ಆಶ್ಚರ್ಯದ ಸಂಗತಿಯೆಂದರೆ ನಮ್ಮಲ್ಲಿ ಹಲವಾರು ಒಳ್ಳೆಯ ಆಚರಣೆಗಳಿದ್ದರೂ ಅರ್ಥವಿಲ್ಲದ ಬೆಡಗಿನ ಆಚರಣೆಗಳನ್ನು ಅನುಕರಿಸುತ್ತಿದ್ದೇವೆ.
ಈ ದೇಶ ಹಲವಾರು ಹಬ್ಬಗಳ, ಆಚರಣೆಗಳ, ಸಂಪ್ರದಾಯಗಳ ನಾಡು. ಈ ಎಲ್ಲ ಆಚರಣೆಗಳಿಂದ, ಹಬ್ಬಗಳಿಂದ ಮನುಷ್ಯನಿಗೆ ಸಂಸ್ಕಾರ ಸಿಗಲಿ, ಆತನಲ್ಲಿ ಜೀವನೋತ್ಸಾಹ ತುಂಬಲಿ, ಸಮಾಜದಲ್ಲಿ ಸಾಮರಸ್ಯ ಉಂಟಾಗಲಿ ಎಂಬುದೇ ಇದರ ಹಿಂದಿರುವ ಸದುದ್ದೇಶ. ಇವೆಲ್ಲವನ್ನು ಅರಿತು ಆಚರಣೆಗಳನ್ನು ಆಚರಿಸಿದರೆ ಅದು ಅರ್ಥಪೂರ್ಣವಾಗುತ್ತದೆ. ಅರಿಯದೆ ಕೇವಲ `ಶೋಕಿ’ಗಾಗಿ ಆಚರಣೆ ಮಾಡಿದರೆ ಅದು ಅನರ್ಥವಾಗುತ್ತದೆ.
ಅಂಧಾನುಕರಣೆ ಬೇಡ
ಅನುಕರಣೆಯಲ್ಲಿ ಯಾವತ್ತೂ ಸ್ವಂತಿಕೆಯಿಲ್ಲ, ಸಾಹಸವಿಲ್ಲ. ಆನೆಯಂತೆ ತನ್ನದೇ ದಾರಿ ಮಾಡಿಕೊಂಡು ಹೋಗುವುದಕ್ಕೂ ಕುರಿಮಂದೆಯಂತೆ ಹಿಂಬಾಲಿಸುವುದಕ್ಕೂ ಬಹಳಷ್ಟು ವ್ಯತ್ಯಾಸ ಇದೆ. ಒಂದರಲ್ಲಿ ತನ್ನತನವಿದ್ದರೆ, ಇನ್ನೊಂದರಲ್ಲಿ ಪಾರತಂತ್ರ್ಯ ಇದೆ. ಒಂದರಲ್ಲಿ ಸ್ವಾಭಿಮಾನ ಇದ್ದರೆ, ಇನ್ನೊಂದರಲ್ಲಿ ಪರಾವಲಂಬನೆ ಇದೆ.ಇಂದು ನಮ್ಮಲ್ಲಿ ನಡೆಯುವ ಅನೇಕ ಅಂಧಶ್ರದ್ಧೆಗಳನ್ನು ಪ್ರಶ್ನಿಸುವ ಹಾಗೆಯೇ ಇಲ್ಲ. ಸಂಪ್ರದಾಯವನ್ನು ವಿರೋಧಕ್ಕಾಗಿ ಅಲ್ಲದಿದ್ದರೂ ಅದನ್ನು ಕೂಲಂಕಷವಾಗಿ ತಿಳಿಯುವ ಕುತೂಹಲಕ್ಕಾಗಿಯಾದರೂ ಪ್ರಶ್ನಿಸಿದರೂ ಅದರ ಬಗ್ಗೆ ಆಕ್ಷೇಪ ಬರುತ್ತದೆ. ಎಷ್ಟೇ ಹಳೆಯ ಸಂಪ್ರದಾಯವಾದರೂ ಅದನ್ನು ಸರಿಯಾಗಿ ಅರ್ಥೈಸದೆ, ಬರಿದೆ ಕುರುಡರಾಗಿ ಆಚರಿಸಿದರೆ ಅದೊಂದು ಯಾಂತ್ರಿಕ ಕ್ರಿಯೆ ಆಗುತ್ತದೆಯೆ ಹೊರತು ಅದರಲ್ಲಿ ಜೀವಂತಿಕೆ ಇರುವುದಿಲ್ಲ; ಪಾರಮಾರ್ಥಿಕತೆ ಇರುವುದಿಲ್ಲ.
ಒಂದು ಹಳ್ಳಿಯಲ್ಲಿ ಪುರಾತನ ಕಾಲದ ಶಿವದೇವಾಲಯ ಇತ್ತು. ಊರಿನವರು, ಪರ ಊರಿನವರು ಪ್ರತಿದಿನವೂ ದೇವರ ದರ್ಶನಕ್ಕೆ ಬರುತ್ತಿದ್ದರು. ಬೆಳಗ್ಗೆ, ಮಧ್ಯಾಹ್ನ, ಸಾಯಂಕಾಲ ಹೀಗೆ ತ್ರಿಕಾಲಗಳಲ್ಲೂ ಪೂಜೆ ನಡೆಯುತ್ತಿತ್ತು. ನೈವೇದ್ಯವನ್ನು ಶಿವನಿಗೆ ಅರ್ಪಣೆ ಮಾಡುವ ಸಂದರ್ಭದಲ್ಲಿ ಒಂದು ದೊಣ್ಣೆಯನ್ನು ನೆಲದ ಮೇಲೆ ಜೋರಾಗಿ ಕುಟ್ಟುತ್ತಿದ್ದರು. ‘ಏಕೆ ಹೀಗೆ ಬಡಿಗೆಯನ್ನು ಕುಟ್ಟುತ್ತಾರೆ’ ಎಂಬ ಪ್ರಶ್ನೆ ಯಾರಿಗೂ ಬರುತ್ತಿರಲಿಲ್ಲ; ಪ್ರದಕ್ಷಿಣೆ ಹಾಕಿ, ತೀರ್ಥ-ಪ್ರಸಾದ ಸ್ವೀಕರಿಸಿ ಹಿಂದಿರುಗುತ್ತಿದ್ದರು.
ಒಂದು ದಿನ ಒಬ್ಬ ತರುಣ ದೇವಾಲಯಕ್ಕೆ ಆಗಮಿಸಿದ. ಪ್ರತಿನಿತ್ಯದಂತೆ ಆ ದಿನವೂ ಪೂಜೆ ನಡೆದಿತ್ತು. ನೈವೇದ್ಯವನ್ನು ಸಮರ್ಪಿಸುವಾಗ, ಒಬ್ಬಾತ ಜೋರಾಗಿ ನೆಲದ ಮೇಲೆ ದೊಣ್ಣೆಯಿಂದ ಕುಟ್ಟುತ್ತಿದ್ದ. ಹೊಸದಾಗಿ ಬಂದಿದ್ದ ತರುಣನಿಗೆ ಕುತೂಹಲ ಉಂಟಾಯಿತು. ಪೂಜೆ, ಮಂಗಳಾರತಿ, ತೀರ್ಥ-ಪ್ರಸಾದ ವಿನಿಯೋಗ ನಡೆದು, ಅರ್ಚಕರು ಹೊರಡುವವರೆಗೂ ಆತ ಕಾಯುತ್ತಾ ಅಲ್ಲೇ ಕುಳಿತು, “ಸ್ವಾಮಿ, ನೈವೇದ್ಯ ಮಾಡುವಾಗ ಜೋರಾಗಿ ದೊಣ್ಣೆಯಿಂದ ನೆಲವನ್ನು ಕುಟ್ಟುತ್ತಾ ಇದ್ದಿರಲ್ಲ, ಅದೇಕೆ? ಎಂದು ಪ್ರಶ್ನಿಸಿದ. ಅರ್ಚಕರು, ನಾನು ಈ ದೇವಸ್ಥಾನದ ಪೂಜೆ ಮಾಡ್ತಾ ನಾಲ್ಕೈದು ವರ್ಷಗಳು ಮಾತ್ರ ಆಯ್ತು. ಏಕೋ-ಏನೋ ಗೊತ್ತಿಲ್ಲ. ನೋಡಪ್ಪ ಹೀಗೆ ಒಂದು ಮೈಲಿ ನಡೆದು ಹೋದ್ರೆ, ನಾನು ಬರುವ ಮೊದಲು ಈ ದೇವಸ್ಥಾನದ ಪೂಜೆ ಮಾಡುತ್ತಾ ಇದ್ದ ಶಂಕರ ಭಟ್ಟರ ಮನೆ ಸಿಗುತ್ತದೆ. ಅವರಿಗೇನಾದರೂ ಗೊತ್ತಿದ್ದರೂ ಗೊತ್ತಿರಬಹುದು ಎಂದು ತಿಳಿಸಿದರು.
ತರುಣನು ಶಂಕರಭಟ್ಟರ ಮನೆಗೆ ಹೋದ. ಅವರನ್ನು ಕಂಡು ನಮಸ್ಕರಿಸಿ – ಸ್ವಾಮಿ, ನೀವು ಪೂಜೆ ಮಾಡುತ್ತಾ ಇದ್ದ ಶಿವ ದೇವಾಲಯದಲ್ಲಿ ಅನ್ನನೈವೇದ್ಯ ಮಾಡುವಾಗ ಜೋರಾಗಿ ದೊಣ್ಣೆಯಿಂದ ನೆಲಕ್ಕೆ ಬಡಿಯೋದು ಏಕೆ? ಈ ಸಂಪ್ರದಾಯಕ್ಕೆ ಅರ್ಥ ಏನಾದರೂ ಇದೆಯೇ? ಎಂದು ಕೇಳಿದ. ಅವರೂ, ನಾನೇನೋ ಐವತ್ತು ವರ್ಷ ಪೂಜೆ ಮಾಡಿಕೊಂಡು ಇದ್ದೆ. ಯಾರನ್ನೂ ಈ ಬಗ್ಗೆ ಕೇಳಿರಲಿಲ್ಲ. ನನಗೂ ಗೊತ್ತಿಲ್ಲ. ನೋಡಪ್ಪ, ಹೀಗೆ ಮುಂದೆ ಹೋಗು. ಬಲಭಾಗದಲ್ಲಿ ಅಡ್ಡ ತಿರುಗಿಕೊ. ಅಲ್ಲಿ ಮೂರನೆಯ ಮನೆಯಲ್ಲಿ ರಾಮಭಟ್ಟರು ಅಂತ ಇದ್ದಾರೆ. ಅವರೂ ಶಿವನ ಪೂಜೆ ಮಾಡುತ್ತಾ ಇದ್ದರು. ಅವರಿಗೇನಾದರೂ ಈ ದೊಣ್ಣೇನ ಕುಟ್ಟೋದು ಏಕೆ, ಎಂಬ ವಿಷಯ ಗೊತ್ತಿರಬಹುದು ಎಂದು ಹೇಳಿದರು.
ತರುಣ ರಾಮಭಟ್ಟರ ಬಳಿಗೆ ಬಂದ. ರಾಮಭಟ್ಟರಿಗೆ ಕಣ್ಣು ಕಾಣಿಸುತ್ತಾ ಇರಲಿಲ್ಲ. ಮಗ ತರುಣ ಬಂದ ವಿಷಯವನ್ನು ಅವರಿಗೆ ತಿಳಿಸಿದ. ತರುಣ ಅವರ ಬಳಿ, ಸ್ವಾಮಿ, ಶಿವದೇವಾಲಯದಲ್ಲಿ ನೈವೇದ್ಯ ಮಾಡುವಾಗ, ದೊಣ್ಣೆ ಕುಟ್ಟೋದು ಯಾಕೆ? ಅಂತ ಕೇಳಿದ. ಆಗ ರಾಮಭಟ್ಟರು ಆಶ್ಚರ್ಯದಿಂದ, “ಈಗಲೂ ದೊಣ್ಣೆ ಕುಟ್ಟುತ್ತಾ ಇದ್ದಾರೇನಪ್ಪಾ? ನಾನು ಅಲ್ಲಿ ಅರ್ಚಕನಾಗಿದ್ದಾಗಲೇ ಕಣ್ಣು ಸರಿಯಾಗಿ ಕಾಣಿಸುತ್ತಾ ಇರಲಿಲ್ಲ. ದೇವಸ್ಥಾನಕ್ಕೆ ಸರಿಯಾದ ಮಾಡು, ಆವರಣದ ಗೋಡೆ ಏನೂ ಇರಲಿಲ್ಲ. ನಾಯಿ, ಕಾಗೆ ಬಂದು ನೈವೇದ್ಯ ಮುಟ್ಟಬಾರದು ಅಂತ ದೊಣ್ಣೆ ಬಡಿಯುತ್ತಿದ್ದೆ ಎಂದರು. “ನಾನು ಮಾಡುವುದನ್ನು ನೋಡಿಕೊಂಡು, ಏಕೆ-ಏನು ಅಂತ ತಿಳಿಯದೆ ದೊಣ್ಣೆ ಬಡಿತಾ ಇದ್ದಾರೆ! ಎಂದು ಹೇಳಿದರು.
ಕಠೋಪನಿಷತ್ತಿನ ಅಂಧೇನೈವ ನೀಯಮಾನಃ ಯಥಾಂಧಾಃ – ಒಬ್ಬ ಕುರುಡ, ಇನ್ನೊಬ್ಬ ಕುರುಡನಿಗೆ ದಾರಿ ತೋರಿಸಿದಂತೆ, ಎಲ್ಲರೂ ಅರ್ಥ ತಿಳಿಯದೇ ಸಂಪ್ರದಾಯದ ಜಡ್ಡುಗಟ್ಟಿದ ಮಾರ್ಗದಲ್ಲೇ ಸಾಗುತ್ತಿದ್ದಾರೆ ಎಂಬ ಮಾತು ತರುಣನ ಮನಃಪಟಲದಲ್ಲಿ ಸುಳಿಯಿತು.
ಸಂಸ್ಕೃತದ ಸುಭಾಷಿತವೊಂದು ಹೀಗೆನ್ನುತ್ತದೆ;
ಅನ್ಯಥಾ ಪರಮಂ ತತ್ತ್ವಂ ಜನಾಃ ಕ್ಲಿಶ್ಯಂತಿ ಚಾನ್ಯಥಾ |
ಅನ್ಯಥಾ ಶಾಸ್ತ್ರಸದ್ಭಾವೋ ವ್ಯಾಖ್ಯಾಂ ಕುರ್ವಂತಿ ಚಾನ್ಯಥಾ ||
“ಶ್ರೇಷ್ಠವಾದ ತತ್ತ್ವವೇ ಬೇರೆ, ಅದನ್ನರಿಯದೆ ಜನರು ಬೇರೆ ರೀತಿಯಲ್ಲಿ ಕಷ್ಟಪಡುತ್ತಾರೆ. ಶಾಸ್ತ್ರವು ಹೇಳಿರುವ ರೀತಿಯೇ ಬೇರೆ, ವಿಧವಿಧವಾಗಿ ಅದನ್ನು ಮಾಡುತ್ತಾರೆ.”ಶಾಸ್ತ್ರವನ್ನು ಸರಿಯಾಗಿ ಅಧ್ಯಯನ ಮಾಡದೆ, ಅರ್ಥಮಾಡಿಕೊಳ್ಳದೆ ನಮ್ಮಲ್ಲಿ ಅನೇಕ ಮೂಢನಂಬಿಕೆಗಳು, ಕಂದಾಚಾರಗಳು ಆಚರಣೆಗೆ ಬಂದಿವ. ಇಂತಹ ಆಚರಣೆಯಲ್ಲಿ ಅಂಧಶ್ರದ್ಧೆಯಿದೆಯೋ ಅಥವಾ ಏನಾದರೂ ವೈಜ್ಞಾನಿಕತೆ, ವೈಚಾರಿಕತೆ ಇದೆಯೋ ಎಂಬುದನ್ನು ವಿವರಿಸುವಷ್ಟು ವ್ಯವಧಾನ ನಮಗಿಲ್ಲ. ಆದರೂ ಮರಳುಗಾಡಿನಲ್ಲಿ ಅಲ್ಲಲ್ಲಿ ಓಯಸಿಸ್ ಇದ್ದಂತೆ ಇಂತಹ ಆಚರಣೆಗಳನ್ನು ಪ್ರಶ್ನಿಸುವ ವಿಚಾರವಂತರು, ಸುಧಾರಕರು ನಮ್ಮಲ್ಲಿದ್ದಾರೆ.
ಇಲ್ಲದ ಸಮರ್ಥನೆ
ಕೆಲವು ವರ್ಷಗಳ ಹಿಂದೆ ಪಂಡರಾಪುರದ ವಿಠೋಬ ದೇವಾಲಯದಲ್ಲಿ ಕೇಶಮುಂಡನ ಮಾಡದ ವಿಧವೆಯೊಬ್ಬಳು ದೇವರಮೂರ್ತಿಯ ಪಾದಸ್ಪರ್ಶ ಮಾಡಲು ಯತ್ನಿಸಿದಾಗ ಅಲ್ಲಿಯ ಅರ್ಚಕ ಆಕೆಯನ್ನು ತಡೆದ. ಯುವ ವಕೀಲನೊಬ್ಬನಿಗೆ ಆಕೆಯ ವೇದನೆಯ ಆಳ ತಿಳಿಯಿತು. ಅವನು ಅಂದಿನಿಂದಲೇ ಕಾನೂನು ಕಾಯಿದೆಗಳ ಜತೆಗೆ ವೇದಶಾಸ್ತ್ರಗಳನ್ನೂ ತಲಸ್ಪರ್ಶಿಯಾಗಿ ಅಧ್ಯಯನ ಮಾಡಿದ. ಅರ್ಚಕನ ವಿರುದ್ಧ ದಾವೆ ಹೂಡಿದ.
ವಿಧವೆಯರಿಗೆ ಕೇಶಮುಂಡನ ಮಾಡಬೇಕೆನ್ನುವ ಒಂದೇ ಒಂದು ಸಾಲನ್ನು ವೇದಶಾಸ್ತ್ರಾದಿಗಳಲ್ಲಿ ತೋರಿಸಿ ನೋಡೋಣ ಎಂದು ಸವಾಲೆಸೆದ. ಅರ್ಚಕನ ಸದ್ದಡಗಿತು. ವಿಧವೆಗೆ ದೇವರ ಪಾದಸ್ಪರ್ಶ ಮಾಡುವ ಹಕ್ಕು ದೊರೆಯಿತು.
ವಿಧವೆಯರ ಹಕ್ಕುಗಳಿಗಾಗಿಯೇ ಹೋರಾಡಿದ ಆ ವಕೀಲನೇ ಮುಂದೆ ‘ಮಹಾಮಹೋಪಾಧ್ಯಾಯ’ ಎಂಬ ಬಿರುದುಗಳಿಸಿ, ಧರ್ಮಶಾಸ್ತ್ರಗಳ ಇತಿಹಾಸವನ್ನೇ ಹಲವು ಸಂಪುಟಗಳಲ್ಲಿ ರಚಿಸಿದ ಡಾ. ಪಿ.ವಿ. ಕಾಣೆಯವರು; ಜಗದ್ವಿಖ್ಯಾತರಾದವರು. ಅಸ್ಪೃಶ್ಯತಾ ನಿವಾರಣೆಗೂ ಅವರು ಹೋರಾಡಿದರು.
ನಮ್ಮ ಸಂಪ್ರದಾಯ, ಸಂಸ್ಕೃತಿಯಲ್ಲಿ ಕ್ರಮೇಣ ಮಾಲಿನ್ಯ ಸೇರಿಕೊಂಡಿದೆ. ಇದಕ್ಕೆ ನಮ್ಮ ಗುಲಾಮೀತನವೂ ಒಂದು ಕಾರಣವಿರಬಹುದು. ಆಶ್ಚರ್ಯದ ಸಂಗತಿಯೆಂದರೆ ನಮ್ಮಲ್ಲಿ ಹಲವಾರು ಒಳ್ಳೆಯ ಆಚರಣೆಗಳಿದ್ದರೂ ಅರ್ಥವಿಲ್ಲದ ಬೆಡಗಿನ ಆಚರಣೆಗಳನ್ನು ಅನುಕರಿಸುತ್ತಿದ್ದೇವೆ. ನಾವು ವಿದೇಶೀಯರಂತೆ ವರ್ತಿಸುವುದರಲ್ಲೆ ಸಾರ್ಥಕತೆಯನ್ನು ಕಾಣುತ್ತೇವೆ.
ನಾವು ಪರಸ್ಪರ ಭೇಟಿಯಾದಾಗ ಒಬ್ಬರಿಗೊಬ್ಬರು ಎರಡು ಕೈ ಜೋಡಿಸಿ ವಿನೀತರಾಗಿ ವಂದಿಸುತ್ತೇವೆ. ನಮಸ್ಕಾರ ಎಂಬ ಶಬ್ದದ ಅರ್ಥವೇ ಅದು. ನನ್ನೊಳಗೆ ಅಡಗಿರುವ ಅಹಂಕಾರವನ್ನು ತೊರೆದು ನಿನ್ನೊಳಗಿರುವ ಭಗವಂತನಿಗೆ ತಲೆಬಾಗುವ ಭಾವವೇ ನಮಸ್ಕಾರದ ಅರ್ಥ. ಆದರೆ ಒಬ್ಬ ವ್ಯಕ್ತಿಯನ್ನು ಸಂಬೋಧಿಸುವಾಗಲೂ ನಾವು ನಮ್ಮ ಪದ್ಧತಿಯನ್ನು ಬಿಟ್ಟು ‘ಹಲೋ’ ಎಂದು ಹೇಳುತ್ತೇವೆ. ‘ಹಲೋ’ ಎಂಬ ಶಬ್ದದ ಅರ್ಥವಾದರೂ ಏನು? ನಿಜವಾಗಿಯೂ ನೋಡಿದರೆ ‘ಹಲೋ’ ಎಂಬ ಶಬ್ದಕ್ಕೆ ಯಾವ ಅರ್ಥವೂ ಇಲ್ಲ. ಇದರ ಬದಲಿಗೆ ಫೋನ್ನಲ್ಲಿ ಮಾತನಾಡುವಾಗ ‘ಹರಿ ಓಂ’, ‘ಸುಪ್ರಭಾತ’ ಎಂಬುದಾಗಿಯೊ ಜೈಶ್ರೀರಾಮ್ ಅಥವಾ ಜೈಗುರುದೇವ್ ಎಂಬುದಾಗಿಯೊ ಏಕೆ ಮಾತನಾಡಬಾರದು?
ನಾವಿಂದು ನಮ್ಮ ಮಕ್ಕಳ ಜನ್ಮದಿನಾಚರಣೆಯನ್ನು ಹೇಗೆ ಆಚರಿಸುತ್ತಿದ್ದೇವೆ? ದೀಪವನ್ನು ಬೆಳಗಿಸಿ, ಆರತಿಯನ್ನು ಎತ್ತಿ ತೋರಿಸಿ ಮಗುವಿನ ಬದುಕೆಲ್ಲಾ ಬೆಳಕಾಗಲಿ, ಬೆಳಗಾಗಲಿ ಎಂದು ಹಾರೈಸಿ ಆಚರಿಸಬೇಕಾದ ಜನ್ಮದಿನಾಚರಣೆಯನ್ನು ಇಂದು ವಿಕೃತಗೊಳಿಸಿ, ಕೇಕನ್ನು ಕತ್ತರಿಸಿ, ಆತನ ವಯಸ್ಸಿನ ಸಂಖ್ಯೆಯಷ್ಟು ಉರಿಯುತ್ತಿರುವ ಮೋಂಬತ್ತಿಯನ್ನು ಆರಿಸಿ, ಅಂದರೆ ಜ್ಯೋತಿಯನ್ನು ನಂದಿಸಿ, ಮಗುವಿನ ಬದುಕೆಲ್ಲ ಕತ್ತಲಾಗಲಿ ಎಂಬ ಸಂದೇಶವನ್ನು ನೀಡುವಂತೆ ಆಚರಿಸುತ್ತೇವೆ. ‘ತಮಸೋ ಮಾ ಜ್ಯೋತಿರ್ಗಮಯ’ ಎಂಬುದಾಗಿ ನಮ್ಮ ಉಪನಿಷತ್ ಹೇಳುತ್ತದೆ. ಕತ್ತಲೆಯಿಂದ ಬೆಳಕಿನೆಡೆಗೆ ಹೋಗಬೇಕೆಂದು ನಮ್ಮ ಹಿರಿಯರು ಹೇಳಿದರು. ಆದರೆ ಉರಿಯುತ್ತಿರುವ ದೀಪವನ್ನು ನಂದಿಸಿ ಬೆಳಕಿನಿಂದ ಕತ್ತಲ ಕಡೆಗೆ ಹೋಗುವ ಸಂಪ್ರದಾಯವನ್ನು ನಾವಿಂದು ಆಚರಿಸುತ್ತೇವೆ. ಹಿಂದೆ ಜನ್ಮದಿನದಂದು ಮಕ್ಕಳನ್ನು ಸಾಯಂಕಾಲ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ದೇವರ ಆಶೀರ್ವಾದವನ್ನು ಪಡೆಯುತ್ತಿದ್ದರು. ಇಂದು ಕತ್ತಲೆಯಾದ ಮೇಲೆ ಹೋಟೆಲಿಗೆ, ಬಾರಿಗೊ ಹೋಗಿ ಪಾರ್ಟಿ ಮಾಡುತ್ತೇವೆ. ನಮಗೆ ಯಾವ ಸಂದರ್ಭವನ್ನು ಹೇಗೆ, ಯಾವಾಗ, ಯಾಕಾಗಿ ಆಚರಿಸಬೇಕಂತಲೆ ಗೊತ್ತಿಲ್ಲ.
ವಿದೇಶೀ ಆಚರಣೆ ಬೇಕೆ?
ಇತ್ತೀಚೆಗೆ ಈ ದೇಶದಲ್ಲಿ ಹೊಸದೊಂದು ದಿನಾಚರಣೆ ಆರಂಭವಾಗಿ ಇಂದು ಅದು ವಿಜೃಂಭಣೆಯಿಂದ ಆಚರಿಸಲ್ಪಡುತ್ತಿದೆ. ಅದು ಪ್ರೇಮಿಗಳ ದಿನ, ವಾಲೆಂಟೈನ್ಸ್ ಡೇ. ಈ ‘ವಾಲೆಂಟೈನ್ಸ್ ಡೇ’ಯ ಹಿನ್ನೆಲೆ ಏನು? – ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ರೋಮ್ ಸಾಮ್ರಾಟ, ಮದುವೆಯಾದ ಹಾಗೂ ಪ್ರೇಮಬಂಧನದಲ್ಲಿ ಸಿಲುಕಿದ ಸೈನಿಕರು ದೇಶಕ್ಕಾಗಿ ನಿಷ್ಠೆಯಿಂದ ಹೋರಾಡಲು ಸಾಧ್ಯವಿಲ್ಲವೆಂದು ಭಾವಿಸಿದ್ದ. ರಾಷ್ಟ್ರನಿಷ್ಠೆಯು ಕೌಟುಂಬಿಕನಿಷ್ಠೆಗೆ ಅಧೀನವಾಗಬಾರದೆಂದು ರೋಮ್ ಚಕ್ರವರ್ತಿ ಕ್ಲಾಡಿಯಸ್ ಕಟ್ಟಾಜ್ಞೆ ಹೊರಡಿಸಿ, ಯಾರೂ ಪ್ರೀತಿಸಿ ಮದುವೆಯಾಗಬಾರದೆಂದು ವಿಧಿಸಿದನಂತೆ. ಆದರೆ ಕ್ರೈಸ್ತ ಸಂನ್ಯಾಸಿ ವಾಲೆಂಟೈನ್ ರಾಜಾಜ್ಞೆಯನ್ನು ಉಲ್ಲಂಘಿಸಿ ಅದೊಂದು ಸುಮುಹೂರ್ತದಲ್ಲಿ ಪ್ರೇಮೋತ್ಸವ ಏರ್ಪಡಿಸಿದನಂತೆ. ಆ ದಿನ ಅನೇಕ ತರುಣ-ತರುಣಿಯರು ಒಂದುಗೂಡಿ ಪ್ರೇಮವನ್ನು ಹಂಚಿಕೊಂಡರಂತೆ. ರಾಜಾಜ್ಞೆಯನ್ನು ಉಲ್ಲಂಘಿಸಿದ ತಪ್ಪಿಗಾಗಿ ಚಕ್ರವರ್ತಿ ಕ್ಲಾಡಿಯಸ್ ವಾಲೆಂಟೈನ್ನನ್ನು ಬಂಧಿಸಿ ಜೈಲಿಗೆ ತಳ್ಳಿದ. ಕ್ರಿ.ಶ. ೪೬೩ ಫೆಬ್ರುವರಿ ೧೪ರಂದು ವಾಲೆಂಟೈನ್ ಗಲ್ಲಿಗೇರಿಸಲ್ಪಟ್ಟ. ಸಾಯುವ ಮುನ್ನ ವಾಲೆಂಟೈನ್ ತನ್ನ ಜೀವನದ ಅಂತಿಮ ಸಂದೇಶವಾಗಿ ತನ್ನ ಪ್ರೇಯಸಿಗೆ ಪ್ರೇಮಪತ್ರ ಬರೆಯುತ್ತಾನೆ. ವಾಲೆಂಟೈನ್ ಸ್ಮರಣಾರ್ಥ ಪ್ರತಿವರ್ಷ ಜಗತ್ತಿನ ಹದಿಹರೆಯದ ಜೋಡಿಗಳು ಆತನ ಸ್ಮರಣೆಯಲ್ಲಿ ಫೆಬ್ರುವರಿ ಹದಿನಾಲ್ಕರಂದು ಪ್ರೇಮೋತ್ಸವ ಆಚರಿಸುತ್ತಾರೆ. ಆ ದಿನವೇ ‘ವಾಲೆಂಟೈನ್ಸ್ ಡೇ’.
ಕ್ರಿ.ಶ. ೪೯೮ರಿಂದ ಯೂರೋಪಿನಾದ್ಯಂತ ‘ವಾಲೆಂಟೈನ್ಸ್ ಡೇ’ ಜಾರಿಯಲ್ಲಿ ಬಂತು ಎಂಬ ಹೇಳಿಕೆಗಳಿವೆ. ೧೪೧೫ರಲ್ಲಿ ಲಂಡನ್ನಿನ ಸೆರೆಮನೆಯಲ್ಲಿದ್ದ ಡ್ಯೂಕ್ ಆಫ್ ಜಾರ್ಲಿಯೂನ್ಸ್ (ಮೊದಲನೇ ಚಾರ್ಲ್ಸ್) ತನ್ನ ಪ್ರಿಯತಮೆಗೆ ವಾಲೆಂಟೈನ್ಸ್ ಡೇ ಸಂದರ್ಭದಲ್ಲಿ ಬರೆದ ಪ್ರೇಮಪತ್ರವನ್ನು ಇವತ್ತಿಗೂ ಬ್ರಿಟಿಷ್ ಮ್ಯೂಜಿಯಂನಲ್ಲಿ ಕಾಣಬಹುದು. ಈ ಘಟನೆಯ ನಂತರ ‘ವಾಲೆಂಟೈನ್ಸ್ ಡೇ’ ಕಾರ್ಡುಗಳ ಆವಿಷ್ಕಾರವಾಯಿತು. ಈಗ ಜಗತ್ತಿನಲ್ಲಿ ‘ಶುಭೇಚ್ಛಾ ಪತ್ರಗಳು’ ಅಂದರೆ ‘ವಾಲೆಂಟೈನ್ಸ್ ಡೇ’ ಕಾರ್ಡುಗಳು ಸುಮಾರು ನೂರುಕೋಟಿಗಿಂತ ಅಧಿಕ ಅಚ್ಚಾಗುತ್ತವೆ ಎಂದು ಅಂದಾಜು ಮಾಡಲಾಗಿದೆ. ಕ್ರಿಸ್ಮಸ್ ತರುವಾಯ ‘ವಾಲೆಂಟೈನ್ಸ್ ಡೇ’ ಆಚರಣೆಯ ಸಂದರ್ಭದಲ್ಲಿ ಅತಿ ಹೆಚ್ಚು ‘ಶುಭಾಶಯ ಪತ್ರಗಳು’ ಕಳುಹಿಸಲ್ಪಡುವವು ಎಂಬುದಾಗಿ ಅಂದಾಜು ಮಾಡಲಾಗಿದೆ.
ಆಮದು ಸಂಸ್ಕೃತಿ
ಪ್ರೇಮಿಗಳ ದಿನವಿದ್ದಂತೆ ಪಾಶ್ಚಾತ್ಯರಲ್ಲಿ ‘Mother’s day’ ಎಂಬುದಾಗಿ ಆಚರಣೆಯಲ್ಲಿದೆ. ಪ್ರಾಯಶಃ ಪಾಶ್ಚಾತ್ಯರಲ್ಲಿ ‘Mother’s day’ ‘ ದಿನ ಮಾತ್ರ ತಾಯಿ-ಮಕ್ಕಳು ಒಟ್ಟಾಗಿ ಮಾತನಾಡಿ ಸಂಭ್ರಮವನ್ನು ಆಚರಿಸುತ್ತಾರೆ! ವರ್ಷಪೂರ್ತಿ ತಾಯಿಯನ್ನು ಮರೆತರೂ ‘ಮದರ್ಸ್ ಡೇ’ಯಂದು ಮಾತ್ರ ತಾಯಿಯನ್ನು ಪ್ರೀತಿಸುತ್ತಾರೆ. ಯಾಕೆಂದರೆ ತಾಯಿ ಬೇರೆ ಮನೆಯಲ್ಲಿ ಅಥವಾ ವೃದ್ಧಾಶ್ರಮದಲ್ಲಿರುತ್ತಾರೆ. ಹೆತ್ತವರನ್ನು ವೃದ್ಧಾಶ್ರಮದಲ್ಲಿ ಬಿಡುವುದು ವಿದೇಶೀ ಪದ್ಧತಿ. ಇವತ್ತು ನಮ್ಮ ದೇಶದಲ್ಲೂ ಈ `ಸಂಸ್ಕೃತಿ’ ಬಂದಿದೆ. ವಿಧವಾಶ್ರಮ, ಅಬಲಾಶ್ರಮ, ವೃದ್ಧಾಶ್ರಮ ಇವೆಲ್ಲವೂ ನಮ್ಮ ಸಂಸ್ಕೃತಿಯಲ್ಲ, ವಿದೇಶದಿಂದ ಆಮದಾದ ಸಂಸ್ಕೃತಿ. ಓರ್ವ ವಿಧವೆಯನ್ನಾಗಲಿ, ವೃದ್ಧೆಯನ್ನಾಗಲಿ ನಿಜವಾಗಿ ಯಾರು ನೋಡಿಕೊಳ್ಳಬೇಕು? ಅದು ಆಯಾಯ ಕುಟುಂಬದ ಜವಾಬ್ದಾರಿ. ನಮ್ಮ ತಂದೆ-ತಾಯಿಯವರಿಗೆ ವಯಸ್ಸಾಯಿತು, ಮುದಿತನ ಬಂತೆಂದು ವೃದ್ಧಾಶ್ರಮಕ್ಕೆ ಸೇರಿಸುವುದು ಎಷ್ಟು ಸರಿ? ಇಂದಿನ ಕಾಲದಲ್ಲಿ ಹೆತ್ತವರ ಮತ್ತು ಮಕ್ಕಳ ಸಂಬಂಧ ಶಿಥಿಲವಾಗುತ್ತಿದೆ. ವಯಸ್ಸಾದ ತಂದೆ-ತಾಯಿಯನ್ನು ನೋಡಿಕೊಳ್ಳಲು ಕಷ್ಟವಾಗುತ್ತದೆಂದು ಅವರನ್ನು ವೃದ್ಧಾಶ್ರಮಕ್ಕೆ ಸೇರಿಸುವ ಪರಿಪಾಟಿ ಬೆಳೆಯುತ್ತಿದೆ. ಹೆತ್ತವರು ತಮ್ಮ ಎಲ್ಲ ಹತ್ತು ಮಕ್ಕಳನ್ನು ಅಕ್ಕರೆಯಿಂದ, ಪ್ರೀತಿಯಿಂದ ಸಾಕಿ ಸಲಹಿ ದೊಡ್ಡವರನ್ನಾಗಿ ಮಾಡುತ್ತಾರೆ. ಆದರೆ ಹತ್ತು ಜನ ಮಕ್ಕಳಿಗೆ ತಮ್ಮ ಹೆತ್ತವರನ್ನು ನೋಡಿಕೊಳ್ಳಲು ಆಗದೆ ಇರುವುದು ನಿಜಕ್ಕೂ ದುರಂತದ ಸಂಗತಿ. ಇದಕ್ಕಿಂತ ಕೃತಘ್ನವಾದ ಕೆಲಸ ಪ್ರಪಂಚದಲ್ಲಿ ಬೇರೊಂದಿರಲಿಕ್ಕಿಲ್ಲ. ನಾವು ಇವತ್ತು ಪಾಶ್ಚಾತ್ಯರ ಸಂಸ್ಕೃತಿಯಿಂದ ಪ್ರಭಾವಿತರಾಗಿ ನಮ್ಮ ಮನೆಯಲ್ಲಿರುವ ವೃದ್ಧರನ್ನು, ವಿಧವೆಯರನ್ನು ಕಡೆಗಣಿಸುತ್ತಿದ್ದೇವೆ.
ಕುರುಡು ತಂದೆ-ತಾಯಿಯನ್ನು ಹೆಗಲ ಮೇಲೆ ಕೂರಿಸಿ ಶ್ರವಣಕುಮಾರನು ತೀರ್ಥಯಾತ್ರೆ ಮಾಡಿಸಿದ ದೇಶವಿದು. ವೃದ್ಧ ತಂದೆಯಾದ ಯಯಾತಿಗೆ ತನ್ನ ಯೌವನವನ್ನೆ ಧಾರೆ ಎರೆದ ಪುರೂರವನ ನಾಡಿದು. ಕುಂತಿ ವಿಧವೆಯಾದಳು ಎಂದು ಅವಳನ್ನು ಯಾರಾದರೂ ವಿಧವಾಶ್ರಮಕ್ಕೆ ಸೇರಿಸಿದರೆ? ಅವರ ಮಕ್ಕಳಾದ ಪಾಂಡವರು ಅವಳನ್ನು ಪ್ರೀತಿಯಿಂದ ನೋಡಿಕೊಳ್ಳಲಿಲ್ಲವೆ? ವರ್ಷಕ್ಕೊಮ್ಮೆ ಮಾತ್ರ ತಾಯಿಗೆ ಪ್ರೀತಿ ತೋರಿಸುವುದು ಭಾರತೀಯ ಸಂಸ್ಕೃತಿಯಲ್ಲ, ಬದಲಿಗೆ ಅದು ಪಾಶ್ಚಾತ್ಯ ಸಂಸ್ಕೃತಿ. ಆದ್ದರಿಂದಲೇ ಅಲ್ಲಿ ‘ಒoಣheಡಿ’s ಜಚಿಥಿ’ ಆಚರಣೆಯಲ್ಲಿದೆ.
ಸ್ತ್ರೀಯರನ್ನು ತಾಯಿಯಂತೆ ಗೌರವಿಸುವ ಈ ನಮ್ಮ ನಾಡಿನಲ್ಲಿ ಇಂದು ಕಾಮವನ್ನು ಪ್ರಚೋದಿಸುವ, ಪ್ರೇಮವನ್ನು ವೈಭವೀಕರಿಸುವ ಸೌಂದರ್ಯಸ್ಪರ್ಧೆ, ವಾಲೆಂಟೈನ್ಸ್ ಡೇ, ಉನ್ಮಾದವನ್ನು ಪ್ರದರ್ಶಿಸುವ ನ್ಯೂ ಯಿಯರ್ಸ್ ಡೇಯನ್ನು ಬಹಿರಂಗವಾಗಿ, ರಾಜಾರೋಷವಾಗಿ ಆಚರಿಸುತ್ತೇವೆ. ಇವೆಲ್ಲವೂ ಪಾಶ್ಚಾತ್ಯ ಸಂಸ್ಕೃತಿಯ ಮೂಲಕ ಭಾರತಕ್ಕೆ ಪಾದಾರ್ಪಣೆ ಮಾಡಿದ ಸಾಮಾಜಿಕ ಕೆಡುಕುಗಳು.
ಒಮ್ಮೆ ಫೆಮಿನಾ ‘ಮಿಸ್ ಇಂಡಿಯಾ’ ಸೌಂದರ್ಯಸ್ಪರ್ಧೆಯಲ್ಲಿ ಅರೆಬೆತ್ತಲೆ ತರುಣಿಯರು ಬೆಕ್ಕಿನ ನಡಿಗೆಯಿಂದ (cat walk) ದರ್ಶಕರ ಸಮ್ಮುಖದಲ್ಲಿ ಬಂದು ಹೋಗುವ ಸಮಯದಲ್ಲಿ ಟೇಪ್ರೆಕಾರ್ಡಿನ ಮೂಲಕ ವಿಷ್ಣುಸಹಸ್ರನಾಮದ ಶ್ಲೋಕಗಳನ್ನು ಈ ಕೀಳು ಕಾರ್ಯಕ್ರಮಕ್ಕಾಗಿ ಉಪಯೋಗಿಸಲಾಯಿತು. ಸೌಂದರ್ಯಸ್ಪರ್ಧೆಯ ಮೂಲಕ ಭಾರತೀಯರ ಭಾವನೆಗಳನ್ನು ಕೆಣಕಿದರೂ ನಮ್ಮವರಿಂದ ಪ್ರತಿಭಟನೆಯೇ ಬರಲಿಲ್ಲ.
ಹೊಸ ಮಾರಿ
ಈ ಎಲ್ಲ ಗೊಂದಲಗಳ ನಡುವೆ ಈಗ ದೇಶದಲ್ಲಿ ಹೊಸದೊಂದು ಆಚರಣೆಯ ಗಾಳಿ ಬೀಸುತ್ತಿದೆ. ಅದೇ ‘ಕಿಸ್ಸಿಂಗ್ ಡೇ’. ನೈತಿಕ ಪೊಲೀಸ್ಗಿರಿ ವಿರೋಧಿಸಲು ಫ್ರೀ ಥಿಂಕರ್ಸ್ ಎಂಬ ಸಂಘಟನೆಯೊಂದು ‘ಕಿಸ್ ಆಫ್ ಲವ್’ ಆಯೋಜಿಸುವ ಮೂಲಕ ವಿಶೇಷ ಪ್ರತಿಭಟನೆಯನ್ನು ರಾಷ್ಟ್ರದ ಪ್ರಮುಖ ನಗರಗಳಲ್ಲಿ ಹಮ್ಮಿಕೊಂಡಿದೆ. ಯುವ ಪ್ರೇಮಿಗಳು ತಬ್ಬಿಕೊಂಡು ಮುತ್ತಿನ ದಿನವನ್ನು ಯಶಸ್ವಿಗೊಳಿಸಬೇಕು ಎಂದು ಈ ಸಂಘಟನೆ ಕರೆಕೊಟ್ಟಿದೆ.
ಇಂತಹ ಅಸಭ್ಯ, ಅಶ್ಲೀಲ ವರ್ತನೆ ಸಂಘಟಕರ ವಿಕೃತ ಮನಸ್ಸನ್ನು ಎತ್ತಿತೋರಿಸುತ್ತದೆ. ಯುವಜನಾಂಗವನ್ನು ರಚನಾತ್ಮಕ ಕೆಲಸಗಳಲ್ಲಿ ತೊಡಗಿಸಬೇಕಾದ ಆಚರಣೆಗಳನ್ನು ಬಿಟ್ಟು ವಿಘಟನಾತ್ಮಕವಾದ, ಅನೈತಿಕವಾದ ಕೆಲಸಗಳಲ್ಲಿ ತೊಡಗಿಸಿ ಇಡೀ ದೇಶವನ್ನೇ ಅಧಃಪತನದತ್ತ ಒಯ್ಯುವ ಪ್ರಯತ್ನ ನಿಜಕ್ಕೂ ಬೇಸರದ ಸಂಗತಿ. ಹೀಗೆ ಒಂದು ಕಡೆ ಅರ್ಥವಿಲ್ಲದ, ಅನರ್ಥಕಾರಿಯಾದ ಆಚರಣೆಗಳನ್ನು ವಿಚಾರವಾದಿಗಳು ಬೆಂಬಲಿಸಿದರೆ, ಅರ್ಥಪೂರ್ಣವಾದ ಆಚರಣೆಗಳನ್ನು ವಿರೋಧಿಸುವ ಬುದ್ಧಿಜೀವಿಗಳು ಈ ದೇಶದಲ್ಲಿದ್ದಾರೆ.೧೯೯೮ರ ಸೆಪ್ಟೆಂಬರ್ ಇಪ್ಪತ್ತೆರಡರಂದು ದೆಹಲಿಯ ವಿಜ್ಞಾನಭವನದಲ್ಲಿದ್ದ ಶಿಕ್ಷಣಮಂತ್ರಿಗಳ ಸಮ್ಮೇಳನ ಜರುಗಿತು. ಆ ಸಮಯದಲ್ಲಿದ್ದ ಮಾನವಸಂಪನ್ಮೂಲ ಮಂತ್ರಿಯಾಗಿದ್ದ ಮುರಳಿ ಮನೋಹರ ಜೋಶಿ ಆ ಸಮ್ಮೇಳನದ ಸಂಯೋಜಕರಾಗಿದ್ದರು. ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸಮ್ಮೇಳನದ ಉದ್ಘಾಟನೆ ಮಾಡಿದರು. ಕರ್ನಾಟಕದ ಜೆ.ಎಚ್. ಪಟೇಲ್ರ ಮಂತ್ರಿಮಂಡಲದಲ್ಲಿ ಶಿಕ್ಷಣಸಚಿವರಾಗಿದ್ದ ಗೋವಿಂದೇಗೌಡರು ಕೂಡ ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಸಮಾರಂಭ ‘ಸರಸ್ವತೀ ವಂದನೆ’ಯೊಂದಿಗೆ ಪ್ರಾರಂಭವಾದ ಕೂಡಲೆ ಗೋವಿಂದೇಗೌಡರ ಸಮೇತ ಅನೇಕ ಶಿಕ್ಷಣಮಂತ್ರಿಗಳು ವಿರೋಧ ಮಾಡುತ್ತ ‘ಶಿಕ್ಷಣದ ಕೇಸರೀಕರಣ ಬೇಡ, ನಮಗೆ ಹಿಂದುತ್ವ ಬೇಡ’ ಎಂದು ಘೋಷಣೆ ಹಾಕಿ ಸರಸ್ವತಿ ವಂದನೆ ಕಾರ್ಯಕ್ರಮವನ್ನು ಬಹಿಷ್ಕರಿಸಿದರು. ಶಿಕ್ಷಣದ ಸಮ್ಮೇಳನದಲ್ಲಿ ವಿದ್ಯೆಯ ಅಧಿದೇವತೆಯಾದ ಸರಸ್ವತಿಯನ್ನು ಸ್ಮರಿಸದೆ, ವಂದಿಸದೆ ಬೇರೆ ಯಾರನ್ನು ವಂದಿಸುವುದು? ಒಮ್ಮೆ ಜವಾಹರಲಾಲ್ ನೆಹರುರವರು ವಿಶಾಖಪಟ್ಟಣದ ಬಂದರನ್ನು ತೆಂಗಿನಕಾಯಿ ಒಡೆದು ಉದ್ಘಾಟಿಸುವಾಗ ಕೆಲವು ಬುದ್ಧಿಜೀವಿಗಳಿಂದ ವಿರೋಧ ಬಂದಿತ್ತು. ಹೀಗೆ ನಮ್ಮ ಆಚರಣೆಗಳಲ್ಲಿ ಮತೀಯತೆಯನ್ನೂ ಮೂಢನಂಬಿಕೆಯನ್ನೂ, ಪಾಶ್ಚಾತ್ಯ ಆಚರಣೆಗಳಲ್ಲಿ ಜಾತ್ಯತೀತತೆಯನ್ನೂ ಸಾರ್ಥಕತೆಯನ್ನೂ ಕಾಣುವವರನ್ನು ಏನೆಂದು ಕರೆಯಬೇಕು?
ಇವತ್ತು ನಮ್ಮ ಆಟ, ಊಟ, ವೇಷಭೂಷಣ ಎಲ್ಲದರಲ್ಲಿಯೂ ಪಾಶ್ಚಾತ್ಯ ಪದ್ಧತಿ ನುಸುಳಿದೆ. ಯಾವುದೇ ಶುಭ ಸಮಾರಂಭ ಮುಗಿದ ಮೇಲೆ ಭೋಜನವನ್ನು ನಾವು ಹೇಗೆ ಸ್ವೀಕಾರ ಮಾಡುತ್ತೇವೆ? ಹೆಚ್ಚಿನ ಕಡೆ ಇಂದು ‘ಬುಫೆ’ ಪದ್ಧತಿಯಲ್ಲಿ ಊಟ ಮಾಡುತ್ತೇವೆ. ಒಂದು ಕೈಯಿಂದ ತಟ್ಟೆಯನ್ನು ಹಿಡಿದು ಇನ್ನೊಂದು ಕೈಯಿಂದ ಬಡಿಸಿಕೊಳ್ಳುತ್ತಾ ಅಥವಾ ತಿನ್ನುತ್ತಾ ತಿರುಗಾಡುತ್ತೇವೆ. ನಮ್ಮ ದೇಶದಲ್ಲಿ ಆಹಾರಸೇವನೆಯೂ ಒಂದು ಯಜ್ಞ. ‘ಅಹಂ ವೈಶ್ವಾನರೋ ಭೂತ್ವಾ ಪ್ರಾಣಿನಾಂ ದೇಹಮಾಶ್ರಿತಃ ಪ್ರಾಣಾಪಾನ ಸಮಾಯುಕ್ತಃ ಪಚಾಮ್ಯನ್ನಂ ಚತುರ್ವಿಧಂ’ – ಭಗವಂತನಾದ ನಾನೇ ವೈಶ್ವಾನರ ಅಗ್ನಿಯ ರೂಪದಲ್ಲಿ ಪ್ರಾಣಿಗಳ ಜಠರ ಆಶ್ರಯಿಸಿ ಪ್ರಾಣ, ಅಪಾನ ವಾಯುವಿನ ಜೊತೆಯಲ್ಲಿ ಸೇರಿ ನಾಲ್ಕು ರೀತಿಯ ವಿವಿಧ ಆಹಾರವನ್ನು ಪಚನಗೊಳಿಸುತ್ತೇನೆ – ಹೀಗೆ ಒಳಗಿರುವ ಭಗವಂತನಿಗೆ ಆಹಾರ ನೀಡಿ ಪೂಜಿಸುವ ಪದ್ಧತಿಯನ್ನು ತಿರುಗಾಡುತ್ತಾ ಮಾಡುವ ಬದಲು ಒಂದೇ ಕಡೆ ಕೂತು ಆತನನ್ನು ನೆನೆದು ಸೇವಿಸುವುದು ಉತ್ತಮ. ನೆಲದ ಮೇಲೆ ಕೂತು ಊಟ ಮಾಡುವುದು ನಮ್ಮ ಮನಸ್ಸಿಗೂ ಹಿತಕರವಾದುದು, ಆರೋಗ್ಯಕ್ಕೂ ಒಳ್ಳೆಯದು.
ನಾವು ನಮ್ಮತನವನ್ನೇ ಮರೆತು ಬದುಕಿದರೆ ಅದು ನೈಜಜೀವನವಾಗುವುದಿಲ್ಲ. ಬದಲಿಗೆ ಅದೊಂದು ನಕಲಿ ಜೀವನವಾಗುತ್ತದೆ. ಇಂದು ನಾವು ನುಡಿಯುವ ಛಾಯೆಯಲ್ಲೂ, ನಡೆಯುವ ನಡಿಗೆಯಲ್ಲೂ ಪಾಶ್ಚಾತ್ಯರ ಅನುಕರಣೆ ಎದ್ದುಕಾಣುತ್ತಿದೆ. ಪಾಶ್ಚಾತ್ಯರ ಸಂಪ್ರದಾಯವೆಲ್ಲ ನಿಕೃಷ್ಟವಾದದ್ದು, ಭಾರತೀಯರ ಸಂಪ್ರದಾಯವೆಲ್ಲವೂ ಶ್ರೇಷ್ಠವಾದದ್ದು ಎಂಬುದು ಇದರರ್ಥವಲ್ಲ. ಆದರೆ ಯಾವುದೇ ಆಚರಣೆಯಲ್ಲಿ, ಸಂಪ್ರದಾಯದಲ್ಲಿ ಜೊಳ್ಳೆಷ್ಟು, ಕಾಳೆಷ್ಟು ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಟೊಳ್ಳನ್ನು ಬಿಟ್ಟು, ಗಟ್ಟಿತನವನ್ನು ಹಿಡಿದುಕೊಳ್ಳಬೇಕು. ನಿರರ್ಥಕತೆಯ ಹಿಂದೆ ಬೀಳದೆ ಸಾರ್ಥಕತೆಯನ್ನು ಅನುಸರಿಸಬೇಕು. ನಮ್ಮ ಆಚರಣೆಗಳು ಅರ್ಥಪೂರ್ಣವಾಗಿರಲಿ. ಆವಾಗಲೇ ನಮ್ಮ ಜೀವನಕ್ಕೊಂದು ಅರ್ಥ ಬರುತ್ತದೆ.?