ಮಣ್ಣಿನಿಂದ ಮೇಲೆದ್ದು ಪುನಃ ಮಣ್ಣಿನೊಳಗೆ ನುಗ್ಗಿದಂತಿದ್ದ ಎರಡು ಬೇರುಗಳ ಕೆಳಗೆ ನುಸುಳುತ್ತಾ ಮಕ್ಕಳು ಏನನ್ನೋ ಹಾಡಿಕೊಳ್ಳುತ್ತಿದ್ದವು. ಈ ಭೂಮಿಯ ಮಣ್ಣನ್ನೆಲ್ಲ ಈ ಬೇರುಗಳೆ ಹಿಡಿದಿಟ್ಟಿರಬಹುದೆ? ಜಗದೀಶ್ವರನ ಮಗಳು ಒಂದು ಬೇರನ್ನು ಹಿಡಿದುಕೊಂಡು, “ಇದು ನನ್ನ ಬೇರು, ನಾನಿಲ್ಲಿಂದ ಯಾರನ್ನು ಹೋಗಲು ಬಿಡಲ್ಲ” ಎಂದು ಉಳಿದವರಿಗೆ ತಾಕೀತು ಮಾಡುತ್ತಿದ್ದಳು. ಬಿಡದಿದ್ದರೆ ಹಿಡುಕೋ ಎಂದು ಉಳಿದವುಗಳೆಲ್ಲ ಆ ಬೇರಿನ ಕೆಳಗೆ ತೆವಳಿಕೊಂಡು ತಮ್ಮಷ್ಟಕ್ಕೇ ಆಟ ಮುಂದುವರಿಸಿದವು.
ಪರಮೇಶ್ವರ ಎರಡೆರಡು ಬಾರಿ ಪಂಚಾಯತಿ ಸೇರಿಸಿಬಿಟ್ಟನಲ್ಲ. ಹಿಡಿದ ಹಠ ಬಿಡಲಾರ. ಒಮ್ಮೆ ಕೆಳಗಿನ ತೋಟದ ಶ್ರೀರಂಗ, ಬೈಲಗದ್ದೆಯ ಮಾಬಲಣ್ಣ, ಹೊಸ್ತೋಟದ ರಾಮಣ್ಣ ಮೇ?, ಅವನ ಮಾವನವರಾದ ಗೋಪಾಲಭಟ್ರು ಹೀಗೆ ಘಟಾನುಘಟಿಗಳನ್ನು ಸೇರಿಸಿ ಮೊದಲ ಸಲ ಮಾಡಿದ ಪಂಚಾಯತಿ ಫಲ ಕೊಡಲಿಲ್ಲ. ಎರಡನೆಯ ಸಲಕ್ಕೆ ಪಟ್ಟಣದಿಂದ ದೊಡ್ಡ ವಕೀಲರನ್ನೇ ಗೊತ್ತುಮಾಡಿಕೊಂಡು ಬಂದು ಪಾಲುಪಟ್ಟಿಯಲ್ಲಿ ತನಗೆ ಅನ್ಯಾಯವಾಗಿದೆಯೆಂದು ನೋಟಿಸ್ ಕೊಡಿಸಿದ್ದ. ದೂರದಲ್ಲಿದ್ದ ವಿಶ್ವೇಶ್ವರ ಕೂಡಲೆ ಬಂದು ಪ್ರತಿಯಾಗಿ ಇನ್ನೊಬ್ಬ ಲಾಯರನ್ನು ನೇಮಿಸಿದ್ದ. ವಿಷಯ ಕೋರ್ಟಿನ ಕದ ತಟ್ಟಿತ್ತು. ಕೊನೆಗೆ ಪರಮೇಶ್ವರ ಬಯಸಿದ ಮನೆಯ ಹಿಂಬದಿಯ ಒಂದು ಎಕರೆಯ? ಜಾಗ ಅವನ ಪಾಲಿನ ತೋಟಕ್ಕೆ ಸೇರಿಹೋಯಿತು.
ಇಷ್ಟೇ ಆಗಿದ್ದರೆ ಎಷ್ಟೋ ಸಮಾಧಾನವಾಗುತ್ತಿತ್ತು. ಹಿತ್ತಲಿನಲ್ಲಿ ದೊಡ್ಡಕ್ಕೆ ಹರಡಿಕೊಂಡು ಬೆಳೆದ ಜೀರಕ್ಕಿ ಮಾವಿನಮರದಲ್ಲಿ ಆ ವ? ತುಂಬಿದ ಫಸಲು. ವಿಶ್ವೇಶ್ವರನ ಮಗ ಪುಟ್ಟ, ಹಣ್ಣು ಆಯಲು ಹೋಗಿ ಅವನನ್ನು ಪರಮೇಶ್ವರನ ಆಳು ದೇವು ಓಡಿಸಿಕೊಂಡು ಬಂದು, ಈತ ತಪ್ಪಿಸಿಕೊಳ್ಳಲು ದೇವುವನ್ನು ನೂಕಿ ಹೊಂಡಕ್ಕೆ ಬೀಳಿಸಿ, ಆತನ ಕಾಲ ಮುರಿದು, ಕೊನೆಗೆ ದೇವುವಿನ ಆಸ್ಪತ್ರೆ ಖರ್ಚನ್ನು ವಿಶ್ವೇಶ್ವರ ಭರಿಸಿದ ನಂತರವೇ ಈ ಪ್ರಕರಣ ಅಂತ್ಯ ಕಂಡದ್ದು.
“ಎರಡು ಹಣ್ಣು ತಾನೇ, ಹೆಕ್ಕಿಕೊಳ್ಳುತ್ತಿದ್ದ, ಮಕ್ಕಳಿಗೆ ಆಸೆಯಾಗುವುದಿಲ್ಲವಾ ದೇವು” ಎಂದು ನಾನು ಹೇಳಿದ್ದಕ್ಕೆ,
“ಯಾರ ಮಕ್ಕಳನ್ನೂ ಬಿಡಬೇಡ. ಸಸಾರ ಆಗ್ತದೆ ಅಂತ ಅಣ್ಣ ಹೇಳಿದ್ದರಿಂದ ನಾನು ಓಡಿಸಿದ್ದು ಅಮ್ಮಾ… ಇಲ್ಲದಿದ್ದರೆ ಎರಡು ಹಣ್ಣಲ್ಲಿ ಎಂತ ಆಗ್ತದೆ… ಏನು ಹೋಗ್ತದೆ” ಎಂದಿದ್ದ ದೇವು.
ಬೇಸಿಗೆ ರಜೆಯಲ್ಲಿ ಹೀಗೆ ಮಕ್ಕಳು ಮೊಮ್ಮಕ್ಕಳೆಲ್ಲ ಸೇರುವಾಗ ಈ ಜೀರಕ್ಕಿ ಮಾವಿನಹಣ್ಣುಗಳು ಮರದ ತುಂಬ ತೂಗುತ್ತಿದ್ದವು. ಅಳಿಲು, ಬಾವಲಿಗಳು ಅರ್ಧರ್ಧ ತಿಂದು ಮನೆಯ ಹತ್ತಿರ ತಂದುಹಾಕಿದ ಹಣ್ಣುಗಳನ್ನು ಈ ಮಕ್ಕಳು ಹೆಕ್ಕಿ ತಿನ್ನುತ್ತಿದ್ದವು. ಹೊಟ್ಟೆಯೊಳಗಿನ ಸಂಕಟವನ್ನು ಶಮನಗೊಳಿಸಲು ಈ ಮರಗಳ ನಿರ್ಲಿಪ್ತತೆ ನನ್ನೊಳಗೂ ಬರಬೇಕೇನೋ?
ನನ್ನ ಸೋದರತ್ತೆ ಮದುವೆಯಾಗಿ ಈ ಮನೆಗೆ ಸೊಸೆಯಾಗಿ ಬಂದವರು. ಅವರೊಮ್ಮೆ ತೌರಿಗೆ ಹೋಗಿದ್ದಾಗ ಅಲ್ಲಿ ನನ್ನಜ್ಜ,
“ನಿನ್ನ ಮನೆಯಲ್ಲಿ ನಿನಗೆ ಬೇಕಾದ ಸೌಕರ್ಯಗಳೆಲ್ಲ ಇದ್ದಲ್ಲ ಕೂಸೆ?” ಎಂದು ಪ್ರೀತಿಯಿಂದ ಕೇಳಿದ್ದರಂತೆ. ಅದಕ್ಕೆ ಅವರು,
“ಎಲ್ಲ ಇದ್ದಪ್ಪ, ಆದರೆ ಉಪ್ಪಿನಕಾಯಿಗೆ ಒಂದು ಒಳ್ಳೆಯ ಮಿಡಿಬಿಡುವ ಮಾವಿನಮರವೇ ಇಲ್ಲೆ ಅಲ್ಲಿ” ಎಂದಿದ್ದರಂತೆ.
“ಅಯ್ಯೋ ಕೂಸೇ, ನೀನು ಅಂದೇ ಹೇಳಿದ್ದರೆ ನಮ್ಮ ಕೆಳಾಣ ತೋಟದ ಪರಿಮಳ ಸೊನೆಯ ಒಂದು ಸಸಿ ಮಾಡಿ ಮಡುಗುತ್ತಿದ್ದೆ. ಈ ಮಳೆಗಾಲದಲ್ಲಿ ನಿನ್ನ ಮನೆಗೆ ಕೊಂಡೋಗಿ ನೆಡಲಾವುತ್ತಿತ್ತು” ಎಂದು ನನ್ನಜ್ಜ ಕೈ ಕೈ ಹಿಸುಕಿಕೊಂಡಿದ್ದರಂತೆ. ಅದರಂತೆ ಮರದ ಕೆಳಗೆ ಬಿದ್ದ ಹಣ್ಣು ಕೊಳೆತು ಹುಟ್ಟಿದ ಗಿಡವೇನಾದರೂ ಇದೆಯೇ ಎಂದು ತಲಾಶ್ ಮಾಡುವಾಗ ಸಿಕ್ಕಿದ ಆರೋಗ್ಯವಂತ ಗಿಡವೊಂದನ್ನು ಜಾಗ್ರತೆಯಿಂದ ಅದರ ಬೇರುಗಳನ್ನು ಬಿಡಿಸಿ ಒಂದು ಗೋಣಿಯಲ್ಲಿ ಇಟ್ಟು ಮಣ್ಣು ತುಂಬಿಸಿ ನಂಬಿಕಸ್ಥ ಆಳೊಬ್ಬನ ತಲೆಯಲ್ಲಿ ಹೊರಿಸಿ ಕಳುಹಿಸಿದ್ದರಂತೆ. ಅದುವೇ ಈ ಹಿತ್ತಲ ಜೀರಕ್ಕಿ ಕಾಟುಮಾವು. ನನ್ನ ಮದುವೆಯಾದ ಹೊಸತರಲ್ಲಿ ಅತ್ತೆಯೇ ನನ್ನಲ್ಲಿ, ಅದೂ ಈ ಮರದ ಕೆಳಗೆ ನಿಂತು ಹೇಳಿದ ವಿ?ಯ ಇದು.
ಕಿಟಕಿಯಿಂದ ಕಾಣುತ್ತಿದ್ದ ಹೊರಗಿನ ದೃಶ್ಯಗಳನ್ನು ನೋಡುತ್ತಿದ್ದ ಹಾಗೆಯೇ ಬೇಡ ಬೇಡವೆಂದರೂ ಈ ಎಲ್ಲ ನೆನಪುಗಳು ಮರುಕಳಿಸುತ್ತಿದ್ದವು. ಹಣ್ಣಿಗೇನೋ ಅವನು ನಿರ್ಬಂಧ ಹಾಕಬಹುದು. ಆದರೆ ಈ ಮರಕೊಡುವ ಗಾಳಿಯನ್ನು ಅವನ ಮನೆಯ ಕಡೆಗೆ ಮಾತ್ರ ಬೀಸುವಂತೆ ಮಾಡಲು ಸಾಧ್ಯವೆ? ಮನಸ್ಸು ಕ್ರುದ್ಧವಾಗುವಾಗ ಪುನಃ ಈ ಮರಗಳ ನಿರ್ಲಿಪ್ತತೆಯನ್ನೂ, ವರ್ತಮಾನದಲ್ಲಿ ಮಾತ್ರ ಬದುಕುವ ಇವುಗಳ ರಿವಾಜನ್ನೂ ನೆನಪಿಗೆ ತಂದುಕೊಂಡು ಮೌನಿಯಾಗುತ್ತೇನೆ.
ನಾನು ಈ ಮರಗಳನ್ನು ಪ್ರೀತಿಸಲು ತೊಡಗಿದ್ದು ಯಾವಾಗಿನಿಂದ?….. ನನ್ನ ಪ್ರಜ್ಞೆ ಮೂಡಿದಲ್ಲಿಂದ ಇರಬಹುದು. ಯಾಕೆ ನಾನು ಈ ಮರಗಳನ್ನು ಪ್ರೀತಿಸಲು ತೊಡಗಿದೆ?
’ಬಹುಶಃ ಒಂದು ಹಿಡಿ ಮಣ್ಣು ಸಿಕ್ಕರೆ ಸಾಕು ಬೇರೇನನ್ನೂ ಯೋಚಿಸದೆ ಬೇರಿಳಿಸಿಬಿಡುತ್ತವಲ್ಲ….. ಆ ಬೇರುಗಳಾದರೂ ಎಂಥದ್ದು, ಭೀಮನ ತೋಳುಗಳಂತೆ ಬಲಿ?ವಾದ, ಅಂಕುಡೊಂಕಾಗಿ ನೀರನ್ನೂ ಸಾರವನ್ನೂ ಹುಡುಕಿ ಹೀರುವ ತವಕದಿಂದ ಮಣ್ಣಿನೊಳಗೆ ನುಗ್ಗಿ ಎ? ದೊಡ್ಡ ವೃಕ್ಷವನ್ನಾದರೂ ಎತ್ತಿ ನಿಲ್ಲಿಸಿಬಿಡುತ್ತವಲ್ಲ…. ಗಾಳಿ ಮಳೆಗೆ ಮರಗಳು ಎದೆಯೊಡ್ಡುತ್ತವೆ ಎಂದರೆ ಅದಕ್ಕೆ ಕಾರಣ ಈ ಬೇರುಗಳೇ. ತಲೆಯುರುಳಿಸಿಕೊಂಡ ಮರಗಳೂ ಮತ್ತೆ ಚಿಗಿತು ಮೊಳೆಯುವುದು ಬೇರುಗಳಿಂದಲೇ. ಈ ಜೀರಕ್ಕಿ ಮಾವಿನಮರ ಈಗ ಪರಮೇಶ್ವರನ ಜಾಗದಲ್ಲಿದ್ದರೂ ಅದರ ಒಂದು ಬದಿಯ ಎರಡು ಬೇರುಗಳು ನಮ್ಮ ಜಾಗದ ಮಣ್ಣನ್ನೇ ಹಿಡಿದುಕೊಂಡಿವೆ. ನನ್ನ ತವರಿನದ್ದು ಎಂಬ ಕಾರಣಕ್ಕಾಗಿಯೋ ಏನೋ ಇದರ ಮೇಲೊಂದು ವಿಶೇಷ ಮಮತೆ. ವಿಶ್ವೇಶ್ವರ ಗಂಟುನೋವಿನ ಚಿಕಿತ್ಸೆಗೆಂದು ನನ್ನನ್ನು ನಗರಕ್ಕೆ ಕರೆದೊಂಯ್ಯಲು ಬಂದಾಗ ನಾನು ತಲೆಯಾಡಿಸಿ ಬಿಟ್ಟಿದ್ದೆ. “ವಿಶ್ವ, ಈ ಮರಗಳನ್ನು ನೋಡು, ಒಂದು ಜೀವಮಾನವ ಅವು ನಿಂದಲ್ಲಿಯೇ ನಿಂದು ಮುಗಿಸುತ್ತವಲ್ಲ?” ಎಂದು ನಕ್ಕಿದ್ದೆ.
ಈಗ್ಗೆ ಕೆಲವು ವರ್ಷಗಳ ಹಿಂದೆ ಪರಮೇಶ್ವರ ಒಂದು ಅಳಿಲನ್ನು ತನ್ನ ಏರ್ಗನ್ನಲ್ಲಿ ಹೊಡೆದು ಕೊಂದು ಅದರ ಬಾಲಕ್ಕೆ ಹಗ್ಗ ಕಟ್ಟಿ ಈ ಜೀರಕ್ಕಿ ಮಾವಿನಮರಕ್ಕೆ ತೂಗುಹಾಕಿದ್ದ. ಇದರಿಂದಾಗಿ ಅಳಿಲುಗಳು ತಂದು ಹಾಕುತ್ತಿದ್ದ ಹಣ್ಣುಗಳಿಗೂ ತತ್ವಾರ ಆಗಿಹೋಯಿತು. ಯಾವ ಅಳಿಲುಗಳೂ ಈಗ ಈ ಮರದ ಕಡೆಗೆ ಸುಳಿಯುತ್ತಿರಲಿಲ್ಲ, ಮಾವಿನಮರ ಹಾಗೂ ನಮ್ಮ ಹಿತ್ತಲಿನ ನಡುವೆ ಈಗ ದೊಡ್ಡದೊಂದು ಬೇಲಿ ಎದ್ದಿದೆ. ಬೇಲಿಗೆ ಮುಳ್ಳುತಂತಿ ಎಳೆಯಲಾಗಿದೆ. ಮುಳ್ಳುಕಂಟಿಗಳನ್ನೂ, ಮುಳ್ಳು ಕಾಗದದಹೂವಿನ ಬಳ್ಳಿಯನ್ನೂ ಬೇಲಿಯುದ್ದಕ್ಕೂ ಹಬ್ಬಿಸಿದ್ದಾನೆ.
“ಎಂಗೊ ಆರೂ ನಿನ್ನ ತೋಟಕ್ಕೆ ಕಾಲೂ ಹಾಕುತ್ತಿಲ್ಲೆ. ಮತ್ತೆ ಎಂತಕೆ ಈ ಬೇಲಿ ಮುಳ್ಳು ಎಲ್ಲ?” ಎಂದು ನಾನು ಪ್ರಶ್ನಿಸಿದ್ದಕ್ಕೆ, “ಇದು ಗಡಿಯ ಗುರ್ತಿಂಗೆ ಅಷ್ಟೆ?” ಎಂದು ಮಾತು ಹಾರಿಸಿದ್ದ. ನನಗೆ ನಗು ಬಂದಿತ್ತು. ಗಡಿ ಗುರುತಿಸಲು ಈ ಪಾಟಿ ಮುಳ್ಳುಗಳೂ ಬೇಕಾ? ಒಂದು ನಾಲ್ಕು ಗೂಟದ ಮರಗಳನ್ನು ಊರಿದ್ದರೆ ಸಾಕಿತ್ತು, ಚಿಗಿತುಕೊಂಡು ಹಗಲಿರುಳು ಗಡಿ ಕಾಯುತ್ತಿದ್ದವು. ಆಳುಗಳು ಹೇಳುವುದನ್ನು ಕೇಳಿದ್ದೆ. ಯಾರೋ ಒಬ್ಬ ತನ್ನ ತೋಟದೆಡೆಗೆ ನುಗ್ಗಿದ್ದ ಹಲಸಿನಮರದ ದೈತ್ಯ ಬೇರನ್ನು ಕತ್ತಿಯಿಂದ ಕೊರೆದು ಅದರೊಳಗೆ ಎಂಥದ್ದೋ ವಿ? ದ್ರಾವಣವನ್ನು ತುಂಬಿ, ಒಂದೇ ವಾರದಲ್ಲಿ ಪೂರ್ತಿ ಮರವೇ ಒಣಗುವಂತೆ ಮಾಡಿದ್ದನಂತೆ. “ಅಲ್ಲಾ! ನೀರು ಸಾರ ಹೀರಬೇಕಾದ ಬೇರಿನೊಳಗೆ ವಿ? ತುಂಬುವ? ಕಟುಕನಾಗಿ ಹೋದನೇ ಮಾನವ?” ಎಂದು ನನ್ನಲ್ಲಿ ನಾನೇ ಕೇಳಿಕೊಂಡಿದ್ದೆ.
ಒಮ್ಮೆ ಸಂಪಿಗೆ ಮರದ ಬೇರು ನೀರನ್ನು ಅರಸಿಕೊಂಡು ನಮ್ಮ ಬಚ್ಚಲಕೋಣೆಯ ಗೋಡೆಯ ಒಳಗೆ ನುಗ್ಗಿಬಿಟ್ಟಿತ್ತು. ಇದರಿಂದ ಗೋಡೆ ಬಿರುಕುಬಿಟ್ಟು ಎರಡು ಭಾಗವಾಗಿತ್ತು. ಮತ್ತೆ ಆಳುಗಳೆಲ್ಲ ಸೇರಿ ಗರಗಸದಿಂದ ಆ ಬೇರನ್ನು ಕೊಯ್ದು ಗೋಡೆಯನ್ನು ದುರಸ್ತಿಗೊಳಿಸಿದ್ದರು. ಎರಡು ವ?ದ ಹಿಂದೆ….ಹೌದು ಈ ಮಳೆಗಾಲಕ್ಕೆ. ಮಧುಕೇಶ್ವರ ಉತ್ತರದಲ್ಲೆಲ್ಲೊ ಹಿಮದ ರಾಶಿಯಲ್ಲಿ ಕಾಣೆಯಾಗಿ ತಿರುಗಿ ಬರಲೇ ಇಲ್ಲ. ನಾನು ನನ್ನ ಕಾಲುಗಳಲ್ಲಿ ಶಕ್ತಿ ಕಳೆದುಕೊಂಡು ಕುಸಿದುಹೋಗಿದ್ದೆ. ಆಗ ನನಗೆ ಧೈರ್ಯ ತುಂಬಿದ್ದು ಮಣ್ಣು ಕಚ್ಚಿ ನಿಂತ ಈ ಬೇರುಗಳೇ ಅಲ್ಲವೇ?
ಕಾಂಡ್ಲಾ ಕಾಡುಗಳನ್ನು ನಾನು ಚಿತ್ರದಲ್ಲಿ ನೋಡಿದ್ದೆ. ಸಮುದ್ರದಲೆಗಳಿಗೂ ಬೆದರದೆ ಎದೆಗೊಟ್ಟು ನಿಲ್ಲುವ ಗಟ್ಟಿ ಬೇರುಗಳ ಸಣ್ಣಜಾತಿಯ ಮರ ಅದು. ಅಲೆ ಬಂದು ಅಪ್ಪಳಿಸಿ ಅಪ್ಪಳಿಸಿ ನಡುವಿನ ಮಣ್ಣೆಲ್ಲ ಕೊರೆದು, ಬರಿಯ ಬೇರುಗಳ ಜಾಲ ಮಾತ್ರ ಉಳಿದು ಅದೊಂದು ಅಪೂರ್ವವಾದ ಕಲಾಕೃತಿಯಂತೆ ಗೋಚರಿಸುತ್ತದೆ. ಹಾಗೆಯೇ ಎ? ಜಲಚರಗಳ ಆವಾಸವೂ ಆಗಿರುತ್ತದೆ. ಈ ರೀತಿ ಉಪ್ಪುನೀರಿನ ರಾಕ್ಷ್ಷಸ ಅಲೆಗಳಿಗೆ ಸವಾಲೊಡ್ಡಿ ನಿಲ್ಲುವುದೇನು ಸಾಮಾನ್ಯ ವಿ?ಯವೇ? ಪರಮೇಶ್ವರ ಗಟ್ಟಿಯಾದ ಬೇಲಿಯೇನೊ ಹಾಕಿದ್ದ. ಆ ಬೇಲಿ ಜೀರಕ್ಕಿ ಮಾವಿನಮರದ ಎರಡು ದೈತ್ಯ ಬೇರುಗಳ ಮೇಲೆಯೇ ಹಾದುಹೋಗಿತ್ತು. ಈ ಮಾವಿನಮರದ ಬೇರುಗಳು ಅ? ಗಟ್ಟಿಯೇನಲ್ಲ. ಕೆಲಸದ ಮಿಣ್ಕು ಹೇಳುತ್ತಿದ್ದಳು,
’ಅಮ್ಮಾ… ಈ ಬೇರುಗಳಿಗೆ ಎಂಥಾದರೊಂದು ವಿ? ತಂದು ಸುರ್ದುಬಿಡಿ. ಸಾಯಲಿ ಅತ್ಲಾಗಿ..ಅವರ ಅನ್ಯಾಯಕ್ಕೆ…’ ಎಂದು. ಮಧುವನ್ನು ಕಳೆದುಕೊಂಡ ಸಂಕಟವೇ ಇನ್ನೂ ಆರಿಲ್ಲ,
ಹಾಗಿರುವಾಗ…………
ಪರಮೇಶ್ವರ ಅಷ್ಟು ಹಠಮಾಡಿ ಹಿತ್ತಲಜಾಗವನ್ನು ವಶಪಡಿಸಿಕೊಂಡುದಕ್ಕೆ ಕಾರಣ ಆನಂತರ ತಿಳಿಯಿತು. ಈ ಹಿತ್ತಲಜಾಗ ಪಕ್ಕದಲ್ಲೇ ಹರಿಯುತ್ತಿದ್ದ ಸೀರೆಹೊಳೆಗೆ ತಾಗಿಯೇ ಇತ್ತು.s ತೋಟದ ಮರಗಳನ್ನು ಕಡಿದು ರಾತ್ರೋರಾತ್ರಿ ನಾಟಾಗಳನ್ನು ನೀರಿನಲ್ಲಿ ತೇಲಿಬಿಟ್ಟು ಎರಡು ಕಿ.ಮೀ ಮುಂದೆ ಅದನ್ನು ತಡೆಹಿಡಿದು ಲಾರಿಗೆ ತುಂಬಿ ಕಳುಹಿಸುವ ವ್ಯವಸ್ಥೆಗೆ ಆತನಿಗೆ ಈ ಜಾಗ ಬೇಕಿತು. ಹೆದ್ದಾರಿ ಚೆಕ್ಪೋಸ್ಟ್ ತಪ್ಪಿಸಲು ಇದೊಂದು ಸುಲಭದ ಉಪಾಯವಾಗಿತ್ತು. ಹೆಚ್ಚಾಗಿ ಇದು ಮಳೆಗಾಲದ ನಾಲ್ಕು ತಿಂಗಳು ನಡೆಯುವ ದಂಧೆ. ಉಳಿದ ಎಂಟು ತಿಂಗಳು ನದಿಯ ಮರಳನ್ನು ತೆಗೆದು ದೋಣಿಯಲ್ಲಿ ತುಂಬಿ ದಡಕ್ಕೆ ತಂದು ಲಾರಿಯ ಮೂಲಕ ತಲಪಬೇಕಾದಲ್ಲಿಗೆ ತಲಪಿಸಲಾಗುತ್ತಿತ್ತು. ನಾಟಾವನ್ನು ನೀರಿಗೆ ಇಳಿಸುವ ಜಾಗದಲ್ಲಿ ಒಂದು ದೋಣಿ ಯಾವಾಗಲೂ ಕಟ್ಟಿಹಾಕಿಕೊಂಡು ನಿಂತಿರುತ್ತದೆ ಎಂದು ಮಿಣ್ಕು ಒಮ್ಮೆ ಹೇಳಿದ್ದಳು.
ಈ ಮಧ್ಯೆ ಪರಮೇಶ್ವರನ ಮನೆಯಲ್ಲಿದ್ದ ಅವನ ಹೆಂಡತಿಯ ಕಡೆಯ ಮುದಿ ಅಜ್ಜಿಯೊಬ್ಬಳು ತೀರಿಕೊಂಡಳು. ಆ ದಿನ ಇಡೀ ಊರಿಗೆ ಊರೇ ಜಾತ್ರೆಯಂತೆ ಅವನ ಅಂಗಳದಲ್ಲಿ ನೆರೆದಿತ್ತು. ಈಗ ಊರಿನ ಎಲ್ಲರೂ ಅವನಿಂದ ಉಪಕೃತರಾದವರೇ. ಹೆಣ ಸುಡಲು ಬೇಕಾದ ಕಟ್ಟಿಗೆಯಿಂದ ಹಿಡಿದು ಎಲ್ಲ ವ್ಯವಸ್ಥೆಯನ್ನೂ ಇಡೀ ಊರೇ ಮುಂದೆ ನಿಂತು ಮಾಡಿತ್ತು. ಹೂ ಬಿಟ್ಟು ನಿಂತಿದ್ದ ಜೀರಕ್ಕಿ ಮಾವಿನ ಒಂದು ಗೆಲ್ಲನ್ನು ನೋಡ ನೋಡುತ್ತಿದ್ದಂತೆಯೇ ಮೋಟಾರ್ಚಾಲಿತ ಗರಗಸವೊಂದು ಸರಸರನೆ ಕೊರೆದು ಮೂರು ತುಂಡು ಮಾಡಿತ್ತು. ಆ ದಿನ ಮರದ ಕೆಳಗೆಲ್ಲ ಹೂವಿನಪದರ ಹರಡಿಕೊಂಡಿತ್ತು. ಇಲ್ಲಿಗೆ ಕೆಲಸಕ್ಕೆ ಬರುತ್ತಿದ್ದ ಕರಿಯ ಹಾಗೂ ಆತನ ಹೆಂಡತಿ ಈಗ ಪರಮೇಶ್ವರನ ಮನೆಗೆ ಕೆಲಸಕ್ಕೆ ಹೋಗುತ್ತಿದ್ದಾರೆ. ಅಲ್ಲಿ ವಾರ್ಷಿಕ ಒಂದು ಜೊತೆ ಬಟ್ಟೆಯಂತೆ, ವಿಮೆಯಂತೆ, ಸಂಬಳದಲ್ಲಿ ಸ್ವಲ್ಪ ಹಿಡಿದುಕೊಂಡು ಅದಕ್ಕೆ ಆತನೂ ಸ್ವಲ್ಪ ಸೇರಿಸಿ ಎಂಥ ಮಣ್ಣೋ……..ಮಿಣ್ಕು ಹೇಳುತ್ತಿದ್ದಳು.
ಇಲ್ಲಿಗೆ ಈಗ ಖಾಯಂ ಆಗಿ ಕೆಲಸಕ್ಕೆ ಬರುವವರು ಇಬ್ಬರೇ. ಒಬ್ಬಳು ಮಿಣ್ಕು, ಇನ್ನೊಬ್ಬ ಅವಳ ಗಂಡ ಮೋಂಟ. ಅವರಿಬ್ಬರೂ ಪ್ರತಿದಿನ ಪರಮೇಶ್ವರನ ತೋಟದ ದಾರಿಯಿಂದಲೇ ಬರುವವರು. ಮೋಂಟನ ಅಣ್ಣ ಐತ ಪರಮೇಶ್ವರನ ಖಾಯಂ ಕೆಲಸದವ. ಹೀಗೆ ಈ ವಿ?ಯಗಳೆಲ್ಲ ಕೆಲಸಗಾರರಿಂದಲೇ ನನ್ನನ್ನು ತಲಪುತ್ತಿತ್ತು. ಐತ ಈಗ ಹಗಲು ಮನೆಯಲ್ಲಿ ಮಲಗಿಕೊಂಡೇ ಇರುತ್ತಾನೆಂದೂ ರಾತ್ರಿ ಹೊಳೆಯಿಂದ ತೆಗೆದ ಮರಳನ್ನು ಸಾಗಿಸುವ, ನಾಟಾಗಳನ್ನು ತಲಪಬೇಕಾದ ಸ್ಥಳಕ್ಕೆ ತಲಪಿಸುವ ಇತ್ಯಾದಿ ಕೆಲಸಗಳನ್ನು ಮಾಡುತ್ತಾನೆಂದೂ, ಐತನ ಹೆಂಡತಿಯ ಕೊರಳಿಗೆ ಈಗ ಎರಡೆಳೆಯ ಚಿನ್ನದ ಕರಿಮಣಿಸರ ಬಂದಿದೆಯೆಂದು ಮಿಣ್ಕು ಹೇಳುತ್ತಿದ್ದಳು. ಅ? ಅಲ್ಲ ಐತನ ಮನೆಗೆ ಎರಡು ರೂಮು ಸೇರ್ಪಡೆಯಾಗಿದೆಯೆಂದೂ…, ಐತನ ಮಗ ಪೇಟೆಯಿಂದ ಟಿ.ವಿ. ತಂದಿದ್ದಾನೆಯೆಂದೂ…., ಅವನೂ ಐತನೊಂದಿಗೆ ರಾತ್ರಿ ದೋಣಿಯಲ್ಲಿ ಹೋಗುತ್ತಾನೆಯೆಂದೂ…., ಈ ಮಿಣ್ಕುವಿನ ಸುದ್ದಿಗಳಿಗೆ ಕೊನೆ ಎಂಬುದಿದೆಯೇ?
ಐತನ ಹೆಂಡತಿಗೆ ಚಿನ್ನದ ಕರಿಮಣಿ ಬಂದಾಗಿನಿಂದ ಇವಳ ತಲೆಕೆಟ್ಟಂತಾಗಿ ಹೋಗಿದೆ. ದಿನಕ್ಕೆ ಒಂದು ಸಲವಾದರೂ ತನ್ನ ಓರಗಿತ್ತಿಯನ್ನು ಆಡಿಕೊಳ್ಳದಿದ್ದರೆ ಅವಳಿಗೆ ಸಮಾಧಾನವೇ ಇಲ್ಲ. ಇದೆಲ್ಲ ಎಲ್ಲಿಗೆ ಹೋಗಿ ತಲಪುತ್ತದೋ………? ಇಡೀ ಊರಲ್ಲಿ ಈಗ ನಮ್ಮನ್ನು ಬಿಟ್ಟು ಎಲ್ಲರೂ ಪರಮೇಶ್ವರನೊಂದಿಗೆ ಸೇರಿಕೊಂಡಿದ್ದಾರೆ. ಸಣ್ಣ ಹಿಡುವಳಿದಾರರ ಮನೆಗಳಲ್ಲೂ ಈಗ ಥಳಥಳ ಹೊಳೆಯುವ ಕಾರು, ಪಡ್ಡೆ ಹುಡುಗರ ಕೈಗಳಲ್ಲಿ ದುಬಾರಿ ಮೊಬೈಲುಗಳು…….ನನ್ನ ಕೋಣೆಯ ಸಣ್ಣ ಕಿಟಕಿಯಿಂದ ಕಾಣಿಸುವ ಈ ಚಿತ್ರದಲ್ಲಿ ಮಾತ್ರ ಯಾವ ಬದಲಾವಣೆಯೂ ಆಗಿಲ್ಲ.
ಹೊಳೆಮೂಲೆ ಶೆಟ್ರ ಅಡಿಕೆತೋಟದ ಬದಿಯಲ್ಲಿದ್ದ ಇನ್ನೂ ತಿರುಳು ಬಲಿಯದ ಶ್ರೀಗಂಧದ ಮರವನ್ನು ರಾತ್ರೋ ರಾತ್ರಿ ಬೇರು ಸಮೇತ ಎಬ್ಬಿಸಿ ಕೊಂಡೊಯ್ದಿದಾರಂತೆ; ಮಿಣ್ಕು ಪಾತ್ರೆ ತಿಕ್ಕುತ್ತಾ ಹೇಳುತ್ತಿದ್ದಳು.
“ಅದು ಎಂತದಕ್ಕೆ ಅಮ್ಮಾ, ಎಳತು. ಅದರಲ್ಲಿ ಎಂತ ಉಂಟೂಂತ ಕೊಂಡೋಗಿದ್ದಾರೋ? ಎ? ಎಳತಾದರೂ ಅವರಿಗೆ ಆಗ್ತದೆ ಅಂತೆ. ಅದಕ್ಕೆ ಗಂಧದ ಎಣ್ಣೆ ಮುಟ್ಟಿಸಿ ಮಾರಾಟ ಮಾಡ್ತಾರಂತೆ. ಐತನ ಮಗ ಶಶಿಧರ ನನ್ನ ಮಗನಲ್ಲಿ ನೆನ್ನೆ ಹೇಳ್ತಾ ಇದ್ದ…”
ಪರಮೇಶ್ವರ ತನ್ನ ಹಳೆಯ ಮನೆಯ ಸಮೀಪವೇ ಒಂದು ಕೋಟಿಯ ಹೊಸ ಮನೆಯೊಂದನ್ನು ಕಟ್ಟಿಸಿ ಅದ್ಧೂರಿಯಾಗಿ ಗೃಹಪ್ರವೇಶವನ್ನೂ ಮಾಡಿದ್ದ. ಈಗ ಅವನ ಮನೆಗೆ ಕೇರಳದ ದೊಡ್ಡ ದೊಡ್ಡ ಬ್ಯಾರಿಗಳೂ ಬರ್ತಾ ಇರ್ತಾರಂತೆ, ಮಿಣ್ಕುವಿನ ಸುದ್ದಿ. ಮಾವಿನಮರ ಅಂಥಾ ಬೆಲೆಬಾಳುವ ಮರವೇನಲ್ಲ. ಇಲ್ಲದಿದ್ದರೆ ಈಗಾಗಲೇ ಈ ಜೀರಕ್ಕಿಯ ಕಾಂಡವೂ ಹೊಳೆಯಲ್ಲಿ ತೇಲುತ್ತಾ ತಲಪಬೇಕಾದ ಸ್ಥಳಕ್ಕೆ ತಲಪಿಯಾಗುತ್ತಿತ್ತು.
ಪರಮೇಶ್ವರನ ಮನೆಯ ಗೃಹಪ್ರವೇಶ ಕಳೆದು ಒಂದು ವಾರದ ನಂತರ ಗಣ್ಯಾತಿಗಣ್ಯರಿಗೆಲ್ಲ ಬಹಳ ದೊಡ್ಡ ಪಾರ್ಟಿ ಆತನ ಮನೆಯಲ್ಲಿ ವ್ಯವಸ್ಥೆಯಾಗಿತ್ತಂತೆ…. ಮಿಣ್ಕುವಿನ ಅಕ್ಕನಿಗೆ ರಾತ್ರಿಯಿಡೀ ಅಲ್ಲಿ ಕೆಲಸವಿತ್ತಂತೆ…..ಹೆಸರೇ ಗೊತ್ತಿಲ್ಲದ ತಿಂಡಿಗಳೆಲ್ಲ ಇದ್ದುವಂತೆ….ಉಳಿದದ್ದನ್ನು ಮನೆಗೆ ತಂದು ಇವಳ ಮನೆಗೂ ಕೊಟ್ಟಿದ್ದಳಂತೆ….. ಅತಿಥಿಗಳಿಗೆಂದು ಇದ್ದ ಪ್ರತ್ಯೇಕಮನೆಯಲ್ಲಿ ಉಳಿದುಕೊಳ್ಳುವ ಗಣ್ಯರಿಗೆ ಮಿಣ್ಕುವಿನ ಅಕ್ಕನೇ ಹೋಗಿ ಮೀನಿನ ಅಡುಗೆ, ಕೋಳಿಯ ಅಡುಗೆ ಎಲ್ಲ ಮಾಡಿಕೊಟ್ಟು ಬರ್ತಾಳಂತೆ ………. ಇವಳಿಗೆ ಒಂದು ಸುದ್ದಿ ಹೇಳುವುದರಲ್ಲಿ ಉದಾಸೀನವೇ ಇಲ್ಲ. ಎ? ಹೊತ್ತು ಬೇಕಾದರೂ ಯಾರ್ಯಾರ ಸುದ್ದಿಗಳನ್ನು ಹೇಳ್ತಾ ಇರ್ತಾಳೆ.
ಮೊದಲೆಲ್ಲ ಜನವರಿ ತಿಂಗಳು ಬಂದರೆ ಸಾಕು ಸೊಸೆಯಂದಿರ ಫೋನು ಬರುತ್ತಿತ್ತು.
“ಅತ್ತೆ, ಜೀರಕ್ಕಿ ಹೂಗು ಹೋಯಿದಾ?”
“ಅತ್ತೆ, ಜೀರಕ್ಕಿ ಮಿಡಿ ಆಯಿದಾ?”
ಈಗ ಇಲ್ಲಿ ನಡುವೆ ಬೇಲಿ ಹುಟ್ಟಿದ ಮೇಲೆ ಫೋನು ಮಾಡುವವರು ಯಾರೂ ಇಲ್ಲ. ಮೊದಲೆಲ್ಲ ನಾಲ್ಕು ಮನೆಗಳಿಗೂ ವ?ಕ್ಕಾಗುವ? ಮಿಡಿ ಉಪ್ಪಿನಕಾಯಿ ಇಲ್ಲಿಂದಲೇ ಸರಬರಾಜಾಗುತ್ತಿತ್ತು. ಬೇಸಿಗೆಯಲ್ಲಿ ಎಲ್ಲರೂ ಸೇರುವಾಗ ಊಟಕ್ಕೆ ಮಾವಿನಹಣ್ಣಿನ ಖಾದ್ಯ ಇದ್ದೇ ಇರುತ್ತಿತ್ತು. ಬಟ್ಟಲಿಗೆ ತಿಳಿಸಾರು, ಮಜ್ಜಿಗೆ ಎರೆದುಕೊಂಡು ಅದರಲ್ಲಿ ಗೊರಟು ಅದ್ದಿ ಅದ್ದಿ ಚೀಪುತ್ತಾ, ಊರಿನ ವಿ?ಯ ಮಾತಾಡುತ್ತಾ ಊಟ ಮುಗಿಯುವಾಗ ಗಂಟೆ ಮೂರಾದರೂ ಆಯಿತು, ನಾಲ್ಕಾದರೂ ಆಯಿತೇ. ಗಂಡಸರ, ಮಕ್ಕಳ ಹಂತಿ ಬೇಗ ಮುಗಿಯುತ್ತಿತ್ತು. ತಡವಾಗುತ್ತಿದ್ದದ್ದು ಹೆಂಗಸರ ಹಂತಿಯೇ. ಈಗ ಮಕ್ಕಳ ಓದು ಅದೂ ಇದೂ ಅಂತ ಎಲ್ಲರೂ ಒಟ್ಟಿಗೆ ಸೇರುವುದೇ ಅಪರೂಪ. ಪರಮೇಶ್ವರ ತನ್ನ ಮನೆಗೆ ಜೀರಕ್ಕಿಮಿಡಿ ಕೊಯಿಸುವಾಗ ಸೌಜನ್ಯಕಾದರೂ ’ಮಿಡಿ ಬೇಕಾ ದೊಡ್ಡಮ್ಮ’ ಎಂದು ಕೇಳಿದವನಲ್ಲ. ನನ್ನ ತವರಿನದ್ದು, ನನ್ನ ಅಜ್ಜ ನನ್ನ ಅತ್ತೆಗಾಗಿ ಕಳುಹಿಸಿಕೊಟ್ಟಿದ್ದು, ಈ ವಿವರಗಳೆಲ್ಲ ಅವನಿಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ. ತಿಳಿದಿದ್ದರೂ ಅವನ ದೊಡ್ಡ ದೊಡ್ಡ ವಹಿವಾಟಿನ ಎದುರಲ್ಲಿ ಇದೆಲ್ಲ ಅವನಿಗೆ ಚಿಲ್ಲರೆ ವಿ?ಯಗಳ?. ಕಿಟಕಿಯಿಂದ ಕಾಣುವ ಮರವನ್ನು ಕೊಂಚ ಕತ್ತು ತಗ್ಗಿಸಿ ನೋಡಿದೆ. ಒಂದು ಮರಕುಟಿಗ ಕಾಂಡವನ್ನು ಕೊಕ್ಕುತ್ತಿತ್ತು. ಎತ್ತರದ ಎರಡು ಗೆಲ್ಲುಗಳಲ್ಲಿ ಬಂದಳಿಕೆ ಬೆಳೆದಿತ್ತು.
“ಯಾವುದೇ ಮರಕ್ಕಾದ್ರೂ ಅ? ಬಂದಳಿಕೆ ಬಂದರೆ ಹೋಯ್ತೇ… ಮತ್ತೆ ಗೆಲ್ಲು ಒಣಗುವುದೇ?” ಎನ್ನುತ್ತಾ ಮೋಂಟ ಮಿಡಿ ಕೊಯ್ದ ನಂತರ ಮರವನ್ನು ಅಂಟಿಕೊಂಡು ಬೇರು ಬಿಟ್ಟಂತಹ ಬಂದಳಿಕೆಯನ್ನೆಲ್ಲ
ತೆಗೆದು ಸ್ವಚ್ಛಗೊಳಿಸುತ್ತಿದ್ದ. “ಇರಲಿ ಬಿಡು ಮೋಂಟ. ಅವುಗಳಿಗೂ ಬೇರಿಳಿಸಲು ಒಂದು ಜಾಗ ಬೇಕಲ್ಲ” ಎಂದು ಹೇಳುತ್ತಿದ್ದೆ. ನನ್ನ ಗಂಡನಿಗೋ ಮಿಡಿ ಉಪ್ಪಿನಕಾಯಿಯೆಂದರೆ ವಿಪರೀತ ಪ್ರೀತಿ.
“ನಮ್ಮ ಊರಿನ ಬ್ರಾಮ್ಮರಲ್ಲಿ ಮಿಡಿ ಉಪ್ಪಿನಕಾಯಿ ಇಲ್ಲದ ಮನೆ ಇಲ್ಲೆ ಎಂದೇ ಹೇಳಲಕ್ಕು. ಮಿಡಿ ಉಪ್ಪಿನಕಾಯಿ ಮದುವೆಯಾಗಿ ಬಂದ ಸೊಸೆಯ ಹಾಂಗೆ. ಬೇರೆ ಉಪ್ಪಿನಕಾಯಿಗೊ ಎಲ್ಲ ಅಂಬಗ ಅಂಬಗ ಬಪ್ಪ ನೆಂಟ್ರ ಹಾಂಗೆ” ಎಂದು ಮನೆಗೆ ಬಂದವರಲ್ಲಿ ಹೇಳಿ ನಗುತ್ತಿದ್ದರು.
ಮದುವೆಯಾದ ಹೊಸತರಲ್ಲಿ ನನ್ನ ತವರಿಂದಲೇ ಮಿಡಿ ಸರಬರಾಜು ಆಗುತ್ತಿತ್ತು. ಈ ಜೀರಕ್ಕಿ ಮಾವಿನಮರದ ಅಮ್ಮನ ಪರಿಮಳದ ಸೊನೆಕಾಯಿಗಳನ್ನು ಗೋಣಿಕಟ್ಟಿ ಜೋಪಾನವಾಗಿ ಇಳಿಸಿ, ಆಳು ಸೀನನಲ್ಲಿ ಕೊಟ್ಟು ಕಳುಹಿಸುತ್ತಿದ್ದರು. ಆತ ಅದನ್ನು ಹೂವಿನಂತೆ ಮಿಡಿ ನಲುಗದ ಹಾಗೆ ತಲೆಯಲ್ಲಿ ಹೊತ್ತು ಏಳೆಂಟು ಮೈಲಿ ನಡೆದು ಬರುತ್ತಿದ್ದ. ನನ್ನ ಸೀಮಂತದ ಸಮಯದಲ್ಲಿ ಈ ಹಿತ್ತಲಮರ ಮಿಡಿ ಬಿಡಲು ಪ್ರಾರಂಭಿಸಿದ್ದು. ಸೀಮಂತಕ್ಕೆ ಬಂದವರೆಲ್ಲರೂ ಅಂದು ಊಟಕ್ಕೆ ಬಡಿಸಿದ ಮಿಡಿ ಉಪ್ಪಿನಕಾಯಿಯನ್ನು ಹೊಗಳಿದವರೇ.
“ಇದ್ಯಾವ ಮರದ ಮಿಡಿ ಶಾಂತ?” ಎಂದು ಕೇಳಿದವರಿಗೆಲ್ಲಾ,
“ಓ, ಅದಾ! ನಮ್ಮ ಹಿತ್ತಲಿನ ಹೊಸ ಕಾಟು ಮಿಡಿ. ಅಪ್ಪನ ಮನೆಯಿಂದ ಅತ್ತೆ ತಂದು ನೆಟ್ಟದ್ದು. ಈ ವ?ದ್ದು ಹೊಸ ಫಸಲು” ಎಂದು ಎಲ್ಲರಲ್ಲೂ ಉತ್ಸಾಹದಿಂದ ಹೇಳಿದ್ದೆ.
“ಅಮ್ಮಾ… ವೇಣಿ ಅಜ್ಜಿ ಸತ್ತದ್ದು ಗೊತ್ತುಂಟಲ್ಲ…. ಹೊತ್ತಿಸಲು ಮಾವಿನ ಸೌದೆ ಸಿಕ್ಕದೆ ಶಾಸ್ತ್ರಕ್ಕೆ ಅಂಗಳದ ಕಸಿಮಾವಿನ ಎರಡು ಸಣ್ಣ ತುಂಡುಗಳನ್ನು ಬೆಂಕಿಗೆ ಹಾಕಿದರಂತೆ….” ಮಿಣ್ಕು ಕೋಣೆ ಗುಡಿಸಲು ಬಂದವಳು ಹೇಳಿದಳು.
“ಮರಗಳಿರುವ ಜಾಗ ಪರಮೇಶ್ವರನಿಗೆ ಹೋಯ್ತಲ್ಲ. ಇನ್ನು ನನ್ನ ಹೆಣಕ್ಕೂ ಎರಡು ತುಂಡು ಮಾವಿನಸೌದೆ ಗತಿಯಿಲ್ಲದೆ ಆಗ್ತದೋ ಏನೋ..?”
“ಸತ್ತ ಮೇಲೆ ಏನಾದರೂ ನಮಗೆ ಗೊತ್ತಾಗ್ತದಾ ಬಿಡಿ ಅಮ್ಮಾ..”
“ಜೀರಕ್ಕಿ ಮಾವಿನ ಈಚೆ ಬಂದ ಎರಡು ಬೇರುಗಳು ಉಂಟಲ್ಲ.. ಅದರಲ್ಲಿ ಒಂದನ್ನು ಶಾಸ್ತ್ರಕ್ಕೆ ಸ್ವಲ್ಪ ಕೆತ್ತಿ ಕಾ?ಕ್ಕೆ ಹಾಕಲು ಮೋಂಟುವಿಗೆ ಹೇಳು. ಹಾಂ.. ಮರ ಸಾಯುವ? ತೆಗೆದುಬಿಟ್ಟಾನು ಮತ್ತೆ…. ನೀನೇ ಜಾಗ್ರತೆ ತೆಗೆಯಲು ಹೇಳು?” ಎಂದು ಹೇಳಿದೆ ನಗುತ್ತಾ.
ನಿಜಕ್ಕಾದರೂ ನನ್ನ ಹೆಣವನ್ನು ಹೊತ್ತಿಸದೆ ಮಣ್ಣುಮಾಡಬೇಕೆಂಬುದೇ ನನ್ನ ಆಸೆ. ಆದರೆ ಅದಕ್ಕೆ ಕುಟುಂಬದ ಹಿರಿಯರು ಅಡ್ಡಬರಬಹುದು. ನನ್ನ ಗಂಡ ತೀರಿಕೊಂಡಾಗ ಇನ್ನೊಂದು ದೊಡ್ಡ ಕಾಟುಮಾವಿನ ಮರದ ಗೆಲ್ಲನ್ನು ಕಡಿದದ್ದು ನೆನಪಿದೆ. ಸಣ್ಣಕ್ಕೆ ತೋಡಿದ ಕಣಿಯಲ್ಲಿ ಅಡ್ಡಲಾಗಿ ಮೂರು ಮಾವಿನ ದಿಮ್ಮಿಗಳನ್ನು ಇರಿಸಿ ಅದರ ಮೇಲೆ ಬೇರೆ ಕಟ್ಟಿಗೆಗಳನ್ನು ಸೇರಿಸಿ ಚಿತೆ ಸಿದ್ಧಪಡಿಸಿದ್ದರು. ಬೇಗ ಉರಿದು ಮುಗಿಯಬಾರದು ಎಂದು ಇಡುವ ಈ ಹಸಿ ದಿಮ್ಮಿಗಳು ಎಲ್ಲರ ಸಾವಿಗೂ ಪುಸ್ ಪುಸ್ ಎಂದು ಕಣ್ಣೀರು ಮಿಡಿಯುತ್ತಾ ಉರಿಯುತ್ತವೆ.
“ಹವನಕ್ಕೆ ಹಲಸು, ಮರಣಕ್ಕೆ ಮಾವು. ಮರಗಳೆಲ್ಲ ನಾಟಾಗಳಾಗಿ ಹೊಳೆಯಲ್ಲಿ ತೇಲಿಹೋದರೆ ಮತ್ತೆ ಹವನಕ್ಕೂ ಇಲ್ಲ ಮರಣಕ್ಕೂ ಇಲ್ಲ; ಏನು ಹೇಳ್ತಿ?” ಎಂದೆ ಮಿಣ್ಕುವನ್ನು ನೋಡುತ್ತಾ.
“ಸೋಮೇಶ್ವರ ದೇವಸ್ಥಾನದ ಬ್ರಹ್ಮಕಲಶಕ್ಕೆ ಪರಮೇಶ್ವರಣ್ಣನ ತೋಟದಿಂದಲೇ ಮರ ಅಂತೆ ಅಮ್ಮಾ… ದೊಡ್ಡ ಭೋಗಿ ಮರವೊಂದನ್ನು ’ಕೊಡಿಮರ’ಕ್ಕೆ ನೋಡಿ ಇಟ್ಟಿದ್ದಾರಂತೆ….” ಮಿಣ್ಕುವಿನ ಹೊಸ ಸುದ್ದಿ.
ಅವನ ಹೊಸ ಮನೆಗೆ ಒಂದು ಹಲಸು, ಎರಡು ಹೆಬ್ಬಲಸು. ಬ್ರಹ್ಮಕಲಶಕ್ಕೆ ಇನ್ನೆರಡು ಮರ ಬೇಕಾಗಬಹುದು. ’ಕೊಡಿಮರ’ಕ್ಕೆ ಮತ್ತೊಂದು, ತೋಟದಲ್ಲಿ ಅಡಿಕೆ ಮರಗಳಾದರೂ ಉಳಿದಿದೆಯಲ್ಲ?” ಎಂದೆ.
ಪ್ರತಿದಿನ ಇದೇ ರೀತಿಯ ಸುದ್ದಿಗಳು; ಏನೂ ವಿಶೇ?ವಿಲ್ಲ ಅಂದುಕೊಂಡು ನಾನು ಕಣ್ಣು ಮುಚ್ಚಿಕೊಂಡೆ. ಆ ರಾತ್ರಿ ನನಗೆ ಭಯಂಕರವಾದ ಸ್ವಪ್ನವೊಂದು ಕಾಣಿಸಿಕೊಂಡಿತು. ಭೂಮಿ ತನ್ನ ವಿರುದ್ಧ ದಿಕ್ಕಿನಲ್ಲಿ ವಿಪರೀತವಾದ ವೇಗದಲ್ಲಿ ತಿರುಗಿದಂತೆ… ತಿರುಗುತ್ತಾ ತಿರುಗುತ್ತಾ ಮಣ್ಣು ತನ್ನ ಧೂಳನ್ನೆಲ್ಲ ಕಳೆದುಕೊಂಡು ಮರಳಾದಂತೆ… ಸೀರೆಹೊಳೆಯ ನೀರೆಲ್ಲ ಅತ್ತಿತ್ತ ಎರಚಿ ಮರಳು ತೆಗೆದು ಗುಂಡಿಯಾದ ಗಂಡಿಗಳಿಗೆ ನಾಟಾಗಳೆಲ್ಲ ಉರುಳಿ ಉರುಳಿ ಬಿದ್ದಂತೆ… ಮರಳು ತೆಗೆಯುವ ದೋಣಿ, ಜನರ ಮನೆಯ ಮುಂದೆ ನಿಂತ ಕಾರುಗಳು, ನಾಟಾ ಸಾಗಿಸುವ ಲಾರಿಗಳು ಎಲ್ಲವೂ ಧೂಳಿನಕಣಗಳಂತೆ ಸುಂಟರಗಾಳಿಗೆ ಸಿಕ್ಕು ಗಿರಗಿರನೆ ತಿರುಗಿದಂತೆ…. ಮರಗಳು ಮಾತ್ರ ಬೇರು ಕಚ್ಚಿ ನಿಂತು ಹಾಯಾಗಿ ಓಲಾಡುತ್ತಿವೆ. ಬೇರಿದ್ದವರು ಮಾತ್ರ ಈ ವೇಗವನ್ನು ತಡೆದುಕೊಳ್ಳಬಲ್ಲರು. ಐತನ ಮನೆಯ ಟಿ.ವಿ. ಪಡ್ಡೆಹುಡುಗರ ಮೊಬೈಲ್ಗಳು, ಕಿಸೆಯಿಂದ ಹಾರಿದ ನೋಟುಗಳು ಎಲ್ಲವೂ ಗಾಳಿಗೆ ತೂಗಾಡುವ ಮರಗಳ ರೆಂಬೆಗೆ ಸಿಕ್ಕಿಕೊಂಡು ಬಿಟ್ಟಿವೆ. ಮರಗಳಿಗೆ ಬೇರುಗಳಿವೆ ಎನ್ನುವ ಸಮಾಧಾನದೊಂದಿಗೆ ನಾನು ಈ ಭಾನಗಡಿಯನ್ನು ನೋಡುತ್ತಾ ನಿಂತಿದ್ದೆ. ಮರುದಿನ ಮಿಣ್ಕು ಓಡಿಕೊಂಡು ಬಂದವಳು ಏದುಸಿರು ಬಿಡುತ್ತಾ,
“ಅಮ್ಮಾ…. ವಿ?ಯ ಗೊತ್ತಾಯ್ತಾ?…. ಪರಮೇಶ್ವರಣ್ಣ ತಮ್ಮ ಮನೆಯ ಹತ್ತಿರದ ಮರಕ್ಕೆ ನೇಣುಕಟ್ಟಿಕೊಂಡಿದ್ದಾರಂತೆ. ರಾತ್ರಿ ಯಾರೊಡನೆಯೋ ಸ್ವಲ್ಪ ಜೋರಾಗಿ ಮಾತಾಗಿತ್ತಂತೆ ಬೆಳಗ್ಗೆ ನೋಡಿದರೆ ಹೀಗೇ..”
ನನ್ನೆದೆ ಧಸಕ್ ಎಂದಿತು. ನಿನ್ನೆ ಕಂಡ ಕನಸಿಗೂ ಇದಕ್ಕೂ ಏನಾದರೂ ಸಂಬಂಧವಿರಬಹುದೇ? ಹಠವಾದಿ, ಛಲಗಾರ ಪರಮೇಶ್ವರ ನೇಣುಕಟ್ಟಿಕೊಳ್ಳಲು ಸಾಧ್ಯವೇ?
“ನನ್ನ ಗಂಡ ನೇಣುಕಟ್ಟಿಕೊಳ್ಳುವ ಹೇಡಿಯಲ್ಲ. ಯಾರೋ ಕೊಲೆಮಾಡಿ ಮರದಲ್ಲಿ ತೂಗಾಡಿಸಿದ್ದಾರೆ ಅಂತ ಸಾವಿತ್ರಿ ಅಮ್ಮ ಪೊಲೀಸರೆದುರು ಹೇಳಿಕೊಂಡು ಅಳ್ತಾ ಇದ್ರಂತೆ ….”
“ದೋಣಿ ಹಳತಾಯ್ತು, ನಾಳೆ ಆಚೆ ಬೈಲಿನ ತೋಟಕ್ಕೆ ಹೋಗಿ ಬರುವ…. ಆಚಾರಿಯನ್ನು ಬರಲು ಹೇಳಿದ್ದೇನೆ….. ದೋಣಿಗೆ ಒಂದು ಮರ ನೋಡಿ ಇಟ್ಟಿದ್ದೇನೆ ಅಂತ ನಿನ್ನೆ ಭಾವನಲ್ಲಿ ಹೇಳಿದ್ದರಂತೆ ಅಮ್ಮಾ… ಇವತ್ತು ನೋಡಿದರೆ ಹೀಗೆ…”
“ಯಾವ ಮರಕ್ಕೆ ನೇಣುಕಟ್ಟಿಕೊಂಡದ್ದಂತೆ? ಮಾವಿನ ಮರಕ್ಕಾ?”
“ಅಲ್ಲ ಅಮ್ಮಾ… ಅದೇ… ಮನೆ ಹತ್ತಿರ ಆ ದೊಡ್ಡ ನೇರಳೆಮರ ಉಂಟಲ್ಲ…”
ನೆನ್ನೆ ಕನಸಿನಲ್ಲಿ ನೇರಳೆಮರ ಕಾಣಿಸಿಕೊಂಡಿತ್ತೇ? ಯೋಚಿಸತೊಡಗಿದೆ.