ಈ ಸಮಸ್ತ ಸೃಷ್ಟಿಯು ದೇವನಿರ್ಮಿತ ಭವ್ಯ ದಿವ್ಯ ಮೂರ್ತಿ! ಸುಂದರವಾದ ಶಿಲ್ಪವನ್ನು ನೋಡಿ ಶಿಲ್ಪಿಯನ್ನು ನೆನೆಯುತ್ತೇವೆ. ಹಾಗೆ ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯನ್ನು ನೋಡಿ ಸೃಷ್ಟಿಕರ್ತನಾದ ಆ ಮಹಾದೇವನನ್ನು ನಾವು ನೆನೆಯಬೇಕು, ನಮಿಸಬೇಕು. ಸೃಷ್ಟಿಯನ್ನು ಗೌರವಿಸಿದರೆ ಸೃಷ್ಟಿಕರ್ತನನ್ನು ಗೌರವಿಸಿದಂತೆ. ಶಿಲ್ಪವನ್ನು ಮೆಚ್ಚಿ ಕೊಂಡಾಡಿದರೆ ಶಿಲ್ಪಿಯನ್ನು ಕೊಂಡಾಡಿದಂತೆಯೇ! ಸೃಷ್ಟಿಯು ಶಿಲ್ಪವಾದರೆ ಸೃಷ್ಟಿಕರ್ತನು ದೇವಶಿಲ್ಪಿ!
ಮೈಕೆಲ್ ಏಂಜೆಲೋ ಇಟಲಿ ದೇಶದ ಮಹಾಶಿಲ್ಪಿ. ಬಣ್ಣದ ಚಿತ್ರಗಳಲ್ಲಿ ಸೌಂದರ್ಯವನ್ನು ಕಲ್ಲಿನಲ್ಲಿ ಜೀವವನ್ನು ತುಂಬಿದ ಜಗತ್ ಪ್ರಸಿದ್ಧ ಕಲಾವಿದ. ಒಂದು ದಿನ ಅವನ ಚಿತ್ರಶಾಲೆಯನ್ನು ನೋಡಲು ದೇಶವಿದೇಶದ ರಾಜಮಹಾರಾಜರು ಆಗಮಿಸಿದ್ದರು. ಅವರೆಲ್ಲರೂ ಅವನ ಚಿತ್ರಕಲೆ ಹಾಗೂ ಶಿಲ್ಪಕಲೆಗಳನ್ನು ಕಂಡು ಹೃದಯದುಂಬಿ ಕೊಂಡಾಡಿದರು. ತಿರುಗಿ ಹೋಗುವಾಗ ಆ ಮಹಾ ಕಲಾವಿದ ಮೈಕೆಲ್ ಏಂಜೆಲೋನನ್ನು ಒಂದು ಸಾರಿ ಕಣ್ಣಾರೆ ನೋಡಬೇಕೆಂದು ಹುಡುಕಾಡಿದರೆ ಅಲ್ಲೆಲ್ಲಿಯೂ ಅವನು ಕಾಣಲಿಲ್ಲ. ಒಬ್ಬ ಮಿತ್ರನು ಅವನನ್ನು ಹುಡುಕುತ್ತ ಸಾಗರದ ದಡಕ್ಕೆ ಬಂದ. ಅಲ್ಲಿ ಮೈಕೆಲ್ ಏಂಜೆಲೋ ಸೂರ್ಯೋದಯದ ಸೌಂದರ್ಯ ಸವಿಯುವುದರಲ್ಲಿ ಮಗ್ನನಾಗಿದ್ದ. ಮಿತ್ರ ಕೇಳಿದ; “ಅಲ್ಲಿ ರಾಜಮಹಾರಾಜರು ನಿನಗಾಗಿ ಕಾಯುತ್ತಿದ್ದಾರೆ. ಇಲ್ಲಿ ನೀನೇನು ಮಾಡುತ್ತಿರುವೆ?”
ಮೈಕೆಲ್ ಏಂಜೆಲೋ ಹೇಳಿದ – “ವಿಶಾಲ ಆಗಸದ ಚಿತ್ರಪಟದಲ್ಲಿ ಆ ಮಹಾದೇವನು ಸೊಗಸಾದ ಸಹಸ್ರ ಸಹಸ್ರ ಚಿತ್ರಗಳನ್ನು ಕ್ಷಣಕ್ಷಣವೂ ಬರೆಯುತ್ತಿದ್ದಾನೆ. ಅದನ್ನು ನೋಡಿ ನಾನು ಕಲಾಪ್ರೇರಣೆ ಪಡೆಯುತ್ತಿದ್ದೇನೆ. ದೇವನು ಬ್ರಹ್ಮಶಿಲ್ಪಿ. ನಾನು ಅವನ ಅನುಕರಣೆ ಮಾಡುವವನಷ್ಟೆ!” ಎಂಥ ಹೃದಯಸ್ಪರ್ಶಿಯಾದ ಮಾತು ಇದು! ಆದುದರಿಂದಲೇ ಆ ಪರಮಾತ್ಮನು ಬ್ರಹ್ಮಶಿಲ್ಪಿಯಾದರೆ ಈ ಸೃಷ್ಟಿಯು ಆತನ ದಿವ್ಯ ಕಲಾಕೃತಿ. ಅಂತೆಯೇ ಭಕ್ತನು ಈ ಸತ್ಯಂ ಶಿವಂ ಸುಂದರಂ ಸೃಷ್ಟಿಯಲ್ಲಿ ದೇವನನ್ನು ಕಂಡು ಅರ್ಪಿಸಿ ಒಲವಿನಿಂದ ಆರಾಧಿಸಿ ಆನಂದಿಸುತ್ತಾನೆ.
ತಂದೆಯು ತಾನು ಬಾಡಿಗೆಮನೆಯಲ್ಲಿ ಕಾಲ ಕಳೆದು ಮಗನಿಗೆ ಸುಂದರವಾದ ಹೊಸ ಮನೆ ಕಟ್ಟಿಸಿಕೊಟ್ಟು ಕಣ್ಮರೆಯಾಗುತ್ತಾನೆ. ಆ ಮನೆಯನ್ನು ನೋಡಿದಾಗಲೆಲ್ಲ ಮಗನಿಗೆ ತಂದೆಯ ನೆನಪಾಗಿ ಎದೆತುಂಬಿಬರುತ್ತದೆ. ಕಣ್ಣುಗಳು ತೇವಾಗುತ್ತವೆ. ಅದು ಪಿತೃಭಕ್ತಿ, ಹಾಗೆಯೇ ಈ ಭವ್ಯ ದಿವ್ಯ ಸೃಷ್ಟಿಯನ್ನು ಕಂಡಾಗ, ನಮಗೆ ಆ ಮಹಾದೇವನ ಕಾಣದ ಕೈಗಳು ನೆನಪಾಗಿ ಹೃದಯತುಂಬಿಬಂದರೆ ಅದೇ ಶಿವಭಕ್ತಿ, ಶಿವಾಚಾರ!