನೋವು ಹಸಿಹಸಿಯಾಗಿದ್ದರೂ ಉತ್ತರಕ್ರಿಯೆ ನಡೆಯಲೇಬೇಕು. ಅ?ಲ್ಲದೆ ಮೋಕ್ಷ ಉಂಟಾ!
ಮರಣವಾಗಿ ಮೂರನೆ ದಿನದ ಚಿತಾಭಸ್ಮ ಕೂಡುವ ಕ್ರಿಯೆ ಮುಗಿದ ಬೆನ್ನಿಗೇ ಅಪ್ಪಣ್ಣನ ಮನೆ ಹುಡುಕಿಕೊಂಡು ಬಿಳಿಬಿಳಿ ಧೋತ್ರದ ಜನರು ಬರಲೇಬೇಕು; ಮನೆಯಂಗಳಕ್ಕೆ ಕಾಲಿಡುತ್ತಾರೆ ಹೊರತು ಹೊಸ್ತಿಲು ದಾಟಿ ಒಳಗಡಿಯಿಡುವವರಿಲ್ಲ. ಅಪ್ಪಣ್ಣನ ಅರ್ಧ ವಯಸ್ಸಿನವರೂ ಅವನನ್ನು ಕರೆಯುವುದು ಏಕವಚನದಲ್ಲೇ.
“ಅಪ್ಪಣ್ಣಾ, ನಾಡಿದ್ದು ಹನ್ನೆರಡನೇ ದಿನ, ಕ್ರಿಯಾಕರ್ಮ ಮನೆಯಲ್ಲೇ ನಡೆಸುವುದು. ಪುರೋಹಿತರು ನೀನು ಬರಲೇಬೇಕು ಎಂದಿದ್ದಾರೆ. ಹಾಗಾಗಿ ಬೆಳಗ್ಗೇ ಬಂದುಬಿಡು. ಗೊತ್ತಾಯ್ತಲ್ಲ ಮನೆ? ನಾನು ಮೂಲೆಮನೆ ನಾರಾಯಣ. ಅಪ್ಪನ ಉತ್ತರಕ್ರಿಯೆ ಮನೆಯಲ್ಲೇ ನಡೆಸುವುದು. ನೆನಪಿರಲಿ.”
ಮೂಲೆಮನೆ ಗೋವಿಂದ ತೀರಿಕೊಂಡ ಸುದ್ದಿ ತಿಳಿದ ಮಾರನೆಯ ದಿನದಿಂದಲೇ ಅಪ್ಪಣ್ಣನ ಒಂದು ಕಣ್ಣು ಅಂಗಳದ ತಡಮೆಯತ್ತಲೇ ಇತ್ತು. ಇಂದು ಬಂದಾರು; ನಾಳೆ ಬಂದಾರು ಕರೆಯಲು ಎನ್ನುವುದು ಅವನಿಗಾ ತಿಳಿಯದ್ದು. ಬಾಯಿ ತುಂಬಿದ ವೀಳ್ಯ ದವಡೆಗೊತ್ತರಿಸುತ್ತ ಬಂದವನ ಬಳಿ “ಆಸ್ರಿಂಗೆ ಬೇಕನಾ” ಎಂದರೆ ಅದಾಗಲೇ ತಡಮೆ ದಾಟಿರುತ್ತಿದ್ದ.
ಎಲ್ಲಾದರೂ ಉಂಟಾ! ಬಾಯಾರಿ ಗಂಟಲೊಣಗಿ ಸತ್ತರೂ ಅಪ್ಪಣ್ಣನ ಮನೆಯಲ್ಲಿ ಗುಟುಕುನೀರು ದೊಂಡೆಗಿಳಿಸಿದ ಜನವಿಲ್ಲ. ಅದು ಅವನಿಗೇನು ಗೊತ್ತಿಲ್ಲದ್ದಾ. ಅದಕ್ಕೆಲ್ಲ ಕರಕರೆ ಮಾಡಿ ಪ್ರಯೋಜನ ಉಂಟಾ?
ಗೋಡೆ ಮೇಲಿನ ಉದಯವಾಣಿಯ ಕ್ಯಾಲೆಂಡರಿನಲ್ಲಿ ಹನ್ನೆರಡನೇ ದಿನಕ್ಕೆ ಅಲ್ಲಿದ್ದ ಮೊಂಡು ಪೆನ್ಸಿಲಿನಿಂದ ಸೊನ್ನೆ ಸುತ್ತಿದರೆ ಆಯಿತು. ಕ್ಯಾಲೆಂಡರಿನ ಅಲ್ಲಲ್ಲಿ ಹಾಗೆ ಪೆನ್ಸಿಲಿನ ಉರುಟು ಗುರುತು ಬಿದ್ದ ಸೊನ್ನೆಗಳಿವೆ.
ಬಾಯಿ ತುಂಬಿದ ವೀಳ್ಯದ ಕೆಂಪುರಸವನ್ನು ಅಂಗಳದ ತುದಿಯ ಗೆಂದಾಳಿ ತೆಂಗಿನಗಿಡದ ಬುಡಕ್ಕೆ ಉಗುಳಿ ಬಂದವನಿಗೆ ಚೆನ್ನಾಗಿ ನೆನಪಿದೆ. ಮೇಗಿನ ಮನೆಯ ಅಜ್ಜ ತೀರಿಕೊಂಡಾಗಿನ ಹನ್ನೆರಡನೆಯ ದಿನ ತನಗೆ ಕೊಟ್ಟ ದಾನದಲ್ಲಿ ಸಿಕ್ಕಿದ ಗಿಡ ಅದು. ಅಲ್ಲದಿದ್ದರೆ ಆ ಜಾತಿಯ ಗಿಡ ತನಗೆ ಕೊಡುವವರಿಲ್ಲ.
ಗಿಡದ ಆರೈಕೆ ಅವನದೇ. ಆದರೆ ಅವನು ಮನೆ ಅಂತ ಹೇಳುವ ಮನೆ ಮೂರು ಸೆಂಟ್ಸು ಜಾಗದ ಮಣ್ಣಿನ ನಾಲ್ಕು ಗೋಡೆಯ, ಅಡಿಕೆಸೋಗೆ ಹೊದೆಸಿದ ಸಣ್ಣ ಹಳೆಯ ಗೂಡು. ಕಲ್ಲಿನ ಪಾರೆ. ಒಂದು ತುಳಸಿಗಿಡ ನೆಡಲೂ ಮಣ್ಣು ಇಲ್ಲ.
ಕಗ್ಗಲ್ಲಿನ ನೆಲದಲ್ಲಿ ಬೇರು ಇಳಿಯುವುದಾದರೂ ಎಲ್ಲಿಗೆ? ತಡಮೆಯ ಬುಡದಲ್ಲಿ ಅಪ್ಪಣ್ಣನೂ ಅವನ ಹೆಂಡತಿಯೂ ರಸ್ತೆ ಪಕ್ಕದ ಮೈದಾನದಿಂದ ರಾತ್ರೆ ಹೊತ್ತು ಅಗೆದು ಬುಟ್ಟಿಯಲ್ಲಿ ತುಂಬಿ ತಂದು ಹಾಕಿದ ಮಣ್ಣಿನಲ್ಲಿ ಗುಂಡಿ ತೋಡಿ ನೆಟ್ಟು ನೀರೆರೆದ ಗೆಂದಾಳಿ ತೆಂಗಿನಗಿಡ ಚಿಗುರಿ ನಾಲ್ಕಾರು ಮಡಲು ಚಾಚಿದೆ.
ಅದೇ ಮನೆಯ ಜೀವನಾಡಿ ಎಂದರೆ ತಪ್ಪಿಲ್ಲ. ಮಗಳು ರಾಜಿ ಕೂಡಾ ಕೈತೊಳೆಯುವುದೂ ಅದರ ಬುಡಕ್ಕೆ. ಆ ನೀರು ವ್ಯರ್ಥವಾಗದೆ ಬುಡಕ್ಕೆ ಬೀಳುತ್ತದೆ. ಎತ್ಲಾಗಿ ಹೋದರೂ ಅಪ್ಪಣ್ಣ ಉಚ್ಚೆ ಕಟ್ಟಿಕೊಂಡೇ ಮನೆಗೆ ಬರುತ್ತಾನೆ ಹೊರತು ಹಾದಿಬೀದಿಯ ಬದಿ ಉಚ್ಚೆ ಮಾಡಲಿಕ್ಕಿಲ್ಲ; ಅದು ಗೆಂದಾಳಿ ಬುಡಕ್ಕೇ ಅರ್ಪಿತ. ಉಚ್ಚೆ ಒಳ್ಳೆಯ ಗೊಬ್ಬರವೆನ್ನುವುದು ಅವನು ಅನುಭವದಿಂದ ತಿಳಿದ ಸತ್ಯ.
ಊರಿನ ಸಮುದಾಯದವರ ಮನೆಯಲ್ಲಿ ಸಾವು ತಲೆ ಹಾಕಿದಾಗ ಮಾತ್ರ ಅವನ ನೆನಪಾಗುತ್ತದೆ ಆ ಮನೆಯವರಿಗೆ. ಕಾರಣ ಕೇಳಿದರೆ ಸಾಂಗವಾಗಿ ಕರ್ಮ ಮುಗಿಸಬೇಕಾದರೆ ಅಲ್ಲಿ ಅಪ್ಪಣ್ಣ ಬೇಕು. ಹಾಗೆಂದು ಅವನದು ಪೌರೋಹಿತ್ಯವಲ್ಲ; ಇವನು ಮಾಡಬೇಕಾದ್ದು ಸತ್ತ ಹನ್ನೆರಡನೆಯ ದಿನದ ಅಪರಕರ್ಮದಲ್ಲಿನ ವಿಧಿಯಲ್ಲಿ ಮೃತನ ಪ್ರೇತವನ್ನು ಆವಾಹಿಸಿ ಕೊಳ್ಳಬೇಕಾದದ್ದು, ಪುರೋಹಿತರು ನಡೆಸುವ ಕ್ರಿಯೆಗಳ ಎದುರು ಚಕ್ಕಳಮಕ್ಕಳ ಹಾಕಿ ಕೂತರೆ ಸಾಕು.
ಆ ದಿನ ಅಪ್ಪಣ್ಣ ಮುಖ್ಯ. ಹನ್ನೊಂದು ಘಂಟೆಗೇ ಅಡುಗೆಯವರು ಅಂದಿನ ಅಡುಗೆಯನ್ನು ಮುಗಿಸಲೇಬೇಕು. ಮನರಂಜನಾ ಕಾರ್ಯಕ್ರಮವನ್ನು ಕಾದು ಕುಳಿತಂತೆ ಮೃತರ ಮನೆಯವರು, ಬಂಧುಗಳು, ಮಿತ್ರರು, ಎಳೆಯರು ಪ್ರೇತೋಚ್ಚಾಟನೆ ನೋಡಲು ಕಾದು ಕೂರುತ್ತಾರೆ; ಎಲ್ಲಿ?
ದೂರದ ಗೋಡೆಗೊರಗಿ ನಿಂತು, ಚಪ್ಪರದ ಮಡಲಿನ ತಟ್ಟಿಗಳ ಕಿಂಡಿಯಲ್ಲಿ ಇಣುಕಿ, ಅಡುಗೆಮನೆಯ ಬಾಗಿಲಬುಡದಲ್ಲಿ ಹೊಂಚಿ ಹೆಂಗಸರು, ಮಕ್ಕಳೆನ್ನದೆ ಕಿಸಿಕಿಸಿ ನಗುತ್ತಾ ಅಪ್ಪಣ್ಣನ ಊಟವನ್ನು ವೀಕ್ಷಿಸುತ್ತಾರೆ.
ಮೃತನ ಪ್ರೇತವನ್ನು ಎದುರಿಗೆ ಕೂತ ಅಪ್ಪಣ್ಣನ ಮೈಮೇಲೆ ಆಹ್ವಾನಿಸಿ ಮಂತ್ರಘೋ?ವಾಗುತ್ತಿದ್ದಂತೆ ಅವನ ಭೋಜನಕ್ಕೆ ಎಲೆ ಹಾಕಿ ಆಗುತ್ತದೆ. ಆ ದಿನದ ಸ್ವೀಟು ಸತ್ತವರಿಗೆ ಅತಿ ಪ್ರಿಯವಾದ ಭಕ್ಷ್ಯ. ಬರಿದಾದ ಎಲೆಗೆ ಸೇರಕ್ಕಿ ಅನ್ನ ಸುರುವಿ, ಆನಂತರ ತಯಾರಿಸಿದ ವ್ಯಂಜನಗಳೆಲ್ಲವನ್ನು ಮೃತರ ಮಡದಿ, ಮನೆಯವರು ನಿಶ್ಶಬ್ದವಾಗಿ ಹಾಕುತ್ತಾರೆ. ಅಡುಗೆ ಮುಗಿಸಿದಾಕ್ಷಣ ಪ್ರೇತಕ್ಕೆ ಕೂರುವ ಅಪ್ಪಣ್ಣನಿಗೆ ಬಡಿಸಲು ಪ್ರತ್ಯೇಕವಾಗಿ ಪಾತ್ರೆಗಳಲ್ಲಿ ತಯಾರಿಸಿದ್ದೆಲ್ಲವನ್ನು ಬೇರೆಯಾಗಿ ತೆಗೆದಿರಿಸಲೇಬೇಕು. ಕಾರಣ ಕೇಳಿದರೆ ಆ ಆಹಾರ ಮಿಕ್ಕಿದರೆ ಉಳಿದವರು ಸೇವಿಸಲು ನಿಷಿದ್ಧ.
ಅಪ್ಪಣ್ಣ ಏನು ಹೊಸಬನಲ್ಲ ಈ ಪದ್ಧತಿಗೆ. ಬಡತನ, ಹುಟ್ಟಿದ ಜಾತಿ ಎರಡೂ ಅವನಿಗೆ ವಂಚನೆಯನ್ನೇ ಮಾಡಿದ್ದು. ಹೋಟೆಲಿನ ಗ್ಲಾಸು ತೊಳೆಯಲು ಹೊರಟವನನ್ನು ಅನ್ಯರ ಎಂಜಲು ಲೋಟ ನೀನು ತೊಳೆಯಕೂಡದು ಎಂದು ತಡೆದ ಅಪ್ಪ ಲೋಕ ಬಿಟ್ಟು ಹೋಗುವಾಗ ಉಳಿಸಿದ್ದು ಕೋಲಿನಲ್ಲಿ ಒಣಗಲು ಹಾಕಿದ ಲಂಗೋಟಿ ಮಾತ್ರ.
ಹೊಟ್ಟೆ ಹಸಿವು ಈ ವೃತ್ತಿಗೆ ನೂಕಿತು. ಅಕ್ಕಪಕ್ಕದಲ್ಲಿ ಇಂಥ ಕ್ರಿಯೆಗೆ ಒಪ್ಪಿದ ನರಹುಳು ಇಲ್ಲ. ಅವನ್ಯಾವನದೋ ’ಒಂದ್ಸಾರಿ ಬಂದುಬಿಡೋ, ನಮ್ಮಪ್ಪನ್ನ ಸ್ವರ್ಗಕ್ಕೆ ಕಳಿಸುವ ಪುಣ್ಯಕಾರ್ಯಕ್ಕೆ ಬರಲ್ಲ ಅನ್ನಬೇಡ’ ಎಂಬ ಬೆಣ್ಣೆ ಮಾತಿಗೆ ಮರುಳಾಗಿ ಮೊದಲಬಾರಿಗೆ ಆ ಜಾಗದಲ್ಲಿ ಮಣೆ ಮೇಲೆ ಕೂತವನಿಗೆ ಶಾಶ್ವತವಾಗಿ ಅದು ಅಂಟಿಕೊಂಡಿತು.
ಕುಹಕವಾಗಿ, ಕುಚೋದ್ಯಕ್ಕೆ, ಅಪಹಾಸ್ಯವಾಗಿ, ತಾತ್ಸಾರಕ್ಕೆ, ಕೌತುಕದಿಂದ ನೋಡುವ ಕಣ್ಣುಗಳತ್ತ ದೃಷ್ಟಿ ಹಾಯಿಸಿದರೆ ತನ್ನ ಹೊಟ್ಟೆ ತುಂಬದು. ಅಪ್ಪಣ್ಣನ ಎಲೆಗೆ ವಡೆ, ಕಜ್ಜಾಯ, ಅಂದಿನ ಸಿಹಿ ಭಕ್ಷ್ಯ ಬಿತ್ತು. ಎರಡನೆ ಬಾರಿಗೆ ಬಡಿಸ ಬಂದವರಿಗೆ ಪಕ್ಕದಲ್ಲಿಟ್ಟ ಬಾಳೆಎಲೆಯತ್ತ ಕೈಮಾಡಿದ. ಅದು ಅವನು ಮಡದಿ, ಮಗಳಿಗೆ ಒಯ್ಯುವ ಸಲುವಾಗಿರುವುದು. ಮನೆಯೊಡತಿ ಅದಕ್ಕೆ ಹಾಕಿದಳು.
ಸುತ್ತ ನೂರಾರು ಕಣ್ಣುಗಳು ದುರುಗುಟ್ಟಿ ನೋಡುತ್ತಿತ್ತು. ಆ ಘಳಿಗೆಗೆ ಅವನಲ್ಲಿ ಸತ್ತವನ ಪ್ರೇತದ ಆವಾಹನೆಯಾಗಬೇಕು. ಅದು ಮಂತ್ರದ ಬಲ. ಮೃತನ ಪ್ರೇತ ಆವಾಹನೆಯಾಗುವ ಕಾರಣಕ್ಕೆ ಅವನ ನಿಜಹೆಸರು ಹಿಂದಾಗಿ ಮೂರು ಲೋಕಕ್ಕೂ ಅವನು ಪ್ರೇತಭಟ್ಟನಾಗಿ ಚಾಲ್ತಿಯಾದ.
ಉಳಿದ ದಿನಗಳಲ್ಲಿ ಹಸಿದು ಬೆನ್ನಿಗಂಟಿದ ಹೊಟ್ಟೆಗೆ ಅಪ್ಪಣ್ಣ ಆತುರಾತುರವಾಗಿ ತುಂಬುವ ಪರಿ ಒಡಲು ತುಂಬಿದವರಿಗೆ ಪ್ರೇತದ ಆವಾಹನೆಯಾಯ್ತು ಎಂದು ಕಂಡರೆ ಅಚ್ಚರಿಯಿಲ್ಲ. ಹಾಗೆ ಉಂಡ ಅಪ್ಪಣ್ಣನಿಗೆ ಕೊಟ್ಟ ದಾನದ ವಸ್ತುಗಳಿವೆ ಬದಿಯಲ್ಲಿ. ಸತ್ತ ಹಿರಿಯರು ಆತನಕ ಮಲಗುತ್ತಿದ್ದ ಹಾಸಿಗೆ, ಹೊದೆದ ರಗ್, ಹಾಸುಬಟ್ಟೆ, ಶರಟು, ದಹನದ ಜಾಗದಲ್ಲಿ ನೆಟ್ಟ ಹೊಚ್ಚಹೊಸ ಕೊಡೆ, ಮೃತನ ನಿತ್ಯಬಳಕೆಯ ವಸ್ತುಗಳು ಎಲ್ಲ ಅವನ ಪಾಲಿಗೆ ಬಂತು. ಉಂಡೆದ್ದ ಮೇಲೆ ಜನರ ಹಿಂಡೇ ನುಗ್ಗಿತು ಅಲ್ಲಿಗೆ. ಮುಂದಿನದೇನೆಂದು ಅವರಿಗೆಲ್ಲ ತಿಳಿದಿದ್ದೇ.
ದಾನ ಬಂದ ಹಳೆಪಂಚೆಯನ್ನು ಹಾಸಿ ಅಲ್ಲಿ ಕೊಟ್ಟ ವಸ್ತುಗಳು, ತೆಗೆದಿರಿಸಿದ ಸ್ವೀಟು, ಕಜ್ಜಾಯ, ವಡೆಗಳನ್ನೆತ್ತಿ ಗಂಟು ಕಟ್ಟಿದ. ನಂತರ ಎದ್ದು ಕೈತೊಳೆಯಬೇಕು. ಅದಕ್ಕಾಗಿ ಎದ್ದವನು ನಂತರ ಮನೆಯೊಳಕ್ಕೆ ಬರಕೂಡದು. ಏಳುವಾಗಲೇ ಎಡಗೈಲಿ ಜೋಳಿಗೆಯ ಹಾಗೆ ಕಟ್ಟಿದ ಗಂಟು ಹೊತ್ತು ಅಂಗಳಕ್ಕಿಳಿದವನ ಹಿಂದೆ ಪುರೋಹಿತರ ನಿರ್ದೇಶನದ ಹಾಗೆ ನಿಂತ ಕರ್ತೃ. ಅಪ್ಪಣ್ಣನಿಗೆ ಗೊತ್ತಿಲ್ಲದ್ದಾ? ಈಗ ಅವನು ಪ್ರೇತ. ಅದರ ಉಚ್ಚಾಟನಾ ವಿಧಿಗೆ ಸತ್ತವರ ಮಗ ಕಾಯುತ್ತಿದ್ದಾನೆ. ಅರೆಬರೆ ಕೈ ತೊಳೆಯುತ್ತಿದ್ದಂತೆ ಕಾದು ನಿಂತವನು ಕೈಲಿದ್ದ ಕೊಂಬುಗಿಂಡಿಯ ನೀರು ಪ್ರೇತಭಟ್ಟನ ಮೈ ಮೇಲೆ ಪ್ರೋಕ್ಷಿಸುತ್ತಾ ಓಡಿಸುವ ಮುಖ್ಯ ಕ್ರಿಯೆ. ಅವನು ಓಡುವುದನ್ನು ನೋಡಲೇ ಕಾದಿದ್ದ ಜನರ ಗುಂಪು.
ವಯೋಸಹಜವಾಗಿ ವೇಗವಾಗಿ ಓಡಲಾರ ಅಪ್ಪಣ್ಣ ಅಥವಾ ಪ್ರೇತಭಟ್ಟ. ಗಂಟು ಮೂಟೆ ಹೊತ್ತು ಧಾವಿಸುವುದು ಸುಲಭವಲ್ಲ. ಕಿಕ್ಕಿರಿದು ತುಂಬಿ ಹಿಂದಿನಿಂದ ನೋಡಿ ನಗುವ ಬಂಧು, ಮಿತ್ರರು, ಮಕ್ಕಳು. ದಾಪುಗಾಲಿಕ್ಕುತ್ತ ಮುಂದೆ ಮುಂದೆ ಪ್ರೇತ, ಹಿಂದೆ ಮನೆಯಾತ.
ಅದಕ್ಕೆ ಮೊದಲೇ ಪ್ರೇತವೆಂಬ ಹೆಸರಾದ ಅಪ್ಪಣ್ಣ ಹೋಗಲಿರುವ ಹಾದಿ ನಿರ್ಮಾನುಷವಾಗಬೇಕು. ಕಾರಣ ಪ್ರೇತ ಉಚ್ಚಾಟನೆಯಾಗುವಾಗ ಅದಕ್ಕೆದುರಾಗಿ ಅಕಸ್ಮಾತ್ ಆಗಿ ಯಾರಾದರೂ ಎದುರಾದರೆ ಮರುವರ್ಷ ಬರುವುದರೊಳಗೆ ಅವರ ಬೊಜ್ಜ ನಡೆಯುತ್ತದೆ ಎಂಬ ಬಲವಾದ ನಂಬಿಕೆ. ಆನಂತರ ಜರಗಬೇಕಾದ ಧಾರ್ಮಿಕ, ಸಾಂಪ್ರದಾಯಿಕ ಕ್ರಿಯೆಗಳು, ಮನೆಯವರು ಕುಡಿಯುವ ಪಂಚಗವ್ಯ, ಪಿಂಡಪ್ರದಾನ ಎಲ್ಲ ಮುಗಿದು ಅನ್ನ ಕಾಣುವ ಹೊತ್ತಿಗೆ ಮಧ್ಯಾಹ್ನವಾಗುತ್ತದೆ. ಇತ್ತ ಸ್ವಲ್ಪ ದೂರ ಓಡುನಡಿಗೆ ಕಷ್ಟದಿಂದ ಹಾಕುವ ಪ್ರೇತ ತುಸು ದೂರ ಹೋದ ಮೇಲೆ ಅಪ್ಪಣ್ಣನಾಗುತ್ತದೆ. ಆವಾಹಿಸಿದ್ದ ಮೃತನ ಪ್ರೇತಕ್ಕೆ ಮುಕ್ತಿ.
ಅಪ್ಪಣ್ಣನಿಗೆ ಆ ಹೆಸರಿನಿಂದ ಮುಕ್ತಿ ಇಲ್ಲ. ಲೋಕಕ್ಕಿಡೀ ಆತ ಪ್ರೇತಭಟ್ಟ. ಮನೆಯಲ್ಲಿ ಕಾದು ಕುಳಿತ ಮಡದಿ, ಮಗಳ ನೆನಪಾಗಿ ಅವನು ಜೋರು ಹೆಜ್ಜೆ ಹಾಕಿ ಮನೆ ತಲಪಿ ತಂದ ವಸ್ತುಗಳನ್ನು ಮಡದಿಗೊಪ್ಪಿಸಿದಾಗ ಮಗಳು ಸ್ವೀಟು, ಕಜ್ಜಾಯ, ವಡೆಗೆ ಕೈಹಾಕಿದಳು. ಅಮ್ಮನಿಗೂ ಪಾಲು ಸಂದಿತು. ದಾನಕ್ಕೆ ಬಂದವುಗಳಲ್ಲಿ ಸುಸ್ಥಿತಿಯಲ್ಲಿರುವುದನ್ನು ಮಡದಿ ತೆಗೆದಿಟ್ಟು ಬರಿನೆಲಕ್ಕೆ ಬೆನ್ನು ಕೊಟ್ಟು ಸೋತು ಮಲಗಿದ ಗಂಡನತ್ತ ಒದ್ದೆಗಣ್ಣಿಂದಲೇ ನೋಡುತ್ತಾಳೆ.
ಆಕೆ ಒಳ್ಳೆಯ ಮನೆತನದ ಹೆಣ್ಣು. ಮದುವೆಗೆ ಮೊದಲೇ ಕಿರಾತಕನೊಬ್ಬನ ಬಣ್ಣದ ಮಾತಿಗೆ ಸೋತು ಗರ್ಭಿಣಿಯಾದವಳು ಮನೆಯವರು ಬಡಿದ ಪೆಟ್ಟಿಗೆ ಹೆದರಿ ನೀರಿಗೆ ಹಾರಿದ್ದಳು. ಆಟಿ ತಿಂಗಳ ಜೋರು ಮಳೆಗೆ ತುಂಬಿ ಹರಿಯುವ ನದಿಯಲ್ಲಿ ತೇಲಿ ಹೋದಾಕೆ ಸಿಕ್ಕಿದ್ದು ಬೆಳ್ಳಕ್ಕೆ ತೇಲಿ ಬರುವ ತೆಂಗಿನಕಾಯಿ ಹಿಡಿಯಬಂದ ಅಪ್ಪಣ್ಣನ ತೆರೆದ ತೋಳಿಗೆ.
ಆಗಿನ್ನೂ ಅವನು ಪ್ರೇತಭಟ್ಟನಾಗಿರಲಿಲ್ಲ. ಬಡತನವಿತ್ತು; ಸಂಪಾದನೆ ಇಲ್ಲ. ಬೇಡದ ಗರ್ಭ ನಿಲ್ಲಲಿಲ್ಲ. ತವರಿಗೆ ಹೋಗಲು ಒಲ್ಲೆನೆಂದಾಕೆಗೆ ಅವಳ ಒಪ್ಪಿಗೆಯಿಂದ ತಾಳಿಕಟ್ಟಿದವ ಅಪ್ಪಣ್ಣ. ಚೆನ್ನಾಗಿಯೇ ನೋಡಿಕೊಂಡವ ತನ್ನ ಬಡತನದಲ್ಲೂ.
ಕೇವಲ ತನ್ನೊಬ್ಬನ ಹೊಟ್ಟೆ ತುಂಬಿಸುವ ಕೆಲಸವಾದರೆ ಅಪ್ಪಣ್ಣ ಹೋಟೆಲಿನಲ್ಲಿ ಗ್ಲಾಸು ತೊಳೆಯಲು ತಯಾರಿದ್ದ. ನಂಬಿದ ಮಡದಿ, ಅವಳಲ್ಲಿ ಜನಿಸಿದ ಏಕೈಕ ಮಗಳು ಅವನ ಬೆನ್ನಿಗಿದ್ದರು. ಅನಿವಾರ್ಯವಾಗಿ ಬಣ್ಣದ ಮಾತಿಗೆ ಬಲಿ ಬಿದ್ದು ಒಮ್ಮೆ ಪ್ರೇತವಾಗಿ ಕೂತವನಿಗೆ ಅದೇ ಪ್ರೇತ ಶಾಶ್ವತವಾಗಿ ಬೆನ್ನೇರುತ್ತದೆ ಎಂಬ ಕಲ್ಪನೆಯೆಲ್ಲಿತ್ತು? ಆತನ ಮುಖ ನೋಡಿದರೇ ಅಪಶಕುನ ಅನ್ಯರಿಗೆ.
ಸೀತೆಗೆ ಪ್ರೇತಭಟ್ಟನ ಹೆಂಡತಿ ಎಂಬ ಹೆಸರೇ ಖಾಯಂ ಆಯಿತು.
ಮಗಳು ರಾಜಿಗೆ ಶಾಲೆಯಲ್ಲಿ ಆಗಿದ್ದ ಅವಮಾನ ಅಷ್ಟಿ?ಲ್ಲ. ಅವಳ ಪಕ್ಕದಲ್ಲಿ ಕೂರಲು ಯಾರೂ ತಯಾರಿಲ್ಲ. ಆಡಲು ಬಂದವರಿಲ್ಲ. ಮೈ ಮುಟ್ಟಿದವರಿಲ್ಲ. ಕಿಸಿಕಿಸಿ ನಗು, ಅಣಕ, ಲೇವಡಿಯ ಕಿಡಿ ಹೊತ್ತಿ ಉರಿದಾಗ ಆಕೆ ಶಾಲೆಗೆ ಹೋಗುವುದನ್ನೇ ನಿಲ್ಲಿಸಬೇಕಾಯಿತು. ಮನೆಯಿಂದಾಚೆ ಕಾಲಿಟ್ಟ ಕೂಸಲ್ಲ ಅದು ಮತ್ತೆ.
ಲಗ್ನದ ವಯಸ್ಸು ಅವಳಿಗೆ. ಅವಳನ್ನು ಒಪ್ಪಿ ಮದುವೆಯಾಗಿ ಸೊಸೆಯಾಗಿ ತರುವ ಮನೆ ಗೋಕರ್ಣಮಂಡಲವಿಡೀ ಜಾಲಾಡಿದರೂ ಇಲ್ಲವೇ ಇಲ್ಲ. ಪುಟಿಯುವ ತಾರುಣ್ಯದ, ಚಿಗರೆ ಕಂಗಳ ಸೊಬಗಿ ರಾಜಿಯ ಮೈ ಸೊಬಗನ್ನು ಆಸ್ವಾದಿಸಲು ಹೊಂಚುಹಾಕುವವರಿದ್ದಾರೆ, ಸೀತೆ ಮಗಳನ್ನು ಹದ್ದಿನಂತೆ ಕಾಯುತ್ತಾಳೆ.
ಊರಿನ ಗಣಪತಿಯ ಗುಡಿಗೆ ಪ್ರತಿ ಸೋಮವಾರ ಮಗಳನ್ನು ಕರೆದುಕೊಂಡು ಹೋಗಿ ತಾನೂ ಅವಳ ಜೊತೆಗೆ ವಿಘ್ನ ನಿವಾರಕನಿಗೆ ಪ್ರದಕ್ಷಿಣೆ ಹಾಕುತ್ತಾರೆ. ದುಂಡುಮಲ್ಲಿಗೆಯ ಸೊಬಗಿನಿಂದ ಕಂಗೊಳಿಸುವ ರಾಜಿಗೆ ತನ್ನ ಅಪ್ಪನ ವೃತ್ತಿಯಿಂದಾಗಿ ಮದುವೆ ಗಗನಕುಸುಮ ಎಂಬುದು ಗೊತ್ತು. ನಿರ್ಲಿಪ್ತತೆಯಿಂದ ಅಮ್ಮನ ಹಿಂದೆ ಗಣಪನಿಗೆ ಸುತ್ತು ಬರುವ ಯುವತಿ ಆಕೆ.
ಬ್ರಾಹ್ಮೀಕಾಲದ ಪೂಜೆ ಪದ್ಧತಿಯಂತೆ ಚೆಂಡೆ, ವಾದ್ಯ, ಶಂಖಧ್ವನಿ, ಜಾಗಟೆ, ಡೋಲು, ಘಂಟೆಗಳ ನಿನಾದದೊಂದಿಗೆ, ಹಚ್ಚಿಟ್ಟ ಊದುಬತ್ತಿ, ಕರ್ಪೂರದ ಘಮಘಮದ ಮಧ್ಯೆ ಸಾಂಗವಾಗಿ ಜರಗಿದ ನಂತರ ಪ್ರಸಾದದ ತೀರ್ಥ ಅಂಗೈಗೆ ಹಾಕಿದ್ದನ್ನು ಕುಡಿದು, ಹೂವನ್ನು ಮುಡಿಗೇರಿಸಿದವಳೆ ತಲೆತಗ್ಗಿಸಿಯೇ ಅಮ್ಮನ ಹಿಂದೆ ಹೆಜ್ಜೆಹಾಕುವ ತರಳೆ ಅವಳು.
ನೆರೆದ ಭಕ್ತರಲ್ಲಿ ಯಾರೊಬ್ಬರೂ ಇವರಲ್ಲಿ ಅಕ್ಷರ ಮಾತಾಡುವ ಕೃಪೆ ತೋರಿದವರಲ್ಲ. ಗುಡಿಯ ಸ್ಥಾನಿಕ, ಒತ್ತರೆಯ ಅಕ್ಕಮ್ಮ, ಚೆಂಡೆ ವಾದನದ ಮಾರಾರ್ ನಾಲ್ಕಾರು ಮಾತಾಡುತ್ತಾರೆ, ಕ? ಸುಖ ವಿಚಾರಿಸುತ್ತಾರೆ. ಅದೇ ಸಾಕು ಅವರಿಗೆ.
ಜಿಟಿಜಿಟಿ ಸುರಿಯುವ ಮಳೆ ಹಿಡಿದಿದ್ದು ಬಿಟ್ಟಿರಲಿಲ್ಲ. ಅದು ಆ?ಢ ಮಾಸ, ಆಕಾಶವಿಡೀ ಮಬ್ಬುಮಬ್ಬು ಮೋಡಗಳಿಂದ. ಆಗಾಗ ಸಿಡಿಯುವ ಕೋಲ್ಮಿಂಚು, ಅಪ್ಪಣ್ಣನ ಮಣ್ಣಿನ ಮನೆಯ ನೆಲದಲ್ಲಿ ನೀರಿನ ಪಸೆ ಏಳುತ್ತಿತ್ತು. ಬಟ್ಟೆ ಒಣಗದೆ ನಾಲ್ಕಾರು ದಿನವಾಯಿತು.
ಮಾರಿ ಮಳೆ ಬಿಡಲೇ ಇಲ್ಲ. ಮನೆಯೊಳಗೆ ಏನೆಂದರೆ ಏನೂ ಇಲ್ಲ; ಅಕ್ಕಿ ಬಿಟ್ಟು, ಅಕ್ಕಿಯ ಕಡಿಗೂ ತತ್ವಾರ. ಜಗಲಿಯ ಮೂಲೆಯಲ್ಲಿ ಪೇರಿಸಿಟ್ಟು ಅದರ ಮೇಲಿಂದ ಮಣ್ಣು ಸವರಿದ್ದ ಹಲಸಿನಕಾಯಿಯ ಬೀಜ ಬೇಯಿಸಿ ಹಸಿವೆ ತಣಿಸಿದರು ಅಪ್ಪಣ್ಣ, ಅವನ ಮಡದಿ, ಮತ್ತು ಮಗಳು ರಾಜಿ.
ರಾತ್ರೆ ಮಲಗಲು ಒಣ ನೆಲವಿಲ್ಲ. ಝುಮುಗುಡುವ ಚಳಿ ಕಿತ್ತು ತಿನ್ನುತ್ತಿತ್ತು. ತಾವು ಹಲಸಿನಬೀಜ ಬೇಯಿಸಿ ತಿಂದರೂ ಇರುವ ಒಂದೇ ಒಂದು ಕಂದ ರಾಜಿಗೆ ಅದನ್ನೇ ಕೊಡುವಾಗ ಜೀವ ಬಾಯಿಗೆ ಬರುತ್ತಿತ್ತು. ತೆಂಗಿನಕಾಯಿ ತುರಿ ಅರೆದು ಹಾಕಿ ಚಟ್ನಿಯಾದರೂ ಮಾಡಿ ಮಗಳಿಗೆ ಉಣಿಸುವಾಸೆಯಿಂದ ಪ್ರವಾಹದ ಕೆನ್ನೀರು ನೊರೆನೊರೆಯಾಗಿ ಉಕ್ಕುಕ್ಕಿ ಪ್ರವಾಹ ನುಗ್ಗಿಬರುವಾಗ ತೇಲಿ ಬರುವ ತೆಂಗಿನಕಾಯಿಯ ಆಸೆಗೆ ಹಿಡಿಯಲು ಹೋದ ಅಪ್ಪಣ್ಣ ಪ್ರವಾಹದ ಕೆನ್ನೀರಿನ ಜೊತೆಗೆ ನೋಡ ನೋಡುತ್ತಿದ್ದಂತೆ ತೇಲಿ ಹೋದ ಮಡದಿ, ಮಗಳ ಕಣ್ಣೆದುರಿಗೆ.
ಆತ ಎರಡೂ ಕೈ ಮೇಲೆತ್ತಿ ಸಹಾಯಕ್ಕೆ ಯಾಚಿಸುತ್ತಿದ್ದಂತೇ ಕೆನ್ನೀರು ನುಂಗಿ ನೊಣೆಯಿತು ಬಲಿಯನ್ನು. ಅಮ್ಮನೂ ಮಗಳೂ ಮಾಡಿದ ಆಕ್ರಂದನ ಕಿವಿಗೆ ಹಾಕಿಕೊಂಡಿದ್ದು ಕೇವಲ ಗಾಳಿ ಮತ್ತು ಮಳೆ ಅಷ್ಟೆ.
ಅಳುತ್ತಳುತ್ತಲೇ ಮನೆ ಎಂಬ ಗುಡಿಸಲಿಗೆ ಹಿಂದಿರುಗಿದ ಅಮ್ಮ ಊರಿನ ಪ್ರಮುಖರ ಮನೆಗೆ ಹೋಗಿ ಹಿಂಗಿಂಗಾಯ್ತು ಎಂದರೆ ಬಾಯಿಯ ವೀಳ್ಯ ಉಗುಳಿ ವಿಚಾರಿಸಿದವರಿಲ್ಲ. ತೋಡಿನ ಕೆಂಪು ನೀರು ಅರಬ್ಬಿ ಸಮುದ್ರ ಸೇರಿದಾಗ ತಾನು ಹೊತ್ತು ತಂದಿದ್ದ ಸಕಲ ಚರಾಚರಗಳನ್ನೂ ಸಮುದ್ರಕ್ಕೆ ಒಪ್ಪಿಸಿತು. ಅದರಲ್ಲೆ ಅಪ್ಪಣ್ಣನ ಶರೀರವೂ ಒಂದು. ಪ್ರವಾಹ, ಜಲಚರಗಳು ಕಿತ್ತು ತಿಂದ ಅರೆಬರೆ ಉಳಿದ ದೇಹ ಪಂಚಭೂತಗಳಲ್ಲಿ ಲೀನವಾಗಿದ್ದು ಉಳ್ಳಾಲದ ಕಡಲತಡಿಯ ಮೊಗವೀರರ ಮನುಷ್ಯ ಧರ್ಮದಿಂದ.
ಅಮ್ಮ, ಮಗಳು ಹನ್ನೊಂದನೆಯ ದಿನ ಮಿಂದು ಊರ ದೇಗುಲಕ್ಕೆ ಹೋಗಿ ಕಣ್ಣೀರರ್ಚನೆ ಮಾಡಿ ಸದ್ಗತಿ ಕೋರಿದರು ಅಪ್ಪಣ್ಣನಿಗೆ. ಬೊಜ್ಜ ನಡೆಸಿ ಕ್ರಿಯಾಕರ್ಮ ಮಾಡಲು ಕೈ ಖಾಲಿ. ಅಪ್ಪಣ್ಣ ಪ್ರೇತಮೋಕ್ಷ ಮಾಡಿದ ನೂರಾರು ಮನೆಯವರಲ್ಲಿ ಯಾರೊಬ್ಬರೂ ಅವನ ಪ್ರೇತಮೋಕ್ಷಕ್ಕೆ ನೆರವಾಗಲಿಲ್ಲ. ಇದ್ದ ನಾಲ್ಕು ಸೇರು ಕಡಿಯಕ್ಕಿ ಇಷ್ಟಿ? ಗಂಜಿ ಮಾಡಿ ಉಂಡರೂ ಖಾಲಿಯಾಯಿತು.
ಅಂದು ಉಪವಾಸ ಇಬ್ಬರಿಗೂ. ಹಸಿವಿನ ಸಂಕಟ ಹಿಂಡುತ್ತಿತ್ತು. ಹಲಸಿನಬೇಳೆ ಕಟ್ಟಕಡೆಯದೂ ಬೇಯಿಸಿ ಸ್ವಾಹಾ ಆಗಿತ್ತು. ಹಸಿದು ಕಂಗಾಲಾದ ಎರಡು ನಿಷ್ಪಾಪಿ ಜೀವಗಳು ಅತ್ತತ್ತು ಸೋತು ಮಲಗಿದ್ದವು.
ಹಿಡಿದ ಮಾರಿ ಮಳೆ ಅಬ್ಬರದ ಗಾಳಿಯೊಂದಿಗೆ ಬುಸುಗುಡುತ್ತಿತ್ತು. ಮಾಡಿಗೆ ಹೊದೆಸಿದ್ದ ಮಡಲು ದಿಕ್ಕಾಪಾಲಾಗಿ ಹಾರಿ ಬೀಳುವ ಸದ್ದು!! ಬೆಚ್ಚಿ ಬೆದರಿ ಕಂಗೆಟ್ಟ ತಾಯಿ ಮಗಳನ್ನು ಪುನಃ ತನ್ನ ಗರ್ಭಕ್ಕೆ ಸೇರಿಸುವ ಪರಿಯಲ್ಲಿ ಬಿಗಿದು ಅಪ್ಪಿದ್ದಳು. ಆಗ.. ಆಗ ಮೆತ್ತಗೆ.. ಬಲು ಮೆತ್ತಗೆ ಬಾಗಿಲು ಬಡಿದ ಸದ್ದು……. ಕಿವಿ ನಿಮಿರಿಸಿ ಆಲಿಸಿದಳು ಸೀತೆ. ಬಿಟ್ಟು ಬಿಟ್ಟು ಅದ್ಯಾರೋ ಬಾಗಿಲು ತಟ್ಟುವ, ಕೂಗಿ ಕರೆಯುವ ದನಿ.
ನಿಶ್ಶಬ್ದವಾಗಿ ಎದ್ದು ಸೀತೆ ಬಂದಿದ್ದು ಬರಲಿ ಎಂದು ಮೂಲೆಯಲ್ಲಿದ್ದ ಹುಲ್ಲು ಕೊಯ್ಯುವ ಕತ್ತಿ ಹಿಡಿದೇ ಬಾಗಿಲ ಬಳಿ ಬಂದು ಯಾರು ಎಂದು ಗದರು ದನಿಯಲ್ಲಿ ಕೇಳಿದಳು.
ಪರಿಚಿತ ದನಿ ಕೇಳಿ ಬಾಗಿಲು ತೆರೆದಾಗ ಒಳ ನುಗ್ಗಿದ್ದು ದೇವಸ್ಥಾನದ ಮಾರಾರ್ (ಕೇರಳದಲ್ಲಿ ದೇವಸ್ಥಾನಗಳಲ್ಲಿ ನಿತ್ಯದ ಪೂಜೆಯ ಹೊತ್ತಿಗೆ ದೇವರಿಗೆ ಚೆಂಡೆವಾದನದ ಸೇವೆ ಆಗಬೇಕು. ಅದು ಪರಂಪರಾಗತ. ಆ ಚೆಂಡೆವಾದಕರು ಮಾರಾರರು). ಅದ್ಯಾಕೆ ಈ ಹೊತ್ತಿಗೆ ಬಂದ ಇವ! ಆತ ಸರಸರನೆ ಒಳನುಗ್ಗಿದವನೇ ಕೈಲಿ ಹಿಡಿದ ದೇವರ ನೈವೇದ್ಯದ ಅನ್ನವನ್ನು ಅವರೆದುರಿಗಿಟ್ಟ. ಜೊತೆಗೆ ಗೊಜ್ಜು. ಅನ್ನದ ಘಮಘಮ ಮೂಗಿಗೆ ಬಡಿದಾಗ ಮಲಗಿದ್ದ ರಾಜಿ ಎದ್ದು ಕುಳಿತಳು.
ನಿಂತೇ ಇದ್ದ ಅವನು ಮೊದಲು ಊಟ ಮಾಡಿ ಅಮ್ಮ ಎಂದನು. ಅಳುತ್ತಳುತ್ತ ಸೀತೆ ಮಗಳಿಗೆ ಅನ್ನ ಬಡಿಸಿ ತಾನೂ ಉಂಡಳು. ಹೀಗಾಯಿತಲ್ಲ ತಮ್ಮ ದುರವಸ್ಥೆ ಎಂದು ಗಂಟಲು ಬಿಗಿದು ಬರುತ್ತಿತ್ತು ಆಕೆಗೆ.
ಹೊಳಪುಗಣ್ಣಿನ ಕಂದುಗಪ್ಪಿನ, ನಿತ್ಯ ಚೆಂಡೆ ವಾದನ ಮಾಡಿ ಹುರಿಗೊಂಡ ಬಲಿಷ್ಠ ತೋಳುಗಳ ಯುವಕ ಗೋಪಕುಮಾರ ಸೀತೆಗೆ ಹೇಳಿದ ಮಾತು ಕೇಳಿ ಮಿಕಿಮಿಕಿ ನೋಡಿದಳು ರಾಜಿ.
“ಅಮ್ಮಾ, ನೀವು ಮತ್ತೆ ರಾಜಿ ಒಪ್ಪಿದರೆ ನಾನು ನಿಮ್ಮ ಅಳಿಯನಾಗಿ ಬದುಕು ಪೂರ್ತಾ ಚೆನ್ನಾಗಿ ನೋಡಿಕೊಳ್ಳುತ್ತೇನೆ. ಎಂದಿನಿಂದಲೇ ಈ ಆಸೆ ಇದೆ. ಆದರೆ ಈ ಊರಿನಲ್ಲಿ ಲಗ್ನವಾಗಿದ್ದೇ ಆದಲ್ಲಿ ನಮಗೆ ನಿತ್ಯ ನರಕ ದರ್ಶನ ಮಾಡಿಯಾರು. ಮನಃಪೂರ್ತಿ ರಾಜಿಗೆ ಒಪ್ಪಿಗೆ ಎಂದರೆ ನಾನಿದ್ದೇನೆ ನಿಮಗೆ.”
“ಈ ಊರು ನಿಮಗೆ ಕೊಟ್ಟಿದ್ದೇನಿದೆ, ಅವಮಾನ, ಅಪಹಾಸ್ಯವಲ್ಲದೆ. ಅಪ್ಪಣ್ಣನವರು ಇದ್ದ? ದಿನ ಹಿಂಡಿಹಾಕಿದರು ಜನರು. ಅವರಿಲ್ಲ; ಸಾಕು ಈ ಊರಿನ ಋಣ. ಹೋಗೋಣ ಅಮ್ಮ.
“ಅದಕ್ಕೆ ಮುನ್ನ ನನಗೆ ನಿಮ್ಮಿಬ್ಬರ ಅಭಿಪ್ರಾಯ ಬೇಕು.
“ನಾನು ನಿಮ್ಮ ಸಮುದಾಯದವನಲ್ಲ. ಆದರೆ ನಿಮಗೆ ಚೆನ್ನಾಗಿ ಗೊತ್ತಿದೆ, ನಿಮ್ಮದೇ ಸಮುದಾಯದವರು ಅದು ಹೇಗೆ ನಡೆಸಿಕೊಂಡರು ಎಂದು. ಗೌರವವಾಗಿ ಲಗ್ನವಾಗಿ ನೆಮ್ಮದಿಯ ಬಾಳು ಕೊಡಬಲ್ಲೆ. ಈ ಆಸೆ ಎಂದಿನಿಂದಲೇ ಇದೆ. ಆದರೆ ಕೇಳುವ ಧೈರ್ಯವಿಲ್ಲದಾಯಿತು.”
ರಾಜಿಗೆ ಪೂರ್ತಾ ಎಚ್ಚರವಾಯಿತು ಈಗ. ತನ್ನನ್ನು ಬಯಸಿ ಬರುವ ಯುವಕ ಮೂರು ಲೋಕದಲ್ಲೂ ಇಲ್ಲವೆಂದರೆ ಇಲ್ಲೊಬ್ಬ ಶ್ರೀಕೃಷ್ಣ ಬಂದಿದ್ದಾನೆ ಅಪದ್ಭಾಂಧವನಾಗಿ! ಹೌದೇ! ನಿಜವೇ ಇದು!
ಪ್ರೇತಭಟ್ಟನ ಮಗಳು ಎಂದು ನಾಲ್ಕು ದಿಕ್ಕಿನಿಂದಲೂ ಹೀನಾಯಿಸಿ ಚಪ್ಪಾಳೆ ತಟ್ಟಿ ಕ್ರೂರ ಹಾಸ್ಯ ಮಾಡಿದ ಲೋಕದಲ್ಲಿ ಇಂಥವನಿದ್ದಾನೆ ಎಂದರೆ ಅಪ್ಪ ದೇವಲೋಕಕ್ಕೆ ಹೋಗಿ ಕಳಿಸಿದವನೇ ಇರಬೇಕು ತಮ್ಮ ರಕ್ಷಣೆಗಾಗಿ. ಅವಳ ಒಲವಿನ ನೋಟವೇ ಉತ್ತರವಾಯಿತು. ಸೀತೆ ಸಂತೋಷವಾಗಿ ಒಪ್ಪಿದಳು.
ಮಗಳ ಮದುವೆ ಇಲ್ಲಿದ್ದರೆ ಕನಸಿನ ಮಾತು, ತಾನು ಕಂಡಂತೆ ಯೋಗ್ಯನಾದ ಯುವಕ ಗೋಪ.
ತಮ್ಮವರು ಕೈ ಹಿಡಿಯುವುದಿಲ್ಲ ಎನ್ನುವುದು ಉರಿಯುವ ಸೂರ್ಯನಷ್ಟೇ ಸತ್ಯ. ವೃದ್ಧ ಕನ್ಯೆಯಾಗಿ ದಿನದಿನ ಹಸಿವು, ಬಡತನ, ತಾತ್ಸಾರ ಕೇಳುತ್ತ ಬದುಕುವ ಬದಲಿಗೆ ಇಲ್ಲಿನ ಹಂಗು ಕಳಚಿ ಬಿಡುಗಡೆಗೆ ದೇವರೇ ಕಳಿಸಿದ ಯುವಕ.
ಗೋಪಕುಮಾರ ತಾಯಿ ಮಗಳ ಉತ್ತರ ಪಡೆದುಕೊಂಡು ಮಾರನೆಯ ದಿನ ಮಧ್ಯರಾತ್ರಿಗೆ ಹೊರಡುವ ತಯಾರಿ ಮಾಡಲು ಹೇಳಿ ಬಂದ ಹಾಗೇ ಹಿಂದಿರುಗಿದ. ಗಟ್ಟಿಮುಟ್ಟಾದ ದುಡಿದುಣ್ಣುವ ಜೀವ ಗೋಪನಿಗೆ ತಂದೆ ತೀರಿದ್ದರು. ತಬ್ಬಲಿಗೆ ಬದುಕಿನಾಧಾರ ಚೆಂಡೆವಾದನದ ವೃತ್ತಿ. ಸಭ್ಯ, ಪ್ರಾಮಾಣಿಕ ಯುವಕ. ಸೀತೆಗೆ ಕನಸೇ ಇದೆಲ್ಲ ಎಂಬ ಹಿಗ್ಗು. ಈ ಸುದ್ದಿ ಕೇಳಲು ಅಪ್ಪಣ್ಣನಿರಬೇಕಿತ್ತು ಎಂಬ ಅಳಲು. ರಾಜಿಗೆ ರಾತ್ರಿಯೆಲ್ಲ ಸವಿ ಕನಸು.
ಹಿಡಿದ ಜಡಿಮಳೆಗೆ ಅಪ್ಪಣ್ಣನ ಮನೆ ಮುರಿದು ಬಿದ್ದಿದ್ದು ಊರಿನವರಿಗೆ ಗೊತ್ತಾದಾಗ ನಾಲ್ಕು ದಿನವೇ ಸಂದಿತು. ಅಮ್ಮ, ಮಗಳು ಮಣ್ಣಿನಡಿಯಲ್ಲಿ ಸಮಾಧಿಯಾಗಿರಬೇಕು. ಅವರ ಬೊಜ್ಜಕ್ಕೆ ಪ್ರೇತಕ್ಕೆ ಕೂರಲು ಪ್ರೇತಭಟ್ಟನೇ ಇಲ್ಲವೆಂದು ವೀಳ್ಯದೆಲೆಗೆ ಸುಣ್ಣ ಸವರುತ್ತ ಹಾಸ್ಯ ಮಾಡಿ ನಕ್ಕರು.
ಗುರುವಾಯೂರು ನಗರ ಕೈ ನೀಡಿ ಸ್ವಾಗತಿಸಿತು ಅವರನ್ನು. ಗೋಪಕುಮಾರನ ವೃತ್ತಿಗೆ ಅಲ್ಲಿ ಧಾರಾಳವಾಗಿ ಬೇಡಿಕೆಯಿದೆ. ಶ್ರೀಕೃಷ್ಣನ ಸನ್ನಿಧಿಯಲ್ಲಿ ಮಾಂಗಲ್ಯ ಕಟ್ಟಿದ ಅವನು. ದೂರದ ಸಂಬಂಧಿ ಅಜ್ಜಿ ತಮ್ಮಲ್ಲಿಗೆ ಕರೆಸಿದರು ಅವರನ್ನು. ಆಕೆ ಪಕ್ಷವಾತ ಹಿಡಿದು ತೀರಿಕೊಳ್ಳುವಾಗ ಸೀತೆ ಜಲ, ಮಲವೆನ್ನುವ ಭೇದವಿಲ್ಲದೆ ಮಾಡಿದ ಚಾಕರಿ ಇಷ್ಟು ಎನ್ನುವಂತಿಲ್ಲ. ತನ್ನದಾದ ಮನೆ, ಹಿತ್ತಲು ಗೋಪಕುಮಾರನಿಗೆ ಬರೆದಿಟ್ಟೇ ಆಕೆ ತೀರಿಕೊಂಡಳು. ಬಟ್ಟೆಯಂಗಡಿ ಹಾಕಿದ ಮೇಲೆ ಗೋಪ ಅದರಲ್ಲೇ ಅಭಿವೃದ್ಧಿಯಾದ. ನೆಮ್ಮದಿಯ ಬದುಕು ಸೀತೆಯದು. ಮಗನ ಸ್ಥಾನ ತುಂಬಿದ ಅಳಿಯ. ರಾಜೇಶ್ವರಿ ಗೋಪಕುಮಾರ್ ಮತ್ತು ಸೀತಮ್ಮ ಈಗ ಗುರುವಾಯೂರಿನ ಗೌರವಾನ್ವಿತ ಮಹಿಳೆಯರು. ರಾಜಿ ಪತಿಯ ಒಲವು, ಆದರ ಎರಡು ಕೈಲಿ ಸೂರೆಗೊಂಡವಳು.
ಗುರುವಾಯೂರಪ್ಪನ ಸನ್ನಿಧಿಯಲ್ಲಿ ನಿತ್ಯದವರಿಗೆ ಸೂತಕವೋ, ಕಾಯಿಲೆಯೋ ಇದ್ದು ಕರೆ ಬಂದಾಗ, ಹಬ್ಬದ ಸಮಯದಲ್ಲಿ ಚೆಂಡೆ ವಾದನಕ್ಕೆ ಹೋಗಲು ಹಿಂಜರಿಯಲಿಲ್ಲ.
ಜನಿಸಿದ ಮಗ ಒಬ್ಬನೇ, ಆತ ಪ್ರದ್ಯುಮ್ನ. ಅವನು ಈಗ ಇಂಜಿನಿಯರಿಂಗ್ ಸ್ಟೂಡೆಂಟು.
ನೀಳವಾಗಿ ಉಸಿರೆಳೆದುಕೊಂಡಳು ಸೀತೆ. ಹಟತೊಟ್ಟು ತಮ್ಮ ಹುಟ್ಟೂರಿನ ಬಗ್ಗೆ ಹೇಳಲು ಒತ್ತಾಯಿಸುತ್ತಿದ್ದ ಮೊಮ್ಮಗ.
ಊರು ಬಿಟ್ಟು ಬಂದಾಗಿನಿಂದ ಒಡಲಿನಾಳದಲ್ಲಿ ಗುಟ್ಟಾಗಿದ್ದ ಕಳೆದುಹೋದ ಬದುಕು ಅವನೆದುರು ಬಿಚ್ಚಿದಾಗ ಹಗುರಾಯಿತು ಅವಳಿಗೆ. ರಾಜಿ ಕೇಳುತ್ತ ಕೇಳುತ್ತ ಹನಿಗಣ್ಣಾದಳು.
ಮೊಮ್ಮಗನಿಗೆ ತಾವು ನಡೆದುಬಂದ ಕಲ್ಲುಮುಳ್ಳಿನ ಹಾದಿಯ ಕಡುಕ?, ಅಳಿಯ ಕೈಹಿಡಿದು ಪುನರ್ಜನ್ಮ ಕೊಟ್ಟ ಬಗೆ. ಆ ಊರು ತೊರೆದು ಇಲ್ಲಿ ಬಂದು ಈಗ ಸುಖವಾಗಿದ್ದರೂ ಗಂಡ ಒಂದೇ ಒಂದು ದಿನವೂ ಸೌಖ್ಯ ಎಂದರೇನೆಂದೇ ಕಾಣಲಿಲ್ಲ; ಅಳಿಯ, ಮಗಳ ಚೆಂದದ ಸಂಸಾರ ನೋಡಲು ಅವರಿಲ್ಲ; ಮುದ್ದಿನ ಮೊಮ್ಮಗನನ್ನು ಎತ್ತಿ ಬೆನ್ನ ಮೇಲೆ ಕೂಸುಮರಿ ಮಾಡುವ ಭಾಗ್ಯ ಅವರಿಗೆ ಇಲ್ಲದಾಯಿತು.
ಬದುಕು ಪೂರ್ತಾ ನೋವು, ಹೀನಾಯ, ತಾತ್ಸಾರವನ್ನೇ ಹಾಸಿ ಹೊದ್ದವರು. ಅವರ ನೆನಪು ನಿರಂತರವಾಗಿ ಕಾಡುತ್ತಲೇ ಇದೆ ಸೀತೆಗೆ.
ಜೀವನಗಾಥೆಯನ್ನು ಕಣ್ಣೀರಿಡುತ್ತಲೇ ಮೊಮ್ಮಗನ ಒತ್ತಾಯ ತಡೆಯಲಾಗದೆ ಬಿಡಿಸಿಟ್ಟಿದ್ದರು. ರಾಜಿ, ರಾಜೇಶ್ವರಿಗೂ ಅಪ್ಪನ ನೆನಪಿಂದ ಸಂಕಟ, ತೇವಗೊಂಡ ಕಣ್ಣುಗಳನ್ನು ಅಮ್ಮನಿಗೆ ಕಾಣದ ಹಾಗೆ ಒರೆಸಿಕೊಂಡಳು.
“ಇದು ನಮ್ಮ ಬದುಕಿನ ವೃತ್ತಾಂತ ಮಗಾ. ನಾವನುಭವಿಸಿದ ಕ?, ಸಂಕಟ ಬರಬಾರದು ಅನ್ಯರಿಗೆ. ನಿಮ್ಮಪ್ಪ ಕೈಹಿಡಿಯದೆ ಇದ್ದರೆ ಇಂದಿಗೆ ನಾವಿಲ್ಲ. ಅಮ್ಮನ ಊರಿಗೆ ಹೋಗೋಣ ಒಂದ್ಸಾರಿ ಅಂತ ಹಟ ಹಿಡೀತಾ ಇದ್ದಿಯಲ್ಲ. ಅಮ್ಮ ಆಡಿ, ಕುಣಿದು, ಶಾಲೆಗೆ ಚೀಲ ಹೊತ್ತ ಹಾದಿಯಲ್ಲಿ ನಾನೂ ಓಡಾಡಬೇಕು ಅಂತ ವರ್ಷದಿಂದ ಹಂಬಲಿಸ್ತಿದ್ದಿ. ಈ ತನಕ ನಿನ್ನ ಅಲ್ಲಿಗೆ ಕರೆದೊಯ್ಯದೆ ಇದ್ದ ಕಾರಣ ಇದು.
ಅತ್ತ ಹೋಗಿದ್ದೇ ಆದರೆ ಆ ಜನಗಳಿಗೆ ನಾವು ಸತ್ತಿಲ್ಲ; ಸುಖವಾಗಿ ಬದುಕಿದ್ದೇವೆ ಎನ್ನುವುದು ಗೊತ್ತಾಗುತ್ತದೆ. ನಿನ್ನ ತಲೆಗೆ ಬೇಡದ್ದೆಲ್ಲ ತುಂಬಿಸಿ ಮನಸ್ಸು ಕೆಡಿಸುತ್ತಾರೆ ಅಂತ ಭೀತಿ ನಮಗೆ. ನಿಮ್ಮಪ್ಪನಿಗೆ ಅತ್ತ ತಲೆ ಹಾಕಲೇ ಮನಸ್ಸಿಲ್ಲ. ಅನಿವಾರ್ಯಕ್ಕೆ ಸಿಲುಕಿ ನಿನ್ನ ಅಜ್ಜ ಒಮ್ಮೆ ಬೊಜ್ಜಕ್ಕೆ ಪ್ರೇತವಾಗಿ ಕೂತಿದ್ದೇ ಜನ ಅದನ್ನೇ ಖಾಯಂ ಆಗಿ ಮಾಡಿ ಆ ವೃತ್ತಿಗಿಳಿಸಿದರು.
ಹೀನಾತಿಹೀನವಾಗಿ ಬಾಳಿದಲ್ಲಿಗೆ ಕಾಲಿಡುವ ಮನಸ್ಸು ನಮಗಿಲ್ಲ. ಅದಕ್ಕೆ ನೀನೇ ಒತ್ತಾಯಿಸಿ ಕೇಳಿದರೂ ಬಿಟ್ಟುಕೊಟ್ಟಿರಲಿಲ್ಲ. ಎಲ್ಲ ಕೇಳಿದೆ ನೀನು. ಈಗ ಹೇಳು ಅತ್ತ ಭೇಟಿ ಕೊಡುವ ಹುಮ್ಮಸ್ಸು ಹಾಗೇ ಉಂಟಾ ಅಥವಾ ಬಿಟ್ಟುಬಿಟ್ಟೆಯಾ?”
ಅಜ್ಜಿ ಸೀತೆ ಮಾತು ಮುಗಿಸಿದರು. ಅಮ್ಮನತ್ತ ನೋಡಿದ ಮಗ.
“ಹೌದು ಪ್ರದ್ಯು. ಅಕ್ಷರಕ್ಷರ ಸತ್ಯ. ನಿನ್ನಪ್ಪ ಬಾರದೆ ಹೋಗಿದ್ದರೆ ಅಂದು ನಾವು ಹೊಳೆ ಪಾಲಾಗಬೇಕಿತ್ತು.”
ಪ್ರದ್ಯುಮ್ನ ಎದ್ದು ತೋಳೆತ್ತಿ ಕುಣಿದ. ಎರಡು ಕೈ ಚಾಚಿ ಅಜ್ಜಿಯನ್ನು, ಅಮ್ಮನನ್ನು ತಬ್ಬಿದ. ಕಣ್ಣಲ್ಲಿ ಕಂಬನಿ.
“ನಮ್ಮಪ್ಪ ಹೀರೋ. ಒಳ್ಳೆಯ ಸಿನೆಮಾ ಕಥೆಯ ಹಾಗೆ ಅಮ್ಮನನ್ನು ಮದುವೆ ಮಾಡ್ಕೊಂಡ. ಅಪ್ಪಾಜಿ ಈಸ್ ಗ್ರೇಟ್.”
“ಅಜ್ಜೀ, ನೀವಿತ್ತ ಬಂದು ಇಪ್ಪತ್ತನಾಲ್ಕು ವ?ಗಳೇ ಸಂದಿತು ಈ ವಿ? ಸಂಕ್ರಮಣಕ್ಕೆ ಅಂದಿರಿ. ಅಜ್ಜ ತೀರಿಹೋದ ನಂತರ ಆ ಕಡೆ ಯಾರೂ ಸಾಯಲೇ ಇಲ್ವಾ? ಸತ್ತರೆ ಅವರ ಬೊಜ್ಜಕ್ಕೆ ಪ್ರೇತವಾಗಿ ಆವಾಹಿಸಿಕೊಳ್ಳಲು ಅದ್ಯಾರು ಕೂತಿದ್ದರಂತೆ? ಮೋಕ್ಷ ಸಿಗ್ತಾ ಅವರಿಗೆಲ್ಲ?” ಕಿಚಾಯಿಸಿದ.
“ಮೊನ್ನೆ ಮೊನ್ನೆ ಗುರುವಾಯೂರಪ್ಪನ ಸನ್ನಿಧಿಯಲ್ಲಿ ದಕ್ಷಿಣಕನ್ನಡದ ಕುಟುಂಬದವರು ಸಿಕ್ಕಿದ್ದರು. ಹೀಗೇ ಸುತ್ತಿ ಬಳಸಿ ವಿಚಾರಿಸಿದೆ. ಆ ಯಜಮಾನರು ಹೇಳಿದರು – ಈಗ ಅಂಥದಕ್ಕೆ ಜನ ನಾಲ್ಕೂರು ಅರಸಿದರೂ ಸಿಗುವುದಿಲ್ಲ. ಶಾಸ್ತ್ರಕ್ಕೆ ಪ್ರೇತಭಟ್ಟನ ಬದಲಿಗೆ ಒಂದು ಪೂರ್ಣಫಲ ಅಂದರೆ ತೆಂಗಿನಕಾಯಿ ಇಟ್ಟು ಕಾರ್ಯ ಮುಂದುವರಿಸುತ್ತೇವೆ; ಅಂಥ ಹೀನಪದ್ಧತಿಗಳನ್ನು ಬಿಟ್ಟುಬಿಡಬೇಕು. ಜನಗಳಿಗೆ ಅರಿವು, ವಿದ್ಯೆ ಹೆಚ್ಚಿದ ಹಾಗೇ ಅಂಥ ಕೆಟ್ಟ ಸಂಪ್ರದಾಯಗಳು ನಿಲ್ಲಬೇಕು ಅಂತ ಅಭಿಪ್ರಾಯಪಟ್ಟರು.”
“ಅಜ್ಜೀ. ನನಗೆ ನೀವು ಮುಖ್ಯ. ನನ್ನಮ್ಮ, ಅಪ್ಪ ಹೆಚ್ಚಿನವರು. ಅಂಥ ಮೌಢ್ಯಕ್ಕೆ ನಾನು ಬೆಲೆ ಕೊಡುವುದಿಲ್ಲ. ನೀವು ಕಣ್ಣೀರಿಟ್ಟು, ನೊಂದು ಬೆಂದ ಊರಿಗೆ ನಾನು ಕಾಲಿಡುವವನಲ್ಲ. ಅಜ್ಜನ ಬಗ್ಗೆ ನನಗೆ ಗೌರವವಿದೆ; ಅಪ್ಪನೂ ಅವರ ವ್ಯಕ್ತಿತ್ವಕ್ಕೆ ಮೆಚ್ಚಿದವರು.
“ನೀವೇಕೆ ಕಣ್ಣೀರಿಡಬೇಕು? ಸಾಕಿನ್ನು ಅದೆಲ್ಲ, ಮರೆತುಬಿಡಿ. ಒಳ್ಳೆಯದನ್ನು ಪ್ರತಿದಿನ ಬೇಕಿದ್ದರೆ ನೆನಪಿಸಿಕೊಳ್ಳಿ. ಇನ್ನು ನನ್ನ ಅಜ್ಜನ ಬಗ್ಗೆ ಹೇಳಬೇಕಿದ್ದರೆ – ಅದರಲ್ಲೇನಿದೆ? ಅವರು ಯಾರ ತಲೆ ಒಡೆದು ಬದುಕಲಿಲ್ಲ; ಖೂನಿ ಮಾಡಲಿಲ್ಲ. ಕಳವಿಗೆ ಇಳಿಯಲಿಲ್ಲ. ಮೋಸ, ವಂಚನೆಗೆ ಕೈಹಾಕಲಿಲ್ಲ. ಪ್ರಾಮಾಣಿಕವಾಗಿ ದುಡಿದರು.
“ಕೀಳಾಗಿ ಕಂಡವರಿಗೆ ಬುದ್ಧಿಯಿಲ್ಲ ಅಷ್ಟೆ. ಇದರಲ್ಲಿ ಹೀನಾಯ ಪಡಲೇನಿಲ್ಲ. ಮನು? ತನ್ನ ಜೊತೆಯ ಮನು?ನನ್ನೇ ತನ್ನ ಅಗತ್ಯಕ್ಕೆ ಇಂಥದ್ದಕ್ಕೆಲ್ಲ ಕೂರಿಸಿ ಮತ್ತೆ ಕಾಲಿನಡಿಗೆ ನೂಕಿ ಮೆಟ್ಟುವ ಪ್ರವೃತ್ತಿ ನಿಲ್ಲದೆ ನಮ್ಮ ಸಮಾಜ ಉದ್ಧಾರವಾಗುವುದಿಲ್ಲ.
“ಹುಟ್ಟಿನಿಂದ ಯಾರೂ ಶ್ರೇಷ್ಠರಲ್ಲ; ಅವರವರ ನಡವಳಿಕೆ, ಗುಣ, ಸ್ವಭಾವ, ಅನ್ಯರು ಮಾದರಿಯಾಗಿಟ್ಟು ಕೊಳ್ಳುವಂತಿರಬೇಕು. ನಮ್ಮ ಸಂಪ್ರದಾಯಗಳು, ಆಚಾರ, ವಿಚಾರಗಳು ಹೀಗೇ ಇರಬೇಕು ಎಂದು ಭಗವಂತ ಎಲ್ಲೂ ಹೇಳಿಲ್ಲ; ಅದೆಲ್ಲ ಅವರವರು ಮಾಡಿಕೊಂಡಿದ್ದು ಅ?. ನೊಂದವರ ಕೈಹಿಡಿದು ಮೇಲೆತ್ತಿ ಸಮಸಮವಾಗಿ ನಡೆಯಿಸುವ ಮಾನವಧರ್ಮ ಎಲ್ಲಕ್ಕಿಂತ ಉತ್ತಮ.”