ಸಾವಿನ ಮನೆಯ ಮೌನದೊಳಗೆ ಮನದ ತುಂಬ ಮಾತುಗಳು. ಅರ್ಥವಾಗದೆ ಉಳಿದಿದ್ದ ಪ್ರಶ್ನೆಗಳಿಗೆ ಉತ್ತರವನ್ನು ಬಯಸಿಯೂ ನಿರ್ಲಿಪ್ತವಾದ ಬದುಕಿನ ಪರಿಗೆ ಬೆರಗಾಗುವ ಹೊತ್ತು ಅದು. ಕರೆದೊಯ್ಯುವುದಕ್ಕೆ ಕೈ ಚಾಚಿದ ವಿಧಿಗೆ ಶರಣಾಗಿ ಮಲಗಿದ ಅತ್ತೆಯ ಮುಖವನ್ನು ಕಾಣುವಾಗ ನಿಜಕ್ಕೂ ಉಸಿರು ನಿಂತಿರುವುದೇ, ಆಕಸ್ಮಾತ್ ಈ ಸಾವು ನಿಜವೇ? ಎಂಬ ಗೊಂದಲ ಹುಟ್ಟಿಸುವ ಭಾವ. ಮುನ್ನಾ ರಾತ್ರಿ ರಾಗಿಗಂಜಿ ಕುಡಿಸುವಾಗ ಒಂದೊಂದು ಗುಟುಕೂ ಒಳಸೇರಬೇಕಾದರೆ ಒದ್ದಾಡಿದ ಪರಿಯಲ್ಲಿ ಸಾವು ಸನಿಹವೇ ಕಾದು ಕುಳಿತಿತ್ತೇ ಎಂಬ ಭೀತಿ ಆವರಿಸಿತ್ತು. ಅರ್ಧಲೋಟ ಗಂಜಿ ಗುಟುಕರಿಸಬೇಕಾದರೆ ಮುಕ್ಕಾಲು ಗಂಟೆ! ಸಾವೇ ಭಯಾನಕ ಅಂದುಕೊಂಡರೆ ಸಾವಿನ ಪ್ರತೀಕ್ಷೆ ಇನ್ನೂ ಘೋರ. ಆಗಾಗ್ಗೆ ಗಮನಿಸಿಕೊಂಡು ಇನ್ನೂ ಉಸಿರಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು, ತೆರೆದೇ ಇದ್ದ ಬಾಯಿ ಒಣಗದಂತೆ ನೀರು ಕುಡಿಸುತ್ತ ದಿನಗಳನ್ನು ಕಳೆದ ರೀತಿ ಕಠಿಣ. ಅಂಥಾದ್ದರಲ್ಲಿ ಗಂಜಿ ಕುಡಿಸುತ್ತ ನೋಡನೋಡುತ್ತಿದ್ದಂತೆ ಕಣ್ಣಾರೆ ಅತ್ತೆ ಕೊನೆಯುಸಿರೆಳೆದದ್ದನ್ನು ನೆನೆವಾಗ ಜೀವ ಸ್ತಬ್ಧವಾಗುವ ಪರಿಗೂ ಎಣ್ಣೆ ಆರಿದ ದೀಪ ನಂದುವುದಕ್ಕೂ ಏನೂ ವ್ಯತ್ಯಾಸವಿಲ್ಲ.
ಅತ್ತೆ ಎಂದರೆ ಅಪ್ಪಟ ಅತ್ತೆಯೇ. ದೊಡ್ಡ ನಗು, ಜೋರು ಸ್ವರ, ತನಗನ್ನಿಸಿದ್ದೇ ಸರಿಯೆಂಬ ವಾದ. ಅವರ ಮುಂದೆ ವಾದಿಸಿ ಗೆದ್ದವರಿಲ್ಲ. ಗಂಡನೋ ಮಗನೋ ಏನಾದರೂ ಹೇಳಿದರೂ ಸರಿತಪ್ಪುಗಳನ್ನು ವಿವೇಚಿಸಲೊಲ್ಲದ ವ್ಯಕ್ತಿತ್ವ. ಆರೋಗ್ಯ ಚೆನ್ನಾಗಿದ್ದ ಕಾಲಕ್ಕೆ ಮನೆಗೆ ಬರುವ ಕೆಲಸದ ಆಳುಗಳೆಲ್ಲರನ್ನೂ ಸಮಾಧಾನದಿಂದ ಮಾತಾಡಿಸಿ ಉಪಚರಿಸುತ್ತಿದ್ದ ಅವರನ್ನು ಕಂಡರೆ ಎಲ್ಲರಿಗೂ ಬಹಳ ಮೆಚ್ಚು. ಅವರ ಮಗನಿಗೆ ಗೆಳತಿಯಷ್ಟೇ ಆಗಿ ಅವರ ಮನೆಗೆ ನಾನು ಹೋಗಿದ್ದ ಕಾಲಕ್ಕೆ ಮನಸ್ಸು ಬಿಚ್ಚಿ ಮಾತಾಡಿಸಿದ ಜೀವ ನಾನು ಅವರ ಮಗನ ಹೆಂಡತಿಯಾಗುವುದನ್ನು ಬಯಸಿರಲಿಲ್ಲ; ಮನಸಾರೆ ಒಪ್ಪಿರಲೂ ಇಲ್ಲ. ಚೆನ್ನಾಗಿಯೇ ಇರಬಹುದಾಗಿದ್ದ ಅನುಬಂಧವೊಂದು ಮರೆಯಾಗಿ ಅತ್ತೆ ಅತ್ತೆಯೇ ಆಗಿ ಸೊಸೆ ಸೊಸೆಯೇ ಆಗಿ ಬಾಳಿದವರು ನಾವು. ಅಮ್ಮನಾಗುವುದಕ್ಕೆ ಅವರೂ ಸಿದ್ಧರಿರಲಿಲ್ಲ, ಬಹುಶಃ ಮಗಳಂತಿರುವುದಕ್ಕೆ ನನಗೂ ಸಾಧ್ಯವಾಗಲಿಲ್ಲ.
ನನ್ನ ಮದುವೆಯಾಗಿ ಮೂರನೇ ವರ್ಷಕ್ಕೆ ಅವರಿಗೆ ಪಾಶ್ರ್ವವಾಯು ತಗಲಿತು. ನಾನು ಆಗಿನ್ನೂ ಎರಡನೇ ಮಗುವಿನ ತಾಯಿಯಾಗುವವಳಿದ್ದೆ. ಇತ್ತ ಎರಡು ವರ್ಷದ ಮಗು, ಬಸಿರಿನ ಬಯಕೆಯ ಸಂಕಟಗಳ ಮಧ್ಯೆ ಹಾಸಿಗೆ ಹಿಡಿದ ಅತ್ತೆ. ಬಸಿರು ಭಾರವಾಗುವವರೆಗೂ ಎಣ್ಣೆ ಹಚ್ಚಿ ಸ್ನಾನ ಮಾಡಿಸುವುದರಿಂದ ತೊಡಗಿ ಎಲ್ಲ ಕರ್ತವ್ಯಗಳನ್ನು ಮಾಡಿದೆ. ತನ್ನ ಹೆಂಡತಿ ಹಾಸಿಗೆ ಹಿಡಿದ ಬರೋಬ್ಬರಿ ಐದು ತಿಂಗಳ ನಂತರ ಅವರನ್ನು ನೋಡುವುದಕ್ಕೆ ಸಾಧ್ಯವಾದ ಮಾವನಿಗೆ ಅವರ ಮೇಲೆ ಉಕ್ಕಿದ ಕನಿಕರದ ಪರಿಣಾಮ ಅತ್ತೆ ಕುಳಿತಲ್ಲಿಗೆ ಎಲ್ಲವನ್ನೂ ಪೂರೈಸುವಲ್ಲಿ ಉತ್ಸುಕರಾದರು. ಆ ಸಂದರ್ಭದಲ್ಲಿ ಅತ್ತೆಗದು ಹಿತವೆನಿಸಿದರೂ ಅವರ ಆರೋಗ್ಯದ ನಿಟ್ಟಿನಿಂದ ಅದು ಪ್ರತಿಕೂಲವೇ ಆಗಿತ್ತು. ಅವರು ತಮ್ಮ ಕೆಲಸಗಳಿಗಾದರೂ ಎದ್ದು ಹೊರಗೆ ಹೋಗಲೇಬೇಕು ಎಂದ ನಾವು ತಪ್ಪಿತಸ್ಥರಾದೆವು. ಅತ್ತೆಯವರ ಆರೋಗ್ಯ ದಿನದಿನಕ್ಕೆ ಕುಸಿಯಲಾರಂಭಿಸಿದ್ದು ಯಾರಿಗೂ ಗೊತ್ತಾಗಲಿಲ್ಲ. ಹೊಸಮನೆ ಕಟ್ಟಿದ ಸಂಭ್ರಮವನ್ನು ಹೆಚ್ಚು ದಿನ ಅನುಭವಿಸಲಾಗದಂತೆ ಅತ್ತೆಯವರು ಬಿದ್ದು ತೊಡೆ ಎಲುಬು ಮುರಿದು ಆಪರೇಷನ್ ಅನಿವಾರ್ಯವಾಯಿತು. ಪಾಶ್ರ್ವವಾಯು ಆದ ಬದಿಯೇ ಮುರಿದದ್ದಾದರೂ ಬಲಗಾಲಿನ ಬಲದಿಂದ ಕಾಲೂರಿ ಎದ್ದು ನಿಲ್ಲುವ ಧೈರ್ಯ ಅವರೆಂದೂ ಮಾಡಲಿಲ್ಲ. ಮಂಚ ಬಿಟ್ಟು ಕದಲಲಾಗದ ಸ್ಥಿತಿಯಲ್ಲಿ ಹತ್ತು ತಿಂಗಳು ಕಳೆದಾಯಿತು. ಜೊತೆಗೆ ಇನ್ಸುಲಿನ್ನ ಚುಚ್ಚುಮದ್ದಿಗೂ ಹೆದರದೆ ಮುನ್ನೂರೈವತ್ತರ ಮೇಲೆ ಉಳಿದ ಸಕ್ಕರೆ ಕಾಯಿಲೆ ನಿಧಾನಕ್ಕೆ ಅವರಿಗೆ ಮೂತ್ರಸಂಬಂಧಿ ಸಮಸ್ಯೆಗಳನ್ನು ಹುಟ್ಟುಹಾಕಿತು. ಎಚ್ಚರವಿದ್ದರೂ ಮೂತ್ರವಿಸರ್ಜನೆಯಾದ ಮೇಲಷ್ಟೇ ಅರಿವಿಗೆ ಬರುವ ಪರಿಸ್ಥಿತಿಯಿಂದಾಗಿ ದಿನಕ್ಕೆ ಹತ್ತಾರು ಹಾಸಿಗೆ ವಸ್ತ್ರಗಳನ್ನು ಬದಲಿಸುವ ಕೆಲಸ. ಮಾವನವರ ಆರೋಗ್ಯ ಚೆನ್ನಾಗಿದ್ದಾಗ ಅದೆಲ್ಲವನ್ನೂ ಅವರೇ ಮಾಡಿದರೂ ಬಟ್ಟೆ ಒಗೆಯುವ ಕೆಲಸ ನನ್ನದಾಗಿತ್ತು. ಡಯಾಪರ್ ಹಾಕಿಸೋಣವೆಂದರೆ ಐದು ನಿಮಿಷಗಳಿಗೂ ಅದನ್ನು ಇರಗೊಡದೆ ಹರಿದುಹಾಕುತ್ತಿದ್ದುದರಿಂದ ಅದರಿಂದಲೇನೂ ಪ್ರಯೋಜನವಿರಲಿಲ್ಲ.
ಈಗ ತಿಂಗಳ ಹಿಂದೆ ಒಂದು ದಿನ ಬೆಳಗ್ಗೆ ಇದ್ದಕ್ಕಿದ್ದ ಹಾಗೆ ಮತ್ತೆ ಮಾತು ತೊದಲಿತು. ಶುಗರ್ ಆಟವಾಡಿಸುತ್ತಿರಬೇಕು ಎಂದು ತಕ್ಷಣಕ್ಕೆ ಅನಿಸಿದರೂ ಅಂದು ಭಾನುವಾರವಾಗಿ ವೈದ್ಯರು ಲಭ್ಯವಿಲ್ಲದ್ದರಿಂದ ಮರುದಿನ ಚೆಕಪ್ಗೆ ಹೋಗಬೇಕಾಯಿತು. ತಕ್ಷಣವೇ ಐಸಿಯುಗೆ ಸೇರಿಸಿಕೊಂಡ ವೈದ್ಯರು ನಾಲ್ಕು ದಿನವಷ್ಟೇ ಆಸ್ಪತ್ರೆಯಲ್ಲಿ ಉಳಿಸಿಕೊಂಡರು. ‘ಇನ್ನು ಔಷಧಿಯಿಂದೇನೂ ಪ್ರಯೋಜನವಿಲ್ಲಮ್ಮ. ನೀವು ಎಷ್ಟು ದಿವಸ ಅಂತ ಕಾಲೇಜು ಬಿಟ್ಟು ಇಲ್ಲಿರುತ್ತೀರಾ? ಯಾವಾಗ ಮನೆಗೆ ಕರೆದೊಯ್ಯುತ್ತೀರಿ ಹೇಳಿ’ ಎಂದು ವೈದ್ಯರೆಂದಾಗ ಆತಂಕವಷ್ಟೇ ಉಳಿದಿತ್ತು. ಆಸ್ಪತ್ರೆಯಲ್ಲಿರುವಂಥ ವ್ಯವಸ್ಥೆಗಳನ್ನು ಮನೆಯಲ್ಲಿ ಮಾಡಿಕೊಳ್ಳುವುದು ಸಾಧ್ಯವೇ? – ದೇವರು ನಮಗಷ್ಟು ಧೈರ್ಯವನ್ನೂ ಶಾಂತಿಯನ್ನೂ ಕೊಟ್ಟಾನೇ – ಎಂಬೆಲ್ಲ ಪ್ರಶ್ನೆಗಳ ನಡುವೆಯೂ ಹರಸಾಹಸ ಮಾಡಿ ಅವರನ್ನು ಮನೆಗೆ ಕರೆತಂದಾಯಿತು. ತೊದಲುತೊದಲುತ್ತಲೇ ತನ್ನನ್ನು ಎದ್ದು ಕೂರಿಸು ಎಂದು ದಿನಕ್ಕೆ ಹತ್ತಾರು ಬಾರಿ ಕೇಳುತ್ತಿದ್ದ ಅವರನ್ನು ಎಬ್ಬಿಸಿ ಕೂರಿಸುವುದೂ ಕಠಿಣವೆಂಬ ಸ್ಥಿತಿ. ಮತ್ತೆ ಮೂರೇ ದಿನಕ್ಕೆ ಆ ಕೋರಿಕೆಗಳೂ ನಿಂತುಹೋದವು. ಸನ್ನೆಯೂ ನಿಂತುಹೋಯಿತು. ಬಲದ ಕೈಕಾಲುಗಳನ್ನೂ ಆಡಿಸದ ಅವಸ್ಥೆಯಾಯಿತು. ಪರಿಣಾಮ ಮಲಗಿದಲ್ಲಿಂದ ಕೊಂಚವೂ ಅಲ್ಲಾಡದೆ ಬೆನ್ನಿನಲ್ಲಿ ಸುಟ್ಟಗಾಯದಂಥ ಗುರುತು ಮೂಡಲಾರಂಭಿಸಿತು. ಅದೇ ಬೆಡ್ಸೋರ್ ಎಂಬುದೂ ಅರ್ಥವಾದದ್ದು ಮತ್ತೆ. ಕೈಯಷ್ಟಗಲದ ಹುಣ್ಣಾಗಿ ಅದರಿಂದ ನೀರು ಸೋರಿ ಅವರನ್ನು ಕೊಂಚ ಮಗ್ಗಲು ಬದಲಾಯಿಸಿದರೂ ಇಡಿಯ ರೂಮ್ ತುಂಬಿಕೊಳ್ಳುವ ಕಟುವಾಸನೆ ಮನುಷ್ಯನ ಬದುಕಿನ ವಿವಿಧ ಮಜಲುಗಳ ದರ್ಶನ ಮಾಡಿಸಿತ್ತು.
ಹಸಿವು ನೀರಡಿಕೆಗಳ ಪರಿವೆಯಿಲ್ಲದೆ ಬಾಯಲ್ಲಷ್ಟೆ ಗೊರಗೊರನೆ ಉಸಿರಾಡುತ್ತಾ ಮಲಗಿದ್ದ ಅತ್ತೆಗೆ ಗಂಜಿ, ನೀರು ಕುಡಿಸುವುದು ಕಷ್ಟಸಾಧ್ಯವೇ ಆಗಿತ್ತು. ಅವರಿಗೆ ಸದಾ ಬೇಕಾಗುತ್ತಿದ್ದುದು ಕಾಫಿ ಅಥವಾ ಚಹಾ. ಅದನ್ನು ಮಾತ್ರ ಹನಿ ಚೆಲ್ಲಿಹೋಗದ ಹಾಗೆ ನುಂಗುತ್ತಿದ್ದರು. ಸಾಯುವ ದಿನವೂ ಬೆಳಗ್ಗೆ ಏಳೂವರೆಗೆ ಕುಡಿಸಿದ ಚಹಾ ಪೂರ್ತಿಯಾಗಿ ಅವರ ಹೊಟ್ಟೆಗೆ ಸೇರಿತ್ತು. ಸಾಯುವ ಮುನ್ನಾದಿನ ಗಂಜಿ ಕುಡಿಸಬೇಕಾದರೆ ಅವರು ನನ್ನನ್ನೇ ನೋಡುತ್ತಿದ್ದಂತೆ ಅನುಭವಕ್ಕೆ ಬಂದಿತ್ತು. ಆದರೆ ಯಾವುದೇ ಪ್ರತಿಕ್ರಿಯೆ ಶೂನ್ಯವಾಗಿ ಅದಾಗಲೇ ಎರಡು ವಾರಗಳ ಮೇಲಾಗಿದ್ದುದರಿಂದ ಅದು ನನ್ನ ಭ್ರಮೆಯೆಂದೇ ಭಾವಿಸಿದ್ದೆ. ಆದರೆ ಅದೇ ದಿನ ಸಂಗಾತಿ ಅವರಿಗಾಗಿ ವಿಷ್ಣುಸಹಸ್ರನಾಮ ಪಠಣ ಮಾಡುವಾಗಲೂ ಪೂರ್ತಿಯಾಗಿ ಕಣ್ತೆರೆದು ಅವರನ್ನೇ ನೋಡುತ್ತಿದ್ದರಂತೆ. ಆ ಕಣ್ಣುಗಳಲ್ಲಿ ಅವರು ಪ್ರಯತ್ನಿಸಿದ ಸಂವಹನವಾದರೂ ಏನು? ಗೊತ್ತಾಗಲೇ ಇಲ್ಲ.
ಕೊನೆಯ ದಿನ ಅವರಿಗೆ ಗಂಜಿ ಕುಡಿಸುತ್ತಿರಬೇಕಾದರೆ ಮಾವ ಯಾವುದೋ ಹಳೆಯ ಕಥೆಗಳನ್ನು ನನಗೆ ಹೇಳುತ್ತಿದ್ದರು. ಸಮಯ ಬೆಳಗ್ಗಿನ ಒಂಬತ್ತು ದಾಟಿತ್ತು.
ಏನು ಮಾಡಿದರೂ ಗಂಜಿ ನುಂಗಲೊಲ್ಲದ ಅತ್ತೆಗೆ ಎಳೆಯ ಮಕ್ಕಳಿಗೆ ಆಮಿಷವೊಡ್ಡುವಂತೆ ‘ಅತ್ತೆ, ನೀವು ಬೇಗ ಗಂಜಿ ಕುಡಿದರೆ ಬೆಚ್ಚಗಿನ ನೀರಲ್ಲಿ ಮೈ ಒರೆಸಿ, ಪೌಡರ್ ಹಾಕಿಸಿ ಹೊಸ ನೈಟಿ ತೊಡಿಸುತ್ತೇನೆ..’ ಎಂದದ್ದೇ ಅವರ ಕಣ್ಣು ನಿಧಾನವಾಗಿ ತೆರೆದುಕೊಂಡಂತೆ ಕಣ್ಣುಗುಡ್ಡೆ ಎಡದಿಂದ ಚಲಿಸಿ ಚಲಿಸಿ ಮಧ್ಯಕ್ಕೆ ಬಂದವು. ಬಲದ ಕೈ ಅವರ ನಿಯಂತ್ರಣ ಮೀರಿದಂತೆ ಚಲಿಸಿ ಸೆಟೆದುಕೊಂಡಿತು. ದೀರ್ಘವಾಗಿ ತೆಗೆದುಕೊಂಡ ಉಸಿರು ಸ್ತಬ್ಧವಾಯಿತು.
‘ನೈಟಿಗಾಗಿ ಇಷ್ಟು ಆಸೆ ಪಟ್ಟಳೇನಮ್ಮ ಇವಳು, ಇಷ್ಟು ದಿನ ನರಳುವಷ್ಟು!’ ಮಾವ ಉದ್ಗರಿಸಿದರು. ಒಂದು ದಿನ ಅವರಿಗೆ ಹಾಕಿಸಿದ ನೈಟಿ ಹಳೆಯದು, ಕೊಂಚ ಹೊಲಿಗೆ ಬಿಚ್ಚಿತ್ತು ಎಂಬ ಕಾರಣಕ್ಕೆ ಮಾವನ ಮೇಲೆ ಸಿಟ್ಟಾಗಿ ಹರಿದು ಹರಿದು ಹಾಕಿದ್ದರಂತೆ! ಅದನ್ನು ನೆನಪಿಸಿಕೊಂಡ ಮಾವ ಒಂದೆರಡು ನಿಮಿಷ ಅತ್ತರು. ಆಗಷ್ಟೆ ಕಾಲೇಜಿಗೆ ಹೋಗಿದ್ದ ಪತಿಗೆ ಕರೆ ಮಾಡಿ ‘ಪರೀಕ್ಷೆ ಡ್ಯೂಟಿನ ಬೇರೆಯವರಿಗೆ ವಹಿಸಿ ತಕ್ಷಣ ಬಾ’ ಎಂದೆ. ಸಾವನ್ನು ಅಷ್ಟು ಹತ್ತಿರದಿಂದ ಕಂಡ ಅನುಭವದಲ್ಲಿ ಮನಸ್ಸು ತಲ್ಲಣಗೊಂಡಿತ್ತು. ಅವರ ಶರೀರವನ್ನು ಎತ್ತಿ ಹೊರಗೆ ಮಲಗಿಸಬೇಕಾದರೂ ನಾನು ಸೇರಿಕೊಳ್ಳಬೇಕಾಯಿತು. ಈ ಎಂಟು ವರ್ಷಗಳಲ್ಲಿ ಅವರನ್ನು ಎತ್ತುವುದಕ್ಕೆ ಅದೆಷ್ಟು ಸಲ ಸಂಗಾತಿಗೆ ಜೊತೆಯಾಗಿದ್ದೆನೋ… ಈ ಹಂತದಲ್ಲೂ ನಾನು ಸೇರಬೇಕಾಗಿ ಬಂದ ಪರಿಗೆ ಬೆರಗಾದೆ. ಅತ್ತೆ ನನ್ನ ಕುರಿತಾಗಿ ಮಾವನಲ್ಲಿ ಅಸಮಾಧಾನ ವ್ಯಕ್ತಪಡಿಸುವಾಗೆಲ್ಲ ಮಾವ ಹೇಳುತ್ತಿದ್ದುದಿಷ್ಟು: ‘ನೀನೇನೇ ಹೇಳಿದರೂ ನಿನ್ನ ಚಾಕರಿಗೆ ಒದಗುವವಳು ಇದೇ ಸೊಸೆ. ನಿನ್ನ ಕಡೆಗಾಲಕ್ಕೆ ನಿನ್ನ ಜೊತೆಗಿರುವವಳೂ ಇವಳೇ.’ ಅದು ನಿಜವಾಯಿತು. ಕೊನೆಯ ಗುಟುಕು, ನೀರು ನನ್ನ ಕೈಯಿಂದಲೇ ಅವರ ಉದರ ಸೇರಿತು. ಸಂಸ್ಕಾರಕ್ಕೆ ಕೊನೆಯ ಕಟ್ಟಿಗೆ ತುಂಡನ್ನೂ ಶವದ ಮೇಲೆ ಇರಿಸುವ ಅವಕಾಶ ನನ್ನದಾಯಿತು.
ಅತ್ತೆ ದೀಪವಾದರು. ಅವರ ಮಂಚ, ಅವರು ಮಲಗುವ ಜಾಗವನ್ನು ಮತ್ತೆ ಮತ್ತೆ ನೋಡಿಹೋಗುತ್ತದೆ. ಊಟಕ್ಕೆ ಕೂರುವಾಗ ಉಪ್ಪಿನಕಾಯಿ ಬಡಿಸದಿದ್ದರೆ ಅವರಿಗಾಗುತ್ತಿದ್ದ ಕೋಪ ನೆನಪಾಗುತ್ತದೆ. ಚಹಾ ಬಗ್ಗಿಸುವಾಗ ಮೊದಲಿನಂತೆ ನಾಲ್ಕು ಲೋಟಗಳನ್ನು ತೆಗೆದಿಡುತ್ತೇನೆ. ಅವರ ನೋವಿನಿಂದ ಅವರಿಗೆ ಮುಕ್ತಿ ಸಿಕ್ಕಿತಲ್ಲ ಎಂಬ ಸಮಾಧಾನವೊಂದಿದ್ದರೂ ಸ್ಥಾನವೊಂದು ಶೂನ್ಯವಾದ ರೀತಿ ಕಾಡುತ್ತಿದೆ.