ಕೇಂದ್ರಸರ್ಕಾರದ ಅಂಗಗಳಾದ ಹತ್ತು ಮುಖ್ಯ ಇಲಾಖೆಗಳಲ್ಲಿ ಉನ್ನತ ಸ್ಥಾನಗಳಿಗೆ ಸರ್ಕಾರೀ ಅಧಿಕಾರ ರಚನೆಗೆ ಸೇರಿರದ ಹೊರಗಿನ ಅನುಭವಿ ತಜ್ಞರನ್ನು ಜಾಯಿಂಟ್ ಸೆಕ್ರೆಟರಿ ಟು ಗವರ್ನ್ಮೆಂಟ್ ಪದವಿಯಲ್ಲಿ ನೇಮಿಸಿಕೊಳ್ಳಲಾಗುತ್ತದೆಂದು ಕಳೆದ ಜೂನ್ ೧೮ರಂದು ಸರ್ಕಾರೀ ಪ್ರಕಟನೆಯೊಂದು
ಹೊರಟಿದೆ. ಹಲವು ತಿಂಗಳ ಹಿಂದೆಯೆ ಸರ್ಕಾರ ಈ ದಿಶೆಯಲ್ಲಿ ಚಿಂತಿಸುತ್ತಿದೆಯೆಂದು ತಿಳಿಸಲಾಗಿತ್ತು. ಸರ್ಕಾರೇತರ ಸಂಸ್ಥೆಗಳಲ್ಲಿರುವ ಪ್ರತಿಭಾವಂತರ ಅನುಭವದ ಪ್ರಯೋಜನ ಸರ್ಕಾರೀ ಯೋಜನೆಗಳನ್ನು ರೂಪಿಸುವುದರಲ್ಲಿಯೂ ಕಾರ್ಯಾನ್ವಯದಲ್ಲಿಯೂ ಲಭ್ಯವಾಗಲಿ ಎಂಬುದು ಉದ್ದೇಶ. ಇದರಿಂದ ಆಡಳಿತದಲ್ಲಿ ಹೆಚ್ಚಿನ ಚೇತರಿಕೆ ಮೂಡಲೆಂಬುದು ನಿರೀಕ್ಷೆ. ಮೂರರಿಂದ ಐದು ವರ್ಷಗಳ ಅವಧಿಗೆ ಕರಾರಿನ ಮೇಲೆ ಈ ನೇಮಕ ನಡೆಯುತ್ತದೆ.
ಎಷ್ಟೋ ವರ್ಷಗಳ ಹಿಂದಿನಿಂದಲೇ ಈ ಕ್ರಮದ ಸಾಧಕಬಾಧಕಗಳ ಬಗೆಗೆ ಸಮಾಲೋಚನೆಗಳೂ
ಚರ್ಚೆಗಳೂ ನಡೆದಿವೆ. ಇಂದಿರಾಗಾಂಧಿ ಅವಧಿಯಲ್ಲಿಯೆ ಅಶೋಕ್ ಲೇಲೆಂಡ್ ಮೊದಲಾದ ಉದ್ಯಮಗಳಲ್ಲಿ ಉನ್ನತಾಧಿಕಾರಿಯಾಗಿದ್ದ ಮನತೋಷ್ ಸೋಂಧಿ ಅವರನ್ನು ಕೇಂದ್ರಸರ್ಕಾರದ ಹೆವಿ ಇಂಡಸ್ಟ್ರೀಸ್ ಖಾತೆಗೆ ಪ್ರಮುಖರನ್ನಾಗಿ ನೇಮಿಸಿಕೊಳ್ಳಲಾಗಿತ್ತು. ಈಚಿನ ವರ್ಷಗಳಲ್ಲಿ ಕಾಂಗ್ರೆಸ್ ನಿಯಂತ್ರಿತ ಸರ್ಕಾರಗಳು ಹೊರಗಿನಿಂದ ಬಿಮಲ್ಜಲನ್, ಮಾಂಟೇಕ್ಸಿಂಗ್ ಅಹ್ಲುವಲಿಯಾ, ರಘುರಾಂ ರಾಜನ್ ಮೊದಲಾದವರನ್ನು ಉನ್ನತ ಅಧಿಕಾರಸ್ಥಾನಗಳಿಗೆ ನೇಮಿಸಿಕೊಂಡಿದ್ದವು.
ಜಾಯಿಂಟ್ ಸೆಕ್ರೆಟರಿ ಹುದ್ದೆಯಲ್ಲಿ ಆರಂಭದ ಸಂಬಳ ತಿಂಗಳಿಗೆ ರೂ. ೧,೪೪,೨೦೦ರಷ್ಟು ಇರುತ್ತದೆ;
ಅಲೋಯೆನ್ಸ್ಗಳು ಮತ್ತಿತರ ಸವಲತ್ತುಗಳೂ ಇರುತ್ತವೆ.
ಈ ನೂತನ ಕರಾರಿನ ಹುದ್ದೆಗಳಿಗೆ ರಾಜ್ಯಸರ್ಕಾರಗಳ ಸರ್ಕಾರೀ ಕಾರ್ಯಾಂಗದ ಅರ್ಹ ಅಧಿಕಾರಿಗಳೂ ಅರ್ಜಿ ಸಲ್ಲಿಸಬಹುದಾಗಿದೆ.
ಕೇಂದ್ರಸರ್ಕಾರದ ಈಗಿನ ಘೋಷಣೆ ಸಹಜವಾಗಿಯೆ ಪದಾಧಿಷ್ಠಿತ ವಲಯಗಳವರಲ್ಲಿ ಅಸಮಾಧಾನವನ್ನು ಉಂಟುಮಾಡಿದೆ. ನಿಯಮಾನುಸರಣೆಗೆ ಬದಲಾಗಿ ಸರ್ಕಾರ ತನಗೆ ಅನುಕೂಲರಾದವರಿಗೆ ಹುದ್ದೆಗಳನ್ನು ನೀಡಲು ಅವಕಾಶವಾಗುತ್ತದೆ ಎಂದೆಲ್ಲ ಅಸಂತೃಪ್ತಿಯನ್ನು
ವ್ಯಕ್ತಪಡಿಸಲಾಗಿದೆ. ಆದರೆ ಆಡಳಿತಶಾಹಿಯ ಜಡ್ಡುಗಟ್ಟಿದ ಸ್ವಭಾವವೇ ಅಭ್ಯುದಯ ಯೋಜನೆಗಳಿಗೆ
ದೊಡ್ಡ ಹೆದ್ದನ(ಬ್ರೇಕ್)ವಾಗಿದೆಯೆಂಬುದು ಸಾರ್ವತ್ರಿಕ ಅನುಭವವಾಗಿದೆ.
ಉತ್ತಮ ಆಡಳಿತವು ಎಂದಿಗೂ ಕಾನೂನಿನ ಮೇಲೆ ಅವಲಂಬಿತವಾಗಿಲ್ಲ; ಬದಲಾಗಿ ಯಾರು ಆಡಳಿತ ನಡೆಸುತ್ತಿದ್ದಾನೋ ಆತನ ಗುಣಗಳ ಮೇಲೆ ಅವಲಂಬಿತವಾಗಿದೆ. ಆಡಳಿತ ಯಂತ್ರವು ಎಂದಿಗೂ ಆಡಳಿತ ಮಾಡುವವನ ಸಂಕಲ್ಪದ ಅಧೀನದಲ್ಲಿರುತ್ತದೆ. ಆದ್ದರಿಂದ ಸರ್ಕಾರ ಅಥವಾ ಉತ್ತಮ ಆಡಳಿತದ ಮೂಲ ಅಂಶ – ಉತ್ತಮ ನಾಯಕನನ್ನು ಆರಿಸುವುದೇ ಆಗಿದೆ.
– ಅಮೆರಿಕನ್ ಕಾದಂಬರಿಕಾರ ಫ್ರಾಂಕ್ಲಿನ್ ಪಾಟ್ರಿಕ್ ಹರ್ಬರ್ಟ್
ಹತ್ತೊಂಬತ್ತನೇ ಶತಮಾನದಲ್ಲಿ ಬ್ರಿಟಿಷ್ ಪ್ರಭುತ್ವದಡಿಯಲ್ಲಿ ಸಿವಿಲ್ ಸರ್ವಿಸ್ನ ಮುಖ್ಯೋದ್ದೇಶವು
ಕಾನೂನು ವ್ಯವಸ್ಥೆಯ ಅನುಪಾಲನೆ ಮತ್ತು ತೆರಿಗೆ ವಸೂಲಿ ಆಗಿತ್ತು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಆ ಚೌಕಟ್ಟನ್ನು ವಿಸ್ತರಿಸುವ ಯತ್ನಗಳಾಗಿದ್ದರೂ ಒಟ್ಟಾರೆ ವಸಾಹತುಶಾಹಿ ದಿನಗಳ ಮನಃಸ್ಥಿತಿಯಿಂದ ಆಡಳಿತಗಾರರು ಪೂರ್ತಿ ಹೊರಬಂದಿದ್ದಾರೆನಿಸುತ್ತಿಲ್ಲ; ಜನಾಭಿಮುಖ ಸ್ಪಂದನದ ಕೊರತೆ ಎದ್ದುಕಂಡಿದೆ. ಪ್ರತ್ಯೇಕ ನಿರ್ದಿಷ್ಟ ಗಾಢಾನುಭವದ ಆವಶ್ಯಕತೆಯಿರುವ ಉನ್ನತ ಸ್ಥಾನಗಳಿಗೆ
ಆ ಕಾರ್ಯಾಂಗದ ಅನುಭವವಿಲ್ಲದ ಅಧಿಕಾರಿಗಳನ್ನು ನೇಮಿಸುವುದು ಸರ್ವೇಸಾಮಾನ್ಯವಾಗಿದ್ದು ತ್ರಯಸ್ಥ ಪರಾಮರ್ಶಕರಲ್ಲಿ ಹತಾಶೆಯನ್ನೇ ಮೂಡಿಸಿದೆ. ಇದಕ್ಕೆ ವಿರಳ ಅಪವಾದಗಳೂ ಉಂಟೆಂಬುದನ್ನೂ ದಾಖಲೆ ಮಾಡಬೇಕು.
ಒಟ್ಟಾರೆ ಆಡಳಿತ ಪರಿಸರ ಉತ್ಸಾಹಜನಕವಾಗಿಲ್ಲವೆಂಬುದು ಅಧಿಕ ಮಂದಿಯ ಅನಿಸಿಕೆಯಾಗಿದೆ. ಎಂದೋ ಯಾವುದೊ ಒಂದು ಡಿಗ್ರಿ ಗಳಿಸಿ ನೌಕರಿಗೆ ಸೇರಿದ್ದವರಲ್ಲಿ ವರ್ಷಗಳು ಕಳೆದ ಮೇಲೆ ಕಾರ್ಯದಕ್ಷತೆಯಾಗಲಿ ಕಲಿಯುವ ಗುಣವಾಗಲಿ ಉಳಿದಿರುವುದು ಕಡಮೆ. ಅವರಿಗೆ ಮೂವತ್ತು ವರ್ಷಗಳ ಅನುಭವವಿದೆ ಎಂಬುದನ್ನು ವ್ಯಂಗ್ಯವಾಗಿ ಅವರ ಒಂದು ವರ್ಷದ ಅನುಭವ ಮೂವತ್ತು ಸಲ ಪುನರಾವರ್ತನೆಯಾಗಿದೆ ಎಂದು ಅನುವಾದಿಸುವುದುಂಟು. ಅಧಿಕಾರಿಗಳ ಹೆಚ್ಚಿನ ತರಬೇತಿಗಳಿಗೆ ಬೇಕಾದ ಸಂರಚನೆಗಳೇನೊ ಇವೆ. ಆದರೆ ಇತ್ತೀಚಿನ ವ್ಯವಸ್ಥಾಪನ ವಿಧಾನಗಳ ಮತ್ತು ತಾಂತ್ರಿಕ ಆವಿಷ್ಕರಣಗಳ ಅಳವಡಿಕೆ ಪ್ರಚಲಿತ ಸರ್ಕಾರ ಪದ್ಧತಿಯಲ್ಲಿ ದುಃಸಾಧ್ಯವೆಂದೇ ಹೇಳಬೇಕಾಗಿದೆ.
ಈ ಹಿನ್ನೆಲೆಯಲ್ಲಿ ಹೊರಗಿನ ತಜ್ಞರ ವಿಶೇಷಾನುಭವಗಳ ಬಳಕೆಗೆ ಸರ್ಕಾರದಲ್ಲಿ ಅವಕಾಶ ಕಲ್ಪಿಸುವುದು ಆಡಳಿತದ ಉಜ್ಜೀವನಕ್ಕೆ ಒಂದು ವ್ಯವಹಾರ್ಯ ವಿಧಾನವಾಗಿದೆ. ಸಾಂದರ್ಭಿಕವಾಗಿ ಹೇಳಬೇಕಾದ ಇನ್ನೊಂದು ಅಂಶವೆಂದರೆ ಸ್ವಂತ ಯೋಗ್ಯತೆಯಿಂದಲೂ ಸಾಧನೆಯಿಂದಲೂ ಉನ್ನತಿಗೇರಿರುವ ಹೊರಗಿನ ತಜ್ಞರು ರಾಜಕೀಯಸ್ಥರ ಮತ್ತು ಪ್ರಭಾವಿಗಳ ಒತ್ತಡಗಳಿಗೆ ಸೊಪ್ಪು ಹಾಕಬೇಕಾದ ಅನಿವಾರ್ಯತೆ ಇರುವುದಿಲ್ಲ. ಈಗಿನ ಪರಿಸರದಲ್ಲಿ ಹೆಚ್ಚಿನ ಅಧಿಕಾರಿಗಳು ಸದಾ ವರ್ಗಾವಣೆಯ ಭೀತಿಗೋ ಯಾರೋ ಸಚಿವರ ಅಥವಾ ಅನ್ಯರ ಕಟಾಕ್ಷಸಾಧ್ಯತೆಗೋ ಒಳಪಟ್ಟು ತಾತ್ಕಾಲಿಕತೆಯ ಮಾನಸಿಕತೆಯಲ್ಲಿಯೆ ಕಾಲ ಹಾಕುತ್ತಿರುತ್ತಾರೆ. ಬದಲಾಗುತ್ತಿರುವ ವ್ಯವಹಾರವಿಧಾನ ಸವಾಲುಗಳಿಗಾಗಲಿ ಪರಿಸರಸಂಬಂಧಿತ ಮತ್ತು ಅತ್ಯಾಧುನಿಕ ವಾಣಿಜ್ಯರೀತಿಗಳಿಗೆ ಸಂಬಂಧಿಸಿದ
ಜಟಿಲತೆಗಳಿಗಾಗಲಿ ಸೇವಾಭದ್ರತೆಗೆ ಅಂಟಿಕೊಂಡಿರುವ ಆಡಳಿತಗಾರರು ಎಷ್ಟುಮಟ್ಟಿಗೆ ಸ್ಪಂದಿಸಿಯಾರು? ಧೂಳುಹಿಡಿದ ಯಾವುದೊ ಕೈಪಿಡಿಗಳ ತಜ್ಞತೆಯ ಮಟ್ಟದಿಂದ ಈಗಿನ ಆಡಳಿತ ಆವಶ್ಯಕತೆಗಳು ಬಹಳ ದೂರ ಸಾಗಿವೆ. ಗತಾನುಗತಿಕ ಇಲಾಖೆಗಳಿಗೆ ಹೋಲಿಸಿದರೆ ಬಹುಮಟ್ಟಿಗೆ ವೈಜ್ಞಾನಿಕಾದಿ ತಜ್ಞರ ಉಸ್ತುವಾರಿಗೊಳಪಟ್ಟ ಇಸ್ರೋವಿನಂತಹ ವಿಜ್ಞಾನ ತಂತ್ರಜ್ಞಾನ ಸಂಸ್ಥೆಗಳು ಸರ್ಕಾರಾಧೀನಗಳಾಗಿದ್ದರೂ ಹೆಚ್ಚಿನ ಗಣನೀಯ ಸಾಧನೆ ಮಾಡಿರುವುದು ಕಣ್ಣಿಗೆ ಕಾಣುತ್ತದೆ.
ಮೇಲೆ ಸ್ಮರಿಸಿದಂತೆ ಹೊರಗಿನ ತಜ್ಞರನ್ನು ಸರ್ಕಾರೀ ಇಲಾಖೆಗಳ ಉನ್ನತಸ್ಥಾನಗಳಿಗೆ ನೇಮಿಸಿಕೊಳುತ್ತಿರುವುದು ಹೊಸತೇನಲ್ಲ; ಹಿಂದಿನಿಂದ ನಡೆದಿದೆ. ಅದನ್ನು ಹೆಚ್ಚು ವ್ಯವಸ್ಥಿತಗೊಳಿಸಲು
ಈಗಿನ ಕೇಂದ್ರಸರ್ಕಾರ ಹೊರಟಿದೆಯ?. ಇದು ಪ್ರಾಯೋಗಿಕ ರೀತಿಯದಾಗಿರುವುದರಿಂದ ಮಧ್ಯಂತರ
ಪುನರ್ವಿನ್ಯಾಸಗಳಿಗೂ ಅವಕಾಶ ಇದ್ದೇ ಇರುತ್ತದೆ. ನೇಮಕಗೊಂಡ ಹೊರಗಿನ ತಜ್ಞರ ಕಲ್ಪನೆಗಳ
ಅನ್ವಯವನ್ನು ಸುಗಮಗೊಳಿಸುವ ಹೊಣೆಗಾರಿಕೆಯನ್ನು
ಈಗಿನ ಸರ್ಕಾರೀ ಕಾರ್ಯಾಂಗವೇ ವಹಿಸಬೇಕಾಗುತ್ತದೆ. ಆಡಳಿತದಲ್ಲಿ ಹೆಚ್ಚಿನ ಸರ್ಜನಶೀಲತೆ ತರಬೇಕೆಂಬ ಪ್ರಕೃತ ಸರ್ಕಾರದ ಲಕ್ಷ್ಯವಂತೂ ನಿರಾಕ್ಷೇಪಣೀಯವಾಗಿದೆ.
ಹೊರಗಿನಿಂದ ತಜ್ಞರ ನೇಮಕಕ್ಕಾಗಿ ಸರ್ಕಾರವು ಆಯ್ಕೆ ಮಾಡಿಕೊಂಡಿರುವ ಖಾತೆಗಳು:
1. ವಿಮಾನ ಸಂಚಾರ
2. ವಾಣಿಜ್ಯ
3. ಆರ್ಥಿಕ ವ್ಯವಹಾರಗಳು
4. ಮುಗಿಯುವ ಸಂಭವವಿರದ ಪರ್ಯಾಯ ಇಂಧನಮೂಲಗಳು
5. ಕೃಷಿ
6. ಜಲಮಾರ್ಗ (ಹಡಗು ಮೂಲಕ) ಸಾಗಾಣಿಕೆ
7. ಆರ್ಥಿಕ ಪೂರಕ ಸೇವೆಗಳು
8. ರಸ್ತೆ ಸಾರಿಗೆ
9. ಪರಿಸರ
10. ಕಂದಾಯ
ಇಂತಹ ಪ್ರಯೋಗ ಭಾರತದಲ್ಲೇ ಮೊತ್ತಮೊದಲಿಗೆ ನಡೆಯುತ್ತಿದೆಯೆಂದೇನಲ್ಲ. ಇಂಗ್ಲೆಂಡ್, ಆಸ್ಟ್ರೇಲಿಯ ಮೊದಲಾದೆಡೆ ಹಿಂದಿನಿಂದ ಈ ಜಾಡಿನ ಪ್ರಯೋಗಗಳು ನಡೆದು ಸಫಲವೂ ಆಗಿವೆ.
ಖಾಸಗಿ ಉದ್ಯಮಗಳ ಹಿನ್ನೆಲೆಯಿಂದ ಬರುವ ತಜ್ಞರು ಸ್ವಕ್ಷೇತ್ರಹಿತದ ದೃಷ್ಟಿಯಿಂದ ಯೋಜನೆಗಳನ್ನು
ರೂಪಿಸುವ ಸಂಭವ ಇರುವುದಿಲ್ಲವೆ – ಮೊದಲಾದ ಊಹಾತ್ಮಕ ಸನ್ನಿವೇಶಗಳನ್ನು ನಿರ್ವಹಿಸಬಲ್ಲ
ಸಾಮರ್ಥ್ಯ ಕೇಂದ್ರಸರ್ಕಾರದಲ್ಲಿ ಇದೆಯೆಂಬುದನ್ನು ಶಂಕಿಸಲು ಕಾರಣವಿಲ್ಲ.
ತಮ್ಮ ಸೇವಾವಿಭಾಗಗಳಲ್ಲಿ ಹೆಚ್ಚಿನವರು ೩೮ರ ವಯಸ್ಸಿಗೆ ನಿವೃತ್ತರಾಗುವುದರಿಂದ ಎಲ್ಲ ಸ್ತರಗಳಲ್ಲಿಯೂ ಹೊರಗಿನಿಂದ ನೇಮಕ ಮಾಡಿಕೊಳ್ಳುವುದು ಅಪೇಕ್ಷಣೀಯವೆಂದು ರಕ್ಷಣಾ ಇಲಾಖೆಯ ಭೂಸೇನೆ, ವಾಯುಸೇನೆ, ನೌಕಾಸೇನೆ – ಈ ಮೂರೂ ವಿಭಾಗಗಳವರು ಹಲವು ದಶಕಗಳ
ಹಿಂದಿನಿಂದ ಕೋರುತ್ತ ಬಂದಿದ್ದಾರೆ.
ಆಡಳಿತವನ್ನು ಹೆಚ್ಚು ಸಚೇತನಗೊಳಿಸಬಲ್ಲ ಕೇಂದ್ರಸರ್ಕಾರದ ಈಗಿನ ಚಿಂತನೆಯು ಸ್ವಾಗತಾರ್ಹವಾಗಿದೆ.