ತಮ್ಮ ಎರಡನೇ ಅಧಿಕಾರಾವಧಿಯ ಮೊದಲ ‘ಮನ್ ಕೀ ಬಾತ್’ ಪ್ರಸಾರದಲ್ಲಿಯೇ ಪ್ರಧಾನಿ ನರೇಂದ್ರ ಮೋದಿ ಇದೀಗ ನಾಡು ಎದುರಿಸುತ್ತಿರುವ ಅತ್ಯಂತ ಗಂಭೀರ ಸಮಸ್ಯೆಯೆಂದರೆ ಜಲಕ್ಷಾಮ ಎಂದು ಹೇಳಿದುದು ಸಮುಚಿತವಾಗಿದೆ. ನೀರಿನ ಮಿತವ್ಯಯ ಮತ್ತು ಸಂರಕ್ಷಣೆ, ಹಳೆಯ ಹಾಗೂ ಹೊಸ ವಿಧಾನಗಳ ಮೂಲಕ ಜಲಮೂಲಗಳ ಸಂವರ್ಧನ – ಇವು ಆದ್ಯತೆಯನ್ನು ಬೇಡುತ್ತವೆಂಬ ಪ್ರಧಾನಿಯವರ ಕಳಕಳಿಯ ಮಾತನ್ನು ಎಲ್ಲರೂ ಅಂತಃಸ್ಥ ಮಾಡಿಕೊಳ್ಳಬೇಕಾಗಿದೆ. ನೆರೆಯ ಚೆನ್ನೈ ಎದುರಿಸುತ್ತಿರುವ ಜಲಾಭಾವವು ಮನ ಕಲಕುತ್ತದೆ. ಬೆಂಗಳೂರು ಸೇರಿದಂತೆ ಇನ್ನೂ ಇಪ್ಪತ್ತು ನಗರಗಳಲ್ಲಿ ಅಂತರ್ಜಲವಷ್ಟೂ ಕ್ಷಿಪ್ರವಾಗಿ ಬತ್ತಿಹೋಗಲಿದೆಯೆಂದು ತಜ್ಞರು ಎಚ್ಚರಿಸಿದ್ದಾರೆ. ಮುಂಗಾರಿನ ಆಗಮನ ಕೆಲವು ದಿನ ತಡವಾದುದೇ ಎಲ್ಲೆಡೆ ಆತಂಕವನ್ನು ಸೃಷ್ಟಿಸಿತ್ತು. ದೇಶದ ಗಣನೀಯ ಭಾಗದಲ್ಲಿ ಬಿತ್ತನೆ ಸಾಧ್ಯವಾಗಿಲ್ಲ; ದಿನಬಳಕೆಯ ನೀರಿಗೇ ಕೊರತೆಯಾಗಿದೆ. ಹೆಚ್ಚಿನೆಡೆಗಳು ಕಳೆದ ವರ್ಷದ ಮಳೆ ಕುಸಿತದಿಂದಲೇ ಇನ್ನೂ ಚೇತರಿಸಿಕೊಂಡಿಲ್ಲ. ಈ ವರ್ಷ ಮುಂಗಾರು ನಿರೀಕ್ಷಿತಮಟ್ಟದಲ್ಲಿ ಇರದಿದ್ದರೆ ಏನಾದೀತೆಂದು ಊಹಿಸುವುದೇ ದುಷ್ಕರ. ನೀರು-ಗಾಳಿಗಳು ಪುಕ್ಕಟೆಯಾಗಿ ಅನಂತಕಾಲದವರೆಗೆ ಸಿಗುತ್ತಿರುತ್ತವೆಂಬ ನಿರಾಧಾರ ಧೋರಣೆಯಿಂದುಂಟಾದ ಅಜಾಗ್ರತೆ, ಕೆರೆ-ಕುಂಟೆ-ಬಾವಿಗಳ ಅಲಕ್ಷ್ಯ, ಮಿತಿಯಿಲ್ಲದ ನಗರೀಕರಣ ಮತ್ತು ಕಟ್ಟಡ ಉದ್ಯಮದಿಂದಾಗಿ ಅಂತರ್ಜಲ ಶೋಷಣೆ, ಸಾಂಪ್ರದಾಯಿಕ ಅನುಶಾಸನದ ಬಗೆಗೆ ದುರ್ಲಕ್ಷ್ಯ – ಹೀಗೆ ಹಲವಾರು ಪ್ರವೃತ್ತಿಗಳು ಈಗಿನ ವಿಷಮಸ್ಥಿತಿಯನ್ನು ನಿರ್ಮಿಸಿವೆ. ದುರ್ಬಲ ಕಾನೂನುಗಳ ಅನುಸಂಧಾನವೂ ಶಿಥಿಲರೂಪದ್ದಾಗಿದೆ. ಜಲರಕ್ಷಣದ ಪ್ರಮುಖ ಅಂಗವಾಗಬೇಕಾದ ಮಳೆಕುಯ್ಲು ಈಗೀಗಷ್ಟೇ ಮತ್ತು ಅಲ್ಪಪ್ರಮಾಣದಲ್ಲಷ್ಟೇ ಕಾಣಬಹುದಾಗಿದೆ. ಜಾಗತಿಕಸ್ತರದಲ್ಲಿಯೆ ಹವಾವೈಪರೀತ್ಯ ತೋರಿದೆ; ಇದು ದುರ್ನಿವಾರವಾಗಿದೆ. ಪಾರಂಪರಿಕ ಹಾಗೂ ನೂತನ ಜಲಸಂರಕ್ಷಣಕ್ರಮಗಳು, ಮಿತವ್ಯಯ, ನಗರೀಕರಣಕ್ಕೆ ಪರಿಮಿತಿ, ಲಬ್ಧ ಅಂತರ್ಜಲ ಬಳಕೆಯ ಕಟ್ಟುನಿಟ್ಟಾದ ನಿಯಂತ್ರಣ – ಈ ವಿವಿಧಮುಖ ಪ್ರಯಾಸಗಳು ಏಕಕಾಲದಲ್ಲಿ ಸಮರೋಪಾದಿಯಲ್ಲಿ ನಡೆಯುವುದು ಈಗ ಅನಿವಾರ್ಯವಾಗಿದೆ. ಇದಕ್ಕೆ ಯಾವುದೇ ‘ಷಾರ್ಟ್‍ಕಟ್’ಗಳು ಇಲ್ಲ.
ಜಟಿಲ ಸಮಸ್ಯೆಗೆ ಸರಳ ಪರಿಹಾರ ಇರದು
Month : August-2019 Episode : Author :