ದರಿದ್ರಾನ್ ಭರ ಕೌನ್ತೇಯ ನ ಸಮೃದ್ಧಾನ್ ಕದಾಚನ |
ವ್ಯಾಧಿತಸ್ಯೌಷಧಂ ಪಥ್ಯಂ ನೀರೋಗಸ್ಯ ಕಿಮೌಷಧೈಃ ||
– ಮಹಾಭಾರತ
“ಮಹಾರಾಜ! ಪ್ರಜಾರಕ್ಷಕರ ಗಮನ ಕೇಂದ್ರೀಕೃತವಾಗಿರಬೇಕಾದದ್ದು ಆರ್ತ-ದೀನರ ಮೇಲೆಯೇ ಹೊರತು ಸಂಪನ್ನರ ಮೇಲಲ್ಲ. ಔ?ಧ-ಪಥ್ಯಾದಿಗಳಿಂದ ಪ್ರಯೋಜನವಾಗುವುದು ಕಾಯಿಲೆಯಲ್ಲಿರುವವರಿಗೇ ಹೊರತು ಆರೋಗ್ಯವಂತರಿಗಲ್ಲ.”
ಎಷ್ಟು ನಾಗರಿಕ ವ್ಯವಸ್ಥೆಗಳು ಬೆಳೆದರೂ ಜೀವನಾನುಕೂಲವಂಚಿತರ ದೊಡ್ಡ ವರ್ಗ ಇದ್ದೇ ಇರುತ್ತದೆ. ಬಹುಶಃ ಇದು ಪ್ರಕೃತಿನಿಯಮ. ಅಂತಹ ಆರ್ತರನ್ನು ಗುರುತಿಸುವುದು ಕಷ್ಟವಲ್ಲ. ಹೆಚ್ಚುಮಂದಿ ಉದಾಸೀನರಾಗಿರುತ್ತಾರ?. ಸಂವೇದನಶೀಲರಾದವರು ಕಷ್ಟದಲ್ಲಿರುವವರನ್ನು ಕಂಡೊಡನೆ ದ್ರವಿಸಿಬಿಡುತ್ತಾರೆ, ಅವರ ನೆರವಿಗೆ ಧಾವಿಸುತ್ತಾರೆ, ತಮ್ಮಿಂದಾದ ಸೇವೆ ಸಲ್ಲಿಸುವುದರಲ್ಲಿ ಸಾರ್ಥಕ್ಯ ಕಂಡುಕೊಳ್ಳುತ್ತಾರೆ.
ಕಡಲಿ ಆನಂದ್‌ಕುಮಾರ್ ಎಂಬ ತರುಣಸಜ್ಜನ ವಿಶಾಖಪಟ್ಟಣ ಮೂಲದವರಾಗಿ ಈಗ ಬೆಂಗಳೂರಿನಲ್ಲಿ ಸ್ಥಿರಗೊಂಡಿರುವ ಐ.ಟಿ. ಉದ್ಯೋಗಿ. ಈಗ್ಗೆ ಏಳು ವರ್ಷ ಹಿಂದೆ ಒಮ್ಮೆ ಸುತ್ತಾಡಲು ದೊಡ್ಡಬೆಲೆ ಪ್ರಾಂತಕ್ಕೆ ಹೋಗಿದ್ದರು. ಅಲ್ಲಿ ಒಂದು ಸರ್ಕಾರೀ ಶಾಲೆ. ಬೆಳಗ್ಗೆ ಶಾಲಾಪ್ರಾರ್ಥನೆಯಲ್ಲಿ ಹುಡುಗರೆಲ್ಲ ನಿಂತಿದ್ದರು. ಇದ್ದಕ್ಕಿದಂತೆ ನಾಲ್ಕೈದು ಜನ ಹುಡುಗರು ಕುಸಿದುಬಿದ್ದರು. ಸುತ್ತಲಿನವರು ಉಪಚರಿಸುವಾಗ ತಿಳಿದದ್ದು – ಆ ಹುಡುಗರು ಹಸಿದ ಹೊಟ್ಟೆಯಲ್ಲಿ ಬಂದಿದ್ದರು. ಅವರ ಕುಟುಂಬಸ್ಥಿತಿ ಹಾಗಿತ್ತು.
ಆನಂದ್‌ರವರಿಗೆ ನೋವು ತಡೆಯಲಾಗಲಿಲ್ಲ. ಶಾಲಾ ವ್ಯವಸ್ಥಾಪಕರಿಗೆ ಹೇಳಿದರು – “ಇನ್ನು ಮುಂದೆ ವಾರದಲ್ಲೊಂದು ದಿನ ಅಷ್ಟು ಹುಡುಗರಿಗೆ ನಾನು ಉಪಾಹಾರ ವ್ಯವಸ್ಥೆ ಮಾಡುತ್ತೇನೆ.” ಹೀಗೆ ಆರಂಭಗೊಂಡ ಉಪಾಹಾರದಾನಸೇವೆಯಲ್ಲಿ ಇತರ ಅನೇಕರು ಸಂತೋಷದಿಂದ ಕೈಜೋಡಿಸಿದರು. ವಾರದ ಆರೂ ದಿನಕ್ಕೆ ಸೇವೆ ವಿಸ್ತರಿಸಿತು. ನೋಡುನೋಡುತ್ತಿದ್ದಂತೆ ಈ ಸೇವಾ-’ಸಾಂಕ್ರಾಮಿಕ’ ನೆರೆಯ ಶಾಲೆಗಳಿಗೂ ಜಿಲ್ಲೆಗಳಿಗೂ ತಮಿಳುನಾಡು ಆಂಧ್ರ ಮಹಾರಾಷ್ಟ್ರ ಹರಿಯಾಣಾ ಪಶ್ಚಿಮಬಂಗಾಳಗಳವರೆಗೆ ಹರಡಿತು! ಶ್ರೀಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ಎಂಬ ನ್ಯಾಸ ಏರ್ಪಟ್ಟಿತು. ವಾಲಂಟಿಯರುಗಳ ಜೊತೆಗೆ ಸ್ಥಾನಿಕರೂ ಸಂತೋಷದಿಂದ ಸಹಕರಿಸಿದರು. ಇದೀಗ ೧೫೦೦ಕ್ಕೂ ಹೆಚ್ಚು ಶಾಲೆಗಳಲ್ಲಿ ಈ ಸೇವಾಕಾರ್ಯ ನಡೆಯುತ್ತಿದೆ. ನ್ಯಾಸವು ಉಪಾಹಾರದಾನವಲ್ಲದೆ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ, ಬಡಹುಡುಗರಿಗೆ ವಿದ್ಯಾರ್ಥಿವೇತನ, ಕುಡಿಯುವ ನೀರಿನ ವ್ಯವಸ್ಥೆ ಮೊದಲಾದವುಗಳಿಗೂ ಚಟುವಟಿಕೆಗಳನ್ನು ವಿಸ್ತರಿಸಿದೆ.
ಆನಂದ್‌ಕುಮಾರ್ ಬಾಲ್ಯದಲ್ಲಿ ವಿಶಾಖಪಟ್ಟಣದ ಆಸುಪಾಸಿನಲ್ಲಿ ಸತ್ಯಸಾಯಿ ಸೇವಾಸಮಿತಿ ನಡೆಸುತ್ತಿದ್ದ ಸೇವಾಕಾರ್ಯಗಳಲ್ಲಿ ಭಾಗವಹಿಸಿದ್ದುದೇ ಅವರೊಳಗಿನ ಸೇವೋತ್ಸಾಹಕ್ಕೆ ಪೋ?ಕವಾಗಿ ಕೆಲಸ ಮಾಡಿದ್ದುದು.
ಲೋಕದಲ್ಲಿ ದುಷ್ಟಕೂಟಗಳು ಬೆಳೆದಂತೆ ಸಜ್ಜನಕೂಟಗಳೂ ಬೆಳೆಯಬಲ್ಲವು – ಎಂಬುದಕ್ಕೆ ಮೇಲಿನದು ಒಂದು ಒಳ್ಳೆಯ ದೃಷ್ಟಾಂತವಲ್ಲವೆ?