ಒಂದು ದೊಡ್ಡ ಕಾಡು. ಆ ಕಾಡಿನಲ್ಲಿ ಒಂದು ದೊಡ್ಡ ಬಾವಿ ಇತ್ತು. ಆ ಬಾವಿಯಲ್ಲಿ ಗಂಗದತ್ತ ಎಂಬ ಕಪ್ಪೆಯೊಂದು ವಾಸವಾಗಿತ್ತು. ಅದು ಆ ಬಾವಿಯಲ್ಲಿದ್ದ ಎಲ್ಲಾ ಕಪ್ಪೆಗಳಿಗೂ ಒಡೆಯನಾಗಿ ಮೆರೆಯುತ್ತ ಕಾಲ ಕಳೆಯುತ್ತಿತ್ತು.
ಹೀಗಿರುವಾಗ ಒಮ್ಮೆ ಗಂಗದತ್ತನಿಗೆ ಉಳಿದೆಲ್ಲ ಕಪ್ಪೆಗಳೊಂದಿಗೆ ಯಾವುದೋ ಒಂದು ಸಣ್ಣ ಕಾರಣಕ್ಕೆ ಮನಸ್ತಾಪ ಉಂಟಾಯಿತು. ಮಿಕ್ಕ ಕಪ್ಪೆಗಳೆಲ್ಲ ಗಂಗದತ್ತನ ಆಜ್ಞೆಯನ್ನು ಪಾಲಿಸದೆ ತಮ್ಮ ಪಾಡಿಗೆ ತಾವು ಮನಸ್ಸಿಗೆ ಬಂದಂತೆ ನಡೆದುಕೊಳ್ಳತೊಡಗಿದವು. ಇದರಿಂದ ಒಡೆಯನಿಗೆ ಸಹಜವಾಗಿಯೇ ಸಿಟ್ಟು ಬಂದಿತು. ತನ್ನ ಮಾತನ್ನು ಕೇಳದ ಕಪ್ಪೆಗಳಿಗೆಲ್ಲ ಒಂದು ಪಾಠವನ್ನು ಕಲಿಸಬೇಕೆಂದು ಅದು ಯೋಚಿಸಿತು.
ಅದೇ ಗುಂಗಿನಲ್ಲೇ ಯೋಚಿಸುತ್ತ ಮನಸ್ಸಿನ ಶಾಂತಿನೆಮ್ಮದಿಗಳನ್ನು ಕಳೆದುಕೊಂಡ ಗಂಗದತ್ತ ಕಪ್ಪೆಯು ಒಂದು ದಿನ ಬಾವಿಯಲ್ಲಿದ್ದ ಬಿಲದ ಹಾದಿಯ ಮೂಲಕ ಬಾವಿಯಿಂದ ಹೊರಗೆ ಬಂತು. ಹಾಗೇ ಮುಂದೆ ಸಾಗಿದಾಗ ಹುತ್ತದಲ್ಲಿದ್ದ ಸರ್ಪವೊಂದು ಅದರ ಕಣ್ಣಿಗೆ ಬಿದ್ದಿತು. ಆಗ ತನ್ನ ಕಾರ್ಯಸಾಧನೆಗೆ ಈ ಸರ್ಪದೊಂದಿಗೆ
ಮೈತ್ರಿ ಸಾಧಿಸುವುದೇ ಸರಿಯಾದ ಮಾರ್ಗ ಎಂದುಕೊಂಡ ಆ ಕಪ್ಪೆಯು ಸರ್ಪವನ್ನು ಮಾತನಾಡಿಸಿತು.
“ನಾನು ನಿನ್ನ ಸ್ನೇಹವನ್ನು ಬಯಸುತ್ತೇನೆ. ಗೆಳೆಯ, ನಿನ್ನಿಂದ ನನಗೊಂದು ಸಹಾಯ ಆಗಬೇಕಿದೆ. ನನ್ನ ಕುಲದವರೇ ಕೆಲವರು ನನ್ನ ಶತ್ರುಗಳಾಗಿದ್ದಾರೆ. ಅಂಥವರನ್ನು ನಿನ್ನ ನೆರವಿನಿಂದ ನಾಶಗೊಳಿಸಬೇಕೆಂದಿದ್ದೇನೆ. ನೀನು ನನ್ನ ಶತ್ರುಗಳನ್ನು ಆಹಾರವಾಗಿ ಸೇವಿಸಿ, ನನಗೆ ಉಪಕಾರ ಮಾಡುವಿಯಾ?” ಎಂದು ಕೇಳಿತು.
ಕಪ್ಪೆಯ ಮಾತನ್ನು ಕೇಳಿದ ಸರ್ಪವು ಅನಾಯಾಸವಾಗಿ ಪ್ರತಿ ದಿವಸ ಆಹಾರವು ಸಿಗುವುದಕ್ಕೆ ಸಂತೋಷಪಟ್ಟು, ತನ್ನ ಸಮ್ಮತಿಯನ್ನು ನೀಡಿತು. “ಆದರೆ ನನಗೆ ಬಾವಿಯೊಳಗೆ ಇಳಿಯುವುದೇ ಒಂದು ದೊಡ್ಡ ಸಮಸ್ಯೆ” ಎಂದು ಹುಸಿಭಯವನ್ನು ನಟಿಸಿತು. ಆಗ ಗಂಗದತ್ತ ಕಪ್ಪೆಯು ಬಾವಿಯಿಂದ ತಾನು ಏರಿ ಬಂದ ಬಿಲದ ಮೂಲಕ ಸರ್ಪವನ್ನು ತನ್ನ ವಾಸಸ್ಥಾನಕ್ಕೆ ಕರೆದೊಯ್ಯಿತು. ನಿರಾಯಾಸವಾಗಿ ಒದಗಿಬಂದ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಆ ಸರ್ಪವು ದಿನಕ್ಕೊಂದರಂತೆ ಕಪ್ಪೆಗಳನ್ನು ತಿನ್ನುತ್ತಾ ಬಂತು.
ಗಂಗದತ್ತನ ವೈರಿಗಳೆಲ್ಲ ಸರ್ಪದ ಹೊಟ್ಟೆಗೆ ಆಹಾರವಾದಮೇಲೆ ಅದರ ಬಾಯಿಗೆ ಸಿಕ್ಕಿದ್ದು ಅದರ ಮಗ ಹಾಗೂ ಬಂಧು-ಬಾಂಧವರು. ಆಗ ಗಂಗದತ್ತನ ಹೆಂಡತಿಗೆ ಅಪಾಯದ ಅರಿವಾಯಿತು. “ಅಯ್ಯೋ! ಕೆಟ್ಟಗುಣದ ಸರ್ಪದ ಸ್ನೇಹವನ್ನು ಮಾಡಿ ಬಂಧುಬಳಗದವರನ್ನೂ, ಮಗನನ್ನೂ ಕಳೆದುಕೊಂಡೆವು. ಈಗಲಾದರೂ ಎಚ್ಚರಗೊಳ್ಳಿರಿ” ಎಂದು ಅದು ಎಚ್ಚರಿಸಿತು. ಗಂಗದತ್ತ ಕಪ್ಪೆಗೆ ತಾನು ಮಾಡಿದ ತಪ್ಪಿನ ಅರಿವಾಯಿತು.
“ಇನ್ನೂ ನಾವು ಇಲ್ಲಿಯೇ ಉಳಿದರೆ ಆ ಸರ್ಪವು ತಮ್ಮನ್ನೂ ತಿಂದು ಮುಗಿಸುವುದು ನಿಶ್ಚಿತ” ಎಂದು ಯೋಚಿಸಿ, ಆ ಕೂಡಲೇ ತನ್ನ ಹೆಂಡತಿಯೊಂದಿಗೆ ಬಾವಿಯನ್ನು ತೊರೆದು ಮತ್ತೊಂದು ಬಿಲದ ಮೂಲಕ ಬಲು ದೂರಕ್ಕೆ ಹೋಗಿ ಬದುಕಿಕೊಂಡಿತು.
ನೀತಿ: ನಮ್ಮನಮ್ಮಲ್ಲಿಯ ಭಿನ್ನಾಭಿಪ್ರಾಯವನ್ನು ನಾವೇ ಬಗೆಹರಿಸಿ ಕೊಳ್ಳಬೇಕೇ ಹೊರತು ಅನ್ಯರ ಮೊರೆಹೊಗಬಾರದು.?