ಸೋನಿಯಾಗಾಂಧಿ ನಿರ್ದೇಶಿತ ಯು.ಪಿ.ಎ. ಸರ್ಕಾರದಲ್ಲಿ ಅರ್ಥಸಚಿವರೂ ಗೃಹಖಾತೆಯ ಸಚಿವರೂ ಆಗಿದ್ದ ಪಿ. ಚಿದಂಬರಂ ಸದಾ ಚೆಲುವೆಮಾಡಿದ (‘ಲ್ಯಾಂಡರ್ಡ್’) ಶುಭ್ರವಸ್ತ್ರಧಾರಿಗಳಾಗಿ ಕಾಣಿಸಿಕೊಳ್ಳಲು ಇಚ್ಛಿಸುತ್ತಾರೆ. ಅವರು ಕೋಟ್ಯಂತರ ರೂಪಾಯಿ ಹಣವನ್ನೂ ‘ಚಿಲುವೆ’ (‘ಮನೀ-ಲಾಂಡರಿಂಗ್’) ಮಾಡುವ ಧಂದೆ ನಡೆಸುತ್ತಿದ್ದುದು ರಹಸ್ಯವೇನಲ್ಲ. ವಿದೇಶೀ ಹಣಹೂಡಿಕೆ ಎಂದು ಚಿದಂಬರಂ ಅಂಕಿತ ಮಾಡಿದ್ದ ಹಲವು ಪ್ರಕರಣಗಳು ಬೋಗಸ್ ರೀತಿಯವೆಂದೂ ಆ ವ್ಯವಹಾರಗಳೆಲ್ಲ ಚಿದಂಬರಂ ತಮ್ಮ ಕಿಸೆ ತುಂಬಿಸಿಕೊಳ್ಳಲು ನಡೆಸಿದ್ದ ಠಕ್ಕುಗಳೆಂದೂ ಆಗಲೇ ಸಿದ್ಧಪಟ್ಟಿತ್ತು. ಕಾನೂನಿನ ಕಣ್ಣಿಗೆ ಮಣ್ಣೆರಚಲು ಯತ್ನಿಸಿದ್ದ ಪ್ರಕಾರಗಳಲ್ಲೊಂದು ‘ಐಎನ್ಎಕ್ಸ್ ಮೀಡಿಯಾ’ ಎಂಬ ದೂರದರ್ಶನ ಚ್ಯಾನೆಲಿಗೆ ಸಂಬಂಧಿಸಿದ್ದು. ಆ ಚ್ಯಾನೆಲಿನಲ್ಲಿ ಹಣಹೂಡಿಕೆ ಎಂದು ಹೇಳಲಾಗಿದ್ದ ಹಣ ವಾಸ್ತವವಾಗಿ ಚ್ಯಾನೆಲ್ ಸ್ಥಾಪನೆಗೆ ಚಿದಂಬರಂರಿಂದ ಮಂಜೂರಾತಿ ಪಡೆದುಕೊಳ್ಳಲು ಕಂಪೆನಿಗಳು ಚಿದಂಬರಂರ ಸುಪುತ್ರ ಕಾರ್ತಿ ಚಿದಂಬರಂಗೆ ಕೊಟ್ಟಿದ್ದ ಲಂಚ ಎಂಬುದು ಆಗಲೇ ಎಂದರೆ ಈಗ್ಗೆ ಹನ್ನೆರಡು ವರ್ಷ ಹಿಂದೆಯೇ (2007-2008) ಸ್ಪಷ್ಟಗೊಂಡಿತ್ತು. ಮಾರಿಶಿಯಸ್ ಮೂಲದ ಮೂರು ಕಂಪೆನಿಗಳೊಡನೆ ಚಿದಂಬರಂ ವ್ಯವಹಾರ ಕುದುರಿಸಿಕೊಂಡಿದ್ದರು. ಯು.ಪಿ.ಎ. ಸರ್ಕಾರದ ಬೆಂಬಲವನ್ನು ನಿರ್ಲಜ್ಜವಾಗಿ ಬಳಸಿಕೊಂಡು ಚಿದಂಬರಂ ವರ್ಷಗಳುದ್ದಕ್ಕೂ ತಾಂತ್ರಿಕ ಕಾರಣಗಳ ಆಸರೆ ಪಡೆದು ದಂಡನೆಯನ್ನು ತಪ್ಪಿಸಿಕೊಳ್ಳುತ್ತ ಬಂದಿದ್ದಾರೆ. ಯಾವುದೇ ತನಿಖೆಗೆ ಸೋನಿಯಾಗಾಂಧಿ ನಿರ್ದೇಶನದ ಯು.ಪಿ.ಎ. ಸರ್ಕಾರ ಅವಕಾಶ ನೀಡಿರಲಿಲ್ಲ.
ಚಿದಂಬರಂರವರ ವಿರುದ್ಧ ಕಾನೂನು ಕ್ರಮಕ್ಕೆ ತೀವ್ರತೆ ಬಂದದ್ದು ಕಾರ್ತಿ ಚಿದಂಬರಂರವರ ಐಎನ್ಎಕ್ಸ್ ಮೀಡಿಯಾ ಚ್ಯಾನೆಲ್ ಸ್ಥಾಪನೆಗೆ ಫಾರೀನ್ ಇನ್ವೆಸ್ಟ್ಮೆಂಟ್ ಪ್ರಮೋಷನ್ ಬೋರ್ಡಿನ ಪರವಾನಗಿ ನೀಡಿದುದಕ್ಕೆ
ಪ್ರತಿಫಲವಾಗಿ ಹಣಕಾಸು ಸಚಿವ ಪಿ. ಚಿದಂಬರಂ ರೂ. ಮುನ್ನೂರಾ ಐದು ಕೋಟಿ ಹಣವನ್ನು ತಮ್ಮ ಜೇಬಿಗೆ ಸೇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 2017 ಮೇ 15ರಂದು ಕೇಂದ್ರ ತನಿಖಾದಳ (ಸಿ.ಬಿ.ಐ.) ಎಫ್.ಐ.ಆರ್. ದಾಖಲೆ ಮಾಡಿದ ಮೇಲೆ.
ಕಳೆದ ವರ್ಷದಲ್ಲಿ (2018) ಚಿದಂಬರಂ 28 ಬಾರಿ ಜಾಮೀನು ಪಡೆದುಕೊಳ್ಳಲು ಸಾಧ್ಯವಾಯಿತೆಂಬುದು ಈಗಿನ ವ್ಯವಸ್ಥೆಗಳ ದೌರ್ಬಲ್ಯಕ್ಕೆ ಕನ್ನಡಿ ಹಿಡಿಯುತ್ತದೆ.
ಕೊನೆಗೂ ಕಳೆದ (2019) ಆಗಸ್ಟ್ 21ರಂದು ಪಿ. ಚಿದಂಬರಂ ಬಂಧನಕ್ಕೆ ಒಳಗಾಗಿದ್ದಾರೆ. ಹಲವಾರು ವಂಚನೆಯ ಪ್ರಕರಣಗಳಲ್ಲಿ ತಂದೆ-ಮಗ ಚಿದಂಬರಂ-ಕಾರ್ತಿ ಇಬ್ಬರೂ ಭಾಗೀದಾರರಾಗಿರುವುದು ತಿಳಿದುಬಂದಿದೆ.
ಇಷ್ಟಾಗಿ ಐಎನ್ಎಕ್ಸ್ ಮೀಡಿಯಾ ಪ್ರಕರಣ ಚಿದಂಬರಂ ಆರೋಪಿಯಾಗಿರುವ ಘೋಟಾಳಗಳಲ್ಲಿ ಒಂದು ಮಾತ್ರ. ಚಿದಂಬರಂ ನಡೆಸಿರುವ ಇನ್ನೂ ಹಲವಾರು ದುವ್ರ್ಯವಹಾರಗಳಿಗೂ ದಂಡನೆ ಆಗಬೇಕಾಗಿದೆ. ಅವರ ಇಡೀ ಕುಟುಂಬವೇ ಮೂಲ ತಿಳಿಯದ ಅಪಾರ ಕಪ್ಪುಹಣ ಶೇಖರಣೆಯ ಆರೋಪಕ್ಕೆ ಗುರಿಯಾಗಿದೆ. ಕೋಲ್ಕತಾದ ಶಾರದಾ ಚಿಟ್ಫಂಡ್ ವ್ಯವಹಾರದಲ್ಲಿ ಚಿದಂಬರಂರ ಪತ್ನಿ ನಳಿನೀ ರೂ. 1 ಕೋಟಿ 40 ಲಕ್ಷ ಲಂಚ ತಿಂದಿದ್ದಾರೆ. ಏರ್ಸೆಲ್-ಮ್ಯಾಕ್ಸಿಸ್ ಕಂಪೆನಿಯ ಮೂಲಕ ರೂ. 3,500 ಕೋಟಿ ಕಪ್ಪುಹಣವನ್ನು ಬಿಳುಪಾಗಿಸಿದ ಪ್ರಕರಣದಲ್ಲಿಯೂ ಚಿದಂಬರಂ-ಕಾರ್ತಿ ಜೋಡಿ ದಂಡನೆಗೆ ಗುರಿಯಾಗಬೇಕಾಗಿದೆ. ಇವಲ್ಲದೆ ಬೇರೆ ಹಲವಾರು ಪ್ರಕರಣಗಳೂ ಇವೆ.
ಸರ್ಕಾರದ ಆಶೀರ್ವಾದವಿದ್ದರೆ ಯಾವ ನಿಯಮೋಲ್ಲಂಘನೆಯನ್ನಾದರೂ ಜೀರ್ಣಿಸಿಕೊಳ್ಳಬಲ್ಲೆವೆಂಬ ಚಿದಂಬರಂರಂಥವರ ವಿಕ್ಷಿಪ್ತವರ್ತನೆ ಆಶ್ಚರ್ಯ ತರುತ್ತದೆ. ನಿದರ್ಶನಕ್ಕೆ: ಏರ್ಸೆಲ್-ಮ್ಯಾಕ್ಸಿಸ್ ಹಣಹೂಡಿಕೆಗೆ ಅನುಮತಿ ನೀಡುವ ಅಧಿಕಾರವಿದ್ದದ್ದು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಗೆ. ಅದನ್ನು ಅಲಕ್ಷಿಸಿ ಅರ್ಥಸಚಿವರಾಗಿ ಚಿದಂಬರಂ ತಾವೇ ಪರವಾನಗಿ ನೀಡಿಬಿಟ್ಟರು.ಇಂತಹ ಹಲವಾರು ಉಲ್ಲಂಘನೆಗಳು ಚಿದಂಬರಂರಿಂದ ಆಗಿವೆ.
ಐಎನ್ಎಕ್ಸ್ ಮೀಡಿಯಾ ಚ್ಯಾನೆಲಿನ ಪ್ರವರ್ತಕರಾದ ಪೀಟರ್ ಮುಖರ್ಜೀ ಮತ್ತು ಇಂದ್ರಾಣಿ ಮುಖರ್ಜೀ ದಂಪತಿಗಳಿಂದ (ಇಬ್ಬರೂ ಕೊಲೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡು ಈಗ ಬಂಧನದಲ್ಲಿದ್ದಾರೆ) 7 ಕೋಟಿ ರೂ.ಗಳಿಗೂ ಹೆಚ್ಚಿನ ಲಂಚವನ್ನು ಚಿದಂಬರಂ ಗಿಟ್ಟಿಸಿಕೊಂಡಿದ್ದುದು ಸ್ಥಿರಪಟ್ಟಿದೆ.
ಕಾರ್ತಿ ಚಿದಂಬರಂ ಸಾವಿರಾರು ಕೋಟಿ ಬೆಲೆಬಾಳುವ ಆಸ್ತಿಗಳನ್ನು ಭಾರತದೊಳಗಡೆ (ದೆಹಲಿ, ಊಟಿ, ಕೊಡೈಕೆನಾಲ್ ಇತ್ಯಾದಿ) ಮಾತ್ರವಲ್ಲದೆ ಇಂಗ್ಲೆಂಡ್, ಆಫ್ರಿಕಾ, ಶ್ರೀಲಂಕಾ ಮೊದಲಾದ ದೇಶಗಳಲ್ಲೂ ಶೇಖರಿಸಿಕೊಂಡಿರುವುದನ್ನು ಗಮನಿಸಿದರೆ ಸಾಕು, ಎಷ್ಟು ಅಗಾಧಪ್ರಮಾಣದ ದುವ್ರ್ಯವಹಾರಗಳನ್ನು ತಂದೆ-ಮಗ ವರ್ಷಗಳುದ್ದಕ್ಕೂ ನಡೆಸಿದ್ದಾರೆ ಎಂಬುದು ಶಂಕಾತೀತವಾಗಿ ತಿಳಿದುಬರುತ್ತದೆ. ಅಷ್ಟೊಂದು ಹಣ ಯಾವುದೇ ಪ್ರಾಮಾಣಿಕ ರೀತಿಯ ವಹಿವಾಟುಗಳ ಮೂಲಕ ಸಂಪಾದನೆಯಾಗುವುದು ಕನಸಿನಲ್ಲೂ ಸಾಧ್ಯವಿಲ್ಲ.
ಐಎನ್ಎಕ್ಸ್ ಮೀಡಿಯಾ ಮಾತ್ರವಲ್ಲದೆ ಇತರ ಹಲವು ಕಂಪೆನಿಗಳಿಗೂ ಪಿ. ಚಿದಂಬರಂ ಅಕ್ರಮವಾಗಿ ಪರವಾನಗಿ ದೊರಕಿಸಿಕೊಟ್ಟಿರುವುದು ತಿಳಿದುಬಂದಿದೆ. ಆ ಹಲವಾರು ವ್ಯವಹಾರಗಳ ಕೂಲಂಕಷ ತನಿಖೆಯೂ ಆಗಬೇಕಾಗಿದೆ. ಚಿದಂಬರಂ ವರ್ಷಗಳುದ್ದಕ್ಕೂ ನಡೆಸಿದ್ದ ಈ ಖದೀಮತನಗಳು ಸೋನಿಯಾಗಾಂಧಿ, ರಾಹುಲ್ಗಾಂಧಿ ಇತ್ಯಾದಿ ನಾಯಕಗಣಕ್ಕೆ ತಿಳಿದಿರಲಿಲ್ಲವೆಂದು ನಂಬಲು ಎಂಟೆರ್ದೆ ಬೇಕಾದೀತು. ಅವರೆಲ್ಲ ಈ ಆಗಬಾರದ ನೀಚಾತಿ ನೀಚ ಕಾರ್ಯಗಳನ್ನು ನೋಡಿಯೂ ತೂಷ್ಣೀಭಾವ ತಳೆದು ಏನೂ ನಡೆದಿಲ್ಲವೆಂಬಂತೆ ತೆಪ್ಪಗಿದ್ದುದು ಹೇಗೆಂಬುದು ಈಗಲಾದರೂ ತನಿಖೆಗೊಳ್ಳಬೇಡವೆ?
ನಿರಂತರವಾಗಿ ನೀಚವ್ಯವಹಾರಗಳಲ್ಲಿ ಮುಳುಗಿದ್ದ ಚಿದಂಬರಂ ದಿನಬೆಳಗಾದರೆ ದೇಶಕ್ಕೆ ಧರ್ಮೋಪದೇಶ ಮಾಡುವ ಹವ್ಯಾಸವನ್ನು ಬೆಳೆಸಿಕೊಂಡಿದ್ದುದು ಜನತೆಯ ದೃಷ್ಟಿಯಲ್ಲಿ ಎಷ್ಟು ಹಾಸ್ಯಾಸ್ಪದವೆನಿಸುತ್ತಿತ್ತೆಂಬುದರ ಪರಿವೆಯೇ ಇಲ್ಲದಷ್ಟು ಅವರಲ್ಲಿ ದುರಹಂಕಾರ ತುಂಬಿದ್ದು ಈಗ ಅದಕ್ಕೂ ಚಿಕಿತ್ಸೆ ನಡೆಯಬೇಕಾಗಿದೆ.
ದುಬಾರಿ ವಕೀಲರ ಸೆರಗಿನಲ್ಲಿ ತಮ್ಮ ಕೇಡಿಗ ವ್ಯವಹಾರಗಳ ಮೇಲೆ ಗವುಸು ಹೊದೆಸುತ್ತಿದ್ದ ಚಿದಂಬರಂ ನಯವಂತಿಕೆ ಈಗ ಮುಗಿದ ಕಥೆ. ಕಾನೂನುದಂಡನೆಯಷ್ಟೆ ಇಂತಹ ಕ್ಷುದ್ರಜೀವಿಗಳಿಗೆ ಪರ್ಯಾಪ್ತವೆನಿಸದು. ಸಾಮಾಜಿಕ ನೆಲೆಯಲ್ಲಿಯೂ ಇಂತಹವರಿಗೆ ತೀಕ್ಷ್ಣರೂಪದ ಬಹಿಷ್ಕಾರ ವಿಧಿಸುವ ಮಾರ್ಗಗಳನ್ನು ಈಗ ಆವಿಷ್ಕರಿಸಬೇಕಾಗಿದೆ.