ಚುನಾವಣೆ ಪ್ರಕಟವಾಗುವುದಕ್ಕಿಂತ ಮೊದಲಿನ ಮಾತು; ನಾನು ದೇಶದ ಬೇರೆಬೇರೆ ಭಾಗಗಳಲ್ಲಿ ಬೇರೆಬೇರೆ ಸಂದರ್ಭಗಳಲ್ಲಿ ಮೊದಲಬಾರಿಗೆ ಮತದಾನ ಮಾಡುವವರು, ಎರಡನೇ ಸಲ ಮತದಾನ ಮಾಡುವವರು ಹಾಗೂ ಮೂರನೇ ಸಲ ಮತದಾನ ಮಾಡುವವರ ಜೊತೆಗೆ ಮಾತನಾಡುತ್ತಿರುವಾಗ, ಮೀಡಿಯಾ ಆಗಲಿ, ಪ್ರಚಾರ ಸಾಮಗ್ರಿಗಳಾಗಲಿ ಈ ವರ್ಗದ ಮತದಾರರ ಮೇಲೆ ಪ್ರಭಾವ ಬೀರುವುದರ ಸಾಧ್ಯತೆ ತುಂಬ ಕಡಮೆ ಎನ್ನುವ ಒಂದು ಕುತೂಹಲಕರ ಅಂಶ ನನ್ನ ಗಮನ ಸೆಳೆಯಿತು. ಮತದಾನ ಮಾಡುವಾಗ ತಾವು ಏನನ್ನು ಪರಿಗಣಿಸಬೇಕು, ಏನನ್ನು ಪರಿಗಣಿಸಬಾರದು ಎನ್ನುವುದರ ಬಗ್ಗೆ ಅವರಿಗೆ ಸ್ಪಷ್ಟವಾದ ಅಭಿಪ್ರಾಯವಿತ್ತು. ಎರಡನೆಯದಾಗಿ ಸುಳ್ಳುಗಳನ್ನು ಹೇಳಿ ಈ ವರ್ಗವನ್ನು ಒಪ್ಪಿಸಿಬಿಡುತ್ತೇವೆ ಎನ್ನುವುದೆಲ್ಲ ಬರಿಯ ಭ್ರಮೆ. ಈ ಹೊಸ ತಲೆಮಾರಿನ ಮತದಾರರು ಈ ರೀತಿಯ ಸುಳ್ಳುಗಳನ್ನಾಗಲಿ, ಕಟ್ಟುಕತೆಗಳನ್ನಾಗಲಿ ಒಪ್ಪಿಕೊಳ್ಳುವುದಕ್ಕೆ ಸಿದ್ಧರಿಲ್ಲ. ರಾಫೆಲ್ ಹಗರಣದಿಂದ ಹಿಡಿದು, ಈಗ ‘ಚೌಕಿದಾರ್ ಚೋರ್ ಹೈ’ವರೆಗಿನ ಸ್ಲೋಗನ್ಗಳ ಬಗ್ಗೆ ‘ಈ ಕಥೆಗಳನ್ನೆಲ್ಲ ನಾವು ಕೇಳುವುದಿಲ್ಲ’ ಎನ್ನುವ ಸ್ಪಷ್ಟ ನಿರ್ಧಾರವನ್ನು ಅವರು ತಳೆದಿದ್ದರು. ‘ನೀವು ಟಿವಿಯಲ್ಲಾದರೂ ಪ್ರದರ್ಶಿಸಿ, ಮಾಧ್ಯಮದಲ್ಲಾದರೂ ಬರೆದುಕೊಳ್ಳಿ; ನಮಗೆ ಆ ಬಗ್ಗೆ ಸ್ಪಷ್ಟತೆ ಇದೆ’ ಎನ್ನುವುದು ಅವರ ಸ್ಪಷ್ಟ ವಿಚಾರವಾಗಿತ್ತು. ಈ ಮತದಾರರಿಗೆ ಯಾವುದು ಸುಳ್ಳುಸುದ್ದಿ, ಯಾವುದು ವಾಸ್ತವ ಎಂದು ಗುರುತಿಸುವ ಶಕ್ತಿ ಇರುವುದಂತೂ ಸತ್ಯ.
ಈ ಚುನಾವಣೆಯಲ್ಲಿ ಗಮನಿಸಬಹುದಾದ ಪ್ರಮುಖ ಸಂಗತಿ ಎಂದರೆ ಇಲ್ಲಿಯ ವರೆಗಿನ ಜಾತಿ ಲೆಕ್ಕಾಚಾರ, ಪರಿಶಿಷ್ಠ ಜಾತಿ-ಪಂಗಡ, ಆ ಧರ್ಮ, ಈ ಧರ್ಮ, ಅಸಹಿಷ್ಣುತೆ – ಇಂತಹ ಕಥೆಗಳೆಲ್ಲ ಅವರ ದೃಷ್ಟಿಯಲ್ಲಿ ನಂಬಲು ಅನರ್ಹವಾಗಿದ್ದವು; ಅವೆಲ್ಲ ವಾಸ್ತವದಲ್ಲಿ ಒಪ್ಪಲಾಗದ್ದು. ಉದಾಹರಣೆಗೆ ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ ಭಾರತದಲ್ಲಿ ಘಟಿಸಿರುವ ಅಪರಾಧದ ಕುರಿತು ಮಾತನಾಡಿದರೆ, ಈ ಮತದಾರರು ಕಳೆದ ಎಪ್ಪತ್ತು ವರ್ಷದಲ್ಲಿ ನಡೆದ ಅಂತಹ ಘಟನೆಗಳ ಬಗ್ಗೆ ಹೇಳತೊಡಗುತ್ತಾರೆ. ಇವರ ಪ್ರಕಾರ ನಮ್ಮ ದೇಶದ ರಾಜಕೀಯದಲ್ಲಿ ಜಾತಿ ಎನ್ನುವುದು ಒಂದು ಚಿಕ್ಕ ಅಂಶವೇ ಹೊರತು, ಅದು ರಾಜಕೀಯವನ್ನು ಮುನ್ನಡೆಸುವ ಚಾಲಕಶಕ್ತಿ ಅಲ್ಲ ಎಂದು ಬಹಳ ಸ್ಪಷ್ಟ ಅಭಿಪ್ರಾಯವನ್ನು ಅವರು ಹೊಂದಿದ್ದಾರೆ. ಈ ಚರ್ಚೆಯ ಆಚೆಗೆ ಅವರು ಬಹಳ ಗಂಭೀರವಾಗಿ ವಾಸ್ತವದ ಕುರಿತಾಗಿ ಸಾಕಷ್ಟು ಪ್ರಶ್ನಿಸುತ್ತಿದ್ದರು. ಒಂದುಸಾರಿ ಈ ದೊಡ್ಡ ವಿಷಯಗಳನ್ನೆಲ್ಲ ಬದಿಗಿಟ್ಟು ಬಿಡೋಣ. ನಮಗೆ ತಿಳಿದಿರುವಂತೆ ಈಗಿನ ಮತದಾರರು ಸ್ಮಾರ್ಟ್ಫೋನ್ ಹೋಲ್ಡರ್ಸ್. ಎಲ್ಲರ ಕೈಯಲ್ಲೂ ಸ್ಮಾರ್ಟ್ಫೋನ್ ಇರುತ್ತದೆ; 2014ರಲ್ಲಿ ಈ ಸರ್ಕಾರ ಅಧಿಕಾರಕ್ಕೆ ಬಂದಾಗ ತೊಗರಿಬೇಳೆ ಒಂದು ಕೆಜಿಗೆ ನೂರಾತೊಂಬತ್ತು ರೂ. ಇತ್ತು. ಈಗ ಅದು ತೊಂಬತ್ತು ಆಗಿದೆ; 2014ನೇ ಇಸವಿಯಲ್ಲಿದ್ದ ಪೆಟ್ರೋಲ್ ದರಕ್ಕೂ, 2019ರಲ್ಲಿ ಈಗ ಇರುವ ಪೆಟ್ರೋಲ್ ದರಕ್ಕೂ ವ್ಯತ್ಯಾಸ ಏನು? – ಈ ಸಂಗತಿಗಳಿಗೆ ಸಂಬಂಧಪಟ್ಟ ಎಲ್ಲವನ್ನೂ ಸ್ಮಾರ್ಟ್ಫೋನ್ನಲ್ಲಿ ಪಡೆದುಕೊಳ್ಳುತ್ತಾರೆ. ಯಾರು ಯಾರಿಗೆ ಏನೇನು ಹೇಳಿದ್ದಾರೆ, ಯಾರು ಯಾರು ಏನೇನು ಬರೆದಿದ್ದಾರೆ ಎನ್ನುವುದನ್ನು ನೋಡಿಕೊಳ್ಳಬಲ್ಲ ಮತದಾರರು ಇವರು ಮತ್ತು ಈ ಕಾರಣಗಳಿಂದಾಗಿಯೇ ಅನೇಕ ವಿಷಯಗಳ ಬಗ್ಗೆ ಇವರು ಸ್ಪಷ್ಟ ಅಭಿಪ್ರಾಯಕ್ಕೆ ಬಂದುಬಿಟ್ಟಿದ್ದರು.
ಇದಕ್ಕೂ ಹೆಚ್ಚಾಗಿ ಗಮನಿಸಬಹುದಾದ ಒಂದು ಪ್ರಮುಖ ಸಂಗತಿ ಏನೆಂದರೆ 2019ರ ಲೋಕಸಭಾಚುನಾವಣೆಯಲ್ಲಿ ಎರಡು ಗುಂಪುಗಳು ಪರಸ್ಪರ ವಿರುದ್ಧವಾಗಿ ಕಾರ್ಯಪ್ರವೃತ್ತವಾಗಿದ್ದು, ಈ ಚುನಾವಣೆ ದ್ವಿಮುಖಿಯೇ (ಬೈಪೊಲಾರ್) ವಿನಾ ಬಹುಮುಖಿ (ಮಲ್ಟಿಪೊಲಾರ್) ಅಲ್ಲ ಎನ್ನುವಂತೆ ಅನೇಕರು ಚರ್ಚಿಸಿದ್ದನ್ನು ನಾವು ನೋಡಿದ್ದೇವೆ. ಈ ಚರ್ಚೆಗಳ ನಡುವೆ ನಮ್ಮ ಯುವ ಮತದಾರರು ಈ ಎರಡು ಗುಂಪುಗಳಲ್ಲಿ ಯಾರು ಯಾವಾವ ಗುಂಪಿನ ಜೊತೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ, ಯಾಕೆ ಮಾಡಿಕೊಂಡಿದ್ದಾರೆ, ಅವರಿಬ್ಬರಲ್ಲಿರುವ ಸಾಮಾನ್ಯ ಅಂಶಗಳೇನು, ಅವರಿಬ್ಬರೂ ಯಾಕೆ ಒಟ್ಟಿಗೆ ಬರುತ್ತಿದ್ದಾರೆ ಎನ್ನುವ ರೀತಿಯ ಪ್ರಶ್ನೆಗಳನ್ನು ಕೇಳುತ್ತಿದ್ದರು. ಇದರರ್ಥ ಈಗ ಬರುತ್ತಿರುವ ಹೊಸ ಮತದಾರರು, ಭಾರತದಲ್ಲಿ 2024ರ ಚುನಾವಣೆಯ ಹೊತ್ತಿಗೆ ಹೊಸದಾಗಿ ಮತದಾರಪಟ್ಟಿಗೆ ಸೇರುವ ಇನ್ನೂ ಒಂದು ಐದಾರು ಕೋಟಿ ಮತದಾರರು ನಮ್ಮ ದೇಶದ ರಾಜಕೀಯ ಪಕ್ಷಗಳ ಮನೋಭಾವವನ್ನು ಬದಲಿಸುವಲ್ಲಿ ನಿರ್ಣಾಯಕಪಾತ್ರ ವಹಿಸುತ್ತಾರೆ.
ಅಂದರೆ ಯಾವುದೇ ಒಂದು ರಾಜಕೀಯ ಪಕ್ಷ, ಈ ವರ್ಗದವರು ಏನು ಮಾತನಾಡುತ್ತಿದ್ದಾರೆ, ಅವರ ಅಂತರಂಗದಲ್ಲಿ ಏನಿದೆ ಎನ್ನುವುದನ್ನು ಸರಿಯಾಗಿ ಗಮನಿಸದೆ ಹೋದರೆ ಖಂಡಿತವಾಗಿಯೂ ನಿರ್ನಾಮ ಹೊಂದುತ್ತಾರೆ. ಸದ್ಯಃ ತಾತ್ಕಾಲಿಕವಾಗಿ ಕೆಲವರು ರಾಜಕೀಯ ಅಧಿಕಾರವನ್ನು ಪಡೆಯಬಹುದೇ ವಿನಾ ಯಾವುದೇ ರಾಜಕೀಯ ಪಕ್ಷದವರು ಈ ಮನೋಭಾವವನ್ನೇ ಮುಂದುವರಿಸಿದಲ್ಲಿ ಅದು ಅವರ ವಿನಾಶಕ್ಕೆ ಹಾದಿಯೇ. ಯಾಕೆಂದರೆ ಈ ಪೀಳಿಗೆಗೆ ಚೆನ್ನಾಗಿ ಓದಲು ಬರುವುದಲ್ಲದೆ, ತಂತ್ರಜ್ಞಾನವೂ ಅವರ ಕೈಯಲ್ಲೇ ಇದೆ.
ನಾವು ಯುವಕರಾಗಿದ್ದಾಗ ಇದ್ದಂತಹ ‘ನಮಗೆ ಒಂದು ಕೆಲಸ ಸಿಕ್ಕಿದರೆ ಸಾಕು, ಕೈಗೆ ಜೇಬಿಗೆ ನಾಲ್ಕಾಣೆ ಇದ್ದರೆ ಸಾಕು’ ಎನ್ನುವ ಸ್ಥಿತಿಯ ಮತದಾರರು ಇವರಲ್ಲ; ಅಂತಹ ಪ್ರಶ್ನೆಗಳು ಈ ಪೀಳಿಗೆಯನ್ನು ಕಾಡುತ್ತಿಲ್ಲ ಎನ್ನುವುದು ನನ್ನ ವಾದವಲ್ಲ, ಅರ್ಥಾತ್ ಆ ಸಮಸ್ಯೆಗಳೆಲ್ಲ ಅವರ ಮುಂದೆ ತಮ್ಮ ಪ್ರತಿನಿಧಿಯ ಆಯ್ಕೆಯ ಮಾನದಂಡವಲ್ಲವೆಂಬುದು ತಥ್ಯ. ಇವರನ್ನು ಕಾಡುತ್ತಿರುವುದು ‘ನಾವು ಯಾರು, ನಮ್ಮ ಅಸ್ತಿತ್ವವೇನು, ಈ ಜಗತ್ತಿನಲ್ಲಿ ನಮ್ಮ ಸ್ಥಾನವೇನು?’ – ಇಂತಹ ಭಿನ್ನವಾದ ಪ್ರಶ್ನೆಗಳು. ಇದಕ್ಕೆ ಉದಾಹರಣೆಯಾಗಿ ಹೇಳಬೇಕೆಂದರೆ, ನಿರುದ್ಯೋಗ ಸಮಸ್ಯೆ ಕುರಿತ ಚರ್ಚೆ ಬಗ್ಗೆ ಮಾತನಾಡಿದರೆ ಅವರು ‘ನಿರುದ್ಯೋಗ ಎಲ್ಲ ದೇಶಗಳಲ್ಲೂ ಇದೆಯಲ್ಲವೇ? ಜಾಗತಿಕವಾಗಿ ಅಂಕಿ-ಅಂಶದಲ್ಲಿ ಭಾರತದ ಸ್ಥಿತಿಯೇನೂ ಕಳಪೆಯಲ್ಲ’ ಎಂದು ಮಾತನಾಡುವ ಯುವಕರು ಹೆಚ್ಚಾಗಿದ್ದಾರೆ. ಈ ರೀತಿಯ ಮಾತುಗಳಾಚೆಗೆ ಈಗ ನಾವು ನಮ್ಮ ದೇಶವನ್ನು ಕಟ್ಟುವುದಕ್ಕೆ ಏನು ಮಾಡಬೇಕು, ಸ್ವಂತವಾಗಿ ದುಡಿಯುವುದಕ್ಕೆ ಏನು ಮಾಡಬೇಕು, ಸಬ್ಸಿಡಿ ಯಾಕೆ ನೀಡುತ್ತೀರಿ ಎನ್ನುವ ಪ್ರಶ್ನೆ ಅವರದು. ಈ ಪ್ರಶ್ನೆ ಹರಿಜನ-ಗಿರಿಜನ, ಮೇಲುವರ್ಗ, ಓಬಿಸಿ ಇವರೆಲ್ಲರಿಂದಲೂ ಕೇಳಬರುತ್ತಿದೆ; ಇವರೆಲ್ಲರೂ ಈ ಒಂದು ಬಗೆಯ ಚಿಂತನಮಾರ್ಗವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದನ್ನು ನಮ್ಮ ರಾಜಕೀಯಪಕ್ಷಗಳು ಇನ್ನೂ ಗುರುತಿಸಿದಂತೆ ಕಾಣುತ್ತಿಲ್ಲ ಎನ್ನುವುದು ನನ್ನ ಅನಿಸಿಕೆ.
2019ರ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಮನೋಭಾವ ಹೇಗಿತ್ತು?
ಸದ್ಯಃ ರಾಜಕೀಯ ಪಕ್ಷಗಳನ್ನು ಒಂದು ಬಗೆಯ ದ್ವಂದ್ವ ಕಾಡುತ್ತಿದೆ. ಉದಾಹರಣೆಗೆ ಕಾಂಗ್ರೆಸ್ ಅಥವಾ ಸ್ಥಳೀಯ ಪಕ್ಷಗಳು ಏನು ಮಾಡುತ್ತಿದ್ದಾರೆ ಎಂದರೆ ಸ್ಥಳೀಯವಾಗಿ ಅಲ್ಲಿರುವ ಯಾವುದೋ ಒಂದು ಜಾತಿ ಅಥವಾ ಗುಂಪನ್ನು ಓಲೈಸಲು ಪ್ರಯತ್ನಿಸುತ್ತಿದ್ದಾರೆ. ಉದಾಹರಣೆಗೆ ಕರ್ನಾಟಕದಲ್ಲೇ, ಶಿವರಾಮೇಗೌಡ ವರ್ಸಸ್ ಸುಮಲತಾ ಅವರ ಚುನಾವಣಾ ಪ್ರಚಾರದ ಸಂದರ್ಭವನ್ನೇ ಗಮನಿಸಿದರೆ, ಸುಮಲತಾ ಗೌಡ್ತೀನಾ, ನಾಯ್ಡುನಾ ಎನ್ನುವ ಪ್ರಶ್ನೆಯನ್ನು ಎತ್ತತೊಡಗಿದರು. ಈ ಪ್ರಶ್ನೆಯಿಂದ ಮಂಡ್ಯದ ಅರ್ಧಕ್ಕರ್ಧ ಒಕ್ಕಲಿಗರಿಗೆ ಬೇಸರ ಉಂಟಾಯಿತು. ಅದೇ ರೀತಿ ಈ ‘ಅಹಿಂದಾ’ ಚರ್ಚೆ ಕೂಡ. ಈ ಚರ್ಚೆಗಳನ್ನು ನೋಡಿದ ಜನ ‘ಅಹಿಂದಾದವರನ್ನು ಬಿಟ್ಟು ಉಳಿದವರು ಮನುಷ್ಯರಲ್ಲವೇ?’ ಎಂದು ಪ್ರಶ್ನಿಸತೊಡಗಿದ್ದಾರೆ. ಹಾಗೆ ನೋಡಿದರೆ ಸಿದ್ದರಾಮಯ್ಯನವರೇ ಈ ಚುನಾವಣೆಯಲ್ಲಿ ಅಹಿಂದಾದ ಬಗ್ಗೆ ಮಾತನಾಡುವುದನ್ನು ಬಿಟ್ಟಂತೆ ಕಾಣುತ್ತದೆ.
ನಮ್ಮಲ್ಲಿ ಇಂದು ರಾಜಕೀಯವಲಯದಲ್ಲಿ ಎರಡುರೀತಿಯ ಮನೋಭಾವಗಳಿವೆ. ಉದಾಹರಣೆಗೆ ಭಾಜಪದಂತಹ ಪಕ್ಷವನ್ನು ತೆಗೆದುಕೊಳ್ಳೋಣ. ಇಲ್ಲಿ ಒಂದಷ್ಟು ಜನ ಅಭಿವೃದ್ಧಿಯ ಪರವಾಗಿ ಮಾತನಾಡುತ್ತಾರೆ; ಒಂದಷ್ಟು ಜನ ಇನ್ನೂ ಹಳೆತಲೆಮಾರಿನ ಲೆಕ್ಕಾಚಾರದಲ್ಲೇ ಇದ್ದಾರೆ. ಇದ್ದದ್ದರಲ್ಲಿ ಮುಕ್ತವಾಗಿ ಹಿಂದಿನ ಸೋಶಿಯಲಿಸ್ಟ್ ಮನೋಭಾವ ಬಿಟ್ಟು ಹೊಸತನಕ್ಕೆ ತನ್ನನ್ನು ತೆರೆದುಕೊಂಡಿರುವುದು ಬಿಜೆಪಿ ಮತ್ತು ಬಿಜೆಪಿ ತರಹÀದ ಪಕ್ಷಗಳು ಎಂದು ಹೇಳಬಹುದು. ಆಮ್ ಆದ್ಮಿ ಪಕ್ಷ ಏನೋ ಒಂದು ಹೊಸಬಗೆಯ ಚಿಂತನೆಗಳಿಗೆ ತಮ್ಮನ್ನು ತೆರೆದುಕೊಂಡಿತ್ತು. ದುರದೃಷ್ಟವಶಾತ್ ಈ ತರಹದ ಪಕ್ಷದವರೂ ದಾರಿತಪ್ಪಿದರು. ಹಾಗೆ ದಾರಿತಪ್ಪದೇ ಹೋದರೆ ಈ ಬಗೆಯ ಚಿಂತನೆಗಳಿದ್ದ ಪಕ್ಷದವರು ಯುವಪೀಳಿಗೆಯ ಮತದಾರರನ್ನು ಆಕರ್ಷಿಸುತ್ತಾರೆ. ಹೀಗೆ ಇಂದಿನ ಜಗತ್ತಿನ ಮುಂದಿನ ಸವಾಲುಗಳಿಗೆ ಮುಕ್ತವಾಗಿ ತಮ್ಮನ್ನು ತೆರೆದುಕೊಂಡ ಪಕ್ಷಗಳು ಹೊಸತಲೆಮಾರಿನ ಮತದಾರರನ್ನು ಆಕರ್ಷಿಸುತ್ತಿವೆ. ಹಾಗೆಯೇ ಕೆಲವು ಹಳೆಯ ವಿಚಾರಗಳು ಈಗ ಅಷ್ಟೇನು ಮುಖ್ಯವೆನಿಸುತ್ತಿಲ್ಲ. ಉದಾಹರಣೆಗೆ ಕುಟುಂಬರಾಜಕಾರಣದ ಕುರಿತಾಗಿ ಚರ್ಚೆ ನಡೆಯುತ್ತದೆ. ಯುವ ಮತದಾರರಿಗೆ ಅವೆಲ್ಲ ಗಂಭೀರ ವಿಚಾರಗಳಾಗಿರುವಂತೆ ಕಾಣುವುದಿಲ್ಲ. ಅಥವಾ ಚುನಾವಣೆಯ ಸಂದರ್ಭದಲ್ಲಿ ಇನ್ನಾವುದೋ ಲೈಂಗಿಕ ಹಗರಣ ಎಬ್ಬಿಸಿಬಿಟ್ಟರೆ ಜನ ಅವರನ್ನು ಸೋಲಿಸಿಬಿಡುತ್ತಾರೆ, ಅದು ಗಂಭೀರ ಪರಿಣಾಮ ಬೀರುತ್ತದೆ ಮುಂತಾದವೆಲ್ಲ ಈ ಚುನಾವಣೆಯ ಮಟ್ಟಿಗೆ ಕಾಣಿಸಿಲ್ಲ.
ಮೋದಿ ಅಲೆ ಎಂದರೆ ಏನದು?
‘ಮೋದಿ ಅಲೆ’ ಒಂದು ಬಗೆಯ ವಿಚಿತ್ರ ಸನ್ನಿವೇಶ ಎನ್ನಬಹುದು. ಬಿಜೆಪಿಯವರ ಚುನಾವಣಾಪ್ರಚಾರದ ರೀತಿ ಗಮನಿಸಿದರೆ ಮೋದಿಯೊಬ್ಬರನ್ನೇ ನೋಡಿ ಮತಹಾಕಿ ಎನ್ನುವಂತೆ ಇದೆ. ಆದರೆ ನಿಜಾರ್ಥದಲ್ಲಿ ಮತದಾರರು ಅದಕ್ಕೆ ಪ್ರತಿಕ್ರಿಯಿಸುವ ರೀತಿ ಬೇರೆಯೇ ಬಗೆಯದಾಗಿದೆ. ಅವರಿಗೆ ರಾಜಕೀಯಕ್ಷೇತ್ರದ ಕುರಿತು ಒಂದಷ್ಟು ನಿರೀಕ್ಷೆಗಳಿವೆ. ಇಲ್ಲಿ ಮೋದಿ ಒಂದು ವೈಯಕ್ತಿಕ ವ್ಯಕ್ತಿ ಎನ್ನುವುದಕ್ಕಿಂತ ಜನರಿಗೆ ಏನೊಂದು ನಿರೀಕ್ಷೆಗಳಿವೆಯಲ್ಲ: ನಮ್ಮ ದೇಶ ಅಂದರೆ ಹೀಗಿರಬೇಕು, ನಮ್ಮ ದೇಶದ ಸುಭದ್ರತೆ ಹೀಗಿರಬೇಕು, ದೇಶದ ವ್ಯವಸ್ಥೆಗಳು ಹೀಗಿರಬೇಕು ಎನ್ನುವ ಕನಸಿದೆಯಲ್ಲ; – ಆ ರೀತಿಯ ಕನಸುಗಳ ಧ್ವನಿ ಮೋದಿ ಎನ್ನಬಹುದು. ಅಂದರೆ ಮೋದಿ ಈ ಕನಸುಗಳ ಪ್ರವರ್ತಕರೆನ್ನಬಹುದು. ಆ ಕಾರಣಕ್ಕೇ ಮತದಾರರಿಗೆ ಮೋದಿಯ ಜೊತೆ ಆಪ್ತತೆಯುಂಟಾಗಿರುವುದು.
ಮೋದಿಯವರಿಗೆ ಮಕ್ಕಳುಮರಿಯಿಲ್ಲ, ಭ್ರಷ್ಟಾಚಾರಿಯಲ್ಲ. ಮತದಾರನ ಕನಸನ್ನೆಲ್ಲ ಪೂರೈಸುತ್ತಾರೋ ಬಿಡುತ್ತಾರೋ ಅದು ಬೇರೆ. ಮತದಾರರ ಕಲ್ಪನೆಯಲ್ಲಿ ಮೋದಿ ತಮ್ಮ ದೇಶಕ್ಕೊಬ್ಬ ನಾಯಕ ಹೇಗಿರಬೇಕು ಎನ್ನುವುದರ ಪ್ರತೀಕ ಬಿಜೆಪಿ, ಮೋದಿ ತರಹದ ವಿಚಾರಗಳು ಅವರ ವಿಚಾರದ ಪ್ರತೀಕ. ಶುದ್ಧ, ನಿಷ್ಕಳಂಕ ವ್ಯಕ್ತಿ ರಾಜಕೀಯಕ್ಷೇತ್ರದಲ್ಲಿ ಇರಬೇಕು ಎನ್ನುವ ಜನರ ಕಲ್ಪನೆಗೆ ಮೋದಿ ಪ್ರತಿನಿಧಿಯಾಗಿದ್ದಾರೆ. ಅಂತಹ ವ್ಯಕ್ತಿಗಳನ್ನು ಪಕ್ಷದವರು ಹೆಚ್ಚಿಸುವುದು ಹೇಗೆ, ಈ ಬಗೆಯ ವ್ಯಕ್ತಿಗಳನ್ನು ರಾಜಕೀಯಕ್ಕೆ ತರುವುದು ಹೇಗೆ? ಜನರಿಗೆ ಯಾವುದು ಮಹತ್ತ್ವಾಕಾಂಕ್ಷೆ, ಯಾವುದು ಅಲ್ಲ? – ಇದರ ವ್ಯತ್ಯಾಸವನ್ನು ತಿಳಿದುಕೊಳ್ಳುವುದಕ್ಕೆ ಮೋದಿಯವರ ಹಿಂದೆ ಜನ ಹೋಗುವುದನ್ನು ನೋಡಿ ನಾವು ಕಲಿಯಬೇಕಾಗಿದೆ.
ಉದಾಹರಣೆಗೆ ಮೋದಿಯವರು ಜಿಎಸ್ಟಿ ತಂದರು, ನಗದು ಅಪಮೌಲ್ಯೀಕರಣ ಮಾಡಿದರು; ಇದೆಲ್ಲದರಿಂದ ಜನರಿಗೆ ಸಾಕಷ್ಟು ತೊಂದರೆ ಆಗಿದೆ. ಆದರೂ ನಮ್ಮ ದೇಶಕ್ಕೆ ಒಳ್ಳೆಯದಾಗಬೇಕೆಂದರೆ ಇವನ್ನೆಲ್ಲ ನಾವು ಸಹಿಸಲೇಬೇಕು, ನಮ್ಮ ಹಾಗೂ ನಮ್ಮ ಮಕ್ಕಳ ಭವಿಷ್ಯಕ್ಕೆ ನಾವು ಇದನ್ನು ಸಹಿಸುತ್ತೇವೆ ಎನ್ನುವ ಮಟ್ಟಕ್ಕೆ ಜನರು ಮಾತನಾಡುತ್ತಾರೆ ಎಂದರೆ ಮೋದಿ ಒಬ್ಬ ವ್ಯಕ್ತಿಯಾಗಿ ಅಲ್ಲ, ಜನರ ಮಹತ್ತ್ವಾಕಾಂಕ್ಷೆಯ ಪ್ರತೀಕವಾಗಿದ್ದಾರೆ ಎಂದು ಅನಿಸುತ್ತಿದೆ. ಮೋದಿ ಇದರಿಂದ ಭಿನ್ನವಾಗಿಬಿಟ್ಟರೆ ಒಂದೇ ವಾರದಲ್ಲಿ ಅವರನ್ನು ಹಿಂದಕ್ಕೆ ಇದೇ ಮತದಾರರು ತಳ್ಳಿಬಿಡುತ್ತಾರೆ; ಮುಂದಿನ ಚುನಾವಣೆ ಎನ್ನುವುದೇ ಅವರ ಪಾಲಿಗೆ ಇರಲಾರದು.
ಇಲ್ಲಿಯವರೆಗೆ ಮೋದಿ ಅಂದರೆ ಒಬ್ಬ ರಾಜಕೀಯ ನಾಯಕ; ನಮ್ಮ ಪ್ರತಿನಿಧಿ ಹೀಗಿರಬೇಕು ಎನ್ನುವ ಜನರ ಕಲ್ಪನೆಯ ನಾಯಕನಾಗಿ ಹೊರಹೊಮ್ಮಿದ್ದಾರೆ. ಬಹಳಷ್ಟು ಜನ ಇದೇನು ಪರ್ಸನಲೈಸ್ ಮಾಡುತ್ತಿದ್ದಾರೆ, ಇನ್ನೇನೋ ಮಾಡುತ್ತಿದ್ದಾರೆ ಎಂದು ಮಾತನಾಡುವುದಕ್ಕಿಂತ ಮೊದಲು, ಅವರು ಜನರಲ್ಲಿ ಏನನ್ನು ಸೆರೆಹಿಡಿಯುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎನ್ನುವ ಕುರಿತು ಯೋಚಿಸುವುದು ರಾಜಕೀಯಕ್ಕೆ ಹೆಚ್ಚು ಪ್ರಯೋಜನಕರ. ಯಾಕೆಂದರೆ ರಾಜಕೀಯದಲ್ಲಿ ಯಾವ ಬಗೆಯ ನಾಯಕತ್ವ ಬೇಕು, ಯಾವ ಬಗೆಯ ನಾಯಕತ್ವವನ್ನು ಜನ ನಿರೀಕ್ಷಿಸುತ್ತಿದ್ದಾರೆ ಎನ್ನುವುದಕ್ಕೆ ಮೋದಿ ಒಂದು ಉದಾಹರಣೆಯಾಗಿ ಕಾಣಿಸುತ್ತಿದ್ದಾರೆ. ಮೋದಿ ಯಾಕೆ ಹಾಗಿದ್ದಾರೆ ಎನ್ನುವುದನ್ನು ಶೋಧಿಸಬೇಕು; ತಿಳಿದುಕೊಳ್ಳಲು, ಪತ್ತೆಹಚ್ಚಲು ಪ್ರಯತ್ನಿಸಿಬೇಕು. ಒಂದಂತೂ ನಿಜ, ಅವರನ್ನು ನೋಡಿದಾಗ ರಾಜಕೀಯವೆಂದರೆ ಹೀಗಿರಬೇಕು, ಅದರಲ್ಲಿ ಇಂಥವರಿರಬೇಕು ಎನ್ನುವುದನ್ನು ಜನ ಮನಸ್ಸಿನಲ್ಲಿ ಏನೋ ಒಂದಷ್ಟನ್ನು ಇಟ್ಟುಕೊಂಡಿದ್ದಾರೆ ಎನ್ನುವ ಮಾತು ಅರಿವಾಗುತ್ತದೆ.
‘ಮೋದಿ ಫ್ಯಾಕ್ಟರ್’ ಕೆಲಸಮಾಡಲು ಕಾರಣಗಳೇನು?
ಇದಕ್ಕೆ ಬೇರೆ ಬೇರೆ ಅಂಶಗಳಿವೆ. ಬಿಜೆಪಿಯವರು ಜನರ ಬಳಿ ಮಾತನಾಡುವಾಗ ಕಂಡುಬಂದ ಒಂದು ಅಂಶವೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ದೇಶದ ಮಾನ, ಮರ್ಯಾದೆ, ಸ್ಥಾನ ಇವು ಮೇಲು-ಮಧ್ಯಮವರ್ಗ, ನೌಕರವರ್ಗಕ್ಕೆ ಮುಖ್ಯವಾಗಿ ಕಾಣಿಸಿದರೆ, ಇನ್ನೊಂದಷ್ಟು ಜನರಿಗೆ ಹಣದುಬ್ಬರ ನಿಯಂತ್ರಣದಲ್ಲಿರುವುದು, ಬೆಲೆ ನಿಯಂತ್ರಣದಲ್ಲಿರುವುದು ಮುಖ್ಯವಾಗಿ ಕಾಣುತ್ತಿದೆ. ರಸ್ತೆ, ಮೂಲಭೂತಸೌಕರ್ಯ, ಇವಕ್ಕೆ ಸಂಬಂಧಪಟ್ಟ ಹಾಗೆ ಬಿಜೆಪಿ ಒಂದು ರಾಜಕೀಯ ಪಕ್ಷವಾದರೂ, ಉದಾಹರಣೆಗೆ ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರವಿದ್ದಾಗ ಅವರ ಕಚ್ಚಾಟ ಏನೇ ಇದ್ದರೂ, ಒಂದಷ್ಟು ಅಭಿವೃದ್ಧಿ ಚಟುವಟಿಕೆಗಳು ನಡೆದಿವೆ ಎನ್ನುವ ಒಂದು ಭಾವನೆ ಜನರ ಮನದಲ್ಲಿದೆ; ಅಂದರೆ ಜನರ ಅಭಿಪ್ರಾಯದಲ್ಲಿ ಬಿಜೆಪಿ ಮತ್ತು ಮೋದಿ ಅಭಿವೃದ್ಧಿಯ ಪರವಾಗಿದ್ದಾರೆ, ಜನಗಳ ಪರವಾಗಿ ಇರುತ್ತಾರೆ ಎನ್ನುವ ಭಾವನೆ ಇದೆ.
ಬಿಜೆಪಿ ಒಂದು ಹಂತಕ್ಕೆ ಇಂತಹ ಭಾವನೆಯನ್ನು ನಿರ್ವಹಿಸಿಕೊಂಡು ಬಂದಿದೆ. ಇದನ್ನು ಕೌಂಟರ್ ಮಾಡಬೇಕೆಂದರೆ, ಸಬ್ಸಿಡಿ ಕೊಡುತ್ತೇವೆ, ನಿರುದ್ಯೋಗಿಗಳಿಗೆ ಭತ್ಯೆ ಕೊಡುತ್ತೇವೆ, ‘ವರ್ಷಕ್ಕೆ ಮೂರು ಲಕ್ಷ ಎಪ್ಪತ್ತು ಸಾವಿರ ಕೋಟಿ ರೂಪಾಯಿಗಳನ್ನು ಐದುಕೋಟಿ ಕುಟುಂಬಕ್ಕೆ ಕೊಡುತ್ತೇವೆ’ ಎಂಬುದು ಜನರಿಗೆ ವಿಶ್ವಾಸ ಮೂಡಿಸದ ಕಾರ್ಯಕ್ರಮ ಎಂಬುದನ್ನು ಒಂದು ವಿರೋಧಿಪಕ್ಷವಾಗಿ ಕಾಂಗ್ರೆಸ್ ಗುರುತಿಸುವಲ್ಲಿ ವಿಫಲವಾಗಿದೆ. ಉದಾಹರಣೆಗೆ ರಾಜ್ಯಮಟ್ಟ, ರಾಷ್ಟ್ರಮಟ್ಟದ ಚುನಾವಣೆಗಳನ್ನೇ ಗಮನಿಸಿದರೆ ಯಾವ ಯಾವ ಸರ್ಕಾರಗಳು ವಿಪರೀತ ಸಬ್ಸಿಡಿಗೆ ಮೊರೆ ಹೋಗಿದ್ದಾರೋ ಆ ಸರ್ಕಾರಗಳನ್ನು ಜನರು ಪುನರಾಯ್ಕೆ ಮಾಡಿಲ್ಲ. ಯಾವ ಸರ್ಕಾರಗಳು ಸಬ್ಸಿಡಿ ಕೊಡದೆ ಬೇರೆ ಬಗೆಯ ಅವಕಾಶಗಳನ್ನು ಸೃಷ್ಟಿಸಿವೆಯೋ ಅಂತಹ ಸರ್ಕಾರಗಳನ್ನು ಜನರು ಪುನರಾಯ್ಕೆ ಮಾಡಿದ್ದಾರೆ. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸರ್ಕಾರವನ್ನು, ಕರ್ನಾಟಕದಲ್ಲಿ ಯಡಿಯೂರಪ್ಪ ಸರ್ಕಾರವನ್ನು, ಸಿದ್ದರಾಮಯ್ಯ ಸರ್ಕಾರವನ್ನು ಜನ ಪುನರಾಯ್ಕೆ ಮಾಡಿಲ್ಲ. ಇದು ನಮಗೆ ಪಾಠವಾಗಬೇಕು. ಸಬ್ಸಿಡಿ ಕೊಟ್ಟ ರಾಜಶೇಖರ ರೆಡ್ಡಿ ಸರ್ಕಾರ ಹೋಯ್ತು, ಈಗ ಚಂದ್ರಬಾಬು ನಾಯ್ಡು ಕೂಡ ಅದೇ ಹಾದಿ ಹಿಡಿದಂತಿದೆ. ಅಂದರೆ ಜನರಿಗೆ ಉಚಿತವಾಗಿ ದುಡ್ಡು ಕೊಟ್ಟರೆ, ‘ಭಿಕ್ಷೆ ಕೊಡುತ್ತಿದ್ದೇನೆ, ಮತ ಹಾಕು’ ಎಂದರ್ಥವೆಂದು ಜನರಿಗೆ ಅರಿವಾಗಿಹೋಗಿದೆ. ಈ ರಾಜಕೀಯತಂತ್ರವನ್ನೆಲ್ಲ ಅವರು ಒಪ್ಪುವುದಿಲ್ಲ.
ಬಿಜೆಪಿಗೆ ಈಗ ಇರುವ ಅವಕಾಶವೆಂದರೆ, ಈ ಸಬ್ಸಿಡಿಯ ತಂತ್ರವನ್ನೆಲ್ಲ ದಾಟಿ ಮುಂದಕ್ಕೆ ಹೋಗಬೇಕು. ಕಾಂಗ್ರೆಸಿನ ವೈಫಲ್ಯ ಇರುವುದು ಇಲ್ಲೇ. ಅಂದರೆ ಜನ ಯಾವುದನ್ನು ಮಾಡಬಾರದು ಎಂದು ಅಂದುಕೊಳ್ಳುತ್ತಾರೋ ಅದನ್ನೆಲ್ಲ ಮಾಡುತ್ತೇವೆ ಎಂದು ಅವರು ಹೇಳಿಕೆ ನೀಡುತ್ತಿದ್ದಾರೆ. ಇದೊಂದಾದರೆ, ಇನ್ನೊಂದು ವ್ಯಕ್ತಿಗತ ಆರೋಪ ಮಾಡುವುದು. ಪುರಾವೆ, ರುಜುವಾತು ಏನೂ ಇಲ್ಲದೆಯೇ ವ್ಯಕ್ತಿಗಳ ಮೇಲೆ ಆರೋಪ ಹೊರಿಸುವುದು, ಸುಳ್ಳು ಹೇಳುವುದು. ಇಡೀ ಗಾಂಧಿಕುಟುಂಬದ ರಕ್ಷಣೆಗೆ ಒಂದು ಸೈನ್ಯಪಡೆಯೇ ಇದೆ. ಇದು ಜನರಿಗೆ ಒಂದು ಬಗೆಯ ಜುಗುಪ್ಸೆಯ ಭಾವನೆಯನ್ನು ಕಾಂಗ್ರೆಸಿನ ಕುರಿತಾಗಿ ತಂದಿದೆ. ಹಾಗಾಗಿ ಒಂದೆಡೆ ಜನರಿಗೆ ಮುಖ್ಯವಾಗಿ ವಿಶ್ವಾಸಾರ್ಹವಾದ ವಿರೋಧಪಕ್ಷಗಳನ್ನು ಅಧಿಕಾರಕ್ಕೆ ತರುವ ಆಯ್ಕೆಯ ಅವಕಾಶ ಕಾಣುತ್ತಿಲ್ಲ, ಮಹಾಗಠ್ಬಂಧನ್ದಲ್ಲೂ ಅವರಿಗೆ ಅದು ಕಾಣಿಸುತ್ತಿಲ್ಲ; ಅಲ್ಲಿ ಇರುವವರಿಗೆ ಮತ ಹಾಕಬೇಕು ಎನಿಸುತ್ತಿಲ್ಲ. ಸ್ಥಳೀಯವಾಗಿ ಅಲ್ಲೊಂದೆಡೆ ಇಲ್ಲೊಂದೆಡೆ ಬೇರೆ ಏನೋ ಘಟಿಸಬಹುದಷ್ಟೆ. ಮೂರನೆಯದಾಗಿ ಇವರ ಅಭಿವೃದ್ಧಿಪರ ಕಾರ್ಯಕ್ರಮಪಟ್ಟಿಗಳು; ಅದು ಗಂಗಾ ಇರಬಹುದು, ರಾಷ್ಟ್ರೀಯ ಹೆದ್ದಾರಿ ಇರಬಹುದು, ಸಾಂಸ್ಥಿಕವಾಗಿ ಇರಬಹುದು, ಅವುಗಳು ಜನರಿಗೆ ಒಪ್ಪಿಗೆಯಾಗಿವೆ. ಇವರೇನೋ ಮಾಡುತ್ತಿದ್ದಾರೆ, ಅದು ಏನು ಎಂದು ಇನ್ನೂ ಪೂರ್ತಿ ಕೈಗೆ ಸಿಗದಿರಬಹುದು; ಆದರೆ ದೇಶಕ್ಕೆ ಏನೋ ಮಾಡುತ್ತಿದ್ದಾರೆ ಎನ್ನುವುದು ಕಾಣಿಸುತ್ತಿದೆ. ಇನ್ನು ಪುಲ್ವಾಮಾ ಆದಮೇಲೆ ಮೋದಿಸರ್ಕಾರದ ವಿದೇಶಾಂಗನೀತಿಯ ದಕ್ಷತೆ ಈ ಮತದಾರರಿಗೆ ಕಾಣಿಸುತ್ತಿದೆ. ಮಿಸೈಲ್ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇವರ ಕೊಡುಗೆ ಇತ್ಯಾದಿಗಳನ್ನೆಲ್ಲ ಸೇರಿಸಿ ಒಟ್ಟಾರೆ ಹೇಳಬಹುದಾದರೆ ಬಿಜೆಪಿಯವರು ದೇಶದೊಳಗೆ, ಹೊರಗಡೆ ಒಂದು ಬಗೆಯ ಸಕಾರಾತ್ಮಕತೆ ಮೂಡಿಸುವಲ್ಲಿ ಯಶಸ್ಸು ಕಂಡಿದ್ದಾರೆ; ಒಂದು ಮಟ್ಟದ ಆಶಾಭಾವನೆಯನ್ನು ನಿರ್ವಹಿಸಿದ್ದಾರೆ. ಅದು ಎಷ್ಟರಮಟ್ಟಿಗೆ ಸತ್ಯ, ಎಷ್ಟರಮಟ್ಟಿಗೆ ಸುಳ್ಳು ಎಂಬುದನ್ನು ಹೇಳಲಾರೆವಾದರೂ, ಈ ಆಶಾಭಾವನೆಯನ್ನು ಕಟ್ಟಿಕೊಡುವುದರಲ್ಲಿ ಬಿಜೆಪಿಯವರು ಮುಂದಿದ್ದಾರೆ ಎನ್ನಬಹುದು, ಅದರಲ್ಲಿ ಯಾವುದೇ ಸಂಶಯವಿಲ್ಲ.
ಜಾತಿ ಮತ್ತು ಕುಟುಂಬ ರಾಜಕಾರಣ ಬಿಟ್ಟು ಯೋಚಿಸುವ ಹಂತದಲ್ಲಿ ಜನರಿದ್ದಾರೆಯೇ?
ಈ ಪ್ರಶ್ನೆ ತುಂಬ ಕ್ಲಿಷ್ಟ ಎನ್ನಬಹುದು. ನಮ್ಮ ದೇಶದ ರಾಜಕಾರಣದಲ್ಲಿ, ಜಾತಿಯೂ ಚುನಾವಣೆಯಲ್ಲಿ ಒಂದು ಅಂಶವಾದರೂ ಈ ರಾಜಕಾರಣಿಗಳು ಮಾತನಾಡುವಂತೆ ಅದೊಂದೇ ಕೇಂದ್ರಸಂಗತಿಯಲ್ಲ. ಈ ಹಿಂದೆ ಚುನಾವಣೆಯಲ್ಲಿ ಜಾತಿಯ ಪಾತ್ರವನ್ನು ತಿಳಿದುಕೊಳ್ಳಲು ನಾವೊಂದು ಸಣ್ಣ ಪ್ರಯತ್ನ ಮಾಡಿದ್ದೆವು. ನಾನು ಹಾಸನ ಜಿಲ್ಲೆಯಿಂದ ಬಂದವನು. ನಮ್ಮ ಬೂತ್ನಲ್ಲಿ ಹೋಗಿ ಕುಳಿತುಕೊಂಡರೆ ನಿರ್ದಿಷ್ಟವಾಗಿ ಇಷ್ಟು ಜನ ಮತದಾರರಿದ್ದಾರೆ, ಯಾರುಯಾರು ಯಾವಯಾವ ಜಾತಿಯವರು ಎಂದು ಪ್ರತಿಯೊಬ್ಬ ವ್ಯಕ್ತಿಯನ್ನೂ ಅಲ್ಲಿ ಮತದಾನದ ನಂತರ ಪಟ್ಟಿಮಾಡಿಕೊಂಡು, ಚುನಾವಣೆ ಮತಎಣಿಕೆಯ ದಿನ ನಮ್ಮ ಬಳಿ ನಿರ್ದಿಷ್ಟವಾಗಿ ಎಷ್ಟು ಮತ ಯಾವ ಪಕ್ಷಕ್ಕೆ ಹೋಗಿದೆ ಎಂದು ತಿಳಿದುಬರುವ ಪಟ್ಟಿಯೊಡನೆ ತಾಳೆಮಾಡಿದಾಗ, ನಾವು ಏನೇ ಅಂಕಿ-ಅಂಶ ವಿಶ್ಲೇಷಿಸಿದರೂ, ಜಾತಿಯನ್ನು ಒಂದು ವೋಟ್ಬ್ಯಾಂಕಾಗಿ ಹೇಳಲು ಬರುವುದಿಲ್ಲ. ಕಳೆದ ಹತ್ತು ವರ್ಷದಿಂದ ನಮಗೆ ಅರ್ಥವಾಗದ ಸಂಗತಿ ಎಂದರೆ ನಿಜವಾದ ಮತದಾನದ ಫಲಿತಾಂಶಗಳ ಅನುಭವಗಳಿಂದ ತಿಳಿದಂತೆ ಕೇವಲ ಜಾತಿಯಿಂದ ಚುನಾವಣೆಯ ಅಭ್ಯರ್ಥಿಯ ಆಯ್ಕೆಯನ್ನು ಮತದಾರರು ಮಾಡುವುದಿಲ್ಲ. ಆದರೂ ನಮ್ಮ ರಾಜಕೀಯ ಪಕ್ಷಗಳು ಹಾಗೂ ಚುನಾವಣಾ ವಿಶ್ಲೇಷಣೆಯ ಚಿಂತಕರು ಈ ಪ್ರಮಾಣದಲ್ಲಿ ಜಾತಿಲೆಕ್ಕಾಚಾರವನ್ನು ಏಕೆ ಮಾಡುತ್ತಾರೆ – ಎಂಬುದು ಪ್ರಶ್ನೆ. ಜಾತಿಯು ಚುನಾವಣೆಯ ಒಂದು ಅಂಶ ಹೌದಾದರೂ, ನೂರಕ್ಕೆ ನೂರು ಜಾತಿ ಆಧರಿಸಿಯೇ ಚುನಾವಣೆ ಗೆಲ್ಲುವುದಕ್ಕೆ ಆಗುತ್ತದೆ ಎನ್ನುವ ಸಾಧ್ಯತೆ ಇರಲಿಲ್ಲ ಎನ್ನುವುದೊಂದು ನಮಗೆ ತಿಳಿದಿರುವ ಸ್ಪಷ್ಟ ಸಂಗತಿ. 2009ನೇ ಇಸವಿಯ ವೇಳೆಗೇ ಒಂದಂಶ ನಮಗೆ ಗೊತ್ತಾಗಿಹೋಗಿತ್ತು; ಅದೆಂದರೆ ಇಡೀ ಒಂದು ಜಾತಿ ಸಂಪೂರ್ಣವಾಗಿ ಒಬ್ಬ ವ್ಯಕ್ತಿಗೆ ಮತ ಹಾಕಿಬಿಡುತ್ತದೆ ಎನ್ನುವ ರೀತಿಯಲ್ಲಿ ಈವತ್ತಿಗೂ ಏನು ಟಿವಿ ಪ್ಯಾನಲ್ಚರ್ಚೆ, ಸೆಫಾಲಜಿಸ್ಟ್ಗಳು ಏನು ಮಾತನಾಡುತ್ತಾರೊ ಅದು ಸತ್ಯ ಅಲ್ಲ ಎನ್ನುವುದು; ಹಾಗೆ ನೋಡಿದರೆ ಕಡೂರು ಮತದಾರಕ್ಷೇತ್ರದಲ್ಲಿ
ವೈ.ಎಸ್.ವಿ. ದತ್ತ ಅವರ ಜೊತೆ ಜನ ಇದ್ದರು. ಅಲ್ಲಿ ಎಷ್ಟು ಮತ ಬ್ರಾಹ್ಮಣರದ್ದಿರಬಹುದು, ಇದನ್ನು ಹೇಗೆ ವಿವರಿಸಬಹುದು? ಈ ತರಹದ್ದನ್ನು ಬೇಕಾದಷ್ಟು ಹೇಳಬಹುದು.
ಈ 2019ರ ಚುನಾವಣೆಯಲ್ಲಿ ನೋಡಿದರೆ ಅರ್ಥವಾಗುವ ಒಂದು ಸಂಗತಿ ಏನೆಂದರೆ ನಮ್ಮ ಜನರಿಗೆ ಕುಟುಂಬಗಳ ಬಗ್ಗೆ ತೊಂದರೆ ಏನಿಲ್ಲ; ಒಂದು ಕುಟುಂಬದವರಾಗಿಯೂ ಅವರು ಚೆನ್ನಾಗಿ ಕೆಲಸ ಮಾಡಿದರೆ ಜನರಿಗೇನೂ ಅಸಮಾಧಾನ ಇಲ್ಲ; ಆದರೆ ಸಮಸ್ಯೆ ಎಲ್ಲಿದೆ ಎಂದರೆ ಯಾರಿಗೆ ಸಾಮಥ್ರ್ಯವಿರುವುದಿಲ್ಲವೋ, ಅವರಿಗೆ ರಾಜಕೀಯವಾಗಿ ಮುಂದೆ ಬರುವುದಕ್ಕೆ ಆಗುವುದಿಲ್ಲ ಮತ್ತು ಅವರು ಜನರ ಜೊತೆ ಸಂಪರ್ಕ ಸಾಧಿಸುವುದಕ್ಕೆ ವಿಫಲರಾಗುತ್ತಾರೆ, ಅಂಥವರನ್ನು ಕೇವಲ ಕುಟುಂಬದಿಂದ ಬಂದಿದ್ದಾರೆ ಎನ್ನುವ ಕಾರಣಕ್ಕೆ ಚುನಾವಣೆಗೆ ನಿಲ್ಲಿಸುತ್ತೇವೆ ಎಂದು ಹೇಳಿದರೆ ಜನರು ಅದನ್ನು ಒಪ್ಪಿಕೊಳ್ಳುವುದಿಲ್ಲ. ಅದಕ್ಕೆ ಉತ್ತಮ ಉದಾಹರಣೆ ಹಾಸನ ಮತ್ತು ಮಂಡ್ಯ. ಪ್ರಜ್ವಲ್ ರೇವಣ್ಣ ಕಳೆದ ಐದಾರು ವರ್ಷದಿಂದ ಬೇಲೂರು ಹಾಗೂ ಅರಸೀಕೆರೆ ತಾಲ್ಲೂಕಿನಲ್ಲಿ ಕಾರ್ಯಕರ್ತರ ಜೊತೆಗೆ ಸಂಬಂಧ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾನೆ. ಆದರೆ ನಮ್ಮ ಊರಿನಲ್ಲಿ ಹೋದಾಗ ಒಕ್ಕಲಿಗರೆಲ್ಲ ಒಂದು ಪ್ರಶ್ನೆ ಕೇಳುತ್ತಿದ್ದರು, ‘ನಾವು ಇಷ್ಟು ವರ್ಷದಿಂದ ಗೌಡರ ಕುಟುಂಬವನ್ನೇ ಬೆಂಬಲಿಸುತ್ತ ಬಂದಿದ್ದೇವೆ. ನಾವೇನು ಅವರ ಕುಟುಂಬಕ್ಕೆ ಅಡ ಇಟ್ಟಿದ್ದೀವಾ, ಬೇರೆ ಯಾರೂ ಇಲ್ಲವಾ ಇಲ್ಲಿ?’ ಎಂದು. ನಮ್ಮ ಕುರುಬ ಸ್ನೇಹಿತರು ಕೇಳುತ್ತಿದ್ದರು, ‘ಒಕ್ಕಲಿಗಗೌಡ್ರು ಅದಕ್ಕೆ ವಿರುದ್ಧ ನಿಂತಿದ್ದಾರೆ. ನಾವು ಅದನ್ನ ಬೆಂಬಲಿಸುವುದು ಆ ಕಾರಣಕ್ಕಾಗಿ. ನಾವು ಈ ಬಾರಿ ಬಿಜೆಪಿಗೆ ಮತ ಹಾಕ್ತೀವಿ’ ಎನ್ನುವ ತರಹದ ಮಾತುಗಳನ್ನು ಮೊಟ್ಟಮೊದಲ ಬಾರಿಗೆ ಹಾಸನದಲ್ಲಿ ಮುಕ್ತವಾಗಿ ಮಾತನಾಡುವ ಬದಲಾವಣೆ ಕಂಡುಬಂದಿದೆ.
ಇದು ಇಲ್ಲೊಂದೇ ಅಲ್ಲ, ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಕುಟುಂಬ, ಉತ್ತರಪ್ರದೇಶದಲ್ಲಿ ಮುಲಾಯಂ ಸಿಂಗ್ ಕುಟುಂಬ, ಚಂದ್ರಬಾಬು ನಾಯ್ಡು ಅವರೂ ಮಗನನ್ನು ರಾಜಕೀಯಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ. ಇದರ ಬಗ್ಗೆ ಜನರಿಗೆ ಒಂದು ಬಗೆಯ ತಿರಸ್ಕಾರವಿದೆ. ಹಾಗೆಂದು ಇದನ್ನು ಕುಟುಂಬರಾಜಕಾರಣದ ವಿರುದ್ಧದ ಮನಃಸ್ಥಿತಿ ಎನ್ನುವ ಹಾಗಿಲ್ಲ. ಸಾಮಥ್ರ್ಯ ಇದ್ದವರು ಬಂದರೆ ಜನರ ತಕರಾರಿಲ್ಲ; ಸುಮ್ಮನೆ ನಮ್ಮ ಕುಟುಂಬದಲ್ಲಿ ಹುಟ್ಟಿದ್ದಾನೆ ಎನ್ನುವ ಕಾರಣಕ್ಕೆ, ನಮ್ಮ ಚಿಕ್ಕಪ್ಪ, ದೊಡ್ಡಪ್ಪನ, ಅಕ್ಕನ ಮಗ ಎಂದುಕೊಂಡು ಚುನಾವಣೆಗೆ ನಿಲ್ಲಿಸಿದರೆ, ಅದನ್ನು ತಿರಸ್ಕರಿಸುವ ಮಟ್ಟಕ್ಕೆ ಜನ ಬಂದುನಿಂತಿದ್ದಾರೆನಿಸುತ್ತದೆ.
ಇದರಲ್ಲೊಂದು ದೊಡ್ಡ ಪಾಠವಿದೆ; ಕಾಂಗ್ರೆಸ್ ಪಾರ್ಟಿಯನ್ನೇ ಪರಿಗಣಿಸಿದರೆ ಈವತ್ತಿಗೂ ಆಡಳಿತದಲ್ಲಿ ಅತಿ ಹೆಚ್ಚು ಅನುಭವವಿರುವ, ನಿಪುಣರಿರುವ ರಾಜಕೀಯ ಪಕ್ಷ ಕಾಂಗ್ರೆಸ್. ಅನುಭವವಿದೆ, ರಾಜಕಾರಣ ಮಾಡಿ ಅವರಿಗೆ ತಿಳಿದಿದೆ. ಆದರೆ ಅದರಲ್ಲಿರುವ ನಾಯಕರುಗಳಿಗೆಲ್ಲ ರಾಹುಲ್ಗಾಂಧಿಯನ್ನು ಸಮರ್ಥಿಸುವುದರಲ್ಲೇ ಇದ್ದಬದ್ದ ಸಮಯ ಕಳೆದುಹೋಗುತ್ತಿದೆ. ಈಗ ನಮ್ಮ ದೇಶದ ಪ್ರಜ್ಞಾವಂತ, ಬುದ್ಧಿವಂತ ಪ್ರೊಫೆಸರುಗಳೆಲ್ಲ ರಾಹುಲ್ಗಾಂಧಿಯನ್ನು ಸಮರ್ಥಿಸುವ ಒಂದು ಬಗೆಯ ಮೂರನೇದರ್ಜೆ ಸನ್ನಿವೇಶಕ್ಕೆ ತಮ್ಮನ್ನು ತಳ್ಳಿಕೊಂಡಿದ್ದಾರೆ. ಇದನ್ನು ದೇಶದ ಜನ ತಿರಸ್ಕರಿಸುತ್ತಿದ್ದಾರೆ; ಇದನ್ನು ಒಪ್ಪುವುದಕ್ಕೆ ಅವರು ಸಿದ್ಧರಿಲ್ಲ. ಜೈರಾಂ ರಮೇಶ್ ಅವರೆ ಆಗಲಿ, ಜ್ಯೋತಿರಾದಿತ್ಯ ಸಿಂಧ್ಯ ಅವರೇ ಆಗಲಿ, ಯಾರೇ ರಾಹುಲ್ಗಾಂಧಿಯನ್ನು ಸಮರ್ಥಿಸಿದರೂ ಅಷ್ಟೆ.
ನೇರಾನೇರವಾಗಿಯೇ ಹೇಳಬೇಕೆಂದರೆ, ಈಗ ಜ್ಯೋತಿರಾದಿತ್ಯ ಸಿಂಧ್ಯ, ಮಿಲಿಂದ್ ದೇವೋರಾ ಈ ತರಹದ ಯುವ ನಾಯಕರುಗಳೆಲ್ಲ ರಾಹುಲ್ಗಾಂಧಿಯವರನ್ನು ಬದಿಗಿಟ್ಟು ಮುಂದೆ ಸಾಗಿದರೂ ಕೇಡರ್ ತಾನೇ ತಾನಾಗಿ ಬೆಳೆಯುತ್ತದೆ; ಅದಕ್ಕೆ ಅವಕಾಶ ಇದೆ. ಎಲ್ಲಿಯವರೆಗೆ ರಾಹುಲ್ಗಾಂಧಿ ಅಥವಾ ಅವರ ಕುಟುಂಬಕ್ಕೆ ಇವರೆಲ್ಲ ತಗಲಿಕೊಂಡಿರುತ್ತಾರೋ ಅಲ್ಲಿಯ ವರೆಗೆ ಅವರಿಗೆ ಭವಿಷ್ಯವಿಲ್ಲ. ಸಮಸ್ಯೆ ಇರುವುದು ಆ ಬಗೆಯಲ್ಲಿ ತಗಲಿಕೊಂಡಿರುವುದಕ್ಕೆ ಅಲ್ಲ, ಅಲ್ಲಿರುವ ಅಸಮರ್ಥತೆಗೆ. ಅವರು ಈ ದೇಶಕ್ಕೆ ಮಾಡಿರುವ, ಅವರಿಂದ ದೇಶಕ್ಕೆ ಆಗಿರುವ ಎರಡು ಸಮಸ್ಯೆಗಳ ಬಗ್ಗೆ ಜನರಿಗೆ ಒಂದು ಬಗೆಯ ರೇಜಿಗೆ ಇದೆ. ಅವರನ್ನು ಬಿಟ್ಟು ಕಾಂಗ್ರೆಸ್ ಏನಾದರೂ ಮಾಡಲು ಹೊರಟರೆ ನಾಯಕತ್ವವನ್ನು ಕಟ್ಟಲು ಸಾಧ್ಯವಿರಬಹುದೇನೋ ಎನ್ನುವುದು ಒಂದು ಅಭಿಪ್ರಾಯ. ಯಾಕೆಂದರೆ ಕಾಂಗ್ರೆಸಿನಲ್ಲಿ ನಾಯಕತ್ವದ ಕೊರತೆ ಇದೆ, ಎಂದು ಈವತ್ತಿಗೂ ಅನೇಕರಿಗನಿಸುತ್ತಿಲ್ಲ. ಆದರೆ ಹೊರಗಡೆ ಹೋಗಿ ರಾಹುಲ್ಗಾಂಧಿಯನ್ನು ಸಮರ್ಥಿಸಿಕೊಳ್ಳುತ್ತ ಮತ ಕೇಳುವುದಕ್ಕೆ ಆಗುವುದಿಲ್ಲ. ವಾಸ್ತವವಾಗಿ ಅದು ಸಾಧ್ಯವೂ ಇಲ್ಲ. ಕಾಂಗ್ರೆಸ್ಸಿನಲ್ಲಿ ಒಂದಷ್ಟು ಸ್ವತಂತ್ರ ನಾಯಕರಿದ್ದಾರೆ. ಅವರು ಈವತ್ತಿಗೂ ಗೆಲ್ಲುತ್ತಿರುವುದು ಕಾಂಗ್ರೆಸ್ ಎನ್ನುವ ಕಾರಣಕ್ಕೆ ಅಲ್ಲ; ಸ್ವತಂತ್ರವಾಗಿ ಯಾವುದೇ ಪಕ್ಷಕ್ಕೆ ಹೋದರೂ ಅವರು ಚುನಾವಣೆ ಗೆಲ್ಲಬಲ್ಲರು; ಜನರ ಜೊತೆಗೆ ಅವರ ಸಂಬಂಧ ಹಾಗಿದೆ. ಕಾಕತಾಳೀಯವಾಗಿ ಅವರು ಕಾಂಗ್ರೆಸಿನಲ್ಲಿ ಇದ್ದಾರೆ. ಆದ್ದರಿಂದ ಗಾಂಧಿಕುಟುಂಬದ ಹೆಸರಿನಿಂದ ಅವರು ಗೆಲ್ಲುತ್ತಿದ್ದಾರೆ ಎಂದು ಹೇಳುವುದು ಕಷ್ಟವಾಗುತ್ತದೆ. ಅಸಮರ್ಥತೆಯಿಟ್ಟುಕೊಂಡು ಕುಟುಂಬರಾಜಕಾರಣಕ್ಕೆ ಹೋದರೆ ಅದು ನಿಷ್ಫಲವಾಗುತ್ತದೆ ಎನ್ನುವುದು ಒಂದುಕಡೆಯಾದರೆ, ಜಾತಿ-ಆಧಾರಿತವಾಗಿ ಅಥವಾ ರಿಲಿಜನ್ನಿನ ಆಧಾರವಾಗಿ ಮುಸಲ್ಮಾನರೆಲ್ಲ ಒಂದೇ ಪಕ್ಷಕ್ಕೆ ಮತ ಹಾಕುತ್ತಾರೆ, ದಲಿತರೆಲ್ಲ ಒಂದೇ ಪಕ್ಷಕ್ಕೆ ಮತ ಹಾಕುತ್ತಾರೆ ಎನ್ನುವುದೇನೂ ಇಲ್ಲ ಎಂಬುದು ಈಗಲಾದರೂ ಭಾರತದ ರಾಜಕೀಯಪಕ್ಷಗಳಿಗೆ ಅರ್ಥವಾಗಬೇಕಾಗಿದೆ. ಇಂತಹ ಮೂರ್ಖತನದ ವಿಚಾರಗಳನ್ನು ಅವರು ಎಷ್ಟು ಬೇಗ ಬಿಟ್ಟರೆ ಅಷ್ಟು ಅವರಿಗೆ ಹಿತವಾದೀತು. ಒಂದು ವೇಳೆ ಬಿಡಲಿಲ್ಲವೆಂದರೆ, ಲೆಕ್ಕಾಚಾರ ತೆಗೆದುಕೊಂಡೇ ನೋಡಿದರೂ ಕಳೆದ ಹತ್ತು ವರ್ಷದಲ್ಲಿ ನಮ್ಮ ದೇಶದಲ್ಲಿ ಎಷ್ಟು ರಾಜಕೀಯ ಪಕ್ಷಗಳು ನಿರ್ನಾಮಗೊಂಡಿವೆಯೋ ಅದನ್ನು ಅನುಸರಿಸಿ ಪಾಠ ಕಲಿಯಬೇಕಾಗುತ್ತದೆ. ನಮಗೆ ಇಷ್ಟ ಇರಲಿ ಇಲ್ಲದಿರಲಿ, ಇಂದಿನ ಹೊಸ ಮತದಾರರನ್ನು ಗಮನಿಸಿದರೆ ಭವಿಷ್ಯದಲ್ಲಿ ಈ ಭಿನ್ನರೀತಿಯಲ್ಲಿ ಯೋಚಿಸುವ ಮತದಾರರ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಈ ರೀತಿ ಹೆಚ್ಚುತ್ತಿರುವ ಸಮುದಾಯವನ್ನು ಜಾತಿಯ ಹಿಂದೆ ಬಿದ್ದು ತನ್ನ ತೆಕ್ಕೆಯೊಳಗೆ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ; ಹಾಗೆಂದು ಅವರೆಲ್ಲ ಜಾತಿ ಬಿಟ್ಟವರು ಎಂದಲ್ಲ. ಜಾತಿಗೆ ಸಂಬಂಧಪಟ್ಟಂತೆ ಏನೇನು ಬೇಕೋ ಅದನ್ನು ಮಾಡುತ್ತಾರೆಯೇ ವಿನಾ ಜಾತಿಕೇಂದ್ರಿತ ರಾಜಕಾರಣ ಮಾಡಬೇಕು ಎಂದು ಅವರು ಯೋಚಿಸುತ್ತಿರುವಂತೆ ನಮಗೆ ಕಾಣಿಸುತ್ತಿಲ್ಲ. ಅಂದರೆ – ನಮಗನ್ನಿಸುವಂತೆ, ಉದಾಹರಣೆಗೆ ಶಿಕ್ಷಿತ ದಲಿತರಿಗೆ (ದಲಿತ ಚಳುವಳಿಯ ಭಾಗವಾಗಿರುವ ದಲಿತರನ್ನು ಬಿಟ್ಟು) ಅವರಿನ್ನೂ ಒಂದು ವೋಟ್ಬ್ಯಾಂಕ್ ಎಂದು ಗುರುತಿಸುವುದರ ಬಗ್ಗೆ ತಿರಸ್ಕಾರವಿದೆ. ಮೊದಲೆಲ್ಲ ಬಹಳಷ್ಟು ಜನ ಪರಿಶಿಷ್ಟ ಜಾತಿ-ಪಂಗಡದವರು ಕಾಂಗ್ರೆಸಿಗೋ, ಜೆಡಿಎಸ್ಗೋ ಮತ ಹಾಕುತ್ತಿದ್ದರು ಎಂದು ಅನೇಕರು ವಾದಿಸುತ್ತಾರೆ. ಈ ವಾದಗಳ ಸತ್ಯಾಸತ್ಯತೆ ಏನೇ ಇರಲಿ, ಈಗಂತೂ ಅಂತಹ ಸ್ಥಿತಿ ಇಲ್ಲ. ಹಾಗಿದ್ದಪಕ್ಷದಲ್ಲಿ ಬಿಜೆಪಿಯವರು ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲಿ ನೂರಾನಾಲ್ಕು ಸ್ಥಾನ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ.
ರಾಹುಲ್ಗಾಂಧಿ ಹಿಂದೆ ಸರಿದರೆ ಕಾಂಗ್ರೆಸ್ಗೆ ಲಾಭವಿದೆಯೇ?
ಈ ಕುರಿತು ನಮ್ಮ ಗಮನಕ್ಕೆ ಬಂದ ಒಂದು ಅಂಶವನ್ನಷ್ಟೆ ಹೇಳಬಹುದು. ಗಾಂಧಿಕುಟುಂಬ ಕಾಂಗ್ರೆಸಿಗರಿಗೊಂದು ಶಾಪ. ಗಾಂಧಿಕುಟುಂಬದಲ್ಲಿ ಅವರು ಈ ದೇಶಕ್ಕೆ ಏನೇನು ಮಾಡಬಾರದಿತ್ತೋ, ಅದನ್ನೆಲ್ಲ ಮಾಡಿದ್ದಾರೆ ಮತ್ತು ಜನರು ಅವುಗಳನ್ನೆಲ್ಲ ಪಟ್ಟಿಮಾಡಿಕೊಂಡುಬಿಟ್ಟಿದ್ದಾರೆ. ಅವರನ್ನು ಸಂಪೂರ್ಣವಾಗಿ ಬದಿಗೊತ್ತಲಿಕ್ಕೆ ಆಗುವುದೋ ಇಲ್ಲವೋ, ಅವರನ್ನು ಬಿಡದೆಯೇ ಕಾಂಗ್ರೆಸ್ ಪುನಃ ಎದ್ದೇಳುವುದು ಬಹಳ ಕಷ್ಟವಿದೆ. ಇದರ ಜೊತೆಗೆ 2004ರ ನಂತರ ಹೊಸ ಅವತಾರದ ಯುಪಿಎ ಕಾಂಗ್ರೆಸಿನಲ್ಲಿ ಕೇಡರ್ ಆಧರಿಸಿ ತಳಮಟ್ಟದಿಂದ ನಾಯಕತ್ವ ಬೆಳೆಸಿಕೊಂಡು ಬಂದಿರುವವರಿಗಿಂತ ರಾಜಕೀಯ ಮ್ಯಾನೇಜರುಗಳೇ ಹೆಚ್ಚಾಗಿಬಿಟ್ಟಿದ್ದು ಒಂದು ಸಮಸ್ಯೆ. ಇದು ಕಾಂಗ್ರೆಸ್ ಒಂದೇ ಅಲ್ಲದೆ, ಎಲ್ಲ ರಾಜಕೀಯಪಕ್ಷಗಳಿಗೂ ಇರುವ ಒಂದು ಗಂಭೀರ ಸಮಸ್ಯೆ. ಇಂತಹ ಬ್ರೋಕರ್ಗಳು ಪಕ್ಷದಲ್ಲಿ ಪ್ರಮುಖಸ್ಥಾನವನ್ನು ಆಕ್ರಮಿಸುತ್ತಿದ್ದಾರೆ; ಅವರು ಒಂದು ಮಟ್ಟದವರೆಗೆ ಉಪಯೋಗಕ್ಕೆ ಬರುತ್ತಾರೆ. ಆಮೇಲೆ ಅವರನ್ನು ಮುಂದುವರಿಯಲು ಬಿಡದಿದ್ದರೆ ಪಕ್ಷಕ್ಕೆ ಹಾನಿ ಮಾಡುತ್ತಾರೆ; ಬಿಟ್ಟರೆ ಪಕ್ಷ ಬೆಳೆಯುವುದಿಲ್ಲ ಎನ್ನುವ ಸ್ಥಿತಿಯುಂಟಾದೀತು.
ಈ ಮ್ಯಾನೇಜರ್ಗಳನ್ನು ಬಿಟ್ಟು ಯಾರು ಯಾರು ಕಾರ್ಯಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೋ, ಕಾರ್ಯಕರ್ತಕೇಂದ್ರಿತವಾಗಿ ಯಾವ ನಾಯಕರು ಮೇಲಕ್ಕೆ ಬಂದಿರುತ್ತಾರೋ, ಅಂತಹ ಅನುಭವ ಇರುವವರನ್ನು ಇಟ್ಟುಕೊಂಡು ಪಾರ್ಟಿ ಕಟ್ಟಲು ಆರಂಭಿಸಿದರೆ ಮುನ್ನಡೆ ಸಾಧ್ಯವಾದೀತೇನೊ.
ಲೇಖಕರು ಬೆಂಗಳೂರಿನ ‘ಆರೋಹಿ ಸಂಶೋಧನಸಂಸ್ಥೆ’ಯ ನಿರ್ದೇಶಕರು.