ಒಂದು ಕ್ಷಣ ನನ್ನಲ್ಲಿ ಭೀತಿ ಕಾಣಿಸಿಕೊಂಡಿತು.
ಬಂದವನು ಭೀಮಸೇನನಿರಬಹುದೇ?
ಯುಧಿಷ್ಠಿರನೆದುರು ತನ್ನ ಆಕ್ರೋಶವನ್ನು ಪೂರ್ಣ ಪ್ರಕಟಿಸಲಾರದೆ ಈಗ ಕತ್ತಲಾವರಿಸುತ್ತಿದ್ದಂತೆ ಉಳಿದವರಿಗೆ ಅರಿವಾಗದಂತೆ ಕಡೆಗೆ ಬಂದನೇ? ಅವನ ಸೇಡಿನ್ನೂ ತೀರಿಲ್ಲವೆ? ಏನು ಮಾಡುತ್ತಾನೀಗ? ನನ್ನ ಸಾವನ್ನು ಕಣ್ಣಾರೆ ನೋಡಲೆಂದು ಬಂದನೇ? ಅಥವಾ ಕೈಯಾರ ಕೊಲ್ಲುವನೆ? ಅಲ್ಲಾ ತೊಡೆಮುರಿದು ಬಿದ್ದ ನನಗೆ ಇನ್ನೂ ಚಿತ್ರಹಿಂಸೆ ಮಾಡಲೆಂದು ಬಂದನೇ? ಭೀಮ ಮಾಡಬಹುದಾದುದನ್ನು ಊಹಿಸಿಯೇ ಬೆದರಿದೆ.
ಆದರೆ.. ಬರುತ್ತಿರುವವನು ಭೀಮನಿರಲಾರ ಅನಿಸಿತು. ಭೀಮನ ಕಟ್ಟುಮಸ್ತಾದ ದೇಹವಲ್ಲ ಇದು. ತೆಳುವಾದ ಕಾಯ. ಅಷ್ಟೇ ಅಲ್ಲ, ಅವನ ಹಿಂದಿನಿಂದ ಮತ್ತಿಬ್ಬರು ಕಾಣಿಸಿಕೊಂಡರು. ಯಾರಿವರು? ಚಕಿತಚಿತ್ತನಾಗಿ ನಾನು ನೋಡುತ್ತಲೇ ಇದ್ದೆ. ದಾಪುಗಾಲಿಕ್ಕುತ್ತ ಬರುತ್ತಿದ್ದ ಆ ಮೂವರು ಸಮೀಪಗತರಾಗುತ್ತಿದ್ದಂತೆ ಎಲ್ಲ ನಿಚ್ಚಳವಾಯಿತು.
ಬಂದವನು ಅಶ್ವತ್ಥಾಮ. ಆಚಾರ್ಯಪುತ್ರ. ಅವನ ಹಿಂದಿದ್ದವರು ಆಚಾರ್ಯ ಕೃಪರು ಮತ್ತು ಯಾದವ ವೀರ ಕೃತವರ್ಮ. ಇವರು ಇಷ್ಟು ಹೊತ್ತು ಎಲ್ಲಿದ್ದರು? ಈಗ ಇಲ್ಲಿಗೇಕೆ ಬಂದರು? ಯಾಕೋ ನನಗೆ ಅವರ ಬರೋಣ ಹಿತವೆನಿಸಲಿಲ್ಲ. ನನ್ನ ಅಂತಿಮ ಗಳಿಗೆಗಳಲ್ಲಿ ಒಂಟಿಯಾಗಿರುವುದೇ ನನಗೆ ಬೇಕಾಗಿತ್ತು. ಈಗಿವರು ಬಂದು ಸಾಧಿಸುವುದಕ್ಕೇನಿದೆ? ನನ್ನ ಕೊನೆಯ ಹೋರಾಟದ ಮುನ್ನ ಕೊಳದ ಬಳಿ ಕಾಣಿಸಿಕೊಂಡು ನನ್ನನ್ನು ಕರೆದು ಮಾತನಾಡಿಸಿದವರು ನನಗೆ ಉಪಕಾರಕ್ಕಿಂತ ಹೆಚ್ಚು ಅಪಕಾರವನ್ನೇ ಮಾಡಿದರು. ಇದೊಂದು ದಿನ ಕಳೆದು ಹೋಗುತ್ತಿದ್ದರೆ.. ಏನೋ ಆಗಿಬಿಡುತ್ತಿತ್ತು. ಬಲರಾಮ ಬಂದು ನನ್ನ ಪಕ್ಷೀಯನಾಗಿ ಪೂರ್ವದ ಒಪ್ಪಂದದಂತೆ ಭೀಮಾದಿಗಳನ್ನು ಎದುರಿಸಿ ಯುದ್ಧದ ಫಲಿತಾಂಶವೇ ಬದಲಾಗಿ…ಛೇ…ಎಲ್ಲವನ್ನೂ ಕೆಡಿಸಿಹಾಕಿದರು. ಅವರು ಗಟ್ಟಿದನಿಯಲ್ಲಿ ಮಾತನಾಡಿದ್ದೇ ನನ್ನ ಸುಳಿವು ಪಾಂಡವರಿಗೆ ಸಿಗುವಂತಾಗಿರಬೇಕು. ಇನ್ನು ಮರುಗಿ ಮಾಡುವುದೇನು?
ಲಗುಬಗೆಯಿಂದ ಸಾಗಿಬಂದ ಅವರು ನನ್ನ ಬಳಿ ನಿಂತರು. “ಕುರುಕುಲ ಸಾರ್ವಭೌಮನಿಗೆ ಜಯವಾಗಲಿ. ನಿನ್ನ ಭೃತ್ಯರಾದ ನಮ್ಮ ಕಡೆಗೆ ಕೃಪೆಯಿರಲಿ” ಇಷ್ಟು ನುಡಿದ ಅಶ್ವತ್ಥಾಮ ತಲೆಬಾಗಿ ನಿಂತ. “ಆಚಾರ್ಯಪುತ್ರ, ಕಂಡೆಯಾ ನನ್ನ ಹೀನ ಅವಸ್ಥೆಯನ್ನು? ಕೊನೆಗೂ ನಿಷ್ಪಾಂಡವ ಪೃಥ್ವಿಯನ್ನಾಳುವ ನನ್ನ ಸಂಕಲ್ಪ ಸಿದ್ಧಿಸದೇ ಹೋಯಿತು. ಹತಭಾಗ್ಯನಾದ ನನ್ನನ್ನು ಅನುಸರಿಸಿದ ಯೋಧರೆಲ್ಲ ಹತರಾದರು. ನೀವು ನಿರಾಶ್ರಿತರಾದಿರಿ. ಅಸಹಾಯನಾಗಿ ತೊಡೆ ಮುರಿದು ಬಿದ್ದ ನನ್ನೀ ಸ್ಥಿತಿಯಲ್ಲಿ ಏನನ್ನು ತಾನೇ ನಾ ಹೇಳಲಾಪೆ? ಮೃತ್ಯುದೇವತೆಯ ಪ್ರತೀಕ್ಷೆಯಲ್ಲಿ ಇದ್ದೇನೆ. ಪಾಂಡವರು ಜಯಶಾಲಿಗಳಾದರು.”
“ಪ್ರಭೋ ಹಾಗೆನ್ನದಿರು. ನಮಗಿದು ಪ್ರಿಯವೆಂದು ತಿಳಿದೆಯ? ನಿನ್ನ ಹಾಗೂ ಭೀಮನ ಯುದ್ಧವಾಗುವ ಕಾಲದಲ್ಲಿ ದೂರವಿದ್ದೆವು. ಅಸಹಾಯರೂ ಆಗಿದ್ದೆವು. ಯುದ್ಧದ ಪರ್ಯವಸಾನ ಹೇಗೇ ಆದರೂ ನಾವು ನಿನ್ನ ಆಶ್ರಿತರಷ್ಟೆ. ಮುಂದೇನು ಅನ್ನುವುದನ್ನು ಯೋಚಿಸೋಣ. ಅದಕ್ಕೆಂದೇ ಇಲ್ಲಿಗೆ ಬಂದವರು ನಾವು. ಛೇ..ಇದೇನು ಪ್ರಭೋ ನಿನ್ನ ಅವಸ್ಥೆ! ಹೇಗಿದ್ದವನು ಹೇಗಾಗಿಹೋದೆ. ನಮಗೆಲ್ಲ ಮಹಾವಿಭುವಾಗಿ ಮೆರೆದ ನಿನಗೀ ದುರ್ಗತಿಯೇ? ನಮ್ಮೆಲ್ಲರಿಂದ ಆವೃತನೂ ಪರಿಸೇವ್ಯನೂ ಆಗಿ ಸಿಂಹಾಸನದ ಮೇಲೆ ವಿರಾಜಿಸುತ್ತಿದ್ದ ನೀನು ಇಲ್ಲಿ ಈ ಧೂಳಿನಿಂದ ತುಂಬಿದ ಬಯಲಿನಲ್ಲಿ ಏಕಾಂಗಿಯಾಗಿ ಮಲಗುವಂತಾಯಿತೇ, ವಿಧಿಯೇ!”
ಅವನ ಆರ್ತತೆ ನನ್ನ ಅಂತರಂಗವನ್ನು ಕಲಕಿತು.
“ನಿಜ ಆಚಾರ್ಯಪುತ್ರ, ನನ್ನ ವಿಧಿಯಿದು. ಕಪಟಿಯಾದ ಕೃಷ್ಣನ ಮಾತಿಗೆ ಮರುಳಾಗಿ ಯುದ್ಧವಿಮುಖನಾಗಿ ಪಾಂಡವರಿಗೆ ರಾಜ್ಯಾರ್ಧವನ್ನು ಕೊಡುವುದಕ್ಕೆ ಒಪ್ಪಿದ್ದರೆ ಬದುಕಿರಬಹುದಿತ್ತು. ಆದರೆ ಅದೆಂತಹ ಬದುಕು? ನನ್ನ ನಿಲವನ್ನು ಬಿಟ್ಟುಕೊಡದೆ ಓರ್ವ ಕ್ಷತ್ರಿಯಸತ್ತಮನಿಗೆ ಉಚಿತವಾದ ಬಗೆಯಿಂದ ಧೀರನಾಗಿ ಹೋರಾಟವನ್ನೇ ಕೊಟ್ಟಿದ್ದೇನೆ. ಸತ್ತರೇನು? ಉತ್ತಮ ಲೋಕಗಳು ನನಗೆ ದೊರೆಯುವವು. ಪಾಂಡವರಿಗಾದರೂ ಧರ್ಮಯುದ್ಧದಿಂದ ನನ್ನನ್ನು ಗೆಲ್ಲುವುದಾಗಲಿಲ್ಲ. ಅವರು ಅಧರ್ಮದ ದಾರಿಯನ್ನೇ ಅವಲಂಬಿಸಬೇಕಾಗಿ ಬಂತು. ಅದರ ಫಲವಾಗಿ ಈ ಹೊತ್ತು ಎಲ್ಲರನ್ನೂ, ಎಲ್ಲವನ್ನೂ ಕಳಕೊಂಡು ಬಿದ್ದಿದ್ದೇನೆ. ಭಾಗ್ಯಹೀನನಾಗಿ ನಿಮ್ಮನ್ನು ನೋಡಬೇಕಾಯಿತಲ್ಲ” ಮಾತನಾಡುತ್ತಿದ್ದಂತೆ ನನ್ನ ಧ್ವನಿ ಕಂಪಿಸಿತು. ಕಣ್ಣುಗಳಲ್ಲಿ ನೀರು ತುಂಬಿ ಎದುರಿದ್ದ ಮೂವರ ಬಿಂಬವೂ ಮಸುಕಾಯಿತು.
“ಸುಯೋಧನ, ನನ್ನ ಮಿತ್ರನೇ, ಧೈರ್ಯವನ್ನು ಕಳೆದುಕೊಳ್ಳಬೇಡ. ನಿನ್ನವರಾಗಿ ನಾವು ಮೂವರು ಉಳಿದಿದ್ದೇವೆ. ನಿನ್ನ ಮನಸ್ಸಿಗೆ ಸಮಾಧಾನವನ್ನು ಉಂಟುಮಾಡುವ ಯಾವ ದುಷ್ಕರವಾದ ಕಾರ್ಯವನ್ನಾದರೂ ಸಾಧಿಸಿಕೊಡುವೆವು. ಪಾಂಡವರು ಕೃಷ್ಣ ಸಹಿತರಾಗಿ ನೆಮ್ಮದಿಯನ್ನು ಪಡೆಯಲಾರರು. ಅವರ ವಿನಾಶವನ್ನು ಮಾಡದೆ ನಮಗೆ ವಿಶ್ರಾಂತಿಯಿಲ್ಲ” ಪ್ರತಿಜ್ಞಾವಾಕ್ಯವೆಂಬಂತೆ ಅಶ್ವತ್ಥಾಮನಾಡಿದ ಈ ಮಾತುಗಳಿಗೆ ಸಮ್ಮತಿಸುವಂತೆ ಕೃಪರೂ ಕೃತವರ್ಮನೂ ತಲೆಯೊಲಿದರು.
ಅಶ್ವತ್ಥಾಮನ ಮಾತು ಕೇಳಿ ಅಂತಹ ನಿರಾಶೆಯ ಕೂಪದಲ್ಲಿ ಬಿದ್ದಿದ್ದ ನನಗೂ ಹೊಸದೊಂದು ಹಂಬಲ ಚಿಗುರೊಡೆಯಿತು. ಬ್ರಾಹ್ಮಣನಾಗಿ ಹುಟ್ಟಿ ಕ್ಷಾತ್ರಕರ್ಮದಲ್ಲಿ ಆಸಕ್ತನಾದ ಅಶ್ವತ್ಥಾಮ ಹಠವಾದಿ. ತಾನೇನಾದರೂ ಸಂಕಲ್ಪ ಮಾಡಿ ಹೊರಟರೆ ಅದನ್ನು ಸಿದ್ಧಿಸಿಕೊಳ್ಳಲು ಯಾವ ಯತ್ನವನ್ನಾದರೂ ಕೈಗೊಳ್ಳುವವನು. ಈಗ ನನ್ನ ಮೇಲಣ ಮರುಕದಿಂದಲೇ ಯಾಕಾಗಲೊಲ್ಲದು, ಪಾಂಡವ ವಿನಾಶವನ್ನು ಸಾಧಿಸಬಲ್ಲ ಛಲಬಲಗಳುಳ್ಳವನೆಂದು ತೋರಿತು. ಆದರೂ ಸೈನ್ಯಬಲವಿಲ್ಲದೆ ಹೇಗೆ ಇದನ್ನು ಕೈಗೂಡಿಸಿಕೊಳ್ಳುವುದು ಸಾಧ್ಯ? ಅದನ್ನೇ ಆಡಿದೆ.
“ಗುರುಪುತ್ರ, ನಿನ್ನ ಸ್ನೇಹಭಾವವೇನೋ ಸರಿಯೇ. ನನಗಾದ ಈ ಪರಿಭವವನ್ನು ನೀವು ಹೇಗೆ ನೀಗಬಲ್ಲಿರಿ? ಯುದ್ಧದಲ್ಲಿ ಕಾದಿ ಬಸವಳಿದ ಈ ಸ್ಥಿತಿಯಲ್ಲಿ ಪ್ರಬಲರಾದ ವಿರೋಧಿಗಳನ್ನು ಮಣಿಸುವುದು ಶಕ್ಯವೇನು? ಅಥವಾ ನಾನಾದರೂ ಎದ್ದು ನಿಲ್ಲುವ ಸಂಭವವುಂಟೆ? ಈಗ ಪೌರುಷ ಸೂಚಕವಾದ ಮಾತುಗಳಿಂದ ಏನನ್ನು ತಾನೇ ಸಾಧಿಸಲಾದೀತು?”
ನನ್ನ ಮಾತುಗಳಲ್ಲಿ ಹತಾಶೆ ಎದ್ದುತೋರುತ್ತಿತ್ತು.
“ಸುಯೋಧನ, ಹಿಂದುಮುಂದನ್ನು ಯೋಚಿಸದೇ ಆಡಿದ ನುಡಿಗಳಲ್ಲ. ಪಾಂಡವರು ಈಗ ಗೆದ್ದವರಿರಬಹುದು. ಆದರೆ ಹೇಗೆ? ಆ ಪಾಂಚಾಲರು ಮತ್ತುಳಿದವರ ಬೆಂಬಲದಿಂದ ತಾನೇ? ಅವನು, ಆ ದ್ರುಪದಪುತ್ರ ದೃಷ್ಟದ್ಯುಮ್ನ ನನ್ನ ತಂದೆಯನ್ನು ಕತ್ತಿಯಿಂದ ಕೊಚ್ಚಿ ಕಗ್ಗೊಲೆ ಮಾಡಿದನಲ್ಲ, ಅದೂ ಯೋಗಸಮಾಧಿಯಲ್ಲಿದ್ದಾಗ? ಆ ಸನ್ನಿವೇಶವನ್ನು ಮರೆಯಲಾದೀತೆ? ಅವರ ಸೇನಾಪತಿಯೇ ಇಷ್ಟು ಹೀನನಾದಾಗ ಉಳಿದವರ ಪಾಡೇನು? ನನ್ನೆದೆಯೊಳಗೆ ಪ್ರತೀಕಾರದ ಕಿಚ್ಚು ಉರಿಯುತ್ತಿದೆ. ನಮ್ಮ ಸರ್ವಸೇನೆಯನ್ನೂ ಕೊಂದು ಕಳೆದು ಸುಖವಾಗಿ ನಿದ್ರಿಸುತ್ತಿರುವ ಕೃಷ್ಣ ಸಹಿತರಾದ ಆ ಪಾಂಡವರನ್ನೂ ಅವರ ಅಳಿದುಳಿದ ಬೆಂಬಲಿಗ ಯೋಧರನ್ನೂ ಕತ್ತರಿಸಿ ಚೆಲ್ಲುತ್ತೇನೆ. ಅವರ ನೆತ್ತರಿನಿಂದ ಭೂಮಿಯನ್ನು ತೋಯಿಸುತ್ತೇನೆ. ನಿನ್ನ ಈ ದುಃಸ್ಥಿತಿಗೆ ಕಾರಣರಾದ ಶತ್ರುಗಳ ವಿನಾಶವನ್ನು ಸಂಕಲ್ಪಿಸಿದ್ದೇನೆ ಮಿತ್ರಾ. ಅವರಾರೂ ನಾಳಿನ ಸೂರ್ಯೋದಯವನ್ನು ಕಾಣಲಾರರು.”
ಅಶ್ವತ್ಥಾಮನ ಮಾತು ಮುಗಿಯುತ್ತಿದ್ದಂತೆ ಕೃಪ ಕೃತವರ್ಮರು ಅವನನ್ನು ಅನುಮೋದಿಸಿದರು. ಮೃತ್ಯುವಿನ ನಿರೀಕ್ಷೆಯಲ್ಲಿ ಬಿದ್ದಿದ್ದ ನನಗೆ ಅಮೃತ ಸೇಚನದ ಹಿತವನ್ನು ಉಂಟುಮಾಡಿದ ಅವರ ಕುರಿತು ಕೆಲಕಾಲ ಮೊದಲು ಉದಿಸಿದ್ದ ಅಸಮಾಧಾನ ಇಲ್ಲವಾಯಿತು. ನಿಜವೇ. ಕ್ರುದ್ಧನಾಗಿರುವ ಅಶ್ವತ್ಥಾಮ ಇದನ್ನೆಲ್ಲ ಮಾಡಬಲ್ಲ ಸಮರ್ಥನೇ ಹೌದು. ನಮ್ಮವರನ್ನೆಲ್ಲ ಕೊಂದು ಕಳೆದು ಹಿಗ್ಗುತ್ತಿರುವ ಪಾಂಡವರು ಸುಖವಾಗಿರಕೂಡದು. ಅವರ ಸಾವಿನ ವಾರ್ತೆ ಕೇಳಿಯೇ ನಾನು ಸಾಯಬೇಕು ಎಂಬ ಆಶೆಯೊಂದು ನನ್ನಲ್ಲಿ ಮೂಡಿತು. ಇವರು ಮೂವರು ಏನು ಮಾಡುತ್ತಾರೋ ಮಾಡಲಿ. ಶತ್ರುಶೇಷದ ನಾಶಕ್ಕಾಗಿ ಇದು ಕೊನೆಯ ಪ್ರಯತ್ನ ಅನಿಸಿತು.
“ಅಶ್ವತ್ಥಾಮ, ನಿನ್ನ ಮಾತುಗಳು ನನ್ನ ಹೃದಯಕ್ಕೆ ಪ್ರಿಯವಾಗಿವೆ. ಕೃಪ, ಕೃತವರ್ಮರ ಸಹಾಯದಿಂದ ಇದನ್ನು ಸಾಧಿಸು. ನಿನಗೆ ಗೆಲವಾಗಲಿ. ಇದೋ ನನ್ನ ಸೇನಾಪತಿಯಾಗಿ ನಿನ್ನನ್ನು ನಿಯಮಿಸಿದ್ದೇನೆ” ಇಷ್ಟು ಹೇಳಿ ಆಚಾರ್ಯರತ್ತ ತಿರುಗಿದೆ. “ಆಚಾರ್ಯರೆ, ಸನಿಹದ ಕೊಳದಿಂದ ಒಂದಿಷ್ಟು ಜಲವನ್ನು ತನ್ನಿ. ನನ್ನ ಸಮಕ್ಷದಲ್ಲಿ ಅಶ್ವತ್ಥಾಮನನ್ನು ಸೇನಾಪತಿಯಾಗಿ ಅಭಿಷೇಚನ ಮಾಡಿ.”
ಕೃಪರು ನನ್ನ ಮಾತಿನಂತೆ ಅಶ್ವತ್ಥಾಮನನ್ನು ಸೇನಾಧಿಪತಿಯಾಗಿ ಅಭಿಷೇಕ ಮಾಡಿದರು. ಸೇನೆಯೇ ಇಲ್ಲದೆ ಅಶ್ವತ್ಥಾಮ ಸೇನಾನಿಯಾದ. ಅವರು ಮೂವರೂ ನನ್ನ ಅನುಮತಿಯನ್ನು ಪಡೆದು ರಥವನ್ನೇರಿ ಪಾಂಡವರ ಶಿಬಿರದತ್ತ ಸಾಗಿಹೋದರು.
*****
ಆ ದಿನದ ಸೂರ್ಯಾಸ್ತಮಾನ ಕಳೆದು ಕಾರಿರುಳು ಕಾಲಿಟ್ಟಿತು. ರಣಭೂಮಿಯ ದಿಕ್ಕಿನಿಂದ ನಾನಾವಿಧವಾದ ಕ್ರೂರಪ್ರಾಣಿಗಳ ಕಿರುಚುವಿಕೆ ಕೇಳಿಸತೊಡಗಿತು. ಇನ್ನೊಂದಿಷ್ಟು ಹೊತ್ತು ಸಂದರೆ
ಅವುಗಳಲ್ಲಿ ಕೆಲವು ಈ ಕಡೆಗೆ ಬಂದು ನನ್ನನ್ನು ಕಿತ್ತು ತಿನ್ನುವವೇನೋ ಅನಿಸಿ ಸಣ್ಣ ಭೀತಿಯೊಂದು ತಲೆಯೆತ್ತಿತು. ಅಖಂಡ ಸಾಮ್ರಾಜ್ಯವನ್ನಾಳಿದ ನನ್ನ ಅಂತ್ಯ ಹೀಗಾಗಬೇಕೇ? ಭೀಮನ ಗದಾಘಾತದಿಂದ ಆಗಲೇ ನನ್ನ ಪ್ರಾಣ ಹೋಗುತ್ತಿದ್ದರೆ ಉತ್ತಮವಿತ್ತು. ಆದರೆ ಇದನ್ನನುಭವಿಸಬೇಕೆಂಬುದೇ ನನ್ನ ವಿಧಿಯೆಂದು ತೋರಿತು. ಮಲಗಿದಲ್ಲಿಂದಲೇ ಕಣ್ಣರಳಿಸಿ ಅತ್ತಿತ್ತ ನೋಡುವ ಯತ್ನ ಮಾಡಿದೆ. ಏನೂ ಕಾಣಿಸಲಿಲ್ಲ. ಅಂಗಾತ ಬಿದ್ದಿದ್ದ ನನ್ನ ಕಣ್ಣಿಗೆ ಬೆಳ್ಳಗಿನ ಆಕಾಶ, ಅಲ್ಲಿ ಹೊಳಪೇರುತ್ತಿದ್ದ ತಾರೆಗಳು ಮಾತ್ರ ಗೋಚರಿಸಿದವು. ನರಿಯೋ, ತೋಳವೋ ಅನತಿದೂರದಲ್ಲಿ ಗುರುಗುಡುವ ಸದ್ದು ಕೇಳಿತು. ಅಯ್ಯೋ ಪ್ರಮಾದವಾಯಿತು ಅಂದುಕೊಂಡೆ. ನನ್ನ ಗದೆಯನ್ನಾದರೂ ಕೈಯೆಟುಕಿನಲ್ಲಿ ತಂದಿಡುವಂತೆ ಅವರಲ್ಲಿ ಹೇಳಿದ್ದರೆ ಆ ಪ್ರಾಣಿಗಳನ್ನ ಬೆದರಿಸಿ ದೂರಕ್ಕಟ್ಟಬಹುದಾಗಿತ್ತು. ಈಗ ಆ ಸಾಧ್ಯತೆಯೂ ಇಲ್ಲ. ಅವುಗಳೆಲ್ಲ ಗುಂಪಾಗಿ ಬಂದು ನನ್ನನ್ನು ಕಿತ್ತು ತಿಂದರೆ ಅಶ್ವತ್ಥಾಮನಿಂದ ಗೆಲವಿನ ವರ್ತಮಾನ ಕೇಳುವುದಕ್ಕೂ ನಾನು ಉಳಿಯುವುದಿಲ್ಲವೇನೋ ಎಂಬ ಭಾವ ಬಲವಾಗತೊಡಗಿತು. ಅಷ್ಟೂ ದಿನಗಳ ಯುದ್ಧಾಯಾಸ, ತೊಡೆ ಮುರಿದ ಯಾತನೆ, ಮನವನ್ನಾಕ್ರಮಿಸಿದ ಹತಾಶೆ ಎಲ್ಲವೂ ಒಟ್ಟಾಗಿ ಆಗಿದ್ದಾಗಲಿ ಎಂಬ ನಿರ್ಣಯದಿಂದ ಕಣ್ಣುಮುಚ್ಚಿಕೊಂಡೆ.
ಎಷ್ಟು ಹೊತ್ತು ಹಾಗಿದ್ದೆನೋ ತಿಳಿಯದು. ಇದ್ದಕ್ಕಿದ್ದಂತೆ ಯಾರೋ ಮಾತನಾಡುವ ಧ್ವನಿ ಕೇಳಿ ಎಚ್ಚರಗೊಂಡೆ. ಎಚ್ಚರದೊಂದಿಗೆ ಮರುಕಳಿಸಿದ
ತೊಡೆಯ ನೋವು. ಕಣ್ಣು ತೆರೆದಾಗ ಕಪ್ಪು ಕತ್ತಲೆಯಲ್ಲಿ ಎರಡು ಮೂರು ಆಕೃತಿಗಳು ನನ್ನ ಸಮೀಪದಲ್ಲೇ ನಿಂತಿರುವುದು ಕಾಣಿಸಿತು. ಅವುಗಳೇನೆಂಬ ಅರಿವೂ ಬೇಗ ಉಂಟಾಗಲಿಲ್ಲ. ನಿಧಾನಕ್ಕೆ ಪ್ರಜ್ಞೆ ತಿಳಿಯಾಗುತ್ತ ಬಂದಾಗ ಅವರು ಅಶ್ಚತ್ಥಾಮಾದಿಗಳು ಎನ್ನುವ ತಿಳಿವಳಿಕೆ ಮೂಡಿತು. “ಓ ಗುರುಪುತ್ರಾ, ನೀವಿನ್ನೂ ಹೋಗಿಲ್ಲವೇನು? ಅಥವಾ ನಾನು ಪ್ರಜ್ಞಾಹೀನನಾಗಿ ಎಷ್ಟು ಕಾಲ ಕಳೆಯಿತೆಂಬ ಅರಿವೂ ಇಲ್ಲವಾಯಿತೆ?”
ನನ್ನ ಕಂಠಸ್ವರ ತೀರ ದುರ್ಬಲವಾಗಿತ್ತು. ಅಷ್ಟು ಮಾತನಾಡಿದ್ದೇ ಹೆಚ್ಚೆಂಬಂತೆ ಬಳಲಿಕೆ ಉಂಟಾಯಿತು. ಮತ್ತೆ ಕಣ್ಣುಗಳು ಮುಚ್ಚಿಕೊಂಡವು. “ಪ್ರಭೋ, ಎಚ್ಚರವಾಯಿತೆ?” ಇದೀಗ ಅಶ್ವತ್ಥಾಮನ ಸ್ವರ. “ಹಾ..” ಎಂದೆ. “ಮಹಾರಾಜ ಸುಯೋಧನ, ಇದೋ ನಾವು ಬಂದಿದ್ದೇವೆ. ಇನ್ನೇನು ಪ್ರಾತಃಕಾಲ ಸಮೀಪಿಸುತ್ತಿದೆ. ನಿನ್ನಿಂದ ಅಪ್ಪಣೆ ಪಡೆದು ಹೋದ ನಾವು ಶತ್ರುಶೇಷವನ್ನು ನಿರ್ಮೂಲ ಮಾಡಿ ಗೆಲವು ಸಾಧಿಸಿ ಬಂದಿದ್ದೇವೆ. ಪಾಂಚಾಲ ಸೋಮಕ ಯೋಧರು ಪಾಂಡವ ಸಂತತಿಯೊಂದಿಗೆ ವಿನಾಶ ಹೊಂದಿದರು. ಪ್ರಿಯವಾರ್ತೆಯಿದನ್ನು ನಿನ್ನಲ್ಲಿ ನಿವೇದಿಸಿಕೊಳ್ಳುವುದಕ್ಕಾಗಿ ಧಾವಿಸಿ ಬಂದೆವು” ಎಂದ ಅಶ್ವತ್ಥಾಮ.
“ಹೌದೆ? ನಿಮ್ಮಿಂದ ಇಂತಹ ಒಂದು
ವರ್ತಮಾನಕ್ಕಾಗಿ ಕಾದಿದ್ದೆ ನಾನು. ಭೀಷ್ಮ ದ್ರೋಣ ಕರ್ಣಾದಿಗಳಿಂದ ಸಾಧ್ಯವಾಗದಿದ್ದ ಶತ್ರು ವಿನಾಶವನ್ನು ಮಾಡಬಿಟ್ಟಿರ? ಕೇವಲ ಮೂವರೇ ಈ ಮಹತ್ಕಾರ್ಯವನ್ನು ಹೇಗೆ ಸಾಧಿಸಿದಿರಿ? ಕೊಂಚ ವಿವರವಾಗಿ ಹೇಳಿ?”
ಕ್ಷಣಕ್ಷಣಕ್ಕೂ ಶಕ್ತಿಹ್ರಾಸವಾಗುತ್ತಿರುವುದು ಅನುಭವಕ್ಕೆ ಬರುತ್ತಿದ್ದಾಗಲೂ ಸಂತೋಷದ ವಾರ್ತೆಗಾಗಿ ಹಂಬಲಿಸಿ ಕೇಳಿದೆ.
“ಇದರಲ್ಲಿ ನಮ್ಮ ಪಾತ್ರ ಅಲ್ಪ. ಎಲ್ಲವನ್ನೂ ಸಾಧಿಸಿದವನು ಈ ಅಶ್ವತ್ಥಾಮನೇ. ನಮ್ಮಿಬ್ಬರನ್ನೂ ಸೇನಾಶಿಬಿರದ ದ್ವಾರದಲ್ಲೇ ನಿಲ್ಲಿಸಿ ಹಿರಿದ ಖಡ್ಗದೊಂದಿಗೆ ಏಕಾಂಗಿಯಾಗಿ ಒಳನುಗ್ಗಿದ. ಹೊರಗಿದ್ದ ನಮಗೆ ಅವನ ಆಕ್ರಮಣಕ್ಕೆ ಸಿಕ್ಕಿದವರ ಆರ್ತಧ್ವನಿ ಮಾತ್ರ ಕೇಳಿಸಿತು. ಅವನಿಂದ ಪಾರಾಗುವುದಕ್ಕೆ ಹೊರಗೆ ಓಡಿಬಂದ ಯೋಧರನ್ನು ಮಾತ್ರ ನಾವು ಮುಗಿಸಿದೆವು” ಕೃಪರು ಮಾತು ನಿಲ್ಲಿಸಿ ಅಶ್ವತ್ಥಾಮನತ್ತ ನೋಡಿದರು. ಅಶ್ವತ್ಥಾಮ ಹೇಳಿದ,
“ಎಲ್ಲ ಯೋಧರೂ ಯುದ್ಧ ಮುಗಿದ ನೆಮ್ಮದಿಯಲ್ಲಿ ಸುಖವಾಗಿ ನಿದ್ರಿಸಿದ್ದರು. ಪಹರೆಯೂ ಬಲವಾಗಿರಲಿಲ್ಲ. ಅವರನ್ನು ಕತ್ತರಿಸಿ ಒಳನುಗ್ಗಿ ಮೊದಲು ದೃಷ್ಟದ್ಯುಮ್ನನನ್ನು ಅರಸಿದೆ. ನನ್ನನ್ನು ಕಂಡೊಡನೆ ಭೀತನಾಗಿ ಪ್ರಾಣರಕ್ಷಣೆಗಾಗಿ ಅವನು ಯಾಚಿಸಿದ್ದನ್ನು ನೀನು ಕಾಣಬೇಕಿತ್ತು ಸುಯೋಧನ. ಅವನನ್ನು ಕೈಗಳಿಂದಲೇ ಸಂಹರಿಸಿದೆ. ಪಾಂಚಾಲರು, ಸೋಮಕರು ಜಾಗೃತರಾಗಿ ಆಯುಧಪಾಣಿಗಳಾಗಿ ಮೇಲೆ ಬೀಳುವುದಕ್ಕೆ ಬಂದರು. ನನ್ನ ರಭಸದ ಮುಂದೆ ಅವರು ಏನು ತಾನೇ ಮಾಡಬಹುದಿತ್ತು? ಸುಲಭವಾಗಿ ಕತ್ತರಿಸಿ ಚೆಲ್ಲಿದೆ. ಆ ಬಳಿಕ ಐವರು ಉಪಪಾಂಡವರ ತಲೆಗಳನ್ನು ಚೆಂಡಾಡಿದೆ. “ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದವರನ್ನು ಮಾವ ಕೃಪರೂ, ಯಾದವ ವೀರ ಕೃತವರ್ಮನೂ ಬಲಿಹಾಕಿದರು.”
“ಅವರು, ಆ ಪಾಂಡವರು? ಮತ್ತೆ ಕೃಷ್ಣ? ಅವರೇನಾದರು?” ನನ್ನ ಪ್ರಶ್ನೆಗೆ ಅಶ್ವತ್ಥಾಮ ಕ್ಷಣಕಾಲ ತಡೆದು ಉತ್ತರಿಸಿದ, “ಅದೊಂದು ಅವಕಾಶ ನನಗೆ ದೊರೆಯದೇ ಹೋಯಿತು ಪ್ರಭು. ಆ ಶಿಬಿರಗಳಲ್ಲಿ ಪಾಂಡವರ ಸುಳಿವೇ ಇರಲಿಲ್ಲ. ಬಹುಶಃ ಕೃಷ್ಣ ಬೇರೆಡೆಯಲ್ಲಿ ಅವರಿಗೆ ವಸತಿ ಏರ್ಪಡಿಸಿರಬೇಕು. ಅವರೇನಾದರೂ ಕಾಣಿಸಿಕೊಳ್ಳುತ್ತಿದ್ದರೆ ಐದು ತಲೆಗಳನ್ನೂ ನಿನ್ನ ಮುಂದಿಡುತ್ತಿದ್ದೆ. ಆದರೇನು? ಅವರ ಐವರು ಮಕ್ಕಳು ಹತರಾದರು. ಪಾಂಡವರ ಸಂತತಿ ನಷ್ಟವಾಗಿಹೋಯಿತು.”
ಪಾಂಡವರು ಉಳಿದರು! ಕೊನೆಗೂ ಅವರನ್ನು ಕೃಷ್ಣ ಪಾರುಮಾಡಿದ! ನನಗೆ ಈ ಸತ್ಯವನ್ನು ಜೀರ್ಣಿಸಿಕೊಳ್ಳುವುದಕ್ಕೆ ಕಷ್ಟವಾಯಿತು. ನನಗೆ ಬೇಕಿದ್ದದ್ದು ಪಾಂಡವರ ಮರಣವಾರ್ತೆ. ಆದರೆ ಈ ಆಚಾರ್ಯಪುತ್ರ ಮಾಡಿದ್ದೇನು? ನಿಷ್ಪಾಪಿಗಳಾದ ಐವರು ಉಪಪಾಂಡವರ ತಲೆಕಡಿದು ಕಗ್ಗೊಲೆ ಮಾಡಿದ್ದು! ಅದೂ ಹೇಗೆ? ಯಾವ ಯುದ್ಧಧರ್ಮವನ್ನೂ ಪಾಲಿಸದೆ ಕತ್ತಲಲ್ಲಿ ಕಳ್ಳರಂತೆ ಒಳಗೆ ನುಗ್ಗಿ ನಿದ್ರೆಯಲ್ಲಿದ್ದವರಿಗೆ ಏನೆಂದು ಅರಿವಾಗುವ ಮೊದಲೇ ಕಡಿದು ಚೆಲ್ಲಿದ್ದು. ಅಬ್ಬಾ ವಿಧಿಯೇ. ಇದರಿಂದಾದ ಸಾಧನೆಯೇನು? ಇಷ್ಟನ್ನೂ ಸೇನಾನಿಯಾಗಿ ಮಾಡಿ ಕಳುಹಿಸಿಕೊಟ್ಟ ಅಶ್ವತ್ಥಾಮನ ಮೂಲಕ ಸುಯೋಧನನೇ ಕಗ್ಗೊಲೆ ನಡೆಸಿದನೆಂಬ ಅಪಕೀರ್ತಿಯ ಸಂಪಾದನೆ!
ಯಾಕೋ ಈ ಚಿಂತೆಯ ಭಾರವನ್ನು ಹೊರಲಾರೆ ಅನ್ನಿಸಲಾರಂಭವಾಯಿತು. ಎಲ್ಲವನ್ನೂ ಸಮರತಂತ್ರದ ಭಾಗವೆಂದು ಸಮರ್ಥಿಸಬಹುದು. ಆದರೆ ಈ ರಾತ್ರಿ ಕಳ್ಳತನದಿಂದ ಶಿಬಿರಕ್ಕೆ ನುಗ್ಗಿ ಮಲಗಿದವರನ್ನು ಏನು ಎತ್ತ ಅಂತ ತಿಳಿಯುವ ಮೊದಲೇ ಕಡಿದು ಚೆಲ್ಲಿ…ಅದರಲ್ಲೂ ಆ ಉಪಪಾಂಡವರನ್ನು… ಛೇ.. ಯುದ್ಧದಲ್ಲಿ ಬಲಿಯಾದ ನನ್ನ ಮಗ ಲಕ್ಷಣ, ಕರ್ಣಪುತ್ರ ವೃûಷಸೇನ ನೆನಪಾದರು. ಕೊನೆಗೂ ಪಾಂಡವರ ಹನನ ಸಾಧ್ಯವಾಗದೇ ಹೋಯಿತಲ್ಲ! ಈ ಕಗ್ಗೊಲೆ ಮಾಡುವುದಕ್ಕೆ ಸಮ್ಮತಿಸಿದ ನನಗೆ ಉತ್ತಮ ಲೋಕಗಳ ಪ್ರಾಪ್ತಿ ಉಂಟೆ? ಇಲ್ಲಿಂದ ಹೊರಡುವ ಮುನ್ನ ಕೃಷ್ಣನ ಮುಖದಲ್ಲಿ ಕಂಡ ಆ ಕಿರುನಗು ಮತ್ತೆ ಮತ್ತೆ ನನ್ನನ್ನು ಅಣಕಿಸಿದಂತೆ ಭಾಸವಾಯಿತು. ನನ್ನ ಪಾಲಿಗೆ ಉಳಿದದ್ದು ಸೋಲಿನ ಸಂಕಟ ಮಾತ್ರ.
ಬಲಾತ್ಕಾರದಿಂದ ರೆಪ್ಪೆ ತೆರೆದು ಆಶ್ವತ್ಥಾಮನನ್ನು ನೋಡಿದೆ. ಸಾರ್ಥಕ ಭಾವದಿಂದ ನಿಂತಿದ್ದ ಅವನ ಮೈಯಿಂದ ಹಸಿನೆತ್ತರ ವಾಸನೆ…ಅಥವಾ ಅದು ನನ್ನ ಮೈಯ ವಾಸನೆಯೆ? ಅವನಲ್ಲಿ ಏನು ಹೇಳುವುದಕ್ಕೂ ಸಾಧ್ಯವಾಗಲಿಲ್ಲ. ನನ್ನ ದೇಹ ಕೊರಡುಗಟ್ಟತೊಡಗಿತು. ಮರಣ ಸಮೀಪಿಸುತ್ತಿದೆಯೆನಿಸಿತು.
ಕಣ್ಣೆವೆಗಳು ಭಾರವಾಗುತ್ತಿದ್ದವು.
ನಾನು ಬಯಸಿದ, ಆದರೆ ಇಂದು ಪಾಂಡವರದಾದ ನೆಲದ ಮೇಲೆ ಮೈಚಾಚಿದ ನನಗೆ ಬಿಡುಗಡೆ ಬೇಕು ಎಂಬ ಹಂಬಲ ತೀವ್ರವಾಯಿತು.
ಕಣ್ಣು ಮುಚ್ಚಿದೆ.
ಮತ್ತೆಲ್ಲ ಕಗ್ಗತ್ತಲು.