ಅರ್ಥಾ ವೈ ವಾಚಿ ನಿಯತಾಃ ವಾಙ್ಮೂಲಾಃ ವಾಚಿ ಮಿಶ್ರಿತಾಃ |
ಯೋ ವೈ ತಾಂ ಸ್ತೇಯಯೇದ್ವಾಚಂ ಸ ಸರ್ವಸ್ತೇಯಕೃನ್ನರಃ ||
– ನಾರದಸ್ಮೃತಿ
“ಮಾತಿನಲ್ಲಿ ಅರ್ಥ ಅಡಗಿರುತ್ತದೆ. ಅರ್ಥಕ್ಕೆ ಮೂಲವು ಮಾತೇ. ಹೀಗೆ ಅರ್ಥವು ಮಾತಿನೊಡನೆ ಬೆರೆತಿರುತ್ತದೆ. ಯಾರು ಮಾತನ್ನು ಅಗ್ಗ ಮಾಡುತ್ತಾನೋ ಅವನು ಎಲ್ಲ ರೀತಿಯ ಕಳ್ಳತನ ಮಾಡಿದಂತೆ ಆಗುತ್ತದೆ.”
ಮಾತು ಎಂಬುದು ಕೇವಲ ನಾಲಗೆಯ ವ್ಯವಹಾರವಲ್ಲ. ಒಂದೊಂದು ಮಾತಿನ ಹಿಂದೆಯೂ ವಿಶಾಲ ಅರ್ಥ ಹುದುಗಿರುತ್ತದೆ. ಹೀಗೆ ಮಾತನ್ನು ಅಪವ್ಯಯ ಮಾಡುವುದು ಕಳ್ಳತನಕ್ಕೆ ಸಮಾನವೆನಿಸುತ್ತದೆ. ಈ ಹಿನ್ನೆಲೆಯಲ್ಲಿಯೆ ನಮ್ಮ ಪರಂಪರೆಯಲ್ಲಿ ವಾಗ್ದಾನವನ್ನು ಯಾರೂ ಮೀರಬಾರದೆಂಬ ಕಟ್ಟಳೆಯಿದೆ.
ಪಂಡಿತ್ ಮೋತಿಲಾಲ್ ನೆಹರು ಆ ದಿನಗಳಲ್ಲಿ ದೇಶದಲ್ಲಿಯೆ ಪ್ರತಿಷ್ಠಿತರಾದ ವಕೀಲರಾಗಿದ್ದರು. ಅಪಾರ ಗಳಿಕೆ ಇತ್ತು. ಹೀಗಾಗಿ ಸಹಾಯಾರ್ಥಿಗಳು ಅವರಲ್ಲಿಗೆ ಆಗಿಂದಾಗ ಬರುತ್ತಿದ್ದರು.
ಒಮ್ಮೆ ಒಬ್ಬ ಬಡ ವ್ಯಕ್ತಿ ಮಗಳ ಮದುವೆಗೆ ಹಣದ ಕೊರತೆ ಇತ್ತೆಂದು ಹೇಳಿ ಮುನ್ನೂರು ರೂಪಾಯಿ ಬೇಡಿದ. ಮೋತಿಲಾಲರು ತಮ್ಮ ಗುಮಾಸ್ತೆಯನ್ನು ಕರೆದು ಆ ದಿನ ಸಂಜೆಯ ವೇಳೆಗೆ ಆಗಿದ್ದ ಗಳಿಕೆಯಷ್ಟನ್ನೂ ಆ ಬಡ ವ್ಯಕ್ತಿಗೆ ಕೊಡುವಂತೆ ಆದೇಶಿಸಿದರು. ಅಂದು ಸಂಜೆಯ ವೇಳೆಗೆ ಆಗಿದ್ದ ಗಳಿಕೆ ಒಂದು ಸಾವಿರದ ಮುನ್ನೂರರಷ್ಟು ಇತ್ತು.
ಗುಮಾಸ್ತೆ ಕೇಳಿದ: “ಯಜಮಾನರೇ ಗಳಿಕೆ ಹೆಚ್ಚೇ ಇದೆ. ಆ ವ್ಯಕ್ತಿ ಕೇಳಿರುವುದು ಮುನ್ನೂರು ರೂಪಾಯಿ ಮಾತ್ರ. ಉಳಿದ ಹಣವನ್ನು ಖಾತೆಗೆ ಜಮೆ ಮಾಡಲೇ?”
ಮೋತಿಲಾಲರು ಕೂಡಲೆ ಉತ್ತರಿಸಿದರು: “ಎಲ್ಲಾದರೂ ಉಂಟೆ! ಇಂದಿನ ಗಳಿಕೆಯಷ್ಟನ್ನೂ ಆ ವ್ಯಕ್ತಿಗೆ ಕೊಡುವೆನೆಂದು ಹೇಳಿದ್ದೇನಲ್ಲ? ನಾನು ಕೊಟ್ಟ ಮಾತನ್ನು ನಾನೇ ಮೀರುವಂತಹ ನೀಚ ಕಾರ್ಯವನ್ನು ನಾನು ಮಾಡಲಾರೆ. ಮಾತು ಪವಿತ್ರವಾದದ್ದು.”