ಆಧ್ಯಾತ್ಮಿಕ ಲೇಖನಮಾಲೆ – 1
ನ ಗುರೋರಧಿಕಂ ತತ್ತ್ವಂ ನ ಗುರೋರಧಿಕಂ ತಪಃ |
ತತ್ತ್ವಜ್ಞಾನಾತ್ಪರಂ ನಾಸ್ತಿ ತಸ್ಮೈ ಶ್ರೀಗುರವೇ ನಮಃ ||
ಪ್ರಾಚೀನ ಭಾರತವು ಜಗತ್ತಿಗೆ ನೀಡಿರುವ ಅದ್ಭುತವಾದ ಗುರುಸ್ತುತಿ ಇದು, ಅನನ್ಯವಾದ ಸಂದೇಶ ಕೂಡ ಹೌದು. “ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ, ಗುರುವಿಗಿಂತಲೂ ಅಧಿಕವಾದ ತತ್ತ್ವವಿಲ್ಲ, ತತ್ತ್ವಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಆದ್ದರಿಂದ ಶ್ರೀಗುರುವನ್ನು ನಮಿಸುತ್ತೇನೆ.” ತತ್ತ್ವದ ಮೂರ್ತರೂಪವಾದ ಗುರುವು ನಮ್ಮ ಬದುಕಿನ ಪಯಣದಲ್ಲಿ ಚುಕ್ಕಾಣಿಗನಾಗಿ ನಮ್ಮೊಂದಿಗೆ ಸಂಚರಿಸುತ್ತಾನೆ ಎಂಬ ಮಾತಿದೆ. ಗುರುಶಕ್ತಿಯನ್ನು ಮೀರಿದ್ದು ಈ ಜಗತ್ತಿನಲ್ಲಿ ಇನ್ನು ಯಾವುದೂ ಇಲ್ಲ. ಗುರುವು ತನ್ನೆಡೆಗೆ ಬಂದ ಪುಣ್ಯಾತ್ಮರನ್ನು ಸಂತೋಷದಿಂದಲೇ ಉದ್ಧರಿಸುತ್ತಾನೆ. ಆದರೆ ತನ್ನಲ್ಲಿ ಶರಣಾಗುವ ಪಾಪಾತ್ಮರನ್ನು ಕಡೆಗಣಿಸದೆ ಕೃಪೆಯಿಂದ ಆತ ಅಂಥ ಜೀವಿಗಳನ್ನು ತಿದ್ದಿ ಪರಿವರ್ತನೆ ಮಾಡಿ ಸಲಹುತ್ತಾನೆ.
ಭರತಭೂಮಿಯಂತೂ ಗುರುಪರಂಪರೆಯ ಮಹಾನ್ ಚೇತನಗಳಿಗೆ ಜನ್ಮವಿತ್ತಿರುವ ಅಸದೃಶ ಪುಣ್ಯಭೂಮಿಯಾಗಿದೆ. ಉತ್ತರಭಾರತದಲ್ಲಿ ಅನೇಕಾನೇಕ ಗುರುಗಳು, ಸಂತರು ಕಾಲಕಾಲಕ್ಕೆ ಜನಿಸಿಬಂದು ಅಸ್ತವ್ಯಸ್ತ ಸಮಾಜಕ್ಕೆ ದಾರಿದೀಪವಾಗಿ ಬೆಳಗಿ ಜನಸಾಮಾನ್ಯರನ್ನು ಉದ್ಧರಿಸಿದಂತೆಯೇ ದಕ್ಷಿಣಭಾರತದಲ್ಲೂ ಕೂಡ ಮಹಾಮಹಿಮ ಗುರುಪರಂಪರೆಗಳು ಉದಿಸಿಬಂದು ಸಮಾಜೋದ್ಧಾರ ಮಾಡಿದ್ದಿದೆ. ದಕ್ಷಿಣಭಾರತದ ಕನ್ನಡ ಮನೆತನದಲ್ಲಿ ಉದಿಸಿಬಂದು ಕಾರುಣ್ಯಮೂರ್ತಿಯಾಗಿ ನೆಲೆನಿಂದು ಇಂದಿಗೂ ಜನಮಾನಸದಲ್ಲಿ ಪ್ರತಿಷ್ಠಾಪಿತರಾಗಿ ಆರಾಧನೆಗೊಳ್ಳುತ್ತಿರುವ ‘ಗುರುರಾಯರು’, ‘ರಾಘವೇಂದ್ರ ಸ್ವಾಮಿಗಳು’, ‘ಮಂತ್ರಾಲಯ ಪ್ರಭುಗಳು’ ಎಂದೆಲ್ಲ ಕರೆಯಿಸಿಕೊಳ್ಳುವ ಮಹಾನ್ ಚೇತನವೊಂದು ಭಾರತದ ಗುರುಪರಂಪರೆಯಲ್ಲಿ ಬಂದಿರುವ ದಿವ್ಯಪದಕವಾಗಿ ಇಂದಿಗೆ ಭಾರತಮಾತೆಯ ಕೊರಳಲ್ಲಿ ಶೋಭಿಸುತ್ತಿದೆ.
‘ಕಲಿಯುಗದ ಕಾಮಧೇನು’ ಎಂದೇ ಪ್ರಸಿದ್ಧರಾಗಿರುವ ಶ್ರೀ ರಾಘವೇಂದ್ರ ಸ್ವಾಮಿಗಳು ಭಾರತಕ್ಕೆ ಕನ್ನಡನಾಡಿನ ಹೆಮ್ಮೆಯ ಕೊಡುಗೆ ಎಂದು ಹೇಳಬಹುದು. ಅವರು ಸ್ವತಃ ಭಗವಂತನ ಭಕ್ತರಷ್ಟೇ ಅಲ್ಲ, ಭಕ್ತವತ್ಸಲರೆಂದೇ ಪ್ರಸಿದ್ಧರಾಗಿರುವವರು. ಭಗವಂತನಲ್ಲಿ ಅಪಾರ ಭಕ್ತಿಯಿರಿಸಿ ಬಾಳಿದ ಸಂತರೂ ಹೌದು, ಜನಮಾನಸಕ್ಕೆ ಧರ್ಮದ ಹಾದಿ ತೋರಿ
ಕೊಡುವ, ತೋರಿ ಕೊಟ್ಟಿರುವ ಮಹಾನ್ ಧಾರ್ಮಿಕ ಗುರುಗಳೂ ಹೌದು. ಜನಸಾಮಾನ್ಯರ ನೋವು, ಸಂಕಟಗಳು, ರೋಗ-ರುಜಿನಗಳು, ತೊಂದರೆ-ತಾಪತ್ರಯಗಳು, ಆಪತ್ತು-ವಿಪತ್ತುಗಳು ಏನೇ ಬರಲಿ, ಇರಲಿ, ಗುರುರಾಯರಲ್ಲಿ ಶರಣಾಗಿ ಪ್ರಾರ್ಥಿಸಿಕೊಂಡರೆ ಎಲ್ಲ ಬಗೆಯ ಸಂಕಷ್ಟಗಳೂ ನಿವಾರಣೆಯಾಗಿ ಸಮಸ್ಯೆಗಳು ಪರಿಹಾರವಾಗುತ್ತವೆ ಎಂಬ ನಂಬಿಕೆಯನ್ನು ಉಳಿಸಿಕೊಂಡೇ ಭಕ್ತರನ್ನು ಪೊರೆಯುತ್ತಿರುವ ಕರುಣಾಮಯಿ ಗುರುಗಳು, ಭಕ್ತವತ್ಸಲರಾಗಿರುವವರು, ‘ಕಲಿಯುಗದ ಕಲ್ಪತರು’ ಎನ್ನಿಸಿಕೊಂಡಿರುವವರು ಅವರು.
ತಮಿಳುನಾಡಿನಲ್ಲಿ ನೆಲಸಿದ ಕನ್ನಡ ಮನೆತನವೊಂದರಲ್ಲಿ ಹುಟ್ಟಿ ಬೆಳೆದು, ತಮಿಳುನಾಡಿನಲ್ಲೇ ಸಂನ್ಯಾಸ ಸ್ವೀಕರಿಸಿದ ಮೇಲೆ ಧಾರ್ಮಿಕ ಗುರುವೆನ್ನಿಸಿಕೊಂಡು ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಭಕ್ತಿತತ್ತ್ವದ ಬೆಳೆ ಬಿತ್ತಿ ಜನರನ್ನು ಸತ್ಪಥದಲ್ಲಿ ನಡೆಸುವ ಮಾರ್ಗದರ್ಶಕರಾಗಿ ಆಂಧ್ರದಲ್ಲಿ ನೆಲೆನಿಂತು ಈ ಮೂರು ರಾಜ್ಯದವರನ್ನು ಧಾರ್ಮಿಕವಾಗಿ ಒಂದುಗೂಡಿಸಿದ ಮಹಾನ್ ಸಂತರು ಶ್ರೀ ರಾಘವೇಂದ್ರ ಸ್ವಾಮಿಗಳು.
ಇಂಥ ಮಹಾನ್ ಗುರುವಿನ ಜನನ, ಬದುಕು, ಕಾರ್ಯಸಾಧನೆ ಈ ವಿವರಗಳನ್ನೆಲ್ಲ ತಿಳಿಯುವ ಮುನ್ನ ಅವರ ಜೀವಿತಾವಧಿಯ ಕಾಲವನ್ನು ಮೊದಲು ಗಮನಿಸಬೇಕು. ಅದು ಕ್ರಿ.ಶ. 1623ರಿಂದ 1671. ಅಂದರೆ ಹದಿನೇಳನೆಯ ಶತಮಾನ. ಈ ಅವಧಿಯಲ್ಲಿ ನಮ್ಮ ನಾಡಿನ ಪರಿಸ್ಥಿತಿ ಒಂದು ರೀತಿ ಸಂಧಿಕಾಲದಲ್ಲಿತ್ತೆಂಬುದನ್ನು ಅವಶ್ಯವಾಗಿ ಅವಲೋಕಿಸಿಕೊಳ್ಳಬೇಕು.
ಹಿಂದೂ ಧರ್ಮ ಸಂಸ್ಕೃತಿಗಳ ಸಂರಕ್ಷಣೆಗಾಗಿ ಸ್ಥಾಪನೆಗೊಂಡು ಮೂರು ಶತಮಾನಗಳ ಕಾಲ ಉಚ್ಛ್ರಾಯಸ್ಥಿತಿಯಲ್ಲಿ ತಲೆಯೆತ್ತಿ ಮೆರೆದ ವಿಜಯನಗರ ಸಾಮ್ರಾಜ್ಯವು ಕ್ರಿ.ಶ. 1565ರಲ್ಲಿಯ ರಕ್ಕಸತಂಗಡಿ ಯುದ್ಧದಲ್ಲಿ ಮಣ್ಣುಗೂಡಿದ ಮೇಲೆ ಹಿಂದೂಧರ್ಮಕ್ಕೆ ಅಪಾರವಾದ ಸಂಕಷ್ಟಗಳ ಹಾನಿಯೊದಗಿತು. ಸಂಪದ್ಭರಿತವಾಗಿದ್ದ ವಿಜಯನಗರವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದ ಬಹಮನಿ ಸುಲ್ತಾನರುಗಳು ಒಟ್ಟುಗೂಡಿ ಅದನ್ನು ತಮ್ಮ ಅಮಾನುಷ ಕೊಲೆ ಸುಲಿಗೆಗಳಿಂದ ಹಾಳುಗೆಡವಿ ಸಂಪೂರ್ಣ ನಾಶ ಮಾಡಿದರು. ರಾಜಧಾನಿಯ ನಿರ್ಭಾಗ್ಯ ಜನತೆ ಈ ಯವನ ಶತ್ರುಗಳ ಕ್ರೂರ ಅತ್ಯಾಚಾರಕ್ಕೆ ಬಲಿಯಾಯಿತು. ದೇವಾಲಯಗಳನ್ನೆಲ್ಲ ನಾಶಪಡಿಸಿ, ಬೆಲೆಬಾಳುವುದನ್ನೆಲ್ಲ ಬಿಡದೆ ಈ ವಿಧರ್ಮೀಯರು ದೋಚಿದರು. ವೈಭವದ ನಗರವೆಂದು ಹೆಸರಾಗಿದ್ದ ವಿಜಯನಗರವು ರಕ್ಕಸತಂಗಡಿಯ ಯುದ್ಧದಲ್ಲಿ ಉಂಟಾದ ಪ್ರಭಾವದಿಂದಾಗಿ ತತ್ತರಿಸಿ ಪೂರ್ಣ ನಾಶವಾಗಿ ಹಾಳು ಹಂಪೆಯಾಯಿತು. ಮೆರೆದು ನಿಂತಿದ್ದ ಸಾಮ್ರಾಜ್ಯವೊಂದು ಮರೆತುಹೋದ ಸಾಮ್ರಾಜ್ಯವಾಗಿಬಿಟ್ಟಿತು.
ಶ್ರೀಕೃಷ್ಣದೇವರಾಯನ ರಾಜಗುರುವಾಗಿದ್ದ ವ್ಯಾಸತೀರ್ಥರ ಕಾಲದಿಂದಲೂ ಪ್ರಸನ್ನತೆಯಲ್ಲಿ ರಾಜ್ಯದ ಜನರನ್ನು ಧಾರ್ಮಿಕವಾಗಿ ಮುನ್ನಡೆಸಿದ್ದ ಗುರುಪೀಠಗಳು ಈ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ ರಕ್ಷಣೆಯನ್ನು ಅರಸಿಕೊಂಡು ದಕ್ಷಿಣದ ಬೇರೆಬೇರೆ ಕಡೆಗೆ ವಲಸೆ ಹೋಗಬೇಕಾಗಿ ಬಂದಿತು. ವ್ಯಾಸತೀರ್ಥರ ನೇರ ಯತಿಶಿಷ್ಯರಾದ ವಿಜಯೀಂದ್ರತೀರ್ಥರು ಕುಂಭಕೋಣಕ್ಕೆ ಬಂದು ನೆಲಸಿದ್ದರು. ಆ ಕಾಲದಲ್ಲಿ ಅದು ತಮಿಳುನಾಡಿನ ಚೋಳಮಂಡಲದ ತಂಜಾವೂರಿಗೆ ಸೇರಿತ್ತು. ಆಗ ಅದರ ಅರಸನಾಗಿದ್ದ ಶಿವಪ್ಪನಾಯಕ ದೈವಭಕ್ತನೂ ಧರ್ಮಭೀರುವೂ ಆಗಿದ್ದು ಆಸ್ತಿಕರಿಗೆ ಆಶ್ರಯ ನೀಡುವವನಾಗಿದ್ದನು. ಹೀಗಾಗಿ ವಿಜಯೀಂದ್ರತೀರ್ಥರು (1514-1595), ಅವರ ನಂತರ ಗುರುಪೀಠಕ್ಕೆ ಬಂದ ಸುಧೀಂದ್ರತೀರ್ಥರು (1595-1623) ಕುಂಭಕೋಣದಲ್ಲಿ ನೆಲಸಿ ತಮ್ಮ ಪೂಜೆ, ತಪಸ್ಸು, ದ್ವೈತಮತದ ಪ್ರಸಾರಗಳಲ್ಲಿ ಕಾರ್ಯನಿರತರಾಗಿದ್ದರು. ರಾಘವೇಂದ್ರಸ್ವಾಮಿಯವರ ಚರಿತ್ರೆಯನ್ನು ತಿಳಿಯಬೇಕಾದರೆ ಕುಂಭಕೋಣ, ಅಲ್ಲಿಯ ಈ ಇಬ್ಬರು ಗುರುಗಳ ಬಗ್ಗೆಯೂ ಮೊದಲು ನಾವು ಅರಿಯಬೇಕಾಗುತ್ತದೆ.
ವ್ಯಾಸತೀರ್ಥರ ದಕ್ಷ ಯತಿಶಿಷ್ಯರೆನಿಸಿದ್ದ ವಿಜಯೀಂದ್ರತೀರ್ಥರ ಕಾಲದಲ್ಲಿ ತಮಿಳುನಾಡಿನಲ್ಲಿ ಮಧ್ವಮತದ ವಿಜಯಪತಾಕೆ ಎತ್ತರದಲ್ಲಿ ರಾರಾಜಿಸುತ್ತಿದ್ದು, ಅನೇಕ ಕನ್ನಡಿಗರು ಇಲ್ಲಿಗೆ ವಲಸೆ ಬಂದು ಕುಂಭಕೋಣದ ಗುರುಪೀಠದ ಅನುಯಾಯಿಗಳಾಗಿ ನೆಲೆನಿಲ್ಲಲು ಕಾರಣವಾಯಿತು. ವಿಜಯೀಂದ್ರತೀರ್ಥರ ಅಪಾರ ಜನಪ್ರೀತಿ, ಧಾರ್ಮಿಕ ವರ್ಚಸ್ಸು ಅವರ ಕುಂಭಕೋಣ ಮಠವನ್ನು ಹೆಸರುವಾಸಿಯಾಗಿಸಿತು. ತಮ್ಮ ಈ ಮಠವನ್ನು ಅವರು ಪ್ರಮುಖ ವಿಶ್ವವಿದ್ಯಾಲಯವನ್ನಾಗಿ ಮಾಡಿದರು. ಹೀಗಾಗಿ ಕುಂಭಕೋಣ ಮಠವು ‘ದಕ್ಷಿಣದ ಕಾಶಿ’ ಎಂದೇ ಪ್ರಖ್ಯಾತಿ ಹೊಂದಿತು. ಸುತ್ತಮುತ್ತಣ ನಾಡಿನಿಂದ ಅನೇಕ ಪಂಡಿತರುಗಳು, ಬುದ್ಧಿಜೀವಿಗಳು ಕುಟುಂಬಸಮೇತ ತಮಿಳುನಾಡಿಗೆ, ಹೆಸರಾಂತ ಈ ಗುರುಪೀಠದ ಸುತ್ತಮುತ್ತಲ ಪ್ರದೇಶಗಳಲ್ಲಿ ವಲಸೆಯಾಗಿ ಬಂದು ನೆಲೆನಿಂತರು.
ಇದೇ ವಿಜಯೀಂದ್ರತೀರ್ಥರ ನಂತರ ಗುರುಪೀಠಕ್ಕೆ ಬಂದ ಸುಧೀಂದ್ರತೀರ್ಥರೇ ರಾಘವೇಂದ್ರಸ್ವಾಮಿಗಳ ಗುರುಗಳಾಗಿರುವುದರಿಂದಲೂ, ರಾಘವೇಂದ್ರರನ್ನು ಸಂನ್ಯಾಸ ಸ್ವೀಕರಿಸಿ ಇದೇ ಕುಂಭಕೋಣದ ಗುರುಪೀಠದ ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿದವರಾದ್ದಗಿದ್ದರಿಂದಲೂ ಇಷ್ಟು ಹಿನ್ನೆಲೆಯನ್ನು ಅರಿತಿರಲೇಬೇಕಾಗುತ್ತದೆ.
ಮಧ್ವಮತದ ಸರ್ವಜ್ಞಪೀಠದಲ್ಲಿ ಅಭಿಷಿಕ್ತರಾದ ಗುರುಗಳು, ಯತಿ ಎನಿಸಿಕೊಂಡರೂ, ಮಧ್ವಮತದ ಅನುಯಾಯಿಗಳಿಗಷ್ಟೇ ಗುರುವೆಂದೆನಿಸಿಕೊಳ್ಳದೆ, ನಾಡಿನ ಉದ್ದಗಲಕ್ಕೂ ನೆಲಸಿರುವ ಎಲ್ಲ ಜನರಿಗೂ, ಜಾತಿ ಭೇದಭಾವವಿಲ್ಲದೆ, ಮತದ ಗೊಡವೆಯಿಲ್ಲದೆ, ಸಿರಿವಂತ ಬಡವರೆನ್ನದೆ, ಸರ್ವರಿಗೂ ಪ್ರೀತಿಯ ಗುರುವಾಗಿ, ಕರುಣಾಮಯಿ ಗುರುವಾಗಿ ಸರ್ವಜನ ಮನಃಪ್ರಿಯರಾಗಿ ಗುರುಸಾರ್ವಭೌಮರಾಗಿದ್ದುದು ಶ್ರೀ ರಾಘವೇಂದ್ರರ ಅತಿಶಯವಾದ ಗುಣಸಾಂದ್ರತೆಯೇ ಹೌದು. ಅಂದೂ, ಇಂದೂ ಗುರುರಾಯರ ಬಗ್ಗೆ ಅವಿಶ್ವಾಸದ ಮಾತೇ ಇಲ್ಲ ಎಂಬಂತಾಗಿರುವುದು ಸತ್ಯ. ಹೀಗೆ ಸರ್ವಜನರಿಗೂ ಮನಃಪ್ರಿಯರಾದ ಗುರುವಾಗಿ ಬೆಳೆದುನಿಂತ ಚೇತನರು ಅವರು. ಸರ್ವಜನಮಾನ್ಯರಾಗಿ ಮಮತೆಯ ಸಾಗರವೇ ಎನ್ನಿಸಿಕೊಂಡ ಪ್ರಭಾವಶಾಲಿ ಚೈತನ್ಯ ಅವರದು.
ಪೂರ್ವಜರ ವಿವರ
ಕನ್ನಡನಾಡನ್ನು ಆಳಿದ ಪ್ರಸಿದ್ಧ ಕದಂಬ ರಾಜವಂಶದ ಮೂಲಪುರುಷನಾದ ‘ಮಯೂರ’ ವೈಜಯಂತಿಪುರ (ಇಂದಿನ ಬನವಾಸಿ)ವನ್ನು ಆಳುತ್ತಿರುವಾಗ ಪಲ್ಲವರನ್ನು ಯುದ್ಧಮಾಡಿ ಗೆದ್ದನು. ತನಗೆ ದೊರೆತ ವಿಜಯವನ್ನು ಸಂಭ್ರಮದಿಂದ ಆಚರಿಸಲು ಆತ ಅಶ್ವಮೇಧ, ಸರ್ವತೋಮುಖ ಮುಂತಾದ ದೊಡ್ಡದೊಡ್ಡ ಯಾಗಗಳನ್ನು ಮಾಡಲಿಚ್ಛಿಸಿದನು. ಈ ಯಾಗಗಳನ್ನು ಮಾಡಿಸಬಲ್ಲ ಶ್ರೌತಶಾಸ್ತ್ರವನ್ನು ಬಲ್ಲ ಪಂಡಿತೋತ್ತಮರು ಅವನ ರಾಜ್ಯದಲ್ಲಿರಲಿಲ್ಲ. ಅಂಥ ಬ್ರಾಹ್ಮಣರು ಉತ್ತರಭಾರತದಲ್ಲಿ ಪಂಚನದ ನಾಡಿನ ಅಹಿಚ್ಛತ್ರಪುರದಲ್ಲಿ ಇದ್ದಾರೆಂದು ತಿಳಿದು ಅಲ್ಲಿಂದ ಅಂಥ ಅರವತ್ತು ಮನೆತನದ ಪಂಡಿತೋತ್ತಮರನ್ನು ಆರಿಸಿಕೊಂಡು ತನ್ನ ರಾಜ್ಯಕ್ಕೆ ಕರೆತಂದನು. ಅಷ್ಟಲ್ಲದೆ ಈ ಮನೆತನಗಳ ಬ್ರಾಹ್ಮಣರನ್ನು ಅವರವರ ಕುಟುಂಬಸಮೇತರಾಗಿ ತನ್ನ ರಾಜ್ಯದಲ್ಲಿಯೇ ನೆಲೆ ನಿಲ್ಲುವಂತೆ ಆಶ್ರಯವನ್ನು ಕಲ್ಪಿಸಿಕೊಟ್ಟನು. ಹೀಗೆ ಬಂದು ಇವನ ರಾಜ್ಯದಲ್ಲೇ ಉಳಿದುಬಿಟ್ಟ್ಟ ಅರವತ್ತು ಮನೆತನದವರನ್ನು ‘ಷಾಷ್ಟಿಕರು’ (ಅರವತ್ತು ಮನೆತನದವರು) ಎಂದು ಕರೆಯಲಾಯಿತು. ಈ ಷಾಷ್ಟಿಕರೆಲ್ಲರೂ ಕಶ್ಯಪಾದಿ ಹದಿನಾಲ್ಕು ಗೋತ್ರಗಳಿಗೆ ಸೇರಿದವರಾಗಿದ್ದರು. ಇವರಲ್ಲಿ ಗೌತಮಗೋತ್ರಕ್ಕೆ ಸೇರಿದ ಒಂದು ಮನೆತನಕ್ಕೆ ಬೀಗಮುದ್ರೆಯವರೆಂದು ಅಡ್ಡಹೆಸರು ಇದ್ದಿತ್ತು. (ಬೀಗಮುದ್ರೆಯ ವಂಶದವರಲ್ಲಿ ಒಬ್ಬರು ದೊರೆಗಳ ಬಳಿ ಭಂಡಾರಿಯಾಗಿ (ಖಜಾನೆ ಜವಾಬ್ದಾರಿ) ಕೆಲಸ ಮಾಡಿ ನಂಬಿಕೆಗೆ ಅರ್ಹರಾಗಿದ್ದರೆಂದು ಅವರಿಗೆ ಮತ್ತು ಮುಂದೆ ಅವರ ವಂಶದವರಿಗೆಲ್ಲ ಬೀಗಮುದ್ರೆಯವರೆಂದು ಅಡ್ಡಹೆಸರಾಗಿತ್ತು). ಇವರೆಲ್ಲ ಹೀಗೆ ಉತ್ತರಭಾರತದಿಂದ ಬಂದು ಕನ್ನಡನಾಡಿನಲ್ಲಿ ನೆಲೆ ನಿಂತ ಷಾಷ್ಟಿಕರು.
ಮುಂದೆ ಕಾಲಾಂತರದಲ್ಲಿ, ಶತಮಾನಗಳಲ್ಲಿ ಅನೇಕ ರಾಜಕೀಯ ಬದಲಾವಣೆಗಳು ನಡೆದವು. ಕನ್ನಡನಾಡಿನ ರಾಜವಂಶಗಳನ್ನೆಲ್ಲ ಮುಕ್ಕಿ ಮಣ್ಣುಪಾಲುಗೈದ ಮುಸಲ್ಮಾನರ ದಾಳಿ ದಕ್ಷಿಣ ರಾಜ್ಯಗಳ ಮೇಲೂ ನಡೆದು ಧರ್ಮ ಸಂಸ್ಕೃತಿಗಳಿಗೆ ವಿಪರೀತ ಪೆಟ್ಟುಬಿದ್ದಾಗ ವಿಪೆÇ್ರೀತ್ತಮ ಮನೆತನಗಳ ಮೇಲೂ ಇದರ ದುಷ್ಪರಿಣಾಮಗಳು ಆದವು.
ಬೀಗಮುದ್ರೆ ಮನೆತನದ ಕೃಷ್ಣಭಟ್ಟರ ಕಾಲಕ್ಕೆ ವಿಜಯನಗರ ಸಾಮ್ರಾಜ್ಯ ವೈಭವಪೂರ್ಣವಾಗಿ ತಲೆಯೆತ್ತಿತ್ತು. ತೌಳವ ವಂಶದ ಕೃಷ್ಣದೇವರಾಯನು ಅದನ್ನು ವೈಭವದಿಂದ ಆಳುತ್ತಿದ್ದನು. ಕನ್ನಡನಾಡಿನ ಇತಿಹಾಸದಲ್ಲಿ ಸುವರ್ಣ ಅಧ್ಯಾಯವನ್ನು ತೆರೆದಿದ್ದ ಈತನಲ್ಲಿ ಶೌರ್ಯ, ಕಲಿತನ, ಪ್ರತಾಪಗಳಿದ್ದಂತೆಯೇ ಈತ ಸ್ವತಃ ಕವಿ, ಸಾಹಿತ್ಯ ಮತ್ತು ಸಂಗೀತಪ್ರೇಮಿ ಕೂಡ. ಇವನ ಆಸ್ಥಾನದಲ್ಲಿ ಸಾಹಿತಿಗಳು, ಕಲಾವಿದರು, ಕವಿಗಳು, ಸಂಗೀತಗಾರರು ರಾಜಾಶ್ರಯ ಪಡೆದು ಬಾಳುತ್ತಿದ್ದರು. ವ್ಯಾಸತೀರ್ಥರು ಈತನಿಗೆ ರಾಜಗುರುಗಳು. ಅವರ ಶಿಷ್ಯರುಗಳಾದ ಪುರಂದರದಾಸರು, ಕನಕದಾಸರು, ವಾದಿರಾಜರು ಮುಂತಾದವರನ್ನು ಈ ರಾಜನು ಪೆÇ್ರೀತ್ಸಾಹಿಸಿ ದಾಸಸಾಹಿತ್ಯ ರಚನೆಯಾಗಿ ಎಲ್ಲೆಡೆ ಹರಡುವಂತೆ ನೋಡಿಕೊಂಡಿದ್ದ ಮಹಾ ವಿಷ್ಣುಭಕ್ತನೂ ಹೌದು.
ಕೃಷ್ಣದೇವರಾಯನ ಈ ಎಲ್ಲ ಕೀರ್ತಿಗಳನ್ನು ಕೇಳಿ ಉತ್ತರದ ಕೃಷ್ಣಾತೀರದಲ್ಲಿದ್ದ ಬೀಗಮುದ್ರೆ ಮನೆತನದವರು ತುಂಗಭದ್ರೆ ತೀರದೆಡೆಗೆ ಕೃಷ್ಣದೇವರಾಯನ ಕೃಪಾಶ್ರಯ ಬಯಸಿ ಪಯಣಿಸಿ ಬಂದರು. ಅವರಿದ್ದೆಡೆಯಲ್ಲಿ ಈಗ ರಾಜಾಶ್ರಯ ತಪ್ಪಿಹೋಗಿತ್ತು. ಮುಸ್ಲಿಂ ದಾಳಿಯ ಪರಿಣಾಮವಾಗಿದ್ದ ಬಡತನದಿಂದ ಕಂಗೆಟ್ಟಿದ್ದವರಾಗಿದ್ದರು. ಇಷ್ಟೆಲ್ಲ ಕಷ್ಟವಿದ್ದರೂ ಅಧ್ಯಯನ ಅಧ್ಯಾಪನ ನೇಮನಿಷ್ಠೆಗಳನ್ನು ಬೀಗಮುದ್ರೆ ಮನೆತನದವರು ಬಿಟ್ಟಿರಲಿಲ್ಲ. ಇವೆಲ್ಲದರ ಜೊತೆ ತಮ್ಮ ಕುಲವಿದ್ಯೆಯಾಗಿದ್ದ ವೀಣಾವಿದ್ಯೆಯನ್ನೂ ಈ ಮನೆತನದವರು ರೂಢಿಸಿಕೊಂಡೇ ಬಂದಿದ್ದರು.
ಆಶ್ರಯ ಬಯಸಿ ಬಂದ ಬೀಗಮುದ್ರೆ ಮನೆತನದ ಕೃಷ್ಣಭಟ್ಟರನ್ನು ಕೃಷ್ಣದೇವರಾಯನು ಪುರಸ್ಕರಿಸಿ ಅವರನ್ನು ವೀಣೆ ನುಡಿಸಲು ಕೋರಿದನು. ಕೃಷ್ಣಭಟ್ಟರ ವೀಣಾವಾದನದ ವೈಖರಿ ಅವನಿಗೆ ಮೆಚ್ಚುಗೆಯಾಯಿತು. ಅವರ ವೀಣಾವಿದ್ಯೆಯ ನೈಪುಣ್ಯಕ್ಕೆ ಬೆರಗಾದನು. ಅವರನ್ನು ತನ್ನ ಆಸ್ಥಾನದ ಸಂಗೀತ ವಿದ್ವಾಂಸರನ್ನಾಗಿ ನೇಮಿಸಿಕೊಂಡನು. ಅವರ ಜೀವನಕ್ಕೆ ಬೇಕಾದ ಅನುಕೂಲಗಳನ್ನು ಕಲ್ಪಿಸಿಕೊಟ್ಟನು. ಸ್ವತಃ ತಾನೇ ಅವರ ಶಿಷ್ಯನಾಗಿ ವೀಣಾವಾದನ ಕಲಿತನು.
ಹೀಗೆ ಸ್ವತಃ ಕೃಷ್ಣದೇವರಾಯನಿಗೆ ವೀಣಾವಾದನ ಹೇಳಿಕೊಟ್ಟ ಗುರುವಾಗಿದ್ದವರು, ವಿಜಯನಗರ ರಾಜಾಸ್ಥಾನದಲ್ಲಿ ಆಸ್ಥಾನ ವಿದ್ವಾಂಸರಾಗಿದ್ದವರು ಈ ವೀಣಾ ಕೃಷ್ಣಭಟ್ಟರು. ಇವರ ಮಗ ಕನಕಾಚಲ ಭಟ್ಟರೂ ವೀಣಾಪಾರಂಗತರು. ಇವರ ಮಗ ತಿಮ್ಮಣ್ಣ ಭಟ್ಟರೂ ವೀಣಾವಾದನ ವಿದ್ಯೆಯಲ್ಲಿ ನುರಿತವರೇ. ಹೀಗೆ ವೈಣಿಕ ಮನೆತನದಲ್ಲಿ ಜನಿಸಿದವರೇ ರಾಘವೇಂದ್ರ ಸ್ವಾಮಿಗಳು: ತಿಮ್ಮಣ್ಣ ಭಟ್ಟರ ಪುತ್ರನಾಗಿ ಜನಿಸಿದವರು, ಎಂದರೆ ವೀಣಾ ಕೃಷ್ಣಭಟ್ಟರ ಮರಿ ಮೊಮ್ಮಗ. ಇನ್ನು ರಾಘವೇಂದ್ರಸ್ವಾಮಿಗಳು ಕೂಡಾ ವೀಣಾ ಪಾರಂಗತರಾಗಿದ್ದರಲ್ಲಿ ಏನಾಶ್ಚರ್ಯವಿದೆ? ಎಲ್ಲೆಡೆಯೂ ವೀಣೆ ನುಡಿಸುತ್ತಿರುವ ರಾಯರ ಚಿತ್ರ ತಾನೆ ನಮ್ಮ ಮನತುಂಬುವುದು!
ಕಾಲ ಇದ್ದ ಹಾಗೆ ಇರುವುದಿಲ.್ಲ ವಿಜಯನಗರ ಸಾಮ್ರಾಜ್ಯ ಅಸ್ತವಾದ ಮೇಲೆ ಅರಾಜಕತೆಯ ಸ್ಥಿತಿಯಲ್ಲಿ ಕನಕಾಚಲ ಭಟ್ಟರಿಗೆ ಆಶ್ರಯವೆಲ್ಲಿಂದ ಬರಬೇಕು? ವಿಜಯೋನ್ಮಾದದಲ್ಲಿ ಮುಸಲ್ಮಾನರು ಗುಡಿ ಗುಂಡಾರಗಳನ್ನು ಒಡೆದು ವಿಜೃಂಭಿಸುತ್ತಿರುವಾಗ ಧರ್ಮ, ಪೂಜೆ ಪುನಸ್ಕಾರಗಳೆನ್ನುವ ವಿಪ್ರರು ಅಲ್ಲಿ ಹೇಗೆ ತಾನೇ ಉಸಿರಾಡಿಕೊಂಡಿದ್ದಾರು? ತಮ್ಮ ಮಗ ತಿಮ್ಮಣ್ಣ ಭಟ್ಟರೊಡನೆ ವಿಜಯನಗರವನ್ನು ಬಿಟ್ಟು ತುಂಡೀರ ಪ್ರಾಂತದ ಭುವನಗಿರಿಗೆ ಬಂದರು. ಅಲ್ಲಿ ಕೆಲಕಾಲವಿದ್ದು ಆನಂತರ ಕಾವೇರಿಪಟ್ಟಣಕ್ಕೆ ಬಂದರು; ಜೀವನ ಮಾಡಿಕೊಂಡಿದ್ದರೆ ಸಾಕೆಂದು ಅಲ್ಲೇ ನೆಲಸಿದರು.
ಈ ಹಿಂದೆಯೂ ಈ ಷಾಷ್ಟಿಕ ಮನೆತನದವರ ಏಳುಬೀಳುಗಳು ರಾಜಾಶ್ರಯವನ್ನು ಅನುಸರಿಸಿಕೊಂಡೇ ಇದ್ದುದು ಹೌದು. ಅಹಿಚ್ಛತ್ರಪುರದಿಂದ ಬಂದವರು ಕದಂಬ ಮಯೂರಶರ್ಮನ ಕಾಲದ ನಂತರ ರಾಜ್ಯವನ್ನಾಳಿದ ಗಂಗರು, ಚಾಲುಕ್ಯರು, ರಾಷ್ಟ್ರಕೂಟರು ಇವರ ಆಶ್ರಯಕ್ಕೆ ನಿಷ್ಠರಾಗಿದ್ದುಕೊಂಡೇ ವಂಶಪರಂಪರೆಗಳನ್ನು ಮುಂದುವರಿಸಿಕೊಂಡು ಬದುಕಿದವರಾಗಿದ್ದರು. ಇದೀಗ ಪೂರ್ಣವಾಗಿ ರಾಜಾಶ್ರಯ ಎನ್ನುವುದು ತಪ್ಪಿ ಕನಕಾಚಲಭಟ್ಟರು ಕುಟುಂಬದೊಡನೆ ಕಾವೇರಿಪಟ್ಟಣಕ್ಕೆ ಬದುಕನ್ನು ಅರಸಿ ಬಂದವರಾದರು.
ವಿಜಯನಗರದ ಪತನದೊಂದಿಗೆ ಹಿಂದೂ ಸಾಮ್ರಾಜ್ಯವೇ ಒಡೆದುಹೋದಂತಾಗಿತ್ತು. ತುಂಡೀರಮಂಡಲದ ಕಾವೇರಿಪಟ್ಟಣವು ಕುಂಭಕೋಣಕ್ಕೆ ಸಮೀಪವಾಗಿದ್ದು, ಕುಂಭಕೋಣದಲ್ಲಿ ವಿಜಯೀಂದ್ರತೀರ್ಥರು ದ್ವೈತವಿದ್ಯಾಪೀಠವನ್ನು ಸ್ಥಾಪಿಸಿ ಧರ್ಮಪ್ರಸಾರಗೈಯುತ್ತಿದ್ದರು. ವಿಜಯನಗರಕ್ಕೆ ಸಾಮಂತರಾಗಿ ನಡೆದುಕೊಳ್ಳುತ್ತಿದ್ದ ತಂಜಾವೂರು, ಶ್ರೀರಂಗಪಟ್ಟಣ, ಮಧುರೆ, ಕೆಳದಿಯ ಅರಸರುಗಳೆಲ್ಲ ಸ್ವತಂತ್ರ ರಾಜ್ಯ ತಮ್ಮದೆಂದು ಘೋಷಿಸಿಕೊಳ್ಳುವುದಕ್ಕೆ ಕಾರಣ ವಿಜಯನಗರದ ಪತನ. ಇಂತಹ ಪರಿಸ್ಥಿತಿಯಲ್ಲಿ ತಂಜಾವೂರು ಸಂಸ್ಥಾನದ ಕಡೆಗೆ ಎಲ್ಲರ ಗಮನ ಹೋಯಿತು. ಏಕೆಂದರೆ ತಂಜಾವೂರು ಸಂಸ್ಥಾನವನ್ನು ಆಳುತ್ತಿದ್ದ ನಾಯಕ ವಂಶದವರು ಮೊದಲಿನಿಂದಲೂ ಸಾಹಿತ್ಯ, ಸಂಗೀತ, ಧರ್ಮ, ಕಲೆಗಳಿಗೆ ಪೆÇ್ರೀತ್ಸಾಹವೀಯುತ್ತ ಬಂದವರು. ಕ್ರಿ.ಶ. 1600ರಿಂದ 1634ರವರೆಗೆ ತಂಜಾವೂರನ್ನು ಆಳಿದ ರಘುನಾಥನಾಯಕನ ಆಳ್ವಿಕೆಯಲ್ಲಿ ವಿಶೇಷವಾಗಿ ಹಿಂದೂ ಸಂಸ್ಕೃತಿಯು ಪುನರುಜ್ಜೀವನ ಪಡೆಯಿತು. ತಂಜಾವೂರು, ಕುಂಭಕೋಣಗಳು ಆ ಕಾಲದ ಸಾಂಸ್ಕೃತಿಕ ಜೀವನದ ಕಣ್ಣುಗಳೆನಿಸಿದ್ದವು.
ಕಾವೇರಿಪಟ್ಟಣವು ಕನಕಾಚಲರನ್ನು ಬರಮಾಡಿಕೊಂಡಿದ್ದೇನೋ ಸರಿ, ಆದರೆ ಅದೊಂದು ಹಳ್ಳಿ. ವೀಣಾವಾದನ ಮಾತ್ರ ಬಲ್ಲ ಕನಕಾಚಲಭಟ್ಟರಿಗೆ ಅಲ್ಲಿ ಬದುಕು ದುಸ್ತರವೇ ಆಯಿತು. ಬಡತನ, ಅನಕ್ಷರಸ್ಥರೇ ತುಂಬಿದ್ದ ಗ್ರಾಮದಲ್ಲಿ ವೀಣಾವಾದನ ಕಲೆಗೆ ಪ್ರಾಶಸ್ತ್ಯವಾದರೂ ಹೇಗೆ ಸಿಕ್ಕೀತು? ದಟ್ಟದಾರಿದ್ರ್ಯ ಅನುಭವಿಸಿ ಕಡೆಗೂ ಭಟ್ಟರು ಕಣ್ಮುಚ್ಚಿದರು. ಅವರ ಮಗ ತಿಮ್ಮಣ್ಣಭಟ್ಟರ ಹೆಗಲಿಗೆ ಸಂಸಾರ ಹೊರೆವ ಭಾರ ಬಿತ್ತು. ಬಡತನದಲ್ಲೇ ಬದುಕು ಮುಂದುವರಿದಿತ್ತು. ತಿಮ್ಮಣ್ಣಭಟ್ಟರು ಮತ್ತು ಅವರ ಪತ್ನಿ ಗೋಪಮ್ಮನಿಗೆ ವೆಂಕಮ್ಮ (ವೆಂಕಟಾಂಬಿಕೆ) ಎಂಬ ಮಗಳೂ, ಗುರುರಾಜನೆಂಬ ಮಗನೂ ಹುಟ್ಟಿದರು. ಇವರಿಬ್ಬರಾದ ಮೇಲೆ ಹುಟ್ಟಿದ ಕೂಸೇ ವೆಂಕಟನಾಥ ಭಟ್ಟ. ಈ ಮಗುವೇ ಮುಂದೆ ರಾಘವೇಂದ್ರಸ್ವಾಮಿಗಳೆಂದು ಪ್ರಸಿದ್ಧರಾಗಿದ್ದು.
ಭುವಿಗೆ ಅವತರಿಸಿದ ದಿವ್ಯ ಬೆಳಕು
ಮನ್ಮಥನಾಮ ಸಂವತ್ಸರ. ಫಾಲ್ಗುಣ ಮಾಸದ ಶುಕ್ಲಪಕ್ಷ ಸಪ್ತಮಿ ಗುರುವಾರದಂದು ಮುಂದೆ ಮಹಾನ್ ಗುರುವಾಗಿ ಮನುಕುಲದ ಆರ್ತ ಕರೆಮೊರೆಗಳನ್ನಾಲಿಸಿ ಸಲಹಬಲ್ಲ ದಿವ್ಯಾತ್ಮವೊಂದು ಈ ಜಗತ್ತಿಗೆ ಬಂದಿತು, ಭುವಿಯಲ್ಲಿ ಅವತರಿಸಿತು; ಕ್ರಿ.ಶ. 1595ನೇ ವರ್ಷ ಮೃಗಶಿರಾ ನಕ್ಷತ್ರದಲ್ಲಿ ಸಕಲ ದೈವಿಕ ಲಕ್ಷಣಗಳಿದ್ದ ತಿಮ್ಮಣ್ಣಭಟ್ಟರು ಮತ್ತು ಗೋಪಮ್ಮ ದಂಪತಿಗಳಿಗೆ ಜನಿಸಿತು.
ತಿಮ್ಮಣ್ಣಭಟ್ಟರು ಮೊದಲಿನಿಂದಲೂ ತಿರುಪತಿಯ ವೆಂಕಟೇಶ್ವರನಲ್ಲಿ ಭಕ್ತಿ ತಾಳಿಕೊಂಡೇ ಬಂದಿದ್ದವರು. ಹೀಗಾಗಿ ಮಗಳಿಗೆ ವೆಂಕಟಾಂಬಾ ಎಂದೇ ಹೆಸರಿಟ್ಟಿದ್ದರು. ಈಗ ಈ ಎರಡನೆಯ ಗಂಡುಮಗುವಿಗೆ (ಮೊದಲು ಜನಿಸಿದ ಪುತ್ರನಿಗೆ ಗುರುರಾಜ ಎಂದು ಹೆಸರು ಇರಿಸಿದ್ದರು) ಕೂಡ ವೆಂಕಟನಾಥನೆಂದೇ ಹೆಸರಿಟ್ಟರು. ಹೀಗಾಗಿ ತಿಮ್ಮಣ್ಣಭಟ್ಟರಿಗೀಗ ವೆಂಕಟಾಂಬಾ, ಗುರುರಾಜ ಮತ್ತು ವೆಂಕಟನಾಥನೆಂಬ ಮೂವರು ಮಕ್ಕಳು.
ವೆಂಕಟಾಂಬಾ ಎಂಟು ವರ್ಷದವಳಾಗಿದ್ದಾಗಲೇ ಅಂದಿನ ಕಾಲದ ಪದ್ಧತಿಯಂತೆಯೇ ಅವಳ ವಿವಾಹ ಮಾಡಿ ಮುಗಿಸಿದರು ತಿಮ್ಮಣ್ಣಭಟ್ಟರು. ಮಧುರೆಯಲ್ಲಿ ವಾಸವಾಗಿದ್ದ ಕಾಶ್ಯಪ ಗೋತ್ರದ ತಿಮ್ಮರಸಾರ್ಯನೆಂಬವರ ಮಗ ಲಕ್ಷ್ಮೀನರಸಿಂಹಾರ್ಯನೆಂಬವರಿಗೆ ವೆಂಕಟಾಂಬಾಳನ್ನು ಕೊಟ್ಟು ವಿವಾಹ ಮಾಡಲಾಯಿತು.
ಏನೇ ಇದ್ದರೂ ತಿಮ್ಮಣ್ಣಭಟ್ಟರದು ಬಡತನದ ಬವಣೆಯ ಬದುಕೇ ಆಗಿತ್ತು. ಆ ಬವಣೆ ಅವರನ್ನು ಈಗಾಗಲೇ ಸಾಕಷ್ಟು ಹಣ್ಣಾಗಿಸಿತ್ತು. ವೆಂಕಟನಾಥ ಇನ್ನೂ ಚಿಕ್ಕ ಬಾಲಕನಿರುವಾಗಲೇ ಅವರು ತುಸುಕಾಲದ ಅಸ್ವಸ್ಥತೆಯಿಂದಾಗಿ ಕಣ್ಣುಮುಚ್ಚಿಕೊಂಡರು. ಇಷ್ಟಾಗುವಾಗ ವೆಂಕಟಾಂಬಾ ಬಸುರಿಯಾಗಿದ್ದು ಅವಳನ್ನು ತಮ್ಮ ಬಡತನದ ತೌರಿಗೆ ಕರೆಯಿಸಿಕೊಂಡು ಹೇಗೋ ಕಷ್ಟದಿಂದ ಅವಳ ಬಾಣಂತನ ಮುಗಿಸಿ ಮರಳಿ ಅವಳ ಗಂಡನ ಮನೆಗೆ ಕಳಿಸಿದ್ದರಷ್ಟೆ. (ಈ ಮಗುವೇ ಮುಂದೆ ‘ರಾಘವೇಂದ್ರ ವಿಜಯ’ ಕಾವ್ಯ ರಚಿಸಿದ ಕವಿಯಾಗಿದ್ದು.) ಮಗಳ ಮಗುವನ್ನು ಮೂರು ತಿಂಗಳಾಗಿದ್ದಾಗ ನೋಡಿದ್ದೇ ಕಡೆಯಾಯ್ತು. ಅವರು ವಿಧಿವಶರಾದರು.
ಆದರೆ ಅಂದಿನ ಕಾಲದ ಪದ್ಧತಿಯಂತೆ ಮಗ ಗುರುರಾಜನಿಗೂ ಬಾಲಕನಿರುವಾಗಲೇ ವಿವಾಹ ಮಾಡಿ ಮುಗಿಸಿದ್ದರು. ಅವನಿಗೀಗ ತಾಯಿ, ಹೆಂಡತಿ ಹಾಗೂ ಪುಟ್ಟ ತಮ್ಮನನ್ನು ಸಾಕಿ ಸಲಹುವ ಜವಾಬ್ದಾರಿ ಹೆಗಲಿಗೆ ಬಿತ್ತು. ಆದರೂ ಎದೆಗುಂದದೆ ಮುಂದುವರಿಯಲೇ ಬೇಕಿತ್ತು.
ತನಗೆ ತಿಳಿದಿದ್ದ ಸಂಗೀತವಿದ್ಯೆಯ ಬೋಧಕವೃತ್ತಿಯಲ್ಲೇ ಮನೆಮನೆಗೆ ತಿರುಗಿ ಪಾಠ ಹೇಳುತ್ತ ಗುರುರಾಜ ಹೇಗೋ ಸಂಸಾರದ ಹೊಣೆ ಹೊತ್ತು ನಿಭಾಯಿಸತೊಡಗಿದನು. ತಮ್ಮನಿಗೂ ಕೂಡ ತನಗೆ ತಿಳಿದಷ್ಟು ಶಾಸ್ತ್ರವಿದ್ಯೆ ಮಂತ್ರಶ್ಲೋಕಗಳನ್ನು ಹೇಳಿಕೊಡತೊಡಗಿದನು. ಎಂಟು ವರ್ಷದವನಾಗಿದ್ದ ಬಾಲಕ ವೆಂಕಟನಾಥ ತುಂಬ ಚುರುಕಾದ ಬುದ್ಧಿಮತ್ತೆಯಿಂದ ಅಣ್ಣ ಹೇಳಿಕೊಟ್ಟ ವಿದ್ಯೆಯನ್ನು ಕಲಿಯುತ್ತ ಬಂದನು.
ವೀಣೆಯೆಂದರೆ ಆ ಬಾಲಕನಿಗೆ ತುಂಬ ಅಕ್ಕರಾಸ್ಥೆ ಇದ್ದಿತ್ತು. ಅಣ್ಣನಿಂದ ವೀಣಾವಾದನದ ಪಾಠಗಳನ್ನು ಬಿಡದೆ ಕಲಿಯುತ್ತ, ಸರಿಯಾಗಿ ಅಭ್ಯಾಸ ಮಾಡುತ್ತ ಮರುದಿನ ಅಣ್ಣನಿಗೆ ಕಲಿತದ್ದನ್ನು ಒಪ್ಪಿಸುತ್ತ ಬೆಳೆಯತೊಡಗಿದನು. ತಮ್ಮನ ಕಲಿಯುವ ವೇಗಕ್ಕೆ ಬೆರಗಾಗುತ್ತ ಮತ್ತೂ ಪೆÇ್ರೀತ್ಸಾಹ ನೀಡುತ್ತ ಕಲಿಸುತ್ತಿದ್ದವನು ಗುರುರಾಜ.
ಹೀಗಿರುವಾಗ ಒಮ್ಮೆ ತವರಿಗೆ ತಮ್ಮನ ಮನೆಗೆ ಎಂದು ಬಂದಿದ್ದ ವೆಂಕಟಾಂಬ ಈ ಪುಟ್ಟ ತಮ್ಮನ ಕಡೆಗೆ ವಿಪರೀತ ಅಕ್ಕರೆಯ ಭಾವದಿಂದ ಆಕರ್ಷಿತಳಾದಳು. ಈ ಚಿಕ್ಕ ಹುಡುಗನ ಮುಖದಲ್ಲಿ ತುಂಬಿದ ತೇಜಸ್ಸು, ಏಕಾಗ್ರತೆ, ವಿನಯವಂತಿಕೆ, ನಡೆ ನುಡಿ ಆಚಾರಗಳೆಲ್ಲವೂ ಅವಳೊಳಗಿನ ತಾಯ್ತನದ ತಂತಿಯನ್ನು ನವಿರಾಗಿ ಮೀಟಿದವು.
ಅಂತೆಯೇ ಆಕೆ ತನ್ನೊಳಗೇ ಒಂದು ತೀರ್ಮಾನಕ್ಕೆ ಬಂದು ತನ್ನ ಪತಿ ಲಕ್ಷ್ಮೀನರಸಿಂಹರಲ್ಲಿ ತನ್ನ ಯೋಚನೆಯನ್ನು ಹಂಚಿಕೊಂಡಳು. ಪುಟ್ಟ ವೆಂಕಟನಾಥನಿಗೆ ಭಾವನಾಗಿದ್ದ ಈ ಲಕ್ಷ್ಮೀನರಸಿಂಹಾರ್ಯರು ಸ್ವತಃ ಉಪಾಧ್ಯಾಯ ವೃತ್ತಿಯಲ್ಲಿದ್ದವರು. ಅವರು ಪ್ರೀತಿಯ ನಗುಮೊಗದಿಂದಲೇ ಪತ್ನಿಯ ಯೋಜನೆಗೆ ಸಮ್ಮತಿಸಿದರು.
ಅದರಂತೆ ಅಕ್ಕ-ಭಾವ ಬಂದು ಅಲ್ಲಿ ಇರುವಾಗಲೇ ವೆಂಕಟನಾಥನಿಗೆ ಉಪನಯನವನ್ನು (ಬ್ರಹ್ಮೋಪದೇಶ) ಮಾಡಲಾಯಿತು. ಇದು ನಡೆದದ್ದು ಕ್ರಿ.ಶ. 1605 ರಲ್ಲಿ. ಎಂದರೆ ವೆಂಕಟನಾಥ ಹತ್ತು ವರ್ಷದ ಬಾಲಕ. ಉಪನಯನ ಸಮಾರಂಭ ಚಿಕ್ಕದಾಗಿ ಚೊಕ್ಕವಾಗಿ ನಡೆಯಿತು. ಆನಂತರ ಲಕ್ಷ್ಮೀನರಸಿಂಹಾರ್ಯರು ಮತ್ತು ವೆಂಕಟಾಂಬ ಮೊದಲೇ ಮಾತಾಡಿಕೊಂಡು ಗುರುರಾಜನನ್ನು ಒಪ್ಪಿಸಿದ ಮೇರೆಗೆ ವೆಂಕಟನಾಥನನ್ನೂ ತಮ್ಮೊಂದಿಗೆ ಮಧುರೆಗೆ ಕರೆದೊಯ್ದರು. “ವಿದ್ಯೆ ಕಲಿಯುವುದರಲ್ಲಿ ತುಂಬಾ ದಕ್ಷನೂ, ಚುರುಕೂ ಇದ್ದಾನೆ. ಇಲ್ಲಿಯೇ ಇದ್ದು ಅವನ ವಿದ್ಯೆ ಕುಂಠಿತವಾಗುವುದು ಬೇಡ. ಅವನನ್ನು ನಾವು ಮಧುರೆಗೆ ಕರೆದೊಯ್ಯುತ್ತೇವೆ. ಅಲ್ಲಿ ವಿದ್ವಾಂಸರಿಂದಲೂ, ಸ್ವತಃ ನಾನೂ ಪಾಠ ಹೇಳಿ ಸಕಲ ವಿದ್ಯಾ ಶಾಸ್ತ್ರಗಳಲ್ಲೂ ಅವನನ್ನು ಪಾರಂಗತನನ್ನಾಗಿ ಮಾಡಲು ಒಳ್ಳೆಯ ಅವಕಾಶವಿದೆ. ಕಳುಹಿಸಿ ಕೊಡು” ಎಂದು ಒಪ್ಪಿಗೆ ಪಡೆದಿದ್ದರು.
ಹೀಗೆ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ವೆಂಕಟನಾಥ ಮುಂದಿನ ಬದುಕನ್ನು ಅಕ್ಕ ಭಾವಂದಿರ ಆಸರೆಯಲ್ಲಿ ನಡೆಸಲು ಸನ್ನದ್ಧನಾಗಿ ಅವರೊಂದಿಗೆ ಮಧುರೆಗೆ ಹೊರಟನು.
‘ಆಗುವುದೆಲ್ಲಾ ಒಳ್ಳೆಯದಕ್ಕೆ’ ಎಂಬ ಮಾತೊಂದಿದೆ.
ಮುಂದೆ ಮನುಕುಲಕ್ಕೆ ಮಹಾನ್ ಗುರುವಾಗಬೇಕಿದ್ದ ಸಂತಜೀವವೊಂದಕ್ಕೆ ಅನೇಕ ರೀತಿಯಲ್ಲಿ ವಿದ್ಯಾವ್ಯಕ್ತಿತ್ವವೊಂದು ರೂಪುಗೊಳ್ಳಲೇಬೇಕಿತ್ತು ಅದಕ್ಕೆ ಮಧುರೆ ಈ ಬಾಲಕನನ್ನು ತನ್ನ ಮಡಿಲಿಗೆ ಕರೆಯಿಸಿಕೊಂಡಿತೇನೋ ಎಂಬಂತಾಯಿತು!
ವೆಂಕಟನಾಥ ತನ್ನ ಅಕ್ಕ ಭಾವರೊಂದಿಗೆ ಮಧುರೆಗೆ ಬಂದಾಗ ಅದು ಇಡೀ ದಕ್ಷಿಣ ಭಾರತದಲ್ಲಿ ಒಂದು ದೊಡ್ಡ ಸಾಂಸ್ಕೃತಿಕ ವಿದ್ಯಾಕೇಂದ್ರ ಎಂಬ ಪ್ರಸಿದ್ಧಿಗೆ ಬಂದಿತ್ತು. ಆಗ ಅದು ಪಾಂಡ್ಯ ಅರಸರ ರಾಜಧಾನಿಯಾಗಿದ್ದು ಅಲ್ಲಿನ ಮೀನಾಕ್ಷಿ ಸುಂದರೇಶ್ವರ ಮಂದಿರವು ಕೀರ್ತಿ ಗಳಿಸಿ ಮೆರೆದಿತ್ತು. ಅಲ್ಲಿ ಅನೇಕ ಶೈವ, ವೈಷ್ಣವ ದೇವಾಲಯಗಳು ಇದ್ದು ಅಲ್ಲಿನ ಮಠ ಮಂದಿರಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯೆ ಕಲಿಯುತ್ತಿದ್ದರು. ಅವರುಗಳಿಗೆ ಬೇಕಾದ ಗ್ರಂಥ ಭಂಡಾರ, ಊಟ ವಸತಿಗಳಿಗೆ ರಾಜರಲ್ಲದೆ ನಗರದ ವಣಿಕರೂ, ಶ್ರೀಮಂತರೂ, ವಿದ್ವಜ್ಜನರೂ, ಹಿರಿಯ ಅಧಿಕಾರಿಗಳೂ ಉದಾರವಾಗಿ ನೆರವು ನೀಡುತ್ತ ಮುನ್ನಡೆಸುತ್ತಿದ್ದ.
ವೆಂಕಟನಾಥನ ಭಾವಂದಿರಾದ ಲಕ್ಷ್ಮೀನರಸಿಂಹಾರ್ಯರು ಇಂಥ ಒಂದು ಗುರುಕುಲದ ಅಧ್ಯಕ್ಷರಾಗಿಯೂ ಅಧ್ಯಾಪಕರಾಗಿಯೂ ಇದ್ದುದರಿಂದ ಅವರ ಜೀವನನಿರ್ವಹಣೆ ತೊಂದರೆಯಿಲ್ಲದೆ ಸಾಗುತ್ತಿತ್ತು. ಅಲ್ಲಿನ ವಿದ್ವಾಂಸರುಗಳ ಎಡೆಯಲ್ಲಿ ಲಕ್ಷ್ಮೀನರಸಿಂಹಾರ್ಯರಿಗೊಂದು ಅಗ್ರಸ್ಥಾನವಿದ್ದಿತ್ತು. ಹೀಗಾಗಿ ವೆಂಕಟನಾಥನಿಗೆ ಅಲ್ಲಿ ಯಾವ ಅಂಶದಲ್ಲಿಯೂ ಅನಾದರ ಎದುರಾಗಲಿಲ್ಲ. ಅಕ್ಕನ ವಾತ್ಸಲ್ಯ, ಭಾವನ ಮಾರ್ಗದರ್ಶನದಲ್ಲಿ ಎಂಟು ವರ್ಷಗಳ ಕಾಲ ಮಧುರೆಯಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದನು. ವೇದ, ವೇದಾಂಗ, ತರ್ಕ, ಮೀಮಾಂಸಾ, ವ್ಯಾಕರಣಗಳಲ್ಲೂ, ಸಾಹಿತ್ಯ, ಸಂಗೀತ, ವೀಣಾವಾದನ ಕಲೆಯಲ್ಲೂ ಅಪಾರ ಪರಿಣತಿಯನ್ನು ಪಡೆದು ಎಲ್ಲರಿಂದಲೂ ಗೌರವಾನ್ವಿತನಾದನು. ಭಾವನವರಿಂದಲೇ ಬ್ರಹ್ಮಸೂತ್ರ, ಭಗವದ್ಗೀತಾ, ಉಪನಿಷದ್ ಗ್ರಂಥಗಳಲ್ಲಿದ್ದ ಅನೇಕ ಜಟಿಲ ವಿಷಯಗಳನ್ನು ಬಿಡಿಸಿ ಬಿಡಿಸಿ ಕೇಳಿಸಿಕೊಳ್ಳುತ್ತ, ಅರ್ಥ ಮಾಡಿಕೊಳ್ಳುತ್ತ ಬಂದವನು ಮುಂದೆ ತಾನೇತಾನಾಗಿ ವ್ಯಾಕರಣ ಪಾಂಡಿತ್ಯ, ಮೀಮಾಂಸಾ ಪ್ರಭುತ್ವ, ನ್ಯಾಯನೈಪುಣ್ಯ, ವೇದ ವೈದುಷ್ಯಗಳ ವಿಶ್ಲೇಷಣಾ ಚತುರರೆನಿಸಿಕೊಂಡು ವಿಜೃಂಭಿಸತೊಡಗಿದರು.
ಇಷ್ಟಾಗುವಾಗ ಈ ಅಗಲಿಕೆಯ ವರ್ಷಗಳಲ್ಲಿ ತನ್ನ ಸೋದರನನ್ನು ಸ್ವಲ್ಪವೂ ಮರೆತಿರದÀ ಗುರುರಾಜ ತನ್ನ ತಮ್ಮನಿಗೆ ವಿವಾಹ ಮಾಡಬೇಕೆಂದು ಹಂಬಲಿಸುತ್ತಿರುವುದು ಅಕ್ಕ ಭಾವನಿಗೂ ತಿಳಿದುಬಂದಿತು. ತಾಯಿ ಗೋಪಿಕಾಂಬೆಯೂ ಮಗನ ವಿವಾಹವನ್ನು ಕಣ್ತುಂಬ ಕಾಣಬೇಕೆಂದು ಆಶಿಸುತ್ತಿದ್ದಳು. ವೆಂಕಟನಾಥನನ್ನು ಕಾವೇರಿಪಟ್ಟಣಕ್ಕೆ ಅಕ್ಕ-ಭಾವ ಕಳುಹಿಸಿಕೊಟ್ಟರು.
ವೈವಾಹಿಕ ಬದುಕು
ವೆಂಕಟನಾಥನಿಗೆ ವಯಸ್ಸು ಈಗ 20ಕ್ಕೆ ಸಮೀಪಿಸುತ್ತಿತ್ತು. ಮೊದಲೇ ಕಾಣಲು ತುಂಬಾ ಲಕ್ಷಣವಂತ. ಚಿನ್ನದ ಹೂವಿಗೆ ಪರಿಮಳವೂ ಬಂದು ಸೇರಿದರೆ ಸೊಗಸಿಗೆ ಏನು ಕಮ್ಮಿ? ವೈದಿಕ ಆಚಾರಗಳಿಂದ ಸಂಪನ್ನವಾಗಿದ್ದ ತೇಜೋವಂತ ವ್ಯಕ್ತಿಯಾಗಿ ಕಾಣುತ್ತಿದ್ದ. ಮೈಬಣ್ಣ ಕೊಂಚವೇ ಎಣ್ಣೆಗಪ್ಪು. ಮೈ ಸ್ವಲ್ಪ ಸ್ಥೂಲವೇ ಎನ್ನಬೇಕು. ಆದರೆ ಒಳ್ಳೆಯ ಆಜಾನುಬಾಹು ಶರೀರ. ಇಷ್ಟಾದರೂ ಮುಖದಲ್ಲಿ ಸ್ವಲ್ಪವಾದರೂ ಅಹಂಗೆ ಎಡೆಯೇ ಇಲ್ಲದಂತೆ ಶುದ್ಧ ಸಾತ್ತ್ವಿಕವಾದೊಂದು ಪ್ರಭೆ ರಾಜಿಸಿತ್ತು. ಅಂತರ್ಮುಖಿಯಾದ ದೃಷ್ಟಿಯೇನೋ ಎಂಬಂತೆ ಭಾಸವಾಗುತ್ತಿದ್ದ ಎರಡು ಕಣ್ಣುಗಳಲ್ಲಿ ಗಮನಿಸಿದರೆ ಕಾಣುವುದು ಕರುಣೆಯ ಕಡಲೇ ಎನಿಸುತಿತ್ತು. ಹಿತಮಿತಭಾಷಿಯಾಗಿದ್ದ, ಗಂಭೀರವೂ ಆಗಿದ್ದ ನಡೆ-ನುಡಿ. ಸ್ನಾನ ಸಂಧ್ಯಾವಂದನೆ ತಪ್ಪದೆ ಮಾಡಿದ್ದ, ಗಂಧ-ಅಕ್ಷತೆ ಅಂಗಾರಗಳನ್ನು ಹಚ್ಚಿದ ವೈದಿಕಕಳೆ ತುಂಬಿದ್ದ ಮೊಗದಲ್ಲಿ ಕಂಡೂಕಾಣದಂಥ ಒಂದು ಮುಗುಳ್ನಗೆ ನೆಲಸಿದ್ದಂತೆ ಭಾಸವಾಗುತ್ತಿತ್ತು.
ಹೀಗೆ ಸುಂದರವಾದ ಕಾಂತಿಯ, ಚೈತನ್ಯದ ಆವಿರ್ಭಾವವೇ ಎಂಬಂತಿದ್ದ ವೆಂಕಟನಾಥ ತಮ್ಮ ವಂಶದ ವಿಶೇಷ ಕಲೆಯಾಗಿದ್ದ ವೀಣೆಯನ್ನು ನುಡಿಸಲು ಕುಳಿತನೆಂದರೆ ಆಲಿಸಿದವರಿಗೆ ಯಾವುದೋ ದಿವ್ಯ ನಾದಲೋಕದಲ್ಲಿ ತೇಲುವಂತೆ ಭಾಸವಾಗುತ್ತಿತ್ತು. ವೀಣಾನಾದವು ತೆರೆತೆರೆಯಾಗಿ ನಿನಾದ ಹೊಮ್ಮಿಸುತ್ತ ಭಕ್ತಿರಸದ ಹೊನಲೇ ತಾನಪೂರ್ವಕವಾಗಿ ಹರಿಯುತ್ತಿತ್ತು. ಮೈಮರೆತು ಹೀಗೆ ಕಾಲಪರಿವೆಯೂ ಇಲ್ಲದೆ ವೆಂಕಟನಾಥನ ವೀಣಾವಾದನ ಅದಾವ ಆತ್ಮನಿವೇದನೆಯ, ಶರಣಾಗತಿಯ ಭಾವತರಂಗಗಳನ್ನು ಹೊಮ್ಮಿಸುತ್ತಿತ್ತೋ ಅಂತೂ ನುಡಿಸುವಾತನೂ ಕೇಳುಗರೂ ಅಲ್ಲಿ ದೇಹಪರಿವೆ ಮರೆತು ಭಕ್ತಿಪರವಶತೆಯಲ್ಲಿ ಮುಳುಗಿಹೋಗುತ್ತಿದ್ದರು ಎಂಬುದು ಸತ್ಯ.
ಇಂತಹ ತೇಜಸ್ವೀ ವೆಂಕಟನಾಥ ತಲೆಯ ಹಿಂಭಾಗದಲ್ಲಿ ಕಿರಿದಾದ ಜುಟ್ಟು, ಕಿವಿಯಲ್ಲಿ ತನ್ನ ಭಾವನವರಿಂದ ಕೊಡಮಾಡಿದ ಚಿನ್ನದ ಕಡಕು, ಮಡಿಯಾದ ಮಗುಟ ಉಟ್ಟು, ದ್ವಾದಶನಾಮ ದೇವತಾರ್ಚನೆಗೆ ಕುಳಿತನೆಂದರೆ ಪೂಜೆ, ಧ್ಯಾನದಲ್ಲೇ ಮೈಮರೆತು ಗಂಟೆಗಟ್ಟಲೆ ಕುಳಿತುಬಿಡುತ್ತಿದ್ದ. ನೋಡಿದವರಿಗೆ ಅವನೊಬ್ಬ ಮಹಾತ್ಮನೋ, ಪೀಠಾಧಿಪತಿಯೋ, ಯತಿಶ್ರೇಷ್ಠನೋ ಎಂಬಂತೆ ಭಾಸವಾಗುತ್ತಿತ್ತು. ಹೌದು! ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಮಾತು ಕೂಡ ಸತ್ಯವೇ ಅಲ್ಲವೆ?
ತನ್ನ ತಾಯಿ, ಅಣ್ಣ, ಅಕ್ಕ-ಭಾವಂದಿರ ಒತ್ತಾಯದ ಮೇರೆಗೆ ವೆಂಕಟನಾಥನು ಲಗ್ನವಾಗಲು ಒಪ್ಪಿಗೆ ನೀಡಲೇಬೇಕಾಯಿತು. ಕಾವೇರಿಪಟ್ಟಣದ ಪಕ್ಕದೊಂದು ಅಗ್ರಹಾರದಲ್ಲಿದ್ದ ಬ್ರಾಹ್ಮಣ ದಂಪತಿಗಳಿಗೆ ‘ಸರಸ್ವತಿ’ ಎಂಬ ಹೆಸರಿನ ಯೋಗ್ಯ ಕನ್ನಿಕೆಯಿರುವುದು ತಿಳಿದುಬಂದು ಆಕೆಯನ್ನು ನೋಡಿಕೊಂಡು ಬಂದ ಗೋಪಿಕಾಂಬಾ ಗುರುರಾಜರು ವೆಂಕಟನಾಥನಿಗೆ ಅವಳೇ ಸರಿಯಾದ ಜೋಡಿ ಎಂದು ಲಗ್ನ ನಿಶ್ಚಯಿಸಿದರು. ಸರಸ್ವತಿ ಸರ್ವಾಂಶದಿಂದಲೂ ಸದ್ಗುಣಶೀಲಳಾದ ಕನ್ಯೆಯಾಗಿದ್ದಳು. ಕಾಣಲು ಸೌಮ್ಯ ಸುಂದರಿಯಾಗಿಯೂ ಇದ್ದಳು. ವಿವೇಕ, ವಿನಯ, ದಾಕ್ಷಿಣ್ಯಪರತೆ, ಮೃದುವಾದ ನಡೆ-ನುಡಿ ಎಲ್ಲ ಕೂಡಿ ವೆಂಕಟನಾಥನಿಗೆ ತಕ್ಕ ಜೋಡಿಯಾಗಿದ್ದಳು. ಕ್ರಿ.ಶ. 1614ರಲ್ಲಿ ಆನಂದನಾಮ ಸಂವತ್ಸರದಲ್ಲಿ ಸರಸ್ವತಿಯೆಂಬ ಆ ಕನ್ಯೆಯೊಂದಿಗೆ ವೆಂಕಟನಾಥನಿಗೆ ವಿವಾಹ ಸಮಾರಂಭ ನೆರವೇರಿತು.
ಮದುವೆಯಾದ ಮೇಲೂ ಹೆಂಡತಿಯೊಡನೆ ಮತ್ತೆ ಮಧುರೆಗೆ ಹೋಗಿ ತನ್ನ ಭಾವನವರಿಗೆ ಹೆಚ್ಚಿನ ಭಾರವನ್ನು ಹೊರಿಸುವುದು ವೆಂಕಟನಾಥನಿಗೆ ಸರಿಯೆನಿಸಲಿಲ್ಲ. ಹೀಗಾಗಿ ಅವರ ಅಪ್ಪಣೆ ಪಡೆದು ಕಾವೇರಿಪಟ್ಟಣದಲ್ಲಿಯೇ ಇದ್ದುಬಿಟ್ಟನು. ಪರಸ್ಪರ ಅರಿತು ಅನ್ಯೋನ್ಯವಾಗಿ ನಡೆದುಕೊಳ್ಳುತ್ತಿದ್ದ ಸುಂದರ ಸರಸ ದಾಂಪತ್ಯ ವೆಂಕಟನಾಥ ಮತ್ತು ಸರಸ್ವತಿಯರದ್ದಾಗಿತ್ತು. ಪತಿಯೆಂದರೆ ಪರಮಪೂಜ್ಯ ಭಾವವೇ ಅನುರಾಗದ ಜೊತೆ ಸರಸ್ವತಿಯಲ್ಲಿ ಮಿಳಿತವಾಗಿತ್ತು. ಸುಂದರನಾದ ಪತಿ, ವೀಣಾ-ವಿಶಾರದ, ಸಾಹಿತ್ಯ-ಕಾವ್ಯ ಚತುರ; ಮೃದುಭಾಷಿಯಾದ ಸದ್ಗುಣ ಸಂಪನ್ನನಾದ ತನ್ನ ಪತಿಯನ್ನು ಆಕೆ ತುಂಬಾ ಪ್ರೀತಿಸತೊಡಗಿದಳು. ಈ ಅನ್ಯೋನ್ಯ ದಾಂಪತ್ಯಜೋಡಿಯನ್ನು ಕಂಡು ಗೋಪಿಕಾಂಬಾ, ಗುರುರಾಜ ಮತ್ತು ಅವನ ಪತ್ನಿ ಎಲ್ಲರೂ ಕೂಡ ತಮ್ಮ ಆಯ್ಕೆ ಬಹಳ ಸರಿಯಾದುದೆಂದು
ಹಿಗ್ಗಿನಿಂದ ಕೂಡಿದರು. ಸರಸ್ವತಿಯೆಂದರೆ ಆ ಮನೆಯಲ್ಲಿ ಎಲ್ಲರಿಗೂ ಅಚ್ಚುಮೆಚ್ಚಿನವಳಾದಳು. ಪತಿಗನುಕೂಲೆಯಾದ ಸತಿ ಎನಿಸಿಕೊಂಡಳು.
ಶಾಂತವಾದ ಸುಂದರ ಬದುಕು ಹೀಗೆ
ಸಾಗುತ್ತಿದ್ದಂತೆಯೇ ವೆಂಕಟನಾಥನಿಗೆ ಮಾತೃವಿಯೋಗದ ದುಃಖವು ಬಂದಡರಿತು. ಗುಣವತಿ ಸೊಸೆಯೊಂದಿಗೆ ಬಹುಕಾಲ ಸಂತಸದಲ್ಲಿ ಬಾಳಲು ಬಿಡದೆ, ಕಡೆಗೆ ಆ ಸೊಸೆಯಿಂದ ಮೊಮ್ಮಗುವನ್ನು ಪಡೆದು ನೋಡಲೂ ಬಾರದೆಂಬಂತೆ ವಿಧಿ ಗೋಪಿಕಾಂಬಳನ್ನು ಒಯ್ದಿತು.
ಬದುಕೇ ಹೀಗೆ, ಯಾರಲ್ಲಿಯೂ ಸಂತೋಷವಾಗಲಿ ದುಃಖವಾಗಲಿ ಶಾಶ್ವತವಾಗಿರಲು ಬಿಡುವುದಿಲ್ಲವೋ ಏನೋ! ದುಃಖ ನುಂಗಿಕೊಂಡು ವೆಂಕಟನಾಥ ಅಣ್ಣನೊಂದಿಗೆ
ಕೂಡಿಕೊಂಡು ತಾಯಿಯ ಅಂತಿಮಸಂಸ್ಕಾರ ನೆರವೇರಿಸಿದರು.
(ಮುಂದುವರಿಯುತ್ತದೆ)
‘ರಾಘವೇಂದ್ರ ವಿಜಯ’ದ ಕರ್ತೃ ಶ್ರೀ ನಾರಾಯಣಾರ್ಯರು ರಾಘವೇಂದ್ರ ಸ್ವಾಮಿಗಳ ಅಕ್ಕನ ಮಗ. ತಮ್ಮ ತಾಯಿ, ತಂದೆಯರ ಬಗ್ಗೆ ದೀರ್ಘವಾಗಿಯೇ ಪರಿಚಯಿಸಿದ್ದಾರೆ. ಇವರ ತಾಯಿ (ರಾಘವೇಂದ್ರಸ್ವಾಮಿಗಳ ಅಕ್ಕ) ತಮ್ಮ ಎಂಟನೆಯ ವಯಸ್ಸಿನಲ್ಲೇ ‘ಕಾವ್ಯಕುಶಲಿ’ಯಾಗಿದ್ದರಂತೆ. ಇವರನ್ನು ವಿವಾಹವಾದ ಲಕ್ಷ್ಮೀನಾರಾಯಣಾರ್ಯರ ವಂಶದ ವಿವರವೂ ಬಂದಿದೆ. ‘ಢಂಕಿ ಪುರಾಧಿನಾಯಕ’ರಾದ ಕಾಶ್ಯಪ ಗೋತ್ರದ ತಿಮ್ಮಣ್ಣನಾಯಕರು ವಂಶದ ಹಿರಿಯರಂತೆ. ಈ ವಂಶದಲ್ಲಿ ಬಂದ ತಿಮ್ಮರಸಾರ್ಯರೆಂಬವರ ಮಗ ಲಕ್ಷ್ಮೀನರಸಿಂಹಾರ್ಯರೇ ತನ್ನ ತಂದೆ ಎಂಬ ಒಕ್ಕಣೆ ಇದೆ. ‘ಢಂಕಿ’ ಎಂಬುದು ‘ಢೆಂಕಣಿ ಕೋಟೆ’; ತಿಮ್ಮಣ್ಣ ನಾಯಕರು ಅಲ್ಲಿನ ಒಡೆಯರಾಗಿದ್ದವರು. ಎಂದರೆ ದಣ್ಣಾಯಕ, ದಂಡನಾಯಕರಾಗಿ ಇದ್ದವರು. ‘ತಿಮ್ಮರಸ’ರ ಹೆಸರನ್ನು ನೋಡಿದರೂ ಈ ವಂಶದವರು ಢಣ್ಣಾಯಕರಾಗಿದ್ದುದನ್ನು ಅದು ಸೂಚಿಸುತ್ತದೆ. ಆದರೆ ಇವರ ಮಗ ಲಕ್ಷ್ಮೀನರಸಿಂಹಾರ್ಯರು ಮಾತ್ರ ವಿದ್ಯೆಯಲ್ಲಿ ಅಪಾರ ಆಸಕ್ತಿ ತಾಳಿ ಆರು ಶಾಸ್ತ್ರಗಳನ್ನೂ ಓದಿದ್ದ ವಿದ್ವಾಂಸರಾಗಿದ್ದರೆಂದು ಈ ಗ್ರಂಥಕರ್ತೃ ಹೇಳಿಕೊಂಡಿದ್ದಾರೆ.