ಸತ್ಯಂ ದಿಶತ್ಯರ್ಥಿತಮರ್ಥಿತೋ ನೃಣಾಂ
ನೈವಾರ್ಥದೋ ಯತ್ಪುನರರ್ಥಿತಾ ಯತಃ |
ಸ್ವಯಂ ವಿಧತ್ತೇ ಭಜತಾಮನಿಚ್ಛತಾ –
ಮಿಚ್ಛಾಪಿಧಾನಂ ನಿಜಪಾದಪಲ್ಲವಮ್ ||
– ಭಾಗವತ, ಸ್ಕಂಧ 5, ಅಧ್ಯಾಯ 19, ಶ್ಲೋಕ 27
“ತನ್ನನ್ನು ಬೇಡಿದವರಿಗೆ ಭಗವಂತನು ಅವರು ಕೋರಿದ ಇಷ್ಟಾರ್ಥಗಳನ್ನು ಕೊಡುವುದೇನೊ ದಿಟವೇ. ಆದರೆ ಅಪೇಕ್ಷೆಗಳನ್ನು ಈಡೇರಿಸಿಕೊಂಡವರು ಇನ್ನಷ್ಟು ಕೋರಿಕೆಗಳನ್ನು ಬೆಳೆಸಿಕೊಳ್ಳುತ್ತಾರಲ್ಲ! ಈ ಕಾರಣದಿಂದ ಭಗವಂತನು ಭಕ್ತರು ಕೋರಿದುದನ್ನೆಲ್ಲ ಮನಃಪೂರ್ವಕ ಕೊಡಲು ಮುಂದಾಗುವುದಿಲ್ಲ. ಹೆಚ್ಚಿನ ಕೋರಿಕೆಗಳಲ್ಲಿ ಪರಮಾರ್ಥವೇನೂ ಇರುವುದೂ ಇಲ್ಲ. ಯಾವ ಭಕ್ತರು ಸ್ವಾರ್ಥರಹಿತರೂ ನಿಷ್ಕಾಮರೂ ಆಗಿ ಪರಮಾತ್ಮನನ್ನು ಸೇವಿಸುತ್ತಾರೋ ಅವರ ಆವಶ್ಯಕತೆಗಳನ್ನು ಅವರು ವ್ಯಕ್ತಪಡಿಸದಿದ್ದÀರೂ ಭಗವಂತನು ತಾನಾಗಿಯೇ ಪೂರೈಸುತ್ತಾನೆ.”
ಉದಾತ್ತವೆಂದು ಮೇಲ್ತೋರಿಕೆಗೆ ಕಂಡರೂ ಪ್ರಾರ್ಥನೆಯ ಯಾವುದೊ ಮೂಲೆಯಲ್ಲಿ ಸ್ವಾರ್ಥಲೇಶ ಹುದುಗಿಕೊಂಡಿರುವ ಸಂಭವವಿರುತ್ತದೆ. ಇದರ ಬಗೆಗೆ ಭಕ್ತರು ಜಾಗೃತರಾಗಿರಬೇಕೆಂದು ಎಚ್ಚರಿಸಲು ಮೇಲಣ ಭಾಗವತಶ್ಲೋಕ ಹೊರಟಿದೆ.
ಬ್ರಹ್ಮಚೈತನ್ಯ ಗೊಂದಾವಲೇಕರ್ ಮಹಾರಾಜರಲ್ಲಿಗೆ ಒಮ್ಮೆ ದರ್ಶನಕ್ಕಾಗಿ ಬಂದ ತಂಡದಲ್ಲಿ ಒಬ್ಬ ಕುರುಡನಿದ್ದ. ಅವನ ಒಡನಾಡಿಗಳು ಮಹಾರಾಜರಲ್ಲಿ ಬಿನ್ನವಿಸಿದರು: “ಮಹಾರಾಜ್! ಈ ವ್ಯಕ್ತಿ ತುಂಬಾ ಶ್ರದ್ಧಾವಂತನಿದ್ದಾನೆ. ತಾವು ಅವನಿಗೆ ದೃಷ್ಟಿಯನ್ನು ಕರುಣಿಸಿದರೆ ಜ್ಞಾನೇಶ್ವರೀಗೀತೆಯನ್ನು ಓದಬೇಕೆಂದು ಅವನ ಅಪೇಕ್ಷೆ ಇದೆ. ಅವನಲ್ಲಿ ತಾವು ದಯೆ ತೋರಬೇಕೆಂದು ನಮ್ಮೆಲ್ಲರ ಆಕಾಂಕ್ಷೆ ಇದೆ.” ಇದಕ್ಕೆ ಮಹಾರಾಜರು ಮುಗುಳ್ನಕ್ಕು
ಹೀಗೆಂದರು: “ಕಣ್ಣಿಲ್ಲದವರಿಗೆ ಕಣ್ಣು ಕೊಡುವುದು, ಮೃತರಿಗೆ ಜೀವದಾನ ಮಾಡುವುದು – ಇಂತಹ ಸಿದ್ಧಿಗಳು ನನ್ನ ಶಕ್ತಿಗೆ ಮೀರಿದವು. ಅವರವರ ಯೋಗದಂತೆ ಅವರವರ ಸ್ಥಿತಿ ಇರುತ್ತದೆ. ಒಂದು ವೇಳೆ ಈ ಸಜ್ಜನನಿಗೆ ಹೇಗೋ ದೃಷ್ಟಿ ತಂದುಕೊಟ್ಟೆವೆಂದುಕೊಳ್ಳಿ. ಅನಂತರ ಈತ ಕಣ್ಣನ್ನು ಬೇರೆ ವ್ಯವಹಾರಗಳಿಗಾಗಿ ಬಳಸುವುದಿಲ್ಲವೆಂಬ ಖಾತರಿ ಎಲ್ಲಿದೆ? ಆ ಜವಾಬ್ದಾರಿಯನ್ನು ನೀವು ತೆಗೆದುಕೊಳ್ಳಬಲ್ಲಿರಾ? ನಿಮ್ಮೆಲ್ಲರ ಮನಸ್ಸಿನಲ್ಲಿರುವುದು ಈತನಿಗೆ ದೃಷ್ಟಿ ಲಭಿಸಲೆಂಬುದೇ ಹೊರತು ಗೀತಾಶ್ರದ್ಧೆಯಲ್ಲ. ಮನಸ್ಸು ಕೇಂದ್ರಿತವಾಗಬೇಕಾದದ್ದು ಭಗವದುಪಾಸನೆಯಲ್ಲಿ. ಆಗ ಭಗವತ್ಕøಪೆ ತಾನಾಗಿ ನೆರೆದು ಬರುತ್ತದೆ.”
ಪ್ರಾರ್ಥನೆ ಹೇಗಿರಬೇಕೆಂಬ ಸೂಕ್ಷ್ಮಸಂಗತಿ ಮಹಾರಾಜರ ಬೋಧೆಯಲ್ಲಿ ಅಡಗಿದೆ. ಭಕ್ತನು ಕೋರಬೇಕಾದದ್ದು ತನ್ನ ಶ್ರದ್ಧೆ ಅಸ್ಖಲಿತವಾಗಿರಲೆಂದು. ಆಗ ಭಕ್ತನ ಆವಶ್ಯಕತೆಗಳನ್ನು ಭಗವಂತನು ಸಹಜವಾಗಿ ಈಡೇರಿಸಬಹುದು.